Tag: ಹಾರರ್ ಸಿನೆಮಾ

  • ಜಡಿಮಳೆಯಲ್ಲೇ ಬರ್ತಾಳಂತೆ ಹಾರರ್ ದೇವಕಿ!

    ಜಡಿಮಳೆಯಲ್ಲೇ ಬರ್ತಾಳಂತೆ ಹಾರರ್ ದೇವಕಿ!

    ಬೆಂಗಳೂರು: ಪ್ರಿಯಾಂಕಾ ಉಪೇಂದ್ರ ಮುಖ್ಯಭೂಮಿಕೆಯಲ್ಲಿ ನಟಿಸಿ, ಯುವ ಪ್ರತಿಭೆ ಲೋಹಿತ್ ನಿರ್ದೇಶನ ಮಾಡಿರುವ ಚಿತ್ರ ದೇವಕಿ. ಈ ಹಿಂದೆ ಇದೇ ಲೋಹಿತ್ ಮಮ್ಮಿ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಆ ಚಿತ್ರದಲ್ಲಿಯೂ ಪ್ರಿಯಾಂಕಾ ಅವರೇ ನಟಿಸಿದ್ದರು. ಆ ಚಿತ್ರ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿದ್ದರಿಂದ ದೇವಕಿಯ ಬಗ್ಗೆ ಎಲ್ಲೆಡೆ ಕ್ಯೂರಿಯಾಸಿಟಿ ಶುರುವಾಗಿದೆ. ಇದೀಗ ಈ ಚಿತ್ರ ಬಿಡುಗಡೆ ಕೊಂಚ ಮುಂದಕ್ಕೆ ಹೋಗಿದ್ದರೂ ಜುಲೈ ತಿಂಗಳಲ್ಲಿ ದೇವಕಿಯ ದರ್ಶನವಾಗೋದು ಗ್ಯಾರೆಂಟಿ.

    ಚಿತ್ರತಂಡವೇ ಈ ವಿಚಾರವನ್ನು ಜಾಹೀರು ಮಾಡಿದೆ. ಇದೇ ತಿಂಗಳ 28ರಂದು ದೇವಕಿಯನ್ನು ಥೇಟರಿಗೆ ಕರೆತರಲು ನಿರ್ದೇಶಕ ಲೋಹಿತ್ ಯೋಜನೆ ಹಾಕಿಕೊಂಡಿದ್ದರು. ಆದರೆ ರುಸ್ತುಂ ಚಿತ್ರ ಜೂನ್ ಹದಿನಾಲಕ್ಕನೇ ತಾರೀಕಿನಿಂದ ಪೋಸ್ಟ್‍ಪೋನ್ ಆಗಿ 28ಕ್ಕೆ ಬಿಡುಗಡೆಯಾಗಲು ತಯಾರಾಗಿದೆ. ರುಸ್ತುಂ ರಿಲೀಸಿಂಗ್ ಡೇಟು ಫಿಕ್ಸಾಗುತ್ತಲೇ ಲೋಹಿತ್ ದೇವಕಿಯನ್ನು ಜುಲೈ ಮೊದಲ ವಾರದಲ್ಲಿ ತೆರೆಗೆ ತರಲು ನಿರ್ಧಾರ ಮಾಡಿದ್ದಾರೆ.

    ಈಗಾಗಲೇ ದೇವಕಿ ಚಿತ್ರದ ಬಗ್ಗೆ ಎಲ್ಲ ವರ್ಗಗಳ ಪ್ರೇಕ್ಷಕರೂ ಆಕರ್ಷಿತರಾಗಿದ್ದಾರೆ. ಪೋಸ್ಟರ್, ಟೀಸರ್ ಮತ್ತು ಟ್ರೈಲರ್ ಮೂಲಕ ದೇವಕಿಯ ಹವಾ ಎಲ್ಲೆಡೆ ವ್ಯಾಪಿಸಿಕೊಂಡಿದೆ. ಮೊದಲ ಚಿತ್ರ ಮಮ್ಮಿಯ ಮೂಲಕವೇ ಪುಷ್ಕಳ ಗೆಲುವನ್ನು ತನ್ನದಾಗಿಸಿಕೊಂಡಿದ್ದ ಲೋಹಿತ್ ದೇವಕಿಯ ಮೂಲಕ ಅದನ್ನು ಮುಂದುವರೆಸೋ ಉತ್ಸಾಹದಿಂದಿದ್ದಾರೆ. ಆರಂಭದಲ್ಲಿ ಹೌರಾ ಬ್ರಿಡ್ಜ್ ಅಂತಿದ್ದ ಈ ಚಿತ್ರವೀಗ ದೇವಕಿಯಾಗಿ ರೂಪಾಂತರ ಹೊಂದಿದೆ.

    ಇದು ವಿಶೇಷ ಕಥೆ ಹೊಂದಿರೋ ಹಾರರ್ ಚಿತ್ರ. ಹಾರರ್ ಅಂದಾಕ್ಷಣ ಸಿದ್ಧ ಸೂತ್ರಗಳ ಪ್ರೇತ ಬಾಧೆ ಈ ಚಿತ್ರದ್ದು ಅಂದುಕೊಳ್ಳುವಂತಿಲ್ಲ. ಇದು ಹಾರರ್ ಜಾನರಿನಲ್ಲಿಯೇ ಮೈಲಿಗಲ್ಲಾಗುವಂಥಾ ನವೀನ ಶೈಲಿಯ ನಿರೂಪಣೆಯನ್ನು ಹೊಂದಿದೆಯಂತೆ. ಇದರ ಬಹುಭಾಗದ ಚಿತ್ರೀಕರಣ ಕೊಲ್ಕತ್ತಾದ ವಿಶೇಷ ಸ್ಥಳಗಳಲ್ಲಿ ನಡೆದಿದೆ. ತಾಂತ್ರಿಕವಾಗಿಯೂ ಹೊಸತನ ಹೊಂದಿರೋ ದೇವಕಿ ಇದೇ ಜುಲೈ ತಿಂಗಳ ಜಡಿಮಳೆಯ ಒಡ್ಡೋಲಗದಲ್ಲಿ ಪ್ರೇಕ್ಷಕರ ಮುಂದೆ ಅವತರಿಸಲಿದ್ದಾಳೆ.

  • ಹಾರರ್ ‘ವಜ್ರಮುಖಿ’ಯ ಹಾಡು ಬಂತು

    ಹಾರರ್ ‘ವಜ್ರಮುಖಿ’ಯ ಹಾಡು ಬಂತು

    ಸಿಗಂಧೂರು ದೇವಿ ಕುರಿತ ಭಕ್ತಿ ಪ್ರಧಾನ ಸಿನಿಮಾ ನಿರ್ಮಾಣ ಮಾಡಿದ್ದ ಶಶಿಕುಮಾರ್.ಪಿ.ಎಮ್ ಈ ಬಾರಿ ‘ವಜ್ರಮುಖಿ’ ಎನ್ನುವ ಹಾರರ್ ಚಿತ್ರಕ್ಕೆ ಕಥೆ, ಚಿತ್ರಕತೆ ಬರೆದು ಹಣ ಹೂಡಿದ್ದಾರೆ. ಪ್ರಚಾರದ ಮೊದಲ ಹಂತವಾಗಿ ರಾಜ್ ಭಾಸ್ಕರ್ ಸಂಗೀತ ಸಂಯೋಜನೆಯ ಮೂರು ಹಾಡುಗಳ ಆಡಿಯೋ ಸಿಡಿ ಅನಾವರಣಗೊಂಡಿತು. ಹಾರರ್, ಸೆಂಟಿಮೆಂಟ್ ಮತ್ತು ಪ್ರೀತಿ ಕಥಾವಸ್ತು ಹೊಂದಿರುವ ತ್ರಿಕೋನ ಕತೆ ಈ ಚಿತ್ರದ್ದು ಎಂದು ಎಂದು ನಿರ್ಮಾಪಕರು ಬಣ್ಣಿಸಿದರು. ರೋಡ್ ರೋಮಿಯೋ ನಂತರ ಎರಡನೆ ಇನ್ನಿಂಗ್ಸ್ ಇದಾಗಿದೆ. ಹಾರರ್ ಅಂದ ಮಾತ್ರಕ್ಕೆ ಯಾವಾಗಲೂ ದೆವ್ವ ಕಾಣಿಸಿಕೊಳ್ಳುವುದಿಲ್ಲ. ಎಲ್ಲಿ ಬೇಕೋ ಅಷ್ಟು ಮಾತ್ರ ಬರುತ್ತದೆಂದು ಆ್ಯಡ್ ಫಿಲಂ ಮೇಕರ್ ಪಾತ್ರ ಮಾಡಿರುವ ನಾಯಕ ದಿಲೀಪ್ ಪೈ ಹೇಳಿದರು.

    ನಲವತ್ತೈದು ದಿನಗಳ ಕಾಲ ಮೂರು ಹಂತಗಳಲ್ಲಿ ಸಾಗರ, ಜೋಗ್ ಜಲಪಾತ, ತಾಳಗುಪ್ಪದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂಬ ಮಾಹಿತಿಯನ್ನು ಸಂಕಲನ, ನಿರ್ದೇಶನ ಮಾಡಿರುವ ಎನ್.ಆದಿತ್ಯ ಕುಣಿಗಲ್ ನೀಡಿದರು.

    ಶೀರ್ಷಿಕೆಯಲ್ಲಿ ಪ್ರೇಕ್ಷಕರಿಗೆ ಹೆದರಿಸುತ್ತೇನೆ. ಡಾ.ನಾಗೇಂದ್ರ ಪ್ರಸಾದ್ ಶಿಫಾರಸಿನಿಂದ ಅವಕಾಶ ಒದಗಿಬಂತು. ಬಹುತೇಕ ಚಿತ್ರೀಕರಣವು ಸಾಯಂಕಾಲ 6 ರಿಂದ ಬೆಳಿಗ್ಗಿನ ಜಾವದ ತನಕ ನಡೆದಿದೆ. ನನಗಾಗಿಯೇ ಬರೆದಿರುವ ಕಾಲ ಚಂಚಲ ಹಾಡು ಚೆನ್ನಾಗಿ ಬಂದಿದೆ. ಪಿ.ಕೆ.ಹೆಚ್.ದಾಸ್ ಛಾಯಾಗ್ರಹಣದಲ್ಲಿ ಎಲ್ಲರನ್ನೂ ಸುಂದರವಾಗಿ ತೋರಿಸಿದ್ದಾರೆಂದು ನಟಿ ನೀತು ಸಂತಸ ವ್ಯಕ್ತಪಡಿಸಿದರು.

    80ರ ಕಾಲದಲ್ಲಿ ಆಡಿಯೋ ಕಂಪನಿಗೆ ಸುವರ್ಣಯುಗ ಎನ್ನಬಹುದು. ಅಂದು ವಾರಕ್ಕೆ ಒಂದು ಆಡಿಯೋ ಕಂಪೆನಿಗಳು ಆರಂಭವಾಗುತ್ತಿದ್ದವು. ಇದರ ಸ್ಪರ್ಧೆಯೂ ಚೆನ್ನಾಗಿತ್ತು. ಮುಂದೆ ಒಂದೊಂದೇ ಮುಚ್ಚಿಕೊಳ್ಳುತ್ತಾ, ಇಂದು ಬೆರಳಣಿಕೆಯಷ್ಟು ಮಾತ್ರ ಚಾಲ್ತಿಯಲ್ಲಿದೆ. ಯೂಟ್ಯೂಬ್‍ನಲ್ಲಿ ಲಹರಿ ಸಂಸ್ಥೆಗೆ ಹತ್ತು ಕೋಟಿ ಚಂದದಾರರು ಇದ್ದಾರೆ. ದೇವರನ್ನು ನೋಡಿದ್ದೇನೆ. ದೆವ್ವ ನೋಡಿಲ್ಲ. ರಾಜಕೀಯದಲ್ಲಿ ಮನುಷ್ಯರು ದೆವ್ವ ಆಗಿ ಕಾಣಿಸಿಕೊಳ್ಳುತ್ತಾರೆಂಬುದು ಲಹರಿವೇಲು ನುಡಿಯಾಗಿತ್ತು.

    ಡಾ. ರಾಜ್‍ಕುಮಾರ್ ನಿರ್ಮಾಪಕರನ್ನು ಅನ್ನದಾತರು ಎನ್ನುತ್ತಿದ್ದರು. ಈಗ ಲಹರಿ ಸಂಸ್ಥೆಯು ಹೊಸ ನಿರ್ಮಾಪಕರಿಗೆ ಆಶ್ರಯದಾತರಾಗುತ್ತಿದ್ದಾರೆ. ಸಿಡಿಗೆ ಮಾರುಕಟ್ಟೆ ಇದೆ ಅಂತ ತೋರಿಸಿಕೊಟ್ಟವರು. ಮನ ಮೆಚ್ಚಿದ ಹುಡುಗಿ ಚಿತ್ರದ ಆಡಿಯೋ ಹಕ್ಕುಗಳಿಗೆ ಎರಡೂವರೆ ಲಕ್ಷ, ಅನುರಾಗ ಅರಳಿತು ಸಿನಿಮಾಕ್ಕೆ ನಲವತ್ತು ಲಕ್ಷ ನೀಡಿದ್ದು ದಾಖಲೆಯಾಗಿತ್ತು. ಅದರಂತೆ ನೀವು ಈಗ ಬರುವ ಚಿತ್ರಗಳನ್ನು ಮೇಲಕ್ಕೆ ಎತ್ತಬೇಕೆಂದು ನಿರ್ಮಾಪಕರ ಪರವಾಗಿ ವೇಲುರವರನ್ನು ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೇಗೌಡ ಕೋರಿಕೊಂಡರು.

    ಹಾರರ್ ಸಿನಿಮಾಗಳಲ್ಲಿ ಹಾಡುಗಳಿಗೆ ಹೆಚ್ಚು ಪ್ರಾಧಾನ್ಯತೆ ಇರುವುದಿಲ್ಲ ಎನ್ನುವ ಮಾತಿದೆ. ಆದರೆ ವಜ್ರಮುಖಿಯಲ್ಲಿ ಜನ ಇಷ್ಟ ಪಡುವಂಥಾ ಮೂರು ಹಾಡುಗಳಿವೆ. ಈಗಾಗಲೇ ಸಾಕಷ್ಟು ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿರುವ ರಾಜ್ ಭಾಸ್ಕರ್ ಈ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಲಹರಿ ಸಂಸ್ಥೆ ಹಾಡುಗಳ ಹಕ್ಕು ಪಡೆದಿದೆ ಅಂದರೆ ಆ ಹಾಡುಗಳು ಉತ್ತಮವಾಗಿ ಮೂಡಿಬಂದಿರುತ್ತದೆ ಎಂಬುದು ಖಾತರಿ.

  • ಹಾರರ್ ‘ಟ್ರಂಕ್’ ಸಿಕ್ಕಿದ್ದು ಕಲಬುರಗಿಯಲ್ಲಿ!

    ಹಾರರ್ ‘ಟ್ರಂಕ್’ ಸಿಕ್ಕಿದ್ದು ಕಲಬುರಗಿಯಲ್ಲಿ!

    – ದೆವ್ವಗಳ ಮೇಲೆ ಸೈಂಟಿಫಿಕ್ ಕಣ್ಗಾವಲು!
    – ರಿಷಿಕಾ ತಂದ ಟ್ರಂಕಿನೊಳಗೆ ಏನೇನಿದೆ ಗೊತ್ತಾ?

    ಬೆಂಗಳೂರು: ಈಗ ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲಡೆ ರಿಶಿಕಾ ನಿರ್ದೇಶನದ ಟ್ರಂಕ್ ಚಿತ್ರದ್ದೇ ಮಾತು. ಹೀಗೆ ಟ್ರೇಲರ್ ಮೂಲಕ ಟಾಕ್ ಕ್ರಿಯೇಟ್ ಆಗುತ್ತಲೇ ಚಿತ್ರೀಕರಣದ ಸಂದರ್ಭದಲ್ಲಿ ಉಂಟಾದ ಪ್ರೇತಬಾಧೆಯ ವೀಡಿಯೋ ಒಂದು ಲೀಕ್ ಆಗೋ ಮೂಲಕ ಪ್ರೇಕ್ಷಕರು ಟ್ರಂಕಿನತ್ತ ಮತ್ತಷ್ಟು ಕುತೂಹಲಗೊಂಡಿದ್ದಾರೆ.

    ಕನ್ನಡದ ಖ್ಯಾತ ನಿರ್ದೇಶಕ ಜಿ.ವಿ ಅಯ್ಯರ್ ಮೊಮ್ಮಗಳು ರಿಶಿಕಾ ಶರ್ಮಾ ಈ ಮೂಲಕ ಮೊದಲ ಚಿತ್ರದಲ್ಲಿಯೇ ಎಲ್ಲರ ಗಮನ ಸೆಳೆದಿದ್ದಾರೆ. ಈ ಚಿತ್ರ ಸತ್ಯ ಘಟನೆಯೊಂದನ್ನು ಆಧರಿಸಿದ್ದೆಂಬುದು ಅಸಲೀ ವಿಶೇಷ. ಉತ್ತರಕರ್ನಾಟಕ ಸೀಮೆಯ ಗುಲ್ಬರ್ಗಾದಲ್ಲಿ (ಈಗಿನ ಕಲಬುರಗಿ) 1997ರ ಸುಮಾರಿಗೆ ನಡೆದಿದ್ದ, ಆ ಪ್ರದೇಶದಲ್ಲಿ ಈಗಲೂ ಚಾಲ್ತಿಯಲ್ಲಿರುವ ಪ್ರಕರಣವೊಂದನ್ನು ಆಧಾರವಾಗಿಟ್ಟುಕೊಂಡು ಈ ಕಥೆಯನ್ನು ಸಿದ್ಧಪಡಿಸಲಾಗಿದೆಯಂತೆ.

    ಸಾಮಾನ್ಯವಾಗಿ ದೆವ್ವ ಭೂತಗಳ ಜಾಡನ್ನು ಮಂತ್ರ ತಂತ್ರದ ಮೂಲಕ ಬೆನ್ನು ಬೀಳೋದು ಕನ್ನಡ ಚಿತ್ರಗಳ ಮಟ್ಟಿಗೆ ಜನಪ್ರಿಯವಾಗಿರೋ ಸಿದ್ಧ ಮಾದರಿ. ಆದರೆ ಟ್ರಂಕ್ ಚಿತ್ರದಲ್ಲಿ ಇದಕ್ಕಾಗಿ ಪಕ್ಕಾ ಸೈಂಟಿಫಿಕ್ ಮೆಥಡನ್ನು ಅನುಸರಿಸಲಾಗಿದೆಯಂತೆ. ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ದೆವ್ವ ಭೂತಗಳನ್ನು ಘೋಸ್ಟ್ ಹಂಟರ್ ತಂಡದ ಮೂಲಕ ಪತ್ತೆಹಚ್ಚುವಂಥಾ ವಿಭಿನ್ನವಾದ ಮಾದರಿಯನ್ನು ಅನುಸರಿಸಲಾಗಿದೆಯಂತೆ. ಈ ಘೋಸ್ಟ್ ಹಂಟರ್ ಗಳು ಬೀಡಾಡಿಗಳಂತೆ ಅಲೆದಾಡೋ ದೆವ್ವಗಳನ್ನು ಪಳಗಿಸಿಕೊಂಡು ಅವುಗಳೊಂದಿಗೆ ಮಾತುಕತೆ ನಡೆಸುವಂಥಾ ಕಥಾನಕಗಳೂ ಇದ್ದಾವೆ. ಈ ಕ್ಷಣಕ್ಕೂ ವಿಜ್ಞಾನ ದೆವ್ವಗಳ ಇರುವಿಕೆಯನ್ನು ಒಪ್ಪಿಕೊಂಡಿಲ್ಲವಾದರೂ ಸೈಂಟಿಫಿಕ್ ಮಾದರಿಯಲ್ಲಿ ದೆವ್ವಗಳ ಇರುವಿಕೆಯನ್ನು ಒಪ್ಪಿಕೊಳ್ಳುವುದೂ ಒಂದು ವೈರುಧ್ಯ. ಆದರೆ ಆ ಹಾದಿ ಬಲು ರೋಚಕ!

    ಅಂಥಾ ರೋಚಕತೆ ಟ್ರಂಕ್ ಚಿತ್ರದುದ್ದಕ್ಕೂ ಇದೆಯಂತೆ. ಹಾಡು, ಪ್ರೀತಿ ಮುಂತಾದವುಗಳತ್ತ ಹೆಚ್ಚಾಗಿ ಗಮನ ಹರಿಸದೆ, ಕಥೆಯ ಮೂಲಕವೇ ಕಾಮಿಡಿಯನ್ನೂ ಹರಿಯ ಬಿಟ್ಟು ಚಿತ್ರದುದ್ದಕ್ಕೂ ಹಾರರ್ ಅಂಶಗಳತ್ತಲೇ ಪ್ರಧಾನವಾಗಿ ಗಮನ ಹರಿಸಲಾಗಿದೆಯಂತೆ. ಅಂತೂ ರಿಷಿಕಾ ಸಾರಥ್ಯದ ಈ ಚಿತ್ರ ಮೊದಲ ಹಂತದಲ್ಲಿಯೇ ಭಾರೀ ಕ್ರೇಜ್ ಹುಟ್ಟು ಹಾಕಿರೋದಂತೂ ಸತ್ಯ!