ಹಾಸನ: ವರ್ಷಕ್ಕೊಮ್ಮೆ ಮಾತ್ರ ದರ್ಶನ ಕರುಣಿಸುವ ಶಕ್ತಿದೇವತೆ, ಹಾಸನದ ಅಧಿದೇವತೆ ಹಾಸನಾಂಬೆ ದೇವಿ (Hasanamba Temple) ಗರ್ಭಗುಡಿ ಬಾಗಿಲು ಇಂದು ಮಧ್ಯಾಹ್ನ 12 ಗಂಟೆಗೆ ಶಾಸ್ತ್ರೋಕ್ತವಾಗಿ ಮುಚ್ಚಲಿದೆ.
ಈಗಾಗಲೇ ಹಾಸನಾಂಬ ದೇವಿ ಸಾರ್ವಜನಿಕ ದರ್ಶನ ಅಂತ್ಯಗೊಂಡಿದ್ದು, ಪೂಜೆಗಾಗಿ ಗರ್ಭಗುಡಿ ಬಾಗಿಲು ಮುಚ್ಚಲಾಗಿದೆ. ಮಧ್ಯಾಹ್ನ 12 ಗಂಟೆಗೆ ವಿಶ್ವರೂಪ ದರ್ಶನದ ಬಳಿಕ ಶಾಸ್ತ್ರೋಕ್ತವಾಗಿ ಗರ್ಭಗುಡಿ ಬಾಗಿಲು ಮುಚ್ಚಲಾಗುತ್ತದೆ. ಇಂದು ಬೆಳಗ್ಗೆವರೆಗೂ ಹಾಸನಾಂಬ ದೇವಿ ದರ್ಶನಕ್ಕೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿತ್ತು. ಕಡೆಗಳಿಗೆಯಲ್ಲೂ ಭಕ್ತಗಣ ಹಾಸನಾಂಬ ದೇವಿಯನ್ನು ಕಣ್ತುಂಬಿಕೊಂಡಿದ್ದಾರೆ. ಇದನ್ನೂ ಓದಿ: ಇವಿ ಬಿಎಂಟಿಸಿ ಬಸ್ಸು ಚಾಲಕರಿಂದ ದಿಢೀರ್ ಪ್ರತಿಭಟನೆ
ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ, ಸ್ಥಳೀಯ ಶಾಸಕ ಹೆಚ್.ಪಿ.ಸ್ವರೂಪ್ ಪ್ರಕಾಶ್, ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ, ಎಸ್ಪಿ ಮಹಮದ್ ಸುಜಿತಾ, ಎಸಿ ಮಾರುತಿ ಸಮ್ಮುಖದಲ್ಲಿ ಗರ್ಭಗುಡಿ ಬಾಗಿಲು ಮುಚ್ಚಲಾಗುತ್ತದೆ. ಬಾಗಿಲು ಮುಚ್ಚುವ ಮುನ್ನ ಅರ್ಚಕರು ದೀಪ ಹಚ್ಚಿ, ದೇವಿಯ ಮುಂದೆ ಹೂವು, ನೈವೇದ್ಯ ಇಡಲಿದ್ದಾರೆ. ಅನಂತರ ಶಾಸ್ತ್ರೋಕ್ತವಾಗಿ ಹಾಸನಾಂಬೆ ದೇವಿ ಗರ್ಭಗುಡಿ ಬಾಗಿಲು ಮುಚ್ಚಲಾಗುತ್ತದೆ. ಇದನ್ನೂ ಓದಿ: ವಿರೂಪಗೊಳಿಸಿದ ಮಹಾಕಾಳಿ ಮೂರ್ತಿಯನ್ನೇ ವಶಕ್ಕೆ ಪಡೆದ ಪೊಲೀಸ್ – ಬಂಗಾಳದಲ್ಲಿ ರಾಜಕೀಯ ಬಿರುಗಾಳಿ
ಅ.9ರಂದು ಹಾಸನಾಂಬೆ ದೇವಿ ಗರ್ಭಗುಡಿಯ ಬಾಗಿಲು ತೆರೆಯಲಾಗಿತ್ತು. ಇಲ್ಲಿಯವರೆಗೂ 27 ಲಕ್ಷಕ್ಕಿಂತ ಹೆಚ್ಚು ಭಕ್ತರು ದೇವಿ ದರ್ಶನ ಪಡೆದಿದ್ದಾರೆ. 1,000 ರೂ, 300 ರೂ, ಲಾಡು ಪ್ರಸಾದ ಹಾಗೂ ದೇವಿಯ ಸೀರೆ ಮಾರಾಟದಿಂದ 23 ಕೋಟಿಗೂ ಅಧಿಕ ಆದಾಯ ಬಂದಿದ್ದು, ಈ ಬಾರಿಯ ಜಾತ್ರಾ ಮಹೋತ್ಸವ ಇತಿಹಾಸ ಬರೆದಿದೆ. ರಾತ್ರಿಯಿಡೀ ಭಾರೀ ಮಳೆ ಸುರಿದ ಪರಿಣಾಮ ಸಿದ್ದೇಶ್ವರಸ್ವಾಮಿ ಕೆಂಡೋತ್ಸವ ತಡವಾಗಿದೆ. ಕೆಂಡ ಹಾಯಲು ಸಾವಿರಾರು ಮಂದಿ ಭಕ್ತರು ಕಾದು ನಿಂತಿದ್ದರು. ಇದನ್ನೂ ಓದಿ: ಹಾವೇರಿ | ರಾಘವೇಂದ್ರ ಸ್ವಾಮಿ ಮಠದ ಬೀಗ ಮುರಿದು 10 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳ್ಳತನ















