Tag: ಹವಮಾನ ಇಲಾಖೆ

  • ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆ – ಕೊಡಗಿನಲ್ಲಿ ನಾಳೆ ಶಾಲಾ, ಕಾಲೇಜುಗಳಿಗೆ ರಜೆ

    ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆ – ಕೊಡಗಿನಲ್ಲಿ ನಾಳೆ ಶಾಲಾ, ಕಾಲೇಜುಗಳಿಗೆ ರಜೆ

    ಬೆಂಗಳೂರು: ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆ ಆಗುತ್ತಿದ್ದು, ಕೆಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ.

    ಬೆಳಗ್ಗೆಯಿಂದ ಬಿಟ್ಟು ಬಿಡದೆ ಕೊಡಗಿನ ಭಾಗಮಂಡಲ, ತಲಕಾವೇರಿ ಭಾಗದಲ್ಲಿ ಧಾರಾಕಾರ ಮಳೆ ಆಗುತ್ತಿದೆ. ಪರಿಣಾಮ ಮತ್ತೆ ತ್ರಿವೇಣಿ ಸಂಗಮ ಭರ್ತಿಯಾಗಿದೆ. ಮಳೆಯಿಂದ ನಾಪೋಕ್ಲು ಭಾಗಮಂಡಲ ಮತ್ತು ಮಡಿಕೇರಿ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ರಸ್ತೆ ಮೇಲೆ 2 ಅಡಿ ನೀರು ಹರಿಯುತ್ತಿದೆ. ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ಯವ್ಯಸ್ತಗೊಂಡಿದೆ. ಜಿಲ್ಲೆಯಲ್ಲಿ ಮಳೆ ಮುಂದುವರಿದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೊಡಗು ಜಿಲ್ಲಾಧಿಕಾರಿ ಅನ್ನೀಸ್ ಕಣ್ಮಣಿ ಜಾಯ್ ಗುರುವಾರ ಶಾಲಾ ಕಾಲೇಜು, ಅಂಗನವಾಡಿಗೆ ರಜೆ ಘೋಷಿಸಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕರಾವಳಿ ಭಾಗದಲ್ಲಿ ಬೆಳಗ್ಗೆಯಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಜನ ಚಳಿಯಿಂದ ತತ್ತರಿಸಿ ಹೋಗಿದ್ದಾರೆ. ಆಗೊಮ್ಮೆ ಈಗೊಮ್ಮೆ ಬಿರುಸಾಗಿ ಸುರಿಯುವ ಮಳೆ ಕರಾವಳಿ ಜನರಲ್ಲಿ ಹಳೆ ಕಾಲದ ಮಳೆಯ ವಾತಾವರಣವನ್ನು ನೆನಪಿಸಿದೆ. ಆಗಸ್ಟ್ ಮೊದಲ ವಾರದಲ್ಲಿ ಕರಾವಳಿ ಹಾಗೂ ಪಶ್ಚಿಮ ಘಟ್ಟದಲ್ಲಿ ಭಾರೀ ಮಳೆಯಾಗಿತ್ತು. ಆ ಬಳಿಕ ಮಳೆಯ ಪ್ರಮಾಣ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿತ್ತು. ಇದೀಗ ಮತ್ತೆ ಮಳೆಯ ಅಬ್ಬರ ಶುರುವಾಗಿದ್ದು ಹಗಲು-ರಾತ್ರಿ ಸುರಿಯುತ್ತಿರುವ ಮಳೆ ಜನರನ್ನು ಹೈರಾಣಾಗುವಂತೆ ಮಾಡಿದೆ.

    ಅಲ್ಲದೆ ಕರಾವಳಿಯಲ್ಲಿ ಇನ್ನೆರಡು ದಿನ ಭಾರೀ ಮಳೆ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಲ್ಲದೆ ಕರಾವಳಿ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಪ್ರತಿ ತಾಲೂಕಿನ ನೋಡಲ್ ಅಧಿಕಾರಿಗಳು ಅಲರ್ಟ್ ಇರುವಂತೆ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಸೂಚನೆ ನೀಡಲಾಗಿದೆ.

    ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಕೇರಳದ ವಯನಾಡಿನಲ್ಲಿ ಭಾರೀ ಮಳೆ ಆಗುತ್ತಿದ್ದು, ಕಬಿನಿ ಜಲಾಶಯದ ಒಳಹರಿವು ಮತ್ತಷ್ಟು ಹೆಚ್ಚಾಗಿದೆ. ಜಲಾಶಯದ ಒಳಹರಿವು 22,425 ಕ್ಯೂಸೆಕ್ ಗೆ ಹೆಚ್ಚಾದರೆ, ಜಲಾಶಯದ ಹೊರಹರಿವು 30,000 ಕ್ಯೂಸೆಕ್ ಗೆ ಹೆಚ್ಚಾಗಿದೆ.

    ಇತ್ತ ಹಾವೇರಿಯಲ್ಲೂ ಧಾರಾಕಾರವಾಗಿ ಮಳೆ ಸುರಿಯುತ್ತಿದೆ, ಜಿಲ್ಲೆಯ ಬ್ಯಾಡಗಿ, ರಾಣೇಬೆನ್ನೂರು, ಹಿರೇಕೆರೂರು ಭಾಗದಲ್ಲಿ ಜಿಟಿಜಿಟಿ ಮಳೆ ಆಗುತ್ತಿದ್ದು, ಕೆಲ ಭಾಗದಲ್ಲಿ ಮೋಡ ಕವಿದ ವಾತಾವರಣ ಇದೆ. ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದ ರೈತರಲ್ಲಿ ಆತಂಕ ಹೆಚ್ಚಾಗಿದೆ.

  • ನಗರದಲ್ಲಿ ಇನ್ನೆರಡು ದಿನ ಮಳೆರಾಯನ ಸಿಂಚನ

    ನಗರದಲ್ಲಿ ಇನ್ನೆರಡು ದಿನ ಮಳೆರಾಯನ ಸಿಂಚನ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇನ್ನು ಎರಡು ದಿನ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್ ಪಾಟೀಲ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ಶನಿವಾರದಿಂದ ಎರಡು ದಿನ ಮಳೆರಾಯ ಅಬ್ಬರಿಸಲಿದ್ದಾನೆ. ಈಗಾಗಲೇ ರಾಜಧಾನಿಯಲ್ಲಿ ಮಳೆರಾಯನ ಸಿಂಚನ ಶುರುವಾಗಿದ್ದು, ಕಾರ್ಪೋರೇಶನ್, ಶಾಂತಿನಗರ, ಯಶವಂತಪುರ ಸೇರಿ ಹಲವಡೆ ಭಾರೀ ಮಳೆ ಆಗುತ್ತಿದೆ. ಗಾಳಿಯ ತೀವ್ರತೆ ಹೆಚ್ಚಾದ ಹಿನ್ನೆಲೆಯಲ್ಲಿ ಮಳೆ ಆಗುತ್ತಿದ್ದು, ನಾಲ್ಕು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ.

    ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನಾದ್ಯಂತ ಭಾರೀ ಗಾಳಿಯೊಂದಿಗೆ ಮಳೆ ಸುರಿಯುತ್ತಿದೆ. ಕಳೆದ ಕೆಲ ದಿನದಿಂದ ಮೋಡ ಮುಸುಕಿದ ವಾತಾವರಣ ಇತ್ತು. ಆದರೆ ಇಂದು ಸಂಜೆ 3:30 ರಿಂದ ಗಾಳಿ ಜೊತೆ ಜೋರು ಮಳೆ ಆಗುತ್ತಿದೆ. ಮಳೆಯಿಂದ ರಕ್ಷಿಸಿಕೊಳ್ಳಲು ಸಾರ್ವಜನಿಕರು ಪರದಾಡುತ್ತಿದ್ದು, ಫ್ಲೈ ಓವರ್, ಅಂಗಡಿ, ಬಸ್ ನಿಲ್ದಾಣದಲ್ಲಿ ವಾಹನ ಸವಾರರು ಆಶ್ರಯ ಪಡೆಯುತ್ತಿದ್ದಾರೆ.

    ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಮಳೆ ಮುಂದುವರಿದಿದ್ದು, ಬ್ರಹ್ಮಗಿರಿ ಬೆಟ್ಟದ ಶ್ರೇಣಿಯಲ್ಲಿ ಉತ್ತಮ ಮಳೆಯಾಗಿದೆ. ಈ ಹಿನ್ನೆಲೆಯಲ್ಲಿ ಕಾವೇರಿ ಕನ್ನಿಕೆ ಸುಜೋತಿ ಮೈದುಂಬಿ ಹರಿಯುತ್ತಿದೆ. ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಭಾಗಮಂಡಲ ತ್ರಿವೇಣಿ ಸಂಗಮದಲ್ಲೂ ನೀರಿನ ಮಟ್ಟ ಏರುತ್ತಿದೆ. ಒಂದು ವೇಳೆ ಮಳೆ ಇದೇ ರೀತಿ ಮುಂದುವರಿದಲ್ಲಿ ಎರಡು ದಿನದಲ್ಲಿ ಸಂಗಮ ಭರ್ತಿಯಾಗುವ ಸಾಧ್ಯತೆ ಇದೆ.

  • ಈ ಬಾರಿ ಮಾನ್ಸೂನ್ ಮಳೆ ಕಡಿಮೆ – ಹವಾಮಾನ ಇಲಾಖೆ ಎಚ್ಚರಿಕೆ

    ಈ ಬಾರಿ ಮಾನ್ಸೂನ್ ಮಳೆ ಕಡಿಮೆ – ಹವಾಮಾನ ಇಲಾಖೆ ಎಚ್ಚರಿಕೆ

    ಬೆಂಗಳೂರು: ಒಂದು ಕಡೆ ಸಿಕ್ಕಾಪಟ್ಟೆ ಬಿರುಗಾಳಿ ಮಳೆ, ಮತ್ತೊಂದೆಡೆ ಹನಿ ನೀರಿಗೂ ಹಾಹಾಕಾರ. ಇದರ ನಡುವೆಯೇ ಆಘಾತಕಾರಿ ಸುದ್ದಿ ಬಂದಿದೆ.

    ಈ ಬಾರಿ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಎಲ್‍ನಿನೋ ಕಾರಣದಿಂದ ಜುಲೈ ತಿಂಗಳಲ್ಲಿ ಕಡಿಮೆ ಮಳೆ ಆಗುವ ಸಾಧ್ಯತೆ ಇದ್ದು, ಆಗಸ್ಟ್ ನಲ್ಲಿ ವಾಡಿಕೆಯಂತೆ ಮಳೆ ಆಗಲಿದೆ. ಜೂನ್ 6ರಂದು ಮುಂಗಾರು ಕೇರಳ ಕರಾವಳಿಗೆ ಅಪ್ಪಳಿಸಿದೆ.

    ಇತ್ತ ಮಳೆ ಕೊರತೆ ಹಿನ್ನೆಲೆಯಲ್ಲಿ ಸಿಎಂ ಕುಮಾರಸ್ವಾಮಿ ಸರ್ಕಾರ ಈಗ ದೇವರ ಮೊರೆ ಹೋಗಿದೆ. ಜೂನ್ 6ರಂದು ಸರ್ಕಾರದ ಆಧೀನದಲ್ಲಿ ಬರುವ ಎಲ್ಲ ದೇವಾಲಯಗಳಲ್ಲಿ ಪೂಜೆಗೆ ಸೂಚಿಸಿದೆ. ಗುರುವಾರ ಬ್ರಾಹ್ಮಿ ಮುಹೂರ್ತದಲ್ಲಿ ಕಡ್ಡಾಯವಾಗಿ ಪರ್ಜನ್ಯ ಹೋಮ, ವಿಶೇಷ ಪೂಜೆ ಹಾಗೂ ಜಪಕ್ಕೆ ಸೂಚಿಸಿದೆ.

    ಇಡೀ ದಿನದ ಪೂಜೆಯ ವೆಚ್ಚ 10 ಸಾವಿರದ 1 ರೂಪಾಯಿ ಮೀರಬಾರದು ಎಂದು ಮುಜರಾಯಿ ಇಲಾಖೆ ಸೂಚಿಸಿದೆ. ಇತ್ತ ಬೆಂಗಳೂರಲ್ಲಿ ಸಂಜೆ ಹೊತ್ತಿಗೆ ಹನಿ ಹನಿ ಮಳೆ ಆಗಿದೆ.

  • ರಾಜ್ಯದ ದಕ್ಷಿಣ ಒಳನಾಡಿನಲ್ಲಿ  3 ದಿನ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಎಚ್ಚರಿಕೆ

    ರಾಜ್ಯದ ದಕ್ಷಿಣ ಒಳನಾಡಿನಲ್ಲಿ 3 ದಿನ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಎಚ್ಚರಿಕೆ

    ಬೆಂಗಳೂರು: ಇಂದು ಸಂಜೆ ವೇಳೆಗೆ ಆರಂಭವಾಗಿರುವ ಮಳೆ ಇನ್ನು ಮೂರು ದಿನಗಳ ಕಾಲ ರಾಜ್ಯದ ಒಳನಾಡಿನಲ್ಲಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

    ಬೆಂಗಳೂರು ನಗರದಲ್ಲಿ ಇಂದು ರಾತ್ರಿ ಕೂಡ ಭಾರೀ ಮಳೆಯಾಗುವ ನಿರೀಕ್ಷೆ ಇದ್ದು, ಗುಡುಗು, ಗಾಳಿ ಸಹಿತ ಮಳೆಯಾಗುತ್ತದೆ ಎಂಬ ಮಾಹಿತಿ ಲಭಿಸಿದೆ. ರಾಜ್ಯದ ಕೋಲಾರ, ಚಾಮರಾಜನಗರ, ಹಾಸನ, ಮಂಡ್ಯ ಜಿಲ್ಲೆಯ ಹಲವು ಪ್ರದೇಶದಲ್ಲಿ ಸಂಜೆ ವೇಳೆಗೆ ಮಳೆಯಾಗಿದ್ದು, ಮೂರು ದಿನಗಳ ಕಾಲ ದಕ್ಷಿಣ ಒಳನಾಡಿನಲ್ಲಿ ಮಳೆಯಾಗಲಿದೆ ಎಂದು ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ್ ರೆಡ್ಡಿ ಹೇಳಿದ್ದಾರೆ.

    ಬೆಂಗಳೂರು ನಗರದ ಬಾಣಸವಾಡಿ, ಶಾಂತಿನಗರ, ಮಲ್ಲೇಶ್ವರಂ, ಕಾರ್ಪೊರೇಷನ್, ಮೆಜಸ್ಟಿಕ್, ಆನೇಕಲ್, ಯಶವಂತಪುರ, ಹೆಬ್ಬಾಳ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದ್ದು, ಏಕಾಏಕಿ ಮಳೆ ಆರಂಭವಾದ ಪರಿಣಾಮ ವಾಹನ ಸವಾರರು ಪರದಾಟ ನಡೆಸಿದರು. ಇತ್ತ ಸಂಜೆ ವೇಳೆಗೆ ಕೋಲಾರ ಜಿಲ್ಲೆಯ ಕೆಲವೆಡೆ ಮಳೆರಾಯನ ಆರ್ಭಟ ಜೋರಾಗಿತ್ತು. ಉತ್ತಮ ಭರಣಿ ಮಳೆಗೆ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು, ಸುಮಾರು 30 ನಿಮಿಷಗಳ ಕಾಲ ಗುಡುಗು ಸಹಿತ ಸುರಿದ ಮಳೆಗೆ ಜಿಲ್ಲೆಯ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.

  • ಕಾದು ಕೆಂಡವಾದ ಭೂಮಿಗೆ ತಂಪೆರೆದ ವರುಣ

    ಕಾದು ಕೆಂಡವಾದ ಭೂಮಿಗೆ ತಂಪೆರೆದ ವರುಣ

    ಬೆಂಗಳೂರು: ದಿನದಿಂದ ದಿನಕ್ಕೆ ತಾಪಮಾನ ಹೆಚ್ಚುತ್ತಲೇ ಇದೆ. ಈ ರಣಬಿಸಿಲಿಗೆ ಭೂಮಿ ಕಾದು ಕೆಂಡವಾಗಿದ್ದು, ಜನರು ಹೈರಾಣಾಗಿದ್ದಾರೆ. ಈ ಸನ್ ಸ್ಟ್ರೋಕ್ ಜನರಿಗೆ ಅಷ್ಟೇ ಅಲ್ಲದೆ ವರುಣನಿಗೂ ತಟ್ಟಿದೆ.

    ಈಗ ಸೂರ್ಯ ಭಗ ಭಗಿಸುತ್ತಿದ್ದು, ಭೂಮಿ ಧಗಧಗಿಸುತ್ತಿದೆ. ಆದರೆ ಭಾನುವಾರ ಹಾಗೂ ಸೋಮವಾರ ರಾಜ್ಯದ ಕೆಲವು ಭಾಗಗಳಲ್ಲಿ ಹಗುರ, ಸಾಧಾರಣ ಮಳೆಯಾಗಿದೆ. ಈ ಮಳೆಗೆ ಮೇಲ್ಮೈ ಸುಳಿಗಾಳಿ ಹಾಗೂ ವಾತಾವರಣದಲ್ಲಿ ಗಾಳಿಯ ಒತ್ತಡವೇ ಕಾರಣ. ಮುಂದಿನ ಎರಡು ದಿನಗಳಲ್ಲಿ ಕೆಲವು ಜಿಲ್ಲೆಗಳ ಹಲವು ಭಾಗಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಈ ಮಳೆಯಿಂದ ಬಿಸಿಲಿನ ಪ್ರಮಾಣ ಮಾತ್ರ ಕಡಿಮೆ ಆಗಬಹುದು. ಅದನ್ನು ಬಿಟ್ಟರೆ ಉಷ್ಣಾಂಶದಲ್ಲಿ ವ್ಯತ್ಯಾಸ ಇಲ್ಲವೆಂದು ವಿಜ್ಞಾನಿಗಳು ಹೇಳಿದ್ದಾರೆ. ರಾಜ್ಯದ 7ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಇಂದು 42 ಡಿಗ್ರಿಗೂ ಅಧಿಕ ತಾಪಮಾನ ದಾಖಲಾಗಿತ್ತು. ಬೆಂಗಳೂರಲ್ಲಿ 36 ಡಿಗ್ರಿ ಸೆಲ್ಸಿಯಸ್ ಉಷ್ಣತೆಯಿತ್ತು. ಸೂರ್ಯನ ಝಳವನ್ನು ತಪ್ಪಿಸಿಕೊಳ್ಳಲು ಜನರು ತಂಪು ಪಾನಿಯಗಳಾದ ಜ್ಯೂಸ್, ಐಸ್ ಕ್ರೀಂ, ಮಡಿಕೆ ನೀರು, ಎಳ ನೀರುಗಳ ಮೊರೆ ಹೋಗುತ್ತಿದ್ದಾರೆ.

    ಮಾರ್ಚ್ ಅಂತ್ಯದಲ್ಲಿಯೇ ಹೀಗಾದ್ರೆ ಇನ್ನೂ ಎರಡು ತಿಂಗಳು ಹೇಗಪ್ಪಾ ಬದುಕೋದು ಎಂದು ಜನರು ಯೋಚನೆಯಲ್ಲಿದ್ದಾರೆ.

  • ರಾಜ್ಯಕ್ಕೆ ಹಿಂಗಾರು ಮಳೆ ಎಂಟ್ರಿ- ವರ್ಷಧಾರೆ ಅಬ್ಬರ ಶುರು

    ರಾಜ್ಯಕ್ಕೆ ಹಿಂಗಾರು ಮಳೆ ಎಂಟ್ರಿ- ವರ್ಷಧಾರೆ ಅಬ್ಬರ ಶುರು

    ಬೆಂಗಳೂರು: ರಾಜ್ಯಕ್ಕೆ ಹಿಂಗಾರು ಮಳೆ ಎಂಟ್ರಿಯಾಗಿದ್ದು ಇಂದಿನಿಂದ ರಾಜ್ಯದಲ್ಲಿ ವರ್ಷಧಾರೆಯ ಅಬ್ಬರ ಶುರುವಾಗಲಿದೆ.

    ಅಕ್ಟೋಬರ್ ಎರಡನೇ ವಾರವೇ ಬರಬೇಕಾಗಿದ್ದ, ಈಶಾನ್ಯ ಮುಂಗಾರು ಈ ವರ್ಷ ವಿಳಂಬವಾಗಿದೆ. ಚೆನ್ನೈನಲ್ಲಿ ಈಗಾಗಲೇ ವರುಣನ ಅಬ್ಬರ ಶುರುವಾಗಲಿದ್ದು, ರಾಜ್ಯದಲ್ಲಿ ನವೆಂಬರ್ ಮೂರು ಹಾಗೂ ನಾಲ್ಕರವರೆಗೂ ಮಳೆ ಇರಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.

    ದಕ್ಷಿಣ ಒಳನಾಡು, ಕರಾವಳಿ ಹಾಗೂ ಮಲೆನಾಡಿನಲ್ಲಿ ತುಸು ಹೆಚ್ಚೆ ಅನಿಸುವಷ್ಟು ಮಳೆ ಇರಲಿದೆ. ಬೆಂಗಳೂರಿನಲ್ಲೂ ಮೇಘಸ್ಫೋಟದ ಅಬ್ಬರ ಇರಲಿದೆ. ಈಶಾನ್ಯ ಮಾರುತದ ಆಗಮನದ ವಿಳಂಬದಿಂದ ಬೆಳೆಗಳಿಗೆ ನೀರಿಲ್ಲದೇ ಒದ್ದಾಡುತ್ತಿದ್ದ ರೈತರಿಗೆ ಕೊಂಚ ಸಂತಸ ಮೂಡುವಂತಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಿಲಿಕಾನ್ ಸಿಟಿಗೆ ವರುಣನ ಅವಕೃಪೆ- ರಾಜ್ಯದ 18 ಜಿಲ್ಲೆಯಲ್ಲಿ ಮಳೆಯ ಕೊರತೆ

    ಸಿಲಿಕಾನ್ ಸಿಟಿಗೆ ವರುಣನ ಅವಕೃಪೆ- ರಾಜ್ಯದ 18 ಜಿಲ್ಲೆಯಲ್ಲಿ ಮಳೆಯ ಕೊರತೆ

    ಬೆಂಗಳೂರು: ರಾಜ್ಯದಲ್ಲಿ ಒಂದು ಕಡೆ ಮಳೆರಾಯನ ಆರ್ಭಟ ಜೋರಾಗಿದ್ದು, ಮಳೆ ಸಾಕಪ್ಪ ಸಾಕು ಅನ್ನುವಷ್ಟರ ಮಟ್ಟಿಗೆ ರೌದ್ರ ನರ್ತನ ತೋರುತ್ತಿದ್ದಾನೆ. ಆದರೆ ಇನ್ನೊಂದು ಭಾಗದಲ್ಲಿ ಮಳೆಯ ಕೊರತೆಯಾಗಿದೆ.

    ಕಳೆದ ನಾಲ್ಕು ದಿನಗಳಲ್ಲಿ ರಾಜ್ಯದ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಮಳೆರಾಯನ ಆರ್ಭಟ ಜೋರಾಗಿಯೇ ಇತ್ತು. ಮಳೆ ಅನೇಕ ಅನಾಹುತಗಳನ್ನು ಸೃಷ್ಟಿ ಮಾಡಿದ್ದು, ನಿರೀಕ್ಷೆಗೂ ಮೀರಿ ವರುಣ ದೇವ ಕೃಪೆ ತೋರಿದ್ದಾನೆ. ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ವಾಡಿಕೆಗಿಂತ ಶೇ. 25 ರಷ್ಟು ಮಳೆಯಾಗಿದೆ.

    ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಮಳೆಯ ಕೊರತೆಯಾಗಿದ್ದು, ವಾಡಿಕೆಯಷ್ಟು ಮಳೆಯಾಗದೇ ಇರುವುದು ಜನರಲ್ಲಿ ಆತಂಕ ಮೂಡಿದೆ. ರಾಜ್ಯದ 18 ಜಿಲ್ಲೆಗಳಲ್ಲಿ ಮಳೆಯ ಕೊರತೆಯಾಗಿದೆ. ಉತ್ತರ ಒಳನಾಡಿನ 11 ಜಿಲ್ಲೆಗಳಲ್ಲಿ, ದಕ್ಷಿಣ ಒಳನಾಡಿನ ಭಾಗದ 7 ಜಿಲ್ಲೆಗಳಲ್ಲಿ ಮಳೆಯ ಕೊರತೆಯಾಗಿದೆ.

    ಬೆಂಗಳೂರಿನಲ್ಲಿ ಕೂಡ ಈ ವರ್ಷ ಭಾರಿ ಮಳೆಯ ಕೊರತೆಯಾಗಿದ್ದು, ವಾಡಿಕೆಯಂತೆ 27 ಸೆ.ಮೀ ಮಳೆಯಾಗಬೇಕಿತ್ತು, ಆದರೆ ಕೇವಲ 17 ಸೆ.ಮೀ ಮಳೆಯಾಗಿದೆ. ಶೇ. 25 ರಷ್ಟು ಮಳೆ ಕೊರತೆಯಾಗಿದೆ. ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದ ಮಲೆನಾಡು ಕರಾವಳಿ ಭಾಗದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

    ಸದ್ಯ ಬೆಂಗಳೂರಿನಲ್ಲಿ ಕೂಡ ಮೋಡ ಕವಿದ ವಾತಾವರಣವಿರಲಿದ್ದು, ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ತಿಳಿಸಿದೆ. ಒಟ್ಟಿನಲ್ಲಿ ವರುಣ ಒಂದು ಕಡೆ ಪ್ರವಾಹ ಸೃಷ್ಟಿ ಮಾಡಿದರೆ, ಇನ್ನೊಂದು ಕಡೆ ಬರಗಾಲ ಛಾಯೆ ಮೂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೊಡಗಿನ ಜನರಿಗೆ ಸ್ವಲ್ಪ ನಿರಾಳ- ಮಲೆನಾಡಿನಲ್ಲಿ ಭಾರೀ ಗಾಳಿಗೆ ಕುಸಿದ ಧರೆ

    ಕೊಡಗಿನ ಜನರಿಗೆ ಸ್ವಲ್ಪ ನಿರಾಳ- ಮಲೆನಾಡಿನಲ್ಲಿ ಭಾರೀ ಗಾಳಿಗೆ ಕುಸಿದ ಧರೆ

    ಮಡಿಕೇರಿ: ಕೊಡಗಿನ ಜನರಿಗೆ ಸ್ವಲ್ಪ ನಿರಾಳರಾಗಿದ್ದು, ಮಹಾಮಳೆಯ ತೀವ್ರತೆಯ ಪ್ರಮಾಣ ಕಡಿಮೆಯಾಗಿದೆ.

    ಶುಕ್ರವಾರ ಬೆಳಗ್ಗೆಯಿಂದ ಇಂದು ಶನಿವಾರದವರೆಗೆ 28 ಮಿಮೀ ಮಳೆಯಾಗಿದೆ. ಇದು ಸರಾಸರಿ ಮಳೆಯ ಪ್ರಮಾಣಯಾಗಿದ್ದು, ಮೊನ್ನೆ 100 ಮಿಮೀ ಮಳೆಯಾಗಿತ್ತು. ಸದ್ಯ ಈಗ ಶೇ. 70ರಷ್ಟು ಮಳೆಯ ಪ್ರಮಾಣ ಕಡಿಮೆಯಾಗಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಮಳೆಯ ತೀವ್ರತೆ ಕಡಿಮೆಯಾಗುತ್ತೆ ಎಂದು ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆ ನಿರ್ದೇಶಕ ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ.

    ಇತ್ತ ಚಿಕ್ಕಮಗಳೂರಿನಲ್ಲಿ ಮಳೆ ನಿಂತ ಮೇಲೆ ಮಲೆನಾಡಿನ ಭಾರೀ ಗಾಳಿ ಬೀಸುತ್ತಿದೆ. ಕೊಪ್ಪ ತಾಲೂಕಿನ ಹೇರೂರು ಗ್ರಾಮದಲ್ಲಿ ತಡೆಗೋಡೆ ಸಮೇತ ಧರೆ ಕುಸಿದು ಬಿದಿದ್ದೆ. ಅಲ್ಲದೇ ರಸ್ತೆ ಪಕ್ಕದಲ್ಲೇ ಭೂ ಕುಸಿತವಾಗಿದೆ. ಭೂ ಕುಸಿತವಾಗಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಭಯದಲ್ಲಿ ಚಲಿಸುತ್ತಿದ್ದಾರೆ.

    ದೂಬಳ ಕೈಮರದಿಂದ ದೂಬಳ ಎಸ್ಟೇಟ್ ನ ರಸ್ತೆ ಇದ್ದಾಗಿದ್ದು, ಐದಕ್ಕೂ ಅಧಿಕ ಗ್ರಾಮಗಳಿಗೆ ಮಾರ್ಗ ಸಂಪರ್ಕ ಕಲ್ಪಿಸುತ್ತದೆ. ರಸ್ತೆ ಪಕ್ಕದಲ್ಲೇ ಕುಸಿದಿರೋದ್ರಿಂದ ಗ್ರಾಮಸ್ಥರು ಕಂಗಾಲಾಗಿದ್ದಾರೆ. ಅಲ್ಲದೇ ಸಿಮೆಂಟ್ ತಡೆಗೋಡೆ ಇಪ್ಪತ್ತು ಅಡಿಯಾಚೆಗೆ ಕುಸಿದು ಹೋಗಿದೆ. ಸಿಮೆಂಟ್ ತಡೆಗೋಡೆ ದಾರಿಗಿಂತ ಕೆಳಭಾಗಕ್ಕೆ ಕುಸಿದಿದ್ದು, ಬದಲಿ ಮಾರ್ಗವಿಲ್ಲದ ಕಾರಣ ಜನಸಾಮಾನ್ಯರು ಆತಂಕದಲ್ಲಿದ್ದಾರೆ. ಇದನ್ನೂ ಓದಿ: ಕೊಡಗು ಸಂತ್ರಸ್ತರಿಗೆ ಸಹಾಯ ಮಾಡಿ- ಏನು ಕೊಡಬಹುದು? ಯಾರನ್ನು ಸಂಪರ್ಕಿಸಬಹುದು? ಇಲ್ಲಿದೆ ವಿವರ

    ಮಹಾಮಳೆಯಲ್ಲಿ ಸಿಲುಕಿದ್ದ 3 ಸಾವಿರ ಜನರನ್ನು ರಕ್ಷಿಸಲಾಗಿದೆ. ಇನ್ನೂ 600 ಮಂದಿಯ ರಕ್ಷಣೆಯಾಗಬೇಕಿದೆ, ಜಿಲ್ಲೆಯಲ್ಲಿ 31 ಗಂಜಿಕೇಂದ್ರಗಳನ್ನು ತೆರೆಯಲಾಗಿದೆ. ರಕ್ಷಣಾ ತಂಡಗಳಿಂದ ಭರದ ಕಾರ್ಯಾಚರಣೆ ನಡೀತಿದೆ ಅಂತ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಹೇಳಿದ್ದಾರೆ.

    ಇಂದು ಸಿಎಂ ಕುಮಾರಸ್ವಾಮಿ ಕೊಡಗು ಜಿಲ್ಲೆಗೆ ಭೇಟಿ ನೀಡಿ ಪರಿಹಾರ ಕಾರ್ಯಾಚರಣೆ ಪರಿಶೀಲನೆ ನಡೆಸಲಿದ್ದಾರೆ. ಬೆಳಗ್ಗೆ 10.30ಕ್ಕೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ ನಂತರ ಕೊಡಗು ಜಿಲ್ಲೆಗೆ ತೆರಳಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗಮನಿಸಿ..ಮೂರು ದಿನಗಳ ಕಾಲ ಮಳೆಯಾಗುವ ಸಾಧ್ಯತೆ!

    ಗಮನಿಸಿ..ಮೂರು ದಿನಗಳ ಕಾಲ ಮಳೆಯಾಗುವ ಸಾಧ್ಯತೆ!

    ಬೆಂಗಳೂರು: ರಾಜ್ಯದೆಲ್ಲೆಡೆ ವರುಣನ ಆರ್ಭಟ ಶುರುವಾಗಿದ್ದು, ಭಾನುವಾರ ನಗರದಲ್ಲಿ ಬಿರುಗಾಳಿ ಸಹಿತ ಮಳೆಯಾಗಿದೆ.

    ಬೆಂಗಳೂರು ಹೊರವಲಯ ಆನೇಕಲ್, ಚಂದಾಪುರ, ಅತ್ತಿಬೆಲೆ, ವಿಜಯನಗರ ಸೇರಿದಂತೆ ಹಲವೆಡೆ ವರುಣನ ಅರ್ಭಟವಾಗಿದೆ. ಗಾಳಿ ಸಹಿತ ಆಲಿಕಲ್ಲು ಮಳೆಯಾಗಿದ್ದು, ಸತತ 1 ಗಂಟೆಯಿಂದ ಸುರಿದ ಮಳೆಗೆ ಜನ ಜೀವನ ಅಸ್ಥವ್ಯಸ್ತವಾಗಿತ್ತು.

    ರಾಜ್ಯದ ಹಲವೆಡೆ ನಾಳೆಯಿಂದ ಮೂರು ದಿನಗಳ ಕಾಲ ಮಳೆಯಾಗುವ ಸಂಭವವಿದೆ. ತಮಿಳುನಾಡಿನ ದಕ್ಷಿಣ ಭಾಗದಲ್ಲಿ ಮೇಲ್ಮೈ ಸುಳಿಗಾಳಿ ಹಾಗೂ ಅರಬ್ಬೀ ಸಮುದ್ರದ ನೈರುತ್ಯ ಭಾಗದಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಮಳೆಯಾಗಲಿದೆ.

    ಕರ್ನಾಟಕದ ಕರವಾಳಿ ಭಾಗದಲ್ಲಿ ಹೆಚ್ಚಿನ ಮಳೆಯಾಗಲಿದ್ದು, ಭಾರೀ ಗಾಳಿ ಗುಡುಗು-ಮಿಂಚು ಸಹಿತ ಮಳೆಯಾಗಲಿದೆ. ಇನ್ನೂ ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಭಾಗದಲ್ಲಿ ಕೂಡ ಮಳೆಯಾಗಲಿದ್ದು, ಮಂಡ್ಯ- ಮೈಸೂರು, ಚಾಮರಾಜನಗರ ಸೇರಿದಂತೆ ಹಲವೆಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.