Tag: ಹುಂಡಿ

  • ಎಲೆಕ್ಷನ್, ಎಕ್ಸಾಂ ಎಫೆಕ್ಟ್- ಒಂದೇ ತಿಂಗ್ಳಲ್ಲಿ ಬನಶಂಕರಿ ದೇವಿಗೆ ಹರಿದುಬಂತು 30ಲಕ್ಷ ರೂ.!

    ಎಲೆಕ್ಷನ್, ಎಕ್ಸಾಂ ಎಫೆಕ್ಟ್- ಒಂದೇ ತಿಂಗ್ಳಲ್ಲಿ ಬನಶಂಕರಿ ದೇವಿಗೆ ಹರಿದುಬಂತು 30ಲಕ್ಷ ರೂ.!

    ಬೆಂಗಳೂರು: ಎಲೆಕ್ಷನ್ ಕಾವು ಒದೆಡೆಯಾದ್ರೆ, ಇನ್ನೊಂದೆಡೆ ವಿದ್ಯಾರ್ಥಿಗಳಿಗೆ ಎಕ್ಸಾಂ. ಇದರಿಂದ ರಾಜ್ಯದ ದೇವರುಗಳೆಲ್ಲಾ ದಿಢೀರ್ ಶ್ರೀಮಂತವಾಗುತ್ತಿವೆ.

    ಮಹಾಸಮರಕ್ಕೆ ಅಖಾಡ ರೆಡಿಯಾಗುತ್ತಿದ್ದಂತೆ ರಾಜಕೀಯ ನಾಯಕರುಗಳು ಮತದಾರರ ಮನೆಗೆ ಹೋಗುತ್ತಿದ್ದಾರೆ. ಮತ್ತೆ ಇರೋ ಬರೋ ದೇವರ ಹುಂಡಿಗೆ ಜೈ.. ಜೈ ಅಂತ ದುಡ್ಡು ಹಾಕುತ್ತಿದ್ದಾರೆ. ಇನ್ನೊಂದು ಕಡೆ ಪರೀಕ್ಷೆ ಸೀಸನ್, ಮಕ್ಕಳು, ಪೋಷಕರು ಹರಕೆ ಹೊತ್ತು ಮಕ್ಕಳನ್ನು ಪಾಸ್ ಮಾಡಪ್ಪ ಎಂದು ದೇವರ ಹುಂಡಿಗೆ ಲಂಚದ ರೂಪದಲ್ಲಿ ಕಾಣಿಕೆ ಹಾಕಿದ್ದಾರೆ. ಇದರ ಎಫೆಕ್ಟ್ ಬನಶಂಕರಿಯಮ್ಮನ ಹುಂಡಿ ತುಂಬಿದ್ದು, ಮೊದಲ ಬಾರಿಗೆ ದಾಖಲೆ ಸೃಷ್ಟಿಸಿದೆ.

    ಸಾಮಾನ್ಯವಾಗಿ ಎರಡು ತಿಂಗಳಿಗೊಮ್ಮೆ ಹುಂಡಿ ತೆರೆಯೋದು ಸಾಮಾನ್ಯ. ಆದರೆ ಮಾರ್ಚ್ ಇಯರ್ ಎಂಡ್ ಎಂದು ಒಂದೇ ತಿಂಗಳ ಅಂತರದಲ್ಲಿ ಹುಂಡಿ ತೆರೆದಾಗ ಬರೋಬ್ಬರಿ 30 ಲಕ್ಷ ಸಂಗ್ರಹವಾಗಿದೆ. ಸಾಮಾನ್ಯವಾಗಿ ಎರಡು ತಿಂಗಳಲ್ಲಿ 20 ರಿಂದ 25 ಲಕ್ಷ ದುಡ್ಡು ಸಂಗ್ರಹವಾಗುತ್ತಿದ್ದು, ಈ ಬಾರಿ ದಿಢೀರ್ ಅಂತ 30 ಲಕ್ಷ ರೂ. ಸಂಗ್ರವಾಗಿರುವುದಕ್ಕೆ ಅಧಿಕಾರಿಗಳು ಫುಲ್ ಖುಷಿಯಾಗಿದ್ದಾರೆ. ದುಡ್ಡಿನ ಜೊತೆಗೆ ಚಿನ್ನ ಬೆಳ್ಳಿಯೂ ದಾಖಲೆಯ ಮಟ್ಟದಲ್ಲಿ ಹುಂಡಿಗೆ ಬಿದ್ದಿದೆ.

    ಇನ್ನು ಪರೀಕ್ಷೆಗೆ ಮಕ್ಕಳು ಓದೇ ಇಲ್ಲ, ನೀನೇ ಕಾಪಾಡಬೇಕು ಪಾಸು ಮಾಡಿಸು ಎಂದು ಬೇಡಿಕೊಂಡು ಲೆಕ್ಕವಿಲ್ಲದಷ್ಟು ಪತ್ರ ಹುಂಡಿಗೆ ಬಿದ್ದಿದೆಯಂತೆ. ರಾಜಕೀಯ ಉನ್ನತಿ, ಶೈಕ್ಷಣಿಕ, ಮನೆ ಸಮಸ್ಯೆ ಏನೇ ಇದ್ದರೂ ಇಲ್ಲಿ ಹರಕೆ ಹೊತ್ತಿದರೆ ಈಡೇರುತ್ತದೆ ಎನ್ನುವ ನಂಬಿಕೆ ಭಕ್ತರಿಗಿದೆ.

    ಎಲೆಕ್ಷನ್ ಪ್ರಾರಂಭದಲ್ಲಿಯೇ ಹಣ ದಾಖಲೆಯ ಮಟ್ಟ ಏರಿದೆ, ಮುಂದಿನ ತಿಂಗಳು ಇನ್ನು ಹೆಚ್ಚು ಹುಂಡಿ ದರ ಸಂಗ್ರಹವಾಗಬಹುದು ಎಂದು ಅಧಿಕಾರಿಗಳು ಲೆಕ್ಕಾಚಾರ ಹಾಕುತ್ತಿದ್ದಾರೆ.

     

  • ಹಂಪಿ ದೇಗುಲದ ಹುಂಡಿಯಲ್ಲಿ ಹಳೆನೋಟುಗಳ ಜೊತೆ ಕೆನಡಾ, ಕೊರಿಯಾ ಕರೆನ್ಸಿ ಪತ್ತೆ

    ಹಂಪಿ ದೇಗುಲದ ಹುಂಡಿಯಲ್ಲಿ ಹಳೆನೋಟುಗಳ ಜೊತೆ ಕೆನಡಾ, ಕೊರಿಯಾ ಕರೆನ್ಸಿ ಪತ್ತೆ

    ಬಳ್ಳಾರಿ: 500, 1 ಸಾವಿರ ರೂ. ನೋಟು ನಿಷೇಧವಾಗಿ ಒಂದು ವರ್ಷ ಕಳೆದ್ರೂ ಮತ್ತೆ ಮತ್ತೆ ಹಳೆಯ ನೋಟುಗಳು ಪತ್ತೆಯಾಗುತ್ತಲೇ ಇವೆ.

    ಚಲಾವಣೆಗೆ ಬಾರದ 500 ರೂ. ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ದೇವಸ್ಥಾನದ ಹುಂಡಿಗೆ ಹಾಕಿ ಭಕ್ತರು ಕಾಣಿಕೆ ಒಪ್ಪಿಸಿದ್ದಾರೆ. ಐತಿಹಾಸಿಕ ಪ್ರಸಿದ್ಧ ದೇವಸ್ಥಾನ ಹಂಪಿಯ ವಿರೂಪಕ್ಷೇಶ್ವರ ದೇವಾಲಯದ ಗರ್ಭಗುಡಿಯ ಹುಂಡಿ ಎಣಿಕೆ ಕಾರ್ಯ ವೇಳೆಯಲ್ಲಿ ಸುಮಾರು 18 ಸಾವಿರ ರೂ. ಮೌಲ್ಯದ ನಿಷೇಧಿತ ನೋಟು ಪತ್ತೆಯಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

    ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಹಂಪಿಗೆ ಭೇಟಿ ನೀಡುವುದರಿಂದ ಕೆನಡಾ, ಕೊರಿಯಾ ದೇಶದ ವಿವಿಧ ಕರೆನ್ಸಿ ನೋಟುಗಳು ಸಹ ಕಾಣಿಕೆ ಹುಂಡಿಯಲ್ಲಿ ಪತ್ತೆಯಾಗಿದೆ. ಅಷ್ಟೇ ಅಲ್ಲದೇ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳು ದೇವರಿಗೆ ತಮ್ಮನ್ನು ಪರೀಕ್ಷೆಯಲ್ಲಿ ಪಾಸು ಮಾಡುವ ಕುರಿತು ಮನವಿ ಪತ್ರವನ್ನು ಕೂಡ ಹುಂಡಿಯೊಳಗೆ ಹಾಕಿದ್ದಾರೆ.

    ಈ ಬಾರಿ ಕಾಣಿಕೆ ಹುಂಡಿಯಲ್ಲಿ 18 ಲಕ್ಷ ರೂ. ನಗದು ಸಂಗ್ರಹಿಸಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

  • ಮೂರೇ ತಿಂಗಳಲ್ಲಿ ಚಿಕ್ಕ ತಿರುಪತಿಯ ಹುಂಡಿಯಲ್ಲಿ ಸಂಗ್ರಹವಾಯ್ತು ದಾಖಲೆ ಮೊತ್ತದ ಹಣ

    ಮೂರೇ ತಿಂಗಳಲ್ಲಿ ಚಿಕ್ಕ ತಿರುಪತಿಯ ಹುಂಡಿಯಲ್ಲಿ ಸಂಗ್ರಹವಾಯ್ತು ದಾಖಲೆ ಮೊತ್ತದ ಹಣ

    ಕೋಲಾರ: ಜಿಲ್ಲೆಯ ಚಿಕ್ಕತಿರುಪತಿ ಪ್ರಸನ್ನ ವೆಂಕಟರಮಣ ಸ್ವಾಮಿ ಮೂರೇ ತಿಂಗಳಲ್ಲಿ ದೇವಾಲಯದ ಹುಂಡಿಯಲ್ಲಿ ನಗದು, ಚಿನ್ನಾಭರಣ ಸೇರಿದಂತೆ ಸುಮಾರು ಮೂರು ಕೋಟಿ ರೂ. ಅಧಿಕ ಮೊತ್ತ ಸಂಗ್ರಹವಾಗಿದೆ.

    ಜಿಲ್ಲೆ ಮಾಲೂರು ತಾಲ್ಲೂಕು ಚಿಕ್ಕತಿರುಪತಿಯಲ್ಲಿರುವ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಾಲಯ ಹೆಚ್ಚು ಪ್ರಸಿದ್ಧಿಯಾಗಿರುವ ದೇವಾಲಯವಾಗಿದೆ. ಜಿಲ್ಲೆ ವಿವಿಧ ಭಾಗ, ನೆರೆ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ.

    ಇಂದು ಮೂರು ತಿಂಗಳಲ್ಲಿ ಸಂಗ್ರಹವಾಗಿರುವ ಹುಂಡಿ ಹಣ ಎಣಿಕೆ ಕಾರ್ಯ ನಡೆಸಲಾಗಿದ್ದು, 46,07,247 ರೂ. ನಗದು, 50 ಗ್ರಾಂ ಚಿನ್ನಾಭರಣ, 347 ಗ್ರಾಂ ಬೆಳ್ಳಿ, ವಿದೇಶಿ ಕರೆನ್ಸಿ ಸಂಗ್ರಹವಾಗಿದೆ. ಕಳೆದ ವರ್ಷ ದೇವಾಲಯದ ಹುಂಡಿಯಲ್ಲಿ 1.62 ಕೋಟಿ ರೂಪಾಯಿ ಸಂಗ್ರಹವಾಗಿತ್ತು.

    ಪ್ರೇಮ ನಿವೇದನೆ: ಹುಂಡಿ ಎಣಿಕೆ ಕಾರ್ಯದ ವೇಳೆ ಯುವತಿಯೊಬ್ಬರು ತನ್ನ ಪ್ರೇಮ ಕುರಿತು ಪತ್ರ ಬರೆದಿದ್ದು, ತಾನು ಗಣೇಶ್ ಎಂಬಾತನನ್ನು ಕಳೆದ ಎಂಟು ವರ್ಷಗಳಿಂದ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದೇನೆ. ಯಾವುದೇ ತೊಂದರೆ ಆಗದೆ ನಿನ್ನ ಸನ್ನಿಧಿಯಲ್ಲೇ ನಮ್ಮಿಬ್ಬರ ಮದುವೆ ಮಾಡಿಸು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

  • ಮಲೆ ಮಹದೇಶ್ವರ ದೇವಾಲಯದ ಹುಂಡಿ ಎಣಿಕೆ ಕಾರ್ಯ- ಭಕ್ತರಿಂದ ಹರಿದುಬಂದ ಕಾಣಿಕೆ ಇಷ್ಟು

    ಮಲೆ ಮಹದೇಶ್ವರ ದೇವಾಲಯದ ಹುಂಡಿ ಎಣಿಕೆ ಕಾರ್ಯ- ಭಕ್ತರಿಂದ ಹರಿದುಬಂದ ಕಾಣಿಕೆ ಇಷ್ಟು

    ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮಲೆ ಮಹದೇಶ್ವರ ದೇವಾಲಯದ ಹುಂಡಿ ಏಣಿಕೆ ಕಾರ್ಯ ನಡೆದಿದ್ದು, ಹುಂಡಿಯಲ್ಲಿ 1 ಕೋಟಿ 11 ಲಕ್ಷದ 25 ಸಾವಿರದ 636 ರುಪಾಯಿ ನಗದು ಕಾಣಿಕೆಯಾಗಿ ದೊರತಿದೆ.

    ಇದರ ಜೊತೆಗೆ 25 ಗ್ರಾಂ ಚಿನ್ನ ಮತ್ತು 1 ಕೆ.ಜಿ 382 ಗ್ರಾಂ ಬೆಳ್ಳಿ ಆಭರಣಗಳು ಭಕ್ತರಿಂದ ಕಾಣಿಕೆ ರೂಪದಲ್ಲಿ ಲಭ್ಯವಾಗಿದೆ. ಜನವರಿ 31ರ ತಡರಾತ್ರಿವರೆಗೂ ನಡೆದ ಹುಂಡಿ ಏಣಿಕೆ ಕಾರ್ಯದಲ್ಲಿ ಇಷ್ಟೊಂದು ಕಾಣಿಕೆ ಭಕ್ತರಿಂದ ಬಂದಿದೆ.

    ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜಿ ರೂಪ ಅಧ್ಯಕ್ಷತೆಯಲ್ಲಿ, ಸಾಲೂರು ಮಠದ ಗುರುಸ್ವಾಮಿ ಸಮ್ಮಖದಲ್ಲಿ ಮತ್ತು ಎಸ್‍ಬಿಐ ಬ್ಯಾಂಕ್ ಸಿಬ್ಬಂದಿಗಳು ಸಿಸಿ ಕ್ಯಾಮಾರಾದ ಕಣ್ಗಾವಲಿನಲ್ಲಿ ಹುಂಡಿ ಏಣಿಕೆ ಕಾರ್ಯ ನಡೆಸಿದರು.

    ಹುಂಡಿ ಎಣಿಕೆ ಕಾರ್ಯ ಪ್ರತಿ ತಿಂಗಳ ಕೊನೆಯ ದಿನದಂದು ನಡೆಯುತ್ತದೆ. ರಾಜ್ಯದಲ್ಲಿಯೇ ಅತೀ ಹೆಚ್ಚು ಆದಾಯ ತರುವ ಮುಜರಾಯಿ ಇಲಾಖೆಯ ದೇವಾಲಯಗಳಲ್ಲಿ 2ನೇ ಸ್ಥಾನವನ್ನ ಮಲೆ ಮಹದೇಶ್ವರ ದೇವಾಲಯದ ಪಡೆದುಕೊಂಡಿದೆ.

  • ಮಂಡ್ಯ: ಬೆಡ್‍ಶೀಟ್ ಹೊದ್ದುಕೊಂಡು ದೇಗುಲಕ್ಕೆ ಬಂದು ಹುಂಡಿ ದೋಚಿದ!

    ಮಂಡ್ಯ: ಬೆಡ್‍ಶೀಟ್ ಹೊದ್ದುಕೊಂಡು ದೇಗುಲಕ್ಕೆ ಬಂದು ಹುಂಡಿ ದೋಚಿದ!

    ಮಂಡ್ಯ: ಪುರಾತತ್ವ ಇಲಾಖೆಗೆ ಸೇರಿದ ಶ್ರೀರಾಮನ ದೇಗುಲದಲ್ಲಿ ವ್ಯಕ್ತಿಯೊಬ್ಬ ಹುಂಡಿ ಒಡೆದು ಹಣ ದೋಚಿದ್ದು ಇಡೀ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಹರವು ಗ್ರಾಮದಲ್ಲಿರುವ ಶ್ರೀರಾಮ ದೇವಾಲಯ ಸುಮಾರು 650 ವರ್ಷಗಳಷ್ಟು ಭವ್ಯ ಇತಿಹಾಸ ಹೊಂದಿದೆ. ಈ ದೇವಾಲಯದ ಒಳಗೆ ಜನವರಿ 24 ರಂದು ಮಧ್ಯರಾತ್ರಿ ವೇಳೆಗೆ ಆಗಮಿಸುವ ಆಗಂತುಕ ವ್ಯಕ್ತಿಯೊಬ್ಬ ದೇವರ ಗಂಟೆಯಿಂದಲೇ ಹುಂಡಿ ಬೀಗ ಹೊಡೆದು ಹಣ ದೋಚಿ ಪರಾರಿಯಾಗಿದ್ದಾನೆ.

    ಚಡ್ಡಿ ಹಾಕಿಕೊಂಡು, ಚಳಿಯಾಗದಂತೆ ಮೈತುಂಬ ರಗ್ಗೊಂದನ್ನು ಸುತ್ತಿಕೊಂಡು ಬಂದಿರುವ ವ್ಯಕ್ತಿ, ದೇವರ ಮೇಲಿನ ಭಯ ಭಕ್ತಿ ಇಲ್ಲದೇ ಹುಂಡಿ ಹೊಡೆದು ಹಣ ದೋಚಿದ್ದಾನೆ. ಇಡೀ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಯಾರೋ ದೇವಾಲಯದ ಬಗ್ಗೆ ತಿಳಿದಿರುವ ಸುತ್ತಮುತ್ತಲ ಗ್ರಾಮದ ವ್ಯಕ್ತಿಯೇ ಕಳ್ಳತನ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

    ದೇವಾಲಯದಲ್ಲಿ ಪದೇ ಪದೇ ಕಳ್ಳತನ ಪ್ರಕರಣಗಳು ಮರುಕಳಿಸುತ್ತಿದ್ದು, ಈ ಬಗ್ಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಘಟನೆ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನೋಟ್‍ಬ್ಯಾನ್ ಆಗಿ ವರ್ಷವಾದ್ರೂ ಬೆಂಗ್ಳೂರಿನ ದೇಗುಲಗಳಲ್ಲಿ ಧೂಳು ತಿನ್ನುತ್ತಿರೋ ಲಕ್ಷ ಲಕ್ಷ ಹಳೇ ನೋಟು

    ನೋಟ್‍ಬ್ಯಾನ್ ಆಗಿ ವರ್ಷವಾದ್ರೂ ಬೆಂಗ್ಳೂರಿನ ದೇಗುಲಗಳಲ್ಲಿ ಧೂಳು ತಿನ್ನುತ್ತಿರೋ ಲಕ್ಷ ಲಕ್ಷ ಹಳೇ ನೋಟು

    ಬೆಂಗಳೂರು: ಮೋದಿ ಸರ್ಕಾರ ಕಪ್ಪು ಹಣದ ವಿರುದ್ಧ ಸಮರ ಸಾರಿ ಹಳೆಯ 500 ಮತ್ತು 1000 ರೂ. ಮುಖಬೆಲೆಯ ಮೋಟುಗಳನ್ನ ಬ್ಯಾನ್ ಮಾಡಿ ವರ್ಷವೇ ಕಳೆದಿದೆ. ಆದರೆ ಬೆಂಗಳೂರಿನ ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿರುವ ದೇವಾಲಯಗಳಲ್ಲಿ ಹಳೆಯ 500 ಮತ್ತು 1000 ರೂ. ಮುಖಬೆಲೆಯ ನೋಟುಗಳು ಧೂಳು ತಿನ್ನುತ್ತಿವೆ.

    ಹೆಚ್ಚಿನ ದೇವಾಲಯಗಳು ಹಳೆಯ ನೋಟುಗಳನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಿ ದೇವಾಲಯದ ಅಭಿವೃದ್ಧಿಗೆ ಸದುಪಯೋಗಪಡಿಸಿಕೊಂಡಿದ್ದರು. ಆದರೆ ಬೆಂಗಳೂರಿನ ಧಾರ್ಮಿಕ ದತ್ತಿ ಇಲಾಖೆ ಅಧೀನದಲ್ಲಿರುವ ದೇವಾಲಯಗಳಲ್ಲಿ ಮಾತ್ರ ಹಳೇ ನೋಟುಗಳು ಧೂಳು ತಿನ್ನುತ್ತಾ ಬಿದ್ದಿವೆ.

    ಬೆಂಗಳೂರಿನ ಶ್ರೀ ಮಹಾಗಣಪತಿ ಮತ್ತು ಸಮೂಹ ದೇವಸ್ಥಾನ, ಶ್ರೀ ರಾಯರಾಯ ಕಲ್ಯಾಣ ಮಂಟಪ ಮತ್ತು ಸಮೂಹ ದೇವಾಲಯಗಳು, ಬನಶಂಕರಿ, ಪ್ರಸನ್ನ ವೀರಾಂಜನೇಯ ಸ್ವಾಮಿ, ದೊಡ್ಡಗಣಪತಿ ಸೇರಿದಂತೆ ಒಟ್ಟು 54 ದೇವಾಲಯಗಳಲ್ಲಿ ಕಳೆದ ಮಾರ್ಚ್ 27ರಂದು ಅಧಿಕಾರಿಗಳು ಹುಂಡಿ ತೆರೆದಿದ್ದರು. ಈ ವೇಳೆ 20 ಲಕ್ಷ ರೂಪಾಯಿಗೂ ಹೆಚ್ಚು ಮೊತ್ತದ ಹಳೇ ನೋಟುಗಳು ಪತ್ತೆಯಾಗಿದ್ದವು. ಆದರೆ ಅಧಿಕಾರಿಗಳು ಈ ನೋಟುಗಳನ್ನು ಬ್ಯಾಂಕಿಗೆ ಹಾಕದೆ ಸ್ಟ್ರಾಂಗ್ ರೂಮ್‍ನಲ್ಲಿ ಧೂಳು ಹಿಡಿಯಲು ಬಿಟ್ಟಿದ್ದಾರೆ. ಆರ್ ಟಿಐ ಕಾರ್ಯಕರ್ತ ರವಿಕುಮಾರ್ ಧಾರ್ಮಿಕ ದತ್ತಿ ಇಲಾಖೆಯಿಂದ ಆರ್ ಟಿಐ ಕಾಯ್ದೆ ಅಡಿ ಪಡೆದ ಮಾಹಿತಿಯಲ್ಲಿ ಅಧಿಕಾರಿಗಳ ಬೇಜವಾಬ್ದಾರಿತನ ಬಹಿರಂಗವಾಗಿದೆ.

    ಬೆಂಗಳೂರಿನ ಒಟ್ಟು 54 ದೇವಾಲಯಗಳ ಹುಂಡಿಗಳಲ್ಲಿ 20 ಲಕ್ಷ ರೂಪಾಯಿ ಹಳೇ ನೋಡು ಕೊಳೆಯುತ್ತಾ ಬಿದ್ದಿದೆ. ದೇವಾಲಯಗಳ ಅಭಿವೃದ್ಧಿಗೆ ಈ ಹಣವನ್ನ ಬಳಸಬಹುದಿತ್ತು. ಅಷ್ಟು ದುಡ್ಡಿಗೆ ಬೆಲೆನೇ ಇಲ್ವಾ? ಮುಜರಾಯಿ ಸಚಿವರು, ಅಧಿಕಾರಿಗಳೇ ಇದಕ್ಕೆ ಕಾರಣ. ಅವರೇ ಇದಕ್ಕೆ ಉತ್ತರ ಕೊಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ರವಿ ಆಗ್ರಹಿಸಿದ್ದಾರೆ.

  • ಬೆಂಗಳೂರಿನ ಬನಶಂಕರಿ ಅಮ್ಮನ ದೇಗುಲದಲ್ಲಿ ಇತಿಹಾಸ ಸೃಷ್ಟಿ!

    ಬೆಂಗಳೂರಿನ ಬನಶಂಕರಿ ಅಮ್ಮನ ದೇಗುಲದಲ್ಲಿ ಇತಿಹಾಸ ಸೃಷ್ಟಿ!

    ಬೆಂಗಳೂರು: ನಗರದ ಪ್ರಸಿದ್ಧ ದೇವಾಲಯವಾದ ಬನಶಂಕರಿ ಅಮ್ಮನ ದೇಗುಲದಲ್ಲಿ ಇತಿಹಾಸ ಸೃಷ್ಟಿಯಾಗಿದೆ.

    ಬೆಂಗಳೂರಿನ ಬನಶಂಕರಿ ಅಮ್ಮನ ದೇಗುಲದಲ್ಲಿ ಒಂದೂವರೆ ತಿಂಗಳಿಗೆ ಬರೋಬ್ಬರಿ 50 ಲಕ್ಷ ರೂ. ಹುಂಡಿ ಹಣ ಸಂಗ್ರಹವಾಗಿದ್ದು ಇತಿಹಾಸ ಸೃಷ್ಟಿಯಾಗಿದೆ. ಇದರಿಂದ ಮುಜರಾಯಿ ಇಲಾಖೆಯ ಅಧಿಕಾರಿಗಳು ತುಂಬಾ ಖುಷಿಯಾಗಿದ್ದಾರೆ.

    ಈ ಹಿಂದೇ ಒಂದೂವರೆ ತಿಂಗಳಲ್ಲಿ ಸಾಮಾನ್ಯವಾಗಿ 30 ಲಕ್ಷ ರೂ. ಆದಾಯ ಬರುತ್ತಿತ್ತು, ಆದರೆ ಈ ಬಾರಿ ಬನಶಂಕರಿ ಅಮ್ಮನಿಗೆ 50 ಲಕ್ಷ ರೂ. ಕಾಣಿಕೆ ಬಂದಿದೆ. ಇಂದು ಹುಂಡಿಯಲ್ಲಿದ್ದ ಹಣವನ್ನು ಹೊರ ತೆಗೆದು ಸುಮಾರು 30 ಕ್ಕೂ ಅಧಿಕ ಮಂದಿ ಕುಳಿತು ಲೆಕ್ಕ ಹಾಕಿದ್ದಾರೆ.

    ಬನಶಂಕರಿ ದೇವಾಲಯದಲ್ಲಿ ಪ್ರತಿದಿನ ಸಂಜೆ ಭಕ್ತಾಧಿಗಳು ಬರುತ್ತಿರುತ್ತಾರೆ. ಆದರೆ ಶನಿವಾರ ಭಾನುವಾರ ಬಂದರೆ ಸಾಕು ಈ ದೇವಾಲಯದಲ್ಲಿ ಜನಸಾಗರವೇ ನೆರೆದಿರುತ್ತದೆ. ದೇವಾಲಯಕ್ಕೆ ಬಂದ ಭಕ್ತಾಧಿಗಳು ವರ ಬೇಡಿಕೊಂಡು ನಿಂಬೆ ಹಣ್ಣು ಮತ್ತು ಎಳ್ಳಿನ ದೀಪವನ್ನು ಹಚ್ಚಿ ಹೋಗುತ್ತಾರೆ. ಬೇಡಿಕೆ ಈಡೇರಿದ ಮೇಲೆ ಹರಕೆ ಹಣವನ್ನು ಹುಂಡಿಯಲ್ಲಿ ಹಾಕಿ ದೀಪವನ್ನು ಹಚ್ಚಿ ದೇವಿಯ ದರ್ಶನ ಪಡೆಯುತ್ತಾರೆ. ಈ ದೇವಾಲಯ ಬನಶಂಕರಿ ಬಸ್ ನಿಲ್ದಾಣದ ಪಕ್ಕದಲ್ಲಿ ಇದೆ.

  • ಸೆಪ್ಟೆಂಬರ್ ಹುಂಡಿ ಎಣಿಕೆಯಲ್ಲಿ ದಾಖಲೆ ಬರೆದ ಕೊಲ್ಲೂರು ಮೂಕಾಂಬಿಕಾ ದೇವಾಲಯ

    ಸೆಪ್ಟೆಂಬರ್ ಹುಂಡಿ ಎಣಿಕೆಯಲ್ಲಿ ದಾಖಲೆ ಬರೆದ ಕೊಲ್ಲೂರು ಮೂಕಾಂಬಿಕಾ ದೇವಾಲಯ

    – ನೋಟ್ ಬ್ಯಾನ್ ಆಗಿ ವರ್ಷ ಕಳೆದರೂ ಬರ್ತಿದೆ ಹಳೆ ನೋಟು

    ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಸೆಪ್ಟೆಂಬರ್ ನಲ್ಲಿ ದಾಖಲೆ ಪ್ರಮಾಣದ ಹಣ ಕಾಣಿಕೆ ರೂಪದಲ್ಲಿ ಹರಿದು ಬಂದಿದೆ. ಈವರೆಗಿನ ಎಲ್ಲಾ ದಾಖಲೆಗಳು ಬ್ರೇಕ್ ಆಗಿದ್ದು ಒಂದು ತಿಂಗಳಲ್ಲೇ ಬರೋಬ್ಬರಿ 1 ಕೋಟಿ 10 ಲಕ್ಷ ರೂಪಾಯಿ ಹುಂಡಿಗೆ ಬಿದ್ದಿದೆ.

    ಕೊಲ್ಲೂರಿನಲ್ಲಿ ಪ್ರತಿ ತಿಂಗಳು ಹುಂಡಿಯ ಹಣವನ್ನು ಲೆಕ್ಕ ಮಾಡುವ ಪ್ರಕ್ರಿಯೆ ನಡೆಯುತ್ತಿದ್ದು ಈ ಬಾರಿ 1.10 ಕೋಟಿ ರೂಪಾಯಿ ಹುಂಡಿಗೆ ಕಾಣಿಕೆ ಬಿದ್ದಿದೆ. ಕಳೆದ ವರ್ಷ ಸಪ್ಟೆಂಬರ್ ತಿಂಗಳಲ್ಲಿ 1 ಕೋಟಿ 60 ಸಾವಿರ ರೂಪಾಯಿ ಸಂಗ್ರಹವಾಗಿ ಅದೇ ಈ ವರೆಗಿನ ದಾಖಲೆಯಾಗಿತ್ತು. ಈ ಪೈಕಿ 63 ಸಾವಿರ ರೂಪಾಯಿ 1000 ಮತ್ತು 500 ಮುಖಬೆಲೆಯ ಹಳೆಯ ನೋಟುಗಳು ಅನ್ನೋದು ವಿಶೇಷ.

    ಈ ವರ್ಷ 9 ಲಕ್ಷ 40 ಸಾವಿರ ರೂಪಾಯಿ ಹೆಚ್ಚುವರಿ ಸಂಗ್ರಹವಾಗಿದೆ. ಮಂಗಳವಾರ ಬೆಳಗ್ಗೆಯಿಂದ ತಡರಾತ್ರಿಯವರೆಗೆ ದೇವಸ್ಥಾನದ ಸಿಬ್ಬಂದಿ, ಸಾರ್ವಜನಿಕರು, ಶಾಲಾ ಮಕ್ಕಳು ಕೊಲ್ಲೂರು ಕ್ಷೇತ್ರದ ಎಲ್ಲಾ ಹುಂಡಿಗಳನ್ನು ಲೆಕ್ಕ ಮಾಡಿದ್ದಾರೆ. ತಡರಾತ್ರಿ 12.30ರ ತನಕವೂ ಸಿಬ್ಬಂದಿ ಚಿಲ್ಲರೆ- ನೋಟು ವಿಭಜನೆ, ಕಟ್ಟು ಕಟ್ಟುವುದು- ಲೆಕ್ಕ ಮಾಡುವುದರಲ್ಲಿ ತೊಡಗಿಸಿಕೊಂಡಿದ್ದರು ಎಂದು ಉಡುಪಿಯ ಅಪರ ಜಿಲ್ಲಾಧಿಕಾರಿ ಅನುರಾಧಾ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ಈ ಬಾರಿ ಹುಂಡಿಯಲ್ಲಿ ಒಂದು ಲಕ್ಷ ರೂಪಾಯಿ ಮೊತ್ತದ ವಿದೇಶಿ ಕರೆನ್ಸಿ ಸಂಗ್ರಹವಾಗಿದೆ. ದೇವಿ ಮೂಕಾಂಬಿಕೆಗೆ 870 ಗ್ರಾಂ ಚಿನ್ನದ ಆಭರಣ- 3 ಕಿಲೋ ಬೆಳ್ಳಿಯ ಆಭರಣಗಳು ಹರಕೆ ರೂಪದಲ್ಲಿ ಬಂದಿದೆ. ಇದೂವರೆಗಿನ ದೊಡ್ಡ ಮೊತ್ತದ ಚಿನ್ನ ಮತ್ತು ಬೆಳ್ಳಿಯ ಹರಕೆ. ಈ ಬಾರಿ 63 ಸಾವಿರ ರೂಪಾಯಿಯ ಹಳೇ ನೋಟುಗಳನ್ನು ಭಕ್ತರು ಹುಂಡಿಗೆ ಹಾಕಿದ್ದಾರೆ. ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗದೆ ಹೀಗೆ ಮಾಡಿದ್ರೋ..? ಇದರಲ್ಲೂ ಕಪ್ಪು ಹಣ ಇತ್ತೋ ಅನ್ನೋದು ಉತ್ತರ ಸಿಗದ ಪ್ರಶ್ನೆ.

    ನವರಾತ್ರಿ ತಿಂಗಳಲ್ಲಿ ದೇಶಾದ್ಯಂತ ಭಕ್ತರು ಕೊಲ್ಲೂರು ಮೂಕಾಂಬಿಕೆಯ ಕ್ಷೇತ್ರಕ್ಕೆ ಬಂದು ತಮ್ಮ ಹರಕೆ ತೀರಿಸುತ್ತಾರೆ. ಕೇರಳ ತಮಿಳುನಾಡು ರಾಜ್ಯದಿಂದ ಹೆಚ್ಚು ಮಂದಿ ಭಕ್ತರು ಕೊಲ್ಲೂರು ಕ್ಷೇತ್ರಕ್ಕೆ ಬರುವುದು ವಾಡಿಕೆ. ಈ ಬಾರಿ ಭಕ್ತರ ಸಂಖ್ಯೆಯೂ ಜಾಸ್ತಿಯಾಗಿದೆ. ಜೊತೆಗೆ ಬಂದ ಭಕ್ತರು ಹುಂಡಿಗೆ ಹಾಕಿದ- ಹೊತ್ತುಕೊಂಡ ಹರಕೆಯ ಮೊತ್ತವೂ ಹೆಚ್ಚಾಗಿದೆ.

  • ಹಾಸನಾಂಬೆ ದೇವಾಲಯಕ್ಕೆ ಭಕ್ತರಿಂದ ಹರಿದು ಬಂತು ದಾಖಲೆ ಪ್ರಮಾಣದ ಹಣ

    ಹಾಸನಾಂಬೆ ದೇವಾಲಯಕ್ಕೆ ಭಕ್ತರಿಂದ ಹರಿದು ಬಂತು ದಾಖಲೆ ಪ್ರಮಾಣದ ಹಣ

    ಹಾಸನ: ಭಾನುವಾರ ಬೆಳಗ್ಗೆ ಆರಂಭಗೊಂಡಿದ್ದ ಹಾಸನಾಂಬೆ ದೇವಾಲಯದ ಹುಂಡಿ ಎಣಿಕೆ ಕಾರ್ಯ ಸಂಜೆ ವೇಳೆ ಮುಕ್ತಾಯಗೊಂಡಿದ್ದು, ದಾಖಲೆ ಪ್ರಮಾಣದ ಆದಾಯ ಹರಿದು ಬಂದಿದೆ. ಅಲ್ಲದೇ ಹುಂಡಿ ಎಣಿಕೆ ವೇಳೆ ಭಕ್ತರ ವಿಚಿತ್ರ ಪತ್ರಗಳು ಸಿಕ್ಕಿವೆ.

    ಒಂದು ಸಾವಿರ ಬೆಲೆಯ ಟಿಕೆಟ್‍ನಿಂದ 1.3 ಕೋಟಿ ರೂಪಾಯಿ, 300 ರೂಪಾಯಿ ಟಿಕೆಟ್‍ನಿಂದ 1.2ಕೋಟಿ ರೂಪಾಯಿ ಆದಾಯ ಬಂದಿದೆ. ಇನ್ನೂ ಪ್ರಸಾದದ ಆದಾಯ 70 ಲಕ್ಷ ರೂಪಾಯಿ ಬಂದಿದೆ. ಒಟ್ಟು ಈ ಬಾರಿಯ ಜಾತ್ರೆಯಲ್ಲಿ 4.14 ಕೋಟಿ ರೂ. ಆದಾಯ ಬಂದಿದೆ.

    ಬ್ಯಾಂಕ್ ಸಿಬ್ಬಂದಿ ಸೇರಿದಂತೆ ಒಟ್ಟು 50 ಜನ ಹುಂಡಿ ಎಣಿಕೆ ಮಾಡಿದ್ದರು. 4 ಸಿಸಿ ಕ್ಯಾಮರಾವನ್ನು ಅಳವಡಿಸಲಾಗಿತ್ತು. ಚಿಕ್ಕದು, ದೊಡ್ಡದು ಸೇರಿ ಒಟ್ಟು 16 ಹುಂಡಿಗಳಿದ್ದು, ಎಲ್ಲಾ ಹುಂಡಿಗಳ ಎಣಿಕಾ ಕಾರ್ಯ ಮುಕ್ತಾಯವಾಗಿದೆ. ಅಹೋರಾತ್ರಿ ಹಾಸನಾಂಬೆ ದರ್ಶನ ಮತ್ತು ಶೀಘ್ರ ದರ್ಶನಕ್ಕೆ 300 ರೂ. ಜೊತೆಗೆ 1 ಸಾವಿರ ರೂ. ಶುಲ್ಕ ನಿಗದಿ ಮಾಡಿದ್ದರಿಂದ ಈ ಬಾರಿ ಸುಮಾರು 5 ಕೋಟಿ ರೂ. ಅಧಿಕ ಆದಾಯವನ್ನು ನಿರೀಕ್ಷಿಸಲಾಗಿತ್ತು.

    ಕಳೆದ ವರ್ಷ ಹಾಸನಾಂಬೆ ಜಾತ್ರೆಯಲ್ಲಿ ಸಂಗ್ರಹವಾಗಿದ್ದ 2.36 ಕೋಟಿ ರೂ. ಈವರೆಗಿನ ಅತ್ಯಧಿಕ ಆದಾಯವಾಗಿತ್ತು. ಈ ಬಾರಿ ಒಟ್ಟು 10 ದಿನಗಳ ಕಾಲ 6 ರಿಂದ 7 ಲಕ್ಷ ಭಕ್ತರು, ದೇವಿಯ ದರ್ಶನ ಪಡೆದಿದ್ದಾರೆ ಎಂದು ಅಂದಾಜಿಸಲಾಗಿದೆ.

    ವಿಶೇಷವಾಗಿ ಹುಂಡಿ ಎಣಿಕೆ ವೇಳೆ ಭಕ್ತರ ವಿಚಿತ್ರ ಪತ್ರಗಳು ಸಿಕ್ಕಿದ್ದು, ನಾನು ಪ್ರೀತಿಸುವ ಹುಡುಗಿ ನನಗೆ ಸಿಗುವಂತೆ ಮಾಡು. ನನ್ನ ಮುಖದ ಮೊಡವೆಗಳನ್ನ ನಿವಾರಣೆ ಮಾಡು. ನನ್ನ ಸೌಂದರ್ಯವನ್ನ ಹೆಚ್ಚಿಸು. ಅತ್ತೆ ಮನೆ ಕಿರುಕುಳದಿಂದ ಪಾರು ಮಾಡು. ನನ್ನ ರೋಗ ನಿವಾರಿಸು ಎಂಬ ನಾನಾ ಕೋರಿಕೆಗಳನ್ನು ದೇವಿ ಬಳಿ ಭಕ್ತರು ಕೇಳಿಕೊಂಡಿದ್ದಾರೆ.

  • ವಿಡಿಯೋ: ಭಕ್ತನ ವೇಷದಲ್ಲಿ ಬಂದು ಗಣೇಶನ ಮುಂದಿದ್ದ ಹುಂಡಿಯನ್ನೇ ಕದ್ದೊಯ್ದ

    ವಿಡಿಯೋ: ಭಕ್ತನ ವೇಷದಲ್ಲಿ ಬಂದು ಗಣೇಶನ ಮುಂದಿದ್ದ ಹುಂಡಿಯನ್ನೇ ಕದ್ದೊಯ್ದ

    ಹುಬ್ಬಳ್ಳಿ: ಹಣ ಅಂದ್ರೆ ದೇವ್ರನ್ನೂ ಬಿಡಲ್ಲ ಅನ್ನೋದಕ್ಕೆ ತಾಜಾ ಉದಾಹರಣೆ ಹುಬ್ಬಳ್ಳಿಯಲ್ಲಾಗಿರುವ ಕೃತ್ಯ. ಭಕ್ತನ ವೇಷದಲ್ಲಿ ಪ್ಯಾಂಟ್-ಶರ್ಟ್, ಜರ್ಕಿನ್, ಬ್ಯಾಗ್ ಹಾಕ್ಕೊಂಡು ಬಂದ ವ್ಯಕ್ತಿಯೊಬ್ಬ ಗಣಪನ ಮುಂದೆ ಇಟ್ಟಿದ್ದ ಹುಂಡಿಯನ್ನೇ ಎತ್ಕೊಂಡು ಎಸ್ಕೇಪ್ ಆಗಿದ್ದಾನೆ.

    ಚತುರ್ಥಿ ಪ್ರಯುಕ್ತ ಸಾರ್ವಜನಿಕವಾಗಿ ಗಣಪತಿಯನ್ನು ಕೂರಿಸಲಾಗಿತ್ತು. ಭಕ್ತರು ಕಾಣಿಕೆ ಹಾಕಲಿ ಅಂತಾ ಕಾಣಿಕೆ ಡಬ್ಬವನ್ನೂ ಇಡಲಾಗಿತ್ತು. ಆದ್ರೆ ಯಾರೂ ಇಲ್ಲದ ವೇಳೆ ಪೆಂಡಾಲ್ ಒಳಗೆ ಬಂದ ಕಳ್ಳ ತನ್ನ ಜರ್ಕಿನ್ ತೆಗೆದು ಅದರೊಳಗೆ ಹುಂಡಿಯನ್ನು ಮುಚ್ಚಿ ಎತ್ಕೊಂಡು ಹೋಗಿದ್ದಾನೆ.

    ಹುಬ್ಬಳ್ಳಿಯ ದಾಜೀಬಾನ ಪೇಟೆಯ ಗವಳಿಗಲ್ಲಿಯ ಗಣೇಶೋತ್ಸವ ಮಂಡಳಿ ಪ್ರತಿಷ್ಠಾಪಿಸಿದ್ದ ಗಣೇಶನ ಮುಂದಿನ ಹುಂಡಿ ಕಳ್ಳತನವಾಗಿದೆ. ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

    https://www.youtube.com/watch?v=D-LdSLtKcZc&feature=youtu.be