Tag: ಹಿಂದಿ ದಿವಸ ಆಚರಣೆ

  • ಎಲ್ಲ ಭಾಷೆಯನ್ನು ಗೌರವಿಸುತ್ತೇವೆ, ಯಾವುದೇ ಹೇರಿಕೆ ಸಲ್ಲದು: ಧನಂಜಯ್

    ಎಲ್ಲ ಭಾಷೆಯನ್ನು ಗೌರವಿಸುತ್ತೇವೆ, ಯಾವುದೇ ಹೇರಿಕೆ ಸಲ್ಲದು: ಧನಂಜಯ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಧನಂಜಯ್ ಎಲ್ಲ ಭಾಷೆಯನ್ನು ಗೌರವಿಸುತ್ತೇವೆ. ಆದರೆ ಯಾವುದೇ ಹೇರಿಕೆ ಸಲ್ಲದು ಎಂದು ಇಂದು ದೇಶದಲ್ಲಿ ಹಿಂದಿ ದಿವಸ ಆಚರಣೆ ಕುರಿತಾಗಿ ಸಾಲು ಸಾಲು ಟ್ವೀಟ್ ಮಾಡಿದ್ದಾರೆ.

    ಎ ಕನ್ನಡ ಕನ್ನಡ ಕನ್ನಡವೆಂದುಲಿ,ಕನ್ನಡ ನಾಡಿನ ಓ ಕಂದ, ಕನ್ನಡ ನಾಡಿನ ಕೀರ್ತಿಯ ಹಬ್ಬಿಸು,ಕನ್ನಡ ತಾಯಿಗೆ ಆನಂದ. ಬಾಲ್ಯದಲ್ಲಿ ಓದಿದ ಪದ್ಯವಾಗಿದೆ. ಎಲ್ಲ ಭಾಷೆಯನ್ನು ಗೌರವಿಸುತ್ತೇವೆ. ಆದರೆ ಯಾವುದೇ ಹೇರಿಕೆ ಸಲ್ಲದು ಎಂದು ಟ್ವೀಟ್ ಮಾಡಿದ್ದಾರೆ.

    ಹಿಂದಿ ಹೇರಿಕೆಯೊಂದಿಗೆ ಇಂಗ್ಲೀಷ್ ಹೇರಿಕೆಯ ವಿರುದ್ಧವೂ ಮಾತನಾಡಿರುವ ಧನಂಜಯ, ಎಲ್ಲರೂ ಈ ಭಾಷೆಗಳನ್ನು ಕಲಿಯಬೇಕು ಎನ್ನುವುದು ಅವಿವೇಕ ಎಂದಿದ್ದಾರೆ. ಯಾವುದೇ ಭಾಷೆಯನ್ನು ಒತ್ತಾಯಪೂರ್ವಕವಾಗಿ ಹೇರುವುದು ದಬ್ಬಾಳಿಕೆಯಲ್ಲದೇ ಮತ್ತೇನಲ್ಲ ಎಂದು ಅವರು ಕಿಡಿಕಾರಿದ್ದಾರೆ.

    ಒಟ್ಟು ಮೂರು ಟ್ವೀಟ್‍ಗಳನ್ನು ಮಾಡಿರುವ ಧನಂಜಯ, ಕೊನೆಯ ಟ್ವೀಟ್‍ನಲ್ಲಿ ಕುವೆಂಪು ಅವರ ಮಾತನ್ನು ಉಲ್ಲೇಖಿಸಿದ್ದಾರೆ. ಭಾರತಕ್ಕೆ ತ್ರಿಭಾಷಾ ಸೂತ್ರದ ಅವಶ್ಯಕತೆ ಇಲ್ಲ. ಎಲ್ಲರಿಗೂ ಎಲ್ಲಾ ಭಾಷೆಯೂ ಏತಕ್ಕೆ ಬೇಕು? ಪ್ರತಿಯೊಬ್ಬರೂ ತಮಗೆ ಅಗತ್ಯವಿರುವ ಭಾಷೆಯನ್ನು ಕಲಿಯಬಹುದು ಎಂದು ಕುವೆಂಪುರವರು ಬಹುಭಾಷೆಗಳಲ್ಲಿ ದ್ವಿಭಾಷೆ ಲೇಖನದಲ್ಲಿ ಬರೆದಿರುವ ಮಾತನ್ನು ಉಲ್ಲೇಖಿಸಿರುವ ಚಿತ್ರವನ್ನು ಧನಂಜಯ ಹಂಚಿಕೊಂಡಿದ್ದಾರೆ.

    ಧನಂಜಯ ಅವರಲ್ಲದೇ ಕನ್ನಡ ಚಿತ್ರರಂಗದ ಹಲವರು ಹಿಂದಿ ಹೇರಿಕೆಯ ವಿರುದ್ಧ ಧ್ವನಿ ಎತ್ತಿದ್ದಾರೆ. ಟ್ವೀಟ್ ಮಾಡಿ ಹಿಂದಿ ಹೇರಿಕೆಯನ್ನು ವಿರೋಧಿಸಿದ್ದಾರೆ. ಕನ್ನಡದ ಖ್ಯಾತ ನಟರ ಅಭಿಮಾನಿಗಳು ಕೂಡ ಹಿಂದಿ ಹೇರಿಕೆಯ ವಿರುದ್ಧ ಧ್ವನಿ ಎತ್ತಿದ್ದಾರೆ.

    ದೇಶದಲ್ಲಿ ಇಂದು ಹಿಂದಿ ದಿವಸ ಆಚರಣೆಗೆ ಪ್ರಾದೇಶಿಕ ಭಾಷೆಗಳ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದಿ ಹೇರಿಕೆಯನ್ನು ನಿಲ್ಲಿಸಿ ಎಂಬ ಹ್ಯಾಶ್ ಟ್ಯಾಗ್ ಎಲ್ಲೆಡೆ ಟ್ರೆಂಡ್ ಆಗಿದ್ದು, ವಿವಿಧ ರಂಗದ ತಾರೆಯರು ಇದಕ್ಕೆ ದನಿಗೂಡಿಸಿದ್ದಾರೆ. ಕನ್ನಡ ಚಿತ್ರರಂಗದ ಖ್ಯಾತ ನಟ, ದಕ್ಷಿಣ ಭಾರತದ ವಿವಿಧ ಭಾಷೆಗಳಲ್ಲಿ ನಟಿಸುತ್ತಿರುವ ಧನಂಜಯ, ಟ್ವೀಟ್‍ಗಳ ಮೂಲಕ ಹಿಂದಿ ಹೇರಿಕೆಯ ವಿರುದ್ಧ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.