ಮಡಿಕೇರಿ: ಅಕ್ರಮವಾಗಿ ಗೋವುಗಳನ್ನು (Cows) ಸಾಗಿಸುತ್ತಿದ್ದ ಗೂಡ್ಸ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿರುವ ಘಟನೆ ಕೊಡಗು (Kodagu) ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ರಸ್ತೆಯಲ್ಲಿನ ಕಾಗಡಿಕಟ್ಟೆ ಬಳಿ ಇಂದು ಬೆಳಗ್ಗಿನ ಜಾವ 2:30 ಗಂಟೆ ಸುಮಾರಿಗೆ ನಡೆದಿದೆ.
ಅಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನ ಸಂಖ್ಯೆ KA13-B 3078ರಲ್ಲಿ ಗೋವುಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಅಪಘಾತದಲ್ಲಿ ಮೂರು ಗೋವುಗಳು ಗಾಯಗೊಂಡಿವೆ. ಘಟನೆಯಲ್ಲಿ ಗಾಯಗೊಂಡಿದ್ದ ಇಬ್ಬರು ಆರೋಪಿಗಳನ್ನು ತಡರಾತ್ರಿಯೇ ಬೆರೆಡೆಗೆ ಸಾಗಿಸಲಾಗಿದೆ. ಆರೋಪಿಕಡೆಯವರು ಇನ್ನೋವಾ ಕಾರಿನಲ್ಲಿ ಬೇರೆಡೆಗೆ ಸಾಗಿಸಿದ್ದಾರೆ.
ಅಪಘಾತದ (Accident) ಬಳಿಕ ಕೊಡಗಿನಲ್ಲಿ ಗೋವುಗಳ ಅಕ್ರಮ ಸಾಗಾಟ ಹಾಗೂ ಹಾಗೂ ಗೋಹತ್ಯೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಪೊಲೀಸರು ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದಾರೆ.
ಹಿಂದೂ ಜಾಗರಣ ವೇದಿಕೆ ಎಚ್ಚರಿಕೆ
ಘಟನೆ ಬಳಿಕ, ತಪ್ಪಿತಸ್ಥರ ವಿರುದ್ಧ ಪೊಲೀಸ್ ಇಲಾಖೆ ಯಾವುದೇ ರಾಜಕೀಯ ಒತ್ತಡಗಳಿಗೆ ಮಣಿಯದೇ ಕ್ರಮ ಕೈಗೊಳ್ಳಬೇಕು. ಇಲ್ಲಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಹಿಂದು ಜಾಗರಣ ವೇದಿಕೆ ಮುಖಂಡ ಬೋಜೆಗೌಡ ಎಚ್ಚರಿಸಿದ್ದಾರೆ.
ಕಾರವಾರ: ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂರ್ಟ್‌ನಿಂದ ಕೊಟ್ಟಿಗೆಯಲ್ಲಿದ್ದ 7 ಹೋರಿಗಳ ಸಜೀವ ದಹನವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹೇಮಗಾರದಲ್ಲಿ ನಡೆದಿದೆ.
ಹೇಮಗಾರದ ಮಹೇಶ್ ಹೆಗಡೆ ಎಂಬವರ ಮನೆಯಲ್ಲಿ ನಿನ್ನೆ ತಡರಾತ್ರಿ ಘಟನೆ ನಡೆದಿದ್ದು, ಇಂದು ಸಂಜೆ ವೇಳೆಯಲ್ಲಿ ಘಟನೆ ಬೆಳಕಿಗೆ ಬಂದಿದೆ.
ಮನೆಯಲ್ಲಿದ್ದ ವೈರ್‌ಗೆ ಶಾರ್ಟ್ ಸರ್ಕ್ಯೂರ್ಟ್‌ನಿಂದಾಗಿ ಕಿಡಿ ಹೊತ್ತಿದ್ದು, ಕೊಟ್ಟಿಗೆಯ ಅಟ್ಟದ ಮೇಲಿರುವ ಹುಲ್ಲಿಗೆ ಈ ಕಿಡಿ ತಾಗಿ ಬೆಂಕಿ ಹತ್ತಿದೆ. ಹುಲ್ಲಿಗೆ ಬಿದ್ದ ಬೆಂಕಿ ಆವರಿಸಿ ಕೊಟ್ಟಿಗೆಯಲ್ಲಿದ್ದ 7 ಹೋರಿಗಳು ಸಜೀವ ದಹನವಾಗಿದೆ. ಘಟನೆ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಕರ ಸಂಕ್ರಾಂತಿ (Makar Sankranti) ಎಂದೊಡನೆ ಥಟ್ಟನೆ ನೆನಪಾಗುವುದು ಹಸುಗಳಿಗೆ ಕಿಚ್ಚು ಹಾಯಿಸುವುದು. ಹಳೆ ಮೈಸೂರು ಭಾಗದಲ್ಲಿ ಈ ಪದ್ಧತಿ ಹೆಚ್ಚು ಜನಜನಿತ. ಮಾಗಿಯ ಚಳಿಯಲ್ಲಿ ಮುಂಜಾನೆಯೇ ಎದ್ದು ಹಸು-ಕುರಿ-ಮೇಕೆಗಳನ್ನು ಜನರು ಕಾಲುವೆ, ಕರೆ-ಕಟ್ಟೆ, ಅಥವಾ ನದಿಗಳ ಕಡೆಗೆ ಅಟ್ಟಿಕೊಂಡು ಹೋಗುತ್ತಾರೆ. ಅಲ್ಲಿ ಅವುಗಳ ಮೈ ಉಜ್ಜಿ ಚೆನ್ನಾಗಿ ಸ್ನಾನ ಮಾಡಿಸಿ ಮನೆಗೆ ತಂದು ಕಟ್ಟುತ್ತಾರೆ. ಬಣ್ಣಗಳಿಂದ ರಾಸುಗಳ ಮೈ-ಕೊಂಬುಗಳಲ್ಲಿ ಚಿತ್ತಾರ ಮೂಡಿಸುತ್ತಾರೆ. ಕೊಂಬುಗಳಿಗೆ ಬಲೂನು ಕಟ್ಟಿ ಸಿಂಗರಿಸುತ್ತಾರೆ. ಕೊನೆಗೆ ಹಸುಗಳನ್ನು ಕಿಚ್ಚು ಹಾಯಿಸುವುದಕ್ಕೆ ಅಣಿಗೊಳಿಸುತ್ತಾರೆ.
ಇತ್ತ ಹೆಂಗಸರು ಮನೆಗಳನ್ನು ಸ್ವಚ್ಛಗೊಳಿಸಿ ದೇವರ ಕೋಣೆಗಳನ್ನು ಅಲಂಕರಿಸುತ್ತಾರೆ. ಹೊಸ ಬಟ್ಟೆ ಧರಿಸಿ ಪೂಜೆಗೆ ಸಿದ್ಧತೆ ಮಾಡಿಕೊಳ್ಳುತ್ತಾರೆ. ಜೊತೆಗೆ ಬಗೆಬಗೆಯ ವಿಶೇಷ ಭಕ್ಷ್ಯಗಳನ್ನು ಸಿದ್ಧಪಡಿಸುತ್ತಾರೆ. ಮನೆಯ ಮಕ್ಕಳು ಸಹ ಉತ್ಸಾಹದಿಂದ ಸಿದ್ಧತೆ ಕಾರ್ಯಗಳಲ್ಲಿ ಭಾಗವಹಿಸುತ್ತಾರೆ. ಇದನ್ನೂ ಓದಿ: ಇಂದಿನಿಂದ ಉತ್ತರಾಯಣ ಆರಂಭ – ಶುಭ ಕಾರ್ಯಕ್ಕೆ ಮಂಗಳಕರ ಅವಧಿ ಯಾಕೆ?
ಸಂಜೆಯಾಗುತ್ತಿದ್ದಂತೆ ಹಳ್ಳಿಗಳಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿರುತ್ತದೆ. ಊರಿನ ಸಿಂಗರಿಸಿದ ಹಸುಗಳನ್ನು ಒಂದು ಕಡೆ ಕಿಚ್ಚು ಹಾಯಿಸಲು ಕರೆತರಲಾಗುತ್ತದೆ. ನೆಲಕ್ಕೆ ಹುಲ್ಲನ್ನು ಹಾಕಿ ಬೆಂಕಿ ಹಚ್ಚಿ, ಹಸುಗಳಿಗೆ ಕಿಚ್ಚು ಹಾಯಿಸಲಾಗುತ್ತದೆ. ಬೆಚ್ಚುವ ಹಸುಗಳನ್ನು ಹುರಿದುಂಬಿಸುತ್ತಾ ಬೆಂಕಿಯಿಂದ ಜಿಗಿಸುವ ದೃಶ್ಯ ರಂಜನೀಯವಾಗಿರುತ್ತದೆ. ಆ ದೃಶ್ಯವನ್ನು ಕಣ್ತುಂಬಿಕೊಂಡು ಆನಂದಿಸಲು ಇಡೀ ಊರಿಗೆ ಊರೇ ನೆರೆದಿರುತ್ತದೆ.
ಚಳಿಗಾಲ ಎಂದರೆ ಸೋಂಕು, ಕಾಯಿಲೆಗಳ ಕಾಲ. ಹಿಂದೆಲ್ಲ ಹಸುಗಳೇ ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಿದ್ದವು. ಹಬ್ಬದ ಸಂದರ್ಭದಲ್ಲಿ ಅವುಗಳನ್ನು ಚೆನ್ನಾಗಿ ತೊಳೆದು ಮೈ ತುಂಬೆಲ್ಲಾ ಅರಿಸಿನ ಹಚ್ಚುವುದರಿಂದ, ಸೋಂಕಿಗೆ ತುತ್ತಾಗುವುದನ್ನು ತಡೆಯಬಹುದು. ಕಿಚ್ಚು ಹಾಯುವಾಗ ಹಸುಗಳ ಮೈಗೆ ಬೆಂಕಿಯ ಹವೆ ತಾಕಿ ಕ್ರಿಮಿಗಳು ನಾಶವಾಗುತ್ತವೆ. ಕಿಚ್ಚು ಹಾಯುವುದರಿಂದ ಚಳಿಯಲ್ಲಿ ಹಸುಗಳಿಗೆ ಬೆಚ್ಚನೆಯ ಅನುಭವವಾಗಿ ಮೈಕೊಡವಿ ನಿಲ್ಲಲು ಸಾಧ್ಯವಾಗುತ್ತದೆ. ಇದನ್ನೂ ಓದಿ: ಬೇರೆ ಬೇರೆ ರಾಜ್ಯಗಳಲ್ಲಿ ಸಂಕ್ರಾಂತಿ ಆಚರಣೆ ಹೇಗೆ?
ಹಸುಗಳಿಗೆ ಕಿಚ್ಚು ಹಾಯಿಸಿದ ಬಳಿಕ ಬೆಂಕಿಯಿಂದಾದ ಬೂದಿಯನ್ನು ತೆಗೆದುಕೊಂಡು ಜನರು ಭಕ್ತಿ-ಭಾವದಿಂದ ಹಣೆಗೆ ತಿಲಕ ಇಟ್ಟುಕೊಳ್ಳುತ್ತಾರೆ. ಕಿಚ್ಚು ಹಾಯ್ದ ಗೋವುಗಳನ್ನು ಮನೆಗೆ ಕರೆತಂದು ಅವುಗಳ ಕಾಲು ತೊಳೆದು ಹೆಂಗಳೆಯರು ಗೋಪೂಜೆ ಮಾಡುತ್ತಾರೆ. ಮನೆಯಲ್ಲಿ ತಯಾರಿಸಿದ ಭಕ್ಷ್ಯ ಮತ್ತು ಬಾಳೆ ಹಣ್ಣನ್ನು ಮೊದಲು ಗೋವಿಗೆ ತಿನ್ನಿಸುತ್ತಾರೆ. ಗೋವು ತಿಂದು ಉಳಿಸಿದ್ದನ್ನು ಪ್ರಸಾದವೆಂದು ಭಕ್ತಿಯಿಂದ ಮನೆಮಂದಿ ಸೇವಿಸುತ್ತಾರೆ. ಕೊನೆಗೆ ಮನೆಯಲ್ಲಿ ಎಲ್ಲರೂ ಒಟ್ಟಿಗೆ ಕುಳಿತು ಹಬ್ಬದೂಟ ಸವಿದು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿ ಆನಂದಿಸುತ್ತಾರೆ.
ಎಳ್ಳು-ಬೆಲ್ಲ: ಸಂಕ್ರಾಂತಿಯ ಸಾಂಪ್ರದಾಯಿಕ ತಿನಿಸು ಇದು. ‘ಎಳ್ಳು-ಬೆಲ್ಲ ತಿಂದು ಒಳ್ಳೆ ಮಾತಾಡು’ ಅಂತಾರೆ. ಚಳಿಗಾಲದಲ್ಲಿ ಮನುಷ್ಯನ ದೇಹದಲ್ಲಿ ನೀರಿನಾಂಶ ಕಡಿಮೆಯಾಗಿ ಮೈ ಚರ್ಮ ಒಡೆಯುತ್ತದೆ. ಇಂತಹ ಸಂದರ್ಭದಲ್ಲಿ ಎಣ್ಣೆ ಅಂಶವಿರುವ ಪದಾರ್ಥ ಸೇವನೆ ದೇಹಕ್ಕೆ ತುಂಬಾ ಸಹಕಾರಿ. ಈ ಹಿನ್ನೆಲೆಯಲ್ಲಿ ಎಳ್ಳು ದೇಹಕ್ಕೆ ಅಗತ್ಯ ಎಣ್ಣೆಯಂಶವನ್ನು ನೀಡುತ್ತದೆ. ಇದನ್ನೂ ಓದಿ: ಮಕರ ಸಂಕ್ರಾಂತಿಗೆ ಮನೆಯಲ್ಲೇ ತಯಾರಿಸಿ ಎಳ್ಳು-ಬೆಲ್ಲ
ಕಿಚಡಿ-ಕಾಯಾಲು ಭಕ್ಷ್ಯದ ಗಮ್ಮತ್ತು: ಸಂಕ್ರಾಂತಿ ಹಬ್ಬದಂದು ಹೆಚ್ಚು ಪ್ರಚಲಿತದಲ್ಲಿರುವ ಭಕ್ಷ್ಯವೆಂದರೆ ಅದು ಕಿಚಡಿ-ಕಾಯಾಲು. ಅರಿಸಿನ, ಮೆಣಸು, ಜೀರಿಗೆ ಬಳಸಿ ಕಿಚಡಿ ತಯಾರಿಸಲಾಗುತ್ತದೆ. ಅದಕ್ಕೆ ಹೊಂದುವ ಸಿಹಿಯಾದ ಕಾಯಾಲನ್ನು ತೆಂಗಿನಕಾಯಿ, ಬೆಲ್ಲ ಬಳಸಿ ಮಾಡಲಾಗುತ್ತದೆ. ಚಳಿಗಾಲದಲ್ಲಿ ಈ ಭಕ್ಷ್ಯವು ರೋಗನಿರೋಧಕ ಶಕ್ತಿಯನ್ನು ಒದಗಿಸುತ್ತದೆ. ಅರಿಸಿನ ಮತ್ತು ಮೆಣಸು ಮನುಷ್ಯನ ಆರೋಗ್ಯಕ್ಕೆ ಉಪಯುಕ್ತವಾದ ಪದಾರ್ಥಗಳು.
ಧಾರವಾಡ: ಮುಸ್ಲಿಮರ ಪವಿತ್ರ ಹಬ್ಬಗಳಲ್ಲಿ ಒಂದಾದ ಬಕ್ರೀದ್ ಹಬ್ಬ ಸಮೀಪಿಸುತ್ತಿದ್ದು, ಪ್ರಾಣಿಯನ್ನು ಕೊಯ್ದು ಮಾಂಸ ವಿತರಿಸುವ ಕುರ್ಬಾನಿ ನಡೆಸಲು ಸಿದ್ಧತೆ ಎಲ್ಲೆಡೆ ನಡೆದಿದೆ. ಬಕ್ರೀದ್ ಹಬ್ಬದ (Bakrid Festival) ದಿನ ಸೇರಿದಂತೆ ಮೂರು ದಿನಗಳಲ್ಲಿ ಆಡು, ಟಗರು ಮೊದಲಾದ ಪ್ರಾಣಿಗಳನ್ನು ಕೊಂದು ಮಾಂಸ ಮಾಡಿ, ಸಂಬಂಧಿಕರು, ನೆರೆಹೊರೆಯವರು, ಬಡವರಿಗೆ ಹಂಚುವುದು ಸಂಪ್ರದಾಯ. ಇದಕ್ಕಾಗಿಯೇ ಕೆಲ ವ್ಯಾಪಾರಿಗಳು ಹೊರ ರಾಜ್ಯಗಳಿಂದಲೂ ಪ್ರಾಣಿಗಳನ್ನ ತಂದು ದುಬಾರಿ ಬೆಲೆಗೆ ಮಾರಾಟ ಮಾಡುತ್ತಾರೆ.
ಈ ಬಾರಿ ಬಕ್ರೀದ್ ಹಬ್ಬದಂದು ರಾಜ್ಯದಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆ-2020 ಹಾಗೂ ಕರ್ನಾಟಕ ಪ್ರಾಣಿ ಬಲಿ ನಿಷೇಧ-1959 ಕಾಯ್ದೆ ಅಡಿಯಲ್ಲಿ ಪ್ರಾಣಿ ಬಲಿಯನ್ನು ನಿಷೇಧಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ (VHP) ಮತ್ತು ಬಜರಂಗದಳದ (Bajarangadala) ಕಾರ್ಯಕರ್ತರು ಧಾರವಾಡ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್: ತಪ್ಪಿತಸ್ಥರಿಗೆ ಶಿಕ್ಷೆಯಾಗೋವರೆಗೂ ಪ್ರಾಮಾಣಿಕ ತನಿಖೆ ನಡೆಸಬೇಕು: ಬೊಮ್ಮಾಯಿ
ಯಾವುದೇ ಗೋವುಗಳ (Cows) ಕುರ್ಬಾನಿ ಮಾಡುವುದನ್ನು ನಿಷೇಧಿಸಬೇಕು, ಇತರೇ ಪ್ರಾಣಿಗಳ ಬಲಿಯನ್ನು ನಿಲ್ಲಿಸಬೇಕು ಹಾಗೂ ಅಕ್ರಮ ಗೋವುಗಳ ಸಾಗಾಟ ಆಗದಂತೆ ಕ್ರಮ ಕೈಗೊಳ್ಳಬೇಕು. ಜೊತೆಗೆ ಗೋವು ಸಾಕಾಣಿಕೆ ಮಾಡುವವರ ಮನೆಗಳಿಂದ, ಬೀದಿಗಳಿಂದ, ಗುಡ್ಡಗಳಿಂದ ಗೋವುಗಳ ಕಳ್ಳತನವಾಗದಂತೆ ನೋಡಿಕೊಳ್ಳಬೇಕು ಎಂದು ಬಜರಂಗದಳದ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಪೊಲೀಸರು ಅಹೋರಾತ್ರಿ ಗಸ್ತು ಹಾಗೂ ಅಗತ್ಯ ಇರುವ ಕಡೆ ನಾಕಾಬಂದಿ ಹಾಕಬೇಕು. ಜೂನ್ 18ರ ತನಕ ಯಾರೂ ಸಹ ಖಾಲಿ ಜಾಗದಲ್ಲಿ ಅಥವಾ ಮನೆಯ ಅಂಗಳದಲ್ಲಿ ಗೋವಂಶವನ್ನು ತಂದು ಕಟ್ಟಿ ಹಾಕಿ ಶೇಖರಿಸದಂತೆ ಎಚ್ಚರಿಕೆ ವಹಿಸಬೇಕು. ಯಾರಾದರೂ ಗೋ ವಧೆ ಮಾಡಿದ್ದು ಕಂಡುಬಂದಲ್ಲಿ ಅವರ ಮೇಲೆ ಗೋ ಹತ್ಯೆ ನಿಷೇಧ ಕಾಯ್ದೆ-2020ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದಿಂದ ಮಾಂಜ್ರಾನದಿಗೆ ಅಪಾರ ಪ್ರಮಾಣದ ನೀರು ಬಿಡುಗಡೆ; ಬೀದರ್ ರೈತರ ಜಮೀನುಗಳಿಗೆ ನುಗ್ಗಿದ ನೀರು
ಮಡಿಕೇರಿ: ದಕ್ಷಿಣ ಕೊಡಗಿನಲ್ಲಿ ಜಾನುವಾರುಗಳ ಮೇಲೆ ನಿರಂತರವಾಗಿ ಹುಲಿ ದಾಳಿ ನಡೆಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅರಣ್ಯ ಇಲಾಖೆಯ ವಿರುದ್ಧ ರೈತರು ಸಿಡಿದೆದ್ದಿದ್ದಾರೆ.
ಇತ್ತೀಚಿಗಷ್ಟೆ ಜಿಲ್ಲೆಯ ಪೋನ್ನಂಪೇಟೆ ತಾಲೂಕಿನ ಕುಂದ ಹಾಗೂ ಈಚೂರು ಗ್ರಾಮದ ಸುತ್ತಮುತ್ತಲಿನ ಪ್ರದೇಶದ ಗ್ರಾಮದಲ್ಲಿ ರೈತರಿಗೆ ಸೇರಿದ ಹಸುಗಳ ಮೇಲೆ ಹುಲಿ ದಾಳಿ ನಡೆಸಿ, ಜಾನುವಾರುಗಳನ್ನು ಕೊಂದು ಹಾಕುತ್ತಿದೆ. ಗ್ರಾಮದ ಮನೆಯ ಸಮೀಪದ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುಗಳು ಹುಲಿ ದಾಳಿಗೆ ಬಲಿಯಾಗುತ್ತಿವೆ. ಇದನ್ನೂ ಓದಿ: ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾಗೆ ಕೊರೊನಾ
ಈ ವಿಷಯ ತಿಳಿದು ಗಾಮಸ್ಥರು ಭಯಭೀತರಾಗಿದ್ದಾರೆ. ಅಲ್ಲದೆ ಇದೀಗ ಕಾಫಿ ತೋಟದಲ್ಲಿ ಕಾಫಿ ಗಿಡಗಳಿಗೆ ಕೃತಕ ನೀರು ಹಾಯಿಸುವ ಸಮಯ ಇದಾಗಿದೆ. ಹುಲಿ ಕಾಣಿಸಿಕೊಂಡ ಬಳಿಕ ತೋಟಗಳಲ್ಲಿ ಹುಲಿ ಅಡಗಿಕೊಂಡಿರಬಹುದೇನೋ ಎಂಬ ಭಯದಿಂದ ತೋಟಕ್ಕೆ ತೆರಳಲು ಕಾರ್ಮಿಕರು ಭಯಪಡುತ್ತಿದ್ದಾರೆ. ಇದನ್ನೂ ಓದಿ: ತಾಜ್ ವೆಸ್ಟೆಂಡ್ ಹೋಟೆಲ್‍ನಲ್ಲಿ ನಾನು ರಾಸಲೀಲೆ ಮಾಡಲು ಹೋಗ್ತಿರಲಿಲ್ಲ: ಹೆಚ್‍ಡಿಕೆ ಕಿಡಿ
ಹುಲಿ ದಾಳಿಗೆ ತುತ್ತಾಗಿ ಬಲಿಯಾಗಿರುವ ಹಸುವಿನ ಮಾಲೀಕರಿಗೆ ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಈ ನಿಟ್ಟಿನಲ್ಲಿ ಇಂದು ರಾಜ್ಯ ರೈತ ಸಂಘಟನೆಯಿಂದ ಪೋನ್ನಂಪೇಟೆ ಅರಣ್ಯ ಇಲಾಖೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಮುಂದಾಳತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು
ದಕ್ಷಿಣ ಕೊಡಗಿನಲ್ಲಿ ಹುಲಿ ಹಾವಳಿ ನಿಯಂತ್ರಿಸುವ ಸಲುವಾಗಿ ಹೋರಾಟ ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಆದಿಕಾರಿಗಳು ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಸ್ಥಳಕ್ಕೆ ಡಿಎಫ್‍ಒ ಚಕ್ರಪಾಣಿ ಡಿವೈಎಸ್‍ಪಿ ಜಯಕುಮಾರ್ ಆಗಮಿಸಿ ಇನ್ನೂ ಏಳು ದಿನಗಳಲ್ಲಿ ಹುಲಿ ಸೆರೆಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಕೊಪ್ಪಳ: ಗುಡ್ಡದ ಪ್ರಪಾತಕ್ಕಿಳಿದಿದ್ದ ನಾಲ್ಕು ಗೋವುಗಳು ನಾಲ್ಕು ಐದು ದಿನಗಳಿಂದ ಮೇಲಕ್ಕೆ ಬರಲು ಆಗದೆ ಪರದಾಡುತ್ತಿದ್ದವು. ಈ ಸಂದರ್ಭದಲ್ಲಿ ಮುಸ್ಲಿಂ ಯುವಕರ ತಂಡ ಶತಪ್ರಯತ್ನ ಮಾಡಿ ಎರಡು ಹಸುಗಳನ್ನು ರಕ್ಷಿಸಿದ್ದು ಎರಡು ಹಸುಗಳು ಹಸಿವಿನಿಂದ ನಿತ್ರಾಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ಕೊಪ್ಪಳ ನಗರದ ಹುಲಿಕೆರೆಯ ಬಳಿಯ ವಳಕಲ್ಲು ಗುಡ್ಡದ ಬಳಿ ಮೇಯಲು ಹೋಗಿದ್ದ ನಾಲ್ಕು ಹಸುಗಳು ಸುಮಾರು 300 ಆಳದ ಪ್ರಪಾತಕ್ಕೆ ಇಳಿದಿದ್ದವು. ನಗರದ ಗೋವು ಶಾಲೆಯಲ್ಲಿ ಗೋವುಗಳು ಐದು ದಿನಗಳ ಹಿಂದೆ ಗುಡ್ಡ ಪ್ರದೇಶದಲ್ಲಿ ಮೇಯಲು ಹೋಗಿದ್ದವು. ಅದರಲ್ಲಿ ನಾಲ್ಕು ಹಸುಗಳು ಹೇಗೆ ಆಳವಾದ ಪ್ರಪಾತಕ್ಕಿಳಿದಿದ್ದವು. ಗೋವು ಶಾಲೆಯಲ್ಲಿ ನೂರಾರು ಗೋವುಗಳಿದ್ದ ಪ್ರಪಾತಕ್ಕಿಳಿದ ಹಸುಗಳ ಬಗ್ಗೆ ಲೆಕ್ಕವಿರಲಿಲ್ಲ.
ಈ ಮಧ್ಯೆ ಹುಲಿಕೆರೆಯಲ್ಲಿ ಮೀನು ಹಿಡಿಯಲು ಹೋದ ಯುವಕರಿಗೆ ದೂರದಲ್ಲಿ ಹಸುಗಳು ಸಿಕ್ಕಿಕೊಂಡಿರುವುದನ್ನು ಗುರುತಿಸಿದ್ದಾರೆ. ಅವುಗಳು ಗುಡ್ಡ ಹತ್ತಿ ಬರಲು ಪರದಾಡುತ್ತಿರುವುದು, ಮೇವು ಇಲ್ಲದೆ ನಿತ್ರಾಣವಾಗಿರುವುದು ಗೊತ್ತಾಗಿ ಪಕ್ಕದ ದಿಡ್ಡಿಕೆರೆಯ ಶೂಕೂರು, ಮೊಹಮ್ಮದ್ ಮಸೂದ್ ಹಾಗೂ 20 ಜನರ ತಂಡ ಹಸುಗಳ ರಕ್ಷಣೆಗೆ ಮುಂದಾದರು. ಇದನ್ನೂ ಓದಿ: ಶಾಲೆ ನಿರ್ಮಾಣಕ್ಕೆ 1 ಕೋಟಿ ರೂ. ದೇಣಿಗೆ ಕೊಟ್ಟ ನಟ ಅಕ್ಷಯ್ ಕುಮಾರ್
ಮಂಜಾನೆಯಿಂದಲೇ ಯುವಕರು ಹಗ್ಗಗಳ ಸಹಾಯದಿಂದ ಪ್ರಪಾತದಲ್ಲಿದ್ದ ಹಸುಗಳನ್ನು ಮೇಲೆ ತರಲು ಕಾರ್ಯಾಚರಣೆ ಮಾಡಿದರು. ಕಠಿಣವಾದ ರಕ್ಷಣಾ ಕಾರ್ಯಾಚರಣೆಯಲ್ಲಿ ಮೊದಲೆರಡು ಹಸುಗಳನ್ನು ಸುರಕ್ಷಿತವಾಗಿ ಮೇಲಕ್ಕೆ ತಂದಿದ್ದಾರೆ. ಕಾರ್ಯಾಚರಣೆ ಮದ್ಯಾಹ್ನದವರೆಗೂ ನಡೆದಿದ್ದು, ಮದ್ಯಾಹ್ನದ ವೇಳೆಗೆ ಯುವಕರು ತೀವ್ರ ನಿತ್ರಾಣವಾದ ಹಸುಗಳಿಗೆ ಆಹಾರ ನೀಡಿ ಮೇಲಕ್ಕೆತ್ತಲು ಯತ್ನಿಸಿದರೂ ಕೊನೆಗೆ ಎರಡು ಆಕಳುಗಳು ಅಲ್ಲಿಯೇ ಸಾವನ್ನಪ್ಪಿವೆ. ದಿಡ್ಡಿಕೆರೆಯ ಈ ಯುವಕರ ತಂಡದ ಸಾಧನೆಯು ಸಾಕಷ್ಟು ಮೆಚ್ಚುಗೆಗೆ ಕಾರಣವಾಗಿದೆ.
ಉಡುಪಿ: ಅದಮಾರು ಮಠದ ಹಸುಗಳಿಗೂ ನೆರೆಯ ಬಿಸಿ ತಟ್ಟಿದ್ದು, ಕೃಷ್ಣಮಠದ ಪರ್ಯಾಯ ಅದಮಾರು ಮಠದ 21 ಹಸುಗಳನ್ನು ಉದ್ಯಾವರ ಸಮೀಪದ ಮಠದ ಕುದ್ರುವಿನಲ್ಲಿ ಸಾಕಲಾಗುತ್ತಿತ್ತು. ಇದೀಗ ನೆರೆಯಿಂದಾಗಿ ಈ ಪ್ರದೇಶ ನಡುಗದ್ದೆಯಂತಾಗಿದ್ದು, ಹಸುಗಳನ್ನು ಸ್ಥಳಾಂತರಿಸಲಾಗಿದೆ.
ನಿರಂತರ ಮಳೆಯಿಂದಾಗಿ ಪಕ್ಕದ ಪಾಪನಾಶಿನಿ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ನೀರಿನ ಮಟ್ಟ ಹೆಚ್ಚಿದ ಪರಿಣಾಮ ಮಠದ ಕುದ್ರುವಿಗೆ ನದಿಯ ನೀರು ತುಂಬಿಕೊಂಡಿದೆ. ಇದರಿಂದಾಗಿ ಹಸುಗಳು ನಡುಗಡ್ಡೆಯಲ್ಲಿ ಆಶ್ರಯ ಪಡೆದಿದ್ದವು. ಸ್ಥಳೀಯ ವಿಭುದೇಶ ನಗರದಲ್ಲಿರುವ ಮೂವತ್ತಕ್ಕೂ ಅಧಿಕ ಮನೆಗಳಿಗೂ ಕೂಡ ನೀರು ನುಗ್ಗಿತ್ತು. ವಿಷಯ ತಿಳಿದ ಅದಮಾರು ಮಠದ ಸಿಬ್ಬಂದಿ ತಕ್ಷಣ ಮಠದ ಕುದ್ರುವಿಗೆ ಧಾವಿಸಿದ್ದಾರೆ. ನಡುಗಡ್ಡೆಯಲ್ಲಿ ಸಂಕಷ್ಟದಲ್ಲಿದ್ದ ಮೂವತ್ತಕ್ಕೂ ಅಧಿಕ ಹಸುಗಳನ್ನು ಸ್ಥಳಾಂತರಿಸಿದ್ದಾರೆ.
ಟೆಂಪೋ ಮೂಲಕ ಎಲ್ಲ ಹಸುಗಳನ್ನು ಉಡುಪಿ ಕೃಷ್ಣ ಮಠದ ಗೋಶಾಲೆಗೆ ಸಾಗಾಟ ಮಾಡಲಾಗಿದೆ. ಸದ್ಯ ಮಠದ ಹಸುಗಳು ಗೋಪಾಲಕೃಷ್ಣ ಸನ್ನಿಧಿಯಲ್ಲಿ ಸುರಕ್ಷಿತವಾಗಿವೆ. ಮಠದ ಸಿಬ್ಬಂದಿ ಹಸುಗಳ ಸ್ಥಳಾಂತರಕ್ಕೆ ಸ್ಥಳೀಯರು ಸಹಕರಿಸಿದ್ದಾರೆ.
ಈ ಕುರಿತು ಅದಮಾರು ಮಠದ ಮ್ಯಾನೇಜರ್ ಗೋವಿಂದರಾಜ್ ಮಾತನಾಡಿ, ವಿಭುದೇಶ ನಗರದಲ್ಲಿ ಮಠದ 30 ಹಸುಗಳನ್ನು ಸಾಕುತ್ತಿದ್ದೇವೆ. ವಿಪರೀತ ಮಳೆ ಬಂದು ವಿಭುದೇಶ ನಗರ ಆಪತ್ತಿನಲ್ಲಿದೆ. ನೀರಿನ ಮಟ್ಟ ಜಾಸ್ತಿಯಾಗಿ ಹಸುಗಳಿಗೆ ಯಾವುದೇ ಸಮಸ್ಯೆ ಆಗಬಾರದು ಎನ್ನುವ ಉದ್ದೇಶದಿಂದ ಅದಮಾರು ಮಠಾಧೀಶರಾದ ವಿಶ್ವಪ್ರಿಯತೀರ್ಥ ಶ್ರೀಪಾದರು, ಮತ್ತು ಈಶಪ್ರಿಯ ತೀರ್ಥ ಶ್ರೀಪಾದರ ಆದೇಶದಂತೆ ಹಸುಗಳನ್ನು ಉಡುಪಿಗೆ ರವಾನಿಸುತ್ತಿದ್ದೇವೆ. ಮಳೆ ಕಡಿಮೆಯಾಗುವವರೆಗೆ ರಾಜಾಂಗಣದ ಪಕ್ಕದಲ್ಲಿ ಎಲ್ಲ ಹಸುಗಳನ್ನು ಆರೈಕೆ ಮಾಡುತ್ತೇವೆ ಎಂದರು.
ರಾಯಚೂರು: ನಗರದ ರಸ್ತೆಗಳಲ್ಲಿ ತಿರುಗಾಡುತ್ತಿದ್ದ ಬೀಡಾಡಿ ದನಗಳನ್ನ ಹಿಡಿದು ಪೊಲೀಸರು ಗೋಶಾಲೆಗೆ ಬಿಟ್ಟಿದ್ದಾರೆ. ನಗರಸಭೆ ಮಾಡಬೇಕಾದ ಕೆಲಸವನ್ನ ರಾಯಚೂರು ಪೊಲೀಸರು ಮಾಡಿದ್ದಾರೆ.
ಲಾಕ್‍ಡೌನ್ ಹಿನ್ನೆಲೆ ಅನಾವಶ್ಯಕವಾಗಿ ರಸ್ತೆಯಲ್ಲಿ ಓಡಾಡುವವ ಬೈಕ್ ಜಪ್ತಿ ಮಾಡಿ ದಂಡ ಹಾಕುತ್ತಿರುವ ಪೊಲೀಸರು ಜಾನುವಾರುಗಳನ್ನ ಗೋಶಾಲೆಗೆ ತಲುಪಿಸಿದ್ದಾರೆ. ವಾರಸುದಾರರಿಲ್ಲದ ಒಟ್ಟು 34 ಜಾನುವಾರುಗಳನ್ನ ಹಿಡಿದು ಗೋಶಾಲೆಗೆ ಸಾಗಿಸಿದ್ದಾರೆ.
ನಗರದ ಸಾರ್ವಜನಿಕರು ಸಾಕಷ್ಟು ಬಾರಿ ದೂರು ನೀಡಿದರು ನಗರಸಭೆ ತಲೆಕೆಡಿಸಿಕೊಂಡಿರಲಿಲ್ಲ. ಹೀಗಾಗಿ ಬೀಡಾಡಿ ದನಗಳು ರಸ್ತೆಯಲ್ಲೆ ಓಡಾಡುತ್ತಿದ್ದರಿಂದ ವಾಹನ ಸಂಚಾರಕ್ಕೆ ತುಂಬಾ ಅಡತಡೆಯಾಗುತ್ತಿತ್ತು. ಗೋವುಗಳ ವಾರಸುದಾರರಿಗೆ ಅನೇಕ ಬಾರಿ ಎಚ್ಚರಿಕೆ ನೀಡಿದರೂ ಮತ್ತೆ ಮತ್ತೆ ಬೀದಿಗೆ ಬಿಡುವುದರಿಂದ ತೊಂದರೆ ತಪ್ಪಿರಲಿಲ್ಲ.
ದನಕರುಗಳನ್ನು ಬೀದಿಗೆ ಬಿಡುವುದರಿಂದ ಅಪಘಾತಗಳು, ಕಳ್ಳತನ ಪ್ರಕರಣಗಳು ಸಹ ನಡೆಯುತ್ತಿರುವುದರಿಂದ ಇದು ಪೊಲೀಸರಿಗೂ ತಲೆನೋವಾಗಿತ್ತು. ಹೀಗಾಗಿ ಪೊಲೀಸರೇ ಜಾನುವಾರುಗಳನ್ನ ಗೋಶಾಲೆಗೆ ಬಿಟ್ಟಿದ್ದಾರೆ. ಅಲ್ಲದೆ ಜಿಲ್ಲೆಯ ಸಾರ್ವಜನಿಕರು ತಮ್ಮ ತಮ್ಮ ದನಕರುಗಳನ್ನು ಬೀದಿಗೆ ಬರದಂತೆ ನೋಡಿಕೊಳ್ಳಿ ಅಂತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿ.ಬಿ.ವೇದಮೂರ್ತಿ ಸಾರ್ವಜನಿಕರಿಗೆ ಸೂಚಿಸಿದ್ದಾರೆ.
ರಾಮನಗರ: ಹೊಸ ವರ್ಷದ ಮೊದಲ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲು ತೆರಳಿದ್ದ ಪೊಲೀಸ್ ಪೇದೆಯೊಬ್ಬ ಹಸುಗಳ ಮೈ ತೊಳೆಯಲು ಹೋಗಿ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕನಕಪುರ ತಾಲೂಕಿನ ಹುಣಸನಹಳ್ಳಿಯಲ್ಲಿ ನಡೆದಿದೆ.
ಕನಕಪುರ ತಾಲೂಕಿನ ಕೋಡಿಹಳ್ಳಿ ಹೋಬಳಿಯ ಹುಣಸನಹಳ್ಳಿ ಗ್ರಾಮದ ಚಿಕ್ಕವೆಂಕಟಯ್ಯ ಪುತ್ರ ಚಿಕ್ಕಯ್ಯ (30) ಮೃತ ಪೊಲೀಸ್ ಪೇದೆ. ರಾಮನಗರ ಜಿಲ್ಲಾ ಪೊಲೀಸ್ ಭವನದಲ್ಲಿ ಕೆಲಸ ಮಾಡುತ್ತಿದ್ದ ಪೇದೆ ಚಿಕ್ಕಯ್ಯ ಸಂಕ್ರಾಂತಿ ಹಬ್ಬ ಆಚರಿಸಲು ನಿನ್ನೆ ಸ್ವಗ್ರಾಮಕ್ಕೆ ತೆರಳಿದ್ದರು. ಮನೆಯಲ್ಲಿನ ರಾಸುಗಳ ಮೈ ತೊಳೆದು ಸಿಂಗಾರ ಮಾಡಲು ಕೆರೆಗೆ ಹೋಗಿದ್ದ ವೇಳೆ ಮುಳುಗಿ ಸಾವನ್ನಪ್ಪಿದ್ದಾರೆ.
ಹಸುಗಳ ಮೈ ತೊಳೆಯಲು ಹೋಗಿದ್ದ ಚಿಕ್ಕಯ್ಯ ಮನೆಗೆ ವಾಪಸ್ ಬಾರದ ಹಿನ್ನೆಲೆಯಲ್ಲಿ ಕೆರೆಯ ಬಳಿ ಹೋಗಿ ನೋಡಿದ ವೇಳೆ ಘಟನೆ ಬೆಳಕಿಗೆ ಬಂದಿದ್ದು, ರಾತ್ರಿಯಾಗಿದ್ದ ಕಾರಣ ಶವ ಸಿಕ್ಕಿರಲಿಲ್ಲ. ಇಂದು ಕೆರೆಯಲ್ಲಿ ಶೋಧ ಕಾರ್ಯ ನಡೆಸಿ ಮೃತದೇಹವನ್ನು ಹೊರತೆಗೆಯಲಾಗಿದೆ.
ಮೃತ ಪೇದೆ ಚಿಕ್ಕಯ್ಯ ರಾಮನಗರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಕಚೇರಿಯ ಟಪ್ಪಾಲು ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಘಟನೆ ಸಂಬಂಧ ಕೋಡಿಹಳ್ಳಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಾಮನಗರ: ಹಳಿ ದಾಟುವ ವೇಳೆ ರೈಲು ಡಿಕ್ಕಿ ಹೊಡೆದ ಪರಿಣಾಮ ಎರಡು ಹಸುಗಳು ಹಾಗೂ ಓರ್ವ ವೃದ್ಧ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಮನಗರ ತಾಲೂಕಿನ ಬಿಡದಿ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.
ರಾಮನಗರ ತಾಲೂಕಿನ ಬಿಡದಿ ಪಟ್ಟಣದ ಇಂದಿರಾನಗರ ನಿವಾಸಿ ರುದ್ರಪ್ಪ(60) ರೈಲಿಗೆ ಸಿಲುಕಿ ಸಾವನ್ನಪ್ಪಿದ ವೃದ್ಧ. ಜೀವಕ್ಕೆ ಆಧಾರವಾಗಿದ್ದ ಎರಡು ಸೀಮೆ ಹಸುಗಳನ್ನು ದಿನನಿತ್ಯ ಮೇಯಿಸಿಕೊಂಡು ಬರುವ ಕಾಯಕವನ್ನ ರುದ್ರಪ್ಪ ಮಾಡುತ್ತಿದ್ದರು. ಸೋಮವಾರ ಕೂಡಾ ಹಸುಗಳನ್ನು ಮೇಯಿಸಲು ಹೋಗಿದ್ದ ರಾಮಪ್ಪ ಸಂಜೆ ಆಗುತ್ತಿದ್ದಂತೆ ಮನೆಯ ಕಡೆಗೆ ಎರಡು ಹಸುಗಳನ್ನು ಕರೆದುಕೊಂದು ಬರುತ್ತಿದ್ದರು. ತನ್ನ ಮನೆಯ ಕಡೆಗೆ ಹೊರಡುವ ಅವಸರದಲ್ಲಿದ್ದ ರುದ್ರಪ್ಪ ಅವರಿಗೆ ಹಳಿ ದಾಟುವ ವೇಳೆ ಮೈಸೂರಿನಿಂದ ಬೆಂಗಳೂರು ಕಡೆಗೆ ಚಲಿಸುತ್ತಿದ್ದ ಕಾಚಿಗುಡ ಎಕ್ಸ್‍ಪ್ರೆಸ್ ರೈಲು ಡಿಕ್ಕಿ ಹೊಡೆದಿದೆ.
ರೈಲು ಡಿಕ್ಕಿ ಹೊಡೆದ ರಭಸಕ್ಕೆ ಎರಡು ಹಸುಗಳು ಹಾಗೂ ರುದ್ರಪ್ಪ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ರೈಲು ಹಸುಗಳಿಗೆ ಡಿಕ್ಕಿ ಹೊಡೆದಿದ್ದ ಪರಿಣಾಮ ಒಂದು ಹಸುವಿನ ದೇಹ ಸಂಪೂರ್ಣವಾಗಿ ಜಜ್ಜಿ ಹೋಗಿದ್ದು, ಮತ್ತೊಂದು ಹಸುವಿನ ಕುತ್ತಿಗೆ ಹಾಗೂ ಹೊಟ್ಟೆಯ ಭಾಗದಲ್ಲಿ ಆಳವಾದ ಗಾಯವಾದ ಕಾರಣ ಕರುಳು ಹೊರಬಂದು ಸ್ಥಳದಲ್ಲಿಯೇ ಸಾವನ್ನಪ್ಪಿವೆ. ರೈಲಿನ ಹೊಡೆತಕ್ಕೆ ರುದ್ರಪ್ಪನ ದೇಹ ರೈಲು ಹಳಿಯ ಮೇಲೆ ಬಿದ್ದು ರೈಲಿನ ಗಾಲಿಗಳು ಹರಿದ ಪರಿಣಾಮ ಛಿದ್ರ ಛಿದ್ರವಾಗಿದ್ದು, ದೇಹದ ಭಾಗಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಹೋಗಿವೆ.
ಘಟನೆ ಸಂಬಂಧ ಸ್ಥಳಕ್ಕೆ ಚನ್ನಪಟ್ಟಣ ರೈಲ್ವೆ ಪೊಲೀಸರು ಹಾಗೂ ಬಿಡದಿ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಒಂದೆಡೆ ಜೀವನಾಧಾರವಾಗಿದ್ದ ಹಸುಗಳು ಕಳೆದುಕೊಂಡ ದುಃಖವಾದರೆ, ಮತ್ತೊಂದೆಡೆ ಮನೆಯ ಮಾಲೀಕನೇ ಸಾವನ್ನಪ್ಪಿರುವುದಕ್ಕೆ ಕುಟುಂಬಸ್ಥರ ಆಕ್ರಂದನವನ್ನು ಮುಗಿಲು ಮುಟ್ಟುದೆ.