Tag: ಹಾವು

  • ಬೈಕಿನಲ್ಲಿ ಅಡಗಿದ ಹಾವು – ಇಡೀ ಬೈಕನ್ನೇ ಬಿಚ್ಚಿದ ಯುವಕರು

    ಬೈಕಿನಲ್ಲಿ ಅಡಗಿದ ಹಾವು – ಇಡೀ ಬೈಕನ್ನೇ ಬಿಚ್ಚಿದ ಯುವಕರು

    ಕೊಪ್ಪಳ: ಬೈಕ್‍ನಲ್ಲಿ ಅಡಗಿದ ಹಾವನ್ನು ಹೊರ ತೆಗೆಯಲು ಇಡೀ ಬೈಕ್‍ನ ಬಿಡಿ ಭಾಗಗಳನ್ನೇ ಬಿಚ್ಚಿರುವ ಘಟನೆ ಕೊಪ್ಪಳದ ಗಂಗಾವತಿಯ ನೀಲಕಂಠೇಶ್ವರ ದೇವಸ್ಥಾನದ ಬಳಿ ನಡೆದಿದೆ.

    ಇಂದು ಬೆಳಗ್ಗೆ ನಗರದ ಅಭಿಷೇಕ್ ಅವರಿಗೆ ಸೇರಿದ ಬೈಕ್‍ನಲ್ಲಿ ಹಾವೊಂದು ಸೇರಿಕೊಂಡಿದೆ. ಹಿಂಬದಿಯಲ್ಲಿ ಬರುತ್ತಿದ್ದ ಪ್ರಯಾಣಿಕರು ಇದನ್ನು ಗಮನಿಸಿ ನಂತರ ಬೈಕ್ ಸವಾರನಿಗೆ ತಿಳಿಸಿದ್ದಾರೆ. ಬೈಕ್‍ನಲ್ಲಿ ಹಾವು ಇರುವುದನ್ನು ತಿಳಿದು ಕಕ್ಕಾಬಿಕ್ಕಿಯಾದ ಅಭಿಷೇಕ್ ತಕ್ಷಣ ಬೈಕ್ ನಿಲ್ಲಿಸಿದ್ದಾರೆ.

    ಅಲ್ಲಿನ ಸ್ಥಳೀಯರ ಸಹಾಯ ಪಡೆದು ಹಾವನ್ನು ಹುಡುಕಲು ಪ್ರಯತ್ನಿಸಿದ್ದಾರೆ. ಆದರೆ ಅರ್ಧಗಂಟೆಗೂ ಹೆಚ್ಚು ಕಾಲ ಬೈಕ್‍ನಲ್ಲಿ ಅವಿತ ಹಾವು ಇವರ ಕಣ್ಣಿಗೆ ಕಂಡಿಲ್ಲ. ಇದರಿಂದ ಬೈಕ್ ಸವಾರ ಮತ್ತು ಸ್ಥಳೀಯ ಯುವಕರು ಸೇರಿ ಬೈಕ್‍ನ ಎಲ್ಲ ಬಿಡಿಭಾಗಗಳನ್ನು ಬಿಚ್ಚಿದ್ದಾರೆ. ನಂತರ ಬೈಕ್‍ನಿಂದ ಹೊರಬಂದ ಹಾವು ಚಂಗನೆ ಜಿಗಿದು ಹತ್ತಿರದ ಪೊದೆಯ ಒಳಗಡೆ ಹೋಗಿದೆ. ಬೈಕಿನಿಂದ ಹಾವು ಹೊರ ಬಂದಿದ್ದನ್ನು ಕಂಡ ಬೈಕ್ ಸವಾರ ಕೊನೆಗೂ ನಿಟ್ಟುಸಿರು ಬಿಟ್ಟಿದ್ದಾರೆ.

  • ವಿಡಿಯೋ ಮಾಡಲು ಹೋದ ಉರಗ ತಜ್ಞನಿಗೆ ಕಚ್ಚಿದ ನಾಗರಹಾವು

    ವಿಡಿಯೋ ಮಾಡಲು ಹೋದ ಉರಗ ತಜ್ಞನಿಗೆ ಕಚ್ಚಿದ ನಾಗರಹಾವು

    ಧಾರವಾಡ: ಹಾವು ಹಿಡಿಯುವವನಿಗೇ ನಾಗರಹಾವು ಕಡಿದ ಘಟನೆ ಧಾರವಾಡದಲ್ಲಿ ನಡೆದಿದೆ.

    ಕಳೆದ ಜುಲೈ 9 ರಂದು ಧಾರವಾಡದ ನೆಹರೂನಗರ ನಿವಾಸಿಯಾದ ಉರಗ ತಜ್ಞ ನಾಸಿರ್ ಗಾಂಧಿನಗರದ ಮನೆಯಲ್ಲಿ ಒಂದು ನಾಗರ ಹಾವನನ್ನು ಹಿಡಿದಿದ್ದನು. ಬಳಿಕ ಅದನ್ನು ಅರಣ್ಯದಲ್ಲಿ ಬಿಡಲು ಹೋದ ವೇಳೆ ಆ ಹಾವಿನ ಬಗ್ಗೆ ಕೆಲ ಮಾಹಿತಿ ಹೇಳುವ ಸೆಲ್ಫಿ ವಿಡಿಯೊ ಮಾಡುವಾಗ, ಆ ಹಾವು ಅವನನ್ನು ಕಚ್ಚಿದೆ.

    ನಾಲ್ಕು ನಿಮಿಷದ ಸೆಲ್ಫಿ ವಿಡಿಯೋ ಮಾಡುವಾಗ ಸ್ವಲ್ಪ ಅಜಾಗರೂಕತೆ ವಹಿಸಿದ್ದರಿಂದ ನಾಸಿರ್ ಆಸ್ಪತ್ರೆ ಸೇರಿ ಜೀವನ ಮರಣದ ಮಧ್ಯೆ ಹೋರಾಟ ಮಾಡಿ ಈಗ ಬದುಕಿ ಬಂದಿದ್ದಾನೆ. ಸದ್ಯ ಅವನು ಆಸ್ಪತ್ರೆಯಿಂದ ಬಂದ ಮೇಲೆ ಮತ್ತೊಂದು ವಿಡಿಯೋ ಮಾಡಿ, ಹಾವು ಹಿಡಿಯುವುದು ಎಷ್ಟು ಕಷ್ಟ ಎಂದು ವಿಡಿಯೋ ಮಾಡಿದ್ದಾನೆ.

    ಹಾವು ಕಡಿದ ದಿನ ಅವನು ಕೇವಲ 5 ನಿಮಿಷದಲ್ಲಿ ಜಿಲ್ಲಾ ಆಸ್ಪತ್ರೆಗೆ ಹೋಗಿದ್ದ, ನಂತರ ಅವನಿಗೆ ಹುಬ್ಬಳ್ಳಿ ಖಾಸಗಿ ಆಸ್ಪತ್ರೆಯಲ್ಲಿ ಎರಡೂವರೆ ಲಕ್ಷ ಖರ್ಚು ಮಾಡಿ ಉಳಿಸಿ ತರಲಾಗಿದೆ. ಈ ಬಗ್ಗೆ ಆತ ತನ್ನ ವಿಡಿಯೋದಲ್ಲಿ ಹೇಳಿಕೊಂಡಿದ್ದು, ಹಾವು ಬದುಕಿಸಲು ಹೋಗಿ ಆತನೇ ಹಾವಿನ ದವಡೆಗೆ ಸಿಕ್ಕ ಬಗ್ಗೆ ಹೇಳಿದ್ದಾನೆ. ಸದ್ಯ ಅವನು ಹಾವು ಹಿಡಿಯುವುದು ನಿಲ್ಲಿಸಿದ್ದು, ಮುಂದೆ ಇನ್ನು ಸ್ವಲ್ಪ ಸುಧಾರಿಸಿದ ಮೇಲೆ ಮತ್ತೆ ಹಾವನ್ನು ಹಿಡಿಯುವುದಾಗಿ ಹೇಳಿದ್ದಾನೆ.

  • ಪೊಲೀಸ್ ಠಾಣೆಗೆ ಬಂದು ಟೇಬಲ್ ಅಡಿಯಲ್ಲಿ ಕುಳಿತ ಹಾವು

    ಪೊಲೀಸ್ ಠಾಣೆಗೆ ಬಂದು ಟೇಬಲ್ ಅಡಿಯಲ್ಲಿ ಕುಳಿತ ಹಾವು

    ಶಿವಮೊಗ್ಗ: ನಾಲ್ಕೂವರೆ ಅಡಿಯ ಉದ್ದದ ಹಾವು ಪೊಲೀಸ್ ಠಾಣೆಯಲ್ಲಿ ಪ್ರತ್ಯಕ್ಷವಾಗಿತ್ತು. ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಗೆ ಬಂದ ವಿಶೇಷ ಅತಿಥಿಯನ್ನು ಕಂಡು ಒಂದು ಕ್ಷಣ ಪೊಲೀಸರೇ ಭಯಭೀತರಾಗಿದ್ದರು.

    ಜಯನಗರ ಠಾಣೆಯಲ್ಲಿ ಕೇರೆ ಹಾವು ಪ್ರತ್ಯಕ್ಷವಾಗಿತ್ತು. ಠಾಣೆಯೊಳಗೆ ಪ್ರವೇಶಿಸಿದ್ದ ಹಾವು ಠಾಣೆಯ ಟೇಬಲ್ ಕೆಳಗೆ ಅವಿತು ಕುಳಿತಿತ್ತು. ಹಾವನ್ನು ಗಮನಿಸಿದ ಪೊಲೀಸ್ ಸಿಬ್ಬಂದಿ ಭಯಭೀತರಾಗಿ ಠಾಣೆಯಿಂದ ಹೊರ ಬಂದಿದ್ದಾರೆ. ಕೂಡಲೇ ಸ್ನೇಕ್ ಕಿರಣ್ ಗೆ ದೂರವಾಣಿ ಕರೆ ಮಾಡಿ ಠಾಣೆಗೆ ಹಾವು ಬಂದಿರುವ ವಿಷಯ ತಿಳಿಸಿದ್ದು, ಹಾವು ಹಿಡಿದುಕೊಂಡು ಹೋಗುವಂತೆ ತಿಳಿಸಿದ್ದಾರೆ.

    ಠಾಣೆಗೆ ಆಗಮಿಸಿದ ಸ್ನೇಕ್ ಕಿರಣ್ ಟೇಬಲ್ ಕೆಳಗೆ ಅವಿತಿದ್ದ ಹಾವನ್ನು ಸುರಕ್ಷಿತವಾಗಿ ಹಿಡಿದು ರಕ್ಷಣೆ ಮಾಡಿ ಅರಣ್ಯ ಸಿಬ್ಬಂದಿಯ ಸಹಾಯದೊಂದಿಗೆ ಕಾಡಿಗೆ ಬಿಟ್ಟಿದ್ದಾರೆ. ಈ ವೇಳೆ ಮಾತನಾಡಿದ ಸ್ನೇಕ್ ಕಿರಣ್, ಇದೊಂದು ವಿಷ ರಹಿತ ಹಾವು, ಆಹಾರ ಅರಸಿ ಠಾಣೆಯತ್ತ ಬಂದಿದೆ. ಠಾಣೆಯಲ್ಲಿ ಇಲಿಗಳು ಇದಿದ್ದರಿಂದ ಬಂದು ಟೇಬಲ್ ಅಡಿಯಲ್ಲಿ ಕುಳಿತಿತ್ತು. ಶಿವಮೊಗ್ಗ ನಗರದಲ್ಲಿ ಎಲ್ಲೇ ಹಾವು ಕಾಣಿಸಿಕೊಂಡರೇ ನನಗೆ ಮಾಹಿತಿ ನೀಡಿ. ಭಯದಲ್ಲಿ ಅವುಗಳ ಪ್ರಾಣಕ್ಕೆ ಅಪಾಯ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

  • ಫೋನ್‍ನಲ್ಲಿ ಮಾತನಾಡುತ್ತಾ ಬೆಡ್ ಮೇಲಿದ್ದ ಜೋಡಿ ಹಾವಿನ ಮೇಲೆ ಕುಳಿತ ಮಹಿಳೆ ಸಾವು

    ಫೋನ್‍ನಲ್ಲಿ ಮಾತನಾಡುತ್ತಾ ಬೆಡ್ ಮೇಲಿದ್ದ ಜೋಡಿ ಹಾವಿನ ಮೇಲೆ ಕುಳಿತ ಮಹಿಳೆ ಸಾವು

    ಲಕ್ನೋ: ಫೋನ್‍ನಲ್ಲಿ ಮಾತನಾಡುತ್ತಾ ಬೆಡ್ ಮೇಲಿದ್ದ ಜೋಡಿ ಹಾವುಗಳ ಮೇಲೆ ಕುಳಿತ ಮಹಿಳೆ ಸಾವನ್ನಪ್ಪಿರುವ ಭಯಾನಕ ಘಟನೆ ಗೋರಖ್‍ಪುರದ ರಿಯಾನವ್ ಗ್ರಾಮದಲ್ಲಿ ನಡೆದಿದೆ.

    ಥೈಲ್ಯಾಂಡ್‍ನಲ್ಲಿ ಕೆಲಸ ಮಾಡುತ್ತಿರುವ ಜೈ ಸಿಂಗ್ ಯಾದವ್ ಅವರ ಪತ್ನಿ ಗೀತಾ ತನ್ನ ಪತಿಯೊಂದಿಗೆ ಫೋನ್‍ನಲ್ಲಿ ಮಾತನಾಡುತ್ತಿದ್ದರು. ಜೋಡಿ ಹಾವುಗಳು ಮನೆಯೊಳಗೆ ಪ್ರವೇಶಿಸಿ ತನ್ನ ಬೆಡ್ ರೂಂನ ಬೆಡ್ ಕವರ್ ಒಳಗಡೆ ಸೇರಿಕೊಂಡಿರುವುದನ್ನು ಅರಿಯದ ಗೀತಾ ತನ್ನ ಗಂಡನೊಂದಿಗೆ ಫೋನ್‍ನಲ್ಲಿ ಮಾತನಾಡುತ್ತಾ ತನ್ನ ರೂಂಗೆ ತೆರಳಿ ಬೆಡ್ ಮೇಲೆ ಕುಳಿತಿದ್ದಾರೆ.

    ತಕ್ಷಣವೇ ಗೀತಾ ಅವರನ್ನು ಕಚ್ಚಿದೆ. ಹಾವು ಕಚ್ಚುತ್ತಿದ್ದಂತೆ ಕೆಲವೇ ನಿಮಿಷಗಳಲ್ಲಿ ಗೀತಾ ಪ್ರಜ್ಞಾಹೀನರಾಗಿ ರೂಂನಲ್ಲಿ ಬಿದ್ದಿದ್ದಾರೆ.

    ಮನೆಯಲ್ಲಿದ್ದ ಕುಟುಂಬದ ಸದಸ್ಯರು ತಕ್ಷಣವೇ ಗೀತಾರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ವೇಳೆ ಗೀತಾ ಸಾವನ್ನಪ್ಪಿದ್ದಾರೆ. ಕುಟುಂಬದ ಸದಸ್ಯರು ಹಾಗೂ ಪಕ್ಕದ ಮನೆಯವರು ಗೀತಾ ಅವರ ಬೆಡ್ ರೂಂಗೆ ತೆರಳಿ ಗಮನಿಸಿದಾಗ ಬೆಡ್ ಮೇಲೆ ಜೋಡಿ ಹಾವುಗಳು ಇರುವುದನ್ನು ನೋಡಿದ್ದಾರೆ. ಕೋಪಗೊಂಡ ಸ್ಥಳೀಯರು ಹಾವುಗಳನ್ನು ಹೊಡೆದು ಸಾಯಿಸಿದ್ದಾರೆ.

    ಸಾಧಾರಣವಾಗಿ ಹಾವುಗಳು ಮಿಲನ ಕ್ರಿಯೆ ನಡೆಸುತ್ತಿದ್ದಾಗ ಮಾತ್ರ ಒಟ್ಟಾಗಿ ಕಾಣುತ್ತದೆ. ಮಿಲನ ಕ್ರಿಯೆ ನಡೆಸುತ್ತಿದ್ದಾಗ ಗೀತಾ ಕುಳಿತ್ತಿದ್ದರಿಂದ ಸಿಟ್ಟಿಗೆದ್ದು ಹಾವುಗಳು ಕಚ್ಚಿರಬಹುದು ಎಂದು ಪಶುವೈದ್ಯಕೀಯ ತಜ್ಞರು ಶಂಕಿಸಿದ್ದಾರೆ.

  • ನನ್ನ ಕೆಣಕಿದ್ರೆ ಹುತ್ತದಲ್ಲಿರೋ ನಾಗರಹಾವನ್ನು ಕೆಣಕಿದಂತೆ – ಎಂಟಿಬಿ ಗುಡುಗು

    ನನ್ನ ಕೆಣಕಿದ್ರೆ ಹುತ್ತದಲ್ಲಿರೋ ನಾಗರಹಾವನ್ನು ಕೆಣಕಿದಂತೆ – ಎಂಟಿಬಿ ಗುಡುಗು

    ಬೆಂಗಳೂರು: ನನ್ನ ಕೆಣಕಿದರೆ ಹುತ್ತದಲ್ಲಿರೋ ನಾಗರಹಾವನ್ನು ಕೆಣಕಿದಂತೆ. ಮಲಗಿರೋ ಹಾವನ್ನು ಕೆಣಕಿದರೆ ಕಚ್ಚೋದು ಗ್ಯಾರಂಟಿ ಎಂದು ಹೊಸಕೋಟೆಯಲ್ಲಿ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಗುಡುಗಿದ್ದಾರೆ.

    ತನ್ನ ಜನ್ಮದಿನ ಪ್ರಯುಕ್ತ ಮಹಿಳೆಯರಿಗೆ ಸೀರೆ ಹಂಚುತ್ತಿರುವ ಎಂಟಿಬಿ ನಾಗರಾಜ್ ಕಾರ್ಯಕ್ರಮದಲ್ಲಿ ಮಾತನಾಡಿ, ನಾನು ಯಾರಿಗೂ ಭಯ ಬೀಳಲ್ಲ, ದೇವರಿಗೆ ಮತ್ತು ಮತದಾರರಿಗೆ ಮಾತ್ರ ಭಯ ಬೀಳುತ್ತೇನೆ ಎಂದು ಹೇಳಿದರು.

    5 ರಿಂದ 10 ಬಾರಿ ಮಂತ್ರಿ ಆಗಿ ಲೂಟಿ ಹೊಡೆದಿರುವ ದಾಖಲೆ ನನ್ನ ಹತ್ತಿರ ಇದೆ. ಅಧಿಕಾರವಿದ್ದಾಗ ಎಷ್ಟು ಆಸ್ತಿ ಮಾಡಿದ್ದೀರಿ ಎಂಬ ದಾಖಲೆ ಕೂಡ ಇದೆ. ನನ್ನ ಬಗ್ಗೆ ದಾಖಲೆ ಇದ್ದರೆ ಮಾಧ್ಯಮಗಳ ಮುಂದೆ ತಗೊಂಡು ಬನ್ನಿ. ಐಟಿ ಅಧಿಕಾರಿಗಳಿಗೆ ಮತ್ತು ಮೀಡಿಯಾಗೆ ಭಯ ಬಿದ್ದು ಎಂಟಿಬಿ ರಾಜೀನಾಮೆ ಕೊಟ್ಟ ಎನ್ನುತ್ತಾರೆ. ಆದರೆ ನಾನು ಯಾರಿಗೂ ಭಯ ಬೀಳಲ್ಲ, ದೇವರು ಮತ್ತು ಮತದಾರರಿಗೆ ಮಾತ್ರ ಭಯ ಬೀಳುತ್ತೇನೆ ಎಂದು ತಿಳಿಸಿದರು.

    30 ಕೋಟಿ ತಗೊಂಡು ಬಿಜೆಪಿಗೆ ಹೋದ, ಮಗನ ಉದ್ಧಾರ ಮಾಡೋಕೆ ಹೋದ ಎಂದು ದೊಡ್ಡ ದೊಡ್ಡ ನಾಯಕರು ಹೇಳುತ್ತಾರೆ. ಆದರೆ ನಾನು ಆ ದೊಡ್ಡ ನಾಯಕರ ಕಥೆ ತೆಗೆದರೆ ಅವರ ಕಥೆ ಮುಗಿಯುತ್ತೆ. ನಾನು ಯಾವ ಪುರುಷಾರ್ಥಕ್ಕೆ ಸುಳ್ಳು ಹೇಳಬೇಕು. ನನಗೆ ರಾಜಕೀಯದಿಂದ ಬೇಸರ ಆಗಿದೆ. ಕಳಪೆ, ಕಲ್ಮಶ ಮತ್ತು ಸುಳ್ಳು ರಾಜಕೀಯದಿಂದ ಬೇಸತ್ತಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದರು.

  • ಧಾರವಾಡದಲ್ಲೊಂದು ವಿಸ್ಮಯ – ಮನೆಯ ಗೋಡೆಯ ಮೇಲೆ ಹುತ್ತ

    ಧಾರವಾಡದಲ್ಲೊಂದು ವಿಸ್ಮಯ – ಮನೆಯ ಗೋಡೆಯ ಮೇಲೆ ಹುತ್ತ

    ಧಾರವಾಡ: ನಾಗರ ಪಂಚಮಿ ಬಂದಾಗ ಹುತ್ತಗಳನ್ನು ಹುಡುಕಿಕೊಂಡು ಹೋಗಿ ಪೂಜೆ ಮಾಡುವುದು ಸಾಮಾನ್ಯವಾಗಿದೆ. ಆದರೆ ಜಿಲ್ಲೆಯ ಮುರಕಟ್ಟಿ ಗ್ರಾಮದಲ್ಲಿರುವ ಮನೆಯೊಂದರ ಗೋಡೆಯ ಮೇಲೆಯೇ ಹುತ್ತ ಬೆಳೆಯುತ್ತಿದ್ದು, ವಿಸ್ಮಯ ಮೂಡಿಸಿದೆ.

    ಪಂಚಮಿ ಸಂದರ್ಭದಲ್ಲಿ ಜನರು ಇವರ ಮನೆಗೆ ತಂಡೋಪತಂಡವಾಗಿ ಬಂದು ಪೂಜೆ ಸಲ್ಲಿಸುತ್ತಿದ್ದಾರೆ. ಧಾರವಾಡ ಹಳಿಯಾಳ ರಸ್ತೆಯಲ್ಲಿರುವ ಮುರಕಟ್ಟಿ ಗ್ರಾಮದ ಪಾರೀಶನಾಥ ದುಗ್ಗನಕೇರಿ ಎಂಬವರ ಮನೆಯಲ್ಲಿಯೇ ಕಳೆದ 20 ವರ್ಷಗಳಿಂದ ಹುತ್ತ ಬೆಳೆಯುತ್ತಿದೆ.

    ಸಾಮಾನ್ಯವಾಗಿ ಹುತ್ತಗಳು ನೆಲದ ಆಳದಿಂದ ಬೆಳೆಯುತ್ತವೆ. ಆದರೆ ಇಲ್ಲಿ ವಿಚಿತ್ರ ಅಂದರೆ ಗೋಡೆಯ ಮೇಲ್ಭಾಗದಿಂದ ಹುತ್ತ ಕೆಳಗಿನ ಭಾಗದತ್ತ ಬೆಳೆಯುತ್ತ ಬರುತ್ತಿದೆ. ಇಲ್ಲಿ ನಾಗರಹಾವು ಕೂಡ ಇದ್ದು, ಇದೇ ಮನೆಯಲ್ಲಿ ಹುತ್ತದ ಜೊತೆಯೇ ಈ ಮನೆಯ ಸದಸ್ಯರು ವಾಸಿಸುತ್ತಿದ್ದಾರೆ. ಆದರೆ ಇದುವರೆಗೂ ಹಾವು ಯಾವುದೇ ತೊಂದರೆ ಮಾಡಿಲ್ಲ. ನಾಗರಹಾವು ಮನೆಯಲ್ಲಿ ಓಡಾಡಿಕೊಂಡಿದೆ. ಮನೆಯ ಸದಸ್ಯರು ಕೂಡ ಹುತ್ತದ ಬಳಿ ಯಾವಾಗಲೂ ಹಾಲು ತುಂಬಿದ ಲೋಟಗಳನ್ನು ಇಟ್ಟು ಬಿಡುತ್ತಾರೆ.

    ಈ ಹುತ್ತ ಬೆಳೆದಂತೆ ನಮ್ಮ ಕುಟುಂಬದವರಿಗೂ ಒಳ್ಳೆದಾಗುತ್ತಾ ಬಂದಿದೆ. 20 ವರ್ಷಗಳ ಹಿಂದೆ ಈ ಗ್ರಾಮದ ಮಾರ್ಗವಾಗಿ ಹೋಗುತ್ತಿದ್ದ ಸ್ವಾಮೀಜಿಯೊಬ್ಬರು ನಮ್ಮ ಮನೆಯ ಕಟ್ಟೆಯ ಮೇಲೆ ಕುಳಿತು ಅಲ್ಲೇ ಉಳಿದುಕೊಂಡಿದ್ದರು. ಜೊತೆಗೆ ಪ್ರವಚನ ನಡೆಸಿಕೊಟ್ಟಿದ್ದರು, ಆ ಸ್ವಾಮೀಜಿ ಪ್ರವಚನ ನುಡಿದಂತೆ ಈ ಹುತ್ತ ಬೆಳೆದಿದೆ. ಸ್ವಾಮೀಜಿ ವರ್ಷದ ಬಳಿಕ ಇಲ್ಲಿಂದ ಹೋದರು. ಆದರೆ ಹುತ್ತ ಮಾತ್ರ ಇಂದಿಗೂ ಬೆಳೆಯುತ್ತಲೇ ಇದೆ ಎಂದು ಮನೆಯ ಮಾಲೀಕ ಪಾರೀಶನಾಥ ತಿಳಿಸಿದ್ದಾರೆ.

    ಹುತ್ತಕ್ಕೆ ಯಾವುದೇ ಧಕ್ಕೆ ಮಾಡದೆ ಮನೆಯ ಸದಸ್ಯರು ಕೂಡ ಕಾಪಾಡಿಕೊಂಡು ಬರುತ್ತಿದ್ದಾರೆ. ಅಮವಾಸ್ಯೆ ಮತ್ತು ಹುಣ್ಣಿಮೆಗೆ ವಿಶೇಷ ಪೂಜೆ ಮಾಡುತ್ತಾರೆ. ನಾಗರ ಪಂಚಮಿ ಆಗಿದ್ದರಿಂದ ಮುರಕಟ್ಟಿ ಗ್ರಾಮ ಮಾತ್ರವಲ್ಲದೇ ಸುತ್ತಮುತ್ತಲಿನ ಗ್ರಾಮಸ್ಥರು ಸಹ ಆಗಮಿಸಿ ಈ ಹುತ್ತಕ್ಕೆ ಹಾಲೆರೆಯುತ್ತಿದ್ದಾರೆ ಎಂದು ಗ್ರಾಮಸ್ಥ ಶಿವಯ್ಯ ಹೇಳಿದ್ದಾರೆ.

  • ನಾಗನಿಗೆ ಹಾಲು ಎರೆಯುವ ಬದಲು ಮಕ್ಕಳಿಗೆ ಹಾಲು ನೀಡಿ : ಜಯಮೃತ್ಯುಂಜಯ ಶ್ರೀ

    ನಾಗನಿಗೆ ಹಾಲು ಎರೆಯುವ ಬದಲು ಮಕ್ಕಳಿಗೆ ಹಾಲು ನೀಡಿ : ಜಯಮೃತ್ಯುಂಜಯ ಶ್ರೀ

    ದಾವಣಗೆರೆ: ಶ್ರಾವಣ ಮಾಸದಲ್ಲಿ ಬರುವ ನಾಗರ ಪಂಚಮಿಯಲ್ಲಿ ಕಲ್ಲಿನ ನಾಗನಿಗೆ ಹಾಲು ಎರೆಯುವ ಬದಲು ಮಕ್ಕಳಿಗೆ ಹಾಲು ನೀಡಿ ಎಂದು ದಾವಣಗೆರೆಯಲ್ಲಿ ಕೂಡಲ ಸಂಗಮದ ಜಯಮೃತ್ಯುಂಜಯ ಶ್ರೀಗಳು ಮನವಿ ಮಾಡಿಕೊಂಡಿದ್ದಾರೆ.

    ದಾವಣಗೆರೆಯ ಕೊಂಡಜ್ಜಿ ರಸ್ತೆಯಲ್ಲಿರುವ ಬಿಜಿಎಂ ಶಾಲೆಯಲ್ಲಿ ನಾಗರ ಪಂಚಮಿ ಪ್ರಯುಕ್ತ ನಡೆದ 22 ವರ್ಷದ ಕಲ್ಲುನಾಗರಕ್ಕೆ ಹಾಕುವ ಹಾಲು ಮಕ್ಕಳ ಪಾಲು ಎಂಬ ಸಪ್ತಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸ್ವಾಮೀಜಿ ಅವರು, ದೇಶಾದ್ಯಂತ ಎರಡು ಮೂರು ದಿನಗಳಲ್ಲಿ ನಾಗರ ಪಂಚಮಿ ಆಚರಣೆ ಮಾಡಲಾಗುತ್ತದೆ. ಈ ಸಮಯದಲ್ಲಿ ಲಕ್ಷಾಂತರ ಲೀಟರ್‍ ನಷ್ಟು ಹಾಲನ್ನು ನಾಗರ ಮೂರ್ತಿಗಳಿಗೆ ಹುತ್ತಗಳಿಗೆ ಎರೆದು ಪೋಲು ಮಾಡುತ್ತಿದ್ದಾರೆ. ಅದನ್ನು ಮಕ್ಕಳಿಗೆ ನೀಡಿದರೆ ಸದೃಢವಾದಂತಹ ದೇಶವನ್ನು ಕಟ್ಟಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಹಾಲು ಹುತ್ತಕ್ಕೆ ಹಾಕುವುದರಿಂದ ಹಾವುಗಳು ಸಹ ಸಾವನ್ನಪ್ಪುವ ಘಟನೆಗಳು ನಡೆದಿದೆ. ಅದ್ದರಿಂದ ಕೇವಲ ಪೂಜೆ ಯನ್ನು ಸಲ್ಲಿಸಿ, ಹಾಲನ್ನು ಮಕ್ಕಳಿಗೆ ವಿತರಣೆ ಮಾಡುವುದರ ಮೂಲಕ ಹಬ್ಬವನ್ನು ಆಚರಣೆ ಮಾಡಿ ಎಂದು ಕರೆ ನೀಡಿದರು. ಶಾಲೆಯ ಮಕ್ಕಳಿಗೆ ಹಾಲು ಹಾಗೂ ಬನ್ ವಿತರಣೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

    ಹಾಲನ್ನು ವ್ಯಯ ಮಾಡಿ ಹಬ್ಬವನ್ನು ಆಚರಿಸುವ ಬದಲಾಗಿ ಮಕ್ಕಳಿಗೆ ಉಣಬಡಿಸುವ ಮೂಲಕ ಹಬ್ಬ ಆಚರಣೆ ಮಾಡಬೇಕು. ಅಲ್ಲದೇ ರಾಜ್ಯ ಸರ್ಕಾರ ಇದನ್ನು ಶಿಕ್ಷಣ ಇಲಾಖೆ ವತಿಯಿಂದ ಹಾಲು ಕುಡಿಯುವ ಹಬ್ಬವನ್ನಾಗಿ ಆಚರಣೆ ಮಾಡಬೇಕು. ಇದರಿಂದ ಎಲ್ಲಾ ಜಾತಿಯ, ಸಮುದಾಯದ ಮಕ್ಕಳು ಹಾಲು ಕುಡಿಯುವುದರಿಂದ ಭಾವೈಕ್ಯತೆ ವೃದ್ಧಿಯಾಗುತ್ತದೆ ಎಂದು ತಿಳಿಸಿದರು.

  • ಹಾವು ಕಚ್ಚಿದ್ದಕ್ಕೆ ತಿರುಗಿ ಹಾವನ್ನೇ ಕಚ್ಚಿ ತುಂಡರಿಸಿದ

    ಹಾವು ಕಚ್ಚಿದ್ದಕ್ಕೆ ತಿರುಗಿ ಹಾವನ್ನೇ ಕಚ್ಚಿ ತುಂಡರಿಸಿದ

    ಲಕ್ನೋ: ಕುಡಿದ ನಶೆಯಲ್ಲಿದ್ದ ವ್ಯಕ್ತಿಯೋರ್ವ ಹಾವು ಕಚ್ಚಿದ್ದಕ್ಕೆ ಅದನ್ನು ಹಿಡಿದು ತಿರುಗಿ ಹಾವನ್ನೇ ಕಚ್ಚಿ ತುಂಡರಿಸಿದ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಎತಾಹ್ ಜಿಲ್ಲೆಯ ಗ್ರಾಮವೊಂದರ ನಿವಾಸಿ ರಾಜ್ ಕುಮಾರ್ ಹಾವಿಗೆ ತಿರುಗಿ ಕಚ್ಚಿರುವ ವ್ಯಕ್ತಿಯಾಗಿದ್ದಾನೆ. ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ರಾತ್ರಿ ಮನೆಗೆ ರಾಜ್ ಕುಡಿದು ಬಂದಿದ್ದನು. ಈ ವೇಳೆ ಮನೆಗೆ ನುಗ್ಗಿದ್ದ ಹಾವೊಂದು ಆತನಿಗೆ ಕಚ್ಚಿದೆ. ಆಗ ಕುಡಿದ ನಶೆಯಲ್ಲಿ ರಾಜ್ ಕೋಪಗೊಂಡು ಹಾವನ್ನು ಹಿಡಿದು ತಿರುಗಿ ಅದಕ್ಕೇ ಕಚ್ಚಿ, ತುಂಡು ತುಂಡಾಗಿಸಿದ್ದಾನೆ.

    ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಜ್ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ರಾಜ್ ತಂದೆ ಬಾಬು ರಾಮ್ ಪ್ರತಿಕ್ರಿಯಿಸಿ, ಈ ಘಟನೆ ನಡೆದ ಸಂದರ್ಭದಲ್ಲಿ ನನ್ನ ಮಗ ಕುಡಿದಿದ್ದನು. ನಮ್ಮ ಮನೆಗೆ ನುಗ್ಗಿದ್ದ ಹಾವು ಆತನಿಗೆ ಕಚ್ಚಿತ್ತು. ಆಗ ರಾಜ್ ಹಾವನ್ನು ಹಿಡಿದು ಕಚ್ಚಿ ತುಂಡರಿಸಿದನು. ಸದ್ಯ ಆತನ ಪರಿಸ್ಥಿತಿ ಗಂಭೀರವಾಗಿದೆ. ಆತನ ಚಿಕಿತ್ಸೆ ಖರ್ಚನ್ನು ಕಟ್ಟುವಷ್ಟು ಶಕ್ತಿ ನಮಗಿಲ್ಲ ಎಂದು ಅಳಲನ್ನು ತೋಡಿಕೊಂಡಿದ್ದಾರೆ.

    ಈ ಬಗ್ಗೆ ರಾಜ್ ಕುಮಾರ್‍ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮಾತನಾಡಿ, ರೋಗಿಯೊಬ್ಬ ನಮ್ಮ ಬಳಿ ಬಂದು ನಾನು ಹಾವನ್ನು ಕಚ್ಚಿದ್ದೇನೆ ಎಂದನು. ಆಗ ನಾವು ಹಾವು ಆತನಿಗೆ ಕಚ್ಚಿತ್ತು ಎಂದು ತಪ್ಪಾಗಿ ತಿಳಿದುಕೊಂಡಿದ್ದೆವು. ನಂತರ ನಿಜ ಸಂಗತಿ ತಿಳಿಯಿತು. ಆತನ ಸ್ಥಿತಿ ಗಂಭೀರವಾಗಿದೆ. ಹೀಗಾಗಿ ಆತನನ್ನು ಬೇರೆ ಆಸ್ಪತ್ರೆಗೆ ರವಾನಿಸಿ ಎಂದು ಕುಟುಂಬಸ್ಥರಿಗೆ ಸೂಚಿಸಿದ್ದೆವು ಎಂದರು.

    ಘಟನೆ ನಡೆದ ಬಳಿಕ ರಾಜ್ ಕುಮಾರ್ ಕುಟುಂಬಸ್ಥರು ಸೇರಿ ಸಾವನ್ನಪ್ಪಿದ್ದ ಹಾವಿನ ಅಂತ್ಯಕ್ರಿಯೆ ನಡೆಸಿದ್ದಾರೆ ಎಂದು ವರದಿಯಾಗಿದೆ.

  • ಹಾವು ಕಚ್ಚಿ ಆಸ್ಪತ್ರೆಗೆ ದಾಖಲಾದ ಮಹಿಳೆ – ವಾರ್ಡಿಗೆ ಮಾಂತ್ರಿಕನನ್ನು ಕರೆತಂದ ಪತಿ

    ಹಾವು ಕಚ್ಚಿ ಆಸ್ಪತ್ರೆಗೆ ದಾಖಲಾದ ಮಹಿಳೆ – ವಾರ್ಡಿಗೆ ಮಾಂತ್ರಿಕನನ್ನು ಕರೆತಂದ ಪತಿ

    ಭೋಪಾಲ್: ಹಾವು ಕಚ್ಚಿದೆ ಎಂದು ಆಸ್ಪತ್ರೆಗೆ ಮಹಿಳೆಯೊಬ್ಬರು ದಾಖಲಾಗಿದ್ದು, ಆಕೆಯ ಪತಿ ವಾರ್ಡಿನಲ್ಲೇ ಮಾಂತ್ರಿಕನಿಂದ ಚಿಕಿತ್ಸೆ ಕೊಡಿಸಿದ ಘಟನೆ ಭಾನುವಾರ ಮಧ್ಯಪ್ರದೇಶದ ದಾಮೋದಲ್ಲಿ ನಡೆದಿದೆ.

    ಇರ್ಮತಿ ದೇವಿ(25) ಆಸ್ಪತ್ರೆಗೆ ದಾಖಲಾದ ಮಹಿಳೆ. ಇರ್ಮತಿ ದೇವಿ ದಾಮೋ ಜಿಲ್ಲೆಯ ಬಟಿಯಾಗರ್ ನಿವಾಸಿಯಾಗಿದ್ದು, ಹಾವು ಕಚ್ಚಿದ್ದಕ್ಕೆ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಮಹಿಳೆ ಆಸ್ಪತ್ರೆಗೆ ದಾಖಲಾದ ದಿನವೇ ಅದೇ ರಾತ್ರಿ ಪತಿ ಹಾಗೂ ಆಕೆಯ ಸಂಬಂಧಿಕರು ವಾರ್ಡಿಗೆ ಮಾಂತ್ರಿಕನನ್ನು ಕರೆ ತಂದಿದ್ದಾರೆ.

    ವಾರ್ಡಿನಲ್ಲಿ ಮಾಂತ್ರಿಕ ಇರುವುದನ್ನು ನರ್ಸ್ ಗಮನಿಸಿದರೂ ಸಹ ಆಕೆ ಅವರನ್ನು ತಡೆಯಲಿಲ್ಲ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ. ಅಲ್ಲದೆ ಮಾಂತ್ರಿಕ ವಾರ್ಡಿಗೆ ಬಂದು ಪೂಜೆ ಮಾಡಿದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ ಆಗಿದ್ದು, ವಿಡಿಯೋ ನೋಡಿ ಆಸ್ಪತ್ರೆ ಸಿಬ್ಬಂದಿ ದಂಗಾಗಿದ್ದಾರೆ.

    ಸೆಕ್ಯೂರಿಟಿ ಗಾರ್ಡ್ ಹಾಗೂ ವೈದ್ಯರು ಡ್ಯೂಟಿಯಲ್ಲಿದ್ದ ಕಾರಣ ಅವರಿಗೆ ಈ ಘಟನೆ ಬಗ್ಗೆ ಗೊತ್ತಾಗಲಿಲ್ಲ. ನರ್ಸ್ ಒಬ್ಬರು ಮಾಂತ್ರಿಕನನ್ನು ಇದನ್ನು ನೋಡಿದ್ದಾರೆ. ಆದರೆ ಅವರನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ.

    ಮಾಂತ್ರಿಕ ವಾರ್ಡಿನಲ್ಲಿ ಪೂಜೆ ಮಾಡುತ್ತಿರುವುದನ್ನು ಸೆಕ್ಯೂರಿಟಿ ಆಗಲಿ ವೈದ್ಯರಾಗಲಿ ಗಮನಿಸಲಿಲ್ಲ. ಆದರೆ ನರ್ಸ್ ಮಾಂತ್ರಿಕನನ್ನು ನೋಡಿ ಸೆಕ್ಯೂರಿಟಿಗೆ ಹಾಗೂ ವೈದ್ಯರಿಗೆ ವಿಷಯ ತಿಳಿಸದ ಕಾರಣ ಅವರಿಗೆ ನೋಟಿಸ್ ಕಳುಹಿಸಲಾಗಿದೆ ಎಂದು ಸಿವಿಲ್ ಸರ್ಜನ್ ಮಮತಾ ತಿಮೋರಿ ಹೇಳಿದ್ದಾರೆ.

    ಈ ಘಟನೆ ನಡೆಯುವಾಗ ವೈದ್ಯರು ಬೇರೆ ವಾರ್ಡಿನಲ್ಲಿ ರೋಗಿಯ ಆರೋಗ್ಯವನ್ನು ಪರಿಶೀಲಿಸುತ್ತಿದ್ದರು. ಆಸ್ಪತ್ರೆಯಲ್ಲಿ ಸಿಸಿಟಿವಿ ಕ್ಯಾಮೆರಾ ಇದ್ದರೂ ಸಹ ಯಾವುದೇ ಸೆಕ್ಯೂರಿಟಿ ಗಾರ್ಡ್ ಈ ಬಗ್ಗೆ ಗಮನ ಹರಿಸಲಿಲ್ಲ.

  • ಬಿಜೆಪಿ ಶಾಸಕರೊಬ್ಬರ ಕಾರಿನ ವೇಗಕ್ಕೆ ಬಲಿಯಾಯ್ತು ಸರ್ಪ

    ಬಿಜೆಪಿ ಶಾಸಕರೊಬ್ಬರ ಕಾರಿನ ವೇಗಕ್ಕೆ ಬಲಿಯಾಯ್ತು ಸರ್ಪ

    ಬೆಂಗಳೂರು: ಬಿಜೆಪಿ ಶಾಸಕರೊಬ್ಬರ ಕಾರಿನ ವೇಗಕ್ಕೆ ಸರ್ಪವೊಂದು ಬಲಿಯಾದ ಘಟನೆ ರಮಡ ರೆಸಾರ್ಟ್ ಮುಂದಿನ ಹೊನ್ನೆನಹಳ್ಳಿ ರಸ್ತೆಯಲ್ಲಿ ನಡೆದಿದೆ.

    ರಮಡ ರೆಸಾರ್ಟಿನಲ್ಲಿ ಬಿಜೆಪಿ ಶಾಸಕರು ತಂಗಿದ್ದು, ಶನಿವಾರ ಸಂಜೆ 7 ಗಂಟೆ ಸುಮಾರಿಗೆ ಇನೋವಾ ಕಾರು ಹೊರಬಂದಿತ್ತು. ಅದರಲ್ಲಿ ಶಾಸಕರೊಬ್ಬರು ಕೂಡ ಇದ್ದರು. ಈ ವೇಳೆ ರೆಸಾರ್ಟ್ ಮುಂದಿನ ರಸ್ತೆಯಲ್ಲಿ ಹಾವು ದಾಟುತ್ತಿತ್ತು. ನಿಧಾನವಾಗಿ ಸಾಗುತ್ತಿದ್ದ ಹಾವಿನ ಮೇಲೆ ಕಾರು ಹರಿದಿದ್ದು, ಸರ್ಪವು ಸ್ಥಳದಲ್ಲಿಯೇ ಮೃತಪಟ್ಟಿದೆ ಎಂದು ಸ್ಥಳೀಯರು ದೂರಿದ್ದಾರೆ.

    ಶಾಸಕರ ಹೆಸರು ಹೇಳಲಿಕ್ಕೆ ಸ್ಥಳೀಯರು ಭಯಪಡುತ್ತಿದ್ದು, ಮಾಹಿತಿ ಮಾತ್ರ ನೀಡಿದ್ದಾರೆ. ಹಾವಿನ ತಲೆ ಹಾಗೂ ಹೊಟ್ಟೆಯ ಮೇಲೆ ಕಾರು ಹರಿದಿದ್ದರಿಂದ ಸ್ಥಳದಲ್ಲಿಯೇ ಸಾವನ್ನಪ್ಪಿದೆ. ಬಳಿಕ ಹಾವಿನ ಮೃತ ದೇಹವನ್ನು ಸ್ಥಳೀಯರು ಎತ್ತಿ ರಸ್ತೆ ಬದಿಗೆ ಹಾಕಿದ್ದಾರೆ.