Tag: ಹಿಜಬ್ ವಿವಾದ

  • ಸಮವಸ್ತ್ರ ಜಾರಿ ಸಿ.ಡಿ.ಸಿ ನಿರ್ಧಾರ ಅಂದ್ರು ಎಜಿ- ಸೋಮವಾರ ಹೈಕೋರ್ಟ್‍ಗೆ ಮಧ್ಯಂತರ ಅರ್ಜಿ

    ಸಮವಸ್ತ್ರ ಜಾರಿ ಸಿ.ಡಿ.ಸಿ ನಿರ್ಧಾರ ಅಂದ್ರು ಎಜಿ- ಸೋಮವಾರ ಹೈಕೋರ್ಟ್‍ಗೆ ಮಧ್ಯಂತರ ಅರ್ಜಿ

    ಬೆಂಗಳೂರು: ಹಿಜಬ್ ವಿವಾದ ಸಂಬಂಧ ಸತತ ಆರನೇ ದಿನ ಹೈಕೋರ್ಟ್‍ನ ಪೂರ್ಣಪೀಠದಲ್ಲಿ ವಿಚಾರಣೆ ನಡೆಯಿತು. ಇಂದು ಸರ್ಕಾರದ ಪರವಾಗಿ ವಾದ ಮಂಡನೆ ಮಾಡಿದ ಅಡ್ವೋಕೇಟ್ ಜನೆರಲ್ ಪ್ರಭುಲಿಂಗ ನಾವಡಗಿ, ಹಿಜಬ್‍ಧಾರಣೆ ಮುಸ್ಲಿಮ್ ಸಮುದಾಯದಲ್ಲಿ ಕಡ್ಡಾಯ ಆಚರಣೆ ಅಲ್ಲ ಅಂದ್ರು.

    ಶಿಕ್ಷಣ ಸಂಸ್ಥೆಗಳಲ್ಲಿ ಹಿಜಬ್ ನಿರ್ಬಂಧಿಸುವ ಮೂಲಕ ಸಂವಿಧಾನದ ಮೂಲಭೂತ ಹಕ್ಕುಗಳನ್ನು ಕರ್ನಾಟಕ ಸರ್ಕಾರ ಉಲ್ಲಂಘಿಸಿಲ್ಲ ಎಂದರು. ಈ ಮೂಲಕ ಫೆಬ್ರವರಿ 5ರಂದು ಸರ್ಕಾರ ಹೊರಡಿಸಿದ್ದ ಕಡ್ಡಾಯ ಸಮವಸ್ತ್ರ ಆದೇಶವನ್ನು ಸಮರ್ಥಿಸಿಕೊಂಡರು. ಸಮಾನತೆ, ಸಮಗ್ರತೆ, ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುವ ವಸ್ತ್ರಗಳನ್ನು ಸರ್ಕಾರ ಬ್ಯಾನ್ ಮಾಡಿರುವುದು ಸರಿಯಾಗಿಯೇ ಇದೆ ಎಂದು ವಾದ ಮಂಡಿಸಿದ್ರು. ಇದನ್ನೂ ಓದಿ: ಕಾಂಗ್ರೆಸ್ ರಾಜ್ಯದ ಮಕ್ಕಳಿಗೆ ದ್ರೋಹ ಮಾಡ್ತಿದೆ, ಇದು ರಾಜದ್ರೋಹ: ಬೊಮ್ಮಾಯಿ ಕಿಡಿ

    ಕಾಲೇಜಿನ ಅಭಿವೃದ್ಧಿ ಸಮಿತಿ ವಿಚಾರವಾಗಿಯೂ ತೀವ್ರ ವಾದ ನಡೀತು. ಕಾಲೇಜು ಅಭಿವೃದ್ಧಿ ಸಮಿತಿ (ಸಿಡಿಸಿ) ಅಧಿಕಾರ ಪ್ರಶ್ನಿಸಿದ್ದ ರವಿವರ್ಮ ಕುಮಾರ್ ಪ್ರಶ್ನೆಗೆ ಅಡ್ವೋಕೇಟ್ ಜನರಲ್ ನಾವಡಗಿ ಉತ್ತರ ನೀಡಿದ್ರು. ಕಾಲೇಜು ಅಭಿವೃದ್ಧಿ ಸಮಿತಿಯನ್ನು ಸರ್ಕಾರದ ಆದೇಶದಂತೆ ರಚಿಸಲಾಗಿದೆ. ಶಿಕ್ಷಣ ಇಲಾಖೆ ಕಾಯ್ದೆ ಪ್ರಕಾರ ಸಮವಸ್ತ್ರ ಕಡ್ಡಾಯ ಮಾಡಲು ಸಿಡಿಸಿಗೆ ಅಧಿಕಾರವಿದೆ. ಆದರೆ ಹಿಜಬ್‍ಗೆ ಅವಕಾಶ ನೀಡುವುದು ಬಿಡುವುದು ಕಾಲೇಜುಗಳ ಸಿಡಿಸಿಗಳಿಗೆ ಬಿಟ್ಟ ವಿಚಾರ. ಸಿಡಿಸಿ ಹೇಳಿದ ಯೂನಿಫಾರಂ ಕಡ್ಡಾಯವಾಗಿ ಧರಿಸಿ ಎಂಬ ಅಂಶವಷ್ಟೇ ಸರ್ಕಾರದ ಆದೇಶದಲ್ಲಿದೆ. ಸರ್ಕಾರ ಧಾರ್ಮಿಕ ವಿಚಾರಗಳಲ್ಲಿ ಮಧ್ಯಪ್ರವೇಶ ಕೂಡ ಮಾಡಲ್ಲ ಎಂದು ವಾದ ಮಂಡಿಸಿದ್ರು.

    ಕೊನೆಗೆ ಸಿಜೆ ಅವಸ್ಥಿ ನೇತೃತ್ವದ ಪೀಠ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತು. ಸೋಮವಾರ ಕೆಲ ಮಧ್ಯಂತರ ಅರ್ಜಿಗಳನ್ನು ಕೂಡ ಕೋರ್ಟ್ ವಿಚಾರಣೆಗೆ ಪರಿಗಣಿಸುವ ಸಂಭವ ಇದೆ. ಇನ್ನು ಕೋರ್ಟ್ ವಿಚಾರಣೆಯ ನೇರ ಪ್ರಸಾರ ನಿಲ್ಲಿಸುವಂತೆ ಮಾಡಿದ್ದ ಮನವಿಯನ್ನು ಹೈಕೋರ್ಟ್ ಪುರಸ್ಕರಿಸಲಿಲ್ಲ. ಇದನ್ನೂ ಓದಿ: ಇನ್‍ಸ್ಟಾಗ್ರಾಮ್‍ನಲ್ಲಿ ಹಿಜಬ್ ತೆಗೆದು ರೀಲ್ಸ್ ಹಾಕ್ತಾರೆ, ಈಗ ತೆಗೆಯೋಕಾಗಲ್ವಾ..?- ವಿದ್ಯಾರ್ಥಿಗಳು

  • ಬಟ್ಟೆ ಕಾರಣಕ್ಕಾಗಿ ಹುಟ್ಟಿದ ಸಂಘರ್ಷದಲ್ಲಿ ಬದುಕು ಹಾಳಾಗಬಾರದು: ಪಂಡಿತಾರಾಧ್ಯ ಶ್ರೀ

    ಬಟ್ಟೆ ಕಾರಣಕ್ಕಾಗಿ ಹುಟ್ಟಿದ ಸಂಘರ್ಷದಲ್ಲಿ ಬದುಕು ಹಾಳಾಗಬಾರದು: ಪಂಡಿತಾರಾಧ್ಯ ಶ್ರೀ

    ದಾವಣಗೆರೆ: ಬಟ್ಟೆಗಿಂತ ಬದುಕು ಮುಖ್ಯವಾಗಿದ್ದು, ಬಟ್ಟೆ ಕಾರಣಕ್ಕಾಗಿ ಹುಟ್ಟಿದ ಸಂಘರ್ಷದಲ್ಲಿ ಬದುಕು ಹಾಳಾಗಬಾರದು ಎಂದು ಸಾಣಿಹಳ್ಳಿಮಠದ ಡಾ.ಪಂಡಿತಾರಾಧ್ಯ ಸ್ವಾಮೀಜಿ ಹಿಜಬ್ ಹಾಗೂ ಕೇಸರಿ ಶಾಲು ವಿವಾದದ ಕುರಿತು ಮಕ್ಕಳಿಗೆ ತಿಳಿ ಹೇಳಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾಮರಸ್ಯ ಬದುಕಿಗೆ ಬಸವತತ್ವದ ಸಂದೇಶವಿದೆ. ಅದನ್ನ ಪಾಲನೆ ಮಾಡಬೇಕಾಗಿದೆ. ವಿದ್ಯಾರ್ಥಿ ಸಮೂಹವನ್ನ ಗಮನದಲ್ಲಿ ಇಟ್ಟುಕೊಂಡು ಅವರಲ್ಲಿ ಜಾತಿ ವಿಷ ಬೀಜ ಬಿತ್ತುವ ಕೆಲಸ ನಡೆದಿದೆ. ನಾವು ಹಾಕಿಕೊಳ್ಳುವ ಬಟ್ಟೆಗಳು ಕಾವಿ, ಖಾಕಿ ಅಥವಾ ಖಾದಿ ಆಗಿರಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಇನ್‍ಸ್ಟಾಗ್ರಾಮ್‍ನಲ್ಲಿ ಹಿಜಬ್ ತೆಗೆದು ರೀಲ್ಸ್ ಹಾಕ್ತಾರೆ, ಈಗ ತೆಗೆಯೋಕಾಗಲ್ವಾ..?- ವಿದ್ಯಾರ್ಥಿಗಳು

    ಈ ಬಟ್ಟೆಗಳಿಗಿಂತ ಬದುಕು ಮುಖ್ಯ. ಇದನ್ನ ಪ್ರತಿಯೊಬ್ಬರು ಅರಿತುಕೊಳ್ಳಬೇಕು. ಸಾಮರಸ್ಯದ ಬದುಕಿನತ್ತ ಪ್ರತಿಯೊಬ್ಬರು ಸಾಗಬೇಕು. ಇದಕ್ಕೆ ಬಸವ ತತ್ವದಲ್ಲಿ ಇರುವ ಸಂದೇಶಗಳನ್ನ ಅರಿಯಬೇಕು. ಬಸವಧಿ ಶರಣರು ಅಜ್ಞಾನ ಅಳಿಸಿ ಸಮಾಜಿಕ ಸಾಮರಸ್ಯ ಮೂಡಿಸಿದ್ದರು. ಮಕ್ಕಳಲ್ಲಿ ಜಾತಿ ಧರ್ಮದ ಬಗ್ಗೆ ವಿಷಬೀಜ ಬಿತ್ತುತ್ತಿರುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದರು.

  • ಹಿಜಬ್ ಧರಿಸಿದ್ದಕ್ಕೆ ಕೇಸರಿ ಶಾಲು ಧರಿಸಿ ಕಾಲೇಜಿಗೆ ಎಂಟ್ರಿ

    ಹಿಜಬ್ ಧರಿಸಿದ್ದಕ್ಕೆ ಕೇಸರಿ ಶಾಲು ಧರಿಸಿ ಕಾಲೇಜಿಗೆ ಎಂಟ್ರಿ

    ಬೆಳಗಾವಿ: ಖಾನಾಪುರ ತಾಲೂಕಿನ ಕಾಲೇಜಿನ ವಿದ್ಯಾರ್ಥಿಗಳು ಕೇಸರಿ ಶಾಲನ್ನು ಧರಿಸಿ ತರಗತಿಗೆ ಹಾಜರಾಗಿದ್ದಾರೆ.

    ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡದಲ್ಲಿರುವ ಮಹಾತ್ಮ ಗಾಂಧಿ ಪಿಯು ಕಾಲೇಜಿನಲ್ಲಿ ಸಮವಸ್ತ್ರ ನಿಯಮ ಇಲ್ಲ. ಹೀಗಾಗಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಬ್ ಧರಿಸಿ ತರಗತಿಗಳಿಗೆ ಹಾಜರಾಗಿರುವ ಹಿನ್ನೆಲೆಯಲ್ಲಿ ಕಾಲೇಜಿನ ಕೆಲ ಯುವಕರು ಕೇಸರಿ ಶಾಲನ್ನು ಧರಿಸಿ ಬಂದಿದ್ದಾರೆ. ಇದನ್ನೂ ಓದಿ: ಇವ್ರರನ್ನು ಅರೆಸ್ಟ್ ಮಾಡ್ರಿ – ವಿದ್ಯಾರ್ಥಿನಿಯರ ವಿರುದ್ಧ ಮಡಿಕೇರಿ ಪ್ರಿನ್ಸಿ ಕೆಂಡಾಮಂಡಲ

    ಸಮವಸ್ತ್ರ ನಿಗದಿ ಪಡಿಸಿದ ಕಾಲೇಜುಗಳಲ್ಲಿ ಸಮವಸ್ತ್ರ ನಿಯಮ ಕಡ್ಡಾಯ ಪಾಲನೆ ಮಾಡಬೇಕಿದೆ. ಸಮವಸ್ತ್ರ ನಿಗದಿ ಮಾಡದ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ಡ್ರೆಸ್ ಕೋಡ್ ಇಲ್ಲ. ಹೀಗಾಗಿ ವಿದ್ಯಾರ್ಥಿಗಳು ಕೇಸರಿ ಶಾಲು ಮತ್ತು ಹಿಜಬ್ ಧರಿಸಿ ಕಾಲೇಜಿಗೆ ಹಾಜರಾಗಿದ್ದಾರೆ. ಇದನ್ನೂ ಓದಿ: ಹಿಜಬ್ ಪ್ರತಿಭಟನೆ – ಕಾಲೇಜು ವಿದ್ಯಾರ್ಥಿನಿಯರ ವಿರುದ್ಧ ಎಫ್‌ಐಆರ್ ದಾಖಲು

    ಈ ಸಂದರ್ಭದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿ ಸ್ಥಳಕ್ಕೆ ನಂದಗಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸ್‌ ಬಂದೋಬಸ್ತ್‌ ನಿಯೋಜನೆ ಮಾಡಲಾಗಿದೆ.

    ಕಾಲೇಜಿನಲ್ಲಿ ಹಿಜಬ್‌ ವರ್ಸಸ್‌ ಕೇಸರಿ ಶಾಲು ಹಿನ್ನೆಲೆ ಆಡಳಿತ ಮಂಡಳಿ ನೇತೃತ್ವದಲ್ಲಿ ಎರಡು ಸಮುದಾಯದ ಮುಖಂಡರನ್ನು ಕರೆಸಿ ಸಭೆ ಮಾಡಲಾಗುತ್ತಿದೆ. ಕೇಸರಿ ಶಾಲು ಹಾಕಿಕೊಂಡು ಬಂದಿದ್ದ ವಿದ್ಯಾರ್ಥಿಗಳನ್ನು ವಾಪಸ್‌ ಕಳುಹಿಸಲಾಗಿದೆ.

  • ಹಿಜಬ್ ವಿವಾದ: ಖಾಸಗಿ ಕಾಲೇಜಿನ ಅರೆಕಾಲಿಕ ಉಪನ್ಯಾಸಕಿ ರಾಜೀನಾಮೆ!

    ಹಿಜಬ್ ವಿವಾದ: ಖಾಸಗಿ ಕಾಲೇಜಿನ ಅರೆಕಾಲಿಕ ಉಪನ್ಯಾಸಕಿ ರಾಜೀನಾಮೆ!

    ತುಮಕೂರು: ಹಿಜಬ್ ತೆಗೆದು ತರಗತಿಯೊಳಗೆ ಬರಬೇಕು ಎಂಬ ನಿಯಮ ಜಾರಿಯಾಗಿದ್ದರಿಂದ ಖಾಸಗಿ ಕಾಲೇಜಿನ ಅರೆಕಾಲಿಕ ಉಪನ್ಯಾಸಕಿ ರಾಜೀನಾಮೆ ಕೊಟ್ಟ ಘಟನೆ ತುಮಕೂರಿನಲ್ಲಿ ನಡೆದಿದೆ.

    ತುಮಕೂರು ನಗರದ ಪುಟ್ಟಸ್ವಾಮಯ್ಯನ ಪಾಳ್ಯದ ಜೈನ್ ಪಿಯು ಕಾಲೇಜಿನ ಇಂಗ್ಲೀಷ್ ಉಪನ್ಯಾಸಕಿ ಚಾಂದಿನಿ ನಯಾಜ್ ರಾಜೀನಾಮೆ ಕೊಟ್ಟವರು. ಕಳೆದ ಮೂರು ವರ್ಷಗಳಿಂದ ಜೈನ್ ಕಾಲೇಜು, ವಿದ್ಯಾವಾಹಿನಿ ಕಾಲೇಜು ಸೇರಿದಂತೆ ಹಲವು ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು. ಇದನ್ನೂ ಓದಿ: ಹಿಜಬ್ ವಿವಾದ: ಬುರ್ಕಾನೇ ಮುಖ್ಯ, ಸಿಂಧೂರ ತೆಗೆಸಿ ಎಂದ ವಿದ್ಯಾರ್ಥಿನಿಯರು!

    ಹಿಜಬ್ ವಿವಾದದಿಂದಾಗಿ ತಮ್ಮ ಧರ್ಮಕ್ಕೆ ಹೆಚ್ಚು ಅಧ್ಯತೆ ಕೊಟ್ಟು, ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಇವರು ಮಾತ್ರವಲ್ಲ ಕಾಲೇಜಿನ ವಿದ್ಯಾರ್ಥಿನಿಯರು ಧರ್ಮವೇ ಮುಖ್ಯ ಎಂದು ಕಾಲೇಜನ್ನೆ ಬಿಟ್ಟು ಹೋಗುತ್ತಿದ್ದಾರೆ. ಆದರೆ ನ್ಯಾಯಾಲಯವು ಮಕ್ಕಳಲ್ಲಿ ಒಂದೇ ರೀತಿ ನಿಯಮವಿರಬೇಕು ಎಂದು ಈ ನಿರ್ಧಾರ ಮಾಡಿದ್ದು, ಇದಕ್ಕೆ ಪರ-ವಿರೋಧ ಕೇಳಿಬರುತ್ತಿದೆ.

  • ಉಡುಪಿಯಲ್ಲಿ ಹಿಜಬ್ ಹೋರಾಟಕ್ಕೆ ಪರೀಕ್ಷೆ ಬಲಿ

    ಉಡುಪಿಯಲ್ಲಿ ಹಿಜಬ್ ಹೋರಾಟಕ್ಕೆ ಪರೀಕ್ಷೆ ಬಲಿ

    ಉಡುಪಿ: ರಾಜ್ಯದಲ್ಲಿ ಹಿಜಬ್ ಹೋರಾಟ ಜೋರಾಗಿದೆ. ಹಿಜಬ್ ವಿವಾದದಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆಯನ್ನು ಮುಂದೂಡಲಾಗಿದೆ.

    ಹೌದು, ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ನಡೆಯಬೇಕಾಗಿದ್ದ ದ್ವಿತೀಯ ಪಿಯುಸಿ ಸೈನ್ಸ್ ವಿದ್ಯಾರ್ಥಿಗಳ ಪ್ರಾಕ್ಟಿಕಲ್ ಪರೀಕ್ಷೆಯನ್ನು ಮುಂದೂಡಲಾಗಿದೆ. ಇಂದು ದ್ವಿತೀಯ ಪಿಯುಸಿ ಲ್ಯಾಬ್ ಪರೀಕ್ಷೆಗಳು ಆರಂಭವಾಗಬೇಕಿತ್ತು. ಸುಮಾರು ಇಪ್ಪತ್ತಕ್ಕಿಂತ ಹೆಚ್ಚು ಮುಸ್ಲಿಂ ವಿದ್ಯಾರ್ಥಿನಿಯರು ಇರುವ ತರಗತಿಯಲ್ಲಿ ಯಾವುದೇ ಗೊಂದಲದ ವಾತಾವರಣ ನಿರ್ಮಾಣ ಆಗಬಾರದೆಂಬ ಉದ್ದೇಶದಿಂದ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಇದನ್ನೂ ಓದಿ: ನಮಗೆ ಆಜಾದಿ ಬೇಕು ಅಂತಾ ಘೋಷಣೆ ಕೂಗ್ತಿಯಾ? ನಿನ್ನನ್ನು ಅಟ್ಟಾಡಿಸಿ ಹೊಡೀತಿವಿ: ಸೀಮಾ ಇನಾಂದಾರ್‌ಗೆ ಜೀವ ಬೆದರಿಕೆ

    ಸದ್ಯ ಪರೀಕ್ಷೆಯ ಮುಂದಿನ ದಿನಾಂಕ ಪ್ರಕಟಿಸುವುದಾಗಿ ಹೇಳಿರುವ ಎಂಜಿಎಂ ಕಾಲೇಜು ತಿಳಿಸಿದೆ. ಫೆಬ್ರವರಿ 7ರಂದು ಎಂಜಿಎಂ ಕಾಲೇಜಿನಲ್ಲಿ ಕೇಸರಿ ಹಿಜಬ್ ಫೈಟ್ ನಡೆದಿತ್ತು. ಇದೀಗ ರಾಜ್ಯಾದ್ಯಂತ ಹಿಜಬ್ ಪ್ರತಿಭಟನೆ ನಡೆಯುತ್ತಿದ್ದು, ಹೈಕೋರ್ಟ್ ತನ್ನ ಮುಂದಿನ ಆದೇಶದವರೆಗೂ ಶಾಲಾ, ಕಾಲೇಜುಗಳಿಗೆ ಹಿಜಬ್ ಧರಿಸದೇ ವಿದ್ಯಾರ್ಥಿನಿಯರು ಹಾಜರಾಗಬೇಕೆಂದು ಸೂಚಿಸಿದೆ. ಆದರೂ ವಿದ್ಯಾರ್ಥಿನಿಯರು ಕೋರ್ಟ್ ಆದೇಶಕ್ಕೆ ಕೇರ್ ಮಾಡದೇ ಹಿಜಬ್ ಧರಿಸಿಯೇ ತರಗತಿಗೆ ಹಾಜರಾಗುತ್ತಿದ್ದಾರೆ. ಇದನ್ನೂ ಓದಿ: ಮುಸ್ಲಿಂ ವೇಶ ಧರಿಸಿ ಅನುಮಾಸ್ಪದ ರೀತಿಯಲ್ಲಿ ಓಡಾಟ: ಐವರನ್ನು ವಶಕ್ಕೆ ಪಡೆದ ಪೊಲೀಸರು

  • ಹಿಜಬ್ ವಿವಾದ – ಇಂದು ಹೈಕೋರ್ಟ್‌ನಲ್ಲಿ ಏನಾಯ್ತು..?

    ಹಿಜಬ್ ವಿವಾದ – ಇಂದು ಹೈಕೋರ್ಟ್‌ನಲ್ಲಿ ಏನಾಯ್ತು..?

    ಬೆಂಗಳೂರು: ಹಿಜಬ್ ವಿವಾದದ ಬಗ್ಗೆ ಹೈಕೋರ್ಟ್‍ನ ಪೂರ್ಣ ಪೀಠದಲ್ಲಿ ಮೂರನೇ ದಿನವೂ ವಿಚಾರಣೆ ನಡೀತು. ಹೈಕೋರ್ಟ್‍ನ ಮಧ್ಯಂತರ ಆದೇಶದಿಂದ ಮೂಲಭೂತ ಹಕ್ಕು ಅಮಾನತು ಆಗಿದೆ. ಹೀಗಾಗಿ ಮಧ್ಯಂತರ ಆದೇಶ ಬದಲಿಸಿ, ಸಮವಸ್ತ್ರದ ಜೊತೆಗೆ ಹಿಜಬ್‍ಗೂ ಅವಕಾಶ ಕೊಡಬೇಕು ಅಂತ ಅರ್ಜಿದಾರರ ಪರ ವಕೀಲ ದೇವದತ್ತ ಕಾಮತ್ ವಾದ ಮುಗಿಸಿದ್ರು. ಇದನ್ನೂ ಓದಿ: ಎಷ್ಟು ದಿನ ಇರ್ತೀನೋ ಗೊತ್ತಿಲ್ಲ, ಮಾತಾಡೋಕೆ ಅವಕಾಶ ಕೊಡಿ: ಪರಿಷತ್‍ನಲ್ಲಿ ಸಿ.ಎಂ. ಇಬ್ರಾಹಿಂ ಅಳಲು!

    ಇದಕ್ಕೂ ಮುನ್ನ ಸಾರ್ವಜನಿಕ ಸುವ್ಯವಸ್ಥೆ ಎಂಬ ಸರ್ಕಾರದ ಬಗ್ಗೆ ವಾದ ಮುಂದುವರಿಸಿದ ಅರ್ಜಿದಾರ ಪರ ವಕೀಲರು, ಸಾರ್ವಜನಿಕ ಸುವ್ಯವಸ್ಥೆ ಭಾಷಾಂತರ ಕುರಿತ ಸರ್ಕಾರದ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ರು. ‘ಸಾರ್ವಜನಿಕ ಸುವ್ಯವಸ್ಥೆ’ ಎಂಬ ಪದದ ಬಗ್ಗೆ ಸರ್ಕಾರದ ಭಾಷಾಂತರಕ್ಕೆ ಆಕ್ಷೇಪಿಸಿದರು. ಇದನ್ನೂ ಓದಿ: ಹಿಜಬ್ ತೆಗೆಯಿರಿ ಅನ್ನೋದಕ್ಕೆ ಹೆತ್ತವರಿಗೆ ರೈಟ್ಸ್ ಇಲ್ಲ, ಅವನ್ಯಾವನು ಹೇಳೋಕೆ: ಶಿಕ್ಷಕರ ವಿರುದ್ಧ ವಿದ್ಯಾರ್ಥಿನಿಯರು ರೆಬೆಲ್

    ಸಂವಿಧಾನದಲ್ಲಿ ಹೇಳಿದ ಅರ್ಥ ಬಿಟ್ಟು ಬೇರೆ ಅರ್ಥ ಹೇಳಲಾಗದು. ಸಾರ್ವಜನಿಕ ಸುವ್ಯವಸ್ಥೆ ಕಾರಣ ಕೊಟ್ಟು, ಹಕ್ಕುಗಳನ್ನು ನಿರ್ಬಂಧಿಸುವಂತಿಲ್ಲ ಅಂತ ಸುಪ್ರೀಂಕೋರ್ಟ್ ತೀರ್ಪು ಹೇಳಿದೆ. ಮೂಗುತಿ ವಿಚಾರದಲ್ಲಿ ದಕ್ಷಿಣ ಆಫ್ರಿಕಾದ ಶಾಲೆ ಹಾಕಿದ್ದ ನಿರ್ಬಂಧವನ್ನು ಕೋರ್ಟ್ ವಜಾ ಮಾಡಿತ್ತು ಎಂದು ತಿಳಿಸಿದ್ರು. ಹಿಜಬ್ ಧರಿಸುವುದರಿಂದ ಗಲಾಟೆ ಆಗುತ್ತದೆ ಎಂದು ಸರ್ಕಾರ ಹೇಳುವುದಾದರೆ, ಅದು ಒಪ್ಪತಕ್ಕ ವಾದ ಅಲ್ಲ. ನಮ್ಮ ದೇಶದ್ದು ಸಕಾರಾತ್ಮಕ ಜಾತ್ಯಾತೀತತೆ. ಶಿಕ್ಷಣ ಹಕ್ಕು ಕಾಯ್ದೆಯಲ್ಲಿ ಧಾರ್ಮಿಕ ಹಕ್ಕು ನಿರ್ಬಂಧಕ್ಕೆ ಸರ್ಕಾರಕ್ಕೆ ಅಧಿಕಾರ ಇಲ್ಲ ಅಂತ ಕಾಮತ್ ವಾದಿಸಿದ್ರು.

    ಮತ್ತೊಂದು ಅರ್ಜಿಯಲ್ಲಿ ವಾದ ಮಂಡಿಸಿದ ರವಿವರ್ಮ ಕುಮಾರ್, ಸರ್ಕಾರ ಸಮಸವ್ತ್ರದ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಉನ್ನತ ಮಟ್ಟದ ಸಮಿತಿ ರಚಿಸಿದೆ. ಸರ್ಕಾರ ಹಿಜಬ್ ಮೇಲೆ ನಿರ್ಬಂಧ ಹೇರಿಲ್ಲ. ಯೂನಿಫಾರಂ ಅನ್ನು ಕಾಲೇಜು ಸಮಿತಿ ನಿರ್ಧರಿಸಲಿದೆ ಅಂತಷ್ಟೇ ಹೇಳಲಾಗಿದೆ ಅಂದ್ರು. ವಾದ ಆಲಿಸಿದ ಮುಖ್ಯ ನ್ಯಾಯಮೂರ್ತಿಗಳ ಪೂರ್ಣ ಪೀಠ ನಾಳೆ ಮಧ್ಯಾಹ್ನ 2.30ಕ್ಕೆ ವಿಚಾರಣೆ ಮುಂದೂಡಿತು.

  • ಹಿಜಬ್ ವಿವಾದದ ನಡುವೆಯೇ ಮಾದರಿಯಾದ ಮುಸ್ಲಿಂ ಶಿಕ್ಷಣ ಸಂಸ್ಥೆ

    ಹಿಜಬ್ ವಿವಾದದ ನಡುವೆಯೇ ಮಾದರಿಯಾದ ಮುಸ್ಲಿಂ ಶಿಕ್ಷಣ ಸಂಸ್ಥೆ

    ಚಿಕ್ಕೋಡಿ: ರಾಜ್ಯಾದ್ಯಂತ ಭುಗಿಲೆದ್ದಿರುವ ಹಿಜಬ್ ವಿವಾದದ ನಡುವೆಯೇ ಮುಸ್ಲಿಂ ಶಿಕ್ಷಣ ಸಂಸ್ಥೆಯೊಂದು ಮಾದರಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ.

    Hijab

    ಹುಕ್ಕೇರಿ ಪಟ್ಟಣದಲ್ಲಿರುವ ಟಿಪ್ಪು ಪ್ರೌಢ ಶಾಲೆಯಲ್ಲಿ ಹಿಜಬ್ ಧರಿಸಿ ತರಗತಿಗಳಿಗೆ ತೆರಳದಂತೆ ಶಿಕ್ಷಕರು ಕ್ರಮ ವಹಿಸಿದ್ದಾರೆ. ಹಿಜಬ್ ಧರಿಸಿ ಬರುವ ವಿದ್ಯಾರ್ಥಿನಿಯರ ಹಿಜಬ್ ತೆಗಿಸಿ ತರಗತಿಗಳಿಗೆ ಶಿಕ್ಷಕರು ಕಳಿಸಿ ಕೊಡುವ ಕಾರ್ಯ ಮಾಡಿದ್ದಾರೆ. ಇದನ್ನೂ ಓದಿ: ಅಕ್ರಮ ಆಸ್ತಿಗಳಿಕೆ ಆರೋಪ – ವಿಚಾರಣೆ ನಡೆಸಲು ಹೈಕೋರ್ಟ್‍ಗೆ ಸುಪ್ರೀಂ ಸೂಚನೆ

    Hijab

    ನ್ಯಾಯಾಲಯದ ಆದೇಶವೇ ಅಂತಿಮ ಎಂದು ಆಡಳಿತ ಮಂಡಳಿ ಹಾಗೂ ಶಿಕ್ಷಕರು ಹೇಳಿದ್ದು, ನ್ಯಾಯಾಲಯದ ಆದೇಶ ಬರುವವರೆಗೂ ತರಗತಿಗಳಲ್ಲಿ ಹಿಜಬ್ ಧರಿಸದಂತೆ ಶಿಕ್ಷಕರು ವಿದ್ಯಾರ್ಥಿಗಳಿಗೆ ಸೂಚನೆ ನೀಡಿದ್ದಾರೆ. ಮುಸ್ಲಿಂ ಶಿಕ್ಷಣ ಸಂಸ್ಥೆಯಾಗಿದ್ದರೂ ಹಿಜಬ್ ವಿವಾದಕ್ಕೆ ಧ್ವನಿಗೂಡಿಸದೇ ಸರ್ಕಾರದ ಆದೇಶ ಪಾಲನೆಯನ್ನು ಈ ಶಾಲೆಯಲ್ಲಿ ಮಾಡಲಾಯಿತು.
    ಹಿಜಬ್ ವಿವಾದಕ್ಕೆ ತುಪ್ಪ ಸುರಿಯುತ್ತಿರುವ ಶಿಕ್ಷಣ ಸಂಸ್ಥೆಗಳಿಗೆ ಟಿಪ್ಪು ಪ್ರೌಢ ಶಾಲೆ ಮಾದರಿಯಾಗಿದೆ. ಇದನ್ನೂ ಓದಿ: ಬಹುಕೋಟಿ ಮೇವು ಹಗರಣ, ಲಾಲೂ ಪ್ರಸಾದ್ ಯಾದವ್‌ ದೋಷಿ – CBI ಕೋರ್ಟ್‌

  • ನನ್ನ ಹೇಳಿಕೆಯಿಂದ ಯಾರ ಮನಸ್ಸಿಗಾದರೂ ನೋವಾಗಿದ್ರೆ ಕ್ಷಮೆ ಇರಲಿ: ಜಮೀರ್

    ನನ್ನ ಹೇಳಿಕೆಯಿಂದ ಯಾರ ಮನಸ್ಸಿಗಾದರೂ ನೋವಾಗಿದ್ರೆ ಕ್ಷಮೆ ಇರಲಿ: ಜಮೀರ್

    ಬೆಂಗಳೂರು: ನನಗೆ ಯಾರ ಮನಸ್ಸಿಗೂ ನೋವು ಮಾಡುವ ಉದ್ದೇಶವಿಲ್ಲ. ನನ್ನ ಹೇಳಿಕೆಯಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಕ್ಷಮೆಯಿರಲಿ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಸರಣಿ ಟ್ವೀಟ್ ಮಾಡುವ ಮೂಲಕ ಕ್ಷಮೆ ಕೇಳಿಕೊಂಡಿದ್ದಾರೆ.

    ನಿನ್ನೆ ಜಮೀರ್, ಬುರ್ಖಾ ಪದ್ಧತಿ ಇಲ್ಲದ ಕಾರಣವೇ ಭಾರತದಲ್ಲಿ ಅತ್ಯಾಚಾರಗಳು ಹೆಚ್ಚಾಗುತ್ತಿವೆ ಅಂತ ಪರೋಕ್ಷವಾಗಿ ಹೇಳಿಕೆ ನೀಡಿ, ಯುವತಿಯರ ಸೌಂದರ್ಯ ರಕ್ಷಣೆಗೆ ಬುರ್ಖಾ, ಹಿಜಬ್ ಪದ್ಧತಿ ಇದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಕ್ಷಮೆ ಕೇಳಬೇಕು ಎಂದು ಆಗ್ರಹಿಸಲಾಗುತ್ತಿತ್ತು. ಪರಿಣಾಮ ಜಮೀರ್ ಅವರು ಟ್ವಿಟ್ಟರ್ ನಲ್ಲಿ 7 ಸರಣಿ ಟ್ವೀಟ್ ಮಾಡುವ ಮೂಲಕ ಕ್ಷಮೆಯನ್ನು ಕೇಳಿದ್ದಾರೆ. ಇದನ್ನೂ ಓದಿ:   ಸ್ವಾತಂತ್ರ್ಯ ಪೂರ್ವದಿಂದಲೂ ಹಿಜಬ್‌ ಧರಿಸುತ್ತಿದ್ದಾರೆ: ಜಮೀರ್ ಅಹ್ಮದ್

    ಟ್ವೀಟ್ ನಲ್ಲಿ ಏನಿದೆ?
    ದೇಶದಲ್ಲಿ ಹೆಣ್ಣುಮಕ್ಕಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ-ಅತ್ಯಾಚಾರಗಳನ್ನು ಕಂಡಾಗ ಭಯ-ಆತಂಕ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಕನಿಷ್ಠ ಹಿಜಬ್ – ಬುರ್ಖಾ ಧರಿಸುವುದರಿಂದಾದರೂ ಅತ್ಯಾಚಾರವನ್ನು ತಡೆಗಟ್ಟಬಹುದೇನೋ ಎಂಬ ಮಾತನ್ನು ನಾನು ಆಡಿದ್ದೆ ಎಂದು ವಿವರಿಸಿದರು. ಈ ರೀತಿ ಹೇಳಿಕೆಗಳನ್ನ ಕೊಟ್ಟು ಯಾರ ಮನಸ್ಸನ್ನಾದರೂ ನೋಯಿಸುವ, ಇಲ್ಲವೇ ಅಗೌರವ ತೋರಿಸುವ ದುರುದ್ದೇಶದಿಂದ ಹೇಳಿದ್ದಲ್ಲ. ಹೆಣ್ಣು ಮಕ್ಕಳ ಕಾಳಜಿಯ ಸದುದ್ದೇಶದಿಂದ ಹೇಳಿರುವುದು. ನನ್ನ ಹೇಳಿಕೆಯಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಕ್ಷಮೆಯಿರಲಿ ಎಂದು ಮನವಿ ಮಾಡಿಕೊಂಡರು.

    ಹಿಜಬ್ – ಬುರ್ಖಾ ಧರಿಸುವುದನ್ನು ಧಾರ್ಮಿಕ ಕಟ್ಟಳೆಯನ್ನಾಗಿ ಮಾಡಿದ ನಮ್ಮ ಹಿರಿಯರ ಉದ್ದೇಶವೂ ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವುದೇ ಆಗಿದೆ. ಈ ಹಿನ್ನೆಲೆಯಲ್ಲಿ ನನ್ನಿಂದ ಆ ಮಾತುಗಳು ಬಂತು. ಇದರ ಹೊರತಾಗಿ ಬೇರೆ ಯಾವ ದುರುದ್ದೇಶವೂ ನನಗಿರಲಿಲ್ಲ. ಇತ್ತೀಚೆಗೆ ಅರ್ಧ ಹೆಲ್ಮೆಟ್ ಬದಲು ಫುಲ್ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ. ಸರ್ಕಾರದ ಈ ನಿಲುವಿನ ಹಿಂದೆ ಜನರ ಜೀವ ರಕ್ಷಣೆಯ ಉದ್ದೇಶ ಹೇಗಿದೆಯೋ, ಹಾಗೆಯೇ ನನ್ನ ಹೇಳಿಕೆ ಹಿಂದೆ ಹೆಣ್ಣುಮಕ್ಕಳ ಬಗೆಗಿನ ಕಾಳಜಿ ಇದೆ ಎಂದು ಹೇಳಿದರು.

    ಹೆಣ್ಣುಮಕ್ಕಳಿಗೆ ನಿಜವಾದ ರಕ್ಷಣೆ ನೀಡುವುದು ಶಿಕ್ಷಣ ಮಾತ್ರ ಎಂದು ನನ್ನ ಅಭಿಪ್ರಾಯ. ಹಿಜಬ್ – ಬುರ್ಖಾ ಧರಿಸಿಯಾದರೂ ಒಮ್ಮೆ ಅವರು ಶಿಕ್ಷಣ ಪಡೆಯಲಿ. ಆ ಶಿಕ್ಷಣದ ಬಲದಿಂದ ಅವರು ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತಾರೆ ಎಂಬ ನಂಬಿಕೆ ನನ್ನದು ಎಂದರು.

    ಹೌದು, ಹೆಣ್ಣು ಮಕ್ಕಳ ಅತ್ಯಾಚಾರಕ್ಕೆ ಅವರ ಮೈಮೇಲಿನ ಬಟ್ಟೆ ಖಂಡಿತ ಕಾರಣ ಅಲ್ಲ. ಮೈ ತುಂಬಾ ಬಟ್ಟೆ ಹಾಕಿದರೂ, ಹಾಕದೆ ಇದ್ದರೂ ಅತ್ಯಾಚಾರ ನಡೆಯುತ್ತಲೇ ಇರುತ್ತದೆ. ಇದಕ್ಕೆ ಮುಖ್ಯ ಕಾರಣ ಕೆಲವು ಪುರುಷರಲ್ಲಿರುವ ರೇಪಿಸ್ಟ್ ಮನಸ್ಥಿತಿ. ಹೆಣ್ಣುಮಕ್ಕಳ ಅತ್ಯಾಚಾರ ಕಡಿಮೆಯಾಗಬೇಕಾದರೆ ಮೊದಲು ಪುರುಷರು ಬದಲಾಗಬೇಕು ಎಂದು ತಿಳಿಸಿದರು.

    ಶಿಕ್ಷಣಕ್ಕಿಂತ ಶಕ್ತಿಯುತವಾದ ಅಸ್ತ್ರ ಬೇರೆ ಇಲ್ಲ. ಆದ್ದರಿಂದ ಹಿಜಬ್ -ಬುರ್ಖಾದ ಕಾರಣ ನೀಡಿ ದಯವಿಟ್ಟು ಮುಸ್ಲಿಂ ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ನಿರಾಕರಿಸಬೇಡಿ ಎಂದು ನಾನು ಸರ್ಕಾರವನ್ನು ಮತ್ತು ಸಮಾಜವನ್ನು ಕೈಮುಗಿದು ಬೇಡಿಕೊಳ್ಳುತ್ತೇನೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ಕ್ಷಮೆ ಕೇಳಲ್ಲ ಎಂದಿದ್ರು!
    ಇಂದು ಹುಬ್ಬಳ್ಳಿಯಲ್ಲಿ ಜಮೀರ್ ಅವರನ್ನು ಎಲ್ಲ ನಾಯಕರು ನಿಮ್ಮ ಬಳಿ ಕ್ಷಮೆ ಕೇಳುವಂತೆ ಒತ್ತಾಯಿಸುತ್ತಿದ್ದಾರೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಕೇಳಿದಾಗ ಅವರು, ನಾನ್ ಹಿಜಬ್ ಬಗ್ಗೆ ಮಾತನಾಡುವವನೇ, ಯಾಕೆ ನಾನು ಕ್ಷಮೆ ಕೇಳಬೇಕು. ಕ್ಷಮೆ ಕೇಳುವಂತಹ ಹೇಳಿಕೆ ನಾನೇನು ನೀಡಿದ್ದೀನಿ ಎಂದು ಕಿಡಿಕಾರಿದ್ದರು. ಇದನ್ನೂ ಓದಿ: ನಾನು ಹಿಜಬ್ ಬಗ್ಗೆ ಮಾತಾಡುವವನೇ, ನಾನ್ಯಾಕೆ ಕ್ಷಮೆ ಕೇಳಬೇಕು – ಡಿಕೆಶಿಗೆ ಜಮೀರ್ ಟಾಂಗ್ 

    ನಾನು ಹಿಜಬ್ ಹಾಕಬೇಕು ಅಂತ ಹೇಳಿದ್ದೆ, ಮಾಧ್ಯಮದವರು ಅದನ್ನು ತಿರುಚಿದ್ದಾರೆ. ಹೆಲ್ಮೇಟ್ ರೀತಿ ಹಿಜಬ್ ಹಾಕೋಬೇಕು, ಹೆಲ್ಮೇಟ್ ಹೇಗೆ ಸೇಫ್ಟಿ ಕೊಡುತ್ತೊ ಹಾಗೇ ಹಿಜಬ್ ಕೂಡಾ ನೀಡುತ್ತೆ ಎಂದಿದ್ದರು.

    ರಾಜಕೀಯ ಗಣ್ಯರು ಹೇಳಿದ್ದೇನು?
    ಹಿಜಬ್ ವಿವಾದದ ಬಗ್ಗೆ ಶಾಸಕ ಜಮೀರ್ ಅಹ್ಮದ್ ಕೊಟ್ಟಿರುವ ವಿವಾದಾತ್ಮಕ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷ ಒಪ್ಪುವುದಿಲ್ಲ. ಈ ಬಗ್ಗೆ ಅವರಿಗೆ ಕಾರಣ ಕೇಳಿ ನೋಟಿಸ್ ಕೊಡುತ್ತೇವೆ. ಅವರು ಆ ಮಾತನ್ನು ವಾಪಸ್ ಪಡೆಯಬೇಕು ಮತ್ತು ಕ್ಷಮೆ ಕೇಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದರು.

    ಗೃಹಸಚಿವ ಅರಗ ಜ್ಞಾನೇಂದ್ರ, ಇದೊಂದು ಕೆಟ್ಟ ಹೇಳಿಕೆ. ನಮ್ಮ ಹೆಣ್ಣು ಮಕ್ಕಳು ಪ್ಯಾಂಟ್, ಬಿಗಿ ಉಡುಪು ಹಾಕ್ತಾರೆ. ಹಾಗಂತ ಅವ್ರ ಮೇಲೆ ಅತ್ಯಾಚಾರ ಆಗಿದೆಯಾ? ಉಡುಗೆ ತೊಡೋದು ಹೆಣ್ಣು ಮಕ್ಕಳ ಸ್ವಾತಂತ್ರ್ಯ. ಮುಸ್ಲಿಂಮರು ಹಿಜಬ್, ಬುರ್ಖಾ ಹಾಕದೇ ಇದ್ರೆ ರೇಪ್ ಆಗುತ್ತೆ ಅನ್ನೋ ಮನಸ್ಥಿತಿ ಸರಿಯಲ್ಲ ಎಂದು ವಿರೋಧ ವ್ಯಕ್ತಪಡಿಸಿದರು. ಇದನ್ನೂ ಓದಿ: ಜಮೀರ್ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷ ಒಪ್ಪುವುದಿಲ್ಲ, ಅವರು ಕ್ಷಮೆ ಕೇಳಬೇಕು: ಡಿಕೆಶಿ

    ಎಂಎಲ್‍ಸಿ ರವಿಕುಮಾರ್ ಅಂತೂ, ಜಮೀರ್ ಇನ್ನೂ ಯಾವ ಯುಗದಲ್ಲಿ ಇದ್ದಾರೆ. ಜಮೀರ್ ಮನುಷ್ಯರೇ ಅಲ್ಲ. ಕೂಡ್ಲೇ ಕ್ಷಮೆ ಕೇಳಬೇಕು. ಜಮೀರ್ ವಿರುದ್ಧ ಕ್ರಮ ಆಗ್ಬೇಕು ಎಂದು ಒತ್ತಾಯಿಸಿದ್ದಾರೆ.

    ಬಿಜೆಪಿಯ ತೇಜಸ್ವಿನಿ ರಮೇಶ್ ಈ ಕುರಿತು ಪ್ರತಿಕ್ರಿಯಿಸಿದ್ದು, ತಂದೆ, ತಾಯಿ, ಗಂಡನ ಎದುರಿಗೆ ಹಿಜಬ್ ಹಾಕ್ಬೇಕಾ..? ಜಮೀರ್ ಮುಸ್ಲಿಂ ರಾಷ್ಟ್ರಗಳಲ್ಲಿ ಹೋಗಿ ಮಾತಾಡಲಿ ಎಂದು ಗರಂ ಆಗಿದ್ದಾರೆ. ಭಾರತೀ ಶೆಟ್ಟಿ ಅವರು ಸಹ ಈ ಕುರಿತು ವಿರೋಧ ವ್ಯಕ್ತಪಡಿಸಿದ್ದು, ಜಮೀರ್ ಹೇಳಿಕೆ ಬಾಲೀಷ ಅಂತಾ ಆಕ್ರೋಶ ಹೊರಹಾಕ್ತಿದ್ದೇವೆ. ಜಮೀರ್ ಹೇಳಿಕೆ ಅಪ್ರಬುದ್ಧ ಎಂದು ಜೆಡಿಎಸ್ ಎಂಲ್‍ಸಿ ಶ್ರೀಕಂಠೇಗೌಡರು ಟೀಕಿಸಿದ್ದಾರೆ.

  • ವಿಧಾನಮಂಡಲ ಅಧಿವೇಶನದಲ್ಲೂ ಹಿಜಬ್- ಕೇಸರಿ ಫೈಟ್

    ವಿಧಾನಮಂಡಲ ಅಧಿವೇಶನದಲ್ಲೂ ಹಿಜಬ್- ಕೇಸರಿ ಫೈಟ್

    ಬೆಂಗಳೂರು: ಕೇವಲ ಶಾಲೆ ಕಾಲೇಜುಗಳಲ್ಲಿ ಮಾತ್ರವಲ್ಲ, ಇವತ್ತಿಂದ ಆರಂಭವಾದ ವಿಧಾನಮಂಡಲ ಅಧಿವೇಶನದಲ್ಲಿಯೂ ಹಿಜಬ್ -ಕೇಸರಿ ಸಂಘರ್ಷ ಪ್ರತಿಧ್ವನಿಸಿದೆ.

    ಮೊದಲ ದಿನವಾದ ಇಂದು ಕಾಂಗ್ರೆಸ್ ಸದಸ್ಯರು ಕೈಗೆ ಕಪ್ಪು ಪಟ್ಟಿ ಧರಿಸಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು. ಕಳೆದ ವಾರ ಸವಾಲು ಹಾಕಿದಂತೆಯೇ ಕಲಬುರಗಿ ಶಾಸಕಿ ಖನೀಜ್ ಫಾತಿಮಾ ಹಿಜಬ್, ಬುರ್ಕಾ ಧರಿಸಿ ಸದನಕ್ಕೆ ಬಂದ್ರು. ಇದಕ್ಕೆ ಪ್ರತಿಯಾಗಿ ಬಿಜೆಪಿಯ ನೂತನ ಎಂಎಲ್‍ಸಿ ಡಿಎಸ್ ಅರುಣ್, ಕೇಸರಿ ಶಾಲು ಧರಿಸಿ ಮೊದಲ ದಿನದ ಕಲಾಪದಲ್ಲಿ ಕಾಣಿಸಿಕೊಂಡ್ರು. ಇದನ್ನೂ ಓದಿ: ಹಿಜಬ್ ಧರಿಸಿ ಕಲಾಪಕ್ಕೆ ಆಗಮಿಸಿದ ಕಲಬುರಗಿ ಕಾಂಗ್ರೆಸ್‍ ಶಾಸಕಿ

    ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ವಿಧಾನಸೌಧವನ್ನ ದೇವಾಲಯ ಅಂದುಕೊಂಡಿದ್ದೇನೆ. ನಾನು ಚುನಾವಣೆ ಪ್ರಚಾರ ಪ್ರಾರಂಭ ಮಾಡಿದ ದಿನದಿಂದ ಕೇಸರಿ ಶಾಲು ಹಾಕಿಕೊಂಡಿದ್ದೇನೆ. ಪ್ರಮಾಣ ವಚನ ಸ್ವೀಕಾರ ಮಾಡುವಾಗಲೂ, ಗೆದ್ದಾಗ ಪ್ರಮಾಣ ಪತ್ರ ಸ್ವೀಕಾರ ಮಾಡೋವಾಗ ಕೂಡ ಕೇಸರಿ ಶಾಲು ಹಾಕಿದ್ದೇನೆ. ಹೀಗಾಗಿ ಮೊದಲ ದಿನ ಸದನಕ್ಕೆ ಬಂದಿರೋದ್ರೀಂದ ಕೇಸರು ಶಾಲು ಧರಿಸಿ ಬಂದಿದ್ದೇನೆ ಅಷ್ಟೇ. ಇದರಲ್ಲಿ ವಿಶೇಷವೇನಿಲ್ಲ ಅಂದ್ರು. ಇದನ್ನೂ ಓದಿ: ಧರ್ಮ ಮುಖ್ಯ ಎಂದು ಪರೀಕ್ಷೆಯನ್ನೇ ಬಹಿಷ್ಕರಿಸಿದ ಶಿವಮೊಗ್ಗ ವಿದ್ಯಾರ್ಥಿನಿಯರು

    ನಾಳೆಯ ಕಲಾಪದಲ್ಲಿ ಹಿಜಬ್-ಕೇಸರಿ ಶಾಲು ವಿವಾದ ಆಡಳಿತ ಮತ್ತು ವಿಪಕ್ಷಗಳ ನಡುವೆ ಸಂಘರ್ಷಕ್ಕೆ ಕಾರಣವಾಗುವ ನಿರೀಕ್ಷೆ ಇದೆ. ಇದನ್ನೂ ಓದಿ: ಹಿಜಬ್ ಗಲಾಟೆ ಬೆನ್ನಲ್ಲೇ ರಾಜೀನಾಮೆ ನೀಡಿದ ಬೆಂಗಳೂರು ಶಿಕ್ಷಕಿ

  • ನಾಲ್ಕನೇ ದಿನ ಹೈಕೋರ್ಟ್‍ನಲ್ಲಿ ಹಿಜಬ್ ವಿಚಾರಣೆ – ಅರ್ಜಿದಾರರ ಪರವಾಗಿ ವಕೀಲ ಕಾಮತ್ ಪ್ರಬಲ ವಾದ

    ನಾಲ್ಕನೇ ದಿನ ಹೈಕೋರ್ಟ್‍ನಲ್ಲಿ ಹಿಜಬ್ ವಿಚಾರಣೆ – ಅರ್ಜಿದಾರರ ಪರವಾಗಿ ವಕೀಲ ಕಾಮತ್ ಪ್ರಬಲ ವಾದ

    ಬೆಂಗಳೂರು: ಹಿಜಬ್ ವಿವಾದದ ಬಗ್ಗೆ ಹೈಕೋರ್ಟ್‍ನಲ್ಲಿ ನಾಲ್ಕನೇ ದಿನದ ವಿಚಾರಣೆ ಇಂದು ನಡೆಯಿತು. ಐದು ಅರ್ಜಿಗಳನ್ನು ಏಕಕಾಲದಲ್ಲಿ ವಿಚಾರಣೆಗೆ ಕೈಗೆತ್ತಿಕೊಂಡ ಹೈಕೋರ್ಟ್ ಪೀಠ, ಸುದೀರ್ಘ ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಿತು.

    ಇಂದು ಅರ್ಜಿದಾರರ ಪರ ವಕೀಲ ದೇವದತ್ ಕಾಮತ್ ವಾದ ಮಂಡಿಸಿದ್ರು. ವಿದ್ಯಾರ್ಥಿನಿಯರು ಹಿಜಬ್ ಧರಿಸುವುದು ಧಾರ್ಮಿಕ ಹಕ್ಕು ಅಲ್ಲ ಎಂದು ಸರ್ಕಾರ ಹೇಳಿರೋದು ತಪ್ಪು. ಸರ್ಕಾರಕ್ಕೆ ಈ ರೀತಿ ಹೇಳಲು ಯಾವುದೇ ಹಕ್ಕಿಲ್ಲ. ಧಾರ್ಮಿಕ ನಂಬಿಕೆಗಳನ್ನು ಪಾಲನೆ ಮಾಡುವವರ ಭಾವನೆಗಳಿಗೆ ಸರ್ಕಾರ ಬೆಲೆಯೇ ಕೊಡುತ್ತಿಲ್ಲ. ವಿದ್ಯಾರ್ಥಿನಿಯರು ಕಳೆದ ಹಲವು ವರ್ಷಗಳಿಂದ ಹಿಜನ್ ಧರಿಸಿಯೇ ತರಗತಿಗಳಿಗೆ ಬರುತ್ತಿದ್ದಾರೆ. ಆಡಳಿತ ಮಂಡಳಿಯೂ ಈ ಹಿಂದೆ ಪ್ರಶ್ನೆ ಮಾಡಿರಲಿಲ್ಲ. ಹಿಜಬ್ ಬ್ಯಾನ್ ಮಾಡಿರೋದು ಕಾಲೇಜು ಅಭಿವೃದ್ಧಿ ಸಮಿತಿ ಅಲ್ಲ. ಇದು ಎಂಎಲ್‍ಎ ಸಮಿತಿ. ಸರ್ಕಾರದ ಆದೇಶ ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ್ದಲ್ಲ ಅನ್ನೋದಾದ್ರೆ ಈ ಆದೇಶವನ್ನು ತಕ್ಷಣವೇ ರದ್ದು ಮಾಡಬೇಕು ಎಂದು ವಾದ ಮಂಡಿಸಿದ್ರು. ಇದನ್ನೂ ಓದಿ: ಬಿಜೆಪಿ ಆಡಳಿತದಲ್ಲಿ ಮುಸ್ಲಿಂ ಹೆಣ್ಣು ಮಕ್ಕಳು ಸುರಕ್ಷಿತವಾಗಿದ್ದಾರೆ: ಮೋದಿ

    ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ, ಆರೋಗ್ಯಕ್ಕೆ ಧಕ್ಕೆ ತಂದರೆ ಮೂಲಭೂತ ಆಚರಣೆಗಳನ್ನು ನಿರ್ಬಂಧಿಸಲು ಅವಕಾಶ ಇದೆ. ಆದರೆ ಧಾರ್ಮಿಕತೆ, ನೈತಿಕತೆಯ ಕಾರಣ ನೀಡಿ ಮೂಲಭೂತ ಹಕ್ಕುಗಳನ್ನು ಕಿತ್ತುಕೊಳ್ಳುವಂತಿಲ್ಲ. ಕುರಾನ್‍ನಲ್ಲಿ ಹಿಜಬ್ ಬಗ್ಗೆ ವಿವರಣೆ ಇದೆ. ತಲೆ, ಕತ್ತು ಮುಚ್ಚಿಕೊಳ್ಳಬೇಕೆಂದು ಹೇಳಲಾಗಿದೆ. ಯೂನಿಫಾರಂ ಬಣ್ಣದ ಹಿಜಬ್ ಧರಿಸಿದ್ರೆ ಸಮಸ್ಯೆ ಆಗಲ್ಲ. ಧಾರ್ಮಿಕ ಹಕ್ಕುಗಳನ್ನು ಸರ್ಕಾರ ರಕ್ಷಣೆ ಮಾಡಬೇಕಿದೆ ಎಂದು ವಾದ ಮಂಡನೆ ಮಾಡಿದ್ರು. ಇದನ್ನೂ ಓದಿ: ಹಿಜಬ್ ಬೆಂಬಲಿಸಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬೃಹತ್ ಪ್ರತಿಭಟನೆ!

    ಹಿಜಬ್ ಮೂಲಭೂತ ಆಚರಣೆ ಎಂದು ಕೇರಳ, ಮದ್ರಾಸ್ ಹೈಕೋರ್ಟ್ ತೀರ್ಪಲ್ಲಿ ಹೇಳಲಾಗಿದೆ. ಶಿರೂರು ಮಠಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಉಡುಪು, ಆಹಾರ ಧಾರ್ಮಿಕ ಮೂಲಭೂತ ಹಕ್ಕಿನ ಭಾಗ ಎಂದು ಸುಪ್ರೀಂಕೋರ್ಟ್ ಹೇಳಿದೆ. ಧಾರ್ಮಿಕ ಆಚರಣೆಯನ್ನು ನಿರ್ಧರಿಸುವುದು ಹೊರಗಿನವರ ಹಕ್ಕಲ್ಲ. ಕೇರಳದಲ್ಲಿ ಎಂಬಿಬಿಎಸ್ ವಿದ್ಯಾರ್ಥಿನಿಗೆ ಹಿಜಬ್ ಧರಿಸಿ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗಿತ್ತು. ಸಿಬಿಎಸ್‍ಇ ಶಾಲೆಗಳಲ್ಲಿಯೂ ಹಿಜಬ್ ಧರಿಸಲು ಅವಕಾಶ ಇದೆ. ಇಲ್ಲಿಯೂ ಮೂಲಭೂತ ಹಕ್ಕಿನ ರಕ್ಷಣೆ ಆಗಬೇಕು ಎಂದು ದೇವದತ್ ಕಾಮತ್ ವಾದ ಮಂಡಿಸಿದ್ರು. ಇದನ್ನೂ ಓದಿ: ನಾನು ಮತ್ತೆ ಶಾಸಕನಾದ್ರೆ ಮುಸ್ಲಿಮರು ಟೋಪಿ ತೆಗೆದು ತಿಲಕ ಇಡುವಂತೆ ಮಾಡ್ತೀನಿ: ಬಿಜೆಪಿ ಶಾಸಕ

    ಈ ಮಧ್ಯೆ ಸಾಮಾಜಿಕ ಕಲ್ಯಾಣಕ್ಕಾಗಿ ಧಾರ್ಮಿಕ ಮೂಲಭೂತ ಆಚರಣೆಯನ್ನು ನಿರ್ಬಂಧಿಸಬಹುದೇ..? ಮೂಲಭೂತ ಧಾರ್ಮಿಕ ಆಚರಣೆಗಳು ಪರಮೋಚ್ಛವೇ..? ಅಥವಾ ಆ ಆಚರಣೆಗಳ ಮೇಲೆ ನಿರ್ಬಂಧ ಹೇರಬಹುದೇ..? ಎಂದು ನ್ಯಾಯಪೀಠ ಕೇಳಿತು. ಸರ್ಕಾರ ಹಿಜಬ್ ನಿರ್ಬಂಧಕ್ಕೆ ಕಾನೂನು ಸುವ್ಯವಸ್ಥೆ ಕಾರಣ ನೀಡಿದೆಯೇ…? ಸರ್ಕಾರ ಹಾಗೆಂದು ಹೇಳಿದರೆ ನಿಮ್ಮ ವಾದ ಪರಿಶೀಲಿಸುತ್ತೇವೆ ಎಂದ ನ್ಯಾಯಪೀಠ ವಿಚಾರಣೆಯನ್ನು ನಾಳೆ ಮಧ್ಯಾಹ್ನಕ್ಕೆ ಮುಂದೂಡಿತು. ಇದನ್ನೂ ಓದಿ: ನಾನು ಹಿಜಬ್ ಬಗ್ಗೆ ಮಾತಾಡುವವನೇ, ನಾನ್ಯಾಕೆ ಕ್ಷಮೆ ಕೇಳಬೇಕು – ಡಿಕೆಶಿಗೆ ಜಮೀರ್ ಟಾಂಗ್