Tag: ಹಾವು

  • ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ದಾಖಲಾದ ತಾಯಿ-ಮಗಳು

    ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ದಾಖಲಾದ ತಾಯಿ-ಮಗಳು

    ಮುಂಬೈ: ತಾಯಿ-ಮಗಳು ತಮಗೆ ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ದಾಖಲಾದ ಘಟನೆ ಮುಂಬೈನ ಧಾರವಿ ವ್ಯಾಪ್ತಿಯ ಮಹಾರಾಷ್ಟ್ರ ನೇಚರ್ ಪಾರ್ಕ್ ಸಮೀಪದ ಆಬಾದಿ ಬಳಿ ನಡೆದಿದೆ.

    ತಾಯಿ ಸುಲ್ತಾನಾ ಖಾನ್ (34) ಮತ್ತು ಮಗಳು ತೈಶೀನ್ ಖಾನ್ (18) ಇಬ್ಬರು ತಮಗೆ ಕಚ್ಚಿದ ಹಾವು ಹಿಡಿದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುಂಬೈನಲ್ಲಿ ಕಳೆದ ಒಂದು ವಾರದಿಂದ ನಿರಂತರ ಮಳೆಯಾಗುತ್ತಿದ್ದರಿಂದ ಸುಲ್ತಾನಾರ ಮನೆಗೆ ನುಗ್ಗಿದ ಒಂದು ಅಡಿಯ ವಿಷಕಾರಿ ಹಾವು ಬಾಗಿಲ ಬಳಿ ನಿಂತಿದ್ದ ತೈಶೀನ್ ಗೆ ಕಚ್ಚಿದೆ. ಮಗಳಿಗೆ ಕಚ್ಚಿದ ಹಾವನ್ನು ಹಿಡಿಯಲು ಹೋದಾಗ ತಾಯಿಗೂ ಕಚ್ಚಿದೆ. ಕೊನೆಗೆ ತಾಯಿ-ಮಗಳು ಜೊತೆಯಾಗಿ ಹಾವನ್ನು ಹಿಡಿದು ಅದರೊಂದಿಗೆ ಆಸ್ಪತ್ರೆಗೆ ತೆರಳಿ ದಾಖಲಾಗಿದ್ದಾರೆ.

    ಸುಲ್ತಾನಾ ಪತಿ ಸಲೀಂ ಖಾನ್ ಕಟ್ಟಡ ನಿರ್ಮಾಣದಲ್ಲಿ ಕೆಲಸ ಮಾಡಿಕೊಂಡಿದ್ದು, ಆಬಾದಿಯಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಸಲೀಂ ಖಾನ್, ತಮಗೆ ಕಚ್ಚಿದ ಹಾವು ಎಷ್ಟು ವಿಷಕಾರಿ ಎಂಬುದನ್ನು ತಿಳಿಯಲು ಅದನ್ನು ಸೆರೆ ಹಿಡಿದು ಆಸ್ಪತ್ರೆಗೆ ಹೋಗಿದ್ದರು. ಅದೊಂದು ವಿಷಕಾರಿ ಹಾವಾಗಿದ್ದು, ಕಡಿತಕ್ಕೊಳಗಾದ ವ್ಯಕ್ತಿಯ ಸಾವು ಸಂಭವಿಸಬಹುದು. ಹಾವನ್ನು ನೋಡಿದ್ದರಿಂದ ವೈದ್ಯರಿಗೆ ಚಿಕಿತ್ಸೆ ನೀಡಲು ಸಹಕಾರಿಯಾಗಿದೆ. ಘಟನೆ ನಡೆದ ವೇಳೆ ನಾನು ಮನೆಯಲ್ಲಿರಲಿಲ್ಲ. ಸದ್ಯ ಪತ್ನಿ ಮತ್ತು ಮಗಳ ಆರೋಗದ್ಯದಲ್ಲಿ ಚೇತರಿಕೆ ಕಂಡಿದೆ ಎಂದು ತಿಳಿಸಿದ್ದಾರೆ.

    ತಾಯಿ-ಮಗಳು ಹಾವಿನ ಜೊತೆ ಆಸ್ಪತ್ರೆಗೆ ದಾಖಲಾಗಿದ್ದರಿಂದ ಚಿಕಿತ್ಸೆ ನೀಡಲು ಸಹಕಾರಿ ಆಯ್ತು. ಹಾವನ್ನು ನೋಡಿದ ಕೂಡಲೇ ವಿಷದ ಅಂಶ ತಿಳಿಯಿತು. ಹಾವನ್ನು ಜೊತೆಯಾಗಿ ತಂದಿದ್ದರಿಂದ ತ್ವರಿತಗತಿಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ತಾಯಿ-ಮಗಳು ಅಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆಯ ಸಿಬ್ಬಂದಿ ಹೇಳಿದ್ದಾರೆ.

  • 14 ಕೋಳಿ ಮೊಟ್ಟೆಯನ್ನು ಬಾಯಿಂದ ಹೊರ ಹಾಕಿದ ನಾಗರಹಾವು – ವಿಡಿಯೋ ನೋಡಿ

    14 ಕೋಳಿ ಮೊಟ್ಟೆಯನ್ನು ಬಾಯಿಂದ ಹೊರ ಹಾಕಿದ ನಾಗರಹಾವು – ವಿಡಿಯೋ ನೋಡಿ

    ಚಿಕ್ಕಮಗಳೂರು: ಒಂದಲ್ಲ ಎರಡಲ್ಲ ಬರೋಬ್ಬರಿ 14 ಕೋಳಿ ಮೊಟ್ಟೆ ನುಂಗಿ, ತೆವಳಲಾಗದೆ ಜೀವ ಉಳಿಸಿಕೊಳ್ಳಲು ನರಳಾಡುತ್ತಿದ್ದ ಏಳು ಅಡಿ ಉದ್ದದ ನಾಗರಹಾವೊಂದನ್ನು ರಕ್ಷಿಸಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಡವನದಿಣ್ಣೆ ಗ್ರಾಮದಲ್ಲಿ ನಡೆದಿದೆ.

    ಬಡವನದಿಣ್ಣೆ ಗ್ರಾಮದ ನಿವಾಸಿ ಮಂಜಯ್ಯ ಮನೆಯಲ್ಲಿ ಮರಿಗೆಂದು ಬುಟ್ಟಿಯಲ್ಲಿಟ್ಟಿದ್ದ 14 ಮೊಟ್ಟೆಗಳನ್ನು ನಾಗರ ಹಾವು ನುಂಗಿದೆ. ಮೊಟ್ಟೆ ಕಂಡ ಕೂಡಲೇ ಹಾವು ಆಸೆಯಿಂದ ಎಲ್ಲವನ್ನೂ ನುಂಗಿದೆ. ನಂತರ ಮುಂದೆ ಹೋಗಲಾಗದೆ ನರಳಾಡುತಿತ್ತು. ಇದನ್ನ ಗಮನಿಸ ಮನೆ ಮಾಲೀಕ ಮಂಜಯ್ಯ ಕೂಡಲೇ ಸ್ನೇಕ್ ಆರೀಫ್‍ಗೆ ವಿಷಯ ಮುಟ್ಟಿಸಿದ್ದಾರೆ.

    ಸ್ಥಳಕ್ಕೆ ಬಂದ ಸ್ನೇಕ್ ಆರೀಫ್ ಅವರು ಮೊದಲು ಮನೆಯೊಳಗಿದ್ದ ಹಾವನ್ನ ಬಯಲು ಪ್ರದೇಶಕ್ಕೆ ತಂದಿದ್ದಾರೆ. ಬಳಿಕ ಅದರ ಬಾಲ ಹಿಡಿದು ಹೊರಳಾಡಿಸುತ್ತಿದ್ದಂತೆ ನುಂಗಿದ್ದ ಎಲ್ಲಾ ಮೊಟ್ಟೆಗಳನ್ನ ಹಾವು ಕಕ್ಕಿ ತನ್ನ ಜೀವ ಉಳಿಸಿಕೊಂಡಿದೆ.

    ಬಳಿಕ ಹಾವನ್ನು ರಕ್ಷಿಸಿ, ಅದನ್ನು ಸ್ನೇಕ್ ಆರೀಫ್ ಅವರು ಚಾರ್ಮಾಡಿ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಟ್ಟುಬಂದಿದ್ದಾರೆ.

    https://www.youtube.com/watch?v=ICtheGVDfyk

  • ಸೂಪರ್ ಮಾರ್ಕೆಟ್‍ನಲ್ಲಿ ಹಾವು, ಹೌಹಾರಿದ ಸಿಬ್ಬಂದಿ- ಫೋಟೋ ವೈರಲ್

    ಸೂಪರ್ ಮಾರ್ಕೆಟ್‍ನಲ್ಲಿ ಹಾವು, ಹೌಹಾರಿದ ಸಿಬ್ಬಂದಿ- ಫೋಟೋ ವೈರಲ್

    ಆಸ್ಟಿನ್: ಸೂಪರ್ ಮಾರ್ಕೆಟ್‍ವೊಂದರ ಶಾಪಿಂಗ್ ಕಾರ್ಟ್‍ನಲ್ಲಿ ಪತ್ತೆಯಾಗಿದ್ದ ಹಾವೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ.

    ಅಮೆರಿಕದ ಟೆಕ್ಸಾಸ್‍ನ ವಾಲ್‍ಮಾರ್ಟ್ ಸೂಪರ್ ಮಾರ್ಕೆಟ್‍ನಲ್ಲಿ ಹಾವು ಕಾಣಿಸಿಕೊಂಡಿದೆ. ಸೂಪರ್ ಮಾರ್ಕೆಟ್‍ನ ಶಾಪಿಂಗ್ ಕಾರ್ಟ್ ಇಡುವ ಸ್ಥಳದಲ್ಲಿ ಈ ಹಾವು ಪತ್ತೆಯಾಗಿತ್ತು. ಎರಡು ಕಾರ್ಟ್‍ಗಳ ನಡುವೆ ಸಿಲುಕಿಕೊಂಡಿದ್ದ ಹಾವನ್ನು ನೋಡಿ ಸಿಬ್ಬಂದಿ ಮೊದಲು ಭಯಗೊಂಡು ಕೂಗಾಡಿದ್ದಾರೆ. ಆಗ ಸ್ಥಳದಲ್ಲಿದ್ದ ಪೊಲೀಸರು ಹಾಗೂ ಸಾರ್ವಜನಿಕರು ಹಾವನ್ನು ನೋಡಿ ಗಾಬರಿಯಾಗಿದ್ದಾರೆ. ಈ ವೇಳೆ ಅಲ್ಲೆ ಇದ್ದ ಉರಗ ತಜ್ಞರೊಬ್ಬರು ಸುರಕ್ಷಿತವಾಗಿ ಹಾವನ್ನು ಸೆರೆಹಿಡಿದು ರಕ್ಷಿಸಿದ್ದಾರೆ.

    ಈ ಬಗ್ಗೆ ಯುಎಸ್‍ನ ಈಶಾನ್ಯ ಪೊಲೀಸ್ ಇಲಾಖೆ ತನ್ನ ಅಧಿಕೃತ ಫೇಸ್‍ಬುಕ್ ಖಾತೆಯಲ್ಲಿ ಬರೆದು ಹಾವಿನ ಫೋಟೋವನ್ನು ಹಾಕಿ ಅಪ್ಲೋಡ್ ಮಾಡಿದೆ. ಶನಿವಾರದಂದು ಇಲಾಖೆ ಹಾವಿನ ಫೋಟೋವನ್ನು ಪೋಸ್ಟ್ ಮಾಡಿದ್ದು, ಸದ್ಯ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈವರೆಗೆ ಈ ಪೋಸ್ಟ್ ಅನ್ನು ಸಾವಿರಾರು ಮಂದಿ ಶೇರ್ ಹಾಗೂ ಲೈಕ್ ಮಾಡಿದ್ದಾರೆ.

    ಈ ಬಗ್ಗೆ ಪೊಲೀಸರು ಮಾತನಾಡಿ, ಸ್ಥಳದಲ್ಲಿ ತುಂಬಾ ಮಳೆ ಬಂದ ಕಾರಣಕ್ಕೆ ಅದರಿಂದ ರಕ್ಷಣೆಗಾಗಿ ಹಾವು ಸೂಪರ್ ಮಾರ್ಕೆಟ್ ಒಳಗೆ ಬಂದಿದೆ. ಈ ವೇಳೆ ಶಾಪಿಂಗ್ ಕಾರ್ಟ್‍ನಲ್ಲಿ ಸೇರಿಕೊಂಡಿರಬಹುದು ಎಂದು ಊಹಿಸಿದ್ದಾರೆ.

    ಸೂಪರ್ ಮಾರ್ಕೆಟ್‍ನಲ್ಲಿ ಹಾವು ಕಾಣಿಸಿಕೊಂಡಿದ್ದು ಇದೇ ಮೊದಲ ಬಾರಿಯೇನಲ್ಲ. ಈ ಹಿಂದೆ 2017ರಲ್ಲಿ ಮಹಿಳೆಯೊಬ್ಬರು ಸೂಪರ್ ಮಾರ್ಕೆಟ್‍ನಲ್ಲಿ ಫ್ರೀಜ್ಡ್ ನಲ್ಲಿ ಇರಿಸಿದ್ದ ಮೊಸರು ತೆಗೆದುಕೊಳ್ಳುವ ವೇಳೆ ಸುಮಾರು 12 ಅಡಿ ಉದ್ದದ ಹೆಬ್ಬಾವು ಪತ್ತೆಯಾಗಿತ್ತು.

    https://www.facebook.com/NortheastPD/posts/1024911421052498

  • ಕಪ್ಪೆ ಕಚ್ಚಿಕೊಂಡು ಮರ ಏರಿದ ಹಾವು – ವಿಡಿಯೋ ನೋಡಿ

    ಕಪ್ಪೆ ಕಚ್ಚಿಕೊಂಡು ಮರ ಏರಿದ ಹಾವು – ವಿಡಿಯೋ ನೋಡಿ

    ಚಿಕ್ಕಮಗಳೂರು: ಹಾವು ಕಪ್ಪೆಗಳನ್ನ ತಿಂದು ಬದುಕುದು ಸಾಮಾನ್ಯ. ಆದರೆ ಕಪ್ಪೆಯನ್ನು ಕಚ್ಚಿಕೊಂಡು ಮರ ಹತ್ತುವ ದೃಶ್ಯ ನೋಡಲು ಸಿಗುವುದು ಪ್ರಕೃತಿಯಲ್ಲಿ ತುಂಬಾ ವಿರಳ. ಅಂತಹ ಅಪರೂಪದ ಘಟನೆಗೆ ಕಾಫಿನಾಡು ಸಾಕ್ಷಿಯಾಗಿದೆ.

    ಶೃಂಗೇರಿ ತಾಲೂಕಿನ ಸಸಿಮನೆ ಗ್ರಾಮದ ಶಿವಶಂಕರ್ ಎಂಬವರು ಅಂತಹ ಅಪರೂಪದ ದೃಶ್ಯವನ್ನು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಹಳ್ಳೀಲಿ ಮನೆ ಅಕ್ಕ-ಪಕ್ಕ, ಹಿಂದೆ-ಮುಂದೆ ಹಾವುಗಳು ಬರುವುದು ಮಾಮೂಲಿ. ಹಳ್ಳಿಗರು ಅವುಗಳನ್ನು ಏನೂ ಮಾಡುವುದಿಲ್ಲ. ಬರುತ್ತವೆ, ಹೋಗುತ್ತವೆ ಎಂದು ಸುಮ್ಮನಾಗುತ್ತಾರೆ. ಮನೆಯೊಳಗೆ ಬಂದರೆ ಅಷ್ಟೇ ಹಿಡಿದು ಬೇರೆ ಕಡೆಗೆ ಬಿಡುತ್ತಾರೆ.

    ಶಿವಶಂಕರ್ ಅವರ ಮನೆ ಸಮೀಪದ ತೋಟದಲ್ಲಿ ಈ ಹಿಂದೆ ಕೆರೆಹಾವು ಕಾಣಸಿಕೊಂಡಿತ್ತು. ಅದು ಯಾರಿಗೂ ಏನನ್ನೂ ಮಾಡಲ್ಲ, ತನ್ನ ಪಾಡಿ ಹೋಗುತ್ತೆ ಎಂದು ಸುಮ್ಮನಾಗಿದ್ದರು. ಆದರೆ ಬಹಳ ಹೊತ್ತು ಅಲ್ಲಿಯೇ ಕುಳಿತ್ತಿದ್ದ ಹಾವು ಕಪ್ಪೆಯನ್ನು ಕಚ್ಚಿದೆ. ಬಳಿಕ ಪಕ್ಕದಲ್ಲಿದ್ದ ಮರವನ್ನು ಹತ್ತಲು ಯತ್ನಿಸಿದೆ. ಇದೇ ವೇಳೆ, ಮನೆಯ ಹಿಂದೆ ಬಂದ ಮಕ್ಕಳು ಇದನ್ನು ನೋಡಿ ದೃಶ್ಯವನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.

    ಹಾವಿಗಿಂತ ಕಪ್ಪೆಯೇ ದೊಡ್ಡದಾಗಿದ್ದು, ಹಾವು ಅದನ್ನು ನುಂಗಲೂ ಆಗದೇ ಸ್ವಲ್ಪ ಹೊತ್ತು ಪರದಾಡಿತು. ಕಪ್ಪೆಯೂ ತಪ್ಪಿಸಿಕೊಳ್ಳಲು ಎಲ್ಲಾ ವಿಫಲ ಪ್ರಯತ್ನ ನಡೆಸಿ ಕೊನೆಗೆ ಹಾವಿಗೆ ಶರಣಾಗಿದೆ. ಆದರೆ ಹಾವು ಕಪ್ಪೆಯನ್ನು ಕಚ್ಚಿಕೊಂಡು ಮರ ಹತ್ತಲು ಯತ್ನಿಸುತ್ತಿರುವ ದೃಶ್ಯ ಮಾತ್ರ ವೀಕ್ಷಕರಲ್ಲಿ ಆಶ್ಚರ್ಯ ಮೂಡಿಸುತ್ತಿದೆ.

  • ಹಾವನ್ನೇ ಕಚ್ಚಿ ಕಚ್ಚಿ ತಿಂದ ಅಳಿಲು- ಫೋಟೋ ವೈರಲ್

    ಹಾವನ್ನೇ ಕಚ್ಚಿ ಕಚ್ಚಿ ತಿಂದ ಅಳಿಲು- ಫೋಟೋ ವೈರಲ್

    ವಾಷಿಂಗ್ಟನ್: ಒಂದು ಹಾವು ಹಾಗೂ ಅಳಿಲಿನ ಮಧ್ಯೆ ಮುಖಾಮುಖಿಯಾದರೆ ಏನಾಗುತ್ತೆ? ಸಾಮಾನ್ಯವಾಗಿ ಅಳಿಲು ಇಹಲೋಕ ತ್ಯಜಿಸುತ್ತೆ. ಆದರೆ ಯುಎಸ್‍ಎನಲ್ಲಿ ಒಂದು ಅಚ್ಚರಿ ನಡೆದಿದೆ. ಇಲ್ಲಿ ಅಳಿಲೊಂದು ಹಾವನ್ನು ತಿಂದು ಸದ್ಯ ಸಖತ್ ಸುದ್ದಿಯಲ್ಲಿದೆ.

    ಹೌದು. ಹೀಗೆ ಹಾವೊಂದನ್ನು ಅಳಿಲು ಹಿಡುದು ತಿನ್ನುತ್ತಿರುವ ಫೋಟೋವೊಂದನ್ನು ಅಮೆರಿಕದ ನ್ಯಾಷನಲ್ ಪಾರ್ಕ್ ಸರ್ವಿಸ್ ತನ್ನ ಅಧಿಕೃತ ಫೇಸ್‍ಬುಕ್ ಖಾತೆಯಲ್ಲಿ ಅಪ್ಲೋಡ್ ಮಾಡಿದೆ. ಹಾಗೆಯೇ ಈ ಫೋಟೋವನ್ನು ಗಡಾಲ್ಪೆ ಶಿಖರದ ನ್ಯಾಷನಲ್ ಪಾರ್ಕ್ ನಲ್ಲಿ ಸೆರೆ ಹಿಡಿದಿದ್ದು ಅಲ್ಲಿನ ಅಳಿಲುಗಳು ಸಾಧಾರಣವಾಗಿ ಸಸ್ಯವನ್ನೇ ಸೇವಿಸುತ್ತವೆ. ಹಣ್ಣು, ಒಣ ಹಣ್ಣು ಇತ್ಯಾದಿ ಹೀಗೆ. ಆದರೆ, ಹಕ್ಕಿಯ ಮೊಟ್ಟೆ, ಹಲ್ಲಿ ಹಾಗೂ ಹಾವನ್ನು ಕೂಡ ಅಳಿಲುಗಳು ತಿನ್ನುತ್ತವೆ ಎಂಬುದು ಗೊತ್ತಾ? ಅಷ್ಟೇ ಅಲ್ಲದೆ ಈ ಫೊಟೋವನ್ನು ಕ್ಲಿಕ್ಕಿಸಿದ ಕೆಲ ಸಮಯದಲ್ಲೇ ಅಳಿಲು ಹಾವನ್ನು ಇಡಿಯಾಗಿ ತಿಂದು, ಕೊನೆಯದಾಗಿ ಎರಡು ಇಂಚಷ್ಟೇ ಉಳಿಸಿತ್ತು ಎಂದು ಫೋಟೋಗೆ ಕ್ಯಾಪ್ಷನ್ ಕೂಡ ಬರೆಯಲಾಗಿದೆ.

    https://www.facebook.com/nationalparkservice/photos/a.10151984491216389/10156047373616389

    ಹಫಿಂಗ್ಟನ್ ಪೋಸ್ಟ್ ಪ್ರಕಾರ, ಈ ಫೋಟೋ ಹತ್ತು ವರ್ಷದಷ್ಟು ಹಳೆಯದು. ಉದ್ಯಾನದ ರೇಂಜರ್ ವಿಲಿಯಂ ಲೆಗೆಟ್ 2009ರಲ್ಲಿ ಈ ಸೆರೆ ಹಿಡಿದ ಫೋಟೋವನ್ನು ಸೆರೆಹಿಡಿದಿದ್ದರು. ಆದರೆ ಮೇ 10ರಂದು ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. ಹಾವನ್ನು ನೋಡಿದ ಮೇಲೆ ಸ್ವರಕ್ಷಣೆಗೆ ಹೀಗೆ ಮಾಡಿದೆ ಎಂದು ಅಮೆರಿಕದ ನ್ಯಾಷನಲ್ ಪಾರ್ಕ್ ಸರ್ವೀಸ್ ಹೇಳಿದೆ.

    ಇಲ್ಲಿಯರೆಗೆ ಈ ಫೋಟೋವನ್ನು ಸುಮಾರು 3 ಸಾವಿರಕ್ಕೂ ಅಧಿಕ ಬಾರಿ ಷೇರ್ ಮಾಡಿದ್ದು, 7 ಸಾವಿರಕ್ಕೂ ಅಧೀಕ ಮಂದಿ ರಿಯಾಕ್ಟ್ ಮಾಡಿದ್ದಾರೆ. ತುಂಬಾ ಹಳೆಯ ಫೋಟೋವಾಗಿದ್ದರೂ ಈಗ ಇದು ನೆಟ್ಟಿಗರನ್ನು ಅಚ್ಚರಿಗೊಳಿಸುತ್ತಿದೆ.

  • ಮಿರಿಂಡಾ ಕುಡಿದು ದಾರಿ ಕಾಣದೆ ರಸ್ತೆಯಲ್ಲೇ ಹೊರಳಾಡಿದ ಹಾವು!

    ಮಿರಿಂಡಾ ಕುಡಿದು ದಾರಿ ಕಾಣದೆ ರಸ್ತೆಯಲ್ಲೇ ಹೊರಳಾಡಿದ ಹಾವು!

    ಚಿಕ್ಕಮಗಳೂರು: ಪ್ರವಾಸಿಗರು ಕುಡಿದು ಬಿಸಾಡಿದ ಬಾಟಲಿಯಲ್ಲಿದ್ದ ಮಿರಿಂಡಾ ಕುಡಿಯಲು ಹೋಗಿ ತಲೆಸಿಕ್ಕಿ ಹಾಕಿಕೊಂಡು ಹಾವು ದಾರಿ ಕಾಣದೆ ಕಂಗಾಲಾದ ಘಟನೆ ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಗ್ರಾಮದಲ್ಲಿ ನಡೆದಿದೆ.

    ರಸ್ತೆ ಬದಿಯಲ್ಲಿದ್ದ ಬಾಟಲಿಗೆ ತಲೆಹಾಕಿದ ಕೆರೆಹಾವು ತಲೆಯನ್ನ ಹೊರತೆಗೆಯಲಾಗದೆ ಸುಮಾರು ಅರ್ಧ ಗಂಟೆಗಳ ಕಾಲ ರಸ್ತೆ ಬದಿಯಲ್ಲೇ ಹೋರಾಟ ನಡೆಸಿದೆ. ಆದರೆ ಹಾವಿಗೆ ತಲೆ ಹೊರತೆಗೆಯಲು ಸಾಧ್ಯವಾಗಿಲ್ಲ. ರಸ್ತೆಯಲ್ಲಿ ಬಿದ್ದು, ಹೊರಳಾಡಿ ಏನೇ ಹರಸಾಹಸ ಪಟ್ಟರೂ, ಹಾವಿಗೆ ತಲೆಯನ್ನ ಬಾಟಲಿನಿಂದ ತೆಗೆಯಲು ಸಾಧ್ಯವಾಗಿಲ್ಲ.

    ಇದೇ ವೇಳೆ ಚಿಕ್ಕಮಗಳೂರಿನಿಂದ ಮಲ್ಲಂದೂರಿಗೆ ಹೋಗುತ್ತಿದ್ದ ವೈಲ್ಡ್ ಕ್ಯಾಟ್ ಸಿ ಮುಖ್ಯಸ್ಥ ಶ್ರೀದೇವ್ ಹಾವನ್ನ ಕಂಡು ಪತ್ನಿಯ ಜೊತೆಗೂಡಿ ಹಾವಿನ ತಲೆಯನ್ನ ಬಾಟಲಿಯಿಂದ ಹೊರತೆಗೆದಿದ್ದಾರೆ. ಶ್ರೀದೇವ್ ಅವರ ಪತ್ನಿ ಉದ್ದವಾದ ಕೋಲಿನಿಂದ ಹಾವಿನ ತಲೆ ಮೇಲಿದ್ದ ಬಾಟಲಿಗೆ ಒತ್ತಿ ಹಿಡಿದಿದ್ದಾರೆ. ಇದೇ ವೇಳೆ ಶ್ರೀದೇವ್ ಹಾವಿನ ಬಾಲ ಹಿಡಿದು ಎಳೆದಿದ್ದು, ಈ ಮೂಲಕ ಬಾಟಲಿಯಿಂದ ಹಾವನ್ನು ರಕ್ಷಿಸಿದ್ದಾರೆ.

  • ಹಾವು ಸ್ಕೂಟಿಯೊಳಗೆ ಸೇರ್ಕೊಂಡ್ರೆ ಹೀಗೂ ತೆಗೆಯಬಹುದು – ವಿಡಿಯೋ ನೋಡಿ

    ಹಾವು ಸ್ಕೂಟಿಯೊಳಗೆ ಸೇರ್ಕೊಂಡ್ರೆ ಹೀಗೂ ತೆಗೆಯಬಹುದು – ವಿಡಿಯೋ ನೋಡಿ

    ಚಿಕ್ಕಮಗಳೂರು: ಹಾವು ಕಪ್ಪೆ ನುಂಗಿ ಭಯದಿಂದ ಆ್ಯಕ್ಟೀವ್ ಹೊಂಡ ಸ್ಕೂಟಿಯೊಳಗೆ ಸೇರಿಕೊಂಡು ಸುಮಾರು ಒಂದು ಗಂಟೆಗಳ ಕಾಲ ಮನೆಯವರು ಹಾಗೂ ಉರಗ ತಜ್ಞನನ್ನ ಸತಾಯಿಸಿರುವ ಘಟನೆ ಚಿಕ್ಕಮಗಳೂರಿನ ಕಲ್ಯಾಣ ನಗರದ ಪುಷ್ಪಗಿರಿ ಲೇಔಟ್‍ನಲ್ಲಿ ನಡೆದಿದೆ.

    ಸಬ್ ಇನ್ಸ್ ಪೆಕ್ಟರ್ ಕುಮಾರಸ್ವಾಮಿ ಅವರ ಪತ್ನಿ ತಮ್ಮ ಸ್ಕೂಟಿ ಮನೆ ಮುಂದೆ ನಿಲ್ಲಿಸಿದ್ದರು. ಸ್ಕೂಟಿ ನಿಲ್ಲಿಸಿದ ಪಕ್ಕದಲ್ಲಿದ್ದ ಮೂರು ಕಪ್ಪೆಗಳಲ್ಲಿ ಒಂದನ್ನ ಹಾವು ನುಂಗಿದೆ. ಹಾವು ಕಪ್ಪೆಯನ್ನ ನುಂಗುವುದನ್ನು ಮನೆಯವರು ನೋಡಿ ಕೂಗಿಕೊಂಡು ಮನೆಯೊಳಗೆ ಹೋಗಿ ಬರುವಷ್ಟರಲ್ಲಿ ಹಾವು ಸ್ಕೂಟಿಯ ಹೆಡ್‍ಲೈಟ್ ಸೇರಿದೆ.

    ತಕ್ಷಣ ಮನೆಯವರು ಉರಗ ತಜ್ಞ ನರೇಶ್ ಅವರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಸ್ನೇಕ್ ನರೇಶ್ ಹರಸಾಹಸ ಪಟ್ಟರು  ಹಾವನ್ನ ತೆಗೆಯಲು ಸಾಧ್ಯವಾಗಲಿಲ್ಲ. ಸ್ಕೂಟಿಯ ಡೂಮ್ ಬಿಚ್ಚಲು ಮೆಕಾನಿಕ್‍ಗೆ ಕಾಲ್ ಮಾಡಿದ್ರೆ, ಆತ ಭಯ ಆಗುತ್ತೆ ಬಿಚ್ಚಲ್ಲ ಎಂದು ಬರಲಿಲ್ಲ.

    ಕೊನೆಗೆ ಸ್ನೇಕ್ ನರೇಶ್ ಸ್ಕೂಟಿಯನ್ನ ನಿರ್ಜನ ಪ್ರದೇಶಕ್ಕೆ ತಂದು ಮೋಟರ್ ಆನ್ ಮಾಡಿಕೊಂಡು ವೇಗವಾಗಿ ನೀರನ್ನ ಬಿಟ್ಟಿದ್ದಾರೆ. ಆಗ ಒಳಗಿದ್ದ ನಾಗರಹಾವು ಹೊರ ಬಂದಿದೆ. ತದನಂತರ ಹಾವನ್ನ ಸೆರೆ ಹಿಡಿದ ನರೇಶ್ ಹಾವನ್ನು ಸ್ಥಳೀಯ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.

  • ಇಲಿ ಹಿಡಿಯಲು ಹೋಗಿ ಪ್ರಾಣಕ್ಕೆ ಆಪತ್ತು ತಂದುಕೊಂಡಿದ್ದ ಹಾವಿನ ರಕ್ಷಣೆ

    ಇಲಿ ಹಿಡಿಯಲು ಹೋಗಿ ಪ್ರಾಣಕ್ಕೆ ಆಪತ್ತು ತಂದುಕೊಂಡಿದ್ದ ಹಾವಿನ ರಕ್ಷಣೆ

    ಉಡುಪಿ: ಆಹಾರ ಅರಸುತ್ತಾ ಮನೆಯ ಟೆರೇಸ್ ಹತ್ತಿದ್ದ ಕೆರೆ ಹಾವೊಂದು ಗೇಟಿನ ಮೇಲೆ ಬಿದ್ದು ಹೊಟ್ಟೆ ಸೀಳಿಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ.

    ನಗರದ ಮಣಿಪಾಲದ ರಾಘವೇಂದ್ರ ನಾಯ್ಕ್ ಅವರ ಮನೆಗೆ ಇಲಿಯ ಬೆನ್ನತ್ತಿದ ಕೆರೆ ಹಾವು ಬಂದಿತ್ತು. ಇಲಿಯು ಮನೆಯ ಟೆರೇಸ್ ಏರಿ ಹಾರಿ ಹೋಗಿದೆ. ಇಲಿ ಬೆನ್ನಟ್ಟಿದ್ದ ಹಾವು ರಪ್ಪಂತ ಕೆಳಗೆ ಬಿದ್ದಿದೆ. ಗೇಟ್ ಮೇಲೆ ಬಿದ್ದ ಪರಿಣಾಮ ಹಾವಿನ ಹೊಟ್ಟೆ ಎರಡು ಕಡೆ ಸೀಳಿದೆ. ಚೂಪಾದ ರಾಡ್ ಹಾವಿನ ಹೊಟ್ಟೆಗೆ ಹೊಕ್ಕಿದೆ. ಹಾವು ಮೇಲೆ ಎದ್ದು ಬರದಂತಾಗಿದೆ.

    ಗಂಭೀರವಾಗಿ ಗಾಯಗೊಂಡಿದ್ದ ಹಸಿದ ಗಂಡು ಕೆರೆ ಹಾವು ವಿಲ ವಿಲ ಒದ್ದಾಡಿತು. ಹಾವಿನ ನೋವು ಕಂಡ ಮನೆಯವರ ಉರಗ ತಜ್ಞ ಗುರುರಾಜ್ ಸನಿಲ್ ಅವರಿಗೆ ಕರೆ ಮಾಡಿದ್ದಾರೆ. ಗುರುರಾಜ್ ತಕ್ಷಣ ಸ್ಥಳಕ್ಕೆ ದೌಡಾಯಿಸಿ ಸ್ಟಿಕ್ ಹಿಡಿದು ಹಾವನ್ನು ರಕ್ಷಿಸುವ ಪ್ರಯತ್ನ ಶುರು ಮಾಡಿದರು. ನೋವಿನಿಂದ ಅರೆ ಜೀವವಾಗಿದ್ದ ಹಾವು ಗುರುರಾಜ್ ಅವರಿಗೆ ನಾಲ್ಕೈದು ಬಾರಿ ಕಚ್ಚಿದೆ. ಕೆರೆ ಹಾವಿನಲ್ಲಿ ವಿಷ ಇಲ್ಲದೆ ಇರುವುದರಿಂದ ಗುರುರಾಜ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಾವನ್ನು ಮನೆಗೆ ತಂದಿರುವ ಗುರುರಾಜ್ ಮದ್ದು ಹಚ್ಚಿ ಆರೈಕೆ ಮಾಡುತ್ತಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಗುರುರಾಜ್, ಬೇರೆ ವಿಷಪೂರಿತ ಹಾವಾಗಿದ್ದರೆ ರಕ್ಷಣೆಗೆ ಸಾಕಷ್ಟು ಮುನ್ನೆಚ್ಚರಿಕೆ ಅಗತ್ಯವಿತ್ತು. ಕೆರೆ ಹಾವಾಗಿದ್ದರಿಂದ ನೇರವಾಗಿ ಕೈಯಿಂದ ಹಿಡಿದೆ. ಚಿಕಿತ್ಸೆ ನಂತರ ಬಿಟ್ಟು ಬಿಡುತ್ತೇನೆ ಎಂದು ಹೇಳಿದರು.

    ಕೆರೆ ಹಾವೆಂಬ ತಾತ್ಸಾರ ತೋರದೆ, ಅದರ ರಕ್ಷಣೆಗೆ ಕಾಳಜಿ ತೋರಿದ ರಾಘವೇಂದ್ರ ನಾಯ್ಕ್ ಅವರ ಮನೆಮಂದಿಯ ಕಾಳಜಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

  • ಹಾವುಕಚ್ಚಿತ್ತೆಂದು ರೊಚ್ಚಿಗೆದ್ದು ಹಾವನ್ನು ಕಚ್ಚಿ ಕೊಂದು ಮಸಣ ಸೇರಿದ!

    ಹಾವುಕಚ್ಚಿತ್ತೆಂದು ರೊಚ್ಚಿಗೆದ್ದು ಹಾವನ್ನು ಕಚ್ಚಿ ಕೊಂದು ಮಸಣ ಸೇರಿದ!

    ವಡೋದರಾ: ಸಾಮಾನ್ಯವಾಗಿ ಹಾವು ಮನುಷ್ಯರಿಗೆ ಕಚ್ಚಿರೋದನ್ನ ಕೇಳಿರುತ್ತೀರ. ಆದರೆ ಗುಜರಾತ್‍ನಲ್ಲಿ 60 ವರ್ಷದ ವೃದ್ಧರೊಬ್ಬರು ತಮಗೆ ಹಾವು ಕಚ್ಚಿತೆಂದು ಸಿಟ್ಟಿಗೆದ್ದು ಹಾವನ್ನು ಕಚ್ಚಿ ಕೊಂದು ತಾವು ಮೃತಪಟ್ಟಿದ್ದಾರೆ.

    ಹೌದು. ವಿಚಿತ್ರ ಎನಿಸಿದರು ಇದು ಸತ್ಯ. ಗುಜರಾತ್‍ನ ಅಜನ್ವಾ ಗ್ರಾಮದಲ್ಲಿ ಶನಿವಾರ ಇಂತಹದೊಂದು ಘಟನೆ ನಡೆದಿದೆ. ಅಜನ್ವಾ ಗ್ರಾಮದ ನಿವಾಸಿಯಾದ ಪರ್ವತ್ ಬಾಲಾ ಬಾರಿಯಾ(60) ಇಂತಹ ವಿಚಿತ್ರ ಕೆಲಸಕ್ಕೆ ಕೈ ಹಾಕಿದ್ದರು. ಎಂದಿನಂತೆ ಶನಿವಾರದಂದು ಪರ್ವತ್ ಬಾಲಾ ತಮ್ಮ ಗದ್ದೆಯಲ್ಲಿ ನಿಂತು ಲಾರಿಗಳಿಗೆ ಮೆಕ್ಕೆ ಜೋಳವನ್ನು ಲೋಡ್ ಮಾಡಿಸುತ್ತಿದ್ದರು. ಈ ವೇಳೆ ಸ್ಥಳದಲ್ಲಿ ಹಾವೊಂದು ಕಾಣಿಸಿಕೊಂಡಿದ್ದು, ತಕ್ಷಣ ಕೆಲಸ ಮಾಡುತ್ತಿದ್ದವರೆಲ್ಲ ಹಾವನ್ನು ಕಂಡು ಓಡಿಹೋಗಿದ್ದಾರೆ.

    ಆದರೆ ಪರ್ವತ್ ಬಾಲಾ ಮಾತ್ರ ಸ್ಥಳದಲ್ಲೇ ನಿಂತಿದ್ದರು. ಆಗ ಹಾವು ಅವರ ಕಾಲಿಗೆ ಕಚ್ಚಿದೆ. ಈ ವೇಳೆ ತನ್ನ ಕೆಲಸಕ್ಕೆ ಅಡ್ಡಿಪಡಿಸಿದ್ದಲ್ಲದೇ, ತನಗೆ ಈ ಹಾವು ಕಚ್ಚಿದೆ ಎಂದು ಕೋಪಗೊಂಡ ಅವರು ಹಾವನ್ನು ಹಿಡಿದು ವಾಪಸ್ ಅದಕ್ಕೆ ಕಚ್ಚಿ ಸಾಯಿಸಿದ್ದಾರೆ.

    ಬಳಿಕ ಪರ್ವತ್ ಬಾಲಾರನ್ನು ಲುನಾವಡಾ ಪಟ್ಟಣದ ಆಸ್ಪತ್ರೆಗೆ ದಾಖಲಿಸಲಾಗಿತ್ತು, ನಂತರ ಹೆಚ್ಚಿನ ಚಿಕಿತ್ಸೆಗೆ ಗೋಧ್ರಾದ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವೃದ್ಧ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾರೆ. ಅಲ್ಲದೆ ಈ ಸಂಬಂಧ ಅಜನ್ವಾ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

  • ಹಾವು ಕಚ್ಚಿ ರೈತ ಮಹಿಳೆ ಸಾವು

    ಹಾವು ಕಚ್ಚಿ ರೈತ ಮಹಿಳೆ ಸಾವು

    ಮಂಡ್ಯ: ಜಮೀನಿಗೆ ನೀರು ಹಾಯಿಸುವಾಗ ಹಾವು ಕಚ್ಚಿ ರೈತ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಪಾಂಡವಪುರ ತಾಲೂಕಿನಲ್ಲಿ ನಡೆದಿದೆ.

    ಮೃತ ದುರ್ದೈವಿ ಮಹಿಳೆಯನ್ನು 50 ವರ್ಷದ ಸಾವಿತ್ರಮ್ಮ ಎಂದು ಗುರುತಿಸಲಾಗಿದೆ. ಇವರು ಪಾಂಡವಪುರ ತಾಲೂಕಿನ ಲಕ್ಷ್ಮೀಸಾಗರ ಗ್ರಾಮದ ನಿವಾಸಿಯಾಗಿದ್ದಾರೆ.

    ಸಾವಿತ್ರಮ್ಮ ಇಂದು ಬೆಳಗ್ಗಿನ ಜಾವ ತಮ್ಮ ಜಮೀನಿನಲ್ಲಿ ಬೆಳೆದಿದ್ದ ಭತ್ತದ ಬೆಳೆಗೆ ನೀರು ಹಾಯಿಸಲು ಗದ್ದೆಗೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ಹಾವು ಕಚ್ಚಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಿಷಯ ತಿಳಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

    ಈ ಸಂಬಂಧ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.