Tag: ಹಾವು

  • ಜಿಲ್ಲಾಸ್ಪತ್ರೆಯಲ್ಲಿ  ಕುಡಿಯಲು ಬಾಟಲ್ ಗೆ ನೀರು ತುಂಬಿದ್ರೆ, ನೀರಿನೊಂದಿಗೆ ಬಂತು ಹಾವಿನ ಮರಿ

    ಜಿಲ್ಲಾಸ್ಪತ್ರೆಯಲ್ಲಿ ಕುಡಿಯಲು ಬಾಟಲ್ ಗೆ ನೀರು ತುಂಬಿದ್ರೆ, ನೀರಿನೊಂದಿಗೆ ಬಂತು ಹಾವಿನ ಮರಿ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ರಾಜ್ಯದ ಉಧಮ್‍ಪುರ ಜಿಲ್ಲೆಯ ಸಾರ್ವಜನಿಕ ಆಸ್ಪತ್ರೆಯಲ್ಲಿ ವಾಟರ್ ಕೂಲರ್ ನಿಂದ ಬಾಟಲ್ ಗೆ ನೀರು ತುಂಬಿಕೊಳ್ಳುವಾಗ ನೀರಿನೊಂದಿಗೆ ಹಾವಿನ ಮರಿಯೊಂದು ಬಂದಿದೆ.

    ಉಧಮ್‍ಪುರ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಯ ತಂದೆಯೊಬ್ಬರು ಮಗನಿಗಾಗಿ ವಾಟರ್ ಕೂಲರ್ ನಿಂದ ನೀರು ತುಂಬಿಕೊಳ್ಳುವಾಗ ಕೂಲರ್ ನಿಂದ ಹಾವಿನ ಮರಿಯೊಂದು ಹೊರ ಬಂದಿದೆ.

    ನಾನು ನನ್ನ ಮಗನಿಗೆ ಕುಡಿಯಲು ನೀರು ತುಂಬಿಕೊಂಡು ಬಂದೆ. ನನ್ನ ಮಗ ನೀರು ಕುಡಿಯುವಾಗ ಬಾಟಲ್ ನಲ್ಲಿ ಹಾವಿನ ಮರಿಯೊಂದು ನೋಡಿದೆ. ಕೂಡಲೇ ಅವನಿಂದ ಬಾಟಲ್ ಕಸಿದುಕೊಂಡೆ ಎಂದು ರೋಗಿಯ ತಂದೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಇದು ಆಸ್ಪತ್ರೆಯ ಸಿಬ್ಬಂದಿಗೆ ಬೇಜವಬ್ದಾರಿಯನ್ನು ತೋರಿಸುತ್ತದೆ. ಜನರು ರೋಗ ಗುಣಪಡಿಸಿಕೊಳ್ಳಲು ಆಸ್ಪತ್ರೆಗೆ ದಾಖಲಾದರೆ ಇಂತಹ ನೀರನ್ನು ಕುಡಿದರೆ ಮತ್ತಷ್ಟು ಆರೋಗ್ಯ ಕೆಡುತ್ತದೆ ಎಂದು ರೋಗಿಯ ತಂದೆ ಹೇಳಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಆಸ್ಪತ್ರೆಯ ಅಧೀಕ್ಷಕ ಡಾ. ವಿಜಯ್, ಅಂಡರ್ ಗ್ರೌಂಡ್ ಪೈಪ್ ನ್ನು ಕೂಲರ್ ಗೆ ಅಳವಡಿಸಿರಬಹುದು. ಹೀಗಾಗಿ ಆ ಪೈಪ್ ಮೂಲಕವೇ ಹಾವಿನ ಮರಿ ಹೊಂದಿರಬಹುದು ಅಥವಾ ಕೂಲರ್ ಗೆ ಅಳವಡಿಸಿರುವ ಪೈಪ್ ಎಲ್ಲಾದರೂ ಒಡೆದಿರುವ ಸಾಧ್ಯತೆಗಳಿವೆ. ಈ ಕುರಿತು ಜಲ ನೈರ್ಮಲ್ಯ ಇಲಾಖೆಗೆ ತಿಳಿಸಲಾಗಿದೆ ಅಂತಾ ಹೇಳಿದ್ದಾರೆ.

  • ಹಾವು ಕಚ್ಚಿ ತಾತ-ಮೊಮ್ಮಗ ಸಾವು

    ಹಾವು ಕಚ್ಚಿ ತಾತ-ಮೊಮ್ಮಗ ಸಾವು

    ಯಾದಗಿರಿ: ಹಾವು ಕಚ್ಚಿ ತಾತ ಮತ್ತು ಮೊಮ್ಮಗ ಇಬ್ಬರು ಸಾವನ್ನಪ್ಪಿರುವ ಘಟನೆ ಯಾದಗಿರಿ ತಾಲೂಕಿನ ನಂದೆಪಲ್ಲಿ ಗ್ರಾಮದಲ್ಲಿ ನಡೆದಿದೆ.

    50 ವರ್ಷದ ನಿಂಗಪ್ಪ ಹಾಗೂ ಅವರ ಮೊಮ್ಮಗನಾದ 10 ವರ್ಷ ವಯಸ್ಸಿನ ಚಂದ್ರಶೇಖರ ಮೃತ ದುರ್ದೈವಿಗಳು.

    ತಾತ ಮೊಮ್ಮಗ ಇಬ್ಬರೂ ರಾತ್ರಿ ಗ್ರಾಮದ ಹೊರವಲಯದಲ್ಲಿರುವ ತಮ್ಮ ಜಮೀನಿಗೆ ಭತ್ತದ ಬೆಳೆಗೆ ನೀರು ಬಿಡಲು ಹೋಗಿದ್ದಾರೆ. ಕತ್ತಲೆ ಇದ್ದ ಕಾರಣದಿಂದ ಹಾವು ಕಡಿದಿದೆ. ತಕ್ಷಣ ಗ್ರಾಮಸ್ಥರು ಸಹಾಯಕ್ಕೆ ಬಂದು ಇಬ್ಬರನ್ನೂ ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದಾರೆ.

    ಈ ಘಟನೆ ಸೈದಾಪೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಸೈದಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

  • ವಿಡಿಯೋ: ಕಮೋಡ್‍ನಲ್ಲಿದ್ದ 6 ಅಡಿ ಉದ್ದದ ಹಾವನ್ನ ಬರಿಗೈಯಲ್ಲೇ ಹೊರತೆಗೆದ!

    ವಿಡಿಯೋ: ಕಮೋಡ್‍ನಲ್ಲಿದ್ದ 6 ಅಡಿ ಉದ್ದದ ಹಾವನ್ನ ಬರಿಗೈಯಲ್ಲೇ ಹೊರತೆಗೆದ!

    ವಾಷಿಂಗ್ಟನ್: ನಾರ್ತ್ ಕ್ಯಾರೊಲಿನಾದ ವ್ಯಕ್ತಿಯೊಬ್ಬ ತನ್ನ ಪಕ್ಕದ ಮನೆಯವರ ಸಹಾಯಕ್ಕೆ ಧಾವಿಸಿ ಬರಿಗೈಯಲ್ಲೇ 6 ಅಡಿ ಉದ್ದದ ಹಾವನ್ನ ಕಮೋಡ್‍ನಿಂದ ಎಳೆದು ತೆಗೆದಿದ್ದಾರೆ.

    88 ವರ್ಷದ ವೃದ್ಧರೊಬ್ಬರ ಮನೆಯಲ್ಲಿ ಕಳೆದ 6 ವರ್ಷಗಳಲ್ಲಿ ನಾಲ್ಕನೇ ಬಾರಿಗೆ ಹಾವು ಕಾಣಿಸಿಕೊಂಡಿತ್ತು. ಟಾಯ್ಲೆಟ್‍ನ ಕಮೋಡ್‍ನಲ್ಲಿದ್ದ ಹಾವನ್ನ ಹೊರಗೆ ತೆಗೆಯಲು ಪಕ್ಕದ ಮನೆಯ ಮೈಕ್ ಗ್ರೀನಿಗೆ ಸಹಾಯ ಕೇಳಿದ್ದರು.

    ಗ್ರೀನಿ ವೃದ್ಧರ ಮನೆಗೆ ಹೋಗಿ ಕಮೋಡ್‍ನಲ್ಲಿದ್ದ ಹಾವನ್ನ ಬಾಲ ಹಿಡಿದು ಬರಿಗೈಯಲ್ಲೇ ಎಳೆದು ಹೊರಗೆ ತೆಗೆದಿದ್ದಾರೆ. ಇದನ್ನ ಮತ್ತೊಬ್ಬ ವ್ಯಕ್ತಿ ವಿಡಿಯೋ ಮಾಡಿದ್ದು, ಮೈ ಜುಮ್ಮೆನಿಸುವಂತಿದೆ. ಗ್ರೀನಿ 6 ಅಡಿ ಉದ್ದದ ಹಾವನ್ನ ಕಮೋಡ್‍ನಿಂದ ಹೊರತೆಗೆದ ವಿಡಿಯೋವನ್ನ ಫೇಸ್‍ಬುಕ್‍ನಲ್ಲಿ ಹಂಚಿಕೊಳ್ಳಲಾಗಿದೆ.

    ಎಷ್ಟು ದೊಡ್ಡಾದಾಗಿದೆ ಈ ಹಾವು ನೋಡು. ನಾನು ಹೇಳ್ದೆ ತಾನೇ, ಇದು ತುಂಬಾ ದೊಡ್ಡ ಹಾವು ಎಂದು ವೃದ್ಧ ವ್ಯಕ್ತಿ ಹೇಳೋದನ್ನ ವಿಡಿಯೋದಲ್ಲಿ ಕೇಳಬಹುದು.

    ಪಕ್ಕದ ಮನೆಯಿಂದ ಹೊರತೆಗೆದ ಹಾವುಗಳಲ್ಲಿ ಈವರೆಗೆ ಇದೇ ಅತ್ಯಂತ ದೊಡ್ಡದು ಎಂದು ಗ್ರೀನಿ ಹೇಳಿದ್ದಾರೆ. ವೃದ್ಧ ವ್ಯಕ್ತಿಯ ಬಗ್ಗೆ ಹೇಳುತ್ತಾ, ಅವರು ಒಂಟಿಯಾಗಿ ವಾಸ ಮಾಡ್ತಾರೆ, ಆರೋಗ್ಯವಾಗಿದ್ದಾರೆ. ಆದ್ರೆ ಹಾವು ಹಿಡಿಯೋದಕ್ಕೆಲ್ಲಾ ಅವರಿಗೆ ಬರಲ್ಲ ಎಂದಿದ್ದಾರೆ.

    ತಾನು ಹೊರತೆಗೆದ ಹಾವು ಅಪಾಯಕಾರಿಯಲ್ಲ. ಅದನ್ನ ಹತ್ತಿರದ ಬಯಲಿನಲ್ಲಿ ಬಿಟ್ಟೆ ಎಂದು ಗ್ರೀನಿ ಹೇಳಿದ್ದಾರೆ.

    https://www.facebook.com/100009792431280/videos/vb.100009792431280/488976324772111/?type=2&theater

     

  • ಬ್ರೇಕ್‍ಅಪ್ ನೋವಲ್ಲಿ ಡೆಡ್ಲಿ ಬ್ಲಾಕ್ ಮಾಂಬಾ ಹಾವಿನಿಂದ ಕಚ್ಚಿಸಿಕೊಂಡು ಸಾವಿನ ವಿಡಿಯೋ ಲೈವ್ ಮಾಡ್ದ

    ಬ್ರೇಕ್‍ಅಪ್ ನೋವಲ್ಲಿ ಡೆಡ್ಲಿ ಬ್ಲಾಕ್ ಮಾಂಬಾ ಹಾವಿನಿಂದ ಕಚ್ಚಿಸಿಕೊಂಡು ಸಾವಿನ ವಿಡಿಯೋ ಲೈವ್ ಮಾಡ್ದ

    31 ವರ್ಷದ ಉರಗ ತಜ್ಞನೊಬ್ಬ ತನ್ನ ಪತ್ನಿಯಿಂದ ದೂರವಾಗಿದ ನೋವಲ್ಲೇ ತಾನೇ ಸಾಕಿದ್ದ ಅತ್ಯಂತ ವಿಷಕಾರಿ ಬ್ಲಾಕ್ ಮಾಂಬಾ ಹಾವಿನಿಂದ ಕಚ್ಚಿಸಿಕೊಂಡಿದ್ದು, ಸಾವಿನ ವಿಡಿಯೋವನ್ನ ಲೈವ್ ಸ್ಟ್ರೀಮಿಂಗ್ ಮಾಡಿದ್ದಾನೆ.

    ಆಸ್ರ್ಲಾನ್ ವಾಲೀವ್ ತನ್ನ ಸಾವಿನ ವಿಡಿಯೋವನ್ನ ಲೈವ್ ಮಾಡುವ ವೇಳೆ ತನ್ನ ಮಾಜಿ ಪತ್ನಿಗೆ ಕರೆ ಮಾಡಿ ಎಂದು ನೋಡುಗರನ್ನ ಕೇಳಿಕೊಂಡಿದ್ದಾನೆ. ಹಾವಿನಿಂದ ಕಚ್ಚಿಸಿಕೊಂಡ ಪರಿಣಾಮ ಆತನ ಸ್ಥಿತಿ ಹದಗೆಡೋದು ವಿಡಿಯೋದಲ್ಲಿ ಸೆರೆಯಾಗಿದೆ. ಹಾವಿನ ವಿಷದಿಂದಾಗಿ ಆತನ ಉಸಿರಾಟ ಜೋರಾಗಿದೆ. ಕಣ್ಣುಗಳು ತಿರುಗಲು ಶುರುವಾಗಿದ್ದು, ಕೈ ಜಡಗಟ್ಟಿದೆ.

    ಆಸ್ರ್ಲಾನ್ ರಷ್ಯಾದ ವಿಡಿಯೋ ಬ್ಲಾಗರ್ ಆಗಿದ್ದು, ಮಾಜಿ ಝೂ ನೌಕರನಾಗಿದ್ದ. ಆಸ್ರ್ಲಾನ್ ಮತ್ತು ಆತನ ಪತ್ನಿ ಕಾಟ್ಯಾ ಯೂಟ್ಯೂಬ್ ಚಾನೆಲ್‍ವೊಂದನ್ನ ನಡೆಸುತ್ತಾ ಫೇಮಸ್ ಆಗಿದ್ರು. ಹಾವು ಮತ್ತು ಬೆಕ್ಕಿನ ಬಗ್ಗೆ ವಿಡಿಯೋಗಳನ್ನ ಅಪ್‍ಲೋಡ್ ಮಾಡ್ತಾ ಸಾವಿರಾರು ಫಾಲೋವರ್‍ಗಳನ್ನೂ ಹೊಂದಿದ್ರು.

    ಹಾವು ಕಚ್ಚುವ ನಿರ್ದಿಷ್ಟ ಸಮಯ ಹಾಗೂ ಸಾಯುವ ಸಮಯವನ್ನ ತೋರಿಸಲಾಗಿಲ್ಲ. ಆದ್ರೆ ಆತ ತನ್ನ ಕೈ ಮೇಲೆ ಹಾವು ಕಚ್ಚಿರೋ ಗಾಯವನ್ನ ತೋರಿಸಿದ್ದಾನೆ. ಕೊನೆಯಲ್ಲಿ ಆತ ಚೇರ್‍ನಿಂದ ಮೇಲೆದ್ದು ಹೋಗಿದ್ದು, ಇದಾದ ಕೆಲವೇ ಕ್ಷಣಗಳಲ್ಲಿ ಸಾವನ್ನಪ್ಪಿದ್ದಾನೆ.

    ಆಸ್ರ್ಲಾನ್ ತನ್ನ ಹೆಂಡತಿ ತನಗೆ ಮೋಸ ಮಾಡಿದ್ದಳೆಂದು ಆರೋಪ ಮಾಡಿದ್ದಾಗಿ ಆತನ ಸ್ನೇಹಿತರು ಹೇಳಿದ್ದಾರೆ. ಆದ್ರೆ ಆಸ್ರ್ಲಾನ್ ಆಕೆಗೆ ಥಳಿಸಿ ಜಗಳವಾಗಿತ್ತು ಎಂದು ವರದಿಯಾಗಿದೆ. ಕಳೆದ ವಾರ ಆಸ್ರ್ಲಾನ್ ಸಾರ್ವಜನಿಕವಾಗಿಯೇ ತನ್ನ ವರ್ತನೆ ಬಗ್ಗೆ ಕ್ಷಮೆ ಕೇಳಿದ್ದ. ಆದ್ರೆ ಆಕೆ ಆಗಲೇ ಡಿವೋರ್ಸ್ ಪಡೆದು ಹೊಸ ರಿಲೇಷನ್‍ಶಿಪ್‍ನಲ್ಲಿದ್ದಳು.

    ಆಸ್ರ್ಲಾನ್ ತನ್ನ ಸಾವಿನ ವಿಡಿಯೋ ಲೈವ್ ಮಾಡುತ್ತಾ ಮಾಜಿ ಪತ್ನಿ ಕಾಟ್ಯಾಗೆ ಕರೆ ಮಾಡಿ ಎಂದು ಆಕೆಯ ಫೋನ್ ನಂಬರ್ ಹೇಳಿದ್ದ. ಕೊನೆಗೆ ನೋಡುಗರಲ್ಲೊಬ್ಬರು ಆಂಬುಲೆನ್ಸ್‍ಗೆ ಕರೆ ಮಾಡಿದ್ದರು. ಆಂಬುಲೆನ್ಸ್ ಸ್ಥಳಕ್ಕೆ ಬಂದು ಆಸ್ರ್ಲಾನ್ ನನ್ನು ಆಸ್ಪತ್ರೆಗೆ ಕೊಂಡೊಯ್ದರೂ ಯಾವುದೇ ಚಿಕಿತ್ಸೆಯಿಂದ ಆತನ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.

    ಈವರೆಗೆ ಆಸ್ರ್ಲಾನ್ ಪತ್ನಿ ಈ ವಿಡಿಯೋ ಬಗ್ಗೆ ಸಾರ್ವಜನಿಕವಾಗಿ ಏನೂ ಮಾತನಾಡಿಲ್ಲ ಎಂದು ವರದಿಯಾಗಿದೆ.

    https://www.youtube.com/watch?v=viyAoQKRNlM

  • ಊರಿಗೇ ಊರೇ ಹಾವಿನ ಕಾಟದಿಂದ ಹೈರಾಣ- ರಾತ್ರಿ ಮಲಗೋಕಾಗಲ್ಲ, ಬೆಳಗಾದ್ರೆ ಸಾವಿನ ಸುದ್ದಿ ತಪ್ಪಲ್ಲ

    ಊರಿಗೇ ಊರೇ ಹಾವಿನ ಕಾಟದಿಂದ ಹೈರಾಣ- ರಾತ್ರಿ ಮಲಗೋಕಾಗಲ್ಲ, ಬೆಳಗಾದ್ರೆ ಸಾವಿನ ಸುದ್ದಿ ತಪ್ಪಲ್ಲ

    ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹೊಸಕೋಟೆ ಗ್ರಾಮದ ಜನ ಹಾವಿನ ಕಾಟದಿಂದ ಹೈರಾಣವಾಗಿದ್ದಾರೆ.

    ಗ್ರಾಮದ ಪಶ್ಚಿಮ ದಿಕ್ಕಿನಲ್ಲಿ ಬೆಟ್ಟವಿದ್ದು ಸರಿ ಸುಮಾರು ಐದು ಸಾವಿರ ಜನ ಇಲ್ಲಿ ವಾಸ ಮಾಡ್ತಿದ್ದಾರೆ. ಆದ್ರೆ 3 ತಿಂಗಳಿನಿಂದ ಈ ಗ್ರಾಮದ ಜನ ಸರಿಯಾಗಿ ನಿದ್ದೆ ಮಾಡಿಲ್ಲ. ಬೆಳಗಾಗ್ತಿದ್ದಂತೆ ಗ್ರಾಮದಲ್ಲಿ ಒಬ್ಬರಲ್ಲ ಒಬ್ಬರಿಗೆ ಹಾವು ಕಚ್ಚಿದೆ ಅನ್ನೋ ಸುದ್ದಿ ಕಿವಿಗೆ ಬೀಳುತ್ತೆ. ಕೆಲವರಂತೂ ರಾತ್ರಿಯಿಡೀ ಕೈಯಲ್ಲಿ ಕೋಲು ಹಿಡ್ಕೊಂಡು ಹಾವನ್ನ ಕಾಯೋ ಕೆಲಸ ಮಾಡಿಕೊಂಡಿದ್ದಾರೆ.

    ಕರಿನಾಗರ ಹಾವು ಕಚ್ಚಿ ಈಗಾಗಲೇ ಐವರು ಸಾವನ್ನಪ್ಪಿದ್ದು, 17 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಇಂದು ಸಹ ಇಬ್ಬರಿಗೆ ನಾಗರಹಾವು ಕಚ್ಚಿದ್ದು, ಇಬ್ಬರ ಸ್ಥಿತಿಯೂ ಚಿಂತಾಜನಕವಾಗಿದೆ.

    ಸುತ್ತಮುತ್ತಲಿನ ಗ್ರಾಮದಲ್ಲಿರುವ 51 ದೇವರಿಗೆ ಪೂಜೆ, ಪುನಸ್ಕಾರ, ಹೋಮ ಹವನ, ಮಾಟ ಮಂತ್ರ ಎಲ್ಲವನ್ನೂ ಮಾಡಿಸಿದ್ದಾರೆ. ಪ್ರತಿ ಮನೆಗೂ ನೂರು ರೂಪಾಯಿ ಹಣ ಪಡೆದು ಗ್ರಾಮ ದೇವತೆಗೆ ಶಾಂತಿ ಪೂಜೆ, ನಾಗದೇವತೆಗೆ ಬಲಿದಾನ ನೀಡಿದ್ದಾರೆ. ಇಷ್ಟಾದ್ರೂ ಹಾವಿನ ಕಾಟ ತಪ್ಪುತ್ತಿಲ್ಲ. ರಾತ್ರಿ ಮನೆಯಲ್ಲಿ ಮಲಗಿದ ಸಮಯದಲ್ಲಿ ಕಿವಿಗೆ, ಗಂಟಲಿಗೆ ಹೆಚ್ಚಾಗಿ ಹಾವು ಕಚ್ಚಿದೆ. ಕೆಲವರಂತೂ ಹಾವಿನ ಭಯದಿಂದ ಊರನ್ನೇ ತ್ಯಜಿಸಿದ್ದಾರೆ.

    ಗ್ರಾಮದಲ್ಲಿ ಕಣ್ಣಿಗೆ ಬಿದ್ದ ಹಾವು ನೋಡ ನೋಡ್ತಿದ್ದಂತೆ ಮಾಯವಾಗ್ತಿವೆಯಂತೆ. ಬೆಡ್‍ರೂಂ, ಬಾತ್‍ರೂಂ ಸೇರಿದಂತೆ ಎಲ್ಲಾ ಕಡೆನೂ ಹಾವುಗಳದ್ದೇ ಭಯ. ಇದನ್ನೆ ಬಂಡವಾಳ ಮಾಡಿಕೊಂಡ ಮಾಂತ್ರಿಕರು ಜನರಿಂದ ಹಣ ಕೀಳ್ತಿದ್ದಾರೆ.

  • ಹಾವು ಮತ್ತೊಂದು ಹಾವನ್ನ ನುಂಗುವ ವಿಡಿಯೋ ನೋಡಿ

    ಹಾವು ಮತ್ತೊಂದು ಹಾವನ್ನ ನುಂಗುವ ವಿಡಿಯೋ ನೋಡಿ

    ಬೆಂಗಳೂರು: ಸಾಮಾನ್ಯವಾಗಿ ಹಾವುಗಳು ಕಪ್ಪೆ ಇಲ್ಲವೆ ಸಣ್ಣ ಹುಳಗಳನ್ನು ನುಂಗುವುದನ್ನು ನೋಡಿದ್ದೇವೆ. ಆದರೆ ಕಳೆದ ರಾತ್ರಿ ಸುರಿದ ತುಂತುರು ಮಳೆಯಲ್ಲಿ ಬಿಲದಿಂದ ಹೊರಬಂದ ಹಾವೊಂದು ಮತ್ತೊಂದು ಹಾವನ್ನ ನುಂಗುತ್ತಿದ್ದ ದೃಶ್ಯ ಮೊಬೈಲ್‍ನಲ್ಲಿ ಸೆರೆಯಾಗಿದೆ.

    ಬೆಂಗಳೂರು ಹೊರವಲಯದ ನೆಲಮಂಗಲ ಸಮೀಪದ ಸಿಡೇದಹಳ್ಳಿಯಲ್ಲಿ ಈ ದೃಶ್ಯ ಕಂಡುಬಂದಿದೆ. ಸಾರ್ವಜನಿಕರು ಇದನ್ನು ಮೊಬೈಲ್‍ಗಳಲ್ಲಿ ಸೆರೆಹಿಡಿದಿದ್ದಾರೆ. ಕಟಕಲು ಜಾತಿಗೆ ಸೇರಿದ ಈ ಹಾವು ಮತ್ತೊಂದು ಹಾವನ್ನು ನುಂಗುತ್ತಿರೋದನ್ನ ವಿಡಿಯೋದಲ್ಲಿ ಕಾಣಬಹುದು.

    ಹಾವುಗಳು ತಮ್ಮ ಪರಾಕ್ರಮ ತೋರಿಕೊಂಡು ರಸ್ತೆಗೆ ಬಂದು ವಾಹನಕ್ಕೆ ಸಿಲುಕುತಿದ್ದವು. ಈ ವೇಳೆ ಹಾವನ್ನ ನುಂಗಿದ ಹಾವನ್ನ ಸಾರ್ವಜನಿಕರು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.

    https://www.youtube.com/watch?v=hQoMPgaorjs

  • ಉಡುಪಿಯಲ್ಲಿ ಒಂದೇ ಕಡೆ ಕಾಣಿಸ್ತು ರಾಶಿ ರಾಶಿ ಹಾವು!- ಈ ರೀತಿಯ ಹಾವುಗಳು ಕಂಡ್ರೆ ಏನು ಮಾಡ್ಬೇಕು?

    ಉಡುಪಿಯಲ್ಲಿ ಒಂದೇ ಕಡೆ ಕಾಣಿಸ್ತು ರಾಶಿ ರಾಶಿ ಹಾವು!- ಈ ರೀತಿಯ ಹಾವುಗಳು ಕಂಡ್ರೆ ಏನು ಮಾಡ್ಬೇಕು?

    ಉಡುಪಿ: ಹಾವುಗಳು ಅಂದ್ರೆನೇ ಎಲ್ಲರಿಗೂ ಕುತೂಹಲ. ಅದ್ರಲ್ಲೂ ರಾಶಿ ರಾಶಿ ಹಾವುಗಳು ಒಂದೇ ಕಡೆ ಕಾಣಿಸಿಕೊಂಡ್ರೆ! ಇಂತಹದೊಂದು ದೃಶ್ಯ ಜಿಲ್ಲೆಯ ಅಂಬಾಗಿಲು ಸಮೀಪದ ಪುತ್ತೂರಿನಲ್ಲಿ ಕಂಡುಬಂದಿದೆ.

    ಈ ದೃಶ್ಯದಲ್ಲಿರೋದು ವಿಷರಹಿತ ಹಾವುಗಳು. ಕೋಮಲವಾಗಿ ಹಿಡಿದರೆ ಕಚ್ಚುವುದೂ ಇಲ್ಲ. ಸಾಮಾನ್ಯವಾಗಿ ಹಸಿರು ತೋಟ, ಹೊಲ-ಗದ್ದೆ ಮತ್ತು ಮನೆಯಂಗಳದ ಆಸುಪಾಸುಗಳಲ್ಲಿ ಹೆಚ್ಚಾಗಿ ಈ ಹಾವುಗಳು ವಾಸಿಸುತ್ತವೆ. ಈ ಹಾವಿಗೆ ಹಳದಿ ರೇಖೆಯ ಹುಲ್ಲು ಹಾವು, ಹಗಲಮರಿ, ನೈಬಾ, ತೊಡಂಬಳಕ ಅನ್ನೋ ಹೆಸರುಗಳಿವೆ. ಇಂಗ್ಲಿಷ್‍ನಲ್ಲಿ ಬಫ್ ಸ್ಟ್ರೈಪ್ಡ್ ಕೀಲ್ ಬ್ಯಾಕ್ ಅನ್ನೋ ಹೆಸರಿದೆ.

    ವಿಶೇಷ ಏನೆಂದರೆ ಈ ಹಾವೊಂದು ಹಾನಿಗೊಂಡ ಅಥವಾ ಘಾಸಿಗೊಂಡ ತಕ್ಷಣ “ಫೆರೋಮೋನ್” ಎಂಬ ವಾಸನಾದ್ರವ್ಯವನ್ನು ಸ್ರವಿಸುತ್ತದೆ. ಆಗ ಆ ವಾಸನೆಗೆ ಆಕರ್ಷಿತವಾಗಿ ಅದೇ ಜಾತಿಯ ನೂರಾರು ಹಾವುಗಳು ಆ ಜಾಗಕ್ಕೆ ಬಂದು ಮುತ್ತಿಕೊಳ್ಳುತ್ತದೆ. ಆದರೆ ಯಾರಿಗೂ ಹಾನಿ ಮಾಡುವುದಿಲ್ಲ. ಮಾರ್ಚ್ ನಿಂದ ನವೆಂಬರ್ ವರೆಗೆ ಇವುಗಳ ವಂಶೋತ್ಪತ್ತಿಯಕಾಲ. ಒಂದು ಹೆಣ್ಣು ಹಾವಿನೊಂದಿಗೆ ಹಲವು ಗಂಡುಹಾವುಗಳು ಕಂಡುಬರುತ್ತವೆ. ಆದ್ದರಿಂದ ಅವನ್ನು ಕಂಡು ಯಾರೂ ಗಾಬರಿಯಾಗುವ ಅಗತ್ಯವಿಲ್ಲ ಎಂದು ಉಡುಪಿಯ ಉರಗ ತಜ್ಞ ಗುರುರಾಜ್ ಸನಿಲ್ ಮಾಹಿತಿ ನೀಡಿದ್ದಾರೆ.

    ಆಕಸ್ಮಾತಾಗಿ ಇಂತಹ ಜಾತಿಯ ಹಾವುಗಳನ್ನು ಕಂಡಲ್ಲಿ ಅವುಗಳ ಕ್ರಿಯೆಗೆ ತೊಂದರೆ ಮಾಡದೆ ಬಿಟ್ಟುಬಿಡಿ ಎಂದು ಹೇಳಿದ್ದಾರೆ. ಈ ಹಾವುಗಳು ನಮ್ಮ ಸುತ್ತಮುತ್ತ ಅಧಿಕ ಸಂಖ್ಯೆಯಲ್ಲಿ ವಾಸಿಸುವುದರಿಂದ ಆಯಾ ಪರಿಸರದ ಸೂಕ್ಷ್ಮ ಜೀವರಾಶಿಗಳ ವಂಶೋತ್ಪತ್ತಿ ಹತೋಟಿಯಲ್ಲಿರುತ್ತದೆ. ಆ ಮೂಲಕ ಮಾನವರಿಗೆ ಸೋಕುವ ಅನೇಕ ರೋಗಗಳಿಂದ ಈ ಹಾವುಗಳು ನಮ್ಮನ್ನು ಸದಾ ರಕ್ಷಿಸುತ್ತಿರುತ್ತವೆ ಎಂದು ಮಾಹಿತಿ ನೀಡಿದ್ದಾರೆ.

    https://www.youtube.com/watch?v=gb7C2f8PHN8

  • ನ್ಯೂಸ್ ರೂಮಿನಲ್ಲಿ ಕಾಣಿಸಿಕೊಂಡ ಹಾವು!- ಸಿಬ್ಬಂದಿ ಏನು ಮಾಡಿದ್ರು ನೋಡಿ

    ನ್ಯೂಸ್ ರೂಮಿನಲ್ಲಿ ಕಾಣಿಸಿಕೊಂಡ ಹಾವು!- ಸಿಬ್ಬಂದಿ ಏನು ಮಾಡಿದ್ರು ನೋಡಿ

     

    ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಸುದ್ದಿ ವಾಹಿನಿಯೊಂದರ ಕಚೇರಿಯಲ್ಲಿ ಹಾವು ಕಾಣಿಸಿಕೊಂಡಿದ್ದು ಅದನ್ನ ಸಿಬ್ಬಂದಿಯೊಬ್ಬರು ಅತ್ಯಂತ ಸಲುಭವಾಗಿ ಹಿಡಿದಿರೋ ವಿಡಿಯೋ ಇದೀಗ ಇಂಟರ್ನೆಟ್‍ನಲ್ಲಿ ಸಾಕಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಿದೆ. 9 ನ್ಯೂಸ್ ಡಾರ್ವಿನ್ ವಾಹಿನಿ ಫೇಸ್‍ಬುಕ್‍ನಲ್ಲಿ ಇದರ ವಿಡಿಯೋವನ್ನ ಅಪ್‍ಲೋಡ್ ಮಾಡಿದೆ.

    ಸೋಮವಾರದಂದು ಕಚೇರಿಯ ಎಡಿಟಿಂಗ್ ವಿಭಾಗದಲ್ಲಿ ಕಂಪ್ಯೂಟರ್ ಟೇಬಲ್ ಮೇಲೆ ಹಾವು ಇದ್ದಿದ್ದನ್ನು ಮೊದಲಿಗೆ ಕ್ಯಾಮೆರಾಮ್ಯಾನ್ ನೋಡಿದ್ದರು. ನಂತರ ಹಾವುಗಳನ್ನ ಹಿಡಿಯೋದ್ರಲ್ಲಿ ಅನುಭವ ಹೊಂದಿದ್ದ ಮಹಿಳಾ ಸಿಬ್ಬಂದಿಯೊಬ್ಬರು ಬಂದು ಸುಮಾರು 6 ಅಡಿ(2 ಮೀಟರ್) ಉದ್ದವಿದ್ದ ಹಾವನ್ನ ಹಿಡಿದರು ಎಂದು ಫೇಸ್ ಬುಕ್‍ನಲ್ಲಿ ವಿವರಿಸಲಾಗಿದೆ.

    ಆ ಮಹಿಳೆ ಒಂದಿಷ್ಟೂ ಭಯ ಪಡದೆ ಒಂದು ತಂತಿಯಲ್ಲಿ ಸ್ಪೀಕರ್ ಹಿಂದಿದ್ದ ಹಾವನ್ನ ಎಳೆದು ಬ್ಯಾಗ್‍ನೊಳಗೆ ಹಾಕಿದ್ದಾರೆ. ಈ ವೇಳೆ ಆ ಹಾವು ಒದ್ದಾಡೋದು ನೋಡಿದ್ರೆ ಒಂದು ಕ್ಷಣ ಎಂಥವರಿಗೂ ಮೈ ಜುಮ್ಮೆನದೇ ಇರದು.

    ಈ ವಿಡಿಯೋವನ್ನ ನ್ಯೂಸ್ ಡೈರೆಕ್ಟರ್ ಕೇಟ್ ಲೈಮನ್ ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದು, ಟ್ವಿಟ್ಟರಿಗರು ತಮಾಷೆಯಾಗಿ ಇದಕ್ಕೆ ಕಮೆಂಟ್‍ಗಳನ್ನ ಹಾಕಿದ್ದಾರೆ. ಹಾವನ್ನ ಅರಣ್ಯಕ್ಕೆ ಬಿಡಲಾಗಿದೆ ಎಂದು ಲೈಮನ್ ಹೇಳಿದ್ದಾರೆ.

    https://www.youtube.com/watch?v=F91k2fBocg8

  • ಎಲೆಕೋಸಿನ ಜೊತೆ ಹಾವು ಬೇಯಿಸಿ ತಿಂದ್ರು- ಅಮ್ಮ ಮಗಳು ಆಸ್ಪತ್ರೆಗೆ ದಾಖಲು

    ಎಲೆಕೋಸಿನ ಜೊತೆ ಹಾವು ಬೇಯಿಸಿ ತಿಂದ್ರು- ಅಮ್ಮ ಮಗಳು ಆಸ್ಪತ್ರೆಗೆ ದಾಖಲು

    ಇಂದೋರ್: ಆಕಸ್ಮಿಕವಾಗಿ ಗುರುವಾರ ರಾತ್ರಿ ಎಲೆಕೋಸಿನ ಜೊತೆ ಪುಟಾಣಿ ಹಾವೊಂದನ್ನ ಬೇಯಿಸಿ ತಿಂದು 35 ವರ್ಷದ ಮಹಿಳೆ ಹಾಗೂ ಅವರ ಮಗಳು ಆಸ್ಪತ್ರೆಗೆ ದಾಖಲಾಗಿರೋ ಘಟನೆ ಇಂದೋರ್‍ನಲ್ಲಿ ನಡೆದಿದೆ.

    ಅಫ್ಜಾನ್ ಇಮಾಮ್ ಹಾಗೂ ಅವರ 15 ವರ್ಷದ ಮಗಳು ಆಮ್ನಾ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೂ ಇಲ್ಲಿನ ಎಮ್‍ವೈ ಆಸ್ಪತ್ರೆ ವೈದ್ಯರು ಇಬ್ಬರ ದೇಹದಲ್ಲಿ ವಿಷದ ಅಂಶ ಇದೆಯೇ ಎಂದು ಪತ್ತೆ ಮಾಡಲು ಹಲವು ಪರೀಕ್ಷೆಗಳನ್ನ ನಡೆಸಿದ್ದಾರೆ.

    ಮಹಿಳೆ ಹಾಗೂ ಅವರ ಮಗಳು ಆಸ್ಪತ್ರೆಗೆ ದಾಖಲಾದಾಗ ವಾಂತಿ ಮಾಡಿಕೊಳ್ಳುತ್ತಿದ್ರು ಎಂದು ಆಸ್ಪತೆಯ ಔಷಧೀಯ ವಿಭಾಗದ ಡಾ ಧಮೇಂದ್ರ ಜಾನ್ವಾರ್ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

    ಇದನ್ನೂ ಓದಿ: ದೇಶದಲ್ಲಿ ಪತ್ತೆಯಾಯ್ತು ಕಾಲು & ಉಗುರುಳ್ಳ ಹಾವು- ವಿಡಿಯೋ ನೋಡಿ

    ರಾತ್ರಿ ಊಟಕ್ಕೆ ಎಲೆ ಕೋಸು ಬಳಸಿ ಅಡುಗೆ ಮಾಡಿ ತಾಯಿ ಮಗಳು ತಿಂದಿದ್ದಾರೆ. ಎಲೆಕೋಸಿನಲ್ಲಿ ಪುಟ್ಟ ಹಾವು ಸೇರಿಕೊಂಡಿದ್ದನ್ನು ಗಮನಿಸದೇ, ಕತ್ತರಿಸಿ ಬೇಯಿಸಿದ್ದಾರೆ. ಆದ್ರೆ ಊಟ ಮಾಡಿದ ನಂತರ ಉಳಿದ ತರಕಾರಿಯಲ್ಲಿ ಪುಟಾಣಿ ಹಾವಿನ ಚಿಕ್ಕ ಚಿಕ್ಕ ಪೀಸ್‍ಗಳು ಸಿಕ್ಕಿವೆ ಎಂದು ಅವರು ಹೇಳಿದ್ದಾರೆ.

    ಹಾವನ್ನ ಬೇಯಿಸಿ ಸೇವಿಸಿರೋದ್ರಿಂದ ದೇಹದ ಮೇಲೆ ದುಷ್ಪರಿಣಾಮ ಬೀರಿದ್ಯಾ ಎಂದು ತಿಳಿಯಲು ಅಫ್ಜಾನ್ ಹಾಗೂ ಅಮ್ನಾರನ್ನ ವಿವಿಧ ಪರೀಕ್ಷೆಗಳಿಗೆ ಒಳಪಡಿಸಲಾಗಿದೆ. ಒಂದು ವೇಳೆ ಹಾವಿನ ವಿಷ ರಕ್ತದಲ್ಲಿ ಬರೆತು ದೇಹಕ್ಕೆ ಪಸರಿಸಿದ್ರೆ ತುಂಬಾ ಅಪಾಯಕಾರಿ. ಹೀಗಾಗಿ ಮುಂದಿನ ಎರಡು ಮೂರು ದಿನಗಳವರೆಗೆ ಇಬ್ಬರ ಸ್ಥಿತಿಯ ಬಗ್ಗೆ ಗಮನ ವಹಿಸುತ್ತೇವೆ ಎಂದು ಅವರು ಹೇಳಿದ್ದಾರೆ.

    ಇದನ್ನೂ ಓದಿ: ಟೊಮೆಟೋ ಚಟ್ನಿ ಮಾಡುವಾಗ ಹಾವನ್ನೂ ಸೇರಿಸಿ ರುಬ್ಬಿದ ಮಹಿಳೆ – ತಿನ್ನುವಾಗ ಬಾಲ ನೋಡಿ ಹೌಹಾರಿದ ಮಗ

    https://www.youtube.com/watch?v=23e5Ur5e-qs

    https://www.youtube.com/watch?v=k0FYf5MPdOU

  • ಕೈಯಲ್ಲಿ ಹಾವು ಹಿಡಿದು ನೂರಾರು ಜನರ ಮೆರವಣಿಗೆ- ವಿಡಿಯೋ ಹಿಂದಿನ ನಿಜವಾದ ಸ್ಟೋರಿ ಏನು?

    ಕೈಯಲ್ಲಿ ಹಾವು ಹಿಡಿದು ನೂರಾರು ಜನರ ಮೆರವಣಿಗೆ- ವಿಡಿಯೋ ಹಿಂದಿನ ನಿಜವಾದ ಸ್ಟೋರಿ ಏನು?

    ಪಾಟ್ನಾ: ನೂರಾರು ಜನ ಯಾವುದೇ ಭಯವಿಲ್ಲದೆ ಕೈಯಲ್ಲಿ ಹಾವುಗಳನ್ನ ಹಿಡಿದುಕೊಂಡು ಮೆರವಣಿಗೆ ಸಾಗುತ್ತಿರುವ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ.

    ಅದರಲ್ಲೂ ಈ ವಿಡಿಯೋದ ಬಗ್ಗೆ ಕೆಲವು ಯೂಟ್ಯೂಬ್ ಚಾನೆಲ್‍ಗಳು ಮತ್ತೊಂದು ಬಗೆಯದ್ದೇ ವಿವರಣೆ ನೀಡಿವೆ. ಬಿಹಾರದ ರತ್ನಪುರಿ ಗ್ರಾಮದಲ್ಲಿ ಮನೆ ನಿರ್ಮಿಸಲು ಪಾಯ ತೋಡುವಾಗ ಸಾವಿರಾರು ವರ್ಷಗಳಷ್ಟು ಹಳೆಯದಾದ 160 ಕೆಜಿ ತೂಕದ ಚಿನ್ನದ ಶಿವನ ವಿಗ್ರಹ ಸಿಕ್ಕಿದೆ. ಈ ವಿಗ್ರಹದ ಸುತ್ತ ಸಾವಿರಾರು ಹಾವುಗಳು ಪತ್ತೆಯಾಗಿದ್ದು, ವಿಗ್ರಹವನ್ನ ಕಾವಲು ಕಾಯುತ್ತಿದ್ದವು. ಅದನ್ನ ಜನರು ಹಿಡಿದುಕೊಂಡು ಮೆರವಣಿಗೆ ಹೊರಟಿದ್ದಾರೆ. ಇದೊಂದು ಪವಾಡ ಎಂದು ವಿಡಿಯೋದ ವಿವರಣೆಯಲ್ಲಿ ಹೇಳಲಾಗಿದ್ದು, ಕೆಲವು ವೆಬ್‍ಸೈಟ್‍ಗಳಲ್ಲೂ ಇದೇ ರೀತಿ ವರದಿಯಾಗಿದೆ. ಆದ್ರೆ ಈ ಸುದ್ದಿ ಎಷ್ಟು ಸತ್ಯ ಎಂಬುದನ್ನ ಗಮನಿಸಬೇಕಾಗುತ್ತದೆ.

    ಯಾಕಂದ್ರೆ ಕಳೆದ ವಾರ ಬಿಹಾರದಲ್ಲಿ ಶ್ರಾವಣ ಅಮಾವಾಸ್ಯೆಯ ಪ್ರಯುಕ್ತ ಜನರು ಕೈಯಲ್ಲಿ ಹಾವುಗಳನ್ನ ಹಿಡಿದು ಮೆರವಣಿಗೆ ಹೋಗುತ್ತಿರುವ ಬಗ್ಗೆ ಸುದ್ದಿ ಸಂಸ್ಥೆಯೊಂದು ಫೋಟೋವೊಂದನ್ನ ಪ್ರಕಟಿಸಿತ್ತು. ಕೆಲವು ಮಾಧ್ಯಮಗಳು ಕೂಡ ನಾಗ ಪಂಚಮಿ ಪ್ರಯುಕ್ತ ಜನ ಹಾವು ಹಿಡಿದು ಮೆರವಣಿಗೆ ಹೋಗುತ್ತಿರುವ ಬಗ್ಗೆ ವರದಿ ಮಾಡಿದ್ದವು. ಯೂಟ್ಯೂಬ್‍ನಲ್ಲಿ ಬಿಹಾರದ ನಾಗ ಪಂಚಮಿ ಎಂದು ಹುಡುಕಿದ್ರೆ ಇಂತಹ ಸಾಕಷ್ಟು ಹಳೆಯ ವಿಡಿಯೋಗಳು ಸಿಗುತ್ತವೆ. ಬಿಹಾರದಲ್ಲಿ ನಾಗ ಪಂಚಮಿ ಸಂದರ್ಭದಲ್ಲಿ ಈ ರೀತಿ ಹಾವುಗಳನ್ನ ಕೈಯಲ್ಲಿ ಹಿಡಿದು ಮೆರವಣಿಗೆ ಮಾಡ್ತಾರೆ.

    ಇದೇ ವಿಡಿಯೋವನ್ನ ಬಳಸಿ ಶಿವನ ವಿಗ್ರಹ ಕಾಯುತ್ತಿದ್ದ ಹಾವುಗಳಿವು ಎಂದು ಹೇಳಿರಬಹುದು. ಆದ್ರೆ ಶಿವನ ಚಿನ್ನದ ವಿಗ್ರಹ ನಿಜವಾಗಿಯೂ ಪತ್ತೆಯಾಗಿದ್ಯಾ ಅಥವಾ ಈ ಫೋಟೋ ಹಿಂದೆ ಬೇರೆಯದ್ದೇ ಕಥೆಯಿದ್ಯಾ? ಎಂಬ ಬಗ್ಗೆ ಸ್ಪಷ್ಟವಾದ ಮಾಹಿತಿ ಇಲ್ಲ.

    https://www.youtube.com/watch?v=tLrjOcqeNo4

    https://www.youtube.com/watch?v=BUCuaMs4Vqs