Tag: ಹಾವು

  • ಹಾವಿಗೆ ಕಿಸ್ ಕೊಡಲು ಹೋಗಿ ಆಸ್ಪತ್ರೆ ಸೇರಿದ

    ಹಾವಿಗೆ ಕಿಸ್ ಕೊಡಲು ಹೋಗಿ ಆಸ್ಪತ್ರೆ ಸೇರಿದ

    ಶಿವಮೊಗ್ಗ: ನಾಗರ ಹಾವಿಗೆ ಮುತ್ತು ಕೊಡಲು ಹೋದ ವ್ಯಕ್ತಿಯೊಬ್ಬ ಹಾವಿನಿಂದ ಕಚ್ಚಿಸಿ ಕೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಜಿಲ್ಲೆಯ ಭದ್ರಾವತಿ ಪಟ್ಟಣದಲ್ಲಿ ನಡೆದಿದೆ.

    ಭದ್ರಾವತಿಯ ತಮ್ಮಣ್ಣ ಕ್ಯಾಂಪ್‍ನ ಸೋನು ಹಾವಿನಿಂದ ಕಚ್ಚಿಸಿ ಕೊಂಡು ಆಸ್ಪತ್ರೆಗೆ ಸೇರಿದ ವ್ಯಕ್ತಿ. ಹೊಸಮನೆ ಬಡಾವಣೆಯಲ್ಲಿ ನಾಗರ ಹಾವೊಂದು ಕಾಣಿಸಿ ಕೊಂಡಿತ್ತು. ಈ ವೇಳೆ ಸ್ಥಳೀಯರು ಸೋನುವನ್ನು ಹಾವು ಹಿಡಿಯಲು ಕರೆಯಿಸಿದ್ದಾರೆ. ಪಾನಮತ್ತನಾಗಿ ಆಗಮಿಸಿದ್ದ ಸೋನು ಹಾವು ಹಿಡಿಯುವಾಗ ಚಮಕ್ ಮಾಡಲು ಮುತ್ತು ಕೊಡಲು ಹೋದಾಗ ಹಾವು ಆತನ ತುಟಿಗೆ ಕಚ್ಚಿದೆ.

    ಹಾವು ಕಚ್ಚಿದ ತಕ್ಷಣ ಸೋನುವಿನ ತುಟಿಯಿಂದ ರಕ್ತ ಬಂದಿದೆ. ತಕ್ಷಣ ಸೋನುನನ್ನು ಭದ್ರಾವತಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

  • ಶಾಲೆಯ ಆವರಣದಲ್ಲಿ ಬಾಲಕನಿಗೆ ಕಚ್ಚಿತು ಹಾವು – ಐಸಿಯುನಲ್ಲಿ ವಿದ್ಯಾರ್ಥಿ

    ಶಾಲೆಯ ಆವರಣದಲ್ಲಿ ಬಾಲಕನಿಗೆ ಕಚ್ಚಿತು ಹಾವು – ಐಸಿಯುನಲ್ಲಿ ವಿದ್ಯಾರ್ಥಿ

    – 30 ದಿನದ ಒಳಗಡೆ 2ನೇ ಕೇಸ್
    – ಕೇರಳದ ವಯನಾಡ್ ಸುಲ್ತಾನ್‍ಬತ್ತೇರಿಯಲ್ಲಿ ಘಟನೆ

    ತಿರುವನಂತಪುರ: ಕೆಲವೇ ದಿನಗಳ ಹಿಂದೆ ಶಾಲೆಯ ಕೊಠಡಿಯಲ್ಲೇ ವಿದ್ಯಾರ್ಥಿನಿಗೆ ಹಾವು ಕಚ್ಚಿ ಸಾವನ್ನಪ್ಪಿದ್ದ ಪ್ರಕರಣ ಮಾಸುವ ಮುನ್ನವೇ ಅದೇ ರೀತಿಯ ಇನ್ನೊಂದು ಪ್ರಕರಣ ನಡೆದಿದೆ.

    ಕೇರಳದ ವಯನಾಡ್ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗೆ ಹಾವು ಕಚ್ಚಿದೆ. ಶಾಲಾ ಆವರಣದಲ್ಲಿ ವಿದ್ಯಾರ್ಥಿಗೆ ಹಾವು ಕಚ್ಚಿರುವುದು ನಿಜ. ಆದರೆ ತರಗತಿ ಕೊಠಡಿಯಲ್ಲಿ ಹಾವು ಕಚ್ಚಿಲ್ಲ ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ.

    ಸಂತ್ರಸ್ತ ವಿದ್ಯಾರ್ಥಿಯನ್ನು 2ನೇ ತರಗತಿಯ ಮೊಹಮ್ಮದ್ ರೆಹಾನ್ ಎಂದು ಗುರುತಿಸಲಾಗಿದ್ದು, ವಯನಾಡ್ ಜಿಲ್ಲೆಯ ಸುಲ್ತಾನ್ ಬತ್ತೇರಿಯ ಬೀನಾಚಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಘಟನೆ ನಡೆದಿದೆ. ವಿದ್ಯಾರ್ಥಿಯನ್ನು ಖಾಸಗಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ ಪರಿಸ್ಥಿತಿ ಗಂಭೀರವಾಗಿದೆ.

    ರೆಹಾನ್‍ಗೆ ಆಂಟಿವೆನಿನ್ ನೀಡಲಾಗಿದೆ, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಮಧ್ಯವಾರ್ಷಿಕ ಪರೀಕ್ಷೆ ನಂತರ ವಿದ್ಯಾರ್ಥಿ ಶಾಲೆಯಿಂದ ಮನೆಗೆ ಬರುವಾಗ ಹಾವು ಕಚ್ಚಿದೆ. ಮನೆಗೆ ಬಂದ ತಕ್ಷಣ ವಿದ್ಯಾರ್ಥಿ ಘಟನೆ ಕುರಿತು ನಮಗೆ ತಿಳಿಸಿದ. ನಂತರ ನಾವು ಹತ್ತಿರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದೆವು. ಅವರು ಪ್ರಥಮ ಚಿಕಿತ್ಸೆ ನೀಡಿದರು. ನಂತರ ಹೆಚ್ಚಿನ ಚಿಕಿತ್ಸೆಗೆ ಖಾಸಗಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವಿದ್ಯಾರ್ಥಿಯ ಪೋಷಕರು ಮಾಹಿತಿ ನೀಡಿದ್ದಾರೆ.

    ಶಾಲೆ ಆವರಣದಲ್ಲಿ ಕಸ ಬೆಳೆದಿದ್ದರಿಂದ ಬಾಲಕನಿಗೆ ಹಾವನ್ನು ಗುರುತಿಸಲು ಸಾಧ್ಯವಾಗಿಲ್ಲ. ಹೀಗಾಗಿ ಕೂಡಲೇ ಶಾಲಾ ಆವರಣವನ್ನು ಸ್ವಚ್ಛಗೊಳಿಸಿ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಶಾಲಾ ಆಡಳಿತ ಮಂಡಳಿಗೆ ಸೂಚಿಸಿದ್ದಾರೆ.

    ಕಳೆದ ತಿಂಗಳು ಸರ್ಕಾರಿ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿಯನ್ನು ತರಗತಿಯಲ್ಲೇ ಹಾವು ಕಚ್ಚಿದ್ದ ಘಟನೆ ಸುಲ್ತಾನ್ ಬತ್ತೇರಿಯ ಶೆಹಲಾ ಶೆರಿನ್ ನಲ್ಲಿ ನಡೆದಿತ್ತು. ಹಾವು ಕಚ್ಚಿದ ಕುರಿತು ವಿದ್ಯಾರ್ಥಿನಿ ಶಿಕ್ಷಕಿಗೆ ತಿಳಿಸಿದರೂ ಬಾಲಕಿಯನ್ನು ಗದರಿಸಿ ಸುಮ್ಮನಿರಿಸಿದ್ದರು. ಹೀಗಾಗಿ ಹಾವು ಕಚ್ಚಿದ ಕೆಲವೇ ಗಂಟೆಗಳಲ್ಲಿ ವಿದ್ಯಾರ್ಥಿ ಸಾವನ್ನಪ್ಪಿದ್ದಳು. ತರಗತಿ ಕೊಠಡಿಯಲ್ಲಿ ಉಂಟಾಗಿದ್ದ ಸಣ್ಣ ಕಿಂಡಿಯಿಂದ ಹಾವು ನುಸುಳಿತ್ತು. ಈ ಕಿಂಡಿಯ ಪಕ್ಕದಲ್ಲೇ ಕುಳಿತಿದ್ದ ವಿದ್ಯಾರ್ಥಿನಿಯನ್ನು ಹಾವು ಕಚ್ಚಿತ್ತು. ಘಟನೆ ನಂತರ ಶಾಲಾ ಆಡಳಿತ ಮಂಡಳಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತೀವ್ರ ಪ್ರತಿಭಟನೆ ನಡೆಸಲಾಗಿತ್ತು.

  • ಸಿಎಂ ಕಾರ್ಯಕ್ರಮದ ವೇದಿಕೆಯಲ್ಲಿ ಕಾಣಿಸಿಕೊಂಡ ಹಾವು

    ಸಿಎಂ ಕಾರ್ಯಕ್ರಮದ ವೇದಿಕೆಯಲ್ಲಿ ಕಾಣಿಸಿಕೊಂಡ ಹಾವು

    ಹುಬ್ಬಳ್ಳಿ: ಸಿಎಂ ಯಡಿಯೂರಪ್ಪ ಹುಬ್ಬಳ್ಳಿಯಲ್ಲಿ ಪಾಲ್ಗೊಳ್ಳಲಿರುವ ಕಾರ್ಯಕ್ರಮದ ವೇದಿಕೆಯಲ್ಲಿ ಹಾವು ಪ್ರತ್ಯಕ್ಷವಾಗಿದೆ.

    ಹುಬ್ಬಳ್ಳಿ ನಗರದ ರಾಜ್ಯ ಹೆದ್ದಾರಿ-73ರ ಕಾಡಸಿದ್ದೇಶ್ವರ ಕಾಲೇಜಿನಿಂದ ತೋಳನಕೆರೆಯವರೆಗೆ ನಿರ್ಮಿಸಲಾಗಿರುವ ಟೆಂಡರ್ ಶ್ಯೂರ್ ರಸ್ತೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಸಂಜೆ 5 ಗಂಟೆಗೆ ಲೋಕಾರ್ಪಣೆ ಮಾಡಲಿದ್ದಾರೆ.

    ಸಿಎಂ ಯಡಿಯೂರಪ್ಪ ಕಾಮಗಾರಿ ಲೋಕಾರ್ಪಣೆ ಮಾಡುವ ಸಮಾರಂಭಕ್ಕೆ ನಗರದ ಚೇತನಾ ಕಾಲೇಜ ಹತ್ತಿರದ ಮೈದಾನಲ್ಲಿ ಬೃಹತ್ತಾಕಾರದಲ್ಲಿ ಸ್ಟೇಜ್ ಮಾಡಲಾಗಿದೆ. ಸ್ಟೇಜ್ ವೇದಿಕೆಯ ಒಂದು ಟೇಬಲ್ ದಲ್ಲಿ ಕೆರೆ ಹಾವು ಕಂಡು ಬಂದಿದೆ. ಹಾವನ್ನ ನೋಡಿದ ಅಧಿಕಾರಿಗಳು ಕೆಲಕಾಲ ಚಕಿತರಾಗಿದ್ದು ಕಂಡು ಬಂದಿತು. ನಂತರ ಪೊಲೀಸರ ನೆರವಿನಿಂದ ಉರಗ ತಜ್ಞ ಸಂಗಮೇಶ್ ಅವರನ್ನು ಕರೆಸಿ ಆ ಹಾವನ್ನು ಹಿಡಿಸಲಾಯಿತು. ಹಾವು ಹಿಡಿದುಕೊಂಡು ಹೋದ ನಂತರ ಕಾರ್ಯಕ್ರಮದ ಸಿದ್ಧತೆಯನ್ನು ಇದೀಗ ಮುಂದುವರಿಸಲಾಗುತ್ತಿದೆ.

  • ಡಿಸಿಎಂ ಲಕ್ಷ್ಮಣ ಸವದಿ ನಿವಾಸದಲ್ಲಿ ಹಾವು ಪ್ರತ್ಯಕ್ಷ

    ಡಿಸಿಎಂ ಲಕ್ಷ್ಮಣ ಸವದಿ ನಿವಾಸದಲ್ಲಿ ಹಾವು ಪ್ರತ್ಯಕ್ಷ

    ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ನಿವಾಸದಲ್ಲಿ ಹಾವು ಪ್ರತ್ಯಕ್ಷವಾಗಿದೆ. ಬೆಂಗಳೂರಿನ ಬಿಡಿಎ ಕಚೇರಿಯ ಪಕ್ಕದಲ್ಲಿ ಇರುವ ಲಕ್ಷ್ಮಣ ಸವದಿ ಅವರ ಸರ್ಕಾರಿ ನಿವಾಸದಲ್ಲಿ ನೀರಾವು ಪ್ರತ್ಯಕ್ಷವಾಗಿದೆ.

    ನಿವಾಸದ ಮುಂದೆ ಇರುವ ಕಾವೇರಿ ವಾಟರ್ ಮೀಟರ್ ಬಾಕ್ಸ್ ನಲ್ಲಿ ನೀರಾವು ಹುದುಗಿ ಕುಳಿತಿದೆ. ಮನೆಕೆಲಸದವರು ಹೊರಗಡೆ ಬಂದು ನೋಡಿದಾಗ ಅದರ ತಲೆ ಕಂಡು ಹಾವು ಇರುವುದು ಪತ್ತೆಯಾಗಿದೆ. ಬಿಡಿಎ ಕಚೇರಿ ಕಡೆಯಿಂದ ಬಂದ ಹಾವು ಡಿಸಿಎಂ ನಿವಾಸದ ಹೊರಾಗಂಣ ಇರುವ ಕಾವೇರಿ ಮೀಟರ್ ಬಾಕ್ಸ್ ನಲ್ಲಿ ಹಾವು ಸೇರಿಕೊಂಡಿದೆ ಎಂದು ಮೆನೆಕೆಲಸದವರು ತಿಳಿಸಿದ್ದಾರೆ.

    ಹಾವು ಇರುವುದನ್ನ ಮನಗಂಡ ಮನೆ ಕೆಲಸದವರು ರಕ್ಷಣೆಗಾಗಿ ಉರಗ ತಜ್ಞರಿಗೆ ಕರೆ ಮಾಡಿದ್ದಾರೆ. ಉರಗ ತಜ್ಞ ಮೋಹನ್ ನೀರಾವನ್ನ ರಕ್ಷಣೆ ಮಾಡಿದ್ದಾರೆ. ಎರಡೂವರೆ ಅಡಿ ಉದ್ದ ಇರುವ ನೀರಾವನ್ನ ಮೋಹನ್ ರಕ್ಷಣೆ ಮಾಡಿ ಕೆರೆಗೆ ಬಿಟ್ಟಿದ್ದಾರೆ.

  • ಸ್ಕೂಟಿ ಹತ್ತಿಸಿದ ಸವಾರನ ಮೇಲೆ ನಾಗರಹಾವು ಅಟ್ಯಾಕ್

    ಸ್ಕೂಟಿ ಹತ್ತಿಸಿದ ಸವಾರನ ಮೇಲೆ ನಾಗರಹಾವು ಅಟ್ಯಾಕ್

    ಚಿಕ್ಕಬಳ್ಳಾಪುರ: ಸ್ಕೂಟಿ ಹರಿಸಿದ ಸವಾರನ ಮೇಲೆ ನಾಗರಹಾವು ಅಟ್ಯಾಕ್ ಮಾಡಿದ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ.

    ನಗರದ ಎಪಿಎಂಸಿ ಮಾರುಕಟ್ಟೆ ಬಳಿ ಮೊಹ್ಮದ್ ಆಯಾತುಲ್ಲಾ ತಮ್ಮ ಸ್ಕೂಟಿಯಲ್ಲಿ ಹೋಗುತ್ತಿದ್ದರು. ಈ ವೇಳೆ ರಸ್ತೆ ದಾಟುತ್ತಿದ್ದ ಭಾರೀ ಗಾತ್ರದ ನಾಗರ ಹಾವಿನ ಮೇಲೆ ಸ್ಕೂಟಿ ಹತ್ತಿಸಿದ್ದಾರೆ. ಈ ವೇಳೆ ಚಕ್ರಕ್ಕೆ ಸಿಲುಕಿದ ಪರಿಣಾಮ ಸವಾರ ಮೊಹ್ಮದ್ ನಿಯಂತ್ರಣ ತಪ್ಪಿ ಸ್ಕೂಟಿ ಸಮೇತ ಕೆಳಗೆ ಬಿದ್ದಿದ್ದಾರೆ. ಆಗ ನಾಗರಹಾವು ಆತನ ಕಾಲಿಗೆ ಅಟ್ಯಾಕ್ ಮಾಡಿದೆ. ಇದರಿಂದ ಹೆದರಿದ ಮೊಹ್ಮದ್ ಎದ್ನೋ ಬಿದ್ನೋ ಅಂತ ಓಡಿದ್ದಾರೆ.

    ಮೊಹ್ಮದ್ ಮೇಲೆ ದಾಳಿ ಮಾಡಿದ ಬಳಿಕವೂ ನಾಗರಹಾವು ಸ್ಕೂಟಿಯ ಮುಂಭಾಗದಲ್ಲಿ ಸೇರಿಕೊಂಡಿತ್ತು. ಇದನ್ನು ನೋಡಿದ ಸ್ಥಳೀಯರು ಉರಗರಕ್ಷಕ ಪೃಥ್ವಿರಾಜ್ ಅವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೃಥ್ವಿರಾಜ್ ಅವರು ಸ್ಕೂಟಿಯಲ್ಲಿ ಸೇರಿಕೊಂಡಿದ್ದ ನಾಗರಹಾವನ್ನು ಸೆರೆ ಹಿಡಿದಿದ್ದಾರೆ. ಅದೃಷ್ಟವಶಾತ್ ಮೊಹ್ಮದ್ ಅವರಿಗೆ ಸಣ್ಣ ಪ್ರಮಾಣದ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

  • ಮೈದಾನದಲ್ಲಿ ಹಾವು – ರಣಜಿ ಕ್ರಿಕೆಟ್ ಪಂದ್ಯ ವಿಳಂಬ

    ಮೈದಾನದಲ್ಲಿ ಹಾವು – ರಣಜಿ ಕ್ರಿಕೆಟ್ ಪಂದ್ಯ ವಿಳಂಬ

    ಹೈದರಾಬಾದ್: ಅಂಧ್ರ ಪ್ರದೇಶದ ವಿಜಯವಾಡದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿಯ ಮೊದಲ ದಿನದ ಅಂಧ್ರ ಪ್ರದೇಶದ ಮತ್ತು ವಿದರ್ಭ ನಡುವಿನ ಪಂದ್ಯದಲ್ಲಿ ಮೈದಾನಕ್ಕೆ ಹಾವು ಬಂದ ಕಾರಣ ಆಟಕ್ಕೆ ವಿಳಂಬವಾಗಿದೆ.

    ಇಂದು ಅಂಧ್ರಪ್ರದೇಶ ಮತ್ತು ವಿದರ್ಭ ತಂಡದ ನಡುವೆ ನಡೆಯುತ್ತಿರುವ ರಣಜಿ ಟ್ರೋಫಿ ಮೊದಲ ದಿನದ ಪಂದ್ಯದ ವೇಳೆ ಹಾವೊಂದು ಕ್ರಿಕೆಟ್ ಮೈದಾನಕ್ಕೆ ಬಂದಿದೆ. ಹಾವು ಕ್ರಿಕೆಟ್ ಮೈದಾನದಲ್ಲಿ ಹರಿದಾಡುತ್ತಿರುವ ವಿಡಿಯೋವನ್ನು ಬಿಸಿಸಿಐ ಟ್ವೀಟ್ ಮಾಡಿದ್ದು, ಈ ವಿಡಿಯೋದಲ್ಲಿ ಹಾವು ಹರಿಯುತ್ತಿರುವುದನ್ನು ಆಟಗಾರರು ದಿಗ್ಭ್ರಮೆಯಿಂದ ನೋಡುತ್ತಿರುವುದನ್ನು ನಾವು ಕಾಣಬಹುದು.

    ರಣಜಿ ಟ್ರೋಫಿ ವೇಳೆ ಮೈದಾನಕ್ಕೆ ಹಾವು ನುಗ್ಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ 2015 ರಲ್ಲಿ ಸಾಲ್ಟ್ ಲೇಕ್‍ನ ಜೆಯೂ ಕ್ಯಾಂಪಸ್‍ನಲ್ಲಿ ನಡೆಯುತ್ತಿದ್ದ ಬಂಗಾಳ ಮತ್ತು ವಿದರ್ಭ ನಡುವಿನ ಪಂದ್ಯದಲ್ಲೂ ಹಾವೊಂದು ಮೈದಾನಕ್ಕೆ ಬಂದು ಪಂದ್ಯಕ್ಕೆ ಅಡ್ಡಿ ಮಾಡಿತ್ತು. ಈಗ ಮತ್ತೆ ಇದೇ ರೀತಿ ಹಾವೊಂದು ಬಂದಿದ್ದು ಈ ವಿಡಿಯೋವನ್ನು ಟ್ವೀಟ್ ಮಾಡಿರುವ ಬಿಸಿಸಿಐ ಹಾವು ಪಂದ್ಯವನ್ನು ನಿಲ್ಲಿಸಿದೆ. ಪಂದ್ಯ ಆರಂಭವಾಗುವುದನ್ನು ವಿಳಂಬ ಮಾಡಲು ಮೈದಾನಕ್ಕೆ ಅತಿಥಿಯೊಬ್ಬರು ಬಂದಿದ್ದರು ಎಂದು ಬರೆದುಕೊಂಡಿದೆ.

    2015ರ ನಂತರ ಮತ್ತೆ ಇದೇ ವಿದರ್ಭ ತಂಡ ಆಡುವ ಪಂದ್ಯದಲ್ಲಿ ಹಾವು ಕಾಣಿಸಿಕೊಂಡಿದ್ದು, ಹಾವನ್ನು ಅಲ್ಲಿನ ಸಿಬ್ಬಂದಿ ಹಿಡಿದು ತೆಗೆದುಕೊಂಡು ಹೋಗಿದ್ದಾರೆ. ನಂತರ ಪಂದ್ಯ ಆರಂಭವಾಗಿದ್ದು, ಟಾಸ್ ಗೆದ್ದ ವಿದರ್ಭ ನಾಯಕ ಫೈಜ್ ಫೈಜಾಲ್ ಆಂಧ್ರ ಪ್ರದೇಶದ ವಿರುದ್ಧ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಇತ್ತ ಅಂಧ್ರಪ್ರದೇಶ ತಂಡವನ್ನು ಹನುಮಾ ವಿಹಾರಿ ಮುನ್ನಡೆಸುತ್ತಿದ್ದಾರೆ.

    ಈ ಪಂದ್ಯದಲ್ಲಿ ಮೊದಲ ಬ್ಯಾಟ್ ಮಾಡಿದ ಅಂಧ್ರ ಆರಂಭಿಕ ಕುಸಿತ ಕಂಡಿದ್ದು, ಊಟದ ಸಮಯಕ್ಕೆ ಆರಂಭಿಕ ಮೂರು ವಿಕೆಟ್‍ಗಳನ್ನು ಕಳೆದುಕೊಂಡು 87 ರನ್ ಸಿಡಿಸಿ ಸಂಕಷ್ಟಕ್ಕೆ ಸಿಲುಕಿದೆ. ಆದರೆ ನಾಯಕ ಹನುಮ ವಿವಾರಿ ತಾಳ್ಮೆಯ ಆಟವಾಡುತ್ತಿದ್ದು, 89 ಎಸೆತದಲ್ಲಿ 6 ಬೌಂಡರಿಯೊಂದಿಗೆ 43 ರನ್ ಸಿಡಿಸಿ ಆಡುತ್ತಿದ್ದಾರೆ.

  • ಹಾವು ಕಚ್ಚಿದ್ರೂ ಪಾಠ ಮುಂದುವರಿಕೆ – ಟೀಚರ್ ನಿರ್ಲಕ್ಷ್ಯಕ್ಕೆ ಬಾಲಕಿ ಬಲಿ

    ಹಾವು ಕಚ್ಚಿದ್ರೂ ಪಾಠ ಮುಂದುವರಿಕೆ – ಟೀಚರ್ ನಿರ್ಲಕ್ಷ್ಯಕ್ಕೆ ಬಾಲಕಿ ಬಲಿ

    – ಆಸ್ಪತ್ರೆಗೆ ದಾಖಲಿಸದೆ ತರಗತಿ ಮುಂದುವರಿಸಿದ ಟೀಚರ್
    – ದಾರಿ ಮಧ್ಯೆ ಪ್ರಾಣಬಿಟ್ಟ ಬಾಲಕಿ

    ತಿರುವನಂತಪುರಂ: ಹಾವು ಕಡಿತದಿಂದ ಬಾಲಕಿ ಪ್ರಾಣಬಿಟ್ಟ ಘಟನೆ ಕೇರಳದ ವಯನಾಡ್ ಜಿಲ್ಲೆಯ ಸುಲ್ತಾನ್ ಬತ್ತೇರಿಯಲ್ಲಿ ನಡೆದಿದೆ.

    ಶೆಹೆಲಾ ಶರ್ಲಿನ್(10) ಮೃತಪಟ್ಟ ಬಾಲಕಿ. ಹಾವು ಕಚ್ಚಿದ ಒಂದು ಗಂಟೆ ನಂತರ ಶೆಹೆಲಾಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಅಲ್ಲದೆ ಶೆಹೆಲಾಳಿಗೆ ಹಾವು ಕಚ್ಚಿದರೂ ಆಕೆಯ ತಂದೆ ಬಂದು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ ಎಂದು ಹೇಳಿ ಶಿಕ್ಷಕರು ತಮ್ಮ ಪಾಠವನ್ನು ಮುಂದುವರಿಸುತ್ತಿದ್ದರು. ಆದರೆ ಅಷ್ಟರಲ್ಲಿ ಶೆಹೆಲಾ ಕಾಲು ನೀಲಿ ಬಣ್ಣಕ್ಕೆ ತಿರುಗಿತ್ತು ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.

    ನಾವು ಶಿಕ್ಷಕರ ಗಮನಕ್ಕೆ ತಂದರೂ ಅವರು ನಿರ್ಲಕ್ಷ್ಯ ವಹಿಸಿದರು. ಹಾವು ಕಡಿತದಿಂದ ಗಾಯವಾಗಿಲ್ಲ. ಬದಲಾಗಿ ಶೆಹೆಲಾ ಉಗುರಿನಿಂದ ಗಾಯ ಮಾಡಿಕೊಂಡಿದ್ದಾಳೆ ಎಂದು ಹೇಳಿ ಪಾಠ ಮುಂದುವರಿಸಿದ್ದರು ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

    ಮಾಧ್ಯಮದವರು ಬಾಲಕಿ ಕುಳಿತಿದ್ದ ಡೆಸ್ಕ್ ಕೆಳಗೆ ರಂಧ್ರದೊಂದಿಗೆ ತರಗತಿಯ ದೃಶ್ಯಗಳನ್ನು ಪ್ರಸಾರ ಮಾಡಿತ್ತು. ಮೂಲಗಳ ಪ್ರಕಾರ ಟೀಚರ್ ಅಮಾನತುಗೊಂಡಿದ್ದು ವಿಚಾರಣೆ ಬಾಕಿ ಇದೆ ಎಂದು ತಿಳಿದು ಬಂದಿದೆ.

    ಬಾಲಕಿಯ ಸಂಬಂಧಿಕರಾದ ಶಾನವಾಜ್ ಈ ಬಗ್ಗೆ ಪ್ರತಿಕ್ರಿಯಿಸಿ, ಶೆಹೆಲಾಳನ್ನು ಮೊದಲು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಬಳಿಕ ಅಲ್ಲಿನ ವೈದ್ಯರು ಶೆಹೆನಾಳನ್ನು ಕೋಝಿಕೋಡ್ ಮೆಡಿಕಲ್ ಕಾಲೇಜಿಗೆ ಕರೆದುಕೊಂಡು ಹೋಗಲು ತಿಳಿಸಿದ್ದರು. ಆದರೆ ಶೆಹೆಲಾಳ ಸ್ಥಿತಿ ಹದಗೆಟ್ಟಿದ್ದರಿಂದ ಆಕೆಯನ್ನು ಕೊಝಿಕೋಡ್ ಹೋಗುವ ಮಾರ್ಗದಲ್ಲಿರುವ ವೈತ್ರಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಆಕೆಯನ್ನು ಪರಿಶೀಲಿಸಿದ ವೈದ್ಯರು ಶೆಹೆಲಾ ಮೃತಪಟ್ಟಿದ್ದಾಳೆ ಎಂದು ತಿಳಿಸಿದರು ಎಂಬುದಾಗಿ ವಿವರಿಸಿದರು.

    ಈ ಬಗ್ಗೆ ವಯನಾಡ್ ಜಿಲ್ಲಾಧಿಕಾರಿ ಅದೀಲಾ ಅಬ್ದುಲಾ ಮಾತನಾಡಿ, ಇದು ಅತ್ಯಂತ ದುರದೃಷ್ಟಕರವಾದ ಸಂಗತಿ. ಈ ಘಟನೆಗೆ ಕಾರಣರಾದವರ ವಿರುದ್ಧ ಕ್ರಮಕೈಗೊಳ್ಳುತ್ತೇವೆ. ಮಗುವಿನ ವೈದ್ಯಕೀಯ ನೆರವು ವಿಳಂಬವಾಗಿದೆ ಎಂಬ ಆರೋಪದ ಬಗ್ಗೆ ವರದಿ ಸಲ್ಲಿಸಲು ಶಿಕ್ಷಣ ಇಲಾಖೆಯ ಅಧಿಕಾರಿಯನ್ನು ಕೇಳಿದ್ದೇನೆ ಎಂದು ಹೇಳಿದ್ದಾರೆ. ಇತ್ತ ಕೇರಳ ಸಿಎಂ ಪಿಣರಾಯಿ ವಿಜಯನ್, ಈ ಘಟನೆಯನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ.

    ಬಾಲಕಿ ಸಾವಿನಿಂದ ರೊಚ್ಚಿಗೆದ್ದ ಗ್ರಾಮಸ್ಥರು ಹಾಗೂ ಬಾಲಕಿಯ ಸಂಬಂಧಿಕರು ಶಾಲೆ ಕಚೇರಿಗೆ ಹೋಗಿ ಅಲ್ಲಿದ್ದ ಶಿಕ್ಷಕರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಶಾಲೆಗೆ ಪೊಲೀಸರು ಬಿಗಿಯಾದ ಭದ್ರತೆ ನೀಡಿದ್ದು ಗ್ರಾಮಸ್ಥರನ್ನು ತಡೆದಿದ್ದಾರೆ.

  • ಅಂಬುಲೆನ್ಸ್ ಇಂಜಿನ್‍ನಲ್ಲಿ ಅಡಗಿದ್ದ ನಾಗಪ್ಪ

    ಅಂಬುಲೆನ್ಸ್ ಇಂಜಿನ್‍ನಲ್ಲಿ ಅಡಗಿದ್ದ ನಾಗಪ್ಪ

    ಧಾರವಾಡ: ಅಂಬುಲೆನ್ಸ್ ಇಂಜಿನ್‍ನಲ್ಲಿ ಹಾವೊಂದು ಅಡಗಿ ಕುಳಿತು ಆತಂಕ ಸೃಷ್ಟಿ ಮಾಡಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಧಾರವಾಡ ತಾಲೂಕಿನ ಯರಿಕೊಪ್ಪ ಗ್ರಾಮದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ಟೋಲ್ ಗೇಟ್ ಬಳಿ ರಾತ್ರಿ ಅಂಬುಲೆನ್ಸ್ ನಿಲ್ಲಿಸಲಾಗಿತ್ತು. ಇದೇ ಸಂದರ್ಭದಲ್ಲಿ ಅಂಬುಲೆನ್ಸ್ ಇಂಜಿನ್‍ನಲ್ಲಿ ಹಾವು ಆಶ್ರಯ ಪಡೆದು ಬಿಟ್ಟಿತ್ತು.

    ಎಂದಿನಂತೆ ಬೆಳಗ್ಗೆ ಚಾಲಕ ಅಂಬುಲೆನ್ಸ್ ಹತ್ತಿದಾಗ ಹಾವು ಬುಸುಗುಡುವ ಸದ್ದು ಬಂದಿದೆ. ತಕ್ಷಣ ಅಂಬುಲೆನ್ಸ್ ಸಿಬ್ಬಂದಿ ಮತ್ತು ಸ್ಥಳೀಯರು ಉರಗ ಪ್ರೇಮಿ ಯಲ್ಲಪ್ಪ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಉರಗ ತಜ್ಞ ಯಲ್ಲಪ್ಪ ಹಾವಿಗಾಗಿ ಅಂಬುಲೆನ್ಸ್ ಇಂಜಿನ್ ಬಳಿ ಹುಡುಕಾಡಿದ್ದಾರೆ.

    ಸುಮಾರು ಸಮಯದ ನಂತರ ಐದು ಅಡಿ ಉದ್ದದ ಹಾವನ್ನು ಅಂಬುಲೆನ್ಸ್ ನಿಂದ ಸುರಕ್ಷಿತವಾಗಿ ಹೊರ ತೆಗೆದಿದ್ದು, ಅರಣ್ಯದಲ್ಲಿ ಬಿಟ್ಟು ಬಂದಿದ್ದಾರೆ.

  • 6 ಅಡಿ ವಿಷ ಸರ್ಪದ ಜೊತೆ ವ್ಯಕ್ತಿಯ ಹುಡುಗಾಟ

    6 ಅಡಿ ವಿಷ ಸರ್ಪದ ಜೊತೆ ವ್ಯಕ್ತಿಯ ಹುಡುಗಾಟ

    ಯಾದಗಿರಿ: ಹಾವು ಕಂಡ ತಕ್ಷಣ ಜನರು ಭಯದಿಂದ ಓಡಿ ಹೋಗುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಆರು ಅಡಿ ವಿಷ ಸರ್ಪದ ಜೊತೆ ಹುಡುಗಾಟವಾಡಿದ್ದಾನೆ.

    ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಬಲಶೆಟ್ಟಿಹಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಮನೆಯೊಂದರಲ್ಲಿ ಏಕಾಏಕಿ ಕ್ಯಾರೆ ಹಾವೊಂದು ಕಾಣಿಸಿಕೊಂಡು ಮನೆಯವರನ್ನು ಮಾತ್ರವಲ್ಲದೆ ಅಕ್ಕಪಕ್ಕದ ಮನೆಯವರನ್ನು ಸಹ ಕೆಲ ಹೊತ್ತು ಭಯಪಡಿಸಿತ್ತು.

    ಈ ವೇಳೆ ಅದೇ ಗ್ರಾಮದ ರೇಣುಕಪ್ಪ ಎಂಬವರು ಜೀವ ಭಯ ತೊರೆದು ಹಾವುವನ್ನು ಹಿಡಿದಿದ್ದಾರೆ. ಅಷ್ಟೇ ಅಲ್ಲದೆ ಅರ್ಧ ಗಂಟೆ ಹೆಚ್ಚು ಕಾಲ ಹಾವಿನ ಜೊತೆ ರೇಣುಕಪ್ಪ ಹುಡುಗಾಟ ಸಹವಾಡಿದ್ದಾನೆ. ಇದರಿಂದ ಭಯಬೀತರಾದ ಗ್ರಾಮಸ್ಥರು ರೇಣುಕಪ್ಪನಿಗೆ ಬುದ್ಧಿ ಹೇಳಿ ಹಾವನ್ನು ಕಾಡಿನಲ್ಲಿ ಬಿಡಲು ಹೇಳಿದ್ದಾರೆ.

    ರೇಣುಕಪ್ಪ ಹಾವನ್ನು ಹಿಡಿದು ಹುಡುಗಾಟ ಆಡಿರುವ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಚಿತ್ರೀಕರಿಸಿದ್ದಾರೆ.

  • ಎಲೆಕ್ಟ್ರಾನಿಕ್ ವಸ್ತುಗಳ ಜೊತೆ ಹಾವು ಗಿಫ್ಟ್..!

    ಎಲೆಕ್ಟ್ರಾನಿಕ್ ವಸ್ತುಗಳ ಜೊತೆ ಹಾವು ಗಿಫ್ಟ್..!

    ಬೆಂಗಳೂರು: ಎಲೆಕ್ಟ್ರಾನಿಕ್ ವಸ್ತುಗಳ ಜೊತೆಗೆ ಹಾವು ಕೂಡ ಗಿಫ್ಟ್ ಆಗಿ ಬಂದು, ಆತಂಕ ಸೃಷ್ಟಿಸಿದ್ದ ಘಟನೆ ನಗರದಲ್ಲಿ ನಡೆದಿದೆ.

    ಮೆಜೆಸ್ಟಿಕ್‍ನ ಎಲೆಕ್ಟ್ರಾನಿಕ್ ಅಂಗಡಿಯೊಂದಕ್ಕೆ ದೆಹಲಿಯಿಂದ ಲೈಟ್ಸ್ ಸೇರಿದಂತೆ ಎಲೆಕ್ಟ್ರಾನಿಕ್ಸ್ ವಸ್ತುಗಳು ಪಾರ್ಸೆಲ್ ಬಂದಿದ್ದವು. ಜೊತೆಗೆ ಒಂದು ಹಾವು ಕೂಡ ಬಂದಿದೆ. ಬೆಳಗ್ಗೆ 10:30ಕ್ಕೆ ಪಾರ್ಸಲ್ ಬಾಕ್ಸ್ ತೆಗೆದು ನೋಡಿದಾಗ ಹಾವನ್ನು ಕಂಡು ಅಂಗಡಿಯ ಮಾಲೀಕ ಬೆಚ್ಚಿ ಬಿದ್ದಿದ್ದಾರೆ.

    ಅದೃಷ್ಟವಶಾತ್ ಬಾಕ್ಸ್ ತೆಗೆದಿದ್ದ ಅಂಗಡಿ ಮಾಲೀಕನಿಗೆ ಹಾವು ಕಚ್ಚಿಲ್ಲ. ಹಾವನ್ನು ನೋಡಿದ ತಕ್ಷಣವೇ ಮಾಲೀಕ ಉರಗ ತಜ್ಞರಿಗೆ ಕರೆ ಮಾಡಿದ್ದಾರೆ. ಮಾಹಿತಿ ಪಡೆದು ಸ್ಥಳಕ್ಕೆ ಬಂದ ಉರಗತಜ್ಞರು ಸುಮಾರು ಎರಡು ಅಡಿ ಉದ್ದದ ಹಾವನ್ನು ಹಿಡಿದಿದ್ದಾರೆ. ಬಳಿಕ ಅದನ್ನು ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬಂದಿದ್ದಾರೆ.

    ಈ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಉರಗತ್ಞ ಜಯರಾಜ್ ಅವರು, ಅಂಗಡಿ ಮಾಲೀಕರು ಫೋನ್ ಮಾಡಿದ ತಕ್ಷಣವೇ ಅಲ್ಲಿಗೆ ಹೋಗಿ ನೋಡಿಗಾದ ಅದು ಮಣ್ಣಮುಕ್ಕ ಹಾವು ಎನ್ನುವುದು ತಿಳಿಯಿತು. ಈ ಹಾವು ಯಾವುದೇ ಹಾನಿ ಮಾಡುವುದಿಲ್ಲ ಅಂತ ಅಂಗಡಿಯವರಿಗೆ ತಿಳಿಸಿದ್ದೇವೆ.  ಅಷ್ಟೇ ಅಲ್ಲದೆ ಮೆಜೆಸ್ಟಿಕ್ ನಲ್ಲಿ ಈ ಹಾವು ಬಂದಿರುವುದು ಅಪರೂಪ ಎಂದು ಹೇಳಿದರು.