Tag: ಹಾಲಿನ ಅಭಿಷೇಕ

  • ಸಿ.ಟಿ ರವಿ ಸೋಲಿಸಿದ್ದಕ್ಕೆ ಭೋಜೇಗೌಡರಿಗೆ ಹಾಲಿನ ಅಭಿಷೇಕ

    ಸಿ.ಟಿ ರವಿ ಸೋಲಿಸಿದ್ದಕ್ಕೆ ಭೋಜೇಗೌಡರಿಗೆ ಹಾಲಿನ ಅಭಿಷೇಕ

    – ರವಿ ಸೋಲಿಗೆ ಅವರ ನಾಲಿಗೆಯೇ ಕಾರಣ

    ಚಿಕ್ಕಮಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT Ravi) ಯವರನ್ನು ವಿಧಾನಸಭಾ ಚುನಾವಣೆಯಲ್ಲಿ ಸೋಲಿಸಿದ್ದಕ್ಕೆ ಭೋಜೇಗೌಡರಿಗೆ ಹಾಲಿನ ಅಭಿಷೇಕ ನಡೆಸಲಾಯಿತು.

    ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಪರಮಾಪ್ತ ಭೋಜೇಗೌಡ, ಜೆಡಿಎಸ್ ಅಭ್ಯರ್ಥಿ ಇದ್ದರೂ ಸಿ.ಟಿ ರವಿ ವಿರುದ್ಧ ಭೋಜೇಗೌಡ (Bhoje Gowda) ಅಖಾಡಕ್ಕಿಳಿದಿದ್ದರು. ಈ ಮೂಲಕ ಸಿ.ಟಿ.ರವಿ ಸೋಲಿನ ಮಾಸ್ಟರ್ ಮೈಂಡ್ ಆಗಿದ್ದಾರೆ. ಹೀಗಾಗಿ ಜೆ.ಡಿ.ಎಸ್ ಕಾರ್ಯಕರ್ತರು ಭೋಜೇಗೌಡರಿಗೆ ಚಿಕ್ಕಮಗಳೂರು ನಗರದ ಹೊಸಮನೆ ಬಡಾವಣೆಯಲ್ಲಿ ಸನ್ಮಾನ ಹಾಗೂ ಅಭಿಷೇಕ ಮಾಡಿದ್ದಾರೆ. ಕಾಂಗ್ರೆಸ್ ಜೊತೆ ಒಳಒಪ್ಪಂದ ಮಾಡಿಕೊಂಡಿದ್ದ ಭೋಜೇಗೌಡ, ಜೆಡಿಎಸ್ ನಿಂದ ಗೆದ್ದು ಕಾಂಗ್ರೆಸ್ಸಿನ ತಮ್ಮಯ್ಯ ಪರ ಮತಯಾಚಿಸಿದ್ದರು. ಇದನ್ನೂ ಓದಿ: ಚಿಕ್ಕಮಗಳೂರಲ್ಲಿ 5 ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಜಯ – ಬಿಜೆಪಿಗೆ ಹೀನಾಯ ಸೋಲು

    ಬಳಿಕ ಸಿ.ಟಿ.ರವಿ ಬುದ್ಧಿವಂತರಿದ್ದಾರೆ ಎಂದು ಹಾಡಿ ಹೊಗಳಿದ ಭೋಜೇಗೌಡ, ಸಿ.ಟಿ.ರವಿ ಬಹಳ ದೊಡ್ಡ ಮಟ್ಟದಲ್ಲಿ ಬೆಳವಣಿಗೆ ಆಗಿದ್ದರು. ರಾಷ್ಟ್ರಮಟ್ಟದಲ್ಲಿ ಕೆಲಸ ಮಾಡುವ ಯೋಗವೂ ಲಭಿಸಿತ್ತು. ಟೀಕೆಗಳು ತಪ್ಪಲ್ಲ, ಆದರೆ ಅದಕ್ಕೊಂದು ಇತಿಮಿತಿ ಇರುತಿತ್ತು. ರಾಜಕೀಯ ಅಸ್ತ್ರದ ಟೀಕೆ ಸರಿ, ವೈಯಕ್ತಿಕ ಟೀಕೆ ಸರಿಯಲ್ಲ. ಸಿ.ಟಿ ರವಿ ಸದನದ ಒಳಗೆ-ಹೊರಗೆ ಎರಡೂ ಕಡೆ ವೈಯಕ್ತಿಕ ಟೀಕೆ ಮಾಡಿದ್ದಾರೆ. ಟೀಕೆ ಮಾಡುವಾಗ ವ್ಯಕ್ತಿತ್ವ, ರಾಜಕೀಯ ಮುತ್ಸದ್ದಿತನವನ್ನ ಯೋಚನೆ ಮಾಡಬೇಕು ಎಂದರು.

    ಯಾರನ್ನೋ ಮೆಚ್ಚಿಸಲು, ಕ್ಷಣಿಕ ಸುಖಕ್ಕೆ, ಕಾರ್ಯಕರ್ತರ ಮೆಚ್ಚಿಸಲು ವೈಯಕ್ತಿಕ ಟೀಕೆ ಸರಿಯಲ್ಲ. ದೇವೇಗೌಡ (HD Devegowda) ರಿಗೆ ಸಾಬರಾಗಿ ಹುಟ್ಲಿ ಅನ್ನೋದು, ಸಿದ್ದರಾಮಯ್ಯಗೆ ಸಿದ್ರಾಮುಲ್ಲಾ ಖಾನ್ ಅನ್ನೋದು. ಸಿ.ಟಿ.ರವಿ ಯಾರನ್ನ ಬಿಟ್ಡಿದ್ದಾರೆ. ಯಾರನ್ನೂ ಬಿಟ್ಟಿಲ್ಲ. ಟೀಕೆ ಮಾಡುವಾಗಲು ರಾಜಕೀಯ ಸ್ಟ್ಯಾಂಡರ್ಡ್ ನಲ್ಲಿ ಟೀಕೆ ಮಾಡಬೇಕು. ಕುಲದ ಕುತ್ತಿಗೆ ಉದ್ದ ಸರ್… ಅಷ್ಟು ಸುಲಭ ಇಲ್ಲ. ಬ್ಲಡ್ ಇಸ್ ಥಿಕ್ಕರ್ ದೆನ್ ವಾಟರ್. ಕುಲದ ಬಗ್ಗೆ ಮಾತನಾಡುವಾಗ ಜನ ಆತನ ಹಮ್ಮಿನ ಬಗ್ಗೆ ಯೋಚಿಸ್ತಾರೆ ಎಂದು ಹೇಳಿದರು.

    ಸಿ.ಟಿ.ರವಿ ಸೋಲಿಗೆ ಅವರ ನಾಲಿಗೆಯೇ ಕಾರಣ. ದುರಾಡಳಿತ, ದುರಾಂಕಾರ, ನಾಲಿಗೆ ಎಲ್ಲವೂ ಸೇರಿ ಕೂಡಿ ಸೋಲಿಸಿವೆ ಎಂದು ತಿಳಿಸಿದರು. ಇದನ್ನೂ ಓದಿ: ಸೋತಿರೋದಕ್ಕೆ ಕುಂಟು ನೆಪ ಹೇಳೋದು ಸರಿಯಲ್ಲ: ಕೈ ನಾಯಕರಿಗೆ ಸೂರ್ಯ ತಿರುಗೇಟು

  • ಸತ್ತು ವರ್ಷಗಳೇ ಕಳೆದ್ರೂ ಕಡಿಮೆಯಾಗಿಲ್ಲ ಧರ್ಮರಾಜ್ ಚಡಚಣನ ಹವಾ

    ಸತ್ತು ವರ್ಷಗಳೇ ಕಳೆದ್ರೂ ಕಡಿಮೆಯಾಗಿಲ್ಲ ಧರ್ಮರಾಜ್ ಚಡಚಣನ ಹವಾ

    ವಿಜಯಪುರ: ಜಿಲ್ಲೆಯ ಭೀಮಾತೀರದ ಹಂತಕ ಧರ್ಮರಾಜ್ ಚಡಚಡಣ ಸತ್ತು ವರ್ಷಗಳೇ ಕಳೆದರೂ ಆತನ ಹವಾ ಮಾತ್ರ ಕಡಿಮೆ ಆಗಿಲ್ಲ.

    ಹಂತಕ ಧರ್ಮನ ಚಿತ್ರವಿರುವ ಬ್ಯಾನರ್ ಗೆ ಅವರ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡಿ ಸಂಭ್ರಮಿಸಿದ್ದಾರೆ. ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಲೋಣಿ ಬಿ.ಕೆ ಗ್ರಾಮದ ಊರ ದೇವರ ಜಾತ್ರೆಯಲ್ಲಿ ಅಭಿಮಾನಿಗಳು ತಮ್ಮ ಅಭಿಮಾನ ತೋರಿದ್ದಾರೆ. ಗ್ರಾಮದ ದೇವರ ಜಾತ್ರೆ ಹಿನ್ನೆಲೆ ಸ್ವಾಗತ ಬ್ಯಾನರ್ ಹಾಕಿದ್ದ ಹಂತಕ ಧರ್ಮರಾಜ್ ಅಭಿಮಾನಿಗಳು, ಬ್ಯಾನರ್ ಗೆ ಹಾಲಿನ ಅಭಿಷೇಕ ಮಾಡಿ ಸಂಭ್ರಮಿಸಿದ್ದಾರೆ.

    ಇದೇ ಲೋಣಿ ಬಿ.ಕೆ ಗ್ರಾಮದಲ್ಲಿ ಎದುರಾಳಿ ಗ್ಯಾಂಗ್‍ನ ಪುತ್ರಪ್ಪ ಸಾಹುಕಾರ್ ಬೈರಗೊಂಡ ಮೇಲೆ ಧರ್ಮರಾಜ್ ಫೈರಿಂಗ್ ಮಾಡಿದ್ದ. ಇದೇ ಗ್ರಾಮದ ಊರ ದೇವರ ಜಾತ್ರೆಯಲ್ಲಿ ಹಂತಕ ಧರ್ಮನ ಬ್ಯಾನರ್ ಗೆ ಹಾಲಿನ ಅಭಿಷೇಕ ಈಗ ನಡೆದಿದೆ. ಭೀಮಾತೀರದಲ್ಲಿ ನಡೆಯೋ ಬಹುತೇಕ ಜಾತ್ರೆಗಳಲ್ಲಿ ಧರ್ಮರಾಜ್‍ನ ಬ್ಯಾನರ್ ಗಳನ್ನು ಅಭಿಮಾನಿಗಳು ಹಾಕುತ್ತಾರೆ.

  • ಹಾಲಿನ ಅಭಿಷೇಕದ ಬದಲು, ಬಡ ಮಕ್ಕಳಿಗೆ ಹಾಲು ನೀಡಿ ಯಶ್ ಹುಟ್ಟುಹಬ್ಬ ಆಚರಣೆ

    ಹಾಲಿನ ಅಭಿಷೇಕದ ಬದಲು, ಬಡ ಮಕ್ಕಳಿಗೆ ಹಾಲು ನೀಡಿ ಯಶ್ ಹುಟ್ಟುಹಬ್ಬ ಆಚರಣೆ

    ಚಿಕ್ಕೋಡಿ/ಬೆಳಗಾವಿ: ನಟ ಯಶ್ ಹುಟ್ಟುಹಬ್ಬವನ್ನು ರಾಜ್ಯದೆಲ್ಲೆಡೆ ಸಂಭ್ರದಿಂದ ಆಚರಿಸಲಾಗುತ್ತಿದೆ. ಅಭಿಮಾನಿಗಳು ವಿವಿಧ ರೀತಿಯಲ್ಲಿ ಯಶ್ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಅದೇ ರೀತಿ ಈ ಅಭಿಮಾನಿಗಳು ಕಟೌಟಿಗೆ ಹಾಲು ಎರೆದು ಆಚರಿಸದೆ, ಮಕ್ಕಳಿಗೆ ಹಾಲು ಹಂಚಿ ಸಂಭ್ರಮಿಸಿದ್ದಾರೆ.

    ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕೋಚರಿ ಗ್ರಾಮದಲ್ಲಿ ವಿಶೇಷವಾಗಿ ನಟ ಯಶ್ ಹುಟ್ಟುಹಬ್ಬ ಆಚರಿಸಲಾಯಿತು. ಅಭಿಮಾನಿಗಳು 20 ಅಡಿ ಕಟೌಟ್ ನಿರ್ಮಿಸಿದ್ದರೂ ಅದಕ್ಕೆ ಹಾಲಿನ ಅಭಿಷೇಕ ಮಾಡದೇ ಅದೇ ಹಾಲನ್ನು ಬಡ ಮಕ್ಕಳಿಗೆ ನೀಡಿ ಸಂಭ್ರಮಿಸಿದರು.

    ಅಲ್ಲದೆ ಅಭಿಮಾನಿಗಳು ಕೆಕ್ ಕತ್ತರಿಸಿ, ಪಟಾಕಿ ಸಿಡಿಸಿ ಸಂಭ್ರದಿಂದ ಹುಟ್ಟುಹಬ್ಬ ಆಚರಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಯಶ್ ಅಭಿಮಾನಿಗಳಾದ ಹಿರಾಶುಗರಸ್, ಶಿವ ನಾಯಕ್, ರಾಮಪ್ಪ ಚೌಗಲಾ, ಮಂಜುನಾಥ ಮತ್ತಿವಾಡ, ಅಭಿನಂದನ್ ಗೋಣಿ, ದುಂಡಪ್ಪಾ ಮಗದುಮ್ಮ ಸೇರಿದಂತೆ ಇತರರು ಇದ್ದರು.