Tag: ಹೀರೋ

  • ದರ್ಶನ್ ಫ್ಯಾಮಿಲಿ ಕುಡಿ ಶೀಘ್ರದಲ್ಲೇ ಹೀರೋ ಆಗಿ ಎಂಟ್ರಿ?

    ದರ್ಶನ್ ಫ್ಯಾಮಿಲಿ ಕುಡಿ ಶೀಘ್ರದಲ್ಲೇ ಹೀರೋ ಆಗಿ ಎಂಟ್ರಿ?

    ಸ್ಯಾಂಡಲ್‌ವುಡ್‌ನ ಖ್ಯಾತ ಖಳನಟರಾಗಿದ್ದ ತೂಗುದೀಪ ಶ್ರೀನಿವಾಸ್ ಅವರ ಬಳಿಕ ಅವರ ಮಕ್ಕಳಿಬ್ಬರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಹಿರಿಯ ಮಗ ದರ್ಶನ್ (Darshan) ಖ್ಯಾತ ನಟನಾಗಿದ್ರೆ, ಕಿರಿಯ ಮಗ ದಿನಕರ್ ಖ್ಯಾತ ನಿರ್ದೇಶಕನಾಗಿ ಗುರುತಿಸಿಕೊಂಡರು. ಇದೀಗ ತೂಗುದೀಪ ಶ್ರೀನಿವಾಸ್‌ (Thoogudeepa Srinivas) ಮೊಮ್ಮಗ ಅಂದರೆ ಮಗಳ ಮಗ ಚಂದು (Chandu) ಅಲಿಯಾಸ್ ಚಂದ್ರಕುಮಾರ್ ಸ್ಯಾಂಡಲ್‌ವುಡ್‌ಗೆ ಗ್ರ್ಯಾಂಡ್ ಎಂಟ್ರಿ ಕೊಡಲು ವೇದಿಕೆ ರೆಡಿಯಾಗಿದೆ. ದರ್ಶನ್, ಸೋದರಳಿಯನನ್ನು ಲಾಂಚ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

    ಅಂದಹಾಗೆ ಚಂದು ಈಗಾಗ್ಲೇ ಪರಿಚಯವಿರುವ ಮುಖ. ಯಾಕಂದ್ರೆ ಹಲವು ವರ್ಷಗಳಿಂದ ಸೋದರಮಾವ ದರ್ಶನ್ ಅವರ ಜೊತೆಯಲ್ಲೇ ಚಂದು ಇದ್ದರು. ಈಗಲೂ ಇದ್ದಾರೆ. ಇದೇ ಚಂದು, ಕಾಟೇರ ಸಿನಿಮಾದಲ್ಲಿ ಕಾಟೇರನ ಬಾಲ್ಯದ ಪಾತ್ರಕ್ಕಾಗಿ ಬಣ್ಣ ಹಚ್ಚಿದ್ರು. ಬಹಳ ವರ್ಷಗಳಿಂದ ಚಂದು ಸಿನಿಮಾ ಜಗತ್ತಿಗೆ ಎಂಟ್ರಿ ಕೊಡಲು ಸಿದ್ಧರಾಗಿದ್ದು, ತೆರೆಯ ಹಿಂದಿನ ಕಾರ್ಯಗಳನ್ನ ಮಾವನ ಸಿನಿಮಾಗಳಿಂದ ನೋಡುತ್ತಲೇ ಬಂದಿದ್ದಾರೆ. ಇದೀಗ ದರ್ಶನ್ ಅಕ್ಕನ ಮಗ ಚಂದು ಹೀರೋ ಆಗಿ ಎಂಟ್ರಿ ಕೊಡಲು ಸಿದ್ಧರಾಗಿದ್ದು, ಆ ಚಿತ್ರ ಇದೇ ಬರುವ ಶ್ರಾವಣ ಮಾಸಕ್ಕೆ ಆರಂಭವಾಗುತ್ತೆ ಎನ್ನಲಾಗುತ್ತಿದೆ. ಇದನ್ನೂ ಓದಿ: `ಎಕ್ಕ’ ಸಿನಿಮಾ ರಿಲೀಸ್‌ಗೆ ದಿನಗಣನೆ – ಮಂತ್ರಾಲಯ ರಾಯರ ದರ್ಶನ ಪಡೆದ ಯುವ ರಾಜ್‌ಕುಮಾರ್

    ನೋಟದಲ್ಲಿ ದರ್ಶನ್‌ರನ್ನೇ ಹೋಲುವ ದಚ್ಚು ಅಕ್ಕನ ಮಗ ಚಂದು, ಹೀರೋ ಆಗಿ ಎಂಟ್ರಿ ಕೊಡಲು ಏನ್ ಬೇಕೋ ಅದೆಲ್ಲ ಸಿದ್ಧತೆಯನ್ನು ಹಲವು ವರ್ಷಗಳಿಂದ ಮಾಡ್ಕೊಂಡೇ ಬಂದಿದ್ದಾರೆ. ಇದನ್ನೂ ಓದಿ: ಒಳ ಉಡುಪು ಕಾಣುವಂತ ಉಡುಗೆಯಲ್ಲಿ ದೇಹಸಿರಿ ತೋರಿಸಿದ ಉರ್ಫಿ – ಪಡ್ಡೆಗಳು ಕಂಗಾಲು

    ಇದೇ ಚಂದು, ದರ್ಶನ್ ಅಭಿನಯಿಸುತ್ತಿರುವ ಡೆವಿಲ್ (Devil) ಸಿನಿಮಾದಲ್ಲೂ ಚಂದು ಪುಟ್ಟ ಪಾತ್ರ ಮಾಡಬೇಕಿತ್ತು. ಆದರೆ ಅಭಿಮಾನಿಗಳ ಅತಿರೇಕ ವರ್ತನೆಯಿಂದ ಚಂದು ಅವರನ್ನು ಸಿನಿಮಾದಿಂದ ಕೈ ಬಿಟ್ಟಿದ್ದಾಗಿ ಖುದ್ದು ದರ್ಶನ್ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕುವ ಮುಖಾಂತರ ಹೇಳಿಕೊಂಡಿದ್ದರು. ಇದನ್ನೂ ಓದಿ: ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟ ಕಿಚ್ಚ – ಸುದೀಪ್‌ 47ನೇ ಸಿನಿಮಾ ಅನೌನ್ಸ್

    ಇದೀಗ ದರ್ಶನ್ ತಮ್ಮ ಸಹೋದರಿಯ ಪುತ್ರನ ಕನಸು ನನಸು ಮಾಡುತ್ತಿದ್ದಾರೆ. ತಮ್ಮದೇ ಬ್ಯಾನರ್ ಮೂಲಕವೇ ಚಂದುವನ್ನ ಲಾಂಚ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರಂತೆ. ನಿರ್ದೇಶನ ಯಾರದ್ದು ಸೇರಿದಂತೆ ಇನ್ನಿತರ ವಿಚಾರಗಳು ಒಂದೊಂದಾಗೇ ರಿವೀಲ್ ಆಗಬೇಕಿದೆ.

  • ‘ನಾಯಿ ಇದೆ ಎಚ್ಚರಿಕೆ’ ಸಿನಿಮಾಗೆ ಡಾಕ್ಟರ್ ಲೀಲಾ ಮೋಹನ್ ಹೀರೋ

    ‘ನಾಯಿ ಇದೆ ಎಚ್ಚರಿಕೆ’ ಸಿನಿಮಾಗೆ ಡಾಕ್ಟರ್ ಲೀಲಾ ಮೋಹನ್ ಹೀರೋ

    ಣ್ಣದ ಲೋಕಕ್ಕೆ (Sandalwood) ಎಂಟ್ರ ಕೊಡಬೇಕು ಎಂದರೆ ಇದನ್ನೆ ಓದಿರಬೇಕು, ಇದೇ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಇರಬೇಕು ಎನ್ನುವ ಯಾವುದೇ ನಿಯಮವಿಲ್ಲ. ಚಿತ್ರರಂಗಕ್ಕೆ ಯಾರು ಬೇಕಾದರೂ ಎಂಟ್ರಿ ಕೊಡಬಹುದು. ಆದರೆ ಇಲ್ಲಿ ಸಕ್ಸಸ್ ಕಾಣುವವರ ಸಂಖ್ಯೆ ತುಂಬಾ ಕಡಿಮೆ. ಸಾಕಷ್ಟು ವರ್ಷಗಳು ಶ್ರಮಿಸಿ ಕಷ್ಟ ಪಟ್ಟು ಬೆವರಿಳಿಸಿದರೂ ಬೆರಳೆಣಿಕೆಯ ಮಂದಿಗೆ ಮಾತ್ರ ಕಲಾಸರಸ್ವತಿ ಒಲಿಯುತ್ತಾಳೆ. ಹೀಗಿದ್ದರೂ ಸಿನಿಮಾರಂಗಕ್ಕೆಎಂಟ್ರಿ ಕೊಡುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಸಾಕಷ್ಟು ಮಂದಿ ದೊಡ್ಡ ಕನಸು ಹೊತ್ತು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಇದೇ ಸಾಲಿಗೀಗ ಖ್ಯಾತ ವೈದ್ಯ ಡಾ.ಲೀಲಾಮೋಹನ್ (Leela Mohan) ಕೂಡ ಸೇರ್ಪಡೆಯಾಗಿದ್ದಾರೆ.

    ಹೌದು, ಖ್ಯಾತ ವೈದ್ಯ ಡಾ. ಲೀಲಾ ಮೋಹನ್ ದೊಡ್ಡ ಹೀರೋ ಆಗಬೇಕು ಎನ್ನುವ ಕನಸುಹೊತ್ತು ಬಣ್ಣದ ಲೋಕದ ಕಡೆ ಹೆಜ್ಜೆ ಇಟ್ಟಿದ್ದಾರೆ. ಈಗಾಗಲೇ ಕೆಲವು ಸಿನಿಮಾಗಳಲ್ಲಿ ನಟಿಸಿರುವ ಲೀಲಾ ಮೋಹನ್ ಇದೀಗ ನಟನೆ ಜೊತೆಗೆ ನಿರ್ಮಾಣದಲ್ಲೂ ಬ್ಯುಸಿಯಾಗಿದ್ದಾರೆ. ಫಿಸಿಶಿಯನ್ ಹಾಗೂ ಡಯಾಬಿಟಿಕ್ಸ್ ಸ್ಪೆಷಲಿಸ್ಟ್ ಆಗಿರುವ ಡಾ. ಲೀಲಾ ಮೋಹನ್ ಬಳಿ ಸದ್ಯ ಅನೇಕ ಸಿನಿಮಾಗಳಿವೆ. ನಟನೆ, ನಿರ್ಮಾಣ ಜೊತೆಗೆ ಡಾಕ್ಟರ್ ವೃತ್ತಿಯನ್ನೂ ಮಾಡಿ ಸೈ ಎನಿಸಿಕೊಂಡಿದ್ದಾರೆ.

    18 ವರ್ಷಗಳ ಕಾಲ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಸಕ್ಸಸ್‌ಫುಲ್ ವೈದ್ಯರಾಗಿರುವ ಡಾ. ಲೀಲಾ ಮೋಹನ್ ಸದ್ಯ ಚಿತ್ರರಂಗದಲ್ಲಿ ಯಶಸ್ಸು ಕಾಣಲು ಶ್ರಿಮಿಸುತ್ತಿದ್ದಾರೆ. ಸಿನಿಮಾದಲ್ಲಿ ಮಿಂಚಬೇಕು, ತೆರೆಮೇಲೆ ಅಬ್ಬರಿಸಬೇಕು, ಹೀರೋ ಆಗಬೇಕು ಎನ್ನುವುದು ಲೀಲಾ ಮೋಹನ್ ಅವರಿಗೆ ಅನೇಕ ವರ್ಷಗಳಿಂದ ಇದ್ದ ಕನಸು. ವೈದ್ಯಕೀಯ ಮೃತ್ತಿ ಆಯ್ಕೆ ಮಾಡಿಕೊಂಡಿದ್ದರೂ ನಟನೆ ಕನಸು ಮಾತ್ರ ಹಾಗೆ ಉಳಿದಿತ್ತು. ಆ ಕನಸಿಗೆ ಜೀವ ತುಂಬಿದ್ದು ‘ಬದುಕು’ ಧಾರಾವಾಹಿ. ಕಿರುತೆರೆ ಮೂಲಕ ಮೊದಲ ಬಾರಿಗೆ ಬಣ್ಣದ ಲೋಕಕ್ಕೆ ಕಾಲಿಟ್ಟ ಲೀಲಾ ಮೋಹನ್ ಅವರು ಬದುಕು ಎನ್ನುವ ಧಾರಾವಾಹಿಯಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿದರು. ನಂತರ ತನ್ನದೇ ಯೂಟ್ಯೂಬ್ ಚಾನೆಲ್ ಮಾಡಿ ಕಿರುಚಿತ್ರಗಳನ್ನು ನಿರ್ಮಾಣ ಮಾಡಿ ರಿಲೀಸ್ ಮಾಡಿದರು. ಬಳಿಕ ‘ಕ್ರೌರ್ಯ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟರು. ಕನ್ನಡ ಮಾತ್ರವಲ್ಲದೆ ತೆಲುಗಿನ ಎರಡು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಕನ್ನಡದಲ್ಲಿ ಗಡಿಯಾರ, ಪುಟಾಣಿ ಪಂಟ್ರು, ರ್ಯಾವನ್, ಉಗ್ರಾವಾತಾರ ಸಿನಿಮಾದಲ್ಲಿ ನಟಿಸಿದ್ದಾರೆ. ಉಗ್ರಾವತಾರ ಸಿನಿಮಾದಲ್ಲಿ ಸೈಕೋ ಸುದರ್ಶನ ಎನ್ನುವ ಪಾತ್ರದ ಮೂಲಕ ಲೀಲಾ ಮೋಹನ್ ಖ್ಯಾತಿಗಳಿಸಿದ್ದಾರೆ.

     

    ನಟನಾಗಿ ಎಂಟ್ರಿ ಕೊಟ್ಟ ಲೀಲಾ ಮೋಹನ್ ಬಳಿಕ ನಿರ್ಮಾಣ ಹಾಗೂ ವಿತರಣೆಯಲ್ಲೂ ತೊಡಗಿಸಿಕೊಂಡರು. ಪ್ರಿಯಾಮಣಿ ನಟನೆಯ ‘ಅಂಗುಲಿಕಾ’ ಸಿನಿಮಾವನ್ನು ಕರ್ನಾಟಕದಲ್ಲಿ ವಿತರಣೆ ಮಾಡುವ ಮೂಲಕ ವಿತರಕರಾಗಿಯೂ ಬಡ್ತಿ ಪಡೆದಿದ್ದಾರೆ. ಕಡಿಮೆ ಅವಧಿಯಲ್ಲೇ ಸಿನಿಮಾರಂಗದ ಬಹುತೇಕ ಕ್ಷೇತ್ರದಲ್ಲಿ ಅನುಭವ ಹೊಂದಿರುವಾ. ಲೀಲಾ ಮೋಹನ್ ಇದೀಗ ದೊಡ್ಡ ಹೀರೋ ಆಗಿ ಬೆಳೆಯಬೇಕು ಎನ್ನುವ ಆಸೆ ಹೊಂದಿದ್ದಾರೆ. ನಟನೆ ಜೊತೆಗೆ ದೊಡ್ಡ ದೊಡ್ಡ ಸಿನಿಮಾಗಳನ್ನು ನಿರ್ಮಾಣ ಮಾಡಬೇಕು, ಯುವ ಪ್ರತಿಭೆಗಳಿಗೆ ಅವಕಾಶ ನೀಡಬೇಕು ಎನ್ನುವ ಮಾಹದಾಸೆಯನ್ನು ಹೊಂದಿದ್ದಾರೆ.

  • ‘ರಾಮಾಯಣ’ ಚಿತ್ರಕ್ಕೆ ಯಶ್ ನಿಜವಾದ ಹೀರೋ: ಸತ್ಯ ಬಿಚ್ಚಿಟ್ಟ ನಟ

    ‘ರಾಮಾಯಣ’ ಚಿತ್ರಕ್ಕೆ ಯಶ್ ನಿಜವಾದ ಹೀರೋ: ಸತ್ಯ ಬಿಚ್ಚಿಟ್ಟ ನಟ

    ಅಂದುಕೊಂಡಂತೆ ಆಗಿದ್ದರೆ ರಾಮಾಯಣ ಸಿನಿಮಾದಲ್ಲಿ ಬಾಲಿವುಡ್ ನ ಹೆಸರಾಂತ ನಟ ಆದಿತ್ಯಾ ದೇಶಮುಖ ಕೂಡ ನಟಿಸಬೇಕಿತ್ತು. ಡೇಟ್ ಹೊಂದಾಣಿಕೆ ಕಾರಣದಿಂದಾಗಿ ಅವರು ನಟಿಸೋಕೆ ಸಾಧ್ಯವಾಗಿಲ್ಲ. ಆದರೆ, ರಾಮಾಯಣ ಸಿನಿಮಾದ ಸೀಕ್ರೇಟ್ ಒಂದನ್ನು ಬಿಚ್ಚಿಟ್ಟಿದ್ದಾರೆ ಆದಿತ್ಯಾ, ಈ ರಾಮಾಯಣವನ್ನು ರಾವಣನ (, Ravan) ದೃಷ್ಟಿ ಕೋನದಲ್ಲಿ ಹೆಣೆಯಲಾಗುತ್ತಿದೆಯಂತೆ. ಹಾಗಾಗಿ ನಿಜವಾಗಿಯೂ ಈ ಸಿನಿಮಾದ ಹೀರೋ (Hero) ಯಶ್ ಎಂದು ಅವರು ಹೇಳಿದ್ದಾರೆ.

    ಅಲ್ಲದೇ, ಬಹುನಿರೀಕ್ಷಿತ ಸಿನಿಮಾ ರಾಮಾಯಣ ಚಿತ್ರೀಕರಣ ಪ್ರಾರಂಭವಾಗಿದೆ. ಭಾರತೀಯ ಪುರಾಣದ ಕಥೆಯನ್ನು ತೆರೆದಿಡುವ ರಾಮಾಯಣ ಚಿತ್ರಕ್ಕಾಗಿ ರಾಕಿಂಗ್ ಸ್ಟಾರ್ ಯಶ್ ಹಾಗೂ ನಮಿತ್ ಮಲ್ಹೋತ್ರಾ ಕೈ ಜೋಡಿಸಿದ್ದಾರೆ. ರಾಮಾಯಣಕ್ಕೆ ರಾಕಿ (Yash) ಕೂಡ ನಿರ್ಮಾಪಕ ರಾಮಾಯಣ (Ramayana) ಸಿನಿಮಾವನ್ನು ಬಹಳ ಅದ್ಧೂರಿಯಾಗಿ ದೃಶ್ಯ ರೂಪಕ್ಕೆ ಇಳಿಸುವುದಕ್ಕೆ ದಂಗಲ್ ನಿರ್ದೇಶಕ ನಿತೀಶ್ ತಿವಾರಿ ಹೊರಟಿದ್ದಾರೆ. ಅದರಂತೆ ಬಹು ಕೋಟಿ ಬಜೆಟ್ ಹಾಕಿ ಈ ಚಿತ್ರ ನಿರ್ಮಾಣ ಮಾಡೋದಿಕ್ಕೆ ರಾಕಿಭಾಯ್ ಹಾಗೂ ನಮಿತ್ ಮಲ್ಹೋತ್ರಾ ಒಂದಾಗಿದ್ದಾರೆ. ಯಶ್ ಒಡೆತನದ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ ಹಾಗೂ ನಮಿತ್ ಮಲ್ಹೋತ್ರಾ ಸಾರಥ್ಯದ ಪ್ರೈಮ್ ಫೋಕಸ್ ಸ್ಟುಡಿಯೋ ರಾಮಾಯಣ ಸಿನಿಮಾವನ್ನು ನಿರ್ಮಿಸುತ್ತಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ನಮಿತ್ ಮಲ್ಹೋತ್ರಾ, ರಾಮಾಯಣ ಕಥೆಗೆ ನ್ಯಾಯ ಸಲ್ಲಿಸಲು ನಾನು ಸಿದ್ಧನಾಗಿದ್ದೇನೆ. ನಮ್ಮ ಸಂಸ್ಕ್ರತಿಯನ್ನು ಜಗತ್ತಿಗೆ ಪರಿಚಯಿಸಲು ನಾನು ಉತ್ಸಕನಾಗಿದ್ದು, ನಾನು ಯಶ್ ಅವರಲ್ಲಿಯೂ ಇದನ್ನು ಕಂಡುಕೊಂಡಿದ್ದೇನೆ. ಅವರ ಪಯಣದಿಂದ ನಾನು ಸ್ಪೂರ್ತಿ ಪಡೆದಿದ್ದೇನೆ. ಯಶ್ ಅವರಲ್ಲಿರುವ ಯೋಜನೆಯನ್ನು ಅರಿತುಕೊಂಡಿದ್ದೇನೆ. ರಾಮಾಯಣ ದೃಶ್ಯಕಾವ್ಯವನ್ನು ತೆರೆಗೆ ತರುತ್ತಿದ್ದೇವೆ ಎಂದರು.

    ಯಶ್ ಮಾತನಾಡಿ, ಭಾರತೀಯ ಸಿನಿಮಾವನ್ನು ಜಾಗತಿಕ ಮಟ್ಟದಲ್ಲಿ ಪ್ರರ್ದಶಿಸುವುದು ನನ್ನ ಬಹುದಿನಗಳ ಕನಸು. ಅದರ ಹುಡುಗಾಟದಲ್ಲಿ ನಾನು ಅತ್ಯುತ್ತಮ VFC ಸ್ಟುಡಿಯೋ ಕಂಡುಕೊಂಡಿದ್ದೇನೆ. ಅದರ ಹಿಂದಿನ ಪ್ರೇರಕ ಶಕ್ತಿ ಒಬ್ನ ಭಾರತೀಯ. ನಾವು ಸಿನಿಮಾ ರಂಗದ ಬೇರೆ ವಿಷಯಗಳ ಬಗ್ಗೆ ಚರ್ಚೆ ನಡೆಸುವಾಗ ರಾಮಾಯಣ ವಿಷಯವು ಬಂದಿತು. ಭಾರತೀಯ ಸಂಸ್ಕೃತಿಯನ್ನು ಜಗತ್ತಿಗೆ ಪ್ರಸ್ತುತಪಡಿಸುವ ಸಿನಿಮಾ ಇದಾಗಿದ್ದು, ಈ ಮಹಾಕಾವ್ಯ ಸಿನಿಮಾ ರೂಪ ತಾಳುತ್ತಿದೆ. ಆ ಅತ್ಯುತ್ತಮ ಅನುಭವನ್ನು ಜಗತ್ತಿಗೆ ನೀಡಲು ನಾವು ಕಾತರರಾಗಿದ್ದೇವೆ ಎಂದರು.

     

    ನಮಿತ್ ಮಲ್ಹೋತ್ರಾ ಒಡೆತನದ ಪ್ರೈಮ್ ಫೋಕಸ್ ಸ್ಟುಡಿಯೋ ಜಾಗತಿಕ ಮಟ್ಟದ ಕಂಟೆಂಟ್ ಹಾಗೂ ವಿಭಿನ್ನ ಬಗೆಯ ಕ್ರಿಯೇಟ್ ಮಾಡುವ ಸ್ವತಂತ್ರ ನಿರ್ಮಾಣ ಕಂಪನಿಯಾಗಿದೆ. ಈ ಸಂಸ್ಥೆ ಸದ್ಯ ಮೂರು ಸಿನಿಮಾಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ. ಆ ಪೈಕಿ ರಾಮಾಯಣ ಕೂಡ ಒಂದು. ಯಶ್ ತಮ್ಮದೇ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ ಎಂಬ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ಈ ಬ್ಯಾನರ್ ನಡಿ ‘ಟಾಕ್ಸಿಕ್’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.  ಕೆವಿಎನ್ ಪ್ರೊಡಕ್ಷನ್ಸ್ ಜೊತೆಗೆ ‘ಮಾನ್ಸ್ಟರ್ ಮೈಂಡ್’ ಕ್ರಿಯೇಷನ್ಸ್ ಕೂಡ ‘ಟಾಕ್ಸಿಕ್’ ಸಿನಿಮಾದ ನಿರ್ಮಾಣದಲ್ಲಿ ಪಾಲುದಾರಿಕೆಯನ್ನು ಹೊಂದಿದೆ. ಇದೇ ಬ್ಯಾನರ್ ನಡಿ ‘ರಾಮಾಯಣ’ ಸಿನಿಮಾಗೂ  ಯಶ್ ಬಂಡವಾಳ ಹೂಡುತ್ತಿದ್ದಾರೆ.

  • ಮುಂದಿನ ದಿನಗಳಲ್ಲಿ ಧೋನಿ ಹೀರೋ ಆಗ್ತಾರೆ: ಪತ್ನಿ ಬಿಚ್ಚಿಟ್ಟ ರಹಸ್ಯ

    ಮುಂದಿನ ದಿನಗಳಲ್ಲಿ ಧೋನಿ ಹೀರೋ ಆಗ್ತಾರೆ: ಪತ್ನಿ ಬಿಚ್ಚಿಟ್ಟ ರಹಸ್ಯ

    ಹೆಸರಾಂತ ಕ್ರಿಕೆಟ್ (Cricket) ಆಟಗಾರ ಎಂ.ಎಸ್. ಧೋನಿ (M.S. Dhoni) ಮುಂದಿನ ದಿನಗಳಲ್ಲಿ ತೆರೆಯ ಮೇಲೆ ಹೀರೋ (Hero) ಆಗಲಿದ್ದಾರಂತೆ. ಹಾಗಂತ ಸ್ವತಃ ಅವರ ಪತ್ನಿ ಸಾಕ್ಷಿಯೇ (Sakshi Dhoni) ಭವಿಷ್ಯ ನುಡಿದಿದ್ದಾರೆ. ಕ್ರಿಕೆಟ್, ಹಲವು ಉದ್ಯಮಗಳನ್ನು ನಡೆಸುತ್ತಿರುವ ಧೋನಿ ಮತ್ತು ಅವರ ಪತ್ನಿ ಸಾಕ್ಷಿ ಇದೀಗ ಸಿನಮಾ ರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ. ತಮ್ಮದೇ ಬ್ಯಾನರ್ ನಲ್ಲಿ ಈಗಾಗಲೇ ತಮಿಳು ಚಿತ್ರವನ್ನೂ ನಿರ್ಮಾಣ ಮಾಡಿದ್ದಾರೆ.

    ಧೋನಿ ಎಂಟರ್ ಟೇನ್ಮೆಂಟ್ ಬ್ಯಾನರ್ ಅಡಿಯಲ್ಲಿ ಎಲ್.ಎಂ.ಜಿ ಹೆಸರಿನ ಸಿನಿಮಾ ಮಾಡಿದ್ದು, ಅದು ಇದೇ ತಿಂಗಳು ರಿಲೀಸ್ ಆಗುತ್ತಿದೆ. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಸಾಕ್ಷಿ, ‘ಧೋನಿ ಮುಂದಿನ ದಿನಗಳಲ್ಲಿ ಹೀರೋ ಆಗಲಿದ್ದಾರೆ. ಅವರಿಗೆ ಕ್ಯಾಮೆರಾ ಬಗ್ಗೆ ಭಯವಿಲ್ಲ. ಈಗಾಗಲೇ ಸಾಕಷ್ಟು ಜಾಹೀರಾತುಗಳಲ್ಲಿ ನಟಿಸಿದ್ದಾರೆ. ಅಲ್ಲದೇ, ಅವರು ಸಾಹಸಮಯ ಚಿತ್ರಗಳನ್ನು ಇಷ್ಟಪಡುತ್ತಾರೆ’ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ಕಮ್‌ಬ್ಯಾಕ್ ಆಗ್ತಿರೋ ಅನುಷ್ಕಾ ಶೆಟ್ಟಿ ಸಿನಿಮಾದಿಂದ ದೂರವಾಗಿದ್ಯಾಕೆ? ಇಲ್ಲಿದೆ ಅಪ್‌ಡೇಟ್

    ಯಾವಾಗ ಸಿನಿಮಾ ರಂಗಕ್ಕೆ ಎಂಟ್ರಿ? ಯಾವ ರೀತಿಯ ಸಿನಿಮಾ? ಸ್ಕ್ರಿಪ್ಟ್ ಯಾವುದು? ನಿರ್ದೇಶಕರು ಯಾರು ಎಂಬ ಪ್ರಶ್ನೆಗೆ ಅವರಲ್ಲಿ ಸದ್ಯಕ್ಕೆ ಉತ್ತರವಿಲ್ಲ. ಆದರೆ, ಉತ್ತಮ ನಿರ್ದೇಶಕರು ಮತ್ತು ಎಲ್ಲರೂ ಒಪ್ಪುವಂತಹ ಸ್ಕ್ರಿಪ್ಟ್ ಸಿಕ್ಕರೆ ಅವರು ಮುಂದಿನ ದಿನಗಳಲ್ಲಿ ಕ್ಯಾಮೆರಾ ಮುಂದೆ ನಿಲ್ಲಲಿದ್ದಾರೆ ಎಂದಿದ್ದಾರೆ. ಉತ್ತಮ ಕಥೆಗಾಗಿ ಅವರು ಕಾಯುತ್ತಿರುವ ವಿಷಯವನ್ನೂ ಹಂಚಿಕೊಂಡಿದ್ದಾರೆ.

     

    ಕಳೆದ ಒಂದು ತಿಂಗಳಿಂದ ಧೋನಿ ಮತ್ತು ಅವರ ಪತ್ನಿ ಸಾಕ್ಷಿ ಸಿನಿಮಾ ರಂಗಕ್ಕೆ ಸಂಬಂಧಿಸಿದ ಸಾಕಷ್ಟು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಅಲ್ಲದೇ, ಸಿನಿಮಾ ರಂಗದವರ ಜೊತೆ ಒಡನಾಟವನ್ನೂ ಬಯಸುತ್ತಿದ್ದಾರೆ. ಈ ತಿಂಗಳು ಅವರ ನಿರ್ಮಾಣದ ಚೊಚ್ಚಲು ಸಿನಿಮಾ ರಿಲೀಸ್ ಆಗುತ್ತಿದೆ. ಪ್ರೇಕ್ಷಕರು ಸಿನಿಮಾವನ್ನು ಯಾವ ರೀತಿಯಲ್ಲಿ ಸ್ವೀಕರಿಸುತ್ತಾರೆ ಎಂದು ಕಾದು ನೋಡಬೇಕು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾರ್ಗಿಲ್ ಯುದ್ಧದ ಹೀರೋ ರಸ್ತೆ ಅಪಘಾತದಲ್ಲಿ ದುರ್ಮರಣ

    ಕಾರ್ಗಿಲ್ ಯುದ್ಧದ ಹೀರೋ ರಸ್ತೆ ಅಪಘಾತದಲ್ಲಿ ದುರ್ಮರಣ

    ಲೇಹ್: ಕಾರ್ಗಿಲ್ ಯುದ್ಧ ಹೀರೋ, ವೀರ ಚಕ್ರ ಪುರಸ್ಕೃತ ಸುಬೇದಾರ್ ಮೇಜರ್ ತ್ಸೆವಾಂಗ್ ಮೊರುಪ್ (Subedar Major Tsewang Murop) ಇದೀಗ ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಾರೆ.

    40 ವರ್ಷದ ಸುಬೇದಾರ್ ಲೇಹ್ ಮೂಲದವರಾಗಿದ್ದು, 2ನೇ ಲಡಾಖ್ ಸ್ಕೌಟ್ಸ್ ಗೆ ಸೇರಿದವರಾಗಿದ್ದಾರೆ. ಒಂದು ತಿಂಗಳ ಹಿಂದೆಯಷ್ಟೇ ಉನ್ನತ ಶ್ರೇಣಿಯನ್ನು ಪಡೆದಿರುವ ಇವರು ಶನಿವಾರ ರಾತ್ರಿ ಪ್ರಯಾಣಿಸುತ್ತಿದ್ದಾಗ ನಿಮು ಬಳಿ ಕಾರು ಸ್ಕಿಡ್ ಆಗಿ ಇಹಲೋಕ ತ್ಯಜಿಸಿದ್ದಾರೆ.

    14 ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ರಶೀಮ್ ಬಾಲಿ ಅವರ ಕುಟುಂಬವನ್ನು ಭೇಟಿಯಾಗಿ ಸೇನೆಯ ಪರವಾಗಿ ಸಾಂತ್ವನ ಹೇಳಿದರು.  ಇದನ್ನೂ ಓದಿ: ಬಿಹಾರ ರಾಮನವಮಿ ಹಿಂಸಾಚಾರ – ಮತ್ತೆ ಕೇಳಿ ಬಂತು ಸ್ಫೋಟದ ಸದ್ದು

  • ಹೀರೋ ಆದ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ : ಮುಹೂರ್ತದಲ್ಲಿ ಸಲ್ಮಾನ್ ಖಾನ್ ಬಾಮೈದ ಆಯುಷ್ ಶರ್ಮಾ ಭಾಗಿ

    ಹೀರೋ ಆದ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ : ಮುಹೂರ್ತದಲ್ಲಿ ಸಲ್ಮಾನ್ ಖಾನ್ ಬಾಮೈದ ಆಯುಷ್ ಶರ್ಮಾ ಭಾಗಿ

    ಸೌತ್‌ನ ಸ್ಟಾರ್‌ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್‌ ಹೀರೋಗಳಿಗೆ ಬಗೆಬಗೆ ಸ್ಟೆಪ್ಸ್‌ ಹಾಕಿಸಿ ಖ್ಯಾತಿ ಗಿಟ್ಟಿಸಿಕೊಂಡವರು. ಇದೀಗ ಇದೇ ಕೋರಿಯೋಗ್ರಾಫರ್‌ ತೆರೆಮೇಲೆ ಮಿಂಚಲು ಸಿದ್ಧರಾಗಿದ್ದಾರೆ. ಅಂದರೆ, “ಯಥಾ ರಾಜ ತಥಾ ಪ್ರಜಾ” ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಹೀರೋ ಆಗಿ ಪದಾರ್ಪಣೆ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಮುಹೂರ್ತ ನೆರವೇರಿದ್ದು, ತೆಲುಗು ನಟ ಶರ್ವಾನಂದ ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡಿದರೆ, ಸಲ್ಮಾನ್‌ ಖಾನ್‌ ಬಾಮೈದ ಆಯುಷ್‌ ಶರ್ಮಾ ಕ್ಯಾಮರಾಕ್ಕೆ ಚಾಲನೆ ನೀಡಿದ್ದಾರೆ. ನಿರ್ದೇಶಕ ಕರುಣಾ ಕುಮಾರ್‌ ಮೊದಲ ದೃಶ್ಯವನ್ನು ನಿರ್ದೇಶಿಸಿದ್ದಾರೆ.

    ಇತ್ತೀಚೆಗಷ್ಟೇ ಕಿಚ್ಚ ಸುದೀಪ್‌ ನಟನೆಯ “ವಿಕ್ರಾಂತ್‌ ರೋಣ” ಚಿತ್ರದ ಯಕ್ಕಾ ಸಕ್ಕಾ ಹಾಡಿನ ಹುಕ್‌ ಸ್ಟೆಪ್‌ ಮೂಲಕವೇ ಎಲ್ಲರನ್ನು ಕುಣಿಸಿದ್ದ ಜಾನಿ ಮಾಸ್ಟರ್‌ ಇದೀಗ ನಾಯಕನಾಗಿ ಅದೃಷ್ಟ ಪರೀಕ್ಷೆಗಳಿದಿದ್ದಾರೆ. “ಯಥಾ ರಾಜ ತಥಾ ಪ್ರಜಾ” ಸಿನಿಮಾದಲ್ಲಿ ಜಾನಿ ಮಾಸ್ಟರ್‌ ಜತೆಗೆ “ಸಿನಿಮಾ ಬಂಡಿ” ಮೂಲಕ ಗುರುತಿಸಿಕೊಂಡ ವಿಕಾಸ್‌ ಸಹ ಮುಖ್ಯಭೂಮಿಕೆಯಲ್ಲಿರಲಿದ್ದಾರೆ. ಶ್ರಷ್ಟಿ ವರ್ಮಾ ನಾಯಕಿಯಾಗಿದ್ದಾರೆ. ಶ್ರೀನಿವಾಸ ವಿಟ್ಟಲ ಈ ನಿರ್ದೇಶಿಸಲಿರುವ ಈ ಚಿತ್ರವನ್ನು ಹರೇಶ್‌ ಪಟೇಲ್‌ ಜತೆ ಸೇರಿ ನಿರ್ದೇಶಕರೂ ಬಂಡವಾಳ ಹೂಡುತ್ತಿದ್ದಾರೆ. ಓಂ ಮೂವಿ ಕ್ರಿಯೇಶನ್ಸ್‌ ಮತ್ತು ಶ್ರೀ ಕೃಷ್ಣ ಮೂವಿ ಕ್ರಿಯೇಶನ್ಸ್‌ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ಇದನ್ನೂ ಓದಿ:ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣನ ಹುಡುಕಿಕೊಂಡು ಬಂತು ಮತ್ತೊಂದು ಬಾಲಿವುಡ್ ಸಿನಿಮಾ

    ಈ ಸಿನಿಮಾ ಬಗ್ಗೆ ಮಾಹಿತಿ ನೀಡುವ ನಿರ್ದೇಶಕ/ ನಿರ್ಮಾಪಕ ಶ್ರೀನಿವಾಸ್‌ ವಿಟ್ಟಲ, “ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ಹರೇಶ್‌ ಪಟೇಲ್‌ ಅವರೊಟ್ಟಿಗೆ ಸೇರಿ ಸಿನಿಮಾ ನಿರ್ಮಾಣ ಮಾಡುತ್ತಿದ್ದೇನೆ. ಈ ಕಥೆಗೆ ಜಾನಿ ಮಾಸ್ಟರ್‌ ಸೂಟ್‌ ಆಗ್ತಾರೆ. ಆ ಕಾರಣಕ್ಕೆ ಅವರಿಗೂ ೨೦ ನಿಮಿಷದಲ್ಲಿ ಸಿನಿಮಾದ ಕಥೆ ಹೇಳಿದೆ. ಕಥೆ ಕೇಳಿ ಅವರಿಂದಲೂ ಓಕೆ ಎಂಬ ಉತ್ತರ ಸಿಕ್ಕಿತು. ಈ ಹಿಂದೆ ಟಿವಿಯಲ್ಲಿ ಕೇವಲ ೧೦ ನಿಮಿಷ ಮಾತ್ರ ರಾಜಕೀಯ ಸುದ್ದಿಗಳು ಪ್ರಸಾರವಾಗುತ್ತಿದ್ದವು. ಇದೀಗ ಅದು ೨೪/೭ ಆಗಿದೆ. ಹಾಗಾಗಿ ನಮ್ಮ ಈ ಸಿನಿಮಾ ಸಹ ರಾಜಕೀಯ ಹಿನ್ನೆಲೆಯಲ್ಲಿ ಮೂಡಿಬರಲಿರುವ ಕಮರ್ಷಿಯಲ್‌ ಸಿನಿಮಾ. ಸಮಾಜಕ್ಕೆ ಮಹತ್ವದ ಸಂದೇಶವೂ ಇದರಲ್ಲಿದೆ” ಎಂದರು. ತೆಲುಗು,ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ಮೂಡಿಬರಲಿರುವ “ಯಥಾ ರಾಜ ತಥಾ ಪ್ರಜಾ” ಸಿನಿಮಾ ಸೆಪ್ಟೆಂಬರ್‌ ೧೫ರಿಂದ ಚಿತ್ರದ ಶೂಟಿಂಗ್‌ ಶುರುವಾಗಲಿದ್ದು, ಮೂರು ಶೇಡ್ಯೂಲ್‌ನಲ್ಲಿ ಸಿನಿಮಾ ಮುಗಿಸುವ ಯೋಜನೆ ನಿರ್ದೇಶಕರದ್ದು. ಚಿತ್ರದಲ್ಲಿ ನಾಲ್ಕು ಹಾಡುಗಳಿರಲಿದ್ದು, ರಾಧನ ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ.

    ಈ ಚಿತ್ರದ ಮೂಲಕ ನಾಯಕರಾಗಿ ಎಂಟ್ರಿಕೊಡುತ್ತಿರುವ ಜಾನಿ ಮಾಸ್ಟರ್‌ ಸಹ ಚಿತ್ರದ ಬಗ್ಗೆ ಮಾತನಾಡಿದ್ದಾರೆ. “ಮೆಗಾಸ್ಟಾರ್‌ ಚಿರಂಜೀವಿ ಅವರ ಬರ್ತ್‌ಡೇ ದಿನದಂದೇ ನಮ್ಮ ಸಿನಿಮಾ ಮುಹೂರ್ತ ಕಂಡಿರುವುದು ಖುಷಿ ವಿಚಾರ. ಶ್ರೀನಿವಾಸ್‌ ಅವರು ಕಥೆ ಹೇಳಿದ ರೀತಿಯೇ ಚೆನ್ನಾಗಿತ್ತು. ಅದೇ ರೀತಿ ವಿಕಾಸ್‌ ನಟಿಸಿರುವ “ಸಿನಿಮಾ ಬಂಡಿ” ಸಿನಿಮಾ ನೋಡಿದ್ದೇನೆ. ಇದೀಗ ಅವರೊಂದಿಗೆ ನಟಿಸುತ್ತಿದ್ದೇನೆ. ನಾಗೇಶ್‌ ಅವರೇ ಈ ಚಿತ್ರಕ್ಕೆ “ಯಥಾ ರಾಜ ತಥಾ ಪ್ರಜಾ” ಎಂಬ ಶೀರ್ಷಿಕೆ ನೀಡಿದ್ದಾರೆ. ಒಟ್ಟು ಮೂರು ಭಾಷೆಗಳಲ್ಲಿ ಈ ಸಿನಿಮಾ ಸಿದ್ಧವಾಗಲಿದೆ” ಎಂದಿದ್ದಾರೆ.

    “ಜಾನಿ ಮಾಸ್ಟರ್‌ ಅವರೊಂದಿಗೆ ಕೆಲಸ ಮಾಡುತ್ತಿರುವುದಕ್ಕೆ ಸಂತಸವಿದೆ. ಇದೊಂದು ಪೊಲಿಟಿಕಲ್‌ ಡ್ರಾಮಾ ಆಧರಿತ ಕಥೆ. ಕಮರ್ಷಿಯಲ್‌ ಅಂಶಗಳೂ ಸಿನಿಮಾದಲ್ಲಿರಲಿವೆ” ಎಂದರು ವಿಕಾಸ್.‌ ನಟಿ ಶ್ರಷ್ಟಿ ವರ್ಮಾ ಸಹ ಚಿತ್ರದ ಭಾಗವಾಗುತ್ತಿರುವುದಕ್ಕೆ ಖುಷಿಯಲ್ಲಿದ್ದಾರೆ. ಈ ಚಿತ್ರಕ್ಕೆ ಗಣೇಶ್‌ ಮಾಸ್ಟರ್‌ ನೃತ್ಯ ನಿರ್ದೇಶನ ಮಾಡಲಿದ್ದು, ರಾಧನ ಸಂಗೀತ ಸಂಯೋಜಿಸಲಿದ್ದಾರೆ. ಸುನೋಜ್‌ ವೆಲಯುಧನ್‌ ಈ ಚಿತ್ರದ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ. ಬಾಬಾ ಕಲಾ ನಿರ್ದೇಶನ ಚಿತ್ರಕ್ಕಿರಲಿದೆ.

    Live Tv
    [brid partner=56869869 player=32851 video=960834 autoplay=true]

  • ‘ಅಮೃತ ಅಪಾರ್ಟ್‌ಮೆಂಟ್ಸ್’ನಲ್ಲಿ ನಾಯಕ ನಟನಾಗಿ ಅದೃಷ್ಟ ಪರೀಕ್ಷೆಗಿಳಿದ ಖಳನಟ ತಾರಕ್ ಪೊನ್ನಪ್ಪ

    ‘ಅಮೃತ ಅಪಾರ್ಟ್‌ಮೆಂಟ್ಸ್’ನಲ್ಲಿ ನಾಯಕ ನಟನಾಗಿ ಅದೃಷ್ಟ ಪರೀಕ್ಷೆಗಿಳಿದ ಖಳನಟ ತಾರಕ್ ಪೊನ್ನಪ್ಪ

    ಸ್ಯಾಂಡಲ್‌ವುಡ್‌ನಲ್ಲಿ ಬಿಡುಗಡೆಯಾಗಲು ಸಜ್ಜಾಗಿರುವ ಸಾಲು ಸಾಲು ಸಿನಿಮಾಗಳಲ್ಲಿ ಭರವಸೆ ಹುಟ್ಟಿಸಿರುವ ಸಿನಿಮಾಗಳಲ್ಲೊಂದು ಅಮೃತ ಅಪಾರ್ಟ್‌ಮೆಂಟ್ಸ್ ಸಿನಿಮಾ. ಗುರುರಾಜ ಕುಲಕರ್ಣಿ ನಿರ್ದೇಶನ ಹಾಗೂ ನಿರ್ಮಾಣದಲ್ಲಿ ಮೂಡಿ ಬರ್ತಿರುವ ಈ ಸಿನಿಮಾ ನವೆಂಬರ್ 26ಕ್ಕೆ ರಾಜ್ಯಾದ್ಯಂತ ತೆರೆ ಕಾಣಲು ರೆಡಿಯಾಗಿದೆ. ಸಾಕಷ್ಟು ಭರವಸೆ ಹುಟ್ಟು ಹಾಕಿರುವ ಈ ಸಿನಿಮಾ ಮೂಲಕ ಖ್ಯಾತ ಖಳನಟ ತಾರಕ್ ಪೊನ್ನಪ್ಪ ನಾಯಕ ನಟನಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

    ಕೆಜಿಎಫ್, ಯುವರತ್ನ ಸಿನಿಮಾ ನೋಡಿದವರಿಗೆ ಕಿರುತೆರೆ ಅಭಿಮಾನಿಗಳಿಗೆ ತಾರಕ್ ಪೊನ್ನಪ್ಪ ಚಿರಪರಿಚಿತ. ತೆರೆ ಮೇಲೆ ಖಡಕ್ ವಿಲನ್ ಆಗಿ ಕಾಣಿಸಿಕೊಂಡಿದ್ದ ಪ್ರತಿಭಾವಂತ ನಟ ನಾಯಕ ನಟನಾಗಿ ತೆರೆ ಮೇಲೆ ಮಿಂಚಲು ಸಕಲ ಸಜ್ಜಾಗಿದ್ದಾರೆ. ಖಳನಟನಾಗಿ ಎಷ್ಟೇ ಸಿನಿಮಾದಲ್ಲಿ ಅಭಿನಯಿಸಿದ್ರು, ಅನುಭವವಿದ್ರೂ ನಾಯಕ ನಟನಾಗಿ ಇದೊಂದು ಅಗ್ನಿ ಪರೀಕ್ಷೆ ಎಂದು ಸಖತ್ ಎಕ್ಸೈಟ್ ಆಗಿದ್ದಾರೆ ಮಡಿಕೇರಿಯ ಕುವರ. ಇದನ್ನೂ ಓದಿ: ತಾಯಿಯಾಗ್ತಿದ್ದಾರಾ ಪ್ರಿಯಾಂಕಾ ಚೋಪ್ರಾ?

    ಫ್ಯಾಮಿಲಿ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಒಳಗೊಂಡ ಈ ಸಿನಿಮಾದಲ್ಲಿ ಮುದ್ದಾದ ಪ್ರೀತಿ ಕಥೆಯಿದೆ. ಅದರ ನಾಯಕ ಇವರೇ. ಗುರುರಾಜ ಕುಲಕರ್ಣಿ ಮಾಡಿಕೊಂಡ ಕಥೆ ಬಹಳ ಇಷ್ಟವಾಯ್ತು. ನಟನೆ ಅಂದ್ರೆ ಪ್ರತಿ ಪಾತ್ರದಲ್ಲೂ ಸವಾಲನ್ನು ಸ್ವೀಕರಿಸೋದು, ತೆರೆ ಮೇಲೆ ಚೆಂದವಾಗಿ ಕಟ್ಟಿಕೊಡೋದು. ಅದಕ್ಕೊಂದು ಅವಕಾಶ ಮಾಡಿಕೊಟ್ಟಂತಿತ್ತು ಈ ಸಿನಿಮಾ ಕಥೆ. ರಫ್ ಅಂಡ್ ಟಫ್ ಪಾತ್ರ ಮಾಡುತ್ತಿದ್ದವನಿಗೆ ಸಾಫ್ಟ್ ರೋಲ್ ಮಾಡೋದು ಕೊಂಚ ಕಷ್ಟ ಆದ್ರೆ ನಿರ್ದೇಶಕರ ಸಹಕಾರದಿಂದ ಅದೆಲ್ಲ ಬಹಳ ಸುಲಭವಾಯ್ತು. ಖಂಡಿತ ಈ ಸಿನಿಮಾದಲ್ಲಿ ನನ್ನನ್ನು ಜನ ಇಷ್ಟ ಪಡುತ್ತಾರೆ ಎಂಬ ಭರವಸೆ ಇದೆ ಎನ್ನುತ್ತಾರೆ ತಾರಕ್ ಪೊನ್ನಪ್ಪ.

    ಆಕ್ಸಿಡೆಂಟ್, ಲಾಸ್ಟ್ ಬಸ್ ಸಿನಿಮಾಗಳಿಗೆ ನಿರ್ಮಾಪಕರಾಗಿದ್ದ ಗುರುರಾಜ ಕುಲಕರ್ಣಿ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಮೊದಲ ಸಿನಿಮಾ. ಇದೇ ಮೊದಲ ಬಾರಿಗೆ ಚಿತ್ರಕ್ಕೆ ಕಥೆ ಬರೆದು ಆಕ್ಷನ್ ಕಟ್ ಹೇಳ್ತಿರುವ ಇವರು ನಿರ್ಮಾಣದ ಜವಾಬ್ದಾರಿಯನ್ನು  ನಿಭಾಯಿಸಿದ್ದಾರೆ. ನಿರ್ಮಾಪಕನಾಗಿದ್ದವರು ನಿರ್ದೇಶಕನಾಗಿ ತಮ್ಮನ್ನು ಸವಾಲಿಗೆ ಒಡ್ಡಿಕೊಂಡಿರುವ ಇವರಿಗೆ ತಾವು ಮಾಡಿಕೊಂಡ ಕಥೆ ಮೇಲೆ ಅಪಾರ ಭರವಸೆ ಇದೆ. ಇದನ್ನೂ ಓದಿ: ಇಳಕಲ್ ಸೀರೆಯುಟ್ಟು ಹಾಟ್ ಪೋಸ್ ಕೊಟ್ಟ ರಾಗಿಣಿ

    ಚಿತ್ರದಲ್ಲಿ ನಾಯಕಿಯಾಗಿ ಊರ್ವಶಿ ಗೋವರ್ಧನ್ ನಟಿಸಿದ್ದು, ರಂಗಭೂಮಿ ಕಲಾವಿದೆಯಾಗಿರುವ ಇವರಿಗೆ ಕನ್ನಡದಲ್ಲಿ ಇದು ಮೊದಲ ಸಿನಿಮಾ. ಖ್ಯಾತ ಪೋಷಕ ನಟ ಬಾಲಾಜಿ ಮನೋಹರ್ ಈ ಚಿತ್ರದಲ್ಲಿ ಆಟೋ ಡ್ರೈವರ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪಕ್ಕಾ ಅಂಬರೀಶ್ ಅಭಿಮಾನಿಯಾಗಿ, ಬೆಂಗಳೂರಿನ ಆಟೋ ಡ್ರೈವರ್ ಹಾವಭಾವವನ್ನು ಮೈಗೂಡಿಸಿಕೊಂಡು ಚಿತ್ರದಲ್ಲಿ ಮಿಂಚಿದ್ದಾರೆ. ರಂಗಭೂಮಿ ಕಲಾವಿದೆ, ನೃತ್ಯಗಾರ್ತಿ ಮಾನಸ ಜೋಶಿ ಈ ಸಿನಿಮಾದಲ್ಲಿ ಎಸಿಪಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಎಸಿಪಿ ರತ್ನಪ್ರಭಾ ಪಾತ್ರದಲ್ಲಿ ಖಡಕ್ ಆಫೀಸರ್ ಆಗಿ ತೆರೆ ಮೇಲೆ ಅಬ್ಬರಿಸಲು ಸಜ್ಜಾಗಿದ್ದಾರೆ. ಉಳಿದಂತೆ ಸಂಪತ್ ಮೈತ್ರೇಯ, ಸೀತಾ ಕೋಟೆ, ಮಾಲತೇಶ್, ಸಿತಾರಾ, ಜಗದೀಶ್ ಬಾಲಾ, ರಾಜು ನೀನಾಸಂ, ಅರುಣ್ ಮೂರ್ತಿ, ಶಂಕರ್ ಶೆಟ್ಟಿ ರಂಗಸ್ವಾಮಿ ಮುಂತಾದವರ ತಾರಾಗಣ ಈ ಚಿತ್ರದಲ್ಲಿದೆ. ಅರ್ಜುನ್ ಅಜಿತ್ ಛಾಯಾಗ್ರಹಣ, ಕೆಂಪರಾಜ್ ಅರಸ್ ಸಂಕಲನ ಮತ್ತು ಎಸ್ ಡಿ ಅರವಿಂದ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಜಿ9 ಕಮ್ಯುನಿಕೇಶನ್ ಮೀಡಿಯಾ ಅಂಡ್ ಎಂಟಟೈನ್ಮೆಂಟ್ ಬ್ಯಾನರ್ ನಡಿ ನಿರ್ಮಾಣವಾದ ಈ ಚಿತ್ರ ನವೆಂಬರ್ 26ಕ್ಕೆ ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

  • ಪೈರಸಿ ಸುಳಿಯಲ್ಲಿ ‘ಹೀರೋ’ ಸಿನಿಮಾ: ರಿಷಬ್ ಶೆಟ್ಟಿ ಬೇಸರ – ಆಕ್ರೋಶ

    ಪೈರಸಿ ಸುಳಿಯಲ್ಲಿ ‘ಹೀರೋ’ ಸಿನಿಮಾ: ರಿಷಬ್ ಶೆಟ್ಟಿ ಬೇಸರ – ಆಕ್ರೋಶ

    ರಿಷಭ್ ಶೆಟ್ಟಿ ನಿರ್ಮಿಸಿ ನಟಿಸಿರುವ ‘ಹೀರೋ’ ಸಿನಿಮಾ ಕಳೆದ ಸಿನಿ ಶುಕ್ರವಾರ ಬಿಡುಗಡೆಯಾಗಿತ್ತು. ಇಂಟರ್ ಸ್ಟಿಂಗ್ ಕಥಾಹಂದರ, ಚಿತ್ರಕಥೆ ಪ್ರೇಕ್ಷಕರಿಗೆ ಮನರಂಜನೆ ನೀಡುವಲ್ಲಿ ಯಶಸ್ವಿಯಾಗಿತ್ತು. ಬಿಡುಗಡೆಯಾದ ಎಲ್ಲಾ ಕಡೆಗಳಲ್ಲೂ ಪ್ರೇಕ್ಷಕರ ಮನಗೆದ್ದು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು ಹೀರೋ ಸಿನಿಮಾ. ಇದೀಗ ಪ್ರೇಕ್ಷಕರ ಮನಗೆದ್ದ ಈ ಸಿನಿಮಾ ಪೈರಸಿ ಹಾವಳಿಗೆ ಸಿಲುಕಿದ್ದು ಚಿತ್ರತಂಡದ ಬೇಸರ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.

    ಹೌದು, ಕೋವಿಡ್-19ರಿಂದ ಈಗ ಚಿತ್ರರಂಗ ಸುಧಾರಿಸಿಕೊಂಡು ಒಂದೊಂದೇ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಒಂದು ವರ್ಷದ ನಂತರ ಪ್ರೇಕ್ಷಕರು ಚಿತ್ರಮಂದಿರದಲ್ಲಿ ಸಿನಿಮಾ ನೋಡಿ ಎಂಜಾಯ್ ಮಾಡುತ್ತಿರಬೇಕಾದ್ರೆ ಪೈರಸಿ ಹಾವಳಿ ಮತ್ತೆ ಚಿತ್ರರಂಗಕ್ಕೆ ಮುಳುವಾಗಿದೆ. ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದ ಹೀರೋ ಸಿನಿಮಾ ಬಿಡುಗಡೆಯಾದ ಮೂರೇ ದಿನಕ್ಕೆ ಪೈರಸಿ ಬಲೆಗೆ ಸಿಲುಕಿದ್ದು ಚಿತ್ರತಂಡದ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಚಿತ್ರತಂಡ ದೂರನ್ನು ದಾಖಲಿಸಿದ್ದು ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.

    `ಹೀರೋ’ ಸಿನಿಮಾ ಪೈರಸಿ ಬಗ್ಗೆ ಚಿತ್ರದ ನಾಯಕ ಹಾಗೂ ನಿರ್ಮಾಪಕ ರಿಷಬ್ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ನೋವನ್ನು ಹೊರಹಾಕಿದ್ದಾರೆ. ಕೋವಿಡ್ ಲಾಕ್‍ಡೌನ್ ಸಂದರ್ಭದಲ್ಲೂ ಕೂಡ ಜನರಿಗೆ ಮನರಂಜನೆ ನೀಡುವ ಉದ್ದೇಶದಿಂದ ಸಿನಿಮಾ ಮಾಡಿದ್ವಿ, ಸಿನಿಮಾ ಬಿಡುಗಡೆಯಾಗಿ ಒಳ್ಳೆಯ ರೆಸ್ಪಾನ್ಸ್ ಕೂಡ ಪಡೆದುಕೊಂಡಿತ್ತು. ಆದರೆ ಇಂತಹ ಸಮಯದಲ್ಲಿ ಪೈರಸಿ ಎದುರಾಗಿದೆ. ಆ್ಯಂಟಿ ಪೈರಸಿ ತಂಡದ ಜೊತೆ ಕುಳಿತು ವೆಬ್‍ಸೈಟ್ ಗಳಿಂದ ಎಷ್ಟೇ ಪೈರಸಿ ಲಿಂಕ್ ಡಿಲೀಟ್ ಮಾಡಿಸುತ್ತಿದ್ರೂ ಕೂಡ ಪೂರ್ತಿಯಾಗಿ ಲಿಂಕ್ಗಳನ್ನು ಡಿಲೀಟ್ ಮಾಡಲು ಸಾಧ್ಯವಾಗುತ್ತಿಲ್ಲ. ಪೈರಸಿ ವಿಚಾರದಲ್ಲಿ ಚಿತ್ರಮಂದಿರಗಳ ಮಾಲೀಕರ ಬಗ್ಗೆಯೂ ರಿಷಬ್ ಶೆಟ್ಟಿ ಅಸಮಾಧಾನ ಹೊರಹಾಕಿದ್ದು, ಚಿತ್ರಮಂದಿರಗಳಲ್ಲಿ ಕ್ಯಾಮೆರಾ, ಮೊಬೈಲ್ ತೆಗೆದುಕೊಂಡು ರೆಕಾರ್ಡ್ ಮಾಡೋದಕ್ಕೆ ಹೇಗೆ ಅನುವು ಮಾಡಿಕೊಡುತ್ತಾರೆ ಎಂದಿದ್ದಾರೆ. ಇದೇ ವೇಳೆ ಪೈರಸಿ ವೆಬ್ಸೈಟ್ಗಳ ನಿಷೇಧ ಯಾಕೆ ಆಗ್ತಿಲ್ಲ ಎಂಬುದರ ಬಗ್ಗೆಯೂ ಪ್ರಶ್ನಿಸಿದ್ದಾರೆ ರಿಷಬ್.

    ಒಟ್ನಲ್ಲಿ ಕೋವಿಡ್ 19ರಿಂದ ಚೇತರಿಸಿಕೊಳ್ಳುತ್ತಿದ್ದ ಚಿತ್ರರಂಗಕ್ಕೆ ಪೈರಸಿ ಹಾವಳಿ ಶುರುವಾಗಿದೆ. ಇದನ್ನು ಬೇರು ಸಮೇತ ಕಿತ್ತು ಹಾಕದೆ ಚಿತ್ರರಂಗಕ್ಕೆ ಉಳಿಗಾಲವಿಲ್ಲ. ಈ ನಿಟ್ಟಿನಲ್ಲಿ ಚಿತ್ರರಂಗ ಹಾಗೂ ಚಿತ್ರತಂಡ ಯಾವ ರೀತಿ ಹೆಜ್ಜೆ ಇಡುತ್ತದೆ ಎನ್ನೋದನ್ನ ಕಾದು ನೋಡಬೇಕು.

  • ಹೀರೋ ಚಿತ್ರಕ್ಕೆ ಮನಸೋತ ಪ್ರೇಕ್ಷಕ ಮಹಾಪ್ರಭುಗಳು

    ಹೀರೋ ಚಿತ್ರಕ್ಕೆ ಮನಸೋತ ಪ್ರೇಕ್ಷಕ ಮಹಾಪ್ರಭುಗಳು

    ಚಿತ್ರ: ಹೀರೋ
    ನಿರ್ದೇಶನ: ಎಂ. ಭರತ್ ರಾಜ್
    ನಿರ್ಮಾಣ: ರಿಷಭ್ ಶೆಟ್ಟಿ ಫಿಲಂಸ್
    ಸಂಗೀತ ನಿರ್ದೇಶನ: ಅಜನೀಶ್ ಲೋಕನಾಥ್
    ಛಾಯಾಗ್ರಹಣ: ಅರವಿಂದ್ ಎಸ್ ಕಶ್ಯಪ್
    ತಾರಾಬಳಗ: ರಿಷಬ್ ಶೆಟ್ಟಿ, ಗಾನವಿ ಲಕ್ಷ್ಮಣ್, ಪ್ರಮೋದ್ ಶೆಟ್ಟಿ, ಉಗ್ರಂ ಮಂಜು, ಇತರರು

    ರಿಷಬ್ ಶೆಟ್ಟಿ ಅಭಿನಯದ ಬಹು ನಿರೀಕ್ಷಿತ ಹೀರೋ ಸಿನಿಮಾ ಇಂದು ಬಿಡುಗಡೆಯಾಗಿದೆ. ಕುತೂಹಲಕಾರಿ ಟ್ರೇಲರ್ ಮೂಲಕ ಎಲ್ಲರ ಮೆಚ್ಚುಗೆ ಪಡೆದಿದ್ದ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿ ಸಿನಿರಸಿಕರ ಮನಗೆದ್ದಿದೆ.

    ಅಶೋಕವನ ಎಸ್ಟೇಟ್ ಇಡೀ ಸಿನಿಮಾದ ಕೇಂದ್ರ. ಹೀರೋ ಸಿನಿಮಾ ಒಂದು ದಿನ ಶುರುವಾಗಿ ಒಂದೇ ದಿನದಲ್ಲಿ ಮುಗಿಯುವ ಕಥಾಹಂದರ ಒಳಗೊಂಡಿದೆ. ಈ ಒಂದು ದಿನದಲ್ಲಿ ಏನೆಲ್ಲ ಆಗುತ್ತೆ ಅನ್ನೋದನ್ನ ನಿರ್ದೇಶಕ ಭರತ್ ರಾಜ್ ಕಟ್ಟಿಕೊಟ್ಟ ಪರಿ ಪ್ರೇಕ್ಷಕರನ್ನು ಸೆಳೆಯದೇ ಇರದು. ಚಿತ್ರದಲ್ಲಿ ನಾಯಕ ನಟನದ್ದು ಬಾರ್ಬರ್ ಪಾತ್ರ. ಪ್ರೀತಿಯಲ್ಲಿ ಸೋತು ಸುಣ್ಣವಾಗಿರೋ ಈತನಿಗೆ ಒಮ್ಮೆ ತನ್ನ ಹಳೆಯ ಪ್ರೇಯಸಿಯ ಗಂಡನಿಗೆ ಕಟಿಂಗ್ ಮಾಡುವ ಸನ್ನಿವೇಶ ಒದಗಿಬರುತ್ತೆ. ಅವರಿರುವ ಅಶೋಕವನ ಎಸ್ಟೇಟ್ ಗೆ ಹೊರಡುತ್ತಾನೆ. ಪ್ರೇಯಸಿಯಿಂದ ಮೋಸ ಆಗಿದೆ ಆಕೆಯನ್ನು ಸಾಯಿಸಬೇಕು ಎಂದು ಕಥಾನಾಯಕ ನಿರ್ಧರಿಸಿರುತ್ತಾನೆ. ಆದ್ರೆ ಅಲ್ಲಿ ಹೋದಾಗ ಬೇರೆಯದ್ದೇ ಕಥೆ ಇರುತ್ತೆ. ಮುಂದೇನಾಗುತ್ತೆ ಅನ್ನೋದೆ ಇಂಟ್ರಸ್ಟಿಂಗ್ ಕಹಾನಿ.

    ಉಳಿದಂತೆ ಆಕ್ಷನ್, ಕಾಮಿಡಿ, ಲವ್, ಸೆಂಟಿಮೆಂಟ್ ಎಳೆ ಜೊತೆ ರಕ್ತಸಿಕ್ತ ಸನ್ನಿವೇಶಗಳೂ ಸಿನಿಮಾದಲ್ಲಿದೆ. ಪ್ರೇಯಸಿ ಪಾತ್ರದಲ್ಲಿ ಗಾನವಿ ಲಕ್ಷ್ಮಣ್ ನಟಿಸಿದ್ರೆ, ಪ್ರೇಯಸಿಯ ಗಂಡನ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ ನಟಿಸಿದ್ದಾರೆ. ಪ್ರಮೋದ್ ಶೆಟ್ಟಿಯವರದ್ದು ಇಲ್ಲಿ ಖಳನಟನ ಪಾತ್ರ.

    ಚಿತ್ರಕಥೆ ಚಿತ್ರದ ಮೈನ್ ಹೈಲೈಟ್ ಆಗಿದ್ದು, ಮೇಕಿಂಗ್ ಮತ್ತೊಂದು ಆಕರ್ಷಣೆ. ಕಚಗುಳಿ ಇಡುವ ಡೈಲಾಗ್‍ಗಳು ಮಜಾ ನೀಡುತ್ತವೆ. ರೆಗ್ಯೂಲರ್ ಸಿನಿಮಾಗಳಂತೆ ಇಲ್ಲಿ ನಾಯಕ, ನಾಯಕಿ, ಉಳಿದ ಪಾತ್ರಗಳಿಗೆ ಹೆಸರಿಲ್ಲ. ನಿರ್ದೇಶಕ ಭರತ್ ರಾಜ್ ಮೊದಲ ಪ್ರಯತ್ನದಲ್ಲೇ ತಮ್ಮ ನಿರ್ದೇಶನದ ಕಲೆಯನ್ನು ಸಾಬೀತು ಪಡಿಸಿದ್ದಾರೆ. ಕೆಲವೊಂದು ಸೀನ್‍ಗಳು ನಿರ್ದೇಶಕರ ಪ್ರತಿಭೆಗೆ ಹಿಡಿದ ಕನ್ನಡಿಯಂತಿದೆ. ಒಟ್ಟಿನಲ್ಲಿ ಒಂದು ಹೊಸ ರೀತಿಯ ಪ್ರಯತ್ನವಿರುವ ಸಿನಿಮಾ ಹೀರೋ.

    ಹೀರೋ ಸಿನಿಮಾ ಮೂಲಕ ಮತ್ತೊಮ್ಮೆ ತಾವೊಬ್ಬ ಪ್ರಾಮಿಸಿಂಗ್ ನಟ ಅನ್ನೋದನ್ನ ಪ್ರೂವ್ ಮಾಡಿದ್ದಾರೆ ರಿಷಭ್ ಶೆಟ್ಟಿ. ಪೂರ್ಣ ಪ್ರಮಾಣದಲ್ಲಿ ಮೊದಲ ಬಾರಿ ಖಳನಟನ ಪಾತ್ರದಲ್ಲಿ ಮಿಂಚಿರೋ ಪ್ರಮೋದ್ ಶೆಟ್ಟಿ ಅಭಿನಯ ಕೂಡ ಮೆಚ್ಚುವಂತದ್ದು ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ ಹಾವ-ಭಾವದಲ್ಲಿಯೇ ಅವರ ನಟನೆ ಇಲ್ಲಿ ಗಮನ ಸೆಳೆಯುತ್ತದೆ. ಉಳಿದಂತೆ ತಾಂತ್ರಿಕ ವರ್ಗವೇ ಕಲಾವಿದರಾಗಿ ನಟಿಸಿದ್ದು ಚಿತ್ರದ ಮತ್ತೊಂದು ವಿಶೇಷ. ಗಾನವಿ ಲಕ್ಷ್ಮಣ್ ನಟನೆ ಎಲ್ಲರ ಗಮನ ಸೆಳೆಯುತ್ತದೆ.

    ಒಂದು ಕಡೆ ಕಲಾವಿದರು ಗಮನ ಸೆಳೆದರೆ ಇನ್ನೊಂದು ಕಡೆ ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ ಇಡೀ ಸಿನಿಮಾ ಆವರಿಸಿಕೊಂಡು ಕಿಕ್ ಕೊಡುತ್ತದೆ. ಛಾಯಾಗ್ರಹಣ ಕೂಡ ಅಷ್ಟೇ ಸೊಗಸಾಗಿ ಮೂಡಿ ಬಂದಿದೆ. ಒಟ್ಟಿನಲ್ಲಿ ಹೊಸ ಪ್ರಯತ್ನವಿರುವ, ಹೊಸತನ ಇರುವ ಹೀರೋ ಸಿನಿಮಾ ಪ್ರೇಕ್ಷಕರನ್ನು ಸೆಳೆಯದೇ ಇರಲಾರದು.

  • ನಾಳೆ ಬೆಳ್ಳಿತೆರೆ ಮೇಲೆ ಬರಲಿದ್ದಾನೆ ಹೀರೋ – ರಿಷಬ್‍ ಶೆಟ್ಟಿಗೆ ಈ ಸಿನಿಮಾ ಸಿಕ್ಕಿದ್ದೇಗೆ ಗೊತ್ತಾ?

    ನಾಳೆ ಬೆಳ್ಳಿತೆರೆ ಮೇಲೆ ಬರಲಿದ್ದಾನೆ ಹೀರೋ – ರಿಷಬ್‍ ಶೆಟ್ಟಿಗೆ ಈ ಸಿನಿಮಾ ಸಿಕ್ಕಿದ್ದೇಗೆ ಗೊತ್ತಾ?

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ರಿಷಬ್ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ಹೀರೋ ಸಿನಿಮಾ ನಾಳೆ ರಾಜ್ಯಾದ್ಯಂತ ತೆರೆ ಕಾಣಲಿದೆ. ಕಿರಿಕ್ ಪಾರ್ಟಿ ಸಿನಿಮಾ ನಿರ್ದೇಶಿಸುವ ಮೂಲಕ ಪರಭಾಷಾ ಸಿನಿ ಪ್ರಿಯರು ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ರಿಷಬ್ ಶೆಟ್ಟಿ, ಹಲವು ಸಿನಿಮಾಗಳನ್ನು ತಮ್ಮದೇ ಆದ ವಿಭಿನ್ನ ಶೈಲಿಯಲ್ಲಿ ನಿರ್ದೇಶಿಸಿದ್ದಾರೆ. ಬೆಲ್ ಬಾಟಂ ಸಿನಿಮಾದ ಮೂಲಕ ಸ್ಯಾಂಡಲ್‍ವುಡ್‍ಗೆ ನಾಯಕನಾಗಿ ಪಾದಾರ್ಪಣೆ ಮಾಡಿದ ರಿಷಬ್ ಶೆಟ್ಟಿ ಇದೀಗ ಹೀರೋ ಸಿನಿಮಾದಲ್ಲಿ 2ನೇ ಬಾರಿಗೆ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಎಂ.ಭರತ್ ರಾಜ್ ಆ್ಯಕ್ಷನ್ ಕಟ್ ಹೇಳಿದ್ದು, ರಿಷಬ್‍ಗೆ ಗಾನವಿ ಲಕ್ಷ್ಮಣ್ ನಾಯಕಿಯಾಗಿ ಅಭಿನಯಿಸಿದ್ದಾರೆ.

    ಸಿನಿಮಾ ಕುರಿತಂತೆ ಮಾತನಾಡಿರುವ ರಿಷಬ್ ಶೆಟ್ಟಿ, ಲಾಕ್ ಡೌನ್ ಸಮಯದಲ್ಲಿ ಕುಳಿತು ಯೋಚಿಸಿದಾಗ ಜನರಿಗೆ ಏನಾದರೂ ಹೊಸದಾಗಿ ಮನರಂಜನೆ ನೀಡಬೇಕೆಂಬ ಉದ್ದೇಶದಿಂದ ಈ ಸಿನಿಮಾವನ್ನು ಚಿತ್ರೀಕರಿಸಲಾಗಿದೆ. ಮೊದಲನೇಯದಾಗಿ ನಿರ್ದೇಶಕ ಭರತ್ ರಾಜ್ ಈ ಪ್ರಾಜೆಕ್ಟ್ ಹೇಳಿದಾಗ ನನಗೆ ಬಹಳ ಇಷ್ಟವಾಯಿತು. ಅನಿರುದ್ಧ್ ಮಹೇಶ್, ಭರತ್ ರಾಜ್, ನೀತೇಶ್, ನಂಜುಂಡ ಆರಾಧ್ಯ, ತ್ರಿಲೋಕ್ ಹಾಗೂ ನಾನು ಐದು ಜನ ಬರಹಗಾರರು ಸೇರಿ ಈ ಸಿನಿಮಾದ ಕಥೆಯನ್ನು ಒಂದು ರಾತ್ರಿಯಲ್ಲಿ ಬರೆದೆವು, ಒಂದು ರಾತ್ರಿಯಲ್ಲಿಯೇ ಸ್ಕ್ರೀನ್ ಪ್ಲೇ ಮಾಡಲಾಯಿತು. ಕೇವಲ ನಾಲ್ಕು ಹಾಗೂ ಐದು ದಿನಗಳಲ್ಲಿ ಡೈಲಾಗ್ ಬರೆದವು. ನಂತರ ಬೇಲೂರಿನಲ್ಲಿ ಸಿನಿಮಾದ ಚಿತ್ರೀಕರಣವನ್ನು ಮಾಡಲಾಯಿತು ಎಂದು ಹೇಳಿದರು.

    ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಹೇರ್ ಸ್ಟೈಲಿಷ್ ಕಾರ್ಯನಿರ್ವಹಿಸುವ ಪಾತ್ರಧಾರಿಯಾಗಿದ್ದು, ಒಬ್ಬ ಸಾಮಾನ್ಯ ವ್ಯಕ್ತಿ ಜೀವನದಲ್ಲಿ ಬರುವುದನೆಲ್ಲಾ ಎದುರಿಸಿ ಹೀರೋ ಆಗಿ ಹೇಗೆ ಬದಲಾಗುತ್ತಾನೆ ಎಂಬುವುದು ಸಿನಿಮಾದ ಕಥೆಯಾಗಿದೆ ಎಂದರು.

    ಯೋಗರಾಜ್ ಭಟ್‍ರವರು ನೆನಪಿನ ಹುಡುಗಿಯೇ ಎಂಬ ಹಾಡನ್ನು ಬರೆದಿದ್ದು, ಗಾಯಕ ವಿಜಯ್ ಪ್ರಕಾಶ್ ಹಾಡಿದ್ದಾರೆ. ಹೀರೋ ಸಿನಿಮಾದ ಈ ಮೆಲೋಡಿ ಹಾಡು ಎಲ್ಲರ ಮನಗೆದ್ದಿದ್ದು, ಎಲ್ಲೆಡೆ ವೈರಲ್ ಆಗುತ್ತಿದೆ. ಸದ್ಯ ನಾಳೆ ಸಿನಿಮಾ ಬೆಳ್ಳಿತೆರೆ ಮೇಲೆ ಬರಲಿದ್ದು, ಅಭಿಮಾನಿಗಳು ಸಿನಿಮಾ ಕುರಿತಂತೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ಕಾದು ನೋಡಬೇಕಾಗಿದೆ.