Tag: ಹಾಸನ್

  • 20 ಸಾವಿರ ಕ್ಯೂಸೆಕ್ಸ್ ನೀರನ್ನು ತಮಿಳುನಾಡಿಗೆ ಬಿಡುವಂತೆ ಸಿಎಂ ಕುಮಾರಸ್ವಾಮಿ ಆದೇಶ

    20 ಸಾವಿರ ಕ್ಯೂಸೆಕ್ಸ್ ನೀರನ್ನು ತಮಿಳುನಾಡಿಗೆ ಬಿಡುವಂತೆ ಸಿಎಂ ಕುಮಾರಸ್ವಾಮಿ ಆದೇಶ

    ಚೆನ್ನೈ: ತಮಿಳುನಾಡಿಗೆ ಕಬಿನಿ ಜಲಾಶಯದಿಂದ 20 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಆದೇಶಿಸಿದ್ದೇನೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

    ಶುಕ್ರವಾರ ತಮಿಳುನಾಡಿನ ಮಧುರೈ ಮೀನಾಕ್ಷಿ ಅಮ್ಮನವರ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಅವರು, ದೇವರ ದಯೆಯಿಂದ ರಾಜ್ಯದಲ್ಲಿ ತುಂಬಾ ಚೆನ್ನಾಗಿ ಮಳೆಯಾಗುತ್ತಿದೆ. ಮುಂದೆಯೂ ರಾಜ್ಯದಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ. ಹಾಗಾಗಿ ಕಾವೇರಿ ನೀರಿನಲ್ಲಿ ತಮಿಳು ನಾಡಿಗೆ ನೀಡಬೇಕಾದ ಪಾಲನ್ನು ಜೂನ್ ನಲ್ಲಿ ನೀಡಲು ಸಾಧ್ಯವಿದೆ ಎಂದಿದ್ದಾರೆ. ಇದನ್ನೂ ಓದಿ: ನಾನು ಪ್ರಮಾಣ ವಚನ ಸ್ವೀಕರಿಸಿದಾಗಿಂದ್ಲೂ ಉತ್ತಮ ಮಳೆಯಾಗುತ್ತಿದೆ- ಎಚ್‍ಡಿಕೆ

    ಈ ಕುರಿತಂತೆ ಈಗಾಗಲೇ ನಾನು ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಕಬಿನಿ ಜಾಲಾಶಯದಿಂದ 20 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಸೂಚನೆ ನೀಡಿದ್ದೇನೆ. ರಾಜ್ಯದಲ್ಲಿ ಮುಂಗಾರು ಚೆನ್ನಾಗಿ ಪ್ರಾರಂಭವಾಗಿದೆ. ಹೀಗೆಯೇ ಮುಂಗಾರು ಮುಂದುವರಿದರೆ ಕಾವೇರಿ ನೀರು ಹಂಚಿಕೆ ಆದೇಶದಂತೆ ಈ ಜೂನ್ ನಲ್ಲಿ ತಮಿಳುನಾಡಿನ ಪಾಲು 10 ಟಿಎಂಸಿ(ಥೌಸಂಡ್ ಮಿಲಿಯನ್ ಕ್ಯೂಬಿಕ್ ಫೀಟ್) ನೀರನ್ನು ನೀಡಲಾಗುವುದು. ಈಗ ಕಬಿನಿಯಿಂದ ನೀರು ಹರಿಸುತ್ತಿರುವುದು ಎರಡೂ ರಾಜ್ಯಗಳ ರೈತರಲ್ಲಿ ಸಂತಸ ತರಲಿದೆ ಎಂದು ಹೇಳಿದ್ದಾರೆ.

    ಈ ಕುರಿತಂತೆ ಟ್ವೀಟ್ ಮಾಡಿರುವ ನಟ ಕಮಲ್ ಹಾಸನ್, ಕಬಿನಿ ಜಲಾಶಯದಿಂದ ನೀರು ಬಿಡುವ ನಿರ್ಧಾರ ತೆಗೆದುಕೊಂಡಿರುವುದನ್ನು ಸ್ವಾಗತಿಸಿರುವುದಾಗಿ ಹೇಳಿ, ಕುಮಾರಸ್ವಾಮಿಯವರಿಗೆ ಧನ್ಯವಾದ ತಿಳಿಸಿದ್ದಾರೆ. ಅಲ್ಲದೇ ಈ ಮೂಲಕ ಎರಡೂ ರಾಜ್ಯಗಳ ಮಧ್ಯೆ ಮುಚ್ಚಿದ್ದ ಸಂಬಂಧಗಳ ಬಾಗಿಲುಗಳು ತೆರೆದುಕೊಳ್ಳುತ್ತವೆ ಎಂದು ಟ್ವೀಟ್ ಮಾಡಿದ್ದಾರೆ.