– ಆಶೀರ್ವಾದ ಪಡೆದ ವಿರಾಟ್, ರೋಹಿತ್
ಬರ್ಮಿಂಗ್‍ಹ್ಯಾಮ್: ಭಾರತ- ಬಾಂಗ್ಲಾದೇಶ ಪಂದ್ಯದಲ್ಲಿ ಎಲ್ಲರ ಗಮನ ಸೆಳೆದ 87 ವರ್ಷದ ಹಿರಿಯ ಅಭಿಮಾನಿ ನನ್ನ ಪ್ರಾರ್ಥನೆ ನಿಜವಾಗುತ್ತದೆ, ಇಂಡಿಯಾ ವಿಶ್ವಕಪ್ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಚಾರುಲತಾ ಪಟೇಲ್ ಅವರು ಬಾಂಗ್ಲಾದೇಶ ವಿರುದ್ಧ ಪಂದ್ಯದಲ್ಲಿ ಟೀಂ ಇಂಡಿಯಾಗೆ ಚಿಯರ್ ಮಾಡುತ್ತಿದ್ದರು. ಅಲ್ಲದೆ ಕೈಯಲ್ಲಿ ಪೀಪಿ ಹಿಡಿದು ಇನ್ನಿತರ ಅಭಿಮಾನಿಗಳ ಜೊತೆ ಕುಣಿದು ಕುಪ್ಪಳಿಸುತ್ತಿದ್ದರು. ಕ್ಯಾಮೆರಾಮೆನ್ ಕೂಡ ಹಿರಿಯ ಅಭಿಮಾನಿಯ ಕಂಡು ಬಿಗ್ ಸ್ಕ್ರೀನ್ ನಲ್ಲಿ ಅವರನ್ನು ತೋರಿಸಿದ್ದರು.
ಚಾರುಲತಾ ಅವರು ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿ, “ನಾನು ತುಂಬಾ ಧಾರ್ಮಿಕ ವ್ಯಕ್ತಿ ಹಾಗೂ ನಾನು ದೇವರನ್ನು ತುಂಬಾ ನಂಬುತ್ತೇನೆ. ಗಣೇಶನನ್ನು ನಾನು ಪ್ರಾರ್ಥನೆ ಮಾಡಿದರೆ ಅದು ನಿಜವಾಗುತ್ತದೆ. ಭಾರತ ತಂಡ ಈ ಬಾರಿ ಪಕ್ಕಾ ವಿಶ್ವಕಪ್ ಗೆಲ್ಲುತ್ತದೆ. ಮಾಜಿ ಕ್ರಿಕೆಟಿಗ ಕಪಿಲ್ ದೇವ್ ನಾಯಕತ್ವದಲ್ಲಿ 1983ರಲ್ಲಿ ಭಾರತ ತಂಡ ಮೊದಲ ಬಾರಿಗೆ ವಿಶ್ವಕಪ್ ಗೆದ್ದಾಗ ನಾನು ಮೈದಾನದಲ್ಲೇ ಇದ್ದೆ. ಅವರು ವಿಶ್ವಕಪ್ ಗೆದ್ದಾಗ ನನಗೆ ತುಂಬಾ ಹೆಮ್ಮೆ ಆಯಿತು. ಅಲ್ಲದೆ ನಾನು ಖುಷಿಯಿಂದ ಡ್ಯಾನ್ಸ್ ಮಾಡಿದ್ದೆ. ಇಂದು ಭಾರತ ತಂಡ ಬಾಂಗ್ಲಾದೇಶವನ್ನು ಸೋಲಿಸಿದರೆ, ಡ್ಯಾನ್ಸ್ ಮಾಡುವುದಾಗಿ ನಾನು ನನ್ನ ಮೊಮ್ಮಗಳ ಬಳಿ ಹೇಳಿದೆ ಎಂದು ಹೇಳಿದರು.
ನಾನು ಭಾರತದಲ್ಲಿ ಹುಟ್ಟಿಲ್ಲ. ತಾಂಜಾನೀಯಾದಲ್ಲಿ ಜನಿಸಿದರೂ ನನ್ನ ಪೋಷಕರು ಭಾರತದಲ್ಲಿದ್ದರು. ಹೀಗಾಗಿ ನಾನು ನನ್ನ ದೇಶದ ಬಗ್ಗೆ ಹೆಮ್ಮೆಯಿದೆ. ಅಲ್ಲದೆ ನಾನು ದಶಕಗಳಿಂದ ಕ್ರಿಕೆಟ್ ವೀಕ್ಷಿಸುತ್ತಿದ್ದೇನೆ. ನಾನು ಆಫ್ರಿಕಾದಲ್ಲಿ ಇದ್ದಾಗ ನಾನು ಪಂದ್ಯ ವೀಕ್ಷಿಸುತ್ತಿದೆ. ಬಳಿಕ 1975ರಲ್ಲಿ ನಾನು ಇಲ್ಲಿಗೆ ಬಂದೆ. ನನಗೆ ಕೆಲಸಗಳಿದ್ದ ಕಾರಣ ಪಂದ್ಯ ವೀಕ್ಷಿಸಲು ಸಮಯ ಇರುತ್ತಿರಲಿಲ್ಲ. ನಾನು ಟಿವಿಯಲ್ಲೇ ಪಂದ್ಯ ವೀಕ್ಷಿಸುತ್ತಿದೆ. ಕಳೆದ 20 ವರ್ಷದ ಹಿಂದೆ ನಾನು ವೃತ್ತಿಯಿಂದ ನಿವೃತ್ತಿ ಪಡೆದೆ. ಈ ನಡುವೆ ನನಗೆ ಕೆಲಸ ಇಲ್ಲ. ಹಾಗಾಗಿ ನನಗೆ ಕ್ರಿಕೆಟ್‍ನಲ್ಲಿ ಆಸಕ್ತಿ ಇದೆ. ಕ್ರಿಕೆಟ್ ವೀಕ್ಷಿಸಲು ಅವಕಾಶ ಸಿಕ್ಕಿದ್ದಕ್ಕೆ ನಾನು ತುಂಬಾ ಲಕ್ಕಿ ಎಂದು ಚಾರುಲತಾ ಅವರು ತಿಳಿಸಿದರು.
ತಂಡದ ನಾಯಕ ವಿರಾಟ್ ಕೊಹ್ಲಿ ಕೂಡ ಹಿರಿಯ ಅಭಿಮಾನಿ ಅವರ ಆಶೀರ್ವಾದ ಪಡೆಯುತ್ತಿರುವ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. “ನಮಗೆ ಪ್ರೀತಿ ಹಾಗೂ ಬೆಂಬಲ ನೀಡಿದ್ದ ಎಲ್ಲ ಅಭಿಮಾನಿಗಳಿಗೆ ಧನ್ಯವಾದಗಳು. ಮುಖ್ಯವಾಗಿ ಚಾರುಲತಾ ಅವರಿಗೆ ಧನ್ಯವಾದಗಳು. ಚಾರುಲತಾ ಅವರಿಗೆ 87 ವರ್ಷವಾಗಿದ್ದು, ನಾನು ನೋಡಿದ ಅತ್ಯಂತ ಡೆಡಿಕೇಟ್ ಫ್ಯಾನ್ಸ್ ಗಳಲ್ಲಿ ಇವರು ಒಬ್ಬರು. ವಯಸ್ಸು ಕೇವಲ ಒಂದು ಸಂಖ್ಯೆ. ಇವರ ಆಶೀರ್ವಾದ ಪಡೆದು ಮುಂದಿನ ಪಂದ್ಯದ ಕಡೆ ಹೋಗುತ್ತಿದ್ದೇವೆ” ಎಂದು ಪೋಸ್ಟ್ ಮಾಡಿದ್ದಾರೆ.
ಕ್ರಿಕೆಟ್ ವರ್ಲ್ಡ್ ಕಪ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ಹಿಟ್‍ಮ್ಯಾನ್ ರೋಹಿತ್ ಶರ್ಮಾ ಅವರು ಹಿರಿಯ ಅಭಿಮಾನಿ ಚಾರುಲತಾ ಅವರನ್ನು ತಬ್ಬಿಕೊಳ್ಳುತ್ತಿರುವ ಫೋಟೋವನ್ನು ಹಾಕಿ, ಪ್ಲೇಯರ್ ಆಫ್ ದಿ ಮ್ಯಾಚ್ ರೋಹಿತ್ ಶರ್ಮಾ ತಮ್ಮ ಗೆಲುವನ್ನು ವಿಶೇಷ ಅಭಿಮಾನಿ ಜೊತೆ ಆಚರಿಸುತ್ತಿದ್ದಾರೆ ಎಂದು ಟ್ವೀಟ್ ಮಾಡಿದೆ. ಅಲ್ಲದೆ ಚಾರುಲತಾ ಅವರು ಅಭಿಮಾನಿಗಳ ಜೊತೆ ಡ್ಯಾನ್ಸ್ ಮಾಡುತ್ತಿರುವ ವಿಡಿಯೋವನ್ನು ಕೂಡ ಟ್ವೀಟ್ ಮಾಡಿದೆ.