Tag: ಹಲ್ಲೆ

  • ಕಾಲುವೆ ನೀರಿನ ಜಗಳ ವ್ಯಕ್ತಿಯ ಕೊಲೆಯಲ್ಲಿ ಅಂತ್ಯ

    ಕಾಲುವೆ ನೀರಿನ ಜಗಳ ವ್ಯಕ್ತಿಯ ಕೊಲೆಯಲ್ಲಿ ಅಂತ್ಯ

    ರಾಯಚೂರು: ಕಾಲುವೆ ನೀರಿನ ವಿಚಾರದ ಜಗಳ ವ್ಯಕ್ತಿಯ ಕೊಲೆಯಲ್ಲಿ ಅಂತ್ಯವಾದ ಘಟನೆ ರಾಯಚೂರಿನ ಮಸ್ಕಿ ತಾಲೂಕಿನ ರಂಗಾಪೂರು ಗ್ರಾಮದಲ್ಲಿ ನಡೆದಿದೆ.

    ಗಲಾಟೆಯ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಶಿವರುದ್ರಪ್ಪ (65) ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ. ಈ ಗಲಾಟೆಯಲ್ಲಿ ಮೃತನ ಮಗ ಶರಣಬಸಪ್ಪಗೆ ಗಂಭೀರ ಗಾಯವಾಗಿದ್ದು, ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಅಕ್ಕಪಕ್ಕದಲ್ಲಿ ಜಮೀನಿದ್ದ ದಾಯಾದಿಗಳ ನಡುವೆ ಹಳೆಯ ವೈಷ್ಯಮ್ಯವಿತ್ತು ಎಂದು ಹೇಳಲಾಗಿದೆ. ಈ ವಿಚಾರಕ್ಕೆ ಕಾಲುವೆ ನೀರಿನ ನೆಪದಲ್ಲಿ ಜಗಳ ಮಾಡಿಕೊಂಡು ಅಮರೇಶ್ ಹಾಗೂ ಇತರೆ 8 ಜನ ಸೇರಿಕೊಂಡು ದೊಣ್ಣೆ, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ.

    ಈ ಸಂಬಂಧ ಬಳಗಾನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಮರೇಶ್ ಸೇರಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

  • ರೂಲ್ಸ್ ಕೇಳೋಕೆ ಹೋದ ಮಹಿಳೆಯ ಮೇಲೆ ಟ್ರಾಫಿಕ್ ಪೊಲೀಸರಿಂದ ಹಲ್ಲೆ

    ರೂಲ್ಸ್ ಕೇಳೋಕೆ ಹೋದ ಮಹಿಳೆಯ ಮೇಲೆ ಟ್ರಾಫಿಕ್ ಪೊಲೀಸರಿಂದ ಹಲ್ಲೆ

    ಬೆಂಗಳೂರು: ಟ್ರಾಫಿಕ್ ರೂಲ್ಸ್ ಕೇಳೋಕೆ ಹೋದ ಮಹಿಳೆಯ ಮೇಲೆ ಬೆಂಗಳೂರು ಟ್ರಾಫಿಕ್ ಪೊಲೀಸರು ಹಲ್ಲೆ ಮಾಡಿದ ಘಟನೆ ಬೆಂಗಳೂರಿನ ಉತ್ತರಹಳ್ಳಿಯಲ್ಲಿ ನಡೆದಿದೆ.

    ಪಿಎಸ್‍ಐ ನಂಜುಂಡ ಹಾಗೂ ಮಹಿಳಾ ಟ್ರಾಫಿಕ್ ಪೊಲೀಸ್ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ. ಸೆಪ್ಟೆಂಬರ್ ಒಂದರಿಂದ ಕೆಲವೊಂದು ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದರೆ ದಂಡದ ಪ್ರಮಾಣ ಹೆಚ್ಚಾಗಲಿದೆ. ಆದರೆ ಇಲ್ಲಿನ ಪೊಲೀಸರು ಮಾತ್ರ ಈಗಲೇ ದಂಡವನ್ನು ಹಾಕುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದೆ.

    ಅಗಸ್ಟ್‍ನಲ್ಲಿಯೇ ಹೆಚ್ಚು ದಂಡ ಹಾಕಿದಕ್ಕೆ ದೇವಕಿ ಎಂಬವರು ಪಿಎಸ್‍ಐ ನಂಜುಂಡ ಎಂಬವರಿಗೆ ಪ್ರಶ್ನಿಸಿದ್ದಾರೆ. ಈ ವೇಳೆ ಪಿಎಸ್‍ಐ ನಂಜುಂಡ ನೇರವಾಗಿ ಲೇಡಿ ಪೊಲೀಸ್‍ಗೆ ಅವಳನ್ನು ಸ್ಟೇಷನ್‍ಗೆ ಎಳೆದುಕೊಂಡು ಬಾ ಎಂದು ಸೂಚನೆ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೆ ಮಹಿಳಾ ಪೊಲೀಸ್ ದೇವಕಿ ಮೇಲೆ ಪರಚಿ ಹಲ್ಲೆ ಮಾಡಿದ್ದಾರೆ.

    ಈ ವೇಳೆ ಪೊಲೀಸ್ ಹಾಗೂ ಮಹಿಳೆಯ ನಡುವೆ ಮಾತಿಗೆ ಮಾತು ಬೆಳೆದಿದೆ. ಬಳಿಕ ಇಬ್ಬರು ಹಲ್ಲೆ ಮಾಡಿದ್ದಾರೆ ಎಂದು ದೇವಕಿ ಆರೋಪಿಸುತ್ತಿದ್ದಾರೆ. ಪೊಲೀಸರ ಈ ವರ್ತನೆಗೆ ನಾಗರಿಕರು ಕಿಡಿಕಾರಿದ್ದು, ಇದೇನಾ ನಿಮ್ಮ ಕಾರ್ಯವೈಖರಿ ಎಂದು ಬೆಂಗಳೂರು ಟ್ರಾಫಿಕ್ ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.

    https://www.youtube.com/watch?v=Qq-UugAP79E

  • ಓಡಿಹೋದ ಯುವತಿಯನ್ನು ಕರೆತಂದು ಥಳಿಸಿದ ಗ್ರಾಮಸ್ಥರು

    ಓಡಿಹೋದ ಯುವತಿಯನ್ನು ಕರೆತಂದು ಥಳಿಸಿದ ಗ್ರಾಮಸ್ಥರು

    ಹೈದರಾಬಾದ್: ಅಪ್ರಾಪ್ತ ಯುವಕನ ಜೊತೆ ಓಡಿಹೋದ ಯುವತಿಯನ್ನು ಗ್ರಾಮಸ್ಥರು ಕರೆತಂದು ಮನಬಂದತೆ ಥಳಿಸಿರುವ ಘಟನೆ ಆಂಧ್ರ ಪ್ರದೇಶದ ಅನಂತ್‍ಪುರ ಜಿಲ್ಲೆಯಲ್ಲಿ ನಡೆದಿದೆ.

    ಈ ಘಟನೆ ಬುಧವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಗ್ರಾಮಸ್ಥರ ಸಮ್ಮುಖದಲ್ಲೇ ಯುವತಿಯನ್ನು ಆ ಗ್ರಾಮದ ಹಿರಿಯ ವ್ಯಕ್ತಿಯೊಬ್ಬರು ಕೋಲಿನಿಂದ ಭೀಕರವಾಗಿ ಥಳಿಸುತ್ತಿರುವುದನ್ನು ಸ್ಥಳೀಯರು ವಿಡಿಯೋ ಮಾಡಿದ್ದಾರೆ. ಈಗ ಈ ವಿಡಿಯೋ ಸಖತ್ ವೈರಲ್ ಆಗಿದೆ.

    ಈ ವಿಡಿಯೋದಲ್ಲಿ ಯುವಕ ತಲೆ ಬಗ್ಗಿಸಿ ಕುಳಿತಿರುತ್ತಾನೆ. ಯುವತಿಯನ್ನು ಗ್ರಾಮದ ಹಿರಿಯ ವ್ಯಕ್ತಿಯೊಬ್ಬ ವಿಚಾರಣೆ ನಡೆಸುತ್ತಿರುತ್ತಾನೆ. ಹಿರಿಯ ವ್ಯಕ್ತಿ ಕೇಳಿದ ಪ್ರಶ್ನೆಗೆ ಯುವತಿ ನೀಡಿದ ಉತ್ತರದಿಂದ ಕೋಪಗೊಂಡ ಆತ ಆಕೆಯನ್ನು ಕಾಲಿನಿಂದ ಒದ್ದು, ಮೊದಲು ಕೈಯಲ್ಲಿ ಥಳಿಸುತ್ತಾನೆ. ನಂತರ ಕೋಲನ್ನು ತೆಗೆದುಕೊಂಡು ಯುವತಿಗೆ ಮನಬಂದಂತೆ ಹಲ್ಲೆ ಮಾಡುತ್ತಾನೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಅನಂತ್‍ಪುರದ ಪೊಲೀಸ್ ಮುಖ್ಯಸ್ಥ ಬಿ ಯೆಸುದಾಸ್, ಈ ಪ್ರಕರಣದಲ್ಲಿ ಗ್ರಾಮದ ಹಿರಿಯ ವ್ಯಕ್ತಿಯ ಬಗ್ಗೆ ದೂರು ನೀಡಲು ಯಾರೂ ಮುಂದೆ ಬರುತ್ತಿಲ್ಲ. ಅವರ ಪೋಷಕರು ದೂರು ನೀಡುತ್ತಿಲ್ಲ. ಹಿರಿಯರು ಈ ವಿಚಾರದಲ್ಲಿ ತಮ್ಮ ಪರವಾಗಿ ಮಧ್ಯಪ್ರವೇಶ ಮಾಡಿದ್ದಾರೆ ಆದ್ದರಿಂದ ನಾವು ದೂರು ನೀಡಲ್ಲ ಎಂದು ಪೋಷಕರು ಹೇಳಿದ್ದಾರೆ. ಈ ಪ್ರಕರಣ ವಿರುದ್ಧ ಅ ಯುವತಿಯೇ ದೂರು ನೀಡುತ್ತಾಳಾ ಎಂದು ಕೇಳಲು ಮಹಿಳಾ ಪೇದೆಯೊಬ್ಬರನ್ನು ಕಳಿಸಿದ್ದೇವೆ, ಆಕೆ ದೂರು ನೀಡಿದರೆ ಅವರ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

    ಈ ಘಟನೆಯ ಕುರಿತು ಮಾತನಾಡಿರುವ ಮಕ್ಕಳ ಹಕ್ಕುಗಳ ಸಂಘದ ಕಾರ್ಯಕರ್ತ ಅಚ್ಯುತ್ ರಾವ್, ಮಕ್ಕಳ ವಿರುದ್ಧ ಕೊಲೆ ಯತ್ನ ಮತ್ತು ಹಲ್ಲೆ ಪ್ರಕರಣಗಳನ್ನು ಜೆಜೆ(ಭಾಲಾಪರಾಧಿ ನ್ಯಾಯ ಮತ್ತು ಮಕ್ಕಳ ರಕ್ಷಣೆ) ಕಾಯ್ದೆ ಅಡಿಯಲ್ಲಿ ದಾಖಲಿಸಬೇಕೆಂದು ಒತ್ತಾಯ ಮಾಡಿದ್ದಾರೆ. ಇದು ಅವರಿಗೆ ಅರಿವಿಲ್ಲದೆ ಮಾಡಿದ್ದಾರೆ. ಈ ರೀತಿ ಆದಾಗ ಹಿರಿಯರು ಅವರಿಗೆ ಬುದ್ಧಿವಾದ ಹೇಳಬೇಕು. ಅದನ್ನು ಬಿಟ್ಟು ಪೊಲೀಸರ ರೀತಿಯಲ್ಲಿ ವರ್ತಿಸಬಾರದು ಎಂದು ಹೇಳಿದ್ದಾರೆ.

  • ಬಾತ್‍ರೂಂ ಸೆಕ್ಸ್ ಒಪ್ಪದ್ದಕ್ಕೆ 19 ವರ್ಷದ ಪತ್ನಿಯ ಮೇಲೆ ಹಲ್ಲೆ

    ಬಾತ್‍ರೂಂ ಸೆಕ್ಸ್ ಒಪ್ಪದ್ದಕ್ಕೆ 19 ವರ್ಷದ ಪತ್ನಿಯ ಮೇಲೆ ಹಲ್ಲೆ

    ಗಾಂಧಿನಗರ: ಬಾತ್‍ರೂಂ ಸೆಕ್ಸ್‌ಗೆ ಒಪ್ಪಲಿಲ್ಲ ಎಂದು ಪತಿ ಮದುವೆಯಾದ ನಾಲ್ಕು ತಿಂಗಳಿಗೆ ತನ್ನ 19 ವರ್ಷದ ಪತ್ನಿಯ ಮೇಲೆ ಹಲ್ಲೆ ನಡೆಸಿದ ಘಟನೆ ಗುಜರಾತ್‍ನ ಅಹಮದಾಬಾದ್‍ನಲ್ಲಿ ನಡೆದಿದೆ.

    ಬಾತ್‍ರೂಮಿನಲ್ಲಿ ದೈಹಿಕ ಸಂಬಂಧ ಬೆಳೆಸೋಣ ಎಂದು ಪತಿ ಪತ್ನಿಗೆ ಒತ್ತಾಯ ಮಾಡಿದ್ದಾನೆ. ಆದರೆ ಇದಕ್ಕೆ ಪತ್ನಿ ಒಪ್ಪಲಿಲ್ಲ. ಇದರಿಂದ ಕೋಪಗೊಂಡ ಪತಿ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ. ಸದ್ಯ ಮಹಿಳೆ ತನ್ನ ಪತಿಯ ವಿರುದ್ಧ ದೂರು ದಾಖಲಿಸಿದ್ದಾಳೆ. ಅಲ್ಲದೆ ಪತಿಯ ಸಹೋದರನ ವಿರುದ್ಧ ಕಿರುಕುಳ ಆರೋಪ ಮಾಡಿದ್ದಾಳೆ. ಪತಿಯ ಮನೆಯವರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾಳೆ.

    ನಾಲ್ಕು ತಿಂಗಳ ಹಿಂದೆ ನನ್ನ ಮದುವೆ ನಡೆಯಿತು. ಮದುವೆಯಾದ ದಿನದಿಂದ ಪತಿ ಹಾಗೂ ಆತನ ಮನೆಯವರು ವರದಕ್ಷಿಣೆ ತರುವಂತೆ ಕಿರುಕುಳ ನೀಡಿದ್ದಾರೆ. ಮಧ್ಯರಾತ್ರಿ ನಿದ್ದೆಯಿಂದ ಎಚ್ಚರಗೊಳಿಸಿ ವರದಕ್ಷಿಣೆ ತರುವಂತೆ ಒತ್ತಾಯ ಮಾಡುತ್ತಾರೆ. ಅಲ್ಲದೆ ನನ್ನ ಪತಿ ಬಲವಂತವಾಗಿ ನನಗೆ ಬಾತ್‍ರೂಮಿಗೆ ಕರೆದುಕೊಂಡು ಹೋಗಿ ನನ್ನ ಜೊತೆ ದೈಹಿಕ ಸಂಬಂಧ ಬೆಳೆಸುತ್ತಾನೆ ಎಂದು ಮಹಿಳೆ ಹೇಳಿದ್ದಾಳೆ.

    ಬಾತ್‍ರೂಮಿನಲ್ಲಿ ದೈಹಿಕ ಸಂಬಂಧ ಬೆಳೆಸಲು ನಾನು ನಿರಾಕರಿಸಿದರೆ ನನ್ನ ಪತಿ ನನ್ನ ಮೇಲೆ ಹಲ್ಲೆ ಮಾಡುತ್ತಾನೆ. ಬಳಿಕ ಬಲವಂತವಾಗಿ ದೈಹಿಕ ಸಂಬಂಧ ಬೆಳೆಸುತ್ತಾನೆ. ನನ್ನ ಪತಿಯ ಸಹೋದರ ಕೂಡ ನನಗೆ ಕಿರುಕುಳ ನೀಡುತ್ತಾನೆ. ನಾನು ಮನೆಯಲ್ಲಿ ಒಬ್ಬಳೇ ಇದ್ದಾಗ ನನ್ನ ಪತಿಯ ಅಣ್ಣ ನನಗೆ ಚಿತ್ರಹಿಂಸೆ ನೀಡುತ್ತಾನೆ. ಮನೆಯವರು ಜೊತೆ ಪಕ್ಕದ ಮನೆಯ ಮಹಿಳೆ ಕೂಡ ನನ್ನನ್ನು ಹೊಡೆಯಲು ನನ್ನ ಪತಿಗೆ ಪ್ರಚೋದಿಸುತ್ತಾಳೆ ಎಂದಳು.

    ಪತಿ ಹಾಗೂ ಆತನ ಮನೆಯವರ ಕಿರುಕುಳದಿಂದ ಬೇಸತ್ತ ಮಹಿಳೆ ಗೋಮತಿಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಸದ್ಯ ಪೊಲೀಸರು ಪತಿ ಸೇರಿ ನಾಲ್ವರ ವಿರುದ್ಧ ಐಪಿಸಿ ಸೆಕ್ಷನ್ 498ಎ, 354, 323, 114 ಹಾಗೂ 294 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಅವಾಚ್ಯ ಶಬ್ದಗಳಿಂದ ನಿಂದಿಸಿ, ಥಳಿಸಿದ – ಹಲ್ಲೆ ಹೇಗಾಯ್ತು ವಿವರಿಸಿದ ಕೋಮಲ್

    ಅವಾಚ್ಯ ಶಬ್ದಗಳಿಂದ ನಿಂದಿಸಿ, ಥಳಿಸಿದ – ಹಲ್ಲೆ ಹೇಗಾಯ್ತು ವಿವರಿಸಿದ ಕೋಮಲ್

    ಬೆಂಗಳೂರು: ಮಗಳನ್ನು ಟ್ಯೂಷನ್‍ಗೆ ಬಿಡಲು ತೆರಳಿದ್ದ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಏಕಾಏಕಿ ಹಲ್ಲೆ ನಡೆಸಿದ್ದಾನೆ ಎಂದು ನಟ ಕೋಮಲ್ ಅವರು ತಿಳಿಸಿದ್ದಾರೆ.

    ಮಲ್ಲೇಶ್ವರಂ ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೆ ಹಲ್ಲೆ ಮಾಡಿದ ವ್ಯಕ್ತಿ ಯಾರು ಎನ್ನುವುದೇ ಗೊತ್ತಿಲ್ಲ. ಆದರೆ ಏಕಾಏಕಿ ಕಾರು ತಡೆದ ಆತ, ಈ ನಡುವೆ ನಿನ್ನದು ಜಾಸ್ತಿಯಾಗಿದೆ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ. ಆದ್ದರಿಂದ ನಾನು ಕಾರಿನಿಂದ ಇಳಿದೆ. ಕಾರು ಇಳಿಯುತ್ತಿದ್ದಂತೆ ನನ್ನ ಮೇಲೆ ಆತ ಹಲ್ಲೆ ನಡೆಸಿದ. ಆದರೆ ನನ್ನ ಮೇಲೆ ಹಲ್ಲೆ ನಡೆಸುವ ಉದ್ದೇಶ ಏನು ಎನ್ನುವುದು ಗೊತ್ತಿಲ್ಲ ಎಂದು ಹೇಳಿದರು.

    ಸಿನಿಮಾ ಮಾಡುವ ಉದ್ದೇಶದಿಂದ ಕಳೆದ 4 ವರ್ಷಗಳಿಂದ ನಾನು ಮನೆಯಿಂದ ಹೆಚ್ಚು ಹೊರ ಬಂದಿಲ್ಲ. ಆದರೆ ಏಕೆ ನನ್ನ ಮೇಲೆ ಹಲ್ಲೆ ನಡೆದಿದೆ ಎಂಬುವುದು ಅಚ್ಚರಿ ತಂದಿದೆ. ಸಿನಿಮಾ ಮಾಡುವುದೇ ತಪ್ಪು ಎಂದರೆ ಹೇಗೆ ಎಂದು ಪ್ರಶ್ನಿಸಿದರು.

    ಇದೇ ವೇಳೆ ಈ ಘಟನೆ ಸಿನಿಮಾ ರಂಗದವರಿಂದ ಹಲ್ಲೆ ನಡೆದಿದ್ಯಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಇತ್ತೀಚೆಗೆ ನನ್ನ ಸಿನಿಮಾ ಬಿಡುಗಡೆಯಾಗಿದ್ದು, ಆದರ ಕೆಲಸದಲ್ಲಿ ನಾನು ತೊಡಗಿಕೊಂಡಿದ್ದೇನೆ. ಆತ ಯಾರೇ ಎಂಬುವುದು ನನಗೆ ತಿಳಿದಿಲ್ಲ. ಆತನ ಉದ್ದೇಶ ಏನು ಎಂಬುವುದು ಸಹ ಗೊತ್ತಿಲ್ಲ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ವಿಚಾರಣೆ ನಡೆಸುತ್ತಾರೆ ಎಂದರು.

    ಸದ್ಯ ಲಭ್ಯವಿರುವ ಮಾಹಿತಿ ಅನ್ವಯ ಕೋಮಲ್ ಅವರ ಮೇಲೆ ಹಲ್ಲೆ ಮಾಡಿದ ವ್ಯಕ್ತಿಯನ್ನು ಜಕ್ಕರಾಯನ ಕೆರೆಯ ನಿವಾಸಿ ವಿಜಯ್ ಅಲಿಯಾಸ್ ವಿಜಿ ಎಂದು ಗುರುತಿಸಲಾಗಿದೆ. ಈತ ತನ್ನ ಭಾವಿ ಪತ್ನಿಯೊಂದಿಗೆ ಬೈಕ್‍ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಬಂದು ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಅಲ್ಲದೇ ಈ ವೇಳೆ ಮದ್ಯ ಸೇವನೆ ಮಾಡಿದ್ದ ಎಂಬ ಅನುಮಾನವನ್ನು ಕೋಮಲ್ ಅವರ ಸಹೋದರ, ನಟ ಜಗ್ಗೇಶ್ ವ್ಯಕ್ತಪಡಿಸಿದ್ದಾರೆ.

    ಕೋಮಲ್ ಅವರ ಕಾರು ನನ್ನ ಬೈಕಿಗೆ ತಾಗಿದ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಹಲ್ಲೆ ನಡೆಸಿದ್ದಾಗಿ ವಿಜಯ್ ಪೊಲೀಸರ ಮುಂದೇ ಹೇಳಿಕೆ ನೀಡಿದ್ದಾನೆ ಎಂಬ ಮಾಹಿತಿ ಲಭಿಸಿದೆ. ಸದ್ಯ ವಿಜಯ್‍ನನ್ನು ಮಲ್ಲೇಶ್ವರಂ ಪೊಲೀಸರು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಈ ಘಟನೆ ಸಂಬಂಧ ಮಲ್ಲೇಶ್ವರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕೋಮಲ್ ಮೇಲೆ ದಾದಾಗಿರಿ ಮಾಡಿದೋರನ್ನ ಖಂಡಿತಾ ಸುಮ್ಮನೆ ಬಿಡಲ್ಲ: ಜಗ್ಗೇಶ್

    ಕೋಮಲ್ ಮೇಲೆ ದಾದಾಗಿರಿ ಮಾಡಿದೋರನ್ನ ಖಂಡಿತಾ ಸುಮ್ಮನೆ ಬಿಡಲ್ಲ: ಜಗ್ಗೇಶ್

    ಬೆಂಗಳೂರು: ನಟ ಕೋಮಲ್ ಮೇಲೆ ಹಲ್ಲೆ ಪ್ರಕರಣದ ಬಗ್ಗೆ ನಟ ಜಗ್ಗೇಶ್ ಪ್ರತಿಕ್ರಿಯಿಸಿ, ಅವನು ಪಾಪದವನು, ಯಾರು ಈ ಹಲ್ಲೆ ನಡೆಸಿದ್ದಾರೆ ಎಂದು ಗೊತ್ತಿಲ್ಲ. ಆದರೆ ಈ ರೀತಿ ದಾದಾಗಿರಿ ಮಾಡಿದವರನ್ನು ಖಂಡಿತಾ ಸುಮ್ಮನೆ ಬಿಡಲ್ಲ ಎಂದು ಕಿಡಿಕಾರಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನ್ನ ತಮ್ಮ ಮಗಳನ್ನು ಟ್ಯೂಶನ್ ಗೆ ಬಿಡಲಿಕ್ಕೆ ಹೋಗ್ತಾ ಇದ್ದ. ಶ್ರೀರಾಮಪುರ ರೈಲ್ವೇ ಅಂಡರ್ ಪಾಸ್ ಬಳಿ ಬರುತ್ತಿದಾಗ ಈ ಘಟನೆ ನಡೆದಿದೆ. ನಾಲ್ಕು ಜನ ಬೈಕ್ ಸವಾರರು ಸೈಡ್ ಕೊಟ್ಟಿಲ್ಲ ಎನ್ನುವ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ಮಾಡಿದ್ದಾರೆ. ಈ ವೇಳೆ ಮೂವರು ಕೋಮಲ್ ನನ್ನು ಹಿಡಿದುಕೊಂಡಿದ್ದಾರೆ. ಇನ್ನೊಬ್ಬ ಕೋಮಲ್ ಮೇಲೆ ಹಲ್ಲೆ ಮಾಡಿದ್ದಾನೆ. ನಾಲ್ಕು ಜನ ಕುಡಿದು ಹೊಡೆದಿದ್ದಾರೆ. ಈ ರೀತಿ ದಾದಾಗಿರಿ ಮಾಡುವವರನ್ನು ಪೊಲೀಸರು ಸುಮ್ಮನೆ ಬಿಡಬಾರದು. ಹಲ್ಲೆ ನಡೆಸಿದವರನ್ನು ಖಂಡಿತಾ ನಾನು ಸುಮ್ಮನೆ ಬಿಡಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಈ ರೀತಿಯ ಘಟನೆಗಳು ಬೆಂಗಳೂರಿನಲ್ಲಿ ಆಗಬಾರದು. ನನ್ನ ತಮ್ಮ ಅಥವಾ ನಟ ಮೇಲೆ ಹಲ್ಲೆ ನಡೆದಿದೆ ಎಂದು ನಾನು ಈ ಮಾತು ಹೇಳುತ್ತಿಲ್ಲ. ಯಾರಿಗೂ ಕೂಡ ಹೀಗೆ ಆಗಬಾರದು. ಕುಡಿದು, ಗಾಂಜಾ ಸೇವಿಸಿ ನಶೆಯಲ್ಲಿ ಪುಂಡರು ಈ ರೀತಿ ಬೆಂಗಳೂರು ನಗರದಲ್ಲಿ ಗಲಾಟೆ ಮಾಡಿದರೆ ಏನು ಅರ್ಥ? ಯಾರು ಏನ್ ಮಾಡಿದ್ದಾರೆ ಎಂದು ನನಗೆ ಗೊತ್ತಾಗುತ್ತೆ. ಇಂಡಸ್ಟ್ರಿಯವರು ಮಾಡಿದ್ದಾರಾ ಅಥವಾ ಬೇರೆಯವರು ಹಲ್ಲೆ ಮಾಡಿದ್ದಾರ ಗೊತ್ತಿಲ್ಲ ಎಂದರು.

    ನಾನು ಮುವತ್ತು ವರ್ಷದಿಂದ ಇಂಡಸ್ಟ್ರಿಯಲ್ಲೇ ಇದ್ದೇನೆ. ನನಗೆ ಅವಾಚ್ಯ ಪದಗಳಲ್ಲಿ ಬೈಯೋದು ಗೊತ್ತು. ಆದರೆ ಕೋಮಲ್ ಪಾಪದವನು, ಅವನಿಗೆ ಇವೆಲ್ಲಾ ಗೊತ್ತಾಗಲ್ಲ. ಅಂತ ಅಮಾಯಕನ ಮೇಲೆ ಹಲ್ಲೆ ಮಾಡಿದ್ದಾರೆ ಅವರನ್ನು ಸುಮ್ಮನೆ ಬಿಡಲ್ಲ. ಅವರಿಗೆ ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ಆಗಲೇಬೇಕು ಎಂದು ಹರಿಹಾಯ್ದರು.

  • ನಟ ಕೋಮಲ್ ಮೇಲೆ ಅಪರಿಚಿತ ವ್ಯಕ್ತಿಯಿಂದ ಹಲ್ಲೆ

    ನಟ ಕೋಮಲ್ ಮೇಲೆ ಅಪರಿಚಿತ ವ್ಯಕ್ತಿಯಿಂದ ಹಲ್ಲೆ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಕೋಮಲ್ ಅವರ ಮೇಲೆ ಅಪರಿಚಿತ ವ್ಯಕ್ತಿ ಹಲ್ಲೆ ಮಾಡಿರುವ ಘಟನೆ ನಗರದ ಸಂಪಿಗೆ ಚಿತ್ರಮಂದಿರದ ರೈಲ್ವೇ ಅಂಡರ್ ಪಾಸ್ ಬಳಿ ಇಂದು ಸಂಜೆ ನಡೆದಿದೆ.

    ಕೋಮಲ್ ಅವರು ತಮ್ಮ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಬೈಕ್ ಮೇಲೆ ಬಂದ ಅಪರಿಚಿತ ವ್ಯಕ್ತಿಯೊಬ್ಬ ಕಾರನ್ನು ಅಡ್ಡಗಟ್ಟಿದ್ದು, ಆ ಬಳಿಕ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಕೋಮಲ್ ಅವರ ಮೇಲೆ ಸುಖಾ ಸುಮ್ಮನೆ ರಕ್ತ ಬರುವಂತೆ ಹಲ್ಲೆ ಮಾಡಿದ್ದಾನೆ ಎನ್ನುವ ವಿಚಾರ ತಿಳಿದು ಬಂದಿದೆ.

    ಘಟನೆಯಲ್ಲಿ ಕೋಮಲ್ ಮುಖ ಹಾಗೂ ಮೂಗಿಗೆ ಗಾಯವಾಗಿದ್ದು, ಘಟನೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ. ಘಟನೆ ನಡೆದ ಬಳಿಕ ಅಪರಿಚಿತ ವ್ಯಕ್ತಿಯೂ ಮಲ್ಲೇಶ್ವರಂ ಪೊಲೀಸ್ ಠಾಣೆಗೆ ಹೋಗಿದ್ದಾನೆ ಎಂಬ ಮಾಹಿತಿ ಲಭಿಸಿದೆ. ಸದ್ಯ ಅಪರಿಚಿತ ವ್ಯಕ್ತಿಯನ್ನು ಪೊಲೀಸರು ಠಾಣೆಯಲ್ಲಿ ವಿಚಾರಣೆ ನಡೆಸಿದ್ದಾರೆ.

    ಕೋಮಲ್ ಮೇಲೆ ಹಲ್ಲೆ ನಡೆದ ಬಗ್ಗೆ ಮಾಹಿತಿ ಪಡೆದ ನಟ ಜಗ್ಗೇಶ್ ಅವರು ಕೂಡ ಪೊಲೀಸ್ ಠಾಣೆಗೆ ಆಗಮಿಸಿ ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಕೋಮಲ್ ಅವರು ಗಾಯಗೊಂಡಿರುವುದರಿಂದ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಆ ಬಳಿಕ ಪೊಲೀಸ್ ಠಾಣೆಗೆ ಆಗಮಿಸಿದ್ದರು. ಘಟನೆ ನಿಖರ ಕಾರಣ ತಿಳಿದು ಬಂದಿಲ್ಲ, ಪೊಲೀಸರು ಹೆಚ್ಚಿನ ಮಾಹಿತಿ ಪಡೆಯುತ್ತಿದ್ದಾರೆ.

  • ಸುಧಾಕರ್ ಮೇಲೆ ಹಲ್ಲೆ- ಕೈ ಎಂಎಲ್‍ಸಿ ನಜೀರ್ ಆಹ್ಮದ್ ವಿರುದ್ಧ ಎಫ್‍ಐಆರ್

    ಸುಧಾಕರ್ ಮೇಲೆ ಹಲ್ಲೆ- ಕೈ ಎಂಎಲ್‍ಸಿ ನಜೀರ್ ಆಹ್ಮದ್ ವಿರುದ್ಧ ಎಫ್‍ಐಆರ್

    ಬೆಂಗಳೂರು: ಅನರ್ಹ ಶಾಸಕ ಸುಧಾಕರ್ ಮೇಲೆ ಹಲ್ಲೆ ಮಾಡಿರುವ ಆರೋಪದ ಮೇಲೆ ಕಾಂಗ್ರೆಸ್ ಎಂಎಲ್‍ಸಿ ನಜೀರ್ ಆಹ್ಮದ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ಚಿಕ್ಕಬಳ್ಳಾಪುರದ ಅನರ್ಹ ಶಾಸಕ ಸುಧಾಕರ್ ಅವರು ರಾಜೀನಾಮೆ ನೀಡಲು ಹೋದ ಸಮಯದಲ್ಲಿ ವಿಧಾನಸೌಧದಲ್ಲಿ ಶಾಸಕರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ನಜೀರ್ ಆಹ್ಮದ್ ಹಾಗೂ ಅವರ ಸಂಗಡಿಗರ ಮೇಲೆ ಎಫ್‍ಐಆರ್ ದಾಖಲು ಮಾಡಲಾಗಿದೆ.

    ಸುಧಾಕರ್ ರಾಜೀನಾಮೆ ನೀಡಲು ಹೋದ ಸಮಯದಲ್ಲಿ ವಿಧಾನಸೌಧದಲ್ಲಿ ಗಲಾಟೆಯಾಗಿತ್ತು. ಈ ವೇಳೆ ಸುಧಾಕರ್ ಮೇಲೆ ಹಲ್ಲೆ ಆಗಿದೆ ಎಂದು ವಕೀಲ ಅಮೃತೇಶ್ ವಿಧಾನಸೌಧ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಅಧಾರದ ಮೇಲೆ ಸುಧಾಕರ್ ಹೇಳಿಕೆ ಪಡೆದಿರುವ ಪೊಲೀಸರು ಆಹ್ಮದ್ ಹಾಗೂ ಅವರ ಸಂಗಡಿಗರ ಮೇಲೆ ಎಫ್‍ಐಆರ್ ದಾಖಲು ಮಾಡಿದ್ದಾರೆ.

    ಆಗಿದ್ದೇನು?:
    ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸ್ಪೀಕರ್ ಕಚೇರಿಗೆ ಬಂದಿದ್ದ ಸುಧಾಕರ್ ಅವರನ್ನು ಕಾಂಗ್ರೆಸ್ ನಾಯಕರು ಜಾರ್ಜ್ ಕೊಠಡಿಯಲ್ಲಿ ಮನವೊಲಿಸಲು ಪ್ರಯತ್ನಿಸಿದ್ದರು. ಈ ವೇಳೆ ಸುಧಾಕರ್ ನನ್ನನ್ನು ಬಿಟ್ಟು ಬಿಡಿ ಪ್ಲೀಸ್, ನಾನು ರಾಜೀನಾಮೆ ವಾಪಸ್ ಪಡೆಯಲ್ಲ. ನನಗೆ ಸಾಕಾಗಿದೆ, ನಾನು ಎಲ್ಲವನ್ನೂ ಯೋಚಿಸಿಯೇ ರಾಜೀನಾಮೆ ಕೊಟ್ಟಿದ್ದೇನೆ ಎಂದು ಕಾಂಗ್ರೆಸ್ ನಾಯಕರಲ್ಲಿ ಕೇಳಿಕೊಂಡಿದ್ದರು.

    ಈ ವೇಳೆ ಕಾಂಗ್ರೆಸ್ ನಾಯಕರು, ಏಯ್ ಸುಧಾಕರ್, ಸ್ವಲ್ಪ ಹೇಳುವುದನ್ನು ಕೇಳಿಸಿಕೋ. ಮುಂದೆ ಎಲ್ಲವೂ ಕೂಡ ಒಳ್ಳೆಯದಾಗುತ್ತೆ. ಅಲ್ಲದೆ ನೀನು ಮಂತ್ರಿ ಕೂಡ ಆಗುತ್ತೀಯಾ ಎಂದು ಹೇಳಿ ಮನವೊಲಿಸಲು ಪ್ರಯತ್ನಿಸಿದ್ದರು. ಆದರೆ ಸುಧಾಕರ್ ನಾಯಕರ ಮಾತನ್ನು ಒಪ್ಪಿರಲಿಲ್ಲ. ಅಲ್ಲದೇ ಮುಂಬೈಗೆ ತೆರಳಿ ಉಳಿದ ಶಾಸಕರೊಂದಿಗೆ ಸೇರಿಕೊಂಡಿದ್ದರು. ಆ ಬಳಿಕ ಅಂದು ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಅವರು ಅತೃಪ್ತ ಶಾಸಕರೆಲ್ಲರನ್ನೂ ಅನರ್ಹಗೊಳಿಸಿದ್ದರು.

  • ಹಲ್ಲೆಗೆ ಮುಂದಾದ ಆರೋಪಿಗಳಿಗೆ ಗುಂಡಿನ ರುಚಿ ತೋರಿಸಿದ ಪೊಲೀಸರು

    ಹಲ್ಲೆಗೆ ಮುಂದಾದ ಆರೋಪಿಗಳಿಗೆ ಗುಂಡಿನ ರುಚಿ ತೋರಿಸಿದ ಪೊಲೀಸರು

    ಬೆಂಗಳೂರು: ಹಲ್ಲೆಗೆ ಮುಂದಾದ ಕೊಲೆ ಆರೋಪಿಗಳಿಗೆ ಮಾದನಾಯಕನಹಳ್ಳಿ ಪೊಲೀಸರು ಕಾಲಿಗೆ ಗುಂಡು ಹೊಡೆದಿದ್ದಾರೆ.

    ನಂದಿನಿ ಲೇಔಟ್ ಪೊಲೀಸ್ ಠಾಣೆಯ ರೌಡಿಶೀಟರ್‍ ಗಳಾಗಿರುವ ಚಂದನ್ ಮತ್ತು ಶರಣ್ ಮೇಲೆ ಮಾದನಾಯಕನಹಳ್ಳಿ ಸಿಪಿಐ ಸತ್ಯನಾರಾಯಣ್ ಅವರು ಗುಂಡು ಹಾರಿಸಿದ್ದಾರೆ.

    ಆರೋಪಿಗಳು ಕಳೆದ ಜುಲೈ 23 ರಂದು ಮಂಜುನಾಥ್ ಎಂಬುವರನ್ನು ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ನಂತರ ಅವರನ್ನು ಕೊಲೆ ಮಾಡಿದ್ದರು. ಈ ಆರೋಪಿಗಳು ಬೆಂಗಳೂರು ಉತ್ತರ ತಾಲೂಕಿನ ಮಾಚೋಹಳ್ಳಿ ಫಾರೆಸ್ಟ್ ಗೇಟ್ ಬಳಿ ಇದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಆರೋಪಿಗಳು ಪೇದೆ ಮನಗುಂಡಿ ಮತ್ತು ಪಿ.ಎಸ್.ಐ ಮುರಳಿ ಅವರು ಮೇಲೆ ಹಲ್ಲೆ ಮಾಡಿದ್ದಾರೆ.

    ಈ ವೇಳೆ ಸ್ಥಳದಲ್ಲಿದ್ದ ಸಿಪಿಐ ಸತ್ಯನಾರಾಯಣ್ ಆರೋಪಿಗಳ ಕಾಲಿಗೆ ಗುಂಡು ಹೊಡೆದಿದ್ದಾರೆ. ಈ ಘಟನೆಯಲ್ಲಿ ಗಾಯಗೊಂಡ ಆರೋಪಿಗಳು ಹಾಗೂ ಪೊಲೀಸರನ್ನು ಮಾಗಡಿ ರಸ್ತೆಯ ಅನುಪಮ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕನ್ನಡ ಹಾಡು ಹಾಡಲಿಲ್ಲ ಎಂದು ಯುವಕನಿಗೆ ಥಳಿತ

    ಕನ್ನಡ ಹಾಡು ಹಾಡಲಿಲ್ಲ ಎಂದು ಯುವಕನಿಗೆ ಥಳಿತ

    ಬೆಂಗಳೂರು: ಕನ್ನಡ ಹಾಡು ಹಾಕಲಿಲ್ಲ ಎಂದು ಯುವಕನಿಗೆ ಥಳಿಸಿದ ಘಟನೆ ಬೆಂಗಳೂರಿನ ಪಿಯೋನಿಕ್ಸ್ ಮಾರ್ಕೆಟ್ ಸಿಟಿ ಮಾಲ್ ನಲ್ಲಿ ನಡೆದಿದೆ.

    ವೈಟ್ ಫೀಲ್ಡ್ ಬಳಿಯಿರುವ ಮಾಲ್‍ನಲ್ಲಿ ಮ್ಯೂಸಿಕ್ ಬ್ಯಾಂಡ್ ಕಾರ್ಯಕ್ರಮ ನಡೆಯುತ್ತಿತ್ತು. ಈ ಕಾರ್ಯಕ್ರಮ ಮುಗಿಯುವ ವೇಳೆಗೆ ನಾಲ್ವರು ಕುಡುಕರ ಗುಂಪು ಅಲ್ಲಿಗೆ ಬಂದಿದೆ. ಅಲ್ಲಿಗೆ ಬಂದ ತಕ್ಷಣ ಕನ್ನಡ ಹಾಡುಗಳನ್ನು ಹಾಡುವಂತೆ ಒತ್ತಾಯಿಸಿದ್ದಾರೆ.

    ಈ ವೇಳೆ ಮ್ಯೂಸಿಕ್ ಉಪಕರಣಗಳನ್ನು ಡಿಸ್ಕನೇಕ್ಟ್ ಮಾಡಲಾಗಿದೆ ಎಂದು ಯುವಕರು ಆ ಗುಂಪಿಗೆ ಹೇಳಿದ್ದಾರೆ. ಇಷ್ಟಕ್ಕೆ ಮ್ಯೂಸಿಷೀಯನ್ಸ್ ಮೇಲೆ ಕುಡುಕರ ಗುಂಪು ಹಲ್ಲೆ ಮಾಡಿದೆ. ಹಲ್ಲೆ ವೇಳೆ ಗೀಟಾರ್ ವಾದಕ ಅನುಭವ್ ಎಂಬವರ ಕಣ್ಣಿಗೆ ಗಾಯವಾಗಿದೆ.

    ಈ ಬಗ್ಗೆ ಮಹದೇಹಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.