Tag: ಹಿಂದುಳಿದ ವರ್ಗಗಳ ಆಯೋಗ

  • ನಾಳೆಯಿಂದ ಜಾತಿ ಜನಗಣತಿ, ಒಬ್ಬ ಸಮೀಕ್ಷಕರಿಗೆ ಕನಿಷ್ಠ 150 ಮನೆ ಹಂಚಿಕೆ: ಮಧುಸೂದನ್ ನಾಯ್ಕ್

    ನಾಳೆಯಿಂದ ಜಾತಿ ಜನಗಣತಿ, ಒಬ್ಬ ಸಮೀಕ್ಷಕರಿಗೆ ಕನಿಷ್ಠ 150 ಮನೆ ಹಂಚಿಕೆ: ಮಧುಸೂದನ್ ನಾಯ್ಕ್

    ಬೆಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ (Backward Classes Commission) ಈಗಾಗಲೇ ಎರಡು ಕೋಟಿ ಮನೆಗಳ ಪಟ್ಟಿ ತಯಾರಿಸುವ, ಜಿಯೋ-ಟ್ಯಾಗಿಂಗ್ ಹಾಗೂ ಗಣತಿ ಬ್ಲಾಕ್‌ನ ನಕ್ಷೆ ಮಾಡುವ ಕಾರ್ಯವನ್ನು ಮಾಡಿ ಮುಗಿಸಿದ್ದೇವೆ. ಬ್ಲಾಕ್ ನಕ್ಷೆಗಳಲ್ಲಿ ಮನೆಗಳನ್ನು ಗುರುತಿಸುವುದಲ್ಲದೇ ರಸ್ತೆಗಳನ್ನೂ ನಮೂದಿಸಿದ್ದು, ಗಣತಿದಾರರು ಸಮೀಕ್ಷೆ ಮಾಡಬೇಕಾದ ಮನೆಯನ್ನು ತಲುಪಲು ಅನುಕೂಲವಾಗುವಂತೆ ಮಾಡಿದ್ದೇವೆ. ಹಾಗಾಗಿ ಸೆಪ್ಟೆಂಬರ್‌ 22ರಿಂದ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ನಡೆಯಲಿದೆ ಎಂದು ಆಯೋಗದ ಅಧ್ಯಕ್ಷರಾದ ಮಧುಸೂದನ್ ಆರ್. ನಾಯ್ಕ್ (Madhusudan R Naik) ಅವರು ತಿಳಿಸಿದರು.

    ವಸಂತನಗರದ ದೇವರಾಜು ಅರಸು ಭವನದಲ್ಲಿಂದು‌ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ಸಮಸ್ತ ನಾಗರಿಕರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸೆಪ್ಟೆಂಬರ್ 22ರಿಂದ ಪ್ರಾರಂಭಿಸುತ್ತಿದೆ. ಒಬ್ಬ ಸಮೀಕ್ಷಕರಿಗೆ ಸುಮಾರು 140 ರಿಂದ 150 ಮನೆಗಳನ್ನು ಹೊಂದಿರುವ ಬ್ಲಾಕ್‌ಗಳನ್ನ ಹಂಚಿಕೆ ಮಾಡಲಾಗಿದೆ. ಸುಮಾರು 2 ಲಕ್ಷ ಶಿಕ್ಷಕರು ಹಾಗೂ ಇತರ ಸಿಬ್ಬಂದಿ ಸಮೀಕ್ಷೆ ಹಾಗೂ ಸಂಬಂಧಿತ ಕೆಲಸಗಳಲ್ಲಿ ನಿರತರಾಗಲಿದ್ದು, ಇಲಾಖಾ ಅಧಿಕಾರಿಗಳು ಮೇಲುಸ್ತುವಾರಿ ಮಾಡಲಿದ್ದಾರೆ. ಒಬ್ಬ ಸಮೀಕ್ಷಕರು ಒಂದು ದಿನಕ್ಕೆ ಅಂದಾಜು 7 ರಿಂದ 8 ಮನೆಗಳನ್ನು ಸಮೀಕ್ಷೆ ಮಾಡಿದಲ್ಲಿ ರಾಜ್ಯಾದ್ಯಂತ ಇರುವ ಸುಮಾರು 2 ಕೋಟಿ ಕುಟುಂಬಗಳ ಮಾಹಿತಿಯನ್ನು 16 ದಿನಗಳಲ್ಲಿ ಮೊಬೈಲ್ ಆಪ್‌ನಲ್ಲಿ ಸಂಗ್ರಹಿಸಬಹುದಾಗಿದೆ. ಸಮೀಕ್ಷೆಯಲ್ಲಿ ಕುಟುಂಬಗಳ ದತ್ತಾಂಶಗಳನ್ನು ವಿಶೇಷ ತಂತ್ರಾಂಶ ಹೊಂದಿರುವ ಮೊಬೈಲ್‌ ಆ್ಯಪ್ ಮೂಲಕ ಸಂಗ್ರಹಿಸಲಾಗುತ್ತದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಒಕ್ಕಲಿಗ ಸಮಾಜದ ಅಭಿಪ್ರಾಯದ ಬಗ್ಗೆ ಮಾತನಾಡಲು ಹೋಗುವುದಿಲ್ಲ: ಡಿಕೆಶಿ

    ಸಮೀಕ್ಷಾ ಕಾರ್ಯಕ್ಕಾಗಿ ಸಮೀಕ್ಷಾದಾರರಿಗೆ ಮತ್ತು ಮೇಲ್ವಿಚಾರಕರಿಗೆ ಅಗತ್ಯ ಪ್ರಮಾಣದ ತರಬೇತಿ ನೀಡಲಾಗಿದೆ. ಸಮೀಕ್ಷಾ ನಮೂನೆಯಲ್ಲಿ ಒಟ್ಟು 60 ಪ್ರಶ್ನೆಗಳ ಕಾಲಂ ಗಳಿದ್ದು ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ನಾಗರಿಕರು ಒಂದಕ್ಕಿಂತ ಹೆಚ್ಚು ಬಾರಿ ಸಮೀಕ್ಷೆಗೆ ಒಳಪಡುವುದನ್ನು ತಪ್ಪಿಸಲು ಆಧಾರ್ ಸಂಖ್ಯೆ ಒದಗಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಆರು ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ನಾಗರಿಕರೂ ಆಧಾ‌ರ್ ಸಂಖ್ಯೆಯನ್ನು ಸಿದ್ಧವಿಟ್ಟುಕೊಳ್ಳಲು ವಿನಂತಿಸಲಾಗಿದೆ. ಕುಟುಂಬದ ಬಳಿ ರೇಷನ್ ಕಾರ್ಡ್ ಇದ್ದಲ್ಲಿ ಅದರ ಸಂಖ್ಯೆಯನ್ನು ನಮೂದಿಸಿದ್ರೆ ಅದರಲ್ಲಿ ಇರುವ ಮಾಹಿತಿಯು ಸ್ವಯಂಚಾಲಿತವಾಗಿ (Auto Populated) ಪ್ರದರ್ಶಿತವಾಗುತ್ತದೆ. ಇದರಿಂದ ಸಮಯ ಉಳಿತಾಯವಾಗುತ್ತದೆ ಮತ್ತು ಪರಿಶೀಲನೆಯ ನಂತರ ಸಮೀಕ್ಷೆ ಮುಂದುವರಿಯುತ್ತದೆ ಎಂದು ವಿವರಿಸಿದರು. ಇದನ್ನೂ ಓದಿ: ಹಿಂದೂ ಕ್ರೈಸ್ತಗೆ ಕೊಕ್ – ಮತಾಂತರ ಆದವರಿಗೆ ಮೂಲ ಜಾತಿ ಅನ್ವಯ ಆಗಲ್ಲ

    ಕೆಲಸದ ಮೇಲೆ ಹೊರಗೆ ಹೋಗಿರುವವರ ಮಾಹಿತಿಯನ್ನು ಪಡೆಯುವ ದೃಷ್ಠಿಯಿಂದ ಆಧಾರ್ ಪರಿಶೀಲನೆ ಮೂಲಕ ಆನ್‌ಲೈನ್‌ನಲ್ಲಿ ಸಮೀಕ್ಷೆ ನಡೆಸುವ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತದೆ. ಅದರ ಮಾಹಿತಿಯನ್ನು ವೆಬ್‌ಸೈಟ್ ವಿಳಾಸ https://kscbc.karnataka.gov.in ರಲ್ಲಿ ಪಡೆಯಬಹುದಾಗಿದೆ. ಹಾಗೂ ಏನಾದರೂ ಹೆಚ್ಚಿನ ವಿವರಗಳು ಬೇಕಿದ್ದಲ್ಲಿ ಸಹಾಯವಾಣಿ ಸಂಖ್ಯೆ: 8050770004ಗೆ ಸಂಪರ್ಕಿಸಬಹುದಾಗಿದೆ. ಇದನ್ನೂ ಓದಿ: ಫಾದರ್ ಸಿದ್ದರಾಮಯ್ಯ ಕುಲ ಶಾಸ್ತ್ರೀಯ ಅಧ್ಯಯನ ಮಾಡಬೇಕು: ಸುನಿಲ್ ಕುಮಾರ್ ಟಾಂಗ್

    ಕೆಲವು ಅನಗತ್ಯ ವಿವಾದಗಳನ್ನು ಪರಿಹರಿಸಲು ಈಗಾಗಲೇ ಕ್ರಮ ತೆಗೆದುಕೊಳ್ಳಲಾಗಿದೆ. ಜಾತಿಗಳನ್ನು ಸೃಷ್ಟಿಸುವ ಕೆಲಸವನ್ನು ಆಯೋಗ ಮಾಡಿರುವುದಿಲ್ಲ. ಹಿಂದಿನ ವರ್ಷಗಳಲ್ಲಿ ಅಸ್ತಿತ್ವದಲ್ಲಿ ಇವೆ ಎಂದು ಹೇಳಲಾದ ಜಾತಿಗಳನ್ನು ಸಮೀಕ್ಷಾದಾರರ ಅನುಕೂಲಕ್ಕಾಗಿ ಮೊಬೈಲ್ ಆ್ಯಪ್‌ನ ಡ್ರಾಪ್ ಡೌನ್‌ನಲ್ಲಿ ಪಟ್ಟಿಮಾಡಿ ಒದಗಿಸಲಾಗಿದೆ. ಇದು ಸಮೀಕ್ಷಾದಾರರ ಆಂತರಿಕ ಬಳಕೆಗೆ ಮಾತ್ರ ಇರುತ್ತದೆ. ಇದು ಸಾರ್ವಜನಿಕ ದಾಖಲೆ ಅಲ್ಲ, ಈ ಪಟ್ಟಿಗೆ ಯಾವುದೇ ಕಾನೂನು ಮಾನ್ಯತೆಯೂ ಇಲ್ಲ. ಜಾತಿಗಳನ್ನು ಸುಲಭವಾಗಿ ಗುರುತಿಸುವ ಉದ್ದೇಶದಿಂದ ಉಪಯೋಗಿಸಲಾಗುತ್ತದೆಯೇ ಹೊರತು ಯಾರೂ ಅದನ್ನು ಬೇರೆ ಉದ್ದೇಶಕ್ಕೆ ಬಳಸಲು ಸಾಧ್ಯವಿರುವುದಿಲ್ಲ. ಸಮೀಕ್ಷೆ ಮುಗಿದ ನಂತರ ಸಂಗ್ರಹಿಸಲಾದ ಮಾಹಿತಿಗಳನ್ನು ಆಯೋಗವು ವಿಶ್ಲೇಷಿಸುತ್ತದೆ. ವೈಜ್ಞಾನಿಕ ವಿಶ್ಲೇಷಣೆಯ ನಂತರ ಮಾತ್ರ ವಿವಿಧ ಜಾತಿ ಜನಾಂಗಗಳಿಗೆ ಒದಗಿಸಬಹುದಾದ ಅನುಕೂಲತೆಗಳ ಬಗ್ಗೆ ಶಿಫಾರಸ್ಸಿನೊಂದಿಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

    ತಪ್ಪು ಸಂದೇಶ ಹಬ್ಬಿದ ಕಾರಣ ಆಯೋಗವು ಜನರ ಆತಂಕಗಳನ್ನು ಪರಿಗಣಿಸಿ ಈ ಕ್ರಮ ಕೈಗೊಂಡಿರುತ್ತದೆ. ಧರ್ಮ ಹಾಗೂ ಜಾತಿ, ಉಪಜಾತಿ ಆಯ್ಕೆ ಕುಟುಂಬದ ನಿರ್ಧಾರ, ಕುಟುಂಬದ ಸದಸ್ಯರು ಏನು ತಿಳಿಸುತ್ತಾರೋ ಅದನ್ನು ದಾಖಲಿಸಲು ಕಾಲಂ ನೀಡಲಾಗಿದೆ. ಸಮೀಕ್ಷಕರು ಬಳಸುವ ಪ್ರಾಪ್‌ಡೌನ್ ಆಯ್ಕೆ ವ್ಯವಸ್ಥೆಯಲ್ಲಿ ನಾಗರಿಕರಿಗೆ ಗೊಂದಲಕ್ಕೆ ಒಳಗಾಗಿರುವ ಕೆಲವು ಜಾತಿಗಳ ಹೆಸರನ್ನು ಪಟ್ಟಿಯಲ್ಲಿ ನಿಷ್ಕ್ರಿಯಗೊಳಿಸಲಾಗಿದೆ. ಈ ವ್ಯವಸ್ಥೆಯಿಂದ ಯಾವುದೇ ಜಾತಿಯ ಹೆಸರನ್ನು ಸ್ವ -ಇಚ್ಛೆಯಿಂದ ನಮೂದಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಬಸಮೀಕ್ಷೆಯ ಸಮಯದಲ್ಲಿ KYC ನಡೆಸುವಲ್ಲಿ ಎದುರಾಗುತ್ತಿದ್ದ ಅಡಚಣೆಗಳನ್ನು ಕೂಡ ಪರಿಹರಿಸಲು ಮುಖ ಚಹರೆ ಗುರುತಿಸುವ (Face recognition) ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸಾರ್ವಜನಿಕರ ಸಂಪೂರ್ಣ ಸಹಕಾರದೊಂದಿಗೆ ನಿಗದಿತ ಅವಧಿಯೊಳಗೆ ಸಮೀಕ್ಷಾ ಕಾರ್ಯವನ್ನು ಪೂರ್ಣಗೊಳಿಸುವ ವಿಶ್ವಾಸವನ್ನು ಆಯೋಗವು ಹೊಂದಿದೆ ಎಂದು ತಿಳಿಸಿದರು.

    ಸುದ್ದಿಗೋಷ್ಠಿಯಲ್ಲಿ ಹಿಂದುಳಿದ ವರ್ಗದ ಇಲಾಖೆಯ ಆಯುಕ್ತರೂ ಹಾಗೂ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಕಾರ್ಯದರ್ಶಿಗಳಾದ ದಯಾನಂದ ಅವರು ಉಪಸ್ಥಿತರಿದ್ದರು. ಇದನ್ನೂ ಓದಿ: ಆಣೆ ಪ್ರಮಾಣಕ್ಕಾಗಿ ದೇವಾಲಯಕ್ಕೆ ಬಂದ ಹೊನ್ನಾಳಿ ಶಾಸಕ – ಸವಾಲೆಸೆದು ಕೈಕೊಟ್ಟ ರೇಣುಕಾಚಾರ್ಯ ಆಪ್ತ

  • ಹೊಸದಾಗಿ ಜಾತಿ ಜನಗಣತಿ ಸಮೀಕ್ಷೆಗೆ ರಾಜ್ಯ ಸರ್ಕಾರ ಅಸ್ತು – ಸೆ.22ರಿಂದ ಅ.7ರ ವರೆಗೆ ಸಮೀಕ್ಷೆ

    ಹೊಸದಾಗಿ ಜಾತಿ ಜನಗಣತಿ ಸಮೀಕ್ಷೆಗೆ ರಾಜ್ಯ ಸರ್ಕಾರ ಅಸ್ತು – ಸೆ.22ರಿಂದ ಅ.7ರ ವರೆಗೆ ಸಮೀಕ್ಷೆ

    – ಕಾಂತರಾಜು ಅಧ್ಯಕ್ಷತೆಯಲ್ಲಿ ನಡೆದಿದ್ದ ಗಣತಿ ವರದಿ ತಿರಸ್ಕಾರ
    – ಮಧುಸೂದನ್ ನಾಯಕ್ ಕಮಿಟಿಗೆ ಸಮೀಕ್ಷೆ ಹೊಣೆ; ಡಿಸೆಂಬರ್‌ ಒಳಗೆ ವರದಿ
    – ಮರು ಸಮೀಕ್ಷೆಗೆ 420 ಕೋಟಿ ಮೀಸಲು, 1.75 ಲಕ್ಷ ಶಿಕ್ಷಕರ ಬಳಕೆ

    ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗದ ನೇತೃತ್ವದಲ್ಲಿ ಹೊಸದಾಗಿ ಜಾತಿ ಜನಗಣತಿ ನಡೆಸಲು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಸೆಪ್ಟೆಂಬರ್‌ 22ರಿಂದ ಅಕ್ಟೋಬರ್‌ 7ರ ವರೆಗೆ ಮಧುಸೂದನ್ ನಾಯಕ್ ಸಮಿತಿ ನೇತೃತ್ವದಲ್ಲಿ ಸಮೀಕ್ಷೆ ನಡೆಯಲಿದೆ. ಮರು ಸಮೀಕ್ಷೆಗೆ ಸದ್ಯ 420 ಕೋಟಿ ರೂ. ಖರ್ಚಾಗಲಿದ್ದು, ಅಗತ್ಯಬಿದ್ದರೆ ಹೆಚ್ಚಿನ ಅನುದಾನ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದರು. ಪ್ರತಿಯೊಬ್ಬರಿಗೂ ಸಮಾನತೆ ಕಲ್ಪಿಸುವ ಉದ್ದೇಶದಿಂದ ಈ ಗಣತಿ ಮುಖ್ಯವಾಗಿದ್ದು, ಎಲ್ಲಾ ನಾಗರಿಕರೂ ಪಾಲ್ಗೊಳ್ಳಬೇಕು, ಸಮೀಕ್ಷೆಯಲ್ಲಿ ಕೇಳುವ 60 ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು.

    ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ, ಜಾತಿ ಜನಗಣತಿ ವರದಿ ಬಗ್ಗೆ ಸಂಪೂರ್ಣ ವಿವರಣೆ ನೀಡಿದರು. ಸಮಾಜದಲ್ಲಿ ಅನೇಕ ಜಾತಿ, ಧರ್ಮಗಳಿವೆ. ವೈರುಧ್ಯ, ಅಸಮಾನತೆ ಇದೆ. ಆದ್ರೆ ಸಂವಿಧಾನ ಎಲ್ಲರಿಗೂ ಸಮಾನ ಅವಕಾಶ, ಸಾಮಾಜಿಕ ನ್ಯಾಯ ಕೊಡಬೇಕು ಅಂತ ಹೇಳುತ್ತೆ. ಅಂಬೇಡ್ಕರ್ ಕೂಡ ಇದನ್ನೇ ಹೇಳಿದ್ದಾರೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಅಸಮಾನತೆ ಇದೆ ಅಂತ ಅಂಬೇಡ್ಕರ್ ಹೇಳಿದ್ರು. ಈ ಪ್ರಜಾಪ್ರಭುತ್ವ ಉಳಿಯಬೇಕಾದ್ರೆ ಅಸಮಾನತೆ ಹೋಗಲಾಡಿಸಬೇಕು. ಅಸಮಾನತೆ ಇದ್ದರೆ ಅದರಿಂದ ನರಳೊ ಜನರು ಪ್ರಜಾಪ್ರಭುತ್ವದ ಸೌಧ ಧ್ವಂಸ ಮಾಡ್ತಾರೆ ಅಂತ ಹೇಳಿದ್ರು. ಹಾಗಾಗಿ ಸಮಾಜದಲ್ಲಿ ಅಸಮಾನತೆ ಉಳಿಯಲು ಅವಕಾಶ ಕೊಡಬಾರದು ಎಂದು ಸಿಎಂ ಕಿವಿಮಾತು ಹೇಳಿದರು.

    ರಾಜ್ಯದಲ್ಲಿದ್ದಾರೆ 7 ಕೋಟಿ ಜನ
    ಮುಂದುವರಿದು… ನಮ್ಮ ರಾಜ್ಯದಲ್ಲಿ ಸದ್ಯ 7 ಕೋಟಿ ಜನಸಂಖ್ಯೆ ಇದೆ. ಸುಮಾರು 2 ಕೋಟಿ ಕುಟುಂಬಗಳು ಇವೆ. ಇವರಿಗೆ ಸಮಾನ ಅವಕಾಶ ಒದಗಿಸಬೇಕು. ಸಮಾನತೆ ಸಮವಾಗಿ ಕೊಡಬೇಕು. ಅದನ್ನೇ ಸಂವಿಧಾನ ಹೇಳಿರೋದು. ಸಮಾನತೆ, ಸಮಾನ ಅವಕಾಶ ಒದಗಿಸೋದು ನಮ್ಮ ಕರ್ತವ್ಯ ಹೀಗಾಗಿ 2015 ರಲ್ಲೇ ಸಮೀಕ್ಷೆ ಮಾಡಿಸಿದ್ದೆ. ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮಾಡಿದ್ವಿ. ಕಾಂತರಾಜು ಸರ್ವೆ ಮಾಡಿದ್ರು, ಶಿಕ್ಷಣ, ಉದ್ಯೋಗ, ಜಾತಿ, ಧರ್ಮ ಅಂತ ಗೊತ್ತಾಗಲು ಸರ್ವೆ ಮಾಡಿಸಿದ್ದೆ. ಅವರ ಮಾಹಿತಿ ಗೊತ್ತಾದರೆ ಅವರಿಗೆ ಯೋಜನೆ ಕೊಡಲು ಅನುಕೂಲ ಆಗುತ್ತದೆ ಅನ್ನೋದು ಇದರ ಹಿಂದಿನ ಉದ್ದೇಶವಾಗಿತ್ತು ಎಂದು ತಿಳಿಸಿದರು.

    ಗ್ಯಾರಂಟಿ ಯೋಜನೆ ಮೂಲಕ ಅಸಮಾನತೆ ಸ್ವಲ್ಪ ಕಡಿಮೆ ಮಾಡೋ ಪ್ರಯತ್ನ ಮಾಡಿದ್ದೇವೆ. ಭಾಗ್ಯಗಳ ಮೂಲಕ ಸಮಾನತೆ ಕೊಡೋ ಕೆಲಸ ಮಾಡ್ತಿದ್ದೇವೆ. ಇದರ ಹೊರತಾಗಿಯೂ ಅವಕಾಶ ವಂಚಿತರಿಗೆ ಅವಕಾಶ ಕೊಡಲು ಅವರ ಬಗ್ಗೆ ಮಾಹಿತಿ ಇರಬೇಕು. ವಿಶೇಷ ಕಾರ್ಯಕ್ರಮ ಕೊಡಲು ದತ್ತಾಂಶಗಳು ನಮಗೆ ಗೊತ್ತಾಗಬೇಕು. ಅಮೆರಿಕದಲ್ಲಿ ಕರಿಯರಿಗೆ ಮೀಸಲಾತಿ ಇದೆ. ನಾವು ಹಿಂದುಳಿದವರಿಗೆ ಶಕ್ತಿ ತುಂಬೋ ಕೆಲಸ ಮಾಡಬೇಕು. ಹೀಗಾಗಿ ದತ್ತಾಂಶದ ಅವಶ್ಯಕತೆ ಇದೆ ಎಂದು ಹೇಳಿದರು.

    ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7 ವರೆಗೆ ಸಮೀಕ್ಷೆ
    ಕಾಂತರಾಜು ಅಧ್ಯಕ್ಷತೆಯಲ್ಲಿ ಸರ್ವೆ ಮಾಡಿಸಿದ್ವಿ. ಆದ್ರೆ ವರದಿ 10 ವರ್ಷ ಮೀರಿದೆ, ಹಾಗಾಗಿ ಕಾಂತರಾಜು ವರದಿಯನ್ನ ರಿಜೆಕ್ಟ್‌ ಮಾಡಿದ್ದೇವೆ. ಈಗ ಹೊಸದಾಗಿ ಸರ್ವೆ ಮಾಡಿಸ್ತಿದ್ದೇವೆ. ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7 ವರೆಗೆ ಸಮೀಕ್ಷೆ ನಡೆಯಲಿದೆ. 7 ಕೋಟಿ ಜನರ ಸಾಮಾಜಿಕ, ಶೈಕ್ಷಣಿಕ ಮಾಹಿತಿ ಪಡೆಯಲು ಹಿಂದುಳಿದ ವರ್ಗಗಳ ಆಯೋಗದಿಂದ ಸಮೀಕ್ಷೆ ಮಾಡಿಸ್ತಾ ಇದ್ದೇವೆ. ಮಧುಸೂದನ್ ನಾಯಕ್ ನೇತೃತ್ವದ ಆಯೋಗದಿಂದ ಸಮೀಕ್ಷೆ ನಡೆಯಲಿದೆ. ಜಾಗ್ರತೆಯಿಂದ ಸರ್ವೆ ಮಾಡಿ ವರದಿ ಕೊಡಲು ಸೂಚನೆ ನೀಡಲಾಗಿದೆ. ಡಿಸೆಂಬರ್ ಒಳಗೆ ವರದಿ ಕೊಡುವುದಾಗಿ ಹೇಳಿದ್ದಾರೆ ಎಂದು ಮಾಹಿತಿ ನೀಡಿದರು.

    ಸಮೀಕ್ಷೆ ಕಾರ್ಯಕ್ಕರ 1.75 ಲಕ್ಷ ಶಿಕ್ಷಕರ ಬಳಕೆ
    ಈ ಅವಧಿಯಲ್ಲಿ ದಸರಾ ರಜೆ ಇದೆ. ಹಾಗಾಗಿ ಶಿಕ್ಷಕರನ್ನ ಸರ್ವೇ ಕಾರ್ಯಕ್ಕೆ ಬಳಕೆ ಮಾಡಿಕೊಳ್ತೇವೆ. ಟೀಚರ್ ಗಳನ್ನ ಸರ್ವೆಗೆ ಬಳಕೆ ಮಾಡಿಕೊಳ್ತೀವಿ. 1.75 ಲಕ್ಷ ಶಿಕ್ಷಕರಿಂದ ಸಮೀಕ್ಷೆ ನಡೆಯುತ್ತದೆ. ಸಮೀಕ್ಷೆಯಲ್ಲಿ ಭಾಗವಹಿಸಿದ ಎಲ್ಲ ಶಿಕ್ಷಕರಿಗೆ ವಿಶೇಷ ಗೌರವ ಧನ ಕೊಡ್ತೀವಿ. ಪ್ರತಿಯೊಬ್ಬರಿಗೆ 20 ಸಾವಿರ ಗೌರವ ಧನ ಸಿಗಲಿದೆ. ಇದಕ್ಕಾಗಿ 325 ಕೋಟಿ ಖರ್ಚು ಆಗಲಿದೆ. ಜೊತೆಗೆ ಮರು ಸಮೀಕ್ಷಗೆ 420 ಕೋಟಿ ಹಣ ಕೊಡುತ್ತೇವೆ. ಇನ್ನೂ ಅಗ್ಯವಿದ್ದರೆ ಮತ್ತೆ ಹಣ ಕೊಡುತ್ತೇವೆ ಎಂದು ವಿವರಿಸಿದ್ದಾರೆ.

    ಪ್ರತಿಯೊಬ್ಬರೂ ಸಮೀಕ್ಷೆಯಲ್ಲಿ ಪಾಲ್ಗೊಳ್ಳಿ, 60 ಪ್ರಶ್ನೆಗೆ ಉತ್ತರಿಸಿ
    ಇನ್ನೂ ಮಧುಸೂದನ್ ನಾಯಕ್ ಕಮಿಟಿ ವೈಜ್ಞಾನಿಕ ಸರ್ವೆ ಮಾಡಬೇಕು. ವರದಿಯನ್ನ ಡಿಸೆಂಬರ್ ಒಳಗೆ ಕೊಡಬೇಕು. ಈ ಬಾರಿ ವಿನೂತನ ಸರ್ವೇ ಪದ್ದತಿ ಮಾಡ್ತಿದ್ದೇವೆ. ಮೀಟರ್ ರೀಡರ್‌ಗಳು, ಆರ್‌ಆರ್‌ ನಂಬರ್, ಜಿಯೊ ಟ್ಯಾಗ್ ಮಾಡಿ ಮನೆ ಮನೆಗೆ ಪಟ್ಟಿ ಮಾಡಿ ನಂಬರ್ ಕೊಡ್ತಾರೆ. UHI ನಂಬರ್ ಮೀಟರ್ ರೀಡರ್ ಹಾಕ್ತಾರೆ. 2 ಕೋಟಿ ಮನೆಗೂ ಸ್ಟಿಕ್ಕರ್‌ ಅಂಟಿಸುವ ಅಂಟಿಸೋ ಕೆಲಸ ಮಾಡ್ತಾರೆ. ಇವತ್ತಿನವರೆಗೂ 1.55 ಕೋಟಿ ಮನೆಗಳಿಗೆ ಸ್ಟಿಕ್ಕರ್‌ (ಸ್ಲಿಪ್‌) ಅಂಟಿಸಿದ್ದಾರೆ. ಇದಾದ ಮೇಲೆ ಮನೆ ಮನೆಗೆ ಟೀಚರ್ ಸರ್ವೆ ಮಾಡ್ತಾರೆ. BPL ಕಾರ್ಡ್, ಆಧಾರ್ ಕಾರ್ಡ್ ಇದ್ದರೆ ಮೊಬೈಲ್ ಗೆ ಲಿಂಕ್ ಮಾಡ್ತಾರೆ. ಮೊಬೈಲ್ ಇಲ್ಲದೇ ಹೋದ್ರೆ ಆ ಮನೆಗಳ ಸರ್ವೆ ಮಾಡ್ತಾರೆ. ಎಲ್ಲರು ಈ ಸರ್ವೆಯಲ್ಲಿ ಭಾಗವಹಿಸಬೇಕು. ಈ ಸರ್ವೆಯಲ್ಲಿ 60 ಪ್ರಶ್ನೆ ಕೇಳ್ತಾರೆ. ಜಾತಿ, ಧರ್ಮ, ಉದ್ಯೋಗ, ಶಿಕ್ಷಣ, ಸೇರಿ ಕುಟುಂಬದ ಸಂಪೂರ್ಣ ಮಾಹಿತಿ ಇರೋ 60 ಪ್ರಶ್ನೆ ಕೇಳ್ತಾರೆ. ಎಲ್ಲಾ ಜನರು ಇದರಲ್ಲಿ ಭಾಗಿಯಾಗಬೇಕು. ಪ್ರತಿಯೊಬ್ಬರೂ 60 ಪ್ರಶ್ನೆಗೆ ಉತ್ತರ ಕೊಡಬೇಕು. ಯಾರೂ ಸರ್ವೆಯಿಂದ ತಪ್ಪಿಸಿಕೊಳ್ಳಬಾರದು ಎಂದು ಸಿಎಂ ಕಿವಿಮಾತು ಹೇಳಿದ್ದಾರೆ.

  • ಹಿಂದುಳಿದ ವರ್ಗದ ಆಯೋಗದ ಅವಧಿ ವಿಸ್ತರಣೆ ಅಧಿಕೃತ ಮಾಹಿತಿ ಬಂದಿಲ್ಲ: ಜಯಪ್ರಕಾಶ್ ಹೆಗ್ಡೆ

    ಹಿಂದುಳಿದ ವರ್ಗದ ಆಯೋಗದ ಅವಧಿ ವಿಸ್ತರಣೆ ಅಧಿಕೃತ ಮಾಹಿತಿ ಬಂದಿಲ್ಲ: ಜಯಪ್ರಕಾಶ್ ಹೆಗ್ಡೆ

    ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗದ ಅವಧಿ ವಿಸ್ತರಣೆ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.

    ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳೇ ಹೇಳಿದ್ದಾರೆ ಎಂದರೆ ಅವಧಿ ವಿಸ್ತರಣೆ ಆಗಬಹುದು. ಇದುವರೆಗೂ ಈ ಬಗ್ಗೆ ನಮಗೆ ಅಧಿಕೃತ ಮಾಹಿತಿ ಬಂದಿಲ್ಲ. ನಮಗೆ ಸಮಯ ಕೊಟ್ಟರೆ ಕ್ರಾಸ್ ಚೆಕ್ ಮಾಡಿ ವರದಿ ಕೊಡುತ್ತೇವೆ. ಮುಖ್ಯಮಂತ್ರಿಗಳೇ ಆಯೋಗದ ಅವಧಿ ಬಗ್ಗೆ ಹೇಳಿದ ಮೇಲೆ ಒಳ್ಳೆಯದಾಯ್ತು, ಇನ್ನೂ ಸಮಯ ಸಿಗುತ್ತದೆ. ಜನವರಿಯಷ್ಟು ಸಮಯ ಬೇಕಾಗಿಲ್ಲ ಬೇಗನೆ ವರದಿ ಕೊಡುತ್ತೇವೆ. ವರದಿ ಕೊನೆಯ ಹಂತದಲ್ಲಿದೆ. ಡಿಸೆಂಬರ್‌ನಲ್ಲಿ ವರದಿ ಕೊಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: 2025 ರೊಳಗೆ ರಕ್ತಹೀನತೆ ಮುಕ್ತ ಆರೋಗ್ಯ ಕರ್ನಾಟಕ ರೂಪಿಸುವ ಗುರಿ: ದಿನೇಶ್ ಗುಂಡೂರಾವ್

    ಪೂರ್ತಿ ಆಯೋಗವೇ ಮುಂದುವರಿಯಲಿದೆ. ಮುಖ್ಯಮಂತ್ರಿಗಳು ಇದರ ಬಗ್ಗೆ ತೀರ್ಮಾನ ಮಾಡುತ್ತಾರೆ. ಈ ವರದಿ ಆಯೋಗದ ವರದಿ ಆಗಿರುತ್ತದೆಯೇ ಹೊರತು ಕಾಂತರಾಜು, ಜಯಪ್ರಕಾಶ್ ಮುಖ್ಯ ಅಲ್ಲ. ವರದಿ ಯಾವುದೇ ರೀತಿಯಲ್ಲಿಯೂ ಲೀಕ್ ಆಗಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಬೆಂಗಳೂರು ರಸ್ತೆ ಅಗಲೀಕರಣ ಕಾಮಗಾರಿ ತ್ವರಿತಗೊಳಿಸಿ.. ಸಂಚಾರ ದಟ್ಟಣೆ ನಿವಾರಿಸಿ: ಡಿಸಿಎಂಗೆ ಲೆಹರ್‌ ಸಿಂಗ್‌ ಪತ್ರ