Tag: ಹಳೇ ನೋಟು

  • ಬಿಳಿಗಿರಿರಂಗನಿಗೆ ಈ ಬಾರಿಯೂ ಹಳೇನೋಟಿನ ಕಾಣಿಕೆ

    ಬಿಳಿಗಿರಿರಂಗನಿಗೆ ಈ ಬಾರಿಯೂ ಹಳೇನೋಟಿನ ಕಾಣಿಕೆ

    ಚಾಮರಾಜನಗರ: ಹಸಿರ ಕಾನನದಲ್ಲಿ ನೆಲೆನಿಂತಿರುವ ಯಳಂದೂರು ತಾಲೂಕಿನ ಬಿಳಿಗಿರರಂಗನಾಥನಿಗೆ 5 ತಿಂಗಳಿನಲ್ಲಿ 25 ಲಕ್ಷ ರೂ. ಕಾಣಿಕೆ ಹರಿದುಬಂದಿದೆ. ಆದರೆ ಇದರಲ್ಲಿ 60,500 ಚಲಾವಣೆಯಾಗದ ಹಳೇ ನೋಟುಗಳು ದೊರೆತಿವೆ.

    ಸೋಮವಾರ ತಡರಾತ್ರಿವರೆಗೆ ನಡೆದ ದೇಗುಲ ಹುಂಡಿ ಎಣಿಕೆಯಲ್ಲಿ 25,29,383 ರೂ. ಸಂಗ್ರಹವಾಗಿದ್ದು, ಈ ಬಾರಿಯೂ ಚಲಾವಣೆಯಾಗದ ಕಂತೆ – ಕಂತೆ ಹಣ ರಂಗಪ್ಪನ ಪಾಲಾಗಿದೆ. 500 ರೂ. ನೋಟಿನ ಕಂತೆಗಳಲ್ಲಿ ಒಟ್ಟು 60,500 ರೂ. ಹಳೇ ನೋಟ್‍ಗಳನ್ನು ಭಕ್ತನೊಬ್ಬ ಹಾಕಿದ್ದಾನೆ. ಈ ಹಿಂದೆ ಸೆಪ್ಟೆಂಬರ್ ನಲ್ಲಿ ನಡೆದ ಹುಂಡಿ ಎಣಿಕೆಯಲ್ಲೂ 55 ಸಾವಿರ ರೂ. ಚಲಾವಣೆಯಾಗದ ನೋಟುಗಳು ಹುಂಡಿಯಲ್ಲಿ ಸಿಕ್ಕಿದ್ದವು.

    ಒಟ್ಟು ಎರಡು ಬಾರಿ ಹುಂಡಿ ಎಣಿಕೆಯಿಂದ 1,15,000 ಹಳೇ ನೋಟುಗಳನ್ನು ಗಿರಿಜನರ ಆರಾಧ್ಯದೈವ ರಂಗನಾಥ ಪಡೆದಿದ್ದಾನೆ. ಒಟ್ಟಿನಲ್ಲಿ ಕೂಡಿಟ್ಟ ಕಪ್ಪು ಹಣವನ್ನು ಭಕ್ತರು ಗೋವಿಂದನ ಪಾದಕ್ಕೆ ಸಮರ್ಪಿಸುತ್ತಿದ್ದಾರೆ.

  • ಹಳೇ 500, 1000 ರೂ. ನೋಟುಗಳನ್ನ ಎಕ್ಸ್ ಚೇಂಜ್ ಮಾಡಲು ಬಂದ ಮೂವರ ಬಂಧನ- 1.95 ಕೋಟಿ ರೂ. ಹಳೇನೋಟು ವಶ

    ಹಳೇ 500, 1000 ರೂ. ನೋಟುಗಳನ್ನ ಎಕ್ಸ್ ಚೇಂಜ್ ಮಾಡಲು ಬಂದ ಮೂವರ ಬಂಧನ- 1.95 ಕೋಟಿ ರೂ. ಹಳೇನೋಟು ವಶ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹಳೇ ನೋಟುಗಳ ಎಕ್ಸ್ ಚೇಂಜ್ ದಂಧೆಗೆ ಇನ್ನೂ ಬ್ರೇಕ್ ಬಿದ್ದಿಲ್ಲ. ನೋಟ್ ಬ್ಯಾನ್ ಆಗಿ 16 ತಿಂಗಳು ಕಳೆದು ಹೋದ್ರೂ ಹಳೇ ನೋಟುಗಳ ಅಕ್ರಮ ಬದಲಾವಣೆ ಮಾತ್ರ ಇನ್ನೂ ನಿಂತಿಲ್ಲ.

    ಕಳೆದ ರಾತ್ರಿ ಹಳೇ 1000 ಹಾಗೂ 500 ರೂ. ಮುಖಬೆಲೆಯ ನೋಟುಗಳನ್ನ ಎಕ್ಸ್ ಚೇಂಜ್ ಮಾಡಲು ಬಂದ ಮೂವರನ್ನ ಕೊತ್ತನೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಅರೋಪಿಗಳ ಬಳಿ 1.95 ಕೋಟಿ ಹಳೇ ನೋಟುಗಳು ಪತ್ತೆಯಾಗಿದ್ದು, ಇವರು ಮಧ್ಯವರ್ತಿಯೊಬ್ಬನ ಮೂಲಕ ಹೊಸ ನೋಟುಗಳಿಗೆ ಎಕ್ಸ್ ಚೇಂಜ್ ಮಾಡಲು ಬಂದಿದ್ದರು ಎನ್ನಲಾಗಿದೆ.

    ಕೊತ್ತನೂರು ಮುಖ್ಯರಸ್ತೆಯ ಗೋಲ್ಡನ್ ಪಾಮ್ ಅಪಾರ್ಟ್‍ಮೆಂಟ್ ನಲ್ಲಿ ವ್ಯವಹಾರ ಕುದುರಿಸಿದ್ದ ಇವರು ಹೊಸ ನೋಟು ಎಕ್ಸ್ ಚೇಂಜ್ ಮಾಡುತ್ತಿದ್ದ ಮತ್ತೊಬ್ಬ ಮಧ್ಯವರ್ತಿಗಾಗಿ ಕಾಯುತ್ತಿದ್ದರು ಎಂದು ಹೇಳಲಾಗಿದೆ. ಈ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಕೊತ್ತನೂರು ಪೊಲೀಸರು, ಮೂವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನೋಟು ಎಕ್ಸ್ ಚೇಂಜ್ ದಂಧೆ ಬೆಳಕಿಗೆ ಬಂದಿದೆ.

    ಇಷ್ಟು ದೊಡ್ಡ ಪ್ರಮಾಣದ ಹಳೇ ನೋಟುಗಳನ್ನ ಎಲ್ಲಿಂದ ತಂದಿದ್ದಾರೆ ಮತ್ತು ಯಾರಿಗೆ ಸೇರಿದ್ದು ಎಂಬುದನ್ನ ಪೊಲೀಸರು ಪತ್ತೆ ಹಚ್ಚಲು ಮುಂದಾಗಿದ್ದಾರೆ.

    ಸಾಂದರ್ಭಿಕ ಚಿತ್ರ
  • 97 ಕೋಟಿ ರೂ. ಹಳೇನೋಟು ಜಪ್ತಿ ಪ್ರಕರಣಕ್ಕಿದೆ ಬೆಂಗಳೂರು ನಂಟು

    97 ಕೋಟಿ ರೂ. ಹಳೇನೋಟು ಜಪ್ತಿ ಪ್ರಕರಣಕ್ಕಿದೆ ಬೆಂಗಳೂರು ನಂಟು

    ಕಾನ್ಪುರ: ಉತ್ತರಪ್ರದೇಶದ ಕಾನ್ಪುರದ ಮನೆಯೊಂದರಲ್ಲಿ ಬರೋಬ್ಬರಿ 97 ಕೋಟಿ ರೂ. ಮೌಲ್ಯದ ಹಳೇನೋಟು ಜಪ್ತಿ ಮಾಡಿ 2 ದಿನಗಳು ಕಳೆದಿವೆ. ಆದ್ರೆ ಆರೋಪಿ ಇಷ್ಟು ದೊಡ್ಡ ಮೊತ್ತದ ಹಣವನ್ನು ಹೊಸ ನೋಟುಗಳಿಗೆ ಬದಲಾಯಿಸಿಕೊಳ್ಳಲು ಹೇಗೆ ಪ್ಲ್ಯಾನ್ ಮಾಡಿದ್ದ ಎಂಬ ಬಗ್ಗೆ ತನಿಖಾ ಸಂಸ್ಥೆಗಳು ತಲೆಕೆಡಿಸಿಕೊಂಡಿವೆ.

    ಬೆಂಗಳೂರು ಮೂಲದ ಹರಿ ಕೃಷ್ಣ ಎಂಬಾತ ತಮಗೆ ನೋಟುಗಳನ್ನ ಅವುಗಳ ಮುಖಬೆಲೆಯ 40% ಗೆ ಬದಲಾಯಿಸಿಕೊಡುವುದಾಗಿ ಹೇಳಿದ್ದ ಎಂದು ಆರೋಪಿಗಳು ಹೇಳಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ 16 ಜನರನ್ನ ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ದೃಢವಾದ ಸಾಕ್ಷಿಗಳನ್ನು ಸಂಗ್ರಹಿಸಿದ ನಂತರ ಅವರನ್ನ ವಶಕ್ಕೆ ಕೊಡಲು ಕೋರ್ಟ್‍ನಲ್ಲಿ ಕೇಳಲಿದ್ದೇವೆ. ಸದ್ಯ ಆರೋಪಿಗಳನ್ನ ಜನವರಿ 30ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎಸ್‍ಪಿ ಅನುರಾಗ್ ಆರ್ಯ ಹೇಳಿದ್ದಾರೆ.

    ಪ್ರಕರಣ ಹಲವಾರು ಕಾರಣಗಳಿಂದ ನಿಗೂಢವಾಗಿದೆ ಎಂದು ಆರ್ಯ ಹೇಳಿದ್ದಾರೆ. 16 ಆರೋಪಿಗಳಲ್ಲಿ ಯಾರೊಬ್ಬರೂ ಕೂಡ ತಾವು ಕೊನೆಯದಾಗಿ ಹಳೇ ನೋಟುಗಳನ್ನ ತಲುಪಿಸಬೇಕಿದ್ದ ವ್ಯಕ್ತಿಯ ಹೆಸರನ್ನು ಇದುವರೆಗೂ ಬಾಯ್ಬಿಟ್ಟಿಲ್ಲ. ಮತ್ತೊಂದು ದೊಡ್ಡ ಸಂಸ್ಥೆಯ ಮೂಲಕ ಹಣವನ್ನ ಬದಲಾವಣೆ ಮಾಡಬೇಕಿತ್ತು ಎಂದು ಕೆಲವರು ಹೇಳಿದ್ದಾರೆ. ಆದ್ರೆ ಆ ಸಂಸ್ಥೆಯ ಹೆಸರನ್ನ ಹೇಳಿಲ್ಲ. ಕಾನ್ಪುರದ ಸಸ್ಯಶಾಸ್ತ್ರ ಪ್ರಾಧ್ಯಾಪಕ ಸಂತೋಷ್ ಯಾದವ್ ಎಂಬಾತ ಕಾನ್ಪುರ ಹಾಗೂ ಲಕ್ನೋದಿಂದ ಹಣವನ್ನ ಸಂಗ್ರಹಿಸುತ್ತಿದ್ದ. ಜೊತೆಗೆ ಹಣ ಬದಲಾವಣೆಕಾರನಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

    ಪಶ್ಚಿಮ ಬಂಗಾಳದ ರಿಯಲ್ ಎಸ್ಟೇಟ್ ಉದ್ಯಮಿಗಳಾದ ಸಂಜೀವ್ ಅಗರ್‍ವಾಲ್ ಹಾಗೂ ಮನೀಷ್ ಅಗರ್‍ವಾಲ್ ಕಮಿಷನ್ ಏಜೆಂಟ್‍ಗಳಾಗಿ ಕೆಲಸ ಮಾಡುತ್ತಿದ್ದರು. ಹಾಗೇ ಹೈದರಾಬದ್‍ನ ಕೋಟೇಶ್ವರ್ ರಾವ್ ಬೆಂಗಳೂರಿನ ಹರಿಕೃಷ್ಣಗೆ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ. ಆರೋಪಿಗಳ ಪ್ರಾಥಮಿಕ ಹೇಳಿಕೆಯ ಆಧಾರದ ಮೇಲೆ ನಮ್ಮ ತನಿಖೆ ಈಗ ಹರಿಕೃಷ್ಣ ಮೇಲೆ ಕೇಂದ್ರೀಕೃತವಾಗಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಇವರ ಜಾಲ 5 ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ಪಶ್ಚಿಮ ಬಂಗಾಳ, ಉತ್ತರಪ್ರದೇಶ, ದೆಹಲಿ ಹಾಗೂ ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಹಳೇ ನೋಟುಗಳನ್ನ ತರಲು ಏಜೆಂಟ್‍ಗಳು ಕಾನ್ಪುರ- ವಾರಣಾಸಿ-ಕೋಲ್ಕತ್ತ- ಹೈದರಾಬಾದ್ ಮಾರ್ಗ, ಕಾನ್ಪುರ- ವಾರಣಾಸಿ- ಹೈದರಾಬಾದ್ ಮಾರ್ಗ ಹಾಗೂ ಕಾನ್ಪುರ- ಪಶ್ಚಿಮ ಉತ್ತರಪ್ರದೇಶ- ದೆಹಲಿ ಮಾರ್ಗವನ್ನು ಬಳಸುತ್ತಿದ್ದರು. ಆನಂದ್ ಖತ್ರಿ ಅವರಿಗೆ 15 ಕೋಟಿ ರೂ. ಹಣವನ್ನು ಬದಲಾಯಿಸಿ ಕೊಟ್ಟಿದ್ದಾರೆ ಎಂದು ತಿಳಿದುಬಂದಿರುವುದಾಗಿ ವರದಿಯಾಗಿದೆ.

  • ಬ್ಯಾನ್ ಆದ ನೋಟುಗಳ ಹಾಸಿಗೆ- 100 ಕೋಟಿ ರೂ. ಹಳೇ ನೋಟು ಜಪ್ತಿ!

    ಬ್ಯಾನ್ ಆದ ನೋಟುಗಳ ಹಾಸಿಗೆ- 100 ಕೋಟಿ ರೂ. ಹಳೇ ನೋಟು ಜಪ್ತಿ!

    ಕಾನ್ಪುರ: ಅಂದಾಜು 100 ಕೋಟಿ ರೂ. ಮೊತ್ತದ ಬ್ಯಾನ್ ಆದ ನೋಟುಗಳನ್ನ ಉತ್ತರಪ್ರದೇಶ ಪೊಲೀಸರು ಬುಧವಾರದಂದು ಕಾನ್ಪುರದಲ್ಲಿ ಜಪ್ತಿ ಮಾಡಿದ್ದಾರೆ.

    ಜಪ್ತಿ ಮಾಡಲಾಗಿರೋ ಹಣದ ನಿರ್ದಿಷ್ಟ ಮೊತ್ತವನ್ನು ತಿಳಿಯಲು ಎಣಿಕಾ ಕಾರ್ಯ ನಡೆಯುತ್ತಿದೆ. ಜಪ್ತಿಯಾಗಿರೋ ಹಣ ಹಳೇ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳಲ್ಲಿವೆ. ಕಾನ್ಪುರದ ಸೇಸಾಮೌ ಪಾಕೆಟ್‍ನಲ್ಲಿ ಈ ದಾಳಿ ನಡೆದಿದೆ.

    ಕೋಟಿಗಟ್ಟಲೆ ಬ್ಯಾನ್ ಆದ ನೋಟುಗಳು ಕಾನ್ಪುರ ನಿವಾಸಿಯೊಬ್ಬರ ಮನೆಯಲ್ಲಿದೆ ಎಂದು ನಮಗೆ ಮಾಹಿತಿ ಬಂದಿತ್ತು. ಆರ್‍ಬಿಐ ಹಾಗೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳನ್ನೊಳಗೊಂಡ ತಂಡ ದಾಳಿ ನಡೆಸಿತ್ತು. ಇನ್ನೂ ಶೋಧ ಕಾರ್ಯ ಹಾಗೂ ಎಣಿಕಾ ಕಾರ್ಯ ನಡೆಯುತ್ತಿರುವುದರಿಂದ ನಿಗದಿತ ಮೊತ್ತ ಎಷ್ಟು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಎಸ್‍ಎಸ್‍ಪಿ ಎಕೆ ಮೀನಾ ಹೇಳಿದ್ದಾರೆ.

    ಕಂತೆ ಕಂತೆ ನೋಟುಗಳನ್ನ ಹಾಸಿಗೆಯಂತೆ ಜೋಡಿಸಿರುವ ಫೋಟೋ ಹಾಗೂ ವಿಡಿಯೋವನ್ನ ಸುದ್ದಿ ಸಂಸ್ಥೆ ಹಂಚಿಕೊಂಡಿದೆ. ನೋಟುಗಳ ಆರೋಪಿಯ ಬಗ್ಗೆ ಮಾಹಿತಿ ಬಹಿರಂಗಪಡಿಸಲು ಪೊಲೀಸರು ನಿರಾಕರಿಸಿದ್ದಾರೆ. ಐಟಿ ಇಲಾಖೆ ಅಧಿಕಾರಿಗಳು ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.

    2016ರ ನವೆಂಬರ್ 8ರಂದು ಕೇಂದ್ರ ಸರ್ಕಾರ ಹಳೇ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನ ಬ್ಯಾನ್ ಮಾಡಿತ್ತು.

  • ಪೊಲೀಸರ ಮೇಲೇ ಪ್ರತಿದೂರು ದಾಖಲಿಸ್ತಿದ್ದ, ಸಂಸದರ ಸಂಬಂಧಿಗೆ ಪಂಗನಾಮ ಹಾಕಿದ್ದ ನಾಗ

    ಪೊಲೀಸರ ಮೇಲೇ ಪ್ರತಿದೂರು ದಾಖಲಿಸ್ತಿದ್ದ, ಸಂಸದರ ಸಂಬಂಧಿಗೆ ಪಂಗನಾಮ ಹಾಕಿದ್ದ ನಾಗ

    ಬೆಂಗಳೂರು: ನಗರದ ಶ್ರೀರಾಂಪುರದ ಮಾಜಿ ರೌಡಿಶೀಟರ್ ಬಾಂಬ್ ನಾಗನ ಮನೆ ಮೇಲೆ ಇಂದು ಪೊಲೀಸರು ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಆತ ಈ ಹಿಂದೆ ನಡೆಸಿದ್ದ ವಂಜನೆ ಹಾಗೂ ರೌಡಿಸಂನ ಪ್ರಕರಣಗಳು ಬೆಳಕಿಗೆ ಬರುತ್ತಿವೆ.

    ಬೆಂಗಳೂರಿನ ಹೊರಗೂ ಬಾಂಬ್ ನಾಗನ ರೌಡಿಸಂ: ಬಾಂಬ್ ನಾಗ ಬೆಂಗಳೂರಿನ ಹೊರಗೂ ರೌಡಿಸಂ ಮಾಡಿದ್ದ. ಫಾರ್ಮ್ ಹೌಸ್ ಮಾಲೀಕರನ್ನ ಅಪಹರಿಸಿ ಫಾರ್ಮ್ ಹೌಸ್ ಬರೆಸಿಕೊಂಡ ನಾಗ ರಾಜಣ್ಣ ಎಂಬವರನ್ನು 2015 ಆಗಸ್ಟ್ ತಿಂಗಳಲ್ಲಿ ಕಿಡ್ನಾಪ್ ಮಾಡಿದ್ದ ಬಾಂಬ್ ನಾಗ, ನೆಲಮಂಗಲದ ಕಾಸರಘಟ್ಟದಲ್ಲಿರುವ ಐಷಾರಾಮಿ ಬಂಗಲೆಯ್ನನ ಅವರಿಂದ ಬರೆಸಿಕೊಂಡಿದ್ದ. ಈ ಬಗ್ಗೆ ದಾಬಸ್‍ಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಬಂಗಲೆ ವಿಚಾರದಲ್ಲಿ ಈಗಲೂ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಬಂಗಲೆಯ ಸುತ್ತ ಹತ್ತು ಅಡಿ ಕಾಂಪೌಂಡ್ ನಿರ್ಮಿಸಿ ಸಿಸಿಟಿವಿ ಅಳವಡಿಕೆ ಮಾಡಲಾಗಿದೆ. ಬೃಹತ್ ಕಾಂಪೌಂಡ್ ಗೋಡೆಗೆ ಬಾಂಬ್ ನಾಗ ವಿದ್ಯುತ್ ತಂತಿ ಕೂಡ ಅಳವಡಿಸಿದ್ದಾನೆ.

    ಸಂಸದರ ಸಂಬಂಧಿಗೆ ಪಂಗನಾಮ: ಬಾಂಬ್ ನಾಗನ ದುಡ್ಡಿನ ದಂಧೆ ಪ್ರಕರಣ ಹೊಸದೇನಲ್ಲ. ಈ ಹಿಂದೆ ಲೋಕಸಭಾ ಸದಸ್ಯರ ಸಂಬಂಧಿಯೊಬ್ಬರಿಗೆ ಒಂದು ಕೋಟಿ ರುಪಾಯಿ ಚಳ್ಳೆಹಣ್ಣು ತಿನ್ನಿಸಿರೋ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಡಿಸೆಂಬರ್‍ನಲ್ಲಿ ಸಂಸದರೊಬ್ಬರ ಸಂಬಂಧಿಗೆ ಒಂದು ಕೋಟಿ ರುಪಾಯಿ ಹಳೇ ನೋಟನ್ನು ಪಿಂಕ್ ನೋಟ್ ಮಾಡಿಕೊಡುವುದಾಗಿ ಹೇಳಿದ್ದ ನಾಗ ಹಳೇ ನೋಟುಗಳನ್ನು ಪಡೆದುಕೊಂಡು ಉಂಡೇನಾಮ ತೀಡಿದ್ದ. ಈ ಸಂಬಂಧ ಸಿಸಿಬಿಗೆ ದೂರು ಬಂದಿತ್ತು. ಈ ದೂರಿನ ಜೊತೆ ಸರ್ಚ್ ವಾರೆಂಟ್ ಇಟ್ಟುಕೊಂಡು ಹೋದ ಇನ್ಸ್ ಪೆಕ್ಟರ್ ಮಹಾನಂದ ಅವರ ಮೇಲೆ 35 ಮಂದಿ ಮಹಿಳೆಯರಿಂದ ಅಟ್ಯಾಕ್ ಮಾಡಿಸಿ ನಾಗ ಹಗೆ ಸಾಧಿಸಿದ್ದ. ಅನಂತರ ಇನ್ಸ್ ಪೆಕ್ಟರ್ ಸೇರಿದಂತೆ ಎಲ್ಲರ ಮೇಲೂ ಕೇಸ್ ಕೂಡ ಹಾಕಿದ್ದ. ನಾನು ಇಲ್ಲದೇ ಇರುವಾಗ ಹೆಂಡ್ತಿ ಮಕ್ಕಳ ಜೊತೆ ಗಲಾಟೆ ಮಾಡಿದ್ದಾರೆ ಅಂತ ದೂರು ಕೊಟ್ಟಿದ್ದ. ವಿಚಿತ್ರವೆಂದ್ರೆ ಈ ಪ್ರಕರಣದಲ್ಲಿ ಸಿಸಿಬಿ ಹಿರಿಯ ಅಧಿಕಾರಿಗಳು ಮತ್ತು ಶ್ರೀರಾಮಪುರದ ಪೊಲೀಸರಿಂದಲೇ ಸಹಕಾರ ದೊರೆಯಲಿಲ್ಲ ಎನ್ನಲಾಗಿದೆ.

     

  • ಬಾಂಬ್ ನಾಗನ ಮನೆಯಲ್ಲಿ ಬಗೆದಷ್ಟೂ ಸಿಕ್ತಿದೆ ಕೋಟಿ ಕೋಟಿ ಹಳೇ ನೋಟು

    ಬಾಂಬ್ ನಾಗನ ಮನೆಯಲ್ಲಿ ಬಗೆದಷ್ಟೂ ಸಿಕ್ತಿದೆ ಕೋಟಿ ಕೋಟಿ ಹಳೇ ನೋಟು

    – ಖೋಟಾ ನೋಟು ದಂಧೆಯಲ್ಲೂ ನಾಗ ಭಾಗಿ?

    ಬೆಂಗಳೂರು: ಮಾಜಿ ರೌಡಿಶೀಟರ್ ಬಾಂಬ್ ನಾಗನ ಮನೆಯಲ್ಲಿ ಬಗೆದಷ್ಟೂ ಕೋಟಿ ಕೋಟಿ ದುಡ್ಡು ಸಿಕ್ತಿದೆ. ನಾಗನ ಮನೆಯಲ್ಲಿ ಈವರೆಗೆ 150 ಕೋಟಿ ರೂ. ಮೌಲ್ಯದ ಆಸ್ತಿ ಪತ್ರಗಳು ಸಿಕ್ಕಿವೆ. ಈಗಾಗ್ಲೇ 3 ಬಾಕ್ಸ್‍ಗಳನ್ನ ಪೊಲೀಸರು ತೆರೆದಿದ್ದು, ಮತ್ತೆರಡು ಬಾಕ್ಸ್ ಪತ್ತೆಯಾಗಿದೆ.

    ದೇವರ ಪುಸ್ತಕಗಳ ಹಿಂದಿತ್ತು ಹಣ: ಶ್ರೀಮದ್ ಭಗವದ್ಗೀತೆ, ಕೃಷ್ಣವಾಣಿ ಸೇರಿದಂತೆ 200ಕ್ಕೂ ಹೆಚ್ಚು ಪುಸ್ತಕಗಳ ಕೆಳಗೆ ಕೋಟಿ ಕೋಟಿ ಹಣ ಪತ್ತೆಯಾಗಿದೆ. ಮೂರು ಕಬೋರ್ಡ್‍ನಲ್ಲಿ ರಿಯಲ್ ಎಸ್ಟೇಟ್ ಪತ್ರಗಳು ಸಿಕ್ಕಿದ್ದು, ಅಂದಾಜಿನ ಮೇಲೆ ಲೆಕ್ಕ ಮಾಡಿದ್ರೂ 150 ಕೋಟಿಗೂ ಮೀರಿದ ಆಸ್ತಿಪತ್ರಗಳಿವೆ.

    ಖೋಟಾ ನೋಟು ದಂಧೆಯನ್ನೂ ಮಾಡ್ತಿದ್ನಾ ನಾಗ?: ಬ್ಲಾಕ್ ಅಂಡ್ ವೈಟ್ ಮನಿ ದಂಧೆ ಜೊತೆಗೆ ಬಾಂಬ್ ನಾಗ ಖೋಟಾ ನೋಟು ದಂಧೆಯಲ್ಲೂ ತೊಡಗಿದ್ದ ಎಂಬ ಶಂಕೆ ವ್ಯಕ್ತವಾಗಿದೆ. ಬಾಂಬ್ ನಾಗನ ಮನೆಯಲ್ಲಿ ಕೋಟಿ ಕೋಟಿ ಹಳೇ ನೋಟುಗಳ ಕಂತೆ ಜೊತೆಗೆ ನೋಟು ಮುದ್ರಿಸುವ ಖಾಲಿ ಪೇಪರ್ ಕೂಡ ಪತ್ತೆಯಾಗಿದೆ. ಕಂತೆ ಕಂತೆ ಹಳೇ ನೋಟುಗಳ ಮಧ್ಯೆಯೇ ಖಾಲಿ ಪೇಪರ್ ಜೋಡಿಸಿಟ್ಟಿದ್ದ ಬಾಂಬ್ ನಾಗ. ಅಲ್ಲದೆ ನೋಟಿನ ಜೊತೆಯಲ್ಲೇ ಹಲವು ಬಗೆಯ ಪ್ರಿಂಟರ್ ಮಷಿನ್ ಕೂಡ ಸಿಕ್ಕಿದೆ.

    ಪೊಲೀಸರು ದಾಳಿ ಮಡಲು ಕಾರಣ?: ಬಾಂಬ್ ನಾಗನ ವಿರುದ್ಧ ದೂರು ನೀಡಿದ್ದು ರಿಯಲ್ ಎಸ್ಟೇಟ್ ಉದ್ಯಮಿ ಉಮೇಶ್. ದೂರುದಾರ ಉಮೇಶ್ ಕಳೆದ ತಿಂಗಳು ವೀರಣ್ಣ ಮತ್ತಿಕಟ್ಟಿ ಅವರ ಅಳಿಯ ಪ್ರವೀಣ್ ಕುಮಾರ್ ಜೊತೆ ನೋಟ್ ದಂಧೆಯಲ್ಲಿ ಬಂಧಿತನಾಗಿದ್ದ. ಉಮೇಶ್ ಬಾಂಬ್ ನಾಗನಿಗೆ 20 ಕೋಟಿ ಮೊತ್ತದ ಹಳೇ ನೋಟುಗಳನ್ನ ಪಿಂಕ್ ನೋಟ್ ಮಾಡಿಕೊಡಲು ಮೊದಲು ಆಫರ್ ನೀಡಿದ್ದ. ಅದರಂತೆ ಬಾಂಬ್ ನಾಗನ ಮನೆಯ ಕೊನೆ ಮಹಡಿಯಲ್ಲಿ 10 ಕೋಟಿ ರೂ. ಎಕ್ಸ್ ಚೇಂಜ್ ದಂಧೆ ನಡೆದಿತ್ತು. ಬಳಿಕ ಉಮೇಶ್ 4ನೇ ಮಹಡಿಗೆ ಬಂದಾಗ ನಾಗನ ಗ್ಯಾಂಗ್‍ನ ಐವರು ರಿವಾಲ್ವಾರ್ ಹಿಡಿದು ಸುತ್ತುವರಿದು ಬೆದರಿಕೆ ಹಾಕಿ, ಉಮೇಶ್‍ಗೆ ಥಳಿಸಿ, ಎಕ್ಸ್ ಚೇಂಜ್ ಆಗಿದ್ದ 10 ಕೋಟಿ ಹಣವನ್ನ ಕಿತ್ತುಕೊಂಡಿದ್ದರು. ಬಳಿಕ ಉಮೇಶ್‍ನನ್ನ ಎತ್ತಿಕೊಂಡು ಹೋಗಿ ಹಲಸೂರು ಬಳಿ ಬಿಸಾಡಿ ಬಂದಿದ್ದರು. ಈ ಎಲ್ಲಾ ಘಟನೆ ಏಪ್ರಿಲ್ 7 ರಂದು ಶ್ರೀರಾಪುರದಲ್ಲಿರುವ ಬಾಂಬ್ ನಾಗನ ನಿವಾಸದಲ್ಲಿ ನಡೆದಿತ್ತು. ದರೋಡೆ ಹಾಗೂ ಅಪಹರಣಕ್ಕೆ ಸಂಬಂಧಿಸಿದಂತೆ ಉಮೇಶ್ ದೂರಿನ ಆಧಾರದ ಮೇಲೆ ಸರ್ಚ್ ವಾರೆಂಟ್ ಪಡೆದು ಪೊಲೀಸರು ಇಂದು ದಾಳಿ ನಡೆಸಿದ್ದಾರೆ. ಡಿಸಿಪಿ ಅಜಯ್ ಹಿಲೋರಿ ನೇತೃತ್ವದಲ್ಲಿ ಬಾಂಬ್ ನಾಗನ ಮನೆ ಶೋಧ ಇನ್ನೂ ಮುಂದುವರೆದಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್, ಇಂತಹ ಆಪರೇಷನ್‍ಗಳು ರೌಡಿಗಳ ಮನೆಗಳ ಮೇಲೆ ಮುಂದುವರೆಯಲಿವೆ. ಕಳೆದ ತಿಂಗಳೇ ನಾನು ಹೇಳಿದಂತೆ, ರೌಡಿ ಚಟುವಟಿಕೆಗಳಿಂದ ಅಕ್ರಮವಾಗಿ ಯಾರೇ ಹಣ ಸಂಪಾದನೆ ಮಾಡಿದ್ರು ಬಿಡಲ್ಲ. ಅಂತವರ ಬಗ್ಗೆ ಮಾಹಿತಿ ಕಲೆ ಹಾಕ್ತಿದ್ದೇವೆ. ಇದು ಮುಂದುವರಿದ ಭಾಗವಷ್ಟೇ. ಅಕ್ರಮ ಚಟುವಟಿಕೆಗಳಿಂದ ಹಣ ಸಂಪಾದನೆ ಮಾಡೋರನ್ನ ಬಿಡುವುದಿಲ್ಲ. ಮಾಜಿ ರೌಡಿ ಅಂತ ಮುಖವಾಡ ಹಾಕಿಕೊಂಡವರಿಗೆ ಇದೆ ಹಬ್ಬ. ಎಲ್ಲರ ಮೇಲೂ ಕಣ್ಣಿಡಲಾಗಿದೆ. ಸ್ವಲ್ಪ ದಿನದ ಹಿಂದೆಯೂ ಇದೆ ರೀತಿ ದಾಳಿ ಮಾಡಲಾಗಿತ್ತು ಮುಂದೆಯೂ ದಾಳಿ ನಡೆಯಲಿದೆ ಅಂತ ಹೇಳಿದ್ರು.

    ಕಿಡ್ನ್ಯಾಪ್ ಮತ್ತು ರಾಬರಿ ಸಂಬಂಧ ಬಾಂಬ್ ನಾಗನ ಮನೆ ಮೇಲೆ ದಾಳಿ ನಡೆಸಿದ್ದೇವೆ. ಇಲ್ಲಿವರೆಗೂ ಒಂದು ರೂಮ್ ಮಾತ್ರ ಓಪನ್ ಮಾಡಿದ್ದೀವಿ. ಮನೆಯವರು ಯಾರೂ ಸ್ಪಂದಿಸಿಲ್ಲ. ಜಮೀನು ವ್ಯವಹಾರ ಸಂಬಂಧ ಸಾಕಷ್ಟು ದಾಖಲೆಗಳು ಸಿಕ್ಕಿವೆ. ಇನ್ನೂ ಹಣದ ಲೆಕ್ಕ ನಡೀತಿದೆ. ಸಂಜೆಯೊಳಗೆ ಲೆಕ್ಕ ಸಿಗಲಿದೆ. ಅಪರಾಧ ಕೃತ್ಯಗಳಿಗೆ ಬಳಸುವ ಮಾರಕಾಸ್ತ್ರಗಳು ಕೂಡ ಪತ್ತೆಯಾಗಿವೆ ಅಂತ ನಿಂಬಾಳ್ಕರ್ ತಿಳಿಸಿದ್ರು. ಸಾಕಷ್ಟು ಕುಖ್ಯಾತ ರೌಡಿಗಳ ಬಗ್ಗೆ ಮಹತ್ವದ ಮಾಹಿತಿ ಕಲೆ ಹಾಕಲಾಗುತ್ತಿದೆ ಅಂತ ನಿಂಬಾಳ್ಕರ್ ಹೇಳಿದ್ರು.

    https://www.youtube.com/watch?v=y6I5dIeMjrU

  • ಬೆಂಗ್ಳೂರಲ್ಲಿ 9 ಕೋಟಿ ರೂ. ಹಳೇ ನೋಟು ವಶ – ಪರಿಷತ್ ಸದಸ್ಯ ವೀರಣ್ಣ ಮತ್ತಿಕಟ್ಟಿ ಅಳಿಯ ಅರೆಸ್ಟ್

    ಬೆಂಗ್ಳೂರಲ್ಲಿ 9 ಕೋಟಿ ರೂ. ಹಳೇ ನೋಟು ವಶ – ಪರಿಷತ್ ಸದಸ್ಯ ವೀರಣ್ಣ ಮತ್ತಿಕಟ್ಟಿ ಅಳಿಯ ಅರೆಸ್ಟ್

    ಬೆಂಗಳೂರು: ಬ್ಲ್ಯಾಕ್ ಅಂಡ್ ವೈಟ್ ಮನಿ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ, ವಿಧಾನ ಪರಿಷತ್ ಸದಸ್ಯ ವೀರಣ್ಣ ಮತ್ತಿಕಟ್ಟಿ ಅವರ ಅಳಿಯನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

    ವೀರಣ್ಣ ಮತ್ತಿಕಟ್ಟಿ ಅವರ ಅಳಿಯ ಪ್ರವೀಣ್ ಕುಮಾರ್ ಸೇರಿದಂತೆ 14 ಜನ ಆರೋಪಿಗಳನ್ನು ಬಂಧಿಸಲಾಗಿದೆ. 4 ದಿನಗಳ ಹಿಂದೆ 5 ಕೋಟಿ ರೂ. ಹಳೆಯ ನೋಟ್‍ಗಳನ್ನ ಜಪ್ತಿ ಮಾಡಿ ಐವರು ಆರೋಪಿಗಳನ್ನ ಸಿಸಿಬಿ ಪೊಲೀಸರು ಬಂಧಿಸಿದ್ದರು. ಬಂಧಿತರ ವಿಚಾರಣೆ ನಡೆಸಿದ ನಂತರ ಸಿಕ್ಕ ಮಾಹಿತಿಯ ಮೇಲೆ ಕಾರ್ಯಾಚರಣೆ ನಡೆಸಿ ಇದೀಗ ಪ್ರವೀಣ್ ಕುಮಾರ್ ಸೇರಿದಂತೆ 14 ಆರೋಪಿಗಳನ್ನ ಬಂಧಿಸಲಾಗಿದೆ.

    ರಿಯಲ್ ಎಸ್ಟೆಟ್ ಉದ್ಯಮಿ ಉಮೇಶ್ ಎಂಬವರಿಂದ ಹಣ ತಂದು ವೈಟ್ ಮಾಡಿಕೊಡುವುದಾಗಿ ಆರೋಪಿ ಪ್ರವೀಣ್ ಕುಮಾರ್ ಒಪ್ಪಿಕೊಂಡಿದ್ದರು. ಪ್ರವೀಣ್ ಕುಮಾರ್ ಜೊತೆ 14 ಜನ ಭಾಗಿಯಾಗಿದ್ರು ಎನ್ನಲಾಗಿದೆ.

    ರಿಯಲ್ ಎಸ್ಟೇಟ್ ಉದ್ಯಮಿ ಉಮೇಶ್ ನಾಗರಬಾವಿ ನಿವಾಸಿಯಾಗಿದ್ದು, ನಾಗರಬಾವಿಯಲ್ಲಿ ಒಂದೂವರೆ ಎಕರೆ ಆಸ್ತಿಯನ್ನು ಹೊಂದಿದ್ದಾರೆ. ಆಸ್ತಿ ಮಾರಾಟ ಮಾಡುವ ವಿಚಾರಕ್ಕೆ ಬ್ಲ್ಯಾಕ್ ಅಂಡ್ ವೈಟ್ ಮನಿ ದಂಧೆಗೆ ಆರೋಪಿಗಳು ಮುಂದಾಗಿದ್ದರು ಎಂದು ಹೇಳಲಾಗಿದೆ.

    ಶನಿವಾರ ರಾತ್ರಿ ನಾಗರಬಾವಿಯ ಬೆಸ್ಕಾಂ ಲೇಔಟ್‍ನಲ್ಲಿ ಬ್ಲ್ಯಾಕ್ ಅಂಡ್ ವೈಟ್ ದಂಧೆಯಲ್ಲಿ ಭಾಗಿಯಾಗಿದ್ದ ತಂಡವನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, 9 ಕೋಟಿ 10 ಲಕ್ಷ ರೂ. ಹಳೇ ನೊಟುಗಳನ್ನ ಜಪ್ತಿ ಮಾಡಿದ್ದಾರೆ. 25 ಕೋಟಿ ರೂ. ಹಳೆಯ ನೋಟಿನ ಜೊತೆ ಇನ್ನೊಂದು ಗ್ಯಾಂಗ್ ಪರಾರಿಯಾಗಿದೆ.

    14 ಜನ ಆರೋಪಿಗಳಲ್ಲಿ ಮಂಜುನಾಥ್ ಎಂಬ ಆರೋಪಿ ಬಿಎಂಟಿಸಿ ಉದ್ಯೋಗಿಯಾಗಿದ್ದು, ಉಳಿದ 13 ಜನರು ರಿಯಲ್ ಎಸ್ಟೇಟ್ ಉದ್ಯಮಿಗಳಾಗಿದ್ದಾರೆ.