Tag: ಹಿಜಾಬ್

  • ಇರಾನ್ ನಾಯಕನ ಪುತ್ರಿಯ ವಿವಾಹದಲ್ಲಿಲ್ಲ ಹಿಜಾಬ್ – ವೀಡಿಯೋ ವೈರಲ್, ನೆಟ್ಟಿಗರಿಂದ ಆಕ್ರೋಶ

    ಇರಾನ್ ನಾಯಕನ ಪುತ್ರಿಯ ವಿವಾಹದಲ್ಲಿಲ್ಲ ಹಿಜಾಬ್ – ವೀಡಿಯೋ ವೈರಲ್, ನೆಟ್ಟಿಗರಿಂದ ಆಕ್ರೋಶ

    ಟೆಹ್ರಾನ್: ಇರಾನ್‌ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ (Ayatollah Ali Khamenei) ನೇತೃತ್ವದ ಕಟ್ಟಾ ಇಸ್ಲಾಮಿಕ್ ಆಡಳಿತವು ಇದೀಗ ಹೊಸ ವಿವಾದಕ್ಕೆ ಸಿಲುಕಿಕೊಂಡಿದೆ. ಖಮೇನಿಯ ಆಪ್ತ ಸಹಾಯಕ ಶಮ್ಖಾನಿ (Ali Shamkhani) ಪುತ್ರಿಯ ವಿವಾಹದಲ್ಲಿ (Wedding) ವಧು ಹಾಗೂ ಆಕೆಯ ತಾಯಿ ಹಿಜಾಬ್ (Hijab) ಧರಿಸದೇ ಕಾಣಿಸಿಕೊಂಡಿದ್ದು ವಿವಾದಕ್ಕೀಡಾಗಿದೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    2024ರಲ್ಲಿ ಟೆಹ್ರಾನ್‌ನ ಐಷಾರಾಮಿ ಹೋಟೆಲ್‌ನಲ್ಲಿ ಈ ಮದುವೆ ನಡೆದಿದ್ದು, ಕಳೆದ ಮೂರ್ನಾಲ್ಕು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ಸದ್ದು ಮಾಡುತ್ತಿದೆ. ಹಿಜಾಬ್ ಧರಿಸುವುದು ಮಹಿಳೆಯ ಕರ್ತವ್ಯ ಎಂದು ಪ್ರತಿಪಾದಿಸುವ ಖಮೇನಿ ಆಪ್ತನ ಮಗಳ ಮದುವೆಯಲ್ಲೇ ನಿಯಮ ಉಲ್ಲಂಘನೆಯಾಗಿದೆ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ. ಈ ಮೂಲಕ ಇರಾನ್‌ನಲ್ಲಿ ಹಿಜಾಬ್ ವಿರುದ್ಧದ ಹೋರಾಟವನ್ನು ಬಲವಂತವಾಗಿ ಹತ್ತಿಕ್ಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶಮ್ಖಾನಿ ಮುಖವಾಡ ಕಳಚಿ ಬಿದ್ದಿದೆ. ಇದನ್ನೂ ಓದಿ: ಚಿತ್ರದುರ್ಗ| ವಿದ್ಯಾರ್ಥಿಗೆ ಮನಬಂದಂತೆ ಥಳಿಸಿದ ಶಿಕ್ಷಕ ಜೈಲುಪಾಲು

    ಹಿಜಾಬ್ ಕಡ್ಡಾಯಗೊಳಿಸುವ ಕಾನೂನು ತೆರವುಗೊಳಿಸುವಂತೆ ಇರಾನ್‌ನಾದ್ಯಂತ ಮಹಿಳೆಯರು 2022ರಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಈ ವೇಲೆ ಶಮ್ಖಾನಿ ರಾಷ್ಟ್ರೀಯ ಭದ್ರತಾ ಮಂಡಳಿಯ ನಾಯಕತ್ವ ವಹಿಸಿದ್ದರು. ಅಲ್ಲದೇ ಪ್ರತಿಭಟನೆಯಲ್ಲಿ ತೊಡಗಿದ್ದ ಮಹಿಳೆಯರನ್ನು ಹಿಂಸಿಸಲಾಗಿತ್ತು. ಆದರೆ ಶಮ್ಖಾನಿ ಪುತ್ರಿಯ ವಿವಾಹದಲ್ಲಿ ವಧು ಹಾಗೂ ಆಕೆಯ ತಾಯಿ ಹಿಜಾಬ್ ಧರಿಸದೇ ಇರುವುದು ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. ಇದನ್ನೂ ಓದಿ: ರಷ್ಯಾದಿಂದ ಶೀಘ್ರದಲ್ಲೇ ಇನ್ನಷ್ಟು S-400 ಭಾರತಕ್ಕೆ – 10,000 ಕೋಟಿ ಡೀಲ್‌ ಫೈನಲ್‌

    ವೀಡಿಯೋದಲ್ಲಿ ಶಮ್ಖಾನಿ ಪುತ್ರಿ ಬಿಳಿಬಣ್ಣದ ಸ್ಟಾçಪ್‌ಲೆಸ್ ಉಡುಗೆಯನ್ನು ಧರಿಸಿದ್ದು, ಪತ್ನಿ ನೀಲಿ ಬಣ್ಣದ ವೆಸ್ಟರ್ನ್ ಶೈಲಿಯ ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಜನರ ಕೆಂಗಣ್ಣಿಗೆ ಗುರಿಯಾಗಿದೆ. ಹಿಜಾಬ್ ಕಡ್ಡಾಯ ನಿಯಮವನ್ನು ದಶಕಗಳಿಂದ ಒತ್ತಾಯವಾಗಿ ಹೇರಲಾಗುತ್ತಿರುವ ಇರಾನ್‌ನಲ್ಲಿ ಈ ವೀಡಿಯೋ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ: H-1ಬಿ ವೀಸಾ ಶುಲ್ಕ ಹೆಚ್ಚಳ – ವಾಸ್ತವ್ಯ ಅವಧಿ ವಿಸ್ತರಣೆ ಕೋರಿದ ಅರ್ಜಿಗಳಿಗೆ ಅನ್ವಯಿಸಲ್ಲ

    ಇನ್ನು ಈ ಕುರಿತು ಇರಾನ್‌ನಿಂದ ಗಡಿಪಾರಾದ ಮಹಿಳಾ ಪರ ಹೋರಾಟಗಾರ್ತಿ ಮಸಿಹ್ ಅಲಿನೆಜಾದ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಇರಾನ್‌ನ ಉನ್ನತ ನಾಯಕರಲ್ಲಿ ಒಬ್ಬರಾದ ಶಮ್ಖಾನಿ ಅವರ ಮಗಳು ಸ್ಟಾçಪ್‌ಲೆಸ್ ಉಡುಗೆಯಲ್ಲಿ ಅದ್ಧೂರಿ ವಿವಾಹ ಮಾಡಿಕೊಂಡಿದ್ದಾರೆ. ಕೂದಲು ತೋರಿಸಿದ್ದಕ್ಕಾಗಿ ಅದೇ ಇರಾನ್‌ನಲ್ಲಿ ಸಾಮಾನ್ಯ ಮಹಿಳೆಯರನ್ನು ಹೊಡೆದು ಕೊಲ್ಲಲಾಯಿತು. ಇದನ್ನೇ ಬೂಟಾಟಿಕೆ ಎನ್ನುವುದು. ಇತರ ಹೆಣ್ಣುಮಕ್ಕಳಿಗೆ ಹೇಗಿರಬೇಕೆಂದು ಬೋಧಿಸುತ್ತಾರೆ. ಇವರ ಹೆಣ್ಣುಮಕ್ಕಳು ಡಿಸೈನರ್ ಉಡುಗೆ ಧರಿಸಿ ಓಡಾಡುತ್ತಾರೆ. ಗುಂಡು, ಲಾಠಿ ಪ್ರಹಾರ, ಜೈಲುಶಿಕ್ಷೆಯ ಮೂಲಕ ಇಸ್ಲಾಮಿಕ್ ಮೌಲ್ಯಗಳನ್ನು ಹೇರುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ತುಮಕೂರು | ಕೆರೆಗೆ ಬಿದ್ದು ತಂದೆ, ಮಗಳು ಸೇರಿ ಮೂವರು ಸಾವು

  • ಮುಸ್ಲಿಂ ಹೆಣ್ಣುಮಕ್ಕಳ ಹಾಗೂ ಕುಸ್ತಿ ಪಟುಗಳ ಬೆಂಬಲಕ್ಕೆ ನಿಂತ ನಟ ಕಿಶೋರ್

    ಮುಸ್ಲಿಂ ಹೆಣ್ಣುಮಕ್ಕಳ ಹಾಗೂ ಕುಸ್ತಿ ಪಟುಗಳ ಬೆಂಬಲಕ್ಕೆ ನಿಂತ ನಟ ಕಿಶೋರ್

    ಹಿಜಾಬ್ (hijab) ಹೋರಾಟ ಮತ್ತು ದೆಹಲಿಯಲ್ಲಿ ಕುಸ್ತಿಪಟುಗಳು ನಡೆಸುತ್ತಿರುವ ಹೋರಾಟದ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ ನಟ ಕಿಶೋರ್ (Kishor). ಇದೆಲ್ಲವೂ ಮನುವಾದಿಗಳ ಕುತಂತ್ರ ಎಂದು ಬಣ್ಣಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅವರು ಹಂಚಿಕೊಂಡ ಬರಹ ಇಲ್ಲಿದೆ.

    ಯಾವ ಮುಸಲ್ಮಾನ ಮಹಿಳೆ, ಪುರುಷ ಪ್ರಾಭಲ್ಯದ ಸಂಕೇತವಾದ ಹಿಜಾಬನ್ನು ವಿರೋಧಿಸಿಯೂ ವಿರೋಧಿಸದಂತೆ ಮೆಲ್ಲ ಮೆಲ್ಲನೆ ಅದರಿಂದ ಸ್ವತಂತ್ರಳಾಗಿ, ಶಿಕ್ಷಿತಳೂ, ಸಶಕ್ತಳೂ ಆಗುತ್ತಿದ್ದಳೊ ಅವಳನ್ನು ಅಡ್ಡಗಟ್ಟಿ ಅವಳಲ್ಲಿ ಭಯ ಹುಟ್ಟಿಸಿ, ಆಕೆ ತನ್ನ ಆತ್ಮರಕ್ಷಣೆಗಾಗಿ ತನ್ನ ಅಸ್ಮಿತೆಯ ಹುಡುಕಾಟದಲ್ಲಿ ತನ್ನನ್ನು ಬಂಧನದಲ್ಲಿಟ್ಟಿದ್ದ ಅದೇ ಹಿಜಾಬಿನ ಮೊರೆ ಹೋಗುವ ಹಾಗೆ ಮಾಡಿದ ಮನುವಾದಿಗಳ ಹಿಜಾಬು ಬ್ಯಾನ್ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಉರುಳಿಸಿತ್ತು.

    ಒಂದು ಹೆಣ್ಣು ಶಿಕ್ಷಣ ಪಡೆದರೆ ಅವಳ ಮುಂದಿನ ಇಡೀ ಪೀಳಿಗೆ ಶಿಕ್ಷಣ ಪಡೆಯುತ್ತದೆ. ಸರಕಾರಿ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಇಂದೂ ಸಹ ನೂರರಲ್ಲಿ ಹದಿನಾಲ್ಕು ಮುಸ್ಲಿಂ ಹೆಣ್ಣು ಮಕ್ಕಳು ಮಾತ್ರ ಕಾಲೇಜು ಶಿಕ್ಷಣ ಪಡೆಯಲು ಸಾಧ್ಯವಾಗಿದೆ. ಇಂಥಾ ಕಾಲದಲ್ಲಿ ಅದನ್ನೂ ತಡೆದು ಬಿಟ್ಟರೆ ಮುಸಲ್ಮಾನರನ್ನು ಮುಖ್ಯವಾಹಿನಿಯಿಂದ ಹೊರಗಿಡುವ ಷಡ್ಯಂತ್ರ ಯಶಸ್ವಿಯಾದಂತೆಯೇ ಸರಿ.

    ತನ್ನ ಮನೆ, ಸಂಬಂಧಿಕರು, ಮತ, ಸಂಪ್ರದಾಯವಾದ ಎಲ್ಲವನ್ನೂ ದಾಟಿ ಬಂದು ಕೊನೆಯ ಹಂತದಲ್ಲಿ ಶಿಕ್ಷಣ ವಂಚಿತಳಾಗುವುದಕ್ಕೆ ಕಾರಣ ಕೂಡ ಸ್ವಯಂ ಅವಳೇ ಆಗಿಬಿಟ್ಟರೆ? ದೇಶದ ಮುಖ್ಯವಾಹಿನಿಯಿಂದ ಮುಸ್ಲಿಂ ಮಹಿಳೆ ಮತ್ತು ಜನಾಂಗ ಎರಡೂ ಹೊರಗೆ, ಅದೂ ತನ್ನ ಕಾಲ ಮೇಲೆ ತಾನೇ ಕೊಡಲಿ ಹಾಕಿಕೊಂಡು. ಇದಲ್ಲವೇ ಮಾಸ್ಟರ್ ಸ್ಟ್ರೊಕ್.

    ಜಂತರ್ ಮಂತರ್ ನಲ್ಲಿ ಲೈಂಗಿಕ ದೌರ್ಜನದ ವಿರುದ್ಧ ಧರಣಿ ಕುಳಿತ ಹೆಣ್ಣುಮಕ್ಕಳು, ಅತ್ಯಾಚಾರಿಯ ಹೂಂಕಾರ, ಆಗಾಗ ಆ ಹೆಣ್ಣುಮಕ್ಕಳ ಮೇಲೇ ತನ್ನ ಶಕ್ತಿ ತೋರಿಸುವ ನರಸತ್ತ ಪೊಲೀಸ್, ಕಮಕ್ ಕಿಮಕ್ ಅನ್ನದೇ ಅತ್ಯಾಚಾರಿಗೆ ಪರೋಕ್ಷ ಬೆಂಬಲ ಕೊಟ್ಟು ಕುಳಿತ ಏಕವ್ಯಕ್ತಿ ಸರ್ಕಾರವಾದ ಪ್ರಧಾನಿ. ವಿಶ್ವಮಟ್ಟದ ತಾರೆಯರಿಗೇ ಹೀಗಾದರೆ ನಮ್ಮಂಥ ಸಾಮಾನ್ಯರಿಗಾದರೆ ಹೇಗೆ ಎಂಬ ಜನಸಾಮಾನ್ಯರ ಉದ್ಗಾರ. ಇಷ್ಟು ಸಾಲದೇ, ಶತಮಾನಗಳು ಹೋರಾಡಿ ವಿಶ್ವದ ಉತ್ತುಂಗಕ್ಕೇರಿದ ಹೆಣ್ಣು ಮಕ್ಕಳನ್ನು, ಅವರ ಬೆಂಗಾವಲಾಗಿ ನಿಂತ ದೇಶದ ತಾಯಿ ತಂದೆಯರೇ ಮತ್ತೆ ಮನುವಿನ ಕಲ್ಪನೆಯ ನಾಲ್ಕು ಗೋಡೆಗಳ ಕೂಪಕ್ಕೆ ತಳ್ಳಲು. ಭಾರತಾಂಬೆ ಅಂದು ಹಿಜಾಬಿನಲ್ಲಿ ಇಂದು ಜಂತರ್ ಮಂತರ್ ಅಖಾಡದಲ್ಲಿ ಮನುವಾದಿಗಳಿಗೆ ಸವಾಲೆಸೆಯುತ್ತಲೇ ಬಂದಿದ್ದಾಳೆ.

    ಜೈ ಭಾರತಾಂಬೆ

  • ಕೇವಲ ಧರ್ಮಾಧಾರಿತ ಅಲ್ಲ, ಇದು ಲಿಂಗಾಧಾರಿತ ತಾರತಮ್ಯ – ಹಿಜಬ್‌ಗೆ ಅನುಮತಿ ನೀಡಿ

    ಕೇವಲ ಧರ್ಮಾಧಾರಿತ ಅಲ್ಲ, ಇದು ಲಿಂಗಾಧಾರಿತ ತಾರತಮ್ಯ – ಹಿಜಬ್‌ಗೆ ಅನುಮತಿ ನೀಡಿ

    ನವದೆಹಲಿ: ಶಾಲಾ – ಕಾಲೇಜು (School College) ತರಗತಿಗಳಲ್ಲಿ ಹಿಜಬ್ ನಿರ್ಬಂಧಿಸಿರುವುದು ಲಿಂಗ ಮತ್ತು ಧರ್ಮದ ತಾರತಮ್ಯವಾಗಿದೆ, ಇಂದಿನ ಶಿಕ್ಷಣದಲ್ಲಿ ಧಾರ್ಮಿಕ ಸಹಿಷ್ಣುತೆ ಬಗ್ಗೆ ತಿಳಿಸಿಕೊಡಬೇಕಿದೆ. ಆದರೆ ರಾಜ್ಯ ಸರ್ಕಾರದ (Karnataka Government) ಆದೇಶ ಅದಕ್ಕೆ ವಿರುದ್ಧವಾಗಿದೆ ಎಂದು ಹಿರಿಯ ವಕೀಲರಾದ ಮೀನಾಕ್ಷಿ ಅರೋರಾ ವಾದಿಸಿದ್ದಾರೆ.

    ಶಾಲೆ ಮತ್ತು ಕಾಲೇಜುಗಳ ತರಗತಿಗಳಲ್ಲಿ ಹಿಜಬ್ ನಿಷೇಧಕ್ಕೆ ಸಂಬಂಧಿಸಿದಂತೆ ಹೈಕೋರ್ಟ್(High Court) ಆದೇಶ ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿ ಅರ್ಜಿಗಳನ್ನು ಸುಪ್ರೀಂಕೋರ್ಟ್(Supreme Court) ವಿಚಾರಣೆಗೆ ನಡೆಸುತ್ತಿದೆ. 6ನೇ ದಿನದ ವಿಚಾರಣೆ ವೇಳೆ ಮೀನಾಕ್ಷಿ ಅರೋರಾ ಮಕ್ಕಳ ಹಕ್ಕುಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಭಾರತವು CEDAW ನಿರ್ಣಯಗಳನ್ನು ಒಪ್ಪಿಕೊಂಡಿದೆ. CEDAW ಮಕ್ಕಳು ತಮ್ಮ ಧರ್ಮವನ್ನು ಆಚರಿಸಲು ಮತ್ತು ಅವರ ನಡುವಿನ ತಾರತಮ್ಯದ ವಿರುದ್ಧ ರಕ್ಷಿಸುತ್ತದೆ. ನಾರ್ವೆ ಕ್ರಿಶ್ಚಿಯನ್ ದೇಶವಾಗಿರುವುದರಿಂದ ತಮ್ಮ ಮಕ್ಕಳಿಗೆ ಕ್ರಿಶ್ಚಿಯನ್ ಮೌಲ್ಯಗಳನ್ನು ಮಾತ್ರ ಕಲಿಸಲು ಆಯ್ಕೆ ಮಾಡಿಕೊಂಡಿದೆ. ಆದರೆ CEDAW ಇದನ್ನು ಒಪ್ಪಿಕೊಂಡಿಲ್ಲ, ನೀವು ಮಕ್ಕಳಿಗೆ ಅವರ ಸ್ವಂತ ನಂಬಿಕೆಯನ್ನು ಅನುಸರಿಸಲು ಅನುಮತಿಸಬೇಕು ಎಂದು ಹೇಳಿದೆ‌. ಶಿಕ್ಷಣದಲ್ಲಿ ಸಂಪೂರ್ಣ ಧಾರ್ಮಿಕ ಸಹಿಷ್ಣುತೆ ತರುವುದು ಇದರ ಉದ್ದೇಶವಾಗಿದೆ. ಆದರೆ ನಾವು ನಮ್ಮ ಮಕ್ಕಳಿಗೆ ಧಾರ್ಮಿಕ ಸಹಿಷ್ಣುತೆ ಕಲಿಸುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

    ಸಾರ್ವಜನಿಕ ಸುವ್ಯವಸ್ಥೆ ಹಾಗೂ ನೈತಿಕತೆಗೆ ವಿರುದ್ಧವಲ್ಲದ ಧಾರ್ಮಿಕ ಅಭಿವ್ಯಕ್ತಿಯ ಒಂದು ಅಂಶವನ್ನು ನಾವು ನಿಷೇಧಿಸಲು ಪ್ರಾರಂಭಿಸಿದರೆ ಹೇಗೆ? ಹಿಜಬ್ ನಿಷೇಧಿಸುವುದು ಸಂಪ್ರದಾಯವನ್ನು ಉಲ್ಲಂಘಿಸುತ್ತದೆ ಎಂದು ಯುಎನ್ ಸಮಿತಿಯು ಕಂಡುಕೊಂಡಿದೆ. ಡ್ರೆಸ್ ಕೋಡ್ ವಿದ್ಯಾರ್ಥಿಗಳು (Student Dress Code) ಶಾಲೆಗೆ ಬರುವುದನ್ನು ನಿಲ್ಲಿಸುವ ಬದಲು ಅವರ ಭಾಗವಹಿಸುವಿಕೆಯನ್ನು ಉತ್ತೇಜಿಸಬೇಕು ಎಂದು ಯುಎನ್ ಹೇಳುತ್ತದೆ. ಹಿಜಬ್ ಯಾವ ರೀತಿಯಲ್ಲಿ ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆಗೆ ಧಕ್ಕೆ ತರುತ್ತದೆ? ಯುಎನ್ (UN) ನಿರ್ಣಯಕ್ಕೆ ವ್ಯತಿರಿಕ್ತವಾಗಿ ಮಕ್ಕಳನ್ನು ಶಾಲೆಯಿಂದ ಹೊರಗಿಡಲಾಗುತ್ತಿದೆ. ಕೇಂದ್ರ ಸರ್ಕಾರ ಶಾಸನದ ವಿರುದ್ಧ ಸರ್ಕಾರಿ ಆದೇಶ ಮಾಡಲು ರಾಜ್ಯ ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ, ಕೇಂದ್ರೀಯ ವಿದ್ಯಾಲಯಗಳಲ್ಲಿ (Central Universities) ಹಿಜಬ್ ಅನ್ನು ಅನುಮತಿಸುವಾಗ ರಾಜ್ಯ ಸರ್ಕಾರ ಇದನ್ನು ಹೇಗೆ ನಿರ್ಬಂಧಿಸುತ್ತದೆ? ಎಂದು ಪ್ರಶ್ನಿದ್ದಾರೆ.

    HIJAB

    ಇಸ್ಲಾಂ ಪ್ರಪಂಚದಾದ್ಯಂತ ಆಚರಿಸಲಾಗುವ 2ನೇ ಅತಿದೊಡ್ಡ ಧರ್ಮವಾಗಿದೆ. ವಿಶ್ವದಲ್ಲಿ ಇಸ್ಲಾಂ ಧರ್ಮವನ್ನು ಅಭ್ಯಾಸ ಮಾಡುವ ಹೆಚ್ಚಿನ ಜನರು ಹಿಜಬ್ ಧರಿಸುವುದನ್ನು ಸಾಂಸ್ಕೃತಿಕ ಅಭ್ಯಾಸವೆಂದು ಗುರುತಿಸುತ್ತಾರೆ. ಪ್ರಪಂಚದಾದ್ಯಂತದ ನ್ಯಾಯಾಲಯಗಳು ಮತ್ತು ಜನಸಂಖ್ಯೆಯ ದೊಡ್ಡ ಭಾಗವು ಹಿಜಬ್ (Hijab) ಅನ್ನು ಅತ್ಯಗತ್ಯವೆಂದು ಗುರುತಿಸುತ್ತದೆ. ಇದನ್ನು ಪರಾಮರ್ಶಿಸಲು ನಾವು ಯಾರು? ಭಾರತದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿರುವಂತೆ, ನಾವು ಬೇರೆಡೆ ಅಲ್ಪಸಂಖ್ಯಾತರಾಗಿದ್ದೇವೆ‌. ನಾವು ನಮ್ಮ ಸಂಸ್ಕೃತಿಯನ್ನು ಪಾಲಿಸಲು ಪ್ರಯತ್ನಿಸುತ್ತೇವೆ. ಅದಕ್ಕಾಗಿ ಕಾನೂನು ಹೋರಾಟ ಮಾಡಿದ ಹಲವು ಉದಾಹರಣೆಗಳೂ ಇವೆ. ಮೂಗುತಿಗಾಗಿ, ಸಿಖ್ಖರು ಖಡಗಕ್ಕಾಗಿ ಕಾನೂನು ಹೋರಾಟ ಮಾಡಿದ್ದಾರೆ. ದಯವಿಟ್ಟು ಇದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸುವಂತೆ ಮನವಿ ಮಾಡಿದ್ದಾರೆ.

    ಬಳಿಕ ಸಂವಿಧಾನ 15(1) ಉಲ್ಲೇಖಿಸಿ ವಾದ ಮಂಡಿಸಿದ ವಕೀಲೆ ಜಯನಾ ಕೊಠಾರಿ, ಸಂವಿಧಾನದ 15ನೇ ವಿಧಿಯ ಪ್ರಕಾರ ಧರ್ಮ, ಜನಾಂಗ, ಜಾತಿ, ಲಿಂಗ ಅಥವಾ ಜನ್ಮಸ್ಥಳದ ಆಧಾರದ ಮೇಲೆ ತಾರತಮ್ಯ ಮಾಡುವಂತಿಲ್ಲ, ಇಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರ ವಿಚಾರದಲ್ಲಿ ತಾರತಮ್ಯ ನಡೆಯುತ್ತಿದೆ. ಹಿಜಬ್ ಧಾರ್ಮಿಕ ಅಗತ್ಯ, ಅನಗತ್ಯವೂ ಪ್ರತ್ಯೇಕ ವಿಚಾರ, ಆದರೆ ಹಿಜಬ್ ಧರಿಸುವ ಕಾರಣ ವಿದ್ಯಾರ್ಥಿನಿಯರಲ್ಲಿ ತಾರತಮ್ಯ ಮಾಡುತ್ತಿರುವುದು ಸಂವಿಧಾನದ ಉಲ್ಲಂಘನೆಯಾಗಿದೆ‌. ಇದು ಕೇವಲ ಧರ್ಮಾಧಾರಿತ ತಾರತಮ್ಯವಲ್ಲ, ಇದು ಲಿಂಗಾಧಾರಿತ ತಾರತಮ್ಯವೂ ಆಗಿದೆ. ಹಾಗಾಗಿ ಲಿಂಗ ಮತ್ತು ಧರ್ಮವನ್ನು ಅನ್ನು ನಾವು ಈ ಸಂದರ್ಭದಲ್ಲಿ ವಿಶ್ಲೇಷಿಸಬೇಕಾಗಿದೆ ಎಂದು ವಾದ ಮಂಡಿಸಿದ್ದಾರೆ.

    ಹಿಜಬ್ ಗುರುತಿನ ವಿಷಯವಾಗಿದೆ, ಸಾರ್ವಜನಿಕ ದೃಷ್ಟಿಯಿಂದ ತನ್ನ ದೇಹವನ್ನು ಮುಚ್ಚಿಟ್ಟುಕೊಳ್ಳುವುದು ಅವಳ ವೈಯಕ್ತಿಕ ಆಯ್ಕೆಯಾಗಿದೆ ಎಂದು ವಕೀಲ ಶೋಬ್ ಆಲಂ ವಾದಿಸಿದರು. ನಾವೀಲ್ಲಿ ಗೌಪ್ಯತೆ ಹಾಗೂ ಖಾಸಗಿತನಕ್ಕೂ ಆದ್ಯತೆ ನೀಡಬೇಕಾಗುತ್ತದೆ.‌ ಹಿಜಬ್ ಧಾರ್ಮಿಕ ಅಗತ್ಯವೋ ಅಲ್ಲವೋ ಬಳಿಕ‌ ಚಿಂತಿಸಬೇಕಿದೆ ಎಂದು ಸಲಹೆ ನೀಡಿದ್ದಾರೆ. ಮತ್ತೊರ್ವ ವಕೀಲ ಧಾರ್ ವಾದ ಮಂಡಿಸಿ, ಇಸ್ಲಾಂ ಪ್ರಕಾರ ಹಿಜಬ್ ಕಡ್ಡಾಯವಾಗಿದೆ ಎಂದು ಪೂರಕ ಅಂಶಗಳನ್ನು ಕೋರ್ಟ್ ಮುಂದಿಟ್ಟರು.

    ಪ್ರಶಾಂತ ಭೂಷಣ್, ಕಪಿಲ್ ಸಿಬಲ್ ವಾದ ಆಲಿಸಿದ ಬಳಿಕ ದುಷ್ಯಂತ್ ದವೆಗೆ ವಾದ ಮಂಡಿಸಲು ಸಮಯ ಎಷ್ಟು ಬೇಕು? ಎಂದು ಪ್ರಶ್ನಿಸಿದರು. ದವೆ 4 ಗಂಟೆಗಳ ಸಮಯ ಕೇಳಿದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಹೇಮಂತ್ ಗುಪ್ತಾ ಅವರಿದ್ದ ಪೀಠ ಸೋಮವಾರ ಮಧ್ಯಾಹ್ನ 2 ಗಂಟೆಗೆ ವಿಚಾರಣೆ ಮುಂದೂಡಿತು.

    Live Tv
    [brid partner=56869869 player=32851 video=960834 autoplay=true]

  • ಹೈಕೋರ್ಟ್ ತೀರ್ಪು ಸ್ವಾಗತಾರ್ಹ: ಅಶ್ವತ್ಥನಾರಾಯಣ

    ಹೈಕೋರ್ಟ್ ತೀರ್ಪು ಸ್ವಾಗತಾರ್ಹ: ಅಶ್ವತ್ಥನಾರಾಯಣ

    ಬೆಂಗಳೂರು: ವಿದ್ಯಾರ್ಥಿಗಳು ಆಯಾ ಶಾಲಾ-ಕಾಲೇಜುಗಳು ಸೂಚಿಸುವ ಸಮವಸ್ತ್ರ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೈಕೋರ್ಟ್ ನೀಡಿರುವ ತೀರ್ಪು ಸ್ವಾಗತಾರ್ಹವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.

    ಕೋರ್ಟ್ ತೀರ್ಪು ನೀಡಿದ ನಂತರ ಮಾತನಾಡಿದ ಅವರು, ರಾಜ್ಯ ಹೈಕೋರ್ಟ್ ಸಮವಸ್ತ್ರದ ವಿಚಾರದಲ್ಲಿ ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿದೆ. ಇದನ್ನು ಎಲ್ಲ ವಿದ್ಯಾರ್ಥಿಗಳೂ ಗೌರವಿಸಿ, ಪಾಲಿಸಬೇಕು ಎಂದಿದ್ದಾರೆ. ಇದನ್ನೂ ಓದಿ: ಮಂಗಳವಾರ ಬೆಳಗ್ಗೆ 10:30ಕ್ಕೆ ಹಿಜಬ್‌ ಹೈಕೋರ್ಟ್‌ ತೀರ್ಪು

    ಯಾವುದೇ ಧರ್ಮದ ಮಕ್ಕಳಾದರೂ ಶಿಕ್ಷಣಕ್ಕೆ ಆದ್ಯ ಗಮನ ಕೊಟ್ಟು, ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳುವುದರ ಕಡೆಗೆ ಗಮನ ಕೊಡಬೇಕು. ಯಾವುದೇ ಧಾರ್ಮಿಕ ವಸ್ತ್ರಗಳತ್ತ ಅನಗತ್ಯ ಆದ್ಯತೆ ನೀಡುವ ಮೂಲಕ ಬದುಕಿನ ಸದವಕಾಶಗಳನ್ನು ವ್ಯರ್ಥ ಮಾಡಿಕೊಳ್ಳಬಾರದು. ಈ ಮೂಲಕ ಎಲ್ಲರೂ ಸೌಹಾರ್ದದಿಂದ ಮತ್ತು ಪರಸ್ಪರ ಗೌರವದಿಂದ ಬದುಕಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಿಜಬ್‌ ಇಸ್ಲಾಂ ಧರ್ಮದ ಅಗತ್ಯದ ಆಚರಣೆ ಅಲ್ಲ: ಹೈಕೋರ್ಟ್‌ ಐತಿಹಾಸಿಕ ತೀರ್ಪು

    ಹಿಂದೆಂದೂ ಶಾಲಾ-ಕಾಲೇಜುಗಳಲ್ಲಿ ಇಂತಹ ವಿವಾದ ಕಂಡುಬಂದಿರಲಿಲ್ಲ. ಕೆಲವು ವಿಚ್ಛಿದ್ರಕಾರಿ ಶಕ್ತಿಗಳು ಬೇಕೆಂದೇ ಈ ವಿವಾದವನ್ನು ಸೃಷ್ಟಿಸಿದ್ದವು. ನ್ಯಾಯಾಲಯವು ಈ ವಿಚಾರವನ್ನು ಆಳವಾಗಿ ಅಧ್ಯಯನ ಮಾಡಿ, ಸರಿಯಾದ ತೀರ್ಪು ನೀಡಿದೆ. ಈ ಮೂಲಕ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣಕ್ಕೆ ಇದು ಒಂದು ಮಹತ್ವದ ತೀರ್ಪು ಆಗಿದೆ ಎಂದು ಸ್ವಾಗತಿಸಿದ್ದಾರೆ.

  • ಶೌಚಾಲಯ ಕಟ್ಟಡ ನಿರ್ಮಾಣ ಮಾಡುವಂತೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

    ಶೌಚಾಲಯ ಕಟ್ಟಡ ನಿರ್ಮಾಣ ಮಾಡುವಂತೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

    ಕೋಲಾರ: ರಾಜ್ಯದಲ್ಲಿ ಹಿಜಾಬ್ ಹಾಗೂ ಕೇಸರಿ ವಿವಾದ ನಡೆಯುತ್ತಿದರೆ ಇಲ್ಲೊಂದು ಶಾಲೆಯ ಮಕ್ಕಳು ಶೌಚಾಲಯ ಕಟ್ಟಡ ನಿರ್ಮಾಣ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.

    ನಗರದ ಬಂಗಾರಪೇಟೆ ತಾಲ್ಲೂಕು ಚತ್ತಗುಟ್ಟಹಳ್ಳಿ ಶಾಲೆಯ ಮಕ್ಕಳು ಶೌಚಾಲಯಕ್ಕಾಗಿ ಪ್ರತಿಭಟನೆ ಮಾಡಿದ್ದಾರೆ. ಗಡಿ ಭಾಗದ ಶಾಲೆಗಳಲ್ಲಿ ಹೆಚ್ಚಿನ ಸಂಖ್ಯೆಯ ಮಕ್ಕಳು ಶಾಲೆಗೆ ಹಾಜರಾಗುತ್ತಿದ್ದು, ಮಕ್ಕಳಿಗೆ ಶಾಲೆಯಲ್ಲಿ ಮೂಲಭೂತ ಸೌಲಭ್ಯಗಳಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: ಕೇಸರಿ ಶಾಲು, ಹಿಜಬ್ ಧರಿಸುವಂತಿಲ್ಲ : ಹೈಕೋರ್ಟ್ ಮಧ್ಯಂತರ ಆದೇಶದಲ್ಲಿ ಏನಿದೆ?

    ಹಲವು ವರ್ಷಗಳಿಂದ ಶಾಲೆಯಲ್ಲಿ ಶೌಚಾಲಯ ಕಟ್ಟಡ ನಿರ್ಮಾಣ ಕಾಮಗಾರಿ ಶುರುವಾಗಿದೆ. ಆದರೆ ಶಾಲೆ ಶುರುವಾಗಿ 2 ವರ್ಷ ಕಳೆದರೂ ಕಾಮಗಾರಿ ಪೂರ್ಣವಾಗದ ಹಿನ್ನೆಲೆ ವಿದ್ಯಾರ್ಥಿಗಳು ಇಂದು ಪ್ರತಿಭಟನೆ ನಡೆಸಿದ್ದರು. ಅಲ್ಲದೆ ಆದಷ್ಟೂ ಬೇಗ ಶೌಚಾಲಯ ನಿರ್ಮಾಣ ಮಾಡಿಕೊಂಡುವಂತೆ ಒತ್ತಾಯಿಸಿದ್ದಾರೆ.

  • ಆನ್‍ಲೈನ್ ಎಂಬ ತಾರತಮ್ಯದ ಕ್ಲಾಸ್ ಬೇಡ – ಹಿಜಬ್ ಹಾಕಿಯೇ ಕ್ಲಾಸಿಗೆ ಹೋಗುತ್ತೇವೆ

    ಆನ್‍ಲೈನ್ ಎಂಬ ತಾರತಮ್ಯದ ಕ್ಲಾಸ್ ಬೇಡ – ಹಿಜಬ್ ಹಾಕಿಯೇ ಕ್ಲಾಸಿಗೆ ಹೋಗುತ್ತೇವೆ

    – ಹಿಜಬ್ ನಮ್ಮ ಸಂವಿಧಾನಾತ್ಮಕ ಹಕ್ಕು

    ಉಡುಪಿ: ಆನ್‍ಲೈನ್ ಕ್ಲಾಸ್ ಮೂಲಕ ಮತ್ತೆ ವಿದ್ಯಾರ್ಥಿಗಳ ಜೊತೆ ನಮ್ಮನ್ನು ತಾರತಮ್ಯ ಮಾಡಬೇಡಿ. ನಾವು ಆನ್‍ಲೈನ್ ಕ್ಲಾಸ್ ಅಟೆಂಡ್ ಆಗುವುದಿಲ್ಲ ಎಂದು ಹಿಜಬ್ ಬಗ್ಗೆ ತರಗತಿ ಬಹಿಷ್ಕರಿಸಿ ಪ್ರತಿಭಟನೆ ಮಾಡುತ್ತಿರುವ ಉಡುಪಿಯ ಸರ್ಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿಯರು ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ವಿದ್ಯಾರ್ಥಿನಿಯರು, ಹಿಜಬ್ ನಮ್ಮ ಸಂವಿಧಾನಾತ್ಮಕ ಹಕ್ಕು. ನಾವು ಹಿಜಬ್ ಹಾಕಿಯೇ ಕಾಲೇಜಿಗೆ ಹೋಗುತ್ತೇವೆ. ಸರ್ಕಾರಿ ಕಾಲೇಜಿನಲ್ಲಿ ನಮಗೆ ನಮ್ಮ ಹಕ್ಕು ಸಿಗದಿದ್ದರೆ ನಾವು ಬೇರೆಡೆ ಅದನ್ನು ನಿರೀಕ್ಷಿಸಲು ಸಾಧ್ಯವೇ?. ಸೈನ್ಸ್ ವಿದ್ಯಾರ್ಥಿಗಳು ಇರೋದ್ರಿಂದ ನಮಗೆ ಆನ್‍ಲೈನ್ ಕ್ಲಾಸ್‍ನಲ್ಲಿ ಲ್ಯಾಬ್ ಅಟೆಂಡ್ ಮಾಡಲು ಆಗುವುದಿಲ್ಲ. ಇದನ್ನೂ ಓದಿ: ಉಡುಪಿ ಹಿಜಬ್ ವಿವಾದ – NSUI ಭೇಟಿ ನಿರಾಕರಿಸಿದ ಕಾಲೇಜು ಆಡಳಿತ ಮಂಡಳಿ

    1 ತಿಂಗಳ ತರಗತಿ ನಷ್ಟ ಆಗಿದೆ:
    ನಮಗೆ ಯಾವುದೇ ಆನ್‍ಲೈನ್ ಕ್ಲಾಸ್‍ಗಳು ಬೇಡ ಎಂದು ಉಡುಪಿಯ ಸರ್ಕಾರಿ ಮಹಿಳಾ ಪದವಿಪೂರ್ವ ಹಿಜಬ್ ಹೋರಾಟದ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರು ಹೇಳಿದ್ದಾರೆ. ಕಾಲೇಜಿನ ಉಳಿದ ಮುಸಲ್ಮಾನ ವಿದ್ಯಾರ್ಥಿನಿಯರು ಹಿಜಬ್ ಧರಿಸಲು ಸಿದ್ಧರಿದ್ದಾರೆ. ನಮ್ಮ ಮೇಲೆ ನಡೆಯುತ್ತಿರುವ ದೌರ್ಜನ್ಯದಿಂದ ಅವರು ಭಯ ಗೊಂಡಿದ್ದಾರೆ. ಸರ್ಕಾರಿ ಕಾಲೇಜ್ ಆಗಿರುವುದರಿಂದ ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ. ತಾರತಮ್ಯವನ್ನು ಮಾಡಬೇಡಿ. ನಮಗೆ ನಡೆಯುತ್ತಿರುವ ದೌರ್ಜನ್ಯ ಪ್ರತಿದಿನ ಮಾಧ್ಯಮಗಳಲ್ಲಿ ನಮ್ಮ ಸುದ್ದಿಗಳನ್ನು ನೋಡಿ ಇತರ ಮುಸ್ಲಿಂ ವಿದ್ಯಾರ್ಥಿನಿಯರು ಆತಂಕಗೊಂಡಿದ್ದಾರೆ ಅವರು ನೈತಿಕವಾಗಿ ನಮಗೆ ಬೆಂಬಲ ಸೂಚಿಸಿದ್ದಾರೆ ಆದರೆ ಯಾರೂ ಮುಂದೆ ಬರುತ್ತಿಲ್ಲ ಎಂದು ವಿದ್ಯಾರ್ಥಿನಿ ಮುಸ್ಕಾನ್ ಜೈನಬ್ ಹೇಳಿದರು.

    ಕಾಲೇಜಿನ ಇತರೆ ವಿದ್ಯಾರ್ಥಿನಿಯರು ಶಿಕ್ಷಣ ತುಂಬಾ ಮುಖ್ಯ ಎಂದು ನಮ್ಮ ಜೊತೆ ಪ್ರತಿಭಟನೆಗೆ ಬರುತ್ತಿಲ್ಲ. ಪ್ರತಿಭಟಿಸದೆ ಕ್ಲಾಸಿಗೆ ಹೋಗುತ್ತಿದ್ದಾರೆ. ನಮಗೂ ಶಿಕ್ಷಣ ಮುಖ್ಯ ಅದರ ಜೊತೆಗೆ ಧರ್ಮ, ಹಿಜಬ್ ಹಕ್ಕು ಮುಖ್ಯ. ಹಿಜಬ್ ಇಲ್ಲದೆ ತರಗತಿಯಲ್ಲಿ ಕುಳಿತುಕೊಳ್ಳಲು ನಮಗೆ ಕಂಫರ್ಟ್ ಆಗುವುದಿಲ್ಲ. ಕಾಲೇಜಿನ ಸಮವಸ್ತ್ರದ ಶಾಲ್‍ನಲ್ಲೇ ನಾವು ಹಿಜಬ್ ತಯಾರಿಸಿ ಅದನ್ನು ತೊಟ್ಟುಕೊಂಡು ಕ್ಲಾಸಿನಲ್ಲಿ ಕುಳಿತುಕೊಳ್ಳುತ್ತೇವೆ. ನಾವು ಬೇರೆ ಯಾವುದೇ ವಿಚಾರಕ್ಕೆ ಹಠಹಿಡಿದು ಕುಳಿತುಕೊಂಡಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಇಂದು ಹಿಜಬ್, ನಾಳೆ ಷರಿಯತ್ ಕಾನೂನು – ಉಡುಪಿ ಹಿಂದೂ ಜಾಗರಣಾ ವೇದಿಕೆ ಗರಂ

    ಕಾಲೇಜಿನಲ್ಲಿ ಹಿಂದಿನಿಂದಲೂ ಪರಂಪರೆಯಿದೆ ಹಿಜಬ್‍ಗೆ ಅವಕಾಶ ಇಲ್ಲ ಎಂದು ಎಲ್ಲರೂ ಹೇಳುತ್ತಿದ್ದಾರೆ. ಆದರೆ ನಮ್ಮ ಸೀನಿಯರ್ಸ್‍ಗಳು ಧರಿಸುತ್ತಿದ್ದದ್ದನ್ನು ನಾವು ನೋಡಿದ್ದೇವೆ. ನಮ್ಮ ಶಿಕ್ಷಣದ ಬಗ್ಗೆ ಯಾರಿಗೂ ಯಾವುದೇ ಒಲವು ಇಲ್ಲ. ನಾವು ಉತ್ತಮವಾದ ಶಿಕ್ಷಣ ಪಡೆದು ಮುಂದೆ ಏನಾದರೂ ಜೀವನದಲ್ಲಿ ಸಾಧಿಸಬೇಕೆಂದು ಇದ್ದೇವೆ. ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿಕೊಂಡರು. ಇದನ್ನೂ ಓದಿ: ಹಿಜಬ್‌ಗಾಗಿ ಮುಂದುವರಿದ ಹೋರಾಟ

  • ಹಿಜಾಬ್ ಧರಿಸಿ ತರಗತಿಯಲ್ಲಿ ಕುಳಿತುಕೊಳ್ಳಲು ಅವಕಾಶ ನೀಡುವಂತೆ ಬೇಡಿಕೆ

    ಹಿಜಾಬ್ ಧರಿಸಿ ತರಗತಿಯಲ್ಲಿ ಕುಳಿತುಕೊಳ್ಳಲು ಅವಕಾಶ ನೀಡುವಂತೆ ಬೇಡಿಕೆ

    ಉಡುಪಿ: ಉಡುಪಿಯ ಸರ್ಕಾರಿ ಪದವಿಪೂರ್ವ ಹೆಣ್ಣು ಮಕ್ಕಳ ಕಾಲೇಜಿನಲ್ಲಿ ಮುಸ್ಲಿಂ ಹೆಣ್ಣು ಮಕ್ಕಳು ಹಿಜಾಬ್ ಧರಿಸಿ ತರಗತಿಯಲ್ಲಿ ಕುಳಿತುಕೊಳ್ಳಲು ಅವಕಾಶ ನೀಡುವಂತೆ ಒತ್ತಾಯಿಸಿದ್ದಾರೆ.

    ಉಡುಪಿಯ ಸರ್ಕಾರಿ ಪದವಿಪೂರ್ವ ಹೆಣ್ಣುಮಕ್ಕಳ ಕಾಲೇಜಿನಲ್ಲಿ ಹಿಜಾಬ್ ಧರಿಸಿಕೊಂಡು ತರಗತಿಯಲ್ಲಿ ಕುಳಿತುಕೊಳ್ಳುವ ಅವಕಾಶವನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರು ದೂರನ್ನು ನೀಡಿದ್ದಾರೆ. ಕೆಲವು ದಿನಗಳ ಹಿಂದೆ ಹಿಜಾಬ್ ಧರಿಸಿ ಬರುವ ವಿದ್ಯಾರ್ಥಿನಿಯರಿಗೆ ತರಗತಿಯಲ್ಲಿ ಪ್ರವೇಶ ನೀಡುವುದಿಲ್ಲ ಎಂದು ಕಾಲೇಜಿನ ಪ್ರಾಂಶುಪಾಲ ರುದ್ರೇಗೌಡ ಸೂಚನೆ ನೀಡಿದ್ದರು. ಇದನ್ನೂ ಓದಿ: ದೇಗುಲಗಳನ್ನು ಭಕ್ತರ ಕೈಗೆ ನೀಡಬೇಕೆಂಬ ಚಿಂತನೆ ಇದೆ: ಕೋಟಾ

    ಕೆಲವು ವಿದ್ಯಾರ್ಥಿನಿಯರು, ನಮಗೆ ಹಿಜಾಬ್ ಧರಿಸಿ ಕ್ಲಾಸ್‌ನಲ್ಲಿ ಕುಳಿತುಕೊಳ್ಳಲು ಬಿಡುತ್ತಿಲ್ಲ. ಪೋಷಕರು ಬಂದು ಮಾತನಾಡಿದರೂ ಸಮಸ್ಯೆ ಬಗೆಹರಿಯುತ್ತಿಲ್ಲ, ಇದರಿಂದ ನಮ್ಮ ಕಲಿಕೆಗೆ ತೊಂದರೆಯಾಗುತ್ತಿದೆ ಎಂದು ದೂರು ನೀಡಿದ್ದಾರೆ. ಇದನ್ನೂ ಓದಿ: 80 ಮೇಲ್ಪಟ್ಟ ವೃದ್ಧರು, ಅಂಗವಿಕಲರು ಮನೆಯಲ್ಲಿದ್ದೇ ವೋಟು ಹಾಕಬಹುದು: ಚುನಾವಣಾ ಆಯೋಗ

    ಕಾಲೇಜಿನಲ್ಲಿ ಇಲ್ಲಿಯವರೆಗೆ ಹಿಜಾಬ್ ಧರಿಸಲು ಅವಕಾಶ ನೀಡಿಲ್ಲ. ಕಾಲೇಜಿನಲ್ಲಿ 60 ಮಂದಿ ಮುಸ್ಲಿಂ ವಿದ್ಯಾರ್ಥಿನಿಯರಿದ್ದು, ಅವರಲ್ಲಿ ಕೆಲವರು ಕಳೆದ ಮೂರು ದಿನಗಳಿಂದ ಹಿಜಾಬ್ ಧರಿಸುತ್ತಿದ್ದಾರೆ. ನಾವು ಅವರ ಮನೆಯವರನ್ನು ಕರೆದು ಮಾತುಕತೆ ನಡೆಸಿದ್ದೇವೆ. ಮನೆಯವರು ಅರ್ಥ ಮಾಡಿಕೊಂಡು ಒಪ್ಪಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರು ಮಾಹಿತಿ ನೀಡಿದ್ದಾರೆ.

  • ವಿಧಾನಸೌಧದಲ್ಲಿ ಸ್ಕಾರ್ಫ್ ಧರಿಸಿ ಕಲಾಪ ವೀಕ್ಷಿಸಲು ಬಂದಿದ್ದ ಮುಸ್ಲಿಂ ಯುವತಿಗೆ ತಡೆ

    ವಿಧಾನಸೌಧದಲ್ಲಿ ಸ್ಕಾರ್ಫ್ ಧರಿಸಿ ಕಲಾಪ ವೀಕ್ಷಿಸಲು ಬಂದಿದ್ದ ಮುಸ್ಲಿಂ ಯುವತಿಗೆ ತಡೆ

    ಬೆಂಗಳೂರು: ಸದನ ವೀಕ್ಷಣೆಗೆ ಸ್ಕಾರ್ಫ್ ಧರಿಸಿ ಬಂದಿದ್ದ ಯುವತಿಯನ್ನು ಮಾರ್ಷಲ್‍ಗಳು ಕೆಲಕಾಲ ಒಳಗಡೆ ಪ್ರವೇಶಿಸದಂತೆ ತಡೆದ ಘಟನೆ ಇಂದು ನಡೆದಿದೆ.

    ಕ್ರೈಸ್ಟ್ ಕಾಲೇಜಿನ ವಿದ್ಯಾರ್ಥಿಗಳು ಇಂದು ಸದನ ವೀಕ್ಷಣೆಗೆ ಎಂದು ವಿಧಾನಸೌಧಕ್ಕೆ ಆಗಮಿಸಿದ್ದರು. ಈ ವೇಳೆ ಹಿಜಾಬ್ ಧರಿಸಿದ್ದ ಯುವತಿಗೆ ಅಧಿಕಾರಿಗಳು ಕಪ್ಪು ಸ್ಕಾರ್ಫ್ ತೆಗೆಯುವಂತೆ ಒತ್ತಾಯಿಸಿದ್ರು ಎನ್ನಲಾಗಿದೆ. ಆದರೆ ಯುವತಿ ತನ್ನ ತಲೆಯ ಮೇಲಿನ ಸ್ಕಾರ್ಫ್ ತೆಗೆಯಲು ನಿರಾಕರಿಸಿದ್ದಾಳೆ. ಈ ಕಾರಣಕ್ಕಾಗಿ ಸುಮಾರು 15 ನಿಮಿಷ ಯುವತಿಗೆ ಗ್ಯಾಲರಿಗೆ ಪ್ರವೇಶ ನೀಡಿರಲಿಲ್ಲ.

    ಕೊನೆಗೆ ಪರೀಕ್ಷೆಗೆ ಒಳಪಡಿಸಿದ ನಂತರ ಯುವತಿಯನ್ನು ಸ್ಕಾರ್ಫ್ ಸಹಿತ ಪ್ರೇಕ್ಷಕರ ಗ್ಯಾಲರಿಗೆ ಪ್ರವೇಶ ನೀಡಲಾಯ್ತು.