Tag: ಹೀರೋ ಸೈಕಲ್

  • ಭಾರತದ ಕಂಪನಿಯ ಸೈಕಲ್ ಏರಿ ಆರೋಗ್ಯ ಅಭಿಯಾನಕ್ಕೆ ಯುಕೆ ಪಿಎಂ ಚಾಲನೆ

    ಭಾರತದ ಕಂಪನಿಯ ಸೈಕಲ್ ಏರಿ ಆರೋಗ್ಯ ಅಭಿಯಾನಕ್ಕೆ ಯುಕೆ ಪಿಎಂ ಚಾಲನೆ

    ಲಂಡನ್: ಭಾರತದ ಪ್ರಸಿದ್ಧ ಹೀರೋ ಕಂಪನಿಯ ಸೈಕಲ್ ಓಡಿಸಿ ಇಂಗ್ಲೆಂಡ್ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರು, ಸರ್ಕಾರದ ಆರೋಗ್ಯ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.

    ಇಡೀ ವಿಶ್ವಕ್ಕೆ ಕೊರೊನಾ ವೈರಸ್ ಮಾರಕವಾಗಿದ್ದು, ಇಂಗ್ಲೆಂಡ್‌ನಲ್ಲೂ ಕೊರೊನಾ ವೈರಸ್ ಅಟ್ಟಹಾಸ ಮೆರೆಯುತ್ತಿದೆ. ಕಳೆದ ಮೂರು ತಿಂಗಳ ಹಿಂದೆ ಪಿಎಂ ಬೋರಿಸ್ ಜಾನ್ಸನ್ ಅವರಿಗೂ ಕೊರೊನಾ ವೈರಸ್ ತಗಲಿತ್ತು. ಇದಕ್ಕಾಗಿ ಅವರು ಸೈಕಲ್ ಮತ್ತು ವಾಕಿಂಗ್ ಅಭಿಯಾನಕ್ಕೆ ದೇಶದಲ್ಲಿ ಚಾಲನೆ ನೀಡಿದ್ದಾರೆ. ಈ ವೇಳೆ ಮೇಡ್ ಇನ್ ಇಂಡಿಯಾ ಹೀರೋ ಸೈಕಲ್ ಓಡಿಸಿದ್ದಾರೆ.

    ಎರಡು ಶತಕೋಟಿ ಪೌಂಡ್ ಮೊತ್ತದ ಅಭಿಯಾನಕ್ಕೆ ಮಂಗಳವಾರ ಬೋರಿಸ್ ಜಾನ್ಸನ್ ಅವರು ಚಾಲನೆ ನೀಡಿದ್ದಾರೆ. ಸೈಕಲ್ ಮತ್ತು ಸಾಮಾಜಿಕ ಅಂತರದ ವಾಕಿಂಗ್ ಮಾಡುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡು ಕೊರೊನಾ ವಿರುದ್ಧ ಹೋರಾಡುವುದು ಇದರ ಉದ್ದೇಶವಾಗಿದೆ. ಈ ಅಭಿಯಾನಕ್ಕೆ ಚಾಲನೆ ನೀಡುವ ವೇಳೆ ಬೋರಿಸ್ ಜಾನ್ಸನ್ ಅವರು ಹೀರೋ ಕಂಪನಿ ನಿರ್ಮಾಣ ಮಾಡಿದ ವೈಕಿಂಗ್ ಪ್ರೋ ಎಂಬ ಸೈಕಲ್ ಅನ್ನು ಚಲಿಸಿಕೊಂಡು ನಾಟಿಂಗ್‍ಹ್ಯಾಮ್‍ನ ಬೀಸ್ಟನ್‍ನಲ್ಲಿರೋ ಹೆರಿಟೇಜ್ ಸೆಂಟರ್ ಗೆ ಹೋಗಿದ್ದಾರೆ.

    ಈ ವೇಳೆ ಮಾತನಾಡಿರುವ ಜಾನ್ಸನ್ ಅವರು, ಸೈಕಲ್ ಮತ್ತು ವಾಕಿಂಗ್ ಮಾಡುವುದರಿಂದ ಜನರು ಫಿಟ್ ಆಗಿ ಮತ್ತು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಇದರ ಜೊತೆಗೆ ನಮ್ಮಲ್ಲಿ ವಾಹನ ಸಂಚಾರ ಜಾಸ್ತಿಯಾಗಿರುವ ಕಾರಣ ಅದು ಪರಿಸರದ ಮೇಲು ಪರಿಣಾಮ ಬೀರಿದೆ. ಇದರಿಂದ ಜನರಿಗೆ ಹಲವಾರು ತೊಂದರೆಗಳು ಆಗುತ್ತಿವೆ. ಈಗ ಜನರು ಹೆಚ್ಚು ಸೈಕಲ್ ಮತ್ತು ವಾಕಿಂಗ್ ಮಾಡುವುದರಿಂದ ಪರಿಸರಕ್ಕೂ ಉಪಯೋಗವಾಗಲಿದೆ ಮತ್ತು ಆರೋಗ್ಯವಾಗಿ ಇರಲು ಸಹಾಯಕವಾಗಲಿದೆ ಎಂದು ಹೇಳಿದ್ದಾರೆ.

    ಕಳೆದ ಮಾರ್ಚ್‍ನಲ್ಲಿ ಬೋರಿಸ್ ಜಾನ್ಸನ್ ಅವರಿಗೂ ಕೊರೊನಾ ವೈರಸ್ ತಗುಲಿತ್ತು. ಬೋರಿಸ್ ಜಾನ್ಸನ್ ಅವರಿಗೆ ಸ್ವಲ್ಪ ಪ್ರಮಾಣದಲ್ಲಿ ಕೊರೊನಾ ವೈರಸ್ ನ ಗುಣಲಕ್ಷಣಗಳು ಕಂಡು ಬಂದಿದ್ದವು. ಇದಾದ ನಂತರ ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಅವರಿಗೆ ಕೊರೊನಾ ವೈರಸ್ ತಗುಲಿರುವುದು ದೃಢಪಟ್ಟಿತ್ತು. ಇದರಿಂದ ಭಯಪಡುವ ಅಗತ್ಯವಿಲ್ಲ. ನಾನು ಮನೆಯಲ್ಲೇ ಕುಳಿತು ತಂತ್ರಜ್ಞಾನ ಬಳಸಿ ಸರ್ಕಾರ ನಡೆಸುತ್ತೇನೆ. ನಾವು ಕೊರೊನಾ ವಿರುದ್ಧ ಹೊರಾಡೋಣ ಎಂದು ಬೋರಿಸ್ ಜಾನ್ಸನ್ ಟ್ವೀಟ್ ಮಾಡಿದ್ದರು. ಇದನ್ನು ಓದಿ: ತನ್ನ ಮಗುವಿಗೆ ವೈದ್ಯರ ಹೆಸರಿಟ್ಟ ಯುಕೆ ಪ್ರಧಾನ ಮಂತ್ರಿ 

    ಬೋರಿಸ್ ಜಾನ್ಸನ್ ಅವರು ಮಂಗಳವಾರ ರೈಡ್ ಮಾಡಿದ ಹೀರೋ ಕಂಪನಿಯ ವೈಕಿಂಗ್ ಪ್ರೊ ಸೈಕಲ್ ಭಾರತದ ಹೀರೋ ಮೋಟಾರ್ಸ್ ಕಂಪನಿಯ ಒಡೆತನದ ಇನ್ಸಿಂಕ್ ಬ್ರಾಂಡ್‍ನ ಒಂದು ಭಾಗವಾಗಿದೆ. ಈ ಬ್ರಾಂಡ್ ಅನ್ನು ಇಂಗ್ಲೆಂಡ್‍ನ ಮ್ಯಾಂಚೆಸ್ಟರ್ ನಲ್ಲಿ ಡಿಸೈನ್ ಮಾಡಲಾಗುತ್ತದೆ. ಹೀರೋ ಸೈಕಲ್ಸ್ ವೈಕಿಂಗ್, ರಿಡ್ಡಿಕ್ ಮತ್ತು ರೈಡೇಲ್ ಬ್ರಾಂಡ್‍ಗಳನ್ನು ಇನ್ಸಿಂಕ್ ಎಂಬ ಬ್ರಾಂಡ್ ಹೆಸರಿನಲ್ಲಿ ಇಂಗ್ಲೆಂಡ್‍ನಲ್ಲಿ ಮಾರಾಟ ಮಾಡುತ್ತದೆ.

  • ಚೀನಾ ಜೊತೆಗಿನ 900 ಕೋಟಿ ಒಪ್ಪಂದ ರದ್ದುಗೊಳಿಸಿದ ‘ಹೀರೋ’ಸೈಕಲ್

    ಚೀನಾ ಜೊತೆಗಿನ 900 ಕೋಟಿ ಒಪ್ಪಂದ ರದ್ದುಗೊಳಿಸಿದ ‘ಹೀರೋ’ಸೈಕಲ್

    -ಚೀನಾ ಜೊತೆಗಿನ ಎಲ್ಲ ವ್ಯಾಪಾರಕ್ಕೆ ಬ್ರೇಕ್

    ನವದೆಹಲಿ: ಗಾಲ್ವಾನಾ ಕಣಿವೆ ಪ್ರದೇಶದಲ್ಲಿ ನಡೆದ ಭಾರತ ಮತ್ತು ಚೀನಾದ ನಡುವೆ ಸಂಘರ್ಷದ ಬಳಿಕ ದೇಶದಲ್ಲಿ ಹಲವು ಬದಲಾವಣೆಗಳು ಆಗುತ್ತಿವೆ. ಕೇಂದ್ರ ಸರ್ಕಾರ 59 ಚೀನಾ ಆ್ಯಪ್‍ಗಳನ್ನು ನಿಷೇಧಿಸಿದ ಬೆನ್ನಲ್ಲೆ ಉದ್ಯಮಿದಾರರು ಸಹ ವೈರಿ ರಾಷ್ಟ್ರದ ಜೊತೆಗಿನ ವ್ಯವಹಾರಿಕ ಸಂಬಂಧವನ್ನು ಕಡಿತಗೊಳಿಸಿಕೊಳ್ಳುತ್ತಿದ್ದಾರೆ. ಇದೀಗ ಹೀರೋ ಸೈಕಲ್ ಕಂಪನಿ ಚೀನಾ ಜೊತೆಗಿನ 900 ಕೋಟಿ ವ್ಯವಹಾರವನ್ನ ರದ್ದುಗೊಳಿಸಿದೆ.

    ಸೈಕಲ್ ತಯಾರಿಕೆಗಾಗಿ ಹೀರೋ ಕಂಪನಿ ಬಿಡಿ ಭಾಗಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತಿತ್ತು. ಈಗ ಪಂಜಾಬ್ ರಾಜ್ಯದ ಲೂಧಿಯಾನದ ಸಣ್ಣ ಕಂಪನಿಗಳಿಂದ ಬಿಡಿ ಭಾಗಗಳನ್ನು ತರಿಸಿಕೊಳ್ಳಲು ಹೀರೋ ಕಂಪನಿ ನಿರ್ಧರಿಸಿದೆ. ಮುಂದಿನ ತಿಂಗಳ ಒಪ್ಪಂದವನ್ನು ರದ್ದು ಮಾಡಿಕೊಂಡಿದ್ದರಿಂದ ಚೀನಾಗೆ ಅಂದಾಜು 900 ಕೋಟಿ ರೂ. ನಷ್ಟ ಸಂಭವಿಸಲಿದೆ.

    ಜರ್ಮಿನಿಯಲ್ಲಿ ಚೀನಾ ತನ್ನ ಸ್ಥಾವರ ಸ್ಥಾಪಿಸಲು ಮುಂದಾಗಿದೆ. ಜರ್ಮನಿಯನ್ನು ವ್ಯಾಪಾರದ ಕೇಂದ್ರ ಬಿಂದುವನ್ನಾಗಿ ಮಾಡಿಕೊಳ್ಳುವ ಮೂಲಕ ವಿಶ್ವದ ಮಾರುಕಟ್ಟೆಯನ್ನು ವ್ಯವಹರಿಸಲು ಕಂಪನಿ ಪ್ಲಾನ್ ಮಾಡಿಕೊಂಡಿದೆ. ಕೊರೊನಾ ಸಂಕಷ್ಟದ ಸಮಯದಲ್ಲಿ ಹೀರೋ ಕಂಪನಿ ಸರ್ಕಾರಕ್ಕೆ 100 ಕೋಟಿ ರೂ.ಯನ್ನು ದಾನವಾಗಿ ನೀಡಿತ್ತು.

    ಚೀನಾದ 59 ಆ್ಯಪ್ ಮಾಡುವ ಮೂಲಕ ನೆರೆಯ ವೈರಿ ರಾಷ್ಟ್ರಕ್ಕೆ ಶಾಕ್ ನೀಡಿರುವ ಪ್ರಧಾನಿ ಮೋದಿ, ಮತ್ತೊಂದು ಹೆಜ್ಜೆಯನ್ನು ಇರಿಸಿದ್ದಾರೆ. ದೇಶದ ಯುವ ಪೀಳಿಗೆ ದೇಶಿಯ ಆ್ಯಪ್ ತಯಾರಿಸುವ ಮೂಲಕ ಆತ್ಮನಿರ್ಭರ ಭಾರತದ ಜೊತೆ ಕೈ ಜೋಡಿಸಿ ಎಂದು ಕರೆ ನೀಡಿದ್ದಾರೆ.