Tag: ಹಿಂದಿ ದಿವಸ್

  • ಜನರು ಮಾತೃಭಾಷೆಯೊಂದಿಗೆ ಹಿಂದಿಯನ್ನೂ ಕಲಿಯಬೇಕು: ಅಮಿತ್ ಶಾ

    ಜನರು ಮಾತೃಭಾಷೆಯೊಂದಿಗೆ ಹಿಂದಿಯನ್ನೂ ಕಲಿಯಬೇಕು: ಅಮಿತ್ ಶಾ

    ನವದೆಹಲಿ: ಭಾರತದ ಎಲ್ಲಾ ಪ್ರಾದೇಶಿಕ ಭಾಷೆಗಳು ಹಿಂದಿಗೆ ಪೂರಕವಾಗಿವೆ. ಹಿಂದಿ ಭಾಷೆ ಭಾರತದ ಯಾವುದೇ ಭಾಷೆ ಜತೆ ಸ್ಪರ್ಧೆ ಮಾಡ್ತಿಲ್ಲ. ಭಾರತದ ಎಲ್ಲಾ ಪ್ರಾದೇಶಿಕ ಭಾಷೆಗಳಿಗೆ ಹಿಂದಿ ಸ್ನೇಹಿತ ಇದ್ದಂತೆ. ಎಲ್ಲಾ ಪ್ರಾದೇಶಿಕ ಭಾಷೆಗಳನ್ನು ಪ್ರೋತ್ಸಾಹಿಸಬೇಕು ಎಂದು ಹಿಂದಿ ದಿವಸ್ ಕಾರ್ಯಕ್ರಮದಲ್ಲಿ ಅಮಿತ್ ಶಾ ಹೇಳಿದ್ದಾರೆ.

    ನವದೆಹಲಿ ವಿಜ್ಞಾನ ಭವನದಲ್ಲಿಂದು ಹಿಂದಿ ದಿವಸ್‍ ಸಮಾರಂಭ 2021ದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು ಪ್ರಧಾನಿಗಳು ಅಂತರಾಷ್ಟೀಯ ಮಟ್ಟದಲ್ಲಿ ಹಿಂದಿಯಲ್ಲಿ ಮಾತನಾಡಿದರೆ ಮುಜುಗರ ಪಡುವಂತಹ ದಿನಗಳು ಈಗಿಲ್ಲ. ಹಿಂದಿಯಲ್ಲಿ ಮಾತನಾಡುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದ್ದಾರೆ.  ಇದನ್ನೂ ಓದಿ: ಎಷ್ಟು ದಿನ ಅಧಿಕಾರದಲ್ಲಿರ್ತೀವಿ ಅನ್ನೋದು ಮುಖ್ಯಮಂತ್ರಿಗಳಿಗೆ ಗೊತ್ತಿಲ್ಲ: ಗಡ್ಕರಿ

    ಜನರು ತಮ್ಮ ಮಾತೃಭಾಷೆಯೊಂದಿಗೆ ಅಧಿಕೃತ ಭಾಷೆಯಾಗಿ ಹಿಂದಿಯನ್ನು ಹಂತ ಹಂತವಾಗಿ ಬಳಸುವ ಪ್ರತಿಜ್ಞೆ ಮಾಡಬೇಕು. ಮಾತೃ ಭಾಷೆ ಹಾಗೂ ಅಧಿಕೃತ ಭಾಷೆಗಳ ಸಮನ್ವಯದಲ್ಲಿ ದೇಶದ ಅಭಿವೃದ್ಧಿ ಅಡಗಿದೆ ಎಂದರು.

    ಭಾವನೆಗಳನ್ನು ವ್ಯಕ್ತಪಡಿಸಲು ಭಾಷೆ ಅತ್ಯಂತ ಶಕ್ತಿಶಾಲಿ ಮಾಧ್ಯಮವಾಗಿದ್ದು, ಸಾಂಸ್ಕತಿಕ ಪ್ರಜ್ಞೆ ಹಾಗೂ ರಾಷ್ಟ್ರೀಯ ಏಕತೆಯ ಮೂಲ ಆಧಾರವಾಗಿರುವ ಹಿಂದಿಯು ಪ್ರಾಚೀನ ನಾಗರೀಕತೆ ಹಾಗೂ ಆಧುನಿಕ ಪ್ರಗತಿಯ ನಡುವೆ ಸೇತುವೆಯಾಗಿದೆ. ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಸರ್ಕಾರ ಹಿಂದಿ ಹಾಗೂ ಎಲ್ಲ ಭಾರತೀಯ ಭಾಷೆಗಳ ಸಮಾನಂತರ ಅಭಿವೃದ್ದಿಗೆ ನಿರಂತರ ಬದ್ದವಾಗಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ವಿಧಾನಸಭೆಯಲ್ಲಿ ಹಲವು ವಿಧೇಯಕಗಳ ಮಂಡನೆ

    ಭಾರತ ಹಲವು ಭಾಷೆಗಳ ದೇಶವಾಗಿದೆ. ಪ್ರತಿಭಾಷೆಗೆ ತನ್ನದೇ ಆದ ಪ್ರಾಮುಖ್ಯತೆ ಇದೆ. ಆದರೆ ಪ್ರಪಂಚದಲ್ಲಿ ಭಾರತದ ಗುರುತಾಗಬೇಕಿರುವ ಭಾಷೆಯನ್ನು ಹೊಂದಿರುವುದು ಬಹಳ ಮುಖ್ಯ ಎಂದು ಅವರು ಒತ್ತಿ ಹೇಳಿದರು. ಅಲ್ಲದೆ ಒಂದು ಭಾಷೆ ಒಂದು ದೇಶವನ್ನು ಒಂದುಗೂಡಿಸಲು ಸಾಧ್ಯವಾಗುವುದಾದರೆ ಅದು ಹಿಂದಿಗೆ ಮಾತ್ರ ಸಾಧ್ಯ ಎಂದೂ ನುಡಿದರು.

  • ಸಿದ್ದರಾಮಯ್ಯ ಉರ್ದು ದಿವಸ್ ಆಚರಿಸಿ, ಹಿಂದಿ ದಿವಸ್‍ಗೆ ವಿರೋಧ ಮಾಡ್ತಾರೆ: ಸಿಟಿ ರವಿ

    ಸಿದ್ದರಾಮಯ್ಯ ಉರ್ದು ದಿವಸ್ ಆಚರಿಸಿ, ಹಿಂದಿ ದಿವಸ್‍ಗೆ ವಿರೋಧ ಮಾಡ್ತಾರೆ: ಸಿಟಿ ರವಿ

    – ಕಾಂಗ್ರೆಸ್ಸಿಗರು ಗುಲಾಮಗಿರಿಯ ಮಾನಸಿಕತೆಯಿಂದ ಹೊರಬಂದಿಲ್ಲ

    ಚಿಕ್ಕಮಗಳೂರು: ಸಿದ್ದರಾಮಯ್ಯ ಉರ್ದು ದಿವಸ್ ಆಚರಣೆ ಮಾಡಿ, ಹಿಂದಿ ದಿವಸ್‍ಗೆ ವಿರೋಧ ಮಾಡುತ್ತಾರೆ ಎಂದು ಪ್ರವಾಸೋದ್ಯಮ ಸಚಿವ ಸಿಟಿ ರವಿ ಅವರು ವ್ಯಂಗ್ಯ ಮಾಡಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು. ದಾಸ್ಯದ ನೆನಪು ಅಳಿಸೋದಕ್ಕೆ ಕಾಂಗ್ರೆಸ್ ಹೈದ್ರಾಬಾದ್ ಕರ್ನಾಟಕ ಎಂದೇ ಹೇಳುತ್ತಿದ್ದರು. ಕಾಂಗ್ರೆಸ್ಸಿಗರು ಗುಲಾಮಗಿರಿಯ ಮಾನಸಿಕತೆಯಿಂದ ಹೊರಬಂದಿರಲಿಲ್ಲ, ಅದಕ್ಕೆ ಬಿಜೆಪಿ ಕಲ್ಯಾಣ ಕರ್ನಾಟಕ ಎಂದು ಹೆಸರಿಟ್ಟಿತ್ತು ಎಂದು ಕಾಂಗ್ರೆಸ್ ಮೇಲೆ ವಾಗ್ದಾಳಿ ಮಾಡಿದರು.

    ಇದೇ ವೇಳೆ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡ ಸಿಟಿ ರವಿ, ಸಿದ್ದರಾಮಯ್ಯ ಉರ್ದು ದಿವಸ್ ಆಚರಣೆ ಮಾಡಿ ಬರುತ್ತಾರೆ. ಆದರೆ ಹಿಂದಿ ದಿವಸ್‍ಗೆ ವಿರೋಧ ಮಾಡುತ್ತಾರೆ ಇದು ನಾಟಕ ಅಲ್ವಾ? ಟಿಪ್ಪು ಜಯಂತಿಯ್ನ ಕಾಂಗ್ರೆಸ್ ವೈಭವಿಸಕರಿಸಿ ಆಚರಿಸುತ್ತೆ. ಕಾಂಗ್ರೆಸ್‍ಗೆ ಕನ್ನಡದ ಬಗ್ಗೆ ಮಾತನಾಡೋ ನೈತಿಕತೆ ಎಲ್ಲಿದೆ. ಕನ್ನಡದ ಉಳಿವಿಗಾಗಿ ಮಾಡುವ ಎಲ್ಲಾ ಪ್ರಯತ್ನಕ್ಕೂ ನಮ್ಮ ಬೆಂಬಲವಿದೆ. ಕಾಂಗ್ರೆಸ್ ಹೋರಾಟ ಕನ್ನಡದ ಉಳಿವಿಗೋ, ಹಿಂದಿ ದ್ವೇಷಕ್ಕೋ ಎಂದು ಸಿಟಿ ರವಿ ಪ್ರಶ್ನೆ ಮಾಡಿದ್ದಾರೆ.

    ಹಿಂದಿ ಕಾರಣಕ್ಕೆ ರಾಜ್ಯದಲ್ಲಿ ಒಂದೇ ಒಂದು ಕನ್ನಡ ಶಾಲೆ ಬಂದ್ ಆಗಿಲ್ಲ. ಇಂಗ್ಲಿಷ್ ಕಾರಣಕ್ಕೆ ಸಾವಿರಾರು ಶಾಲೆ ಬಂದ್ ಆಗಿವೆ. ಇಂಗ್ಲಿಷ್ ಓಕೆ ಎಂದು ಹಿಂದಿ ದ್ವೇಷಿಸುವ ನಿಮ್ಮ ಉದ್ದೇಶವೇನು? ಹಿಂದಿಯನ್ನು ವಿರೋಧಿಸುವವರು ಸಂವಿಧಾನ, ಅಂಬೇಡ್ಕರ್ ಅವರನ್ನು ವಿರೋಧ ಮಾಡುತ್ತಾರೆ. ಅವತ್ತು ಒಪ್ಪಿಕೊಂಡ ಕಾಂಗ್ರೆಸ್ ಇವತ್ತು ಬಣ್ಣ ಬದಲಿಸಿದೆ ಅಂದರೆ ಅದು ಗೋಸುಂಬೆತನ ಎಂದು ಕಿಡಿಕಾರಿದ್ದಾರೆ.

  • ಕನ್ನಡಿಗರ ತೆರಿಗೆ ಹಣದಲ್ಲಿ ಹಿಂದಿ ದಿವಸ್ ಆಚರಣೆ ಯೋಗ್ಯವಲ್ಲ: ದರ್ಶನ್‌

    ಕನ್ನಡಿಗರ ತೆರಿಗೆ ಹಣದಲ್ಲಿ ಹಿಂದಿ ದಿವಸ್ ಆಚರಣೆ ಯೋಗ್ಯವಲ್ಲ: ದರ್ಶನ್‌

    ಬೆಂಗಳೂರು: ಸ್ವಾಭಿಮಾನಿ ಕನ್ನಡಿಗರಿಗೆ ಕನ್ನಡವೇ ರಾಷ್ಟ್ರ ಭಾಷೆ. ಕನ್ನಡಿಗರ ತೆರಿಗೆ ಹಣದಲ್ಲಿ ಹಿಂದಿ ದಿವಸ್ ಆಚರಣೆ ಯೋಗ್ಯವಲ್ಲ. ಅದು ಕೇವಲ ಉತ್ತರ ಭಾರತದ ಕೆಲವು ರಾಜ್ಯಗಳಿಗೆ ಸೀಮಿತವಾಗಿದ್ದರೆ ಒಳಿತು ಎಂದು ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

    ಪ್ರತಿ ವರ್ಷ ಆಚರಿಸಲ್ಪಡುತ್ತಿರುವ ಹಿಂದಿ ದಿವಸ್‌ ಬಗ್ಗೆ ಫೇಸ್‌ಬುಕ್‌ನಲ್ಲಿ ದೀರ್ಘವಾದ ಪೋಸ್ಟ್‌ ಬರೆದು ದರ್ಶನ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಪೋಸ್ಟ್‌ನಲ್ಲಿ ಏನಿದೆ?
    ಬಹಳ ವರ್ಷಗಳಿಂದಲೂ ಈ ಹಿಂದಿ ಹೇರಿಕೆ ಕಾಲ ಕ್ರಮೇಣ ಹೆಚ್ಚಾಗುತ್ತಲೇ ಇದೆ. ಈಗಾಗಲೇ ಕರ್ನಾಟಕದ ಬಾರ್ಡರ್ ಪ್ರದೇಶಗಳಲ್ಲಿ ಅನ್ಯ ಭಾಷೆಗಳ ಬಳಕೆಯಿಂದ ನಮ್ಮ ಕನ್ನಡ ಭಾಷೆಯ ಅಸ್ತಿತ್ವಕ್ಕೆ ಧಕ್ಕೆಯುಂಟಾಗುತ್ತಿದೆ. ಇದನ್ನು ಪ್ರತಿಭಟಿಸದೆ ನಾವು ಸುಮ್ಮನಿದ್ದರೆ ಮುಂದೆ ಕನ್ನಡಿಗ ಎನ್ನುವ ಅಸ್ತಿತ್ವವೇ ದೂರವಾಗುವ ದಿನಗಳು ಹತ್ತಿರದಲ್ಲೇ ಇದೆ.

    ಸ್ವಾಭಿಮಾನಿ ಕನ್ನಡಿಗರಿಗೆ ಕನ್ನಡವೇ ರಾಷ್ಟ್ರ ಭಾಷೆ. ಕನ್ನಡಿಗರ ತೆರಿಗೆ ಹಣದಲ್ಲಿ ಹಿಂದಿ ದಿವಸ್ ಆಚರಣೆ ಯೋಗ್ಯವಲ್ಲ. ಅದು ಕೇವಲ ಉತ್ತರ ಭಾರತದ ಕೆಲವು ರಾಜ್ಯಗಳಿಗೆ ಸೀಮಿತವಾಗಿದ್ದರೆ ಒಳಿತು. ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುವುದು ನಮ್ಮ ಭಾರತ ಸಂವಿಧಾನದ ಪ್ರತೀಕವಾಗಿದೆ.

    ಯಾವುದೋ ಉತ್ತರದ ಒಂದು ಪ್ರಾದೇಶಿಕ ಭಾಷೆಯನ್ನು ನಮ್ಮ ಮೇಲೆ ಹೇರಿ ನಮ್ಮ ಸಂಸ್ಕೃತಿ, ಭಾಷೆ, ನೆಲೆಯನ್ನು ಕಸಿದುಕೊಳ್ಳುವುದು ಹೀನಾಯಕರ ಸಂಗತಿಯೆಂದರೆ ತಪ್ಪಾಗಲಾರದು. ನಮ್ಮ ಕೊನೆಯುಸಿರಿರುವವರೆಗೂ ಕನ್ನಡ ಪರವಾಗಿ ನಿಲ್ಲುತ್ತೇವೆ. ಕನ್ನಡವೇ ಸತ್ಯ, ಕನ್ನಡವೇ ನಿತ್ಯ.

    ಬಹುಭಾಷಾ ಹಿರಿಯ ನಟ ಪ್ರಕಾಶ್‌ ರೈ ಅವರು, ಹಲವು ಭಾಷೆ ಬಲ್ಲೆ. ಹಲವು ಭಾಷೆಗಳಲ್ಲಿ ಕೆಲಸ ಮಾಡಬಲ್ಲೆ. ಆದರೆ ನನ್ನ ಕಲಿಕೆ, ನನ್ನ ಗ್ರಹಿಕೆ, ನನ್ನ ಬೇರು, ನನ್ನ ಶಕ್ತಿ, ನನ್ನ ಹೆಮ್ಮೆ ನನ್ನ ಮಾತೃಭಾಷೆ ಕನ್ನಡ ಹಿಂದಿ ಹೇರಿಕೆ ಬೇಡ ಎಂದು ಟ್ವೀಟ್‌ ಮಾಡಿದ್ದರು. ಇದನ್ನೂ ಓದಿ: ಭಾಷಾ ಅಹಂಕಾರದ ಸಂಕೇತವಾದ ಹಿಂದಿ ದಿವಸಕ್ಕೆ ಸ್ವಾಭಿಮಾನಿ ಕನ್ನಡಿಗರ ವಿರೋಧವಿದೆ: ಹೆಚ್‍ಡಿಕೆ

    ಕನ್ನಡದ ನಟ ಧನಂಜಯ್‌ ಅವರು, ನನ್ನ ದೇಶ ಭಾರತ. ನನ್ನ ಬೇರು ಕನ್ನಡ. ಎಲ್ಲ ಭಾಷೆಯನ್ನು ಗೌರವಿಸುತ್ತೇನೆ. ನನ್ನ ಭಾಷೆಯನ್ನು ಹೆಚ್ಚು ಪ್ರೀತಿಸುತ್ತೇನೆ. ಯಾವುದೇ ಹೇರಿಕೆ ಸಲ್ಲದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

  • ಭಾಷಾ ಅಹಂಕಾರದ ಸಂಕೇತವಾದ ಹಿಂದಿ ದಿವಸಕ್ಕೆ ಸ್ವಾಭಿಮಾನಿ ಕನ್ನಡಿಗರ ವಿರೋಧವಿದೆ: ಹೆಚ್‍ಡಿಕೆ

    ಭಾಷಾ ಅಹಂಕಾರದ ಸಂಕೇತವಾದ ಹಿಂದಿ ದಿವಸಕ್ಕೆ ಸ್ವಾಭಿಮಾನಿ ಕನ್ನಡಿಗರ ವಿರೋಧವಿದೆ: ಹೆಚ್‍ಡಿಕೆ

    – ದಂಗೆ ಏಳುವುದಕ್ಕೂ ಮೊದಲು ಹಿಂದಿ ಹೇರಿಕೆ ನಿಲ್ಲಬೇಕು
    – ನವೆಂಬರ್ 1 ಅನ್ನು ದೇಶದಾದ್ಯಂತ ಕನ್ನಡ ದಿನವಾಗಿ ಆಚರಿಸಬೇಕು

    ಬೆಂಗಳೂರು: ವಿವಿಧ ಭಾಷೆ, ವಿಭಿನ್ನ ಸಂಸ್ಕೃತಿ, ಪರಂಪರೆಗಳನ್ನು ಒಡಲಲ್ಲಿಟ್ಟುಕೊಂಡ ಭಾರತದಲ್ಲಿ, ಕನ್ನಡಿಗರೂ ಸೇರಿದಂತೆ ಅನ್ಯ ಭಾಷಿಕರ ಮೇಲೆ ಹಿಂದಿಯನ್ನು ಬಲವಂತವಾಗಿ ಹಲವು ಮಾರ್ಗಗಳ ಮೂಲಕ ಹೇರಲಾಗುತ್ತಿದೆ. ಇಂದಿನ ಹಿಂದಿ ದಿವಸ್ ಕೂಡ ಅಂಥದ್ದೇ ಅಪಮಾರ್ಗ. ಭಾಷಾ ಅಹಂಕಾರದ ಸಂಕೇತವಾದ ಹಿಂದಿ ದಿವಸಕ್ಕೆ ಸ್ವಾಭಿಮಾನಿ ಕನ್ನಡಿಗರ ಪ್ರಬಲ ವಿರೋಧವಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

    ಈ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಹೆಚ್‍ಡಿಕೆ, ಹಿಂದಿ ರಾಷ್ಟ್ರಭಾಷೆಯಲ್ಲ. ರಾಷ್ಟ್ರಭಾಷೆ ಎಂಬ ಕಲ್ಪನೆ ಸಂವಿಧಾನದಲ್ಲಿಲ್ಲ. ಆದರೂ ಹಿಂದಿಯನ್ನು ರಾಷ್ಟ್ರಭಾಷೆ ಎಂದು ಬಿಂಬಿಸುವ, ಅದರಲ್ಲಿ ರಾಜಕೀಯ ಮಾಡುವ ಪ್ರಯತ್ನ ಹಿಂದಿನಿಂದಲೂ ನಡೆದೇ ಬಂದಿದೆ. ಅದು ಈಗ ವಿಪರೀತಕ್ಕೆ ಹೋಗಿದೆ. ದೇಶದ ಇತರೇ ಭಾಷಿಕರು ಇಂಥ ಪ್ರಯತ್ನಗಳ ವಿರುದ್ಧ ದಂಗೆ ಏಳುವುದಕ್ಕೂ ಮೊದಲು ಹಿಂದಿ ಹೇರಿಕೆ ನಿಲ್ಲಬೇಕು ಎಂದಿದ್ದಾರೆ.

    ಹಿಂದಿ ಹೇರಿಕೆಗೆ ಕಲಿಕೆ ನೆಪ ನೀಡಲಾಗುತ್ತಿದೆ. ಕಲಿಕೆ ಎಂದಿಗೂ ಆಯ್ಕೆಯೇ ಹೊರತು ಹೇರಿಕೆಯಿಂದ ಕಲಿಕೆಯಾಗಲು ಸಾಧ್ಯವಿಲ್ಲ. ಭಾಷೆಯೊಂದರ ಹೇರಿಕೆಯು ಇನ್ನೊಂದು ಭಾಷೆಯ ಅಸ್ಮಿತೆಯನ್ನು ಪ್ರಶ್ನಿಸುವಂತಿರಬಾರದು. ಭಾಷೆಯ ಹೇರಿಕೆಯು ಮತ್ತೊಂದು ಭಾಷೆಯ ಅವಸಾನಕ್ಕೆ ದಾರಿಯಾಗಬಾರದು. ದೇಶದ ಸಂಸ್ಕೃತಿ, ವೈವಿದ್ಯತೆ, ಸಮಗ್ರತೆಗೆ ಧಕ್ಕೆ ತರಬಾರದು ಎಂದು ಟ್ವೀಟ್ ಮಾಡಿದ್ದಾರೆ.

    ಕೇಂದ್ರದ ಆಡಳಿತದಲ್ಲಿ ಹಿಂದಿ ಜಾರಿಗೆ ಬಂದಿದ್ದಕ್ಕಾಗಿ, ಹಿಂದಿ ಜಾರಿ ಹೋರಾಟ ಮಾಡಿದ ಬೋಹರ್ ರಾಜೇಂದ್ರ ಸಿಂಹ ಜನ್ಮದಿನದ ನೆನಪಿಗಾಗಿ ಸೆ.14ರಂದು ಹಿಂದಿ ದಿವಸ ಆಚರಿಸಲಾಗುತ್ತಿದೆ. ರಾಜೇಂದ್ರ ಸಿಂಹ ಹುಟ್ಟುಹಬ್ಬದಲ್ಲಿ, ಹಿಂದಿ ಆಡಳಿತ ಭಾಷೆ ಆಗಿದ್ದರಲ್ಲಿ ಹಿಂದಿಯೇತರರು ಸಂಭ್ರಮಿಸುವುದು ಏನಿದೆ? ನಿರ್ಥಕ ಹಿಂದಿ ದಿವಸ ರದ್ದಾಗಬೇಕು ಎಂದು ಆಗ್ರಹಿಸಿದ್ದಾರೆ.

    ಅನ್ಯ ಭಾಷಿಕರಿಗೆ ನಿರರ್ಥಕವಾಗಿರುವ ಹಿಂದಿ ದಿವಸವನ್ನು ಆಚರಿಸುವುದೇ ಆದರೆ, ಹಿಂದಿಯೊಂದಿಗೆ ಅಧಿಕೃತ ಭಾಷೆಗಳೆನಿಸಿರುವ ಕನ್ನಡವೂ ಸೇರಿದಂತೆ ಎಲ್ಲ ಭಾಷೆಗಳ ದಿನವನ್ನು ಕೇಂದ್ರ ಸರ್ಕಾರವೇ ದೇಶದಾದ್ಯಂತ ಆಚರಣೆ ಮಾಡಬೇಕು. ಇದಕ್ಕಾಗಿ ಪ್ರತ್ಯೇಕ ದಿನವನ್ನೂ ಘೋಷಣೆ ಮಾಡಬೇಕು. ನವೆಂಬರ್ 1 ಅನ್ನು ದೇಶದಾದ್ಯಂತ ಕನ್ನಡ ದಿನವಾಗಿ ಆಚರಿಸಬೇಕು ಎಂದು ಒತ್ತಾಹಿಸಿದ್ದಾರೆ.

    ಸಂವಿಧಾನದ ಪರಿಚ್ಛೇದ 343, 344, 345ರಲ್ಲಿ ಹಿಂದಿಗೆ ಉತ್ತೇಜನ ನೀಡುವ ಗೊಂದಲಕಾರಿ ಅಂಶಗಳಿವೆ. ಇದೇ ಗುರಾಣಿ ಹಿಡಿದು ಹಿಂದಿ ಹೇರಿಕೆ ಪ್ರಯತ್ನಗಳು ನಿರಂತರವಾಗಿ ನಡೆದಿದೆ. ಸಂವಿಧಾನವನ್ನು ಬದಲಿಸಲೇ ಬಂದಿರುವ ಬಿಜೆಪಿಗರು, ಒಂದೊಳ್ಳೆ ಕಾರಣಕ್ಕಾಗಿ ಇದನ್ನು ಬದಲಿಸಲಿ. ಈ ಮೂಲಕ ಕನ್ನಡವೂ ಸೇರಿ ಅನ್ಯ ಭಾಷೆಗಳ ಅಸ್ಮಿತೆಯನ್ನು ರಕ್ಷಿಸಲಿ ಎಂದು ಹೇಳಿದ್ದಾರೆ.

    ಹಿಂದಿ ದಿವಸದಂತೇ, ತ್ರಿಭಾಷಾ ಸೂತ್ರದ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯೂ ಹಿಂದಿ ಹೇರಿಕೆಯ ಮಾರ್ಗವೇ. ದ್ವಿಭಾಷಾ ಸೂತ್ರವೇ ಇದ್ದರೆ ನಷ್ಟವೇನು? ಹಿಂದಿ ಮಾತನಾಡುವ ಯಾವ ರಾಜ್ಯದಲ್ಲಿ ತ್ರಿಭಾಷಾ ಸೂತ್ರ ಜಾರಿಯಲ್ಲಿದೆ? ಹಾಗಿದ್ದ ಮೇಲೆ ಹಿಂದಿಯೇತರ ರಾಜ್ಯಗಳಿಗೆ ಮಾತ್ರ ಏಕೆ ತ್ರಿಭಾಷಾ ಸೂತ್ರ? ಎನ್‍ಇಪಿಯನ್ನು ರಾಜ್ಯ ಸರ್ಕಾರ ಒಪ್ಪಬಾರದು ಎಂದು ಟ್ವೀಟ್ ಮಾಡಿ ಪ್ರಶ್ನೆ ಮಾಡಿದ್ದಾರೆ.

    ಇತ್ತೀಚೆಗೆ ಹಿಂದಿಯನ್ನು ಸಿದ್ಧಾಂತದ ವಿಚಾರವಾಗಿ ಪರಿವರ್ತಿಸಲಾಗಿದೆ. ರಾಷ್ಟ್ರೀಯತೆ, ದೇಶಭಕ್ತಿ, ಹಿಂದುತ್ವದೊಂದಿಗೆ ಹಿಂದಿಯನ್ನು ಸಮೀಕರಿಸಲಾಗಿದೆ. ಇಂಥ ಪ್ರಯತ್ನಗಳಿಗಿಂತಲೂ ದೊಡ್ಡ ದೇಶದ್ರೋಹ ಇನ್ನೊಂದಿಲ್ಲ. ವಿವಿಧ ಭಾಷೆಗಳನ್ನು ಆಡುವ ಭಾರತೀಯರ ದೇಶಭಕ್ತಿಯನ್ನು ಭಾಷೆ ಮೂಲಕ ಅಳೆಯುವುದು ಅಪಚಾರವೇ ಸರಿ. ಇದು ಸಮಗ್ರತೆಗೆ ಎಸೆದ ಸವಾಲು ಎಂದು ಕಿಡಿಕಾರಿದ್ದಾರೆ.

    ದಕ್ಷಿಣ ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಹಿಂದಿಯನ್ನು ಸುಲಭವಾಗಿ ಹೇರಬಹುದು ಎಂದು ಹಿಂದಿ ಶ್ರೇಷ್ಠತೆ ವ್ಯಸನಿಗಳು ಅಂದಾಜಿಸಿದ್ದಾರೆ. ಇದಕ್ಕೆ ರಾಜ್ಯ ಬಿಜೆಪಿ ನಾಯಕರ ನಡತೆಯೂ ಕಾರಣವಿರಬಹುದು. ಕನ್ನಡಿಗರದ್ದು ಸೌಹಾರ್ದ ಗುಣ. ಅದನ್ನು ದೌರ್ಬಲ್ಯ ಎಂದೆಣಿಸುವುದು ಬೇಡ. ಕನ್ನಡಿಗರ ಐತಿಹಾಸಿಕವಾದ ಮತ್ತೊಂದು ಗುಣ ಸಿಡಿದರೆ ಎಲ್ಲರೂ ತರಗೆಲೆಗಳೇ ಎಂದು ಎಚ್ಚರಿಕೆ ನೀಡಿದ್ದಾರೆ.

    ಕಾವೇರಿಯಿಂದ ಗೋದಾವರಿವರೆಗೆ ಆಳಿದ, ಇಂದಿನ ಕರ್ನಾಟಕಕ್ಕಿಂತಲೂ ಹಲವು ಪಟ್ಟು ರಾಜ್ಯ ವಿಸ್ತರಣೆ ಮಾಡಿದ್ದ ಕನ್ನಡಿಗರಲ್ಲಿ ಶೌರ್ಯ, ಸ್ವಾಭಿಮಾನ ರಕ್ತಗತ. ಹಿಂದಿಯನ್ನು ಬಲವಂತವಾಗಿ ಹೇರುವ ಪ್ರಯತ್ನಗಳ ವಿರುದ್ಧ ಕನ್ನಡಿಗರ ಈ ಚಾರಿತ್ರಿಕ ಗುಣ ಎದ್ದು ನಿಂತರೆ ಹಿಂದಿ ಹೇರಲು ಬರುವವರ ಕುತಂತ್ರಗಳು ಅಡಗಲಿದೆ. ಜೈ ಕನ್ನಡಾಂಬೆ ಜೈ ಭಾರತಾಂಬೆ ಎಂದು ಹೆಚ್‍ಡಿಕೆ ಟ್ವೀಟ್ ಮಾಡಿದ್ದಾರೆ.

  • ದಕ್ಷಿಣದಲ್ಲಿ ಕಿಡಿಹೊತ್ತಿಸಿದ ಅಮಿತ್ ಶಾ ಒಂದು ದೇಶ ಒಂದು ಭಾಷೆ ಹೇಳಿಕೆ

    ದಕ್ಷಿಣದಲ್ಲಿ ಕಿಡಿಹೊತ್ತಿಸಿದ ಅಮಿತ್ ಶಾ ಒಂದು ದೇಶ ಒಂದು ಭಾಷೆ ಹೇಳಿಕೆ

    – ಹಿಂದಿ ಹೇರಿಕೆಗೆ ದಕ್ಷಿಣ ಭಾರತದಲ್ಲಿ ಆಕ್ರೋಶ
    – ಕನ್ನಡದಲ್ಲಿ ಬ್ಯಾಂಕ್ ಎಕ್ಸಾಂಗೆ ಪರಿಷ್ಕೃತ ಆದೇಶ

    ನವದೆಹಲಿ: ಒನ್ ರ್‍ಯಾಂಕ್, ಒನ್ ಪೆನ್ಷನ್, ಒನ್ ನೇಷನ್ ಒನ್ ಟ್ಯಾಕ್ಸ್ ಜಾರಿಗೆ ತಂದಿರುವ ಕೇಂದ್ರ ಸರ್ಕಾರ, ‘ಒನ್ ನೇಷನ್ ಒನ್ ಎಲೆಕ್ಷನ್ಗೆ’ ಪ್ರಸ್ತಾಪವಿಟ್ಟಿದೆ. ಇದರ ಬೆನ್ನಲ್ಲೇ ಇದೀಗ, ‘ಒಂದು ದೇಶ ಒಂದು ಭಾಷೆ’ಗೂ ಕೈಹಾಕಿದ್ಯಾ ಎನ್ನುವ ಪ್ರಶ್ನೆ ಎದ್ದಿದೆ.

    ‘ಹಿಂದಿ ದಿವಸ್’ ಆಚರಣೆ ಹಿನ್ನೆಲೆಯಲ್ಲಿ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೆಹಲಿಯಲ್ಲಿ ಮಾತನಾಡಿ, ಈ ದೇಶದ ವಿಶೇಷತೆ ಅಂದರೆ ಭಾಷೆ. ಜಗತ್ತಿನ ಯಾವುದೇ ಭಾಷೆಯ ಜೊತೆ ಹೋಲಿಸಿ ನೋಡಿದಾಗ ನಮ್ಮ ಭಾಷೆಯ ವ್ಯಾಪಕತೆ, ಸಮೃದ್ಧತೆಯೇ ಸರ್ವಶ್ರೇಷ್ಠ ಎಂದಿದ್ದಾರೆ. ಅಲ್ಲದೇ ಭಾಷೆಗಳು ಮತ್ತು ಉಪಭಾಷೆಗಳ ವೈವಿಧ್ಯತೆಯು ನಮ್ಮ ರಾಷ್ಟ್ರದ ಶಕ್ತಿ. ಆದರೆ, ನಮ್ಮ ರಾಷ್ಟ್ರವು ಒಂದೇ ಭಾಷೆಯನ್ನು ಹೊಂದುವ ಅವಶ್ಯಕತೆಯಿದೆ. ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಹಿಂದಿಯನ್ನು ‘ರಾಜ್ ಭಾಷಾ’ ಎಂದು ಕರೆದು ಸ್ವೀಕರಿಸಿದ್ದರು. ಮಾತೃ ಭಾಷೆಯ ಜೊತೆಗೆ ಹಿಂದಿ ಭಾಷೆಯನ್ನು ಹೆಚ್ಚಾಗಿ ಬಳಸಿ ಎಂದಿದ್ದರು ಎಂದು ಹೇಳಿದ್ದಾರೆ.

    ಅಲ್ಲದೇ ಭಾರತವನ್ನು ಒಂದುಗೂಡಿಸುವ ಸಾಮರ್ಥ್ಯ ಹಿಂದಿ ಭಾಷೆಗೆ ಇದೆ. ಭಾರತವೂ ವಿಭಿನ್ನ ಭಾಷೆಗಳ ದೇಶ. ಪ್ರತಿ ಭಾಷೆಗೂ ತನ್ನದೇ ಮಹತ್ವವಿದೆ. ಆದರೆ ಜಾಗತಿಕವಾಗಿ ಭಾರತದ ಅಸ್ಮಿತೆ ಆಗುವ ಭಾಷೆಯ ಅಗತ್ಯವಿದೆ ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ. ಶಾ ಅವರ ಈ ಹೇಳಿಗೆ ಬಿಜೆಪಿ ಕಾರ್ಯಾಧ್ಯಕ್ಷ ಜೆಪಿ ನಡ್ಡಾ ಕೂಡ ದನಿಗೂಡಿಸಿದ್ದಾರೆ.

    ಕೇಂದ್ರ ಬಿಜೆಪಿ ನಾಯಕರ ಹೇಳಿಕೆಗೆ ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಹಾಗೂ ಎಚ್‍ಡಿ ಕುಮಾರಸ್ವಾಮಿ ಅವರು ಖಂಡಿಸಿದ್ದು, ಹಿಂದಿ ಹೇರಿಕೆಗೆ ಆಸ್ಪದ ಇಲ್ಲವೇ ಇಲ್ಲ ಎಂದಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು ‘ಭಾಷೆಗಳು ಜ್ಞಾನದ ಕಿಂಡಿಗಳು, ಅದನ್ನು ಪ್ರೀತಿಯಿಂದ ಬೆಳೆಸಬೇಕೇ ಹೊರತು ಒತ್ತಡ-ಒತ್ತಾಯದ ಮೂಲಕ ಅಲ್ಲ. ನಮ್ಮ ವಿರೋಧ ಹಿಂದಿ ಎಂಬ ಭಾಷೆ ಬಗ್ಗೆ ಅಲ್ಲ, ಅದರ ಬಲವಂತದ ಹೇರಿಕೆಗೆ. ಹಿಂದಿ ರಾಷ್ಟ್ರಭಾಷೆ ಎಂಬ ಸುಳ್ಳು ಪ್ರಚಾರ ನಿಲ್ಲಲಿ’ ಎಂದು ಹೇಳಿದ್ದಾರೆ.

    ಕುಮಾರಸ್ವಾಮಿ ಅವರು ‘ಸಂವಿಧಾನದಲ್ಲಿ ಹಿಂದಿಯೊಂದಿಗೆ ಅಧಿಕೃತ ಭಾಷೆ ಎನಿಸಿಕೊಂಡಿರುವ ಕನ್ನಡದ ಭಾಷಾ ದಿವಸವನ್ನು ದೇಶಾದ್ಯಂತ ಯಾವಾಗ ಆಚರಿಸುತ್ತೀರಿ ನರೇಂದ್ರ ಮೋದಿ ಅವರೇ? ಕನ್ನಡಿಗರೂ ಈ ಒಕ್ಕೂಟ ವ್ಯವಸ್ಥೆಯ ಭಾಗವಾಗಿದ್ದಾರೆ ನೆನಪಿರಲಿ’ ಎಂದು ಟ್ವೀಟ್ ಮಾಡಿದ್ದಾರೆ. ಇತ್ತ ಅಮಿತ್ ಶಾ ಹೇಳಿಕೆಯನ್ನು ಟೀಕಿಸಿ ತಮಿಳುನಾಡಿನ ಸ್ಟಾಲಿನ್, ‘ಇದು ಇಂಡಿಯಾನಾ. ಹಿಂಡಿಯಾನ’ ಎಂದು ಪ್ರಶ್ನೆ ಮಾಡಿದ್ದಾರೆ.

    ಬ್ಯಾಂಕಿಂಗ್ ಪರೀಕ್ಷೆ: ಇಂದು ಹಿಂದಿ ದಿವಸ್ ಆಚರಣೆಗೆ ಹೇಳಿಕೆ ನೀಡಿ ಟೀಕೆಗೆ ಗುರಿಯಾದ ಕೇಂದ್ರ ಸರ್ಕಾರ ಬ್ಯಾಂಕಿಂಗ್ ಪರೀಕ್ಷೆಗಳನ್ನು ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲೂ ಬರೆಯಲು ಅವಕಾಶ ಕಲ್ಪಿಸಿದೆ. ಈ ಕುರಿತು ಪರಿಷ್ಕೃತ ಅಧಿಸೂಚನೆ ಹೊರಡಿಸಿದೆ. ಸೆ.16ಕ್ಕೆ ದೇಶಾದ್ಯಂತ ಬ್ಯಾಂಕಿಂಗ್ ಪರೀಕ್ಷೆಗಳು ನಡೆಯಲಿವೆ.