Tag: ಹಳ್ಳಿಗಳು

  • ಚಾಮರಾಜನಗರದಲ್ಲಿ ಕೊರೊನಾಗೆ 4ನೇ ಬಲಿ- ಗುಂಡ್ಲುಪೇಟೆಯಲ್ಲಿ 100ಕ್ಕೇರಿದ ಸೋಂಕು

    ಚಾಮರಾಜನಗರದಲ್ಲಿ ಕೊರೊನಾಗೆ 4ನೇ ಬಲಿ- ಗುಂಡ್ಲುಪೇಟೆಯಲ್ಲಿ 100ಕ್ಕೇರಿದ ಸೋಂಕು

    ಚಾಮರಾಜನಗರ: ಕೊರೊನಾ ಮಹಾಮಾರಿಗೆ ಚಾಮರಾಜನಗರ ಜಿಲ್ಲೆಯಲ್ಲಿ ಮತ್ತೊಬ್ಬರು ಬಲಿಯಾಗಿದ್ದಾರೆ. ಇದರೊಂದಿಗೆ ಕೋವಿಡ್-19 ನಿಂದ ಜಿಲ್ಲೆಯಲ್ಲಿ ನಾಲ್ಕು ದಿನಗಳಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.

    ಗುಂಡ್ಲುಪೇಟೆಯ ಎಪಿಎಂಸಿ ಮಾಜಿ ನಿರ್ದೇಶಕರೂ ಆಗಿದ್ದ ಮರದ ವ್ಯಾಪಾರಿಯೊಬ್ಬರಿಗೆ ಕಳೆದ ನಾಲ್ಕು ದಿನಗಳ ಹಿಂದೆ ಕೊರೊನಾ ದೃಢಪಟ್ಟಿತ್ತು. ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ 65 ವರ್ಷದ ಈ ವ್ಯಕ್ತಿಯನ್ನು ಚಾಮರಾಜನಗರದ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಐಸಿಯು ವಾರ್ಡ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಯ ಪತ್ನಿ, ಮಗ, ಮಗಳು, ಅಳಿಯನಿಗೂ ಕೊರೊನಾ ದೃಢಪಟ್ಟಿದ್ದು ಅವರನ್ನು ಸಹ ಚಾಮರಾಜನಗರ ಜಿಲ್ಲೆ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಜುಲೈ 11ರಂದು ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯಲ್ಲಿ ತಾಲೂಕಿನ ಕಾಮಗೆರೆಯ 58 ವರ್ಷದ ಸೋಂಕಿತ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಜುಲೈ 12ರಂದು ಕೊಳ್ಳೇಗಾಲದವರೇ ಆದ 65 ವರ್ಷದ ನಿವೃತ್ತ ನರ್ಸಿಂಗ್ ಸೂಪರಿಂಟೆಂಡೆಂಟ್ ಒಬ್ಬರು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದರು. ಜುಲೈ 13ರಂದು ಪಾಳ್ಯ ಗ್ರಾಮದ 60 ವರ್ಷದ ವ್ಯಕ್ತಿ ಕೋವಿಡ್-19ಗೆ ಬಲಿಯಾಗಿದ್ದರು. ಇದೀಗ ಗುಂಡ್ಲುಪೇಟೆಯ 65 ವರ್ಷದ ವ್ಯಕ್ತಿ ಕೊರೊನಾಗೆ ಬಲಿಯಾಗಿದ್ದು ದಿನಕ್ಕೊಬ್ಬರಂತೆ ಸತತ ನಾಲ್ಕು ದಿನಗಳಿಂದ ಸರಣಿ ಸಾವು ಸಂಭವಿಸಿರುವುದು ಆತಂಕ ಮೂಡಿಸಿದೆ.

    ಈವರೆಗೆ ಚಾಮರಾಜನಗರ ಜಿಲ್ಲೆಯಲ್ಲಿ 187 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಗುಂಡ್ಲುಪೇಟೆ ತಾಲೂಕೊಂದರಲ್ಲೇ ಸೋಂಕಿತರ ಸಂಖ್ಯೆ ಶತಕ ದಾಟಿದೆ. ಗುಂಡ್ಲುಪೇಟೆ ಪಟ್ಟಣ ಹಾಗೂ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 103ಕ್ಕೆ ಏರಿದೆ. ಜೂನ್ 19ರಂದು ಗುಂಡ್ಲುಪೇಟೆ ಮಹದೇವಪ್ರಸಾದ್ ನಗರದ ಟೆಂಪೋ ಚಾಲಕನೊಬ್ಬನಿಗೆ ಕೊರೊನಾ ದೃಢಪಟ್ಟಿತ್ತು. ತಮಿಳುನಾಡಿಗೆ ಸರಕು ಸಾಗಾಣೆ ಮಾಡುತ್ತಿದ್ದ ಈ ಟೆಂಪೋ ಚಾಲಕನ ಸಂಪರ್ಕದಿಂದ ಮಹದೇವಪ್ರಸಾದ್ ನಗರದ ಹಲವಾರು ಮಂದಿಗೆ ಸೋಂಕು ತಗುಲಿತ್ತು.

    ಇಷ್ಟೇ ಅಲ್ಲದೆ ಅಂತರ ಜಿಲ್ಲಾ ಹಾಗೂ ಅಂತರ ರಾಜ್ಯ ಪ್ರಯಾಣದಿಂದ ಗುಂಡ್ಲುಪೇಟೆ ತಾಲೂಕಿನ ಗ್ರಾಮಾಂತರ ಪ್ರದೇಶಕ್ಕೂ ಕೊರೊನಾ ಕಾಲಿಟ್ಟಿದೆ. ತಾಲೂಕಿನ ಚಿಕ್ಕತುಪ್ಪೂರು, ದೊಡ್ಡತುಪ್ಪೂರು, ದೇಪಾಪುರ, ಕಬ್ಬಹಳ್ಳಿ ಮಡಹಳ್ಳಿ, ಬೊಮ್ಮಲಾಪುರ, ಕುನಗಹಳ್ಳಿ, ಬೆಳವಾಡಿ, ಬಂಡಿಪುರ ಹೀಗೆ ಹಳ್ಳಿ ಹಳ್ಳಿಗೂ ಕೊರೊನಾ ಕಾಲಿರಿಸುವ ಮೂಲಕ ಸಮುದಾಯಕ್ಕೂ ಹಬ್ಬಿರುವ ಆತಂಕ ಮೂಡಿಸಿದೆ.

  • ಹಳ್ಳಿಯಲ್ಲಿ ವೈದ್ಯರಾಗಲಿರುವ ವಿದ್ಯಾರ್ಥಿಗಳಿಗೆ ಶೇ.10 ಮೀಸಲಾತಿ

    ಹಳ್ಳಿಯಲ್ಲಿ ವೈದ್ಯರಾಗಲಿರುವ ವಿದ್ಯಾರ್ಥಿಗಳಿಗೆ ಶೇ.10 ಮೀಸಲಾತಿ

    ಮುಂಬೈ: ವೈದ್ಯರಾದ ಬಳಿಕ ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲು ಇಚ್ಛಿಸುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಕೋರ್ಸ್‍ಗಳಲ್ಲಿ ಶೇ.10ರಷ್ಟು ಮೀಸಲಾತಿ ನೀಡುವ ಕಾಯ್ದೆ ತರಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ.

    ಮಸೂದೆ ಅಂಗೀಕಾರವಾಗಿ ಕಾಯ್ದೆಯಾದ ಬಳಿಕ ಮಹಾರಾಷ್ಟ್ರದ ಸರ್ಕಾರಿ ಆಸ್ಪತ್ರೆಗಳಲ್ಲಿ, ದೀರ್ಘಾವಧಿಯ ಆಧಾರದ ಮೇಲೆ ಸ್ವಯಂಪ್ರೇರಣೆಯಿಂದ ತಮ್ಮ ಸೇವೆ ಸಲ್ಲಿಸಲು ಸಿದ್ಧರಿರುವ ಅಭ್ಯರ್ಥಿಗಳಿಗೆ ವೈದ್ಯಕೀಯ ಸ್ಥಾನಗಳನ್ನು ಕಾಯ್ದಿರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

    ವಿದ್ಯಾರ್ಥಿಗಳು ಮುಂದೆ ವೈದ್ಯರಾದ ಬಳಿಕ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಲು ಸಿದ್ಧರಿದ್ದರೆ ಅವರಿಗೆ ಈ ಹೊಸ ಮೀಸಲಾತಿ ದೊರಕುತ್ತದೆ. ಸರ್ಕಾರಿ ಆಸ್ಪತ್ರೆಗಳು, ವಿಶೇಷವಾಗಿ ಗ್ರಾಮೀಣ ಪ್ರದೇಶ, ಬುಡಕಟ್ಟು ಪ್ರದೇಶಗಳಲ್ಲಿ ವೈದ್ಯರ ಕೊರತೆಯಿದೆ. ಹೀಗಾಗಿ ಈ ಕೊರತೆಯನ್ನು ನೀಗಿಸಲು ವೈದ್ಯಕೀಯ ಕಾಲೇಜುಗಳಿಗೆ ಈ ಹೊಸ ಮೀಸಲಾತಿ ವ್ಯವಸ್ಥೆಯನ್ನು ಪರಿಚಯಿಸಲು ಮಹಾರಾಷ್ಟ್ರ ಸರ್ಕಾರ ಪ್ಲಾನ್ ಮಾಡಿದೆ.

    ಈ ಮೀಸಲಾತಿ ಪಡೆಯುವ ವಿದ್ಯಾರ್ಥಿಗಳು ಕೋರ್ಸ್ ಮುಗಿದ ನಂತರ ಸರ್ಕಾರಿ ಆಸ್ಪತ್ರೆಗಳಲ್ಲಿ ಕನಿಷ್ಠ 5 ವರ್ಷಗಳ ಕಾಲ ಕಡ್ಡಾಯವಾಗಿ ಕರ್ತವ್ಯ ನಿರ್ವಹಿಸಬೇಕಾಗುತ್ತದೆ ಎನ್ನುವ ಅಂಶ ಈ ಮಸೂದೆಯಲ್ಲಿ ಇರಲಿದೆ.