Tag: ಹಳ್ಳಿಕಾರ್‌

  • ಹಸುವಿಗೆ ಲಕ್ಷಾಂತರ ರೂ. ಖರ್ಚು ಮಾಡಿ ಸೀಮಂತ – ಹಳ್ಳಿಕಾರ್‌ ತಳಿ ಉಳಿಸಲು ಉದ್ಯಮಿಯಿಂದ ವಿಶೇಷ ಜಾಗೃತಿ!

    ಹಸುವಿಗೆ ಲಕ್ಷಾಂತರ ರೂ. ಖರ್ಚು ಮಾಡಿ ಸೀಮಂತ – ಹಳ್ಳಿಕಾರ್‌ ತಳಿ ಉಳಿಸಲು ಉದ್ಯಮಿಯಿಂದ ವಿಶೇಷ ಜಾಗೃತಿ!

    ಹಾಸನ: ಹಿಂದೂ ಸಂಪ್ರದಾಯದಲ್ಲಿ ತುಂಬು ಗರ್ಭಿಣಿಯರಿಗೆ ಇಷ್ಟವಾದ ಅಡುಗೆ ಸಿದ್ಧಪಡಿಸಿ ಸೀಮಂತ ಶಾಸ್ತ್ರ ಮಾಡುವ ವಾಡಿಕೆ ಇದೆ. ಅದೇ ರೀತಿ ಹಾಸನದ (Hassan) ವ್ಯಕ್ತಿಯೊಬ್ಬರು ನವಮಾಸ ತುಂಬಿದ ಹಳ್ಳಿಕಾರ್ (Hallikar) ತಳಿಯ ಹಸುವಿಗೆ (Cow) ಕಲ್ಯಾಣಮಂಟಪದಲ್ಲಿ ಸೀಮಂತ ಶಾಸ್ತ್ರ ಮಾಡುವ ಮೂಲಕ ವಿಶೇಷ ಸಂಪ್ರದಾಯವೊಂದಕ್ಕೆ ನಾಂದಿ ಹಾಡಿದ್ದಾರೆ.

    ಉದ್ಯಮಿ ದಿನೇಶ್ ಎಂಬವರು ಗರ್ಭಿಣಿಯರಿಗೆ ಮಾಡುವ ಶಾಸ್ತ್ರದ ರೀತಿಯಲ್ಲಿಯೇ ಹಸುವಿಗೂ ಶಾಸ್ತ್ರ ಮಾಡಿ, ನೂರಾರು ಮಂದಿಗೆ ಭರ್ಜರಿ ಭೋಜನ ಏರ್ಪಡಿಸಿ ಗಮನ ಸೆಳೆದಿದ್ದಾರೆ. ಸಾಕು ಪ್ರಾಣಿಗಳು, ಅದರಲ್ಲೂ ಜಾನುವಾರುಗಳೆಂದರೆ ದಿನೇಶ್‌ ಅವರಿಗೆ ಬಲು ಪ್ರೀತಿ. ಅದರಲ್ಲೂ ದೇಸಿಯ ಹಳ್ಳಿಕಾರ್ ತಳಿಯ ಹಸು, ಎತ್ತುಗಳನ್ನು ಸಾಕುವುದರಲ್ಲಿ ಇವರು ಎತ್ತಿದ ಕೈ. ಈ ಹಂಬಲದಿಂದಲೇ ಬೆಂಗಳೂರಿನ ಬಿಡದಿ ಬಳಿಯ ಹಳ್ಳಿಯಿಂದ ನಾಲ್ಕು ತಿಂಗಳ ಹಳ್ಳಿಕಾರ್ ತಳಿಯ ಹೆಣ್ಣು ಕರುವನ್ನು ತಂದು ಅದಕ್ಕೆ ಗೌರಿ ಎಂದು ನಾಮಕರಣ ಮಾಡಿ ಸಾಕಿ ಸಲಹಿದ್ದಾರೆ. ಇನ್ನೊಂದು ವಾರದಲ್ಲಿ ಗೌರಿ ಕರುವಿಗೆ ಜನ್ಮ ನೀಡಲಿದೆ. ಅದಕ್ಕೂ ಮುಂಚೆ ದಿನೇಶ್ ಹಾಗೂ ಕುಟುಂಬದವರು, ಹಸುವಿಗೆ ಸೀಮಂತ ಶಾಸ್ತ್ರ ಮಾಡುವ ರೀತಿಯಲ್ಲಿಯೇ ಲಕ್ಷಾಂತರ ರೂ. ಖರ್ಚು ಮಾಡಿ ಇಂದು ಅದ್ಧೂರಿ ಸೀಮಂತ ಶಾಸ್ತ್ರ ಮಾಡಿದ್ದಾರೆ.

    ನಗರದ ಚನ್ನಪಟ್ಟಣದಲ್ಲಿರುವ ಗೋಮತಿ ಕಲ್ಯಾಣ ಮಂಟಪದಲ್ಲಿ ಗೌರಿ ಹಸುವಿಗೆ ಅಲಂಕಾರ ಮಾಡಿ, ಹೂವು ಮುಡಿಸಿ, ವೀಳ್ಯೆದೆಲೆ, ಹಸಿರು ಬಳೆ, ಅಕ್ಷತೆ, ಬೆಲ್ಲ, ಕೊಬ್ಬರಿ, ಹಣ್ಣುಗಳನ್ನಿಟ್ಟಿದ್ದು, ಹಸುವಿಗೆ ಆರತಿ ಬೆಳಗಿ ಹಣ್ಣು ನೀಡಿದರು. ಸೀಮಂತ ಶಾಸ್ತ್ರದಲ್ಲಿ ಐನೂರಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದು ಅಪರೂಪದ ಸೀಮಂತ ಶಾಸ್ತ್ರವನ್ನು ಕಣ್ತುಂಬಿಕೊಂಡು ಗೌರಿಗೆ ಹಾರೈಸಿದರು. ಬಂದಿದ್ದ ಎಲ್ಲರಿಗೂ ಭರ್ಜರಿ ಔತಣಕೂಟ ಏರ್ಪಡಿಸಿದ್ದು, ಸೀಮಂತ ಶಾಸ್ತ್ರದಲ್ಲಿ ಭಾಗಿಯಾಗಿದ್ದವರು ಭರ್ಜರಿ ಊಟ ಸವಿದು ತೆರಳಿದದ್ದಾರೆ.

    ಈ ಬಗ್ಗೆ ಮಾತಾಡಿದ ದಿನೇಶ್‌, ಹಳ್ಳಿಕಾರ್ ತಳಿ ನಮ್ಮ ದೇಸಿಯ ತಳಿಯಾಗಿದ್ದು, ಇದನ್ನು ಉಳಿಸುವುದು ನಮ್ಮ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಸೀಮಂತ ಶಾಸ್ತ್ರ ಮಾಡುವ ಮೂಲಕ ರೈತರು ಹಾಗೂ ಜಾನುವಾರು ಪ್ರಿಯರಲ್ಲಿ ಅರಿವು ಮೂಡಿಸುತ್ತಿದ್ದೇವೆ ಎಂದಿದ್ದಾರೆ.

    ಒಟ್ಟಿನಲ್ಲಿ ಹಳ್ಳಿಕಾರ್ ತಳಿ ಉಳಿಸಿ, ಬೆಳೆಸಬೇಕು ಎಂಬ ಕೂಗಿನ ನಡುವೆ ದಿನೇಶ್ ಅವರು ಒಡಲು ತುಂಬಿಕೊಂಡ ಹಸುವಿಗೆ ಸೀಮಂತ ಶಾಸ್ತ್ರ ಮಾಡಿದ್ದು ಒಂದು ಮಾದರಿಯಾಗಿದೆ.

  • ಜಾತಿಗಣತಿ ವರದಿ ಆಧಾರದ ಮೇಲೆ ಹಳ್ಳಿಕಾರ್ ಸಮುದಾಯಕ್ಕೆ ನ್ಯಾಯ ಒದಗಿಸುತ್ತೇವೆ: ಸಿದ್ದರಾಮಯ್ಯ

    ಜಾತಿಗಣತಿ ವರದಿ ಆಧಾರದ ಮೇಲೆ ಹಳ್ಳಿಕಾರ್ ಸಮುದಾಯಕ್ಕೆ ನ್ಯಾಯ ಒದಗಿಸುತ್ತೇವೆ: ಸಿದ್ದರಾಮಯ್ಯ

    – 3ಎ ಯಿಂದ ಪ್ರವರ್ಗ-1ಕ್ಕೆ ಸೇರಿಸಲು ಕೂಡಲೇ ಕ್ರಮ ಕೈಗೊಳ್ಳುತ್ತೇನೆಂದ ಸಿಎಂ

    ಬೆಂಗಳೂರು: ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದವರಿಗೆ 10% ಮೀಸಲಾತಿ ಕೊಟ್ಟಿದೆ. ಈ ಮೀಸಲಾತಿಗೆ ನೀವು ಬಂದರೆ ನಿಮಗೂ ಈ ಸೌಲಭ್ಯ ಸಿಗುತ್ತದೆ. ಇಲ್ಲದಿದ್ದರೇ ಜಾತಿಗಣತಿ ವರದಿ ಆಧಾರದ ಮೇಲೆ ನ್ಯಾಯ ಒದಗಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಭರವಸೆ ನೀಡಿದರು.

    ನಗರದ ಮೈಸೂರು ರಸ್ತೆಯ (Mysuru Road) ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ ರಾಜ್ಯ ಹಳ್ಳಿ ಕಾರ್ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ (DCM DK Shivakumar) ಭಾಗವಹಿಸಿದ್ದರು. ಸಮಾವೇಶದಲ್ಲಿ ಹಳ್ಳಿಕಾರ್ ಸಮುದಾಯದ ಮುಖಂಡರು ತಮ್ಮ ಸಮುದಾಯವನ್ನು 3ಎ ಯಿಂದ ಪ್ರವರ್ಗ-1ಕ್ಕೆ ಸೇರಿಸಬೇಕೆಂದು ಮನವಿ ಮಾಡಿದರು. ಇದಕ್ಕೆ ಸಿಎಂ, ಡಿಸಿಎಂ ಸ್ಪಂದಿಸಿದರು.ಇದನ್ನೂ ಓದಿ:ದೀಪಾವಳಿ ಹಬ್ಬಕ್ಕೆಂದು ಊರಿಗೆ ತೆರಳುವಾಗ ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತ – 10 ಮಂದಿಗೆ ಗಾಯ

    ಬಳಿಕ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ, 1931ರ ಬಳಿಕ ನಾನು ಜಾತಿಗಣತಿ ವರದಿಗೆ ಆದೇಶ ಮಾಡಿದ್ದೆ. ನಿಮಗೆ ನಾವು ಜಾತಿಗಣತಿ ಆಧಾರದ ಮೇಲೆ ನ್ಯಾಯ ಒದಗಿಸುತ್ತೇವೆ. ನಿಮ್ಮನ್ನ 3ಎಗೆ ಸೇರಿಸುವುದು ಸಮಂಜಸವಲ್ಲ. ಕೇವಲ 65 ಸಾವಿರ ಜನರು ಇರುವ ಹಳ್ಳಿ ಕಾರ್ ಸಮುದಾಯದಲ್ಲಿ ಒಬ್ಬರೇ ಒಬ್ಬರು ಐಎಎಸ್, ಐಪಿಎಸ್ ಅಧಿಕಾರಿಗಳಿಲ್ಲ. ಹೀಗಾಗಿ ನಾನು ನಿಮ್ಮ ಪರವಾಗಿ ಸಹಾನುಭೂತಿಯಿಂದ ಇದ್ದೇನೆ. ಸಾಮಾಜಿಕ ನ್ಯಾಯದಿಂದ ನಾವು ಹಿಂದೆ ಬೀಳಲ್ಲ ಎಂದು ಮನವಿಗೆ ಪ್ರತಿಕ್ರಿಯಿಸಿದರು.

    ಹಳ್ಳಿಕಾರ್ ಸಮುದಾಯ ರಾಜಕೀಯ, ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿದೆ. ಪಶುಸಂಗೋಪನೆ ಈ ಸಮುದಾಯದ ಮೂಲ ಕುಲಕಸುಬಾಗಿದೆ. ಸಮುದಾಯಗಳಿಗೆ ವಿದ್ಯೆ, ಶಿಕ್ಷಣ ಪರಿಣಾಮಕಾರಿಯಾದ ಅಸ್ತ್ರ. ಶಿಕ್ಷಿತರಾದಾಗ ಮಾತ್ರ ತಮ್ಮ ಪಾಲನ್ನು ಪಡೆಯಲು ಸಾಧ್ಯ. ಹಳ್ಳಿಕಾರ್ ಸಮುದಾಯದಲ್ಲಿ ಐಎಎಸ್, ಐಪಿಎಸ್ ಆದವರೂ ಯಾರೂ ಇಲ್ಲ. ಇದನ್ನು ನೋಡಿದಾಗ ಶೈಕ್ಷಣಿಕವಾಗಿ ಸಮುದಾಯ ತೀರಾ ಹಿಂದುಳಿದಿದೆ. ಶೂದ್ರ ಜನಾಂಗ ಶತ ಶತಮಾನಗಳ ಕಾಲ ಅಕ್ಷರ ಸಂಸ್ಕೃತಿಯಿಂದ ಹಿಂದುಳಿದಿವೆ ಎಂದರು.

    3ಎ ನಲ್ಲಿರುವ ಜನಾಂಗವನ್ನು ಪ್ರವರ್ಗ ಒಂದಕ್ಕೆ ಸೇರಿಸುವ ಪ್ರಸ್ತಾಪವಿದೆ. ಇವತ್ತು ಜಾತಿ ಜನಗಣತಿ (Caste Census) ಮಾಡುವ ಅಗತ್ಯವಿಲ್ಲ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಜನಗಣತಿ ಮಾಡಿಸಿದ್ದೆ. ಅವರು ಇತ್ತೀಚೆಗೆ ವರದಿ ಕೊಟ್ಟಿದ್ದಾರೆ. ಆ ವರದಿಯನ್ನು ಇನ್ನೂ ನಾನು ನೋಡಿಲ್ಲ. ಆ ವರದಿ ನೋಡಿದರೆ ಮಾತ್ರ ಯಾವ ಜನಾಂಗ ಸಾಮಾಜಿಕ, ಶೈಕ್ಷಣಿಕವಾಗಿ, ರಾಜಕೀಯವಾಗಿ ಹಿಂದುಳಿದಿದ್ದಾರೆ ಎಂದು ಗೊತ್ತಾಗುತ್ತದೆ ಎಂದು ತಿಳಿಸಿದರು.

    ಬಳಿಕ ಡಿಸಿಎಂ ಡಿ.ಕೆ ಶಿವಕುಮಾರ್ ಮಾತನಾಡಿ, ಕೆ.ನಾಗರಾಜ್ ಹಳ್ಳಿಕಾರ್ ಸಮುದಾಯದ ಅಧ್ಯಕ್ಷರಲ್ಲ. ಬೆಂಗಳೂರಿನ ಅನೇಕ ನಾಯಕರನ್ನು ತಯಾರು ಮಾಡಿದ್ದಾರೆ. ಅವರನ್ನು ನಾವು ಎಂಎಲ್‌ಸಿಯಾಗಿ ಮಾಡಿದ್ದೇವು. ಆಗ ನನಗೆ ಬೇಡ ಎಂದು ಅಧಿಕಾರ ತ್ಯಾಗ ಮಾಡಿದರು. 80 ವರ್ಷ ಆದಮೇಲೆ ಈ ಸಮಾವೇಶ ನಡೆಯುತ್ತಿದೆ. ಹಳ್ಳಿಕಾರರು ಕೃಷ್ಣ ಕುಲಕ್ಕೆ ಸೇರಿದವರು. ಸಿಎಂ ನಿಮ್ಮಲ್ಲರ ಪರವಾಗಿರುವ ನಾಯಕ. ಸಮುದಾಯದ ಬೇಡಿಕೆಯ ಕುರಿತು ಪರಿಶೀಲನೆ ನಡೆಸುತ್ತೇವೆ. ನಿಮ್ಮ ಶ್ರಮ, ಸಮಾಜದ ಫಲ ಯಶಸ್ಸು ಕಾಣಬೇಕಾದರೆ ಧರ್ಮರಾಯನ ರೀತಿ ಧರ್ಮವಿರಬೇಕು. ಕೃಷ್ಣನ ರೀತಿ ತಂತ್ರವಿರಬೇಕು ಆಗ ಯಶಸ್ಸು ಗಳಿಸಲು ಸಾಧ್ಯ. ಕೃಷಿಕ, ಕಾರ್ಮಿಕ, ಶಿಕ್ಷಕ, ಸೈನಿಕ ಸಮಾಜದಲ್ಲಿ ನಾಲ್ಕು ವರ್ಗವಿದೆ. ಹಳ್ಳಿಕಾರ ಸಮುದಾಯ ಕುಲದ ಜೊತೆಗೆ ಈ ಸರ್ಕಾರವಿದೆ ಎಂದು ಭರವಸೆ ನೀಡಿದರು.ಇದನ್ನೂ ಓದಿ: ರವೀಂದ್ರ ಸಂಗೀತದ ಬದಲಿಗೆ ಬಂಗಾಳದಲ್ಲಿ ಬಾಂಬ್ ಸದ್ದು ಕೇಳುತ್ತಿದೆ: ದೀದಿ ವಿರುದ್ಧ ಅಮಿತ್ ಶಾ ಕಿಡಿ

  • ಪರ್ಸನಲ್ ವಿಚಾರವನ್ನು ಪಬ್ಲಿಕ್‌ನಲ್ಲಿ ಹೇಳುವ ಮುಠ್ಠಾಳ ನಾನಲ್ಲ- ವರ್ತೂರು ಕಿಡಿ

    ಪರ್ಸನಲ್ ವಿಚಾರವನ್ನು ಪಬ್ಲಿಕ್‌ನಲ್ಲಿ ಹೇಳುವ ಮುಠ್ಠಾಳ ನಾನಲ್ಲ- ವರ್ತೂರು ಕಿಡಿ

    ‘ಬಿಗ್ ಬಾಸ್ ಕನ್ನಡ 10’ರ ಸ್ಪರ್ಧಿ (Bigg Boss Kannada 10) ವರ್ತೂರು ಸಂತೋಷ್ (Varthur Santhosh) ಅವರು ಬಿಗ್ ಬಾಸ್ ಮನೆಯಲ್ಲಿದ್ದಾಗ ಪತ್ನಿ ಜೊತೆಗಿನ ಮನಸ್ತಾಪಗಳ ಬಗ್ಗೆ ಬಾಯ್ಬಿಟ್ಟಿದ್ದರು. ಪತ್ನಿಯ ಕುಟುಂಬಸ್ಥರು ಕೂಡ ವರ್ತೂರು ಸಂತೋಷ್ ಬಗ್ಗೆ ಕಿಡಿಕಾರಿದ್ದರು. ಆದರೆ ದೊಡ್ಮನೆಯಿಂದ ಹೊರ ಬಂದ್ಮೇಲೆ ಅಸಲಿಗೆ ವೈಯಕ್ತಿಕ ಬದುಕಿನಲ್ಲಿ ಏನಾಗಿತ್ತು? ಎಂಬುದರ ಬಗ್ಗೆ ವರ್ತೂರು ಸಂತೋಷ್ ಪ್ರತಿಕ್ರಿಯೆ ನೀಡಲೇ ಇಲ್ಲ. ಇದೀಗ ಸುದ್ದಿಗೋಷ್ಠಿಯೊಂದರಲ್ಲಿ ಪತ್ನಿ ಬಗ್ಗೆ ಕೇಳಿದ್ದಕ್ಕೆ ವರ್ತೂರು ಗರಂ ಆಗಿದ್ದಾರೆ. ಇದನ್ನೂ ಓದಿ:ಡಾರ್ಲಿಂಗ್‌ ಪ್ರಭಾಸ್‌ ಜೊತೆ ರಶ್ಮಿಕಾ ಮಂದಣ್ಣ ರೊಮ್ಯಾನ್ಸ್

    ಹಳ್ಳಿಕಾರ್ ರೇಸ್ ಕುರಿತು ನಡೆಸಿದ ಮಾಧ್ಯಮಗೋಷ್ಠಿಯಲ್ಲಿ, ಪತ್ನಿ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಸಂತೋಷ್ ಸಿಡಿದೆದ್ದಿದ್ದಾರೆ. ಈ ಬಗ್ಗೆ ವರ್ತೂರು ಸಂತೋಷ್ ಮಾತನಾಡಿ, ಇದು ಪರ್ಸನಲ್ ವಿಚಾರ. ಇದನ್ನು ಪಬ್ಲಿಕ್‌ನಲ್ಲಿ ಹೇಳುವ ಮುಠ್ಠಾಳ ನಾನಲ್ಲ. ಯಾರೋ ಮುಠ್ಠಾಳರು ಅಂಥ ಕೆಲಸ ಮಾಡಿದ್ದಾರೆ ಎಂದರೆ ಅವರ ಮಟ್ಟಕ್ಕೆ ಇಳಿಯಲು ನಾವು ರೆಡಿ ಇಲ್ಲ. ಎಲ್ಲರ ಮನೆಯ ದೋಸೆ ಕೂಡ ತೂತು. ಕೆಲವರ ಮನೆ ಹಂಚೇ ತೂತಾಗಿರುತ್ತದೆ. ನಿಮಗೆ ಅರ್ಥ ಆಗಿದೆ ಎಂದು ಭಾವಿಸುತ್ತೇನೆ ಎಂದು ಪತ್ನಿ ಬಗ್ಗೆ ಕೇಳಿದ್ದಕ್ಕೆ ವರ್ತೂರು ಕೆಂಡಕಾರಿದ್ದಾರೆ.

    ಕೆಲವೊಂದು ಸಂಬಂಧಗಳು ಕೆಲವೊಂದು ವೇದಿಕೆಗೆ ಹೋದ್ಮೇಲೆ ಗೊತ್ತಾಗುತ್ತದೆ. ಅವರು ಸೊಳ್ಳೆಗೂ ಕಂಪೇರ್ ಮಾಡಲು ಆಗದೇ ಇರುವವರು ಎಂದು ಪತ್ನಿ ಕುಟುಂಬಕ್ಕೆ ಪರೋಕ್ಷವಾಗಿ ವರ್ತೂರು ಕುಟುಕಿದ್ದಾರೆ. ನಾವು ಯಾರ ಬಗ್ಗೆ ಆದರೂ ಮಾತನಾಡಬೇಕು ಅಂದರೆ ಸರಿಸಮಾನವಾಗಿರಬೇಕು. ಅವರು ಏನು ಅಲ್ಲ ಬಿಡಿ ಎಂದು ಮಾತನಾಡಿದ್ದಾರೆ. ಮದುವೆ ವಿಚಾರಕ್ಕೆ ವರ್ತೂರು ಖಡಕ್ ಆಗಿ ಉತ್ತರ ನೀಡಿದ್ದಾರೆ.

    ಇನ್ನೂ ಹಳ್ಳಿಕಾರ್ ರೇಸ್ ಮಾರ್ಚ್‌ನಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಅದಕ್ಕಾಗಿ ತೆರೆಮರೆಯಲ್ಲಿ ಸಕಲ ಸಿದ್ಧತೆ ನಡೆಯಲಿದೆ. ಹಳ್ಳಿಕಾರ್ ಹಬ್ಬದಲ್ಲಿ ಸುದೀಪ್ (Sudeep), ಧ್ರುವ ಸರ್ಜಾ ಭಾಗಿಯಾಗುವ ಸಾಧ್ಯತೆ ಇದೆ. ಬಿಗ್ ಬಾಸ್ ಕನ್ನಡ 10ರ ಸ್ಪರ್ಧಿಗಳು ಕೂಡ ವರ್ತೂರುಗೆ ಸಾಥ್ ನೀಡಲಿದ್ದಾರೆ.

  • Breaking-ಮತ್ತೊಂದು ವಿವಾದದಲ್ಲಿ ವರ್ತೂರು ಸಂತೋಷ್: ರೈತರ ಆಕ್ರೋಶ

    Breaking-ಮತ್ತೊಂದು ವಿವಾದದಲ್ಲಿ ವರ್ತೂರು ಸಂತೋಷ್: ರೈತರ ಆಕ್ರೋಶ

    ಹುಲಿ ಉಗುರು ಪ್ರಕರಣದ ಬೆನ್ನಲ್ಲೇ ಮತ್ತೊಂದು ವಿವಾದವನ್ನು ತಮ್ಮ ಮೈಮೇಲೆ ಎಳೆದುಕೊಂಡಿದ್ದಾರೆ ವರ್ತೂರು ಸಂತೋಷ್ (Varthur Santhosh). ಹಳ್ಳಿಕಾರ್  (Hallikar) ಹೆಸರಿಗೆ ಅಪಮಾನ ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ಹಳ್ಳಿಕಾರ್ ರೈತರು ಸಂತೋಷ್ ಮೇಲೆ ಆಕ್ರೋಶಗೊಂಡಿದ್ದಾರೆ. ತಮ್ಮ ವರ್ಚಸ್ಸಿಗಾಗಿ ಹಳ್ಳಿಕಾರ್ ಹೆಸರು ಸಂತೋಷ್ ಬಳಸಿಕೊಂಡಿದ್ದಾರೆ ಎಂದು ರೈತರು ಆರೋಪ ಮಾಡಿದ್ದಾರೆ.

    ವರ್ತೂರ್ ಸಂತೋಷ್ ಗೆ ಹಳ್ಳಿಕಾರ್ ಒಡೆಯರ್ ಎಂಬ  ಹೆಸರು ಕೊಟ್ಟ ಹಿನ್ನೆಲೆಯಲ್ಲಿ ಇಂಥದ್ದೊಂದು ವಿವಾದ ಶುರುವಾಗಿದ್ದು, ಹಳ್ಳಿಕಾರ್ ತಳಿ ಹೆಸರಿಗೆ ವರ್ತೂರ್ ಸಂತೋಷ್ ರಿಂದ ಅಪಮಾನವಾಗಿದೆ ಎಂದು ರೈತರು ಆರೋಪ ಮಾಡಿದ್ದಾರೆ. ಮಂಡ್ಯದಲ್ಲಿ (Mandya) ಸೇರಿದ್ದ ಹಳ್ಳಿಕಾರ್ ಗೋವು ಸಾಕಾಣಿಕೆ ರೈತರು, ಈ ತಳಿಯ ಕುರಿತಂತೆ ವರ್ತೂರು ಸಂತೋಷ ಸ್ಪಷ್ಟೀಕರಣ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೇ, ಈ ಕುರಿತಂತೆ ಹಳ್ಳಿಕಾರ್ ಬಗ್ಗೆ ಚರ್ಚಾಗೋಷ್ಠಿಯನ್ನೇ ಮಂಡ್ಯದ ರೈತರು ಏರ್ಪಡಿಸಿದ್ದಾರೆ.

    ಮಂಡ್ಯದ ಸಿಲ್ವರ್ ಜ್ಯೂಬಲಿ ಪಾರ್ಕ್ ನಲ್ಲಿ ಡಿ.10ರಂದು ನಡೆಯುವ ಬೃಹತ್ ಹಳ್ಳಿಕಾರ್ ಚರ್ಚೆಗೋಷ್ಠಿಗೆ, ಹಳ್ಳಿಕಾರ್ ಕುರಿತಂತೆ ಚರ್ಚೆ ಮಾಡಲು ವರ್ತೂರ್ ಸಂತೋಷ್‌ಗೂ ಆಹ್ವಾನ ಕೊಟ್ಟಿದ್ದಾರೆ ರೈತರು. ಬಿಗ್ ಬಾಸ್ ನಿಂದ ಬಂದ ತಕ್ಷಣ ವರ್ತೂರ್ ಸಂತೋಷ್ ಈ ಕುರಿತಂತೆ ಚರ್ಚೆಗೆ ಬರಬೇಕು ಎಂದಿದ್ದಾರೆ. ಹಳ್ಳಿಕಾರ್ ಹೆಸರು ಒಂದು ಇತಿಹಾಸ ಇರುವಂತಹದ್ದು. ಅಂತಹ ಹೆಸರಿಗೆ ಅಪಮಾನ ಮಾಡುವುದು ಸರಿಯಲ್ಲ. ತಲೆಮಾರಿನಿಂದ ನಮ್ಮ ಹಿರಿಯರು ಹಳ್ಳಿಕಾರ್ ಗೋ ತಳಿ ಬೆಳೆಸಿಕೊಂಡು ಬಂದಿದ್ದಾರೆ. ಹಳ್ಳಿಕಾರ್ ಒಡೆಯ ಎನ್ನುವುದಕ್ಕೆ ಒಂದು ಮಹತ್ವ ಇದೆ ಎಂದು ರೈತರು ಮಾತನಾಡಿದ್ದಾರೆ.

    ಹಳ್ಳಿಕಾರ್ ಗೋವುಗಳನ್ನ ಸಾಕುತ್ತಿರುವ ಮೂಲ ರೈತರು ಎಷ್ಟೋ ಜನ ಇದ್ದಾರೆ. ವರ್ತೂರ್ ಸಂತೋಷ್ ಇತ್ತೀಚೆಗೆ ಬಂದು ಹಳ್ಳಿಕಾರ್ ಒಡೆಯರ್ ಹೆಸರು ಇಟ್ಟುಕೊಳ್ಳೋದು ಸರಿಯಲ್ಲ. ವರ್ತೂರ್ ಸಂತೋಷ್ ಅವರು ಒಬ್ಬ ಹಳ್ಳಿಕಾರ್ ಗೋವು ಸಾಕಾಣಿಕೆದಾರ ಅಷ್ಟೇ. ಅವರಿಗೆ ಅವರೇ ಹಳ್ಳಿಕಾರ್ ಒಡೆಯ ಅನ್ನೋದು ಸರಿಯಲ್ಲ. ಇದಕ್ಕೆ ಅವರು ಬಿಗ್ ಬಾಸ್ (Bigg Boss Kannada) ನಿಂದ ಬಂದ ತಕ್ಷಣವೇ ಸ್ಪಷ್ಟೀಕರಣ ನೀಡಬೇಕು. ಇಲ್ಲ ಕಾನೂನಾತ್ಮಕ ಹೋರಾಟಕ್ಕೆ ಮುಂದಾಗುತ್ತೇವೆ. ಯೂಟ್ಯೂಬ್‌ನಲ್ಲಿ ಹಳ್ಳಿಕಾರ್ ಒಡೆಯ ಎಂದು ಬಿಂಬಿಸುವುದು ತಪ್ಪು ಎಂದಿದ್ದಾರೆ ಮಂಡ್ಯದ ರೈತರು.

     

    ಮಂಡ್ಯದಲ್ಲಿ ಹಳ್ಳಿಕಾರ್ ತಳಿಯ ಬಗ್ಗೆ ಚರ್ಚಾ ವೇದಿಕೆ ಸಿದ್ಧಪಡಿಸಲಾಗುತ್ತಿದೆ. ಹಿರಿಯ ರೈತರು, ಪಶುವೈದ್ಯರು, ವಿಜ್ಞಾನಿಗಳು, ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಹಾಗಾಗಿ ತಕ್ಷಣವೇ ಸ್ಪಷ್ಟೀಕರಣ ನೀಡಿ ಆ ಹೆಸರನ್ನು ಬಳಸದೇ ತೆಗೆದು ಹಾಕಬೇಕು ಎಂದು ವರ್ತೂರ್ ಸಂತೋಷ್‌ಗೆ ರೈತರು ಎಚ್ಚರಿಕೆ ಕೊಟ್ಟಿದ್ದಾರೆ.