Tag: ಹಾಸ್ಯ

  • ನನಗೆ ವಯಸ್ಸಾಗಿದ್ರೂ ಹಾಗೆ ಕಾಣಲ್ಲ: ಸಿದ್ದರಾಮಯ್ಯ ಹಾಸ್ಯ ಚಟಾಕಿ

    ನನಗೆ ವಯಸ್ಸಾಗಿದ್ರೂ ಹಾಗೆ ಕಾಣಲ್ಲ: ಸಿದ್ದರಾಮಯ್ಯ ಹಾಸ್ಯ ಚಟಾಕಿ

    ಬೆಂಗಳೂರು: ವಿಧಾನಸಭೆಯಲ್ಲಿ ಗುರುವಾರದಿಂದ ಕಾಂಗ್ರೆಸ್ ಅಹೋರಾತ್ರಿ ಧರಣಿ ನಡೆಸುತ್ತಿದ್ದು, ಹಲವು ಸ್ವಾರಸ್ಯಕರ ಚರ್ಚೆಗೂ ಸಾಕ್ಷಿಯಾಗುತ್ತಿದೆ. ಅಹೋರಾತ್ರಿ ಧರಣಿಗೆ ಇಬ್ಬರಿಗೆ ವಿನಾಯ್ತಿ ನೀಡಿದ್ದಾರಂತೆ. ಸ್ವತಃ ಸಿದ್ದರಾಮಯ್ಯ ಅವರೇ ಆ ಇಬ್ಬರ ಹೆಸರನ್ನ ಮೊಗಸಾಲೆಯಲ್ಲಿ ಹೇಳಿ ಹಾಸ್ಯ ಮಾಡಿದ್ದಾರೆ.

    ಶುಕ್ರವಾರ ಕಲಾಪ ಆರಂಭಕ್ಕೂ ಮುನ್ನ ವಿಧಾನಸಭೆಯ ವಿರೋಧ ಪಕ್ಷದ ಮೊಗಸಾಲೆಯಲ್ಲಿ ಸಿದ್ದರಾಮಯ್ಯ ಕುಳಿತಿದ್ದರು. ಆ ಸ್ಥಳಕ್ಕೆ ಮಾಜಿ ಸಚಿವ ದೇಶಪಾಂಡೆ ಕೂಡ ಬಂದು ಸಿದ್ದರಾಮಯ್ಯ ಪಕ್ಕ ಕುಳಿತರು. ಆಗ ಸಿದ್ದರಾಮಯ್ಯ ದೇಶಪಾಂಡೆಯವರ ಕಾಲೆಳೆಯಲು ಪ್ರಾರಂಬಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಅಹೋರಾತ್ರಿ ಧರಣಿ – ಸಿಎಂ, ಬಿಎಸ್‍ವೈ ಸಂಧಾನ ಯತ್ನ ವಿಫಲ

    ಅಹೋರಾತ್ರಿ ಧರಣಿಗೆ ನಮ್ ಶಾಮನೂರು ಶಿವಶಂಕರಪ್ಪ, ಈ ದೇಶಪಾಂಡೆ ಇಬ್ಬರಿಗೂ ವಿನಾಯ್ತಿ ಕೊಟ್ಟಿದ್ದೇವೆ. ಇಬ್ಬರಿಗೂ ವಯಸ್ಸಾಗಿದೆ ಪಾಪ ಎಂದು ಸಿದ್ದರಾಮಯ್ಯ ಛೇಡಿಸಿದ್ದಾರೆ.

    ಇದಕ್ಕೆ ತಕ್ಷಣ ರಿಯಾಕ್ಟ್ ಮಾಡಿದ ದೇಶಪಾಂಡೆ. ನಾನೇನು ಮುದುಕ ಅಲ್ಲ, ನನಗೇನು ವಯಸ್ಸಾಗಿದೆ. ನಿನಗಿಂತ ನಾನು 6 ತಿಂಗಳು ದೊಡ್ಡವನು. ಹಾಗಾದ್ರೆ ನೀನು ಮುದುಕನಾ? ಎಂದು ಸಿದ್ದರಾಮಯ್ಯಗೆ ಕೇಳಿದ್ದಾರೆ. ಇದನ್ನೂ ಓದಿ: ಯಾವ ಪುರುಷಾರ್ಥಕ್ಕೆ ಈ ಅಧಿವೇಶನ? ದಿನಕ್ಕೆ 1.5 -2 ಕೋಟಿ ರೂ.ನಷ್ಟಕ್ಕೆ ಹೊಣೆ ಯಾರು? – ಬಿಜೆಪಿ, ಕಾಂಗ್ರೆಸ್‍ನ್ನು ತಿವಿದ ಎಚ್‍ಡಿಕೆ

    ನೋಡಪ್ಪಾ, ನನಗೆ ವಯಸ್ಸಾಗಿದ್ರೂ ನಾನು ಹಾಗೆ ಕಾಣಲ್ಲ. ನೀನು ಮಾಗಿ ಬಿಟ್ಟಿದ್ದೀಯಾ. ಅದಕ್ಕೆ ಹಂಗೆ ಹೇಳ್ದೆ ಎಂದು ಸಿದ್ದರಾಮಯ್ಯ ಕಾಲೆಳೆದಿದ್ದಾರೆ. ಆಗ ಅಕ್ಕ ಪಕ್ಕ ಇದ್ದ ಶಾಸಕರು ನಗೆಡಲಲ್ಲಿ ತೇಲಿದ್ದಾರೆ.

  • ಕನ್ನಡದ ಹಿರಿಯ ಹಾಸ್ಯ ಕಲಾವಿದ ಶಂಕರ್ ರಾವ್ ನಿಧನ

    ಕನ್ನಡದ ಹಿರಿಯ ಹಾಸ್ಯ ಕಲಾವಿದ ಶಂಕರ್ ರಾವ್ ನಿಧನ

    ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಸ್ಯಾಂಡಲ್‍ವುಡ್‍ನ ಹಿರಿಯ ಹಾಸ್ಯ ಕಲಾವಿದ ಶಂಕರ್ ರಾವ್(84) ಇಂದು ಕೊನೆಯುಸಿರೆಳೆದಿದ್ದಾರೆ.

    ಅನಾರೋಗ್ಯದಿಂದ ಬಳಲುತ್ತಿದ್ದ ಶಂಕರ್ ರಾವ್ ಇಂದು ಬೆಳಗಿನ ಜಾವ 6:30ರ ಸುಮಾರಿಗೆ ತಮ್ಮ ಅರಕೆರೆಯ ನಿವಾಸದಲ್ಲಿ ನಿಧನರಾಗಿದ್ದು, ಇವರು ಪಾಪ ಪಾಂಡು ಧಾರಾವಾಹಿಯ ಪಾತ್ರದಿಂದ ಜನಮನ್ನಣೆಗಳಿಸಿದ್ದರು. ಕನ್ನಡದ ಹಲವಾರು ಜನಪ್ರಿಯ ನಟರೊಂದಿಗೆ ನಟಿಸಿ ಕನ್ನಡದ ಸಿನಿ ಪ್ರೇಕ್ಷಕರನ್ನು ತಮ್ಮ ಹಾಸ್ಯದ ಮೂಲಕ ರಂಜಿಸಿದ ಕಲಾವಿದ ಇಂದು ಇಹಲೋಕ ತ್ಯಜಿಸಿದ್ದಾರೆ. ಕಲಾವಿದನ ಆಗಲಿಕೆಗೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ. ಇದನ್ನೂ ಓದಿ: ಕಠಿಣ ಸಮಯ ಬರುವುದು ಸಹಜ, ಅದನ್ನು ಶಾಂತಿ, ನಗುವಿನಿಂದ ಎದುರಿಸಬೇಕು: ಸುದೀಪ್

    ಶಂಕರ್ ರಾವ್ ಹವ್ಯಾಸಿ ರಂಗಭೂಮಿ ಕಲಾವಿದರಾಗಿದ್ದು, ರಂಗಭೂಮಿಯಲ್ಲಿ ಗುರುತಿಸಿಕೊಂಡು ಬಳಿಕ ಸಿನಿಮಾ ರಂಗದಲ್ಲಿ ಅವಕಾಶ ಪಡೆದಿದ್ದರು. ಸಿನಿಮಾ ರಂಗದಲ್ಲಿ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಅಪ್ಪು, ಧ್ರುವ, ಖುಷಿ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಬಣ್ಣ ಹಚ್ಚಿ ಸೈ ಎನಿಸಿಕೊಂಡಿದ್ದರು. ಶಂಕರ್ ರಾವ್ ಅವರ ಅಂತ್ಯಕ್ರಿಯೆ ಬನಶಂಕರಿ ಚಿತಾಗಾರದಲ್ಲಿ ಇಂದು ಮಧ್ಯಾಹ್ನ ನಡೆಯಲಿದೆ. ಇದನ್ನೂ ಓದಿ: ಅಂದು ನನ್ನ ನಂಬಿ ಸಿನಿಮಾ ಮಂದಿರಕ್ಕೆ ಬಂದವ್ರಲ್ಲಿ ಕ್ಷಮೆ ಕೇಳುತ್ತೇನೆ: ಸುದೀಪ್

  • ತಮಿಳು ಹಾಸ್ಯ ನಟ ವಿವೇಕ್‍ಗೆ ಹೃದಯಾಘಾತ – ಆರೋಗ್ಯ ಸ್ಥಿತಿ ಗಂಭೀರ

    ತಮಿಳು ಹಾಸ್ಯ ನಟ ವಿವೇಕ್‍ಗೆ ಹೃದಯಾಘಾತ – ಆರೋಗ್ಯ ಸ್ಥಿತಿ ಗಂಭೀರ

    ಚೆನ್ನೈ: ತಮಿಳಿನ ಖ್ಯಾತ ಹಾಸ್ಯ ನಟ ವಿವೇಕ್ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ವಿವೇಕ್ ಅವರಿಗೆ ಇಂದು ಎದೆನೋವು ಕಾಣಿಸಿಕೊಂಡ ಪರಿಣಾಮ ಚೆನ್ನೈನ ಸಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ವೈದ್ಯರು ಆರೋಗ್ಯ ಸ್ಥಿತಿ ಪರೀಕ್ಷಿಸಿದಾಗ ಹೃದಯಾಘಾತವಾಗಿರುವುದು ತಿಳಿದು ಬಂದಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಸ್ಥಳಿಯ ಮಾಧ್ಯಮವೊಂದು ವರದಿ ಮಾಡಿದೆ.

    ವೈದ್ಯರು ಆರೋಗ್ಯ ಪರೀಕ್ಷಿಸಿದ ನಂತರ ವಿವೇಕ್ ಅವರು ತೀವ್ರ ನಿಗಾ ಘಟಕ (ಐಸಿಯು)ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೃದ್ರೋಗ ತಜ್ಞರ ತಂಡ ಅವರ ಆರೋಗ್ಯವನ್ನು ನಿರಂತರವಾಗಿ ಗಮನಿಸುತ್ತಿದೆ.

    ವಿವೇಕ್ ಏಪ್ರಿಲ್ 15 ರಂದು ಅವರ ಸ್ನೇಹಿತನೊಂದಿಗೆ ಚೆನ್ನೈನ ಒಮಾಂಡುರಾರ್ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್-19 ಲಸಿಕೆ ಪಡೆದಿದ್ದರು. ಲಸಿಕೆ ಪಡೆದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ವಿವೇಕ್ ಅವರು, ಎಲ್ಲರೂ ಕೂಡ ಕೋವಿಡ್ -19 ಲಸಿಕೆಗಳನ್ನು ಪಡೆಯುವಂತೆ ಮನವಿ ಮಾಡಿದ್ದರು. ಹಾಗೆ ಕೊರೊನಾದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪ್ರತಿಯೊಬ್ಬರು ಸಾಮಾಜಿಕ ಅಂತರ ಪಾಲಿಸಬೇಕೆಂದು ಜನರಿಗೆ ಕಿವಿಮಾತು ಹೇಳಿದ್ದರು.

    ವಿವೇಕ್ ಅವರು ತಮಿಳಿನ ಬಹುಬೇಡಿಕೆಯ ಹಾಸ್ಯ ನಟನಾಗಿದ್ದು, ಈಗಾಗಲೇ 220 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ವಿವೇಕ್ ಸಿನಿಮಾರಂಗಕ್ಕೆ ನೀಡಿದ ಕೊಡುಗೆಗಾಗಿ ಭಾರತ ಸರ್ಕಾರ 2009 ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಇದೀಗ ಇಂಡಿಯನ್-2 ಸಿನಿಮಾದಲ್ಲಿ ನಟ ಕಮಲ್ ಹಾಸನ್ ಜೊತೆ ನಟಿಸುತ್ತಿದ್ದು, ಸದ್ಯ ಚಿತ್ರೀಕರಣ ಸ್ಥಗಿತಗೊಂಡಿದೆ.

  • ರಾಕ್ಷಸರ ಹತ್ತಿರ ಕೊರೊನಾ ಬರೋದಿಲ್ಲ, ನನಗಂತೂ ಬಂದಿಲ್ಲ: ಈಶ್ವರಪ್ಪ

    ರಾಕ್ಷಸರ ಹತ್ತಿರ ಕೊರೊನಾ ಬರೋದಿಲ್ಲ, ನನಗಂತೂ ಬಂದಿಲ್ಲ: ಈಶ್ವರಪ್ಪ

    – ಕೊರೊನಾ ಅಂತ ಹೆಣ ಬಿದ್ದಂತೆ ಮನೆಯಲ್ಲೇ ಬಿದ್ದುಕೊಂಡ್ರೆ ಹೇಗೆ?

    ಶಿವಮೊಗ್ಗ: ಕೊರೊನಾ ಈಗ ಎಲ್ಲೆಡೆ ಹರಡುತ್ತಿದೆ. ಆದರೆ ರಾಕ್ಷಸರ ಹತ್ತಿರ ಅದು ಸುಳಿಯುವುದೇ ಇಲ್ಲ. ನನಗಂತೂ ಕೊರೊನಾ ಬಂದಿಲ್ಲ. ನಿಮಗೆ ಏನಾದರೂ ಕೊರೊನಾ ಬಂದಿದೆಯಾ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹಾಸ್ಯ ಚಟಾಕಿ ಹಾರಿಸಿದರು.

    ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಕೊರೊನಾ ಬರುತ್ತದೆ ಎಂದು ಹೆದರಿ ಹೆಣ ಬಿದ್ದಂತೆ ಮನೆಯಲ್ಲಿಯೇ ಬಿದ್ದುಕೊಂಡರೇ ಹೇಗೆ ಎಂದು ಪ್ರಶ್ನಿಸಿದರು. ಕೊರೊನಾ ಬರುತ್ತದೆ ಎಂಬ ಭಯದಿಂದ ಶಾಸಕರು, ಸಚಿವರು, ಸಂಸದರು ಹಾಗೂ ಅಧಿಕಾರಿಗಳು ಮನೆಯಲ್ಲೇ ಉಳಿದುಕೊಂಡರೇ ಅಭಿವೃದ್ಧಿ ಕಾರ್ಯಗಳ ಗತಿಯೇನು. ತಲೆ ಇದೆ ಎಂದು ಬಂಡೆಗೆ ಚಚ್ಚಿಕೊಳ್ಳಲು ಸಾಧ್ಯವೇ ಎಂದರು.

    ಕೊರೊನಾ ಇದೆ ಎಂದು ಭಯ ಪಡುವ ಬದಲು ಕೊರೊನಾ ಎದುರಿಸುವ ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು. ಜೊತೆಗೆ ಅದು ಬರದಂತೆ ಜಾಗೃತಿ ವಹಿಸಬೇಕು ಎಂದು ಸಚಿವ ಈಶ್ವರಪ್ಪ ಕಿವಿ ಮಾತು ಹೇಳಿದರು.