Tag: ಹಸಿನ್ ಜಹಾನ್

  • ಪತ್ನಿಗೆ ತಿಂಗಳಿಗೆ 4 ಲಕ್ಷ ಕೊಡಿ: ಮೊಹಮ್ಮದ್‌ ಶಮಿಗೆ ಹೈಕೋರ್ಟ್‌ ಸೂಚನೆ

    ಪತ್ನಿಗೆ ತಿಂಗಳಿಗೆ 4 ಲಕ್ಷ ಕೊಡಿ: ಮೊಹಮ್ಮದ್‌ ಶಮಿಗೆ ಹೈಕೋರ್ಟ್‌ ಸೂಚನೆ

    ಕೋಲ್ಕತ್ತಾ: ಭಾರತದ ಕ್ರಿಕೆಟಿಗ ಮೊಹಮ್ಮದ್‌ ಶಮಿ (Mohammed Shami) ತನ್ನಿಂದ ದೂರವಾಗಿರುವ ಪತ್ನಿಗೆ ತಿಂಗಳಿಗೆ ನಾಲ್ಕು ಲಕ್ಷ ಜೀವನಾಂಶ ಕೊಡುವಂತೆ ಕೋಲ್ಕತ್ತಾ ಹೈಕೋರ್ಟ್‌ (Calcutta High Court) ಆದೇಶ ಹೊರಡಿಸಿದೆ.

    ನ್ಯಾಯಮೂರ್ತಿ ಅಜಯ್ ಕುಮಾರ್ ಮುಖರ್ಜಿ ಅವರಿದ್ದ ಪೀಠವು ಆದೇಶ ಹೊರಡಿಸಿದೆ. ಶಮಿ ಪತ್ನಿ ಜಹಾನ್ ವೈಯಕ್ತಿಕ ಜೀವನಾಂಶಕ್ಕಾಗಿ ತಿಂಗಳಿಗೆ 1.5 ಲಕ್ಷ ರೂಪಾಯಿ ಮತ್ತು ಅಪ್ರಾಪ್ತ ಮಗಳ ಆರೈಕೆ, ವೆಚ್ಚಗಳಿಗಾಗಿ 2.5 ಲಕ್ಷ ರೂಪಾಯಿಗಳನ್ನು ಪಾವತಿಸಬೇಕೆಂದು ನಿರ್ದೇಶಿಸಿದ್ದಾರೆ. ಇದನ್ನೂ ಓದಿ: ಶಮಿ ಮಗಳ ಹೋಳಿ ಆಚರಣೆ ಸರಿಯಲ್ಲ – ಇದು ಷರಿಯಾ ವಿರುದ್ಧ ಎಂದ ಜಮಾತ್ ಅಧ್ಯಕ್ಷ

    ಶಮಿ ತಿಂಗಳಿಗೆ 50,000 ರೂ. ಮತ್ತು ತಮ್ಮ ಮಗಳ ಖರ್ಚಿಗಾಗಿ ಹೆಚ್ಚುವರಿಯಾಗಿ 80,000 ರೂ.ಗಳನ್ನು ಪಾವತಿಸುವಂತೆ ಕೋಲ್ಕತ್ತಾದ ಅಲಿಪೋರ್ ನ್ಯಾಯಾಲಯವು 2018 ರಲ್ಲಿ ನೀಡಿದ್ದ ಆದೇಶದ ವಿರುದ್ಧ ಜಹಾನ್ ಮೇಲ್ಮನವಿ ಸಲ್ಲಿಸಿದ್ದರು. ಆ ಸಮಯದಲ್ಲಿ, ಜಹಾನ್ ತನಗೆ 7 ಲಕ್ಷ ರೂ. ಮತ್ತು ತನ್ನ ಮಗಳಿಗೆ 3 ಲಕ್ಷ ರೂ.ನಂತೆ ಒಟ್ಟು 10 ಲಕ್ಷ ರೂ. ಕೇಳಿದ್ದರು. ಆದರೆ, ಕೆಳಹಂತದ ನ್ಯಾಯಾಲಯವು ಅವರ ವಿನಂತಿಯನ್ನು ವಜಾಗೊಳಿಸಿತ್ತು.

    ಶಮಿ ಆರ್ಥಿಕ ಪರಿಸ್ಥಿತಿಯು ಹೆಚ್ಚಿನ ಜೀವನಾಂಶವನ್ನು ನೀಡಲು ಸಹಾಯ ಮಾಡುತ್ತದೆ ಎಂದು ಜಹಾನ್ ಕಾನೂನು ಸಲಹೆಗಾರರು ತಮ್ಮ ಮೇಲ್ಮನವಿಯಲ್ಲಿ ವಾದಿಸಿದ್ದರು. 2021 ರ ಹಣಕಾಸು ವರ್ಷದ ಅವರ ಆದಾಯ ತೆರಿಗೆ ರಿಟರ್ನ್ ಪ್ರಕಾರ, ಶಮಿ ಅವರ ವಾರ್ಷಿಕ ಆದಾಯ ಸುಮಾರು 7.19 ಕೋಟಿ ರೂ. ಅಂದರೆ, ತಿಂಗಳಿಗೆ ಸುಮಾರು 60 ಲಕ್ಷ ರೂ. ಆಗಿತ್ತು. ಜಹಾನ್ ತನ್ನ ಮಗಳ ಖರ್ಚು ಸೇರಿದಂತೆ ತನ್ನ ಒಟ್ಟು ಮಾಸಿಕ ಖರ್ಚು 6 ಲಕ್ಷ ರೂ. ಮೀರಿದೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ರಂಜಾನ್ ವೇಳೆ ಎನರ್ಜಿ ಡ್ರಿಂಕ್ ಕುಡಿದಿದ್ದಕ್ಕೆ ಆಕ್ರೋಶ – ಶಮಿಯನ್ನು ಕ್ರಿಮಿನಲ್ ಎಂದ ಮುಸ್ಲಿಂ ಧರ್ಮಗುರು

    ಈ ವಿವರಗಳನ್ನು ಗಣನೆಗೆ ತೆಗೆದುಕೊಂಡು, ಹೈಕೋರ್ಟ್ ಜಹಾನ್ ಪರವಾಗಿ ತೀರ್ಪು ನೀಡಿದೆ. ನ್ಯಾಯಮೂರ್ತಿ ಮುಖರ್ಜಿ ಆದೇಶದಲ್ಲಿ, ನನ್ನ ಅಭಿಪ್ರಾಯದಲ್ಲಿ ಅರ್ಜಿದಾರರ ಸಂಖ್ಯೆ 1 (ಪತ್ನಿ) ಗೆ ತಿಂಗಳಿಗೆ 1,50,000 ರೂ. ಮತ್ತು ಅವರ ಮಗಳಿಗೆ 2,50,000 ರೂ. ಮೊತ್ತವನ್ನು ನೀಡುವುದು ನ್ಯಾಯಯುತ. ಇದು ಎರಡೂ ಅರ್ಜಿದಾರರಿಗೆ ಆರ್ಥಿಕ ಸ್ಥಿರತೆಯನ್ನು ಖಚಿತಪಡಿಸುತ್ತದೆ ಎಂದು ತಿಳಿಸಿದ್ದಾರೆ.

    ಹಿಂದಿನ ತೀರ್ಪಿನ ಆಧಾರವನ್ನು ಹೈಕೋರ್ಟ್ ಪ್ರಶ್ನಿಸಿದ್ದು, ಅಲಿಪೋರ್ ನ್ಯಾಯಾಲಯವು ಯಾವ ಆಧಾರದ ಮೇಲೆ ಕಡಿಮೆ ಜೀವನಾಂಶ ಕೊಡುವಂತೆ ತೀರ್ಪು ನೀಡಿದೆ ಎಂಬುದು ಸ್ಪಷ್ಟವಾಗಿಲ್ಲ. ಶಮಿ ಗಳಿಕೆ ಚೆನ್ನಾಗಿಯೇ ಇದೆ. ಅವರ ಪತ್ನಿ ಜಹಾನ್ ಮರುಮದುವೆಯಾಗಿಲ್ಲ. ತನ್ನ ಮಗಳೊಂದಿಗೆ ಏಕಾಂಗಿಯಾಗಿ ವಾಸಿಸುತ್ತಿದ್ದಾರೆ. ಹೀಗಾಗಿ, ಹಿಂದಿನ ತೀರ್ಪಿನಲ್ಲಿ ತಿದ್ದುಪಡಿ ಅಗತ್ಯವಿದೆ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ.

  • ನಮಗೆ ರಕ್ಷಣೆ ಕಲ್ಪಿಸಿ- ಹೈಕೋರ್ಟಿಗೆ ಶಮಿ ಪತ್ನಿ ಅರ್ಜಿ

    ನಮಗೆ ರಕ್ಷಣೆ ಕಲ್ಪಿಸಿ- ಹೈಕೋರ್ಟಿಗೆ ಶಮಿ ಪತ್ನಿ ಅರ್ಜಿ

    ಕೋಲ್ಕತ್ತಾ: ಟೀಂ ಇಂಡಿಯಾ ವೇಗಿ, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಆಟಗಾರ ಮೊಹಮ್ಮದ್ ಶಮಿ ಪತ್ನಿ ಹಸಿನ್ ಜಹಾನ್ ರಕ್ಷಣೆ ಕಲ್ಪಿಸುವಂತೆ ಹೈಕೋರ್ಟಿಗೆ ಅಜಿ ಸಲ್ಲಿಸಿ ಮನವಿ ಮಾಡಿದ್ದಾರೆ.

    ರಾಮ ಮಂದಿರ ಭೂಮಿ ಪೂಜೆ ಪೋಸ್ಟ್ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಬರುತ್ತಿರುವ ಬೆದರಿಕೆಗಳ ಹಿನ್ನೆಲೆಯಲ್ಲಿ ಇತ್ತೀಚೆಗೆ ಹಸಿನ್ ಪೊಲೀಸರಿಗೆ ದೂರು ಸಲ್ಲಿಸಿದ್ದರು. ದೂರು ನೀಡಿದ್ದರೂ ಪೊಲೀಸರು ಕ್ರಮಕೈಗೊಂಡಿಲ್ಲ ಎಂದು ಹಸೀನ್ ಕೋರ್ಟಿಗೆ ಅರ್ಜಿ ಸಲ್ಲಿಕೆ ಮಾಡಿ, ತನಗೆ ಹಾಗೂ ತನ್ನ ಮಗಳಿಗೆ ಸೂಕ್ತ ಭದ್ರತೆ ನೀಡುವಂತೆ ಮನವಿ ಮಾಡಿದ್ದಾರೆ.

    ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆ ಸಂದರ್ಭದಲ್ಲಿ ಹಸಿನ್ ಶುಭಾಶಯ ತಿಳಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಆ ಬಳಿಕ ಅವರಿಗೆ ಹೆಚ್ಚಿನ ಬೆದರಿಕೆಗಳು ಬಂದಿದ್ದವು. ಕೆಲವರು ಹಸಿನ್ ವಿರುದ್ಧ ಅಸಹ್ಯಕರವಾಗಿ ದೂಷಿಸಿ, ಕೆಲವರು ರೇಪ್ ಮಾಡುವ ಬೆದರಿಕೆಯನ್ನು ಹಾಕಿದ್ದರು. ಈ ಕುರಿತು ಮಾತನಾಡಿರುವ ಹಸೀನ್, ಪೋಸ್ಟ್ ಮಾಡಿದ ಕೂಡಲೇ ಕೆಲವರು ಅಸಭ್ಯವಾಗಿ ನಿಂಧಿಸಿದ್ದರು. ನನಗೆ ಅಭದ್ರತೆಯ ಭಾವನೆ ಇದ್ದು, ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಮಾನಸಿಕವಾಗಿ ಕುಗ್ಗಿ ಹೋಗುತ್ತೇನೆ ಎಂದು ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ.

    ಮಾನವೀಯತೆಯ ಆಧಾರದ ಮೇಲೆ ಪೊಲೀಸರು ಕ್ರಮಕೈಗೊಳ್ಳಬೇಕಿದೆ. ಆದರೆ ಅವರು ನನ್ನ ದೂರಿನ ಬಳಿಕವೂ ಯಾವುದೇ ಕ್ರಮಕೈಗೊಂಡಿಲ್ಲ. ಆದ್ದರಿಂದ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದೇನೆ ಎಂದಿದ್ದಾರೆ. 2014ರಲ್ಲಿ ಹಸಿನ್ ಜಹಾನ್, ಶಮಿ ಮದುವೆಯಾಗಿದ್ದರು. ಇಬ್ಬರೂ ಒಂದು ಹೆಣ್ಣು ಮಗು ಇದೆ. ನಾಲ್ಕು ವರ್ಷಗಳ ಕಾಲ ಸಂತಸದಿಂದ ಸಾಗಿದ್ದ ಇವರ ದಾಂಪತ್ಯ ಜೀವನ ಆ ಬಳಿಕ ಮುರಿದು ಬಿದ್ದಿತ್ತು. ಶಮಿ ವಿರುದ್ಧ ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದರು. ಅಲ್ಲದೇ ಶಮಿ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಸೇರಿದಂತೆ ಸಾಕಷ್ಟು ಆರೋಪಗಳನ್ನು ಮಾಡಿದ್ದರು. ಕೆಲ ದಿನಗಳ ಹಿಂದೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಶಮಿ, ಮೂರು ಬಾರಿ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಚಿಂತನೆ ನಡೆಸಿದ್ದೆ ಎಂದು ತಿಳಿಸಿದ್ದರು.

    ಇತ್ತ ಐಪಿಎಲ್ 2020ರ ಟೂರ್ನಿಗಾಗಿ ಯುಎಇಗೆ ತೆರಳಿರುವ ಶಮಿ, ಪುತ್ರಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದಾರೆ. ಕೊರೊನಾ, ಲಾಕ್‍ಡೌನ್ ಕಾರಣ ಪುತ್ರಿಯನ್ನು ಭೇಟಿಯಾಗಿಲ್ಲ. ಸದ್ಯ ಪುತ್ರಿ ಭೇಟಿ ಅಸಾಧ್ಯವಾಗಿದೆ. ಮಗಳನ್ನು ನೋಡದೆ ತುಂಬಾ ದಿನಗಳಾಗಿದೆ. ಪುತ್ರಿ ಈಗ ದೊಡ್ಡವಳಾಗಿದ್ದಾಳೆ. ಆಕೆಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಶಮಿ ಹೇಳಿದ್ದು, ದುಬೈ ಪಿಚ್‍ನಲ್ಲೂ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ ಎಂದು ಶಮಿ ಹೇಳಿದ್ದಾರೆ.

  • ಬೋಲ್ಡ್ ವಿಡಿಯೋ ಪೋಸ್ಟ್ ಮಾಡಿ ಟಾಂಗ್ ಕೊಟ್ಟ ಶಮಿ ಪತ್ನಿ

    ಬೋಲ್ಡ್ ವಿಡಿಯೋ ಪೋಸ್ಟ್ ಮಾಡಿ ಟಾಂಗ್ ಕೊಟ್ಟ ಶಮಿ ಪತ್ನಿ

    ಕೋಲ್ಕತ್ತಾ: ಟೀಂ ಇಂಡಿಯಾ ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಶಮಿ ಪತ್ನಿ ಹಸಿನ್ ಜಹಾನ್ ಹಾಗೂ ಶಮಿ ಫ್ಯಾನ್ಸ್ ನಡುವೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ದಿನಗಳಿಂದ ಯುದ್ಧವೇ ನಡೆಯುತ್ತಿದೆ. ನಟಿ, ಮಾಡೆಲ್ ಆಗಿರುವ ಹಸಿನ್ ಜಹಾನ್ ಪತಿಯ ವಿರುದ್ಧ ಗೃಹಹಿಂಸೆ ಆರೋಪದ ಅಡಿ ಪ್ರಕರಣ ದಾಖಲಿಸಿ ಆತನಿಂದ ದೂರವಾಗಿದ್ದರು. ಇದಾದ ಬಳಿಕ ಶಮಿ ಫ್ಯಾನ್ಸ್ ಹಾಗೂ ಹಸಿನ್ ಜಹಾನ್ ನಡುವೆ ಟ್ರೋಲ್ ವಾರ್ ಶುರುವಾಗಿತ್ತು.

    ನಟಿ, ಮಾಡೆಲ್ ಆಗಿರುವ ಕಾರಣ ಹಸಿನ್ ಜಹಾನ್ ಬೋಲ್ಡ್ ಫೋಟೋ, ವಿಡಿಯೋಗಳನ್ನು ತಮ್ಮ ಇನ್‍ಸ್ಟಾದಲ್ಲಿ ಹಂಚಿಕೊಳ್ಳುತ್ತಾರೆ. ಆ ಮೂಲಕ ತಮ್ಮ ಅಭಿಮಾನಿಗಳಿಗೆ ಮನರಂಜನೆ ನೀಡುತ್ತಾರೆ. ಆದರೆ ಸಾಕಷ್ಟು ಮಂದಿ ಧರ್ಮವನ್ನು ಪ್ರಸ್ತಾಪ ಮಾಡಿ ಹಸಿನ್ ವಿರುದ್ಧ ಟೀಕೆ ಮಾಡಿದ್ದರು. ರಂಜಾನ್ ಸಮಯದಲ್ಲಿ ಧರ್ಮದ ನಿಯಮಗಳ ವಿರುದ್ಧವಾಗಿ ಡ್ಯಾನ್ಸ್ ಮಾಡುವುದು ಸರಿಯಲ್ಲ ಎಂದು ಹಲವರು ಪ್ರಶ್ನಿಸಿದ್ದರು. ಅಲ್ಲದೇ ಶಮಿಗೆ ಮಾನಸಿಕವಾಗಿ ಹಿಂಸೆ ನೀಡಿದ್ದ ಕಾರಣ ಕ್ಷಮೆ ಕೇಳಬೇಕು ಎಂದು ಹಲವರು ಆಗ್ರಹಿಸಿದ್ದರು.

    ಇಂತಹ ಯಾವುದೇ ಬೆದರಿಕೆ, ಟ್ರೋಲ್‍ಗಳಿಗೆ ತಲೆಕೆಡಿಸಿಕೊಳ್ಳದ ಹಸಿನ್ ಜಹಾನ್ ಮತ್ತಷ್ಟು ಬೋಲ್ಡ್ ಫೋಟೋ, ವಿಡಿಯೋಗಳನ್ನು ಇನ್‍ಸ್ಟಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಅಲ್ಲದೇ ಟೀಕೆ ಮಾಡುವವರನ್ನು ನಾಯಿಗಳಿಗೆ ಹೋಲಿಕೆ ಮಾಡಿದ್ದ ಹಸಿನ್ ಜಹಾನ್, ನಾಯಿಗಳು ಬೊಗಳುತ್ತಿರುತ್ತವೆ. ನಮ್ಮ ಕೆಲಸ ನಾವು ನೋಡಿಕೊಳ್ಳಬೇಕು ಎಂದು ವಿಡಿಯೋಗೆ ಹಣೆಬರಹ ನೀಡಿದ್ದರು. ಸದ್ಯ ಫೋಟೋ ಶೂಟ್ ಒಂದಕ್ಕೆ ಸಂಬಂಧಿಸಿದ ವಿಡಿಯೋವನ್ನು ಹಸಿನ್ ಪೋಸ್ಟ್ ಮಾಡಿದ್ದಾರೆ. ಅಲ್ಲದೇ ಟೀಕೆ ಮಾಡಲು ಸಿದ್ಧರಾಗಿ ಎಂದು ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

    2014ರಲ್ಲಿ ಹಸಿನ್ ಜಹಾನ್, ಶಮಿ ಮದುವೆಯಾಗಿದ್ದರು. ಇಬ್ಬರೂ ಒಂದು ಹೆಣ್ಣು ಮಗು ಇದೆ. ನಾಲ್ಕು ವರ್ಷಗಳ ಕಾಲ ಸಂತಸದಿಂದ ಸಾಗಿದ್ದ ಇವರ ದಾಂಪತ್ಯ ಜೀವನ ಆ ಬಳಿಕ ಮುರಿದು ಬಿದ್ದಿತ್ತು. ಶಮಿ ವಿರುದ್ಧ ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದರು. ಅಲ್ಲದೇ ಶಮಿ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಸೇರಿದಂತೆ ಸಾಕಷ್ಟು ಆರೋಪಗಳನ್ನು ಮಾಡಿದ್ದರು. ಇತ್ತೀಚೆಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಶಮಿ, ಮೂರು ಬಾರಿ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಚಿಂತನೆ ನಡೆಸಿದ್ದೆ ಎಂದು ತಿಳಿಸಿದ್ದರು.

     

    View this post on Instagram

     

    My profile picture,???????? #hasinjahanfam #hasinjahanstyle #hasinjahanentertainment

    A post shared by hasin jahan (@hasinjahanofficial) on

  • ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಪತ್ನಿ ಬಂಧನ

    ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಪತ್ನಿ ಬಂಧನ

    ಲಕ್ನೋ: ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಪತ್ನಿ ಹಸಿನ್ ಜಹಾನ್ ನನ್ನು ಉತ್ತರ ಪ್ರದೇಶದ ಅಮ್ರೋಹ ಪೊಲೀಸರು  ಭಾನುವಾರ ಮಧ್ಯರಾತ್ರಿ ಬಂಧಿಸಿದ್ದಾರೆ.

    ಕಳೆದ ರಾತ್ರಿ ತನ್ನ ಮಗಳು ಬೆಬೋ ಜೊತೆ ಏಕಾಏಕಿ ಮನೆಗೆ ನುಗ್ಗಿದ ಹಸಿನ್, ಶಮಿ ತಾಯಿ ಜೊತೆ ವಾಗ್ವಾದಕ್ಕಿಳಿದಿದ್ದಾರೆ. ಅಲ್ಲದೆ ಮನೆಯಲ್ಲಿದ್ದ ಇತರರ ಜೊತೆಯೂ ಜಗಳವಾಡಿದ್ದಾರೆ. ಇದರಿಂದ ಗಾಬರಿಗೊಂಡ ಶಮಿ ಮನೆಯವರು ಕೂಡಲೇ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

    ದೂರಿನಲ್ಲಿ ಆಕೆ ಬಲವಂತದಿಂದ ಮನೆಗೆ ನುಗ್ಗಿದ್ದಾಳೆ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮನೆಗೆ ಬಂದ ಅಮ್ರೋಹ ಪೊಲೀಸರು 151 ಸೆಕ್ಷನ್ ಅಡಿಯಲ್ಲಿ ಹಸಿನ್ ನನ್ನು ಬಂಧಿಸಿದ್ದಾರೆ.

    ಈ ಹಿಂದೆ ಹಸಿನ್ ಜಹಾನ್ ಶಮಿ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗು ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದರು. ಅಲ್ಲದೇ ಕುಟುಂಬ ನಿರ್ವಹಣೆಗಾಗಿ ಪ್ರತಿ ತಿಂಗಳು 7 ಲಕ್ಷ ರೂ. ಕೋರಿ ಮನವಿ ಸಲ್ಲಿಸಿದ್ದರು. ಜಹಾನ್ ಅರ್ಜಿಯನ್ನು ಮಾನ್ಯ ಮಾಡಿದ್ದ ನ್ಯಾಯಾಲಯ ಮಗಳ ಜೀವನಕ್ಕಾಗಿ 80 ಸಾವಿರ ರೂ. ನೀಡುವಂತೆ ತಿಳಿಸಿತ್ತು. ಗುರುವಾರ ಶಮಿ ಹಾಗೂ ಅವರ ಕುಟುಂಬ ಮೇಲೆ ಐಪಿಸಿ ಸೆಕ್ಷನ್ 498ಎ (ವರದಕ್ಷಿಣೆ ಕಿರುಕುಳ) ಮತ್ತು 254ಎ (ಲೈಂಗಿಕ ದೌರ್ಜನ್ಯ) ಸೆಕ್ಷನ್ ಅಡಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದರು.

    ಶಮಿ ಅವರ ವಿರುದ್ಧ ಪತ್ನಿ ಜಹಾನ್ ಮ್ಯಾಚ್ ಫಿಕ್ಸಿಂಗ್ ಆರೋಪ ಕೂಡ ಮಾಡಿದ್ದರು. ಅಲ್ಲದೆ ಈ ಬಗ್ಗೆ ನನ್ನ ಬಳಿ ಸಾಕ್ಷಿ ಇದೆ ಎಂದಿದ್ದರು. ಸಾಮಾಜಿಕ ಜಾಲತಾಣದಲ್ಲಿ ಶಮಿ ಬೇರೆ ಬೇರೆ ಮಹಿಳೆಯರೊಂದಿಗೆ ಇದ್ದ ಫೋಟೋ ಹಾಗೂ ಚಾಟ್ ಮಾಡಿದ್ದ ಸ್ಕ್ರಿನ್ ಶಾಟ್ ಗಳನ್ನು ಪೋಸ್ಟ್ ಮಾಡಿದ್ದರು. ಅಲ್ಲದೆ ಸಹೋದರನೊಂದಿಗೆ ಸಂಬಂಧ ಹೊಂದುವಂತೆ ಶಮಿ ಒತ್ತಡ ಹಾಕಿದ್ದರು ಎಂದು ಜಹಾನ್ ಗಂಭೀರ ಆರೋಪಗಳನ್ನು ಮಾಡಿದ್ದರು. ಆದರೆ ಈ ಎಲ್ಲಾ ಆರೋಪಗಳನ್ನು ಶಮಿ ನಿರಾಕರಿಸಿದ್ದರು.