Tag: ಹಾರರ್ ಥ್ರಿಲ್ಲರ್

  • ನಾಕುಮುಖ ನಿರ್ದೇಶಕ ಕುಶನ್ ಗೌಡರ ಪ್ರತಿಭೆಯ ನಾನಾ ಮುಖ!

    ನಾಕುಮುಖ ನಿರ್ದೇಶಕ ಕುಶನ್ ಗೌಡರ ಪ್ರತಿಭೆಯ ನಾನಾ ಮುಖ!

    ‘ನಾಕುಮುಖ’ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಹೊಸಬರೇ ಸೇರಿ ಮಾಡುತ್ತಿರೋ ಈ ಚಿತ್ರ ಅದರ ಮೂಲಕವೇ ಈಗ ಪ್ರೇಕ್ಷಕರನ್ನೆಲ್ಲ ತಲುಪಿಕೊಂಡಿದೆ. ಈಗ ಹೊಸಬರೊಂದು ಚಿತ್ರ ಮಾಡುತ್ತಿದ್ದಾರೆಂದರೆ ಆ ಬಗ್ಗೆ ಕನ್ನಡದ ಪ್ರೇಕ್ಷಕರಲ್ಲೊಂದು ಕುತೂಹಲ ಮೂಡಿಕೊಳ್ಳುತ್ತೆ. ಹೊಸಬರು ಹೊಸತನದ ಚಿತ್ರವನ್ನೇ ಸೃಷ್ಟಿಸುತ್ತಾರೆಂಬ ಗಾಢವಾದ ನಂಬಿಕೆಯಲ್ಲದೇ ಅದಕ್ಕೆ ಬೇರ್ಯಾವ ಕಾರಣವೂ ಇಲ್ಲ. ನಾಕುಮುಖ ಚಿತ್ರದ ವಿಚಾರದಲ್ಲಿಯೂ ಅಂಥಾದ್ದೇ ಕಾರಣದಿಂದ ಪ್ರೇಕ್ಷಕರು ಆಕರ್ಷಿತರಾಗಿದ್ದಾರೆ. ಟ್ರೇಲರ್ ತುಂಬಾ ಅದಕ್ಕೆ ಪೂರಕವಾದ ಅಂಶಗಳೇ ಕಾಣಿಸುವಂತಿರೋ ನಾಕುಮುಖ ಸಸ್ಪೆನ್ಸ್, ಹಾರರ್, ಥ್ರಿಲ್ಲರ್ ಚಿತ್ರ. ಈ ಚಿತ್ರವನ್ನು ನಿರ್ದೇಶನ ಮಾಡಿ ಮುಖ್ಯವಾದೊಂದು ಪಾತ್ರವನ್ನೂ ನಿರ್ವಹಿಸಿರುವವರು ಕುಶನ್ ಗೌಡ. ಈ ಮೂಲವೇ ದಶಕಗಳ ಕಾಲ ಅವರು ಪಟ್ಟ ಕಷ್ಟ, ಕಂಡ ಕನಸು ನಿರ್ಣಾಯಕ ಘಟ್ಟ ತಲುಪಿಕೊಂಡಿದೆ.

    ಕುಶನ್ ಗೌಡ ಈವರೆಗೂ ಹಲವಾರು ಸಿನಿಮಾಗಳು ಮತ್ತು ಧಾರಾವಾಹಿಗಳಲ್ಲಿ ಒಂದಷ್ಟು ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅಂಥಾ ಸಣ್ಣ ಸಣ್ಣ ಅವಕಾಶಗಳನ್ನು ಗಿಟ್ಟಿಸಿಕೊಳ್ಳುವುದಕ್ಕೂ ದೊಡ್ಡಮಟ್ಟದಲ್ಲಿಯೇ ಪಡಿಪಾಟಲು ಪಟ್ಟಿರೋ ಕುಶನ್ ಆ ಹಂತದಲ್ಲಿ ಒಂದು ಸಿನಿಮಾದಲ್ಲಿ ಅವಕಾಶ ಸಿಕ್ಕರೆ ನಟನೆಯಷ್ಟೇ ನಿರ್ದೇಶನ ವಿಭಾಗಗಳತ್ತಲೂ ಶ್ರದ್ಧೆಯಿಂದ ಗಮನ ಹರಿಸುತ್ತಿದ್ದರಂತೆ. ಹಾಗೆ ದಶಕಗಳ ಕಾಲ ಸಾಗಿ ಬಂದು ಒಂದೊಳ್ಳೆ ಕಥೆಯೊಂದಿಗೆ ಅವರು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಬರವಣಿಗೆಯಲ್ಲಿ ಅಪಾರ ಆಸಕ್ತಿ ಮತ್ತು ಹಿಡಿತ ಹೊಂದಿರೋ ಕುಶನ್ ಹಾಡಲೂ ಸೈ, ನಟಿಸಲೂ ಸಿದ್ಧ. ಯಾವುದೇ ಸಿನಿಮಾ, ಧಾರಾವಾಹಿಗಳಿಗೆ ಸಂಬಂಧಿಸಿದ ಬರವಣಿಗೆಯನ್ನು ಬೆರಗಾಗುವಂತೆ ಮಾಡಬಲ್ಲ ಕುಶನ್ ಬಹುಮುಖ ಪ್ರತಿಭೆ. ಅವರ ಪ್ರತಿಭೆಯ ನಾನಾ ಮುಖಗಳಲ್ಲಿ ನಾಕುಮುಖ ಚಿತ್ರದ ನಿರ್ದೇಶಕನ ಅವತಾರವೂ ಒಂದಾಗಿದೆ!

    ನಾಕುಮುಖ ಚಿತ್ರಕ್ಕವರು ಕಥೆ, ಚಿತ್ರಕಥೆ, ಸಂಭಾಷಣೆಯೊಂದಿಗೆ ಮೂರು ಹಾಡುಗಳನ್ನೂ ಬರೆದಿದ್ದಾರೆ. ಪ್ರಮುಖವಾದ ಪಾತ್ರದಲ್ಲಿಯೂ ನಟಿಸಿದ್ದಾರೆ. ಅವರ ಪ್ರತಿಭೆಗೆ ಇದಕ್ಕಿಂತಲೂ ಬೇರೆ ಉದಾಹರಣೆ ಬೇಕಿಲ್ಲ. ಮೂಲತಃ ಮಡಿಕೇರಿಯ ಐಕೊಳ ಗ್ರಾಮದವರಾದ ಕುಶನ್ ಶಾಲಾ ಕಾಲೇಜು ವ್ಯಾಸಂಗ ಮಾಡಿದ್ದೆಲ್ಲವೂ ಅಲ್ಲಿಯೇ. ಹೀಗೆ ಶಾಲೆ ಮತ್ತು ಕಾಲೇಜು ದಿನಗಳಲ್ಲಿಯೇ ನಾಟಕ ಬರೆಯುವುದು, ನಟಿಸೋದರಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ಅವರು ಈ ಕಾರಣದಿಂದಲೇ ಇಡೀ ಊರಿನ ಗಮನ ಸೆಳೆದುಕೊಂಡಿದ್ದರು. ಅದಾದ ನಂತರದಲ್ಲಿ ಸಿನಿಮಾ ನಟನಾಗಬೇಕೆಂಬ ಹಂಬಲ ಅವರನ್ನಾವರಿಸಿಕೊಂಡಿತ್ತು. ಅದಕ್ಕೆ ಸ್ಫೂರ್ತಿಯಾಗಿದ್ದದ್ದು ಶಂಕರ್ ನಾಗ್ ಮೇಲಿನ ಅಪೂರ್ವ ಅಭಿಮಾನ.

    ಬಳಿಕ ಕಾಲೇಜು ವ್ಯಾಸಂಗ ಮುಗಿಸಿ ಬೆಂಗಳೂರಿಗೆ ಬಂದಿಳಿದ ಅವರೆದುರಿದ್ದದ್ದೂ ನಟನಾಗಿ ಬೆಳೆಯಬೇಕೆಂಬ ಹಂಬಲವಷ್ಟೇ. ಎಲ್ಲೆಲ್ಲ ಸೀರಿಯಲ್, ಸಿನಿಮಾ ಶೂಟಿಂಗು ನಡೆಯುತ್ತದೆ ಎಂದು ಪತ್ತೆಹಚ್ಚಿ ಹೇಗಾದರೂ ಅಲ್ಲಿಗೆ ನುಗ್ಗಿ ತನ್ನ ಫೋಟೋ ಮತ್ತಿತರ ವಿವರ ಕೊಟ್ಟು ಬರೋದೇ ಅವರ ದಿನನಿತ್ಯದ ಕೆಲಸವಾಗಿತ್ತು. ಹಾಗಂತ ಹೊಟ್ಟೆಪಾಡು ಸುಮ್ಮನಿರಬೇಕಲ್ಲಾ? ಅದಕ್ಕಾಗಿ ಆರಂಭದಲ್ಲಿ ಅವರು ಆರಿಸಿಕೊಂಡಿದ್ದದ್ದು ಪಬ್, ಹೊಟೇಲುಗಳಲ್ಲಿ ಬೌನ್ಸರ್ ಕೆಲಸ. ಸಾಮಾನ್ಯವಾಗಿ ವಾರದ ಕಡೆಯ ಎರಡು ದಿನ ಈ ಕೆಲಸ ಇರುತ್ತಿತ್ತು. ಅಂಥಾ ಕಡೆಗಳಿಗೆ ಸಿನಿಮಾ ಸೀರಿಯಲ್ ಮಂದಿ ಬಂದರೆ ಪರಿಚಯ ಮಾಡಿಕೊಂಡು ಅವಕಾಶ ಕೇಳಬೇಕೆಂಬ ದೂರದ ಆಸೆ ಮತ್ತು ಅದರಿಂದ ಇನ್ನೂರೋ ಮುನ್ನೋರೋ ವಾರದ ಖರ್ಚಿಗೆ ಹುಟ್ಟುತ್ತದೆಂಬ ಅನಿವಾರ್ಯತೆಯಿಂದಲೇ ಕುಶನ್ ಆ ಕೆಲಸಕ್ಕಿಳಿದಿದ್ದರು.

    ಆದರೆ ಎಷ್ಟೋ ಅವಮಾನಗಳನ್ನು ಸಹಿಸಿಕೊಂಡೇ ಅವರು ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಲಾರಂಭಿಸಿದ್ದರು. ಒಂದಷ್ಟಾದರೂ ಗುರುತು ಹಿಡಿಯುವಂಥಾ ಪಾತ್ರಗಳು ಅವರಿಗೆ ಸಿಗಲಾರಂಭಿಸಿದ್ದು ಇತ್ತೀಚಿನ ದಿನಗಳಲ್ಲಿಯಷ್ಟೆ. ಆದರೆ ಸಿಕ್ಕ ಅವಕಾಶವನ್ನೇ ಬಳಸಿಕೊಂಡು ತಾನೋರ್ವ ಪ್ರತಿಭಾವಂತ ನಟ ಅನ್ನೋದನ್ನು ಪ್ರೂವ್ ಮಾಡಿಕೊಂಡಿದ್ದ ಕುಶನ್ ಅದರ ನಡುವೆಯೇ ಕೆಲ ರ್ಯಾಪ್ ಸಾಂಗ್‍ಗಳನ್ನೂ ರೂಪಿಸಿದ್ದರಂತೆ. ಅದರಲ್ಲಿಯೂ ಒಂದು ಮಟ್ಟದ ಯಶ ಕಂಡ ಅವರಲ್ಲಿ ನಿರ್ದೇಶಕನಾಗೋ ಆಸೆ ಚಿಗುರಿಕೊಂಡಿತ್ತು. ಕಡೆಗೂ ಮಧ್ಯರಾತ್ರಿ ಹೊಳೆದ ಚೆಂದದ ಕಥೆಯನ್ನು ಒಪ್ಪ ಓರಣ ಮಾಡಿ ನಾಕುಮುಖದ ಆಕಾರ ಕೊಟ್ಟಿದ್ದಾರೆ.

    ಈವರೆಗೂ ಹಲವಾರು ಕಷ್ಟದ ಹಾದಿಯನ್ನು ಕ್ರಮಿಸಿ ಗುರಿಯತ್ತ ಧಾವಿಸಿ ಬಂದಿರುವ ಕುಶನ್ ಗೌಡ ಪಾಲಿಗೆ ನಾಕುಮುಖ ಎಂಬುದು ಬದುಕಿನ ನಿರ್ಣಾಯಕ ಘಟ್ಟದಂಥಾ ಚಿತ್ರ. ಇದರ ಟ್ರೇಲರ್‍ಗೆ ಸಿಗುತ್ತಿರೋ ಅಭೂತಪೂರ್ವ ಮೆಚ್ಚುಗೆಗಳೇ ಗೆಲುವಿನ ಸೂಚನೆಯಂತೆಯೂ ಕಾಣಿಸುತ್ತಿದೆ. ಈ ಮೂಲಕವೇ ತಾನು ನಿರ್ದೇಶಕನಾಗಿಯೂ ನೆಲೆ ಕಂಡುಕೊಳ್ಳೋ ಭರವಸೆ ಕುಶನ್ ಗೌಡರಲ್ಲಿದೆ.

  • ನಾಕುಮುಖ ಟ್ರೇಲರ್ ತುಂಬ ಹಾರರ್ ಮುಖಗಳ ದರ್ಶನ!

    ನಾಕುಮುಖ ಟ್ರೇಲರ್ ತುಂಬ ಹಾರರ್ ಮುಖಗಳ ದರ್ಶನ!

    ಬೆಂಗಳೂರು: ನಾಕುಮುಖ ಚಿತ್ರ ಈಗೊಂದಷ್ಟು ಕಾಲದಿಂದ ಸದಾ ಸುದ್ದಿಯಾಗುತ್ತಿದೆ. ಹೊಸಬರ ತಂಡ ತಮ್ಮ ಕ್ರಿಯಾಶೀಲ ಕೆಲಸ ಕಾರ್ಯಗಳಿಂದಲೇ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಾ ಬಂದಿದೆ. ಇದೀಗ ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿಕೊಂಡಿರೋ ನಾಕುಮುಖದ ಟ್ರೈಲರ್ ಬಿಡುಗಡೆಯಾಗಿದೆ. ಇದಾಗಿ ಸ್ವಲ್ಪವೇ ಸಮಯದಲ್ಲಿ ಹೆಚ್ಚಿನ ವೀಕ್ಷಣೆ ಪಡೆದುಕೊಳ್ಳುವ ಮೂಲಕ ಈ ಹೊಸಬರ ತಂಡಕ್ಕೆ ತುಂಬು ಭರವಸೆ ತುಂಬಿದೆ. ಹಾರರ್ ಥ್ರಿಲ್ಲರ್ ಕಥೆಯ ಸುಳಿವಿನೊಂದಿಗೆ ಲಗ್ಗೆಯಿಟ್ಟಿರೋ ಈ ಟ್ರೇಲರ್ ಈಗ ನಾನಾ ದಿಕ್ಕಿನಲ್ಲಿ ಚರ್ಚೆ ಹುಟ್ಟು ಹಾಕಿದೆ.

    ಇದು ಕುಶಾನ್ ಗೌಡ ನಿರ್ದೇಶನದಲ್ಲಿ ಮೂಡಿ ಬಂದಿರೋ ಮೊದಲ ಚಿತ್ರ. ನಾಕುಮುಖ ಎಂಬುದು ಕೇವಲ ಕುಶಾನ್ ಗೌಡ ಮಾತ್ರವಲ್ಲದೇ ಚಿತ್ರತಂಡದ ಬಹುತೇಕರಿಗೆ ಇದು ಮೊದಲ ಹೆಜ್ಜೆ. ದರ್ಶನ್ ರಾಘವಯ್ಯ ನಾಯಕ ನಟನಾಗಿ ಎಂಟ್ರಿ ಕೊಡುತ್ತಿದ್ದಾರೆ. ಅಮೃತಾ ಅಯ್ಯಂಗಾರ್, ಪದ್ಮಾ ಶಿವಮೊಗ್ಗ, ಶಂಕರ್ ಭಟ್, ಅವಿಶ್ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಇದೀಗ ಲಾಂಚ್ ಆಗಿರೋ ಟ್ರೇಲರ್ ಒಟ್ಟಾರೆ ಕಥೆಯ ಹೊಸತನ, ನಿಗೂಢತೆಗಳನ್ನು ಪರಿಣಾಮಕಾರಿಯಾಗಿ ದಾಟಿಸುತ್ತಲೇ ನಾಕುಮುಖದ ಸುತ್ತ ಕುತೂಹಲದ ನಾಕಾಬಂಧಿ ಹಾಕುವಂತೆ ಮಾಡುವಲ್ಲಿಯೂ ಯಶ ಕಂಡಿದೆ.

    ಓರ್ವ ಪತ್ರಕರ್ತ ಮತ್ತು ಪೊಲೀಸ್ ನಿಗೂಢ ಕೊಲೆ ಪ್ರಕರಣವೊಂದನ್ನು ಬೆಂಬಿದ್ದು ಹೊರಡೋ ರೋಚಕ ಕಥೆ ನಾಕುಮುಖದ್ದು. ಆದರೆ ಇಲ್ಲಿನ ಕಥೆಯ ನಾನಾ ಮುಖಗಳನ್ನು ಈ ಕ್ಷಣಕ್ಕೂ ಚಿತ್ರತಂಡ ನಿಗೂಢವಾಗಿಟ್ಟಿದೆ. ಇದಕ್ಕೆ ಹಾರರ್ ಟಚ್ ಕೂಡಾ ಇದೆಯಂತೆ. ಪ್ರೆಸ್, ಪೊಲೀಸ್, ರಾಜಕೀಯ ಮತ್ತು ಫ್ಯಾಮಿಲಿ ಚಿತ್ರಣ ಕಥೆಯಲ್ಲಿರೋದರಿಂದಲೇ ಇದಕ್ಕೆ ನಾಕುಮುಖ ಎಂಬ ನಾಮಕರಣ ಮಾಡಲಾಗಿದೆಯಂತೆ.

    ನಾಯಕನಾಗಿಯೂ ನಟಿಸಿರುವ ದರ್ಶನ್ ರಾಘವಯ್ಯ ಅವರೇ ಈ ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ. ಇನ್ನು ನಿರ್ದೇಶಕರಂತೂ ಹೊಸಬರೆಂಬ ಸುಳಿವೇ ಕೊಡದಂತೆ ನಾಕುಮುಖವನ್ನು ಶೃಂಗಾರ ಮಾಡಿ ಸಿದ್ಧಗೊಳಿಸಿದ್ದಾರೆಂಬ ಮೆಚ್ಚುಗೆ ಎಲ್ಲೆಡೆಯಿಂದ ಕೇಳಿ ಬರಲಾರಂಭಿಸಿದೆ. ಈಗ ಕನ್ನಡ ಚಿತ್ರರಂಗದಲ್ಲಿ ಹೊಸಾ ಅಲೆಯ, ಹೊಸ ಪ್ರಯೋಗದ ಚಿತ್ರಗಳ ಭರಾಟೆ ಆರಂಭವಾಗಿದೆಯಲ್ಲಾ? ಆ ಸಾಲಿನಲ್ಲಿ ನಾಕುಮುಖವೂ ಸೇರಿಕೊಳ್ಳೋದು ಖಚಿತ. ಇಂಥಾ ಹೊಸಬರ ತಂಡ ಯಾವ ಜಾನರಿನ ಚಿತ್ರಕ್ಕಾದರೂ ಹೊಸ ಸ್ಪರ್ಶವನ್ನೇ ನೀಡಿ ರೂಪಿಸುತ್ತಾರೆಂಬ ನಂಬಿಕೆ ಪ್ರೇಕ್ಷಕರಲ್ಲಿದೆ. ಈ ಚಿತ್ರವೂ ಅದಕ್ಕೆ ತಕ್ಕುದಾಗಿ ಮೂಡಿ ಬಂದಿದೆ ಅನ್ನೋದಕ್ಕೆ ಈ ಟ್ರೈಲರ್ ಸಾಕ್ಷಿಯಂತೆ ಮೂಡಿ ಬಂದಿದೆ.

  • ಒಂದ್ ಕಥೆ ಹೇಳ್ಲಾ: ಬಿಡುಗಡೆಯಾಯ್ತು ಐದು ಹಾರರ್ ಕಥೆಗಳ ಟ್ರೈಲರ್!

    ಒಂದ್ ಕಥೆ ಹೇಳ್ಲಾ: ಬಿಡುಗಡೆಯಾಯ್ತು ಐದು ಹಾರರ್ ಕಥೆಗಳ ಟ್ರೈಲರ್!

    ಬೆಂಗಳೂರು: ಜೋಡಿಹಕ್ಕಿ ಸೀರಿಯಲ್ ಮೂಲಕ ರಾಮಣ್ಣ ಎಂದೇ ಖ್ಯಾತರಾಗಿರುವವರು ತಾಂಡವ್. ಅವರೀಗ ಒಂದು ಕಥೆ ಹೇಳ್ಲಾ ಎಂಬ ವಿನೂತನ ಪ್ರಯೋಗದ ಹಾರರ್ ಚಿತ್ರವೊಂದರ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಹೊಸ ಥರದ ಪೋಸ್ಟರ್ ಸೇರಿದಂತೆ ನಾನಾ ರೀತಿಯಲ್ಲಿ ಈ ಸಿನಿಮಾ ಸುದ್ದಿ ಕೇಂದ್ರದಲ್ಲಿದೆ. ಇದೀಗ ಇದರ ಟ್ರೈಲರ್ ಹೊರ ಬಂದಿದೆ. ಇದುವೇ ಕ್ಷಣ ಕ್ಷಣವೂ ಬೆಚ್ಚಿ ಬೆರಗಾಗಿಸುವಂಥಾ ಡಿಫರೆಂಟಾದ ಕಂಟೆಂಟು ಈ ಚಿತ್ರದಲ್ಲಿದೆ ಎಂಬಂಥಾ ಸುಳಿವನ್ನೂ ಬಿಟ್ಟುಕೊಟ್ಟಿದೆ.

    ಕ್ರೌಡ್ ಫಂಡಿಂಗ್ ಮೂಲಕ ನಿರ್ಮಾಣಗೊಂಡಿರೋ ಈ ಚಿತ್ರವನ್ನು ಗಿರೀಶ್ ನಿರ್ದೇಶನ ಮಾಡಿದ್ದಾರೆ. ಈಗ ಹೊರ ಬಂದಿರೋ ಟ್ರೈಲರ್ ಅಂತೂ ಬಹು ಬೇಗನೆ ಪ್ರತೀ ವರ್ಗದ ಪ್ರೇಕ್ಷಕರನ್ನೂ ಕೂಡಾ ತನ್ನತ್ತ ಸೆಳೆದುಕೊಂಡಿದೆ. ಅದ್ಭುತವಾದ ಕಥೆಯೊಂದು ಒಂದು ಕಥೆ ಹೇಳ್ಲಾ ಚಿತ್ರದಲ್ಲಿ ಅಡಕವಾಗಿದೆ ಎಂಬ ವಿಚಾರವನ್ನಂತೂ ಈ ಟ್ರೈಲರ್ ರವಾನಿಸಿದೆ.

    ಇದು ಹಾರರ್ ಚಿತ್ರ. ಹಾಗೆಂದಾಕ್ಷಣ ಮಾಮೂಲಿ ಮೆಥಡ್ಡಿನ ಸಿನಿಮಾ ಎಂದು ಖಂಡಿತಾ ಅಂದುಕೊಳ್ಳುವಂತಿಲ್ಲ. ಇದು ತಾಜಾತನದಿಂದ, ಸಾಕಷ್ಟು ನವೀನ ಪ್ರಯೋಗಗಳಿಂದಲೇ ರೂಪುಗೊಂಡಿದೆ. ಇಲ್ಲಿರೋದು ಒಂದು ಕಥೆಯಲ್ಲ. ಬದಲಾಗಿ ಒಂದೇ ಚಿತ್ರದಲ್ಲಿ ಐದು ಬೇರೆ ಬೇರೆ ಹಾರರ್ ಕಥೆಗಳನ್ನು ಹೇಳೋ ಸಾಹಸಕ್ಕೆ ನಿರ್ದೇಶಕರು ಕೈ ಹಾಕಿದ್ದಾರೆ. ಈ ಐದೂ ಕಥೆಗಳ ದಿಕ್ಕೂ ಬೇರೆ ಬೇರೆ. ಅದರಲ್ಲೊಂದಷ್ಟು ಸತ್ಯ ಘಟನೆಗಳನ್ನ ಆಧರಿಸಿದವುಗಳಂತೆ. ಆದರೆ ಇವೆಲ್ಲವೂ ಕ್ಲೈಮ್ಯಾಕ್ಸ್ ಹೊತ್ತಿಗೆ ಒಂದಕ್ಕೊಂದು ಕನೆಕ್ಟ್ ಆಗುತ್ತವಂತೆ.

    ಬಹುತೇಕ ಹೊಸಬರೇ ಸೇರಿಕೊಂಡು ಈ ಚಿತ್ರವನ್ನ ರೂಪಿಸಿದ್ದಾರೆ. ಈಗಾಗಲೇ ಈ ಸಿನಿಮಾ ಪೋಸ್ಟರ್‍ಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಟ್ರೈಲರ್ ಮೂಲಕ ಆ ಬಿಸಿ ಮತ್ತಷ್ಟು ಏರಿಕೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಪಾರ್ವತಮ್ಮನ ತಂಗಿ ಮಗನ ಹಾರರ್ ಗೂಗ್ಲಿ!

    ಪಾರ್ವತಮ್ಮನ ತಂಗಿ ಮಗನ ಹಾರರ್ ಗೂಗ್ಲಿ!

    ಬೆಂಗಳೂರು: ಈ ಹಿಂದೆ ಬಿಂದಾಸ್ ಗೂಗ್ಲಿ ಎಂಬ ಚಿತ್ರ ನಿರ್ದೇಶನ ಮಾಡಿದ್ದವರು ಸಂತೋಷ್ ಕುಮಾರ್. ಕಾಲೇಜ್ ಕಾರಿಡಾರಿನಲ್ಲಿ ನಡೆಯುವ ಯೂಥ್‍ಫುಲ್ ಕಥೆ ಹೇಳಿದ್ದ ಅವರೀಗ ಪಕ್ಕಾ ಹಾರರ್ ಥ್ರಿಲ್ಲರ್ ಕಥೆಯೊಂದನ್ನು ಎರಡೆರಡು ಭಾಷೆಗಳಲ್ಲಿ ನಿರ್ದೇಶನ ಮಾಡಲು ಮುಂದಾಗಿದ್ದಾರೆ.

    ಪಾರ್ವತಮ್ಮನವರ ತಂಗಿ ಮಗ ಈ ಸಂತೋಷ್ ಕುಮಾರ್. ಏಕಕಾಲದಲ್ಲಿಯೇ ಹಿಂದಿ ಮತ್ತು ಕನ್ನಡದಲ್ಲಿ ನಿರ್ದೇಶನ ಮಾಡಲು ಮುಂದಾಗಿರೋ ಹೊಸ ಚಿತ್ರಕ್ಕೆ ಮೃತ್ಯುಲಿಪಿ ಪುರಾಣಂ ಎಂಬ ಶೀರ್ಷಿಕೆಯನ್ನಿಟ್ಟಿದ್ದಾರೆ.

    ಈ ಚಿತ್ರದಲ್ಲಿ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಸದ್ದು ಮಾಡಿರೋ ತಂತ್ರಜ್ಞರೇ ಕಾರ್ಯ ನಿರ್ವಹಿಸಲಿದ್ದಾರಂತೆ. ಬಾಲಿವುಡ್ ನ ನಟ ನಟಿಯರೇ ಮುಖ್ಯ ಪಾತ್ರವನ್ನೂ ನಿರ್ವಹಿಸಲಿದ್ದಾರಂತೆ. ಇದೀಗ ತಾರಾಗಣದ ಆಯ್ಕೆ ಕಾರ್ಯ ಭರದಿಂದ ಸಾಗುತ್ತಿದೆ.

    ಇದು ಇಡೀ ವಿಶ್ವವನ್ನು ಬೆಚ್ಚಿಬೀಳಿಸುತ್ತಲೇ ಕಗ್ಗಂಟಾಗುಳಿದಿರುವ ಬರ್ಮುಡಾ ಟ್ರಯಾಂಗಲ್ ನಿಂದ ಸ್ಫೂರ್ತಿಗೊಂಡು ರಚಿಸಲ್ಪಟ್ಟಿರೋ ಕಥೆಯನ್ನು ಹೊಂದಿದೆ. ಮೀಡಿಯಾದಲ್ಲಿ ಕೆಲಸ ಮಾಡೋ ಹುಡುಗರು ಅಸೈನ್‍ಮೆಂಟ್ ಕಾರಣದಿಂದ ಒಂದು ಪ್ರದೇಶಕ್ಕೆ ತೆರಳುತ್ತಾರೆ. ಅದು ಹೋದವರನ್ನೆಲ್ಲ ಕಣ್ಮರೆ ಮಾಡುವ ವಿಚಿತ್ರ ಪ್ರದೇಶ. ಇಂಥಲ್ಲಿಗೆ ಈ ಹುಡುಗರ ಟೀಮು ಹೋದ ನಂತರ ಆಗೋ ಕಥನ ಹಾರರ್ ಮತ್ತು ಥ್ರಿಲ್ಲರ್ ಶೈಲಿಯಲ್ಲಿ ಬಿಚ್ಚಿಕೊಳ್ಳುತ್ತದೆಯಂತೆ.

    ಇದೀಗ ಈ ಚಿತ್ರಕ್ಕಾಗಿ ತಯಾರಿ ನಡೆಸಿಕೊಳ್ಳುತ್ತಿರೋ ಸಂತೋಷ್ ಬೇಗನೆ ಚಿತ್ರೀಕರಣ ಮುಗಿಸಿಕೊಂಡು ವಿಶ್ವಾಧ್ಯಂತ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv