Tag: ಹಾವು

  • ತೀರಾ ಅಪರೂಪದ ಕೆಂಪು ಹವಳದ ಹಾವು ಪತ್ತೆ

    ತೀರಾ ಅಪರೂಪದ ಕೆಂಪು ಹವಳದ ಹಾವು ಪತ್ತೆ

    ಡೆಹ್ರಾಡೂನ್: ತೀರಾ ಅಪರೂಪದ ಕೆಂಪು ಹವಳದ ಕುಕ್ರಿ ಹಾವು ಉತ್ತರಾಖಂಡದ ನೈನಿತಾಲ್ ಜಿಲ್ಲೆಯ ಮನೆಯೊಂದರಲ್ಲಿ ಪತ್ತೆಯಾಗಿದೆ.

    ನೈನಿತಾಲ್‍ನ ಬಿಂದುಖಟ್ಟಾ ಪ್ರದೇಶದ ಬಳಿ ಈ ಅಪರೂಪದ ಹಾವು ಪತ್ತೆಯಾಗಿದ್ದು, ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ರಕ್ಷಣೆ ಮಾಡಿದ್ದಾರೆ. ಅರಣ್ಯ ಅಧಿಕಾರಿಗಳು ಬರುವ ಮುನ್ನ ಗ್ರಾಮಸ್ಥರು ಹಾವನ್ನು ಹಿಡಿದು ಪ್ಲಾಸ್ಟಿಕ್ ಚೀಲದೊಳಗೆ ರಕ್ಷಿಸಿದ್ದರು ಎಂದು ತಿಳಿದು ಬಂದಿದೆ.

    ಬಿಂದುಖಟ್ಟಾ ಪ್ರದೇಶದ ಕುರಿಯಾ ಖಟ್ಟಾ ಗ್ರಾಮದ ನಿವಾಸಿ ಕವೀಂದ್ರ ಕೊರಂಗಾ ಅವರಿಂದ ಗೌಲಾ ಅರಣ್ಯ ವಲಯಕ್ಕೆ ದೂರವಾಣಿ ಮೂಲಕ ಕರೆ ಬಂದಿತ್ತು. ಅವರು ಮನೆಯೊಳಗೆ ಹಾವು ಬಂದಿದ್ದು, ರಕ್ಷಣೆ ಮಾಡುವಂತೆ ಮನವಿ ಮಾಡಿದ್ದರು. ನಾವು ಹೋಗುವಷ್ಟರಲ್ಲಿ ಗ್ರಾಮಸ್ಥರು ಹಿಡಿದು ಪ್ಲಾಸ್ಟಿಕ್ ಚೀಲದಲ್ಲಿ ರಕ್ಷಿಸಿದ್ದರು ಎಂದು ಅರಣ್ಯ ಅಧಿಕಾರಿ ನಿತೀಶ್ ಮಣಿ ತ್ರಿಪಾಠಿ ತಿಳಿಸಿದ್ದಾರೆ.

    ನಾವು ಅದನ್ನು ನೋಡಿದ ತಕ್ಷಣ ನಮಗೆ ಆಶ್ಚರ್ಯವಾಯಿತು. ಇದನ್ನು ಕೆಂಪು ಹವಳದ ಕುಕ್ರಿ ಹಾವು ಎಂದು ಕರೆಯಲಾಗುತ್ತದೆ. ಇದು ತೀರ ಅಪರೂಪದ ಹಾವಾಗಿದೆ. ನಂತರ ನಾವು ಅದನ್ನು ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದೇವೆ ಎಂದರು.

    ಈ ಹಿಂದೆ ಅಂದರೆ 1936 ರಲ್ಲಿ ಉತ್ತರ ಪ್ರದೇಶದ ಲಖಿಂಪುರ ಪ್ರದೇಶದಲ್ಲಿ ಮೊದಲ ಬಾರಿಗೆ ಕೆಂಪು ಹವಳದ ಕುಕ್ರಿ ಹಾವು ಪತ್ತೆಯಾಗಿತ್ತು. ಆಗ ಈ ಹಾವಿಗೆ ವೈಜ್ಞಾನಿಕ ಹೆಸರು ‘ಒಲಿಗೊಡಾನ್ ಖೇರಿಯೆನ್ಸಿಸ್’ ಎಂದು ತಜ್ಞರು ಹೇಳಿದ್ದರು. ನಂತರ 2015ರಲ್ಲಿ ಉತ್ತರಾಖಂಡದ ಸುರೈ ಅರಣ್ಯ ವಲಯದಲ್ಲಿ ಇದೇ ರೀತಿ ಹಾವು ಪತ್ತೆಯಾಗಿತ್ತು.

    ಈ ಹಾವಿನ ಬಣ್ಣ ಕೆಂಪು ಮತ್ತು ಕಿತ್ತಳೆ ಬಣ್ಣಗಳಿಂದ ಕೂಡಿದೆ. ಕೆಲವು ವಾರಗಳ ಹಿಂದೆ ಉತ್ತರ ಪ್ರದೇಶದ ದುಧ್ವಾ ರಾಷ್ಟ್ರೀಯ ಉದ್ಯಾನದಲ್ಲಿ ಕೆಂಪು ಹವಳದ ಕುಕ್ರಿ ಹಾವು ಪತ್ತೆಯಾಗಿತ್ತು. ಇದೀಗ ನೈನಿತಾಲ್ ಜಿಲ್ಲೆಯಲ್ಲಿ ಮತ್ತೆ ಈ ಹಾವು ಪತ್ತೆಯಾಗಿದೆ.

  • ಮಲಗಿದ್ದಾಗ ಪ್ಯಾಂಟ್ ಒಳಗೆ ಹೋದ ಹಾವು – 7 ಗಂಟೆ ಕಂಬ ಹಿಡಿದು ನಿಂತ ಯುವಕ

    ಮಲಗಿದ್ದಾಗ ಪ್ಯಾಂಟ್ ಒಳಗೆ ಹೋದ ಹಾವು – 7 ಗಂಟೆ ಕಂಬ ಹಿಡಿದು ನಿಂತ ಯುವಕ

    ಲಕ್ನೋ: ಮಲಗಿದ್ದ ಕಾರ್ಮಿಕನ ಪ್ಯಾಂಟ್ ಒಳಗೆ ನಾಗರಹಾವೊಂದು ಹೋಗಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ನಡೆದಿದೆ.

    ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಇರುವ ಸಿಕಂದರ್ ಪುರ ಎಂಬ ಗ್ರಾಮದಲ್ಲಿ ವಿದ್ಯುತ್ ಇಲಾಖೆಯ ಕಡೆಯಿಂದ ಕಂಬ ಹಾಕಿಸುವ ಕೆಲಸ ನಡೆಯುತಿತ್ತು. ಈ ಕೆಲಸಕ್ಕೆ ಖಾಸಗಿ ಕಾರ್ಮಿಕರನ್ನು ಕರೆದುಕೊಂಡು ಬರಲಾಗಿತ್ತು. ಈ ಕಾರ್ಮಿರಲ್ಲಿ ಒಬ್ಬನಾದ ಲವಕೇಶ್ ಕುಮಾರ್ ಮಲಗಿದ್ದಾಗ ನಾಗರಹಾವೊಂದು ಪ್ಯಾಂಟ್ ಒಳಗೆ ಹೋಗಿ ಸೇರಿಕೊಂಡಿದೆ.

    ಎಂದಿನಂತೆ ಕೆಲಸ ಮುಗಿಸಿದ ಲವಕೇಶ್ ಕುಮಾರ್ ಕಾರ್ಮಿಕರಿಗೆ ಮಲಗಲು ನೀಡಿದ್ದ ಸಿಕಂದರ್ ಪುರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಹೋಗಿ ಮಲಗಿದ್ದಾನೆ. ಈ ವೇಳೆ ಆತನಿಗೆ ತಿಳಿಯದೆ ಹಾವೊಂದು ಆತನ ಪ್ಯಾಂಟ್ ಒಳಗೆ ಬಂದು ಮಲಗಿದೆ. ಮಧ್ಯರಾತ್ರಿ ಪ್ಯಾಂಟ್ ಒಳಗೆ ಏನೋ ಉಸಿರು ಬಿಟ್ಟಂತೆ ಆತನಿಗೆ ಭಾಸವಾಗಿದೆ. ಆಗ ಆತ ಎದ್ದು ನೋಡಿದಾಗ ಪ್ಯಾಂಟ್ ಒಳಗೆ ಹಾವು ಇರುವುದು ಗೊತ್ತಾಗಿದೆ. ನಂತರ ಆತ ಅಲ್ಲಡದೇ ನಿಂತ ಜಾಗದಲ್ಲೇ ಕಂಬ ಹಿಡಿದು 7 ಗಂಟೆ ನಿಂತಿದ್ದಾನೆ.

    ಈ ಸಮಯದಲ್ಲಿ ಆತನ ಜೊತೆಗಿದ್ದ ಕಾರ್ಮಿಕರು ಹಾವು ಹಿಡಿಯುವರನ್ನು ಹುಡುಕಿ ಕರೆದುಕೊಂಡು ಬಂದಿದ್ದಾರೆ. ಆತ ಬಂದು ಹಾವನ್ನು ಪ್ಯಾಂಟ್‍ನಿಂದ ಹೊರತೆಗೆಯುವ ತನಕ ಲವಕೇಶ್ ಅಲ್ಲಡದೇ ಹಾವಿಗೆ ತೊಂದರೆಯಾಗದಂತೆ ನೋಡಿಕೊಂಡಿದ್ದಾನೆ. ನಂತರ ಸ್ಥಳಕ್ಕೆ ಬಂದ ಉರಗ ತಜ್ಞ ಪ್ಯಾಂಟ್ ಅನ್ನು ಹರಿದು ನಿಧಾನವಾಗಿ ಹಾವನ್ನು ಹೊರ ತೆಗೆದಿದ್ದಾರೆ.

    ಈ ಬಗ್ಗೆ ಮಾತನಾಡಿರುವ ಉರಗ ತಜ್ಞ, ಆತನ ಅದೃಷ್ಟ ಚೆನ್ನಾಗಿದೆ. ಏಳು ಗಂಟೆಗಳ ಕಾಲ ಆತನ ಪ್ಯಾಂಟ್‍ನಲ್ಲೇ ಮಲಗಿರುವ ಹಾವು ಆತನಿಗೆ ಕಚ್ಚಿಲ್ಲ. ಆತ ಪಿಲ್ಲರ್ ಹಿಡಿದು ಅಲ್ಲಡದೇ ನಿಂತ ಕಾರಣ ಹಾವಿಗೆ ನಾನು ಮಾನವನ ಪ್ಯಾಂಟ್‍ನಲ್ಲಿದ್ದೇನೆ ಎನ್ನುವುದು ಗೊತ್ತಾಗಿಲ್ಲ ಎಂದು ಹೇಳಿದ್ದಾರೆ. ಕಂಬ ಹಿಡಿದು ನಿಂತಿರುವ ಯುವಕನ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

  • ತೆಂಗಿನ ಗರಿಯಲ್ಲಿ ಸರಳವಾಗಿ ಹಾವು ಹಿಡಿಯುವ ವಿಧಾನ ತಿಳಿಸಿದ ಪೇಜಾವರಶ್ರೀ

    ತೆಂಗಿನ ಗರಿಯಲ್ಲಿ ಸರಳವಾಗಿ ಹಾವು ಹಿಡಿಯುವ ವಿಧಾನ ತಿಳಿಸಿದ ಪೇಜಾವರಶ್ರೀ

    ಉಡುಪಿ: ಸ್ವಾಮೀಜಿ ಅಂದರೆ ಪೂಜೆ ಪುನಸ್ಕಾರ ಮಾಡುತ್ತಾರೆ. ಪಾಠ ಪ್ರವಚನ ಮಾಡಿ ಮಠದಲ್ಲಿ ಇರುತ್ತಾರೆ. ಲೋಕ ಸಂಚಾರ ಮಾಡಿ ಧರ್ಮ ಜಾಗೃತಿ ಮೂಡಿಸುತ್ತಾರೆ. ಆದರೆ ಉಡುಪಿಯ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಇದೆಲ್ಲ ಮಾಡುವ ಜೊತೆಗೆ ಕೃಷಿ, ಹೈನುಗಾರಿಕೆಯಲ್ಲೂ ಪಾಲ್ಗೊಳ್ಳುತ್ತಾರೆ.

    ಉಡುಪಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ವಿಭಿನ್ನ ಅಭಿರುಚಿಯ ಸ್ವಾಮೀಜಿ. ಸನ್ಯಾಸದ ಜೊತೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕು ನೀಲಾವರ ಗೋಶಾಲೆಯ ಆವರಣದಲ್ಲಿ ಹೆಬ್ಬಾವಿನ ಮರಿಯೊಂದು ಕಾಣಿಸಿಕೊಂಡಿದೆ. ಈ ಹಾವನ್ನು ಸರಳವಾಗಿ ಯಾವುದೇ ಅಪಾಯವಿಲ್ಲದೇ ಹಿಡಿಯುವ ವಿಧಾನ ವಿವರಿಸಿ, ಪ್ರಾತ್ಯಕ್ಷಿಕೆ ಮಾಡಿ ಪೇಜಾವರಶ್ರೀ ಎಲ್ಲರ ಹುಬ್ಬೇರಿಸಿದ್ದಾರೆ. ಪೇಜಾವರ ಶ್ರೀಗಳ ಸಾಹಸವನ್ನು ಅವರ ಶಿಷ್ಯರು ಸಹಜ ಕುತೂಹಲದಿಂದ ಕಂಡು ಅಚ್ಚರಿಪಟ್ಟಿದ್ದಾರೆ.

    ತೆಂಗಿನ ಮರದ ಗರಿಯ ಕಡ್ಡಿಯಲ್ಲಿ ಹಾವು ಹಿಡಿಯುವ ಪ್ರಕ್ರಿಯೆ ಎಲ್ಲರ ಸಹಜ ಕುತೂಹಲಕ್ಕೆ ಕಾರಣವಾಗಿದೆ. ಪೇಜಾವರಶ್ರೀ ಸುಲಲಿತವಾಗಿ ಹಾವು ಹಿಡಿದು ಗೋಣಿಚೀಲಕ್ಕೆ ತುಂಬಿಸುವ ಸಂದರ್ಭ ಗೋಣಿ ಹಿಡಿದ ಶಿಷ್ಯ ಭಯದಲ್ಲಿ ಗಲಿಬಿಲಿಗೊಂಡ ಪರಿಯೂ ವಿಡಿಯೋದಲ್ಲಿ ಸೆರೆಯಾಗಿದೆ. ಹಾಗಂತ ವಿಷಕಾರಿ ಹಾವುಗಳನ್ನು ಹಿಡಿಯದಿರಿ. ತಜ್ಞರನ್ನು ಸಂಪರ್ಕ ಮಾಡಿ ಎಂದು ಪೇಜಾವರಶ್ರೀ ಹೇಳಿದ್ದಾರೆ.

  • ಹಾವು ಕಚ್ಚಿ ಮನೆ ಮುಂದೆ ಆಟವಾಡ್ತಿದ್ದ ಬಾಲಕ ಸಾವು

    ಹಾವು ಕಚ್ಚಿ ಮನೆ ಮುಂದೆ ಆಟವಾಡ್ತಿದ್ದ ಬಾಲಕ ಸಾವು

    – ಗೇಟಿನಿಂದ ಒಳಗೆ ಬಂದು ಕಚ್ಚಿದ ಹಾವು

    ಹೈದರಾಬಾದ್: ಮನೆಯ ಮುಂದೆ ವರಾಂಡಾದಲ್ಲಿ ಆಟ ಆಡುತ್ತಿದ್ದ ಮೂರು ವರ್ಷದ ಬಾಲಕನಿಗೆ ಹಾವು ಕಚ್ಚಿ ಮೃತಪಟ್ಟಿರುವ ಘಟನೆ ಆಂಧ್ರ ಪ್ರದೇಶದ ನಂದಿಗಾಮದಲ್ಲಿ ನಡೆದಿದೆ.

    ಅಥರ್ವ್ ಪ್ರಧಾನ್ (3) ಮೃತ ಬಾಲಕ. ಮೃತ ಬಾಲಕನ ತಂದೆ ಬುದ್ಧದೇವ್ ಪ್ರಧಾನ್ ಕೆಲವು ವರ್ಷಗಳ ಹಿಂದೆ ತಮ್ಮ ಕುಟುಂಬದೊಂದಿಗೆ ಒಡಿಶಾದಿಂದ ನಂದಿಗಾಮಕ್ಕೆ ವಲಸೆ ಬಂದಿದ್ದರು. ಪೃಥ್ವಿ ಕಾಲೋನಿಯಲ್ಲಿ ವಾಸಿಸುತ್ತಿದ್ದು, ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

    ಮೃತ ಅಥರ್ವ್ ತಮ್ಮ ಮನೆಯ ಮುಂದೆ ವರಾಂಡಾದಲ್ಲಿ ಆಡುತ್ತಿದ್ದನು. ಈ ವೇಳೆ ಹಾವು ಗೇಟ್‍ನಿಂದ ಒಳ ಬಂದು ಬಾಲಕನ ಕಾಲಿಗೆ ಕಚ್ಚಿದೆ. ತಕ್ಷಣ ಬಾಲಕ ಕೂಗಿಕೊಂಡಿದ್ದಾನೆ. ಆಗ ಮನೆಯಿಂದ ಪೋಷಕರು ಓಡಿ ಬಂದು ನೋಡಿದ್ದಾರೆ. ಈ ವೇಳೆ ಹಾವು ಗೇಟಿನಿಂದ ಪೊದೆಗಳಿಗೆ ಹೋಗುವುದನ್ನು ನೋಡಿದ್ದಾರೆ. ಇದರಿಂದ ಗಾಬರಿಗೊಂಡ ಪೋಷಕರು ತಕ್ಷಣ ಚಿಕಿತ್ಸೆಗಾಗಿ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಆದರೆ ಮಾರ್ಗ ಮಧ್ಯೆಯೇ ಅಥರ್ವ್ ಮೃತಪಟ್ಟಿದ್ದಾನೆ.

    ಮರಣೋತ್ತರ ಪರೀಕ್ಷೆಯ ನಂತರ ಬಾಲಕನ ಮೃತದೇಹವನ್ನು ಕುಟುಂದವರಿಗೆ ಹಸ್ತಾಂತರಿಸಲಾಗಿದೆ. ಮಗು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

  • ಕ್ವಾರಂಟೈನ್ ಕೇಂದ್ರದಲ್ಲಿ ಹಾವು ಕಚ್ಚಿ 6 ವರ್ಷದ ಬಾಲಕಿ ದುರ್ಮರಣ

    ಕ್ವಾರಂಟೈನ್ ಕೇಂದ್ರದಲ್ಲಿ ಹಾವು ಕಚ್ಚಿ 6 ವರ್ಷದ ಬಾಲಕಿ ದುರ್ಮರಣ

    – ಪೋಷಕರ ಜೊತೆ ಮಲಗಿದ್ದಾಗ ಘಟನೆ
    – ದೆಹಲಿಯಿಂದ ವಾಪಸ್ಸಾದ ಕುಟುಂಬ

    ಡೆಹ್ರಾಡೂನ್: ಕ್ವಾರಂಟೈನ್ ಸೆಂಟರಿನಲ್ಲಿ ಹಾವು ಕಚ್ಚಿ 6 ವರ್ಷದ ಬಾಲಕಿ ಮೃತಪಟ್ಟ ಘಟನೆ ಉತ್ತರಾಖಂಡ್‍ನ ನೈನಿತಾಲ್ ಜಿಲ್ಲೆಯಲ್ಲಿ ನಡೆದಿದೆ.

    ಘಟನೆಗೆ ಸಂಬಂಧಿಸಿದಂತೆ ಮೂವರು ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕ್ವಾರಂಟೈನ್ ಗೆ ಒಳಗಾಗಿದ್ದ ಬಾಲಕಿ ಸೋಮವಾರ ಮುಂಜಾನೆ ತನ್ನ ಪೋಷಕರ ಜೊತೆ ನೆಲದಲ್ಲಿ ಮಲಗಿದ್ದಳು. ಈ ವೇಳೆ ಹಾವು ಕಚ್ಚಿದೆ ಎಂದು ನೈನಿತಾಳ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಸವಿನ್ ಬನ್ಸಾಲ್ ಹೇಳಿದ್ದಾರೆ.

    ದೆಹಲಿಯಿಂದ ವಾಪಸ್ಸಾದ ಬಾಲಕಿಯ ಕುಟುಂಬ ಬೆಟ್ಲಘಾಟ್ ನಲ್ಲಿರುವ ಶಾಲೆಯಲ್ಲಿ ಕ್ವಾರಂಟೈನ್ ಆಗಿತ್ತು. ಹಾವು ಕಚ್ಚಿದ ಕೂಡಲೇ ಬಾಲಕಿಯನ್ನು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆದರೆ ಆಕೆ ಅದಾಗಲೇ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.

    ಗ್ರಾಮೀಣಾಭಿವೃದ್ಧಿ ಅಧಿಕಾರಿ ಉಮೇಶ್ ಜೋಶಿ, ಸಹಾಯಕ ಶಿಕ್ಷಕ ಕರಣ್ ಸಿಂಗ್ ಹಾಗೂ ಸಬ್ ಇನ್ಸ್ ಪೆಕ್ಟರ್ ರಾಜ್ ಪಾಲ್ ಸಿಂಗ್ ವಿರುದ್ಧ ಐಪಿಸಿ ಸೆಕ್ಷನ್ 304(ಎ)(ನಿರ್ಲಕ್ಷ್ಯದಿಂದ ಸಾವು) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಡಿಎಂ ಹೇಳಿದ್ದಾರೆ.

    ಕ್ವಾರಂಟೈನಲ್ಲಿರುವ ಅವ್ಯವಸ್ಥೆಯ ಬಗ್ಗೆ ಬಾಲಕಿಯ ಪೋಷಕರು ರಾಜ್ ಪಾಲ್ ಗೆ ಮೊದಲೇ ದೂರು ನೀಡಿದ್ದರು. ಕ್ವಾರಂಟೈನ್ ಕೇಂದ್ರದ ಸುತ್ತಮುತ್ತ ದಟ್ಟವಾದ ಪೊದೆಗಳಿದ್ದು, ಹಾವುಗಳಿರುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದರು. ಆದರೆ ಇವರ ಮಾತನ್ನು ಸಬ್ ಇನ್ಸ್ ಪೆಕ್ಟರ್ ನಿರ್ಲಕ್ಷ್ಯಿಸಿದ್ದರು. ಅಲ್ಲದೆ ಕ್ವಾರಂಟೈನ್ ಸೆಂಟರ್ ಎತ್ತರ ಪ್ರದೇಶದಲ್ಲಿದ್ದು, ಬಾತ್ ರೂಮ್ ಹಾಗೂ ನೀರಿನ ಕೊರತೆಯ ಬಗ್ಗೆಯೂ ಕ್ವಾರಂಟೈನ್ ಗೆ ಒಳಗಾಗಿದ್ದವರು ಕಂಪ್ಲೆಂಟ್ ಮಾಡಿದ್ದರು. ಅದೇ ಶಾಲೆಯಲ್ಲಿ ಕ್ವಾರಂಟೈನ್ ಆಗಿರುವ ಮಹೇಶ್ ಚಂದ್ರ ಕೂಡ ಅವ್ಯವಸ್ಥೆಯ ಬಗ್ಗೆ ದೂರಿದ್ದಾರೆ. ಟಾಯ್ಲೆಟ್ ವ್ಯವಸ್ಥೆ ಕಟ್ಟದಾಗಿದೆ. ಅಲ್ಲದೆ ಬಾಗಿಲುಗಳು ಕೂಡ ಒಡೆದುಹೋಗಿದ್ದವು ಎಂದು ದೂರಿದ್ದರು.

    ಒಟ್ಟಿನಲ್ಲಿ ಆಡಳಿತಮಂಡಳಿಯ ಬೇಜವಬ್ದಾರಿತನದಿಂದಲೇ ಬಾಲಕಿ ಮೃತಪಟ್ಟಿರುವುದು ಸ್ಪಟ್ಟಷಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗಿದೆ.

  • ಆಸ್ತಿಗಾಗಿ ಪತ್ನಿಯನ್ನ ಕೊಂದು ಹಾವಿನ ದ್ವೇಷದ ಕಥೆ ಕಟ್ಟಿದ್ದ ಪತಿ ಅರೆಸ್ಟ್

    ಆಸ್ತಿಗಾಗಿ ಪತ್ನಿಯನ್ನ ಕೊಂದು ಹಾವಿನ ದ್ವೇಷದ ಕಥೆ ಕಟ್ಟಿದ್ದ ಪತಿ ಅರೆಸ್ಟ್

    – ಒಂದಲ್ಲ ಎರಡು ಬಾರಿ ಹಾವಿನಿಂದ ಪತ್ನಿಗೆ ಕಚ್ಚಿಸಿದ್ದ ಪಾಪಿ
    – ಕೃತ್ಯಕ್ಕೆ ಸಹಕರಿಸಿದ್ದ ಹಾವಾಡಿಗನ ಬಂಧನ

    ತಿರುವನಂತಪುರಂ: ಆಸ್ತಿಗಾಗಿ ಪತ್ನಿಯನ್ನ ಕೊಂದು ಹಾವಿನ ದ್ವೇಷದ ಕಥೆ ಕಟ್ಟಿದ್ದ ಪತಿ ಹಾಗೂ ಕೃತ್ಯಕ್ಕೆ ಸಹಕರಿಸಿದ್ದ ಹಾವಾಡಿಗನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.

    ಕೊಲ್ಲಂ ಜಿಲ್ಲೆಯ ಅಂಚಲ್ ನಿವಾಸಿ ಸೂರಜ್ (27) ಕೊಲೆಗೈದ ಪತಿ ಹಾಗೂ ಸುರೇಶ್ ಕೊಲೆಗೆ ಸಹಕರಿಸಿದ ಹಾವಾಡಿಗ. ಎಸ್.ಉತ್ತರ (25) ಕೊಲೆಯಾದ ಮಹಿಳೆ. ತಂದೆಯ ಹೇಯ ಕೃತ್ಯಕ್ಕೆ ಒಂದು ವರ್ಷದ ಗಂಡು ಮಗು ತಾಯಿಯನ್ನ ಕಳೆದುಕೊಂಡಿದೆ.

    ಏನಿದು ಪ್ರಕರಣ?:
    ಉತ್ತರಾಗೆ ಫೆಬ್ರವರಿಯಲ್ಲಿ ಹಾವು ಕಚ್ಚಿದ್ದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಆಸ್ಪತ್ರೆಯಲ್ಲಿ ಇದ್ದಾಗಲೇ ಅಂದ್ರೆ ಮೇ 7ರಂದು ಎರಡನೇ ಬಾರಿ ಹಾವು ಕಚ್ಚಿತ್ತು. ಆದರೆ ಉತ್ತರಾಳ ಪೋಷಕರು ಅಳಿಯನ ಮೇಲೆ ಶಂಕೆ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದರು. ಅಷ್ಟೇ ಅಲ್ಲದೆ ಸೂರಜ್ ವರದಕ್ಷಿಣೆಗಾಗಿ ನಮ್ಮ ಮಗಳಿಗೆ ಆಗಾಗ್ಗೆ ಕಿರುಕುಳ ನೀಡುತ್ತಿದ್ದ. ಮದುವೆಯ ಸಮಯದಲ್ಲಿ ನೀಡಿದ್ದ ಕೆಲವು ಆಭರಣಗಳು ಲಾಕರ್ ನಿಂದ ಕಾಣೆಯಾಗಿವೆ ಎಂದು ದೂರಿದ್ದರು.

    ಈ ಹಿನ್ನೆಲೆ ತನಿಖೆ ಆರಂಭಿಸಿದ ಪೊಲೀಸರಿಗೆ ಆಘಾತವೇ ಕಾದಿತ್ತು. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೆಲ ಸತ್ಯಗಳು ಬೆಳಕಿಗೆ ಬಂದಿದ್ದವು. ಖಾಸಗಿ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ ಸೂರಜ್ ಕಳೆದ ಐದು ತಿಂಗಳುಗಳಿಂದ ಪತ್ನಿಯ ಕೊಲೆಗೆ ಸಂಚು ರೂಪಿಸಿದ್ದ. ಈ ಕುರಿತು ಇಂಟರ್ನೆಟ್‍ನಲ್ಲಿ ವಿಡಿಯೋ ಕೂಡ ನೋಡಿದ್ದ.

    ಸೂರಜ್ 10 ಸಾವಿರ ರೂ. ಪಾವತಿಸಿ ಕೊಲ್ಲಂ ಜಿಲ್ಲೆಯ ಹಾವಾಡಿಗ ಸುರೇಶ್‍ನಿಂದ ಹಾವನ್ನು ಖರೀದಿಸಿದ್ದ. ಬಳಿಕ ತನ್ನ ರೂಮ್‍ನಲ್ಲಿ ಹಾವನ್ನು ಬಿಟ್ಟು ಪತ್ನಿಗೆ ಕಚ್ಚುವಂತೆ ಮಾಡಿದ್ದ. ಮೊದಲ ಬಾರಿಗೆ ಹಾವು ಕಚ್ಚಿದಾಗಲೇ ಪತ್ನಿ ಸಾಯುತ್ತಾಳೆ ಎಂದು ಸೂರಜ್ ತಿಳಿಸಿದ್ದ. ಆದರೆ ಅದೃಷ್ಟವಶಾತ್ ಉತ್ತರ ಬದುಕುಳಿದಿದ್ದಳು. ಅಳಿಯನ ಮೇಲೆ ಆಗಲೇ ಅನುಮಾನ ವ್ಯಕ್ತಪಡಿಸಿದ್ದ ಉತ್ತರಾಳ ಪೋಷಕರು ಮಗಳನ್ನು ತಮ್ಮ ಊರಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುತ್ತಿದ್ದರು.

    ಆರೋಪಿ ಮೇ 6ರಂದು ಮತ್ತೆ ಹಾವಿನಿಂದ ಪತ್ನಿಗೆ ಕಚ್ಚಿಸಿ ಕೊಲೆಗೈದಿದ್ದ. ಅಷ್ಟೇ ಅಲ್ಲದೆ ಹಾವನ್ನು ಕೊಂದು ಒಳ್ಳೆಯವನಂತೆ ನಾಟಕವಾಡಿದ್ದ. ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ.

    ಪತ್ನಿಯನ್ನ ಕೊಂದರೆ ಆಕೆಯ ಹೆಸರಿನಲ್ಲಿದ್ದ ಆಸ್ತಿ ತನಗೆ ಬರುತ್ತದೆ ಎಂದು ಸೂರಜ್ ಕೃತ್ಯ ಎಸೆಗಿದ್ದಾನೆ. ಅಷ್ಟೇ ಅಲ್ಲದೆ ವರದಕ್ಷಿಣೆಗಾಗಿ ಪದೇ ಪದೇ ಕಿರುಕುಳ ನೀಡುತ್ತಿದ್ದ ಎನ್ನುವುದು ವಿಚಾರಣೆ ವೇಳೆ ಸ್ಪಷ್ಟವಾಗಿದೆ.

  • ಹಾವಿನ ದ್ವೇಷಕ್ಕೆ ಮಹಿಳೆ ಬಲಿ- ಪ್ರಕರಣಕ್ಕೆ ಟ್ವಿಸ್ಟ್

    ಹಾವಿನ ದ್ವೇಷಕ್ಕೆ ಮಹಿಳೆ ಬಲಿ- ಪ್ರಕರಣಕ್ಕೆ ಟ್ವಿಸ್ಟ್

    ತಿರುವನಂತಪುರಂ: ಎರಡು ತಿಂಗಳ ಅವಧಿಯಲ್ಲಿ ಎರಡು ಬಾರಿ ಹಾವು ಕಡಿದು ಕೇರಳದ ಮಹಿಳೆ ಸಾವನ್ನಪ್ಪಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಇಂದೊಂದು ಪ್ಲಾನ್ ಮರ್ಡರ್ ಆಗಿದೆ ಎಂಬುದು ಕೇರಳ ಪೊಲೀಸರು ತಿಳಿಸಿದ್ದಾರೆ.

    ಮೃತ ಮಹಿಳೆಯ ತಂದೆ ಏರಂ ವೆಳ್ಳಾಶೇರಿಯ ವಿಜಯಸೇನ ನೀಡಿದ್ದ ದೂರಿನ ಆಧಾರದ ಮೇಲೆ ಪ್ರಕರಣದ ತನಿಖೆ ನಡೆಯುತ್ತಿದೆ. ಈ ಪ್ರಕರಣವು ಅನೇಕ ರೋಚಕ ಟ್ವಿಸ್ಟ್ ಪಡೆದುಕೊಂಡಿದೆ ಎಂದು ತನಿಖಾ ತಂಡದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಕೊಲ್ಲಂ ಜಿಲ್ಲೆಯ ಅಂಚಲ್ ನಿವಾಸಿ ಎಸ್.ಉತ್ತರ (25) ಕೊಲೆಯಾದ ಮಹಿಳೆ. ಈ ಕೃತ್ಯಕ್ಕೆ ಸಂಬಂಧಿಸಿದಂತೆ ಮಹಿಳೆಯ ಪತಿ, ಸ್ಥಳೀಯ ಹಾವಾಡಿಗ ಮತ್ತು ಇನ್ನೊಬ್ಬ ಸಹಚರನನ್ನು ಬಂಧಿಸಲಾಗಿದೆ.

    ಏನಿದು ಪ್ರಕರಣ?:
    ಮೂರು ತಿಂಗಳ ಹಿಂದೆ ಉತ್ತರಾಗೆ ಹಾವು ಕಚ್ಚಿದ್ದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಆಸ್ಪತ್ರೆಯಲ್ಲಿ ಇಗ್ದಾಗಲೇ ಅಂದ್ರೆ ಮೇ 7ರಂದು ಎರಡನೇ ಬಾರಿ ಹಾವು ಕಚ್ಚಿತ್ತು ಎಂದು ಹೇಳಲಾಗಿತ್ತು. ಆದರೆ ಉತ್ತರಾಳ ಪೋಷಕರು ಆಕೆಯ ಅಳಿಯನ ಮೇಲೆ ಶಂಕೆ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದರು. ಅಷ್ಟೇ ಅಲ್ಲದೆ ಸೂರಜ್ ವರದಕ್ಷಿಣೆಗಾಗಿ ನಮ್ಮ ಮಗಳಿಗೆ ಆಗಾಗ್ಗೆ ಕಿರುಕುಳ ನೀಡುತ್ತಿದ್ದ. ಮದುವೆಯ ಸಮಯದಲ್ಲಿ ನೀಡಿದ್ದ ಕೆಲವು ಆಭರಣಗಳು ಲಾಕರ್ ನಿಂದ ಕಾಣೆಯಾಗಿವೆ ಎಂದು ದೂರಿದ್ದರು.

    ಈ ಹಿನ್ನೆಲೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೆಲ ಸತ್ಯಗಳು ಬೆಳಕಿಗೆ ಬಂದಿವೆ ಎನ್ನಲಾಗಿದೆ. ಆರೋಪಿ ಸೂರಜ್ ಕಳೆದ ಐದು ತಿಂಗಳುಗಳಿಂದ ಪತ್ನಿಯ ಕೊಲೆಗೆ ಸಂಚು ರೂಪಿಸಿದ್ದ. ಖಾಸಗಿ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಪತಿ ಸೂರಜ್ 10 ಸಾವಿರ ರೂ. ಪಾವತಿಸಿ ಆ ಪ್ರದೇಶದ ಹಾವಾಡಿಗ ಸುರೇಶ್‍ನಿಂದ ಹಾವನ್ನು ತಂದಿದ್ದ. ಬಳಿಕ ತನ್ನ ರೂಮ್‍ನಲ್ಲಿ ಹಾವನ್ನು ಪತ್ನಿ ಬಿಟ್ಟು ಪತ್ನಿಗೆ ಕಚ್ಚುವಂತೆ ಮಾಡಿದ್ದ. ಮೊದಲ ಬಾರಿಗೆ ಹಾವು ಕಚ್ಚಿದಾಗಲೇ ಪತ್ನಿ ಸಾಯುತ್ತಾಳೆ ಎಂದು ಸೂರಜ್ ತಿಳಿಸಿದ್ದ. ಆದರೆ ಅದೃಷ್ಟವಶಾತ್ ಉತ್ತರ ಬದುಕುಳಿದಿದ್ದಳು.

    “ಇದೊಂದು ವಿಚಿತ್ರ ಪ್ರಕರಣವಾಗಿದೆ. ಮೂವರು ಆರೋಪಿಗಳು ನಮ್ಮ ವಶದಲ್ಲಿದ್ದಾರೆ. ತನಿಖೆ ನಡೆಯುತ್ತಿರುವುದರಿಂದ ಯಾವುದೇ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ” ಎಂದು ಕೊಲ್ಲಂ ಗ್ರಾಮೀಣ ಪೊಲೀಸ್ ಅಧೀಕ್ಷಕ ಎಸ್.ಹರಿಶಂಕರ್ ಹೇಳಿದ್ದಾರೆ.

  • ಟ್ರ್ಯಾಕ್ಟರ್ ನೇಗಿಲಿಗೆ ಸಿಲುಕಿ ಹಾವಿನ ಬೆನ್ನು ಮೂಳೆ ಮುರಿತ- ಶಸ್ತ್ರಚಿಕಿತ್ಸೆ ಮಾಡಿಸಿದ ರೈತ

    ಟ್ರ್ಯಾಕ್ಟರ್ ನೇಗಿಲಿಗೆ ಸಿಲುಕಿ ಹಾವಿನ ಬೆನ್ನು ಮೂಳೆ ಮುರಿತ- ಶಸ್ತ್ರಚಿಕಿತ್ಸೆ ಮಾಡಿಸಿದ ರೈತ

    ಚಿಕ್ಕಮಗಳೂರು: ಜಮೀನು ಉಳುಮೆ ಮಾಡುವಾಗ ಟ್ರ್ಯಾಕ್ಟರ್ ನೇಗಿಲಿಗೆ ಸಿಲುಕಿದ ಭಾರೀ ಗಾತ್ರದ ನಾಗರಹಾವಿಗೆ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸುವ ಮೂಲಕ ರೈತರೊಬ್ಬರು ಮಾನವೀಯತೆ ಮೆರೆದಿದ್ದಾರೆ.

    ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಗುಬ್ಬಿಗಾ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ ರೈತ ಗೋಪಾಲಾಚಾರ್ ಅವರು ಜಮೀನಿನಲ್ಲಿ ಉಳುಮೆ ಮಾಡುವಾಗ ಟ್ರ್ಯಾಕ್ಟರ್ ನೇಗಿಲಿಗೆ ಭೂಮಿಯೊಳಗಿದ್ದ ಬೃಹತ್ ಗಾತ್ರದ ನಾಗರಹಾವು ಸಿಲುಕಿಕೊಂಡಿದೆ. ನೇಗಿಲಿಗೆ ಸಿಕ್ಕ ನಾಗರಹಾವು ಬಿಡಿಸಿಕೊಳ್ಳಲಾಗದೆ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದೆ. ಹಾವಿನ ಸ್ಥಿತಿ ಕಂಡ ಜಮೀನಿನ ಮಾಲೀಕ ಗೋಪಾಲಾಚಾರ್, ಕೂಡಲೇ ಕುದುರೆಗುಂಡಿಯ ಉರಗತಜ್ಞ ಹರೀಂದ್ರಾಗೆ ವಿಷಯ ಮುಟ್ಟಿಸಿದ್ದಾರೆ.

    ಸ್ಥಳಕ್ಕೆ ಬಂದ ಹರೀಂದ್ರ, ನೇಗಿಲಿಗೆ ಸಿಲುಕಿಕೊಂಡಿದ್ದ ನಾಗರಹಾವನ್ನು ಬಿಡಿಸಿ ಸ್ಥಳೀಯರಾದ ಅರುಣ್ ಹಾಗೂ ಸಾಜು ಅವರ ಸಹಾಯದಿಂದ ಎನ್.ಆರ್.ಪುರದ ಪಶು ಆಸ್ಪತ್ರೆಗೆ ತಂದಿದ್ದಾರೆ. ಪಶು ಆಸ್ಪತ್ರೆ ವೈದ್ಯ ವಿಜಯ್ ಕುಮಾರ್ ಹಾಗೂ ಶಿವಕುಮಾರ್ ಸುಮಾರು ಅರ್ಧ ಗಂಟೆಗಳ ಕಾಲ ಹಾವಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಟ್ರ್ಯಾಕ್ಟರ್ ನೇಗಿಲಿಗೆ ಸಿಲುಕಿದ ಹಾವು ಸುಮಾರು 11 ವರ್ಷದ್ದು. ಈ ಬೃಹತ್ ನಾಗರಹಾವು ಹಾವು ಟ್ರ್ಯಾಕ್ಟರ್ ನೇಗಿಲಿಗೆ ಸಿಲುಕಿದ್ದರಿಂದ ಹಾವಿನ ತಲೆ, ಹೊಟ್ಟೆ ಭಾಗಕ್ಕೆ ತೀವ್ರ ಪೆಟ್ಟಾಗಿತ್ತು. ಹೀಗಾಗಿ ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು ಹಾವಿನ ಹೊಟ್ಟೆ ಭಾಗದಲ್ಲಿ ಸುಮಾರು ಒಂದು ಇಂಚಿನಷ್ಟು ಹೊಲಿಗೆ ಹಾಕಿದ್ದಾರೆ.

    ಬೆನ್ನಿನ ಒಂದು ಎಲುಬು ಮುರಿದಿದ್ದಕ್ಕೆ ಶಸ್ತ್ರ ಚಿಕಿತ್ಸೆ ಮಾಡಿದ್ದರಿಂದ ಹಾವಿಗೆ ಸುಮಾರು ಮೂರ್ನಾಲ್ಕು ದಿನಗಳ ಚಿಕಿತ್ಸೆಯ ಅಗತ್ಯವಿದ್ದು, ಪಶು ಆಸ್ಪತ್ರೆಯಲ್ಲೇ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶಸ್ತ್ರ ಚಿಕಿತ್ಸೆಯ ಬಳಿಕ ಹಾವನ್ನು ಮೂರು ದಿನಗಳ ಕಾಲ ಆಸ್ಪತ್ರೆಯಲ್ಲೇ ಇಡಬೇಕು, ಹಾವಿಗೆ ಮೂರು ಆ್ಯಂಟಿಬಯೋಟಿಕ್ ಹಾಕಬೇಕೆಂದು ಎಂದು ವೈದ್ಯರು ಹರೀಂದ್ರಾ ಅವರಿಗೆ ತಿಳಿಸಿದ್ದಾರೆ.

  • ಬುಸುಗುಡುತ್ತಾ ಎಟಿಎಂ ಒಳಗೆ ಸೇರಿದ ಹಾವು – ವಿಡಿಯೋ ವೈರಲ್

    ಬುಸುಗುಡುತ್ತಾ ಎಟಿಎಂ ಒಳಗೆ ಸೇರಿದ ಹಾವು – ವಿಡಿಯೋ ವೈರಲ್

    ಲಕ್ನೋ: ಮನೆಯಲ್ಲಿ, ಬೈಕ್-ಸ್ಕೂಟಿ, ಕಾರಿನಲ್ಲಿ ಹಾವುಗಳು ಸೇರಿಕೊಂಡ ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತದೆ. ಆದರೆ ಉತ್ತರ ಪ್ರದೇಶದಲ್ಲಿ ಹಾವೊಂದು ಸರಸರನೆ ಎಟಿಎಂ ಮಷಿನ್ ಒಳಗೆ ಸೇರಿಕೊಂಡ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    ಉತ್ತರ ಪ್ರದೇಶದ ಘಾಜಿಯಾಬಾದ್ ನ ಗೋವಿಂದಪುರಿಯಲ್ಲಿನ ಐಸಿಐಸಿಐ ಬ್ಯಾಂಕ್‍ನ ಎಟಿಎಂ ಸೆಂಟರ್‌ವೊಂದರಲ್ಲಿ ಈ ಘಟನೆ ನಡೆದಿದೆ. ಎಟಿಎಂ ಸೆಂಟರ್ ಗೆ ಹಾವೊಂದು ನುಗ್ಗಿತ್ತು. ಇದನ್ನು ನೋಡಿದ ಭದ್ರತಾ ಸಿಬ್ಬಂದಿ ಎಟಿಎಂ ಬಾಗಿಲನ್ನು ತಕ್ಷಣ ಮುಚ್ಚಿದ್ದಾರೆ. ಇದರಿಂದ ಹಾವು ಹೊರಗಡೆ ಬರಲಾಗದೆ ಜನರನ್ನು ಕಂಡು ಭಯಗೊಂಡು ಎಟಿಎಂ ಮಷಿನ್ ಒಳಗಡೆ ಸೇರಿಕೊಂಡಿದೆ.

    ಎಟಿಎಂ ಮಷಿನ್ ಒಳಗಡೆ ಹಾವು ಸೇರಿಕೊಳ್ಳುತ್ತಿರುವ ವಿಡಿಯೋವನ್ನು ಸ್ಥಳೀಯರು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದು, ಫೇಸ್‍ಬುಕ್, ಟ್ವಿಟರ್ ಹಾಗೂ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿದ್ದಾರೆ. ಸದ್ಯ ಎಲ್ಲೆಡೆ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರು ದಂಗಾಗಿದ್ದಾರೆ.

    ಕೆಲವರು ಇದು ಭಯಾನಕ ಎಂದು ವಿಡಿಯೋಗೆ ಪ್ರತಿಕ್ರಿಯಿಸಿದರೆ, ಇನ್ನೂ ಕೆಲವರು ಬಹುಶಃ ಹಾವು ಹಣ ಬಿಡಸಲು ಎಟಿಎಂಗೆ ಬಂದಿತ್ತೋ ಏನೋ? ಸುಮ್ಮನೆ ಅದನ್ನು ಜನ ಭಯ ಬೀಳಿಸಿದ್ದಾರೆ ಎಂದು ಹಾಸ್ಯಾಸ್ಪದವಾಗಿ ಕಮೆಂಟ್ ಮಾಡಿದ್ದಾರೆ.

    ಈ ಘಟನೆ ನಡೆದ ತಕ್ಷಣ ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಸಿಬ್ಬಂದಿ ಹಾವನ್ನು ರಕ್ಷಣೆ ಮಾಡಿದ್ದಾರೆ.

  • ಹಾವು ಕಚ್ಚಿದ್ದಕ್ಕೆ ಚಿಕಿತ್ಸೆಯಲ್ಲಿರಬೇಕಾದರೆ ಮತ್ತೊಂದು ಹಾವು ಕಚ್ಚಿ ಯುವತಿ ಸಾವು!

    ಹಾವು ಕಚ್ಚಿದ್ದಕ್ಕೆ ಚಿಕಿತ್ಸೆಯಲ್ಲಿರಬೇಕಾದರೆ ಮತ್ತೊಂದು ಹಾವು ಕಚ್ಚಿ ಯುವತಿ ಸಾವು!

    ಕೊಲ್ಲಂ: ಹಾವಿನ ದ್ವೇಷ ಹನ್ನೆರಡು ವರ್ಷ ಎಂಬ ಒಂದು ಮಾತಿದೆ. ಈ ಮಾತು ನಿಜಾನೋ ಸುಳ್ಳೋ ಗೊತ್ತಿಲ್ಲ. ಆದರೆ ಕೇರಳದ ಈ ಯುವತಿಯ ಪಾಲಿಗೆ ಮಾತ್ರ ಹಾವೇ ದಾರುಣ ಯಮಪಾಶವಾಗಿದೆ.

    ಹೌದು, ಕೇರಳದ ಕೊಲ್ಲಂ ಜಿಲ್ಲೆಯ ಅಂಚಲ್ ಎಂಬಲ್ಲಿ ಹಾವು ಕಡಿದು ಚಿಕಿತ್ಸೆ ಪಡೆಯುತ್ತಿದ್ದ ಯುವತಿಯೊಬ್ಬರು 2ನೇ ಬಾರಿ ಹಾವು ಕಚ್ಚಿ ಸಾವನ್ನಪ್ಪಿದ್ದಾರೆ. ಏರಂ ವೆಳ್ಳಾಶೇರಿಯ ವಿಜಯಸೇನ ಹಾಗೂ ಮಣಿಮೇಘಲ ದಂಪತಿಯ ಪುತ್ರಿ 25 ವರ್ಷ ಉತ್ತರ ಸಾವನ್ನಪ್ಪಿದ್ದಾರೆ. ಮೂರು ತಿಂಗಳ ಹಿಂದೆ ಉತ್ತರಾಗೆ ಪತಿಯ ಮನೆಯಲ್ಲಿ ಹಾವು ಕಚ್ಚಿತ್ತು. ಇದಕ್ಕೆ ಅವರು ಚಿಕಿತ್ಸೆಯನ್ನೂ ಪಡೆಯುತ್ತಿದ್ದರು.

    ಅಡೂರು ಪರಕೋಡ್ ಸೂರಜ್ ಭವನ್‍ನ ಸೂರಜ್‍ನನ್ನು ಮದುವೆಯಾಗಿದ್ದ ಉತ್ತರಾಗೆ ಮೂರು ತಿಂಗಳ ಹಿಂದೆ ಹಾವು ಕಚ್ಚಿತ್ತು. ಈ ಹಿನ್ನೆಲೆಯಲ್ಲಿ ಆಕೆ ತನ್ನ ತವರು ಮನೆಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದರು.

    ನಿನ್ನೆ ಬೆಳಗ್ಗೆ ಉತ್ತರ ನಿದ್ದೆಯಿಂದ ಎದ್ದಿರಲಿಲ್ಲ. ಹೀಗಾಗಿ ಪೋಷಕರು ಹೋಗಿ ಆಕೆಯನ್ನು ಎಚ್ಚರಿಸಲು ಪ್ರಯತ್ನಿಸಿದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ಗೊತ್ತಾಗಿದೆ. ತಕ್ಷಣ ಅಂಚಲ್‍ನಲ್ಲಿರುವ ಆಸ್ಪತ್ರೆಗೆ ಸೇರಿಸಲು ಯತ್ನಿಸಿದರೂ ಅಷ್ಟರಲ್ಲಾಗಲೇ ಉತ್ತರಾ ಪ್ರಾಣಪಕ್ಷಿ ಹಾರಿ ಹೋಗಿತ್ತು. ಇದೇ ವೇಳೆ ಆಕೆಯ ಕೊಠಡಿಯನ್ನು ಪರಿಶೋಧಿಸಿದಾಗ ಅಲ್ಲಿ ಹಾವು ಕಾಣಿಸಿಕೊಂಡಿದೆ. ಹಾವು ಕಡಿತದಿಂದಲೇ ಸಾವು ಸಂಭವಿಸಿರುವುದು ಖಚಿತವಾಗಿದೆ.