Tag: ಹಾಲ್ ಆಫ್ ಫೇಮ್

  • ಗೇಲ್, ಎಬಿಡಿಗೆ ಆರ್‌ಸಿಬಿ ಹಾಲ್ ಆಫ್ ಫೇಮ್ ಗೌರವ

    ಗೇಲ್, ಎಬಿಡಿಗೆ ಆರ್‌ಸಿಬಿ ಹಾಲ್ ಆಫ್ ಫೇಮ್ ಗೌರವ

    ಮುಂಬೈ: ಲೆಜೆಂಡರಿ ಕ್ರಿಕೆಟಿಗರಾದ ಕ್ರಿಸ್ ಗೇಲ್ ಮತ್ತು ಎಬಿ ಡಿವಿಲಿಯರ್ಸ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಲ್ ಆಫ್ ಫೇಮ್‍ಗೆ ಸೇರ್ಪಡೆಗೊಂಡ ಮೊದಲ ಇಬ್ಬರು ಆಟಗಾರರಾಗಿದ್ದಾರೆ.

    CHRIS GAYLE

    ಈ ಕುರಿತು ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ತಮ್ಮ ಇಬ್ಬರು ಆತ್ಮೀಯ ಸ್ನೇಹಿತರ ಸೇರ್ಪಡೆಯ ಬಗ್ಗೆ ಮಾತನಾಡಿ, ಆರ್‌ಸಿಬಿ ಪ್ಲೇ ಬೋಲ್ಡ್ ತತ್ವವನ್ನು ನಿಜವಾಗಿಯೂ ತಂದಿದ್ದು ಅವರೇ. ಕ್ರೀಡಾಮನೋಭಾವದಿಂದ ಎಬಿಡಿ ಕ್ರಿಕೆಟ್ ಆಟವನ್ನು ನಿಜವಾಗಿಯೂ ಬದಲಾಯಿಸಿದ್ದಾರೆ ಎಂದು ಫ್ರಾಂಚೈಸಿಯ ವೆಬ್‍ಸೈಟ್‍ನಲ್ಲಿ ಪೋಸ್ಟ್ ಮಾಡಿ ಹೇಳಿದ್ದಾರೆ.

    ಇಬ್ಬರೂ ಆಟಗಾರರನ್ನು ಹಾಲ್ ಆಫ್ ಫೇಮ್‍ನಲ್ಲಿ ಸೇರ್ಪಡೆ ಮಾಡಿರುವುದು ಹೆಮ್ಮೆಯ ವಿಷಯ. ಅವರ ಆಟದ ವೀಡಿಯೊಗಳನ್ನು ನೋಡುವಾಗ ರೋಮಾಂಚನವಾಗುತ್ತದೆ. ಐಪಿಎಲ್ ಯಶಸ್ವಿಯಾಗಿ ಬೆಳೆಯುವಲ್ಲಿ ಇವರಿಬ್ಬರ ಕಾಣಿಕೆ ದೊಡ್ಡದು ಎಂದು ಕೊಹ್ಲಿ ಹೇಳಿದ್ದಾರೆ.

    2011 ರಿಂದ 2017 ರವರೆಗೆ ಆರ್‌ಸಿಬಿ ಪರ ಆಡಿರುವ ಗೇಲ್ ಮಾತನಾಡಿ, ನನಗೆ ತಂಡದಲ್ಲಿ ಅವಕಾಶ ನೀಡಿದ್ದಕ್ಕಾಗಿ ಆರ್‌ಸಿಬಿ ಕುಟುಂಬಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ. ನನಗೆ ಇದು ನಿಜಕ್ಕೂ ವಿಶೇಷವಾಗಿತ್ತು. ಹಾಲ್ ಆಫ್ ಫೇಮ್‍ಗೆ ಸೇರ್ಪಡೆಗೊಂಡಿರುವುದು ನಿಜಕ್ಕೂ ಅದ್ಭುತವಾಗಿದೆ. ನಾನು ಯಾವಾಗಲೂ ಬೆಂಗಳೂರು ತಂಡವನ್ನು ನನ್ನ ಹೃದಯಕ್ಕೆ ಹತ್ತಿರ ಇಡುತ್ತೇನೆ ಎಂದು ಭಾವನಾತ್ಮಕವಾಗಿ ಹೇಳಿದ್ದಾರೆ.

    ABD

    ದಕ್ಷಿಣ ಆಫ್ರಿಕಾದ ದೈತ್ಯ ಆಟಗಾರ ಡಿವಿಲಿಯರ್ಸ್ 2011 ರಿಂದ 2021 ರವರೆಗೆ ಆರ್‌ಸಿಬಿ ತಂಡದ ಅವಿಭಾಜ್ಯ ಅಂಗವಾಗಿದ್ದರು. ವೆಸ್ಟ್ ಇಂಡೀಸ್‍ನ ಎಡಗೈ ಬ್ಯಾಟ್ಸ್‌ಮ್ಯಾನ್ ಗೇಲ್ ಆರು ವರ್ಷಗಳ ಕಾಲ ಫ್ರಾಂಚೈಸಿಯಲ್ಲಿದ್ದರು.

  • ಪುಣೆಯ ಅನಾಥಾಶ್ರಮದಿಂದ ಐಸಿಸಿ ಹಾಲ್ ಆಫ್ ಫೇಮ್‍ವರೆಗೆ- ಆಸೀಸ್ ಆಟಗಾರ್ತಿ ಲಿಸಾ ಸ್ಥಳೇಕರ್ ಜರ್ನಿ

    ಪುಣೆಯ ಅನಾಥಾಶ್ರಮದಿಂದ ಐಸಿಸಿ ಹಾಲ್ ಆಫ್ ಫೇಮ್‍ವರೆಗೆ- ಆಸೀಸ್ ಆಟಗಾರ್ತಿ ಲಿಸಾ ಸ್ಥಳೇಕರ್ ಜರ್ನಿ

    ಮೆಲ್ಬೊರ್ನ್: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಹಾಲ್ ಆಫ್ ಫೇಮ್ ಕ್ರಿಕೆಟಿಗರ ಪಟ್ಟಿಯಲ್ಲಿ ಸ್ಥಾನ ಪಡೆಯುವುದು ಅತ್ಯಂತ ಗೌರವದ ಸಾಧನೆಯಾಗಿದೆ.

    ಕ್ರಿಕೆಟ್‍ನಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ ಮಂದಿಗೆ ಮಾತ್ರ ಈ ಗೌರವ ಪಡೆಯುವ ಅರ್ಹತೆ ಲಭಿಸುತ್ತದೆ. ಕಳೆದ ವಾರ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಲಿಸಾ ಸ್ಥಳೇಕರ್, ಪಾಕ್ ಮಾಜಿ ಆಟಗಾರ ಜಹೀರ್ ಅಬ್ಬಾಸ್, ದಕ್ಷಿಣ ಆಫ್ರಿಕಾ ಆಲ್‍ರೌಂಡರ್ ಜಾಕ್ ಕಾಲಿಸ್ ಅವರಿಗೆ ಐಸಿಸಿ ಹಾಲ್ ಆಫ್ ಫೇಮ್ ಪ್ರಶಸ್ತಿ ನೀಡಿದೆ. ಲೀಸಾ ಸ್ಥಳೇಕರ್ ಈ ಪ್ರಶಸ್ತಿಯನ್ನು ಪಡೆದ 9ನೇ ಮಹಿಳಾ ಕ್ರಿಕೆಟ್ ಆಟಗಾರ್ತಿ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ.

    ಭಾರತದಲ್ಲಿ ಜನಿಸಿದ್ದ ಲಿಸಾ ಸ್ಥಳೇಕರ್ ಅವರನ್ನು ಆಸ್ಟ್ರೇಲಿಯಾದ ಹರೇನ್ ಮತ್ತು ಸ್ಯೂ ಸ್ಥಳೇಕರ್ ಅವರು ಪುಣೆಯ ಒಂದು ಅನಾಥ ಆಶ್ರಮದಲ್ಲಿ ದತ್ತು ಪಡೆದ ಸಂದರ್ಭದಲ್ಲಿ ಆಕೆಗೆ ಕೇವಲ ಮೂರು ವಾರ ವಯಸ್ಸಾಗಿತ್ತು. ಬಳಿಕ ಆಸ್ಟ್ರೇಲಿಯಾಗೆ ಲಿಸಾ ಪೋಷಕರು ಕರೆದುಕೊಂಡು ಹೋಗಿದ್ದರು. ಇತ್ತೀಚೆಗೆ ತಮ್ಮ ತಂದೆಗೆ ಬಗ್ಗೆ ಮಾತನಾಡಿದ್ದ ಸ್ಥಳೇಕರ್, ನನ್ನ ತಂದೆಗೆ ಕ್ರಿಕೆಟ್ ಎಂದರೇ ತುಂಬಾ ಇಷ್ಟ. ಆದ್ದರಿಂದ ನಾನು ಕ್ರಿಕೆಟ್ ಆಡುತ್ತಿದ್ದೆ. 8-9 ವಯಸ್ಸಿನ ವೇಳೆಗೆ ಕ್ರಿಕೆಟನ್ನು ಪೂರ್ತಿಯಾಗಿ ಇಷ್ಟಪಟ್ಟಿದೆ ಎಂದು ತಿಳಿಸಿದ್ದರು.

    1990ರಲ್ಲಿ ಮಹಿಳಾ ರಾಷ್ಟ್ರೀಯ ಕ್ರಿಕೆಟ್ ಲೀಗ್ ಮೂಲಕ ಪಾದಾರ್ಪಣೆ ಮಾಡಿ ಸುದೀರ್ಘ ಕಾಲ ಕ್ರಿಕೆಟ್ ಆಡಿದ್ದ ಸ್ಥಳೇಕರ್, ಆಸೀಸ್ ಪರ ನಾಲ್ಕು ವಿಶ್ವಕಪ್‍ಗಳನ್ನು ಆಡಿದ್ದಾರೆ. ಆಸೀಸ್ ಪರ 8 ಟೆಸ್ಟ್, 125 ಏಕದಿನ, 54 ಟಿ20 ಪಂದ್ಯಗಳನ್ನಾಡಿದ್ದಾರೆ. ಏಕದಿನ ಕ್ರಿಕೆಟ್‍ನಲ್ಲಿ 1 ಸಾವಿರ ರನ್ ಹಾಗೂ 100 ವಿಕೆಟ್ ಪಡೆದ ಮೊದಲ ಆಟಗಾರ್ತಿ ಎಂಬ ದಾಖಲೆಯನ್ನು ಹೊಂದಿದ್ದಾರೆ. ಕ್ರಿಕೆಟ್ ನಿವೃತ್ತಿ ಹೇಳಿದ ಬಳಿಕ ಕ್ರಿಕೆಟ್ ವಿಶ್ಲೇಷಣೆ, ಕೋಚ್, ಕ್ರಿಕೆಟ್ ಅಸೋಸಿಶಿಯೇಷನ್ ಸದಸ್ಯರಾಗಿ ಕ್ರಿಕೆಟ್ ಸೇವೆಯನ್ನು ಮುಂದುವರಿಸಿದ್ದಾರೆ.

    ಕ್ರಿಕೆಟ್‍ನಲ್ಲಿ ಮಾತ್ರವಲ್ಲದೇ ಮೈದಾನದ ಹೊರಗೂ ಸ್ಥಳೇಕರ್ ಅನೇಕ ಮೈಲಿಗಲ್ಲುಗಳಿಗೆ ಕಾರಣರಾಗಿದ್ದು, ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯಲ್ಲಿ ಸ್ಥಾನ ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

  • ಐಸಿಸಿ ಹಾಲ್ ಆಫ್ ಫೇಮ್ ಗೌರವ ಪಡೆದ ರಾಹುಲ್ ದ್ರಾವಿಡ್

    ಐಸಿಸಿ ಹಾಲ್ ಆಫ್ ಫೇಮ್ ಗೌರವ ಪಡೆದ ರಾಹುಲ್ ದ್ರಾವಿಡ್

    ತಿರುವನಂತಪುರಂ: ಟೀಂ ಇಂಡಿಯಾ ಮಾಜಿ ಆಟಗಾರ, ಅಂಡರ್ 19 ತಂಡದ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಐಸಿಸಿ ನೀಡುವ ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾಗಿದ್ದು, ಈ ಮೂಲಕ ಪ್ರಶಸ್ತಿ ಪಡೆದ 5ನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆ ಪಡೆದರು.

    ಕೇರಳದಲ್ಲಿ ನಡೆಯುತ್ತಿರುವ ವಿಂಡೀಸ್ ವಿರುದ್ಧದ 5ನೇ ಏಕದಿನ ಪಂದ್ಯಕ್ಕೂ ಮುನ್ನ ನಡೆದ ಔಪಚಾರಿಕ ಕಾರ್ಯಕ್ರಮದಲ್ಲಿ ಸುನಿಲ್ ಗವಾಸ್ಕರ್ ಅವರು ಐಸಿಸಿ ನೀಡುವ ಗೌರವ ಕಾಣಿಕೆಯನ್ನು ರಾಹುಲ್ ಅವರಿಗೆ ಹಸ್ತಾಂತರಿಸಿದರು. ಈ ಹಿಂದೆ ಭಾರತದ ಬಿಷನ್ ಸಿಂಗ್ ಬೇಡಿ, ಸುನಿಲ್ ಗವಾಸ್ಕರ್, ಕಪಿಲ್ ದೇವ್, ಅನಿಲ್ ಕುಂಬ್ಳೆ ಐಸಿಸಿ ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾಗಿದ್ದರು.

    ಈ ವೇಳೆ ಮಾತನಾಡಿದ ರಾಹುಲ್ ದ್ರಾವಿಡ್, ಐಸಿಸಿ ಹಾಲ್ ಆಫ್ ಫೇಮ್ ಎಲೈಟ್ ಪಟ್ಟಿಗೆ ನನ್ನನ್ನು ಸೇರಿಸಿದ್ದಕ್ಕೆ ಸಂತಸವಾಗುತ್ತಿದೆ. ಇದು ತಮಗೆ ದೊರಕಿರುವ ಅತಿ ದೊಡ್ಡ ಗೌರವ. ನನ್ನ ಹೀರೋಗಳ ಜೊತೆಗೆ ಗುರುತಿಸಿರುವುದು ನನಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು. ಅಲ್ಲದೇ ಇದೇ ವೇಳೆ ತಮ್ಮ ವೃತ್ತಿ ಜೀವನದಲ್ಲಿ ಬೆಂಬಲ ಸೂಚಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.

    ದ್ರಾವಿಡ್ ತಮ್ಮ ವೃತ್ತಿ ಜೀವನದಲ್ಲಿ 164 ಟೆಸ್ಟ್ ಪಂದ್ಯಗಳಿಂದ 36 ಶತಕಗಳೊಂದಿಗೆ 13,288 ರನ್ ಗಳಿಸಿದ್ದಾರೆ. ಅಲ್ಲದೇ 344 ಏಕದಿನ ಪಂದ್ಯಗಳಿಂದ 10,899 ರನ್ ಗಳಿಸಿದ್ದು, 2004 ರಲ್ಲಿ ಐಸಿಸಿ ವಾರ್ಷಿಕ ಟೆಸ್ಟ್ ಆಟಗಾರರಾಗಿ ಆಯ್ಕೆ ಆಗಿದ್ದರು. ಕೇವಲ ಬ್ಯಾಟಿಂಗ್ ಮಾತ್ರವಲ್ಲದೇ ಸ್ಲಿಪ್ ನಲ್ಲಿ 210 ಕ್ಯಾಚ್ ಪಡೆಯುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಐಸಿಸಿ `ಹಾಲ್ ಆಫ್ ಫೇಮ್’ ಗೌರವಕ್ಕೆ ಪಾತ್ರರಾದ ರಾಹುಲ್ ದ್ರಾವಿಡ್

    ಐಸಿಸಿ `ಹಾಲ್ ಆಫ್ ಫೇಮ್’ ಗೌರವಕ್ಕೆ ಪಾತ್ರರಾದ ರಾಹುಲ್ ದ್ರಾವಿಡ್

    ದುಬೈ: ಟೀಂ ಇಂಡಿಯಾ ಮಾಜಿ ನಾಯಕ, ಕನ್ನಡಿಗ ರಾಹುಲ್ ದ್ರಾವಿಡ್ ಪ್ರತಿಷ್ಠಿತ ಐಸಿಸಿ (ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ) ನೀಡುವ ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಮೂಲಕ ಹಾಲ್ ಆಫ್ ಫೇಮ್ ಪ್ರಶಸ್ತಿ ಪಡೆದ ಟೀಂ ಇಂಡಿಯಾ ಐದನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಡಬ್ಲಿನ್ ನಲ್ಲಿ ಭಾನುವಾರ ನಡೆದ ಐಸಿಸಿ ಸಮಾರಂಭದಲ್ಲಿ ಆಸೀಸ್ ತಂಡದ ಮಾಜಿ ನಾಯಕ ರಿಕಿ ಪಾಟಿಂಗ್, ಇಂಗ್ಲೆಂಡ್ ಮಾಜಿ ಮಹಿಳಾ ಆಟಗಾರ್ತಿ ಕ್ಲೇರ್ ಟೇಲರ್ ರೊಂದಿಗೆ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ವಿಶೇಷವಾಗಿ ರಿಕಿ ಪಾಟಿಂಗ್ ಆಯ್ಕೆಯೊಂದಿಗೆ ಈ ಪ್ರಶಸ್ತಿ ಪಡೆದ ಆಸೀಸ್ ತಂಡದ 25 ಆಟಗಾರ ಎನಿಸಿಕೊಂಡರು. ಅಲ್ಲದೇ ಟೇಲರ್ ಇಂಗ್ಲೆಂಡ್ 3ನೇ ಹಾಗೂ ಮಹಿಳಾ ಕ್ರಿಕೆಟರ್ ಗಳಲ್ಲಿ 7ನೇ ಆಟಗಾರ್ತಿಯಾಗಿ ಆಯ್ಕೆ ಆಗಿದ್ದಾರೆ.

    ಐಸಿಸಿ ಹಾಲ್ ಆಫ್ ಫೇಮ್ ಸಮಿತಿ ಈ ಬಾರಿ ಮೂವರು ಆಟಗಾರರನ್ನು ಆಯ್ಕೆ ಮಾಡಿದ್ದು, ಈ ಗೌರವ ನೀಡುವುದು ವಿಶ್ವದ ಶ್ರೇಷ್ಠ ಆಟಗಾರರನ್ನು ಗೌರವಿಸುವ ಒಂದು ಮಾರ್ಗವಾಗಿದ್ದು, ಉತ್ತಮ ಸಾಧನೆ ಮಾಡಿದ ಕೆಲ ಆಟಗಾರರನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ. ನಾವು ರಾಹುಲ್ ದ್ರಾವಿಡ್, ರಿಕಿ ಪಾಟಿಂಗ್ ಹಾಗೂ ಕ್ಲೇರ್ ಟೇಲರ್ ಅವರಿಗೆ ಅಭಿನಂದನೆ ತಿಳಿಸುತ್ತೇವೆ ಎಂದು ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡೇವಿಡ್ ರಿಚಡ್ರ್ಸನ್ ಹೇಳಿದ್ದಾರೆ.

    ಐಸಿಸಿ ಗೌರವ ಪಡೆದ ರಾಹುಲ್ ದ್ರಾವಿಡ್ ಪ್ರತಿಕ್ರಿಯಿಸಿ, ಐಸಿಸಿ ಪ್ರಶಸ್ತಿ ನೀಡಿರುವುದು ಹೆಚ್ಚು ಸಂತಸ ತಂದಿದೆ. ಸಾರ್ವಕಾಲಿಕ ಶ್ರೇಷ್ಠ ಆಟಗಾರರ ಪಟ್ಟಿಯಲ್ಲಿ ಹೆಸರು ಪಡೆಯುವುದು ಯಾವುದೇ ಆಟಗಾರ ವೃತ್ತಿ ಜೀವನ ಆರಂಭದಲ್ಲಿ ಇಂತಹ ಕನಸು ಕಾಣುತ್ತಾರೆ. ಸದ್ಯ ಇದು ಆಪಾರ ಸಂತೋಷವನ್ನು ಉಂಟು ಮಾಡಿದೆ. ಕರ್ನಾಟಕ ಕ್ರಿಕೆಟ್ ಬೋರ್ಡ್ ಮತ್ತು ಬಿಸಿಸಿಐ ಹಾಗೂ ನನ್ನ ವೃತ್ತಿ ಜೀವನದುದಕ್ಕೂ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಎಂದು ತಿಳಿಸಿದ್ದಾರೆ.

    ರಾಹುಲ್ ದ್ರಾವಿಡ್ ಹಾಗೂ ರಿಕಿ ಪಾಟಿಂಗ್ ಇಬ್ಬರು ಸಹ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ನಲ್ಲಿ 10 ಸಾವಿರ ರನ್ ಪೂರೈಸಿದ ಆಟಗಾರರಾಗಿದ್ದು, 164 ಟೆಸ್ಟ್ ಗಳಲ್ಲಿ 36 ಶತಕಗಳೊಂದಿಗೆ ದ್ರಾವಿಡ್ 13,288 ರನ್, ಏಕದಿನ ಮಾದರಿಯ 344 ಪಂದ್ಯಗಳಲ್ಲಿ 12 ಶತಕಗಳೊಂದಿಗೆ 10,889 ರನ್ ಪೂರೈಸಿದ್ದಾರೆ. ಅಲ್ಲದೇ ಟೆಸ್ಟ್ 210, ಏಕದಿನದಲ್ಲಿ 196 ಕ್ಯಾಚ್ ಹಿಡಿದ್ದಾರೆ. ಈ ಹಿಂದೆ 2004 ರಲ್ಲಿ ಐಸಿಸಿ ಕ್ರಿಕೆಟರ್ ಆಫ್ ದ ಇಯರ್ ಪ್ರಶಸ್ತಿಯನ್ನು ಪಡೆದಿದ್ದರು.

    ಟೀಂ ಇಂಡಿಯಾ ಮಾಜಿ ಆಟಗಾರರಾದ ಅನಿಲ್ ಕುಂಬ್ಳೆ (2015), ಕಪಿಲ್ ದೇವ್ (2010), ಬಿಷನ್ ಬೇಡಿ (2009), ಸುನೀಲ್ ಗವಾಸ್ಕರ್ (2009) ಐಸಿಸಿ ಹಾಲ್ ಆಫ್ ಫೇಮ್ ಗೌರವ ಪಡೆದಿದ್ದರು.