Tag: ಹಲ್ಲೆ

  • ಕತ್ತರಿಯಿಂದ ಹಲ್ಲೆ ಮಾಡಿ ಸಹಪಾಠಿಯನ್ನೇ ಕೊಂದ SSLC ವಿದ್ಯಾರ್ಥಿ

    ಕತ್ತರಿಯಿಂದ ಹಲ್ಲೆ ಮಾಡಿ ಸಹಪಾಠಿಯನ್ನೇ ಕೊಂದ SSLC ವಿದ್ಯಾರ್ಥಿ

    ಚೆನ್ನೈ: ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಯನ್ನು ಆತನ ಸಹಪಾಠಿಯೇ ಕತ್ತರಿ ಹಾಗೂ ಕ್ರಿಕೆಟ್ ಸ್ಟಂಪ್‍ನಿಂದ ಹಲ್ಲೆ ಮಾಡಿ ಕೊಲೆ ಮಾಡಿದ ಆಘಾತಕಾರಿ ಘಟನೆ ತಮಿಳುನಾಡಿನ ದಿಂಡಿಗುಲ್ ಜಿಲ್ಲೆಯಲ್ಲಿ ನಡೆದಿದೆ.

    ದಿಂಡಿಗುಲ್ ಜಿಲ್ಲೆಯ ಕೊಡೈಕನಾಲ್‍ನ ಪರ್ವತ ಪ್ರದೇಶದಲ್ಲಿರುವ ವಸತಿ ಶಾಲೆಯಲ್ಲಿ ಘಟನೆ ನಡೆದಿದ್ದು, ಭಾರತೀಯ ವಿದ್ಯಾಭವನದ ಗಾಂಧಿ ವಿದ್ಯಾಶ್ರಮದ 16 ವರ್ಷದ ವಿದ್ಯಾರ್ಥಿ ಎಸ್ ಕಪಿಲ್ ರಾಘವೇಂದ್ರ ಮೇಲೆ ಆತನ ಸಹಪಾಠಿಯೇ ಕತ್ತರಿ ಹಾಗೂ ಕ್ರಿಕೆಟ್ ಸ್ಟಂಪ್‍ನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ.

    ವಿದ್ಯಾರ್ಥಿ ನಿಲಯದ ಆವರಣದಲ್ಲೇ ಘಟನೆ ನಡೆದಿದ್ದು, ರಾತ್ರಿ ಊಟ ಮುಗಿದ ನಂತರ ಸಣ್ಣ ವಿಷಯಕ್ಕೆ ಜಗಳವಾಗಿ ಜೋಡಿ ಕತ್ತರಿಯಿಂದ ಇರಿದು ನಂತರ ಕ್ರಿಕೆಟ್ ಸ್ಟಂಪ್‍ನಿಂದ ಆತನ ಸಹಪಾಠಿಯನ್ನು ಹೊಡೆದು ಕೊಲೆ ಮಾಡಿದ್ದಾನೆ.

    ಕಪಿಲ್ ರಾಘವೇಂದ್ರ ಅವರ ತಂದೆ, ತಾಯಿ ಕೃಷ್ಣಗಿರಿ ಜಿಲ್ಲೆಯ ಹೊಸೂರಿನಲ್ಲಿ ವಾಸವಾಗಿದ್ದು, ಕೊಡೈಕನಾಲ್‍ನಿಂದ ಸುಮಾರು 425 ಕಿ.ಮೀಯಷ್ಟು ದೂರವಿದೆ. ಘಟನೆ ನಡೆದ ನಂತರ ಗಾಯಗೊಂಡ ವಿದ್ಯಾರ್ಥಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ದಾರಿ ಮಧ್ಯೆಯೇ ವಿದ್ಯಾರ್ಥಿ ಸಾವನ್ನಪ್ಪಿರುವ ಕುರಿತು ವೈದ್ಯರು ದೃಢಪಡಿಸಿದ್ದಾರೆ.

    ಕೊಲೆ ಆರೋಪದಡಿ ಪೊಲೀಸರು ವಿದ್ಯಾರ್ಥಿಯನ್ನು ಬಂಧಿಸಿದ್ದು, ಸೇಲಂ ಜಿಲ್ಲೆಯ ರಿಮ್ಯಾಂಡ್‍ ಹೋಮ್‍ಗೆ  ಒಪ್ಪಿಸಲಾಗಿದೆ. ಪೊಲೀಸರು ವಿದ್ಯಾರ್ಥಿ ಕೊಲೆ ಮಾಡಲು ಬಳಸಿದ ಆಯುಧಗಳನ್ನು ವಶಪಡಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆಗಾಗಿ ಕಾಯುತ್ತಿದ್ದಾರೆ.

    ಒಂದೆಡೆ ಪೊಲೀಸರು ತನಿಖೆ ನಡೆಸುತ್ತಿದ್ದರೆ, ಇನ್ನೊಂದೆಡೆ ಶಿಕ್ಷಣ ಇಲಾಖೆ ಸಹ ತನಿಖೆ ಕೈಗೊಂಡಿದ್ದು, ಶಾಲೆಗೆ ಭೇಟಿ ನೀಡಿ ಅಧಿಕಾರಿಗಳು ವಿವರ ಪಡೆದಿದ್ದಾರೆ. ಅಲ್ಲದೆ, ಈ ಕುರಿತು ತನಿಖೆ ನಡೆಸಲಾಗುತ್ತಿದೆ. ಈ ವಸತಿ ಶಾಲೆಯು ರಾಜ್ಯ ರಾಜಧಾನಿ ಚೆನ್ನೈನಿಂದ ಸುಮಾರು 530 ಕಿ.ಮೀ. ದೂರದಲ್ಲಿದೆ. ಆರೋಪಿ ವಿದ್ಯಾರ್ಥಿ ವಿರುದ್ಧ ಈ ಹಿಂದೆಯೂ ಶಾಲಾ ಅಧಿಕಾರಿಗಳು ಎರಡು ಬಾರಿ ಶಿಸ್ತು ಕ್ರಮ ಜರುಗಿಸಿದ್ದರು. ಕಳೆದ ತಿಂಗಳಿನಿಂದ ಈ ಇಬ್ಬರು ವಿದ್ಯಾರ್ಥಿಗಳ ಮಧ್ಯೆ ದ್ವೆಷವಿತ್ತು ಎಂದು ಹೇಳಲಾಗುತ್ತಿದೆ.

  • ಗರ್ಭಿಣಿ ಪತ್ನಿ ಮೇಲೆ ಹಲ್ಲೆ – ನಟನ ವಿರುದ್ಧ ಗಂಭೀರ ಆರೋಪ

    ಗರ್ಭಿಣಿ ಪತ್ನಿ ಮೇಲೆ ಹಲ್ಲೆ – ನಟನ ವಿರುದ್ಧ ಗಂಭೀರ ಆರೋಪ

    ಇಸ್ಲಾಮಾಬಾದ್: ಪಾಕಿಸ್ತಾನ ನಟ, ಸಿಂಗರ್ ಮೋಸಿನ್ ಅಬ್ಬಾಸ್ ಹೈದರ್ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪತ್ನಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡುವ ಮೂಲಕ ಗಂಭೀರ ಆರೋಪ ಮಾಡಿದ್ದಾರೆ.

    ಫಾತಿಮಾ ಸೋಹೆಲ್ ಆರೋಪ ಮಾಡಿದ ಪತ್ನಿ. ನನ್ನ ಪತಿ ಮೋಸಿನ್ ನನಗೆ ಮೋಸ ಮಡುತ್ತಿದ್ದಾರೆ ಎಂಬ ವಿಷಯ ನನಗೆ ತಿಳಿಯಿತು. ಇದನ್ನು ಪ್ರಶ್ನಿಸಿದ್ದಾಗ ಅವರು ನಾನು ಗರ್ಭಿಣಿ ಎಂಬುದನ್ನು ನೋಡದೇ ನನ್ನ ಮೇಲೆ ಹಲ್ಲೆ ಮಾಡಿದ್ದರು ಎಂದು ಆರೋಪಿಸಿ ಹಲ್ಲೆಗೊಳಗಾಗಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.

    ಪೋಸ್ಟ್ ನಲ್ಲಿ ಏನಿದೆ?
    ನವೆಂಬರ್ 26, 2018ರಂದು ನನ್ನ ಪತಿ ನನಗೆ ಮೋಸ ಮಾಡುತ್ತಿದ್ದಾರೆ ಎಂಬ ವಿಷಯ ನನಗೆ ತಿಳಿಯಿತು. ಈ ವಿಷಯದ ಬಗ್ಗೆ ನಾನು ಅವರನ್ನು ಪ್ರಶ್ನಿಸಿದ್ದಾಗ ಅವರು ಮುಜುಗರಕ್ಕೊಳಗಾಗುವ ಬದಲು ನನ್ನ ಮೇಲೆ ಹಲ್ಲೆ ನಡೆಸಿದ್ದರು. ಆ ಸಂದರ್ಭದಲ್ಲಿ ನಾನು ಗರ್ಭಿಣಿಯಾಗಿದ್ದೆ. ಮೋಸಿನ್ ನನ್ನ ತಲೆಕೂದಲು ಎಳೆದು, ನನಗೆ ನೆಲದ ಮೇಲೆ ಬೀಳಿಸಿ, ನನ್ನ ಮುಖಕ್ಕೆ ಹೊಡೆದಿದ್ದಾರೆ. ನನ್ನ ಪತಿ ನನ್ನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಪೋಸ್ಟಿನಲ್ಲಿ ಉಲ್ಲೇಖಿಸಿದ್ದಾರೆ.

    ಅಲ್ಲದೆ ನಾನು ಮಗುವಿಗೆ ಜನ್ಮ ನೀಡಿದ ಸಮಯದಲ್ಲಿ ಅವರು ನನ್ನ ಜೊತೆ ಇರಲಿಲ್ಲ. ಬದಲಿಗೆ ಅವರು ತಮ್ಮ ಗರ್ಲ್ ಫ್ರೆಂಡ್ ಜೊತೆ ಇದ್ದರು. ಮಗುವಿಗೆ ಜನ್ಮ ನೀಡಿದ ಎರಡು ದಿನದ ಬಳಿಕ ಸಾರ್ವಜನಿಕರ ಗಮನ ಸೆಳೆಯಲು ಅವರು ನನ್ನ ಬಳಿ ಬಂದು ಫೋಟೋ ಕ್ಲಿಕ್ಕಿಸಿಕೊಂಡರು ಎಂದು ಪೋಸ್ಟ್ ನಲ್ಲಿ ಫಾತಿಮಾ ಬರೆದಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನಟ ಮೋಸಿನ್, “ನಾನು ಸತ್ಯದೊಂದಿಗೆ ಬರುತ್ತೇನೆ. ಆಕೆ ಈ ರೀತಿ ಮಾಡಿದ್ದು ನನಗೆ ಖುಷಿ ಇದೆ. ನಾನು ಸುಮಾರು ದಿನಗಳಿಂದ ಇದಕ್ಕಾಗಿ ಕಾಯುತ್ತಿದ್ದೆ. ಈಗ ನಾನು ಸಾಕ್ಷಿ ಸಮೇತ ಸಾರ್ವಜನಿಕರ ಮುಂದೆ ಬರುತ್ತೇನೆ. ಕಳೆದ ಮೂರು ವರ್ಷದಲ್ಲಿ ನಮ್ಮ ಸಂಬಂಧದಲ್ಲಿ ಏನೂ ನಡೆಯಿತು ಎನ್ನುವುದನ್ನು ಇಡೀ ಜಗತ್ತಿಗೆ ಹೇಳುತ್ತೇನೆ. ಶೀಘ್ರದಲ್ಲೇ ನಾನು ಸುದ್ದಿಗೋಷ್ಠಿಯನ್ನು ಸಕರೆಯುತ್ತೇನೆ ಎಂದು ಹೇಳಿದ್ದಾರೆ.

  • ಒಂದೂವರೆ ವರ್ಷದಿಂದ 16ರ ಹುಡ್ಗಿಯ ಮೇಲೆ 6 ಜನರಿಂದ ನಿರಂತರ ಅತ್ಯಾಚಾರ

    ಒಂದೂವರೆ ವರ್ಷದಿಂದ 16ರ ಹುಡ್ಗಿಯ ಮೇಲೆ 6 ಜನರಿಂದ ನಿರಂತರ ಅತ್ಯಾಚಾರ

    ಭೋಪಾಲ್: ಸುಮಾರು 16 ತಿಂಗಳಿಂದ 9ನೇ ತರಗತಿ ವಿದ್ಯಾರ್ಥಿನಿ ಮೇಲೆ ಆರು ಜನ ನಿರಂತರವಾಗಿ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ.

    50 ವರ್ಷದ ಕ್ಯಾಟರಿಂಗ್ ಕಾಂಟ್ರ್ಯಾಕ್ಟರ್, ಮಗ ಕಾನೂನು ವಿದ್ಯಾರ್ಥಿ ಹಾಗೂ ಇತರ ನಾಲ್ಕು ಜನ ಒಂದೂವರೆ ವರ್ಷಗಳಿಂದ ನಿರಂತರ ಅತ್ಯಾಚಾರ ನಡೆಸಿದ್ದಾರೆ ಎಂದು ವಿದ್ಯಾರ್ಥಿನಿ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ಆರು ಮಂದಿ ಆರೋಪಿಗಳನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.

    2018ರ ಮಾರ್ಚ್ ನಲ್ಲಿ 15 ವರ್ಷದ ವಿದ್ಯಾರ್ಥಿನಿ ಹಾಸ್ಟೆಲ್‍ನಲ್ಲಿದ್ದುಕೊಂಡು 9ನೇ ತರಗತಿ ಓದುತ್ತಿದ್ದಳು. ಬಳಿಕ ತನ್ನ ತಾಯಿ ಮರಣ ಹೊಂದಿದ್ದರಿಂದ ಶಾಲೆಯನ್ನು ಬಿಟ್ಟಿದ್ದಳು. ನಂತರ ವಾಣಿಜ್ಯ ಮಳಿಗೆಯಲ್ಲಿ ವಾಚ್‍ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ತನ್ನ ತಂದೆಯ ಬಳಿಯೇ ತಂಗಿ ಜೊತೆ ವಾಸಿಸುತ್ತಿದ್ದಳು.

    ಬಾಲಕಿ ಮನೆಯಲ್ಲಿರುವುದನ್ನು ಕಂಡ ಪಕ್ಕದ ಮನೆಯ 50 ವರ್ಷದ ಕ್ಯಾಟರಿಂಗ್ ಕಾಂಟ್ರ್ಯಾಕ್ಟರ್, ಬಾಲಕಿಯ ತಂದೆ ಕೆಲಸಕ್ಕೆ ತೆರಳಿದಾಗ ತನ್ನ ಮನೆಗೆ ಬಂದು ಮಕ್ಕಳನ್ನು ನೋಡಿಕೋ ಸಂಬಳ ನೀಡುತ್ತೇನೆ ಎಂದು ಹೇಳಿದ್ದಾನೆ. ಬಾಲಕಿ ಕೂಡ, ಮನೆಯಲ್ಲಿದ್ದರೆ ಪ್ರಯೋಜನವಿಲ್ಲ ಕೆಲಸಕ್ಕೆ ಹೋದರೆ ಸಂಬಳ ಸಿಗುತ್ತದೆ ಎಂದು ಭಾವಿಸಿ ಅವರ ಮನೆಗೆ ಮಕ್ಕಳನ್ನು ನೋಡಿಕೊಳ್ಳುವ ಕೆಲಸಕ್ಕೆ ಹೋಗಲು ಪ್ರಾರಂಭಿಸಿದ್ದಾಳೆ.

    ಕೆಲಸ ಮಾಡಲು ಮನೆಗೆ ಬಂದಾಗ ಆಕೆಗೆ ತನ್ನ ಮೊಬೈಲ್‍ನಲ್ಲಿ ಪೋರ್ನ್ ವಿಡಿಯೋ ತೋರಿಸಿ, ಅನೇಕ ಬಾರಿ ಅವಳ ಮೇಲೆ ಅತ್ಯಾಚಾರವೆಸಗಿದ್ದಾನೆ. ಕ್ಯಾಟರಿಂಗ್ ಕಾಂಟ್ರ್ಯಾಕ್ಟರ್ ಮಾತ್ರವಲ್ಲದೆ ಆತನ ಮಗನೂ ಸಹ ಈ ವಿಷಯವನ್ನು ಹೊರಗಡೆ ಬಹಿರಂಗ ಪಡಿಸದಂತೆ ಬೆದರಿಸಿ, ಹುಡುಗಿಯನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಂಡಿದ್ದಾನೆ.

    ಅತ್ಯಾಚಾರದ ಕಿರುಕುಳ ತಾಳಲಾರದೆ ಹುಡುಗಿ ಕೆಲವು ವಾರಗಳ ನಂತರ ಶಾಲೆಯಲ್ಲಿ ಸ್ನೇಹಿತನಾಗಿದ್ದ 16 ವರ್ಷದ ಹುಡುಗನ ಸಹಾಯ ಪಡೆಯಲು, ತನ್ನ ಸ್ನೇಹಿತೆಯಿಂದ ಮೊಬೈಲ್ ಪಡೆದಿದ್ದಾಳೆ. ಆದರೆ ದುರಂತವೆಂದರೆ ಆತನೂ ಈಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇದಾದ ಬಳಿಕ ಇತ್ತ ಸ್ನೇಹಿತೆ ಕೂಡ ಶಾಲಾ ಸ್ನೇಹಿತನೊಂದಿಗೆ ಸಂಬಂಧ ಇಟ್ಟುಕೊಂಡಿರುವುದಾಗಿ ತಂದೆಗೆ ಹೇಳುವುದಾಗಿ ಬೆದರಿಸಿದ್ದಾಳೆ. ಅಲ್ಲದೆ, ಸಹಾಯ ಮಾಡಬೇಕಿದ್ದ ಆಕೆಯ ಸಹೋದರ ಸಹ ಬಾಲಕಿ ಮೇಲೆ ಹಲ್ಲೆ ನಡೆಸಿದ್ದಾನೆ.

    ಈ ವಿಷಯ ಪಕ್ಕದ ಮನೆಯ ಯುವಕನಿಗೆ ತಿಳಿದು, ಆತನೂ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಕೊನೆಯದಾಗಿ ವಿದ್ಯಾರ್ಥಿನಿ ತನ್ನ ತಂದೆಯ ಬಳಿ ಎಲ್ಲ ನೋವನ್ನು ಹೇಳಿಕೊಂಡಿದ್ದಾಳೆ. ನಂತರ ಅವಳ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ನೀಡುತ್ತಿದ್ದಂತೆ ಪೊಲೀಸರು 6 ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಪ್ರಕರಣದ ಕುರಿತು ಮಾಹಿತಿ ನೀಡಿದ ತುಕೋಗಂಜ್ ಪೊಲೀಸ್ ಠಾಣೆಯ ಇನ್ ಚಾರ್ಜ್ ತಹಝೀಬ್ ಖಜಿ, 50 ವರ್ಷದ ಕ್ಯಾಟರಿಂಗ್ ಕಾಂಟ್ರ್ಯಾಕ್ಟರ್, ಮಗ ಕಾನೂನು ವಿದ್ಯಾರ್ಥಿ ಹಾಗೂ 16 ಮತ್ತು 18 ವರ್ಷದ ವಿದ್ಯಾರ್ಥಿನಿಯ ಪಕ್ಕದ ಮನೆಯ ಯುವಕರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

  • ಬೀಫ್ ಸೂಪ್ ಪೋಸ್ಟ್ ಮಾಡಿದ್ದಕ್ಕೆ ಹಲ್ಲೆ

    ಬೀಫ್ ಸೂಪ್ ಪೋಸ್ಟ್ ಮಾಡಿದ್ದಕ್ಕೆ ಹಲ್ಲೆ

    ಚೆನ್ನೈ: ಸಾಮಾಜಿಕ ಜಾಲತಾಣದಲ್ಲಿ ಬೀಫ್ ಸೂಪ್ ಚಿತ್ರವನ್ನು ಪೋಸ್ಟ್ ಮಾಡಿದ್ದ 24 ವರ್ಷದ ಯುವಕನ ಮೇಲೆ ಹಲ್ಲೆ ನಡೆಸಲಾಗಿದೆ. ತಮಿಳುನಾಡಿನ ಪೂರ್ವಚೆರಿ ಗ್ರಾಮದಲ್ಲಿ ಜುಲೈ 11ರಂದು ಘಟನೆ ನಡೆದಿದ್ದು, ಇಂದು ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    24 ವರ್ಷದ ಮುಸ್ಲಿಂ ಯುವಕ ಮೊಹಮ್ಮದ್ ಫೈಸಾನ್, ತಾನು ಬೀಫ್ ಸೂಪ್ ಸೇವಿಸುತ್ತಿದ್ದೇನೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡಿದ್ದನು. ಈ ಪೋಸ್ಟ್ ನೋಡಿದ ಕೆಲವರು ಜುಲೈ 11ರಂದು ಆತನ ಮನೆಗೆ ನುಗ್ಗಿ ಅವಾಚ್ಯ ಪದಗಳಿಂದ ನಿಂದಿಸಿ, ಗಲಾಟೆ ಮಾಡಿ ಹಲ್ಲೆ ನಡೆಸಿದ್ದರು.

    ಹಲ್ಲೆಯ ಬಳಿಕ ಪೈಸಾನ್ ನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಚಿಕಿತ್ಸೆ ಪಡೆದ ಫೈಸಾನ್ ನನ್ನು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಘಟನೆ ಸಂಬಂಧ ಶಾಂತಿ ಕದಡುವಿಕೆ, ಹಲ್ಲೆ, ಕೋಮು ಗಲಭೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ನಾಲ್ವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

  • 6ರ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ವಾಚ್‍ಮ್ಯಾನ್‍ನನ್ನು ಥಳಿಸಿ, ನಗ್ನ ಮೆರವಣಿಗೆ ಮಾಡಿದ್ರು

    6ರ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ವಾಚ್‍ಮ್ಯಾನ್‍ನನ್ನು ಥಳಿಸಿ, ನಗ್ನ ಮೆರವಣಿಗೆ ಮಾಡಿದ್ರು

    ಮುಂಬೈ: 6 ವರ್ಷದ ಬಾಲಕಿಗೆ ವಾಚ್‍ಮ್ಯಾನ್ ಓರ್ವ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ಸಾರ್ವಜನಿಕರು ಆತನನ್ನು ಥಳಿಸಿ, ನಗ್ನವಾಗಿ ಮೆರವಣಿಗೆ ಮಾಡಿದ ಘಟನೆ ಮಹಾರಾಷ್ಟ್ರದ ಪಾಲ್ಘಾರ್ ನ ವಸತಿ ಸಂಕೀರ್ಣವೊಂದರ ಬಳಿ ನಡೆದಿದೆ.

    ಭಾನುವಾರದಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಶನಿವಾರ ಸಂಜೆ ಆರು ಗಂಟೆಯ ಹೊತ್ತಿಗೆ, ಬಾಲಕಿ ಟ್ಯೂಷನ್ ಮುಗಿಸಿ ಮರಳುತ್ತಿದ್ದಾಗ 22 ವರ್ಷದ ವಾಚ್‍ಮ್ಯಾನ್ ಆಕೆಯನ್ನು ಸ್ಪರ್ಶಿಸಿ, ಅಸಭ್ಯವಾಗಿ ವರ್ತಿಸಿದ್ದನು. ಈ ಬಗ್ಗೆ ಬಾಲಕಿ ತನ್ನ ತಾಯಿಗೆ ತಿಳಿಸಿದ್ದರು. ಆಗ ತಾಯಿ ಅಕ್ಕಪಕ್ಕದವರಿಗೆ ವಿಷಯ ತಿಳಿಸಿದರು.

    ವಾಚ್‍ಮ್ಯಾನ್ ಅಸಭ್ಯ ವರ್ತನೆ ಕುರಿತು ತಿಳಿದ ತಕ್ಷಣವೇ ಸಿಟ್ಟಿಗೆದ್ದ ಸಂಕೀರ್ಣದ ಮಹಿಳೆಯರೂ ಹಾಗೂ ಇತರೇ ನಿವಾಸಿಗಳು ಆತನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಆತನನ್ನು ನಗ್ನಗೊಳಿಸಿ ಮೆರವಣಿಗೆಯನ್ನೂ ಕೂಡ ನಡೆಸಿದರು.

    ಸಾರ್ವಜನಿಕರ ಹಲ್ಲೆಯಿಂದಾಗಿ ಆರೋಪಿ ತೀವ್ರ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಹಾಗೂ ಐಪಿಸಿ ಸೆಕ್ಷನ್ 354 ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆದ್ರೆ ಹಲ್ಲೆಗೆ ಸಂಬಂಧಿಸಿ ಯಾರ ಮೇಲೂ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

  • ಪಾರ್ಕಿಂಗ್ ವಿಚಾರಕ್ಕೆ ಕೋಳಿ ವ್ಯಾಪಾರಿಗೆ ಶಿವಸೇನಾ ನಾಯಕನಿಂದ ಹಲ್ಲೆ – ವಿಡಿಯೋ

    ಪಾರ್ಕಿಂಗ್ ವಿಚಾರಕ್ಕೆ ಕೋಳಿ ವ್ಯಾಪಾರಿಗೆ ಶಿವಸೇನಾ ನಾಯಕನಿಂದ ಹಲ್ಲೆ – ವಿಡಿಯೋ

    ಮುಂಬೈ: ಮಾಜಿ ಮೇಯರ್, ಶಿವ ಸೇನಾ ಕಾರ್ಪೋರೇಟರ್ ಮಿಲಿಂದ್ ವೈದ್ಯ ಅವರು ಕೋಳಿ ವ್ಯಾಪಾರಿ ಮೇಲೆ ಹಲ್ಲೆ ಮಾಡಿ ಘಟನೆ ಶುಕ್ರವಾರ ಮುಂಬೈನಲ್ಲಿ ನಡೆದಿದೆ.

    ಕೋಳಿಗಳನ್ನು ಸಾಗಿಸುತ್ತಿದ್ದ ಕಂಟೇನರ್ ಅನ್ನು ಚಾಲಕ ಮಹಿಂ ರೈಲ್ವೇ ನಿಲ್ದಾಣದ ಬಳಿ ನಿಲ್ಲಿಸಿದ್ದ. ಈ ವೇಳೆ ಅಲ್ಲಿಗೆ ಬಂದ ಮಿಲಿಂದ್ ವೈದ್ಯ ಅವರು ಏಕಾಏಕಿ ಚಾಲಕ ಹಾಗೂ ಸಹಾಯಕನ ಮೇಲೆ ಹಲ್ಲೆ ಮಾಡಿದ್ದಾರೆ. ಮಿಲಿಂದ್ ವೈದ್ಯ ಅವರ ಬೆಂಬಲಿಗರು ಕೂಡ ಕೆಲ ಚಾಲಕರನ್ನು ಥಳಿಸಿದ್ದಾರೆ.

    ಚಾಲಕರ ಮೇಲೆ ಹಲ್ಲೆ ಮಾಡುತ್ತಿರುವ ದೃಶ್ಯವನ್ನು ಸ್ಥಳದಲ್ಲಿದ್ದ ಕೆಲವರು ಸೆರೆ ಹಿಡಿದಿದ್ದು, ವಿಡಿಯೋವನ್ನು ಸಾಮಾಜಿಕ ಜಾಲಯಾಣದಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋ ವೈರಲ್ ಆಗಿದ್ದು, ಕಾರ್ಪೋರೇಟರ್ ವರ್ತನೆ ಬಗ್ಗೆ ಟೀಕೆ ವ್ಯಕ್ತವಾಗಿದೆ.

    ಘಟನೆಯ ಕುರಿತು ಪ್ರತಿಕ್ರಿಯೆ ನೀಡಿರುವ ಮಿಲಿಂದ್ ವೈದ್ಯ ಅವರು, ಪಾರ್ಕಿಂಗ್ ಸಮಸ್ಯೆ ಕುರಿತು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ (ಬಿಎಂಸಿ)ಗೆ ದೂರು ನೀಡಿದ್ದೇನೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ನಾನೇ ಕ್ರಮ ಕೈಗೊಂಡಿದ್ದೇನೆ ಎಂದು ಹೇಳಿದರು.

    ಘಟನೆಯು ಬೆಳಗ್ಗೆ 10 ಗಂಟೆಗೆ ನಡೆದಿದೆ. ಈ ಸ್ಥಳದಲ್ಲಿ ನಿತ್ಯವೂ ವಾಹನಗಳನ್ನು ಪಾರ್ಕ್ ಮಾಡುತ್ತಿದ್ದರಿಂದ ನೈರ್ಮಲ್ಯ ಉಂಟಾಗಿತ್ತು. ಅಷ್ಟೇ ಅಲ್ಲದೆ ಸಂಚಾರ ಅಸ್ತವ್ಯಸ್ತವಾಗುತಿತ್ತು. ಹೀಗಾಗಿ ಮಿಲಿಂದ್ ವೈದ್ಯ ಕೋಪಗೊಂಡ ಹಲ್ಲೆ ಮಾಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

  • ಹಲ್ಲೆ ಪ್ರಕರಣ – ಎಎಪಿ ಶಾಸಕನಿಗೆ 6 ತಿಂಗಳು ಜೈಲು ಶಿಕ್ಷೆ

    ಹಲ್ಲೆ ಪ್ರಕರಣ – ಎಎಪಿ ಶಾಸಕನಿಗೆ 6 ತಿಂಗಳು ಜೈಲು ಶಿಕ್ಷೆ

    ನವದೆಹಲಿ: ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಆಮ್ ಆದ್ಮಿ ಪಕ್ಷದ ಶಾಸಕ ಸೋಮ್ ದತ್ ಅವರಿಗೆ ಆರು ತಿಂಗಳ ಜೈಲು ಶಿಕ್ಷೆ ಹಾಗೂ 2 ಲಕ್ಷ ರೂ. ದಂಡ ವಿಧಿಸಿ ದೆಹಲಿ ಕೋರ್ಟ್ ಆದೇಶ ಹೊರಡಿಸಿದೆ.

    ಸೋಮ್ ದತ್ ದಹಲಿಯ ಸದರ್ ಬಜಾರ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಹಾಲಿ ಎಎಪಿ ಶಾಸಕರನ್ನು ಶಿಕ್ಷೆಗೆ ಗುರಿಪಡಿಸಿರುವುದರ ಪೈಕಿ ಇದು ವಾರದಲ್ಲಿ ನಡೆದ ಎರಡನೆಯ ಪ್ರಕರಣವಾಗಿದೆ. ಈ ಹಿಂದೆ ಮತದಾನಕ್ಕೆ ಅಡ್ಡಿ ಪಡಿಸಿದ ಆರೋಪದ ಸಂಬಂಧ ಎಎಪಿ ಶಾಸಕ ಮನೋಜ್ ಕುಮಾರ್ ಅವರಿಗೆ ಮೂರು ತಿಂಗಳು ಶಿಕ್ಷೆ ವಿಧಿಸಿತ್ತು.

    ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸಮರ್ ವಿಶಾಲ್ ಅವರು ಜೂನ್ 29ರಂದು ಸೋಮ್ ದತ್ ಮೇಲಿನ ಆರೋಪ ಸಾಬೀತಾಗಿ ದೋಷಿ ಎಂದು ತೀರ್ಪು ನೀಡಿದ್ದರು.

    2015ರ ಜನವರಿಯಲ್ಲಿ ಮಾಜಿ ಶಾಸಕರಾಗಿದ್ದ ಸೋಮ್ ದತ್ ಬೇಸ್ ಬಾಲ್ ಬ್ಯಾಟ್‍ನಿಂದ ದೂರುದಾರರಾದ ಸಂಜೀವ್ ರಾಣಾ ಮೇಲೆ ಹಲ್ಲೆ ನಡೆಸಿದ್ದರು.

    ಸಂಜೀವ್ ರಾಣಾ ಅವರು ದೂರಿನಲ್ಲಿ, 2015ರ ಜನವರಿಯಲ್ಲಿ ಸೋಮ್ ದತ್ ಹಾಗೂ ಇತರೆ 50-60 ಜನ ಗುಲಾಬಿ ಬಾಗ್‍ನ ನಮ್ಮ ಫ್ಲ್ಯಾಟ್‍ಗೆ ಆಗಮಿಸಿ ಪದೆ ಪದೇ ಮನೆಯ ಡೋರ್‍ನ ಬೆಲ್ ಮಾಡಿದರು. ಬೆಲ್ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ದತ್ ಬೇಸ್ ಬಾಲ್ ಬ್ಯಾಟ್‍ನಿಂದ ಕಾಲಿಗೆ ಹೊಡೆದು ಹಲ್ಲೆ ಮಾಡಿದ್ದಾರೆ. ಸೋಮ್ ದತ್‍ನ ಜೊತೆಗಿದ್ದ ನನ್ನನ್ನು ರಸ್ತೆಗೆ ಎಳೆದು ಮುಷ್ಠಿಯಿಂದ ಗುದ್ದಿ, ಒದ್ದಿದ್ದಾರೆ ನಂತರ ನಾನು ಪ್ರಜ್ಞಾಹೀನನಾಗಿದ್ದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.

    ಕೋರ್ಟ್ ಮುಂದೆ ವಾದ ಮಂಡಿಸುವ ವೇಳೆ ದತ್, ರಾಜಕೀಯ ದುರುದ್ದೇಶದಿಂದ ನನ್ನ ಮೇಲೆ ದೂರು ನೀಡಿದ್ದಾರೆ. ರಾಣಾ ಬಿಜೆಪಿ ಸದಸ್ಯರಾಗಿದ್ದು, ವಿಧಾನಸಭೆ ಚುನಾವಣೆಗೆ ನನಗೆ ಟಿಕೆಟ್ ತಪ್ಪಿಸಲು ಈ ರೀತಿ ಷಡ್ಯಂತ್ರ ನಡೆಸಿದ್ದಾರೆ ಎಂದು ಆರೋಪಿಸಿದ್ದರು.

    ದತ್ ಆರೋಪಕ್ಕೆ ರಾಣಾ ಅವರು, ನಾನು ಯಾವುದೇ ರಾಜಕೀಯ ಪಕ್ಷದ ಜೊತೆ ಗುರುತಿಸಿಕೊಂಡಿಲ್ಲ ಎಂದಿದ್ದಾರೆ. ಪ್ರಕರಣಕ್ಕೆ ಸಾಕ್ಷ್ಯ ನುಡಿದ ಸುನಿಲ್ ಅವರು ಈ ಕುರಿತು ಹೇಳಿಕೆ ನೀಡಿ, ಸೋಮ್ ದತ್ ಬೇಸ್ ಬಾಲ್‍ನ ಬ್ಯಾಟ್ ಹಿಡಿದು ರಾಣಾ ಅವರ ಕಾಲಿಗೆ ಹೊಡೆದಿದ್ದನ್ನು ನೋಡಿದ್ದೇನೆ ಎಂದು ತಿಳಿಸಿದ್ದಾರೆ.

    2015ರ ಜನವರಿ 10 ರಂದು ನಡೆದ ಘಟನೆಯ ಬಗ್ಗೆ ಯಾವುದೇ ಅನುಮಾನವಿಲ್ಲ. ಅಂದು ರಾತ್ರಿ 8 ಗಂಟೆಯ ವೇಳೆ ದತ್ 50 ಮಂದಿ ಬೆಂಬಲಿಗರ ಜೊತೆ ಫ್ಲ್ಯಾಟ್ ನಂಬರ್ 13ಕ್ಕೆ ತೆರಳಿ ಸಂತ್ರಸ್ತನ ಮೇಲೆ ಹಲ್ಲೆ ನಡೆಸಿದೆ ವಿಚಾರಣೆ ವೇಳೆ ಸಾಬೀತಾಗಿದೆ ಎಂದು ಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.

  • ಎಂಜಿನಿಯರ್ ಮೇಲೆ ಕೆಸರು ಎರಚಿ ಕಾಂಗ್ರೆಸ್ ಶಾಸಕನಿಂದ ಹಲ್ಲೆ

    ಎಂಜಿನಿಯರ್ ಮೇಲೆ ಕೆಸರು ಎರಚಿ ಕಾಂಗ್ರೆಸ್ ಶಾಸಕನಿಂದ ಹಲ್ಲೆ

    ಮುಂಬೈ: ಕೆಲ ದಿನಗಳ ಹಿಂದೆಯಷ್ಟೇ ಬಿಜೆಪಿ ಸಂಸದರ ಪುತ್ರ ಅಧಿಕಾರಿಯ ಮೇಲೆ ಬ್ಯಾಟ್‍ನಿಂದ ಹಲ್ಲೆ ನಡೆಸಿದ ಘಟನೆ ಮಾಸುವ  ಮುನ್ನವೇ ಇಂತಹದ್ದೇ ಮತ್ತೊಂದು ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

    ಮಹಾರಾಷ್ಟ್ರ ಮಾಜಿ ಸಿಎಂ ನಾರಾಯಣ್ ರಾಣೆ ಅವರ ಪುತ್ರ ಕಾಂಗ್ರೆಸ್ ಪಕ್ಷದ ಶಾಸಕ ನಿತೇಶ್ ರಾಣೆ ಎಂಜಿನಿಯರ್ ಮೇಲೆ ಕಾರ್ಯಕರ್ತರೊಂದಿಗೆ ಕೆಸರು ಸುರಿದು ಹಲ್ಲೆ ನಡೆಸಿದ್ದಾರೆ. ಅಲ್ಲದೇ ಸ್ಥಳದಲ್ಲಿದ್ದ ಬ್ರಿಡ್ಜ್ ಗೆ ಕಟ್ಟಿಹಾಕಿದ್ದಾರೆ.

    ಮಾಧ್ಯಮ ವರದಿಯ ಅನ್ವಯ ಶಾಸಕ ನಿತೇಶ್ ನಾರಾಯಣ್ ರಾಣೆ ಗುರುವಾರ ಮಹಾರಾಷ್ಟ್ರ, ಗೋವಾ ನಡುವಿನ ಕಂಕವ್ಲಿ ಹೆದ್ದಾರಿಯ ರಸ್ತೆ ವೀಕ್ಷಣೆ ಮಾಡಲು ತೆರಳಿದ್ದರು. ಆದರೆ ಈ ಸಂದರ್ಭದಲ್ಲಿ ರಸ್ತೆ ಗುಂಡಿಗಳನ್ನು ಕಂಡು ಅಧಿಕಾರಿ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಬಿಜೆಪಿ ಶಾಸಕ ಆಕಾಶ್ ವಿಜಯವರ್ಗಿಯಾ ಅವರು ಪುರಸಭೆಯ ಅಧಿಕಾರಿ ಮೇಲೆ ದಾಳಿ ನಡೆಸಿದ ಪ್ರಕರಣದಲ್ಲಿ ಪೊಲೀಸರು ಅವರನ್ನು ಬಂಧಿಸಿದ್ದರು. ಆ ಬಳಿಕ ಅವರು ಜಾಮೀನು ಪಡೆದು ಹೊರ ಬಂದಿದ್ದರು. ಈ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರು ಬಿಜೆಪಿ ಶಾಸಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. ಈ ಘಟನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಖಂಡಿಸಿದ್ದರು. ಅಲ್ಲದೇ ಯಾರ ಮಗನಾದರೂ ಅಂತಹವರನ್ನು ಪಕ್ಷದಿಂದ ಹೊರ ಹಾಕಬೇಕು ಎಂದು ಹೇಳಿದ್ದರು. ಇತ್ತ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಶಾಸಕರೇ ಅಧಿಕಾರಿಯ ಮೇಲೆ ಕಾರ್ಯಕರ್ತರೊಂದಿಗೆ ಹಲ್ಲೆ ನಡೆಸಿದ್ದಾರೆ.

  • ಹಲ್ಲೆ ನಡೆಸಿದ ಟಿಆರ್​ಎಸ್ ನಾಯಕರಿಗೆ ಸಸಿ ನೆಟ್ಟು ಪ್ರತ್ಯತ್ತುರ ನೀಡಿದ ಅರಣ್ಯಾಧಿಕಾರಿಗಳು

    ಹಲ್ಲೆ ನಡೆಸಿದ ಟಿಆರ್​ಎಸ್ ನಾಯಕರಿಗೆ ಸಸಿ ನೆಟ್ಟು ಪ್ರತ್ಯತ್ತುರ ನೀಡಿದ ಅರಣ್ಯಾಧಿಕಾರಿಗಳು

    ಹೈದರಾಬಾದ್: ಮಹಿಳಾ ಅರಣ್ಯಾಧಿಕಾರಿ ಮೇಲೆ ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರೆಸ್) ಕಾರ್ಯಕರ್ತರು ಹಲ್ಲೆ ನಡೆಸಿದ್ದಕ್ಕೆ ಪ್ರತಿಯಾಗಿ, ಸಸಿ ನೆಡುವ ಮೂಲಕ ಅರಣ್ಯಾಧಿಕಾರಿಗಳು ತಕ್ಕ ಉತ್ತರ ನೀಡಿದ್ದಾರೆ.

    ಸುಮಾರು 400ಕ್ಕೂ ಹೆಚ್ಚು ಅಧಿಕಾರಿಗಳು ಘಟನೆ ನಡೆದ ಸ್ಥಳದಲ್ಲಿ ಸಸಿಗಳನ್ನು ನೆಡುವ ಮೂಲಕ ಮಹಿಳಾ ಅಧಿಕಾರಿಗೆ ಬೆಂಬಲ ಸೂಚಿಸಿ, ಟಿಆರ್‍ಎಸ್ ನಾಯಕರಿಗೆ ತಕ್ಕ ಉತ್ತರ ನೀಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    ಜೂನ್ 30 ರಂದು ಮಹಿಳಾ ಅರಣ್ಯಾಧಿಕಾರಿ ಚೋಲೆ ಅನಿತಾ ಅವರನ್ನು ಟಿಆರ್‍ಎಸ್ ಕಾರ್ಯಕರ್ತರು ಕೋಲುಗಳಿಂದ ಮನಬಂದಂತೆ ಹಲ್ಲೆ ಮಾಡಿದ್ದರು. ತೀವ್ರ ಗಾಯಗೊಂಡಿದ್ದ ಅನಿತಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಘಟನೆ ಕುರಿತು ಆಕ್ರೋಶ ವ್ಯಕ್ತಪಡಿಸಿ, ಜು.1ರಂದು ಸುಮಾರು 400ಕ್ಕೂ ಹೆಚ್ಚು ಅರಣ್ಯಾಧಿಕಾರಿಗಳು ಘಟನೆ ನಡೆದ ಸ್ಥಳದಲ್ಲಿ ಸಾಲು ಸಾಲು ಸಸಿ ನೆಡುವ ಮೂಲಕ ಅನಿತಾ ಅವರಿಗೆ ತಮ್ಮ ಬೆಂಬಲ ಸೂಚಿಸಿದ್ದಾರೆ. 400ಕ್ಕೂ ಹೆಚ್ಚು ಅಧಿಕಾರಿಗಳು ಸಸಿ ನೆಡುವ ವಿಡಿಯೋವನ್ನು ಐಎಫ್‍ಎಸ್ ಅಧಿಕಾರಿ ಪರ್ವೀಣ್ ಕಸ್ವಾನ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವಿಟ್ಟರ್‍ ನಲ್ಲಿ ಅಭಿಯಾನವನ್ನೇ ಪ್ರಾರಂಭಿಸಲಾಗಿದೆ.

    ವಿಡಿಯೋ ಹಾಕುವಾಗ ಕೆಲವು ಸಾಲುಗಳನ್ನು ಬರೆದಿರುವ ಪರ್ವೀಣ್ ಕಸ್ವಾನ್, ‘ಮಹಿಳಾ ರೇಂಜ್ ಆಫೀಸರ್ ಮೇಲೆ ಹಲ್ಲೆ ಮಾಡಿದ ಸ್ಥಳದಲ್ಲೇ ಸುಮಾರು 400ಕ್ಕೂ ಹೆಚ್ಚು ಅರಣ್ಯ ಅಧಿಕಾರಿಗಳು, ಪೊಲೀಸರು ಹಾಗೂ ಇತರರಿಂದ ಸಸಿ ನೆಡಲಾಗಿದೆ. ಈ ವೇಳೆ ಎಲ್ಲ ಹಿರಿಯ ಅಧಿಕಾರಿಗಳೂ ಸಹ ಉಪಸ್ಥಿತರಿದ್ದರು. ಅಕ್ರಮವಾಗಿ ಒತ್ತುವರಿ ಮಾಡುವುದನ್ನು ತಡೆಯಲು ಸುಮಾರು 20 ಹೆಕ್ಟೇರ್ ಪ್ರದೇಶದಲ್ಲಿ ಸಸಿಗಳನ್ನು ನೆಡಲಾಗಿದೆ. ಹಲ್ಲೆ ಖಂಡಿಸಿ ಪ್ರತಿಕ್ರಿಯಿಸಲು ಇದೊಂದು ಉತ್ತಮ ಹೆಜ್ಜೆಯಾಗಿದೆ’ ಎಂದು ತಮ್ಮ ಟ್ವಿಟ್ಟರ್‍ ನಲ್ಲಿ ಬರೆದುಕೊಂಡಿದ್ದಾರೆ.

    ಇನ್ನೊಂದು ಟ್ವೀಟ್‍ನಲ್ಲಿ ಸಾಲಾಗಿ ನಿಂತಿರುವ ಅಧಿಕಾರಿಗಳ ಚಿತ್ರವನ್ನು ಹಾಕಿ ‘ಇದು ನಮ್ಮ ಪ್ರತಿಕ್ರಿಯೆ, ಚಿತ್ರವನ್ನು ಜೂಮ್ ಮಾಡಿ ನೋಡಿ, ಅದೇ ಜಾಗ. ಇಲಾಖೆಯ ಸಿಬ್ಬಂದಿಯ ಮನೋಸ್ಥೈರ್ಯ ಹೆಚ್ಚಿಸುವುದು ಮಾತ್ರವಲ್ಲ, ಹಲ್ಲೆಗೆ ಪ್ರತಿಕ್ರಿಯೆ ನೀಡುವುದು ಆಗಿದೆ’ ಎಂದು ಬರೆದಿದ್ದು, ಇದೀಗ ಟ್ವಿಟ್ಟರ್‍ ನಲ್ಲಿ ಚಿತ್ರ ವೈರಲ್ ಆಗಿದೆ.

  • ಯಾರ ಮಗ ಆಗಿದ್ದರೂ ಸರಿ ಪಕ್ಷದಿಂದ ಹೊರಗೆ ಹಾಕಿ: ಮೋದಿ ಕೆಂಡಾಮಂಡಲ

    ಯಾರ ಮಗ ಆಗಿದ್ದರೂ ಸರಿ ಪಕ್ಷದಿಂದ ಹೊರಗೆ ಹಾಕಿ: ಮೋದಿ ಕೆಂಡಾಮಂಡಲ

    ನವದೆಹಲಿ: ಇತ್ತೀಚೆಗೆ ಅಧಿಕಾರಿಯನ್ನು ಕ್ರಿಕೆಟ್ ಬ್ಯಾಟ್‍ನಿಂದ ಹೊಡೆದು ಅವಮಾನಿಸಿದ್ದ ಬಿಜೆಪಿಯ ಹಿರಿಯ ನಾಯಕ ಕೈಲಾಶ್ ವಿಜಯ್‍ವರ್ಗಿಯಾ ಅವರ ಮಗ ಹಾಗೂ ಶಾಸಕ ಆಕಾಶ್ ವಿಜಯ್‍ವರ್ಗಿಯಾ ವಿರುದ್ಧ ಪ್ರಧಾನಿ ಮೋದಿ ಕೆಂಡಾಮಂಡಲರಾಗಿದ್ದು, ಯಾರ ಮಗ ಆಗಿದ್ದರೂ ಸರಿ, ಪಕ್ಷದಿಂದ ಹೊರ ಹಾಕಿ ಎಂದು ಕಿಡಿಕಾರಿದ್ದಾರೆ.

    ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಪ್ರಧಾನಿ ಮೋದಿ ಈ ವಿಷಯದ ಕುರಿತು ಕೆಂಡಾಮಂಡಲರಾಗಿದ್ದು, ಈ ರೀತಿ ದುರ್ವರ್ತನೆ ತೋರುವ ನಾಯಕರನ್ನು ಮುಲಾಜಿಲ್ಲದೆ, ಯಾವ ನಾಯಕರ ಮಗನೆಂದೂ ನೋಡದೆ ಪಕ್ಷದಿಂದ ಹೊರ ಹಾಕಿ ಎಂದು ಗುಡುಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಅಷ್ಟಕ್ಕೆ ಸುಮ್ಮನಾಗದ ಪ್ರಧಾನಿ ಮೋದಿ, ಆಕಾಶ್ ವಿಜಯ್‍ವರ್ಗಿಯಾ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಅವರನ್ನು ಸ್ವಾಗತಿಸಿದವರನ್ನೂ ಪಕ್ಷದಿಂದ ಹೊರಗಡೆ ಹಾಕಿ ಎಂದು ಕಿಡಿ ಕಾರಿದ್ದಾರೆ.

    ಸಭೆಯ ಬಳಿಕ ರಾಜೀವ್ ಪ್ರತಾಪ್ ರೂಡಿಯ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದು, ಪ್ರಧಾನಿ ಮೋದಿ ಅವರು ಈ ವಿಚಾರದಲ್ಲಿ ಅಸಮಾಧಾನಗೊಂಡಿದ್ದಾರೆ. ಪಕ್ಷದ ಹೆಸರನ್ನು ಹೇಳಿಕೊಂಡು ಅಸಭ್ಯ ವರ್ತನೆ ನಡೆಸಲು ಯಾರಿಗೂ ಅವಕಾಶವಿಲ್ಲ. ಈ ರೀತಿ ವರ್ತನೆ ತೋರಿದ ಯಾರನ್ನೂ ಸಹಿಸಲು ಸಾಧ್ಯವಿಲ್ಲ ಎಂದು ಕಠಿಣ ಪದಗಳಲ್ಲಿ ಹೇಳಿದ್ದಾರೆ ಎಂದು ತಿಳಿಸಿದರು.

    ಶಾಸಕ ಆಕಾಶ್ ವಿಜಯ್‍ವರ್ಗಿಯಾ ಕಳೆದ ವಾರ ಅಧಿಕಾರಿಯನ್ನು ಕ್ರಿಕೆಟ್ ಬ್ಯಾಟ್‍ನಿಂದ ಹೊಡೆದು ಅವಮಾನಿಸಿದ್ದರು. ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಶಾಸಕನನ್ನು ಪೊಲೀಸರು ಬಂಧಿಸಿದ್ದರು. ಜಾಮೀನಿನ ಮೇಲೆ ಹೊರ ಬಂದ ಆಕಾಶ್ ವಿಜಯ್‍ವರ್ಗಿಯಾ ಇನ್ನೊಮ್ಮೆ ಈ ರೀತಿ ಮಾಡುವುದಿಲ್ಲ ಎಂದು ಕ್ಷಮೆಯಾಚಿಸಿದ್ದರು. ಇಂದೋರ್‍ನಲ್ಲಿ ನಡೆದ ಈ ಘಟನೆಯ ವಿಡಿಯೊ ವೈರಲ್ ಆಗಿತ್ತು. ಅಲ್ಲದೆ, ವಿಪರೀತ ಚರ್ಚೆಗೆ ಗ್ರಾಸವಾಗಿತ್ತು. ಶಾಸಕ ಆಕಾಶ್ ಹಾಗೂ ಆತನ ಬೆಂಬಲಿಗರು ಪೊಲೀಸರು ಹಾಗೂ ಟಿವಿ ವಾಹಿನಿ ಸಿಬ್ಬಂದಿಯ ಎದುರೇ ಸರ್ಕಾರಿ ಅಧಿಕಾರಿಯನ್ನು ಕ್ರಿಕೆಟ್ ಬ್ಯಾಟ್ ಹಿಡಿದು ಬೆನ್ನಟ್ಟಿದ್ದರು. ಪ್ರತಿಪಕ್ಷಗಳಿಂದ ತೀವ್ರ ಟೀಕೆ ವ್ಯಕ್ತವಾಗಿತ್ತು.

    ಅಂದು ನಡೆದಿದ್ದು ಏನು?
    ಇಂದೋರ್ ನಗರದಲ್ಲಿ ಒತ್ತುವರಿ ಮಾಡಿ ನಿರ್ಮಿಸಿದ್ದ ಕಟ್ಟಡಗಳನ್ನು ಇಂದು ಅಧಿಕಾರಿಗಳು ತೆರವುಗೊಳಿಸುತ್ತಿದ್ದರು. ಆದರೆ ಶಾಸಕರು ತಮ್ಮ ಬೆಂಬಲಿಗನ ಕಟ್ಟಡ ತೆರವುಗೊಳಿಸದಂತೆ ಸೂಚನೆ ನೀಡಿದ್ದರು. ಇದಕ್ಕೆ ಕ್ಯಾರೆ ಎನ್ನದ ಅಧಿಕಾರಿಗಳು ಕಟ್ಟಡ ತೆರವುಗೊಳಿಸುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಶಾಸಕ ಆಕಾಶ್ ವಿಜಯ್ ವರ್ಗೀಯ ಅವರು ಅಧಿಕಾರಿಗೆ ಕ್ರಿಕೆಟ್ ಬ್ಯಾಟ್‍ನಿಂದ ಹೊಡೆದಿದ್ದರು. ಅಷ್ಟೇ ಅಲ್ಲದೆ ಶಾಸಕರ ಬೆಂಬಲಿಗರು ಅಧಿಕಾರಿಯ ಅಂಗಿ ಹಿಡಿದು ಎಳೆದಾಡಿದ್ದರು. ಘಟನೆಯಿಂದ ತಕ್ಷಣವೇ ಜಾಗೃತಗೊಂಡ ಪೊಲೀಸರು ಅಧಿಕಾರಿಯನ್ನು ರಕ್ಷಿಸಿದ್ದರು.