Tag: ಹಾನಗಲ್

  • ಹಾನಗಲ್‍ನಲ್ಲಿ ಕಾಂಗ್ರೆಸ್ ಗೆಲುವು, ಬಿಜೆಪಿ ಸೋಲಿಗೆ ಕಾರಣವೇನು..?

    ಹಾನಗಲ್‍ನಲ್ಲಿ ಕಾಂಗ್ರೆಸ್ ಗೆಲುವು, ಬಿಜೆಪಿ ಸೋಲಿಗೆ ಕಾರಣವೇನು..?

    ಹಾವೇರಿ: ಅದು 2011ರ ಸಮಯ. ಬದಲಾದ ರಾಜಕೀಯದಾಟದಲ್ಲಿ ಡಿವಿ ಸದಾನಂದ ಗೌಡರು ಮುಖ್ಯಮಂತ್ರಿ ಗಾದಿಗೇರಿದ್ದರು. ಅಂದು ಡಿವಿಎಸ್ ರಾಜೀನಾಮೆಯಿಂದ ತೆರವಾಗಿದ್ದ ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ಸುನೀಲ್‍ಕುಮಾರ್ ಸೋತಿದ್ದರು. ತಮ್ಮದೇ ಕ್ಷೇತ್ರದಲ್ಲಿ ಕಮಲ ಅರಳಿಸಲು ಡಿವಿಎಸ್ ವಿಫಲರಾಗಿದ್ದರು. ಈಗ ಬೊಮ್ಮಾಯಿಗೂ ಅಂಥಾದ್ದೇ ಸನ್ನಿವೇಶ ಎದುರಾಗಿದೆ.

    basavaraj bommai

    ಒಂದು ವಾರಕ್ಕೂ ಹೆಚ್ಚು ಕಾಲ ಹಾನಗಲ್‍ನಲ್ಲಿ 8-10 ಸಚಿವರ ಜೊತೆ ಬೀಡುಬಿಟ್ಟಿದ್ದ ಸಿಎಂ, ಗೆಲುವಿಗೆ ಕಾರ್ಯತಂತ್ರ ರೂಪಿಸಿದರು. ಎರಡೆರಡು ಬಾರಿ ಬಿಎಸ್‍ವೈ ಅವರನ್ನು ಕರೆತಂದು ಪ್ರಚಾರ ನಡೆಸಿದ್ರೂ, ಹಾನಗಲ್ ಗೆಲ್ಲಿಸಿಕೊಳ್ಳಲು ಸಿಎಂ ವಿಫಲರಾಗಿದ್ದಾರೆ. ಮೊದಲ ಸುತ್ತಿನಲ್ಲಿಯೇ ಮುನ್ನಡೆ ಸಾಧಿಸಿದ ಶ್ರೀನಿವಾಸ್ ಮಾನೆ ಕೊನೆಯ ಸುತ್ತಿನವರೆಗೂ ಅಧಿಪತ್ಯ ಬಿಟ್ಟುಕೊಡಲಿಲ್ಲ. ಆರಂಭದಲ್ಲಿ ಮಾನೆ-ಸಜ್ಜನರ್ ನಡ್ವೆ ಕೇವಲ 50-100 ಮತಗಳ ಅಂತರ ಇತ್ತು. ನಂತರ ಇದು ಬರಬರುತ್ತಾ ಸಾವಿರಗಳಿಗೆ ಹಿಗ್ಗಿತು. ಇದನ್ನೂ ಓದಿ: ಚಪ್ಪಲಿ ತೆಗೆದು ಅಭಿಮಾನಿಗಳಿಂದ ಅಪ್ಪುಗೆ ಅಂತಿಮ ನಮನ- ಬಿಬಿಎಂಪಿಯಿಂದ ರಾಶಿ ರಾಶಿ ಸ್ಲಿಪ್ಪರ್ಸ್ ತೆರವು

    ಕೊನೆಯಲ್ಲಿ 7,373 ಮತಗಳಿಂದ ಮಾನೆ ವಿಜಯದ ನಗಾರಿ ಬಾರಿಸಿದ್ರು. ಈ ಮೂಲಕ ಮೊದಲ ಪರೀಕ್ಷೆಯಲ್ಲಿಯೇ ಸಿಎಂ ಬಸವರಾಜ ಬೊಮ್ಮಾಯಿ ಫೇಲ್ ಆಗಿ ತೀವ್ರ ಮುಖಭಂಗ ಅನುಭವಿಸಿದರು. ಕಾಂಗ್ರೆಸ್ ಪಾಳಯದಲ್ಲಿ ಸಂಭ್ರಮ ಮುಗಿಲು ಮುಟ್ಟಿದ್ರೆ, ಬಿಜೆಪಿ ನಿರಾಸೆಯ ಮಡುವಿನಲ್ಲಿ ಮುಳುಗಿದೆ. ವಿಜೇತ ಅಭ್ಯರ್ಥಿ ಶ್ರೀನಿವಾಸ್ ಮಾನೆ, ಮತದಾರರಿಗೆ ಧನ್ಯವಾದ ಹೇಳಿದ್ದಾರೆ. ಇಲ್ಲಿ ಧನಬಲದ ಎದುರು ಜನಬಲ ಗೆದ್ದಿದೆ ಎಂದು ವ್ಯಾಖ್ಯಾನಿಸಿದ್ದಾರೆ. ಇದು ನನ್ನ ಸೋಲು, ಪಕ್ಷದ ಸೋಲು ಹೌದು. ನಿಖರ ಕಾರಣ ಗೊತ್ತಾಗ್ತಿಲ್ಲ ಎಂದು ಪರಾಜಿತ ಅಭ್ಯರ್ಥಿ ಶಿವರಾಜ ಸಜ್ಜನರ್ ತಿಳಿಸಿದ್ದಾರೆ. ಇದನ್ನೂ ಓದಿ: ಅಪ್ಪು ಜೊತೆಗಿನ ಲಾಸ್ಟ್ ಸೆಲ್ಫಿ ಶೇರ್ ಮಾಡಿದ ರಾಘಣ್ಣ

    ಕಾಂಗ್ರೆಸ್ ಗೆಲುವಿಗೆ ಕಾರಣಗಳೇನು..?
    ಶ್ರೀನಿವಾಸ ಮಾನೆ ‘ಕೈ’ ಹಿಡಿದ ವೈಯಕ್ತಿಕ ಚರಿಷ್ಮಾ. ಕೋವಿಡ್ ಕಾಲದಲ್ಲಿ ಜನರ ಕಷ್ಟಕ್ಕೆ ನೆರವಾಗಿದ್ದರು. ಹೊರಗಿನವರಾದರೂ ಕ್ಷೇತ್ರದಲ್ಲೇ ಮನೆ ಮಾಡಿ ವಾಸ್ತವ್ಯ ಹೂಡಿದ್ದರು. ಕಳೆದ ಬಾರಿ ಮಾನೆ ಸೋತಿದ್ದರು ಎಂಬ ಅನುಕಂಪ ವರ್ಕೌಟ್ ಆಗಿರುವ ಸಾಧ್ಯತೆ. ಹಾಗೂ ‘ಬಂಡಾಯಗಾರ’ ಮನೋಹರ್ ತಹಶಿಲ್ದಾರ್ ಮನವೊಲಿಕೆ ಯಶಸ್ವಿಯಾಗಿದ್ದರಿಂದ ಕಾಂಗ್ರೆಸ್ ಗೆದ್ದಿದೆ ಎನ್ನಲಾಗುತ್ತಿದೆ.

    ಬಿಜೆಪಿ ಸೋಲಿಗೆ ಕಾರಣವೇನು..?
    ಕೋವಿಡ್ ಸಂಕಷ್ಟ ವೇಳೆ ಕ್ಷೇತ್ರಕ್ಕೆ ಉದಾಸಿ ಕುಟುಂಬದ ನೆರವು ಸಿಗದೇ ಇದ್ದಿದ್ದು. ಶಿವರಾಜ್ ಸಜ್ಜನರ್ ಕೈ ಹಿಡಿಯದ ಲಿಂಗಾಯತ ಮತಗಳು. ಉದಾಸಿ ಬೆಂಬಲಿಗರ ತಟಸ್ಥ ಧೋರಣೆ, ಸಚಿವ ನಿರಾಣಿ ಅಸಹಕಾರ. ಕ್ಷೇತ್ರದಲ್ಲಿ ಬಿಜೆಪಿಗೆ ಎರಡನೇ ಹಂತದ ನಾಯಕರ ಕೊರತೆ. ಹಾಗೂ ಅಲ್ಪಸಂಖ್ಯಾತ ಮತಗಳನ್ನು ಸೆಳೆಯಲು ಜೆಡಿಎಸ್ ವಿಫಲವಾಗಿರುವುದೇ ಬಿಜೆಪಿ ಸೋಲಿಗೆ ಕಾರಣ ಎಂದು ಹೇಳಲಾಗುತ್ತಿದೆ.

  • ಜನಾದೇಶವನ್ನ ಸ್ವಾಗತಿಸುತ್ತೇವೆ, ಇವಿಎಂ ದೂರಲ್ಲ – ಕಾಂಗ್ರೆಸ್ಸಿಗರ ಕಾಲೆಳೆದ ಸಿ.ಟಿ ರವಿ

    ಜನಾದೇಶವನ್ನ ಸ್ವಾಗತಿಸುತ್ತೇವೆ, ಇವಿಎಂ ದೂರಲ್ಲ – ಕಾಂಗ್ರೆಸ್ಸಿಗರ ಕಾಲೆಳೆದ ಸಿ.ಟಿ ರವಿ

    ಚಿಕ್ಕಮಗಳೂರು: ಸಿಂದಗಿ-ಹಾನಗಲ್ ಉಪಚುನಾವಣೆಯಲ್ಲಿ ನಾವು ಜನಾದೇಶವನ್ನ ಸ್ವಾಗತಿಸುತ್ತೇವೆ. ಇವಿಎಂ ಅನ್ನ ದೂರುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಾಂಗ್ರೆಸ್ಸಿಗರ ಕಾಲೆಳೆದಿದ್ದಾರೆ.

    ಚಿಕ್ಕಮಗಳೂರಿನಲ್ಲಿ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಒಂದು ವೇಳೆ ಬಿಜೆಪಿ ಎರಡೂ ಕ್ಷೇತ್ರದಲ್ಲೂ ಗೆದ್ದಿದ್ದರೆ ವಿಪಕ್ಷ ನಾಯಕರು ಇವಿಎಂ ಮೇಲೆ ದೂರುತ್ತಿದ್ದರು. ಆದರೆ ನಾವು ಖಂಡಿತ ಇವಿಎಂ ಮೇಲೆ ಕಂಪ್ಲೆಂಟ್ ಮಾಡುವುದಿಲ್ಲ. ಜನಾದೇಶವನ್ನ ಸ್ವೀಕಾರ ಮಾಡುತ್ತೇವೆ ಎಂದಿದ್ದಾರೆ.

    ಸಿಂದಗಿಯಲ್ಲಿ 31000ಕ್ಕೂ ಅಧಿಕ ಮತಗಳಿಂದ ಜಯ ಗಳಿಸಿದರೆ, ಹಾನಗಲ್‍ನಲ್ಲಿ ವಿರೋಚಿತವಾದ ಹೋರಾಟ ಕೊಟ್ಟಿದ್ದೇವೆ. ನಮಗೆ ಕರ್ನಾಟಕದಲ್ಲಿ ಮಿಶ್ರ ಫಲಿತಾಂಶ. ಒಂದು ಕಡೆ ಭರ್ಜರಿ ಜಯ, ಮತ್ತೊಂದೆಡೆ ನಿರೀಕ್ಷೆಯಂತೆ ಗೆಲ್ಲಲು ಸಾಧ್ಯವಾಗಿಲ್ಲ. ಗೆದ್ದ ಇಬ್ಬರಿಗೂ ಅಭಿನಂದಿಸಿ ಎಲ್ಲಾದರೂ ತಪ್ಪಾಗಿದ್ದರೆ ಸರಿಪಡಿಸಿಕೊಳ್ಳುವ ಕೆಲಸ ಮಾಡುತ್ತೇವೆ ಎಂದರು.

    ಕರೆಕ್ಷನ್ ಎಂಬುದು ನಿರಂತರವಾಗಿರುವ ಪ್ರಕ್ರಿಯೆ. ನಾವು ಇದನ್ನು ಮುಖ್ಯಮಂತ್ರಿ ಅಥವಾ ಆಡಳಿತ ಪಕ್ಷದ ವಿರುದ್ಧದ ಜನಾದೇಶ ಎಂದು ಭಾವಿಸುವುದಿಲ್ಲ. ಮಾನೆ, ವ್ಯಕ್ತಿಗತವಾಗಿ ಸೋತ ದಿನದಿಂದ ಕ್ಷೇತ್ರದಲ್ಲಿ ಸಂಪರ್ಕದಲ್ಲಿದ್ದರು. ನಮ್ಮಲ್ಲಿ ನಾಮಪತ್ರ ಸಲ್ಲಿಸುವ ಹಿಂದಿನ ದಿನದವರೆಗೂ ಅಭ್ಯರ್ಥಿ ಅಂತಿಮವಾಗದೇ ಇರುವುದು ಭಾಗಶಃ ಪರಿಣಾಮ ಬೀರಿದೆ ಎಂದರು. ಇದನ್ನೂ ಓದಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ತವರಲ್ಲೇ ಶೂನ್ಯ ಸಾಧನೆ ಬೆಲೆ ಏರಿಕೆಯ ಉಡುಗೊರೆ: ಶ್ರೀನಿವಾಸ್ ಬಿ.ವಿ

    ಇದೇ ವೇಳೆ ಜೆಡಿಎಸ್ ಸೋಲಿನ ಬಗ್ಗೆ ಮಾತನಾಡಿದ ಸಿ.ಟಿ.ರವಿ, ಸತ್ಯ ಹೇಳಿದರೆ ಅವರಿಗೆ ಬೇಸರ. ಸತ್ಯ ಯಾವಾಗಲೂ ಕಹಿಯಾಗಿರುತ್ತೆ. ಜೆಡಿಎಸ್‍ಗೆ ಆ ಭಾಗದ ಎರಡೂ ಕ್ಷೇತ್ರದಲ್ಲೂ ಸಂಘಟನೆ ಇರಲಿಲ್ಲ. ಅಲ್ಲಿ ಮಾಜಿ ಶಾಸಕರ ಕಾರಣಕ್ಕೋಸ್ಕರ ಅವರ ನಿಧನದಿಂದ ಸಿಂಪತಿ ಕಾರಣಕ್ಕೆ ಒಂದು ಜಯ ಸಿಕ್ಕಿತ್ತು. ಈ ಬಾರಿ ಅವರ ಮಗನೇ ಕಾಂಗ್ರೆಸ್ ಅಭ್ಯರ್ಥಿಯಾದರೂ ಬಿಜೆಪಿ 31,000 ಲೀಡ್ ನಲ್ಲಿ ಗೆದ್ದಿದೆ ಎಂದು ಹೇಳಿದರು. ಇದನ್ನೂ ಓದಿ: ಸಿಂದಗಿಯಲ್ಲಿ ಲಿಂಗಾಯತರು ಮತ ಹಾಕಿಲ್ಲ, ರಾಷ್ಟ್ರೀಯ ಪಕ್ಷಗಳು ಹಣದ ಹೊಳೆ ಹರಿಸಿ ಗೆದ್ದಿವೆ: ಹೆಚ್‍ಡಿಡಿ ಆರೋಪ

    ಆರ್ಗನೈಸೇಷನ್, ಐಡಿಯಾಲಜಿ ಹಾಗೂ ನೇತೃತ್ವ ಇಲ್ಲದಿದ್ರೆ ಏನಾಗಬೇಕೋ ಅದೇ ಆಗುತ್ತೆ. ಹಾನಗಲ್‍ನಲ್ಲಿ ಸಾವಿರಕ್ಕೂ ಕಡಿಮೆ ಮತ ಬಂದಿದೆ ಅಂದರೆ, ಅವರು ಭವಿಷ್ಯದ ರಾಜಕಾರಣದ ಬಗ್ಗೆ ಯೋಚಿಸಬೇಕು. ಮುಂದೆ ಪ್ರಾದೇಶಿಕ ಪಕ್ಷಕ್ಕೆ ಜನ ಬೆಂಬಲ ನೀಡುತ್ತಾರೆ ಎಂದು ಆಶಾವಾದ ಇಟ್ಟುಕೊಂಡಿರುವವರು ಆಲೋಚಿಸಬೇಕು ಎಂದು ಪರೋಕ್ಷವಾಗಿ ಕುಮಾರಸ್ವಾಮಿಗೆ ವ್ಯಂಗ್ಯವಾಗಿ ಸಲಹೆ ನೀಡಿದ್ದಾರೆ.

  • ಹಾನಗಲ್‌ನಲ್ಲಿ ಕಾಂಗ್ರೆಸ್‌ಗೆ ಗೆಲುವು – ತವರು ಜಿಲ್ಲೆಯಲ್ಲೇ ಸಿಎಂಗೆ ಮುಖಭಂಗ

    ಹಾನಗಲ್‌ನಲ್ಲಿ ಕಾಂಗ್ರೆಸ್‌ಗೆ ಗೆಲುವು – ತವರು ಜಿಲ್ಲೆಯಲ್ಲೇ ಸಿಎಂಗೆ ಮುಖಭಂಗ

    ಹಾವೇರಿ: ತವರು ಜಿಲ್ಲೆಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಮುಖಭಂಗವಾಗಿದೆ. ಹಾನಗಲ್‌ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ವಿಜಯಗಳಿಸಿದೆ.

    13ನೇ ಸುತ್ತು ಮುಕ್ತಾಯಕ್ಕೆ ಕಾಂಗ್ರೆಸ್‌ನ ಶ್ರೀನಿವಾಸ ಮಾನೆ 59,985 ಮತಗಳನ್ನು ಪಡೆದರೆ ಬಿಜೆಪಿಯ ಶಿವರಾಜ್ ಸಜ್ಜನರ 52,922 ಮತಗಳನ್ನು ಪಡೆದಿದ್ದಾರೆ. ಜೆಡಿಎಸ್‌ನ ನಿಯಾಜ್ ಶೇಖ್ 629 ಮತಗಳನ್ನು ಗಳಿಸಿದ್ದಾರೆ. ಫಲಿತಾಂಶ ಅಧಿಕೃತವಾಗಿ ಪ್ರಕಟವಾಗಬೇಕಿದೆ. ಇದನ್ನೂ ಓದಿ: ಹಾನಗಲ್‌ ಉಪ ಚುನಾವಣೆ: ಕಾಂಗ್ರೆಸ್‌ ಕಾರ್ಯಕರ್ತರಿಂದ ಸಂಭ್ರಮಾಚರಣೆ

    7063 ಮತಗಳ ಮುನ್ನಡೆಯನ್ನು ಪಡೆದಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಸಂಭ್ರಮಾಚರಣೆಯನ್ನು ತೊಡಗಿದ್ದಾರೆ. ಕಾಂಗ್ರೆಸ್‌ಗೆ ಮುನ್ನಡೆ ಸಿಗುತ್ತಿದ್ದಂತೆ ಮತ ಎಣಿಕೆ ಕೇಂದ್ರದಲ್ಲಿದ್ದ ಬಿಜೆಪಿ ಕಾರ್ಯಕರ್ತರು ಸ್ಥಳದಿಂದ ತೆರಳಿದರು. ಇದನ್ನೂ ಓದಿ: ಮೊದಲೇ ಪೈಪೋಟಿ ನಿರೀಕ್ಷಿಸಿದ್ದೆವು, ಫಲಿತಾಂಶಕ್ಕೆ ಸಮಯವಿದೆ: ಬೊಮ್ಮಾಯಿ

    ಬಿಜೆಪಿಯ ಶಾಸಕ ಸಿಎಂ ಉದಾಸಿ ಅವರ ಅಕಾಲಿಕ ನಿಧನದಿಂಧ ತೆರವಾದ ಕ್ಷೇತ್ರಕ್ಕೆ ಕಳೆದ ಶನಿವಾರ ಮತದಾನ ನಡೆದಿತ್ತು. ಈಗ ಬಿಜೆಪಿ ತೆಕ್ಕೆಯಲ್ಲಿದ್ದ ಕ್ಷೇತ್ರವನ್ನು ಕಾಂಗ್ರೆಸ್‌ ಪಡೆದುಕೊಂಡಿದೆ.

    ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀನಿವಾಸ ಮಾನೆ, ಹಾನಗಲ್‌ನಲ್ಲಿ ಜನಬಲ ಗೆದ್ದಿದೆ. ಹಣ ಬಲ ಸೋತಿದೆ. ಮತ ಹಾಕಿದ ಜನರಿಗೆ ಸಾಷ್ಟಾಂಗ ನಮಸ್ಕಾರ ಸಲ್ಲಿಸುವೆ. ನಮ್ಮ ನಾಯಕರ ಪರಿಶ್ರಮ ಹಾಕಿದ್ದಾರೆ. ಸರ್ಕಾರದ ತಂತ್ರ ಮಣಿಸಿದ್ದಾರೆ. ಜನರು ಸರ್ಕಾರದ ಜನವಿರೋಧಿ ನೀತಿ. ದುರಾಡಳಿತ ತಿರಸ್ಕಾರ ಮಾಡಿದ್ದಾರೆ. ಇನ್ನಾದರೂ ಜನರ ಕಲ್ಯಾಣ ಮಾಡಲಿ. ಆಡಳಿಯ ಯಂತ್ರ ಸಂಪೂರ್ಣ ಹದಗೆಟ್ಟಿದೆ ಎಂದು ವಾಗ್ದಳಿ ನಡೆಸಿದರು.

  • ಹಾನಗಲ್‌ ಉಪ ಚುನಾವಣೆ: ಕಾಂಗ್ರೆಸ್‌ ಕಾರ್ಯಕರ್ತರಿಂದ ಸಂಭ್ರಮಾಚರಣೆ

    ಹಾನಗಲ್‌ ಉಪ ಚುನಾವಣೆ: ಕಾಂಗ್ರೆಸ್‌ ಕಾರ್ಯಕರ್ತರಿಂದ ಸಂಭ್ರಮಾಚರಣೆ

    ಹಾವೇರಿ: ಹಾನಗಲ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ 4,719 ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ ಮುನ್ನಡೆ ಸಾಧಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಸ್ಥಳದಿಂದ ಹೊರನಡೆದಿದ್ದಾರೆ.

    9 ನೇ ಸುತ್ತಿನ ಮತ ಎಣಿಕೆ ಕಾರ್ಯ ಮುಗಿದಿದೆ. ಕಾಂಗ್ರೆಸ್ ಅಭ್ಯರ್ಥಿ 40785, ಬಿಜೆಪಿ ಅಭ್ಯರ್ಥಿ 36066, ಜೆಡಿಎಸ್ ಅಭ್ಯರ್ಥಿ 432 ಮತಗಳನ್ನು ಗಳಿಸಿದ್ದಾರೆ. ಇದನ್ನೂ ಓದಿ: ಮೊದಲೇ ಪೈಪೋಟಿ ನಿರೀಕ್ಷಿಸಿದ್ದೆವು, ಫಲಿತಾಂಶಕ್ಕೆ ಸಮಯವಿದೆ: ಬೊಮ್ಮಾಯಿ

    ಹಾವೇರಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್ ಬಳಿ ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿದ್ದಾರೆ. ಸ್ಥಳದಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದ್ದು, ಸಂಭ್ರಮಾಚರಣೆ ಮಾಡದಂತೆ ಪೊಲೀಸರು ತಿಳಿಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರನ್ನು ಎಣಿಕಾ ಕೇಂದ್ರದಿಂದ ಪೊಲೀಸರು ಕಳುಹಿಸುತ್ತಿದ್ದಾರೆ. ಆದರೆ ಪೊಲೀಸರ ಮನವಿಗೂ ಜಗ್ಗದ ಕಾಂಗ್ರೆಸ್ ಕಾರ್ಯಕರ್ತರು ಸ್ಥಳದಲ್ಲೇ ಜಮಾಯಿಸಿದ್ದಾರೆ.

    ಶ್ರೀನಿವಾಸ್ ಮಾನೆ ಮುಖವಾಡ ಹಾಕಿಕೊಂಡ ಕಾರ್ಯಕರ್ತರು ಅಭ್ಯರ್ಥಿ ಹಾಗೂ ಡಿ.ಕೆ.ಶಿವಕುಮಾರ್ ಅವರಿಗೆ ಜೈಕಾರ ಕೂಗಿದರು. ಕಾಂಗ್ರೆಸ್ ಮುನ್ನಡೆ ಸಾಧಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಮತ ಎಣಿಕಾ ಕೇಂದ್ರದಿಂದ ಹೊರನಡೆದಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತವರು ಕ್ಷೇತ್ರದಲ್ಲೇ ಭಾರಿ ಮುಖಭಂಗ ಆಗುವ ಸಾಧ್ಯತೆ ಇದೆ. ಇದನ್ನೂ ಓದಿ: ಸಿಂದಗಿ ಉಪ ಚುನಾವಣೆ: 4,031 ಮತಗಳ ಅಂತರದಲ್ಲಿ ಬಿಜೆಪಿ ಮುನ್ನಡೆ

     

    ಅಕ್ಟೋಬರ್ 30 ರಂದು ನಡೆದ ಉಪ ಚುನಾವಣೆಯಲ್ಲಿ ಹಾನಗಲ್‍ನಲ್ಲಿ ಶೇಕಡಾ 83ರಷ್ಟು ಮತದಾನ ನಡೆದಿತ್ತು. ಹಾನಗಲ್‍ನಲ್ಲಿ ಬಿಜೆಪಿಯ ಶಿವರಾಜ್ ಸಜ್ಜನರ್ ಮತ್ತು ಕಾಂಗ್ರೆಸ್‍ನ ಶ್ರೀನಿವಾಸ ಮಾನೆ ನಡುವೆ ನೆಕ್ ಟು ನೆಕ್ ಫೈಟ್ ಕಂಡುಬಂದಿತ್ತು.

  • ಮೊದಲೇ ಪೈಪೋಟಿ ನಿರೀಕ್ಷಿಸಿದ್ದೆವು, ಫಲಿತಾಂಶಕ್ಕೆ ಸಮಯವಿದೆ: ಬೊಮ್ಮಾಯಿ

    ಮೊದಲೇ ಪೈಪೋಟಿ ನಿರೀಕ್ಷಿಸಿದ್ದೆವು, ಫಲಿತಾಂಶಕ್ಕೆ ಸಮಯವಿದೆ: ಬೊಮ್ಮಾಯಿ

    ಮೈಸೂರು: ಹಾವೇರಿಯ ಹಾನಗಲ್‍ನಲ್ಲಿ ಮೊದಲೇ ಪೈಪೋಟಿ ನಿರೀಕ್ಷಿಸಿದ್ದೆವು. ಅಂತಿಮ ಫಲಿತಾಂಶಕ್ಕೆ ಸಮಯವಿದೆ ಸಿಎಂ ಬೊಮ್ಮಾಯಿ ಹೇಳಿದ್ದಾರೆ.

    ಹಾನಗಲ್‍ನಲ್ಲಿ ಮತ ಎಣಿಕೆ ನಡೆಯುತ್ತಿದೆ. ಬಿಜೆಪಿಗೆ ಹಿನ್ನಡೆಯಾಗಿದ್ದು, ಕಾಂಗ್ರೆಸ್‍ಗೆ ಮುನ್ನಡೆ ಹೆಚ್ಚಾಗುತ್ತಿದೆ. ಇದನ್ನೂ ಓದಿ: ಪುನೀತ್‌ ರಾಜ್‌ಕುಮಾರ್‌ಗೆ ಮರಣೋತ್ತರ ಪದ್ಮಶ್ರೀ ಪ್ರಶಸ್ತಿ ನೀಡಬೇಕು: ಸಿದ್ದರಾಮಯ್ಯ

    ಕಬಿನಿ ಡ್ಯಾಂಗೆ ಬಾಗಿನ ಅರ್ಪಿಸಲು ಬಂದ ಸಿಎಂ ಮಾಧ್ಯಮಗಳ ಜೊತೆ ಮಾತನಾಡಿ, ಫಲಿತಾಂಶ ಬರಲು ಇನ್ನೂ ಸಮಯವಿದೆ. ಹಾನಗಲ್‍ನಲ್ಲಿ ಈ ರೀತಿಯ ಪೈಪೋಟಿ ನಿರೀಕ್ಷೆಯಲ್ಲಿದ್ದೆವು. ಯಾವಾಗಲೂ ಅಲ್ಲಿ ಪೈಪೋಟಿ ಇರುತ್ತದೆ. ಆದರೆ ಟಿಕೆಟ್ ವ್ಯತ್ಯಾಸದಿಂದ ಪೈಪೈಪೋಟಿಯಲ್ಲ. ಮೊದಲಿನಿಂದಲೂ ಆ ಕ್ಷೇತ್ರ ಪೈಪೋಟಿಯ ಕ್ಷೇತ್ರವಾಗಿದೆ. ಇನ್ನೂ ಬಹಳ ಸುತ್ತುಗಳಿದೆ. ನಮಗೆ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

    ಉಪಚುನಾವಣೆಗಳು ರಾಜಕೀಯ ಧೃವಿಕರಣವಾಗುವುದಿಲ್ಲ. ನಂಜನಗೂಡು ಗುಂಡ್ಲುಪೇಟೆ ಉಪಚುನಾವಣೆ ನೋಡಿದ್ದೇವೆ. ಆ ನಿಟ್ಟಿನಲ್ಲಿ ಚರ್ಚೆಯೇ ಸರಿ ಅಲ್ಲ ಎಂದರು. ಇದನ್ನೂ ಓದಿ: ಸಿಎಂ ತವರು ಜಿಲ್ಲೆಯಲ್ಲಿ ಬಿಜೆಪಿಗೆ ಹಿನ್ನಡೆ – ಕಾಂಗ್ರೆಸ್‌ ಮುನ್ನಡೆ

  • ಸಿಎಂ ತವರು ಜಿಲ್ಲೆಯಲ್ಲಿ ಬಿಜೆಪಿಗೆ ಹಿನ್ನಡೆ – ಕಾಂಗ್ರೆಸ್‌ ಮುನ್ನಡೆ

    ಸಿಎಂ ತವರು ಜಿಲ್ಲೆಯಲ್ಲಿ ಬಿಜೆಪಿಗೆ ಹಿನ್ನಡೆ – ಕಾಂಗ್ರೆಸ್‌ ಮುನ್ನಡೆ

    ಬೆಂಗಳೂರು: ಸಿಎಂ ಬೊಮ್ಮಾಯಿ ತವರು ಜಿಲ್ಲೆಯಾದ ಹಾವೇರಿಯ ಹಾನಗಲ್‌ನಲ್ಲಿ ಆರಂಭಿಕ ಮತ ಎಣಿಕೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿದ್ದು ಕಾಂಗ್ರೆಸ್‌ಗೆ 182 ಮತಗಳ ಮುನ್ನಡೆ ಸಿಕ್ಕಿದೆ.

    ಮೊದಲ ಸುತ್ತಿನ ಮತ ಎಣಿಕೆ ಅಂತ್ಯಗೊಂಡಿದ್ದು ಬಿಜೆಪಿಯ ಶಿವರಾಜ್ ಸಜ್ಜನರ 4,296, ಕಾಂಗ್ರೆಸ್ಸಿನ ಶ್ರೀನಿವಾಸ ಮಾನೆ 4,296 ಜೆಡಿಎಸ್‌ನ ನಿಯಾಜ್ ಶೇಖ್. 25 ಮತಗಳನ್ನು ಪಡೆದಿದ್ದಾರೆ. ಇದನ್ನೂ ಓದಿ: ಅಶ್ಲೀಲ ಸಿನಿಮಾಗಳ ವಿವಾದದ ಬಳಿಕ ಟ್ವಿಟ್ಟರ್, ಇನ್‍ಸ್ಟಾ ಡಿಲೀಟ್ ಮಾಡಿದ ರಾಜ್ ಕುಂದ್ರಾ

    ಒಟ್ಟು 1,71,264 ಮಂದಿ ಮತದಾನ ಮಾಡಿದ್ದು 16 ಟೇಬಲ್ ನಲ್ಲಿ 22 ಸುತ್ತು ಮತ ಎಣಿಕೆ ಕಾರ್ಯ ನಡೆಯಲಿದೆ. ಬಿಜೆಪಿಯ ಶಾಸಕ ಸಿಎಂ ಉದಾಸಿ ಅವರ ಅಕಾಲಿಕ ನಿಧನದಿಂಧ ತೆರವಾದ ಕ್ಷೇತ್ರಕ್ಕೆ ಕಳೆದ ಶನಿವಾರ ಮತದಾನ ನಡೆದಿತ್ತು. ಇದನ್ನೂ ಓದಿ: ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್‌ ದೇಶ್‌ಮುಖ್‌ ಅರೆಸ್ಟ್‌

     

  • ಉಪ ಚುನಾವಣೆಯ ಫಲಿತಾಂಶ ಇಂದು ಪ್ರಕಟ

    ಉಪ ಚುನಾವಣೆಯ ಫಲಿತಾಂಶ ಇಂದು ಪ್ರಕಟ

    ಬೆಂಗಳೂರು: ಆಡಳಿತ ಪಕ್ಷ ಬಿಜೆಪಿ ಮತ್ತು ವಿಪಕ್ಷ ಕಾಂಗ್ರೆಸ್, ಜೆಡಿಎಸ್ ಪಾಲಿಗೆ ಪ್ರತಿಷ್ಠೆಯ ಕಣವಾಗಿರುವ ಹಾನಗಲ್ ಮತ್ತು ಸಿಂದಗಿ ಉಪ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಲಿದೆ.

    ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಶುರುವಾಗಲಿದ್ದು, ಮಧ್ಯಾಹ್ನದ ಸಮಯದಲ್ಲಿ ಫಲಿತಾಂಶದ ಸ್ಪಷ್ಟ ಚಿತ್ರಣ ಸಿಗಲಿದೆ. ಹಾನಗಲ್ ಕ್ಷೇತ್ರದ ಮತ ಎಣಿಕೆಗಾಗಿ ಹಾವೇರಿ ಸರ್ಕಾರಿ ಎಂಜಿನಿರಿಂಗ್ ಕಾಲೇಜ್‌ ಮತ್ತು ಸಿಂದಗಿ ಕ್ಷೇತ್ರದ ಮತ ಎಣಿಕೆಗಾಗಿ ವಿಜಯಪುರದ ಸೈನಿಕ ಶಾಲೆಯಲ್ಲಿ ಸಕಲ ತಯಾರಿ ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: ಎಲ್ಲರ ಚಿತ್ತ ಉಪಚುನಾವಣೆ ಫಲಿತಾಂಶದತ್ತ – ಮತ ಎಣಿಕೆಗೆ ಸರ್ವ ಸಿದ್ಧತೆ

    ಅಕ್ಟೋಬರ್ 30 ರಂದು ನಡೆದ ಉಪ ಚುನಾವಣೆಯಲ್ಲಿ ಹಾನಗಲ್‍ನಲ್ಲಿ ಶೇ. 83ರಷ್ಟು, ಸಿಂದಗಿಯಲ್ಲಿ ಶೇ.69.41ರಷ್ಟು ಮತದಾನ ನಡೆದಿತ್ತು. ಹಾನಗಲ್‍ನಲ್ಲಿ ಬಿಜೆಪಿಯ ಶಿವರಾಜ್ ಸಜ್ಜನರ್ ಮತ್ತು ಕಾಂಗ್ರೆಸ್‍ನ ಶ್ರೀನಿವಾಸ ಮಾನೆ ನಡುವೆ ನೆಕ್ ಟು ನೆಕ್ ಫೈಟ್ ಇದ್ರೆ, ಸಿಂದಗಿಯಲ್ಲಿ ಕಾಂಗ್ರೆಸ್‍ನ ಅಶೋಕ್ ಮನಗೂಳಿ, ಬಿಜೆಪಿಯ ರಮೇಶ್ ಭೂಸನೂರ, ಜೆಡಿಎಸ್ ನ ನಾಜಿಯಾ ನಡುವೆ ತ್ರಿಕೋನ ಪೈಪೋಟಿ ಕಂಡುಬಂದಿತ್ತು. ಮೂರು ಪಕ್ಷಗಳು ನಮ್ಮದೇ ಗೆಲುವು ಎನ್ನುತ್ತಿವೆ. ಆದರೆ ಮತಪ್ರಭುಗಳ ನಿರ್ಣಯ ಏನು ಎಂಬುದು ಕೆಲವೇ ಗಂಟೆಗಳಲ್ಲಿ ಗೊತ್ತಾಗಲಿದೆ.

  • ಎಲ್ಲರ ಚಿತ್ತ ಉಪಚುನಾವಣೆ ಫಲಿತಾಂಶದತ್ತ – ಮತ ಎಣಿಕೆಗೆ ಸರ್ವ ಸಿದ್ಧತೆ

    ಎಲ್ಲರ ಚಿತ್ತ ಉಪಚುನಾವಣೆ ಫಲಿತಾಂಶದತ್ತ – ಮತ ಎಣಿಕೆಗೆ ಸರ್ವ ಸಿದ್ಧತೆ

    ವಿಜಯಪುರ: ರಾಜ್ಯದಲ್ಲಿ ನಡೆದ ಸಿಂದಗಿ ಮತ್ತು ಹಾನಗಲ್ ಉಪಚುನಾವಣೆಯ ಫಲಿತಾಂಶ ನಾಳೆ ಹೊರಬೀಳಲಿದೆ. ವಿಜಯಪುರ ನಗರದ ಸೈನಿಕ ಶಾಲೆ ಯಲ್ಲಿ ಮತ ಎಣಿಕೆಗೆ ಜಿಲ್ಲಾಡಳಿತ ಇಂದಿನಿಂದಲೇ ಸಕಲ ವ್ಯವಸ್ಥೆ ಮಾಡಿಕೊಂಡಿದೆ.

    ಸೈನಿಕ್ ಶಾಲೆಯ ಒಡೆಯರ ಸದನದಲ್ಲಿ ಮತ ಎಣಿಕೆ ಕಾರ್ಯ ಬೆಳಗ್ಗೆ 8 ಗಂಟೆಗೆ ಪ್ರಾರಂಭವಾಗಲಿದೆ. ಮತ ಎಣಿಕೆ ಕೇಂದ್ರಕ್ಕೆ ಜಿಲ್ಲಾಧಿಕಾರಿ ಪಿ ಸುನೀಲ್ ಕುಮಾರ್, ಎಸ್‍ಪಿ ಆನಂದ್‍ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ಎರಡು ಪ್ರತ್ಯೇಕ ಕೋಣೆಗಳಲ್ಲಿ ಮತಎಣಿಕೆ ಕಾರ್ಯ ನಡೆಯಲಿದ್ದು, 16 ಟೇಬಲ್‍ನಲ್ಲಿ 22 ಸುತ್ತು ಮತ ಎಣಿಕೆ ಕಾರ್ಯ ನಡೆಯಲಿದೆ. ಮತ ಎಣಿಕೆ ಕೇಂದ್ರದ ಸುತ್ತ 100 ಮೀ. ಅಂತರದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಶಾಂತಿಯುತವಾಗಿ ನಡೆಯಿತು ಉಪಚುನಾವಣೆ – ನ.2ಕ್ಕೆ ಫಲಿತಾಂಶ

    ಅಕ್ಟೋಬರ್ 30 ರಂದು ಎರಡು ಕ್ಷೇತ್ರದಲ್ಲಿ ಉಪಚುನಾವಣೆ ಶಾಂತಿಯುತವಾಗಿ ನಡೆದಿತ್ತು. ಹಾನಗಲ್‍ನಲ್ಲಿ ಶೇಕಡಾ 80 ರಷ್ಟು ಮತ್ತು ಸಿಂದಗಿಯಲ್ಲಿ ಶೇಕಡಾ 70 ರಷ್ಟು ಮತದಾನವಾಗಿತ್ತು. ಇದೀಗ ನಾಳೆ ಫಲಿತಾಂಶ ಹೊರಬೀಳಲಿದ್ದು, ಎಲ್ಲರ ಚಿತ್ತ ಉಪಚುನಾವಣೆಯ ಫಲಿತಾಂಶದತ್ತ ನೆಟ್ಟಿದೆ. ಇದನ್ನೂ ಓದಿ: ನಾಲ್ವರ ಬಾಳಿಗೆ ಬೆಳಕಾದ ಅಪ್ಪು

  • ಶಾಂತಿಯುತವಾಗಿ ನಡೆಯಿತು ಉಪಚುನಾವಣೆ – ನ.2ಕ್ಕೆ ಫಲಿತಾಂಶ

    ಶಾಂತಿಯುತವಾಗಿ ನಡೆಯಿತು ಉಪಚುನಾವಣೆ – ನ.2ಕ್ಕೆ ಫಲಿತಾಂಶ

    ಬೆಂಗಳೂರು: ಪ್ರತಿಷ್ಠೆಯ ಕಣವಾಗಿದ್ದ ಹಾನಗಲ್ ಮತ್ತು ಸಿಂದಗಿ ಬೈ ಎಲೆಕ್ಷನ್ ಇಂದು ಯಶಸ್ವಿಯಾಗಿ ಮುಗಿದಿದೆ. ಸಣ್ಣಪುಟ್ಟ ಘಟನೆ ಹೊರತುಪಡಿಸಿ ಉಪಚುನಾವಣೆ ಶಾಂತಿಯುತವಾಗಿ ನಡೆದಿದೆ.

    ಹಾನಗಲ್‍ನಲ್ಲಿ ಶೇಕಡಾ 80 ರಷ್ಟು ಮತ್ತು ಸಿಂದಗಿಯಲ್ಲಿ ಶೇಕಡಾ 70 ರಷ್ಟು ಮತದಾನವಾಗಿದೆ. ಹಾನಗಲ್‍ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ, ಜೆಡಿಎಸ್ ಅಭ್ಯರ್ಥಿ ರಿಯಾಜ್ ಶೇಖ್ ಮತ್ತು ಬಿಜೆಪಿ ಸಂಸದ ಶಿವಕುಮಾರ್ ಉದಾಸಿ ಕುಟುಂಬ ಸಮೇತ ತಮ್ಮ ಹಕ್ಕು ಚಲಾಯಿಸಿದರು. ಇದನ್ನೂ ಓದಿ: ಒಟ್ಟು 347 ಕೊರೊನಾ ಪ್ರಕರಣ – 10 ಮಂದಿ ಸಾವು

    ದೇವಣಗಾಂವದಲ್ಲಿ ಸಿಂದಗಿ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರ, ಮಲಘಾಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೊಕ್ ಮನಗೂಳಿ ವೋಟ್ ಹಾಕಿದರು. ಸಿಂದಗಿಯ ಬೊರಗಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಫೋಟೋ ಚಿನ್ಹೆ ಇರುವ ಮತ ಸಂಖ್ಯೆ ಚೀಟಿ ನೀಡಿದ ಆರೋಪ ಮೇಲೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. 2 ಕ್ಷೇತ್ರಗಳ ಉಪಚುನಾವಣೆ ರಾಜ್ಯದಲ್ಲಿ ಪಕ್ಷಗಳ ನಾಯಕರ ವಾಕ್ಸಮರಕ್ಕೆ ವೇದಿಕೆಯಾಗಿತ್ತು. ಇಂದು ಅಂತಿಮವಾಗಿ ಮತದಾನದ ಮೂಲಕ ತೆರೆಬಿದ್ದಿದ್ದು, ನವೆಂಬರ್ 2ಕ್ಕೆ ಫಲಿತಾಂಶ ಬರಲಿದೆ. ಇದನ್ನೂ ಓದಿ: ಪುನೀತ್‌ ಸಾವಿನ ಸುದ್ದಿ ಕೇಳಿ ಹೃದಯಾಘಾತದಿಂದ ಅಭಿಮಾನಿ ಸಾವು

  • 1 ವೋಟಿಗೆ 1 ಸಾವಿರ ರೂ. – ಹಣ ಹಂಚಿಕೆಯ ವಿಡಿಯೋ ವೈರಲ್

    1 ವೋಟಿಗೆ 1 ಸಾವಿರ ರೂ. – ಹಣ ಹಂಚಿಕೆಯ ವಿಡಿಯೋ ವೈರಲ್

    ಬೆಂಗಳೂರು: ಹಾವೇರಿಯ ಹಾನಗಲ್, ವಿಜಯಪುರದ ಸಿಂದಗಿ ಉಪಚುನಾವಣೆ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದ್ದು, ನಾಳೆವರೆಗೆ ಮನೆ ಮನೆ ಪ್ರಚಾರ ಆಗಲಿದೆ. ಈ ಹೊತ್ತಲ್ಲೇ, ಕುರುಡು ಕಾಂಚಾಣದ ಸದ್ದು ಜೋರಾಗ್ತಿದೆ.

    ಸಿಂದಗಿಯ ಡಂಬಳದಲ್ಲಿ 1 ವೋಟಿಗೆ 1,000 ರೂಪಾಯಿ ಹಂಚುತ್ತಿರುವ ದೃಶ್ಯ ವೈರಲ್ ಅಗಿದೆ. ಬೆನ್ನಲ್ಲೇ ಮಾಜಿ ಸಿಎಂ ಕುಮಾರಸ್ವಾಮಿ ಅವರು ಬಿಜೆಪಿಯವರು 30-40 ಲಕ್ಷ ಹಂಚಿಕೆ ಮಾಡ್ತಿದ್ದು, 1 ಬೂತ್‍ಗೆ 5 ಲಕ್ಷ ಕೊಡ್ತಿದ್ದಾರೆ. ಹಳ್ಳಿ-ಹಳ್ಳಿಯಲ್ಲೂ ಹಣ ವಿತರಿಸ್ತಿದ್ದಾರೆ ಅಂತ ದೂರಿದ್ದಾರೆ. ಡಿಕೆ ಶಿವಕುಮಾರ್ ಮಾಧ್ಯಮಗಳ ಮುಂದೆ ಬಿಜೆಪಿ ಬಿಜೆಪಿ ಕಾರ್ಯಕರ್ತರು ಹಣ ಹಂಚುತ್ತಿರುವ ವಿಡಿಯೋ ದೃಶ್ಯವನ್ನು ತೋರಿಸಿದ್ದಾರೆ.

    ಮತ್ತೊಂದು ಕಡೆ, ಅಬ್ಬರದ ಪ್ರಚಾರ ಮುಗಿಸಿರುವ ಅಗ್ರನಾಯಕರು ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹುಬ್ಬಳ್ಳಿಯ ನಿವಾಸದಲ್ಲಿ ರಿಲ್ಯಾಕ್ಸ್ ಆಗಿದ್ದು, 2 ಕ್ಷೇತ್ರದಲ್ಲೂ ನಾವೇ ಗೆಲ್ಲೋದು ಅಂದಿದ್ದಾರೆ.

    ವಿಪಕ್ಷ ನಾಯಕ ಸಿದ್ದರಾಮಯ್ಯ, ಧಾರವಾಡದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನ ಮಗನ ಮದುವೆಯಲ್ಲಿ ಭಾಗಿಯಾಗಿದ್ದರು. ಬಳಿಕ ಮಾತನಾಡಿ, ಎರಡೂ ಕಡೆ ನಾವು ಗೆಲ್ಲುತ್ತೇವೆ ಅಂತ ವಿಶ್ವಾಸ ವ್ಯಕ್ತಪಡಿಸಿದ್ರು. ಬೊಮ್ಮಾಯಿ ಅಧಿಕಾರಕ್ಕೆ ಬಂದ ಮೇಲೆ ಒಂದೇ ಒಂದು ರಸ್ತೆ ಮಾಡಿದ್ದು ತೋರಿಸಲಿ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಗಾಳಿಯಲ್ಲಿ ಮಾತನಾಡುವುದನ್ನು ನಿಲ್ಲಿಸಿ ರೈತರ ಮಧ್ಯೆ ಬನ್ನಿ ಸುಧಾಕರ್​ಗೆ ರಮೇಶ್ ಕುಮಾರ್ ಟಾಂಗ್