Tag: ಹಾರ್ದಿಕ್ ಪಾಂಡ್ಯ

  • ಮಹಿ ಚಚ್ಚಿದ ಆ 3 ಸಿಕ್ಸರ್‌ ಪಾಂಡ್ಯಗೆ ಸಂಕಷ್ಟ ತಂದೊಡ್ಡಿತಾ?

    ಮಹಿ ಚಚ್ಚಿದ ಆ 3 ಸಿಕ್ಸರ್‌ ಪಾಂಡ್ಯಗೆ ಸಂಕಷ್ಟ ತಂದೊಡ್ಡಿತಾ?

    – ಹಾರ್ದಿಕ್‌ ಪಾಂಡ್ಯ ಮುಂದಿರುವ ಸವಾಲುಗಳೇನು?

    ನವದೆಹಲಿ: ಇತ್ತೀಚೆಗೆ ಮುಂಬೈ ಇಂಡಿಯನ್ಸ್‌ ವಿರುದ್ಧ ನಡೆದ ಪಂದ್ಯದಲ್ಲಿ ಸಿಎಸ್‌ಕೆ (MI vs CSK) ಬ್ಯಾಟರ್‌ ಎಂ.ಎಸ್‌ ಧೋನಿ, ಹಾರ್ದಿಕ್‌ ಪಾಂಡ್ಯ (Hardik Pandya) ಅವರ ಬೌಲಿಂಗ್‌ನಲ್ಲಿ ಹ್ಯಾಟ್ರಿಕ್‌ ಸಿಕ್ಸರ್‌ ಸಿಡಿಸಿದ್ದರು. ಆ ಓವರ್‌ ಮುಕ್ತಾಯದ ವೇಳೆಗೆ ಪಾಂಡ್ಯ 26 ರನ್‌ ಬಿಟ್ಟುಕೊಟ್ಟಿದ್ದರು. ಅಲ್ಲದೇ ಮುಂಬೈ ಇಂಡಿಯನ್ಸ್‌ 20 ರನ್‌ಗಳ ಅಂತರದಿಂದಲೂ ಸೋಲುವಂತಾಯ್ತು. ಮುಂಬೈ ಈ ಪಂದ್ಯ ಸೋತ ಬಳಿಕ ಹಾರ್ದಿಕ್‌ ಪಾಂಡ್ಯ ಅವರ ಕಳಪೆ ಬೌಲಿಂಗ್‌ ಬಗ್ಗೆ ಭಾರೀ ಚರ್ಚೆ ಹುಟ್ಟಿಕೊಂಡಿದೆ. ಅಲ್ಲದೇ ಇದು ಅವರ ವಿಶ್ವಕಪ್‌ ಕೆರಿಯರ್‌ ಮೇಲೂ ಪರಿಣಾಮ ಉಂಟುಮಾಡಿದೆ.

    ಮುಂಬರುವ ಟಿ20 ವಿಶ್ವಕಪ್‌ಗೆ (T20 World Cup) ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಲು ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಎದುರು ನೋಡುತ್ತಿದ್ದಾರೆ. ಆದರೆ ಸದ್ಯ ನಡೆಯುತ್ತಿರುವ ಐಪಿಎಲ್‌ನಲ್ಲಿ (IPL 2024) ಪಾಂಡ್ಯ ಅವರ ಬೌಲಿಂಗ್‌ ಪ್ರದರ್ಶನದ ಮೇಲೆ ಅವರ ವಿಶ್ವಕಪ್‌ ಭವಿಷ್ಯ ಅಡಗಿದೆ ಎಂದು ಹೇಳಲಾಗುತ್ತಿದೆ. ಇದೇ ವೇಳೆ ಬ್ಯಾಟಿಂಗ್‌ನಲ್ಲಿ ಅಬ್ಬರಿಸುತ್ತಿರುವ ಶಿವಂ ದುಬೆ, ಸ್ಪಿನ್ನರ್‌ ಯಜುವೇಂದ್ರ ಚಹಲ್‌ರನ್ನ ಆಯ್ಕೆ ಸಮಿತಿ ವಿಶ್ವಕಪ್‌ಗೆ ಪರಿಗಣಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

    ಕಳೆದ ವಾರ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ (Rohit Sharma), ಕೋಚ್‌ ರಾಹುಲ್‌ ದ್ರಾವಿಡ್‌ ಹಾಗೂ ಆಯ್ಕೆ ಸಮಿತಿ ಸದಸ್ಯರು ಸಭೆ ನಡೆಸಿದ್ದಾರೆ. ಸಭೆಯಲ್ಲಿ ಹಾರ್ದಿಕ್‌ ಬಗ್ಗೆಯೂ ಚರ್ಚೆಯಾಗಿದ್ದು, ಅವರು ಐಪಿಎಲ್‌ನಲ್ಲಿ ಉತ್ತಮವಾಗಿ ಬೌಲ್‌ ಮಾಡಿದರಷ್ಟೇ ವಿಶ್ವಕಪ್‌ಗೆ ಆಯ್ಕೆ ಮಾಡುವ ಬಗ್ಗೆ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ. ಸದ್ಯ ಐಪಿಎಲ್‌ನಲ್ಲಿ ಆಡಿರುವ 6 ಪಂದ್ಯಗಳ ಪೈಕಿ 4ರಲ್ಲಿ ಹಾರ್ದಿಕ್‌ 11 ಓವರ್‌ ಬೌಲ್‌ ಮಾಡಿದ್ದಾರೆ. ಆದರೆ 12ರ ಎಕಾನಮಿಯಲ್ಲಿ ರನ್‌ ಬಿಟ್ಟುಕೊಟ್ಟಿದ್ದು, ಕೇವಲ 3 ವಿಕೆಟ್‌ ಪಡೆದಿದ್ದಾರೆ. ಇನ್ನುಳಿದ ಪಂದ್ಯಗಳಲ್ಲಿ ಉತ್ತಮ ಬೌಲ್‌ ಮಾಡಿದರೆ ಅವರು ವಿಶ್ವಕಪ್‌ ತಂಡಕ್ಕೆ ಆಯ್ಕೆಯಾಗಬಹುದು ಎನ್ನಲಾಗುತ್ತಿದೆ.

    ಮತ್ತೊಂದೆಡೆ ಸಿಎಸ್‌ಕೆ ತಂಡದ ಪರ ಮಧ್ಯಮ ಕ್ರಮಾಂಕದ ಬ್ಯಾಟರ್‌ ಶಿವಂ ದುಬೆ ಬ್ಯಾಟಿಂಗ್‌ನಲ್ಲಿ ಮಿಂಚುತ್ತಿದ್ದಾರೆ. ಇದರೊಂದಿಗೆ ಪರ್ಪಲ್‌ ಕ್ಯಾಪ್‌ ರೇಸ್‌ನಲ್ಲಿರುವ ಆರ್‌ಆರ್‌ ಆಟಗಾರ ಯಜುವೇಂದ್ರ ಚಾಹಲ್‌ ಅವರ ಹೆಸರೂ ಸಹ ವಿಶ್ವಕಪ್‌ ತಂಡದಲ್ಲಿ ಕೇಳಿಬರುತ್ತಿದೆ. ಇದರಿಂದ ಹಾರ್ದಿಕ್‌ ಪಾಂಡ್ಯ ನಾಯಕತ್ವದ ಜೊತೆಗೆ ತಮ್ಮ ಆಲ್‌ರೌಂಡ್‌ ಪ್ರದರ್ಶನದಲ್ಲಿ ಯಾವ ರೀತಿ ಯಶಸ್ಸು ಕಂಡುಕೊಳ್ಳುತ್ತಾರೆ ಎಂದಬುದನ್ನು ಮುಂದೆ ಕಾದು ನೋಡಬೇಕಿದೆ.

    ಏಕದಿನ ವಿಶ್ವಕಪ್‌ನಿಂದಲೂ ಹೊರಗುಳಿದಿದ್ದ ಪಾಂಡ್ಯ:
    ಕಳೆದ ವರ್ಷ ಭಾರತದ ಆತಿಥ್ಯದಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ (ICC World Cup) ಟೂರ್ನಿಯ 17ನೇ ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಸೆಣಸಾಟ ನಡೆಸಿದ್ದವು. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ 9ನೇ ಓವರ್ ನಲ್ಲಿ ಬೌಲಿಂಗ್ ಮಾಡುತ್ತಿದ್ದ ಪಾಂಡ್ಯ 3ನೇ ಎಸೆತ ಬೌಲಿಂಗ್ ಮಾಡಿದಾಗ ಕ್ರೀಸ್‌ನಲ್ಲಿದ್ದ ಲಿಟ್ಟನ್ ದಾಸ್ ಸ್ರೈಟ್‌ಡ್ರೈವ್‌ ಮಾಡಿದರು. ಆಗ ಪಾಂಡ್ಯ ಕಾಲಿನಿಂದ ಚೆಂಡನ್ನು ತಡೆಯಲು ಪ್ರಯತ್ನಿಸಿದಾಗ ಬ್ಯಾಲೆನ್ಸ್ ತಪ್ಪಿ ಕಾಲು ಉಳುಕಿಸಿಕೊಂಡರು. ತಕ್ಷಣವೇ ಫಿಸಿಯೋ ಥೆರಪಿಸ್ಟ್ ಬಂದು ಚಿಕಿತ್ಸೆ ನೀಡಿದರೂ ಮತ್ತೆ ಬೌಲಿಂಗ್ ಮಾಡಲು ಸಾಧ್ಯವಾಗಿಲ್ಲ. ಹಾಗಾಗಿ ಆಟದ ಮಧ್ಯದಲ್ಲೇ ಮೈದಾನ ತೊರೆಯಲು ನಿರ್ಧರಿಸಿದರು. ಬಳಿಕ ರೋಹಿತ್ ಶರ್ಮಾ ಜೊತೆ ಮಾತುಕತೆ ನಡೆದ ಕೊಹ್ಲಿ ಉಳಿದಿದ್ದ ಮೂರು ಎಸೆತಗಳನ್ನು ತಾವೇ ಎಸೆಯುವ ಮೂಲಕ ಬೌಲಿಂಗ್ ಪೂರ್ಣಗೊಳಿಸಿದರು. ಆ ಬಳಿಕ ವೃತ್ತಿಪರ ಕ್ರಿಕೆಟ್‌ನಿಂದ ದೀರ್ಘಕಾಲ ಹೊರಗುಳಿದಿದ್ದರು.

  • ಕೊನೇ ಓವರ್‌ನಲ್ಲಿ 26 ರನ್‌ ಚಚ್ಚಿಸಿಕೊಂಡ ಪಾಂಡ್ಯ – ಹಾರ್ದಿಕ್‌ ಕಳಪೆ ಬೌಲಿಂಗ್‌ಗೆ ಫುಲ್‌ ಕ್ಲಾಸ್‌

    ಕೊನೇ ಓವರ್‌ನಲ್ಲಿ 26 ರನ್‌ ಚಚ್ಚಿಸಿಕೊಂಡ ಪಾಂಡ್ಯ – ಹಾರ್ದಿಕ್‌ ಕಳಪೆ ಬೌಲಿಂಗ್‌ಗೆ ಫುಲ್‌ ಕ್ಲಾಸ್‌

    – 500 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಮಹಿ
    – ಹ್ಯಾಟ್ರಿಕ್‌ ಸಿಕ್ಸರ್‌ಗೆ ಹುಚ್ಚೆದ್ದು ಕುಣಿದ ಫ್ಯಾನ್ಸ್‌

    ಮುಂಬೈ: ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) ವಿರುದ್ಧ ಸೂಪರ್‌ ಸಂಡೆ ನಡೆದ ಪಂದ್ಯದಲ್ಲಿ ಹಾರ್ದಿಕ್‌ ಪಾಂಡ್ಯ (Hardik Pandya) ಅವರ ಕಳಪೆ ಬೌಲಿಂಗ್‌ ಮಾಜಿ ಕ್ರಿಕೆಟಿಗರ ಬೇಸರಕ್ಕೆ ಕಾರಣವಾಗಿದೆ. ಕಳೆದ 2 ಪಂದ್ಯಗಳಲ್ಲಿ ಬೌಲಿಂಗ್‌ ಮಾಡದ ಪಾಂಡ್ಯ ಸಿಎಸ್‌ಕೆ ವಿರುದ್ಧ ಹೆಚ್ಚು ರನ್‌ ಹೊಡೆಸಿಕೊಂಡಿದ್ದು ಭಾರೀ ಟಿಕೆಗೆ ಗುರಿಯಾಗಿದ್ದಾರೆ. ಪಾಂಡ್ಯ ವಿರುದ್ಧ ಸುನೀಲ್‌ ಗವಾಸ್ಕರ್‌, ಇರ್ಫಾನ್‌ ಪಠಾಣ್‌ ಅವರಂತಹ ಮಾಜಿ ಕ್ರಿಕೆಟಿಗರು ಅಸಮಾಧಾನ ಹೊರಹಾಕಿದ್ದಾರೆ.

    ಮುಂಬೈ ತಂಡದ ಸೋಲಿನ ಬಳಿಕ ಪ್ರತಿಕ್ರಿಯೆ ನೀಡಿದ ಮಾಜಿ ಕ್ರಿಕೆಟಿಗ ಸುನೀಲ್‌ ಗವಾಸ್ಕರ್‌ (Sunil Gavaskar), ಹಾರ್ದಿಕ್‌ ಪಾಂಡ್ಯ ಅವರ ಬೌಲಿಂಗ್‌ ಕಳಪೆಯಾಗಿತ್ತು. ಅವರ ಬೌಲಿಂಗ್‌ ಸಹ ಅಷ್ಟೇನು ಪರಿಣಾಮ ಬೀರಲಿಲ್ಲ, ಸಾಮಾನ್ಯ ಬೌಲಿಂಗ್‌ ಆಗಿತ್ತು. ಬಹುಶಃ ನಾನು ದೀರ್ಘಕಾಲದ ನಂತರ ನೋಡಿದ ಅತ್ಯಂತ ಕೆಟ್ಟ ಬೌಲಿಂಗ್‌ ಇದಾಗಿತ್ತು. ಯಾವುದೇ ಬ್ಯಾಟರ್‌ಗಳು ಸಾಮಾನ್ಯವಾಗಿ ಸ್ಟ್ರೈಟ್‌ ಲೆಂತ್‌ ಬಾಲ್‌ ಹಾಗೂ ಲೆಗ್‌ಸೈಡ್‌ ಫುಲ್‌ಟಾಸ್‌ ಬಾಲ್‌ಗಳನ್ನ ಹುಡುಕುತ್ತಾರೆ. ಅಂತಹ ಅವಕಾಶಗಳು ಸಿಕ್ಕಾಗ ಸಿಕ್ಸರ್‌ ಬಾರಿಸುತ್ತಾರೆ. ಮಹಿ ಈ ಅವಕಾಶವನ್ನೂ ಸರಿಯಾಗಿ ಬಳಸಿಕೊಂಡರು, ಆದ್ರೆ ಪಾಂಡ್ಯ ಅವರ ಬೌಲಿಂಗ್‌ ನಿಯಂತ್ರಿಸುವಲ್ಲಿ ವಿಫಲವಾಗಿತ್ತು ಎಂದು ಟೀಕಿಸಿದ್ದಾರೆ.

    ಇನ್ನೂ ಹಾರ್ದಿಕ್‌ ಪಾಂಡ್ಯ ಬೌಲಿಂಗ್‌ ಕುರಿತು ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿರುವ ಮಾಜಿ ಕ್ರಿಕೆಟಿಗ ಇರ್ಫಾನ್‌ ಪಠಾಣ್‌ (Irfan Pathan), ಕೊನೇ ಓವರ್‌ನಲ್ಲಿ ಕ್ಯಾಪ್ಟನ್‌ ಪಾಂಡ್ಯ ತಾವೇ ಬೌಲಿಂಗ್‌ಗೆ ಇಳಿದಿದ್ದು, ಆಕಾಶ್‌ ಮಧ್ವಾಲ್‌ ಅವರ ಬೌಲಿಂಗ್‌ ಮೇಲಿನ ನಂಬಿಕೆಯ ಕೊರತೆಯನ್ನು ತೋರಿಸಿದೆ. ಅಲ್ಲದೇ ಡೆತ್‌ ಓರವ್‌ ಬೌಲರ್‌ ಆಗಿ ಅವರ ಕೌಶಲ್ಯದ ಕೊರತೆಯನ್ನೂ ತೋರಿಸಿದ್ದಾರೆ ಎಂದು ಬೇಸರ ಹೊರಹಾಕಿದ್ದಾರೆ.

    ಕೊನೇ ಓವರ್‌ ಥ್ರಿಲ್ಲರ್‌:
    ಮುಂಬೈ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಚೆನ್ನೈ ಪರ ಕೊನೇ ಓವರ್‌ ರೋಚಕವಾಗಿತ್ತು. 19 ಓವರ್‌ಗಳಲ್ಲಿ ಸಿಎಸ್‌ಕೆ 180 ರನ್‌ಗಳನ್ನಷ್ಟೇ ಗಳಿಸಿತ್ತು. ಕೊನೇ ಓವರ್‌ನಲ್ಲಿ ಬೌಲಿಂಗ್‌ಗೆ ಬಂದ ಪಾಂಡ್ಯ ಒಂದು ಎಸೆತ ಪೂರೈಸುವಷ್ಟರಲ್ಲೇ 2 ವೈಡ್‌, 1 ಬೌಂಡರಿ ಚಚ್ಚಿಸಿಕೊಂಡು 6 ರನ್‌ ಬಿಟ್ಟುಕೊಟ್ಟಿದ್ದರು. 2ನೇ ಎಸೆತದಲ್ಲಿ ಡೇರಿಲ್‌ ಮಿಚೆಲ್‌ ಕ್ಯಾಚ್‌ ನೀಡಿ ಔಟಾದರು. ನಂತರ ಕ್ರೀಸ್‌ಗಿಳಿದ ಮಹಿ, ಪಾಂಡ್ಯ ಅವರ 3,4,5ನೇ ಎಸೆತಗಳನ್ನು ಸತತವಾಗಿ ಹ್ಯಾಟ್ರಿಕ್‌ ಸಿಕ್ಸರ್‌ಗಟ್ಟಿದರು, ಕೊನೇ ಎಸೆತದಲ್ಲಿ 2 ರನ್‌ ಬಾರಿಸಿದರು. ಇದರಿಂದ ಸಿಎಸ್‌ಕೆ ತಂಡ 200 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ಕೊನೇ ಓವರ್‌ನಲ್ಲಿ 26 ರನ್‌ ಬಿಟ್ಟುಕೊಟ್ಟ ಪಾಂಡ್ಯ ತಾವು ಮಾಡಿದ 3 ಓವರ್‌ಗಳಲ್ಲಿ 2 ವಿಕೆಟ್‌ ಪಡೆದು 43 ರನ್‌ ಚಚ್ಚಿಸಿಕೊಂಡಿದ್ದರು.

    ಹುಚ್ಚೆದ್ದು ಕುಣಿದ ಮಹಿ ಫ್ಯಾನ್ಸ್‌:
    ಕೊನೇ 4 ಎಸೆತಗಳನ್ನ ಎದುರಿಸಿದರೂ 500 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಧೋನಿ ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿದರು. ಅಂತಿಮ ಓವರ್‌ನಲ್ಲಿ ಕಣಕ್ಕಿಳಿದರೂ ಕೇವಲ 4 ಎಸೆತಗಳಲ್ಲೇ 20 ರನ್‌ ಚಚ್ಚಿದರು. ಅಂತಿಮವಾಗಿ ಸಿಎಸ್‌ಕೆ ಮುಂಬೈ ವಿರುದ್ಧ 20 ರನ್‌ಗಳ ಜಯ ಸಾಧಿಸಿತು.

  • 4.3 ಕೋಟಿ ರೂ. ವಂಚನೆ – ಹಾರ್ದಿಕ್‌ ಪಾಂಡ್ಯ ಮಲಸಹೋದರ ಅರೆಸ್ಟ್‌!

    4.3 ಕೋಟಿ ರೂ. ವಂಚನೆ – ಹಾರ್ದಿಕ್‌ ಪಾಂಡ್ಯ ಮಲಸಹೋದರ ಅರೆಸ್ಟ್‌!

    ಮುಂಬೈ: ಮುಂಬೈ ಇಂಡಿಯನ್ಸ್‌ ತಂಡದ ನಾಯಕ ಹಾರ್ದಿಕ್‌ ಪಾಂಡ್ಯ ಹಾಗೂ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಕೃನಾಲ್‌ ಪಾಂಡ್ಯ ಅವರ ಮಲಸಹೋದರ ವೈಭವ್‌ ಪಾಂಡ್ಯ ಅವರನ್ನ ಮುಂಬೈ ಪೊಲೀಸರು (Mumbai Police) ಬಂಧಿಸಿರುವ ಘಟನೆ ನಡೆದಿದೆ. 4.3 ಕೋಟಿ ರೂ. ವಂಚಿಸಿರುವುದಾಗಿ (Cheating Case) ಹಾರ್ದಿಕ್‌ ಪಾಂಡ್ಯ ನೀಡಿದ ದೂರಿನ ಮೇರೆಗೆ ಅವರನ್ನ ಬಂಧಿಸಲಾಗಿದೆ.

    ಹಾರ್ದಿಕ್‌ ಪಾಂಡ್ಯ, ಕೃನಾಲ್‌ ಪಾಂಡ್ಯ ಹಾಗೂ ವೈಭವ್‌ ಪಾಂಡ್ಯ (Vaibhav Pandya) ಮೂವರು ಸೇರಿ ನಡೆಸುತ್ತಿದ್ದ ಪಾಲುದಾರಿಕೆ ಸಂಸ್ಥೆಯಿಂದ ಪಾಂಡ್ಯ ಬ್ರದರ್ಸ್‌ಗೆ ವೈಭವ್‌ ನಷ್ಟವುಂಟು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಮಿಂಚಿ ಮಾಯವಾದ ಮಯಾಂಕ್‌ – ಗಾಯದ ಸಮಸ್ಯೆ ಕುರಿತು ಬಿಗ್‌ ಅಪ್ಡೇಟ್‌ ಕೊಟ್ಟ ಕೃನಾಲ್‌ ಪಾಂಡ್ಯ!

    ಹಾರ್ದಿಕ್‌, ಕೃನಾಲ್‌ (Krunal Pandya) ಮತ್ತು ವೈಭವ್‌ 2021ರಲ್ಲಿ ವ್ಯವಹಾರವೊಂದನ್ನ ಆರಂಭಿಸಿದ್ದರು. ಪಾಲುದಾರಿಕೆ ಸಂಸ್ಥೆ ಒಪ್ಪಂದದ ಪ್ರಕಾರ, ಬಂದ ಲಾಭದಿಂದ ಪಾಂಡ್ಯ ಬ್ರದರ್ಸ್‌ಗೆ ತಲಾ 40%, ವೈಭವ್‌ಗೆ 20% ಹಂಚಿಕೊಳ್ಳಬೇಕಿತ್ತು. ಆದ್ರೆ ವೈಭವ್‌ ಪ್ರತ್ಯೇಕ ಕಂಪನಿಯೊಂದನ್ನ ಸ್ಥಾಪಿಸಿ, ಪಾಂಡ್ಯ ಬ್ರದರ್ಸ್‌ ಸ್ಥಾಪಿಸಿದ್ದ ಸಂಸ್ಥೆ ಹಣವನ್ನ ಅದಕ್ಕೆ ಬಳಸಿಕೊಳ್ಳುತ್ತಿದ್ದರು. ಈ ಕುರಿತು ಹಾರ್ದಿಕ್‌ ಪಾಂಡ್ಯ ಅವರು ಮುಂಬೈ ಪೊಲೀಸರ ಆರ್ಥಿಕ ಅಪರಾಧ ವಿಭಾಗಕ್ಕೆ (EOW) ದೂರು ನೀಡಿದ ಬಳಿಕ, ಪ್ರಕರಣ ದಾಖಲಿಸಿಕೊಂಡು ವೈಭವ್‌ ಪಾಂಡ್ಯ ಅವರನ್ನ ಬಂಧಿಸಲಾಗಿದೆ.

    ಸದ್ಯ 2024 ಐಪಿಎಲ್‌ ಋತುವಿನ ಆರಂಭದಿಂದಲೂ ಸುದ್ದಿಯಲ್ಲಿದ್ದಾರೆ. 2022ರಲ್ಲಿ ಪದಾದರ್ಪಣೆ ಮಾಡಿದ ಗುಜರಾತ್‌ ಟೈಟಾನ್ಸ್‌ ತಂಡವನ್ನ ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್‌ ಪಟ್ಟಕ್ಕೇರಿಸಿದ್ದ ಪಾಂಡ್ಯ 2024ರ ಆವೃತ್ತಿಯಲ್ಲಿ ಮತ್ತೆ ತವರು ಮುಂಬೈ ತಂಡಕ್ಕೆ ನಾಯಕನಾಗಿ ಮರಳಿದರು. ಆದ್ರೆ ರೋಹಿತ್‌ ಶರ್ಮಾ ಅವರನ್ನು ಮುಂಬೈ ತಂಡದ ನಾಯಕತ್ವದಿಂದ ಕೆಳಗಿಳಿಸಿದ ನಂತರ ಅವರ ಅಭಿಮಾನಿಗಳು ನಿರಾಸೆಯಾಗಿದ್ದಾರೆ. ಮೈದಾನದಲ್ಲೇ ಹಾರ್ದಿಕ್‌ ಪಾಂಡ್ಯ ಅವರ ಕಾಲೆಳೆಯುವ ಪ್ರಯತ್ನಗಳು ನಡೆಯುತ್ತಿವೆ. ಇದನ್ನೂ ಓದಿ: ಫಿಫ್ಟಿ ಬಳಿಕ ಕೊಹ್ಲಿ ಸ್ಟ್ರೈಕ್‌ರೇಟ್‌ ಹೆಚ್ಚಾಗ್ಬೇಕಿತ್ತು – ಮ್ಯಾಕ್ಸಿ ತರ ಆದ್ರೆ ಏನ್‌ ಮಾಡೋಕಾಗುತ್ತೆ: ಸೆಹ್ವಾಗ್‌

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಾಂಡ್ಯ, ತಂಡದಲ್ಲಿ ನಮ್ಮ ಯೋಜನೆಗಳು ಸರಿಯಾಗಿವೆ, ಉದ್ದೇಶವೂ ಸರಿಯಾಗಿದೆ. ಎಲ್ಲವೂ ಕ್ಲಿಕ್ ಆಗುವ ದಿನಗಳು ಹತ್ತಿರ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸತತ ಹ್ಯಾಟ್ರಿಕ್‌ ಸೋಲಿನಿಂದ ಕಂಗೆಟ್ಟಿದ್ದ ಮುಂಬೈ ಇಂಡಿಯನ್ಸ್‌, ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಗೆಲುವಿನ ಖಾತೆ ತೆರೆಯಿತು. ಏಪ್ರಿಲ್‌ 11ರಂದು ಆರ್‌ಸಿಬಿ ವಿರುದ್ಧ ತವರು ಕ್ರೀಡಾಂಗಣ ವಾಂಖೆಡೆಯಲ್ಲಿ ಸೆಣಸಲಿದೆ.

  • ಶಿವಲಿಂಗಕ್ಕೆ ಹಾಲಿನ ಅಭಿಷೇಕ ನೆರವೇರಿಸಿದ ಪಾಂಡ್ಯ – ಹಿಗ್ಗಾಮುಗ್ಗಾ ಟ್ರೋಲ್‌ಗೆಳೆದ ಮುಂಬೈ ಫ್ಯಾನ್ಸ್‌

    ಶಿವಲಿಂಗಕ್ಕೆ ಹಾಲಿನ ಅಭಿಷೇಕ ನೆರವೇರಿಸಿದ ಪಾಂಡ್ಯ – ಹಿಗ್ಗಾಮುಗ್ಗಾ ಟ್ರೋಲ್‌ಗೆಳೆದ ಮುಂಬೈ ಫ್ಯಾನ್ಸ್‌

    – ಗೆಲುವಿನ ಖಾತೆ ತೆರೆಯಲು ಪ್ರಾರ್ಥನೆ ಸಲ್ಲಿಸಿದ್ರಾ ಹಾರ್ದಿಕ್‌?

    ಮುಂಬೈ: ಮುಂಬೈ ಇಂಡಿಯನ್ಸ್‌ ತಂಡದ ನಾಯಕ ಹಾರ್ದಿಕ್‌ ಪಾಂಡ್ಯ (Hardik Pandya) ಶುಕ್ರವಾರ (ಇಂದು) ಸೋಮನಾಥ ದೇವಸ್ಥಾನಕ್ಕೆ (Somnath Temple) ಭೇಟಿ ನೀಡಿ ಶಿವಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಶಿವಲಿಂಗಕ್ಕೆ ಹಾಲಿನ ಅಭಿಷೇಕ ನೆರವೇರಿಸಿ, ಕೈಮುಗಿದು ಪ್ರಾರ್ಥನೆ ಸಲ್ಲಿಸಿದ್ದಾರೆ. ಜೊತೆಗೆ ಭಕ್ತಿಯಿಂದ ಶಿವನ ಶ್ಲೋಕ ಪಠಿಸಿದ್ದಾರೆ.

    ಹಾರ್ದಿಕ್‌ ಪಾಂಡ್ಯ ಅವರ ಈ ವಿಶಿಷ್ಟ ಕ್ಷಣದ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಮುಂಬೈ (Mumbai Indians) ತಂಡದ ಅಭಿಮಾನಿಗಳು ಪಾಂಡ್ಯರನ್ನ ಟ್ರೋಲಿಗೆಳೆದಿದ್ದಾರೆ. ಇದನ್ನೂ ಓದಿ: ಸಿಕ್ಸರ್‌ ಬೌಂಡರಿ ಆಟದಲ್ಲಿ ಪಂಜಾಬ್‌ಗೆ 3 ವಿಕೆಟ್‌ಗಳ ರೋಚಕ ಜಯ – ತವರಿನಲ್ಲೇ ಟೈಟಾನ್ಸ್‌ಗೆ ಸೋಲು!

    ಹಾರ್ದಿಕ್‌ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ 2024ರ ಇಂಡಿಯನ್ ಪ್ರೀಮಿಯರ್‌ ಲೀಗ್‌ (IPL 2024) ಟೂರ್ನಿಯಲ್ಲಿ ಹ್ಯಾಟ್ರಿಕ್‌ ಸೋಲು ಅನುಭವಿಸಿದೆ. ಗುಜರಾತ್‌ ಟೈಟಾನ್ಸ್ ಎದುರು ತನ್ನ ಮೊದಲ ಪಂದ್ಯದಲ್ಲಿ ಸೋತಿದ್ದ ಮುಂಬೈ ಇಂಡಿಯನ್ಸ್, ನಂತರ ಸನ್‌ರೈಸರ್ಸ್‌ ಹೈದರಾಬಾದ್‌ (SRH) ಹಾಗೂ ರಾಜಸ್ಥಾನ್‌ ರಾಯಲ್ಸ್‌ (RR) ವಿರುದ್ಧವೂ ಸೋಲು ಅನುಭವಿಸಿತ್ತು. ಆರಂಭಿಕ ಮೂರು ಪಂದಗಳಲ್ಲೂ ಸೋತ ಕಾರಣ ಮುಂಬೈ ಇಂಡಿಯನ್ಸ್ ತಂಡ ಟೂರ್ನಿಯ ಅಂಕಪಟ್ಟಿಯಲ್ಲಿ ಗೆಲುವಿನ ಖಾತೆ ತೆರೆಯದೇ ಕೊನೇ ಸ್ಥಾನಕ್ಕೆ ಕುಸಿದಿದೆ.

    ಇದರಿಂದಾಗಿ ಪಾಂಡ್ಯ ಅವರನ್ನ ಟ್ರೋಲಿಗೆಳೆದಿರುವ ಕ್ರಿಕೆಟ್‌ ಅಭಿಮಾನಿಗಳು, ಇನ್ನಾದರೂ ಮುಂಬೈ ತಂಡ ಗೆಲ್ಲಲಿ, ನನ್ನನ್ನ ಸಕ್ಸಸ್‌ಫುಲ್‌ ಕ್ಯಾಪ್ಟನ್‌ ಅಂತಾ ಒಪ್ಪಿಕೊಳ್ಳಲಿ ಎಂದು ಪಾಂಡ್ಯ ಪ್ರಾರ್ಥನೆ ಮಾಡಿರಬೇಕು. ಪಾಪ ಗೆಲ್ಲಿಸಿಬಿಡಪ್ಪ ದೇವರೆ ಅಂತಾ ಕಿಚಾಯಿಸಿದ್ದಾರೆ. ಇದನ್ನೂ ಓದಿ: ಶ್ರೀಕೃಷ್ಣನ ಮೇಲಿನ ನಂಬಿಕೆಯಿಂದ ಮಾಂಸಾಹಾರ ತ್ಯಜಿಸಿದ್ರಾ ವೇಗಿ? – ಮಯಾಂಕ್‌ ತಾಯಿ ಹೇಳಿದ್ದೇನು?

    ಇನ್ನೂ ಪಾಂಡ್ಯ ನಾಯಕತ್ವದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟೀಂ ಇಂಡಿಯಾದ ಮಾಜಿ ಕೋಚ್‌ ರವಿಶಾಸ್ತ್ರಿ, ಮೂರು ಪಂದ್ಯಗಳಲ್ಲೂ ಸೋತಿರುವುದು ಹಾರ್ದಿಕ್‌ ಪಾಂಡ್ಯ ಅವರ ನಾಯಕತ್ವವನ್ನು ಇನ್ನಷ್ಟು ಹದಗೆಡಿಸಿದೆ. ಅವರ ವೃತ್ತಿಜೀವನದಲ್ಲೂ ಇದು ಕಠಿಣ ಹಂತ. ಪಾಂಡ್ಯ ಅವರು ಈಗ ಆಡುತ್ತಿರೋದು ಭಾರತ ಕ್ರಿಕೆಟ್‌ ತಂಡವಲ್ಲ. ಇದು ಫ್ರಾಂಚೈಸಿ ಕ್ರಿಕೆಟ್‌. ಅಧಿಕ ಹಣ ಪಾವತಿಸಿರುತ್ತಾರೆ. ಫ್ರಾಂಚೈಸಿಯ ಮುಖ್ಯಸ್ಥರು ಯಾರನ್ನ ನಾಯಕರನ್ನಾಗಿ ಮಾಡಲು ಬಯಸುತ್ತಾರೋ, ಅವರೇ ನಾಯಕರಾಗುತ್ತಾರೆ. ಪಾಂಡ್ಯ ಉತ್ತಮವಾಗಿ ತಂಡವನ್ನು ನಿರ್ವಹಿಸಬಹುದು ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

    ಸೂಪರ್‌ ಸಂಡೇ ಮತ್ತೊಂದು ಮ್ಯಾಚ್‌:
    ಇದೇ ಭಾನುವಾರ ಮುಂಬೈ ಇಂಡಿಯನ್ಸ್‌ ತಂಡವು ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಸೆಣಸಲಿದೆ. ಅಂದು ಸಂಜೆ 7:30ಕ್ಕೆ ಪಂದ್ಯ ಆರಂಭವಾಗಲಿದೆ. ಸೂರ್ಯಕುಮಾರ್‌ ಯಾದವ್‌ ಸಹ ಮುಂಬೈಗೆ ಕಂಬ್ಯಾಕ್‌ ಮಾಡಿದ್ದು, ಗೆಲ್ಲುವ ವಿಶ್ವಾಸ ಹೊಂದಿದೆ. ಇದನ್ನೂ ಓದಿ: ಐಪಿಎಲ್‌ನಲ್ಲಿ ಮತ್ತೊಂದು ದಾಖಲೆ ಉಡೀಸ್‌ -‌ ಬರೋಬ್ಬರಿ 35 ಕೋಟಿ ಮಂದಿ ವೀಕ್ಷಣೆ!

  • ಮಿಸ್ಟರ್‌-360 ಸೂರ್ಯಕುಮಾರ್‌ ಕಂಬ್ಯಾಕ್‌ – ಮುಂಬೈ ತಂಡಕ್ಕಿನ್ನು ಆನೆ ಬಲ!

    ಮಿಸ್ಟರ್‌-360 ಸೂರ್ಯಕುಮಾರ್‌ ಕಂಬ್ಯಾಕ್‌ – ಮುಂಬೈ ತಂಡಕ್ಕಿನ್ನು ಆನೆ ಬಲ!

    ನವದೆಹಲಿ: ವಿಶ್ವದ ನಂ.1 ಟಿ20 ಬ್ಯಾಟರ್‌ ಹಾಗೂ ಮುಂಬೈ ಇಂಡಿಯನ್ಸ್‌ ತಂಡ ಸ್ಟಾರ್‌ ಆಟಗಾರ ಸೂರ್ಯಕುಮಾರ್‌ ಯಾದವ್‌ (Suryakumar Yadav) ಸಂಪೂರ್ಣ ಫಿಟ್‌ ಆಗಿದ್ದು ಸದ್ಯದಲ್ಲೇ ಮುಂಬೈ ಇಂಡಿಯನ್ಸ್‌ ತಂಡವನ್ನು ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದರಿಂದ ಹ್ಯಾಟ್ರಿಕ್‌ ಸೋಲಿನಿಂದ ಕಂಗಾಲಾಗಿರುವ ಮುಂಬೈ ಇಂಡಿಯನ್ಸ್‌ (Mumbai Indians) ತಂಡಕ್ಕೆ ಆನೆಬಲ ಬಂದಂತಾಗಿದೆ.

    ಸದ್ಯ ಮೆಡಿಕಲ್‌ ಫಿಟ್‌ನೆಸ್‌ ಪಾಸ್‌ ಮಾಡಿರುವ ಸೂರ್ಯ ಶುಕ್ರವಾರ (ಏ.5) ರಂದು ಮುಂಬೈ ಇಂಡಿಯನ್ಸ್‌ ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಸೂಪರ್‌ ಸಂಡೇ (ಏ.7) ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ವಾಂಖೆಡೆ ಮೈದಾನದಲ್ಲಿ ನಡೆಯುವ ಪಂದ್ಯದಲ್ಲಿ ಸೂರ್ಯ ಕಣಕ್ಕಿಳಿದು ಅಬ್ಬರಿಸಲಿದ್ದಾರೆ. ಇದನ್ನೂ ಓದಿ: ಐಪಿಎಲ್‌ನಲ್ಲಿ ಮತ್ತೊಂದು ದಾಖಲೆ ಉಡೀಸ್‌ -‌ ಬರೋಬ್ಬರಿ 35 ಕೋಟಿ ಮಂದಿ ವೀಕ್ಷಣೆ!

    2023ರ ವಿಶ್ವಕಪ್‌ ಬಳಿಕ ಆಸ್ಟ್ರೇಲಿಯಾ (Australia) ವಿರುದ್ಧ ನಡೆದ 5 ಪಂದ್ಯಗಳ ಟಿ20 ತಂಡಕ್ಕೆ ನಾಯಕತ್ವ ವಹಿಸಿದ್ದ ಸೂರ್ಯ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ ವೇಳೆ ಗಾಯಕ್ಕೆ ತುತ್ತಾಗಿದ್ದರು. ಸರಣಿಯ 3ನೇ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ್ದ ಸ್ಕೈ ಪಾದದ ಗಾಯಕ್ಕೆ ತುತ್ತಾಗಿದ್ದರು. ಇದಾದ ಬಳಿಕ ಸೂರ್ಯಕುಮಾರ್‌ ಯಾದವ್‌ ಸ್ಪೋರ್ಟ್ಸ್‌ ಹೆರ್ನಿಯಾದಲ್ಲಿ ತಮ್ಮ ಪಾದದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಈ ಕಾರಣದಿಂದ ಅವರು ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಕಮ್‌ಬ್ಯಾಕ್‌ ಮಾಡಲು ಸಾಧ್ಯವಾಗಿರಲಿಲ್ಲ. ಅಂದಿನಿಂದ ಇಲ್ಲಿಯವರೆಗೂ ಅವರು ಬೆಂಗಳೂರಿನ ನ್ಯಾಷನಲ್‌ ಕ್ರಿಕೆಟ್‌ ಅಕಾಡೆಮಿಯಲ್ಲಿ ಪುನರ್ವಸತಿ ಚಿಕಿತ್ಸೆ ಪಡೆಯುತ್ತಿದ್ದರು.

    ಫಿಟ್‌ನೆಸ್‌ನಲ್ಲಿ SKY ಪಾಸ್‌:
    ಗಾಯದಿಂದ ಸಂಪೂರ್ಣ ಗುಣಮುಖರಾಗಿರುವ ಸೂರ್ಯಕುಮಾರ್‌ ಯಾದವ್‌ ಅವರು ಎನ್‌ಸಿಎನಲ್ಲಿ ಫಿಟ್‌ನೆಸ್‌ ಪರೀಕ್ಷೆ ಪಾಸ್‌ ಮಾಡಿದ್ದಾರೆ. ಆದ್ದರಿಂದ ಅವರು ಶುಕ್ರವಾರ (ಏ.5) ರಂದು ಮುಂಬೈ ಇಂಡಿಯನ್ಸ್‌ ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಇದನ್ನೂ ಓದಿ: ‌ಕೆಕೆಆರ್‌ ರನ್‌ ಹೊಳೆಯಲ್ಲಿ ಮುಳುಗಿದ ಡೆಲ್ಲಿ – ನೈಟ್‌ರೈಡರ್ಸ್‌ಗೆ 106 ರನ್‌ಗಳ ಭರ್ಜರಿ ಜಯ

    ಗೆಲುವಿನ ಖಾತೆ ತೆರೆಯುತ್ತಾ ಮುಂಬೈ?
    ಹಾರ್ದಿಕ್‌ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ 2024ರ ಇಂಡಿಯನ್ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯಲ್ಲಿ ಹ್ಯಾಟ್ರಿಕ್‌ ಸೋಲು ಅನುಭವಿಸಿದೆ. ಗುಜರಾತ್‌ ಟೈಟನ್ಸ್ ಎದುರು ತನ್ನ ಮೊದಲ ಪಂದ್ಯದಲ್ಲಿ ಸೋತಿದ್ದ ಮುಂಬೈ ಇಂಡಿಯನ್ಸ್, ನಂತರ ಸನ್‌ರೈಸರ್ಸ್‌ ಹೈದರಾಬಾದ್‌ ಹಾಗೂ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧವೂ ಸೋಲು ಅನುಭವಿಸಿತ್ತು. ಆರಂಭಿಕ ಮೂರು ಸೋಲುಗಳ ಕಾರಣ ಮುಂಬೈ ಇಂಡಿಯನ್ಸ್ ತಂಡ ಟೂರ್ನಿಯ ಅಂಕಪಟ್ಟಿಯಲ್ಲಿ ಗೆಲುವಿನ ಖಾತೆ ತೆರೆಯದೇ ಕೊನೇ ಸ್ಥಾನಕ್ಕೆ ಕುಸಿದಿದೆ.

  • ಐಪಿಎಲ್‌ ಅಂಗಳದಲ್ಲಿ ಕ್ಯಾಪ್ಟನ್ಸಿ ಕಿಚ್ಚು – ಕರ್ಮ ಸುಮ್ಮನೆ ಬಿಡಲ್ಲ; ಪಾಂಡ್ಯ ವಿರುದ್ಧ ಫ್ಯಾನ್ಸ್‌ ಫುಲ್‌ ಗರಂ

    ಐಪಿಎಲ್‌ ಅಂಗಳದಲ್ಲಿ ಕ್ಯಾಪ್ಟನ್ಸಿ ಕಿಚ್ಚು – ಕರ್ಮ ಸುಮ್ಮನೆ ಬಿಡಲ್ಲ; ಪಾಂಡ್ಯ ವಿರುದ್ಧ ಫ್ಯಾನ್ಸ್‌ ಫುಲ್‌ ಗರಂ

    ಬೆಂಗಳೂರು: 17ನೇ ಆವೃತ್ತಿಯಲ್ಲಿ ಆರಂಭಿಕ ಪಂದ್ಯವನ್ನಾಡಿದ ಮುಂಬೈ ಇಂಡಿಯನ್ಸ್‌ ತಂಡವು ಗುಜರಾತ್‌ ಟೈಟಾನ್ಸ್‌ ವಿರುದ್ಧ 6 ರನ್‌ಗಳಿಂದ ಸೂಲು ಕಂಡಿತು. 2013 ರಿಂದ ಆರಂಭಿಕ ಪಂದ್ಯಗಳಲ್ಲಿ ಸೋಲಿನೊಂದಿಗೆಯೇ ಮುನ್ನಡೆಯುತ್ತಿದ್ದ ಮುಂಬೈ ಇಂಡಿಯನ್ಸ್‌ ಈ ಬಾರಿಯೂ ಸೋಲು ಕಂಡಿದೆ.

    ಇದೇ ಪಂದ್ಯದಲ್ಲಿ ಮುಂಬೈಯ ನೂತನ ನಾಯಕ ಹಾರ್ದಿಕ್​ ಪಾಂಡ್ಯ (Hardik Pandya) ಅವರು ಮಾಜಿ ನಾಯಕ ರೋಹಿತ್​ ಶರ್ಮ(Rohit Sharma) ಅವರನ್ನು ನಡೆಸಿಕೊಂಡ ರೀತಿ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಈ ವೇಳೆ ಚೆನ್ನೈ ತಂಡದ ನೂತನ ಕ್ಯಾಪ್ಟನ್‌ ರುತುರಾಜ್‌ ಗಾಯಕ್ವಾಡ್‌ ಅವರನ್ನು ಉದಾಹರಣೆ ನೀಡಿ, ಹಿರಿಯ ನಾಯಕನನ್ನು ಹೇಗೆ ನಡೆಸಿಕೊಳ್ಳಬೇಕು ಅನ್ನೋದನ್ನ ಕಲಿತುಕೊಳ್ಳುವಂತೆ ಕಿಡಿ ಕಾರಿದ್ದಾರೆ.

    ಕ್ಯಾಪ್ಟನ್ಸಿ ಕಿಚ್ಚು:
    ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಹಾರ್ದಿಕ್​ ಪಾಂಡ್ಯ ಅವರು ಗುಜರಾತ್​ ಬ್ಯಾಟಿಂಗ್​ ವೇಳೆ ರೋಹಿತ್​ ಅವರನ್ನು ಹಲವು ಬಾರಿ ಫೀಲ್ಡಿಂಗ್​ ಬದಲಿಸಿದರು. ಒಮ್ಮೆ ಸ್ಲಿಪ್, ಮತ್ತೊಮ್ಮೆ ಲಾಂಗ್ ಆನ್​, ಇನ್ನೊಮ್ಮೆ ಲೆಗ್​ ಸೈಡ್, ಮಿಡ್ ಆಫ್‌ ನತ್ತ ಬದಲಿಸಿದರು. ಮೈದಾನದ ಮೂಲೆ ಮೂಲೆಗೂ ಓಡಾಡಿಸಿದರು. ಅದೆನ್ನೆಲ್ಲ ಸಹಿಸಿಕೊಂಡು ತಾನೊಬ್ಬ ಪ್ಲೇಯರ್‌ ಅಂತೆ ನಡೆದುಕೊಂಡ ರೋಹಿತ್‌ ಶರ್ಮಾ ನಾಯಕ ಹೇಳಿದ ರೀತಿಯಲ್ಲಿ ಫೀಲ್ದಿಂಗ್‌ ನಿರ್ವಹಿಸಿದರು.

    ಇನಿಂಗ್ಸ್​ನ ಅಂತಿಮ ಓವರ್​ನಲ್ಲಿ 30 ಯಾರ್ಡ್​ ಸರ್ಕಲ್​ನಲ್ಲಿ ಫೀಲ್ಡಿಂಗ್​ ಮಾಡುತ್ತಿದ್ದ ರೋಹಿತ್​ ಅವರನ್ನು ಪಾಂಡ್ಯ ಏಕಾಏಕಿ ಲಾಂಗ್​ ಆನ್​ನಲ್ಲಿ ಫೀಲ್ಡಿಂಗ್​ ಮಾಡುವಂತೆ ಸೂಚನೆ ಕೊಟ್ಟರು. ಒಮ್ಮೆ ಗೊಂದಲಕ್ಕೆ ಒಳಗಾದ ರೋಹಿತ್​ ಕೈ ಸನ್ನೆಯ ಮೂಲಕ ನನಗೆ ಹೇಳಿದ್ದಾ? ಕೇಳಿದರು, ಆಗ ಪಾಂಡ್ಯ ಹೌದು ನೀವೆ ಎಂದು ಕೈಸನ್ನೆ ಮೂಲಕ ಹೇಳಿದರು. ನಾಯಕನ ಸೂಚನೆಯಂತೆ ರೋಹಿತ್​ ಬೌಂಡರಿ ಲೈನ್​ ಕಡೆಗೆ ಓಡಿದರು. ಆಗಲೂ ಪಾಂಡ್ಯ ಅಲ್ಲಿಂದ ಬೇರೆ ಕಡೆ ಹೋಗುವಂತೆ ಹೇಳಿದರು.

    ರೋಹಿತ್‌ ಶರ್ಮಾ ಅವರನ್ನು ಹಾರ್ದಿಕ್‌ ಪಾಂಡ್ಯ ನಡೆಸಿಕೊಂಡ ರೀತಿಯ ವೀಡಿಯೋ ತುಣುಕು ಸೋಶಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇದರಿಂದ ಅಸಮಾಧಾನಗೊಂಡ ರೋಹಿತ್‌ ಶರ್ಮಾ ಅಭಿಮಾನಿಗಳು ಹಾರ್ದಿಕ್‌ ಪಾಂಡ್ಯ ವಿರುದ್ಧ ಕೆಂಡ ಕಾರಿದ್ದಾರೆ. ಅಲ್ಲದೇ ವೇಗಿ ಜಸ್ಪ್ರೀತ್‌ ಬುಮ್ರಾ ಅವರು ನೀಡಿದ ಸಲಹೆಯನ್ನೂ ಪಾಂಡ್ಯ ಕ್ಯಾರೆ ಎನ್ನದೇ ತಮ್ಮಿಷ್ಟದಂತೆ ದರ್ಪ ತೋರಿದ ದೃಶ್ಯವೂ ಕಂಡುಬಂದಿತು.

    ಕರ್ಮ ಸುಮ್ಮನೇ ಬಿಡಲ್ಲ:‌
    ಹಾರ್ದಿಕ್‌ ಪಾಂಡ್ಯ ಅವರ ವರ್ತನೆಯನ್ನು ಪಂದ್ಯ ಮುಕ್ತಾಯದ ವರೆಗೂ ಸಹಿಸಿಕೊಂಡಿದ್ದ ಫ್ಯಾನ್ಸ್‌, ಪಂದ್ಯದ ಸೋಲಿನ ನಂತರ ಹಾರ್ದಿಕ್‌ ಪಾಂಡ್ಯರನ್ನ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ಕರ್ಮ ನಿಮ್ಮನ್ನ ಸುಮ್ಮನೆ ಬಿಡಲ್ಲ, ಸರಿಯಾಗಿ ಮಾಡುತ್ತೆ ಎಂದು ಆಕ್ರೋಶದ ಪೋಸ್ಟ್‌ಗಳನ್ನ ಹಂಚಿಕೊಂಡಿದ್ದಾರೆ.

    ಫ್ಯಾನ್ಸ್‌ಗಳ ನಡುವೆ ಬಡಿದಾಟ:
    ಗುಜರಾತ್​ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್‌ ವೇಳೆ ಹಾರ್ದಿಕ್​ ಪಾಂಡ್ಯ ಫೀಲ್ಡಿಂಗ್​ ವೇಳೆ ರೋಹಿತ್​ ಅವರನ್ನು ನಡೆಸಿಕೊಂಡ ರೀತಿ ಹಿಟ್‌ಮ್ಯಾನ್‌ ಅಭಿಮಾನಿಗಳ ಪಿತ್ತ ನೆತ್ತಿಗೇರುವಂತೆ ಮಾಡಿತ್ತು. ಪಂದ್ಯ ಸೋತ ಬಳಿಕ ಸೋಲಿಗೆ ಪಾಂಡ್ಯ ಅವರೇ ಎಂದು ಬೈಯುತ್ತಿದ್ದರು. ಈ ವೇಳೆ ಹಾರ್ದಿಕ್‌ ಮತ್ತು ರೋಹಿತ್‌ ಅಭಿಮಾನಿಗಳ ನಡುವೆ ಹೊಡೆದಾಟವೇ ನಡೆಯಿತು. ಪರಸ್ಪರ ಮೈದಾನದಲ್ಲೇ ಕೈಕೈ ಮಿಲಾಯಿಸಿದರು. ಈ ವೀಡಿಯೋ ಸಹ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

  • 1,078 ತಂಡಗಳು, 16,100 ಆಟಗಾರರು – ಮೋದಿ ತವರಲ್ಲಿ ʻಲೋಕಸಭಾ ಪ್ರೀಮಿಯರ್‌ ಲೀಗ್‌ʼಗೆ ಚಾಲನೆ

    1,078 ತಂಡಗಳು, 16,100 ಆಟಗಾರರು – ಮೋದಿ ತವರಲ್ಲಿ ʻಲೋಕಸಭಾ ಪ್ರೀಮಿಯರ್‌ ಲೀಗ್‌ʼಗೆ ಚಾಲನೆ

    ಗಾಂಧಿನಗರ: ಇದೇ ಮೊದಲ ಬಾರಿಗೆ ಗುಜರಾತ್‌ನ ಗಾಂಧಿನಗರ ಲೋಕಸಭಾ ಕ್ಷೇತ್ರದ ಜನರಿಗಾಗಿ ಕೇಂದ್ರ ಗೃಹಸಚಿವ ಅಮಿತ್‌ ಶಾ (Amit Shah) ಅವರು ಹೊನಲು ಬೆಳಕಿನ ಕ್ರಿಕೆಟ್‌ ಟೂರ್ನಿಯನ್ನ ಆಯೋಜಿಸಿದ್ದು, ಅಧಿಕೃತವಾಗಿ ಚಾಲನೆಗೊಂಡಿದೆ.

    ಟೀಂ ಇಂಡಿಯಾ ಆಟಗಾರ ಹಾರ್ದಿಕ್‌ ಪಾಂಡ್ಯ, ಅಮಿತ್‌ ಶಾ ಜೊತೆಗೂಡಿ ʻಗಾಂಧಿನಗರ ಲೋಕಸಭಾ ಪ್ರೀಮಿಯರ್‌ ಲೀಗ್‌ʼಗೆ (Lok Sabha Premier League) ಚಾಲನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಗುಜರಾತ್‌ ಮುಖ್ಯಮಂತ್ರಿ ಭೂಪೇಂದ್ರಭಾಯ್‌ ಪಟೇಲ್ ಸಹ ಸಾಥ್‌ ನೀಡಿದ್ದಾರೆ. ಇದನ್ನೂ ಓದಿ: ಇಂಗ್ಲೆಂಡ್‌ ವಿರುದ್ಧ 3ನೇ ಟೆಸ್ಟ್‌ ಪಂದ್ಯಕ್ಕೆ ಜಡ್ಡು ಇನ್‌ – ಕೆ.ಎಲ್‌ ರಾಹುಲ್‌ ಬದಲಿಗೆ ಮತ್ತೊಬ್ಬ ಕನ್ನಡಿಗನಿಗೆ ಚಾನ್ಸ್‌

    ʻಖೇಲೋ ಇಂಡಿಯಾʼ ಮಾದರಿಯಲ್ಲಿ ಕ್ರೀಡಾ ಉತ್ಸಾಹ ಬೆಳೆಸುವ ನಿಟ್ಟಿನಲ್ಲಿ ʻಖೇಲೋ ಗಾಂಧಿನಗರʼ ಘೋಷವಾಕ್ಯದ ಅಡಿಯಲ್ಲಿ ಟೂರ್ನಿ ಆಯೋಜಿಸಲಾಗಿದೆ. ಇದನ್ನೂ ಓದಿ: 8 ತಿಂಗಳಲ್ಲಿ ಆಸ್ಟ್ರೇಲಿಯಾ ವಿರುದ್ಧವೇ 3 ವಿಶ್ವಕಪ್‌ ಟ್ರೋಫಿ ಕಳೆದುಕೊಂಡ ಭಾರತ!

    ವೆಜಲ್‌ಪುರ, ಘಟ್ಲೋಡಿಯಾ, ನಾರಣಪುರ, ಸಬರಮತಿ, ಗಾಂಧಿನಗರ ಉತ್ತರ, ಮಾನ್ಸಾ ಮತ್ತು ಸನಂದ್ ಸೇರಿ ಏಳು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಈ ಕ್ರಿಕೆಟ್‌ ಟೂರ್ನಿಯು 13 ಮೈದಾನಗಳಲ್ಲಿ 21 ದಿನಗಳ ಕಾಲ ನಡೆಯಲಿದೆ. ಒಟ್ಟು 1,078 ತಂಡಗಳ ನಡುವೆ ಲೀಗ್‌ ಪಂದ್ಯಗಳು ನಡೆಯಲಿದ್ದು, 16,100 ಆಟಗಾರರು ಪಾಲ್ಗೊಳ್ಳಲಿದ್ದಾರೆ. ಪ್ರತಿ ಪಂದ್ಯಕ್ಕೆ 10 ಓವರ್‌ ಮೀಸಲಾಗಿರುತ್ತದೆ. ಇದನ್ನೂ ಓದಿ: ಪಾಥುಮ್ ನಿಸ್ಸಾಂಕಾ ದ್ವಿಶತಕದ ಅಬ್ಬರ – 24 ವರ್ಷಗಳಿಂದ ಜಯಸೂರ್ಯ ಹೆಸರಲ್ಲಿದ್ದ ದಾಖಲೆ ನುಚ್ಚುನೂರು!

  • ರೋಹಿತ್‌ ಪತ್ನಿ ರಿತಿಕಾ ಅಸಮಾಧಾನ ಬೆನ್ನಲ್ಲೇ ಪಾಂಡ್ಯನಿಗೆ ಬಿಗ್‌ ವಾರ್ನಿಂಗ್‌!

    ರೋಹಿತ್‌ ಪತ್ನಿ ರಿತಿಕಾ ಅಸಮಾಧಾನ ಬೆನ್ನಲ್ಲೇ ಪಾಂಡ್ಯನಿಗೆ ಬಿಗ್‌ ವಾರ್ನಿಂಗ್‌!

    ಮುಂಬೈ: 2024ರ ಐಪಿಎಲ್‌ (IPL 2024) ಟೂರ್ನಿಗೆ ಕೆಲವೇ ದಿನಗಳು ಬಾಕಿಯಿದ್ದು, ಹೊಸ ಹೊಸ ಬೆಳವಣಿಗೆಗಳು ಬರುತ್ತಿವೆ. ಪ್ರಮುಖ ಆಟಗಾರರ ಬದಲಾವಣೆಯಿಂದ 10 ತಂಡಗಳೂ ಬಲಿಷ್ಠವಾಗಿದ್ದು, ಈ ಬಾರಿಯ ಚಾಂಪಿಯನ್‌ ಯಾರಾಗ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ. ಈ ನಡುವೆ ಮುಂಬೈ ಇಂಡಿಯನ್ಸ್‌ (Mumbai Indians) ತಂಡದಲ್ಲಿ ನಾಯಕತ್ವ ಬದಲಾವಣೆಯಾದ ಬಳಿಕ ಹಲವು ವಿಷಯಗಳು ಚರ್ಚೆಯಾಗುತ್ತಿವೆ.

    ಇತ್ತೀಚೆಗೆ ಮುಂಬೈ ಕೋಚ್ ಮಾರ್ಕ್ ಬೌಚರ್ (Mark Boucher), ರೋಹಿತ್​​ರನ್ನು ನಾಯಕತ್ವದಿಂದ ಕೆಳಗಿಳಿಸಿದ್ದಕ್ಕೆ ಸ್ಪಷ್ಟನೆ ನೀಡಿದ್ದರು. ಇದಕ್ಕೆ ಸಂಬಂಧಿಸಿ ರೋಹಿತ್​ ಪತ್ನಿ ರಿತಿಕಾ ಸಜ್ದೇಹ್ (Ritika Sajdeh) ಅವರ ಪ್ರತಿಕ್ರಿಯಿಸಿ, ಇದರಲ್ಲಿ ಎಲ್ಲವೂ ಸರಿಯಿಲ್ಲ, ಬಹಳ ವಿಷಯಗಳು ತಪ್ಪಿನಿಂದ ಕೂಡಿದೆ ಎಂದು ಕಾಮೆಂಟ್‌ ಮಾಡಿದ್ದರು. ಈ ವಿಷಯ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಂತೆ ಮಾಜಿ ಕ್ರಿಕೆಟಿಗ ಹಾಗೂ ಕ್ರಿಕೆಟ್‌ ಕಮೆಂಟೇಟರ್‌ ಆಕಾಶ್‌ ಚೋಪ್ರಾ ಹಾರ್ದಿಕ್‌ ಪಾಂಡ್ಯಗೆ ಎಚ್ಚರಿಕೆ ನೀಡಿದ್ದಾರೆ.

    ಈ ಕುರಿತು ಮಾತನಾಡಿರುವ ಆಕಾಶ್ ಚೋಪ್ರಾ, ರಿತಿಕಾ ಅವರ ಕಾಮೆಂಟ್‌ ನಂತರ ಮುಂಬೈ ಇಂಡಿಯನ್ಸ್‌ ಕುಟುಂಬವು ಒಂದು ತಂಡವಾಗಿ ಮುಂದುವರಿಯುವುದೇ ಎಂಬುದು ಅನುಮಾನವಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ICC ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ನಂ.1 ಪಟ್ಟ – ಹೊಸ ಇತಿಹಾಸ ನಿರ್ಮಿಸಿದ ಬೂಮ್‌ ಬೂಮ್‌ ಬುಮ್ರಾ

    ನಾನು ಮಾರ್ಕ್ ಬೌಚರ್ ಅವರೊಂದಿಗಿನ ಸಂದರ್ಶನ ಕೇಳುತ್ತಿದ್ದೆ, ಅಲ್ಲಿ ಅವರು ನಾಯಕತ್ವವನ್ನು ಏಕೆ ಬದಲಾಯಿಸಿದರು ಎಂದು ವಿವರಿಸಿದರು. ಇದೇ ವೇಳೆ ಪ್ರಮುಖ ಕಾರಣಗಳನ್ನು ತಿಳಿಸಿದ್ದಾರೆ. ಆದ್ರೆ ಇದಕ್ಕೆ ರಿತಿಕಾ ಅವರು ಮಾಡಿದ ಕಾಮೆಂಟ್‌ ಭಾರೀ ಸದ್ದು ಮಾಡುತ್ತಿದೆ ಅನ್ನೋದಂತೂ ಸತ್ಯ. ಒಟ್ಟಿನಲ್ಲಿ ಯಾವುದು ಸರಿ? ಯಾವುದು ತಪ್ಪು ಅನ್ನೋದು ನಮಗೆ ತಿಳಿದಿಲ್ಲ. ಆದ್ರೆ ಮುಂಬೈ ಅಸಾಧಾರಣ ತಂಡ ಹೊಂದಿರೋದ್ರಿಂದ ಹಾರ್ದಿಕ್‌ ಪಾಂಡ್ಯ ಅವರ ಮೇಲೆ ಒತ್ತಡವಿದೆ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವಂತಹ ದೊಡ್ಡ ಜವಾಬ್ದಾರಿ ಅವರ ಮೇಲಿದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

    ಪಾಂಡ್ಯ ಇನ್‌ಸ್ಟಾ ಅನ್‌ಫಾಲೋ ಮಾಡಿದ್ರಾ ರೋಹಿತ್‌?
    ರೋಹಿತ್‌ ಪತ್ನಿ ರಿತಿಕಾ ಹೇಳಿಕೆ ಬಳಿಕ ಹಾರ್ದಿಕ್‌ ಪಾಂಡ್ಯ ಹಾಗೂ ರೋಹಿತ್‌ ಶರ್ಮಾ ಪರಸ್ಪರ ಇನ್‌ಸ್ಟಾಗ್ರಾಂನಲ್ಲಿ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡಿದ್ದಾರೆ ಎಂದೂ ಹೇಳಲಾಗುತ್ತಿದೆ. ಆದ್ರೆ ಈವರೆಗೆ ರೋಹಿತ್‌ ಶರ್ಮಾ, ಹಾರ್ದಿಕ್‌ ಪಾಂಡ್ಯ ಈ ಬಗ್ಗೆ ಪ್ರತಿಕ್ರಿಯಿಸಿಲ್ಲ. ಇದನ್ನೂ ಓದಿ: ಡೇವಿಸ್ ಕಪ್‍ನಲ್ಲಿ ಕೊಡಗಿನ ಯುವಕನ ಸಾಧನೆ – ವರ್ಲ್ಡ್‌‌ ಕಪ್ 1ರಲ್ಲಿ ಸ್ಥಾನ ಗಿಟ್ಟಿಸಿಕೊಂಡ ಭಾರತ

    ಮಾರ್ಕ್ ಬೌಚರ್ ಹೇಳಿದ್ದೇನು?
    ಮುಂಬೈ ಇಂಡಿಯನ್ಸ್‌ ನಾಯಕತ್ವದಿಂದ ರೋಹಿತ್‌ ಶರ್ಮಾ ಅವರನ್ನು ಕೆಳಗಿಳಿಸಿದ್ದಕ್ಕೆ ಸಂಬಂಧಿಸಿದಂತೆ ಪಾಡ್‌ಕಾಸ್ಟ್‌ವೊಂದರಲ್ಲಿ ಮಾತನಾಡಿದ್ದರು. ಇದು ಸಂಪೂರ್ಣವಾಗಿ ಕ್ರಿಕೆಟ್‌ಗೆ ಸಂಬಂಧಿಸಿದ ನಿರ್ಧಾರವೆಂದು ನಾನು ಭಾವಿಸುತ್ತೇನೆ, ಜೊತೆಗೆ ಪರಿವರ್ತನೆಯ ಹಂತವೂ ಹೌದು, ಆದ್ರೆ ಬಹಳಷ್ಟು ಜನರಿಗೆ ಇದು ಅರ್ಥವಾಗುವುದಿಲ್ಲ. ಇಲ್ಲಿನ ಜನರು ಸಾಕಷ್ಟು ಭಾವುಕರಾಗುತ್ತಾರೆ. ಆದರೆ ಕ್ರಿಕೆಟ್‌ನಲ್ಲಿ ಭಾವನೆಗಳ ಹೊರತಾಗಿ ಯೋಚಿಸಬೇಕು ಎಂದು ಹೇಳಿದ್ದರು. ಇದನ್ನೂ ಓದಿ: ಬೆಂಕಿ ದಾಳಿಗೆ ಆಂಗ್ಲರ ಪಡೆ ಛಿದ್ರ ಛಿದ್ರ – 6 ವಿಕೆಟ್ ಉರುಳಿಸಿ ಹಲವು ದಾಖಲೆ ಬರೆದ ಬುಮ್ರಾ

    ಈ ನಿರ್ಧಾರವು ರೋಹಿತ್ ಅವರಿಂದ ಅತ್ಯುತ್ತಮ ಆಟವನ್ನು ಹೊರತರಲಿದೆ ಎಂದು ನಾನು ಭಾವಿಸುತ್ತೇನೆ. ಅವರು ಮೈದಾನಕ್ಕಿಳಿದು ಆಟವನ್ನು ಆನಂದಿಸಲು ಮತ್ತು ಉತ್ತಮ ರನ್‌ ಗಳಿಸಲು ಬಿಡಿ ಎಂದು ಮಾರ್ಕ್ ಬೌಚರ್ ಹೇಳಿದ್ದರು. ಇದಕ್ಕೆ ರೋಹಿತ್‌ ಶರ್ಮಾ ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದಂತೆ, ರೋಹಿತ್‌ ಪತ್ನಿ ರಿತಿಕಾ ಸಜ್ದೇಹ್ ಸಹ ಪ್ರತಿಕ್ರಿಯೆ ನೀಡಿದ್ದರು. ಇದರಲ್ಲಿ ಎಲ್ಲವೂ ಸರಿಯಿಲ್ಲ, ಕೆಲವು ತಪ್ಪುಗಳಿದೆ ಎಂದು ಕಾಮೆಂಟ್‌ ಮಾಡಿದ್ದು, ಇದು ಭಾರೀ ಚರ್ಚೆಗೆ ಗ್ರಾಸವಾಗಿದೆ.

  • ನಾಯಕನಾದ ಬೆನ್ನಲ್ಲೇ ಮುಂಬೈಗೆ ಶಾಕ್‌ ಕೊಟ್ಟ ಪಾಂಡ್ಯ – ಮತ್ತೆ ಕ್ಯಾಪ್ಟನ್‌ ಆಗ್ತಾರಾ ಹಿಟ್‌ಮ್ಯಾನ್‌?

    ನಾಯಕನಾದ ಬೆನ್ನಲ್ಲೇ ಮುಂಬೈಗೆ ಶಾಕ್‌ ಕೊಟ್ಟ ಪಾಂಡ್ಯ – ಮತ್ತೆ ಕ್ಯಾಪ್ಟನ್‌ ಆಗ್ತಾರಾ ಹಿಟ್‌ಮ್ಯಾನ್‌?

    – ಅಫ್ಘಾನಿಸ್ತಾನ ವಿರುದ್ಧದ ಟಿ20ಗೂ ಹಾರ್ದಿಕ್‌ ಪಾಂಡ್ಯ ಅಲಭ್ಯ

    ಮುಂಬೈ: ಪಾದದ ಗಾಯದಿಂದ ಬಳಲುತ್ತಿರುವ ಟೀಂ ಇಂಡಿಯಾ ಸ್ಟಾರ್‌ ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ (Hardik Pandya) ಅವರು ಮುಂಬರುವ ಅಫ್ಘಾನಿಸ್ತಾನ (Afghanistan) ವಿರುದ್ಧದ ಟಿ20 ಸರಣಿ ಹಾಗೂ 2024ರ ಐಪಿಎಲ್‌ ಟೂರ್ನಿಗೆ ಅಲಭ್ಯರಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಗುಜರಾತ್‌ ಟೈಟಾನ್ಸ್‌ನಿಂದ (Gujarat Taitans) ಟ್ರೇಡ್‌ ವಿಂಡೋ (ಆಟಗಾರರ ಬದಲಾವಣೆ ಮಾಡಿಕೊಳ್ಳುವ ನಿಯಮ) ಮೂಲಕ ಮುಂಬೈ ಇಂಡಿಯನ್ಸ್‌ಗೆ (Mumbai Indians) ಮರಳಿ ನಾಯಕತ್ವ ಪಡೆದುಕೊಂಡಿದ್ದ ಹಾರ್ದಿಕ್‌ ಪಾಂಡ್ಯ ಅವರು ಮತ್ತೆ ಗಾಯದ ಸಮಸ್ಯೆಗೆ ತುತ್ತಾಗಿರುವುದು ಫ್ರಾಂಚೈಸಿಗೆ ತಲೆನೋವು ಉಂಟುಮಾಡಿದೆ. ಇದನ್ನೂ ಓದಿ: ಕುಸ್ತಿ ಬಿಟ್ಟರೂ ಚಿಂತೆ ಶುರುವಾಗಿದೆ, ಕಿರಿಯರಿಗೆ ಏನು ಹೇಳ್ಬೇಕು ತಿಳಿಯುತ್ತಿಲ್ಲ: ಸಾಕ್ಷಿ ಮಲಿಕ್‌ ಭಾವುಕ

    2023ರ ಏಕದಿನ ವಿಶ್ವಕಪ್ (World Cup) ಟೂರ್ನಿ ವೇಳೆ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್‌ ವೇಳೆ ಹಾರ್ದಿಕ್‌ ಪಾಂಡ್ಯ ಗಾಯದ ಸಮಸ್ಯೆಗೆ ತುತ್ತಾಗಿದ್ದರು. ಕ್ರೀಸ್‌ನಲ್ಲಿದ್ದ ಲಿಟ್ಟನ್‌ ದಾಸ್‌ ಹಾರ್ದಿಕ್‌ ಅವರ ಎಸೆತವನ್ನು ಸ್ಟ್ರೈಟ್‌ಡ್ರೈವ್‌ ಮಾಡಿದಾಗ, ಚೆಂಡನ್ನು ತಡೆಯುವ ಪ್ರಯತ್ನದಲ್ಲಿ ಪಾಂಡ್ಯ ಕಾಲು ಉಳುಕಿಸಿಕೊಂಡಿದ್ದರು. ನಂತರ ಪೆವಿಲಿಯನ್‌ಗೆ ಹಿಂದಿರುಗಿದರೂ ಮೈದಾನಕ್ಕೆ ಮರಳಲಿಲ್ಲ. ಅಂತಿಮವಾಗಿ ಅವರು ಏಕದಿನ ವಿಶ್ವಕಪ್ ಟೂರ್ನಿಯಿಂದ ಹೊರ ಬಿದ್ದಿದ್ದರು.

    ಅಲ್ಲದೆ, ಏಕದಿನ ವಿಶ್ವಕಪ್ ಬಳಿಕ ನಡೆದ ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ ಹಾಗೂ ಏಕದಿನ ಸರಣಿಗೂ ಅಲಭ್ಯರಾದರು. ಇದೀಗ ಗಾಯದ ಸಮಸ್ಯೆ ಮತ್ತೆ ಗಂಭೀರವಾಗುತ್ತಿದ್ದು, 2024ರ ಜನವರಿಯಲ್ಲಿ ನಿಗದಿಯಾಗಿರುವ ಅಫ್ಘಾನಿಸ್ತಾನ ವಿರುದ್ಧದ ಟಿ20 ಪಂದ್ಯಕ್ಕೂ ಅಲಭ್ಯರಾಗಲಿದ್ದಾರೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಕೇಶವ್ ಮಹಾರಾಜ್ ಎಂಟ್ರಿಗೆ `ರಾಮ್ ಸಿಯಾ ರಾಮ್’ ಹಾಡು – ಕ್ರಿಕೆಟ್ ಅಂಗಳದಲ್ಲಿ ಮತ್ತೆ ಶ್ರೀರಾಮನ ಸದ್ದು

    ಮತ್ತೊಂದೆಡೆ ಮಾರ್ಚ್‌ ಅಂತ್ಯದಲ್ಲಿ ಆರಂಭವಾಗುವ 2024ರ ಐಪಿಎಲ್‌ ಟೂರ್ನಿಯ ಒಳಗಾಗಿ ಅವರು ಸಂಪೂರ್ಣ ಗುಣಮುಖರಾಗುವುದು ಅನುಮಾನ ಎಂಬ ವಿಷಯಗಳು ಕೇಳಿಬರುತ್ತಿದೆ. ಇದರಿಂದ ಪಾಂಡ್ಯ ಐಪಿಎಲ್‌ನಿಂದಲೇ ಹೊರಗುಳಿಯಬಹುದು, ರೋಹಿತ್‌ ಶರ್ಮಾ ಮತ್ತೆ ಮುಂಬೈ ಇಂಡಿಯನ್ಸ್‌ ನಾಯಕತ್ವ ವಹಿಸಬಹುದು ಎಂದು ಉನ್ನತ ಮೂಲಗಳು ತಿಳಿಸಿವೆ.

    ಹಾರ್ದಿಕ್‌ ಅಲಭ್ಯರಾದ್ರೆ ನಾಯಕ ಯಾರು?
    10 ವರ್ಷಗಳ ಕಾಲ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿ 5 ಪ್ರಶಸ್ತಿಗಳನ್ನು ಗೆದ್ದು ಕೊಟ್ಟಿದ್ದ ರೋಹಿತ್ ಶರ್ಮಾ ಅವರನ್ನು ಬಿಟ್ಟು ಹಾರ್ದಿಕ್ ಪಾಂಡ್ಯಗೆ ಮಿನಿ ಹರಾಜಿಗೂ ಮುನ್ನ ನಾಯಕತ್ವ ಹಸ್ತಾಂತರಿಸಲಾಗಿತ್ತು. ಈ ನಿರ್ಧಾರಕ್ಕೆ ತೀವ್ರ ಟೀಕೆ ವ್ಯಕ್ತವಾಗಿದ್ದರೂ ಮುಂಬೈ ಇಂಡಿಯನ್ಸ್ ತಮ್ಮ ನಿರ್ಧಾರ ಸಮರ್ಥಿಸಿಕೊಂಡಿತ್ತು. ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸ್ಪಷ್ಟನೆ ನೀಡಿತ್ತು. ಇದರಿಂದ ತೀವ್ರ ಬೇಸರಕ್ಕೆ ಒಳಗಾಗಿದ್ದ ರೋಹಿತ್ ಶರ್ಮಾ ಫ್ಯಾನ್ಸ್‌ ಮುಂಬೈ ಇಂಡಿಯನ್ಸ್‌ನ ಸೋಶಿಯಲ್‌ ಮೀಡಿಯಾ ಖಾತೆಗಳನ್ನು ಅನ್‌ಫಾಲೋ ಮಾಡಿದ್ದರು. ಒಂದು ವೇಳೆ ಹಾರ್ದಿಕ್ ಪಾಂಡ್ಯ ಐಪಿಎಲ್‌ಗೆ ಅಲಭ್ಯರಾದರೆ, ಮುಂಬೈ ಇಂಡಿಯನ್ಸ್‌ ತಂಡವನ್ನು ಯಾರು ಮುನ್ನಡೆಸಲಿದ್ದಾರೆಂಬ ಪ್ರಶ್ನೆ ಎಲ್ಲರಿಗೂ ಕಾಡುತ್ತಿದೆ. ಈ ವೇಳೆ ರೋಹಿತ್ ಶರ್ಮಾ ಅವರನ್ನೇ ನಾಯಕತ್ವದಲ್ಲಿ ಮುಂದುವರಿಯುವಂತೆ ಮುಂಬೈ ಟೀಮ್ ಮ್ಯಾನೇಜ್‌ಮೆಂಟ್‌ ಒತ್ತಾಯಿಸಬಹುದು ಎಂದು ಹೇಳಲಾಗಿದೆ.

  • ಪಾಂಡ್ಯ ನಾಯಕತ್ವ ವರವೋ ಶಾಪವೋ – ಕ್ಯಾಪ್ಟನ್‌ ಆದ ಒಂದೇ ಗಂಟೆಯಲ್ಲಿ 4 ಲಕ್ಷ ಫಾಲೋವರ್ಸ್‌ ಕಳೆದುಕೊಂಡ ಮುಂಬೈ

    ಪಾಂಡ್ಯ ನಾಯಕತ್ವ ವರವೋ ಶಾಪವೋ – ಕ್ಯಾಪ್ಟನ್‌ ಆದ ಒಂದೇ ಗಂಟೆಯಲ್ಲಿ 4 ಲಕ್ಷ ಫಾಲೋವರ್ಸ್‌ ಕಳೆದುಕೊಂಡ ಮುಂಬೈ

    ಮುಂಬೈ: ಅಚ್ಚರಿ ಬೆಳವಣಿಯಲ್ಲಿ ಮುಂಬೈ ಇಂಡಿಯನ್ಸ್‌ (Mumbai Indians) ಫ್ರಾಂಚೈಸಿಯು 2024ರ ಐಪಿಎಲ್‌ ಆವೃತ್ತಿಗೆ ಹಾರ್ದಿಕ್‌ ಪಾಂಡ್ಯ (Hardik Pandya) ಅವರನ್ನು ನಾಯಕನನ್ನಾಗಿ ನೇಮಿಸಿದೆ. ಪಾಂಡ್ಯ ಅವರನ್ನು ಹೊಸ ನಾಯಕ ಎಂದು ಘೋಷಿಸಿದ 1 ಗಂಟೆಯೊಳಗೆ ಮುಂಬೈ ಇಂಡಿಯನ್ಸ್ ಸೋಶಿಯಲ್‌ ಮೀಡಿಯಾ ಎಕ್ಸ್‌ ಖಾತೆಯಲ್ಲಿ 4,00,000 ಫಾಲೋವರ್ಸ್‌ (Followers) ಕಳೆದುಕೊಂಡಿದೆ.

    ರೋಹಿತ್‌ ಶರ್ಮಾ (Rohit Sharma) ಅವರನ್ನು ನಾಯಕತ್ವದಿಂದ ಕೆಳಗಿಳಿಸಿದ ವಿಷಯ ತಿಳಿಯುತ್ತಿದ್ದಂತೆ ನಿರಾಸೆ ಹೊಂದಿದ ಅಭಿಮಾನಿಗಳು ಮುಂಬೈ ಫ್ರಾಂಚೈಸಿಗೆ ಗುಡ್‌ಬೈ ಹೇಳಿದ್ದಾರೆ. ಇದನ್ನೂ ಓದಿ: ಅಚ್ಚರಿ ಬೆಳವಣಿಗೆಯಲ್ಲಿ ಮುಂಬೈ ಸಾರಥಿಯಾದ ಪಾಂಡ್ಯ – ಹಿಟ್‌ಮ್ಯಾನ್‌ ಸ್ಥಾನ ಏನು?

    10 ವರ್ಷಗಳ ಕಾಲ ಮುಂಬೈ ಇಂಡಿಯನ್ಸ್‌ ತಂಡದಲ್ಲಿ ಆಡುತ್ತಿರುವ ರೋಹಿತ್‌ ಶರ್ಮಾ 2013, 2015, 2017, 2019 ಹಾಗೂ 2020ರ ಆವೃತ್ತಿಗಳಲ್ಲಿ ತಂಡವನ್ನು ಚಾಂಪಿಯನ್‌ ಪಟ್ಟಕ್ಕೆ ಕೊಂಡೊಯ್ದಿದ್ದರು. ಪ್ರಸಕ್ತ ವರ್ಷದ ಐಪಿಎಲ್‌ ಆವೃತ್ತಿಯಲ್ಲೂ ಪ್ಲೇ ಆಫ್‌ ತಲುಪಿತ್ತು. ಇದನ್ನೂ ಓದಿ: ಸೂರ್ಯ ಬೆಂಕಿ ಆಟ, ಕುಲ್ದೀಪ್‌ ಮಾರಕ ಬೌಲಿಂಗ್‌ಗೆ ಆಫ್ರಿಕಾ ಬರ್ನ್‌ – ಸರಣಿ 1-1 ರಲ್ಲಿ ಸಮ

    ಇನ್ನೂ 2022ರಲ್ಲಿ ಗುಜರಾತ್ ಟೈಟಾನ್ಸ್ (Gujarat Taitans) ತಂಡ ಸೇರಿದ್ದ ಹಾರ್ದಿಕ್ ಪಾಂಡ್ಯ ನಾಯಕನಾಗಿ ತಂಡದ ಚೊಚ್ಚಲ ಆವೃತ್ತಿಯಲ್ಲೇ ಪ್ರಶಸ್ತಿ ಗೆಲ್ಲುವಂತೆ ಮಾಡಿದ್ದರು. 2023ರ ಐಪಿಎಲ್‌ ಫೈನಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಸೋತು ರನ್ನರ್ ಅಪ್ ಪ್ರಶಸ್ತಿ ತಂದುಕೊಟ್ಟಿದ್ದರು. ಎರಡು ವರ್ಷಗಳ ನಂತರ ಮುಂಬೈ ಇಂಡಿಯನ್ಸ್ ತಂಡಕ್ಕೆ ಮರಳಿರುವ ಪಾಂಡ್ಯ 5 ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಲು ಸಜ್ಜಾಗಿದ್ದಾರೆ. 10 ವರ್ಷ ತಂಡವನ್ನು ಮುನ್ನಡೆಸಿದ ರೋಹಿತ್ ಶರ್ಮಾ ಅವರ ಭವಿಷ್ಯದ ಬಗ್ಗೆ ಮಾಹಿತಿ ಲಭ್ಯವಿಲ್ಲ. ಅವರು ನಾಯಕತ್ವದ ಹೊರತಾಗಿಯೂ ತಂಡದಲ್ಲಿ ಮುಂದುವರಿಯುವರೇ ಎಂದು ಕಾದು ನೋಡಬೇಕಾಗಿದೆ.

    ಹಾರ್ದಿಕ್ ಪಾಂಡ್ಯ ಆಯ್ಕೆಯನ್ನು ಫ್ರಾಂಚೈಸಿಯ ಗ್ಲೋಬಲ್ ಮುಖ್ಯಸ್ಥ ಮಹೇಲಾ ಜಯವರ್ಧನೆ ಶ್ಲಾಘಿಸಿದ್ದಾರೆ. ಇದು ಪರಂಪರೆ ನಿರ್ಮಿಸುವ ಭಾಗವಾಗಿದೆ ಮತ್ತು ಭವಿಷ್ಯದ ನಿರ್ಧಾರವಾಗಿದೆ. ಈ ತತ್ವಕ್ಕೆ ಅನುಗುಣವಾಗಿ ಹಾರ್ದಿಕ್ ಪಾಂಡ್ಯ ಐಪಿಎಲ್ 2024 ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರೋಹಿತ್, ಮ್ಯಾಕ್ಸಿ ವಿಶ್ವದಾಖಲೆ ಸರಿಗಟ್ಟಿದ ಸೂರ್ಯ – ವಿಶ್ವದ ನಂ.1 ಬ್ಯಾಟರ್‌ನ ಮತ್ತೊಂದು ಸಾಧನೆ

    ರೋಹಿತ್ ಶರ್ಮಾ ಅವರ ಅಸಾಧಾರಣ ನಾಯಕತ್ವಕ್ಕಾಗಿ ನಾವು ಕೃತಜ್ಞತೆ ಸಲ್ಲಿಸುತ್ತೇವೆ. 2013 ರಿಂದ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ಅವರ ಅಧಿಕಾರಾವಧಿ ಅಸಮಾನ್ಯವಾಗಿದೆ. ಅವರ ನಾಯಕತ್ವವು ತಂಡಕ್ಕೆ ಸಾಟಿಯಿಲ್ಲದ ಯಶಸ್ಸನ್ನು ತಂದುಕೊಟ್ಟಿದೆ ಮಾತ್ರವಲ್ಲ, ಐಪಿಎಲ್ ಇತಿಹಾಸದಲ್ಲಿ ಅತ್ಯುತ್ತಮ ನಾಯಕರಲ್ಲಿ ಒಬ್ಬರಾಗಿ ಅವರ ಸ್ಥಾನವನ್ನು ಭದ್ರಪಡಿಸಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಧೋನಿಯ ನಂ.7 ಜೆರ್ಸಿಗೆ ನಿವೃತ್ತಿ; ಶರ್ಟ್‌ ಆಯ್ಕೆ ಮಾಡದಂತೆ ಆಟಗಾರರಿಗೆ BCCI ಸೂಚನೆ