Tag: ಹುಂಡಿ

  • ಬ್ಯಾನ್ ಆಗಿ 2 ವರ್ಷವಾದ್ರೂ ಮಂಡ್ಯದಲ್ಲಿ ಹಳೆಯ ನೋಟುಗಳು ಪತ್ತೆ

    ಬ್ಯಾನ್ ಆಗಿ 2 ವರ್ಷವಾದ್ರೂ ಮಂಡ್ಯದಲ್ಲಿ ಹಳೆಯ ನೋಟುಗಳು ಪತ್ತೆ

    ಮಂಡ್ಯ: ನೋಟ್ ಬ್ಯಾನ್ ಆಗಿ ಎರಡು ವರ್ಷ ಕಳೆದರೂ ಭಕ್ತರು ಮಾತ್ರ ತಮ್ಮಲ್ಲಿರುವ ಹಳೆಯ ನೋಟುಗಳನ್ನು ದೇವಾಲಯದ ಹುಂಡಿಗೆ ಹಾಕುತ್ತಿದ್ದಾರೆ.

    ಜಿಲ್ಲೆಯ ಶ್ರೀರಂಗಪಟ್ಟಣದ ನಿಮಿಷಾಂಭ ದೇವಾಲಯದ ಹುಂಡಿಯಲ್ಲಿ ಹಳೆಯ ನೋಟುಗಳು ಪತ್ತೆಯಾಗಿದೆ. ಶ್ರೀರಂಗಪಟ್ಟಣದ ನಿಮಿಷಾಂಭ ದೇವಾಲಯದಲ್ಲಿ ಶುಕ್ರವಾರ ಹುಂಡಿ ಎಣಿಕೆ ಕಾರ್ಯ ನಡೆಸಲಾಗಿದೆ. ಹುಂಡಿಯಲ್ಲಿ ಸುಮಾರು 39 ಲಕ್ಷ ಹಣ ಸಂಗ್ರಹವಾಗಿತ್ತು.

    ಚಿನ್ನ, ಬೆಳ್ಳಿ ಸೇರಿದಂತೆ, ಅಮೆರಿಕ, ಮಲೇಷಿಯ ಹಾಗೂ ವಿವಿಧ ದೇಶಗಳ ಕರೆನ್ಸಿ ಕೂಡ ಸಂಗ್ರಹವಾಗಿತ್ತು. ಈ ವೇಳೆ ಹುಂಡಿಯಲ್ಲಿ 500 ರೂಪಾಯಿಯ 12 ಹಳೇ ನೋಟುಗಳು ಮತ್ತು ಸಾವಿರ ರೂಪಾಯಿಯ ಮೂರು ಹಳೇ ನೋಟುಗಳು ಪತ್ತೆಯಾಗಿವೆ.

    ಹಳೆಯ 500 ಮತ್ತು 1000 ರೂಪಾಯಿಯ ನೋಟುಗಳು ನಿಷೇಧವಾಗಿ ಎರಡು ವರ್ಷ ಕಳೆದರೂ ದೇವರ ಹುಂಡಿಯಲ್ಲಿ ಮಾತ್ರ ಹಳೇ ನೋಟುಗಳು ಪತ್ತೆಯಾಗಿದ್ದು ವಿಶೇಷವಾಗಿತ್ತು. ಅಂದರೆ ಜನರು ತಮ್ಮ ಬಳಿ ಇರುವ ಹಳೆಯ ನೋಟುಗಳನ್ನು ಬೇರೆ ಕಡೆ ಕೊಡಲು ಸಾಧ್ಯವಾಗದೇ ಈ ರೀತಿಯಾಗಿ ದೇವರ ಹುಂಡಿಯಲ್ಲಿ ಹಾಕುತ್ತಿದ್ದಾರೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಲೆ ಮಹದೇಶ್ವರ ಹುಂಡಿ ಎಣಿಕೆ: ಬರೋಬ್ಬರಿ 1.32 ಕೋಟಿ ರೂ. ಸಂಗ್ರಹ

    ಮಲೆ ಮಹದೇಶ್ವರ ಹುಂಡಿ ಎಣಿಕೆ: ಬರೋಬ್ಬರಿ 1.32 ಕೋಟಿ ರೂ. ಸಂಗ್ರಹ

    ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಪ್ರಸಿದ್ಧ ಮಲೆ ಮಹದೇಶ್ವರ ಸ್ವಾಮಿಯ ದೇವಾಲಯದ ಹುಂಡಿ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಈ ಬಾರಿ ಬರೊಬ್ಬರಿ 1.32 ಕೋಟಿ ರೂಪಾಯಿ ಹಣ ಸಂಗ್ರಹವಾಗಿದೆ.

    ಅಕ್ಟೋಬರ್ ತಿಂಗಳ ಕೊನೆಯ ದಿನವಾದ ಬುಧವಾರ ಎಣಿಕೆ ಕಾರ್ಯವನ್ನು ಆರಂಭಿಸಲಾಗಿತ್ತು. ಈ ವೇಳೆ ಒಟ್ಟು 1,32,83,620 ರೂ. ಸಂಗ್ರಹವಾಗಿದೆ. ಅಲ್ಲದೇ 45 ಗ್ರಾಂ ಚಿನ್ನ ಹಾಗೂ 1 ಕೆಜಿ 5 ಗ್ರಾಂ ಬೆಳ್ಳಿಯ ಆಭರಣಗಳು ಭಕ್ತರಿಂದ ಕಾಣಿಕೆ ರೂಪದಲ್ಲಿ ಲಭ್ಯವಾಗಿದೆ.

    ಹುಂಡಿ ಎಣಿಕೆ ಕಾರ್ಯವನ್ನು ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜಿ.ರೂಪಾ ಹಾಗೂ ಸಾಲೂರು ಮಠದ ಗುರುಸ್ವಾಮಿ ಸಮ್ಮುಖದಲ್ಲಿ ನೆರವೇರಿತ್ತು. ಎಸ್‍ಬಿಐ ಶಾಖೆಯ ಬ್ಯಾಂಕ್ ಸಿಬ್ಬಂದಿ ಹಾಗೂ ಸಿಸಿಟಿವಿಯ ಕಣ್ಗಾವಲಿನಲ್ಲಿ ಬುಧವಾರ ತಡರಾತ್ರಿಯವರೆಗೂ ಎಣಿಕೆ ಕಾರ್ಯ ನಡೆದಿತ್ತು.

    ಮಲೆ ಮಹದೇಶ್ವರ ದೇವಾಲಯವು ರಾಜ್ಯದಲ್ಲಿಯೇ ಮುಜರಾಯಿ ಇಲಾಖೆಗೆ ಅತಿ ಹೆಚ್ಚು ಆದಾಯ ತರುವ ದೇವಸ್ಥಾನಗಳ ಪೈಕಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಪ್ರತಿ ತಿಂಗಳ ಕೊನೆಯ ದಿನದಂದು ದೇವಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯುತ್ತದೆ. ಇದನ್ನೂ ಓದಿ: ಚಾಮುಂಡಿ ದೇವಸ್ಥಾನದಲ್ಲಿ ಕೋಟಿ ದಾಟಿದ ಹುಂಡಿ ಹಣ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚಾಮುಂಡಿ ದೇವಸ್ಥಾನದಲ್ಲಿ ಕೋಟಿ ದಾಟಿದ ಹುಂಡಿ ಹಣ

    ಚಾಮುಂಡಿ ದೇವಸ್ಥಾನದಲ್ಲಿ ಕೋಟಿ ದಾಟಿದ ಹುಂಡಿ ಹಣ

    ಮೈಸೂರು: ಕೋಟಿ ರೂಪಾಯಿ ಹುಂಡಿ ಹಣ ಸಂಗ್ರಹವಾಗುವ ದೇವಸ್ಥಾನಗಳ ಪಟ್ಟಿಗೆ ಮೈಸೂರಿನ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇಗುಲ ಮತ್ತೇ ಸೇರ್ಪಡೆಯಾಗಿದೆ.

    ಕಳೆದ ಬಾರಿಯಂತೆ ಈ ಬಾರಿ ಹುಂಡಿಯೊಂದರಲ್ಲೇ ಕೋಟಿ ಹಣ ಸಂಗ್ರಹವಾಗಿದೆ. ಕಳೆದ ಬಾರಿಗಿಂತ 7 ಲಕ್ಷ ರೂ. ಹೆಚ್ಚಿನ ಹಣ ಹುಂಡಿಯಲ್ಲಿ ಸಂಗ್ರಹವಾಗಿದ್ದು, ಕಾವೇರಿ ಗ್ರಾಮೀಣ ಬ್ಯಾಂಕ್‍ನ ಸಿಬ್ಬಂದಿ ಹುಂಡಿ ಏಣಿಕೆ ಕಾರ್ಯ ನಡೆಸಿದ್ದಾರೆ.

    ಒಂದೂವರೆ ತಿಂಗಳ ಬಳಿಕ ಎಣಿಕೆಯಾದ ದೇವಾಲಯದ 7 ಹುಂಡಿಯಲ್ಲಿ ಬರೋಬ್ಬರಿ 1 ಕೋಟಿ, 27 ಲಕ್ಷದ 67 ಸಾವಿರದ 605 ರೂ.(1,27,67,605) ಸಂಗ್ರಹವಾಗಿದೆ. ಹುಂಡಿಯಲ್ಲಿ ಒಟ್ಟು 34 ವಿದೇಶಿ ಕರೆನ್ಸಿ ಪತ್ತೆಯಾಗಿದ್ದು, ಚಿನ್ನ ಮತ್ತು ಬೆಳ್ಳಿ ಮುಂದಿನ ದಿನಗಳಲ್ಲಿ ಏಣಿಕೆಯಾಗುವ ಬಗ್ಗೆ ದೇವಾಲಯದ ಕಾರ್ಯನಿರ್ವಾಹಕಾಧಿಕಾರಿ ಪ್ರಸಾದ್ ಮಾಹಿತಿ ನೀಡಿದ್ದಾರೆ.

    ಕಾವೇರಿ ಗ್ರಾಮೀಣ ಬ್ಯಾಂಕ್‍ನ 35 ಮಂದಿ ಸಿಬ್ಬಂದಿ ಹುಂಡಿ ಹಣ ಎಣಿಕೆ ಕಾರ್ಯನಡೆಸಿದ್ದು, ಕಳೆದ ಬಾರಿ 1 ಕೋಟಿ 20 ಲಕ್ಷ ರೂ. ಹಣ ಹುಂಡಿಯಲ್ಲಿ ಸಂಗ್ರಹವಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದುರ್ಗಾದೇವಿಯ ಧನಲಕ್ಷ್ಮಿ ಅವತಾರ!

    ದುರ್ಗಾದೇವಿಯ ಧನಲಕ್ಷ್ಮಿ ಅವತಾರ!

    ಬೆಂಗಳೂರು: ದುರ್ಗಾ ಪರಮೇಶ್ವರಿಯಲ್ಲಿ ದೇಗುಲದಲ್ಲಿ ಧರೆಗಿಳಿದ ಧನಲಕ್ಷ್ಮಿ, ಖಾಸಗಿ ದೇಗುಲ ಕೈವಶವಾದ ಒಂದೇ ತಿಂಗಳಲ್ಲಿ ಮುಜರಾಯಿ ಇಲಾಖೆಗೆ ಬಂಪರ್ ಆಫರ್ ಹೊಡೆದಿದೆ.

    ವಿದ್ಯಾರಣ್ಯಪುರದ ದುರ್ಗಾಪರಮೇಶ್ವರಿ ದೇಗುಲದ ಹುಂಡಿ ಎಣಿಕೆ ಮಾಡಲಾಗಿದ್ದು, ಅಪಾರ ಪ್ರಮಾಣದ ಕಂತೆ ಕಂತೆ ನೋಟು, ಚಿನ್ನಾಭರಣ ಮತ್ತು ಬೆಳ್ಳಿ ಸಂಗ್ರಹವಾಗಿದೆ. ದೇಗುಲದಲ್ಲಿ ಅವ್ಯವಹಾರ ನಡೆಯುತ್ತಿದ್ದರಿಂದ 1 ತಿಂಗಳ ಹಿಂದೆ ಈ ದೇಗುಲ ಮುಜರಾಯಿ ವಶವಾಗಿತ್ತು. ಬಳಿಕ ದೇಗುಲ ಹಾಗೂ ಟ್ರಸ್ಟಿ ಮಧ್ಯೆ ಕಿತ್ತಾಟ ನಡೆಯುತ್ತಿತ್ತು. ಹೀಗಾಗಿ ಶುಕ್ರವಾರ ಕೋರ್ಟ್ ಮಧ್ಯಪ್ರವೇಶಿಸಿ ಹುಂಡಿ ಎಣಿಕಾ ಕಾರ್ಯಕ್ಕೆ ಅನುವು ಮಾಡಿಕೊಟ್ಟಿತ್ತು.

    ಒಂದು ತಿಂಗಳ ಅಂತರದಲ್ಲಿ 12 ಹುಂಡಿಯೂ ಭರ್ತಿಯಾಗಿದ್ದು, ಮುಜರಾಯಿ ದೇಗುಲಗಳ ಲಿಸ್ಟ್ ಗೆ ಇನ್ನೊಂದು ಶ್ರೀಮಂತ ದೇಗುಲ ಸೇರಿದಂತಾಗಿದೆ ಎಂದು ಇಲಾಖೆ ಅಧಿಕಾರಿ ಶ್ರೀಧರ್ ಹೇಳಿದ್ದಾರೆ.

    ಹುಂಡಿ ದುಡ್ಡು ಎಣಿಕೆ ವೇಳೆ ಕಿರಿಕ್ ಆಗಬಹುದು ಅಂತ ಮುಂಜಾಗೃತಾ ಕ್ರಮವಾಗಿ ಪೊಲೀಸ್ ಭದ್ರತೆಯನ್ನು ಕೂಡ ನಿಯೋಜನೆ ಮಾಡಲಾಗಿತ್ತು. ಒಟ್ಟು ಒಂದು ಲಕ್ಷ ರೂಪಾಯಿ ಸಂಗ್ರಹವಾಗಿದ್ದು, ಲೆಕ್ಕಪತ್ರ ನಿರ್ವಹಣೆ ಸಮಸ್ಯೆಯಿಂದಾಗಿ ಮುಜರಾಯಿ ವಶಕ್ಕೆ ಪಡೆದುಕೊಂಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದೇವಸ್ಥಾನದ 2 ಹುಂಡಿ ಬೀಗ ಒಡೆದು ಲಕ್ಷಾಂತರ ಹಣ ಕಳವು

    ದೇವಸ್ಥಾನದ 2 ಹುಂಡಿ ಬೀಗ ಒಡೆದು ಲಕ್ಷಾಂತರ ಹಣ ಕಳವು

    ಚಿಕ್ಕಬಳ್ಳಾಪುರ: ದಕ್ಷಿಣ ಕಾಶಿ ಕ್ಷೇತ್ರವೆಂದೇ ಪ್ರಸಿದ್ಧ ಪಡೆದಿರುವ ಚಿಕ್ಕಬಳ್ಳಾಪುರ ತಾಲೂಕು ನಂದಿ ಗ್ರಾಮದ ಶ್ರೀ ಬೋಗನಂದೀಶ್ವರ ದೇಗುಲಕ್ಕೆ ನುಗ್ಗಿರುವ ಕಳ್ಳರು 2 ಹುಂಡಿಯ ಬೀಗ ಒಡೆದು ಹಣ ಕಳವು ಮಾಡಿದ್ದಾರೆ.

    ದೇವಾಲಯದ ಕಲ್ಯಾಣಿ ಕಡೆಯ ಬಾಗಿಲಿನಿಂದ ಒಳನುಗ್ಗಿರುವ ಕಳ್ಳರು, ಪ್ರಾಂಗಣದಲ್ಲಿನ ಹುಂಡಿಗೆ ಮುದ್ರೆ ಹಾಕಲಾಗಿದ್ದ ಬೀಗವನ್ನ ಒಡೆದು ಹಣ ದೋಚಿದ್ದಾರೆ. ಹೀಗಾಗಿ ಹುಂಡಿಯಲ್ಲಿದ್ದ ಲಕ್ಷಾಂತರ ರೂಪಾಯಿ ಹಣ ಕಳ್ಳರ ಪಾಲಾಗಿದ್ದು, ಭದ್ರತಾ ಸಿಬ್ಬಂದಿ ಇದ್ದರೂ ಕಳ್ಳತನ ನಡೆದಿರೋದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

    ದೇವಾಲಯಕ್ಕೆ ಶ್ವಾನದಳ ಬೆರಳಚ್ಚು ತಜ್ಞರ ತಂಡದೊಂದಿಗೆ ಆಗಮಿಸಿದ್ದ ನಂದಿಗಿರಿಧಾಮ ಪೊಲೀಸರು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಈ ಹಿಂದೆ ಬೋಗನಂದೀಶ್ವರಲಾಯದ ಅರುಚಲೇಶ್ವರ ದೇವರ ಶಿಖರದ ಮೇಲಿನ ಪಂಚ ಲೋಹದ ಕಳಸ ಕೂಡ ಕಳವು ಆಗಿತ್ತು. 2013 ರಲ್ಲಿ ನಂದಿ ಬೆಟ್ಟದ ಮೇಲಿನ ಯೋಗ ನಂದೀಶ್ವರ ದೇವಾಲಯದಲ್ಲೂ ಹುಂಡಿ ಕಳವು ಆಗಿತ್ತು. ಪದೇ ಪದೇ ಕಳ್ಳತನ ಪ್ರಕರಣ ಕಂಡುಬಂದರೂ ಆಡಳಿತ ಮಂಡಳಿ ಸುಮ್ಮನಿರುವುದರಿಂದ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಲೆ ಮಹದೇಶ್ವರಸ್ವಾಮಿ ಹುಂಡಿ ಎಣಿಕೆ – 1.14 ಕೋಟಿ ಹಣ ಸಂಗ್ರಹ

    ಮಲೆ ಮಹದೇಶ್ವರಸ್ವಾಮಿ ಹುಂಡಿ ಎಣಿಕೆ – 1.14 ಕೋಟಿ ಹಣ ಸಂಗ್ರಹ

    ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಐತಿಹಾಸಿಕ ಮಲೆ ಮಹದೇಶ್ವರ ದೇವಾಲಯದ ಹುಂಡಿ ಎಣಿಕೆ ಕಾರ್ಯ ಮುಗಿದಿದ್ದು, 1 ಕೋಟಿ 14 ಲಕ್ಷ ರೂ. ಹಣ ಸಂಗ್ರಹವಾಗಿದೆ.

    ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಕೆ.ಎಂ ಗಾಯತ್ರಿ ಮತ್ತು ಶ್ರೀ ಸಾಲೂರು ಬೃಹನ್ಮಠದ ಶ್ರೀ ಶ್ರೀ ಪಟ್ಟದ ಗುರುಸ್ವಾಮಿಗಳವರ ಸಮ್ಮುಖದಲ್ಲಿ ನೂರಾರು ಸಿಬ್ಬಂದಿಗಳು ದೇವಾಲಯದ ಹುಂಡಿಯಲ್ಲಿದ್ದ ಹಣವನ್ನು ಎಣಿಸುವ ಕಾರ್ಯವನ್ನು ನಡೆಸಿದ್ದರು.

    ಮಹದೇಶ್ವರಸ್ವಾಮಿ ದೇವಾಲಯದಲ್ಲಿ ಪ್ರತಿ ತಿಂಗಳಿಗೊಮ್ಮೆ ಹುಂಡಿ ಎಣಿಕೆ ಕಾರ್ಯ ನಡೆಯುತ್ತಿದೆ. ಆಗಸ್ಟ್ ತಿಂಗಳ ಹುಂಡಿ ಎಣಿಕೆ ಕಾರ್ಯದಲ್ಲಿ 1 ಕೋಟಿ 14 ಲಕ್ಷ ರೂಪಾಯಿ ನಗದು ಹಣ ಸಿಕ್ಕಿದೆ. ಹಣ ಮಾತ್ರವಲ್ಲದೇ 31 ಗ್ರಾಂ ಚಿನ್ನ ಮತ್ತು 600 ಗ್ರಾಂ ಬೆಳ್ಳಿ ವಸ್ತುಗಳು ಸಿಕ್ಕಿವೆ. ಇದೇ ತಿಂಗಳಿನಲ್ಲಿ ಶ್ರಾವಣ ಇದ್ದ ಕಾರಣ ದೇವಾಲಯಕ್ಕೆ ಅಪಾರ ಭಕ್ತರು ಆಗಮಿಸಿದ್ದರು. ಆದ್ದರಿಂದ ದೊಡ್ಡ ಮೊತ್ತದ ಹಣವು ಹುಂಡಿಯಲ್ಲಿ ಸಂಗ್ರಹವಾಗಿದೆ.

    ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಸಭೆ ವೇಳೆ ಅಧಿಕಾರಿಯೊಬ್ಬರು ಮಹದೇಶ್ವರ ಬೆಟ್ಟದಲ್ಲಿ ಒಂದು ಬೆಳ್ಳಿ ರಥವನ್ನು ನಿರ್ಮಾಣ ಮಾಡುವ ಪ್ರಸ್ತಾಪ ಮಾಡಿದ್ದರು. ಇದಕ್ಕಾಗಿ ನಮಗೆ 400 ಕೆಜಿ ಬೆಳ್ಳಿ ಬೇಕು. ಭಕ್ತರಿಂದ ನಮಗೆ ಈಗಾಗಲೇ 800 ಕೆಜಿ ಬೆಳ್ಳಿ ಸಂಗ್ರಹವಾಗಿದೆ. ರಥ ತಯಾರಿಸುವ ಪ್ರಕ್ರಿಯೆ ಆರಂಭಿಸಬೇಕು ಎಂದು ತಿಳಿಸಿದ್ದರು. ಈ ವೇಳೆ ಸಿದ್ದರಾಮಯ್ಯ ಅವರು ನನ್ನ ಬಳಿಯೂ ಸಾಕಷ್ಟು ಬೆಳ್ಳಿ ಇದೆ. ಕಾರ್ಯಕ್ರಮಗಳಲ್ಲಿ ಕೊಟ್ಟ ಬೆಳ್ಳಿ ಗದೆ, ಕಿರೀಟ ಇತ್ಯಾದಿ ಬೆಳ್ಳಿ ಉಡುಗೊರೆಗಳು ಇವೆ. ಅವುಗಳನ್ನು ರಥ ನಿರ್ಮಾಣಕ್ಕೆ ನಾನು ನೀಡುತ್ತೇನೆ ಎಂದು ಅಧಿಕಾರಿಗಳಿಗೆ ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 1 ಕೋಟಿ ದಾಟಿತು ನಂಜುಂಡೇಶ್ವರ ದೇವಾಲಯದ ಕಾಣಿಕೆ ಹುಂಡಿ ಆದಾಯ!

    1 ಕೋಟಿ ದಾಟಿತು ನಂಜುಂಡೇಶ್ವರ ದೇವಾಲಯದ ಕಾಣಿಕೆ ಹುಂಡಿ ಆದಾಯ!

    ಮೈಸೂರು: ಜಿಲ್ಲೆಯ ನಂಜನಗೂಡಿನ ನಂಜುಂಡೇಶ್ವರ ದೇವಾಲಯದ ಹುಂಡಿ ಕಾಣಿಕೆಯ ಆದಾಯ ಕೋಟಿ ದಾಟಿದೆ.

    1 ತಿಂಗಳ ಅವಧಿಯ ಹುಂಡಿ ಏಣಿಕೆಯಲ್ಲಿ ಒಂದು ಕೋಟಿ ಹಣ ಸಂಗ್ರಹವಾಗಿದೆ. ಇದರ ಜೊತೆಗೆ 94 ಗ್ರಾಂ ಚಿನ್ನ, 4.5 ಕೆಜಿ ಬೆಳ್ಳಿ ಸೇರಿ 42 ವಿದೇಶಿ ಕರೆನ್ಸಿಗಳು ಹುಂಡಿಯಲ್ಲಿ ಸಂಗ್ರಹವಾಗಿವೆ.

    ದೇಗುಲದ ಕಾರ್ಯ ನಿರ್ವಾಹಕ ಅಧಿಕಾರಿ ಸಮ್ಮುಖದಲ್ಲಿ 200 ಸಿಬ್ಬಂದಿಗಳು ಹುಂಡಿ ಏಣಿಕೆ ಕಾರ್ಯದಲ್ಲಿ ಭಾಗಿಯಾಗಿದ್ದರು. ಕಳೆದ ತಿಂಗಳು ಒಂದು ಕೋಟಿ ರೂ. ಹೆಚ್ಚು ಹಣ ಆದಾಯವಾಗಿ ಹರಿದುಬಂದಿತ್ತು. ಈ ತಿಂಗಳು ಮತ್ತೆ ಕೋಟಿ ಆದಾಯ ಬಂದಿದೆ.

    ನಿತ್ಯವೂ ನಂಜನಗೂಡಿಗೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಳವಾಗುತ್ತಿರುವ ಕಾರಣ ಪ್ರತಿ ತಿಂಗಳು ಹುಂಡಿ ಹಣ ಹೆಚ್ಚಾಗುತ್ತಲೇ ಇದೆ ಎಂದು ನಂಜನಗೂಡು ದೇಗುಲದ ಕಾರ್ಯ ನಿರ್ವಾಹಕ ಅಧಿಕಾರಿ ಕುಮಾರಸ್ವಾಮಿ ಹೇಳಿದ್ದಾರೆ.

  • ನಿಮಿಷಾಂಭ ದೇವಾಲಯದ ಹುಂಡಿಯಲ್ಲಿ ಬ್ಯಾನ್ ಆಗಿರೋ ನೋಟುಗಳು ಪತ್ತೆ

    ನಿಮಿಷಾಂಭ ದೇವಾಲಯದ ಹುಂಡಿಯಲ್ಲಿ ಬ್ಯಾನ್ ಆಗಿರೋ ನೋಟುಗಳು ಪತ್ತೆ

    ಮಂಡ್ಯ: 500 ಹಾಗೂ 1 ಸಾವಿರ ನೋಟುಗಳು ಅಮಾನ್ಯಗೊಂಡು ವರ್ಷಗಳೇ ಕಳೆದಿದೆ. ಆದರೆ ದೇವಾಲಯದ ಹುಂಡಿಗಳಲ್ಲಿ ಭಕ್ತರು ಇನ್ನೂ ಅಮಾನ್ಯಗೊಂಡ ನೋಟುಗಳನ್ನು ಕಾಣಿಕೆ ರೀತಿ ಹುಂಡಿಗೆ ಈಗಲೂ ಹಾಕುತ್ತಿದ್ದಾರೆ.

    ಶ್ರೀರಂಗಪಟ್ಟಣ ತಾಲೂಕಿನ ಗಂಜಾಂ ನಲ್ಲಿರುವ ಪ್ರಸಿದ್ಧ ನಿಮಿಷಾಂಭ ದೇವಾಲಯದ 18 ಕಾಣಿಕೆ ಹುಂಡಿ ಸುರಿದು ಏಣಿಕೆ ಮಾಡಲಾಯಿತು. ಹುಂಡಿಯಲ್ಲಿ ಒಟ್ಟು 32.5 ಲಕ್ಷ ರೂ. ಸಂಗ್ರಹವಾಗಿದ್ದು, ಅಮಾನ್ಯಗೊಂಡಿರುವ 1 ಸಾವಿರ ಮುಖ ಬೆಲೆಯ 2 ನೋಟು ಹಾಗೂ 500 ಮುಖ ಬೆಲೆಯ 6 ನೋಟುಗಳು ದೊರೆತಿವೆ. ಕಾಣಿಕೆ ಹುಂಡಿಯಲ್ಲಿ 90 ಗ್ರಾಂ ಚಿನ್ನ, 140 ಗ್ರಾಂ ಬೆಳ್ಳಿ ಯನ್ನು ಭಕ್ತರು ಕಾಣಿಕೆಯಾಗಿ ನೀಡಿದ್ದರು.

    ಅಮಾನ್ಯಗೊಂಡ ನೋಟುಗಳನ್ನು ಎಸೆಯಲು ಮನಸ್ಸು ಬಾರದೆ ಹುಂಡಿಗೆ ಹಾಕುತ್ತಿರುವ ಭಕ್ತರ ನಡವಳಿಕೆ ಮಾತ್ರ ವಿಚಿತ್ರವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.

  • ದೈವದ ಹುಂಡಿಗೆ ಮೂತ್ರ ವಿಸರ್ಜನೆ, ಕಾಂಡೋಮ್ ಹಾಕಿದ್ರು – ಅಪಚಾರ ಎಸಗಿದವನಿಗೆ ತಟ್ಟಿತು ಶಾಪ!

    ದೈವದ ಹುಂಡಿಗೆ ಮೂತ್ರ ವಿಸರ್ಜನೆ, ಕಾಂಡೋಮ್ ಹಾಕಿದ್ರು – ಅಪಚಾರ ಎಸಗಿದವನಿಗೆ ತಟ್ಟಿತು ಶಾಪ!

    ಉಡುಪಿ: ನಂಬಿದವರ ಕೈಬಿಡುವುದಿಲ್ಲ. ಅಪಚಾರ ಮಾಡಿದರೆ ಸುಮ್ಮನೆ ಬಿಡುವುದೂ ಇಲ್ಲ. ಇದು ಕರಾವಳಿಯ ದೈವ ಕೊರಗಜ್ಜನ ಬಗೆಗಿನ ಭಕ್ತರ ಮಾತು. ಈಗ ಜಿಲ್ಲೆಯ ಕಟಪಾಡಿಯಲ್ಲಿ ದೈವ ಕೊರಗಜ್ಜ ತನ್ನ ಕಾರಣಿಕ ಮತ್ತು ಶಕ್ತಿಯನ್ನು ತೋರಿದ್ದಾನೆ.

    ತುಳುನಾಡಿನಲ್ಲಿ ದೇವರಷ್ಟೇ ದೈವಗಳೂ ಆರಾಧನೆಗೊಳುತ್ತದೆ. ಇದೀಗ ಮತ್ತೆ ಕೊರಗಜ್ಜನ ಕಾರಣಿಕ ಕಂಡು ಬಂದಿದೆ. ಕಟಪಾಡಿಯ ಪೇಟೆಬೆಟ್ಟು ಬಬ್ಬುಸ್ವಾಮಿ ಸನ್ನಿಧಾನದಲ್ಲಿ ಕೊರಗಜ್ಜನ ಆರಾಧನೆಯೂ ನಡೆಯುತ್ತದೆ. ಈ ಕ್ಷೇತ್ರದ ಕಾಣಿಕೆ ಹುಂಡಿಯ ಹಣ ಕದ್ದ ಅನ್ಯಕೋಮಿನ ಯುವಕರ ಗುಂಪಿಗೆ ಸಮಸ್ಯೆ ತಟ್ಟಿದೆ. ಹಣ ಕದ್ದ ನಂತರ ಶಿವಲಿಂಗದ ಮಾದರಿಯಲ್ಲಿರುವ ಕಾಣಿಕೆ ಡಬ್ಬಿಗೆ ಯುವಕರ ಗುಂಪು ಮೂತ್ರ ವಿಸರ್ಜನೆ ಮಾಡಿತ್ತು.

    ಅಷ್ಟೇ ಅಲ್ಲದೇ ಅದೇ ಹುಂಡಿಗೆ ಕಾಂಡೋಮ್ ಪ್ಯಾಕೇಟ್ ಗಳನ್ನು ಹಾಕಿದ್ದರು. ದೈವ ಏನು ಮಾಡುತ್ತೆ ಅನ್ನೋ ಉಡಾಫೆ ಮಾತನಾಡುತ್ತಾ, ಆ ಹುಡುಗರು ಅಲ್ಲಿಂದ ತೆರಳಿದ್ದರು. ಆದರೆ ನಂಬಿಕೆಯ ದೈವ ಕೊರಗಜ್ಜ ತನ್ನ ಶಕ್ತಿ ತೋರಿಸಿದ್ದಾನೆ. ಈ ಅನಾಗರಿಕ ವರ್ತನೆ ತೋರಿದ ಕೆಲವೇ ದಿನಗಳಲ್ಲಿ ತಂಡದಲ್ಲಿದ್ದ ಅಪ್ರಾಪ್ತ ಬಾಲಕನಿಗೆ ಅನಾರೋಗ್ಯ ಬಾಧಿಸಿದೆ. ಸೊಂಟದ ಕೆಳಗೆ, ಎರಡೂ ಕಾಲಿನ ಭಾಗ ಬಲ ಕಳೆದುಕೊಂಡಿದೆ.

    ಈ ಬಗ್ಗೆ ವೈದ್ಯರಿಗೆ ತೋರಿಸಿದರೂ ಪ್ರಯೋಜನವಾಗಿಲ್ಲ. ಅನ್ಯ ಕೋಮಿನವರಾದರೂ ಹಿಂದೂಗಳೊಂದಿಗೆ ಉತ್ತಮ ಒಡನಾಟವಿದ್ದ ಸಂತ್ರಸ್ಥ ಕುಟುಂಬ ಜ್ಯೋತಿಷಿಯ ಮೊರೆ ಹೋಗಿದ್ದಾರೆ. ಆಗ ಕೊರಗಜ್ಜನಿಗೆ ಮಾಡಿದ ಅಪಚಾರದ ಪ್ರಸ್ತಾಪವಾಗುತ್ತೆ. ಜ್ಯೋತಿಷಿಯ ಸೂಚನೆಯಂತೆ ತಕ್ಷಣವೇ ಕಟಪಾಡಿಯ ಕೊರಗಜ್ಜ ಸ್ಥಾನಕ್ಕೆ ಬಂದು ನೊಂದ ಕುಟುಂಬ ವಿಷಯ ತಿಳಿಸುತ್ತಾರೆ. ಈ ನಡುವೆ ಕಾಣಿಕೆ ಡಬ್ಬಿ ತೆರೆದು ನೋಡಿದ ಕ್ಷೇತ್ರದ ಆಡಳಿತ ಮಂಡಳಿಗೂ ಕಿಡಿಗೇಡಿಗಳ ಕೃತ್ಯ ಅರಿವಿಗೆ ಬಂದಿದೆ.

    ತಮ್ಮದು ತಪ್ಪಾಗಿದೆ ಎಂದು ಕುಟುಂಬದ ಕೇಳಿಕೊಂಡು ಕೋರಿಕೆಯಂತೆ ಕೊರಗಜ್ಜ ದೈವದ ದರ್ಶನ ಏರ್ಪಾಟು ಮಾಡಲಾಗಿದೆ. ದರ್ಶನದ ವೇಳೆ ಅಪಚಾರ ಮಾಡಿದ ಅಪ್ರಾಪ್ತ ಬಾಲಕ ದೈವದ ಕ್ಷಮೆ ಕೊರಿದ್ದಾನೆ. ಇಂತಹಾ ಕೃತ್ಯ ಮಾಡಕೂಡದು ಎಂದು ದೈವ ಎಚ್ಚರಿಸಿದೆ. ಈ ಘಟನೆ ಕರಾವಳಿಯಾದ್ಯಂತ ಕುತೂಹಲ ಕೆರಳಿಸಿದೆ. ಈಗ ಕೊರಗಜ್ಜನ ದರ್ಶನದ ವೀಡಿಯೋ, ಪೋಟೋಗಳು ವೈರಲ್ ಆಗಿದೆ.

  • ಹುಂಡಿ ಒಡೆದ್ರೂ ಹಣ ತೆಗೆದುಕೊಳ್ಳದೆ ಕಳ್ಳ ವಾಪಸ್!

    ಹುಂಡಿ ಒಡೆದ್ರೂ ಹಣ ತೆಗೆದುಕೊಳ್ಳದೆ ಕಳ್ಳ ವಾಪಸ್!

    ಮೈಸೂರು: ದೇವಾಲಯಕ್ಕೆ ಕನ್ನ ಹಾಕಲು ಬಂದ ಕಳ್ಳ ಹುಂಡಿ ಒಡೆದು ಅದರಲ್ಲಿದ್ದ ಹಣವನ್ನು ತೆಗೆದುಕೊಳ್ಳದೇ ವಾಪಸ್ ಆಗಿರುವ ಘಟನೆ ನಗರದ ದೇವಾಲಯದಲ್ಲಿ ನಡೆದಿದೆ.

    ಮೈಸೂರಿನ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಕೊಲ್ಲಪುರದಮ್ಮ ದೇಗುಲದಲ್ಲಿ ಈ ಘಟನೆ ನಡೆದಿದೆ. ಕಳ್ಳ ದೇವಾಲಯದ ಗೇಟ್ ಬೀಗ ಒಡೆದು ಒಳಗಡೆ ನುಗ್ಗಿದ್ದಾನೆ. ನಂತರ ಹುಂಡಿ ಒಡೆದಿದ್ದಾನೆ. ಹುಂಡಿಯಲ್ಲಿ ಹಣ ಇದ್ದರೂ ಆ ಹಣವನ್ನು ಕಳ್ಳ ತೆಗೆದುಕೊಂಡು ಹೋಗಿಲ್ಲ.

    ಅಷ್ಟೇ ಅಲ್ಲದೇ ದೇಗುಲದಲ್ಲಿ ಯಾವ ಆಭರಣವನ್ನು ಮುಟ್ಟದೆ ಹಾಗೆ ವಾಪಸ್ ಹೋಗಿದ್ದಾನೆ. ಇಂದು ಬೆಳಗ್ಗೆ 4 ಗಂಟೆಗೆ ಪುರೋಹಿತರು ದೇವಾಲಯಕ್ಕೆ ಬಂದ ವೇಳೆ ಈ ಕೃತ್ಯ ಬೆಳಕಿಗೆ ಬಂದಿದೆ. ಘಟನೆ ನಡೆದ ಸ್ಥಳಕ್ಕೆ ಕೆ.ಆರ್. ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.