Tag: ಹಿಮ್ಸ್

  • ಹಾಸನ ಟ್ರಕ್ ದುರಂತಕ್ಕೆ 10 ಬಲಿ – ಗಾಯಾಳುಗಳ ಆರೋಗ್ಯ ವಿಚಾರಿಸಲು ವ್ಹೀಲ್‌ಚೇರ್‌ನಲ್ಲೇ ಆಸ್ಪತ್ರೆಗೆ ಬಂದ ಹೆಚ್‌ಡಿಡಿ

    ಹಾಸನ ಟ್ರಕ್ ದುರಂತಕ್ಕೆ 10 ಬಲಿ – ಗಾಯಾಳುಗಳ ಆರೋಗ್ಯ ವಿಚಾರಿಸಲು ವ್ಹೀಲ್‌ಚೇರ್‌ನಲ್ಲೇ ಆಸ್ಪತ್ರೆಗೆ ಬಂದ ಹೆಚ್‌ಡಿಡಿ

    – ಮೃತರ ಕುಟುಂಬಕ್ಕೆ ಜೆಡಿಎಸ್‌ನಿಂದ 1 ಲಕ್ಷ ಪರಿಹಾರ ಘೋಷಣೆ
    – ಸರ್ಕಾರದಿಂದ ಪರಿಹಾರ ಹೆಚ್ಚಳಕ್ಕೆ ದೇವೇಗೌಡರ ಆಗ್ರಹ

    ಹಾಸನ: ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಟ್ರಕ್ ಹರಿದು 10 ಮಂದಿ ಸಾವಿಗೀಡಾಗಿದ್ದು, ಹಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾನು ಪ್ರತಿನಿಧಿಸುತ್ತಿದ್ದ ಕ್ಷೇತ್ರದ ಜನರ ಕಷ್ಟ ಕೇಳಲು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ (H.D.Deve Gowda) ಅವರು ದುರಂತ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

    ಮೊಸಳೆ ಹೊಸಳ್ಳಿಯಲ್ಲಿ ಭೀಕರ ಅಪಘಾತ ಸಂಭವಿಸಿ 10 ಮಂದಿ ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಆರೋಗ್ಯ ವಿಚಾರಿಸಲು ಹಾಸನಕ್ಕೆ ದೇವೇಗೌಡರು ಆಗಮಿಸಿದರು. ಜಿಲ್ಲಾಸ್ಪತ್ರೆಯ ಹೊರಭಾಗದಿಂದ ವ್ಹೀಲ್‌ಚೇರ್‌ನಲ್ಲೇ ಆಗಮಿಸಿದರು. ಪ್ರತಿಯೊಬ್ಬರ ಯೋಗಕ್ಷೇಮ ವಿಚಾರಿಸಿದರು. ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇದನ್ನೂ ಓದಿ: ಹಾಸನದಲ್ಲಿ ಗಣೇಶ ಮೆರವಣಿಗೆ ವೇಳೆ ಘನಘೋರ ದುರಂತ – ಸಾವಿನ ಸಂಖ್ಯೆ 9ಕ್ಕೆ ಏರಿಕೆ

    ಭೇಟಿಗೂ ಮುನ್ನ ದುರಂತದ ಕುರಿತು ಹಾಸನದ ಪ್ರವಾಸಿ ಮಂದಿರದಲ್ಲಿ ದೇವೇಗೌಡರು ಸುದ್ದಿಗೋಷ್ಠಿ ನಡೆಸಿದ್ದರು. ಆ ಊರಿನ ಮಗ ನಾನು. ಅದಕ್ಕೆ 93 ನೇ ವಯಸ್ಸಿನಲ್ಲೂ ಬಂದಿದ್ದೇನೆ. ನಮ್ಮದು ಸಣ್ಣ ರಾಜಕೀಯ ಪಕ್ಷ. ವೈದ್ಯರ ಜೊತೆ ಚರ್ಚೆ ಮಾಡಿದ್ದೇನೆ, ಮೇಜರ್ ಎಲ್ಲಾ ನಾನೇ ಮಾಡ್ತೀವಿ. ಜಾಸ್ತಿ ಗಾಯ ಆದವರಿಗೆ ಪಕ್ಷದಿಂದ 25 ಸಾವಿರ, ಸಣ್ಣಪುಟ್ಟ ಗಾಯ ಆದವರಿಗೆ 20, ಸ್ವಲ್ಪ ಗಾಯ ಆದವರಿಗೆ 15 ಸಾವಿರ ಕೊಡ್ತೀವಿ. ಮೃತರ ಕುಟುಂಬಕ್ಕೆ ಪಕ್ಷದಿಂದ 1 ಲಕ್ಷ ಹಣ ಕೊಡುತ್ತೇವೆ ಎಂದು ತಿಳಿಸಿದ್ದರು.

    5 ಲಕ್ಷ ಸಾಲಲ್ಲ, ಸರ್ಕಾರ ಹೆಚ್ಚಿನ ಪರಿಹಾರ ನೀಡಬೇಕು. ದುಡಿಯೋ ಮಕ್ಕಳು ಸಾವನ್ನಪ್ಪಿದ್ದಾರೆ. ನಿಮ್ಮ ಹಣ ಬ್ಯಾಂಕಿನಲ್ಲಿಟ್ಟರೂ ಬರುವ ಬಡ್ಡಿಯಲ್ಲಿ ಬದುಕಲು ಆಗಲ್ಲ. ನೆರೆ ರಾಜ್ಯಕ್ಕೆ ಹೇಗೆ ಪರಿಹಾರ ಕೊಡ್ತಿದ್ದಾರೆ. ವಯಸ್ಸಾದವರು ಇದ್ದಾರೆ, ದುಡಿಯೋರು ಸಾವನ್ನಪ್ಪಿದ್ದಾರೆ, ನಾನು ರಾಜಕೀಯ ಮಾಡಲ್ಲ ಇಲ್ಲ. ಪರಿಹಾರವಾಗಿ 10 ಲಕ್ಷ ನೀಡಬೇಕು. ಕುಟುಂಬದ ಸ್ಥಿತಿ ನೋಡಿ ಪರಿಹಾರ ಹೆಚ್ಚಿಸಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಹಾಸನ | ವಿಮಾನ ದುರಂತದಲ್ಲಾದ್ರೆ 1 ಕೋಟಿ ಕೊಡ್ತೀರಿ, ಬಡವರ ಜೀವಕ್ಕೆ ಬೆಲೆ ಇಲ್ವಾ? – ಸಚಿವರಿಗೆ ಜನರ ತರಾಟೆ

    ಇಲ್ಲಿ ನಾನು ಜಾತಿ ತರಲ್ಲ, ಮಾಡಲ್ಲ. ಲೋಕಲ್ ಪೊಲೀಸ್ ಸ್ವಲ್ಪ ಕೇರ್ ತೆಗೆದುಕೊಂಡಿದ್ದರೆ ಇದು ಆಗ್ತಿರಲಿಲ್ಲ. ನಾಳೆ ಜಿಲ್ಲೆಗಳಿಗೆ ಹೋಗಬಹುದು. ದೇವೇಗೌಡರೇ 93 ನಡೀತಿದೆ. ರಾಜಕೀಯದಲ್ಲಿ ನಿಮಗೆ ಭ್ರಮೆ ಇಲ್ಲ. ಕೆಲಸ ಮಾಡುವ ಮನಸ್ಸು-ಶಕ್ತಿ ಇದೆಯೋ ಹೋರಾಟ ಮಾಡ್ತೀನಿ. ಅದು ನನ್ನ ನೇಚರ್. ನಾಳೆ ಪ್ರೆಸ್‌ಮೀಟ್ ಮಾಡಿದ್ರೆ ಬೇರೆ ಚರ್ಚೆ ಮಾಡೋಣ. ಇಲ್ಲಿ ಮಿಕ್ಸ್ ಮಾಡೋದು ಬೇಡ. ರಾಜಕೀಯದಲ್ಲಿ ನನ್ನ ಕೆಲಸ ಮುಗಿದಿಲ್ಲ. ಇನ್ನೂ ಸ್ವಲ್ಪ ಕೆಲಸ ಇದೆ ಎಂದು ತಿಳಿಸಿದರು.

    ಟ್ರಕ್ ದುರಂತದಲ್ಲಿ ಮೃತಪಟ್ಟವರ ಪೈಕಿ 6 ಮಂದಿ ಹೊಳೆನರಸೀಪುರದವರು. ಸುಮಾರು 65 ವರ್ಷಗಳಿಂದ ಹೊಳೆನರಸೀಪುರ ಕ್ಷೇತ್ರದ ಜೊತೆ ದೇವೇಗೌಡರು ರಾಜಕೀಯ ನಂಟು ಹೊಂದಿದ್ದಾರೆ. ಮೊಸಳೆ ಹೊಸಳ್ಳಿ ಹೋಬಳಿಯಲ್ಲಿ ಹೆಚ್ಚು ಕೌಟುಂಬಿಕ ಸಂಬಂಧವನ್ನು ದೊಡ್ಡಗೌಡ ದಂಪತಿ ಹೊಂದಿದ್ದಾರೆ.

  • ಹೋಮ್ ಐಸೋಲೇಶನ್‍ನಲ್ಲಿರುವವರಿಗೆ ಕೌನ್ಸಿಲಿಂಗ್- ಹಿಮ್ಸ್ ವಿದ್ಯಾರ್ಥಿಗಳಿಗೆ ಮೊದಲ ಸ್ಥಾನ

    ಹೋಮ್ ಐಸೋಲೇಶನ್‍ನಲ್ಲಿರುವವರಿಗೆ ಕೌನ್ಸಿಲಿಂಗ್- ಹಿಮ್ಸ್ ವಿದ್ಯಾರ್ಥಿಗಳಿಗೆ ಮೊದಲ ಸ್ಥಾನ

    ಹಾಸನ: ಕೋವಿಡ್ ಚಿಕಿತ್ಸಾ ಸೇವೆಯಲ್ಲಿ ರಾಜ್ಯದಲ್ಲೇ ಹೆಸರಾಗಿರುವ ಹಾಸನ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಹೋಮ್ ಐಸೋಲೇಶನ್‍ನಲ್ಲಿರುವವರ ಸೇವೆಯಲ್ಲಿಯೂ ರಾಜ್ಯದಲ್ಲೇ ಅಗ್ರಸ್ಥಾನ ಪಡೆದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.

    ಹಿಮ್ಸ್ ನ ಅಂತಿಮ ವರ್ಷದ ಎಲ್ಲ 70 ವಿದ್ಯಾರ್ಥಿಗಳು ಸಂಪೂರ್ಣವಾಗಿ ಕೊವಿಡ್-19 ಸೇವೆ ಹಾಗೂ ಹೋಮ್ ಐಸೋಲೇಶನ್‍ನಲ್ಲಿರುವವರಿಗೆ ಆನ್‍ಲೈನ್ ಮೂಲಕ ಅರೋಗ್ಯ ವಿಚಾರಣೆ, ಕೌನ್ಸಲಿಂಗ್ ಕಾರ್ಯದಲ್ಲಿ ತೊಡಗಿ ಮೆಚ್ಚುಗೆ ಗಳಿಸಿದ್ದಾರೆ.

    ರಾಜ್ಯ ಸರ್ಕಾರ ರಾಜೀವ್ ಗಾಂಧಿ ವಿಶ್ವ ವಿದ್ಯಾನಿಲಯದ ಮೂಲಕ ಎಲ್ಲ 45 ವೈದ್ಯಕೀಯ ಕಾಲೇಜುಗಳ ಅಂತಿಮ ವರ್ಷದ ವಿದ್ಯಾರ್ಥಿಗಳ ಸೇವಾ ವಿವರಗಳ ದತ್ತಾಂಶ ಪಡೆದುಕೊಂಡಿದ್ದು, ಶೇ.100ರ ಸಾಧನೆಯೊಂದಿಗೆ ಹಿಮ್ಸ್ ಮೊದಲ ಸ್ಥಾನದಲ್ಲಿದೆ.

    ದಿನಕ್ಕಿಷ್ಟು ಜನ ಹೋಮ್ ಐಸೋಲೇಶನ್‍ನಲ್ಲಿರುವ ರೋಗಿಗಳ ಆರೋಗ್ಯ ವಿಚಾರಿಸುವುದು, ಕೌನ್ಸಲಿಂಗ್ ಹಾಗೂ ಮಾರ್ಗದರ್ಶನ ಮಾಡುವ ಕರ್ತವ್ಯ ನಿರ್ವಹಣೆಯ ಹೊಣೆಯನ್ನು ಕಾಲೇಜಿನ ಎಲ್ಲ ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಪ್ರತಿ ವಾರಕ್ಕೊಮ್ಮೆ ರಾಜ್ಯ ಮಟ್ಟದಲ್ಲೇ ನೋಡಲ್ ಅಧಿಕಾರಿಗಳಿಂದ ವಿದ್ಯಾರ್ಥಿಗಳ ಕಾರ್ಯವೈಖರಿಯ ಮೌಲ್ಯ ಮಾಪನ ಮಾಡಿ, ಕಾಲೇಜುವಾರು ಮೌಲ್ಯಾಂಕ ಪ್ರಕಟಿಸಲಾಗುತ್ತದೆ.

    ಈ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯದ ಎಲ್ಲ 45 ಮೆಡಿಕಲ್ ಕಾಲೇಜುಗಳ ಪಟ್ಟಿಯಲ್ಲಿ ಹಿಮ್ಸ್ ವಿದ್ಯಾರ್ಥಿಗಳ ಸಾಧನೆ ಮಂಚೂಣಿಯಲ್ಲಿದೆ. ಎಸ್.ಎಸ್ ಇನ್‍ಸ್ಟಿಟ್ಯೂಟ್ ಆಫ್ ಮಡಿಕಲ್ ಸೈನ್ಸ್ ಆ್ಯಂಡ್ ರಿಸರ್ಚ್ ಸೆಂಟರ್ ಹಾಗೂ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ನಂತರದ ಸ್ಥಾನದಲ್ಲಿವೆ.

    ಕೇವಲ ಹೋಮ್ ಐಸೋಲೇಶನ್‍ನಲ್ಲಿರುವವರ ಸೇವೆ ಮಾತ್ರವಲ್ಲದೆ, ಆಸ್ಪತ್ರೆಗಳಲ್ಲಿಯೂ ಕೋವಿಡ್ ಸೋಂಕಿತರ ಚಿಕಿತ್ಸೆಯಲ್ಲಿ ಹಿಮ್ಸ್‍ನ ವಿದ್ಯಾರ್ಥಿಗಳು ತೊಡಗಿ, ಜಿಲ್ಲೆಯ ಕೋವಿಡ್ ಚಿಕಿತ್ಸಾ ವ್ಯವಸ್ಥೆಗೆ ಬಲ ತುಂಬಿದ್ದಾರೆ ಎಂಬುದು ಪ್ರಶಂಸನೀಯ.

    ಹಿಮ್ಸ್ ನಿರ್ದೇಶಕರಿಂದ ಅಭಿನಂದನೆ:
    ಹಿಮ್ಸ್ ಅಂತಿಮ ವರ್ಷದ ವಿದ್ಯಾರ್ಥಿಗಳ ಈ ಸಮರ್ಪಣಾ ಭಾವದ ಸೇವೆ ಮತ್ತು ಸಾಧನೆಗೆ ಹಿಮ್ಸ್ ನಿರ್ದೇಶಕ ಡಾ.ರವಿ ಕುಮಾರ್, ಪ್ರಾಂಶುಪಾಲ ಡಾ.ನಾಗೇಶ್ ಹಾಗೂ ವೈದ್ಯಕೀಯ ಅಧೀಕ್ಷಕ ಡಾ.ಕೃಷ್ಣಮೂರ್ತಿ ಅಭಿನಂದನೆ ಸಲ್ಲಿಸಿದ್ದಾರೆ.

    ಸುಮಾರು 800 ಹಾಸಿಗೆಗಳ ಕೋವಿಡ್ ಆಸ್ಪತ್ರೆಯ ಯಶಸ್ವಿ ನಿರ್ವಹಣೆ, ಕೋವಿಡ್ ಪೂರ್ವದಲ್ಲಿಯೇ ಆಕ್ಸಿಜನ್ ಶೇಖರಣೆಗೆ ಪೂರ್ವ ಸಿದ್ಧತೆ ಹಾಗೂ ವೈರಾಣು ಪತ್ತೆ ಪ್ರಯೋಗಾಲಯದ ಸ್ಥಾಪನೆ, ಜಿಲ್ಲಾಡಳಿತದ ವತಿಯಿಂದ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ನಡೆಸಲಾಗುತ್ತಿರುವ ‘ವೈದ್ಯರ ನಡೆ ಹಳ್ಳಿಯ ಕಡೆ’ ಎಂಬ ಅನನ್ಯ ಕಾರ್ಯಕ್ರಮಕ್ಕೆ ಸಂಸ್ಥೆಯ 75 ವೈದ್ಯರನ್ನು ನಿಯೋಜಿಸಿ, ಕಾರ್ಯಕ್ರಮದ ಯಶಸ್ಸಿಗಾಗಿ ಜಿಲ್ಲಾಡಳಿತದೊಂದಿಗೆ ಹೆಗಲು ಜೋಡಿಸಿ ಸಹಕರಿಸುತ್ತಿರುವ ಹಿಮ್ಸ್ ಸಂಸ್ಥೆ, ಸೇವೆಯಲ್ಲಿ ಸದಾ ಮುಂದಿದೆ. ಈಗ ವಿದ್ಯಾರ್ಥಿಗಳ ಸಾಧನೆ ಸಂಸ್ಥೆಗೆ ಇನ್ನೊಂದು ಮನ್ನಣೆ ಸಿಕ್ಕಂತಾಗಿದೆ.

  • 400 ಬೆಡ್‍ಗಳೂ ಭರ್ತಿ- ಹಾಸನ ಆಸ್ಪತ್ರೆ ಮುಂದೆ ಬೋರ್ಡ್

    400 ಬೆಡ್‍ಗಳೂ ಭರ್ತಿ- ಹಾಸನ ಆಸ್ಪತ್ರೆ ಮುಂದೆ ಬೋರ್ಡ್

    ಹಾಸನ: ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆ ಹಿಮ್ಸ್ ಆಸ್ಪತ್ರೆಯಲ್ಲಿ ಬೆಡ್‍ಗಳೆಲ್ಲವೂ ಭರ್ತಿಯಾಗಿದ್ದು, ಈ ಹಿನ್ನೆಲೆ ಹಾಸಿಗೆ ಭರ್ತಿಯಾಗಿರುವ ಕುರಿತು ಆಡಳಿತ ಮಂಡಳಿ ಬೋರ್ಡ್ ಹಾಕಿದೆ.

    ಎಲ್ಲ ಹಾಸಿಗೆಗಳು ಭರ್ತಿಯಾಗಿವೆ ಎಂದು ಆಡಳಿತ ಮಂಡಳಿ ಬೋರ್ಡ್ ಹಾಕಿದೆ. ಒಟ್ಟು 400 ಹಾಸಿಗಳಿರುವ ಜಿಲ್ಲಾ ಕೋವಿಡ್ ಆಸ್ಪತ್ರೆಯ ಎಲ್ಲ 400 ಹಾಸಿಗೆಗಳು ಭರ್ತಿಯಾಗಿವೆ. ತೀವ್ರ ನಿಗಾ ಘಟಕಗಳ ಹಾಸಿಗೆಗಳ ಸಂಖ್ಯೆ 60, ವೆಂಟಿಲೇಟರ್‍ಗಳ ಸಂಖ್ಯೆ 55 ಇದ್ದು, ಎಲ್ಲವೂ ಭರ್ತಿಯಾಗಿವೆ ಎಂದು ಬೋರ್ಡ್ ಹಾಕಲಾಗಿದೆ. ಐಸಿಯು, ವೆಂಟಿಲೇಟರ್ ಸೇರಿ ಎಲ್ಲ ಹಾಸಿಗೆಗಳು ಫುಲ್ ಆಗಿವೆ ಎಂದು ಆಡಳಿತ ಮಂಡಳಿ ಬೋರ್ಡ್ ಹಾಕಿದೆ. ಇದರಿಂದಾಗಿ ಜಿಲ್ಲೆಯ ಜನರಿಗೆ ಆಘಾತ ಉಂಟಾಗಿದೆ.

    ಹಾಸನದಲ್ಲಿ ನಿನ್ನೆ ಒಂದೇ ದಿನ 1,673 ಕೊರೊನಾ ಪ್ರಕರಣಗಳು ವರದಿಯಾಗಿದ್ದು, 13 ಜನ ಸಾವನ್ನಪ್ಪಿದ್ದಾರೆ. ನಿತ್ಯ ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿರುವುದರಿಂದ ಬೆಡ್‍ಗಳ ಕೊರತೆ ಉಂಟಾಗುತ್ತಿದೆ.