Tag: ಹಸನ್ ರೂಹಾನಿ

  • ಕೊರೊನಾ ವೈರಸ್- ಪ್ರಧಾನಿ ಮೋದಿಗೆ ಪತ್ರ ಬರೆದ ಇರಾನ್ ಅಧ್ಯಕ್ಷ

    ಕೊರೊನಾ ವೈರಸ್- ಪ್ರಧಾನಿ ಮೋದಿಗೆ ಪತ್ರ ಬರೆದ ಇರಾನ್ ಅಧ್ಯಕ್ಷ

    ನವದೆಹಲಿ: ಕೊರೊನಾ ವೈರಸ್ ವಿರುದ್ಧ ಹೋರಾಡುವುದರ ಕುರಿತು ಹಾಗೂ ಇತರ ದೇಶಗಳು ಸಹಕಾರ ನೀಡುವ ಕುರಿತು ಇರಾನ್ ಅಧ್ಯಕ್ಷ ಹಸನ್ ರೂಹಾನಿ ಅವರು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇತರೆ ರಾಷ್ಟ್ರಗಳ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ.

    ಪತ್ರದಲ್ಲಿ ತಿಳಿಸಿರುವ ಅವರು, ಕೊರೊನಾ ವಿರುದ್ಧ ಹೋರಾಡಲು ಒಗ್ಗಟ್ಟು, ಸಂಘಟಿತ ಪ್ರಾದೇಶಿಕ, ಅಂತರಾಷ್ಟ್ರೀಯ ಕ್ರಮಗಳನ್ನು ಹೆಚ್ಚಿಸುವುದು, ಗಂಭೀರ ಕಾರ್ಯತಂತ್ರ ರೂಪಿಸುವುದು ಸೇರಿದಂತೆ ವೈದ್ಯಕೀಯ ಉಪಕರಣಗಳ ದರ ಹೆಚ್ಚಾಗದಂತೆ ನೋಡಿಕೊಳ್ಳಬೇಕಿದೆ. ಈ ಎಲ್ಲ ಕ್ರಮಗಳನ್ನು ವಹಿಸುವುದು ಅಗತ್ಯವಾಗಿದೆ. ಹೀಗಾಗಿ ಎಲ್ಲ ದೇಶಗಳು ಒಟ್ಟಾಗಿ ಇದನ್ನು ಎದುರಿಸಬೇಕಿದೆ ಎಂದು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

    ಈ ವೈರಸ್‍ಗೆ ಯಾವುದೇ ಗಡಿ ಇಲ್ಲ, ರಾಜಕೀಯ, ಧಾರ್ಮಿಕ, ಜನಾಂಗೀಯ, ಸಾಂಸ್ಕøತಿಕ ಸೇರಿದಂತೆ ಯಾವುದರ ಕುರಿತು ಪರಿಗಣನೆ ಇಲ್ಲ. ಕೊರೊನಾ ವೈರಸ್‍ನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಲಾಗಿದ್ದು, ಇಂತಹ ರೋಗದ ವಿರುದ್ಧದ ಹೋರಾಟವನ್ನು ತೀವ್ರಗೊಳಿಸಬೇಕಾಗಿದೆ ಎಂದು ಉಲ್ಲೇಖಿಸಿದ್ದಾರೆ.

    ಇರಾನ್ ವಿದೇಶಾಂಗ ಸಚಿವ ಜಾವಾದ್ ಜಾರೀಫ್ ಸಹ ಈ ಕುರಿತು ಟ್ವೀಟ್ ಮಾಡಿದ್ದು, ಈ ಸಾಂಕ್ರಾಮಿಕ ರೋಗದ ವಿರುದ್ಧ ಪ್ರಪಂಚ ಹೇಗೆ ಹೋರಾಡುತ್ತಿದೆ ಎಂಬುದು ತಿಳಿದಿದೆ. ಅಮೆರಿಕಾದ ನಿರ್ಬಂಧಗಳು ಇದಕ್ಕೆ ಅಡ್ಡಿಯುಂಟುಮಾಡುತ್ತವೆ. ಹೆದರಿಸುವ ಮೂಲಕ ಅಮಾಯಕರನ್ನು ಕೊಲ್ಲಲು ಅವಕಾಶ ನೀಡುವುದು ಅಮಾನುಷವಾಗಿದೆ. ವೈರಸ್‍ಗಳು ಯಾವುದೇ ರಾಜಕೀಯ ಅಥವಾ ಭೌಗೋಳಿಕತೆಯನ್ನು ಗುರುತಿಸುವುದಿಲ್ಲ, ಇದನ್ನು ನಾವೂ ಮಾಡಬಾರದು ಎಂದು ಟ್ವೀಟ್‍ನಲ್ಲಿ ಬರೆದುಕೊಂಡಿದ್ದಾರೆ.

    ಇರಾನ್ ಮಾಧ್ಯಮಗಳ ವರದಿ ಪ್ರಕಾರ, ಇರಾನ್ ಅಧ್ಯಕ್ಷರು ವಿಶ್ವ ನಾಯಕರಿಗೆ ಬರೆದ ಪತ್ರದಲ್ಲಿ, ಇಸ್ಲಾಮಿಕ್ ಗಣರಾಜ್ಯವು ಎರಡು ವರ್ಷಗಳ ವ್ಯಾಪಕ ಮತ್ತು ಅಕ್ರಮ ನಿರ್ಬಂಧಗಳಿಂದ ಗಂಭೀರ ಅಡೆತಡೆಗಳು ಮತ್ತು ನಿರ್ಬಂಧಗಳನ್ನು ಎದುರಿಸಿದ್ದರೂ, ಅಮೆರಿಕಾ ಕಾನೂನು ಬಾಹಿರವಾಗಿ ಇರಾನ್ ಮೇಲೆ ಒತ್ತಡ ಹೇರುತ್ತಿದೆ. ಇದು ಕೊರೊನಾ ವೈರಸ್ ವ್ಯಾಪಿಸಿದ ನಂತರವೂ ಮುಂದುವರಿದಿದೆ ಎಂದು ಹೇಳಿವೆ.

    ಇರಾನ್‍ನಲ್ಲಿ ಕೊರೊನಾ ವೈರಸ್‍ನಿಂದಾಗಿ 611 ಜನ ಸಾವನ್ನಪ್ಪಿದ್ದು, ಒಟ್ಟು 12,700 ಜನರಲ್ಲಿ ಕೊರೊನಾ ಸೋಂಕಿರುವುದು ಪತ್ತೆಯಾಗಿದೆ. ಹೀಗಾಗಿ ಯುಎಸ್ ಒತ್ತಡದ ಕುರಿತು ಇರಾನ್ ಮೌನ ಮುರಿದಿದ್ದು, ಕೊರೊನಾ ವೈರಸ್ ತಡೆಗೆ ವಿಶ್ವ ನಾಯಕರು ಒಗ್ಗೂಡುವಂತೆ ಕರೆ ನೀಡಿದೆ.

    ಭಾರತ ಇರಾನ್‍ನ ಪ್ರಮುಖ ಪಾಲುದಾರನಾಗಿದ್ದು, ಕಾಶ್ಮೀರ, ಸಿಎಎ ಹಾಗೂ ಇತ್ತೀಚಿನ ದೆಹಲಿ ಗಲಭೆ ಸಂದರ್ಭಗಳಲ್ಲಿ ಭಾರತದ ನಿರ್ಧಾರಗಳ ಕುರಿತು ಇರಾನ್‍ನಿಂದ ಕಠಿಣ ಮಾತುಗಳು ಕೇಳಿ ಬಂದರೂ ಭಾರತ ಇರಾನ್ ನಾಯಕತ್ವದಲ್ಲಿ ತೊಡಗಿಸಿಕೊಂಡಿದೆ.

    ಇತ್ತೀಚೆಗೆ ಇರಾನ್ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. 2018ರ ನವೆಂಬರ್‍ನಲ್ಲಿ ಜಾಯಿಂಟ್ ಕಾಂಪ್ರೆಹೆನ್ಸಿವ್ ಪ್ಯಾನ್ ಆಫ್ ಆಕ್ಷನ್(ಜೆಸಿಪಿಒಎ) ರದ್ದು ಪಡಿಸಿದ ನಂತರ ಅಮೆರಿಕಾ ಇರಾನ್ ಮೇಲೆ ದಂಡ ವಿಧಿಸುವ ನಿರ್ಬಂಧಗಳನ್ನು ಹೇರಿದೆ. ಆಗಿನಿಂದ ಇರಾನ್ ಆರ್ಥಿಕವಾಗಿ ಇನ್ನಷ್ಟು ಮುಗ್ಗರಿಸಿದೆ. ಹೀಗಾಗಿ ಇರಾನ್ ಅಧ್ಯಕ್ಷ ವಿಶ್ವದ ರಾಷ್ಟ್ರಗಳು ಒಟ್ಟಾಗಿ ಕೊರೊನಾ ವೈರಸ್‍ನ್ನು ಎದುರಿಸಬೇಕು ಎಂದು ಪತ್ರ ಬರೆದಿದ್ದಾರೆ.