Tag: ಹಾರಾಟ

  • ಪೈಲಟ್‍ಗೆ ಅನಾರೋಗ್ಯ- ಮಂಗ್ಳೂರು ರನ್‍ವೇಯಲ್ಲಿ ನಿಂತ ವಿಮಾನ

    ಪೈಲಟ್‍ಗೆ ಅನಾರೋಗ್ಯ- ಮಂಗ್ಳೂರು ರನ್‍ವೇಯಲ್ಲಿ ನಿಂತ ವಿಮಾನ

    ಮಂಗಳೂರು: ಪೈಲಟ್‍ಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಂಗಳೂರಿನಿಂದ ದುಬೈಗೆ ಹೊರಡಬೇಕಿದ್ದ ವಿಮಾನವೊಂದು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇನಲ್ಲೇ ನಿಂತುಕೊಂಡಿದೆ.

    ಮಂಗಳವಾರ ತಡರಾತ್ರಿ 12.45ಕ್ಕೆ ಮಂಗಳೂರಿನಿಂದ ದುಬೈಗೆ ಹಾರಬೇಕಿದ್ದ ಸ್ಪೈಸ್ ಜೆಟ್-ಎಸ್ ಜಿ59 ವಿಮಾನವು ರನ್ ವೇನಲ್ಲೇ ನಿಂತುಕೊಂಡಿದೆ. ಸುಮಾರು 188 ಪ್ರಯಾಣಿಕರಿದ್ದ ವಿಮಾನದ ಪೈಲಟ್ ಏಕಾಏಕಿ ಅನಾರೋಗ್ಯಕ್ಕೀಡಾದ ಹಿನ್ನೆಲೆಯಲ್ಲಿ ಸಂಸ್ಥೆ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಿದೆ.

    ಅಲ್ಲದೇ ಬದಲಿ ಪೈಲಟ್ ಗಾಗಿ ನಿಲ್ದಾಣಾಧಿಕಾರಿಗಳು ಕಾಯುತ್ತಿದ್ದು, ಬದಲಿ ಪೈಲಟ್ ಟರ್ಕಿಯಿಂದ ಬರಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ. ಪರ್ಯಾಯ ಪೈಲಟ್ ಮಧ್ಯಾಹ್ನ ತಲುಪುವ ನಿರೀಕ್ಷೆ ಇದ್ದು, ವಿಮಾನ ತೆರಳಲು ಸಂಜೆ 4 ಗಂಟೆ ಸಮಯ ನಿಗದಿ ಪಡಿಸಿದೆ. ಸ್ಪೈಸ್ ಜೆಟ್ ಸಂಸ್ಥೆ ಕಾಂಟ್ರಾಕ್ಟ್ ಆಧಾರದ ಮೇಲೆ ಬದಲಿ ಪೈಲಟ್ ನಿಯೋಜನೆ ಮಾಡಿದೆ.

    ವಿಮಾನ ನಿಲ್ದಾಣದಲ್ಲಿ ಉಳಿದಿದ್ದ ಪ್ರಯಾಣಿಕರನ್ನು, ಅಧಿಕಾರಿಗಳು ಮಂಗಳೂರಿನ ಹೊಟೇಲ್ ನಲ್ಲಿ ವಿಶ್ರಾಂತಿ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾರೆ. ಕೂಡಲೇ ಬದಲಿ ಪೈಲಟ್ ಅನ್ನು ನಿಯೋಜಿಸದ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಪ್ರಯಾಣಿಕರು ಹಿಡಿಶಾಪ ಹಾಕಿದ್ದಾರೆ.