Tag: ಹಳದಿ ಮಳೆ

  • ಬೂದಿ ಮಳೆಯಲ್ಲ, ಕೀಟ ಮಿಶ್ರಿತ ಮಳೆ ಸಾಧ್ಯತೆ: ಪರಿಸರ ವಿಜ್ಞಾನಿ ಎನ್.ಎ ಮಧ್ಯಸ್ಥ

    ಬೂದಿ ಮಳೆಯಲ್ಲ, ಕೀಟ ಮಿಶ್ರಿತ ಮಳೆ ಸಾಧ್ಯತೆ: ಪರಿಸರ ವಿಜ್ಞಾನಿ ಎನ್.ಎ ಮಧ್ಯಸ್ಥ

    ಉಡುಪಿ: ಜಿಲ್ಲೆಯಲ್ಲಿ ಶುಕ್ರವಾರ ಸುರಿದ ಮಳೆಯು ಹಳದಿ ಬಣ್ಣದಿಂದ ಕೂಡಿದ್ದ ಬೆನ್ನಲ್ಲೆ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ಈ ಕುರಿತು ಪರಿಸರ ವಿಜ್ಞಾನಿಯಾದ ಎನ್.ಎ.ಮಧ್ಯಸ್ಥರವರು ಸ್ಪಷ್ಟನೆ ನೀಡಿದ್ದಾರೆ.

    ಹಳದಿ ಮಳೆ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ತೆಂಗಿನ ಗರಿಗಳ ಕೆಳ ಭಾಗದಲ್ಲಿ ಬಿಳಿ ಬಣ್ಣದ ಕೀಟಗಳು ಇದ್ದು, ಇವು ಆಗಸ್ಟ್ ತಿಂಗಳ ಸುಮಾರಿಗೆ ಹೆಚ್ಚಾಗಿ ಕಂಡುಬರುತ್ತವೆ. ಕೀಟಗಳು ಬೆಳೆದ ನಂತರ ಅವುಗಳು ಪುಡಿಪುಡಿಯಾಗಿ ವಾತಾವರದಲ್ಲಿ ಸೇರಿಕೊಂಡಿರುತ್ತವೆ. ಗಾಳೆ ಮಳೆ ಜೊತೆಯಾದರೆ ತೆಂಗಿನ ಗರಿಯಲ್ಲಿದ್ದ ಹಳದಿ ಮಿಶ್ರಿತ ಬಿಳಿ ಕೀಟಗಳು ಮಳೆ ಹನಿಗಳ ಜೊತೆ ನೆಲಕ್ಕೆ ಬೀಳುವುದರಿಂದ ಹಳದಿ ಮಿಶ್ರಿತ ಮಳೆಯಾಗಿದೆ ಎಂದು ತಿಳಿಸಿದ್ದಾರೆ.

    ಕರಾವಳಿಯಲ್ಲಿ ಲಕ್ಷಾಂತರ ತೆಂಗಿನ ಮರಗಳಲ್ಲಿ ಈ ಬಿಳಿ ಕೀಟ ಕಾಣಿಸಿಕೊಳ್ಳುವುದರಿಂದ ವಾತಾವರಣದಲ್ಲಿ ಕೀಟಗಳು ಇರುವ ಸಂದರ್ಭದಲ್ಲೇ ಮಳೆಯಾಗಿದ್ದರಿಂದ ಹಳದಿ ಮಿಶ್ರಿತ ಬೂದಿ ಬಣ್ಣದ ಮಳೆಯಾಗಿದೆ. ಪರಿಸರದ ಬಗ್ಗೆ ಆಳವಾದ ಅಧ್ಯಯನ ಮಾಡಿರುವ ಹಿರಿಯ ಪರಿಸರ ತಜ್ಞ ಎನ್.ಎ.ಮಧ್ಯಸ್ಥರವರು, ಕಳೆದ ಕೆಲ ವರ್ಷಗಳ ಹಿಂದೆ ಕಾರ್ಕಳದಲ್ಲಿಯೂ ಇಂತಹುದೇ ಮಳೆಯಾಗಿತ್ತು ಎಂದು ಹೇಳಿದ್ದಾರೆ.

    ಈ ಹಳದಿ ಮಿಶ್ರಿತ ಬಿಳಿ ಮಳೆಯ ಬಗ್ಗೆಯೂ ಭಯ ಬೇಡ. ಕೃಷಿ ವಿಜ್ಞಾನಿಗಳು ಈ ಬಗ್ಗೆ ಸಂಶೋಧನೆ ನಡೆಸಲಿ, ಬ್ರಹ್ಮಾವರದಲ್ಲಿ ಕೃಷಿ ವಿಜ್ಞಾನ ಕೇಂದ್ರವಿದೆ. ಈಗಾಗಲೇ ತಜ್ಞರು ಮಳೆಯ ಸ್ಯಾಂಪಲನ್ನು ಸಂಗ್ರಹ ಮಾಡಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಉಡುಪಿ, ಕುಂದಾಪುರದಲ್ಲಿ ಹಳದಿ ಮಳೆ!

    ವಿಯೆಟ್ನಾಂನಲ್ಲೊಮ್ಮೆ ಭಾರೀ ಪ್ರಮಾಣದಲ್ಲಿ ಹೂವುಗಳು ಬೆಳೆದಿತ್ತು. ಕಾಡು, ಊರಿನೊಳಗೆ ಭಾರೀ ಪ್ರಮಾಣದಲ್ಲಿ ಬೆಳೆದ ಹೂವುಗಳ ಪರಾಗ ಗಾಳಿಯಲ್ಲಿ ಬೆರೆತ ಸಂದರ್ಭ ಇದೇ ರೀತಿ ಹಳದಿ ಮಳೆಯಾಗಿತ್ತು. ಅಲ್ಲಿನ ಜನರು ಇದು ಹಳದಿ ರಾಸಾಯನಿಕ ಮಳೆ ಎಂದು ಭಯಗೊಂಡು, ವಿರೋಧಿ ದೇಶದವರು ರಾಸಾಯನಿಕ ದಾಳಿ ಮಾಡಿರಬಹುದು ಎಂಬ ಸಂಶಯವನ್ನು ಹೊರಹಾಕಿದ್ದರು. ಆದರೆ ಸಂಶೋಧನೆಯ ಬಳಿಕ ಅದು ಪರಾಗ ಮಳೆ ಅಂತ ಸಾಬೀತಾಯಿತು ಎಂದು ತಮ್ಮ ಹಳೆಯ ನೆನಪನ್ನು ಹಂಚಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಉಡುಪಿ, ಕುಂದಾಪುರದಲ್ಲಿ ಹಳದಿ ಮಳೆ!

    ಉಡುಪಿ, ಕುಂದಾಪುರದಲ್ಲಿ ಹಳದಿ ಮಳೆ!

    ಉಡುಪಿ: ಉಡುಪಿಯಲ್ಲಿ ಹಳದಿ ಮಳೆಯಾಗಿದೆ. ಶುಕ್ರವಾರ ಸಂಜೆ ಜಿಲ್ಲೆಯ ಹಲವೆಡೆ ತುಂತುರು ಮಳೆ ಸುರಿದಿದ್ದು, ಹಳದಿ ಬಣ್ಣದ ಹನಿಗಳು ಕಾಣಿಸಿಕೊಂಡಿದೆ.

    ಬೈಕ್ ಮತ್ತು ಕಾರಿನ ಮೇಲೆ ಬಿದ್ದ ಹನಿಗಳು ಒಣಗುತ್ತಿದ್ದಂತೆಯೇ ಹಳದಿ ಬಣ್ಣಕ್ಕೆ ತಿರುಗಿದೆ. ಧೂಳಿನ ಮೇಲೆ ಮಳೆ ಬಿದ್ದಿರಬಹುದು ಎಂದು ಹಲವರು ಅಂದುಕೊಂಡಿದ್ದರು. ಆದ್ರೆ ಉಡುಪಿ ನಗರದ ಹಲವು ಭಾಗ ಮತ್ತು ಕುಂದಾಪುರದ ಹಲವೆಡೆ ಅರಶಿನ ಬಣ್ಣದ ಮಳೆಹನಿ ಅಲ್ಲಲ್ಲಿ ಬಿದ್ದಿದೆ.

    ಕಳೆದ ಎರಡು ಮೂರು ದಿನದಿಂದ ಅಲ್ಲಲ್ಲಿ ಸಾಧಾರಣ ಮಳೆಯಾಗುತ್ತಿದ್ದು, ಎಲ್ಲೂ ಈ ರೀತಿಯ ಬಣ್ಣದ ಮಳೆಯಾಗಿಲ್ಲ. ಯುಪಿಸಿಎಲ್ ಪವರ್ ಪ್ಲ್ಯಾಂಟ್ ಉಗುಳುವ ಹೊಗೆ ಮತ್ತು ಧೂಳಿನಿಂದ ಬೂದಿ ಮಿಶ್ರಿತ ಹಳದಿ ಮಳೆ ಆಗಿರಬಹುದು ಎನ್ನಲಾಗಿದೆ. ಆದ್ರೆ ಮೂರು ತಿಂಗಳಲ್ಲಿ ಕಾಣಿಸಿಕೊಳ್ಳದ ಧೂಳಿನ ಮಳೆ ಈಗ ಹೇಗೆ ಬೀಳಲು ಸಾಧ್ಯ ಅನ್ನೋದು ಪ್ರಶ್ನೆ. ಕಳೆದ ವರ್ಷವೂ ಹಳದಿ ಮಳೆ ಬಿದ್ದಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.