Tag: ಹಾವು

  • ಮೂರು ಕಣ್ಣಿನ ಹಾವು ನೋಡಿ ದಂಗಾದ್ರು ನೆಟ್ಟಿಗರು!

    ಮೂರು ಕಣ್ಣಿನ ಹಾವು ನೋಡಿ ದಂಗಾದ್ರು ನೆಟ್ಟಿಗರು!

    ಕ್ಯಾನ್ಬೆರಾ: ಸಾಮಾನ್ಯವಾಗಿ ಎರಡು ಕಣ್ಣಿನ ಹಾವನ್ನ ನೋಡಿರುತ್ತೀರಾ. ಅದ್ರೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಮೂರು ಕಣ್ಣಿನ ಹಾವೊಂದು ಸಖತ್ ಸದ್ದು ಮಾಡುತ್ತಿದೆ.

    ಹೌದು. ಸಹಜವಾಗಿ ಹಾವುಗಳೆಂದರೆ ಎರಡು ಕಣ್ಣು ಇರುತ್ತೆ. ಆದರೆ ಆಸ್ಟ್ರೇಲಿಯಾದ ಉತ್ತರ ಭಾಗದಲ್ಲಿ ಮೂರು ಕಣ್ಣಿನ ಹಾವೊಂದು ಪತ್ತೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅದರ ಫೋಟೋ ಸಖತ್ ವೈರಲ್ ಆಗಿದೆ. ಬುಧವಾರ ಈ ಬಗ್ಗೆ ಆಸ್ಟ್ರೇಲಿಯಾ ಉತ್ತರ ಭಾಗದ ಅರಣ್ಯ ಇಲಾಖೆ ತಮ್ಮ ಫೇಸ್‍ಬುಕ್ ಫೇಜ್‍ನಲ್ಲಿ ಮೂರು ಕಣ್ಣಿನ ಹಾವಿನ ಫೋಟೋ ಜೊತೆಗೆ ಅದರ ವಿಶೇಷತೆಯನ್ನು ಶೇರ್ ಮಾಡಿದೆ. ಈ ಮೂರು ಕಣ್ಣಿನ ಹಾವಿನ ನೋಟಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

    ಅರ್ನ್ ಹೆಮ್ ಹೆದ್ದಾರಿಯಲ್ಲಿ ಸಿಕ್ಕಿರುವ ಈ ಹಾವು ಕಾರ್ಪೆಟ್ ಪೈತಾನ್ ಪ್ರಜಾತಿಗೆ ಸೇರಿದ್ದು, ಇದಕ್ಕೆ `ಮಾಂಟಿ ಪೈತಾನ್’ ಎಂದು ಹೆಸರಿಡಲಾಗಿದೆ. ಮಾರ್ಚ್ ನಲ್ಲಿ ಈ ವಿಚಿತ್ರ ಹಾವು ಪತ್ತೆಯಾಗಿತ್ತು. ಆದ್ರೆ ಹುಟ್ಟಿದ ಕೇವಲ ಮೂರೇ ತಿಂಗಳಲ್ಲಿ ಅದು ಸತ್ತು ಹೋಗಿದೆ ಎಂದು ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

    ಅಲ್ಲದೆ ಈ ಬಗ್ಗೆ ಮಾತನಾಡಿದ ಅಧಿಕಾರಿಗಳು, ಆರೋಗ್ಯದ ಸಮಸ್ಯೆ ನಡುವೆಯೂ ಅದು ಮೂರು ತಿಂಗಳ ಕಾಲ ಬದುಕಿದ್ದೇ ಅಚ್ಚರಿಯ ಸಂಗತಿ. ಈ ಮೂರು ಕಣ್ಣಿನ ಹಾವು ಸುಮಾರು 40 ಸೆ.ಮಿ ಉದ್ದವಿತ್ತು ಎಂದಿದ್ದಾರೆ. ಹಾಗೆಯೇ ಈ ಹಾವಿನ ಎಕ್ಸ್-ರೆ ಮಾಡಿ ನೋಡಿದಾಗ ಹಾವಿಗೆ ಎರಡು ತಲೆಯಿಲ್ಲ ಎಂಬುದು ತಿಳಿದುಬಂದಿದೆ. ಆದ್ರೆ ಒಂದೇ ತಲೆಬುರುಡೆಯಲ್ಲಿ ಮೂರನೇ ಕಣ್ಣಿಗೆ ಜಾಗವಿದ್ದು, ಮೂರು ಕಣ್ಣು ಕೂಡ ಕಾರ್ಯ ನಿರ್ವಹಿಸುತ್ತಿತ್ತು ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.

    https://www.facebook.com/ParksandWildlifeNT/posts/2284844224909161

  • ಕುಡಿದ ಮತ್ತಿನಲ್ಲಿ ಹಾವು ಹಿಡಿಯಲು ಹೋಗಿ ಆಸ್ಪತ್ರೆ ಸೇರಿದ!

    ಕುಡಿದ ಮತ್ತಿನಲ್ಲಿ ಹಾವು ಹಿಡಿಯಲು ಹೋಗಿ ಆಸ್ಪತ್ರೆ ಸೇರಿದ!

    ಸಾಂದರ್ಭಿಕ ಚಿತ್ರ

    ಬೆಂಗಳೂರು: ಕಂಠ ಪೂರ್ತಿ ಕುಡಿದು ಮನೆಗೆ ಬಂದಿದ್ದ ವ್ಯಕ್ತಿಯೊಬ್ಬ ನಶೆಯಲ್ಲಿ ಹಾವು ಹಿಡಿಯಲು ಹೋಗಿ ಆಸ್ಪತ್ರೆ ಪಾಲಾದ ಘಟನೆ ನೆಲಮಂಗಲ ಪಟ್ಟಣದ ವಿಶ್ವೇಶ್ವರಪುರದಲ್ಲಿ ನಡೆದಿದೆ.

    ವಿಶ್ವೇಶ್ವರಪುರದ ನಿವಾಸಿ ಗೋವಿಂದರಾಜು(35) ಹಾವಿನಿಂದ ಕಚ್ಚಿಸಿಕೊಂಡಿದ್ದಾನೆ. ಪೇಂಟರ್ ಕೆಲಸ ಮಾಡುತ್ತಿದ್ದ ಗೋವಿಂದರಾಜು ಸೋಮವಾರ ರಾತ್ರಿ ಕುಡಿದು ಮನೆಗೆ ಬಂದಿದ್ದನು. ಈ ವೇಳೆ ಮನೆಗೆ ನುಗ್ಗಿದ್ದ ನಾಗರ ಹಾವನ್ನು ಹಿಡಿಯಲು ಮುಂದಾಗಿದ್ದಾನೆ. ಮೊದಲೇ ಕುಡಿದ ನಶೆಯಲ್ಲಿದ್ದ ಗೋವಿಂದರಾಜು ಹಾವನ್ನು ಹಿಡಿಯಲು ಹೋಗಿ ಅದರಿಂದ ಕಚ್ಚಿಸಿಕೊಂಡಿದ್ದಾನೆ. ತಕ್ಷಣ ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಗೋವಿಂದರಾಜು ಮನೆಯ ಬೀರಿನ ಹಿಂದೆ ನಾಗರ ಹಾವೊಂದು ಅವಿತುಕೊಂಡಿತ್ತು. ಕುಡಿದು ಮನೆಗೆ ಬಂದಾಗ ಅವಿತಿದ್ದ ಹಾವನ್ನು ಹಿಡಿಯವ ಸಾಹಸಕ್ಕೆ ಗೋವಿಂದರಾಜು ಕೈಹಾಕಿ, ಕೈಬೆರಳಿಗೆ ಹಾವಿನಿಂದ ಕಚ್ಚಿಸಿಕೊಂಡಿದ್ದಾನೆ. ಸದ್ಯ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ನೆಲಮಂಗಲ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಮಾಲೀಕನ ರಕ್ಷಿಸಿ ತನ್ನ ಪ್ರಾಣ ಬಿಟ್ಟ ಪಪ್ಪಿ

    ಮಾಲೀಕನ ರಕ್ಷಿಸಿ ತನ್ನ ಪ್ರಾಣ ಬಿಟ್ಟ ಪಪ್ಪಿ

    ಚೆನ್ನೈ: ನಾಯಿ ತನ್ನನ್ನು ಸಾಕಿದ ಮನೆಯವರಿಗೆ ಸದಾ ನಿಷ್ಠೆ, ಪ್ರಾಮಾಣಿಕವಾಗಿರುತ್ತದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ತಮಿಳುನಾಡಿನ ತಂಜಾವೂರಿನಲ್ಲಿ ತನ್ನ ಮಾಲೀಕನ ಪ್ರಾಣ ಉಳಿಸಿ ನಾಯಿಯೊಂದು ಪ್ರಾಣ ಕಳೆದುಕೊಂಡಿದೆ.

    ಈ ಘಟನೆ ತಂಜಾವೂರ್ ಜಿಲ್ಲೆಯ ವೆಂಗರಯಾನಕುಡಿಕಾಡುನಲ್ಲಿ ಶನಿವಾರ ಮುಂಜಾನೆ ನಡೆದಿದೆ. ನಾಡು ರಸ್ತೆ ನಿವಾಸಿ ರೈತ ನಟರಾಜನ್ (50) ಅವರು ತಮ್ಮ ಸಾಕು ನಾಯಿ ಪಪ್ಪಿಯೊಂದಿಗೆ ಮುಂಜಾನೆ ತೋಟಕ್ಕೆ ವಾಕಿಂಗ್ ಹೋಗಿದ್ದಾರೆ.

    ನಾನು ನನ್ನ ಪಪ್ಪಿಯೊಂದಿಗೆ ವಾಕಿಂಗ್ ಮಾಡುತ್ತಿದ್ದಾಗ 5 ಅಡಿ ಉದ್ದದ ಹಾವು ನನ್ನ ಮುಂದೆ ಇತ್ತು. ಹಾವನ್ನು ನೋಡಿದ ನಾನು ಭಯದಿಂದ ನಿಂತುಕೊಂಡು ನಿಧಾನವಾಗಿ ಹಿಂದಕ್ಕೆ ಹಜ್ಜೆ ಹಾಕುತ್ತಿದ್ದೆ. ಆಗ ಅದು ನನಗೆ ಕಚ್ಚಲು ಮುಂದಾಯಿತು. ಅಷ್ಟರಲ್ಲಿ ನನ್ನ ಪಪ್ಪಿ ಹಾವಿನ ಮೇಲೆ ದಾಳಿ ಮಾಡಿ ಅದನ್ನು ಸಾಯಿಸಿತು. ಆದರೆ ದಾಳಿ ವೇಳೆ ಹಾವು ಕೂಡ ಪಪ್ಪಿ ಮೇಲೆ ಅನೇಕ ಬಾರಿ ಕಚ್ಚಿತ್ತು. ಇದರಿಂದ ಪಪ್ಪಿ ಅಸ್ವಸ್ಥಗೊಂಡಿತ್ತು. ತಕ್ಷಣ ಪಪ್ಪಿಯನ್ನು ಎತ್ತಿಕೊಂಡು ನಾನು ಚಿಕಿತ್ಸೆಗಾಗಿ ಮನೆ ಕಡೆ ಓಡಿ ಹೋದೆ. ಆದರೆ ವೈದ್ಯರು ಬರುವಷ್ಟರಲ್ಲಿ ಪಪ್ಪಿ ಮೃತಪಟ್ಟಿತ್ತು ಎಂದು ನಟರಾಜನ್ ಹೇಳಿ ಕಣ್ಣೀರಾಕಿದ್ದಾರೆ.

    ನಟರಾಜನ್ ಸುಮಾರು ನಾಲ್ಕು ವರ್ಷದಿಂದ ಈ ನಾಯಿಯನ್ನು ಸಾಕುತ್ತಿದ್ದು, ಪಪ್ಪಿ ಅವರ ಕುಟುಂಬದಲ್ಲಿ ಒಬ್ಬನಾಗಿತ್ತು. ನಟರಾಜನ್ ಪತ್ನಿ ಮತ್ತು ಇಬ್ಬರು ಮಕ್ಕಳು ಸಹ ನಾಯಿಯನ್ನು ಅಷ್ಟೇ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಅವರು ಎಲ್ಲೆ ಹೋದರು ಹಿಂಬಾಲಿಸಿಕೊಂಡು ಹೋಗುತ್ತಿತ್ತು.

  • ಹುತ್ತದ ಒಳಗೂ ಬಿಸಿ, ಹೊರಗೂ ಬಿಸಿ- ತಂಪಿಗಾಗಿ ಮನೆ, ದೇಗುಲಗಳತ್ತ ಹಾವುಗಳು

    ಹುತ್ತದ ಒಳಗೂ ಬಿಸಿ, ಹೊರಗೂ ಬಿಸಿ- ತಂಪಿಗಾಗಿ ಮನೆ, ದೇಗುಲಗಳತ್ತ ಹಾವುಗಳು

    – ಉರಗತಜ್ಞರಿಗೆ ಫುಲ್ ಡಿಮ್ಯಾಂಡ್

    ಚಿಕ್ಕಬಳ್ಳಾಪುರ: ಬಿಸಿಲ ಧಗೆ ದಿನದಿಂದ ದಿನಕ್ಕೆ ಏರುತ್ತಿದ್ದು, ಮನುಷ್ಯರು ಸೇರಿ ಪ್ರಾಣಿ-ಪಕ್ಷಿಗಳೂ ನೀರಿಗಾಗಿ ಪರದಾಡುತ್ತಿವೆ. ಮತ್ತೊಂದೆಡೆ ವಿಪರೀತ ಸೆಕೆ. ಮನುಷ್ಯರು ಫ್ಯಾನು, ಏಸಿಗಳ ಮೊರೆ ಹೋಗುತ್ತೇವೆ. ಆದ್ರೆ ಪ್ರಾಣಿಗಳು ತಂಪಾದ ಜಾಗವನ್ನು ಹುಡುಕಿಕೊಂಡು ಬರುತ್ತಿವೆ. ಹೀಗೆ ಹಾವುಗಳು ಇದೀಗ ಮನೆ, ದೇವಸ್ಥಾನಕ್ಕೆ ನುಗ್ಗುತ್ತಿವೆ.

    ಹೌದು. ಪ್ರಾಣಿ-ಪಕ್ಷಿಗಳು ಬಿಸಿಲ ಧಗೆ ತಡೆದುಕೊಳ್ಳಲು ಆಗದೆ ಎಲ್ಲಿ ನೀರು ಸಿಗುತ್ತೋ, ಎಲ್ಲಿ ತಂಪಾದ ವಾತಾವರಣ ಇದೆಯೋ ಅಲ್ಲಿಗೆ ಹೋಗುತ್ತಿವೆ. ಹೀಗಾಗಿ ಚಿಕ್ಕಬಳ್ಳಾಪುರದಲ್ಲಿ ಹಾವುಗಳ ಕಾಟ ಶುರುವಾಗಿದೆ. ಬಿಸಿಲ ಬೇಗೆ ತಡೆದುಕೊಳ್ಳಲು ಸಾಧ್ಯವಾಗದೇ ದೇಗುಲ, ಮನೆಗಳಿಗೆ ಹಾವುಗಳು ನುಗ್ಗುತ್ತಿವೆ. ಹೀಗೆ ನಾಗರ ಹಾವೊಂದು ಇಲ್ಲಿನ ಶ್ರೀನಿವಾಸ ಸಾಗರ ಬಳಿ ಇರೋ ಲಕ್ಷ್ಮಿ ವೆಂಕಟರಮಣಸ್ವಾಮಿ ದೇವಾಲಯದ ಗರ್ಭಗುಡಿಯಲ್ಲಿ ಸೇರಿಕೊಂಡಿದೆ. ಇದನ್ನು ಕಂಡು ಅರ್ಚಕರು ಬೆಚ್ಚಿ ಬಿದ್ದಿದ್ದಾರೆ ಎಂದು ಉರಗ ತಜ್ಞ ಪೃಥ್ವಿರಾಜ್ ತಿಳಿಸಿದ್ದಾರೆ.

    ದೇವಸ್ಥಾನದ ಕಥೆ ಒಂದ್ಕಡೆಯಾದರೆ, ಚಿಕ್ಕಬಳ್ಳಾಪುರ ನಗರದ ವಿವಿಧೆಡೆ ಮನೆಗಳಲ್ಲಿ ಇದ್ದಕ್ಕಿದ್ದ ಹಾಗೆ ಹಾವುಗಳು ಪ್ರತ್ಯಕ್ಷವಾಗುತ್ತವೆ. ನೀರಿನ ಸಂಪು, ತೋಟದ ಮನೆ, ನೀರಿನ ಗೇಟ್ ವಾಲ್, ತಂಪಾದ ಸಸಿಗಳ ಮಧ್ಯೆ, ಮನೆ ಕಾಂಪೌಂಡ್ ಹೀಗೆ ಎಲ್ಲೆಂದರಲ್ಲಿ ಹಾವುಗಳು ಕಾಣ ಸಿಗುತ್ತಿವೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ಹೇಳಿದ್ದಾರೆ.

    ಒಟ್ಟಿನಲ್ಲಿ ಬಿಸಿಲಿನ ಝಳಕ್ಕೆ ಹುತ್ತ ಬಿಟ್ಟು ಹೊರ ಬರುತ್ತಿರುವ ಹಾವುಗಳು ಮನೆ ಸೇರಿಕೊಂಡು ಜನರನ್ನು ಭಯಬೀಳಿಸುತ್ತಿವೆ. ಈ ಹಿನ್ನೆಲೆಯಲ್ಲಿ ಇದೀಗ ಜಿಲ್ಲೆಯಲ್ಲಿ ಹಾವುಗಳನ್ನು ಹಿಡಿಯೋ ಉರಗತಜ್ಞರಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಬಂದಿದೆ ಎನ್ನಲಾಗಿದೆ.

  • ಎಟಿಎಂ ಸೇರಿಕೊಂಡ ನಾಗರಾಜ -ವಿಡಿಯೋ ನೋಡಿ

    ಎಟಿಎಂ ಸೇರಿಕೊಂಡ ನಾಗರಾಜ -ವಿಡಿಯೋ ನೋಡಿ

    ಚೆನ್ನೈ: ಮಂಗಳವಾರ ನಡೆದ ಲೋಕಸಭಾ ಚುನಾವಣೆಯಲ್ಲಿ ಕೇರಳದ ಕಣ್ಣೂರಿನ ಮತಗಟ್ಟೆಯೊಂದರ ವಿವಿ ಪ್ಯಾಟ್‍ನಲ್ಲಿ ಹಾವು ಸೇರಿಕೊಂಡಿತ್ತು. ತಮಿಳುನಾಡಿನ ಕೊಯಂಬತ್ತೂರಿನ ಥಾನಿರಪಂಡಾಲಾ ರಸ್ತೆಯ ಎಟಿಎಂ ಕೇಂದ್ರದಲ್ಲಿ ಹಾವು ಸೇರಿಕೊಂಡಿತ್ತು.

    ಜನರು ಹಣ ಪಡೆದುಕೊಳ್ಳಲು ಎಟಿಎಂ ಮುಂದೆ ನಿಂತಿದ್ದರು. ಈ ವೇಳೆ ಒಬ್ಬರಿಗೆ ಎಟಿಎಂ ಕೇಂದ್ರದಲ್ಲಿ ಹಾವು ಕಾಣಿಸಿಕೊಂಡಿದೆ. ಕೂಡಲೇ ಹೊರ ಬಂದ ವ್ಯಕ್ತಿ ಜನರಿಗೆ ವಿಷಯ ತಿಳಿಸಿದ್ದಾರೆ. ಕೊನೆಗೆ ಉರಗ ರಕ್ಷಕರಿಗೆ ಕರೆಸಿ ಹಾವನ್ನು ಸೆರೆಹಿಡಿಯಲಾಗಿದೆ. ಬೇಸಿಗೆ ಆಗಿದ್ದರಿಂದ ತಂಪು ಪ್ರದೇಶಗಳತ್ತ ಹಾವುಗಳು ಆಗಮಿಸುತ್ತೇವೆ. ಹೀಗೆ ಬಂದಾಗ ಅವುಗಳನ್ನು ಸಾಯಿಸದೇ ನಮಗೆ ಮಾಹಿತಿ ನೀಡಿ ಎಂದು ಉರಗ ತಜ್ಞರು ತಿಳಿಸಿದ್ದಾರೆ.

    ಹಾವು ಎಟಿಎಂ ಹಿಂದೆ ಮತ್ತು ಎಸಿ ಹತ್ತಿರ ಕುಳಿತಿತ್ತು. ಉರಗ ತಜ್ಞ ಹಾವನ್ನು ಸೆರೆಹಿಡಿಯುವ ದೃಶ್ಯಗಳನ್ನು ಸ್ಥಳೀಯರು ತಮ್ಮ ಮೊಬೈಲಿನಲ್ಲಿ ಸೆರೆ ಹಿಡಿದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ.

    ಮಂಗಳವಾರ ಕಣ್ಣೂರು ಲೋಕಸಭಾ ಕ್ಷೇತ್ರದ ಮಯ್ಯಿಲ್ ಕಂದಕ್ಕಯಿ ನಿರ್ವಾಚನದ ಬೂತ್ ನಲ್ಲಿ ವಿವಿ ಪ್ಯಾಟ್ ತೆರೆಯುತ್ತಿದ್ದಂತೆ ಚಿಕ್ಕ ಹಾವು ಕಾಣಿಸಿಕೊಂಡಿತ್ತು. ಕೂಡಲೇ ಚುನಾವಣಾ ಸಿಬ್ಬಂದಿ ಸ್ಥಳೀಯರ ನೆರವಿನೊಂದಿಗೆ ಹಾವನ್ನು ಓಡಿಸಿ ಮತದಾನಕ್ಕೆ ಅನುಕೂಲ ಮಾಡಿಕೊಟ್ಟಿದ್ದರು.

  • ವಿವಿ ಪ್ಯಾಟ್‍ನಲ್ಲಿ ಸೇರಿಕೊಂಡ ನಾಗ!

    ವಿವಿ ಪ್ಯಾಟ್‍ನಲ್ಲಿ ಸೇರಿಕೊಂಡ ನಾಗ!

    ತಿರುವನಂತಪುರಂ: ಹಾವುಗಳು ಚಿಕ್ಕ ಸ್ಥಳ ಸಿಕ್ಕರೂ ಸಾಕು ಸೇರಿಕೊಳ್ಳುತ್ತವೆ. ಬೈಕ್, ಕಾರ್ ಡಿಕ್ಕಿ, ಗ್ಯಾಸ್ ಸಿಲಿಂಡರ್ ಕೆಳಗೆ, ಶೂಗಳಲ್ಲಿ ಹೀಗೆ ಹಾವುಗಳು ಎಲ್ಲೆಂದರಲ್ಲಿ ಸೇರಿಕೊಳ್ಳುತ್ತವೆ. ಇದೀಗ ಕೇರಳದ ಕಣ್ಣೂರಿನ ಮತಗಟ್ಟೆಯ ವಿವಿ ಪ್ಯಾಟ್‍ನಲ್ಲಿ ಹಾವು ಸೇರಿಕೊಂಡು ಕೆಲಕಾಲ ಆತಂಕದ ವಾತಾವರಣ ಸೃಷ್ಟಿ ಮಾಡಿತ್ತು.

    ಕಣ್ಣೂರು ಲೋಕಸಭಾ ಕ್ಷೇತ್ರದ ಮಯ್ಯಿಲ್ ಕಂದಕ್ಕಯಿ ನಿರ್ವಾಚನದ ಬೂತ್ ನಲ್ಲಿ ಇಂದು ಬೆಳಗ್ಗೆ ವಿವಿ ಪ್ಯಾಟ್ ತೆರೆಯುತ್ತಿದ್ದಂತೆ ಚಿಕ್ಕ ಹಾವು ಕಾಣಿಸಿಕೊಂಡಿತ್ತು. ಕೂಡಲೇ ಚುನಾವಣಾ ಸಿಬ್ಬಂದಿ ಸ್ಥಳೀಯರ ನೆರವಿನೊಂದಿಗೆ ಹಾವನ್ನು ಓಡಿಸಿ ಮತದಾನಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.

    ಕನ್ನೂರು ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದೆ ಪಿ.ಕೆ.ಶ್ರೀಮತಿ (ಸಿಪಿಐ+ಎಲ್‍ಡಿಎಫ್) ಮತ್ತು ಕೆ.ಸುರೇಂದ್ರನ್ (ಕಾಂಗ್ರೆಸ್+ಯುಡಿಎಫ್) ಸ್ಪರ್ಧೆ ಮಾಡಿದ್ದಾರೆ. ಕೇರಳದ ಎಲ್ಲ 20 ಲೋಕಸಭಾ ಕ್ಷೇತ್ರಗಳಿಗೆ ಇಂದು ಚುನಾವಣೆ ನಡೆಯುತ್ತಿದೆ.

  • ರಾತ್ರಿ ಸುರಿದ ಮಳೆಗೆ ಮನೆಗೆ ಎಂಟ್ರಿ ಕೊಟ್ಟ ವಿಶೇಷ ಅತಿಥಿ!

    ರಾತ್ರಿ ಸುರಿದ ಮಳೆಗೆ ಮನೆಗೆ ಎಂಟ್ರಿ ಕೊಟ್ಟ ವಿಶೇಷ ಅತಿಥಿ!

    ಬೆಂಗಳೂರು: ಶನಿವಾರ ರಾತ್ರಿ ಸುರಿದ ಮಳೆಗೆ ಆಶ್ರಯ ಅರಸಿ ವಿಶೇಷ ಅತಿಥಿಯೊಂದು ಮನೆಯೊಳಗೆ ಸೇರಿಕೊಂಡ ಘಟನೆ ಆನೇಕಲ್ ತಾಲೂಕಿನ ಗುಡ್ನಹಳ್ಳಿಯಲ್ಲಿ ನಡೆದಿದೆ.

    ಆನೇಕಲ್ ತಾಲೂಕಿನ ಗುಡ್ನಹಳ್ಳಿಯಲ್ಲಿ ಶನಿವಾರ ರಾತ್ರಿ ಮಳೆರಾಯನ ಆರ್ಭಟ ಜೋರಾಗಿಯೇ ಇತ್ತು. ಈ ವೇಳೆ ಗುಡ್ನಹಳ್ಳಿ ನಿವಾಸಿ ಮುನಿಯಪ್ಪ ಅವರ ಮನೆಯಲ್ಲಿ ಹಾವೊಂದು ಪ್ರತ್ಯಕ್ಷವಾಗಿದೆ. ರಾತ್ರಿ ಸುಮಾರು 7ರಿಂದ 9 ಗಂಟೆಯವೆರೆಗೂ ಮಳೆ ಸುರಿದಿದ್ದು, ಮಳೆಯಿಂದ ಆಶ್ರಯ ಪಡೆಯಲು ಹಾವು ಮನೆಗೆ ನುಗ್ಗಿದೆ.

    ಮನೆಗೆ ನುಗ್ಗಿದ್ದ ಹಾವನ್ನು ಕಂಡ ಮನೆ ಮಾಲೀಕರು ಭಯಗೊಂಡಿದ್ದು, ತಕ್ಷಣ ಉರಗ ತಜ್ಞ ಮಾಯಸಂದ್ರ ಸೂರಿ ಅವರಿಗೆ ಮಾಹಿತಿ ತಿಳಿಸಿ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಬಳಿಕ ಉರಗ ತಜ್ಞರು ಹಾವನ್ನು ಸೆರೆಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟುಬಂದಿದ್ದಾರೆ.

  • ಬೆಂಕಿಗೆ 5 ಚಿರತೆ ಮರಿಗಳು ಸಜೀವ ದಹನ!

    ಬೆಂಕಿಗೆ 5 ಚಿರತೆ ಮರಿಗಳು ಸಜೀವ ದಹನ!

    ಪುಣೆ: ಮಹಾರಾಷ್ಟ್ರದ ಗಾಮವೊಂದರ ಕಬ್ಬಿನ ಗದ್ದೆಯಲ್ಲಿ ಹಾವನ್ನು ಸಾಯಿಸಲು ಹಚ್ಚಿದ್ದ ಬೆಂಕಿಯಲ್ಲಿ 5 ಚಿರತೆ ಮರಿಗಳು ಸುಟ್ಟು ಸಜೀವ ದಹನವಾಗಿದೆ. ಪುಣೆಯ ಅಂಬೆಗಾಂವ್ ತಾಲೂಕಿನ ಗವಡೆವಾಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

    ಬುಧವಾರ ಕಬ್ಬು ಕಟಾವು ಕಾರ್ಯ ನಡೆಸುತ್ತಿದ್ದ ವೇಳೆ ಗದ್ದೆಯಲ್ಲಿ ಒಟ್ಟು ಮಾಡಿಟ್ಟಿದ್ದ ಕಸದ ರಾಶಿ ಬಳಿ ವಿಷಕಾರಿ ಹಾವು ಕಂಡುಬಂದಿದ್ದು, ಭಯಗೊಂಡ ರೈತರು ಕಸಕ್ಕೆ ಬೆಂಕಿ ಹಚ್ಚಿದ್ದಾರೆ.

    ಕಸಕ್ಕೆ ಹಚ್ಚಿದ್ದ ಬೆಂಕಿ ಪಕ್ಕದಲ್ಲೇ ಇದ್ದ ಪೊದೆಗೂ ತಗುಲಿದೆ. ಪರಿಣಾಮ ಅದರಲ್ಲಿ ಮಲಗಿದ್ದ ಮೂರು ಹೆಣ್ಣು ಮತ್ತು ಎರಡು ಗಂಡು ಚಿರತೆ ಮರಿಗಳು ಬೆಂಕಿಗೆ ಸುಟ್ಟು ಸಾವನ್ನಪ್ಪಿವೆ.

    ಕಾಡಿನ ಸಮೀಪದಲ್ಲಿ ಈ ಕಬ್ಬಿನ ಗದ್ದೆ ಇರುವ ಕಾರಣಕ್ಕೆ ಕಳೆದ ಮೂರು ವಾರಗಳ ಹಿಂದೆ ಚಿರತೆ ಮರಿಗಳು ಜನಿಸಿರಬಹುದು. ಚಿರತೆ ಮರಿಗಳು ಪೊದೆಯಲ್ಲಿದ್ದ ವಿಚಾರ ಗ್ರಾಮಸ್ಥರಿಗೆ ತಿಳಿದಿರಲಿಲ್ಲ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

    ಈ ಮರಿಗಳಿಗಾಗಿ ತಾಯಿ ಚಿರತೆ ಹುಡುಕಿ ಬರುವ ಸಾಧ್ಯತೆ ಇದ್ದು, ಸುತ್ತಮುತ್ತಲಿನ ಜನರಿಗೆ ಜಾಗ್ರತೆಯಿಂದ ಇರುವಂತೆ ಅರಣ್ಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

  • ಹಾವು ಹಿಡ್ಕೊಂಡು `ನಾಗಮಣಿ’ ಹೆಸರಲ್ಲಿ ಮಕ್ಮಲ್ ಟೋಪಿ!

    ಹಾವು ಹಿಡ್ಕೊಂಡು `ನಾಗಮಣಿ’ ಹೆಸರಲ್ಲಿ ಮಕ್ಮಲ್ ಟೋಪಿ!

    ಬೆಂಗಳೂರು: ಹಣ ಸುಲಿಗೆ ಮಾಡುವುದಕ್ಕೆ ಜನ ಏನ್ ಬೇಕಾದರೂ ಮಾಡುತ್ತಾರೆ ಅನ್ನೋದಕ್ಕೆ ಈ ಸ್ಟೋರಿಯೇ ಸಾಕ್ಷಿ. ಕರೋಡ್‍ಪತಿ ಆಸೆ ತೋರಿಸಿ ನಕಲಿ ನಾಗಮಣಿಯನ್ನು ಮಾರುತ್ತಿದ್ದ ಖದೀಮರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ರಾತ್ರೋರಾತ್ರಿ ಕರೋಡ್‍ಪತಿ ಆಗಬೇಕು ಅಂದರೆ ಮನೆಯಲ್ಲಿ ನಾಗಮಣಿ ಇಟ್ಟು ಪೂಜೆ ಮಾಡಬೇಕು ಎಂದು ಸುಳ್ಳು ಹೇಳಿ ಜನರಿಗೆ ಇಲ್ಲ ಸಲ್ಲದ ಆಸೆ ಹುಟ್ಟಿಸಿ ನಕಲಿ ನಾಗಮಣಿಯನ್ನು ಕೋಟ್ಯಂತರ ರೂಪಾಯಿಗೆ ಮಾರುತ್ತಿದ್ದ ಆರೋಪಿಗಳನ್ನ ಪೊಲೀಸರು ಖೆಡ್ಡಾಕ್ಕೆ ಕೆಡವಿದ್ದಾರೆ.

    ಭಾನುವಾರ ರಾತ್ರಿ ಆರೋಪಿಗಳು ಇಸ್ಕಾನ್ ಬಳಿ ಇರುವ ಇಂದಿರಾ ಕ್ಯಾಂಟಿನ್ ಬಳಿ ಕಾರಿನಲ್ಲಿ ಕೂತು ಡೀಲ್ ಮಾಡುತ್ತಿದ್ದರು. ಆರೋಪಿಗಳ ವಂಚನೆಯ ಬಗ್ಗೆ ಮಾಹಿತಿ ತಿಳಿದ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಆರೋಪಿಗಳನ್ನ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಕೃಷ್ಣಪ್ಪ, ಶಿವಣ್ಣ ಸೇರಿ ಮೂವರನ್ನ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ನಕಲಿ ನಾಗಮಣಿ, ಹಾವು ಮತ್ತು ಒಂದು ಕಾರನ್ನು ವಶಪಡಿಸಿಕೊಂಡಿದ್ದಾರೆ.

    ಆರೋಪಿಗಳು ನಕಲಿ ನಾಗಮಣಿಯ ಜೊತೆಯಲ್ಲಿ ಬೋ ಎಂಬ ಹೆಸರಿನ ಹಾವನ್ನು 30, 40 ಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದರು ಎಂದು ಎಸಿಪಿ ಧನಂಜಯ್ಯ ಹೇಳಿದ್ದಾರೆ.

  • ಒಟ್ಟಿಗೆ ಕಾಣಿಸುತ್ತೆ, ಒಟ್ಟಿಗೆ ಮಲಗುತ್ತೆ- ಕಪ್ಪೆಯ ಜೊತೆಗೆ ಹಾವಿನ ಗೆಳೆತನ – ವಿಡಿಯೋ ನೋಡಿ

    ಒಟ್ಟಿಗೆ ಕಾಣಿಸುತ್ತೆ, ಒಟ್ಟಿಗೆ ಮಲಗುತ್ತೆ- ಕಪ್ಪೆಯ ಜೊತೆಗೆ ಹಾವಿನ ಗೆಳೆತನ – ವಿಡಿಯೋ ನೋಡಿ

    ಕಾರವಾರ: ಹಾವಿಗೆ ಕಪ್ಪೆ ಆಹಾರ, ಕಪ್ಪೆಯನ್ನು ಹಾವು ನುಂಗುವುದು ನೈಸರ್ಗಿಕ. ಕೆಲವು ಕಡೆ ಕಪ್ಪೆ ಕೂಡ ಹಾವನ್ನು ನುಂಗಿದ ಘಟನೆಗಳು ಕೂಡ ನಡೆದಿದೆ. ಆದರೆ ಹಾವು ಮತ್ತು ಕಪ್ಪೆ ಒಟ್ಟಿಗೆ ಜೀವನ ನಡೆಸುತ್ತೆ ಎಂದರೆ ನೀವು ನಂಬುವುದು ಕಷ್ಟ. ಆದರೆ ನೀವು ಈಗ ನಂಬಲೇಬೇಕು.

    ಕಾರವಾರದಲ್ಲಿ ಕಪ್ಪೆಯೊಂದು ಹಾವಿನ ಜೊತೆ ಜೀವನ ನಡೆಸುತ್ತಿದೆ. ಕಪ್ಪೆಯ ಜೊತೆ ಬಾವಿಯಲ್ಲಿ ಈಜುತ್ತಾ ಅದರೊಂದಿಗೆ ಕುಳಿತಿರೋದನ್ನು ನೋಡಿದ್ರೆ ಈ ಕಪ್ಪೆಯನ್ನು ಹಾವು ನುಂಗಲು ಸಿದ್ಧತೆ ನಡೆಸಿದ್ಯಾ ಎಂದು ನಿಮಗೆ ಅನುಮಾನ ಹುಟ್ಟಬಹುದು. ಆದ್ರೆ ಈ ಹಾವು ಕಪ್ಪೆ ಜೊತೆ ಗೆಳೆತನ ಬೆಳೆಸಿದೆ.

    ನಗರದ ಕೆ.ಹೆಚ್.ಬಿ ಕಾಲೋನಿಯ ಚಾರ್ಟೆಡ್ ಅಕೌಂಟೆಂಟ್ ಆಗಿರೋ ಗಣಪತಿ ಹೆಗಡೆ ಎಂಬವರ ಮನೆಯ ಬಾವಿಯಲ್ಲಿ ಈ ವಿಸ್ಮಯ ಕಂಡು ಬಂದಿದೆ. ಕಳೆದ ಒಂದು ತಿಂಗಳುಗಳಿಂದ ಈ ಕಪ್ಪೆ ಹಾಗೂ ಕೆರೆಹಾವು(ನೀರ್ ಹಾವು)ಒಟ್ಟಿಗೇ ಇವೆ. ಮನೆಯ ಮಾಲೀಕ ಬಾವಿಯ ಪಂಪಸೆಟ್ ರಿಪೇರಿ ಮಾಡಿಸುವಾಗ ಈ ಹಾವು ಕಪ್ಪೆ ಒಟ್ಟಿಗೆ ಇರೋದು ಪತ್ತೆಯಾಗಿದೆ.

    ಮೊದಲು ಇದನ್ನು ತಿನ್ನಬಹುದು ಎಂದು ಎಲ್ಲರೂ ಊಹಿಸಿದ್ರು, ಆದ್ರೆ ಹಾವು ಕಪ್ಪೆಜೊತೆ ಸದಾ ಇರುವುದನ್ನು ಮನೆಯ ಮಾಲೀಕರು ಗಮನಿಸಿದ್ರು. ಇನ್ನು ಹಾವು ಆಹಾರ ಹುಡುಕಲು ಬಾವಿಯ ಒಳಗೆ ಓಡಾಡಿದ್ರೆ ಕಪ್ಪೆ ಬಾವಿಯಲ್ಲಿ ಚಿಕ್ಕ ಪುಟ್ಟ ಹುಳಗಳನ್ನು ತಿಂದು ಬದುಕುತ್ತಿದೆ.

    ವಿಶ್ರಾಂತಿ ಪಡೆಯಬೇಕೆಂದಾಗ ಬಾವಿಯ ಚಿಕ್ಕ ಕಟ್ಟೆಯ ಮೇಲೆ ಹಾವು ಮಲಗಿದ್ರೆ ಅದರ ಮೇಲೆ ಕಪ್ಪೆ ಮಲಗುತ್ತೆ. ಹೀಗೆ ಅನೋನ್ಯವಾಗಿ ಬದ್ದ ವೈರಿಗಳು ಜೊತೆಯಾಗಿ ಜೀವನ ನಡೆಸುತಿದ್ದು ಪ್ರಕೃತಿಯ ವಿಸ್ಮಯಕ್ಕೆ ಸಾಕ್ಷಿಯಾಗಿದ್ದು ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ.

    https://www.youtube.com/watch?v=BPONcL3yRzc