Tag: ಹಳ್ಳಿ

  • ಮರ ಹತ್ತಿದ ಕಾಡು ಕರಡಿ – 54 ತಾಸುಗಳ ಬಳಿಕ ರಕ್ಷಣೆ

    ಮರ ಹತ್ತಿದ ಕಾಡು ಕರಡಿ – 54 ತಾಸುಗಳ ಬಳಿಕ ರಕ್ಷಣೆ

    ಭುವನೇಶ್ವರ: ಕರಡಿಯೊಂದು ಆಹಾರ ಹುಡುಕುತ್ತಾ ಗ್ರಾಮಕ್ಕೆ ಬಂದು, ಗ್ರಾಮಸ್ಥರನ್ನು ಕಂಡು ಹೆದರಿ ಮರ ಏರಿ ಕುಳಿತಿದ್ದ ಘಟನೆ ಒಡಿಶಾದ ನಬ್ರಂಗ್‌ಪುರ ಜಿಲ್ಲೆಯ ನಾಯಕ್‌ಗುಡ ಗ್ರಾಮದಲ್ಲಿ ನಡೆದಿದೆ. ಸತತ 54 ಗಂಟೆಗಳ ಕಾಲ ಮರದಲ್ಲಿಯೇ ಹೆದರಿ ಕುಳಿತಿದ್ದ ಕರಡಿಯನ್ನು ಬಳಿಕ ರಕ್ಷಣೆ ಮಾಡಲಾಗಿದೆ.

    ಮರವೇರಿ ಕುಳಿತಿದ್ದ ಕರಡಿಯ ಬಗ್ಗೆ ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಕರಡಿಯನ್ನು ಕೆಳಗೆ ಇಳಿಸಲು ಶತಪ್ರಯತ್ನ ಪಟ್ಟಿದ್ದಾರೆ. 1 ದಿನದವರೆಗೆ ಕರಡಿಯನ್ನು ಕೆಳಗೆ ಇಳಿಸಲು ಪ್ರಯತ್ನಪಟ್ಟ 10 ಮಂದಿ ಅರಣ್ಯ ತಂಡ ಗ್ರಾಮಸ್ಥರನ್ನು ಅಲ್ಲಿಂದ ದೂರ ಕಳುಹಿಸುವುದರಿಂದ ಹಿಡಿದು ಬಗೆಬಗೆಯ ಭಕ್ಷ್ಯಗಳನ್ನು ಇರಿಸಿ ಅದನ್ನು ಕೆಳಗೆ ತರಲು ಪ್ರಯತ್ನ ಪಟ್ಟಿದ್ದಾರೆ. ಇದನ್ನೂ ಓದಿ: ಆಹಾರಕ್ಕಾಗಿ ನಾಡಿಗೆ ಬಂತು ಕಾಡು ಕರಡಿ

    ಹಲವು ಪ್ರಯತ್ನಗಳ ಬಳಿಕ ಅರಣ್ಯಾಧಿಕಾರಿಗಳು ಕೊನೆಗೂ 54 ಗಂಟೆಗಳ ಬಳಿಕ ಕರಡಿಯನ್ನು ಕೆಳಗೆ ಇಳಿಸುವಲ್ಲಿ ಸಫಲರಾಗಿದ್ದಾರೆ. 2 ದಿನಗಳಿಂದ ಏನನ್ನೂ ತಿಂದಿರದ ಕರಡಿ ಪ್ರಜ್ಞಾಹೀನ ಸ್ಥಿತಿಗೆ ಜಾರಿದ್ದು, ಅದಕ್ಕೆ ಅಗತ್ಯ ಚಿಕಿತ್ಸೆ ನೀಡಿದ ಬಳಿಕ ಕಾಡಿಗೆ ಬಿಡಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ:ನ ರಾಜ್ಯದ 19 ಪೊಲೀಸ್ ಅಧಿಕಾರಿಗಳಿಗೆ ವಿಶೇಷ ಗೌರವ

    ಕಾಡು ಕರಡಿಗಳು ಆಹಾರಕ್ಕಾಗಿ ಹಳ್ಳಿಗಳಿಗೆ ನುಗ್ಗಿ, ಜನರನ್ನು ಭಯಭೀತಗೊಳಿಸುತ್ತಿರುವ ಘಟನೆ ಆಗಾಗ ನಡೆಯುತ್ತಲೇ ಇದೆ. ಅವು ಜನವಸತಿ ಪ್ರದೇಶಗಳಿಗೆ ಪ್ರವೇಶಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

  • ಲಸಿಕೆ ನೀಡಲು ಬಂದ ಸಿಬ್ಬಂದಿಗೆ ಹಾವು ತೋರಿಸಿ ಬೆದರಿಕೆ ಹಾಕಿದ ಮಹಿಳೆ

    ಲಸಿಕೆ ನೀಡಲು ಬಂದ ಸಿಬ್ಬಂದಿಗೆ ಹಾವು ತೋರಿಸಿ ಬೆದರಿಕೆ ಹಾಕಿದ ಮಹಿಳೆ

    ಜೈಪುರ್: ಹಳ್ಳಿಯೊಂದಕ್ಕೆ ಕೋವಿಡ್ 19 ಲಸಿಕೆ ಹಿಡಿದು ಬಂದ ಆರೋಗ್ಯ ಸಿಬ್ಬಂದಿಯನ್ನು ಹಿರಿಯ ಮಹಿಳೆಯೊಬ್ಬರು ಹಾವು ತೋರಿಸಿ ಹೆದರಿಸಿರುವ ಘಟನೆ ರಾಜಸ್ಥಾನದ ಅಜ್ಮೇರ್​​ನಲ್ಲಿ ನಡೆದಿದೆ.

    ಅಜ್ಮೇರ್ ಜಿಲ್ಲೆಯ ಪಿಸಂಗನ್‍ನ ನಾಗೇಲಾವ್ ಗ್ರಾಮಕ್ಕೆ ಆರೋಗ್ಯ ಸಿಬ್ಬಂದಿ ಮನೆಮನೆಗೆ ತೆರಳಿ ಲಸಿಕೆ ನೀಡುತ್ತಿದ್ದಾರೆ. ಅದರಂತೆ ಒಂದು ಮನೆಯ ಬಾಗಿಲಲ್ಲಿ ನಿಂತ ಅವರಿಗೆ ಅಕ್ಷರಶಃ ಶಾಕ್ ಕಾದಿತ್ತು. ಆ ಮನೆಯ ಮಹಿಳೆ ಕಮಲಾ ದೇವಿ ಕೈಯಲ್ಲೊಂದು ಚಿಕ್ಕ ಬುಟ್ಟಿ ಹಿಡಿದಿದ್ದರು. ಅದರಲ್ಲಿ ನಾಗರಹಾವು ಹೆಡೆಬಿಚ್ಚಿ ಕುಳಿತಿತ್ತು.  ಇದನ್ನೂ ಓದಿ: ಬೊಮ್ಮಾಯಿ ಆರ್‌ಎಸ್‍ಎಸ್‍ನವರು ಅಲ್ಲ: ಸಿದ್ದರಾಮಯ್ಯ

    ಕಮಲಾದೇವಿ ಕಲ್ಬೇಲಿಯಾ ಸಮುದಾಯಕ್ಕೆ ಸೇರಿದವರಾಗಿದ್ದು, ಹಾವು ಹಿಡಿಯುವುದು, ಅದನ್ನು ನಿಯಂತ್ರಿಸಿ, ಆಟ ಆಡಿಸುವುದು ಇವರ ಕಸುಬಾಗಿದೆ. ಆದರೆ ಆ ಹಾವನ್ನು ಲಸಿಕೆ ನೀಡಲು ಬಂದ ಆರೋಗ್ಯ ಕಾರ್ಯಕರ್ತರ ವಿರುದ್ಧ ಶಸ್ತ್ರವಾಗಿ ಆಕೆ ಬಳಸಿದ್ದಾಳೆ. ನನಗೆ ಲಸಿಕೆ ಬೇಡ. ಲಸಿಕೆ ಹಾಕಲು ಮುಂದೆ ಬಂದರೆ ನಿಮ್ಮ ಮೇಲೆ ಹಾವನ್ನು ಬಿಡುತ್ತೇನೆ ಎಂದು ಅವರು ಹೆದರಿಸುತ್ತಿದ್ದರು. ಇದನ್ನೂ ಓದಿ:  ಗೊಂಬೆಗಳ ಮಧ್ಯೆ ಪುಟ್ಟ ಗೊಂಬೆಯಂತೆ ಕುಳಿತ ರಾಯನ್

    ವೈದ್ಯಕೀಯ ಸಿಬ್ಬಂದಿ, ಅದರಿಂದ ಏನೂ ಅಪಾಯವಿಲ್ಲ ಎಂದು ಹೇಳಿ ಆಕೆಯನ್ನು ಮನವೊಲಿಸಲು ಪ್ರಯತ್ನ ಮಾಡಿದರೂ ಆಕೆ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಹಾವನ್ನು ತೋರಿಸಿದಾಗ ಹೆದರಿದ ವೈದ್ಯಕೀಯ ಸಿಬ್ಬಂದಿ ತಮಗೆ ಸಹಾಯ ಮಾಡುವಂತೆ ಸ್ಥಳೀಯರನ್ನು ಕೇಳಿಕೊಂಡಿದ್ದಾರೆ. ನಂತರ ಇನ್ನೂ ಕೆಲವರು ಬಂದು ಎಲ್ಲರೂ ಸೇರಿ ಕಮಲಾ ದೇವಿಯಲ್ಲಿ ತಿಳಿವಳಿಕೆ ಮೂಡಿಸಿದರು. ಬಳಿಕ ಅವರು ಕೊವಿಡ್ 19 ಲಸಿಕೆ ಪಡೆದಿದ್ದಾರೆ. ಕಮಲಾ ದೇವಿ ಜತೆ ಇನ್ನೂ 20 ಮಂದಿ ತಮಗೆ ಲಸಿಕೆ ಬೇಡ ಎನ್ನುತ್ತಿದ್ದರು. ಆದರೆ ಈಕೆ ವ್ಯಾಕ್ಸಿನ್ ಪಡೆಯುತ್ತಿದ್ದಂತೆ ಅವರೂ ಕೂಡ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ:  ಭಯ ಹುಟ್ಟಿಸಲು ಉಗ್ರರು ಹತ್ಯೆಯನ್ನು ಗುರಿಯಾಗಿಸಿಕೊಂಡಿದ್ದಾರೆ: ಮೋಹನ್ ಭಾಗವತ್

  • ಗದ್ದೆಗೆ ತೆರಳಿ ಕೋವಿಡ್ ಲಸಿಕೆ ಹಾಕಿಸಲು ಮನವೊಲಿಕೆ

    ಗದ್ದೆಗೆ ತೆರಳಿ ಕೋವಿಡ್ ಲಸಿಕೆ ಹಾಕಿಸಲು ಮನವೊಲಿಕೆ

    ಕೊಪ್ಪಳ: ಕನಕಗಿರಿ ತಾಲೂಕಿನ ಚಿಕ್ಕಮಾದಿನಾಳ ಗ್ರಾಪಂ ವ್ಯಾಪ್ತಿಯ ಬಂಕಾಪುರ ಗ್ರಾಮದಲ್ಲಿ ಕೋವಿಡ್ ಲಸಿಕೆ ಹಾಕಿಸಲು ಹಿಂಜರಿಯುತ್ತಿದ್ದ ಕೂಲಿಕಾರ್ಮಿಕ ಮಹಿಳೆಯರು ಗದ್ದೆ ಕೆಲಸ ಮಾಡುತ್ತಿದ್ದ, ಸ್ಥಳಕ್ಕೆ ಇಂದು ಪ್ರೊಬೇಷನರಿ ಎಸಿ ಹಾಗೂ ತಾಪಂ ಇಓ ಕಾವ್ಯರಾಣಿ ಕೆ.ವಿ. ನೇತೃತ್ವದ ತಂಡ ತೆರಳಿ ಅವರಿಗೆ ಮನವೊಲಿಸಿ ಲಸಿಕೆ ಹಾಕಿಸಿದ್ದಾರೆ.

    ಸೆ.17ರಂದು ಹಮ್ಮಿಕೊಂಡಿರುವ ಬೃಹತ್ ಕೋವಿಡ್ ಲಸಿಕಾ ಮೇಳ ಅಂಗವಾಗಿ ಗ್ರಾಮದ ಮನೆ ಮನೆಗೆ ಭೇಟಿ ಹಾಗೂ ಹೊಲಗಳಿಗೆ ಭೇಟಿ ನೀಡಿ ಲಸಿಕೆ ಹಾಕಿಸದ ಜನರಿಗೆ ಕೋವಿಡ್ ಲಸಿಕೆ ಹಾಕಿಸಲಾಯಿತು. ನಂತರ ತಾಪಂ ಇಓ ಕಾವ್ಯರಾಣಿ ಕೆ.ವಿ. ಮಾತನಾಡಿ, ಕೋವಿಡ್ ಲಸಿಕೆ ಹಾಕಿಸಿಕೊಳ್ಳುವುದರಿಂದ ಯಾವುದೇ ಅಡ್ಡಪರಿಣಾಮ ಬೀರುವುದಿಲ್ಲ. 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ ಲಸಿಕೆ ಪಡೆಯಬೇಕು. ಲಸಿಕೆ ಹಾಕಿಸಿಕೊಳ್ಳುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಯಾವುದೇ ಸುಳ್ಳು ಸುದ್ದಿಗಳನ್ನು ನಂಬಬಾರದು ಎಂದರು. ಇದನ್ನೂ ಓದಿ: ಯೂಟ್ಯೂಬ್ ವೀಡಿಯೋಗಳಿಂದ ಲಕ್ಷ ಲಕ್ಷ ಗಳಿಸುವ ನಿತಿನ್ ಗಡ್ಕರಿ

    ಎಲ್ಲರಿಗೂ ಲಸಿಕೆ ನೀಡುವ ಉದ್ದೇಶದಿಂದ ಜಿಲ್ಲಾಡಳಿತ, ತಾಲೂಕು ಆಡಳಿತ, ಜಿಪಂ ತಾಪಂ, ಗ್ರಾಪಂ ಅಧಿಕಾರಿಗಳು ಜನರ ಮನವೊಲಿಸಿ, ಲಸಿಕೆ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಜನರು ಸಹಕಾರ ನೀಡಬೇಕು ಎಂದರು. ಇದನ್ನೂ ಓದಿ: ಮೋದಿ ಜನ್ಮದಿನದಂದು 2 ಕೋಟಿ ಮಂದಿಗೆ ಕೋವಿಡ್ ಲಸಿಕೆ

    ಪ್ರಭಾರ ತಹಸೀಲ್ದಾರ್ ಮಹಾಂತಗೌಡ, ಗ್ರಾಪಂ ಪಿಡಿಒ ನಾಗೇಶ್, ತಾಲೂಕು ಐಇಸಿ ಕೋರ್ಡಿನೇಟರ್ ಬಾಳಪ್ಪ ತಾಳಕೇರಿ, ಗ್ರಾಪಂ ಸದಸದಯರಾದ ಸಿದ್ದೇಶ್ವರ, ಪಾಮಣ್ಣ ಸಲ್ಲರ್, ಲಕ್ಷ್ಮಮ್ಮ ಗುರ್ಕಿ, ಗ್ರಾಪಂ ಕಂಪ್ಯೂಟರ್ ಆಪರೇಟರ್ ಶರಣಪ್ಪ, ಅಜೀಂ ಪ್ರೇಮ್ ಜೀ ಫೌಂಡೇಶನ್‍ನ ಅಯ್ಯನಗೌಡ ಇದ್ದರು.

  • ಮಳೆಗಾಗಿ ಹುಡುಗಿಯರ ಬೆತ್ತಲ ಮೆರವಣಿಗೆ

    ಮಳೆಗಾಗಿ ಹುಡುಗಿಯರ ಬೆತ್ತಲ ಮೆರವಣಿಗೆ

    ಭೋಪಾಲ್: ಬರಗಾಲದ ಪರಿಸ್ಥಿತಿ ಉಂಟಾಗಿದ್ದರಿಂದ ಹೆದರಿದ ಹಳ್ಳಿಗರು ಮಳೆ ದೇವರ ಸಂತೃಪ್ತಿಗಾಗಿ ಹರೆಯದ ಹುಡುಗಿಯರನ್ನು ಬೆತ್ತಲೆ ಮೆರವಣಿಗೆ ಮಾಡಿರುವ ಘಟನೆ ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ಹಳ್ಳಿಯಲ್ಲಿ ನಡೆದಿದೆ.

    ದಾಮೋಹ್ ಜಿಲ್ಲೆಯಿಂದ 50 ಕಿಮೀ ದೂರದಲ್ಲಿರುವ ಬನಿಯಾ ಎಂಬ ಗ್ರಾಮದಲ್ಲಿ ಭಾನುವಾರ ರಾತ್ರಿ ಹೀಗೊಂದು ಆಚರಣೆ ನಡೆದಿದೆ. ಇಲ್ಲಿ ಬೆತ್ತಲೆ ಸಾಗಿದ ಹುಡುಗಿಯರು ಅಪ್ರಾಪ್ತೆಯರಾದರೂ ಪುಟ್ಟ ಮಕ್ಕಳಲ್ಲ. ಇವರೆಲ್ಲ ಹದಿಹರೆಯಕ್ಕೆ ಕಾಲಿಟ್ಟವರು. ಸದ್ಯ ಘಟನೆಯ ಬಗೆಗಿನ ವರದಿಯನ್ನು ಜಿಲ್ಲಾಡಳಿತ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗಕ್ಕೆ ಕಳಿಸಿಕೊಟ್ಟಿದೆ.

    ಮಳೆಯಾಗಲಿಲ್ಲ. ಹೀಗಾದರೆ ಬರಗಾಲ ಕಟ್ಟಿಟ್ಟ ಬುತ್ತಿ ಎಂದು ಭಾವಿಸಿದ ಸ್ಥಳೀಯರು ವರುಣ ದೇವನ ಸಂತೃಪ್ತಿಗೊಳಿಸಲು ಹೀಗೊಂದು ಆಚರಣೆ ನಡೆಸಿದ್ದಾಗಿ ನಮಗೂ ಮಾಹಿತಿ ಬಂದಿದೆ. ನಾವು ಘಟನೆಯ ಬಗ್ಗೆ ತನಿಖೆ ಕೈಗೆತ್ತಿಕೊಂಡಿದ್ದೇವೆ. ಇದೊಂದು ಮೂಢನಂಬಿಕೆ ಆಚರಣೆಯಾಗಿದೆ. ಈ ಹುಡುಗಿಯರನ್ನು ಬಲವಂತವಾಗಿ ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ್ದು ಸಾಬೀತಾದರೆ ನಾವು ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ದಾಮೋಹ್ ಪೊಲೀಸ್ ಅಧಿಕಾರಿ ಡಿ. ಆರ್. ತೆನಿವಾರ್ ಹೇಳಿದ್ದಾರೆ. ಇದನ್ನೂ ಓದಿ: ಮೊಬೈಲ್ ನುಂಗಿ 4 ದಿನ ಹೊಟ್ಟೆಯಲ್ಲಿಟ್ಟುಕೊಂಡ

    ಆಚರಣೆ ಏನು?
    ಸ್ಥಳೀಯರ ನಂಬಿಕೆಯ ಆಚರಣೆ ಇದಾಗಿದ್ದು, ಹದಿಹರೆಯದ ಯುವತಿಯರು ತಮ್ಮ ಭುಜದ ಮೇಲೆ ಮರದ ಈಟಿಯನ್ನು ಹೊತ್ತುಕೊಂಡು ಮೆರವಣಿಗೆ ಮಾಡಬೇಕು. ಆ ಮರದ ಈಟಿಯ ಮೇಲೆ ಕಪ್ಪೆಯನ್ನು ಕಟ್ಟಿಡಲಾಗುತ್ತದೆ. ಹೀಗೆ ಬೆತ್ತಲೆ ಹೊರಟ ಹುಡುಗಿಯರೊಟ್ಟಿಗೆ ಮಹಿಳೆಯರು ಕೂಡ ಹೆಜ್ಜೆಹಾಕಬೇಕು ಮತ್ತು ಅವರು ಮಳೆ ದೇವರು ಅಂದರೆ ವರುಣನನ್ನು ಹೊಗಳುವ, ಓಲೈಸುವ ಭಜನೆಗಳನ್ನು ಹಾಡುತ್ತಿರಬೇಕು. ಇದನ್ನೂ ಓದಿ: ಒಟ್ಟಾಗಿ ಹೋಗೋಣವೆಂದು ಹೆಚ್‍ಡಿಕೆಗೆ ಹೇಳಿದ್ದೇನೆ: ಮೈತ್ರಿ ಬಗ್ಗೆ ಸಿಎಂ ಸ್ಪಷ್ಟನೆ

    ಮಳೆಯಾಗದಿದ್ದರೆ ಕಪ್ಪೆ ಮದುವೆ, ಕತ್ತೆ ಮದುವೆ ಮಾಡುವುದನ್ನು ನಾವು ಸರ್ವೇಸಾಮಾನ್ಯವಾಗಿ ಕೇಳಿದ್ದೇವೆ. ಕೆಲವು ಹೋಮ-ಹವನಾದಿಗಳನ್ನು ಮಾಡುವುದೂ ಇದೆ. ಇವೆಲ್ಲ ಯಾರಿಗೂ ಅಪಾಯ ಆಗುವಂಥದ್ದಲ್ಲ, ಅವಮಾನ ಆಗುವಂಥದ್ದಲ್ಲ, ಮಾನ ಹೋಗುವಂಥದ್ದೂ ಅಲ್ಲ. ಆದರೆ ಹೀಗೆ ಹೆಣ್ಣು ಮಕ್ಕಳನ್ನು ಸಾರ್ವಜನಿಕವಾಗಿ ಮೆರವಣಿಗೆ ಮಾಡುವುದು ತೀರ ಹೀನ ಕೃತ್ಯವಾಗಿದ್ದು, ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.

  • ಟ್ರ್ಯಾಕ್ಟರ್​ ಓಡಿಸುತ್ತಾ ಕೃಷಿ ಕೆಲಸದಲ್ಲಿ ಸಖತ್ ಬ್ಯುಸಿಯಾದ ನಟಿ ಅದಿತಿ ಪ್ರಭುದೇವ

    ಟ್ರ್ಯಾಕ್ಟರ್​ ಓಡಿಸುತ್ತಾ ಕೃಷಿ ಕೆಲಸದಲ್ಲಿ ಸಖತ್ ಬ್ಯುಸಿಯಾದ ನಟಿ ಅದಿತಿ ಪ್ರಭುದೇವ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಅದಿತಿ ಪ್ರಭುದೇವ ಅವರು ಗದ್ದೆಯಲ್ಲಿ ಟ್ರ್ಯಾಕ್ಟರ್ ಓಡಿಸುತ್ತಾ ಕೃಷಿಯಲ್ಲಿ ಬ್ಯುಸಿಯಾಗಿರುವ ವೀಡಿಯೋ ಸೋಶಿಯಲ್ ಮೀಡಿಯಾದಕಲ್ಲಿ ಸಖತ್ ವೈರಲ್ ಆಗುತ್ತಿದೆ.

    ಎಲ್ಲರಿಗೂ ನಮಸ್ಕಾರ, ನಾನು ಹಳ್ಳಿಯ ಹೆಣ್ಣು ಮಗಳಾದರೂ, ರೈತ ಕುಟುಂಬದ ಹಿನ್ನೆಲೆ ಇದ್ದರೂ ಈಗಿರುವ ಪರಿಸ್ಥಿತಿಯಲ್ಲಿ ನಾನು ಆಯ್ಕೆ ಮಾಡಿಕೊಂಡಿರುವ ಕ್ಷೇತ್ರವಾಗಲಿ, ಕೆಲಸವಾಗಲಿ, ದಿನಚರಿಯಾಗಲಿ ವಿಭಿನ್ನವಾಗಿ ಇರಬಹುದು. ಆದರೂ ಪ್ರತಿಸಲ ಯಾವುದೇ ಹಳ್ಳಿಗೆ ಹೋದರೂ ಇರುವ ಒಂದೆರಡು ದಿನಗಳಾದರೂ ವಾತಾವರಣವನ್ನು ಪ್ರೀತಿಯಿಂದ ಅನುಭವಿಸುತ್ತೇನೆ. ಪ್ರಕೃತಿಯ ಜೊತೆಗಿನ ನಂಟು ಜೀವನಕ್ಕೆ ಸಾರ್ಥಕತೆಯನ್ನು ನೆಮ್ಮದಿಯನ್ನು ತರುತ್ತದೆ. ಆ ಸಂತೋಷವನ್ನು ಅನುಭವಿಸಿದವರಿಗೆ ಮಾತ್ರ ಗೊತ್ತು ಎಂದಿದ್ದಾರೆ.

     

    View this post on Instagram

     

    A post shared by ADITI PRABHUDEVA (@aditiprabhudeva)

    ಅನೇಕ ಜನರ ಕನಸಂತೆ ನನಗೂ ನನ್ನದೇ ಆದ ಒಂದು ಪುಟ್ಟ ತೋಟ ಮಾಡುವ ಹಂಬಲ. ನೋಡೋಣ, ಮುಂದೊಂದು ದಿನ ಅದು ಆದರೂ ಆಗಬಹುದು. ಅದೆಷ್ಟೋ ಬಾರಿ ಬೆಳೆದ ಫಸಲಿಗೆ ಸೂಕ್ತ ಬೆಲೆ ಸಿಗದಿದ್ದರೂ, ಮೈತುಂಬಾ ಸಾಲವಿದ್ದರೂ ಪ್ರತಿನಿತ್ಯ ಕಷ್ಟಪಟ್ಟು ಕೆಲಸ ಮಾಡಿ ನಮ್ಮೆಲ್ಲರಿಗೂ ಅನ್ನ ನೀಡುತ್ತಿರುವ ದೇವರು ಅನ್ನಬ್ರಹ್ಮ ರೈತನಿಗೆ ಈ ಮೂಲಕ ನಮನ. ಈ ವೀಡಿಯೋ ಪ್ರತಿಯೊಬ್ಬ ರೈತ ಮಿತ್ರನಿಗೆ ಸಮರ್ಪಣೆ ಎಂದು ಅದಿತಿ ಪ್ರಭುದೇವ ಬರೆದುಕೊಂಡಿದ್ದಾರೆ.

     

    View this post on Instagram

     

    A post shared by ADITI PRABHUDEVA (@aditiprabhudeva)

    ಕೆಲವು ದಿನಗಳ ಹಿಂದೆ ತಮ್ಮ ಊರಿನಲ್ಲಿ ಕಾಲ ಕಳೆದ ವೀಡಿಯೋವನ್ನು ತಮ್ಮದೇ ಹೊಸ ಯೂಟ್ಯೂಬ್ ಚಾನಲ್‍ನಲ್ಲಿ ಹಂಚಿಕೊಂಡಿದ್ದರು. ಕೊಟ್ಟಿಗೆ ಕಸ ಗೂಡಿಸುವುದು, ರೊಟ್ಟಿ ತಟ್ಟುವುದು, ಸಂಜೆ ಹಾಲು ಕರೆಯುವುದರವರೆಗಿನ ಚಟುವಟಿಕೆಗಳ ವೀಡಿಯೋವನ್ನು ಪೋಸ್ಟ್ ಮಾಡಿದ್ದರು.ಇದೀಗ ಗದ್ದೆಯಲ್ಲಿ ಕೆಲಸ ಮಾಡುತ್ತಾ ಸಮಯ ಕಳೆದಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೋಗೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಮೆಚ್ಚುಗೆ ವ್ಯಕ್ತವಾಗುತ್ತಿದೆ.

  • ಚಿರತೆ ದಾಳಿಗೆ 10 ಕುರಿ ಬಲಿ

    ಚಿರತೆ ದಾಳಿಗೆ 10 ಕುರಿ ಬಲಿ

    ಚಾಮರಾಜನಗರ: ಚಿರತೆ ದಾಳಿಗೆ 10 ಕುರಿಗಳು ಬಲಿಯಾಗಿರುವ ಘಟನೆ ಚಾಮರಾಜನಗರ ತಾಲೂಕಿನ ಅಮಚವಾಡಿ ಗ್ರಾಮದ ಹೊರವಲಯದಲ್ಲಿ ಇಂದು ತಡರಾತ್ರಿ ನಡೆದಿದೆ.

    ಮಾದೇಗೌಡ ಅವರು ಸಾಕಿದ್ದ ಕುರಿಗಳು ಚಿರತೆ ದಾಳಿಗೆ ಬಲಿಯಾಗಿವೆ. ಕೊಟ್ಟಿಗೆ ಹಾಕಿದ್ದ ಬಿದಿರಿನ ತಡಿಕೆಯನ್ನು ಹಾರಿ ಕುರಿ ಹಿಂಡಿನ ಮೇಲೆ ದಾಳಿ ಮಾಡಿರುವ ಚಿರತೆ ಒಂದಾದ ನಂತರ ಒಂದರಂತೆ 10 ಕುರಿಗಳ ರಕ್ತ ಹೀರಿದೆ. ಒಂದೇ ಸಮನೆ ಕುರಿಗಳ ಕಿರುಚಾಟ ಕೇಳಿದ ಮನೆಮಂದಿ ಕೊಟ್ಟಿಗೆಗೆ ಬಂದು ನೋಡಿದಾಗ ಚಿರತೆ ಪರಾರಿಯಾಗಿದೆ. ಇದನ್ನೂ ಓದಿ: 204 ಕೋಟಿ ನೀಡಿ ಬುಕ್ಕಿಂಗ್ – ಅಮೆಜಾನ್ ಸಂಸ್ಥಾಪಕನ ಜೊತೆ ಬಾಹ್ಯಾಕಾಶ ಪ್ರಯಾಣ

     

    ಈ ಸಂಬಂಧ, ಮಾದೇಗೌಡ 25 ಕುರಿಗಳಲ್ಲಿ 15 ಕುರಿ ಬದುಕುಳಿದಿವೆ. ಮೂರು ಕುರಿಗಳಿಗೆ ಗಾಯವಾಗಿದ್ದು, 10 ಕುರಿಗಳು ಚಿರತೆ ಬಾಯಿಗೆ ಸಿಕ್ಕು ಬಲಿಯಾಗಿವೆ. ಅಂದಾಜು 1 ಲಕ್ಷ ರೂ. ನಷ್ಟವಾಗಿದೆ. ತಮಗೆ ಸೂಕ್ತ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದಾರೆ.

  • ರಾತ್ರೋರಾತ್ರಿ ಕೊರೊನಾ ದೇವಿ ದೇವಸ್ಥಾನ ನಿರ್ಮಾಣ, ಬೆಳಗ್ಗೆ ನೆಲಸಮ

    ರಾತ್ರೋರಾತ್ರಿ ಕೊರೊನಾ ದೇವಿ ದೇವಸ್ಥಾನ ನಿರ್ಮಾಣ, ಬೆಳಗ್ಗೆ ನೆಲಸಮ

    ಲಕ್ನೋ: ವೈರಸ್ ಹರಡದಂತೆ ಜನರ ರಕ್ಷಣೆಗೆ ಸರ್ಕಾರ ಲಾಕ್‍ಡೌನ್ ನಂತಹ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದೆ.  ಈ ಸೋಂಕಿನಿಂದ ಕಾಪಾಡುವಂತೆ ಜನರು ದೇವರ ಮೊರೆ ಹೋಗುತ್ತಿರುವವರ ನಡುವೆಯೇ ಉತ್ತರ ಪ್ರದೇಶದ ಜನರು ಸೋಂಕಿಗೆ ದೇವರ ಸ್ಥಾನ ನೀಡಿ ದೇವಸ್ಥಾನ ನಿರ್ಮಾಣ ಮಾಡಿರುವ ಅಪರೂಪದ ಘಟನೆ ನಡೆದಿದೆ. ಇದನ್ನೂ ಓದಿ: ಕುದುರೆ ಜೊತೆ ಧೋನಿ ರೇಸ್

    ಪ್ರಯಾಗ್ ರಾಜ್‍ನ ಶುಕ್ಲುಪುರ್ ಗ್ರಾಮದಲ್ಲಿ ಕೊರೊನಾ ದೇವಿಯ ದೇವಸ್ಥಾನ ನಿರ್ಮಾಣ ಮಾಡಲಾಗಿದೆ. ಕೊರೊನಾಗೆ ದೇವರ ಸ್ವರೂಪ ನೀಡಿದ ಇಲ್ಲಿನ ಜನರು ಕೊರೊನಾ ಮಾತೆಯನ್ನು ಪ್ರತಿಷ್ಟಾಪಿಸಿ, ಗ್ರಾಮಸ್ಥರು ಪೂಜೆ ಮಾಡುತ್ತಿದ್ದರು. ಈ ಸುದ್ದಿ ಬೆಳಕಿಗೆ ಬರುತ್ತಿದ್ದಂತೆ ಇಲ್ಲಿನ ಜಿಲ್ಲಾಡಳಿತ ದೇವಾಲಯವನ್ನು ನೆಲಸಮ ಮಾಡಿದೆ. ಇದನ್ನೂ ಓದಿ: ನೀವು ಮನೆಯಲ್ಲೇ ಮಾಡಿ ಚಿಕನ್ ಕುರ್ಮ

    ಕೊರೊನಾ ಭಯದಿಂದಾಗಿ ಜನರು ಮೂಢನಂಬಿಕೆಗೆ ಒಳಗಾಗಿ ಈ ದೇವಾಲಯ ನಿರ್ಮಾಣ ಮಾಡಿದರು. ಇದರ ಹಿಂದೆ ವ್ಯಕ್ತಿಯೊಬ್ಬನ ಸ್ವಹಿತಾಸಕ್ತಿ ಕೂಡ ಇದೆ. ಗ್ರಾಮದ ಜನರಿಗೆ ಕೊರೊನಾ ಭಯ ಮೂಡಿಸಿ. ತನ್ನ ವಿರೋಧಿಯ ಭೂಮಿ ಒತ್ತುವರಿ ನಡೆಸಿದ್ದಾನೆ. ಈ ವಿವಾದ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ಭೂಮಿ ಒತ್ತುವರಿ ಮಾಡಿಕೊಂಡಿದ್ದ ಜಾಗದಲ್ಲಿನ ದೇವಾಲಯವನ್ನು ಕೆಡವಿದ್ದಾರೆ.

    ಗ್ರಾಮದಲ್ಲಿನ ಸೋಂಕು ನಿವಾರಣೆಯಾಗುವಂತೆ ರಾತ್ರೋರಾತ್ರಿ ಇಲ್ಲಿನ ಗ್ರಾಮಸ್ಥರು ದೇವರ ಗುಡಿ ಕಟ್ಟಿದ್ದರು. ಈ ದೇವಾಲಯವನ್ನು ಬೆಳಗಾಗುವುದರೊಳಗೆ ಧ್ವಂಸ ಮಾಡಲಾಗಿದೆ, ಪೊಲೀಸರು ಉದ್ದೇಶ ಪೂರ್ವಕವಾಗಿ ಈ ಕೃತ್ಯ ನಡೆಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ಪೊಲೀಸರು ಹೇಳುವ ಪ್ರಕಾರ ಎರಡು ಕುಟುಂಬದ ನಡುವೆ ಭೂಮಿ ವಿವಾದವಿದ್ದು, ಇದೇ ಕಾರಣಕ್ಕೆ ಇಲ್ಲಿ ದೇವಾಲಯ ನಿರ್ಮಿಸಲಾಗಿದೆ. ಈ ಬಗ್ಗೆ ಮತ್ತೊಂದು ಗುಂಪು ದೂರು ಕೂಡ ನೀಡಿದೆ ಎಂದಿದ್ದಾರೆ. ಕಳೆದ ಐದು ದಿನಗಳ ಹಿಂದೆ ಸ್ಥಳೀಯರ ಸಹಾಯದಿಂದ ಲೊಕೇಶ್ ಕುಮಾರ್ ಶ್ರೀವಾತ್ಸವ ಇಲ್ಲಿ ಮಂದಿರ ಕಟ್ಟಿಸಿದ್ದನು. ಕೊರೊನಾ ಮಾತೆಯ ಮೂರ್ತಿಯನ್ನು ಕೂರಿಸಿ , ರಾಧೆ ಶ್ಯಾಮ್ ವರ್ಮ್ ಎಂಬ ಪುರೋಹಿತನನ್ನು ನೇಮಕ ಮಾಡಲಾಗಿತ್ತು. ಇದಾದ ಬಳಿಕ ಜನರು ದೇವರ ಆರಾಧನೆಗೆ ಮುಂದಾದರು.

    ನೋಯ್ಡ ಮೂಲಕ ನಾಗೇಶ್ ಕುಮಾರ್ ಶ್ರೀವಾತ್ಸವ್ ಮತ್ತು ಜೈ ಪ್ರಕಾಶ್ ಶ್ರೀವಾತ್ಸವ ಪಾಲುದಾರಿಕೆ ಭೂಮಿಯನ್ನು ಈ ಗ್ರಾಮದಲ್ಲಿ ಹೊಂದಿದ್ದರು. ಅವರು ನೋಯ್ಡಗೆ ಮರಳುತತ್ತಿದ್ದಂತೆ ಈ ದೇವಾಲಯ ನಿರ್ಮಾಣವಾಗಿದೆ. ಭೂಮಿಯನ್ನು ಒತ್ತುವರಿ ಮಾಡುವ ಉದ್ದೇಶದಿಂದ ಈ ಕೃತ್ಯ ನಡೆಸಿದ್ದಾರೆ ಎಂದು ನಾಗೇಶ್ ಪೊಲೀಸರಿಗೆ ದೂರು ನೀಡಿದ್ದರು. ವಿವಾದಿತ ಜಮೀನಿನಲ್ಲಿ ಏಕಾಏಕಿ ದೇವಾಲಯ ನಿರ್ಮಿಸಿದ ಕಾರಣ ಪೊಲೀಸರು ದೇವಸ್ಥಾನವನ್ನು ಧ್ವಂಸ ಮಾಡಿದ್ದಾರೆ. ಈ ಹಿನ್ನಲೆ ಈಗ ವಿರೋಧಿ ಪಕ್ಷದ ಗುಂಪು ಪೊಲೀಸರ ವಿರುದ್ಧ ಹರಿಹಾಯ್ದಿದ್ದು, ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಲಾಕ್‍ಡೌನ್ ಬಳಿಕ ಬೆಂಗಳೂರಿಗೆ ಜನರ ವಲಸೆ -ಹಳ್ಳಿಯಿಂದ ಬರುವವರ ಸಂಖ್ಯೆ ಹೆಚ್ಚಳ

    ಲಾಕ್‍ಡೌನ್ ಬಳಿಕ ಬೆಂಗಳೂರಿಗೆ ಜನರ ವಲಸೆ -ಹಳ್ಳಿಯಿಂದ ಬರುವವರ ಸಂಖ್ಯೆ ಹೆಚ್ಚಳ

    ನೆಲಮಂಗಲ: ಲಾಕ್‍ಡೌನ್ ಮುಂಚಿತವಾಗಿ ತಮ್ಮ-ತಮ್ಮ ಊರಿಗೆ ತೆರಳಿದ್ದ ವಲಸಿಗರು, ಕಳೆದ ಕೆಲ ದಿನಗಳಿಂದ ರಾಜಧಾನಿಯತ್ತ ಮುಖ ಮಾಡುತ್ತಿದ್ದಾರೆ. ಇಂದು ಬೆಳಗ್ಗೆ ಬೆಂಗಳೂರು ಹೊರವಲಯ ನೆಲಮಂಗಲ ಟೋಲ್ ಬಳಿ ವಾಹನ ದಟ್ಟಣೆ ಹೆಚ್ಚಾಗಿದೆ.

    ನೆಲಮಂಗಲದ ನವಯುಗ ಟೋಲ್ ಬಳಿ ವಾಹನ ದಟ್ಟಣೆ ಕಂಡುಬಂದಿದ್ದು, ಹಳ್ಳಿಯಿಂದ ಮತ್ತೆ ಜನ ಬೆಂಗಳೂರಿನತ್ತ ಬರುತ್ತಿದ್ದಾರೆ. ಸರ್ಕಾರದಿಂದ ಅನ್‍ಲಾಕ್ ಘೋಷಣೆ ಆಗದಿದ್ದರು ಕೂಡ ಜನ ಬೆಂಗಳೂರಿಗೆ ಬಂದು ಸೇರುತ್ತಿದ್ದಾರೆ. ಬೆಂಗಳೂರು, ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಕಂಡು ಬರುತ್ತಿದ್ದು, ಬೆಳಗ್ಗೆ 10 ಗಂಟೆಯ ತನಕ ವಾಹನಗಳ ಭರಾಟೆ ಜೋರಾಗಿದೆ. 17 ಜಿಲ್ಲೆಗಳು ಸೇರಿದಂತೆ ಹೊರ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಗಳನ್ನು ನೆಲಮಂಗಲ ತಾಲೂಕು ಹೊಂದಿದ್ದು, ಊರಿಗೆ ತೆರಳಿದ್ದ ಜನರು ಹಳ್ಳಿಗಳಿಂದ ಲಗೇಜು, ಹೆಂಡತಿ ಮಕ್ಕಳ ಜೊತೆಗೆ ಬೆಂಗಳೂರು ನಗರದತ್ತ ಪಯಣ ಬೆಳೆಸಿದ್ದಾರೆ.  ಇದನ್ನೂ ಓದಿ: ನೆಲಮಂಗಲ ಟೋಲ್ ಬಳಿ ಬಿರು ಬಿಸಿಲಲ್ಲಿ ಬಸ್‍ಗಾಗಿ ಕಾದು ಸುಸ್ತಾದ ಪ್ರಯಾಣಿಕರು

    ಎಂಟನೇ ಮೈಲಿ ಬಳಿ ಬ್ಯಾರಿಕೇಡ್ ತಳ್ಳಿ ಹೋಗುತ್ತಿರುವ ವಾಹನ ಸವಾರರ ದೃಶ್ಯ ಬೆಳ್ಳಂ ಬೆಳಗ್ಗೆ ಕಂಡುಬಂದಿದೆ. 8ನೇ ಮೈಲಿ ಬಳಿ ಪೊಲೀಸರ ಚೆಕ್ ಪೊಸ್ಟ್ ಬ್ಯಾರಿಕೇಡ್ ಜಖಂ ಆಗಿದ್ದು, ವಾಹನ ದಟ್ಟಣೆ ಹಿನ್ನೆಲೆ ಬ್ಯಾರಿಕೇಡ್ ತಳ್ಳಿ ನಗರ ಪ್ರವೇಶ ಮಾಡುತ್ತಿರುವವರನ್ನು ಕಂಡರು ಕೂಡ ಪೊಲೀಸರು ಸುಮ್ಮನಾಗಿದ್ದಾರೆ. ಬಿದ್ದ ಬ್ಯಾರಿಕೇಡ್ ಸರಿಸಿ ಪೊಲೀಸರು ತಪಾಸಣೆ ಮಾಡದೇ ವಲಸಿಗರಿಗೆ ಸರಾಗ ಸಂಚಾರ ಮಾಡಿಕೊಟ್ಟಿದ್ದಾರೆ.

  • ತಂದೆಯ ಶವದ ಮುಂದೆ ಒಡಹುಟ್ಟಿದವರ ಜಗಳ – ಬಳಿಕ ಶವವಾಗಿ ಸಿಕ್ಕ ಮಗ

    ತಂದೆಯ ಶವದ ಮುಂದೆ ಒಡಹುಟ್ಟಿದವರ ಜಗಳ – ಬಳಿಕ ಶವವಾಗಿ ಸಿಕ್ಕ ಮಗ

    ಮಂಡ್ಯ: ಏಕಾಏಕಿ ನಾಪತ್ತೆಯಾಗಿದ್ದವನು ಶವವಾಗಿ ಪತ್ತೆಯಾಗಿರುವ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಜಕ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ತಂದೆ ಚಿಕ್ಕಹುಚ್ಚೇಗೌಡ, ಮಗ ಕುಮಾರಸ್ವಾಮಿ (61) ಮೃತರಾಗಿದ್ದಾರೆ. ದುಷ್ಕರ್ಮಿಗಳು ಮನಸೋಚ್ಛೆ ಹಲ್ಲೆ ನಡೆಸಿ ಬಳಿಕ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆಗೈದಿದ್ದಾರೆ. ಆತನ ಮೃತದೇಹ ಬಿದ್ದಿದ್ದ ಸ್ಥಿತಿ ನೋಡಿ ಇಡೀ ಗ್ರಾಮಸ್ಥರೇ ಬೆಚ್ಚಿ ಬಿದ್ದಿದ್ದಾರೆ.

    ಜಮೀನು ಹಾಗೂ ನಿವೇಶನದ ವಿಚಾರವಾಗಿ ಹಲವು ವರ್ಷಗಳಿಂದ ದಾಯಾದಿಗಳ ನಡುವೆ ಜಗಳ ನಡೆಯುತ್ತಿತ್ತು. ಮೇ 31ರ ರಾತ್ರಿ ಮೃತ ಕುಮಾರಸ್ವಾಮಿ ತಂದೆ ಚಿಕ್ಕಹುಚ್ಚೇಗೌಡ ವಯೋಸಹಜವಾಗಿ ಸಾವನ್ನಪ್ಪಿದ್ದರು. ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಹೋದಾಗ ಆತನ ಸಹೋದರರು ಹಾಗೂ ಸಹೋದರಿಯರು ಜಗಳ ತೆಗೆದು ಮುಖನೋಡಲು ಬಿಡದೆ ವಾಪಸ್ ಕಳುಹಿಸಿದ್ದರು.

    ಜೂನ್ 1ರಂದು ಮುಂಜಾನೆ ಕೊಟ್ಟಿಗೆಯಲ್ಲಿದ್ದ ಜಾನುವಾರುಗಳನ್ನು ಹೊರಗೆ ಕಟ್ಟಿಹಾಕಿದ್ದ ಕುಮಾರಸ್ವಾಮಿ, ಬಳಿಕ ನಾಪತ್ತೆಯಾಗಿದ್ದನು. ಎಲ್ಲಾ ಕಡೆ ಹುಡುಕಿದರೂ ಆತನ ಸುಳಿವು ಸಿಕ್ಕಿರಲಿಲ್ಲ. ಮಾರನೆಯ ದಿನ ರಕ್ತ ಸಿಕ್ತ ಸ್ಥಿತಿಯಲ್ಲಿ ಆತನ ಮನೆಯ ಹಿಂಭಾಗದಲ್ಲೇ ಮೃತದೇಹ ಪತ್ತೆಯಾಗಿದೆ. ಬೇರೆ ಕಡೆ ಕೊಲೆಗೈದಿರುವ ದುಷ್ಕರ್ಮಿಗಳು ಒಂದು ದಿನದ ಬಳಿಕ ಶವವನ್ನು ತಂದು ಮನೆಯ ಹಿಂಭಾಗ ಬಿಸಾಕಿ ಹೋಗಿದ್ದಾರೆ.

    ಕಿಕ್ಕೇರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತ ಕುಮಾರಸ್ವಾಮಿ ಮಗ ಹರೀಶ್ ಕುಮಾರ್ ನೀಡಿರುವ ದೂರಿನ ಆಧಾರದ ಮೇಲೆ ಮೃತನ ತಮ್ಮ ಕೃಷ್ಣಮೂರ್ತಿ, ತಂಗಿ ಗಾಯಿತ್ರಿ ಸೇರಿದಂತೆ 9 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಿಗೂಢ ಕೊಲೆಯಿಂದಾಗಿ ಇಡೀ ಗ್ರಾಮಸ್ಥರೇ ಬೆಚ್ಚಿಬಿದ್ದಿದ್ದು, ಸಧ್ಯ ಕೆಲವರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಹಂತಕರು ಯಾರೆಂದು ತಿಳಿಯಲಿದೆ.

  • ಒಂದೇ ಗ್ರಾಮದ 26 ಮಂದಿ ಸೋಂಕಿಗೆ ಕಾರಣವಾಯ್ತು ಜಾತ್ರೆ

    ಒಂದೇ ಗ್ರಾಮದ 26 ಮಂದಿ ಸೋಂಕಿಗೆ ಕಾರಣವಾಯ್ತು ಜಾತ್ರೆ

    ಶಿವಮೊಗ್ಗ: ಒಂದೇ ಗ್ರಾಮದ 26 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಇದೀಗ ಗ್ರಾಮದಲ್ಲಿ ಆತಂಕ ಉಂಟಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಭಗವತಿಕೆರೆಯಲ್ಲಿ ನಡೆದಿದೆ.

    ಕಳೆದ ನಾಲ್ಕೈದು ದಿನದ ಹಿಂದೆ ಗ್ರಾಮದ ವ್ಯಕ್ತಿಯೊಬ್ಬರಿಗೆ ಸೋಂಕು ಕಾಣಿಸಿಕೊಂಡಿತ್ತು. ಸೋಂಕು ಕಾಣಿಸಿಕೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಸೋಂಕಿತನ ಪತ್ನಿ ಹಾಗೂ ಪುತ್ರನನ್ನು ಕೋವಿಡ್ ತಪಾಸಣೆಗೆ ಒಳಪಡಿಸಿದಾಗ ಈ ಇಬ್ಬರಲ್ಲಿ ಸೋಂಕು ಇರುವುದು ದೃಢಪಟ್ಟಿತ್ತು. ಗ್ರಾಮದಲ್ಲಿ ಮೂರು ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡಿದ್ದಾರೆ. ಆರೋಗ್ಯ ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿ ಸೋಂಕಿತರ ಪ್ರಾಥಮಿಕ ಸಂಪರ್ಕ ಹೊಂದಿದ್ದವರು ಹಾಗೂ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಸುಮಾರು 76 ಮಂದಿಯ ಗಂಟಲು ದ್ರವದ ಮಾದರಿ ಪರೀಕ್ಷೆಗೆ ಒಳಪಡಿಸಿದ್ದರು. ಈ 76 ಮಂದಿಯಲ್ಲಿ ಇದೀಗ 26 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದನ್ನೂ ಓದಿ:  ಪರೀಕ್ಷೆ ರದ್ದಿಗೆ ಪ್ರಧಾನಿ ಗುಮ್ಮ ಕಾರಣ, ಶಿಕ್ಷಣ ಸಚಿವರ ಐಲು ಪೈಲು ನಿರ್ಧಾರ- ಎಚ್‍ಡಿಕೆ ಕಿಡಿ

    ಇದೀಗ ಗ್ರಾಮದಲ್ಲಿ ಒಂದೇ ವಾರದಲ್ಲಿ 32 ಸಕ್ರಿಯ ಪ್ರಕರಣಗಳು ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿದೆ. ಇದೀಗ ಸೋಂಕಿತರು ಎಲ್ಲರನ್ನು ಕೋವಿಡ್ ಕೇರ್ ಸೆಂಟರ್ ಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆಗೆ ಒಳಪಡಿಸಲಾಗಿದೆ. ಈ ಪ್ರಮಾಣದಲ್ಲಿ ಒಂದೇ ಗ್ರಾಮದಲ್ಲಿ ಇಷ್ಟೊಂದು ಸೋಂಕು ಪತ್ತೆಯಾಗಲು ಗ್ರಾಮದಲ್ಲಿ ಕಳೆದ ವಾರ ನಡೆದಿದ್ದ ಅಂತರಘಟ್ಟಮ್ಮ ದೇವಿ ಜಾತ್ರೆಯೇ ಕಾರಣ ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:  ಇನ್ಮುಂದೆ ಯಾವುದೇ ದಾನ ಸ್ವೀಕರಿಸಲ್ಲ: ಉಪೇಂದ್ರ

    ಕೋವಿಡ್ ನಿಯಮಾವಳಿ ಮೀರಿ ಅಧಿಕಾರಿಗಳ ಕಣ್ತಪ್ಪಿಸಿ ಗ್ರಾಮದಲ್ಲಿ ಜಾತ್ರೆಯ ಹೆಸರಿನಲ್ಲಿ ಬಾಡೂಟ ಆಯೋಜಿಸಲಾಗಿತ್ತು. ಬಾಡೂಟ ಸವಿಯಲು ಗ್ರಾಮಕ್ಕೆ ಬೇರೆ ಬೇರೆ ಕಡೆಯಿಂದ ಸಂಬಂಧಿಕರು ಆಗಮಿಸಿ ನಂತರ ವಾಪಸ್ ತೆರಳಿದ್ದರು. ಈ ಜಾತ್ರೆಯಾದ ಎರಡೇ ದಿನದಲ್ಲಿ ಗ್ರಾಮದ ಕೆಲವರಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ ಎಂಬ ಸಂಶಯವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.