Tag: ಹಿಂದೂ ಸಮಾಜ ಪಾರ್ಟಿ

  • ಕಮಲೇಶ್ ತಿವಾರಿ ಕೊಲೆಗಾರರ ಶಿರಚ್ಛೇದನ ಮಾಡಿದವರಿಗೆ 1 ಕೋಟಿ ರೂ. ಬಹುಮಾನ- ಶಿವಸೇನೆ ಮುಖಂಡ

    ಕಮಲೇಶ್ ತಿವಾರಿ ಕೊಲೆಗಾರರ ಶಿರಚ್ಛೇದನ ಮಾಡಿದವರಿಗೆ 1 ಕೋಟಿ ರೂ. ಬಹುಮಾನ- ಶಿವಸೇನೆ ಮುಖಂಡ

    ಮುಂಬೈ: ಲಖನೌದಲ್ಲಿ ಕಮಲೇಶ್ ತಿವಾರಿ ಕೊಲೆ ಮಾಡಿದ ಆರೋಪದ ಮೇಲೆ ಬಂಧಿತರಾಗಿರುವ ಮೂವರನ್ನು ಶಿರಚ್ಛೇದನ ಮಾಡಿದರೆ 1 ಕೋಟಿ ರೂ. ಬಹುಮಾನ ನೀಡುವುದಾಗಿ ಶಿವಸೇನೆ ಮುಖಂಡರೊಬ್ಬರು ಘೋಷಿಸಿದ್ದಾರೆ.

    ಈ ಕುರಿತು ಶಿವ ಸೇನೆ ಮುಖಂಡ ಅರುಣ್ ಪಾಠಕ್ ವಿಡಿಯೋ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಕಮಲೇಶ್ ತಿವಾರಿ ಅವರನ್ನು ಕ್ರೂರವಾಗಿ ಕೊಂದ ಜನರ ವಿರುದ್ಧ ಯಾವುದೇ ಕಾನೂನು ಕ್ರಮಗಳನ್ನು ಜರುಗಿಸಬಾರದು. ಬದಲಿಗೆ ಕಮಲೇಶ್ ಅವರನ್ನು ಕೊಂದ ರೀತಿಯಲ್ಲೇ ಕ್ರೂರವಾಗಿ ಶಿರಚ್ಛೇದನ ಮಾಡಬೇಕು. ಶಿರಚ್ಛೇದನ ಮಾಡಿದವರಿಗೆ ನಾನು ಒಂದು ಕೋಟಿ ರೂ.ಗಳ ಬಹುಮಾನ ಘೋಷಿಸುತ್ತೇನೆ. ಆ ಹಣವನ್ನು ಅವರ ಕುಟುಂಬದ ಸದಸ್ಯರಿಗೆ ನೀಡುತ್ತೇನೆ ಎಂದು ತಿಳಿಸಿದ್ದಾರೆ.

    ತಿವಾರಿ ಅವರು ಹಿಂದೂಗಳ ಪರವಾಗಿ ಮಾತನಾಡಿದ್ದಕ್ಕೆ ಅವರನ್ನು ಹತ್ಯೆ ಮಾಡಲಾಗಿದೆ. ಅವರ ಹತ್ಯೆಯಿಂದ ಹಿಂದೂಗಳ ಪರವಾಗಿ ಮಾತನಾಡುವುದನ್ನು ನಿಲ್ಲಿಸಲಾಗದು ಎಂದು ಸಂದೇಶ ರವಾನಿಸುವ ಪ್ರಯತ್ನವಾಗಬೇಕಿದೆ. ಇನ್ನು ಮುಂದೆ ದೇಶದಲ್ಲಿ ಈ ರೀತಿಯಾಗಲು ನಾವು ಬಿಡುವುದಿಲ್ಲ ಎಂದು ಪಾಠಕ್ ಎಚ್ಚರಿಸಿದ್ದಾರೆ.

    ಕಮಲೇಶ್ ತಿವಾರಿ ಅವರು ಹಿಂದೂ ಸಮಾಜ ಪಾರ್ಟಿಯ ಮುಖ್ಯಸ್ಥರು ಹಾಗೂ ಹಿಂದೂ ಮಹಾಸಭಾ ಮಾಜಿ ನಾಯಕರಾಗಿದ್ದು, ಶುಕ್ರವಾರ ಲಕ್ನೋದಲ್ಲಿ ಗುಂಡು ಹಾರಿಸಿ ಕೊಲೆ ಮಾಡಲಾಗಿತ್ತು. ಪ್ರಕರಣದ ತನಿಖೆಗೆ ಎಸ್‍ಐಟಿ ತಂಡ ರಚಿಸಲಾಗಿತ್ತು. ಘಟನೆ ನಡೆದ 24 ಗಂಟೆಯೊಳಗೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ಮೌಲಾನಾ ಅನ್ವರ್ಲ್ ಹಕ್, ಮುಫ್ತಿ ನಯೀಮ್ ಖಾಜ್ಮಿ, ಗುಜರಾತ್ ಮೂಲದ ಮೌಲಾನಾ ಮೊಹ್ಸಿನ್ ಶೇಖ್ (24), ರಶೀದ್ ಅಹ್ಮದ್ ಪಠಾಣ್ (23) ಮತ್ತು ಫೈಜಾನ್ (21) ಬಂಧಿತ ಆರೋಪಿಗಳು. ಉತ್ತರ ಪ್ರದೇಶ ಹಾಗೂ ಗುಜರಾತ್ ಪೊಲೀಸರ ಜಂಟಿ ಕಾರ್ಯಾಚರಣೆ ಮೂಲಕ 24 ಗಂಟೆಯೊಳಗೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಉತ್ತರ ಪ್ರದೇಶ ಡಿಜಿಪಿ ಓ.ಪಿ.ಸಿಂಗ್, ಘಟನೆ ನಡೆದ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವು. ಬಳಿಕ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾ ಫುಟೇಜ್ ಪಡೆದು ನೋಡಿದಾಗ ಗುಜರಾತ್ ಮೂಲದವರು ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಎರಡು ತಂಡಗಳನ್ನು ರಚಿಸಿ ಆರೋಪಿಗಳ ಬಂಧನಕ್ಕೆ ಜಂಟಿ ಕಾರ್ಯಚರಣೆ ನಡೆಸಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.

    ಕಮಲೇಶ್ ತಿವಾರಿ 2015ರಲ್ಲಿ ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಗಳು ಕೊಲೆಗೈದಿರುವುದು ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದು ಬಂದಿದೆ. ಬಂಧಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಿ ಕೊಲೆಯ ಹಿಂದಿರುವ ವ್ಯಕ್ತಿಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತದೆ ಎಂದು ಓ.ಪಿ.ಸಿಂಗ್ ತಿಳಿಸಿದ್ದಾರೆ.

    ಆರೋಪಿಗಳು ಕೇಸರಿ ಬಟ್ಟೆ ಧರಿಸಿ ದೀಪಾವಳಿ ಉಡುಗೊರೆ ನೀಡುವ ನೆಪದಲ್ಲಿ ಕಮಲೇಶ್ ತಿವಾರಿ ಅವರ ಕಚೇರಿಗೆ ಬಂದಿದ್ದರು. ಈ ವೇಳೆ ತಿವಾರಿ ಅವರ ಜೊತೆಗೆ ಚಹಾ ಕುಡಿದು ಹತ್ಯೆಗೆ ಪ್ಲ್ಯಾನ್ ರೂಪಿಸಿದ್ದರು. ಸ್ವೀಟ್ ನೀಡುವ ನೆಪದಲ್ಲಿ ಬಾಕ್ಸ್ ತೆರೆದ ಆರೋಪಿಗಳು ಅದರಲ್ಲಿದ್ದ ಗನ್‍ನಿಂದ ಗುಂಡು ಹಾರಿಸಿದ್ದರು. ಬಳಿಕ ಮಾರಕಾಸ್ತ್ರಗಳಿಂದ ಕುತ್ತಿಗೆ, ಎದೆ, ಮುಖದ ಮೇಲೆ ಹಲ್ಲೆ ಮಾಡಿ, ಪರಾರಿಯಾಗಿದ್ದರು.