Tag: ಹಾರ್ಧಿಕ್ ಪಾಂಡ್ಯ

  • ರೋಹಿತ್ ಫಿಫ್ಟಿ, 5 ಸಾವಿರ ರನ್ ಸಾಧನೆ- ಕಿಂಗ್ಸ್‌ಗೆ 192 ರನ್ ಗುರಿ

    ರೋಹಿತ್ ಫಿಫ್ಟಿ, 5 ಸಾವಿರ ರನ್ ಸಾಧನೆ- ಕಿಂಗ್ಸ್‌ಗೆ 192 ರನ್ ಗುರಿ

    – ಹಾರ್ದಿಕ್, ಪೊಲ್ಲಾರ್ಡ್ ಸ್ಫೋಟಕ ಜೊತೆಯಾಟ

    ಅಬುಧಾಬಿ: ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾರ ಅರ್ಧ ಶತಕ ಹಾಗೂ ಹಾರ್ದಿಕ್ ಪಾಂಡ್ಯ, ಪೊಲ್ಲಾರ್ಡ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ 192 ರನ್ ಗುರಿ ನೀಡಿದೆ.

    ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಕೆಎಲ್ ರಾಹುಲ್ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ವೇಗಿ ಶೆಲ್ಡನ್ ಕಾಟ್ರೆಲ್ ಮುಂಬೈ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ ಅವರನ್ನು ಖಾತೆ ತೆರೆಯುವ ಮುನ್ನವೇ ಕ್ಲೀನ್ ಬೌಲ್ಡ್ ಮಾಡಿದರು. ಮೊದಲ ವಿಕೆಟ್ ಬಹುಬೇಗ ಕಳೆದುಕೊಂಡರೂ ನಾಯಕ ರೋಹಿತ್ ಶರ್ಮಾ ಬೌಂಡರಿಯೊಂದಿಗೆ ಖಾತೆ ತೆರೆದರು. ಆದರೆ 7 ಎಸೆತಗಳಲ್ಲಿ 10 ರನ್ ಗಳಿಸಿದ್ದ ಸೂರ್ಯ ಕುಮಾರ್ ಯಾದವ್ ರನೌಟ್ ಆಗುವ ಮೂಲಕ ನಿರ್ಗಮಿಸಿದರು. 21 ರನ್ ಗಳಿಗೆ ಮುಂಬೈ ತನ್ನ 2ನೇ ವಿಕೆಟ್ ಕಳೆದುಕೊಂಡಿತ್ತು. ಪವರ್ ಪ್ಲೇ ಅಂತ್ಯ ವೇಳೆಗೆ 41 ರನ್ ಗಳಿಸಿದ್ದ ಮುಂಬೈ 2 ವಿಕೆಟ್ ಕಳೆದುಕೊಂಡಿತ್ತು.

    ರೋಹಿತ್ 5 ಸಾವಿರ ರನ್: ಈ ನಡುವೆಯೇ ಬ್ಯಾಟಿಂಗ್ ಮುಂದುವರಿಸಿದ್ದ ರೋಹಿತ್ ಶರ್ಮಾ ಇನ್ನಿಂಗ್ಸ್ ನಲ್ಲಿ 4 ರನ್ ಗಳಿಸಿದ್ದ ಸಂದರ್ಭದಲ್ಲಿ ಐಪಿಎಲ್ ನಲ್ಲಿ 5 ಸಾವಿರ ರನ್ ಪೂರೈಸಿದರು. ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಹಾಗೂ ಚೆನ್ನೈ ತಂಡದ ಸುರೇಶ್ ರೈನಾ ಮಾತ್ರ ಐಪಿಎಲ್‍ನಲ್ಲಿ 5 ಸಾವಿರ ರನ್ ಗಳಿಸಿದ ಸಾಧನೆ ಮಾಡಿದ್ದು, ರೋಹಿತ್ 3ನೇ ಆಟಗಾರರಾಗಿ ಪಟ್ಟಿಗೆ ಸೇರ್ಪಡೆಯಾದರು.

    ಬಹುಬೇಗ ಮುಂಬೈ ಮೊದಲ ಎರಡು ವಿಕೆಟ್‍ಗಳನ್ನು ಕಳೆದುಕೊಂಡರೂ ಇಶಾನ್ ಕಿಶನ್ ಹಾಗೂ ನಾಯಕ ರೋಹಿತ್‍ರ ತಾಳ್ಮೆಯ ಆಟದಿಂದ ಈ ಜೋಡಿ 3ನೇ ವಿಕೆಟ್‍ಗೆ ಅರ್ಧ ಶತಕದ ಜೊತೆಯಾಟ ನೀಡಿತು. 10 ಓವರ್ ಗಳ ಅಂತ್ಯಕ್ಕೆ ಮುಂಬೈ 2 ವಿಕೆಟ್ ನಷ್ಟಕ್ಕೆ 62 ರನ್ ಪೇರಿಸಿತ್ತು. 30 ರನ್ ಗಳಿಸಿದ್ದ ಸಂದರ್ಭದಲ್ಲಿ ನೀಶಾಮ್ ಬೌಲಿಂಗ್‍ನಲ್ಲಿ ಬಿಷ್ಣೋಯಿ ಕ್ಯಾಚ್ ಕೈಚೆಲ್ಲುವ ಮೂಲಕ ಜೀವದಾನ ನೀಡಿದರು. ಈ ನಡುವೆ ದಾಳಿಗಿಳಿದ ಗೌತಮ್ ಬೌಲಿಂಗ್‍ನಲ್ಲಿ ಉತ್ತಮವಾಗಿ ಆಡುತ್ತಿದ್ದ ಇಶಾನ್ ಕಿಶನ್ ಭಾರೀ ಹೊಡೆತಕ್ಕೆ ಕೈಹಾಕಿ ವಿಕೆಟ್ ಒಪ್ಪಿಸಿದರು. 32 ಎಸೆತಗಳಲ್ಲಿ ಬೌಂಡರಿ, ಸಿಕ್ಸರ್ ನೆರವಿನೊಂದಿಗೆ ಕಿಶನ್ 28 ರನ್ ಗಳಿಸಿದ್ದರು.

    ವಿಕೆಟ್ ಕಳೆದುಕೊಳ್ಳುತ್ತಿದ್ದರು ತಂಡದ ಮೊತ್ತವನ್ನು ಹೆಚ್ಚಿಸುವತ್ತ ಗಮನ ನೀಡಿದ್ದ ರೋಹಿತ್ ಶರ್ಮಾ ರೊಂದಿಗೆ ಕೂಡಿಕೊಂಡ ಪೊಲ್ಲಾರ್ಡ್ ರನ್‍ಗಳಿಗೆ ವೇಗ ನೀಡಿದರು. 40 ಎಸೆತಗಳಲ್ಲಿ ಅರ್ಧ ಶತಕ (53 ರನ್) ಪೂರೈಸಿ ರೋಹಿತ್ ಶರ್ಮಾ ಬಿರುಸಿನ ಬ್ಯಾಟಿಂಗ್‍ಗೆ ಮುಂದಾದರು. 16ನೇ ಓವರಿನಲ್ಲಿ 22 ರನ್ ಸಿಡಿಸಿದ ರೋಹಿತ್ ಶರ್ಮಾ, ಶಮಿ ಬೌಲಿಂಗ್ ನಲ್ಲಿ ಮ್ಯಾಕ್ಸ್ ವೆಲ್ ಅವರ ಸಮಯೋಚಿತ ಫೀಲ್ಡಿಂಗ್ ನಿಂದ 70 ರನ್ ಗಳಿಸಿದ್ದ ಸಂದರ್ಭದಲ್ಲಿ ಔಟಾದರು.

    ಆ ಬಳಿಕ ಬಂದ ಹಾರ್ದಿಕ್ ಪಾಂಡ್ಯ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅಂತಿಮ 4 ಓವರ್ ಗಳಲ್ಲಿ ಸಿಕ್ಸರ್, ಬೌಂಡರಿಗಳ ಸುರಿಮಳೆ ಮಾಡಿದ ಹಾರ್ದಿಕ್ 11 ಎಸೆತಗಳಲ್ಲಿ 3 ಬೌಂಡರಿ 2 ಸಿಕ್ಸರ್ ಸಿಡಿಸಿ 30 ರನ್ ಗಳಿಸಿದರು. ಪೊಲ್ಲಾರ್ಡ್, ಹಾರ್ದಿಕ್ ಜೋಡಿ 23 ಎಸೆತಗಳಲ್ಲಿ 67 ರನ್ ಜೊತೆಯಾಟ ನೀಡಿ ತಂಡದ ಮೊತ್ತವನ್ನು 191ಕ್ಕೇರಿದರು.