Tag: ಹಸ್ತಾಂತರ

  • ಮೇ 29ರ ಬದಲು ಜೂನ್ 4ಕ್ಕೆ ಕೊಡಗು ಸಂತ್ರಸ್ತರಿಗೆ ಮನೆ ಹಸ್ತಾಂತರ: ವಿ ಸೋಮಣ್ಣ

    ಮೇ 29ರ ಬದಲು ಜೂನ್ 4ಕ್ಕೆ ಕೊಡಗು ಸಂತ್ರಸ್ತರಿಗೆ ಮನೆ ಹಸ್ತಾಂತರ: ವಿ ಸೋಮಣ್ಣ

    ಮಡಿಕೇರಿ: 2018ರ ಪ್ರಕೃತಿ ವಿಕೋಪದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ನಿರ್ಮಾಣ ಮಾಡಿರುವ ಮನೆಗಳ ಹಸ್ತಾಂತರ ಕಾರ್ಯ ಮತ್ತೊಂದು ವಾರ ತಡವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ ಪ್ರತಿಕ್ರಿಯಿಸಿದ್ದಾರೆ.

    ಮಡಿಕೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ವಿ ಸೋಮಣ್ಣ, ಲಾಕ್‍ಡೌನ್ ಮುಂದುವರೆಯುವ ಬಗ್ಗೆ ಪ್ಲಾನ್ ಇರಲಿಲ್ಲ. ಹೀಗಾಗಿ ಮೇ 29ರಂದು ಸಂತ್ರಸ್ತರಿಗೆ ಮನೆ ಹಸ್ತಾಂತರಿಸಲು ನಿರ್ಧರಿಸಲಾಗಿತ್ತು. ಆದರೆ ಲಾಕ್‍ಡೌನ್ ಮೇ ಕೊನೆಯವರೆಗೆ ಇರುವುದರಿಂದ ಜೂನ್ 4ರಂದು ಮನೆ ಹಸ್ತಾಂತರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

    ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಮನೆ ಹಸ್ತಾಂತರ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು ಎಂದು ಸಂತ್ರಸ್ತರ ಒತ್ತಾಯ ಇದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪ್ರೋಟೋಕಾಲ್ ಪ್ರಕಾರ ಯಾರನ್ನೆಲ್ಲ ಕರೆಯಲು ಸಾಧ್ಯವಿದೆಯೋ ಅವರನ್ನು ಕರೆಯಲಾಗುವುದು ಅಷ್ಟೇ ಎಂದು ಹೇಳಿದರು. ಈ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಮನೆ ಹಸ್ತಾಂತರ ಕಾರ್ಯಕ್ರಮಕ್ಕೆ ಆಹ್ವಾನಿಸುವುದಿಲ್ಲ ಎಂದು ಪರೋಕ್ಷವಾಗಿ ತಿಳಿಸಿದರು.

    ಸಂತ್ರಸ್ತರಿಗೆ ನಿರ್ಮಾಣ ಮಾಡಿರುವ ಮನೆಗಳ ಕಾಮಗಾರಿ ಕಳಪೆ ಆಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸೋಮಣ್ಣ, ಸಾವಿರಾರು ಮನೆಗಳ ನಿರ್ಮಾಣ ಮಾಡುವಾಗ ಯಾವುದೋ ಒಂದು ಮನೆಯ ಕೆಲಸದಲ್ಲಿ ಚಿಕ್ಕಪುಟ್ಟ ವ್ಯತ್ಯಾಸ ಆಗಿರಬಹುದು. ಆದರೆ ಇದನ್ನೇ ಉದ್ದೇಶ ಪೂರ್ವಕವಾಗಿ ಸರ್ಕಾರದ ವಿರುದ್ಧ ಆರೋಪಿಸಲಾಗುತ್ತಿದೆ. ಒಂದು ವೇಳೆ ಹಾಗೇ ಕಳಪೆಯಾಗಿದ್ದಲ್ಲಿ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದರು.

  • ಶಿರೂರು ಪಟ್ಟದ ದೇವರು ಸೋದೆ ಮಠಕ್ಕೆ ಹಸ್ತಾಂತರ

    ಶಿರೂರು ಪಟ್ಟದ ದೇವರು ಸೋದೆ ಮಠಕ್ಕೆ ಹಸ್ತಾಂತರ

    ಉಡುಪಿ: ಪಟ್ಟದ ದೇವರಾದ ವಿಠ್ಠಲ ದೇವರ ವಿಗ್ರಹವನ್ನು ಇಂದು ಕೃಷ್ಣಮಠದಿಂದ ಶಿರೂರು ಮಠದ ದ್ವಂದ್ವ ಮಠವಾಗಿರುವ ಸೋದೆ ಮಠಕ್ಕೆ ಹಸ್ತಾಂತರ ಮಾಡಿದ್ದಾರೆ.

    ಉಡುಪಿಯ ಅಷ್ಟ ಮಠಗಳಲ್ಲೊಂದಾದ ಶಿರೂರು ಮಠಾಧೀಶ ಲಕ್ಷ್ಮೀವರ ತೀರ್ಥ ಶ್ರೀಪಾದರು ವೃಂದಾವನಸ್ಥರಾದ ಮೇಲೆ ಪಟ್ಟದ ದೇವರು ದ್ವಂದ್ವ ಮಠಕ್ಕೆ ಹಸ್ತಾಂತರ ಆಗಬೇಕು. ಈ ಹಿನ್ನೆಲೆಯಲ್ಲಿ ಅನ್ನವಿಠಲ ದೇವರನ್ನು ದ್ವಂದ್ವ ಮಠವಾದ ಸೋದೆ ವಿಶ್ವವಲ್ಲಭ ತೀರ್ಥ ಶ್ರೀಪಾದರ ಪಾಲಾಗಿದೆ.

    ನಾಲ್ಕು ತಿಂಗಳಿಂದ ಕೃಷ್ಣಮಠದಲ್ಲೇ ಪೂಜಿಸಲ್ಪಡುತ್ತಿದ್ದ ಶಿರೂರು ಮಠದ ಅನ್ನ ವಿಠಲ ದೇವರನ್ನು ಕೃಷ್ಣಮಠದಿಂದ ವಿಶ್ವವಲ್ಲಭ ತೀರ್ಥ ಶ್ರೀಗಳು ಪಡೆದು ಉತ್ತರ ಕನ್ನಡ ಜಿಲ್ಲೆಯ ಸೋದೆ ಮಠಕ್ಕೆ ಕೊಂಡೊಯ್ದು ಪೂಜೆ ಸಲ್ಲಿಸುತ್ತಿದ್ದಾರೆ.

    ಪರ್ಯಾಯ ಪಲಿಮಾರು ವಿದ್ಯಾಧೀಶ ಶ್ರೀಗಳು ಪಟ್ಟದ ದೇವರನ್ನು ಹಸ್ತಾಂತರ ಮಾಡಿದ್ದಾರೆ. ಶೀರೂರು ಮಠಕ್ಕೆ ನೂತನ ಉತ್ತರಾಧಿಕಾರಿ ನೇಮಕದ ತನಕ ಸೋದೆ ಶ್ರೀಗಳಿಂದ ಪಟ್ಟದ ದೇವರಿಗೆ ಪೂಜೆ ನಡೆಯಲಿದೆ. ಶಿರೂರು ಸಾವಿಗೂ ಮುನ್ನ ಪಟ್ಟದ ದೇವರ ಹಸ್ತಾಂತರ ವಿಚಾರಕ್ಕೆ ಭಾರೀ ವಿವಾದ ಏರ್ಪಟ್ಟಿತ್ತು. ಅನ್ನ ವಿಠಲ ದೇವರ ವಿಗ್ರಹಕ್ಕಾಗಿ ಪಟ್ಟು ಹಿಡಿದಿದ್ದ ಶಿರೂರು ಶ್ರೀಗಳು ಕೋರ್ಟ್ ಮೆಟ್ಟಿಲು ಸಹ ಏರಿದ್ದರು. ಆದರೆ ವಿವಾದದಲ್ಲಿರುವಾಗಲೇ ಶಿರೂರು ಶ್ರೀ ಸಾವನ್ನಪ್ಪಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಮಲ್ಯ ಹಸ್ತಾಂತರಿಸಲು ಭಾರತದ ಜೈಲುಗಳ ಸ್ಥಿತಿ-ಗತಿಗಳ ಬಗ್ಗೆ ವಿಡಿಯೋ ಕಳಿಸಿ: ಲಂಡನ್ ಕೋರ್ಟ್

    ಮಲ್ಯ ಹಸ್ತಾಂತರಿಸಲು ಭಾರತದ ಜೈಲುಗಳ ಸ್ಥಿತಿ-ಗತಿಗಳ ಬಗ್ಗೆ ವಿಡಿಯೋ ಕಳಿಸಿ: ಲಂಡನ್ ಕೋರ್ಟ್

    ನವದೆಹಲಿ: ಬ್ಯಾಂಕುಗಳಿಗೆ ಸಾವಿರಾರು ಕೋಟಿ ವಂಚನೆ ಮಾಡಿ ಲಂಡನ್‍ಗೆ ಪರಾರಿಯಾಗಿರುವ ಮದ್ಯದೊರೆ ವಿಜಯ್ ಮಲ್ಯನನ್ನು ಭಾರತಕ್ಕೆ ಹಸ್ತಾಂತರಿಸಲು ಲಂಡನ್ ಕೋರ್ಟ್ ದೇಶದಲ್ಲಿರುವ ಜೈಲುಗಳ ಸ್ಥಿತಿಗತಿಗಳ ಬಗ್ಗೆ ತಿಳಿಸುವಂತೆ ಸೂಚಿಸಿದೆ.

    ಕೋಟ್ಯಾಂತರ ರೂಪಾಯಿ ಸಾಲ ಮಾಡಿ ಭಾರತದಿಂದ ಲಂಡನ್ ಗೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಹಸ್ತಾಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಲಂಡನ್‍ನ ವೆಸ್ಟ್ ಮಿನಿಸ್ಟರ್ ನ್ಯಾಯಾಲಯದಲ್ಲಿ ವಿಚಾರಣೆ ಕೈಗೆತ್ತಿಕೊಂಡಿದೆ.

    ಭಾರತಕ್ಕೆ ಹಸ್ತಾಂತರಿಸುವ ಕುರಿತು ವಿಜಯ್ ಮಲ್ಯ ಪರ ವಕೀಲರು, ಭಾರತದಲ್ಲಿನ ಜೈಲುಗಳಲ್ಲಿ ಸರಿಯಾದ ಗಾಳಿ-ಬೆಳಕು ಇಲ್ಲ. ಹೀಗಾಗಿ ಹಸ್ತಾಂತರ ಮಾಡಲು ಅನುಮತಿ ನೀಡಬಾರದು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡರು.

    ಈ ವಾದವನ್ನು ಪುರಸ್ಕರಿಸಿದ ನ್ಯಾಯಾಧೀಶರು, ವ್ಯಕ್ತಿಯೊಬ್ಬ ಜೈಲಿನೊಳಗೆ ನಡೆದುಕೊಂಡು ಹೋಗುತ್ತಿರುವ ವಿಡಿಯೋವನ್ನು ಚಿತ್ರಿಸಿ ಕಳುಹಿಸಿ. ಅದು ಮಧ್ಯಾಹ್ನದ ಹೊತ್ತಿನಲ್ಲಿ ಸೂರ್ಯನ ಬೆಳಕು ಜೈಲಿನಲ್ಲಿ ಅಗಾಧವಾಗಿ ಪ್ರವೇಶಿಸುವಂತಿರಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಿದರು.

    ಭಾರತ ಸರ್ಕಾರದ ಪರ ವಾದಿಸಿದ ವಕೀಲ ಮಾರ್ಕ್ ಸಮ್ಮರ್, ಮಾನವ ಹಕ್ಕು ಆಯೋಗ ನಿಗದಿಪಡಿಸಿದ ಮಾನದಂಡದ ಆಧಾರದಲ್ಲಿ ಜೈಲುಗಳನ್ನು ನಿರ್ಮಿಸಲಾಗಿದೆ. ವಿಜಯ್ ಮಲ್ಯ ಕೂಡಿ ಹಾಕುವ ಬ್ಯಾರಕ್ ನಲ್ಲಿ ಶುದ್ಧವಾದ ಗಾಳಿ ಬೆಳಕು ಇರಲಿದೆ. ಅಷ್ಟೇ ಅಲ್ಲದೇ ಪಾಶ್ಚಿಮಾತ್ಯ ಶೈಲಿಯ ಶೌಚಾಲಯ, ಶುಭ್ರವಾದ ಬೆಡ್ ನೀಡಲಾಗುವುದು ಎಂದು ತಿಳಿಸಿದರು.

    ಮುಂಬೈನ ಆರ್ಥರ್ ರೋಡ್ ಜೈಲಿನ ವಿಡಿಯೋಗಳನ್ನು ಸಲ್ಲಿಸುವಂತೆ ತಿಳಿಸಿದ್ದು, ಮುಂದಿನ ವಿಚಾರಣೆಯಲ್ಲಿ ಸೆಪ್ಟೆಂಬರ್ 12ಕ್ಕೆ ಮುಂದೂಡಿದೆ. ಈ ಹಿನ್ನೆಲೆಯಲ್ಲಿ ಮದ್ಯದೊರೆ ಮಲ್ಯಗೆ 6 ವಾರಗಳ ಸಮಯ ಬಿಗ್ ರಿಲೀಫ್ ಸಿಕ್ಕಿದೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಯ ಪರ ವಾದಿಸುತ್ತಿರುವ ವಕೀಲರ ತಂಡ ಮುಂಬೈ ಅರ್ಥರ್ ರೋಡ್ ಜೈಲಿನ ಫೋಟೋಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. ಮ್ಯಾಜಿಸ್ಟ್ರೇಟ್ ಕೋರ್ಟ್ ಭಾರತ ಸರ್ಕಾರ ಪರ ಆದೇಶ ನೀಡಿದರೆ, ವಿಜಯ ಮಲ್ಯ ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶವಿದೆ.

  • ದಾಖಲೆಯ ಪರ್ಯಾಯ ಮುಗಿಸುತ್ತಿರೋ ಪೇಜಾವರಶ್ರೀ- ಇಂದು ಕೃಷ್ಣನಿಗೆ ಕೊನೆಯ ಪೂಜೆ

    ದಾಖಲೆಯ ಪರ್ಯಾಯ ಮುಗಿಸುತ್ತಿರೋ ಪೇಜಾವರಶ್ರೀ- ಇಂದು ಕೃಷ್ಣನಿಗೆ ಕೊನೆಯ ಪೂಜೆ

    ಉಡುಪಿ: ದಾಖಲೆಯ ಪಂಚಮ ಪರ್ಯಾಯ ಮಹೋತ್ಸವದ ಸಂಭ್ರಮ ಶುರುವಾಗಿದ್ದು, ಪೇಜಾವರಶ್ರೀಗಳು ದಾಖಲೆಯ ಪರ್ಯಾಯವನ್ನು ಮುಗಿಸುತ್ತಿದ್ದಾರೆ.

    ಪೇಜಾವರ ಶ್ರೀಗಳು ಜನವರಿ 18ರಂದು ಪರ್ಯಾಯ ಪೀಠಾವರೋಹಣ ಮಾಡಲಿದ್ದಾರೆ. ಎರಡು ವರ್ಷಗಳ ಕಾಲ ಕಡೆಗೋಲು ಶ್ರೀಕೃಷ್ಣನ ಪೂಜೆ ಮಾಡಿದ್ದ ಪೇಜಾವರಶ್ರೀಗಳ ಪೂಜಾಧಿಕಾರ ಮುಗಿದಿದ್ದು, ಐತಿಹಾಸಿಕ ಐದು ಪರ್ಯಾಯಗಳನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಶ್ರೀಕೃಷ್ಣನ ಪೂಜಾಧಿಕಾರ ಪೇಜಾವರ ಮಠದಿಂದ ಪಲಿಮಾರು ಮಠಕ್ಕೆ ಹಸ್ತಾಂತರವಾಗಲಿದೆ.

    ಪೇಜಾವರ ವಿಶ್ವೇಶತೀರ್ಥ ಶ್ರೀಪಾದರು ಕಡೆಗೋಲು ಶ್ರೀಕೃಷ್ಣನಿಗೆ ತನ್ನ ಅಧಿಕಾರಾವಧಿಯ ಕೊನೆಯ ಎರಡು ಪೂಜೆಗಳನ್ನು ಇಂದು ಮಾಡಲಿದ್ದಾರೆ. ನಾಳೆಯಿಂದ ಉಡುಪಿ ಕೃಷ್ಣನಿಗೆ ಪೂಜೆ ಮಾಡುವ ಅಧಿಕಾರ ಪಲಿಮಾರು ಮಠಾಧೀಶ ವಿದ್ಯಾಧೀಶ ಸ್ವಾಮೀಜಿಯ ಪಾಲಾಗಲಿದೆ.

    ಜನವರಿ 17ರ ಮಧ್ಯರಾತ್ರಿ 3 ಗಂಟೆಯಿಂದ ಬೆಳಗ್ಗಿನ ಜಾವ 7 ಗಂಟೆಯವರೆಗೆ ಧಾರ್ಮಿಕ ವಿಧಿವಿಧಾನಗಳು ನಡೆಯಲಿದೆ. ಈ ಸಂದರ್ಭದಲ್ಲಿ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿಯವರು ವಿದ್ಯಾಧೀಶ ಸ್ವಾಮೀಜಿಯವರಿಗೆ ಪೂಜಾಧಿಕಾರ ಮತ್ತು ಕೃಷ್ಣಮಠದ ಎಲ್ಲಾ ಅಧಿಕಾರಗಳನ್ನು ಹಸ್ತಾಂತರ ಮಾಡಲಿದ್ದಾರೆ. ಹೀಗಾಗಿ ಪಲಿಮಾರು ಶ್ರೀಗಳ ಪರ್ಯಾಯಕ್ಕೆ ನಮ್ಮ ಸಂಪೂರ್ಣ ಸಹಕಾರವಿದೆ ಪಲಿಮಾರು ಪರ್ಯಾಯ ಚೆನ್ನಾಗಿ ನಡೆಯಲಿ ಎಂದು ವಿಶ್ವೇಶತೀರ್ಥ ಶ್ರೀಗಳು ಆಶೀರ್ವಾದ ಮಾಡಿದ್ದಾರೆ. ಮುಂದಿನ ಪರ್ಯಾಯ ಸ್ವಾಮೀಜಿಗೆ ಹಿರಿಯ ಯತಿಗಳು ಶುಭಕೋರಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ವಿಶ್ವೇಶತೀರ್ಥ ಸ್ವಾಮೀಜಿ, ನನ್ನ ಪರ್ಯಾಯ ನನಗೆ ಸಂತೃಪ್ತಿ ತಂದಿಲ್ಲ. ಸಂತೋಷವಿದೆ. ಹಲವಾರು ಸಾಮಾಜಿಕ ಕಾರ್ಯಗಳನ್ನುಮಾಡಿದ್ದ ಖುಷಿಯಿದೆ. ವಿರೋಧಗಳು ಬಂತು, ಚರ್ಚೆಗಳು ಆಗಿದೆ. ಹೀಗಾದಾಗ ಮಾತ್ರ ಸಮಾಜದ ಬದಲಾವಣೆ ಸಾಧ್ಯ ಎಂದು ಸ್ವಾಮೀಜಿ ಹೇಳಿದರು. ಪಲಿಮಾರು ಮಠಾಧೀಶ ವಿದ್ಯಾಧೀಶ ಸ್ವಾಮೀಜಿಯ ವೈಭವದ ಪುರಪ್ರವೇಶ ನಡೆದಿದೆ. ನಗರದ ಪ್ರಮುಖ ಬೀದಿಗಳಲ್ಲಿ ಸ್ವಾಮೀಜಿಯವರನ್ನು ವಿಶೇಷ ಟ್ಯಾಬ್ಲೋದ ಮೂಲಕ ಮೆರವಣಿಗೆ ಮಾಡಿ ಉಡುಪಿ ಪುರದೊಳಗೆ ಕರೆದುಕೊಂಡು ಬರಲಾಗಿದೆ. ಮುಂದಿನ ಪರ್ಯಾಯ ಚೆನ್ನಾಗಿ ನಡೆಯುತ್ತದೆ ಎಂದು ಶುಭ ಹಾರೈಸಿದರು.

    ಪರ್ಯಾಯ ಕಾರ್ಯಕ್ರಮಕ್ಕೆ ಬೇಕಾದ ಎಲ್ಲಾ ಹೊರೆ ಕಾಣಿಕೆಗಳು ಬಂದಿದೆ. ಧಾರ್ಮಿಕ ವಿಧಿವಿಧಾನಗಳು ರಾತ್ರಿ ಆರಂಭವಾಗಲಿದ್ದು ಜನವರಿ 18ರ ಬೆಳಗ್ಗಿನ ಜಾವ ಆರು ಗಂಟೆಗೆ ಅನ್ನದ ಸಟ್ಟುಗ ಮತ್ತು ಅಕ್ಷಯ ಪಾತ್ರೆಯನ್ನು ಪೇಜಾವರ ಸ್ವಾಮೀಜಿ ಹಸ್ತಾಂತರ ಮಾಡುತ್ತಾರೆ. ಈ ಮೂಲಕ ಎರಡು ವರ್ಷದ ಪರ್ಯಾಯ ಮುಗಿಸಲಿದ್ದಾರೆ. ಪಲಿಮಾರು ಸ್ವಾಮೀಜಿ ತಮ್ಮ ಸನ್ಯಾಸ ಜೀವನದ ಎರಡನೇ ಪರ್ಯಾಯ ಆರಂಭ ಮಾಡಲಿದ್ದಾರೆ.

    ಒಂದು ಬಾರಿ ಪರ್ಯಾಯ ಪೂಜಾಧಿಕಾರ ಸಿಕ್ಕರೆ ಮತ್ತೆ ಆ ಮಠಕ್ಕೆ ಕೃಷ್ಣನ ಪೂಜಾಧಿಕಾರ ಸಿಗೋದು 14 ವರ್ಷದ ನಂತರ. ಕೃಷ್ಣಮಠಕ್ಕೆ ಸಂಬಂಧಪಟ್ಟ ಒಟ್ಟು 8 ಮಠಗಳಿದ್ದು, ಪಲಿಮಾರು ಮಠ ತನ್ನ ಪರ್ಯಾಯವನ್ನು ಜನವರಿ 18 2018 ರಿಂದ 2020ರವರೆಗೆ ನಡೆಸಲಿದೆ. ಪೇಜಾವರಶ್ರೀಗಳಿಗೆ 8ನೇ ವಯಸ್ಸಿನಲ್ಲಿ ಸನ್ಯಾಸತ್ವ ಪಡೆದುದ್ದರಿಂದ ಈವರೆಗಿನ ಎಲ್ಲಾ ಸ್ವಾಮೀಜಿಗಳ ದಾಖಲೆಯನ್ನು ಸರಿಗಟ್ಟಿದ್ದಾರೆ. ಮತ್ಯಾರೂ ಮಾಡಲು ಅಸಾಧ್ಯವಾದ ದಾಖಲೆಯನ್ನು ತನ್ನ ಹೆಸರಿನಲ್ಲೇ ಉಳಿಸಿಕೊಂಡಿದ್ದಾರೆ.