Tag: ಹಾಡು

  • ‘ತಲೆಹರಟೆ’ ಹಾಡಿಗೆ ಗಾಯಕನಾದ ನಟ ಜಗ್ಗೇಶ್

    ‘ತಲೆಹರಟೆ’ ಹಾಡಿಗೆ ಗಾಯಕನಾದ ನಟ ಜಗ್ಗೇಶ್

    ಡಾಲಿ‌ ಧನಂಜಯ್ ನಿರ್ಮಾಣದ ವಿದ್ಯಾಪತಿ (Vidyapati) ಸಿನಿಮಾ ನಾನಾ ವಿಧದಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಟೀಸರ್, ಮೇಕಿಂಗ್ ನಿಂದಲೇ ಗಮನಸೆಳೆದಿರುವ ಈ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ಕರಾಟೆ ತರಗತಿಯಲ್ಲಿ ವಿದ್ಯಾಪತಿಯ ತಲೆಹರಟೆಯ ಹಾಡಿಗೆ ನವರಸ ನಾಯಕ ಜಗ್ಗೇಶ್ (Jaggesh) ಧ್ವನಿಯಾಗಿದ್ದಾರೆ. ಅಯ್ಯೋ ವಿಧಿಯೇ ಎಂದು ಶುರುವಾಗುವ ಹಾಡಿಗೆ ಸುಜಿತ್ ವೆಂಕಟರಾಮಯ್ಯ ಸಾಹಿತ್ಯ, ಡಾಸ್ಮೋಡ್ ಸಂಗೀತ ಸಖತ್ ಕಿಕ್ ಕೊಡುತ್ತದೆ. ಸಖತ್ ಫನ್ ಆಗಿ‌ ಮೂಡಿಬಂದಿರುವ ಗೀತೆಯಲ್ಲಿ ರಂಗಾಯಣ ರಘು ಕೂಡ ಹೆಜ್ಜೆ ಹಾಕಿರುವುದು ವಿಶೇಷ.

    “ಟಗರು ಪಲ್ಯ” ಮೂಲಕ ಮಸ್ತ್ ಮನರಂಜನೆ ನೀಡಿದ್ದ ನಾಗಭೂಷಣ್ (Nagabhushan) ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು, ‘ಉಪಾಧ್ಯಕ್ಷ’ನ ಬೆಡಗಿ ಮಲೈಕಾ ವಸೂಪಾಲ್ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಕರಾಟೆ ಕಿಂಗ್ ಗೆಟಪ್ನಲ್ಲಿ ನಾಗಭೂಷಣ್ ಕಾಣಿಸಿಕೊಳ್ಳುತ್ತಿದ್ದು, ಅವರಿಗೆ ಮಾಸ್ಟರ್ ಆಗಿ ಹಿರಿಯ ನಟ ರಂಗಾಯಣ ರಘು ಅಭಿನಯಿಸಿದ್ದಾರೆ.

    ಈ ಹಿಂದೆ ಇಕ್ಕಟ್ ಸಿನಿಮಾ ಮೂಲಕ ಭರವಸೆ ಹುಟ್ಟಿಸಿದ್ದ ಇಶಾಂ ಮತ್ತು ಹಸೀಂ ಖಾನ್ ”ವಿದ್ಯಾಪತಿ” ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಜೊತೆಗೆ, ಸಿನಿಮಾವನ್ನು ಇವರೇ ಬರೆದು, ಸಂಕಲನದ ಜವಾಬ್ದಾರಿಯನ್ನೂ ತಾವೇ ಹೊತ್ತುಕೊಂಡಿದ್ದಾರೆ. ಚಿತ್ರಕ್ಕೆ ಲವಿತ್ ಅವರ ಛಾಯಾಗ್ರಹಣ ಇದೆ. ಡಾಸ್ಮೋಡ್ ಸಂಗೀತ ನಿರ್ದೇಶನ, ಮುರುಳಿ ನೃತ್ಯ ನಿರ್ದೇಶನ, ಸುಜಿತ್ ವೆಂಕಟರಾಮಯ್ಯ ಸಾಹಿತ್ಯ, ಅರ್ಜುನ್ ಮಾಸ್ಟರ್ ಆ್ಯಕ್ಷನ್ ವಿದ್ಯಾಪತಿ ಸಿನಿಮಾಗಿದೆ. ಟಗರು ಪಲ್ಯ ಸಿನಿಮಾ ನಿರ್ಮಾಣ ಮಾಡಿದ್ದ ಡಾಲಿ ಧನಂಜಯ್ ಇದೀಗ ‘ವಿದ್ಯಾಪತಿ’ ಪ್ರೊಡ್ಯೂಸ್ ಮಾಡುತ್ತಿದ್ದಾರೆ. ಚಿತ್ರದಲ್ಲಿ ಆ್ಯಕ್ಷನ್ ಜೊತೆಗೆ ಹಾಸ್ಯವೂ ಇರಲಿದೆ.

  • ‘ಹಿರಣ್ಯ’ನ ಹೊಸ ಸಾಂಗ್ ರಿಲೀಸ್: ಹೃದಯ ಮೀಟುವ ಹೊಸ ಹಾಡು ಕೇಳಿ

    ‘ಹಿರಣ್ಯ’ನ ಹೊಸ ಸಾಂಗ್ ರಿಲೀಸ್: ಹೃದಯ ಮೀಟುವ ಹೊಸ ಹಾಡು ಕೇಳಿ

    ಹಿರಿಯ ನಟ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ (Rajavardhan) ನಟನೆಯ ಹಿರಣ್ಯ (Hiranya) ಸಿನಿಮಾ ಟೀಸರ್ ಮೂಲಕ ಭರವಸೆ ಹುಟ್ಟಿಸಿದೆ. ಇದೀಗ ತಾಯಿ ಪ್ರೀತಿ ವಿವರಿಸುವ ಹಿರಣ್ಯನ ಹೃದಯ ಮೀಟುವ ಹಾಡು ಬಿಡುಗಡೆಯಾಗಿದೆ. ಪ್ರಮೋದ್ ಮರವಂತೆ ಸಾಹಿತ್ಯದ ಹಾಡಿಗೆ ಸುಪ್ರಿಯಾ ರಾಮ್ ಧ್ವನಿಯಾಗಿದ್ದು, ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನ ಮಾಡಿದ್ದಾರೆ.

    ನಾಯಕನಾಗಿ ಅಭಿನಯಿಸಿರುವ ರಾಜವರ್ಧನ್ ಗೆ ಜೋಡಿಯಾಗಿ ರಿಹಾನಾ ನಟಿಸಿದ್ದಾರೆ. ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ಸ್ಪೆಷಲ್ ರೋಲ್ ನಲ್ಲಿ ನಟಿಸಿದ್ದು, ಉಳಿದಂತೆ ಹುಲಿ ಕಾರ್ತಿಕ್‌, ಅರವಿಂದ್ ರಾವ್‌, ದಿಲೀಪ್‌ ಶೆಟ್ಟಿ ಮುಂತಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

    ಹಿರಣ್ಯ ಚಿತ್ರವನ್ನು ಪ್ರವೀಣ್ ಅವ್ಯೂಕ್ ನಿರ್ದೇಶನ ಮಾಡುತ್ತಿದ್ದಾರೆ. ಪೂರ್ಣ ಪ್ರಮಾಣದ ನಿರ್ದೇಶಕನಾಗಿ ಇದು ಅವರಿಗೆ ಮೊದಲ ಚಿತ್ರ. ಇದಕ್ಕೂ ಮುನ್ನ ಕಿರುಚಿತ್ರಗಳನ್ನು ಮಾಡಿ ಅವರು ಸೈ ಎನಿಸಿಕೊಂಡಿದ್ದಾರೆ. ‘ವೇದಾಸ್ ಇನ್ಫಿನಿಟಿ ಪಿಚ್ಚರ್’ ಬ್ಯಾನರ್ನಲ್ಲಿ ವಿಘ್ನೇಶ್ವರ್ ಮತ್ತು ವಿಜಯ್ ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾಕ್ಕೆ ಯೋಗೇಶ್ವರನ್‌ ಆರ್‌. ಛಾಯಾಗ್ರಹಣವಿದೆ. ಚಿತ್ರದ ಹಾಡುಗಳಿಗೆ ಜ್ಯೂಡಾ ಸ್ಯಾಂಡಿ ಸಂಗೀತ ಸಂಯೋಜನೆಯಿದೆ. ಚಿತ್ರೀಕರಣ ಮುಗಿಸಿ ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿ ನಿರತವಾಗಿದೆ.

  • ಡಾಲಿ ಧನಂಜಯ್ ನಟನೆಯ ‘ಕೋಟಿ’ ಸಿನಿಮಾಗೆ ಯೋಗರಾಜ್ ಭಟ್ ಸಾಹಿತ್ಯ

    ಡಾಲಿ ಧನಂಜಯ್ ನಟನೆಯ ‘ಕೋಟಿ’ ಸಿನಿಮಾಗೆ ಯೋಗರಾಜ್ ಭಟ್ ಸಾಹಿತ್ಯ

    ಡಾಲಿ ಧನಂಜಯ್ (Dolly Dhananjay) ಅಭಿನಯದ ಕೋಟಿ (Kotee) ಸಿನಿಮಾದ ಮೊದಲ ಹಾಡು ‘ಮಾತು ಸೋತು’ ಮೇ 13, ಸೋಮವಾರ ಸಂಜೆ 5 ಗಂಟೆಗೆ ಬಿಡುಗಡೆಯಾಗಲಿದೆ. ಈ ಹಾಡನ್ನು ವಾಸುಕಿ ವೈಭವ್ ಸಂಯೋಜಿಸಿದ್ದು, ಯೋಗರಾಜ್ ಭಟ್ (Yogaraj Bhatt) ಸಾಹಿತ್ಯ ರಚಿಸಿ, ಅರ್ಮಾನ್ ಮಲಿಕ್ ಹಾಡಿದ್ದಾರೆ. ಕೋಟಿ ಸಿನಿಮಾದ ಹಾಡುಗಳ ಹಕ್ಕನ್ನು ಸರೆಗಮ ಖರೀದಿಸಿದ್ದು ಈ ಹಾಡಿನ ಲಿರಿಕಲ್ ವಿಡಿಯೋ ಸರೆಗಮ ಕನ್ನಡ ಯೂಟ್ಯೂಬ್ ಚಾನೆಲ್ಲಿನಲ್ಲಿ ಮೇ 13ರಂದು ಬಿಡುಗಡೆಯಾಗಲಿದೆ.

    ಕೋಟಿ ಚಿತ್ರದ ತಾರಾಗಣದಲ್ಲಿ ಡಾಲಿ ಧನಂಜಯ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್‌ ಇದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ರಮೇಶ್‌ ಇಂದಿರಾ, ತಾರಾ, ಸರ್ದಾರ್‌ ಸತ್ಯ ಮುಂತಾದವರು ಅಭಿನಯಿಸಿದ್ದಾರೆ.

    ಚಿತ್ರದಲ್ಲಿ ಐದು ಹಾಡುಗಳಿದ್ದು ವಾಸುಕಿ ವೈಭವ್‌ ರಾಗ ಸಂಯೋಜಿಸಿದ್ದಾರೆ. ಈ ಹಾಡುಗಳಿಗೆ ಯೋಗರಾಜ್‌ ಭಟ್‌ ಮತ್ತು ವಾಸುಕಿ ವೈಭವ್‌ ಸಾಹಿತ್ಯ ರಚಿಸಿದ್ದಾರೆ. ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು ಚಾರ್ಲಿ 777 ಖ್ಯಾತಿಯ ನೊಬಿನ್‌ ಪೌಲ್‌ ಹೊತ್ತಿದ್ದಾರೆ. ಕಾಂತಾರ ಸಿನಿಮಾದ ಕೆಲಸಕ್ಕೆ ಪ್ರಶಂಸೆಗಳಿಸಿದ್ದ ಪ್ರತೀಕ್‌ ಶೆಟ್ಟಿಯವರು‌ ಕೋಟಿಯ ಸಂಕಲನಕಾರರಾದರೆ, ಟೆಲಿವಿಷನ್‌ನ ಖ್ಯಾತ ಛಾಯಾಗ್ರಾಹಕ ಅರುಣ್ ಅವರು ಈ ಸಿನಿಮಾದ ಕ್ಯಾಮರಮನ್.

    ಈ ಸಿನೆಮಾವನ್ನು ಜಿಯೋ ಸ್ಟುಡಿಯೋಸ್ ನಿರ್ಮಾಣ ಮಾಡಿದ್ದು, ಕಲರ್ಸ್ ಕನ್ನಡವನ್ನು ದಶಕಗಳ ಕಾಲ ಮುನ್ನಡೆಸಿದ್ದ ಪರಮ್‌ ಅವರು ಬರೆದು ನಿರ್ದೇಶಿಸಿದ್ದಾರೆ. ʼಕೋಟಿʼ ಜೂನ್‌ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

  • ಕನ್ನಡದಲ್ಲಿ ಮತ್ತೊಮ್ಮೆ ಬಸವಣ್ಣ: ‘ಶರಣರ ಶಕ್ತಿ’ ಚಿತ್ರದ ಸಾಂಗ್ ರಿಲೀಸ್

    ಕನ್ನಡದಲ್ಲಿ ಮತ್ತೊಮ್ಮೆ ಬಸವಣ್ಣ: ‘ಶರಣರ ಶಕ್ತಿ’ ಚಿತ್ರದ ಸಾಂಗ್ ರಿಲೀಸ್

    ನ್ನೆರಡನೇ ಶತಮಾನದಲ್ಲಿ ಶರಣರು, ಅನುಭವ ಮಂಟಪ ಮತ್ತು ಬಸವಣ್ಣ (Basavanna) ಎನ್ನುವುದು ಎಷ್ಟು ಆಕರ್ಷಕವಾಗಿತ್ತು. ಇಂತಹ ಅಂಶಗಳನ್ನು ಸಂಶೋಧನೆ ನಡೆಸಿ ’ಶರಣರ ಶಕ್ತಿ’ (Sharanara Shakti) ಎನ್ನುವ ಚಿತ್ರವೊಂದು ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಇದೆ. ’ತಡಿವ್ಯರ ನೋಡು’ ಎಂಬ ಅಡಿಬರಹವಿದೆ. ಪ್ರಚಾರದ ಮೊದಲ ಹಂತವಾಗಿ ’ಬಸವ ಜಯಂತಿ’ ಮುನ್ನ ದಿನದಂದು ಹಾಡು ಬಿಡುಗಡೆ ಕಾರ್ಯಕ್ರಮ ಅದ್ದೂರಿಯಾಗಿ ರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು. ಎಲ್ಲಾ ಕಲಾವಿದರುಗಳು ಪಾತ್ರಧಾರಿಗಳಾಗಿ ವೇದಿಕೆ ಹಂಚಿಕೊಂಡಿದ್ದು ವಿಶೇಷವಾಗಿತ್ತು. ಶ್ರೀಷ ಫಿಲಂಸ್ ಅಡಿಯಲ್ಲಿ ಆರಾಧನಾ ಕುಲಕರ್ಣಿ ಬಂಡವಾಳ ಹೂಡುವ ಜತೆಗೆ ಅಕ್ಕ ನಾಗಮ್ಮನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಡಾ.ರಾಜ್‌ಕುಮಾರ್ ಸಂಸ್ಥೆಯ ವಜ್ರೇಶ್ವರಿ ಕಂಬೈನ್ಸ್‌ದಲ್ಲಿ ಕೆಲಸ ಮಾಡಿರುವ ದಿಲೀಪ್ ಶರ್ಮ ಸಿನಿಮಾಕ್ಕೆ ರಚನೆ,ಚಿತ್ರಕಥೆ,ಸಂಭಾಷಣೆ, ನಿರ್ದೇಶನ ಅಲ್ಲದೆ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹಿರಿಯ ಸಾಹಿತಿ, ಜಾನಪದ ವಿದ್ವಾಂಸ, ಅನುಭವ ಮಂಟಪದ ಅಧ್ಯಕ್ಷ ಗೊ.ರು.ಚನ್ನಬಸಪ್ಪ ಮಾತನಾಡಿ ಬಸವಣ್ಣ ಇಂದಿಗೂ ಯಾಕೆ ಪ್ರಸ್ತುತ ಎಂಬುದನ್ನು ಇದರಲ್ಲಿ ನಿರೂಪಣೆ ಮಾಡಿದ್ದಾರೆಂಬುದು ತಿಳಿದು ಬಂದಿದೆ. ಅವರು ಧಾರ್ಮಿಕ, ಶೈಕ್ಷಣಿಕ, ಸಾಂಸ್ಕ್ರತಿಕ, ಸಾಮಾಜಿಕ ಎಲ್ಲಾ ಕ್ಷೇತ್ರಗಳಲ್ಲಿ ಹೆಸರು ಮಾಡಿದವರು. ಬಸವಣ್ಣನವರು ಸಾರ್ವಕಾಲಿಕವಾದವರು. ಸರ್ಕಾರವು ನೂತನ ಅನುಭವ ಮಂಟಪ್ಪಕ್ಕೆ ಹಣ ಮಂಜೂರು ಮಾಡಿದೆ. ಕೆಲಸಗಳು ಸದ್ಯದಲ್ಲೆ ಶುರುವಾಗಲಿದೆ. ಚಿತ್ರವು ಎಲ್ಲರಿಗೂ ತಲುಪಲಿ ಎಂದರು.

    ಹನ್ನೆರಡನೇ ಶತಮಾನದಲ್ಲಿ ರಾಜ್ಯ,ದೇಶ, ವಿದೇಶಗಳಿಂದ ಬಸವಣ್ಣನವರನ್ನು ಹುಡುಕಿಕೊಂಡು ಬಂದಿದ್ದರಿಂದಲೇ ವಿಶ್ವಖ್ಯಾತಿಗೊಂಡರು. ಅವರು ಉತ್ತರ ಕರ್ನಾಟಕ ಭಾಗದವರು ಎಂಬುದು ಹೆಮ್ಮೆಯ ವಿಷಯವಾಗಿದೆ. ಯಾವ ಕಾರಣಕ್ಕೆ ಎಲ್ಲಾ ಶರಣರು ಅನುಭವ ಮಂಟಪಕ್ಕೆ ಬಂದರು. ಇಲ್ಲಿ ಮಹಾನ್ ಪುರುಷನ ಅವತಾರ ಹೇಗಿತ್ತು. ಇಲ್ಲಿಗೆ ಬಂದವರು ಮೂರು ದಿವಸದ ನಂತರ ಕಾಯಕ ಹುಡುಕುವಂತೆ ಮಾಡುತ್ತದೆ. ಬಸವಣ್ಣನವರ ಕಲ್ಯಾಣ ಕ್ರಾಂತಿ, ವಚನ ಸಾಹಿತ್ಯ ರಕ್ಷಣೆ ಮಾಡಲು ಹೇಗೆ ಹೋರಾಡಿದರು. ಎಲ್ಲೆಲ್ಲಿ ವಚನಗಳನ್ನು ಬಚ್ಚಿಟ್ಟರು. ಅದನ್ನು ಜನರಿಗೆ ಯಾವ ರೀತಿ ಹರಡಿದರು. ವೇಶ್ಯೆ ಸಂಕವ್ವ ಮಹಾಶರಣೆಯಾಗಿದ್ದು. ತಳವಾರು ಕಾಮಿದೇವ ಶರಣರು ಯಾಕೆ ಕಲ್ಯಾಣಕ್ಕೆ ಬಂದರು. ಚನ್ನಬಸವಣ್ಣನ ಸಾರಥ್ಯದಲ್ಲಿ ಉಳಿವೆ ಮಂಟಪ. ಶರಣರನ್ನು ತಡೆ ಹಿಡಿದರೆ ಏನಾಗುತ್ತದೆ. ಇಂತಹ ಇನ್ನು ಹಲವಾರು ತಿಳಿಯದ ಮಾಹಿತಿಗಳು ಚಿತ್ರದಲ್ಲಿ ನೋಡಬಹುದಾಗಿದೆ ಅಂತ ನಿರ್ದೇಶಕರು ಹೇಳಿಕೊಂಡರು.

    ಬಸವಣ್ಣನಾಗಿ ಮಂಜುನಾಥಗೌಡ ಪಾಟೀಲ್, ನೀಲಾಂಬಿಕೆಯಾಗಿ ಸಂಗೀತ ಮಡ್ಲೂರು, ಶೀಲವಂತನಾಗಿ ವಿಶ್ವರಾಜ್ ರಾಜ್‌ಗುರು, ಚನ್ನಬಸವಣ್ಣನಾಗಿ ಧ್ರುವಶರ್ಮ, ಉಳಿದಂತೆ ರಮೇಶ್‌ಪಂಡಿತ್, ಸಾಚಿಜೈನ್, ವಿನೋದ್ ದಂಡಿನ, ರಾಮಕೃಷ್ಣ ದೊಡ್ಡಮನಿ, ಅಬ್ದುಲ್‌ಲತೀಫ್  ಹಾಗೂ ಆ ಭಾಗದ 140 ರಂಗಭೂಮಿ ಕಲಾವಿದರುಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಸಂಗೀತ ವಿನುಮನಸು, ಛಾಯಾಗ್ರಹಣ ಮುಂಜಾನೆ ಮಂಜು, ಸಂಕಲನ ಮಹಾಂತೇಶ್.ಆರ್ ನಿರ್ವಹಿಸಿದ್ದಾರೆ. ಹುಬ್ಬಳ್ಳಿ ಸುತ್ತಮುತ್ತ ನಲವತ್ತು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಹಾಡುಗಳನ್ನು Hoptil Musicದಲ್ಲಿ ಆಲಿಸಬಹುದಾಗಿದೆ.  ಋಷಿಕುಮಾರ ಸ್ವಾಮೀಜಿ, ’ಹಲಗಿ’ ವಾದ್ಯ ಬಾರಿಸುವುದರಲ್ಲಿ ಹೆಸರು ಮಾಡಿ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿರುವ ಮುನಿವೆಂಕಟಪ್ಪ ಸುಂದರ ಸಮಯದಲ್ಲಿ ಉಪಸ್ತಿತರಿದ್ದರು.

  • ಅದ್ದೂರಿ ಸೆಟ್ ನಲ್ಲಿ ಮೂಡಿ ಬಂತು ‘ಸಂಜು-ಗೀತಾ’ ಸಾಂಗ್

    ಅದ್ದೂರಿ ಸೆಟ್ ನಲ್ಲಿ ಮೂಡಿ ಬಂತು ‘ಸಂಜು-ಗೀತಾ’ ಸಾಂಗ್

    ಒಂದು ಪ್ರೇಮಕಥೆ ಎಂದರೆ ಅಲ್ಲಿ ಖುಷಿ, ತ್ಯಾಗದ ಜೊತೆಗೆ ಕಾಡುವ ಕಥೆ ಇರಬೇಕು. ಇದನ್ನು ಅಚ್ಚುಕಟ್ಟಾಗಿ ತೆರೆಮೇಲೆ ತಂದವರು ನಿರ್ದೇಶಕ ನಾಗಶೇಖರ್.  ಅದಕ್ಕೆ  ಮೈನಾ, ಸಂಜು ವೆಡ್ಸ್ ಗೀತಾಗಿಂತ ಉದಾಹರಣೆ ಬೇಕಿಲ್ಲ.  ಈಗ ಹೊಸ ಸಂಜು ಹಾಗೂ ಗೀತಾರ (Sanju Weds Geetha 2) ನವೀನ ಪ್ರೇಮಕಥೆಯನ್ನು ನಾಗಶೇಖರ್  ಹೇಳಹೊರಟಿದ್ದಾರೆ. ಶ್ರೀನಗರ ಕಿಟ್ಟಿ (Srinagar Kitty) ಜೊತೆ  ರಮ್ಯಾ ಬದಲು ರಚಿತಾ ರಾಮ್  (Rachita Ram)ಬಂದಿದ್ದಾರೆ.

    ರೇಷ್ಮೆ ನೂಲಿಗೆ ಉತ್ತಮ ಬೆಲೆ ಸಿಗಬೇಕೆಂದು ಹೋರಾಡುವ  ನಮ್ಮ ಮಣ್ಣಿನ ಪ್ರೇಮಿಗಳ ಅದ್ಭುತ ಪ್ರೇಮಕಾವ್ಯವಿದು. ಸದ್ಯ ಚಿತ್ರದ ಬಹುತೇಕ  ಚಿತ್ರೀಕರಣ, ಎಡಿಟಿಂಗ್ ಮುಗಿದಿದ್ದು ಲೂಪ್ ಸ್ಟುಡಿಯೋದಲ್ಲಿ ಡಬ್ಬಿಂಗ್  ಕಾರ್ಯ ನಡೆದಿದೆ. ಈಗಾಗಲೇ ಸ್ವಿಟ್ಜರ್ ಲ್ಯಾಂಡ್ ನಲ್ಲಿ 15 ದಿನ ಹನ್ನೊಂದು ಲೊಕೇಶನ್ ಗಳಲ್ಲಿ  ಮೂರನೇ ಹಂತದ ಚಿತ್ರೀಕರಣ ಮುಗಿಸಿದ್ದು, ಈಗ  ನಾಲ್ಕನೇ ಹಂತದ ಚಿತ್ರೀಕರಣ ಶುರುವಾಗಿದೆ. ಕುಣಿಗಲ್ ನಲ್ಲಿ  ಅದ್ದೂರಿ ಹಾಡೊಂದರ ಶೂಟಿಂಗ್ ನಡೆದಿದೆ.

    ಈ ಹಾಡು, ಚಿತ್ರದ ಕುರಿತಂತೆ ಮಾತನಾಡಿದ ನಿರ್ಮಾಪಕ ಛಲವಾದಿ ಕುಮಾರ್, ಕುಣಿಗಲ್ ನ ಯುಬಿ ಸ್ಟೆಡ್ ಫಾರಂ(ಕುದುರೆ ಫಾರಂ)ನಲ್ಲಿ ಸುಮಾರು 5 ದಿನಗಳ ಕಾಲ  ಪ್ರಮುಖವಾದ  ಕಲರ್ ಫುಲ್  ಹಾಡಿನ  ಚಿತ್ರೀಕರಣ ನಡೆಸಲಾಯಿತು. ತುಂಬಾ ಅದ್ದೂರಿಯಾಗಿ ಮೂಡಿ ಬಂದಿರುವ ಈ ಹಾಡಿಗೆ ಸುಮಾರು 45 ರಿಂದ 50 ಲಕ್ಷ ರೂ. ವರೆಗೆ ಖರ್ಚು  ಮಾಡಲಾಗಿದೆ. ಇದಲ್ಲದೆ ಉಳಿದ ಹಾಡುಗಳನ್ನೂ ಸಹ ಇನ್ನೂ ಅದ್ದೂರಿಯಾಗಿ  ಆಗಿ ಚಿತ್ರೀಕರಿಸುವ ಯೋಜನೆಯನ್ನು ಹಾಕಿಕೊಂಡಿದ್ದೇವೆ. ಒಟ್ಟಾರೆ ಇಡೀ ಚಿತ್ರ ವೈಭವಯುತವಾಗಿ ಮೂಡಿಬರಬೇಕು. ಅದ್ಭುತ ದೃಶ್ಯಕಾವ್ಯವಾಗಿ ಸಂಜು ವೆಡ್ಸ್ ಗೀತಾ ಮೂಡಿಬರಬೇಕು ಎನ್ನುವುದೇ ನಮ್ಮ ಉದ್ದೇಶ ಎಂದು ಹೇಳಿದರು.

     

    ಪವಿತ್ರ ಇಂಟರ್ ನ್ಯಾಷನಲ್ ಮೂವೀಮೇಕರ್ಸ್ ಅಡಿಯಲ್ಲಿ  ನಿರ್ಮಾಪಕ  ಛಲವಾದಿ ಕುಮಾರ್ ಅವರು ಈ  ಚಿತ್ರವನ್ನು ಅದ್ದೂರಿ ಬಜೆಟ್ ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ನಾಗಶೇಖರ್  ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಸಂಗೀತ ನಿರ್ದೇಶಕ‌  ಶ್ರೀಧರ ವಿ. ಸಂಭ್ರಮ  ೫ ಸುಂದರವಾದ ಹಾಡುಗಳನ್ನು  ಮಾಡಿದ್ದು, ಸೋನು ನಿಗಂ, ಶ್ರೇಯಾ ಘೋಷಾಲ್, ಮಂಗ್ಲಿ ದನಿಯಾಗಿದ್ದಾರೆ.  ರಾಗಿಣಿ ದ್ವಿವೇದಿ, ಚೇತನ್ ಚಂದ್ರ, ರಂಗಾಯಣ ರಘು, ಸಾಧು ಕೋಕಿಲ , ತಬಲಾನಾಣಿ, ಗಿಚ್ಚಿಗಿಲಿಗಿಲಿ ವಿನೋದ್ ಅಲ್ಲದೆ ಖಳನಟ ಸಂಪತ್ ಕುಮಾರ್ ಸೇರಿದಂತೆ  ಹೆಸರಾಂತ ಕಲಾವಿದರ ತಾರಾಗಣ ಈ ಚಿತ್ರಕ್ಕಿದೆ. A 24 ಕ್ರಿಯೇಶನ್ಸ್ ಥ್ರೂ ಗೋಕುಲ್ ಫಿಲಂಸ್ ಈ ಚಿತ್ರವನ್ನು ಪ್ರಪಂಚದಾದ್ಯಂತ ಬಿಡುಗಡೆ ಮಾಡುತ್ತಿದೆ.

  • ‘ಪಂಚೇಂದ್ರಿಯಂ’ ಟೀಸರ್ ರಿಲೀಸ್ ಮಾಡಿದ ನಾಗೇಂದ್ರ ಪ್ರಸಾದ್

    ‘ಪಂಚೇಂದ್ರಿಯಂ’ ಟೀಸರ್ ರಿಲೀಸ್ ಮಾಡಿದ ನಾಗೇಂದ್ರ ಪ್ರಸಾದ್

    ರಾಜ್ ಪ್ರಿಯ ಪ್ರೊಡಕ್ಷನ್ಸ್ ಲಾಂಛನದಲ್ಲಿ ಹೆಚ್ ಸೋಮಶೇಖರ್ ನಿರ್ಮಿಸಿರುವ ಹಾಗೂ ಆರನ್ ಕಾರ್ತಿಕ್ ವೆಂಕಟೇಶ್ ನಿರ್ದೇಶನದ ‘ಪಂಚೇಂದ್ರಿಯಂ’ (Panchendriyam) ಚಿತ್ರದ ಹಾಡುಗಳು ಹಾಗೂ ಟೀಸರ್ ಇತ್ತೀಚಿಗೆ ಬಿಡುಗಡೆಯಾಯಿತು. ಕವಿರತ್ನ ವಿ.ನಾಗೇಂದ್ರ ಪ್ರಸಾದ್ (Nagendra Prasad) ಟೀಸರ್ ಹಾಗೂ ಹಾಡುಗಳನ್ನು ಲೋಕಾರ್ಪಣೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ನಂತರ ಚಿತ್ರತಂಡದ ಸದಸ್ಯರು ಚಿತ್ರಡ ಕುರಿತು ಮಾತನಾಡಿದರು.

    ದೃಷ್ಟಿ, ಶ್ರವಣ, ವಾಸನೆ, ರುಚಿ ಹಾಗೂ ಸ್ಪರ್ಶ ಇವು ಮಾನವನ ದೇಹವನ್ನು ರೂಪಿಸುವ ಐದು ಅಂಗಗಳು. ಈ ‘ಪಂಚೇಂದ್ರಿಯ’ಗಳನ್ನು ದೇವರು ಸದ್ಬಳಿಕೆಗಾಗಿ ನೀಡಿದ್ದಾನೆ. ನಾವು ಅದನ್ನು  ದುರ್ಬಳಿಕೆ ಮಾಡಿಕೊಂಡಾಗ ಏನಾಗುತ್ತದೆ ಎಂಬುದೆ ಈ ಚಿತ್ರದ ಪ್ರಮುಖ ಕಥಾಹಂದರ. ಚಿತ್ರದಲ್ಲಿ ಆರು ಹಾಡುಗಳಿದೆ. ನಾನೇ ಸಂಗೀತ ನೀಡಿದ್ದೇನೆ. ನಾಲ್ಕು ಸಾಹಸ ಸನ್ನಿವೇಶಗಳಿದೆ. ಹೆಚ್ ಸೋಮಶೇಖರ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಅಫ್ಜಲ್ ಅವರು ಈ ಚಿತ್ರದ ದ್ವಿತೀಯ ನಾಯಕನಾಗಿ ಅಭಿನಯಿಸಿರುವುದಲ್ಲದೆ ಕಾರ್ಯಕಾರಿ ನಿರ್ಮಾಪಕರಾಗೂ ಕಾರ್ಯ ನಿರ್ವಹಿಸಿದ್ದಾರೆ. ವಿನಯ್ ಸೂರ್ಯ ಈ ಚಿತ್ರದ ನಾಯಕರಾಗಿ ಹಾಗೂ ವಿದ್ಯಾಶ್ರೀ ಮತ್ತು ರಾಘವಿ ನಾಯಕಿಯರಾಗಿ ನಟಿಸಿದ್ದಾರೆ. ದೇವರಾಯನದುರ್ಗ, ದಾಬಸ್ ಪೇಟೆ ಮುಂತಾದ ಕಡೆ ಚಿತ್ರೀಕರಣವಾಗಿದೆ. ಅಂದುಕೊಂಡ ಹಾಗೆ ಆದರೆ ಏಪ್ರಿಲ್ ನಲ್ಲಿ ಚಿತ್ರ ತೆರೆಗೆ ಬರಲಿದೆ ಎಂದು ನಿರ್ದೇಶಕ ಆರನ್ ಕಾರ್ತಿಕ್ ವೆಂಕಟೇಶ್ ತಿಳಿಸಿದರು.

    ಇದು ನಮ್ಮ ಸಂಸ್ಥೆಯ ನಿರ್ಮಾಣದ ಎರಡನೇ ಚಿತ್ರ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಹೆಚ್ ಸೋಮಶೇಖರ್ . ಈ ಚಿತ್ರದಲ್ಲಿ ಪ್ರಮುಖ ಪಾತ್ರದೊಂದಿಗೆ ಕಾರ್ಯಕಾರಿ ನಿರ್ಮಾಪಕನಾಗಿಯೂ ಕೆಲಸ ಮಾಡಿರುವುದಾಗಿ ಅಫ್ಜಲ್ ಹೇಳಿದರು.

    ಜಕ್ಕಣಾಚಾರಿ ಅವನ ತಮ್ಮ ಶುಕ್ಲಾಚಾರಿ ಚಿತ್ರದಲ್ಲಿ ಬಾಲನಟನಾಗಿ ಅಭಿಯಿಸಿದ್ದ ನಾನು, ಈ ಚಿತ್ರದ ಮೂಲಕ ನಾಯಕನಾಗಿದ್ದೇನೆ ಎಂದರು ವಿನಯ್ ಸೂರ್ಯ (Vinay Surya). ಚಿತ್ರದಲ್ಲಿ ಅಭಿನಯಿಸಿರುವ ಯತಿರಾಜ್, ವಿಕ್ಟರಿ ವಾಸು, ಗಣೇಶ್ ರಾವ್ ಹಾಗೂ ಪವನ್ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ಸಿರಿಮ್ಯೂಸಿಕ್ ನ ಸುರೇಶ್ ಚಿಕ್ಕಣ್ಣ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

  • ಹೋಳಿ ಹಬ್ಬಕ್ಕೆ ‘ಬ್ಯಾಕ್ ಬೆಂಚರ್ಸ್’ ಚಿತ್ರದ ಹಾಡು

    ಹೋಳಿ ಹಬ್ಬಕ್ಕೆ ‘ಬ್ಯಾಕ್ ಬೆಂಚರ್ಸ್’ ಚಿತ್ರದ ಹಾಡು

    ಪಿ.ಪಿ.ಪ್ರೊಡಕ್ಷನ್ಸ್ ಲಾಂಛನದಲ್ಲಿ ರಮ್ಯ ಅವರು ನಿರ್ಮಿಸಿರುವ, ಬಿ.ಆರ್ ರಾಜಶೇಖರ್ (Rajashekhar) ನಿರ್ದೇಶನದಲ್ಲಿ ನೂತನ ಪ್ರತಿಭೆಗಳ ನಟಿಸಿರುವ ‘ಬ್ಯಾಕ್ ಬೆಂಚರ್ಸ್’ (Back Benchers) ಚಿತ್ರದಿಂದ ಹೋಳಿ ಹಬ್ಬಕ್ಕಾಗಿ ಸುಮಧುರ ಹಾಡೊಂದು (Song) ಬಿಡುಗಡೆಯಾಗಿದೆ. ಹೃದಯಶಿವ ಅವರು ಬರೆದಿರುವ ಈ ಹಾಡನ್ನು ಭಾರತದ ಹೆಸರಾಂತ ಗಾಯಕ ಶಂಕರ್ ಮಹದೇವನ್ ಹಾಡಿದ್ದಾರೆ. ನಕುಲ್ ಅಭಯಂಕರ್ ಸಂಗೀತ ನೀಡಿದ್ದಾರೆ. ಹೋಳಿಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಿರುವ ಈ ಹಾಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

    ಬ್ಯಾಕ್ ಬೆಂಚರ್ಸ್ ಚಿತ್ರ ನಮ್ಮ ಕಾಲೇಜು ದಿನಗಳನ್ನು ನೆನಪಿಸುತ್ತದೆ. ಈ ಚಿತ್ರದಲ್ಲಿ ಬಹುತೇಕ ಹೊಸಪ್ರತಿಭೆಗಳು ಅಭಿನಯಿಸಿದ್ದಾರೆ.‌ ಆಡಿಷನ್ ಮೂಲಕ ಆಯ್ಕೆಯಾದ ಈ ಕಲಾವಿದರಿಗೆ ಸುಮಾರು ಒಂದು ವರ್ಷಗಳ ಕಾಲ ವರ್ಕ್ ಶಾಪ್ ನಡೆಸಿ ಆನಂತರ ಚಿತ್ರೀಕರಣ ಮಾಡಲಾಗಿದೆ. ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ ಎಂದು ನಿರ್ದೇಶಕ ಬಿ.ಆರ್ ರಾಜಶೇಖರ್ ತಿಳಿಸಿದ್ದಾರೆ.

    ಮನೊಹರ್ ಜೋಶಿ ಅವರ ಛಾಯಾಗ್ರಹಣವಿರುವ ಈ ಚಿತ್ರದ ತಾರಾಬಳಗದಲ್ಲಿ ರಂಜನ್ ನರಸಿಂಹಮೂರ್ತಿ, ಜಿತಿನ್ ಆರ್ಯನ್, ಆಕಾಶ್, ಶಶಾಂಕ್ ಸಿಂಹ, ಸುಚೇಂದ್ರ ಪ್ರಸಾದ್, ಅರವಿಂದ್ ಕುಪ್ಳಿಕರ್, ಮಾನ್ಯ ಗೌಡ, ಕುಂಕುಮ್, ಅನುಷ ಸುರೇಶ್ ಮುಂತಾದವರಿದ್ದಾರೆ.

  • ನಾಳೆ ಚಾಮರಾಜನಗರದಲ್ಲಿ ‘ಯುವ’ ಹವಾ

    ನಾಳೆ ಚಾಮರಾಜನಗರದಲ್ಲಿ ‘ಯುವ’ ಹವಾ

    ರಾಜಕುಮಾರ, ಕೆ.ಜಿ.ಎಫ್, ಕಾಂತಾರದಂತಹ ಯಶಸ್ವಿ ಚಿತ್ರಗಳನ್ನು ನಿರ್ಮಿಸಿರುವ ಹೊಂಬಾಳೆ ಫಿಲಂಸ್ ಸಂಸ್ಥೆ ಮೂಲಕ ನಿರ್ಮಾಣವಾಗಿರುವ ಹಾಗೂ ಯುವ ರಾಜಕುಮಾರ್ (Yuvarajkumar) ನಾಯಕರಾಗಿ ನಟಿಸಿರುವ ಮೊದಲ ಚಿತ್ರ ‘ಯುವ’ (Yuva).  ವಿಜಯ್ ಕಿರಗಂದೂರ್ ಈ ಚಿತ್ರದ  ನಿರ್ಮಾಪಕರು.

    ಸಂತೋಷ್ ಆನಂದರಾಮ್ (Santhosh Anand Ram) ನಿರ್ದೇಶಿಸಿ, ಅಜನೀಶ್ ಲೋಕನಾಥ್ ಸಂಗೀತ ನೀಡಿರುವ ‘ಯುವ’ ಚಿತ್ರದ ಮೊದಲ ಹಾಡು ಮಾರ್ಚ್ 2 ರಂದು ಬಿಡುಗಡೆಯಾಗಲಿದೆ.  ಚಾಮರಾಜನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಎದುರಿನ ಮೈದಾನದಲ್ಲಿ ಆಯೋಜಿಸಲಾಗಿರುವ ಅದ್ದೂರಿ‌ ಸಮಾರಂಭದಲ್ಲಿ ಚಿತ್ರದ ಚೊಚ್ಚಲ ಗೀತೆ ‘ಒಬ್ಬನೇ ಶಿವ ಒಬ್ಬನೇ ಯುವ’ ಹಾಡು ಅನಾವರಣವಾಗಲಿದೆ.

    ದೊಡ್ಮನೆ ಮೊಮ್ಮಗ ಯುವ ರಾಜಕುಮಾರ್ ಮೊದಲ ಚಿತ್ರದ ಬಿಡುಗಡೆಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.  ಮಾರ್ಚ್ 29 ರಂದು ಬಹು ನಿರೀಕ್ಷಿತ ಈ ಚಿತ್ರ ಬಿಡುಗಡೆಯಾಗಲಿದೆ.

    ಯುವ ರಾಜಕುಮಾರ್ ಹಾಗೂ ಸಪ್ತಮಿಗೌಡ ನಾಯಕ – ನಾಯಕಿಯಾಗಿ ನಟಿಸಿರುವ ಯುವ ಚಿತ್ರದ ತಾರಾಬಳಗಲ್ಲಿ  ಅಚ್ಯುತಕುಮಾರ್, ಸುಧಾರಾಣಿ, ಕಿಶೋರ್ ಮುಂತಾದವರಿದ್ದಾರೆ.

  • ಮಾರ್ಚ್ 2ಕ್ಕೆ ಚಾಮರಾಜನಗರದಲ್ಲಿ ‘ಯುವ’ ಚಿತ್ರದ ಫಸ್ಟ್ ಸಾಂಗ್ ರಿಲೀಸ್

    ಮಾರ್ಚ್ 2ಕ್ಕೆ ಚಾಮರಾಜನಗರದಲ್ಲಿ ‘ಯುವ’ ಚಿತ್ರದ ಫಸ್ಟ್ ಸಾಂಗ್ ರಿಲೀಸ್

    ಪುನೀತ್ ರಾಜ್ ಕುಮಾರ್ ಅವರ  ಉತ್ತರಾಧಿಕಾರಿ ಎಂದೇ ಬಿಂಬಿತವಾಗಿರುವ ರಾಘವೇಂದ್ರ ರಾಜ್ ಕುಮಾರ್ ಪುತ್ರ ಯುವರಾಜಕುಮಾರ್ ನಟನೆಯ ಯುವ ಸಿನಿಮಾ ಟೀಮ್‍ ನಿಂದ ಬಿಗ್ ಅಪ್ ಡೇಟ್ ಸಿಕ್ಕಿದೆ. ಚಿತ್ರದ ಮೊದಲ ಹಾಡನ್ನು (Song) ಡಾ.ರಾಜ್ ಕುಮಾರ್ ಹುಟ್ಟೂರು ಜಿಲ್ಲೆ ಚಾಮರಾಜನಗರದಲ್ಲಿ (Chamarajanagar) ನಡೆಯಲಿದೆ. ಮಾರ್ಚ್ 2 ರಂದು ಚಾಮರಾಜನಗರ ಟೆಂಪಲ್ ಮೈದಾನದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿರುವುದಾಗಿ ಚಿತ್ರತಂಡ ತಿಳಿಸಿದೆ.

    ಮಾರ್ಚ್ 17ರ ಪುನೀತ್ ರಾಜ್ ಕುಮಾರ್ ಹುಟ್ಟು ಹಬ್ಬದ ಮುನ್ನ ದಿನ ಮಾರ್ಚ್ 16ರಂದು ಹೊಸಪೇಟೆಯಲ್ಲಿ ಮೆಗಾ ಇವೆಂಟ್ ಆಯೋಜನೆ ಮಾಡಲಾಗಿದ್ದು, ಜೀವನದ ಮಹಾ ಜಾತ್ರೆಗೆ ಯುವರಾಜ್ ಕುಮಾರ್ ಸಜ್ಜಾಗ್ತಿದ್ದಾರೆ. ಮಾರ್ಚ್ ತಿಂಗಳಲ್ಲಿ ಚಿಕ್ಕಪ್ಪ ಪುನೀತ್ (Puneeth Rajkumar) ಆಶೀರ್ವಾದ ಪಡೆದು ಹೊಸ ಬದುಕು ಶುರು ಮಾಡಲಿದ್ದಾರೆ. ಮಾರ್ಚ್ ‘ಯುವ’ (Yuva) ಜರ್ನಿಯ ಟರ್ನಿಂಗ್ ಪಾಯಿಂಟ್ ಅಂತಿದೆ ಸಿನಿಮಾ ಲೋಕ.

    ಯುವರಾಜ್ ಕುಮಾರ್ (Yuva Rajkumar) ಮೊದಲ ಸಿನಿಮಾದ ಕೆಲಸವನ್ನ ಶ್ರದ್ಧೆಯಿಂದ ಮಾಡಿ ಮುಗಿಸಿದ್ದಾರೆ. ನಿರ್ದೇಶಕ ಸಂತೋಷ್ ಆನಂದ್ ರಾಮ್ ಹೇಳಿದ ಹಾಗೇ ಯುವ ನಡೆದುಕೊಂಡಿದ್ದಾರೆ. ಉತ್ತರ ಈಗ ‘ಯುವ’ ಸಿನಿಮಾ ಅಚ್ಚುಕಟ್ಟಾಗಿ ಸಿದ್ಧವಾಗಿದೆ. ಅಂದುಕೊಂಡಂತೆ ಆಗಿದ್ರೆ ಯುವ ಇಷ್ಟೊತ್ತಿಗಾಗಲೇ ನಿಮ್ಮ ಮಡಿಲಿಗೆ ಬಂದಿರಬೇಕಿತ್ತು. ‘ಸಲಾರ್’ (Salaar) ರಿಲೀಸ್‌ನಲ್ಲಿ ಆದ ಬದಲಾವಣೆಯಿಂದ ‘ಯುವ’ ಬರುವಿಕೆ ಕೂಡ ಮುಂದೂಡಲಾಯ್ತು. ಈಗ ಎಲ್ಲದಕ್ಕೂ ವೇದಿಕ್ಕೆ ಸಜ್ಜಾಗಿದೆ. ‘ಯುವ’ ಬದುಕಿನ ವಸಂತ ಕಾಲ ಸನಿಹ ಆಗ್ತಿದೆ.

    ಮಾರ್ಚ್ ತಿಂಗಳಲ್ಲಿ ಯುವ ಸಿನಿಮಾದ ಬ್ಯಾಕ್ ಟು ಬ್ಯಾಕ್ ಇವೆಂಟ್‌ಗಳು ನಡೆಯಲಿವೆ. ಆ ತಿಂಗಳು ಪೂರ್ತಿ ಯುವ ಜಪ ನಡೆಯಲಿದೆ. ದೊಡ್ಮನೆ ಅಭಿಮಾನಿಗಳು ಯುವರಾಜ ಕುಮಾರನ ಸ್ವಾಗತಕ್ಕೆ ಅದ್ಧೂರಿ ತಯಾರಿ ನಡೆಸುತ್ತಿದ್ದಾರೆ. ಮಾರ್ಚ್ 17 ಅಪ್ಪು ಹುಟ್ಟುಹಬ್ಬದ ದಿನ ಚಿಕ್ಕಪ್ಪನಿಗೆ ಕೈ ಮುಗಿದು ಆಶೀರ್ವಾದ ಪಡೆದು ಮುಂದಿನ ಕೆಲಸಕ್ಕೆ ಯುವರಾಜ್ ಕುಮಾರ್ ಚಾಲನೆ ಕೊಡಲಿದ್ದಾರೆ. ಅಪ್ಪುಗೆ ತುಂಬು ಹೃದಯದ ಪ್ರೀತಿ ಕೊಡುವ ಹೊಸಪೇಟೆಯ ಜನರ ಮಧ್ಯೆ ಯುವ ಪ್ರೀ-ರಿಲೀಸ್ ಇವೆಂಟ್ ನಡೆಯಲಿದೆ.

     

    ಮಾರ್ಚ್ 16ರಂದು ಸಂಜೆ ಹೊಸಪೇಟೆಯಲ್ಲಿ ಹಬ್ಬದ ಸಡಗರ ಯುವ ಜಾತ್ರೆ ಜೋರಾಗಿ ಸಾಗಲಿದೆ. ನಂತರ ಮೂರು ಕಡೆ ಇವೆಂಟ್ ಆಯೋಜನೆ ಮಾಡಲಾಗಿದೆ. ಮಾರ್ಚ್ 28ರಂದು ಗುರುವಾರ ರಾಯರ ಕೃಪೆ ಕೇಳಿ ಯುವ, ಸಪ್ತಮಿ ಗೌಡ ನಟನೆಯ ‘ಯುವ’ ಸಿನಿಮಾ ರಿಲೀಸ್ ಮಾಡಲಿದೆ ಹೊಂಬಾಳೆ ಸಂಸ್ಥೆ (Hombale Films). ಮಾರ್ಚ್‌ನಿಂದ ಕನ್ನಡ ಚಿತ್ರರಂಗದಲ್ಲಿ ಯುವ ಅಧ್ಯಾಯ ಶುರುವಾಗಲಿದೆ. ಅಪ್ಪುನ ಪ್ರೀತಿಸಿದ ಜನ ಯುವ ಕೈ ಹಿಡಿದು ನಡೆಸ್ತಾರೆ ಅಪ್ಪು ಅಲ್ಲಿಂದಲೇ ಮಗನಿಗೆ ಹಾರೈಸ್ತಾರೆ.

  • ನಿರ್ಮಾಪಕನಿಲ್ಲದೇ ನಡೆಯದು ನಾಟಕ: ಉಮಾಪತಿ ಶ್ರೀನಿವಾಸ್ ಫೋಟೋ ಬಳಸಿದ್ದೇಕೆ?

    ನಿರ್ಮಾಪಕನಿಲ್ಲದೇ ನಡೆಯದು ನಾಟಕ: ಉಮಾಪತಿ ಶ್ರೀನಿವಾಸ್ ಫೋಟೋ ಬಳಸಿದ್ದೇಕೆ?

    ನಿನ್ನೆಯಷ್ಟೇ ನಿರ್ಮಾಪಕನಿಲ್ಲದೇ ನಡೆಯದು ನಮ್ಮ ನಾಟಕ ಹೆಸರಿನಲ್ಲಿ ಹಾಡೊಂದು ಬಿಡುಗಡೆ ಆಗಿದೆ. ಮಂಜು ಕವಿ (Manju Kavi) ಎನ್ನುವವರು ಸಾಹಿತ್ಯ ಬರೆದು, ಈ ಗೀತೆಯನ್ನು ತಮ್ಮದೇ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಿದ್ದಾರೆ. ಉಮಾಪತಿ (Umapati Srinivas Gowda) ಮತ್ತು ದರ್ಶನ್ (Darshan) ನಡುವಿನ ಗಲಾಟೆಯ ಕಾವಿನಲ್ಲೇ ಈ ಹಾಡಿ ರಿಲೀಸ್ ಆಗಿದ್ದರಿಂದ ಅದಕ್ಕೆ ನಾನಾ ಅರ್ಥಗಳನ್ನೂ ಕಲ್ಪಿಸಲಾಗುತ್ತಿದೆ.

    ನಿರ್ಮಾಪಕ ಉಮಾಪತಿ ಅವರಿಗೆ ‘ತಗಡು’ ಎಂದು ದರ್ಶನ್ ಹೇಳಿದ್ದರಿಂದ ಮತ್ತು ಉಮಾಪತಿ ಅವರು ಡಾ.ರಾಜ್ ಕುಮಾರ್ ಅವರ ವಿಡಿಯೋ ತುಣುಕೊಂದನ್ನು ಪೋಸ್ಟ್ ಮಾಡಿ ದರ್ಶನ್ ಗೆ ಟಾಂಗ್ ನೀಡಿದ್ದರಿಂದ ಈ ಹಾಡು ಮಹತ್ವ ಪಡೆದುಕೊಂಡಿದೆ. ಜೊತೆಗೆ ಹಾಡಿನಲ್ಲಿ ಮುಖ್ಯವಾಗಿ ಉಮಾಪತಿ ಅವರ ಫೋಟೋ ಬಳಸಲಾಗಿದೆ.

    ಈ ಕುರಿತಂತೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿರುವ ಮಂಜು ಕವಿ, ಇದು ಈಗ ಮಾಡಿರುವಂಥ ಹಾಡಲ್ಲ. ಮೂರು ತಿಂಗಳ ಹಿಂದೆಯೇ ಇದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಉಮಾಪತಿ ಅವರು ಆಗಲೇ ಈ ಹಾಡನ್ನು ಮೆಚ್ಚಿಕೊಂಡಿದ್ದರಿಂದ ಮತ್ತು ಅವರ ಸಹಾಯದಲ್ಲಿ ಇದು ಮೂಡಿ ಬಂದಿದ್ದರಿಂದ ಅವರ ಫೋಟೋ ಬಳಕೆ ಮಾಡಲಾಗಿದೆ ಎಂದಿದ್ದಾರೆ.

     

    ದರ್ಶನ್ ಹಾಗೂ ಉಮಾಪತಿ ಗಲಾಟೆಗಾಗಿ ಈ ಹಾಡು ರಚಿತವಾಗಿಲ್ಲ ಎನ್ನುವುದನ್ನು ಸ್ಪಷ್ಟ ಪಡಿಸಿದ್ದಾರೆ. ಅಲ್ಲದೇ, ಅನೇಕ ನಿರ್ಮಾಪಕರ ಫೋಟೋವನ್ನು ಬಳಸಲಾಗಿದೆ. ಹೀಗಾಗಿ ನಿರ್ಮಾಪಕರು ಇದಕ್ಕೆ ಏನು ಹೇಳುತ್ತಾರೆ ಎನ್ನುವುದೇ ಸದ್ಯಕ್ಕಿರುವ ಕುತೂಹಲ.