Tag: ಹಿಮಾದಾಸ್

  • ಅಂದು ಅಡಿಡಾಸ್ ಎಂದು ಕೈಯಾರೇ ಬರೆಯುತ್ತಿದ್ದೆ, ಇಂದು ಅಡಿಡಾಸ್ ಶೂನಲ್ಲೇ ನನ್ನ ಹೆಸರು ಪ್ರಿಂಟ್ – ಹಿಮಾದಾಸ್

    ಅಂದು ಅಡಿಡಾಸ್ ಎಂದು ಕೈಯಾರೇ ಬರೆಯುತ್ತಿದ್ದೆ, ಇಂದು ಅಡಿಡಾಸ್ ಶೂನಲ್ಲೇ ನನ್ನ ಹೆಸರು ಪ್ರಿಂಟ್ – ಹಿಮಾದಾಸ್

    – ಅಡಿಡಾಸ್ ಕಂಪನಿಯ ಶೂಗಳ ಮೇಲೆ ಹಿಮಾದಾಸ್ ಹೆಸರು
    – ಬಾಲ್ಯದ ಕಷ್ಟದ ದಿನಗಳನ್ನು ನೆನಪಿಸಿದ ಹಿಮಾದಾಸ್

    ನವದೆಹಲಿ: ಕ್ರೀಡಾಪಟುಗಳಿಗಾಗೇ ವಿಶೇಷ ಬಗೆಯ ಶೂ ತಯಾರಿಸುವ ಅಡಿಡಾಸ್ ಕಂಪನಿ ಭಾರತದ ಓಟಗಾರ್ತಿ ಹಿಮಾದಾಸ್ ಅವರ ಹೆಸರನ್ನು ತಮ್ಮ ಕಂಪನಿಯ ಬ್ರ್ಯಾಂಡೆಡ್ ಕಸ್ಟಮ್-ನಿರ್ಮಿತ ಶೂ ಮೇಲೆ ಪ್ರಿಂಟ್ ಮಾಡಲು ತೀರ್ಮಾನ ಮಾಡಿದೆ.

    ತಮ್ಮ ಕಂಪನಿಯ ಬ್ರ್ಯಾಂಡೆಡ್ ಕಸ್ಟಮ್ ಶೂ ಮೇಲೆ ಹಿಮಾದಾಸ್ ಹೆಸರನ್ನು ಪ್ರಿಂಟ್ ಮಾಡುವುದಾಗಿ ಅಡಿಡಾಸ್ ಭಾನುವಾರ ಹೇಳಿಕೊಂಡಿದೆ. ಇದಾದ ನಂತರ ತಮ್ಮ ಹಿಂದಿನ ದಿನಗಳನ್ನು ನೆನೆದುಕೊಂಡಿರುವ ಹಿಮಾದಾಸ್, ಒಂದು ಕಾಲದಲ್ಲಿ ನಾನು ಉಪಯೋಗಿಸುತ್ತಿದ್ದ ಮಮೂಲಿ ರನ್ನಿಂಗ್ ಶೂಗಳ ಮೇಲೆ ನಾನೇ ಅಡೀಡಸ್ ಎಂದು ಬರೆಯುತ್ತಿದೆ ಎಂದು ಹೇಳಿದ್ದಾರೆ.

    ಈ ವಿಚಾರವಾಗಿ ಮಾತನಾಡಿರುವ ಹಿಮಾದಾಸ್ ಮೊದಲು ನಾನು ಶಾಲಾ ದಿನಗಳಲ್ಲಿ ಓಡಲು ಆರಂಭಿಸಿದಾಗ ಬರಿಗಾಲಿನಲ್ಲಿ ಓಡುತ್ತಿದ್ದೆ. ಆದರೆ ಮೊದಲು ನಾನು ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಹೋದಾಗ ನಮ್ಮ ತಂದೆ ಸ್ಪೈಕ್ ಶೂಗಳನ್ನು ತಂದುಕೊಟ್ಟರು. ಅದೂ ಯಾವುದೇ ಕಂಪನಿ ಆಥವಾ ಬ್ರ್ಯಾಂಡೆಡ್ ಶೂ ಆಗಿರಲಿಲ್ಲ. ಆದರೆ ಅದರ ಮೇಲೆ ನಾನು ನನ್ನ ಕೈಯಾರೆ ಅಡಿಡಾಸ್ ಎಂದು ಬರೆದುಕೊಂಡಿದ್ದೆ ಎಂದು ತನ್ನ ಹಳೆಯ ನೆನಪುಗಳನ್ನು ಮೆಲಕು ಹಾಕಿದ್ದಾರೆ.

    ಹಿಮಾದಾಸ್ ಅವರು ಭಾರತದ ಕ್ರಿಕೆಟ್ ಆಟಗಾರ ಸುರೇಶ್ ರೈನಾ ಅವರು ಜೊತೆ ಇನ್‍ಸ್ಟಾಗ್ರಾಮ್‍ನಲ್ಲಿ ಲೈವ್ ಬಂದಿದ್ದು, ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ವಿಧಿ ಎಂಬುದು ನಮ್ಮನ್ನು ಎಲ್ಲಿಗೆ ತಂದು ನಿಲ್ಲಿಸುತ್ತದೆ ಎಂಬುದು ನಮಗೆ ಯಾರಿಗೂ ಗೊತ್ತಿಲ್ಲ. ಒಂದು ಕಾಲದಲ್ಲಿ ನನ್ನ ಶೂಗಳ ಮೇಲೆ ನಾನೇ ಅಡಿಡಾಸ್ ಎಂದು ಬರೆದುಕೊಳ್ಳುತ್ತಿದ್ದೆ. ಇಂದು ಅದೇ ಕಂಪನಿ ನನ್ನ ಹೆಸರನ್ನು ಅವರ ಬ್ರ್ಯಾಂಡೆಡ್ ಶೂ ಮೇಲೆ ಪ್ರಿಂಟ್ ಮಾಡುತ್ತಿದೆ ಎಂದು ಹಿಮಾದಾಸ್ ಹೇಳಿದ್ದಾರೆ.

    ಒಂದು ಕಾಲದಲ್ಲಿ ಶೂ ಇಲ್ಲದೇ ಬರಿಗಾಲಿನಲ್ಲಿ ಓಡುತ್ತಿದ್ದ ಹಿಮಾದಾಸ್ ಫಿನ್ಲೆಂಡ್‍ನಲ್ಲಿ ನಡೆದ 2018 ರ ವಿಶ್ವ ಅಂಡರ್ -20 ಚಾಂಪಿಯನ್‍ಶಿಪ್‍ನಲ್ಲಿ 400 ಮೀಟರ್ ಸ್ಪರ್ಧೆ ಯಲ್ಲಿ ಚಿನ್ನ ಗೆದ್ದರು. ನಂತರ ಅವರನ್ನು ಜರ್ಮನಿಯ ಉನ್ನತ ಬ್ರ್ಯಾಂಡ್ ಕಂಪನಿ ಅಡಿಡಾಸ್ ತನ್ನ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಿತ್ತು. ಈಗ ತಮ್ಮ ಕಂಪನಿಯ ಕಸ್ಟಮ್-ನಿರ್ಮಿತ ಶೂಗಳ ಮೇಲೆ ಆಕೆಯ ಹೆಸರನ್ನು ಪ್ರಿಂಟ್ ಮಾಡಲು ಮುಂದಾಗಿದೆ.

    ಇದೇ ವೇಳೆ ಇಂಡೋನೇಷ್ಯಾದಲ್ಲಿ ನಡೆದ 2018ರ ಏಷ್ಯನ್ ಕ್ರೀಡಾಕೂಟದ ನಂತರ ಜನರು ಹಿಂದೆಂದಿಗಿಂತಲೂ ಹೆಚ್ಚು ಅಥ್ಲೆಟಿಕ್ಸ್ ಅನ್ನು ಅನುಸರಿಸಲು ಪ್ರಾರಂಭಿಸಿದ್ದಾರೆ ಎಂದು ಹಿಮಾದಾಸ್ ಹೇಳಿದ್ದಾರೆ. ಹಿಮಾದಾಸ್ ಅವರು ಏಷ್ಯನ್ ಕ್ರೀಡಾಕೂಟದಲ್ಲಿ 400 ಮೀಟರ್ ವೈಯಕ್ತಿಕ ಸ್ಪರ್ಧೆಯಲ್ಲಿ ಬೆಳ್ಳಿ ಮತ್ತು ಮಹಿಳೆಯರ 400 ಮೀಟರ್ ಮತ್ತು ಮಿಶ್ರ 400 ಮೀಟರ್ ರಿಲೇ ರೇಸ್‍ಗಳಲ್ಲಿ ತಲಾ ಒಂದು ಚಿನ್ನದ ಪದಕವನ್ನು ಗೆದ್ದಿದ್ದರು.

    ನಾನು ಮುಂದೆ ನಡೆಯುವ ಟೋಕಿಯೋ ಒಲಿಂಪಿಕ್ಸ್ ಕಡೆ ಗಮನ ಹರಿಸಿದ್ದು ಅಭ್ಯಾಸ ನಡೆಸುತ್ತಿದ್ದೇನೆ. ಕೊರೊನಾ ಬಂದಿರುವುದಿರಂದ ನನಗೆ ಇದಕ್ಕೆ ಹೆಚ್ಚಿನ ಸಮಯ ಸಿಕ್ಕಿದೆ. ಸ್ಪರ್ಧೆಯಲ್ಲಿ ನಾವು ಓಡುವಾಗ ಅಭಿಮಾನಿಗಳು ನಮ್ಮ ಹೆಸರನ್ನು ಜೋರಾಗಿ ಕೂಗಿದರೆ ನಮಗೆ ಓಡಲು ಹೆಚ್ಚಿನ ಶಕ್ತಿ ಸಿಗುತ್ತದೆ ಎಂದು ಹಿಮಾ ತಿಳಿಸಿದ್ದಾರೆ. ಜೊತೆಗೆ ಕ್ರಿಕೆಟ್ ದಂತಕಥೆ ಸಚಿನ್ ಅವರು ನನ್ನ ರೋಲ್ ಮಾಡೆಲ್ ಆಗಿದ್ದು, ಅವರನ್ನು ಭೇಟಿಯಾದ ಕ್ಷಣ ನನ್ನ ಜೀವನದ ಅತ್ಯುತ್ತಮ ಕ್ಷಣವಾಗಿದೆ ಎಂದು ದಾಸ್ ಹೇಳಿದ್ದಾರೆ.

  • ಹಿಮಾದಾಸ್ ಮಿಂಚಿನ ಓಟಕ್ಕೆ ಲಭಿಸಿತು 5ನೇ ಸ್ವರ್ಣ ಪದಕ

    ಹಿಮಾದಾಸ್ ಮಿಂಚಿನ ಓಟಕ್ಕೆ ಲಭಿಸಿತು 5ನೇ ಸ್ವರ್ಣ ಪದಕ

    ನವದೆಹಲಿ: ಭಾರತ ಸ್ಟಾರ್ ಓಟಗಾರ್ತಿ ಹಿಮಾದಾಸ್ ಶನಿವಾರದಂದು ಜೆಕ್ ರಿಪಬ್ಲಿಕ್‍ನಲ್ಲಿ ನಡೆದ ಟ್ಯಾಬರ್ ಅಥ್ಲೆಟಿಕ್ಸ್ ಮೀಟ್‍ನಲ್ಲಿ 400 ಮೀಟರ್ ಓಟವನ್ನು ಗೆದ್ದು, ಈ ತಿಂಗಳಲ್ಲಿ ಐದನೇ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

    ಒಂದೇ ತಿಂಗಳಲ್ಲಿ ಐದು ಚಿನ್ನದ ಪದಕಗಳನ್ನು ಗೆದ್ದು, ಭಾರತದ ಕೀರ್ತಿಯನ್ನು ಹಿಮಾ ಹೆಚ್ಚಿಸಿದ್ದಾರೆ. 52.09 ಸೆಕೆಂಡುಗಳಲ್ಲಿ 400 ಮೀಟರ್ ಓಟವನ್ನು ಪೂರ್ಣಗೊಳಿಸಿ, ಚಿನ್ನದ ಪದಕಕ್ಕೆ ಮುತ್ತಿಟ್ಟು ಅತ್ಯುತ್ತಮ ಸಾಧನೆಗೈದಿದ್ದಾರೆ. ಅಲ್ಲದೆ ಕಳೆದ ವರ್ಷ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ 400 ಮೀ. ಓಟದಲ್ಲಿ ಹಿಮಾ ದಾಸ್ ಅವರು 50.79 ಸೆಕೆಂಡುಗಳ ವೈಯಕ್ತಿಕ ಅತ್ಯುತ್ತಮ ದಾಖಲೆ ಬರೆದಿದ್ದರು.

    ಇದಕ್ಕೂ ಮುನ್ನ ಇದೇ ಟ್ಯಾಬರ್ ಅಥ್ಲೆಟಿಕ್ ಸ್ಪರ್ಧೆಯ 200 ಮೀಟರ್ ಓಟದಲ್ಲಿ ಚಿನ್ನದ ಪದಕ ಗೆದ್ದಿದ್ದರು. ಕ್ಲಾಡೋ ಅಥ್ಲೆಟಿಕ್ ಮೀಟ್, ಕುಂಟೊ ಅಥ್ಲೆಟಿಕ್ಸ್ ಮೀಟ್, ಮತ್ತು ಪೊಜ್ನಾನ್ ಅಥ್ಲೆಟಿಕ್ಸ್ ಗ್ರ್ಯಾಂಡ್ ಪ್ರಿಕ್ಸ್‍ನಲ್ಲಿ ಹಿಮಾದಾಸ್ ಸ್ವರ್ಣ ಪದಕ ಗೆದ್ದಿದ್ದರು.

    ಐದು ಚಿನ್ನದ ಪದಕದ ಪಟ್ಟಿ:
    1. ಜುಲೈ 2ರಂದು ಪೊಲೆಂಡ್‍ನಲ್ಲಿ ನಡೆದಿದ್ದ ಪೊಜ್ನಾನ್ ಅಥ್ಲೆಟಿಕ್ಸ್ ಪ್ರಿಕ್ಸ್ ನಲ್ಲಿ ಹಿಮಾದಾಸ್ ಅವರು 200 ಮೀಟರ್ ಓಟವನ್ನು 23.65 ಸೆಕೆಂಡ್‍ಗಳಲ್ಲಿ ಮುಗಿಸಿ ಮೊದಲ ಚಿನ್ನದ ಪದಕ ಗೆದ್ದಿದ್ದರು.

    2. ನಂತರ ಜುಲೈ 8 ರಂದು ಕುಟ್ನೊ ಅಥ್ಲೆಟಿಕ್ಸ್ ಮೀಟ್‍ನಲ್ಲಿ 200 ಮೀಟರ್ ದೂರವನ್ನು 23.97 ಸೆಕೆಂಡ್‍ಗಳಲ್ಲಿ ಕ್ರಮಿಸಿ ಎರಡನೇ ಚಿನ್ನ ಪದಕವನ್ನು ಪಡೆದರು.

    3. ಜುಲೈ 13 ರಂದು ಜೆಕ್ ಗಣರಾಜ್ಯದಲ್ಲಿ ನಡೆದ ಕ್ಲಾಡ್ನೊ ಅಥ್ಲೆಟಿಕ್ಸ್ ಮೀಟ್‍ನಲ್ಲಿ 200 ಮೀಟರ್ ಸ್ಪರ್ಧೆಯನ್ನು 23.43 ಸೆಕೆಂಡ್‍ಗಳಲ್ಲಿ ಪೂರ್ಣಗೊಳಿಸಿ ಮೂರನೇ ಚಿನ್ನದ ಪದಕವನ್ನು ಪಡೆದುಕೊಂಡಿದ್ದರು.

    4. ಜುಲೈ 18ರಂದು ಜೆಕ್ ರಿಪಬ್ಲಿಕ್‍ನಲ್ಲಿ ನಡೆದ ಟ್ಯಾಬರ್ ಅಥ್ಲೆಟಿಕ್ಸ್ ಮೀಟ್‍ನಲ್ಲಿ 200 ಮೀಟರ್ ಓಟವನ್ನು 23.25 ಸೆಕೆಂಡ್‍ನಲ್ಲಿ ಪೂರ್ಣಗೊಳಿಸುವ ಮೂಲಕ ನಾಲ್ಕನೇ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದರು.

    5. ಈಗ ಜುಲೈ 20ರಂದು 400 ಮೀಟರ್ ಓಟವನ್ನು 52.09 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿ ತಮ್ಮ ಐದನೇ ಚಿನ್ನದ ಪದಕವನ್ನು ಗಳಸಿದ್ದಾರೆ.

    ಇದರ ಜೊತೆಗೆ ಜೆಪಿ ಜಬೀರ್ ಅವರು ಕೂಡ 400 ಮೀ. ಹರ್ಡಲ್ಸ್‍ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಈ ಓಟವನ್ನು 49.66 ಸೆಕೆಂಡ್‍ಗಳಲ್ಲಿ ಜಬೀರ್ ಪೂರ್ಣಗೊಳಿಸಿ ಮೊದಲ ಸ್ಥಾನ ಗಳಿಸಿದರು. ಅಲ್ಲದೆ ಮೊಹಮದ್ ಆನಸ್ ಅವರು 200 ಮೀ. ಓಟವನ್ನು 20.95 ಸೆಕೆಂಡ್‍ಗಳಲ್ಲಿ ಪೂರ್ಣಗೊಳಿಸಿ ಮೂರನೇ ಸ್ಥಾನವನ್ನು ಗಳಿಸಿದ್ದಾರೆ.

    ಹಾಗೆಯೇ 200 ಮೀ. ಓಟವನ್ನು ನಿರ್ಮಲ್ ನೋವಾ ಟಾಮ್ ಅವರು 46.05 ಸೆಕೆಂಡ್‍ಗಳಲ್ಲಿ ಮುಗಿಸಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು. ಈ ಮೂಲಕ ಎಲ್ಲಾ ಕ್ರಿಡಾಪಟುಗಳು ಭಾರತದ ಕೀರ್ತಿಯನ್ನುನ್ನು ಉತ್ತುಂಗಕ್ಕೆ ಏರಿಸಿದ್ದಾರೆ.

  • 15 ದಿನದಲ್ಲಿ 4 ಚಿನ್ನದ ಪದಕ ಗೆದ್ದ ಹಿಮಾದಾಸ್

    15 ದಿನದಲ್ಲಿ 4 ಚಿನ್ನದ ಪದಕ ಗೆದ್ದ ಹಿಮಾದಾಸ್

    ನವದೆಹಲಿ: ವೇಗದ ಓಟಗಾರ್ತಿ ಹಿಮಾದಾಸ್ ಜೆಕ್ ಗಣರಾಜ್ಯದಲ್ಲಿ ನಡೆದ ಟ್ಯಾಬರ್ ಅಥ್ಲೆಟಿಕ್ಸ್ ಮೀಟ್‍ನಲ್ಲಿ 200 ಮೀಟರ್ ಓಟದಲ್ಲಿ ಮೊದಲ ಸ್ಥಾನ ಪಡೆದು ಚಿನ್ನದ ಪದಕ ಗೆದ್ದಿದ್ದಾರೆ. ಈ ಮೂಲಕ 15 ದಿನಗಳಲ್ಲಿ ಬರೋಬ್ಬರಿ ನಾಲ್ಕು ಚಿನ್ನದ ಪದಕವನ್ನು ಪಡೆದುಕೊಂಡಿರುವ ಹೆಗ್ಗಳಿಕೆಗೆ ಹಿಮಾದಾಸ್ ಪಾತ್ರವಾಗಿದ್ದಾರೆ.

    ಹಿಮಾದಾಸ್ ಅವರು 200 ಮೀಟರ್ ಓಟವನ್ನು 23.25 ಸೆಕೆಂಡ್‍ನಲ್ಲಿ ಪೂರ್ಣಗೊಳಿಸುವ ಮೂಲಕ ನಾಲ್ಕನೇ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಟ್ಯಾಬರ್ ಅಥ್ಲೆಟಿಕ್ಸ್ ಮೀಟ್‍ನಲ್ಲಿ ಭಾರತದ ಮತ್ತೊಬ್ಬ ಓಟಗಾರ್ತಿ ವಿ.ಕೆ. ವಿಸ್ಮಯ ಅವರು 23.43 ಸೆಕೆಂಡ್‍ಗಳಲ್ಲಿ ಓಡುವ ಮೂಲಕ ಬೆಳ್ಳಿ ಪದಕವನ್ನು ಪಡೆದು ಎರಡನೇ ಸ್ಥಾನದಲ್ಲಿದ್ದಾರೆ.

    ಹಿಮಾದಾಸ್ ಜುಲೈ 2 ರಿಂದ ಇದುವರೆಗೂ ಒಟ್ಟು ನಾಲ್ಕು ಚಿನ್ನದ ಪದಕ ಗೆದ್ದಿದ್ದಾರೆ. ಮೊದಲನೆಯದಾಗಿ ಯುರೋಪ್‍ನಲ್ಲಿ ನಡೆದಿದ್ದ ಸ್ಪರ್ಧೆಯಲ್ಲಿ ಮೊದಲ ಚಿನ್ನ ಪದಕವನ್ನು ತಮ್ಮದಾಗಿಸಿಕೊಂಡಿದ್ದರು.

    ನಾಲ್ಕು ಚಿನ್ನದ ಪದಕ:
    ಜುಲೈ 2ರಂದು ಪೊಲೆಂಡ್‍ನಲ್ಲಿ ನಡೆದಿದ್ದ ಪೊಜ್ನಾನ್ ಅಥ್ಲೆಟಿಕ್ಸ್ ಪ್ರಿಕ್ಸ್ ನಲ್ಲಿ ಹಿಮಾದಾಸ್ ಅವರು 200 ಮೀಟರ್ ಓಟವನ್ನು 23.65 ಸೆಕೆಂಡ್‍ಗಳಲ್ಲಿ ಮುಗಿಸಿ ಮೊದಲ ಚಿನ್ನ ಗೆದ್ದಿದ್ದರು. ನಂತರ ಜುಲೈ 8 ರಂದು ಕುಟ್ನೊ ಅಥ್ಲೆಟಿಕ್ಸ್ ಮೀಟ್‍ನಲ್ಲಿ 200 ಮೀಟರ್ ದೂರವನ್ನು 23.97 ಸೆಕೆಂಡ್‍ಗಳಲ್ಲಿ ಕ್ರಮಿಸಿ ಎರಡನೇ ಚಿನ್ನ ಪದಕವನ್ನು ಗೆದ್ದಿದ್ದರು. ಜುಲೈ 13 ರಂದು ಜೆಕ್ ಗಣರಾಜ್ಯದಲ್ಲಿ ನಡೆದ ಕ್ಲಾಡ್ನೊ ಅಥ್ಲೆಟಿಕ್ಸ್ ಮೀಟ್‍ನಲ್ಲಿ 200 ಮೀಟರ್ ಸ್ಪರ್ಧೆಯನ್ನು 23.43 ಸೆಕೆಂಡ್‍ಗಳಲ್ಲಿ ಪೂರ್ಣಗೊಳಿಸಿ ಮೂರನೇ ಚಿನ್ನದ ಪದಕವನ್ನು ಪಡೆದುಕೊಂಡಿದ್ದರು. ಈಗ 200 ಮೀಟರ್ ಓಟವನ್ನು 23.25 ಸೆಕೆಂಡ್‍ನಲ್ಲಿ ಪೂರ್ಣಗೊಳಿಸುವ ಮೂಲಕ ನಾಲ್ಕನೇ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.

    ಈ ಬಗ್ಗೆ ಹಿಮಾದಾಸ್ ಟ್ವೀಟ್ ಮಾಡಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಹಿಮಾದಾಸ್ ತಮ್ಮ 200 ಮೀಟರ್ ಓಟವನ್ನು 23.25 ಅಂತರದಲ್ಲಿ ಮುಗಿಸುವ ಮೂಲಕ ಮೊದಲ ಸ್ಪರ್ಧೆಯ ಓಟದ ಸಮಯವನ್ನು ಇನ್ನಷ್ಟು ಉತ್ತಮಪಡಿಸಿಕೊಂಡಿದ್ದಾರೆ.

    ಪುರುಷರ ವಿಭಾಗದಲ್ಲಿ ಭಾರತದ ಮೊಹಮ್ಮದ್ ಅನಾಸ್ ಅವರು 400ಮೀ ಓಟವನ್ನು 45.40 ಸೆಕೆಂಡ್‍ಗಳಲ್ಲಿ ಪೂರ್ಣಗೊಳಿಸುವ ಮೂಲಕ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ.

  • ರನ್ ಮಷಿನ್ ಕೊಹ್ಲಿಗೆ ಖೇಲ್ ರತ್ನ ಪ್ರಶಸ್ತಿ – ಯಾರಿಗೆ ಯಾವ ಪ್ರಶಸ್ತಿ?

    ರನ್ ಮಷಿನ್ ಕೊಹ್ಲಿಗೆ ಖೇಲ್ ರತ್ನ ಪ್ರಶಸ್ತಿ – ಯಾರಿಗೆ ಯಾವ ಪ್ರಶಸ್ತಿ?

    – ಕನ್ನಡಿಗ ಸಿಎ ಕುಟ್ಟಪ್ಪ ದ್ರೋಣಚಾರ್ಯ, ರೋಹನ್ ಬೋಪಣ್ಣಗೆ ಅರ್ಜುನ ಪ್ರಶಸ್ತಿ

    ನವದೆಹಲಿ: ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ವೇಟ್ ಲಿಫ್ಟಿಂಗ್ ಮೀರಾಬಾಯಿ ಚಾನುಗೆ ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

    ಬಾಕ್ಸಿಂಗ್ ಕೋಚ್ ಕನ್ನಡಿಗ ಸಿಎ ಕುಟ್ಟಪ್ಪ ಸೇರಿದಂತೆ ಎಂಟು ಮಂದಿ ದ್ರೋಣಾಚಾರ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಏಷ್ಯನ್ ಗೇಮ್ಸ್ ನಲ್ಲಿ ಚಿನ್ನ ಗೆದ್ದಿದ್ದ ಶೂಟರ್ ರಾಹಿ ಸರ್ನೋಬತ್, ಅಥ್ಲೆಟ್ ಹಿಮಾದಾಸ್, ಟೆನ್ನಿಸ್ ಆಟಗಾರ ಕನ್ನಡಿಗ ರೋಹನ್ ಬೋಪಣ್ಣ, ಜಾವೆಲಿನ್ ಥ್ರೋ ಆಟಗಾರ ನೀರಜ್ ಚೋಪ್ರಾ ಸೇರಿದಂತೆ 20 ಮಂದಿ ಅರ್ಜುನ ಪ್ರಶಸ್ತಿ ಘೋಷಣೆಯಾಗಿದೆ. ಈ ಪ್ರಶಸ್ತಿಗಳನ್ನ ಸೆಪ್ಟೆಂಬರ್ 25ರಂದು ರಾಷ್ಟ್ರಪತಿ ಭವನದಲ್ಲಿ ವಿತರಿಸಲಾಗುತ್ತದೆ.

    https://twitter.com/IndiaSports/status/1042745314510163968

    ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿರುವ ಕೊಹ್ಲಿ ಹೆಸರು ಈ ಹಿಂದೆ 2016 ಹಾಗೂ 2017 ರಲ್ಲೂ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗಿತ್ತು. 2017 ರಲ್ಲಿ ಕೊಹ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದರು. ಉಳಿದಂತೆ ಖೇಲ್ ರತ್ನ ಪ್ರಶಸ್ತಿ ಪಡೆದ 3ನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಯನ್ನು ಕೊಹ್ಲಿ ಪಡೆದಿದ್ದಾರೆ. ಈ ಹಿಂದೆ 1997 ರಲ್ಲಿ ಸಚಿನ್ ತೆಂಡೂಲ್ಕರ್, 2007 ರಲ್ಲಿ ಎಂಎಸ್ ಧೋನಿ ಖೇಲ್ ರತ್ನ ಪ್ರಶಸ್ತಿ ಪಡೆದಿದ್ದರು. ಮಹಿಳಾ ಕ್ರಿಕೆಟ್ ತಂಡದ ಸ್ಮೃತಿ ಮಂದಾನ ಅರ್ಜುನ ಪ್ರಶಸ್ತಿ, ಕ್ರಿಕೆಟ್ ಕೋಚ್ ತಾರಕ್ ಸಿನ್ಹಾ ಜೀವಮಾನ ಸಾಧನೆಗಾಗಿ ದ್ರೋಣಾಚಾರ್ಯ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.

    https://twitter.com/PIB_India/status/1042713412621357056

    ರಾಜೀವ್ ಗಾಂಧಿ ಖೇಲ್‍ರತ್ನ ಪ್ರಶಸ್ತಿ: ವಿರಾಟ್ ಕೊಹ್ಲಿ (ಕ್ರಿಕೆಟ್), ಮೀರಾಬಾಯಿ ಚಾನು (ವೇಟ್‍ಲಿಫ್ಟಿಂಗ್).

    ದ್ರೋಣಾಚಾರ್ಯ ಪ್ರಶಸ್ತಿ: ಕುಟ್ಟಪ್ಪ (ಬಾಕ್ಸಿಂಗ್), ವಿಜಯ್ ಶರ್ಮಾ (ವೇಟ್‍ಲಿಫ್ಟಿಂಗ್), ಸಿ.ಎ. ಶ್ರೀನಿವಾಸ್ ರಾವ್ (ಟೇಬಲ್ ಟೆನ್ನಿಸ್), ಎಸ್.ಎಸ್. ಪನ್ನು (ಅಥ್ಲೆಟಿಕ್ಸ್), ಕ್ಲಾರೆನ್ಸ್ ಲೋಬೊ (ಹಾಕಿ), ತಾರಕ್ ಸಿನ್ಹಾ (ಕ್ರಿಕೆಟ್), ಜೀವನ್ ಕುಮಾರ್ ಶರ್ಮ (ಜೂಡೋ), ವಿ.ಆರ್. ಬೀಡು (ಅಥ್ಲೆಟಿಕ್ಸ್).

    ಧ್ಯಾನ್‍ಚಂದ್ ಪ್ರಶಸ್ತಿ : ಸತ್ಯದೇವ್ ಪ್ರಸಾದ್ (ಆರ್ಚರಿ), ಭರತ್ ಚೆಟ್ರಿ (ಹಾಕಿ), ಬಾಬ್ಬಿ ಅಲೋಶಿಯಸ್ (ಅಥ್ಲೆಟಿಕ್ಸ್), ದಾದು ಚೌಗುಲೆ (ಕುಸ್ತಿ).

    ಅರ್ಜುನ ಪ್ರಶಸ್ತಿ : ನೀರಜ್ ಚೋಪ್ರಾ (ಅಥ್ಲೆಟಿಕ್ಸ್), ಎನ್. ಸಿಕ್ಕಿ ರೆಡ್ಡಿ (ಬ್ಯಾಡ್ಮಿಂಟನ್), ಪೂಜಾ ಕಾದಿಯನ್ (ವುಶು), ಜಿನ್ಸನ್ ಜಾನ್ಸನ್ (ಅಥ್ಲೆಟಿಕ್ಸ್), ಹಿಮಾ ದಾಸ್ (ಅಥ್ಲೆಟಿಕ್ಸ್), ಸತೀಶ್ ಕುಮಾರ್ (ಬಾಕ್ಸಿಂಗ್), ಸ್ಮತಿ ಮಂಧನಾ (ಕ್ರಿಕೆಟ್), ಶುಭಂಕರ್ ಶರ್ಮ (ಗಾಲ್ಫ್), ಮನ್‍ಪ್ರೀತ್ ಸಿಂಗ್ (ಹಾಕಿ), ಸವಿತಾ ಪೂನಿಯ (ಹಾಕಿ), ರವಿ ರಾಥೋರ್ (ಪೋಲೊ), ರಾಹಿ ಸರನೋಬತ್ (ಶೂಟಿಂಗ್), ಅಂಕುರ್ ಮಿತ್ತಲ್ (ಶೂಟಿಂಗ್), ಶ್ರೇಯಸಿ ಸಿಂಗ್ (ಶೂಟಿಂಗ್), ಮಣಿಕಾ ಬಾತ್ರಾ (ಟೇಬಲ್ ಟೆನ್ನಿಸ್), ಜಿ. ಸಥಿಯನ್ (ಟೇಬಲ್ ಟೆನ್ನಿಸ್), ರೋಹನ್ ಬೋಪಣ್ಣ (ಟೆನ್ನಿಸ್), ಸುಮಿತ್ (ಕುಸ್ತಿ), ಅಂಕುರ್ ಧಾಮ (ಪ್ಯಾರಾ ಅಥ್ಲೆಟಿಕ್ಸ್), ಮನೋಜ್ ಸರ್ಕಾರ್ (ಪ್ಯಾರಾ ಅಥ್ಲೆಟಿಕ್ಸ್).

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ಭರ್ಜರಿ ಸ್ವಾಗತ ಪಡೆದ ಹಿಮಾದಾಸ್

    ಭರ್ಜರಿ ಸ್ವಾಗತ ಪಡೆದ ಹಿಮಾದಾಸ್

    -ಅಭಿಮಾನಿಗಳು ನೀಡಿದ್ರು ಬಿರುದು

    ಗುವಾಹತಿ: ಏಷ್ಯನ್ ಗೇಮ್ಸ್ ನಲ್ಲಿ ಪದಕ ಗೆದ್ದು ಹೆಮ್ಮೆ ತಂದಿದ್ದ ಹಿಮಾದಾಸ್ ತವರಿಗೆ ಆಗಮಿಸಿದ್ದು, ಅಸ್ಸಾಂ ಸರ್ಕಾರ ಹಾಗೂ ಅಭಿಮಾನಿಗಳು ಹಿಮಾದಾಸ್‍ಗೆ ಭರ್ಜರಿ ಸ್ವಾಗತ ಕೋರಿದ್ದಾರೆ.

    18 ವರ್ಷದ ಹಿಮಾದಾಸ್ ಏಷ್ಯನ್ ಗೇಮ್ಸ್ ನಲ್ಲಿ ಭರ್ಜರಿ ಪ್ರದರ್ಶನ ನೀಡಿ ಭಾರತದ ಕೀರ್ತಿಯನ್ನು ವಿಶ್ವಮಟ್ಟದಲ್ಲಿ ಹಾರಾಡುವಂತೆ ಮಾಡಿದ್ದರು. ಏಷ್ಯನ್ ಗೇಮ್ಸ್ ಬಳಿಕ ಮೊದಲ ಬಾರಿಗೆ ಅಸ್ಸಾಂಗೆ ಭೇಟಿ ನೀಡಿದ ಹಿಮಾದಾಸ್‍ಗೆ ಸಿಎಂ ಸರಬಾನಂದ ಸೊನೋವಾಲ್ ಸ್ವಾಗತ ಕೋರಿದರು. ಈ ವೇಳೆ ಹಿಮಾದಾಸ್‍ಗೆ ‘ಧಿಂಗ್ ಎಕ್ಸ್ ಪ್ರೆಸ್’ ಎಂಬ ಬಿರುದು ನೀಡಿ ಅಭಿಮಾನಿಗಳು ಸಂಭ್ರಮಿಸಿದರು. ಈ ವೇಳೆ ಹಲವು ರಾಜಕೀಯ ಮುಖಂಡರು ಹಾಜರಿದ್ದರು.

    ವಿಮಾನ ನಿಲ್ದಾಣದಲ್ಲಿ ಹಿಮಾದಾಸ್ ಆಗಮನಕ್ಕಾಗಿಯೇ ವಿಶೇಷ ರೆಡ್ ಕಾರ್ಪೆಟ್ ವ್ಯವಸ್ಥೆ ಮಾಡಲಾಗಿತ್ತು. ಅದರ ಮೇಲೆ 1.2.3.4.5 ಎಂದು ಸಂಖ್ಯೆ ನೀಡಿ, ರನ್ನಿಂಗ್ ಪಥದಂತೆ ಮಾಡಲಾಗಿತ್ತು. ಈ ವೇಳೆ 25 ಮಂದಿಯ ಅಸ್ಸಾಂ ವಿಶೇಷ ಮಹಿಳಾ ಪೊಲೀಸ್ ಪಡೆ ಹಿಮಾದಾಸ್‍ಗೆ ಸ್ವಾಗತ ಕೋರಿದರು. ಸಿಎಂ ಸರ್ಬಾನಂದ ಅವರು ಸಾಂಪ್ರದಾಯಿಕ ಶಾಲು ನೀಡಿ ಹಿಮಾದಾಸ್‍ಗೆ ಗೌರವ ನೀಡಿದರು.

    ಈ ವೇಳೆ ಐಷಾರಾಮಿ ಕಾರಿನಲ್ಲಿ ಮೆರವಣಿಗೆ ಮೂಲಕ ಹಿಮಾದಾಸ್‍ರನ್ನು ಕರೆದುಕೊಂಡು ಹೋಗಲಾಯಿತು. ರಸ್ತೆ ಎರಡು ಬದಿ ನೆರೆದಿದ್ದ ಅಭಿಮಾನಿಗಳು, ವಿದ್ಯಾರ್ಥಿಗಳು, ಕ್ರೀಡಾಪಟುಗಳು, ರಾಜಕೀಯ ನಾಯಕರು, ಸಾರ್ವಜನಿಕರು ಹಿಮಾದಾಸ್ ಹೆಸರು ಕರೆದು ಘೋಷಣೆ ಕೂಗಿದರು.

    ಹಿಮಾದಾಸ್ ಏಷ್ಯನ್ ಕ್ರೀಡಾಕೂಟದಲ್ಲಿ 400 ಮೀ ಓಟವನ್ನು 51.46 ಸೆಕೆಂಡ್‍ಗಳಲ್ಲಿ ಪೂರ್ಣಗೊಳಿಸಿ ಬೆಳ್ಳಿ ಪದಕ ಪಡೆದಿದ್ದರು. ಅಲ್ಲದೇ 4*400 ರಿಲೇ ಓಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಹಿಮಾದಾಸ್ ರನ್ನು ಅಸ್ಸಾಂ ಸರ್ಕಾರ ಕ್ರೀಡಾ ರಾಯಭಾರಿಯಾಗಿ ಆಯ್ಕೆ ಮಾಡಿ ಈ ಹಿಂದೆಯೇ ಗೌರವಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • 400 ಮೀಟರ್ ರೇಸ್: ಹಿಮಾದಾಸ್, ಅನಾಸ್‍ಗೆ ಬೆಳ್ಳಿ

    400 ಮೀಟರ್ ರೇಸ್: ಹಿಮಾದಾಸ್, ಅನಾಸ್‍ಗೆ ಬೆಳ್ಳಿ

    ಜಕರ್ತಾ: ಏಷ್ಯನ್ ಗೇಮ್ಸ್ ಅಥ್ಲೆಟಿಕ್ಸ್ 400 ಮೀಟರ್ ಓಟದಲ್ಲಿ ಭಾರತದ ಹಿಮದಾಸ್ ಮತ್ತು ಮೊಹಮ್ಮದ್ ಅನಾಸ್ ಬೆಳ್ಳಿ ಪದಕ ಪಡೆದು ಮಿಂಚಿದ್ದಾರೆ.

    ಫಿನ್ ಲ್ಯಾಂಡ್ ನಲ್ಲಿ ನಡೆದ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದ ಹಿಮಾ ದಾಸ್ ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದರು.

    ಹಿಮಾ ದಾಸ್ 50.79 ಸೆಕೆಂಡ್ ನಲ್ಲಿ ಗುರಿ ಮುಟ್ಟಿದರೆ, ಮೊಹಮ್ಮದ್ ಅನಾಸ್ 45.69 ಸೆಕೆಂಡ್ ನಲ್ಲಿ ಗುರಿ ಮುಟ್ಟಿ ಬೆಳ್ಳಿ ಪದಕ ಗೆದ್ದಿದ್ದಾರೆ.

    ಶನಿವಾರ ನಡೆದ ಅರ್ಹತಾ ಸುತ್ತಿನ 400 ಮೀ ಓಟದ ಸ್ಪರ್ಧೆಯ ಹಿಮಾ ದಾಸ್ ರವರು 51.00 ಸೆಕೆಂಡುಗಳಲ್ಲಿ ಗುರಿ ತಲುಪಿ ಭಾರತದ ಪರ ದಾಖಲೆ ಬರೆದಿದ್ದರು. ಫೈನಲ್ ನಲ್ಲಿ ತಮ್ಮದೇ ದಾಖಲೆಯನ್ನು ಮುರಿದು 50.79 ಸೆಕೆಂಡಿನಲ್ಲಿ ಗುರಿ ಮುಟ್ಟಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://twitter.com/col_banshtu/status/1033692823118213121

  • ಅಸ್ಸಾಂನ ಕ್ರೀಡಾ ರಾಯಭಾರಿಯಾಗಿ ಹಿಮಾದಾಸ್ ಆಯ್ಕೆ

    ಅಸ್ಸಾಂನ ಕ್ರೀಡಾ ರಾಯಭಾರಿಯಾಗಿ ಹಿಮಾದಾಸ್ ಆಯ್ಕೆ

    ದಿಸ್ಪುರ್: ಭಾರತದ ಕ್ರೀಡಾಪಟು ಹಿಮಾದಾಸ್ ಅವರನ್ನು ರಾಜ್ಯಕ್ಕೆ ಮೊದಲ ಕ್ರೀಡಾ ರಾಯಭಾರಿ ಆಗಿ ಮುಖ್ಯಮಂತ್ರಿ ಸರಬಾನಂದ ಸೊನೋವಾಲ್ ರವರು ಆಯ್ಕೆ ಮಾಡಿದ್ದಾರೆ.

    ಇತ್ತೀಚೆಗೆ ಫಿನ್ ಲ್ಯಾಂಡ್ ನಲ್ಲಿ ನಡೆದ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಅಥ್ಲೀಟ್ ಹಿಮಾದಾಸ್ ಚಿನ್ನದ ಪದಕ ಗೆದ್ದು ದೇಶದ ಗೌರವ ಹೆಚ್ಚಿಸಿದ್ದರು. ಈ ವೇಳೆ ಸಿಎಂ ಸೊನೋವಾಲ್ ರಾಜ್ಯದ ಕ್ರೀಡಾ ರಾಯಭಾರಿ ಎಂದು ಘೋಷಣೆಯನ್ನು ನೀಡಿದ್ದರು. ಇದೇ ಮೊದಲ ಬಾರಿಗೆ ಅಸ್ಸಾಂ ನಲ್ಲಿ ಕ್ರೀಡಾ ರಾಯಭಾರಿಯನ್ನು ಆಯ್ಕೆ ಮಾಡಿದ್ದಾರೆ.

    ಫ್ರಾನ್ಸ್ ನಲ್ಲಿ ಆಯೋಜಿಸಿದ ಮಹಿಳಾ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ 51.46 ಸೆಕೆಂಡ್ ಗಳಲ್ಲಿ ಸ್ಪರ್ಧೆಯನ್ನು ಪೂರ್ಣಗೊಳಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದರು. ಈ ಮೂಲಕ 18 ನೇ ವಯಸ್ಸಿನಲ್ಲಿಯೇ ಇತಿಹಾಸವನ್ನು ಸೃಷ್ಟಿಸುವಲ್ಲಿ ಹಿಮಾದಾಸ್ ಯಶಸ್ವಿಯಾದರು.

    ಈ ಮುಂಚಿನ ಓಟದ ಹಿಮಾದಾಸ್ ರವರ ಸಾಧನೆಗೆ ಸಿಎಂ ಅಭಿನಂದಿಸಿದ್ದು, ಹಿಮಾದಾಸ್‍ರವರ ಸ್ಫೂರ್ತಿಯಿಂದ, ಅವಕಾಶಗಳಿಂದ ಮತ್ತು ಸಾಧನೆಗಳಿಂದ ಅಸ್ಸಾಂನ ಬೆಳವಣಿಗೆಗೆ ಪೂರಕವಾಗಲಿವೆ ಎಂದರು.

    ಅಂದಹಾಗೇ ಹಿಮಾದಾಸ್ ಅವರು ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ 51.46 ಸೆಕೆಂಡ್ ಗಳಲ್ಲಿ ಓಟವನ್ನು ಪೂರ್ಣಗೊಳಿಸಿದ್ದು, ಆದರೆ ಕಳೆದ ತಿಂಗಳು ಗುವಾಹತಿಯಲ್ಲಿ ನಡೆದ ನ್ಯಾಷನಲ್ ಚಾಂಪಿಯನ್ ಶಿಪ್ ನಲ್ಲಿ ಕೇವಲ 51.13 ಸೆಕೆಂಡ್ ಗಳಲ್ಲಿ 400 ಮೀಟರ್ ದೂರವನ್ನು ಕ್ರಮಿಸಿದ್ದರು.

  • ನಟ ಪುನೀತ್, ಡಿಸಿಪಿ ಚನ್ನಣ್ಣನವರಿಂದ ಹಿಮಾದಾಸ್ ಗೆ ಅಭಿನಂದನೆ

    ನಟ ಪುನೀತ್, ಡಿಸಿಪಿ ಚನ್ನಣ್ಣನವರಿಂದ ಹಿಮಾದಾಸ್ ಗೆ ಅಭಿನಂದನೆ

    ಬೆಂಗಳೂರು: ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ನಲ್ಲಿ ಭಾಗವಹಿಸಿ ಭಾರತದ ವಿಜಯ ಪತಾಕೆ ಹಾರಿಸಿದ್ದ ಹಿಮಾದಾಸ್ ಗೆ ಡಿಸಿಪಿ ರವಿ ಡಿ ಚನ್ನಣ್ಣನವರ್ ಮತ್ತು ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.

    ನಟ ಪುನೀತ್ ಅವರು ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಾಗೂ ಡಿಸಿಪಿ ಚೆನ್ನಣ್ಣನವರ್ ಟ್ವಿಟ್ಟರ್ ಮೂಲಕ ಹಿಮಾದಾಸ್ ಗೆ ಅಭಿನಂದನೆ ಸಲ್ಲಿಸಿದ್ದಾರೆ. ಪುನೀತ್ ಅವರು “ವಿಶ್ವ ಯು20 ಚಾಂಪಿನ್ ಶಿಪ್ ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಹಿಮಾದಾಸ್ ಗೆ ಅಭಿನಂದನೆಗಳು’ ಎಂದು ಹಿಮಾದಾಸ್ ಫೋಟೋ ಹಾಕಿ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಅಥ್ಲೀಟ್ ಹಿಮಾದಾಸ್ ಗೆ ಡಿಸಿಎಂ ಸಂಸ್ಥೆಯಿಂದ 10 ಲಕ್ಷ ಬಹುಮಾನ

    ಡಿಸಿಪಿ ಚನ್ನಣ್ಣನವರ್, “ಭಾರತ ಹೆಮ್ಮೆ ಪಡುವ ಕ್ಷಣಗಳಾಗಿದ್ದು, ಜಾಗತಿಕ ಸ್ಪರ್ಧೆಯಲ್ಲಿ ಮೊದಲ ಭಾರತೀಯ ಮಹಿಳೆ ಚಿನ್ನದ ಪದಕವನ್ನು ಹಿಮಾದಾಸ್ ಪಡೆದುಕೊಂಡಿದ್ದಾರೆ. ಹಿಮಾದಾಸ್ 400 ಮೀಟರ್ ಓಟವನ್ನು ಕೇವಲ 51.46 ಸೆಕೆಂಡ್ ಗಳಲ್ಲಿ ಪೂರ್ಣ ಮಾಡಿದ್ದಾರೆ. ಅವರಿಗೆ ಅಭಿನಂದನೆಗಳು” ಎಂದು ಹಿಮಾದಾಸ್ ಗೆದ್ದ ಫೋಟೋಗಳನ್ನು ಹಾಕಿ ಟ್ವೀಟ್ ಮಾಡಿದ್ದಾರೆ.

    ಗುರುವಾರ ಫಿನ್ ಲ್ಯಾಂಡ್ ನಲ್ಲಿ ನಡೆದ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಅಥ್ಲೀಟ್ ಹಿಮದಾಸ್ ಚಿನ್ನದ ಪದಕ ಗೆದ್ದು ದೇಶದ ಗೌರವ ಹೆಚ್ಚಿಸಿದ್ದರು. 18 ವರ್ಷದ ಹಿಮಾ ದಾಸ್ 400 ಮೀಟರ್ ಓಟವನ್ನು 51.46 ಸೆಕೆಂಡ್ ಗಳಲ್ಲಿ ಪೂರ್ಣಗೊಳಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದರು. ಹಿಮಾ ದಾಸ್ ಅವರು ಮೂಲತಃ ಅಸ್ಸಾಂನ ನಾಗೋನ್ ಜಿಲ್ಲೆಯವರಾಗಿದ್ದು, ಕೃಷಿ ಹಿನ್ನೆಲೆ ಹೊಂದಿರುವ ಕುಟುಂಬದಲ್ಲಿ ಜನಿಸಿದ್ದಾರೆ. ಇದೀಗ ವಿಶ್ವದಾಖಲೆ ಮರೆದು ದೇಶದ ಮನೆಮಾತಾಗಿದ್ದಾರೆ.

    https://www.instagram.com/p/BlPsA-6ARqT/?hl=en&taken-by=puneethrajkumar.official

  • ಅಥ್ಲೀಟ್ ಹಿಮಾದಾಸ್ ಗೆ ಡಿಸಿಎಂ ಸಂಸ್ಥೆಯಿಂದ 10 ಲಕ್ಷ ಬಹುಮಾನ

    ಅಥ್ಲೀಟ್ ಹಿಮಾದಾಸ್ ಗೆ ಡಿಸಿಎಂ ಸಂಸ್ಥೆಯಿಂದ 10 ಲಕ್ಷ ಬಹುಮಾನ

    ಬೆಂಗಳೂರು: ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ನಲ್ಲಿ ಭಾಗವಹಿಸಿ ಭಾರತದ ವಿಜಯ ಪತಾಕೆ ಹಾರಿಸಿದ್ದ ಹಿಮಾದಾಸ್ ಗೆ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರು ಬಹುಮಾನ ನೀಡಿದ್ದಾರೆ.

    ಸಿದ್ದಾರ್ಥ್ ಅಕಾಡೆಮಿ ವತಿಯಿಂದ ಹಿಮಾದಾಸ್‍ ಗೆ 10 ಲಕ್ಷ ಬಹುಮಾನ ನೀಡಿದ್ದಾರೆ. ಈ ಹಣವನ್ನು ಹಿಮಾದಾಸ್ ಗೆ ನೀಡಲು ನನಗೆ ಹೆಮ್ಮೆಯಾಗುತ್ತಿದೆ ಅಂತ ಡಿಸಿಎಂ ಜಿ ಪರಮೇಶ್ವರ್ ಅವರು ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ವಿಶ್ವ ಅಥ್ಲೆಟಿಕ್ಸ್ ನಲ್ಲಿ ಚಿನ್ನ ಪದಕ ತಂದುಕೊಟ್ಟ ಹಿಮಾ ದಾಸ್ ಚಿರತೆಯ ಓಟದ ವಿಡಿಯೋ ನೋಡಿ

    `ತಮ್ಮ ಪರಿಶ್ರಮ, ಸಾಧನೆಯಿಂದ ಭಾರತದಾದ್ಯಂತ ಸಾವಿರಾರು ಕ್ರೀಡಾಪಟುಗಳಿಗೆ ಹಿಮಾದಾಸ್ ಸ್ಫೂರ್ತಿಯಾಗಿದ್ದಾರೆ. ಅಂತಹವರನ್ನು ನಾನು ಅಭಿನಂದಿಸುತ್ತೇನೆ. ಜೊತೆಗೆ ಸಿದ್ದಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಪರವಾಗಿ 10 ಲಕ್ಷ ರೂ. ಬಹುಮಾನ ಕೊಡುತ್ತಿರುವುದು ನನಗೆ ಸಂತಸವಾಗಿದೆ” ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ರಾಷ್ಟ್ರಪತಿ ಕೋವಿಂದ್, ಪ್ರಧಾನಿ ಮೋದಿಯಿಂದ ಹಿಮಾದಾಸ್ ಗೆ ಅಭಿನಂದನೆ

    ಗುರುವಾರ ಫಿನ್ ಲ್ಯಾಂಡ್ ನಲ್ಲಿ ನಡೆದ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಅಥ್ಲೀಟ್ ಹಿಮದಾಸ್ ಚಿನ್ನದ ಪದಕ ಗೆದ್ದು ದೇಶದ ಗೌರವ ಹೆಚ್ಚಿಸಿದ್ದರು. 18 ವರ್ಷದ ಹಿಮಾ ದಾಸ್ 400 ಮೀಟರ್ ಓಟವನ್ನು 51.46 ಸೆಕೆಂಡ್ ಗಳಲ್ಲಿ ಪೂರ್ಣಗೊಳಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದರು. ಹಿಮಾ ದಾಸ್ ಅವರು ಮೂಲತಃ ಅಸ್ಸಾಂನ ನಾಗೋನ್ ಜಿಲ್ಲೆಯವರಾಗಿದ್ದು, ಕೃಷಿ ಹಿನ್ನೆಲೆ ಹೊಂದಿರುವ ಕುಟುಂಬದಲ್ಲಿ ಜನಿಸಿದ್ದಾರೆ. ಇದೀಗ ವಿಶ್ವದಾಖಲೆ ಮರೆದು ಮನೆಮಾತಾಗಿದ್ದಾರೆ.