Tag: ಹಿರಣ್ಯಕೇಶಿ ನದಿ

  • ಕಾಶಿ ಮಾದರಿಯಲ್ಲಿ ಹೀರಣ್ಯಕೇಶಿ ನದಿಗೆ ಗಂಗಾರತಿ: ಕಣ್ಣು ತುಂಬಿಕೊಂಡ ಸಾವಿರಾರು ಭಕ್ತರು

    ಕಾಶಿ ಮಾದರಿಯಲ್ಲಿ ಹೀರಣ್ಯಕೇಶಿ ನದಿಗೆ ಗಂಗಾರತಿ: ಕಣ್ಣು ತುಂಬಿಕೊಂಡ ಸಾವಿರಾರು ಭಕ್ತರು

    ಚಿಕ್ಕೋಡಿ: ಉತ್ತರ ಭಾರತದಲ್ಲಿ ನದಿಗಳಿಗೆ ಗಂಗಾರತಿ (Ganga Aarti) ಮಾಡುವ ಮಾದರಿಯಲ್ಲೆ ಹೀರಣ್ಯಕೇಶಿ ನದಿಗೆ ಗಂಗಾರತಿ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು.

    ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಡಕುಂದ್ರಿ ಗ್ರಾಮದ ಸುಪ್ರಸಿದ್ಧ ಹೊಳೆಮ್ಮ ದೇವಸ್ಥಾನ ಪಕ್ಕದ ಹೀರಣ್ಯಕೇಶಿ (Hiranyakeshi) ನದಿಗೆ ಗಂಗಾರತಿ ಜರುಗಿತು. ಕಳೆದ ನಾಲ್ಕು ವರ್ಷಗಳಿಂದ ಕಾರ್ತಿಕ ಮಾಸದಲ್ಲಿ ಹೀರಣ್ಯಕೇಶಿ ನದಿಗೆ ಗಂಗಾರತಿ ಕಾರ್ಯಕ್ರಮವನ್ನ ಹುಕ್ಕೇರಿ ಹಿರೇಮಠದಿಂದ ಆಯೋಜನೆ ಮಾಡಲಾಗುತ್ತಿದೆ.

    ಕಾಶಿ ಗಂಗಾರತಿ ಮಾದರಿಯಲ್ಲೇ ಮಂತ್ರ ಜಪಿಸಿ ನದಿಗೆ ಪೂಜೆ ಸಲ್ಲಿಸಿ ಗಂಗಾರತಿ ಮಾಡುವುದು ವಿಶೇಷವಾಗಿತ್ತು. ನದಿಗಳನ್ನು ಸ್ವಚ್ಛಂದವಾಗಿಟ್ಟುಕೊಳ್ಳಲು ಗಂಗಾರತಿಯನ್ನು ಆಯೋಜಿಸಲಾಗುತ್ತಿರುವುದು ವಿಶೇಷ. ಇದನ್ನೂ ಓದಿ: ಕಡೆಯ ಕಾರ್ತಿಕ ಸೋಮವಾರ – ಕೋಲಾರದ ಅಂತರಗಂಗೆಗೆ ಭಕ್ತರ ದಂಡು

    ಗಂಗಾರತಿ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಭಾಗಿಯಾಗಿ ಗಂಗಾರತಿಯನ್ನ ಕಣ್ಣು ತುಂಬಿಕೊಂಡರು. ಗಂಗಾರತಿ ಬಳಿಕ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು.

     

  • ಹಿರಣ್ಯಕೇಶಿ ನದಿ ತೀರದಲ್ಲಿ ಕಾಣಿಸಿಕೊಂಡ ಮೊಸಳೆ- ಜನರಲ್ಲಿ ಆತಂಕ

    ಹಿರಣ್ಯಕೇಶಿ ನದಿ ತೀರದಲ್ಲಿ ಕಾಣಿಸಿಕೊಂಡ ಮೊಸಳೆ- ಜನರಲ್ಲಿ ಆತಂಕ

    ಚಿಕ್ಕೋಡಿ/ಬೆಳಗಾವಿ: ಪ್ರವಾಹದಿಂದ ತತ್ತರಿಸಿರುವ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕುರಣಿ ಗ್ರಾಮದ ಹಿರಣ್ಯಕೇಶಿ ನದಿ ತೀರದ ಜನರಿಗೆ ಇದೀಗ ಮೊಸಳೆ ಕಾಟ ಎದುರಾಗಿದೆ.

    ಕಳೆದ ಹಲವು ದಿನಗಳಿಂದ ನದಿ ದಡದಲ್ಲಿ ಮೊಸಳೆ ಕಾಣಿಸಿಕೊಂಡಿದ್ದು, ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಕುರಣಿ ಗ್ರಾಮದ ಜನರಿಗೆ ಮೊಸಳೆ ಕಾಣಿಸಿಕೊಂಡಿದ್ದು, ಕೋಚರಿ ಬ್ಯಾರೇಜ್‍ನಿಂದ ಹೊಳೆಮ್ಮ ದೇವಿ ದೇವಸ್ಥಾನದ ವರೆಗಿನ ಬ್ಯಾರೇಜ್ ವರೆಗೆ ಮೊಸಳೆಗಳು ಇವೆ ಎನ್ನಲಾಗಿದೆ.

    ಹೀಗಾಗಿ ನದಿ ತೀರದಲ್ಲಿ ಜಾನುವಾರುಗಳನ್ನು ತೊಳೆಯುವುದು ಹಾಗೂ ಬಟ್ಟೆಗಳನ್ನು ತೊಳೆಯಬೇಡಿ ಎಂದು ನೋಟಿಸ್ ಮೂಲಕ ಸಾರ್ವಜನಿಕರಿಗೆ ಎಚ್ಚರಿಸಲಾಗಿದೆ. ಅಲ್ಲದೆ ವಿಶೇಷವಾಗಿ ಮೀನುಗಾರರು ನದಿಗೆ ಇಳೆಯದಂತೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ನೋಟಿಸ್ ಜಾರಿ ಮಾಡಿದ್ದಾರೆ.

    ಪ್ರವಾಹದ ಸಂದರ್ಭದಲ್ಲಿ ನದಿಯಲ್ಲಿನ ವಿಷ ಜಂತುಗಳು ಜಮೀನು ಹಾಗೂ ಗ್ರಾಮಗಳಿಗೆ ನುಗ್ಗಿದ್ದವು. ಪ್ರವಾಹ ತಗ್ಗಿ ಹಲವು ದಿನಗಳ ನಂತರ ಇದೀಗ ಹಿರಣ್ಯಕೇಶಿ ನದಿಯ ದಡದಲ್ಲಿ ಮೊಸಳೆ ಕಾಣಿಸಿಕೊಂಡಿದ್ದು, ನದಿ ಪಾತ್ರದ ಜನರಲ್ಲಿ ಆತಂಕ ಸೃಷ್ಟಿಯಾಗಿದೆ.

  • ಉಕ್ಕಿ ಹರಿಯುತ್ತಿರುವ ಹಿರಣ್ಯಕೇಶಿ ನದಿ – 8 ದಿನಗಳಿಂದ ಜಲ ದಿಗ್ಬಂಧನದಲ್ಲಿ ಮಂಗಗಳು

    ಉಕ್ಕಿ ಹರಿಯುತ್ತಿರುವ ಹಿರಣ್ಯಕೇಶಿ ನದಿ – 8 ದಿನಗಳಿಂದ ಜಲ ದಿಗ್ಬಂಧನದಲ್ಲಿ ಮಂಗಗಳು

    ಚಿಕ್ಕೋಡಿ: ಕೃಷ್ಣಾ ನದಿ ತೀರದ ಜೊತೆಗೆ ಹಿರಣ್ಯಕೇಶಿ ನದಿ ತೀರದಲ್ಲೂ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ನದಿ ದಡದ ಸಂಕೇಶ್ವರ ಪಟ್ಟಣದ 500 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಸಂಕಷ್ಟದಲ್ಲಿರುವ ಜನ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಗೊಳ್ಳುತ್ತಿದ್ದಾರೆ. ಇತ್ತ ಹಿರಣ್ಯಕೇಶಿ ನದಿ ಮಧ್ಯ ಭಾಗದಲ್ಲಿದ್ದ ಮರಗಳಲ್ಲಿ ಸುಮಾರು 25ಕ್ಕೂ ಮಂಗಗಳು ಕಳೆದ 8 ದಿನಗಳಿಂದ ಜಲ ಜಲ ದಿಗ್ಬಂಧನದಲ್ಲಿ ಸಿಲುಕಿದೆ.

    ಹಿರಣ್ಯಕೇಶಿ ನದಿ ನೀರು ಉಕ್ಕಿ ಹರಿಯುತ್ತಿರುವ ಪರಿಣಾಮ ನದಿ ಪಾತ್ರದ ಸುಮಾರು 5 ರಿಂದ 6 ಗ್ರಾಮಗಳಲ್ಲಿ ಜನರು ಪ್ರವಾಹದ ಸಮಸ್ಯೆಯನ್ನು ಎದುರಿಸಿದ್ದಾರೆ. ಪ್ರವಾಹದಲ್ಲಿ ಸಿಲುಕಿರುವ ಗ್ರಾಮಸ್ಥರನ್ನ ರಕ್ಷಣೆ ಮಾಡಿ ಸ್ಥಳಾಂತರ ಮಾಡುವ ಕಾರ್ಯವನ್ನು ಜಿಲ್ಲಾಡಳಿತ ಮಾಡುತ್ತಿದೆ. ನದಿ ಪಾತ್ರದ ಸುತ್ತಮುತ್ತಲಿನ ಸಾವಿರಾರು ಎಕರೆ ಕೃಷಿ ಭೂಮಿ ಕೂಡ ಮುಳುಗಡೆಯಾಗಿದ್ದು, ಅಪಾರ ಪ್ರಮಾಣದ ನಷ್ಟ ಎದುರಾಗಿದೆ.

    ಪ್ರವಾಹದಿಂದ ಜನರಿಗೆ ಮಾತ್ರವಲ್ಲದೇ ಜಾನುವಾರುಗಳಿಗೂ ಮೇವಿನ ಸಮಸ್ಯೆ ಎದುರಾಗಿದ್ದು, ಮೇವಿಗಾಗಿ ರೈತರು ಹರಸಾಹಸ ಪಡುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣಕ್ಕೆ ನದಿ ನೀರು ನುಗ್ಗಿದೆ. ಪರಿಣಾಮ ವಯೋವೃದ್ಧರು, ಮಕ್ಕಳು, ಮಹಿಳೆಯರು ಸುರಕ್ಷಿತ ಸ್ಥಳಗಳಿಗೆ ತೆರಳಲು ಪರದಾಟ ನಡೆಸಿದ್ದಾರೆ. ಪಟ್ಟಣದಲ್ಲಿ ಸುಮಾರು 200ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ.

    ಮಹಾರಾಷ್ಟ್ರದಲ್ಲಿ ಉಂಟಾಗಿರುವ ಭಾರೀ ಮಳೆಗೆ ಕೃಷ್ಣೆ ಉಕ್ಕಿ ಹರಿಯುತ್ತಿರುವ ಪರಿಣಾಮ ಪುಣೆ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ, ಜತ್ತ – ಜಾಂಬೋಟಿ ರಾಜ್ಯ ಹೆದ್ದಾರಿ, ಸಂಕೇಶ್ವರ – ಜೇವರ್ಗಿ ರಾಜ್ಯ ಹೆದ್ದಾರಿಗಳು ಬಂದ್ ಆಗಿದೆ. ಬಾಗಲಕೋಟೆ ಮಹಾರಾಷ್ಟ್ರ ಸಂಪರ್ಕಿಸುವ ರಾಯಭಾಗ ತಾಲೂಕಿನ ಕುಡಚಿ ರಾಜ್ಯ ಹೆದ್ದಾರಿಯ ಬಂದ್ ಆಗಿದೆ. ಅಥಣಿ ತಾಲೂಕಿನ ದರೂರ ಸೇತುವೆ ಕೂಡ ಮುಳುಗಡೆಯಾಗಿದೆ.