Tag: ಹುಂಡೈ

  • ಕಾರುಗಳ ಮುಖಾಮುಖಿ ಡಿಕ್ಕಿ – ಮೂವರು ಬಲಿ

    ಕಾರುಗಳ ಮುಖಾಮುಖಿ ಡಿಕ್ಕಿ – ಮೂವರು ಬಲಿ

    ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲೂಕಿನ ರಂಗೇನಹಳ್ಳಿ ಬಳಿಯಲ್ಲಿ ಇಕೋ ಸ್ಪೋರ್ಟ್ಸ್ ಕಾರು ಹಾಗೂ ಹುಂಡೈ ಕಾರು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ.

    ಮೃತರನ್ನ 26 ವರ್ಷದ ನಾಗೇಂದ್ರ, 30 ವರ್ಷದ ಸುಜಿತಾ ಹಾಗೂ 35 ವರ್ಷದ ಅನಿಲ್ ಎಂದು ಗುರುತಿಸಲಾಗಿದೆ. ಇಕೋ ಸ್ಪೋರ್ಟ್ಸ್ ಬೆಂಗಳೂರಿನಿಂದ ತೀರ್ಥಹಳ್ಳಿಗೆ ಹೋಗುತ್ತಿತ್ತು. ಹುಂಡೈ ಕಾರು ಕುಂದಾಪುರದಿಂದ ಬೆಂಗಳೂರಿಗೆ ಸಂಚರಿಸುತ್ತಿತ್ತು. ಎರಡು ಕಾರುಗಳು ತರೀಕೆರೆ ತಾಲೂಕಿನ ರಂಗೇನಹಳ್ಳಿ ಬಳಿ ಮುಖಾಮುಖಿ ಡಿಕ್ಕಿಯಾದ ಪರಿಣಾಮ ನಾಗೇಂದ್ರ ಎಂಬವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಅಪಘಾತದಿಂದ ಗಂಭೀರವಾಗಿ ಗಾಯಗೊಂಡಿದ್ದ ಸುಜಿತಾ ಹಾಗೂ ಅನಿಲ್ ಎಂಬವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಕೂಡಲೇ ಸ್ಥಳೀಯರು ಗಾಯಾಳುಗಳನ್ನ ಕಾರಿನಿಂದ ಹೊರತೆಗೆದು ತಕ್ಷಣ ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ. ಆದರೆ ಅಪಘಾತದ ರಭಸಕ್ಕೆ ತೀವ್ರವಾಗಿ ಗಾಯಗೊಂಡ ಮೂವರು ವಿಧಿಯ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.

  • ವರ್ಷದ ಕಾರು – ಅಲ್ಟೋ ಹಿಂದಿಕ್ಕಿದ ಡಿಸೈರ್‌ಗೆ ನಂಬರ್ ಒನ್ ಪಟ್ಟ

    ವರ್ಷದ ಕಾರು – ಅಲ್ಟೋ ಹಿಂದಿಕ್ಕಿದ ಡಿಸೈರ್‌ಗೆ ನಂಬರ್ ಒನ್ ಪಟ್ಟ

    ನವದೆಹಲಿ: ಮಾರುತಿ ಕಂಪನಿಯ ಡಿಸೈರ್ ದೇಶದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಎಂಬ ಹಗ್ಗೆಳಿಕೆಗೆ ಪಾತ್ರವಾಗಿದೆ. ಏಪ್ರಿಲ್‍ನಿಂದ ಆರಂಭಗೊಂಡ ಈ ಹಣಕಾಸು ವರ್ಷದಲ್ಲಿ 1.2 ಲಕ್ಷ  ಡಿಸೈರ್ ಕಾರು ಮಾರಾಟಗೊಂಡಿದೆ.

    ಕಳೆದ 15 ವರ್ಷಗಳಿಂದಲೂ ಮಾರುತಿ ಕಂಪನಿಯ ಅಲ್ಟೋ ಕಾರು ಅತಿ ಹೆಚ್ಚು ಮಾರಾಟವಾಗುವ ಮೂಲಕ ದೇಶದಲ್ಲಿ ನಂಬರ್ ಒನ್ ಸ್ಥಾನವನ್ನು ಅಲಂಕರಿಸಿಕೊಂಡು ಬಂದಿತ್ತು. ಆದರೆ ಈ ಬಾರಿ ಈ ಪಟ್ಟ ಡಿಸೈರ್‌ಗೆ ಸಿಕ್ಕಿದೆ. ಏಪ್ರಿಲ್‍ನಿಂದ ಆರಂಭಗೊಂಡು ನವೆಂಬರ್ ಅವಧಿಯವರೆಗೆ ಒಟ್ಟು 1,28,695 ಡಿಸೈರ್ ಕಾರುಗಳು ಮಾರಾಟಗೊಂಡಿದೆ.

     

    ಸೈಜ್ ಮತ್ತು ಸ್ಟೇಟಸ್ ವಿಚಾರದಲ್ಲಿ ಈ ಕಾರು ಜನರ ಮನ ಗೆದ್ದಿದೆ. ಈ ಹಿಂದೆ ಹ್ಯಾಚ್‍ಬ್ಯಾಕ್ ಕಾರುಗಳು ಹೆಚ್ಚು ಮಾರಾಟವಾಗುತಿತ್ತು. ಈಗ ಜನರ ಚಿಂತನೆ ಬದಲಾಗಿದ್ದು ಸುರಕ್ಷತೆಯತ್ತ ಗಮನ ನೀಡುತ್ತಾರೆ. ಇದರ ಪರಿಣಾಮ ಸೆಡಾನ್ ಕಾರುಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ ಎಂಬ ವಿಶ್ಲೇಷಣೆ ಕೇಳಿ ಬಂದಿದೆ.

    ಈ ಅವಧಿಯಲ್ಲಿ ಹೋಂಡಾ ಅಮೇಝ್ 40,676 ಕಾರುಗಳು ಮಾರಾಟಗೊಂಡಿದ್ದರೆ, ಹುಂಡೈ ಕಂಪನಿ ಎಕ್ಸೆಂಟ್ 12,239 ಕಾರುಗಳು ಮಾರಾಟಗೊಂಡಿದೆ. ಫೋರ್ಡ್ ಕಂಪನಿಯ ಆಸ್ಪೈರ್ 6,765  ಕಾರುಗಳು ಮಾರಾಟಗೊಂಡಿದೆ.

    2017ಕ್ಕೆ ಮೂರನೇ ತಲೆಮಾರಿನ  ಡಿಸೈರ್ ಕಾರನ್ನು ಬಿಡುಗಡೆ ಮಾಡಲಾಗಿದೆ. 1.2 ಲೀಟರ್ ಪೆಟ್ರೋಲ್ ಎಂಜಿನ್, 1.3ಲೀಟರ್ ಡೀಸೆಲ್ ಎಂಜಿನ್ ನಲ್ಲಿ  ಡಿಸೈರ್ ಕಾರು ಲಭ್ಯವಿದೆ. 2,450 ಮಿ.ಮೀ ವೀಲ್ ಬೇಸ್, 3,995 ಮಿ.ಮೀ ಉದ್ದ, 1,735 ಮಿ.ಮೀ ಅಗಲ, 1,515 ಮಿ.ಮೀ ಎತ್ತರವನ್ನು ಹೊಂದಿದೆ.

    2008 ರಲ್ಲಿ ಮೊದಲ ತಲೆಮಾರಿನ ಸ್ವಿಫ್ಟ್ ಡಿಸೈರ್ ಕಾರು ಬಿಡುಗಡೆಯಾಗಿತ್ತು. ಬಿಡುಗಡೆಯಾದ ಕೇವಲ 19 ತಿಂಗಳಿನಲ್ಲಿ 1 ಲಕ್ಷ ಕಾರುಗಳನ್ನು ಮಾರಾಟ ಮಾಡುವ ಮೂಲಕ ದಾಖಲೆ ಬರೆದಿತ್ತು.

  • ದೇಶದ ಮೊದಲ ಎಲೆಕ್ಟ್ರಿಕ್ ಎಸ್‍ಯುವಿ ಕಾರು ಬಿಡುಗಡೆ: ಎಷ್ಟು ಚಾರ್ಜ್ ಮಾಡಿದ್ರೆ ಎಷ್ಟು ಕಿ.ಮೀ ಓಡುತ್ತೆ?

    ದೇಶದ ಮೊದಲ ಎಲೆಕ್ಟ್ರಿಕ್ ಎಸ್‍ಯುವಿ ಕಾರು ಬಿಡುಗಡೆ: ಎಷ್ಟು ಚಾರ್ಜ್ ಮಾಡಿದ್ರೆ ಎಷ್ಟು ಕಿ.ಮೀ ಓಡುತ್ತೆ?

    ನವದೆಹಲಿ: ದೇಶದ ಮೊದಲ ಎಲೆಕ್ಟ್ರಿಕ್  ಸ್ಪೋರ್ಟ್ಸ್‌ ಯುಟಿಲಿಟಿ ವೆಹಿಕಲ್‌(ಎಸ್‍ಯುವಿ)  ಕಾರು ಬಿಡುಗಡೆಯಾಗಿದೆ. ದಕ್ಷಿಣ ಕೊರಿಯಾದ ಹುಂಡೈ ಕಂಪನಿ ಕೋನಾ ಹೆಸರಿನ ಕಾರನ್ನು ಬಿಡುಗಡೆ ಮಾಡಿದೆ.

    ವಿಶ್ವದ ಮೊದಲ ಎಸ್‍ಯುವಿ ಇದಾಗಿದ್ದು, 2018ರ ಮೊದಲಾರ್ಧ ಈ ಕಾರು ದಕ್ಷಿಣ ಕೊರಿಯಾದಲ್ಲಿ ಬಿಡುಗಡೆಯಾಗಿ ಈಗ ವಿಶ್ವದ ಹಲವು ದೇಶಗಳಲ್ಲಿ ಬಿಡುಗಡೆಯಾಗುತ್ತಿದೆ. ಕೋನಾ ಕಾರು ದಕ್ಷಿಣ ಕೊರಿಯಾದಲ್ಲೇ ಉತ್ಪಾದನೆಯಾಗಿದ್ದು ಮುಂದಿನ ದಿನಗಳಲ್ಲಿ ಭಾರತದಲ್ಲಿ ಉತ್ಪಾದನೆಯಾಗಲಿದೆ.

    39.2 ಕಿಲೋ ವ್ಯಾಟ್ ಮತ್ತು 64 ಕಿಲೋ ವ್ಯಾಟ್  ಬ್ಯಾಟರಿ ಆವೃತ್ತಿಯಲ್ಲಿ ಕೋನಾ ಕಾರನ್ನು ಹುಂಡೈ ಪರಿಚಯಿಸಿದ್ದರೆ, ಭಾರತದಲ್ಲಿ 39.2 ಕಿಲೋ ವ್ಯಾಟ್ ಲಿಥಿಯಾಂ ಆಯಾನ್ ಬ್ಯಾಟರಿಯ ಕಾರನ್ನು ಮಾತ್ರ ಪರಿಚಯಿಸಿದೆ. ಈ ಕಾರಿಗೆ 25,30,000 ರೂ. ದರವನ್ನು ನಿಗದಿ ಪಡಿಸಿದೆ.

    ಸಾಧಾರಣವಾಗಿ ಸಣ್ಣ ಬ್ಯಾಟರಿ ಇರುವ ಎಲೆಕ್ಟ್ರಿಕ್ ಕಾರುಗಳು 312 ಕಿ.ಮಿ ಚಲಿಸುವ ಸಾಮರ್ಥ್ಯವನ್ನು ಹೊಂದಿದ್ದರೆ ದೊಡ್ಡ ಬ್ಯಾಟರಿ ಹೊಂದಿರುವ ಕಾರುಗಳು ಅಂದಾಜು 500 ಕಿ.ಮೀ ಕ್ರಮಿಸುವ ಸಾಮಥ್ರ್ಯ ಹೊಂದಿರುತ್ತದೆ. ಆದರೆ ಭಾರತದಲ್ಲಿ ಬಿಡುಗಡೆಯಾಗಿರುವ 39.2 ಕೆವಿ ಕೋನಾ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 452 ಕಿ.ಮೀ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಅಟೋಮೊಟಿವ್ ರಿಸರ್ಚ್ ಅಸೋಶಿಯೇಷನ್ ಆಫ್ ಇಂಡಿಯಾ(ಎಆರ್‌ಎಐ) 452 ಕಿ.ಮೀ ಸಂಚರಿಸುವ ಬಗ್ಗೆ ಪ್ರಮಾಣ ಪತ್ರವನ್ನು ನೀಡಿದೆ.

    ಡಿಸಿ ಕ್ವಿಕ್ ಚಾರ್ಜರ್ ಮೂಲಕ 57 ನಿಮಿಷದಲ್ಲಿ ಫಾಸ್ಟ್ ಚಾರ್ಜರ್ ನಿಂದ ಶೇ.82ರಷ್ಟು ಬ್ಯಾಟರಿ ಚಾರ್ಜ್ ಆಗುತ್ತದೆ. ಇಂಡಿಯನ್ ಆಯಿಲ್ ಕಂಪನಿಯ ಜೊತೆ ಸಹಭಾಗಿತ್ವದಲ್ಲಿ ದೇಶದ ಮಹಾನಗರಗಳಾದ ಬೆಂಗಳೂರು, ಮುಂಬೈ, ಚೆನ್ನೈ, ದೆಹಲಿಯಲ್ಲಿ ಡಿಸಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಹುಂಡೈ ತಿಳಿಸಿದೆ.

    9.7 ಸೆಕೆಂಡಿನಲ್ಲಿ 0 ಯಿಂದ 100 ಕಿ.ಮೀ ವೇಗಕ್ಕೆ ತಲುಪಬಹುದು. 8 ವರ್ಷ ಮತ್ತು 1.60 ಲಕ್ಷ ಕಿ.ಮೀ ದೂರದವರೆಗೆ ಈ ಬ್ಯಾಟರಿ ಬಾಳಿಕೆ ಬರಲಿದೆ ಎಂದು ಕಂಪನಿ ತಿಳಿಸಿದೆ.

     

    ಗ್ರಾಹಕರಿಗೆ ಎರಡು ಚಾರ್ಜರ್ ನೀಡಲಾಗುತ್ತದೆ. ಒಂದು ಪೋರ್ಟಬಲ್ ಚಾರ್ಜರ್ ಮತ್ತು ಎಸಿ ವಾಲ್ ಬಾಕ್ಸ್ ಚಾರ್ಜರ್ ಅನ್ನು ಕಂಪನಿ ನೀಡುತ್ತದೆ. ಪೋರ್ಟಬಲ್ ಚಾರ್ಜರ್ ಯಾವುದೇ 3 ಪಿನ್ ಎಎಂಪಿ ಸಾಕೆಟ್ ಗೆ ಹಾಕಿದರೆ ಪ್ರತಿದಿನ 3 ಗಂಟೆ ಚಾರ್ಜ್ ಮಾಡಿದರೆ 50 ಕಿ.ಮೀ ಸಂಚರಿಸಬಹುದು. ಎಸಿ ವಾಲ್ ಬಾಕ್ಸ್ ಚಾರ್ಜರ್(7.2 ಕಿಲೋ ವ್ಯಾಟ್) ಮೂಲಕ ಒಂದು ಗಂಟೆ ಚಾರ್ಜ್ ಮಾಡಿದರೆ 50 ಕಿ.ಮೀ ಕ್ರಮಿಸಬಹುದು. 6 ಗಂಟೆ ಹಾಕಿದರೆ ಫುಲ್ ಚಾರ್ಜ್ ಆಗುತ್ತದೆ.

    ಮುಂದಿನ ವರ್ಷ 500 ಕಿ.ಮೀ ವರೆಗೆ ಕ್ರಮಿಸುವ ಕಾರನ್ನು ಅಭಿವೃದ್ಧಿ ಪಡಿಸಲಾಗುವುದು. 2025ರ ಒಳಗಡೆ ದೇಶದಲ್ಲಿ 23 ಎಲೆಕ್ಟ್ರಿಕಲ್ ವಾಹನಗಳನ್ನು ಬಿಡುಗಡೆಗೊಳಿಸಲಾಗುವುದು ಎಂದು ಹುಂಡೈ ಕಂಪನಿ ತಿಳಿಸಿದೆ.

    5 ಜನ ಕುಳಿತುಕೊಳ್ಳಬಹುದಾದ ಎಸ್‍ಯುವಿ 134 ಬಿಎಚ್‍ಪಿ ಎಂಜಿನ್, ಅಟೋಮ್ಯಾಟಿಕ್ ಟ್ರಾನ್ಸ್ ಮಿಶನ್ ಹೊಂದಿದೆ. 4180 ಮಿ.ಮೀ ಉದ್ದ, 1800 ಮಿ.ಮೀ ಅಗಲ, 1570 ಮಿ.ಮೀ ಎತ್ತರ ಹೊಂದಿದೆ. 7 ಇಂಚಿನ ಟಚ್ ಸ್ಕ್ರೀನ್ ಇನ್ಫೊಟೈನೆಮೆಂಟ್ ಸಿಸ್ಟಂ ಇದ್ದು, ಆಪಲ್ ಕಾರು ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸಪೋರ್ಟ್ ಮಾಡುತ್ತದೆ.

    ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ಭಾರತವನ್ನು ಗ್ಲೋಬಲ್ ಹಬ್ ಮಾಡುವತ್ತ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್  ಭಾಷಣದಲ್ಲಿ ತಿಳಿಸಿದ್ದರು.

    ಎಲೆಕ್ಟ್ರಿಕ್ ವಾಹನದ ಮೇಲಿನ ಜಿಎಸ್‍ಟಿಯನ್ನು ಶೇ.12ರಿಂದ ಶೇ.5ಕ್ಕೆ ಇಳಿಕೆ ಮಾಡುವಂತೆ ಈಗಾಗಲೇ ಜಿಎಸ್‍ಟಿ ಕೌನ್ಸಿಲ್ ಬಳಿ ಕೇಂದ್ರ ಕೇಳಿಕೊಂಡಿದೆ. ಎಲೆಕ್ಟ್ರಿಕ್ ವಾಹನ ಖರೀದಿಗೆ ವಿನಿಯೋಗಿಸಿದ ಸಾಲದ ಮೇಲಿನ ಬಡ್ಡಿಯಲ್ಲಿ 1.5 ಲಕ್ಷ ರೂ. ಆದಾಯ ತೆರಿಗೆ ವಿನಾಯಿತಿಯನ್ನೂ ಹೆಚ್ಚುವರಿಯಾಗಿ ನೀಡಿದೆ.

  • ಆಲ್ಟೋ ನಂ.1 ಕಾರು  – ಕಳೆದ ವರ್ಷ ಅತಿ ಹೆಚ್ಚು ಮಾರಾಟಗೊಂಡ ಟಾಪ್ 10 ಕಾರುಗಳು

    ಆಲ್ಟೋ ನಂ.1 ಕಾರು – ಕಳೆದ ವರ್ಷ ಅತಿ ಹೆಚ್ಚು ಮಾರಾಟಗೊಂಡ ಟಾಪ್ 10 ಕಾರುಗಳು

    ನವದೆಹಲಿ: ಮಾರುತಿ ಸುಜುಕಿ ಕಂಪನಿಯ ಆಲ್ಟೋ ಕಾರು 2018-19ರ ಹಣಕಾಸು ವರ್ಷದಲ್ಲಿ ಅತಿ ಹೆಚ್ಚು ಮಾರಾಟವಾಗುವ ಮೂಲಕ ಪ್ಯಾಸೆಂಜರ್ ವೆಹಿಕಲ್(ಪಿವಿ) ವಿಭಾಗದಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.

    ಭಾರತೀಯ ವಾಹನ ತಯಾರಕರ ಒಕ್ಕೂಟ(ಎಸ್‍ಐಎಎಂ) ಬಿಡುಗಡೆ ಮಾಡಿದ ಪಟ್ಟಿಯಲ್ಲಿ 10 ಕಾರುಗಳ ಪೈಕಿ 7 ಮಾರುತಿ ಕಂಪನಿಯ ಕಾರುಗಳು ಸ್ಥಾನ ಪಡೆದಿದ್ದರೆ ಹುಂಡೈ ಕಂಪನಿಯ ಮೂರು ಕಾರುಗಳು ಸ್ಥಾನ ಪಡೆದಿದೆ. ಹೀಗಾಗಿ ಇಲ್ಲಿ 2018-19ರ ಹಣಕಾಸು ವರ್ಷದಲ್ಲಿ ಯಾವ ಕಾರು ಎಷ್ಟು ಮಾರಾಟವಾಗಿದೆ ಎನ್ನುವ ವಿವರವನ್ನು ನೀಡಲಾಗಿದೆ.

    ಯಾವ ಕಾರು ಎಷ್ಟು?


    1. ಆಲ್ಟೋ:
    2,59,401 ಕಾರುಗಳು ಮಾರಾಟವಾಗುವ ಮೂಲಕ ಅಲ್ಟೋ ಕಾರು ಮೊದಲ ಸ್ಥಾನವನ್ನು ಪಡೆದುಕೊಂಡಿದೆ. 2017-18ರ ಅವಧಿಯಲ್ಲಿ 2,58,539 ಕಾರುಗಳು ಮಾರಾಟ ಕಂಡಿತ್ತು.

     

    2. ಡಿಸೈರ್:
    ಸೆಡಾನ್ ವಿಭಾಗದ ಡಿಸೈರ್ 2,53,859 ಕಾರುಗಳು ಮಾರಾಟಗೊಂಡಿದ್ದು ಎರಡನೇ ಸ್ಥಾನ ಸಿಕ್ಕಿದೆ. ಹೊಸ ಮತ್ತು ಹಳೆಯ ಆವೃತ್ತಿ ಸೇರಿ ಈ ಪ್ರಮಾಣದ ಕಾರು ಮಾರಾಟಗೊಂಡಿದೆ. ಹಿಂದಿನ ಹಣಕಾಸು ವರ್ಷದಲ್ಲಿ 2,40,124 ಕಾರುಗಳು ಮಾರಾಟವಾಗಿತ್ತು.

    3. ಸ್ವಿಫ್ಟ್:
    ಮಾರುತಿ ಕಂಪನಿಯ ಹ್ಯಾಚ್‍ಬ್ಯಾಕ್ ಸ್ವಿಫ್ಟ್ 3ನೇ ಸ್ಥಾನ ಪಡೆದುಕೊಂಡಿದ್ದು, ಒಟ್ಟು 2,23,924 ಕಾರುಗಳನ್ನು ಮಾರಾಟವಾಗಿದೆ. 2017-18ರ ಅವಧಿಯಲ್ಲಿ 1,75,928 ಸ್ವಿಫ್ಟ್ ಕಾರು ಮಾರಾಟಗೊಂಡಿತ್ತು.

    4. ಬಲೆನೊ:
    ಬಲೆನೊ ಒಟ್ಟು 2,12,330 ಕಾರುಗಳು ಮಾರಾಟಗೊಂಡಿದ್ದು, ಕಳೆದ ಹಣಕಾಸು ವರ್ಷದಲ್ಲಿ 1,90,480 ಕಾರುಗಳು ಮಾರಾಟವಾಗಿತ್ತು.

    5. ಬ್ರಿಝಾ:
    ಮಾರುತಿ ಕಂಪನಿಯ ಸ್ಫೋರ್ಟ್ಸ್ ಯುಟಿಲಿಟಿ ವೆಹಿಕಲ್(ಎಸ್‍ಯುವಿ) ಕಳೆದ ವರ್ಷಕ್ಕೆ ಹೋಲಿಸಿದರೆ 2 ಸ್ಥಾನ ಏರಿಕೆಯಾಗಿ 5ನೇ ಸ್ಥಾನವನ್ನು ಪಡೆದುಕೊಂಡಿದೆ. 2018-19 ರಲ್ಲಿ 1,57,880 ಕಾರುಗಳನ್ನು ಮಾರಾಟಗೊಂಡಿದ್ದರೆ, 2017-18ರ ಅವಧಿಯಲ್ಲಿ 1,48,462 ಕಾರುಗಳು ಮಾರಾಟಗೊಂಡಿತ್ತು.

    6.ಐ20:
    ಹುಂಡೈ ಕಂಪನಿಯ ಐ20 2018-19ರ ಅವಧಿಯಲ್ಲಿನ 6ನೇ ಅತಿ ಹೆಚ್ಚು ಮಾರಾಟವಾದ ಕಾರಾಗಿದ್ದು, ಈ ಅವಧಿಯಲ್ಲಿ 1,40,225 ಕಾರುಗಳು ಮಾರಾಟಗೊಂಡಿದೆ. 2017-18ರ ಅವಧಿಯಲ್ಲಿ 1,36,182 ಕಾರುಗಳು ಮಾರಾಟವಾಗಿತ್ತು.

    7. ಗ್ರಾಂಡ್ ಐ10:
    ಹುಂಡೈ ಕಂಪನಿಯ ಎಂಟ್ರಿ ಲೆವೆಲ್ ಐ10 1,26,041 ಕಾರುಗಳು ಮಾರಾಟವಾಗಿದೆ. ಈ ಹಿಂದಿನ ಹಣಕಾಸು ವರ್ಷದಲ್ಲಿ 1,51,113 ಕಾರುಗಳು ಮಾರಾಟವಾಗಿತ್ತು.

    8. ಕ್ರೇಟಾ:
    ಹುಂಡೈ ಕಂಪನಿಯ ಪ್ರಸಿದ್ಧ ಎಸ್‍ಯುವಿ ಕ್ರೇಟಾ 1,24,300 ಕಾರುಗಳು ಮಾರಾಟಗೊಂಡಿದ್ದು, 8ನೇ ಸ್ಥಾನವನ್ನು ಪಡೆದುಕೊಂಡಿದೆ. 2017-18ರ ಹಣಕಾಸು ವರ್ಷದಲ್ಲಿ 1,07,136 ಕಾರುಗಳನ್ನು ಮಾರಾಟ ಮಾಡಿತ್ತು.

    9. ವ್ಯಾಗನ್ ಆರ್:
    ಮಾರುತಿ ಕಂಪನಿಯ ವ್ಯಾಗನ್ ಆರ್ ಒಟ್ಟು 1,19,649 ಕಾರುಗಳು ಮಾರಾಟಗೊಂಡಿದೆ. ಕಳೆದ ಅವಧಿಯಲ್ಲಿ ಒಟ್ಟು 1,68,644 ಕಾರುಗಳು ಮಾರಾಟವಾಗಿತ್ತು.

    10. ಸೆಲಿರಿಯೋ:
    ಒಟ್ಟು 1,03,734 ಕಾರುಗಳನ್ನು ಮಾರಾಟಗೊಳ್ಳುವ ಮೂಲಕ ಮಾರುತಿ ಕಂಪನಿಯ ಸೆಲಿರಿಯೋ ಟಾಪ್ – 10 ಪಟ್ಟಿಯಲ್ಲಿ 10ನೇ ಸ್ಥಾನ ಪಡೆದುಕೊಂಡಿದೆ. 2017-18ರ ಅವಧಿಯಲ್ಲಿ ಒಟ್ಟು 94,721 ಸೆಲಿರಿಯೋ ಮಾರಾಟ ಕಂಡಿತ್ತು.