Tag: ಹಿಮ್ಸ್ ಆಸ್ಪತ್ರೆ

  • ಹಾಸನ | ಕಳೆದ 24 ಗಂಟೆಯಲ್ಲಿ ಹೃದಯಾಘಾತದಿಂದ ನಾಲ್ವರು ಸಾವು – ಸಾವಿನ ಸಂಖ್ಯೆ 31ಕ್ಕೆ ಏರಿಕೆ

    ಹಾಸನ | ಕಳೆದ 24 ಗಂಟೆಯಲ್ಲಿ ಹೃದಯಾಘಾತದಿಂದ ನಾಲ್ವರು ಸಾವು – ಸಾವಿನ ಸಂಖ್ಯೆ 31ಕ್ಕೆ ಏರಿಕೆ

    ಹಾಸನ: ಜಿಲ್ಲೆಯಲ್ಲಿ ಹೃದಯಾಘಾತದಿಂದ (Heart attack) ಸರಣಿ ಸಾವು ಮುಂದುವರೆದಿದೆ. ಕಳೆದ 24 ಗಂಟೆಗಳಲ್ಲಿ ನಾಲ್ವರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

    ಸಂಪತ್‌ಕುಮಾರ್ (53), ಸಿ.ಬಿ ವಿರೂಪಾಕ್ಷ (70), ಸಂತೋಷ್ (41), ದೇವಮ್ಮ (72) ಮೃತಪಟ್ಟವರು. ಹಾಸನ ನಗರದ (Hassan City) ಕರಿಗೌಡ ಕಾಲೋನಿ ನಿವಾಸಿ ಸಂಪತ್‌ಕುಮಾರ್‌ಗೆ ದಿಢೀರ್ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಕುಟುಂಬಸ್ಥರು ಹಿಮ್ಸ್ ಆಸ್ಪತ್ರೆಗೆ (HIMS Hospital) ಕರೆದೊಯ್ದಿದ್ದು, ಚಿಕಿತ್ಸೆ (Teratment) ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಂಪತ್‌ಕುಮಾರ್ ಸಾವನ್ನಪ್ಪಿದ್ದಾರೆ.

    ಸಾಂದರ್ಭಿಕ ಚಿತ್ರ

    ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ದುರಂತ ಅಂತ್ಯ
    ಸಕಲೇಶಪುರ ತಾಲ್ಲೂಕಿನ, ಬೆಳಗೋಡು ಹೋಬಳಿ ಚಿಕ್ಕನಾಯಕನಹಳ್ಳಿ ಗ್ರಾಮದ ಸಿ.ಬಿ ವಿರೂಪಾಕ್ಷ ಅವರಿಗೆ ಕಳೆದ ರಾತ್ರಿ 11:30ರ ಸುಮಾರಿನಲ್ಲಿ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಕುಟುಂಬಸ್ಥರು ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಆದ್ರೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.

    ಮಲಗಿದ್ದಲ್ಲೇ ಸಾವು
    ಗ್ರಾಪಂ ಸದಸ್ಯ ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ಆಲೂರು ತಾಲ್ಲೂಕಿನ, ಕಲ್ಲಾರೆ ಗ್ರಾಮದಲ್ಲಿ ನಡೆದಿದೆ. ಸಂತೋಷ್ (41) ಹೃದಯಾಘಾತದಿಂದ ಮೃತಪಟ್ಟ ವ್ಯಕ್ತಿ. ರಾತ್ರಿ ಮಲಗಿದ್ದಲ್ಲಿಯೇ ಹೃದಯಾಘಾತವಾಗಿದೆ. ಬೆಳಗ್ಗೆ ಮೇಲೆಳದಿದ್ದಾಗ ಕುಟುಂಬಸ್ಥರು ನೋಡಿದ್ದು ಕೂಡಲೇ ಹಾಸನದ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದಾರೆ. ಅಷ್ಟರಲ್ಲಿ ಹೃದಯಾಘಾತದಿಂದ ಸಂತೋಷ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಸಂತೋಷ್ ಕಾರಗೋಡು ಗ್ರಾ.ಪಂ. ಸದಸ್ಯರಾಗಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.

    ಚಿಕಿತ್ಸೆ ಪಡೆದು ವಾಪಸ್‌ ಬರುವಾಗ ಸಾವು
    ಮತ್ತೊಂದು ಪ್ರಕರಣದಲ್ಲಿ ಹೃದಯಾಘಾತದಿಂದ ವೃದ್ದೆ ಸಾವನ್ನಪ್ಪಿರುವ ಘಟನೆ ಸಕಲೇಶಪುರ ತಾಲ್ಲೂಕಿನ, ಅರೆಕೆರೆ ಗ್ರಾಮದಲ್ಲಿ ನಡೆದಿದೆ. ದೇವಮ್ಮ (72) ಹೃದಯಾಘಾತಕ್ಕೆ ಬಲಿಯಾದ ವೃದ್ದೆ. ದೇವಮ್ಮ ಮನೆಯಲ್ಲಿದ್ದ ವೇಳೆ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಎದೆನೋವು ಹೆಚ್ಚಾಗುತ್ತಲೇ ಬೆಂಗಳೂರು ಜಯದೇವ ಆಸ್ಪತ್ರೆಗೆ ತೆರಳಿ ವೈದ್ಯರ ಸಲಹೆ, ಚಿಕಿತ್ಸೆ, ಔಷಧಿ ಪಡೆದು ಗ್ರಾಮಕ್ಕೆ ವಾಪಾಸ್ಸಾಗುತ್ತಿದ್ದರು. ಬೆಂಗಳೂರಿನಿಂದ ಗ್ರಾಮಕ್ಕೆ ವಾಪಸ್ಸಾಗುವ ಮಾರ್ಗ ಮಧ್ಯೆ ದೇವಮ್ಮ ಮೃತಪಟ್ಟಿದ್ದಾರೆ.

    ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಮೃತಪಟ್ಟವರ ಸಂಖ್ಯೆ 31ಕ್ಕೆ ಏರಿಕೆಯಾಗಿದ್ದು ಜಿಲ್ಲೆಯ ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ.

  • ಹಿಮ್ಸ್ ಆಸ್ಪತ್ರೆಯ ವೈದ್ಯನಿಂದ ಮಹಿಳಾ ಹೌಸಿಂಗ್‍ಗೆ ಲೈಂಗಿಕ ಕಿರುಕುಳ

    ಹಿಮ್ಸ್ ಆಸ್ಪತ್ರೆಯ ವೈದ್ಯನಿಂದ ಮಹಿಳಾ ಹೌಸಿಂಗ್‍ಗೆ ಲೈಂಗಿಕ ಕಿರುಕುಳ

    ಹಾಸನ: ಹಿಮ್ಸ್ ಆಸ್ಪತ್ರೆಯ ವೈದ್ಯನೊಬ್ಬ ಕರ್ತವ್ಯ ನಿರತ ಮಹಿಳಾ ಹೌಸಿಂಗ್ ಮೇಲೆ ಲೈಂಗಿಕ ಕಿರುಕುಳ ನೀಡಿರುವ ಗಂಭೀರ ಆರೋಪ ಕೇಳಿ ಬಂದಿದೆ.

    ಹಿಮ್ಸ್ ವೈದ್ಯ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ಲೋಕೇಶ್ ವಿರುದ್ಧ ಈ ಆರೋಪ ಕೇಳಿಬಂದಿದ್ದು, ಇದೀಗ ಡಾ.ಲೋಕೇಶ್ ರನ್ನು ಅಮಾನತುಗೊಳಿಸಲಾಗಿದೆ. ವೈದ್ಯಕೀಯ ಪದವಿ ಪೂರೈಸಿ ತರಬೇತಿಯಲ್ಲಿದ್ದ ವೈದ್ಯ ವಿದ್ಯಾರ್ಥಿನಿ ಮೇಲೆ ಜನವರಿ 12 ರಂದು ಡಾಕ್ಟರ್ ಲೋಕೇಶ್ ಲಿಪ್ಟ್ ಒಳಗೆ ಬಂದು ಏಕಾ, ಏಕಿ ಮುತ್ತಿಟ್ಟರುವುದಾಗಿ ಸಂತ್ರಸ್ತೆ ಆರೋಪಿಸಿದ್ದಾಳೆ. ಈ ಕುರಿತಂತೆ ಹಿಮ್ಸ್ ನಿರ್ದೇಶಕರಿಗೆ ಎಚ್‍ಓಡಿ ದೂರು ನೀಡಿದ್ದು, ಈ ಆಧಾರದ ಮೇಲೆ ಡಾ.ಲೊಕೇಶ್ ಅಮಾನತು ಮಾಡಿ ತನಿಖೆಗೆ ಆದೇಶಿಸಲಾಗಿದೆ.

    ವೈದ್ಯಕೀಯ ಶಿಕ್ಷಣ ಇಲಾಖೆ ಕಾರ್ಯದರ್ಶಿ ಹಾಗೂ ಹಿಮ್ಸ್ ಆಡಳಿತ ಮಂಡಳಿ ಉಪಾಧ್ಯಕ್ಷ ನವೀನ್ ರಾಜ್ ಸಿಂಗ್ ಅವರು ಹಾಸನ ಹೆಚ್ಚುವರಿ ಡಿಸಿ ಕವಿತಾ ರಾಜಾರಾಂ ನೇತೃತ್ವದಲ್ಲಿ ತನಿಖೆ ನಡೆಸಲು ಸೂಚಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮೂರು ವಾರದವರೆಗೂ ತನಿಖೆ ನಡೆಸಲು ಗಡುವು ನೀಡಲಾಗಿದೆ ಎಂದು ಹಾಸನ ಎಡಿಸಿ ಕವಿತಾ ರಜಾರಾಂ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಆಟೋ ಚಾಲಕನಿಂದ ಮಹಿಳೆಗೆ ಕಿರುಕುಳ – ಆರೋಪಿ ಅರೆಸ್ಟ್

    ಸದ್ಯ ಆರೋಪಿ ಡಾ.ಲೋಕೇಶ್ ವಿರುದ್ಧ ಎಬಿವಿಪಿ ಸಂಘಟನೆ ವಿದ್ಯಾರ್ಥಿಗಳು ಹಾಸನ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದು, ಡಾ. ಲೋಕೇಶ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುಂವಂತೆ ಒತ್ತಾಯಿಸಿ ಎಡಿಸಿ ಕವಿತಾ ರಾಜಾರಾಂ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಜೊತೆಗೆ ಕೆಲ ವಿದ್ಯಾರ್ಥಿಗಳಿಗೆ ಡಾ. ಲೊಕೇಶ್ ಬೆದರಿಕೆ ಹಾಕಿದ್ದಾರೆ. ಇದರ ವಿರುದ್ಧ ಹೋರಾಟ ಮುಂದುವರಿಸುವುದಾಗಿ ಎಬಿವಿಪಿ ಸಂಘಟನೆ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.

    ದಾಖಲೆಗಳ ಆಧಾರ ಪ್ರಕಾರ ಜನವರಿ 12 ರಂದು ಈ ಪ್ರಕರಣ ನಡೆದಿದೆ. ಜನವರಿ 14 ರಂದು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ವಿದ್ಯಾರ್ಥಿನಿ ದೂರು ದಾಖಲಿಸಿದ್ದಾರೆ. ಜನವರಿ 19 ರಂದು ಡಾ. ಲೊಕೇಶ್ ರನ್ನು ಅಮಾನತ್ತು ಮಾಡಲಾಗಿದೆ. ಸದ್ಯ ಈ ಪ್ರಕರಣದಿಂದ ಹಾಸನ ಹಿಮ್ಸ್‍ಗೆ ಒಂದು ಕಪ್ಪುಚುಕ್ಕೆ ಅಂಟಿದಂತಾಗಿದೆ. ಇನ್ನು ಮೇಲ್ನೋಟಕ್ಕೆ ಸಾಬೀತಾಗಿದೆ ಎಂಬ ಕಾರಣಕ್ಕೆ ಡಾ. ಲೋಕೇಶ್ ಅಮಾನತು ಮಾಡಲಾಗಿದೆ. ಆದರೆ ಈಗ ಅಂತಿಮ ತನಿಖೆ ನಂತರ ಇಡೀ ಪ್ರಕರಣ ತಾರ್ಕಿಕ ಅಂತ್ಯ ಕಾಣಲಿದೆ. ಆದರೆ ಗೌರವ ಸ್ಥಾನದಲ್ಲಿರುವ ವೈದ್ಯರ ಮೇಲೆ ಈ ರೀತಿ ಆರೋಪ ಕೇಳಿ ಬಂದಿರುವುದು ನಿಜಕ್ಕೂ ಹಿಮ್ಸ್ ಸಂಸ್ಥೆಯ ಘನತೆಗೆ ದಕ್ಕೆಯುಂಟಾಗಿದೆ. ಇದನ್ನೂ ಓದಿ: ಪ್ರತಿಪಕ್ಷಗಳು ಮಾಫಿಯಾವನ್ನು ರಕ್ಷಿಸುತ್ತಿದೆ: ಮಾಯಾವತಿ

  • ವೈದ್ಯರ ನಿರ್ಲಕ್ಷ್ಯ ಆರೋಪ – ಹುಟ್ಟುತ್ತಲೇ ಹೆಣ್ಣು ಮಗು ಸಾವು

    ವೈದ್ಯರ ನಿರ್ಲಕ್ಷ್ಯ ಆರೋಪ – ಹುಟ್ಟುತ್ತಲೇ ಹೆಣ್ಣು ಮಗು ಸಾವು

    – ರಾತ್ರಿಯೆಲ್ಲ ನೋವಿನಿಂದ ನರಳಿದ ಯುವತಿ

    ಹಾಸನ: ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವನ್ನಪ್ಪಿದೆ ಎಂದು ಪೋಷಕರು ಆಕ್ರೋಶ ಹೊರಹಾಕಿದ ಘಟನೆ ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.

    ಹಾಸನ ಜಿಲ್ಲೆ, ಸಕಲೇಶಪುರ ತಾಲೂಕಿನ, ಹೆತ್ತೂರು ಗ್ರಾಮದ ಚಾಂದಿನಿ ಅವರು ಹೆರಿಗೆ ನೋವಿನಿಂದ ನಿನ್ನೆ ಬೆಳಗ್ಗೆ 11 ಗಂಟೆಗೆ ಹಾಸನ ಹಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ತಂದೆ, ತಾಯಿ ಇಲ್ಲದ ಚಾಂದಿನಿಯನ್ನು ಅವರ ಅಣ್ಣನೇ ಕಾಳಜಿ ವಹಿಸಿ ಕಳೆದ ಒಂದು ವರ್ಷದ ಹಿಂದೆ ಮದುವೆ ಮಾಡಿದ್ದರು.

    ಹೆರಿಗೆ ನೋವಿನ ಕಾರಣ ಹಾಸನ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾತ್ರಿಯೆಲ್ಲ ಗರ್ಭಿಣಿ ಮಹಿಳೆ ನೋವಿನಿಂದ ನರಳಿದ್ದರು. ಆದರೂ ವೈದ್ಯರು ಸರಿಯಾಗಿ ಸ್ಪಂದಿಸಲಿಲ್ಲ. ಇಂದು ಸಂಜೆ 4 ಗಂಟೆ ಸುಮಾರಿಗೆ ಹೆರಿಗೆ ಮಾಡಿ ಮಗು ಸಾವನ್ನಪ್ಪಿದೆ ಅಂತಿದ್ದಾರೆ. ನಮಗೆ ಆದ ಅನ್ಯಾಯ ಯಾರಿಗೂ ಆಗಬಾರದು. ಮಗು ಸಾವಿನ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.

  • ಹಾಸನದಲ್ಲಿ ಓರ್ವ ಪಿಎಸ್‍ಐ ಸೇರಿ ನಾಲ್ವರು ಪೊಲೀಸರು ಕೊರೊನಾದಿಂದ ಗುಣಮುಖ

    ಹಾಸನದಲ್ಲಿ ಓರ್ವ ಪಿಎಸ್‍ಐ ಸೇರಿ ನಾಲ್ವರು ಪೊಲೀಸರು ಕೊರೊನಾದಿಂದ ಗುಣಮುಖ

    ಹಾಸನ: ಹಾಸನದಲ್ಲಿ ಓರ್ವ ಎಸ್‍ಐ ಸೇರಿದಂತೆ ನಾಲ್ವರು ಪೊಲೀಸರು ಇಂದು ಕೊರೊನಾದಿಂದ ಗುಣಮುಖರಾಗಿ ಮನೆಗೆ ತೆರಳಿದ್ದು, ಭವ್ಯ ಸ್ವಾಗತ ನೀಡಲಾಗಿದೆ.

    ಹಾಸನದ ಹಿಮ್ಸ್ ಆಸ್ಪತ್ರೆಯ ಮುಂಭಾಗ ಕೊರೊನಾ ಗೆದ್ದು ಬಂದ ಪೊಲೀಸರಿಗೆ ಹಾರ ಹಾಕಿ, ಹೂ ಬೊಕ್ಕೆ ಕೊಟ್ಟು, ಪುಷ್ಪವೃಷ್ಟಿ ಮಾಡಿ ಸ್ವಾಗತ ಕೋರಲಾಯ್ತು. ಪೊಲೀಸ್ ಬ್ಯಾಂಡ್ ಮೂಲಕ ಕೊರೊನಾ ಗೆದ್ದು ಬಂದ ಪೊಲೀಸರಿಗೆ ಗೌರವ ಸಲ್ಲಿಸಲಾಯ್ತು. ನಮ್ಮ ಪೊಲೀಸರು ಗುಣಮುಖರಾಗಿರುವುದು ಹೆಚ್ಚಾಗಿ ಕರ್ತವ್ಯ ನಿರ್ವಹಿಸಲು ಶಕ್ತಿ ಹೆಚ್ಚಿಸಿದೆ ಎಂದು ಪೊಲೀಸ್ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದರು.

    ದಕ್ಷಿಣ ವಲಯ ಐಜಿ ವಿಪುಲ್ ಕುಮಾರ್ ಮಾತನಾಡಿ ಪೊಲೀಸರು ಗುಣಮುಖರಾಗಿರುವುದು ಸಂತಸ ತಂದಿದೆ. ಪೊಲೀಸರ ಕೆಲಸ ಮತ್ತು ಶ್ರಮದ ಬಗ್ಗೆ ಹೆಮ್ಮೆಯಿದೆ. ನಮ್ಮ ಆಸ್ಪತ್ರೆ ಸಿಬ್ಬಂದಿಗೆ ಋಣಿಯಾಗಿದ್ದೇವೆ ಎಂದರು. ಇದೇ ವೇಳೆ ಮಾತನಾಡಿದ ಕೊರೊನಾ ಗೆದ್ದು ಬಂದ ಎಸ್‍ಐ ಕುಮಾರ್ ಮೊದಲು ಕೊರೊನಾ ಪಾಸಿಟಿವ್ ಬಂದಾಗ ಭಯ ಆಯ್ತು. ಒಂದೆರೆಡು ದಿನದಲ್ಲಿ ಹಂತ ಹಂತವಾಗಿ ಭಯ ಹೋಯ್ತು. ತಾವು ಗುಣಮುಖರಾಗಲು ಸಹಾಯ ಮಾಡಿ, ಧೈರ್ಯ ತುಂಬಿದ ಎಲ್ಲರಿಗೂ ಧನ್ಯವಾದ ತಿಳಿಸಿದರು.