Tag: ಹಾವು

  • ಬೈಕಿನೊಳಗೆ ಹಸಿರು ಹಾವು ಪ್ರತ್ಯಕ್ಷ: ನೋಡಲು ಮುಗಿಬಿದ್ದ ಜನ

    ಬೈಕಿನೊಳಗೆ ಹಸಿರು ಹಾವು ಪ್ರತ್ಯಕ್ಷ: ನೋಡಲು ಮುಗಿಬಿದ್ದ ಜನ

    ಬೆಂಗಳೂರು: ಬೈಕ್ ರಿಪೇರಿ ಮಾಡಿಸುವ ವೇಳೆ ಹಸಿರು ಬಣ್ಣದ ಹಾವು ಪ್ರತ್ಯಕ್ಷವಾಗಿ ಕೆಲಕಾಲ ಆತಂಕ ಸೃಷ್ಟಿಸಿದ ಘಟನೆ ನಗರದಲ್ಲಿ ನಡೆದಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ ವೀವರ್ಸ್ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ರೇಣುಕಯ್ಯ ಅವರ ಬೈಕಿನಲ್ಲಿ ಹಸಿರು ಬಣ್ಣದ ಹಾವು ಕಾಣಿಸಿಕೊಂಡಿದೆ. ಇಂದು ರೇಣುಕಯ್ಯ ತನ್ನ ಬೈಕನ್ನ ರಿಪೇರಿ ಮಾಡಿಸಲು ವೀವರ್ಸ್ ಕಾಲೋನಿಯಲ್ಲಿರುವ ಗ್ಯಾರೇಜ್ ಬಳಿ ಹೋಗಿದ್ದಾರೆ.

    ಈ ವೇಳೆ ಬೈಕ್ ರಿಪೇರಿ ಮಾಡುತ್ತಿದ್ದಾಗ ಬೈಕಿನ ಎಂಜಿನ್ ಬಳಿ ಹಸಿರು ಬಣ್ಣದ ಹಾವು ಕಾಣಿಸಿಕೊಂಡಿದ್ದು, ಮ್ಯಕಾನಿಕ್ ಗಾಬರಿಯಾಗಿದ್ದಾರೆ. ಬಳಿಕ ಈ ಹಸಿರು ಬಣ್ಣದ ಹಾವನ್ನು ನೋಡಲು ಜನ ಗ್ಯಾರೇಜ್ ಬಳಿ ಮುಗಿ ಬಿದ್ದಿದ್ದರು. ಆದರೆ ರಕ್ಷಣೆ ಮಾಡುವ ವೇಳೆ ಹಾವು ಮೃತಪಟ್ಟಿತ್ತು.

  • ಟಾಯ್ಲೆಟ್ ನಲ್ಲಿ ಹೆಬ್ಬಾವು ಪ್ರತ್ಯಕ್ಷ!

    ಟಾಯ್ಲೆಟ್ ನಲ್ಲಿ ಹೆಬ್ಬಾವು ಪ್ರತ್ಯಕ್ಷ!

    ವಾಷಿಂಗ್ಟನ್: ಅಮೆರಿಕದ ವರ್ಜಿನಿಯಾ ನಿವಾಸಿಯೊಬ್ಬರ ಮನೆಯ ಟಾಯ್ಲೆಟ್ ನಲ್ಲಿ ಗುರುವಾರ ರಾತ್ರಿ ಹೆಬ್ಬಾವೊಂದು ಪ್ರತ್ಯಕ್ಷವಾಗಿದ್ದು, ಇದರ ಫೋಟೋವನ್ನು ಅವರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.

    ಹಾವನ್ನು ಕಂಡ ಕೂಡಲೇ ಜೇಮ್ಸ್ ತನ್ನ ಗೆಳೆಯನ ಜೊತೆ ಸೇರಿ ಟಾಯ್ಲೆಟ್ ನಿಂದ ಹೊರತೆಗೆದು ರಕ್ಷಿಸಿದ್ದಾರೆ. ಅಲ್ಲದೇ ಟಾಯ್ಲೆಟ್ ನಲ್ಲಿ ಕುಳಿತುಕೊಳ್ಳುವ ಮೊದಲು ಕೆಳಗೆ ನೋಡಿ ಕುಳಿತುಕೊಳ್ಳಿ ಅನ್ನೋ ಸಂದೇಶವನ್ನು ರವಾನಿಸಿದ್ದಾರೆ.

    ಏನಿದು ಘಟನೆ?:
    ವರ್ಜಿನಿಯಾ ನಿವಾಸಿ ಜೇಮ್ಸ್ ಗುರುವಾರ ರಾತ್ರಿ ಟಾಯ್ಲೆಟ್ ಗೆ ತೆರಳಿದ್ದರು. ಈ ಸಂದರ್ಭದಲ್ಲಿ ಅದರೊಳಗೆ ಮೊದಲು ಹೆಬ್ಬಾವಿನ ತಲೆಯ ಸ್ಪಲ್ಪ ಭಾಗ ಮಾತ್ರ ಕಂಡಿದ್ದರು. ಆದ್ರೆ ಅದನ್ನು ಅಷ್ಟೇನೂ ಗಮನಕ್ಕೆ ತರದ ಅವರು, ಸ್ವಲ್ಪ ಸಮಯದ ಬಳಿಕ ನೋಡಿದಾಗ ಹಾವಿನ ಸಂಪೂರ್ಣ ತಲೆ ಹೊರ ಬಂದಿತ್ತು. ಅಲ್ಲದೇ ಹಾವಿನ ನಾಲಗೆ ಕೂಡ ಹೊರ ಬಂದಿತ್ತು. ನಾವು ಹಾವುಗಳನ್ನು ಅಂಗಳದಲ್ಲಿ ನೋಡಿದ್ದೆವು. ಆದ್ರೆ ಟಾಯ್ಲೆಟ್ ನಲ್ಲಿ ನೋಡಿರಲಿಲ್ಲ. ಹೀಗಾಗಿ ಇದನ್ನು ಕಂಡು ಒಂದು ಬಾರಿ ಹೌಹಾರಿದೆ ಅಂತ ಜೇಮ್ಸ್ ತಿಳಿಸಿದ್ದಾರೆ.

    ಹಾವು ಕಂಡ ಕೂಡಲೇ ಜೇಮ್ಸ್ ತನ್ನ ರೂಮೆಟ್‍ನನ್ನು ಕರೆದಿದ್ದಾರೆ. ಬಳಿಕ ಪ್ರಾಣಿ ನಿಯಂತ್ರಣಾಧಿಕಾರಿ ಬರುವ ಮುಂಚೆಯೇ ಇಬ್ಬರು ಸೇರಿ ಹಾವನ್ನು ಟಾಯ್ಲಟ್ ನಿಂದ ಹೊರತೆಗೆದು ಬಕೆಟ್ ನಲ್ಲಿ ಹಾಕುವ ಮೂಲಕ ರಕ್ಷಿಸಿದ್ದಾರೆ. ಹಾವನ್ನು ಹಿಡಿದಾಗ ಅದೇನೂ ನಮಗೆ ತೊಂದರೆ ಮಾಡಿಲ್ಲ ಅಂತ ಜೇಮ್ಸ್ ಹಾವಿನ ಫೋಟೊದೊಂದಿಗೆ ತಮ್ಮ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

    https://www.facebook.com/rusty4kyle/posts/10212353698784975

  • ಶಾಲೆಯ ಅಡುಗೆ ಮನೆಯಲ್ಲಿ 60ಕ್ಕೂ ಹೆಚ್ಚು ವಿಷಪೂರಿತ ಹಾವುಗಳು ಪತ್ತೆ!

    ಶಾಲೆಯ ಅಡುಗೆ ಮನೆಯಲ್ಲಿ 60ಕ್ಕೂ ಹೆಚ್ಚು ವಿಷಪೂರಿತ ಹಾವುಗಳು ಪತ್ತೆ!

    ಮುಂಬೈ: ಮಹಾರಾಷ್ಟ್ರದ ಶಾಲೆಯೊಂದರ ಅಡುಗೆ ಮನೆಯಲ್ಲಿ ಬರೋಬ್ಬರಿ 60 ಕ್ಕೂ ಹೆಚ್ಚು ಹಾವುಗಳು ಕಂಡುಬಂದಿವೆ.

    60ಕ್ಕೂ ಹೆಚ್ಚು ವಿಷಪೂರಿತ ಹಾವುಗಳನ್ನು ರಸ್ಸೆಲ್ ನ ವೈಪರ್ ಹಾವುಗಳು ಎಂದು ಗುರುತಿಸಲಾಗಿದೆ. ಇವು ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಪಂಗ್ರಾ ಬೊಖೇರ್ ಗ್ರಾಮದ ಜಿಲ್ಲಾ ಪರಿಷದ್ ಶಾಲೆಯ ಅಡುಗೆ ಮನೆಯಲ್ಲಿರುವುದು ಗೋಚರವಾಗಿದೆ.

    ಶುಕ್ರವಾರ ಮಧ್ಯಾಹ್ನ ಅಡುಗೆ ಸಹಾಯಕಿಗೆ ಮೊದಲು ಎರಡು ರುಸ್ಸೆಲ್ ಹಾವುಗಳು ಕಾಣಸಿಕ್ಕಿವೆ. ಬಳಿಕ ಅಡುಗೆ ಮಾಡಲು ಕಟ್ಟಿಗೆ ತೆಗೆದುಕೊಳ್ಳುವಾಗ 58 ಹಾವುಗಳು ಪತ್ತೆಯಾಗಿವೆ. ಹಾವುಗಳನ್ನು ಕಂಡು ಗಾಬರಿಗೊಂಡ ಶಿಕ್ಷಕಿ ಉಳಿದ ಶಿಕ್ಷಕರಿಗೆ ವಿಷಯ ತಿಳಿಸಿದ್ದಾರೆ.

    ಮಾಹಿತಿ ತಿಳಿಯುತ್ತಿದ್ದಂತೆಯೇ ಗ್ರಾಮಸ್ಥರು ಅವುಗಳನ್ನು ಕೋಲಿನಿಂದ ಹೊಡೆಯಲು ಮುಂದಾದರು. ಆಗ ಶಾಲಾ ಆಡಳಿತಾಧಿಕಾರಿ ಅವರನ್ನು ತಡೆದು ಹಾವಿನ ಬಗ್ಗೆ ಉರಗ ತಜ್ಞರಿಗೆ ಮಾಹಿತಿ ನೀಡಿದ್ದಾರೆ. ವಿಷಪೂರಿತ ಹಾವುಗಳನ್ನು ನೋಡಿದ ಬಳಿಕ ವಿದ್ಯಾರ್ಥಿಗಳು ಭಯ ಭೀತಗೊಂಡಿದ್ದಾರೆ. ಮಾಹಿತಿ ತಿಳಿದ ಉರಗ ತಜ್ಞ ವಿಕಿ ದಲಾದ್ ಸ್ಥಳಕ್ಕೆ ಬಂದು ಎರಡು ಗಂಟೆಗಳ ಕಾರ್ಯಾಚರಣೆ ನಡೆಸಿ ಹಾವುಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

    ದಲಾಲ್ ರಸ್ಸೆಲ್ ವೈಪರ್ ಗಳನ್ನು ಹಿಡಿದು ಬಾಟಲಿಗಳಲ್ಲಿ ಹಾಕುತ್ತಿದಂತೆಯೇ ವಿದ್ಯಾರ್ಥಿಗಳು, ಗ್ರಾಮಸ್ಥರು ಮತ್ತು ಸಿಬ್ಬಂದಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಬಳಿಕ ಶಾಲಾ ಆಡಳಿತಾಧಿಕಾರಿ ಭೀಮಾರಾವ್ ಬೊಖೇರ್ ಅವರು ಎಲ್ಲಾ 60 ಹಾವುಗಳನ್ನು ಅರಣ್ಯ ಅಧಿಕಾರಿ ಜೆ.ಡಿ ಕಾಚ್ವೆಗೆ ಹಸ್ತಾಂತರಿಸಿದ್ದಾರೆ.

  • ವಿದ್ಯಾರ್ಥಿ ಬ್ಯಾಗಿನಿಂದ ಹೊರ ಬಂತು ಹಾವು!

    ವಿದ್ಯಾರ್ಥಿ ಬ್ಯಾಗಿನಿಂದ ಹೊರ ಬಂತು ಹಾವು!

    ಬೆಳಗಾವಿ:ಜಿಲ್ಲೆಯ ಅಥಣಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ಶಾಲಾ ವಿದ್ಯಾರ್ಥಿಯ ಸ್ಕೂಲ್ ಬ್ಯಾಗಿನಲ್ಲಿ ಹಾವೊಂದು ಕಾಣಿಸಿಕೊಂಡಿದೆ.

    ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 5ನೇ ತರಗತಿಯ ವಿದ್ಯಾರ್ಥಿಯ ಬ್ಯಾಗನ್ನು ಶಾಲೆ ಗೋಡೆಯ ಬಳಿ ಇಟ್ಟಿದ್ದಾನೆ. ಆದರೆ ಸ್ವಲ್ಪ ಸಮಯದ ನಂತರ ಆ ಬ್ಯಾಗಿನಿಂದ ಹಾವು ಹೊರಬಂದಿದೆ. ಹಾವು ಬ್ಯಾಗಿನಿಂದ ಹೊರಬರುತ್ತಿರುವುದನ್ನು ಕಂಡ ಇತರ ವಿದ್ಯಾರ್ಥಿಗಳ ಗಾಬರಿಗೊಂಡು ಶಿಕ್ಷಕರನ್ನು ಕರೆದು ಹಾವನ್ನು ತೋರಿಸಿದ್ದಾರೆ. ನಂತರ ಶಿಕ್ಷಕರು ಮತ್ತು ಗ್ರಾಮಸ್ಥರು ಸೇರಿ ಹಾವನ್ನು ಹೊಡೆದು ಹಾಕಿದ್ದಾರೆ.

    ಈ ಸರ್ಕಾರಿ ಶಾಲೆಯಲ್ಲಿ ಸ್ವಚ್ಛತೆಯ ಕೊರತೆ ಎದ್ದು ಕಾಣುತ್ತಿದ್ದು, ಗಿಡಗಂಟಿಗಳು ಎಲ್ಲಂದರಲ್ಲಿ ಬೆಳೆದುಕೊಂಡಿವೆ. ಹೀಗಾಗಿ ಹಾವು ಮತ್ತು ಚೇಳುಗಳು ಆಗಾಗ ಶಾಲೆಗೆ ಅತಿಥಿಗಳಾಗಿ ಬಂದು ಬಂದು ಭೇಟಿ ನೀಡುತ್ತವೆ. ಹೀಗಾಗಿ ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಶಾಲೆಯ ಸ್ವಚ್ಛತೆಗೆ ಒತ್ತು ಕೊಡುತ್ತಾರಾ ಕಾದು ನೋಡಬೇಕು ಎಂದು ಗ್ರಾಮಸ್ಥರು ಹೇಳಿದ್ದಾರೆ.

  • ಮೂಷಿಕ ವರ್ಸಸ್ ನಾಗರಾಜ: ಇಬ್ಬರ ನಡುವಿನ ಫೈಟ್ ನಲ್ಲಿ ಗೆದ್ದಿದ್ಯಾರು? ವಿಡಿಯೋ ನೋಡಿ

    ಮೂಷಿಕ ವರ್ಸಸ್ ನಾಗರಾಜ: ಇಬ್ಬರ ನಡುವಿನ ಫೈಟ್ ನಲ್ಲಿ ಗೆದ್ದಿದ್ಯಾರು? ವಿಡಿಯೋ ನೋಡಿ

    ಬೀಜಿಂಗ್: ಹಾವು ಮತ್ತು ಮಂಗೂಸಿ ಒಂದನ್ನೊಂದು ಕಂಡರೆ ಒಂದಕ್ಕೆ ಆಗುವುದಿಲ್ಲ ಎಂದು ಸಾಕಷ್ಟು ಕಥೆಗಳಲ್ಲಿ ಕೇಳಿದ್ದೇವೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಮುಂಗೂಸಿ ಮತ್ತು ಹಾವುಗಳ ನಡುವೆಯ ರೋಚಕ ಕಾದಾಟವನ್ನು ನೋಡಿರುತ್ತೇವೆ. ಕಳೆದ ಒಂದು ವಾರದಿಂದ ಇಲಿ ಮತ್ತು ನಾಗರ ಹಾವಿನ ಮಧ್ಯೆ ಕಾದಾಟ ನಡೆದಿರುವ ವಿಡಿಯೋ ಫೇಸ್ ಬುಕ್, ಯೂಟ್ಯೂಬ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಹೌದು, ಜುಲೈ 2 ರಂದು ಚೀನಾದ ಪುನಿಂಗ್ ಎಂಬಲ್ಲಿ ಈ ಘಟನೆ ನಡೆದಿದೆ. ವಿಡಿಯೋದಲ್ಲಿ ಇಲಿ ತನ್ನ ಶಕ್ತಿ ಮೀರಿ ಹಾವಿನೊಂದಿಗೆ ಸೆಣಸಾಟ ನಡೆಸುವುದನ್ನು ಕಾಣಬಹುದಾಗಿದೆ. ಆದ್ರೆ ಹಾವು ತನ್ನ ಶತ್ರು ಇಲಿಯ ವಿರುದ್ಧ ಸೋಲು ಒಪ್ಪಿಕೊಂಡಂತೆ ಚಲನಾ ರಹಿತವಾಗಿ ಬಿದ್ದಿದೆ.

    ಇಲಿ ತನ್ನ ಬಾಯಿಯಿಂದ ಹಾವಿನ ಬಾಯಿಯನ್ನು ಕಚ್ಚುತ್ತಾ ಅತ್ತಿಂದಿತ್ತ ಎಳೆದಾಡುತ್ತಿದೆ. ಕೊನೆಗೆ ಹಾವಿನ ಬಾಯಿಯಿಂದ ಸ್ವಲ್ಪ ರಕ್ತ ಬಂದಿದೆ. ಇದನ್ನು ನಾವು ವಿಡಿಯೋದಲ್ಲಿ ಕಾಣಬಹುದಾಗಿದೆ. ಕೊನೆಗೆ ಇಲಿ ತನ್ನ ಛಲ ಬಿಡದೇ ಹಾವನ್ನು ಪೊದೆಯೊಳಗೆ ಎಳೆದುಕೊಂಡು ಹೋಗಲು ಪ್ರಯತ್ನಿಸಿದೆ. ಭಯಬೀತವಾದ ಹಾವು ಕೂಡಲೇ ತಪ್ಪಿಸಿಕೊಳ್ಳುವ ಪ್ರಯತ್ನವನ್ನು ಮಾಡಿದೆ. ಆದ್ರೆ ಇಲಿ ಹಾವನ್ನು ಪೊದೆಯೊಳಗೆ ಎಳೆದುಕೊಂಡು ಹೋಗಿದೆ.

    ಈ ವಿಡಿಯೋವನ್ನು ಚೀನಾದ ಫೇಸ್ ಬುಕ್ ಪೇಜಿನಲ್ಲಿ ಅಪ್ಲೋಡ್ ಮಾಡಲಾಗಿದ್ದು, 9,800 ಕ್ಕೂ ಅಧಿಕ ವ್ಯೂವ್ ಗಳನ್ನು ಪಡೆದಿದೆ. 2017ರಲ್ಲಿ ಎಸಿಯಿಂದ ಹೊರ ಬಂದ ಹಾವು ಮನೆಯಲ್ಲಿರುವ ಇಲಿಯನ್ನು ನುಂಗುವ ವಿಡಿಯೋ ವೈರಲ್ ಆಗಿತ್ತು. ಆದರೆ ಅದಕ್ಕೆ ತದ್ವಿರುದ್ಧವಾದ ವಿಡಿಯೋ ವೈರಲ್ ಆಗಿದೆ.

    https://www.facebook.com/pearvideocn/videos/1066984593460223/

  • ದಣಿದಿದ್ದ ನಾಗರಹಾವಿಗೆ ನೀರುಣಿಸಿದ ಉರಗ ತಜ್ಞ

    ದಣಿದಿದ್ದ ನಾಗರಹಾವಿಗೆ ನೀರುಣಿಸಿದ ಉರಗ ತಜ್ಞ

    ಬೆಂಗಳೂರು: ಬಿಸಿಲಿನ ಬೇಗೆಗೆ ನೀರಿಲ್ಲದೆ ಬಾಯಾರಿಕೆಯಿಂದ ದಣಿದಿದ್ದ ನಾಗರಹಾವಿಗೆ ನೀರುಣಿಸಿರುವ ಅಪರೂಪದ ಘಟನೆ ಬೆಂಗಳೂರು ಹೊರವಲಯ ನೆಲಮಂಗಲದ ಹಾರೋಕ್ಯಾತನಹಳ್ಳಿ ಬಳಿ ನಡೆದಿದೆ.

    ವಿಪರೀತ ಬಿಸಿಲಿನಿಂದಾಗಿ ದಣಿದು ಮಲಗಿದ್ದಲ್ಲೇ ಮಲಗಿದ್ದ ನಾಗರಹಾವಿಗೆ ಎಷ್ಟೇ ಶಬ್ಧ ಮಾಡಿದರೂ ಹಾಗೆಯೇ ಮಲಗಿತ್ತು. ಇದನ್ನು ಸ್ಥಳೀಯರು ಗಮನಿಸಿದ್ದು, ಬಳಿಕ ಉರಗ ರಕ್ಷಕ ಲೋಕೇಶ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

    ಮಾಹಿತಿ ತಿಳಿದ ಲೋಕೇಶ್ ಸ್ಥಳಕ್ಕೆ ಆಗಮಿಸಿ ಬಾಟಲ್ ಮೂಲಕ ನಾಗರಹಾವಿಗೆ ನೀರನ್ನು ಕುಡಿಸಿದ್ದಾರೆ. ಬಳಿಕ ಚೇತರಿಸಿಕೊಂಡ ನಾಗಪ್ಪ ಅತ್ತಿಂದಿತ್ತ ಓಡಾಡಿದ್ದಾನೆ. ಕೂಡಲೇ ಉರಗ ರಕ್ಷಕ ಲೋಕೇಶ್ ನಾಗರಹಾವನ್ನ ಹಿಡಿದು, ಅರಣ್ಯಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ. ಈ ಎಲ್ಲಾ ದೃಶ್ಯಗಳನ್ನ ಕಂಡ ಜನತೆ ಮೂಕವಿಸ್ಮಿತರಾದರು.

  • ಸ್ಕೂಲ್ ಬ್ಯಾಗಿನಲ್ಲಿ ಹಾವು ಪತ್ತೆ: ಹೌಹಾರಿದ ವಿದ್ಯಾರ್ಥಿಗಳು

    ಸ್ಕೂಲ್ ಬ್ಯಾಗಿನಲ್ಲಿ ಹಾವು ಪತ್ತೆ: ಹೌಹಾರಿದ ವಿದ್ಯಾರ್ಥಿಗಳು

    ಬೆಂಗಳೂರು: ಶಾಲೆಗೆ ತೆರಳಿದ್ದ ವಿದ್ಯಾರ್ಥಿನಿ ಬ್ಯಾಗ್ ನಲ್ಲಿ ಹಾವು ಕಾಣಿಸಿಕೊಂಡ ಪರಿಣಾಮ ತಮಿಳುನಾಡಿನ ಶಾಲೆಯಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣಗೊಂಡಿತ್ತು.

    ತಮಿಳುನಾಡಿನ ಹೊಸೂರಿನ ಕಾಮರಾಜ ನಗರದ ಖಾಸಗಿ ಶಾಲೆಯಲ್ಲಿ ಇಂತಹ ಘಟನೆ ನಡೆದಿದೆ. ಇಲ್ಲಿನ ಖಾಸಗಿ ಶಾಲೆಯ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕಿಯ ಬ್ಯಾಗ್ ನಲ್ಲಿ ಹಾವು ಕಾಣಿಸಿಕೊಂಡಿದೆ. ಹಾವಿನ ಮರಿಯನ್ನು ಕಂಡ ವಿದ್ಯಾರ್ಥಿನಿ ಬ್ಯಾಗನ್ನು ತೆಗೆದುಕೊಂಡು ಹೊರ ಹಾಕಿದಾಗ ಬ್ಯಾಗಿನಿಂದ ಹಾವಿನ ಮರಿ ಹೊರ ಬಂದಿದೆ.

    ಬಾಲಕಿ ಮನೆಯಿಂದ ಹೊರಡುವ ಮುನ್ನವೇ ಬ್ಯಾಗಿಗೆ ಹಾವು ಸೇರಿಕೊಂಡಿರುವ ಬಗ್ಗೆ ಅನುಮಾನವಿದ್ದು, ಶಾಲೆಯಲ್ಲಿ ಕಂಡ ಹಾವನ್ನು ಶಿಕ್ಷಕರು ರಕ್ಷಣೆ ಮಾಡಿ ಕೆರೆಗೆ ಬಿಟ್ಟಿದ್ದಾರೆ.

  • ಒಂದೇ ವಾರದಲ್ಲಿ ಮೂರು ಬಾರಿ ಕಚ್ಚಿತು: ಮಹಿಳೆಯ ಮೇಲೆ ನಾಗರಹಾವಿನ ದ್ವೇಷ!

    ಒಂದೇ ವಾರದಲ್ಲಿ ಮೂರು ಬಾರಿ ಕಚ್ಚಿತು: ಮಹಿಳೆಯ ಮೇಲೆ ನಾಗರಹಾವಿನ ದ್ವೇಷ!

    ದಾವಣಗೆರೆ: ನಾಗರ ಹಾವೊಂದು ಮಹಿಳೆಯನ್ನು ಟಾರ್ಗೆಟ್ ಮಾಡಿ ವಾರದಲ್ಲಿ ಮೂರು ಸಲ ಕಚ್ಚಿರುವ ಘಟನೆ ದಾವಣಗೆರೆಯ ಹರಿಹರ ಪಟ್ಟಣದಲ್ಲಿ ನಡೆದಿದೆ

    ನಗರದ ಜೆಸಿ ಬಡಾವಣೆ ನಿವಾಸಿ ಕಮಲ್ ತಾಜ್(32) ಹಾವಿನ ದ್ವೇಷಕ್ಕೆ ಗುರಿಯಾದ ಮಹಿಳೆ. ಕಳೆದ ಒಂದು ವಾರದಿಂದ ನಾಗರಹಾವು ಮಹಿಳೆಯನ್ನು ಬೆಂಬಿಡದೆ ಕಾಡುತ್ತಿದೆ. ನಾಲ್ಕು ದಿನಗಳ ಹಿಂದೆ ಹಾವು ಕಚ್ಚಿದ್ದು, ಚಿಕಿತ್ಸೆ ಪಡೆದು ಮನೆಗೆ ಹೋಗುತ್ತಿದ್ದಂತೆ ಮತ್ತೆ ಹಾವು ಕಚ್ಚಿದೆ.

    ಹಾವು ಕಚ್ಚಿದ ಪರಿಣಾಮ ಮಹಿಳೆಯನ್ನು ಹರಿಹರ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಎಲ್ಲ ಬೆಳವಣಿಗೆಯ ನಂತರ ನಾಗ ದೋಷ ಇರಬೇಕೆಂದು ಶಂಕಿಸಿ ಭಾನುವಾರ ಧಾರ್ಮಿಕ ಸ್ಥಳಗಳಿಗೆ ಪೂಜೆ ಸಲ್ಲಿಸಲು ಹೋಗಿದ್ದರು. ಆದರೆ ಸುಸ್ತು ಕಂಡ ಹಿನ್ನೆಲೆಯಲ್ಲಿ ಕಮಲ್ ತಾಜ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಕಮಲ್ ತಾಜ್ ಅವರಿಗೆ ಬಾಲ್ಯದಲ್ಲಿ ಒಂದು ಸಲ ಹಾವು ಕಚ್ಚಿತ್ತು. ಆದರೆ ಈಗ ಒಂದೇ ಹಾವು ವಾರದಲ್ಲಿ ಮೂರು ಸಲ ಕಚ್ಚಿದೆ. ಸದ್ಯ ಕಮಲ್ ಅವರಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಕಮಲ್ ತಾಜ್ ಇಂದು ಮತ್ತೆ ಕೆಲ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡುವ ಯೋಜನೆ ಹಾಕಿಕೊಂಡಿದ್ದರು. ಆದರೆ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ದೇವರ ದರ್ಶನ ಬಿಟ್ಟು ಆಸ್ಪತ್ರೆಗೆ ದಾಖಲಾಗಿದ್ದಾರೆ.

  • ನಗರಸಭೆಯ ಕಚೇರಿಯಲ್ಲಿ ಕಾಣಿಸಿಕೊಂಡ ಹಾವು-ಅಧಿಕಾರಿಗಳೆಲ್ಲಾ ದಿಕ್ಕಾಪಾಲು

    ನಗರಸಭೆಯ ಕಚೇರಿಯಲ್ಲಿ ಕಾಣಿಸಿಕೊಂಡ ಹಾವು-ಅಧಿಕಾರಿಗಳೆಲ್ಲಾ ದಿಕ್ಕಾಪಾಲು

    ಚಿಕ್ಕಮಗಳೂರು: ಅತಿ ವಿಷಯುಕ್ತವಾದ ಕೊಳಕಮಂಡಲ ಹಾವೊಂದು ನಗರಸಭೆ ಕಚೇರಿಗೆ ಬಂದು ಅಧಿಕಾರಿಗಳನ್ನು ತಲ್ಲಣಗೊಳಿಸಿರೋ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

    ಅಧಿಕಾರಿಗಳು ಎಂದಿನಂತೆ ಬೆಳಗ್ಗೆ ಕೆಲಸ ಆರಂಭಿಸಿದ್ದರು. ಆದರೆ ಕಂಪ್ಯೂಟರ್ ಸೆಕ್ಷನ್‍ನಲ್ಲಿ ಮಾನಿಟರ್ ಮೇಲಿಂದ ಕೆಳಗೆ ಇಳಿದ ಹಾವನ್ನು ಕಂಡು ಕಂಪ್ಯೂಟರ್ ಆಪರೇಟರ್ ಗಳು ಕೂಗಿಕೊಂಡು ಹೊರಗೆ ಓಡಿ ಬಂದಿದ್ದರು. ಸ್ಥಳಕ್ಕೆ ಬಂದ ಸ್ನೇಕ್ ನರೇಶ್ ಸತತ ಒಂದು ಗಂಟೆಯ ಕಾರ್ಯಾಚರಣೆಯ ಬಳಿಕ ಹಾವನ್ನು ಹಿಡಿದಿದ್ದಾರೆ.

    ಹಾವು ಅತಿ ಸಣ್ಣದಾಗಿದ್ದ ಪರಿಣಾಮ ಕಚೇರಿಯೊಳಗೆ ಟೇಬಲ್‍ಗಳ ಸಂದಿಯಲ್ಲಿ ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ ಹೋದ ಪರಿಣಾಮ ಕಚೇರಿಯ ಕಡತಗಳು ಹಾಗೂ ಕಂಪ್ಯೂಟರ್‍ಗಳನ್ನು ಒಂದೆಡೆ ತೆಗೆದಿಟ್ಟು, ಅಲ್ಲಿಂದ ಟೇಬಲ್‍ಗಳನ್ನ ಹೊರಗಿಟ್ಟು, ಗೋಡೆಯನ್ನ ಒಡೆದು ಹಾಕಿ ಹಾವನ್ನ ಹಿಡಿದಿದ್ದಾರೆ.

  • ಕಲಬುರಗಿಯಲ್ಲಿ ಅಪಾರ್ಟ್ ಮೆಂಟ್‍ಗೆ ನುಗ್ಗಿದ 5 ಹಾವುಗಳು-ಇತ್ತ ಹಾಸನದಲ್ಲಿ ಬೆಡ್‍ರೂಮ್‍ನಲ್ಲಿ ಬಂದು ಕುಳಿತ ಉರಗ

    ಕಲಬುರಗಿಯಲ್ಲಿ ಅಪಾರ್ಟ್ ಮೆಂಟ್‍ಗೆ ನುಗ್ಗಿದ 5 ಹಾವುಗಳು-ಇತ್ತ ಹಾಸನದಲ್ಲಿ ಬೆಡ್‍ರೂಮ್‍ನಲ್ಲಿ ಬಂದು ಕುಳಿತ ಉರಗ

    ಕಲಬುರಗಿ/ಹಾಸನ: ಕಲಬುರಗಿ ನಗರದ ಹೊರವಲಯದ ಕೊಟನೂರ ಮಠದ ಬಳಿಯ ಅಪಾರ್ಟ್ ಮೆಂಟ್‍ವೊಂದರಲ್ಲಿ 5 ಹಾವುಗಳು ಏಕಕಾಲಕ್ಕೆ ನುಗ್ಗಿ ಆತಂಕ ಸೃಷ್ಟಿಸಿದ್ದವು. ರ್ಯಾಟ್ ಸ್ನೇಕ್ ಎಂದೇ ಕರೆಯಲ್ಪಡುವ ಈ ಹಾವುಗಳನ್ನು ನೋಡಿದ ನಿವಾಸಿಗಳು ತಕ್ಷಣವೇ ಸ್ನೇಕ್ ಪ್ರಶಾಂತ್‍ರನ್ನು ಕರೆಸಿ ಹಾವುಗಳನ್ನು ಸೆರೆ ಹಿಡಿಸಿದ್ದಾರೆ.

    ಸೆರೆ ಹಿಡಿದ ಹಾವುಗಳನ್ನು ನಗರದ ಹೊರವಲಯದ ಅರಣ್ಯದಲ್ಲಿ ಬಿಡಲಾಯ್ತು. ಬಯಲು ಪ್ರದೇಶದಲ್ಲೇ ಹೆಚ್ಚಾಗಿ ವಾಸ ಮಾಡುವ ಇಂತಹ ಹಾವುಗಳು ಕಪ್ಪು ಬಣ್ಣದಿಂದ ಕೂಡಿದ್ದು 8ರಿಂದ 10 ಅಡಿ ಉದ್ದ ಇರುತ್ತವೆ.

    ಹಾಸನ: ನಗರದ ಚನ್ನಪಟ್ಟಣ ಬಡಾವಣೆಯ ರಮೇಶ್ ಎಂಬವರ ಮನೆಯ ಬೆಡ್‍ರೂಂನಲ್ಲಿ ಮಂಡಲ ಹಾವೊಂದು ಪ್ರತ್ಯಕ್ಷವಾಗಿತ್ತು. ಬಟ್ಟೆ ಮಧ್ಯೆ ಸೇರಿಕೊಂಡಿದ್ದ ಮಂಡಲ ಹಾವನ್ನು ನೋಡಿ ಮನೆಯವರು ಗಾಬರಿಗೊಂಡಿದ್ದರು. ಬಳಿಕ ಉರಗ ತಜ್ಞ ಸ್ನೇಕ್ ಶೇಷಪ್ಪ ಸ್ಥಳಕ್ಕೆ ಬಂದು ಹಾವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

    ಹಾಸನದ ಹೈಟೆಕ್ ಬಸ್ ನಿಲ್ದಾಣದಲ್ಲಿರುವ ಹೌಸಿಂಗ್ ಬೋರ್ಡ್ ನಿವಾಸಿಗಳು ಹಾವುಗಳ ಭಯದಿಂದ ದಿನ ಕಳೆಯುವಂತಾಗಿದೆ. ಮಂಡಲ, ಕೇರೆ, ನಾಗರಹಾವು ಸೇರಿ ವಿವಿಧ ಜಾತಿಯ ಹಾವುಗಳು ಎಲ್ಲೆಂದರಲ್ಲಿ ಸಿಗುವುದರ ಜೊತೆ ಮನೆಯೊಳಗೆ ಹರಿದು ಬರುತ್ತಿವೆ. ಈ ಬಗ್ಗೆ ನಗರಸಭೆಗೆ ದೂರು ನೀಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ ಅಂತ ನಿವಾಸಿಗಳು ಆಕ್ರೋಶವ್ಯಕ್ತಪಡಿಸುತ್ತಿದ್ದಾರೆ.