Tag: ಹಾವು

  • ಶಾಲೆಗೆ ನುಗ್ಗಿ ಕಪಾಟಿನಲ್ಲಿ ಅವಿತುಕೊಂಡ 7 ಅಡಿಗೂ ಉದ್ದದ ನಾಗರಹಾವು!

    ಶಾಲೆಗೆ ನುಗ್ಗಿ ಕಪಾಟಿನಲ್ಲಿ ಅವಿತುಕೊಂಡ 7 ಅಡಿಗೂ ಉದ್ದದ ನಾಗರಹಾವು!

    ರಾಮನಗರ: ಸರ್ಕಾರಿ ಶಾಲೆಗೆ ನುಗ್ಗಿ ಕಪಾಟಿನಲ್ಲಿ ಹಾವು ಅವಿತುಕೊಂಡಿದ್ದು, ಶಾಲೆಯ ವಿದ್ಯಾರ್ಥಿಗಳು ಭಯಭೀತಗೊಂಡ ಘಟನೆ ರಾಮನಗರ ತಾಲೂಕಿನ ಕವಣಾಪುರ ಗ್ರಾಮದಲ್ಲಿ ನಡೆದಿದೆ.

    ಗ್ರಾಮದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನುಗ್ಗಿರುವ ಹಾವು ತರಗತಿ ಒಳಗೆ ಕಪಾಟಿನಲ್ಲಿ ಸೇರಿಕೊಂಡಿತ್ತು. ಬೆಳಗ್ಗೆ ಶಾಲೆಗೆ ಹೋದ ಮಕ್ಕಳಿಗೆ ಕೆಲ ಸಮಯದ ಬಳಿಕ ಹಾವು ಕಾಣಿಸಿಕೊಂಡಿದೆ. ನಂತರ ಭಯಬೀತರಾದ ವಿದ್ಯಾರ್ಥಿಗಳು ಶಾಲೆಯಿಂದ ಹೊರ ಓಡಿದ್ದಾರೆ.

    ನಂತರ ಉರಗ ತಜ್ಞ ಅಮಾನ್ ಖಾನ್ ಸ್ಥಳಕ್ಕೆ ಭೇಟಿ ನೀಡಿ ಕಪಾಟಿನಲ್ಲಿ ಅವಿತಿದ್ದ ಹಾವನ್ನು ಸೆರೆ ಹಿಡಿದ್ರು. ಏಳು ಅಡಿಗೂ ಉದ್ದದ ನಾಗರ ಹಾವನ್ನು ಕಂಡು ಗ್ರಾಮಸ್ಥರಲ್ಲದೇ ಶಾಲಾ ಮಕ್ಕಳು ಹಾಗೂ ಶಿಕ್ಷಕರು ಆಶ್ಚರ್ಯಗೊಂಡಿದ್ದರು.

    ಸಾಮಾನ್ಯವಾಗಿ 5 ಅಡಿಯಿರುತ್ತೆ, ಆದ್ರೆ ಈ ಹಾವು ಸುಮಾರು ಏಳೂವರೆ ಅಡಿ ಇತ್ತು. ಹಾವನ್ನು ಸೆರೆ ಹಿಡಿದ ನಂತರ ವಿದ್ಯಾರ್ಥಿಗಳು ನಿಟ್ಟುಸಿರು ಬಿಟ್ಟಿದ್ದಾರೆ ಅಂತ ಶಾಲಾ ಶಿಕ್ಷಕರು ತಿಳಿಸಿದ್ದಾರೆ.

    ಹಾವನ್ನು ಸೆರೆ ಹಿಡಿದ ಉರಗತಜ್ಞ ಅಮಾನ್ ಖಾನ್ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ನೀಡಿದ್ದು, ಅರಣ್ಯಕ್ಕೆ ಬಿಡಲು ಮುಂದಾಗಿದ್ದಾರೆ.

  • ಕಾರ್ಮಿಕನ ಮನೆಯಲ್ಲಿ ಪತ್ತೆಯಾದವು ನೂರಕ್ಕೂ ಹೆಚ್ಚು ಹಾವಿನ ಮರಿಗಳು

    ಕಾರ್ಮಿಕನ ಮನೆಯಲ್ಲಿ ಪತ್ತೆಯಾದವು ನೂರಕ್ಕೂ ಹೆಚ್ಚು ಹಾವಿನ ಮರಿಗಳು

    ಸಾಂದರ್ಭಿಕ ಚಿತ್ರ

    ಭುವನೇಶ್ವರ: ನೂರಕ್ಕೂ ಹೆಚ್ಚು ಹಾವಿನ ಮರಿಗಳು ಹಾಗೂ 20 ಮೊಟ್ಟೆಗಳನ್ನು ಒರಿಸ್ಸಾದ ಭದ್ರಕ ಜಿಲ್ಲೆಯ ಪೈಕಸಹಿ ಗ್ರಾಮದ ಕಾರ್ಮಿಕನ ಮನೆಯಲ್ಲಿ ಪತ್ತೆಯಾಗಿವೆ.

    ಪೈಕಸಹಿ ಗ್ರಾಮದ ಭಿಜಯ್ ಭುಯಾನ್ ಎಂಬವರ ಮನೆಯಲ್ಲಿ ಶನಿವಾರ 20 ಹಾವಿನ ಮೊಟ್ಟೆಗಳು ಹಾಗೂ ತಾಯಿ ಹಾವಿನ ಸಮೇತ 110 ಹೆಚ್ಚು ಹಾವುಗಳನ್ನು ಹಿಡಿದು ರಕ್ಷಿಸಲಾಗಿದೆ ಎಂದು ಜಿಲ್ಲಾ ಅರಣ್ಯಾಧಿಕಾರಿ ಅಮ್ಲನ್ ನಾಯಕ್ ತಿಳಿಸಿದ್ದಾರೆ.

    ಮರಿಗಳು ಕಳೆದ ಎರಡು ಮೂರು ದಿನಗಳ ಹಿಂದೆ ಮೊಟ್ಟೆಯಿಂದ ಹೊರಬಂದಿದ್ದು, ಗಂಡು ಮತ್ತು ಹೆಣ್ಣು ಹಾವಿನ ಮರಿಗಳು ಸುಮಾರು 2.1ಮೀ ಉದ್ದವಿದೆ. ಈ ಹಾವುಗಳ ಸಾಮಾನ್ಯವಾಗಿ ಮನುಷ್ಯನಿಂದ ದೂರವಿರುತ್ತವೆ. ಆದರೆ ಇಲ್ಲಿ ಇಷ್ಟು ಪ್ರಮಾಣದಲ್ಲಿ ಸಿಕ್ಕಿರುವ ಹಾವುಗಳು ಆಶ್ಚರ್ಯ ಮೂಡಿಸುತ್ತವೆ. ಹಾವುಗಳನ್ನು ಹತ್ತಿರದ ಹಡಗರ್ ವನ್ಯಜೀವಿ ಅಭಯಾರಣ್ಯದಲ್ಲಿ ಬಿಡಲಾಗುತ್ತದೆ ಎಂದು ಅರಣ್ಯಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

    ಎಲ್ಲಿಂದ ಬಂತು ಹಾವು?: ಭುಯಾನ್ ಮನೆಯ ಒಂದು ಕೋಣೆಯಲ್ಲಿ ಹುತ್ತವಿದ್ದು ಅದರಲ್ಲಿ ಹಾವುಗಳಿದ್ದವು. ದಿನನಿತ್ಯ ಭುಯಾನ್ ಹುತ್ತಕ್ಕೆ ಪೂಜೆ ಸಲ್ಲಿಸುತ್ತಿದ್ದರಂತೆ. ಈ ಹಿನ್ನೆಲೆಯಲ್ಲಿ ಮನೆಯಲ್ಲಿ ಹಾವುಗಳ ಕಾಣಿಸಿಕೊಂಡಿವೆ ಎಂದು ಗ್ರಾಮಸ್ಥರು ಹೇಳುತ್ತಾರೆ.

    ಮನೆಯಲ್ಲಿ ಹಾವುಗಳು ಹರಿದಾಡುತ್ತಿದ್ದು, ಅವುಗಳನ್ನು ಹಿಡಿಯುವಂತೆ ಉರಗ ರಕ್ಷಕ ಎಸ್ ಕೆ ಮಿರ್ಜಾರವರಿಗೆ ಭುಯಾನ್ ವಿಷಯ ತಿಳಿಸಿದ್ದಾರೆ. ಕೂಡಲೇ ಮನೆಗೆ ಬಂದ ಅವರು ಸುಮಾರು 5 ಗಂಟೆ ಕಾರ್ಯಚರಣೆ ನಡೆಸಿ ತಾಯಿ ಹಾವು ಸೇರಿದಂತೆ ಸುಮಾರು 110 ಮರಿಹಾವು ಹಾಗೂ 20 ಮೊಟ್ಟೆಗಳನ್ನು ರಕ್ಷಣೆ ಮಾಡಿದ್ದಾರೆ.

  • ವಿಡಿಯೋ: ಕೋಳಿ ಸಾಯ್ಸಿ, 7 ಮೊಟ್ಟೆಗಳನ್ನು ನುಂಗಿ ಒದ್ದಾಡುತ್ತಿದ್ದ ನಾಗರ ಹಾವಿನ ರಕ್ಷಣೆ

    ವಿಡಿಯೋ: ಕೋಳಿ ಸಾಯ್ಸಿ, 7 ಮೊಟ್ಟೆಗಳನ್ನು ನುಂಗಿ ಒದ್ದಾಡುತ್ತಿದ್ದ ನಾಗರ ಹಾವಿನ ರಕ್ಷಣೆ

    ಉಡುಪಿ: ಜಿಲ್ಲೆಯಲ್ಲಿ ಮನೆಯೊಂದಕ್ಕೆ ನುಗ್ಗಿ 7 ಕೋಳಿ ಮೊಟ್ಟೆಗಳನ್ನು ನುಂಗಿ ಒದ್ದಾಡುತ್ತಿದ್ದ ನಾಗರಹಾವನ್ನು ರಕ್ಷಿಸಲಾಗಿದೆ.

    ಉಡುಪಿಯ ಹಾವಂಜೆಯ ಮನೆಯೊಂದಕ್ಕೆ ಬಂದ ನಾಗರ ಹಾವು, ಕೋಳಿಯನ್ನು ಕೊಂದು ಎಲ್ಲಾ ಏಳು ಮೊಟ್ಟೆಗಳನ್ನು ನುಂಗಿತ್ತು. ನಂತರ ಹಟ್ಟಿಯ ಮೇಲ್ಛಾವಣಿಯಲ್ಲಿ ಅಡಗಿ ಕುಳಿತಿದೆ.

    ಇದರಿಂದ ಭಯಗೊಂಡ ಮನೆಯವರು ತಕ್ಷಣ ಉಡುಪಿಯ ಉರಗ ತಜ್ಞ ಗುರುರಾಜ್ ಸನಿಲ್ ಗೆ ಕರೆಮಾಡಿದ್ದಾರೆ. ಗುರುರಾಜ್ ಕೂಡಲೇ ಹಾವಂಜೆಗೆ ಧಾವಿಸಿದ್ದು ಮೊಟ್ಟೆಯನ್ನು ನುಂಗಿದ್ದ ಹಾವನ್ನು ಸೆರೆ ಹಿಡಿದರು.

    ಹಾವನ್ನು ಮೇಲ್ಛಾವಣಿಯಿಂದ ಅಂಗಳಕ್ಕಿಳಿಸಿದ್ದಾರೆ. ಬಳಿಕ ಭಯಗೊಂಡ ಆ ಹಾವು ನುಂಗಿದ್ದ ಮೊಟ್ಟೆಗಳನ್ನು ವಾಂತಿ ಮಾಡಿದೆ. ಅಲ್ಲಿಂದ ಹೊರಟ ಹಾವನ್ನು ರಕ್ಷಿಸಿ ಅದಕ್ಕೆ ಆಹಾರ ನೀಡುವ ಮೂಲಕ ಗುರುರಾಜ್ ಸನಿಲ್ ಮಾನವೀಯತೆಯನ್ನು ಮೆರೆದಿದ್ದಾರೆ.

    https://www.youtube.com/watch?v=oeQwSM–jmg&feature=youtu.be

  • ನಾಗರಹಾವು ಕೊರಳಲ್ಲಿ ಹಾಕಿಕೊಂಡು ತಹಶೀಲ್ದಾರ್ ಕಚೇರಿಗೆ ಎಂಟ್ರಿಕೊಟ್ಟು ಪ್ರತಿಭಟನೆ!

    ನಾಗರಹಾವು ಕೊರಳಲ್ಲಿ ಹಾಕಿಕೊಂಡು ತಹಶೀಲ್ದಾರ್ ಕಚೇರಿಗೆ ಎಂಟ್ರಿಕೊಟ್ಟು ಪ್ರತಿಭಟನೆ!

    ಗದಗ: ಜೀವಂತ ನಾಗರ ಹಾವನ್ನು ಕೊರಳಿಗೆ ಸುತ್ತಿಕೊಂಡು ವ್ಯಕ್ತಿಯೊಬ್ಬರು ರೋಣ ತಾಲೂಕು ಅಧಿಕಾರಿಗಳ ಕಚೇರಿಯನ್ನು ಪ್ರವೇಶಿಸಿ ಪ್ರತಿಭಟಿಸಿದ್ದಾರೆ.

    ಮಕ್ತುಮಸಾಬ್ ರಾಜೇಖಾನ್ (65) ನಿಂದ ವಿಭಿನ್ನ ಪ್ರತಿಭಟನೆ ನಡೆಸಿದ ವ್ಯಕ್ತಿ. ರಾಜೇಖಾನ್ ಅವರಿಗೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಮನೆಯಿಂದ ಅವರನ್ನು ಹೊರ ಹಾಕಿದ್ದಾರೆ. ಅದ್ದರಿಂದ ಅಂಗವಿಕಲರಾದ ಕಾರಣ ಸರ್ಕಾರದಿಂದ ಬರುವ ಸಹಾಯದ ಹಣವನ್ನು ಪಡೆಯಲು ಕಳೆದ ಆರು ತಿಂಗಳ ಹಿಂದೆ ಅರ್ಜಿ ಸಲ್ಲಿಸಿ ಅಧಿಕಾರಿಗಳ ಹಿಂದೆ ಸುತ್ತುತ್ತಿದ್ದಾರೆ.

    ಸದ್ಯ ರಾಜೇಖಾನ್ ಮನೆಯ ಬಳಿಯ ಪ್ರತ್ಯೇಕ ಕೊಣೆಯೊಂದರಲ್ಲಿ ವಾಸವಿದ್ದು, ಯಾವುದೇ ಕೆಲಸ ಮಾಡಿ ಹಣ ಸಂಪಾದನೆ ಮಾಡಲು ಆಗದೇ ಊಟಕ್ಕಾಗಿ ಸಮಸ್ಯೆ ಎದುರಿಸುತ್ತಾರೆ. ಈ ಕುರಿತು ಅಧಿಕಾರಿಗಳ ಬಳಿ ತಮ್ಮ ಸಮಸ್ಯೆ ಹೇಳಿಕೊಂಡು ಪರಿಹಾರಕ್ಕಾಗಿ ವಿನಂತಿ ಮಾಡಿದ್ದಾರೆ. ಆದರೆ ಅಧಿಕಾರಿಗಳು ನಿರ್ಲಕ್ಷವಹಿಸಿ ಮಾತನಾಡಿದ್ದು ಇದರಿಂದ ಬೇಸತ್ತ ರಾಜೇಖಾನ್ ಇಂದು ಜೀವಂತ ಹಾವು ಕೊರಳಿಗೆ ಸುತ್ತಿಕೊಂಡು ನೇರ ತಹಶೀಲ್ದಾರ್ ಹಾಗೂ ಉಪಖಜಾನೆ ಅಧಿಕಾರಿಗಳ ಕಚೇರಿಗೆ ಆಗಮಿಸಿ ಪ್ರತಿಭಟನೆ ನಡೆಸಿದ್ದಾರೆ.

  • ಕಪ್ಪೆ ನುಂಗಿ ವಾಷಿಂಗ್ ಮಷೀನ್ ಸೇರಿದ ಹಾವು

    ಕಪ್ಪೆ ನುಂಗಿ ವಾಷಿಂಗ್ ಮಷೀನ್ ಸೇರಿದ ಹಾವು

    ಚಿಕ್ಕಮಗಳೂರು: ಕಪ್ಪೆ ನುಂಗಿ ವಾಷಿಂಗ್ ಮಷೀನ್ ಸೇರಿದ್ದ ಹಾವಿನ ರಕ್ಷಣೆ ಮಾಡಿದ ಘಟನೆ ಚಿಕ್ಕಮಗಳೂರಿನ ಬೈಪಾಸ್ ರಸ್ತೆಯಲ್ಲಿ ನಡೆದಿದೆ.

    ಪ್ರದೀಪ್ ಎಂಬವರ ಮನೆಯೊಳಗಡೆ ಹಾವು ಸೇರಿದ್ದು, ಕೆರೆ ಹಾವು ಸುಮಾರು ಆರು ಅಡಿ ಉದ್ದವಿತ್ತು. ಹಾವು ದೊಡ್ಡ ಕಪ್ಪೆ ನುಂಗಿ ತೆವಳಲು ಆಗದೆ ವಾಷಿಂಗ್ ಮಷೀನ್ ಸೇರಿತ್ತು. ವಾಷಿಂಗ್ ಮಷೀನ್ ಬಳಿ ರಕ್ತ ನೋಡಿ ಮನೆಯವರು ಗಾಬರಿಗೊಂಡರು.

    ಮೊದಲು ಹಾವನ್ನು ನೋಡಿ ನಾಗರಹಾವೆಂದು ಮನೆಯವರು ಹೆದರಿಕೊಂಡರು. ವಾಷಿಂಗ್ ಮಷೀನ್ ಬಿಚ್ಚಿದ ಮೇಲೆ ಅದು ಕೆರೆ ಹಾವು ಎಂದು ತಿಳಿಯಿತು. ಬಳಿಕ ಸ್ನೇಕ್ ನರೇಶ್ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ನರೇಶ್ ಹಾವನ್ನು ರಕ್ಷಿಸಿದ್ದಾರೆ.

  • ತಾಯಿಯ ಎದೆ ಹಾಲು ಕುಡಿದ ಕೂಡಲೇ ಮಗು ಸಾವು!

    ತಾಯಿಯ ಎದೆ ಹಾಲು ಕುಡಿದ ಕೂಡಲೇ ಮಗು ಸಾವು!

    ಲಕ್ನೋ: ತಾಯಿಯೊಬ್ಬಳು ಮಲಗಿದ್ದ ಸಂದರ್ಭದಲ್ಲಿ ವಿಷಪೂರಿತ ಹಾವು ಕಚ್ಚಿದೆ. ಇದನ್ನ ಗಮನಿಸದ ತಾಯಿ ಮಗುವಿಗೆ ಎದೆ ಹಾಲು ಕುಡಿಸಿದ್ದಾರೆ. ಪರಿಣಾಮ ಇಬ್ಬರು ಮೃತಪಟ್ಟಿರುವ ದಾರುಣ ಘಟನೆ ಉತ್ತರ ಪ್ರೇಶದಲ್ಲಿ ನಡೆದಿದೆ.

    35 ವರ್ಷದ ತಾಯಿ ತನ್ನ ಮನೆಯಲ್ಲಿ ಮಲಗಿರುವಾಗಲೇ ಹಾವು ಕಚ್ಚಿದೆ. ಆದ್ರೆ ನಿದ್ದೆಯ ಮಂಪರಿನಲ್ಲಿದ್ದ ಆಕೆಗೆ ಹಾವು ಕಚ್ಚಿರುವುದು ತಿಳಿದಿರಲಿಲ್ಲ. ಪರಿಣಾಮ ಪಕ್ಕದಲ್ಲೇ ಜೋರಾಗಿ ಅಳುತ್ತಿದ್ದ ತನ್ನ ಮೂರು ವರ್ಷದ ಹೆಣ್ಣು ಮಗುವಿಗೆ ಎದೆ ಹಾಲು ಕುಡಿಸಿದ್ದಾರೆ.

    ಮಗು ಹಾಲು ಕುಡಿದ ಸ್ವಲ್ಪ ಸಮಯದಲ್ಲಿಯೇ ಇಬ್ಬರೂ ತೀವ್ರವಾಗಿ ಅಸ್ವಸ್ಥರಾಗಿದ್ದಾರೆ. ಬಳಿಕ ಕುಟುಂಬಸ್ಥರು ಇಬ್ಬರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ತಾಯಿ, ಮಗು ಇಬ್ಬರು ಅಷ್ಟರಲ್ಲಿಯೇ ಮೃತಪಟ್ಟಿದ್ದರು ಎಂದು ಪೊಲೀಸ್ ಇನ್ಸ್ ಪೆಕ್ಟರ್ ವಿಜಯ್ ಸಿಂಗ್ ತಿಳಿಸಿದ್ದಾರೆ.

    ಮರಣೋತ್ತರ ಪರೀಕ್ಷೆ ವರದಿಯಲ್ಲಿ ತಾಯಿಗೆ ಹಾವು ಕಚ್ಚಿದೆ. ಹೀಗಾಗಿ ತಾಯಿಯ ಎದೆಹಾಲು ಕುಡಿದ ಮಗು ಸೇರಿ ಇಬ್ಬರೂ ಸಾವನ್ನಪ್ಪಿರುವುದು ತಿಳಿದು ಬಂದಿದೆ. ಆದ್ದರಿಂದ ಇದನ್ನು ಆಕಸ್ಮಿಕ ಸಾವು ಎಂದು ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

    ಕುಟುಂಬಸ್ಥರು ತಾಯಿ ಮಲಗಿದ್ದ ಪಕ್ಕದ ಕೊಠಡಿಯಲ್ಲಿದ್ದ ವಿಷಪೂರಿತ ಹಾವನ್ನು ಪತ್ತೆಮಾಡಿದ್ದಾರೆ. ಆದರೆ ಅದು ತಪ್ಪಿಸಿಕೊಂಡಿದೆ ಎಂಬುದಾಗಿ ವರದಿಯಾಗಿದೆ.

  • ಮನೆ ಸ್ವಚ್ಛಗೊಳಿಸುವಾಗ ಹೊರ ಬಂತು 400ಕ್ಕೂ ಅಧಿಕ ಹಾವುಗಳು!

    ಮನೆ ಸ್ವಚ್ಛಗೊಳಿಸುವಾಗ ಹೊರ ಬಂತು 400ಕ್ಕೂ ಅಧಿಕ ಹಾವುಗಳು!

    ಲಕ್ನೋ: ಮನೆಯಲ್ಲಿ ಒಂದು ಹಾವು ಕಂಡರೆ ಸಾಕು ಜನರು ಭಯದಿಂದ ಓಡಾಡಲು ಆರಂಭಿಸುತ್ತಾರೆ. ಸಾಮಾನ್ಯವಾಗಿ ಮನೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಹಾವುಗಳು ಕಾಣಿಸಿಕೊಂಡು ಕೆಲಕಾಲ ಭಯದ ವಾತಾವರಣ ಉಂಟಾಗುತ್ತದೆ. ಆದ್ರೆ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಗ್ರಾಮವೊಂದರ ಮನೆಯಲ್ಲಿ ಸುಮಾರು 400 ಹಾವುಗಳು ಕಂಡುಬಂದಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿದೆ.

    ಮೀರತ್‍ನ ಮವಾನಾ ಪಟ್ಟಣದ ಮುನ್ನಾವಾಲಾ ಬಡಾವಣೆಯಲ್ಲಿರುವ ಮನೆಯಲ್ಲಿ ಭಾರೀ ಸಂಖ್ಯೆಯ ಹಾವುಗಳು ಪ್ರತ್ಯಕ್ಷವಾಗಿದೆ. ಮೇ 11ರಂದು ಸಲೀಂ ಎಂಬವರ ಮನೆಯಲ್ಲಿ ಮೊದಲಿಗೆ 2 ಅಡಿ ಉದ್ದದ ಹಾವು ಕಾಣಿಸಿತ್ತು. ಕೂಡಲೇ ಮನೆಯ ಸದಸ್ಯರು ಹಾವನ್ನು ಹೊಡೆದು ಹಾಕಿದ್ರು. ಆದ್ರೆ ಮೇ 11ರ ರಾತ್ರಿ ಮನೆಯೊಳಗೆ ಸುಮಾರು 2 ಅಡಿ ಉದ್ದದ ಹಾವುಗಳು ಕಾಣಿಸತೊಡಗಿವೆ.

    ಹಾವುಗಳು ಕಾಣಿಸಿಕೊಳ್ಳುತ್ತಿದ್ದಂತೆ ಭಯಭೀತನಾದ ಸಲೀಂ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ. ಗ್ರಾಮಸ್ಥರ ಗುಂಪೊಂದು ಮನೆ ಸ್ವಚ್ಛ ಮಾಡಲು ಮುಂದಾದಾಗ ಕೂಡಲೇ ಸುಮಾರು 400 ಹಾವುಗಳು ಕಂಡು ಬಂದಿವೆ. ಚಿಕ್ಕ ಹಾವುಗಳಾಗಿದ್ದರಿಂದ ಗ್ರಾಮಸ್ಥರೆಲ್ಲಾ ಎಲ್ಲವನ್ನು ಕೋಲಿನಿಂದ ಹೊಡೆದು ಸಾಯಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ವನ್ಯಜೀವಿ ತಜ್ಞರು ಡಾ.ರಾಮ್ ಲಖನ್ ಸಿಂಗ್, ಸಂತಾನೋತ್ಪತ್ತಿ ಕಾಲದಲ್ಲಿ ಹಾವುಗಳು ಸಮೂಹವಾಗಿ ಕಾಣ ಸಿಗುತ್ತವೆ. ಒಂದೇ ಸ್ಥಳದಲ್ಲಿ ಸುಮಾರು 100 ಮರಿಹಾವುಗಳು ಇರುತ್ತವೆ. ಕೆಲವೊಮ್ಮೆ ದೊಡ್ಡ ಹಾವುಗಳು ತಮ್ಮ ಮರಿಹಾವುಗಳನ್ನು ಕೊಲ್ಲುತ್ತವೆ. ಪ್ರಕೃತಿಯ ಈ ನಿಯಮದಿಂದಲೇ ಹಾವುಗಳ ಸಂಖ್ಯೆಯಲ್ಲಿ ಸಮತೋಲನವಿದೆ ಅಂತಾ ತಿಳಿಸಿದ್ದಾರೆ.

    ಹಾವುಗಳು ಇರುವ ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ವನ್ಯಜೀವಿ ತಜ್ಞೆ ಪ್ರಿಯಾಂಕಾ, ತೇವಾಂಶವಿರುವ ಸ್ಥಳಗಳಲ್ಲಿ ಒಂದೇ ಕಡೆ ಹಾವುಗಳು ಕಂಡು ಬರುತ್ತವೆ. ಸ್ಥಳೀಯರು ಹಾವುಗಳನ್ನು ಸಾಯಿಸಿ ಬಿಸಾಕಿದ್ದರೆ, ಇನ್ನು ಕೆಲವರು ಸತ್ತ ಹಾವುಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ನಾಲೆಯಲ್ಲಿ ಬಿಸಾಡಿದ್ದಾರೆ ಅಂತಾ ಸ್ಪಷ್ಟಪಡಿಸಿದ್ದಾರೆ.

    ಸಂತಾನೋತ್ಪತ್ತಿ ಕಾಲದಲ್ಲಿ ಹಾವುಗಳು ತಮಗೆ ದಿನನಿತ್ಯ ಆಹಾರ ಸಿಗುವ ಹಸಿರು ಪರಿಸರವನ್ನು ಆಯ್ದುಕೊಳ್ಳುತ್ತವೆ. ಹಾವುಗಳು ಕಂಡು ಬಂದಿರುವ ಸಲೀಂ ಮನೆಯ ಹಿಂದೆ ನಾಲೆ ಹರಿಯುತ್ತಿದೆ. ನಾವು ಹಾವುಗಳನ್ನು ನೋಡಿಲ್ಲ, ಹಾಗಾಗಿ ಯಾವ ಜಾತಿ ಹಾವುಗಳು ಎನ್ನುವುದನ್ನು ಗುರುತಿಸಲಾಗಿಲ್ಲ ಎಂದು ಪ್ರಿಯಾಂಕಾ ಹೇಳಿದ್ದಾರೆ.

  • ಹಾವಿಗೆ ಭಯಗೊಂಡು ಮುಂದೆ ಹೋಗಲು ಹೆದರಿದ ಸವಾರರು – ಫುಲ್ ಟ್ರಾಫಿಕ್ ಜಾಮ್

    ಹಾವಿಗೆ ಭಯಗೊಂಡು ಮುಂದೆ ಹೋಗಲು ಹೆದರಿದ ಸವಾರರು – ಫುಲ್ ಟ್ರಾಫಿಕ್ ಜಾಮ್

    ಬೆಂಗಳೂರು: ರಸ್ತೆ ಪಕ್ಕದಲ್ಲಿ ಬಿದ್ದಿರುವ ಹಾವನ್ನು ನೋಡಿ ವಾಹನ ಸವಾರರು ಮುಂದೆ ಹೋಗಲು ಹೆದರಿದ ಘಟನೆ ನಗರದ ಯಶವಂತಪುರ ಜಂಕ್ಷನ್‍ನಲ್ಲಿ ನಿರ್ಮಾಣವಾಗಿತ್ತು.

    ಯಶವಂತಪುರದ ಮೈಸೂರ್ ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಬ್ರಿಜ್ಡ್ ಕೆಳಗೆ ಇರುವ ರಸ್ತೆಯ ಪಕ್ಕದಲ್ಲಿ ಹಾವೊಂದು ಮಲಗಿತ್ತು. ಇದರಿಂದ ವಾಹನ ಸವಾರು ಹೆದರಿ ಮುಂದೆ ಹೋಗಲು ಪರದಾಡಿದ್ದಾರೆ.

    ನಾಗರಹಾವಿನ ಬಾಲಕ್ಕೆ ಅಪರಿಚಿತ ವಾಹನ ತಗುಲಿದ್ದು, ಗಾಯವಾಗಿದೆ. ಆದ್ದರಿಂದ ಮುಂದೆ ಸಾಗಲು ಸಾಧ್ಯವಾಗದೇ ಆ ಸ್ಥಳ ಬಿಟ್ಟು ಕದಲುತ್ತಿರಲಿಲ್ಲ. ಹೀಗಾಗಿ ಯಶವಂತಪುರ ಜಂಕ್ಷನ್‍ನಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು. ವಾಹನ ಸವಾರರು ಮಾತ್ರ ವಾಹನ ನಿಲ್ಲಿಸಿ ನಾಗರಹಾವು ವೀಕ್ಷಿಸುವುದರಲ್ಲಿ ತೊಡಗಿದ್ದರು.

  • ಹಾವಿನ ಜೊತೆ ನಟಿಸಲು ಹೋಗಿ ಪ್ರಾಣ ಕಳೆದುಕೊಂಡ ನಟಿ!

    ಹಾವಿನ ಜೊತೆ ನಟಿಸಲು ಹೋಗಿ ಪ್ರಾಣ ಕಳೆದುಕೊಂಡ ನಟಿ!

    ಕೋಲ್ಕತ್ತಾ: ನಟಿಯೊಬ್ಬರು ಲೈವ್ ಆಗಿ ಪ್ರದರ್ಶನ ನೀಡುತ್ತಿದ್ದ ಸಂದರ್ಭದಲ್ಲಿ ಹಾವಿನಿಂದ ಕಚ್ಚಿಸಿಕೊಂಡು ಮೃತಪಟ್ಟಿರುವ ಘಟನೆ ಪಶ್ಚಿಮ ಬಂಗಾಳದ ಹಸ್ನಾಬಾದ್ ನಲ್ಲಿ ನಡೆದಿದೆ.

    ಕಾಲಿದಾಸಿ ದೇವಿ (50) ಮೃತ ದುರ್ದೈವಿ. ಬುಧವಾರ ಈ ಘಟನೆ ನಡೆದಿದ್ದು, ಹಾವಿನ ದೇವತೆಯಾದ `ಮಾ ಮನಸಾ’ ಪಾತ್ರದಲ್ಲಿ ನಟಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ. ದೇವಿ ಅವರು ಪ್ರತಿ ವರ್ಷವೂ ಪ್ಲಾಸ್ಟಿಕ್ ಹಾವಿನೊಡನೆ ಅಭಿನಯಿಸುತ್ತಿದ್ದರು. ಆದರೆ ಈ ಬಾರಿ ಅವರು ಎರಡು ಜೀವಂತ ಹಾವುಗಳೊಂದಿಗೆ ಪಾತ್ರವನ್ನು ನಿರ್ವಹಿಸಲು ನಿರ್ಧರಿಸಿದ್ದರು.

    ಅದೇ ರೀತಿ ಹಾವಿನೊಂದಿಗೆ ಅಭಿನಯಿಸುವ ವೇಳೆ ಹಾವು ಕಚ್ಚಿದೆ. ಹಾವು ಕಚ್ಚಿದ ತಕ್ಷಣ ದೇವಿ ಅವರು ಕುಸಿದು ಬಿದ್ದಿದ್ದಾರೆ. ನಂತರ ಸ್ಥಳಿಯ ವೈದ್ಯರು ಆಕೆಗೆ ಚಿಕಿತ್ಸೆ ನೀಡಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಬಳಿಕ ಅವರನ್ನು ಸಹನಟರು ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅವರು ಅಷ್ಟರಲ್ಲಿಯೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

    ಹಾವು ಕಚ್ಚಿದ ತಕ್ಷಣ ಸಕಾಲಕ್ಕೆ ವೈದ್ಯಕೀಯ ನೆರವು ಒದಗಿಸಿದ್ದರೆ, ಆಕೆಯ ಜೀವವನ್ನು ಉಳಿಸಬಹುದಿತ್ತು ಎಂದು ವೈದ್ಯರು ಹೇಳಿದ್ದಾರೆ. ಈ ಘಟನೆ ಸಂಬಂಧ ಪೊಲೀಸರು ಥಿಯೇಟರ್ ನ ಸದಸ್ಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

    ಪೊಲೀಸರು ಜೀವಂತ ಹಾವಿನೊಂದಿಗೆ ಅಭಿನಯಿಸಲು ನೀವು ಹೇಗೆ ಅನುಮತಿ ನೀಡಿದ್ದೀರಿ ಎಂದು ಅವರನ್ನು ಪ್ರಶ್ನಿಸಿದ್ದಾರೆ. ಸಾಮಾನ್ಯವಾಗಿ ಹಾವುಗಳನ್ನು ಜೀವಂತವಾಗಿ ಪ್ರದರ್ಶನಕ್ಕೆ ಬಳಸುವ ಮೊದಲು ಅವುಗಳ ವಿಷಪೂರಿತ ಹಲ್ಲುಗಳನ್ನು ತೆಗೆದು ಹಾಕಲಾಗುತ್ತದೆ. ಜೊತೆಗೆ ಅದನ್ನು ದೃಢ ಪಡಿಸಿಕೊಂಡ ನಂತರ ಹಾವುಗಳನ್ನು ಬಳಸಬೇಕಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

    ಸ್ಥಳೀಯ ವೈದ್ಯರು ಆಕೆಗೆ ಸರಿಯಾಗಿ ಚಿಕಿತ್ಸೆ ನೀಡಲಿಲ್ಲ. ಆದ್ದರಿಂದ ಆಕೆ ಮೃತಪಟ್ಟಿದ್ದಾಳೆ ಅವರನ್ನು ಬಂಧಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

  • ಹಾವು ಕಚ್ಚಿತೆಂದು ಮಹಿಳೆಯನ್ನ ಸಗಣಿಯಲ್ಲಿ ಮುಚ್ಚಿದ ಜನ -ನರಳಿ..ನರಳಿ.. ಪ್ರಾಣಬಿಟ್ರು

    ಹಾವು ಕಚ್ಚಿತೆಂದು ಮಹಿಳೆಯನ್ನ ಸಗಣಿಯಲ್ಲಿ ಮುಚ್ಚಿದ ಜನ -ನರಳಿ..ನರಳಿ.. ಪ್ರಾಣಬಿಟ್ರು

    ಲಕ್ನೋ: ಜನರು ಕೆಲವೊಮ್ಮೆ ಮೂಢನಂಬಿಕೆಗಳಿಗೆ ಯಾವ ಪ್ರಮಾಣದಲ್ಲಿ ಬಲಿಯಾಗ್ತಾರೆ ಅಂದ್ರೆ ಮನೆ ಸದಸ್ಯರ ಪ್ರಾಣ ಹೋದ್ರೂ ಆ ಮಾಯಾಜಾಲದಿಂದ ಹೊರಬರಲ್ಲ. ಇದೀಗ ಮೂಢನಂಬಿಕೆಗೆ ಮಹಿಳೆ ತನ್ನ ಜೀವವನ್ನೇ ಕಳೆದುಕೊಂಡಿರುವ ಘಟನೆ ಉತ್ತರ ಪ್ರದೇಶದ ಬುಲಂದ್‍ಶಹರ್ ಜಿಲ್ಲೆಯ ಕಕೋಡಾ ಪಟ್ಟಣದ ಬಳಿಯ ಗ್ರಾಮವೊಂದರಲ್ಲಿ ನಡೆದಿದೆ.

    ದೇವಿಂದ್ರಿ ಮೂಢನಂಬಿಕೆಗೆ ಬಲಿಯಾದ ಮಹಿಳೆ. ದೇವಿಂದ್ರಿ ಗ್ರಾಮದ ಹೊರಲಯದಲ್ಲಿ ಕಟ್ಟಿಗೆಗಳನ್ನು ಜೋಡಿಸುತ್ತಿರುವಾಗ ಹಾವು ಕಚ್ಚಿದೆ. ಹಾವು ಕಚ್ಚಿದ ಬಳಿಕ ಮನೆಗೆ ಬಂದ ದೇವೀಂದ್ರಿ, ಪತಿ ಮುಕೇಶ್‍ಗೆ ವಿಷಯವನ್ನು ತಿಳಿಸಿದ್ದಾರೆ.

    ಬಹುಶಃ ಸಾಮಾನ್ಯ ಹಾವು ಕಚ್ಚಿದ್ದರಿಂದ ದೇವಿಂದ್ರಿ ಅಸ್ವಸ್ಥಗೊಂಡಿರಲಿಲ್ಲ. ಪತ್ನಿಗೆ ಹಾವು ಕಚ್ಚಿದ ವಿಷಯ ತಿಳಿದ ಪತಿ ಆಸ್ಪತ್ರೆಗೆ ಕರೆದುಕೊಂಡು ಹೋಗದೆ ಸ್ಥಳೀಯ ವ್ಯಕ್ತಿಯ ಬಳಿ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಸ್ಥಳದಲ್ಲಿ ಗ್ರಾಮಸ್ಥರೆಲ್ಲಾ ಸೇರಿದ್ದಾರೆ. ಈ ಹಿಂದೆ ಹಾವು ಕಚ್ಚಿದವರಿಗೆ ನಾನೇ ಔಷಧಿ ನೀಡಿ ಹೀವ ಉಳಿಸಿದ್ದೀನಿ ಅಂತ ಹೇಳಿ ಚಿಕಿತ್ಸೆ ನೀಡಲು ಮುಂದಾಗಿದ್ದಾನೆ.

    ಚಿಕಿತ್ಸೆ ನೀಡಲು ಬಂದ ವ್ಯಕ್ತಿ, ಮಹಿಳೆಯ ಪೂರ್ಣ ದೇಹವನ್ನು ಎಮ್ಮೆಯ ಸಗಣಿಯಿಂದ ಮುಚ್ಚಿದ್ದಾನೆ. ದೇವಿಂದ್ರಿ ಅವರ ಪೂರ್ಣ ದೇಹವನ್ನು ಸಗಣಿಯಿಂದ ಮುಚ್ಚಿದ ಬಳಿಕ ಕೆಲವು ಮಂತ್ರಗಳನ್ನು ಸಹ ಹೇಳಿದ್ದಾನೆ. ಕೆಲವು ಸಮಯದ ಬಳಿಕ ಮಹಿಳೆ ಕುಟುಂಬಸ್ಥರು ಸಗಣಿಯಿಂದ ದೇವಿಂದ್ರಿ ಅವರನ್ನು ಹೊರತಗೆಯಬಹುದಾ ಅಂತ ಕೇಳಿದ್ದಾರೆ.

     

    ವ್ಯಕ್ತಿ ಕೊನೆಗೆ ಸಗಣಿಯಲ್ಲಿ ಮುಚ್ಚಲ್ಪಟ್ಟದಿಂದ ದೇವಿಂದ್ರಿಯನ್ನು ಹೊರ ತೆಗೆಯುವಂತೆ ಆದೇಶಿಸಿದ್ದಾನೆ. ಆದ್ರೆ ದೇವಿಂದ್ರಿ ಉಸಿರಾಡಲು ಗಾಳಿಯೂ ಸಿಗದೇ ನರಳಿ ನರಳಿ ಸಾವನ್ನಪ್ಪಿದ್ದಾರೆ. ಒಂದು ವೇಳೆ ದೇವಿಂದ್ರಿ ಅವರಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆತಿದ್ರೆ ಬದುಕುಳಿಯುತ್ತಿದ್ರು.