Tag: ಹಲ್ಲೆ

  • ಪಾಠ ನೆನಪಿಲ್ಲ ಎಂದಿದ್ದಕ್ಕೆ ಶಿಕ್ಷಕನಿಂದ ಥಳಿತ – 10ನೇ ತರಗತಿ ಬಾಲಕ ಸಾವು

    ಪಾಠ ನೆನಪಿಲ್ಲ ಎಂದಿದ್ದಕ್ಕೆ ಶಿಕ್ಷಕನಿಂದ ಥಳಿತ – 10ನೇ ತರಗತಿ ಬಾಲಕ ಸಾವು

    ಇಸ್ಲಾಮಾಬಾದ್: ಪಾಠ ನೆನಪಿಲ್ಲ ಎಂದ 10ನೇ ತರಗತಿ ವಿದ್ಯಾರ್ಥಿಯನ್ನು ಶಿಕ್ಷಕ ಹೊಡೆದಿದ್ದು, ಇದರಿಂದ ಬಾಲಕ ಮೃತಪಟ್ಟ ಘಟನೆ ಪಾಕಿಸ್ತಾನದ ಲಾಹೋರ್ ನ ಶಾಲೆಯೊಂದರಲ್ಲಿ ನಡೆದಿದೆ.

    ಶಿಕ್ಷಕ ಕ್ಲಾಸ್‍ನಲ್ಲಿ ವಿದ್ಯಾರ್ಥಿಗೆ ಪ್ರಶ್ನೆ ಕೇಳಿದ್ದಾನೆ. ಆದರೆ ವಿದ್ಯಾರ್ಥಿಗೆ ಶಿಕ್ಷಕ ಮಾಡಿದ ಪಾಠ ನೆನಪಿರಲಿಲ್ಲ. ಇದರಿಂದ ಕೋಪಗೊಂಡ ಶಿಕ್ಷಕ 10ನೇ ತರಗತಿ ವಿದ್ಯಾರ್ಥಿ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದು, ವಿದ್ಯಾರ್ಥಿ ಮೃತಪಟ್ಟಿದ್ದಾನೆ.

    ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿದ್ಯಾರ್ಥಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ್ದಕ್ಕೆ ಪೊಲೀಸರು ಶಿಕ್ಷಕನನ್ನು ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ.

    ತನ್ನ ಮಗನ ಸಾವನ್ನು ಕಂಡ ತಂದೆ ಶಿಕ್ಷಕನ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ಅಲ್ಲದೆ ನನ್ನ ಮಗನಿಗೆ ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ. ಫೀಸ್ ಕಟ್ಟದ ಕಾರಣ ಶಾಲೆ ಸಿಬ್ಬಂದಿ ನನ್ನ ಮಗನಿಗೆ ಸಾಕಷ್ಟು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಯ ತಂದೆ ದೂರು ನೀಡಿದ್ದಾರೆ.

  • ವೈದ್ಯರ ಮೇಲೆ ಹಲ್ಲೆ ಮಾಡಿದರೆ 10 ವರ್ಷ ಜೈಲು, 10 ಲಕ್ಷ ದಂಡ

    ವೈದ್ಯರ ಮೇಲೆ ಹಲ್ಲೆ ಮಾಡಿದರೆ 10 ವರ್ಷ ಜೈಲು, 10 ಲಕ್ಷ ದಂಡ

    – ಹೊಸ ಕಾನೂನು ತರಲು ಮುಂದಾದ ಕೇಂದ್ರ ಸರ್ಕಾರ

    ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮೇಲಾದ ಹಲ್ಲೆ ಖಂಡಿಸಿ ದೇಶಾದ್ಯಂತ ಪ್ರತಿಭಟನೆ ಗಲಾಟೆಗಳು ನಡೆದಿತ್ತು. ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆಗಳು ಆಗುತ್ತಿರುವ ಹಿನ್ನೆಲೆಯಲ್ಲಿ ಇವುಗಳನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಕಠಿಣ ಕಾನೂನು ತರಲು ಮುಂದಾಗುತ್ತಿದೆ.

    ಕರ್ತವ್ಯ ನಿರತ ವೈದ್ಯರು ಅಥವಾ ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ಅಥವಾ ದಾಳಿ ನಡೆಸಿದ ಆರೋಪಿಗಳಿಗೆ 10 ವರ್ಷ ಜೈಲು ಶಿಕ್ಷೆ ಮತ್ತು 10 ಲಕ್ಷ ರೂ.ವರೆಗೂ ದಂಡ ವಿಧಿಸುವ ಕಾಯ್ದೆ ತರಲು ಮುಂದಾಗುತ್ತಿದೆ. ವೈದ್ಯರ ಮೇಲಿನ ದಾಳಿ, ಹಲ್ಲೆ ರೀತಿಯ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

    ಈ ಸಂಬಂಧ ಸಾರ್ವಜನಿಕ ಅಭಿಪ್ರಾಯಗಳ ಸಂಗ್ರಹಿಸಲು ಸರ್ಕಾರ ನಿರ್ಧರಿಸಿದೆ. ಆದ್ದರಿಂದ ಸೋಮವಾರದಿಂದ ಆರೋಗ್ಯ ಸಚಿವಾಲಯ ಆರೋಗ್ಯಪಾಲನೆ ಸೇವೆಗಳ ಸಿಬ್ಬಂದಿ ಮತ್ತು ಕ್ಲಿನಿಕಲ್ ಎಸ್ಟಾಬ್ಲಿಷ್‍ಮೆಂಟ್ಸ್ (ಹಿಂಸೆ ಮತ್ತು ಆಸ್ತಿ ಹಾನಿ ನಿಷೇಧ) ಕರಡು ಮಸೂದೆ -2019 ನಿಯಮಗಳನ್ನು ರೂಪಿಸಿದೆ. ಅಲ್ಲದೆ ಸಾರ್ವಜನಿಕರು 30 ದಿನಗಳ ಒಳಗೆ ತಮ್ಮ ಅಭಿಪ್ರಾಯಗಳನ್ನು us-ms-mohfw@nic.in ಗೆ ಮೇಲ್ ಮಾಡಿ ತಿಳಿಸಬಹುದಾಗಿದೆ.

    ಭಾರತೀಯ ದಂಡ ಸಂಹಿತೆ(ಐಪಿಸಿ) 320ನೇ ಕಲಂ ಇಟ್ಟುಕೊಂಡು ಈ ಕಾಯ್ದೆಯನ್ನು ರಚಿಸಲು ಸಕಾರ ಮುಂದಾಗಿದೆ. ಕರ್ತವ್ಯ ಸಲ್ಲಿಸುವ ವೇಳೆ ರೋಗಿಗಳ ಕುಟುಂಬ ಅಥವಾ ಅವರ ಕಡೆಯವರು ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದರೆ ಕನಿಷ್ಠ ಮೂರು ವರ್ಷ, ಗರಿಷ್ಠ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಅದರ ಜೊತೆಗೆ ಕನಿಷ್ಠ 2 ಲಕ್ಷದಿಂದ 10 ಲಕ್ಷ ರೂ. ದಂಡ ವಿಧಿಸುವ ಅಂಶ ಈ ಕರಡು ಮಸೂದೆಯಲ್ಲಿದೆ.

    ಕರಡು ಮಸೂದೆಯಲ್ಲಿರುವ ಸಂಪೂರ್ಣ ವಿವರ ಓದಲು ಕ್ಲಿಕ್ ಮಾಡಿ: www.mohfw.gov.in

  • ಹಬ್ಬಕ್ಕೆ ತವರು ಮನೆಗೆ ಹೋದ ಪತ್ನಿ-ಪತಿಯಿಂದ ಮಚ್ಚಿನಿಂದ ಹಲ್ಲೆ

    ಹಬ್ಬಕ್ಕೆ ತವರು ಮನೆಗೆ ಹೋದ ಪತ್ನಿ-ಪತಿಯಿಂದ ಮಚ್ಚಿನಿಂದ ಹಲ್ಲೆ

    ಬೆಂಗಳೂರು: ಪತ್ನಿ ಗಣೇಶ ಹಬ್ಬಕ್ಕೆ ತವರು ಮನೆಗೆ ಹೋದಳು ಎಂಬ ಕಾರಣಕ್ಕೆ ಕೋಪಗೊಂಡ ಗಂಡ ಮಚ್ಚಿನಿಂದ ಆಕೆಯ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿರುವ ಘಟನೆ ನಗರದ ಎಂಇಐ ಬಡಾವಣೆಯಲ್ಲಿ ನಡೆದಿದೆ.

    ಹಲ್ಲೆ ಮಾಡಿರುವ ಪತಿಯನ್ನು ಲೋಹಿತ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಲೋಹಿತ್‍ನ ಬಾಮೈದ ಸತೀಶ್ ಹಾಗೂ ಅತ್ತೆ ಪಾರ್ವತಮ್ಮ ಅವರಿಗೆ ಗಂಭೀರ ಗಾಯಗಳಾಗಿದ್ದು, ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಲೋಹಿತ್ 8 ವರ್ಷದ ಹಿಂದೆ ಭಾರತಿ (ಹೆಸರು ಬದಲಿಸಲಾಗಿದೆ) ಅವರನ್ನು ಮದುವೆಯಾಗಿದ್ದ, ಆದರೆ ಅತ್ತೆ ಮನೆಯವರನ್ನು ಕಂಡರೆ ಅವನಿಗೆ ಆಗುತ್ತಿರಲಿಲ್ಲ ಎಂದು ಹೇಳಲಾಗಿದೆ.

    ಪತಿ ತವರು ಮನೆಗೆ ಹೋಗುವುದು ಬೇಡ ಎಂದರು ಭಾರತಿ ಹಬ್ಬಕ್ಕೆ ಹೋಗಿದ್ದರು. ಇದರಿಂದ ಕೋಪಗೊಂಡ ಲೋಹಿತ್ ಮನೆಯ ಮುಂದೆ ಬಂದು ಗಲಾಟೆ ಮಾಡುತ್ತಿದ್ದನು. ಇದನ್ನು ಪ್ರಶ್ನೆ ಮಾಡಲು ಹೋದ ಸತೀಶ್ ಮತ್ತು ಅತ್ತೆ ಪಾರ್ವತಮ್ಮಗೆ ಅಲ್ಲೇ ಇದ್ದ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಈ ವೇಳೆ ಲೋಹಿತ್‍ಗೂ ಗಾಯವಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಈ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

  • ಪತಿಯ ಕುಮ್ಮಕ್ಕಿನಿಂದ ಪತ್ನಿ ಮೇಲೆ ಸೋದರ ಸಂಬಂಧಿ ಹಲ್ಲೆ

    ಪತಿಯ ಕುಮ್ಮಕ್ಕಿನಿಂದ ಪತ್ನಿ ಮೇಲೆ ಸೋದರ ಸಂಬಂಧಿ ಹಲ್ಲೆ

    ಮಡಿಕೇರಿ: ಪತಿಯ ಕುಮ್ಮಕ್ಕಿನಿಂದಲೇ ಪತ್ನಿ ಮೇಲೆ ಸೋದರ ಸಂಬಂಧಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಶುಕ್ರವಾರ ರಾತ್ರಿ ಸೋಮವಾರಪೇಟೆ ತಾಲೂಕಿನ ಕುಶಾಲನಗರದಲ್ಲಿ ನಡೆದಿದೆ.

    ವಿಜಯರಾಜ್ ಪತ್ನಿ ಪುಷ್ಪವಲ್ಲಿ ಹಲ್ಲೆಗೊಳಗಾದ ಮಹಿಳೆ. ಹಲ್ಲೆಯಿಂದ ಪುಷ್ಪವತಿ ತಲೆಗೆ ಗಂಭೀರ ಗಾಯಗಳಾಗಿದೆ. ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ಪುಷ್ಪವಲ್ಲಿಯನ್ನು ಕುಶಾಲನಗರ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

    ಅನಾರೋಗ್ಯದ ನೆಪವೊಡ್ಡಿ ವಿಜಯರಾಜ್ ಎರಡನೇ ಮದುವೆಯಾಗಿದ್ದನು. ಎರಡನೇ ಮದುವೆ ಬಳಿಕ ವಿಜಯರಾಜ್ ದಿನನಿತ್ಯ ಪುಷ್ಪವಲ್ಲಿಗೆ ಕಿರುಕುಳ ನೀಡುತ್ತಿದ್ದನು. ಶುಕ್ರವಾರ ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ವಿಜಯರಾಜ್ ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಪತಿ ವಿಜಯರಾಜ್ ಮತ್ತು ಸಂಬಂಧಿ ವಿಶ್ವನಾಥ್ ವಿರುದ್ಧ ಕುಶಾಲನಗರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ದೂರಿನಲ್ಲಿ ಏನಿದೆ?
    ನನ್ನ ಮಗಳು ಪುಷ್ಪವಲ್ಲಿಯನ್ನು ವಿಜಯರಾಜ್ ಎಂಬವರ ಜೊತೆ ಮದುವೆ ಮಾಡಿಸಿ ಸುಮಾರು 37 ವರ್ಷವಾಗಿದೆ. ಈ ದಂಪತಿಗೆ ಮೂವರು ಮಕ್ಕಳಿದ್ದು, ಒಬ್ಬಳಿಗೆ ಮದುವೆ ಆಗಿದೆ, ಇಬ್ಬರು ಗಂಡು ಮಕ್ಕಳು ನಿರುದ್ಯೋಗಿಗಳಾಗಿರುತ್ತಾರೆ. ನನ್ನ ಮಗಳು ಪುಷ್ಪವಲ್ಲಿ ಸುಮಾರು 15 ವರ್ಷದಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ಎರಡು-ಮೂರು ಬಾರಿ ಚಿಕಿತ್ಸೆ ಕೊಡಿಸಿದರು ಗುಣಮುಖಳಾಗುತ್ತಿಲ್ಲ. ಇವಳನ್ನು ಯಾರೂ ನೋಡಿಕೊಳ್ಳದ ಕಾರಣ ನಾನೇ ನೋಡಿಕೊಳ್ಳುತ್ತಿದ್ದೇನೆ. ಅಲ್ಲದೆ ಎಲ್ಲ ಖರ್ಚು ವೆಚ್ಚವನ್ನು ನಾನೇ ಭರಿಸುತ್ತಿದ್ದೇನೆ. 29ರಂದು ನಾನು ನನ್ನ ಮಗಳಿಗೆ ಖರ್ಚಿಗೆ ಹಣ ಕೊಡಲು ಬೆಳಗ್ಗೆ ಸುಮಾರು 7 ಗಂಟೆಗೆ ಹೋದೆ. ಈ ವೇಳೆ ಪಕ್ಕದ ಮನೆಯವನಾದ ವಿಶ್ವನಾಥ್ ನನ್ನ ಮಗಳಿಗೆ ರಸ್ತೆಯಲ್ಲಿ ಅಡ್ಡಗಟ್ಟಿ ಪೈಪ್‍ನಿಂದ ಹೊಡೆಯುತ್ತಿದ್ದನು. ನಾನು ಬಿಡಿಸಲು ಹೋದಾಗ ಆತ ನನ್ನನ್ನು ತಳ್ಳಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಪುಷ್ಪವಲ್ಲಿ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.

  • ಮಹಿಳೆಯರ ಮುಂದೆ ಬಟ್ಟೆ ಬದಲಿಸಿದ ಕಂಡಕ್ಟರ್ – ವಿರೋಧಿಸಿದವನಿಗೆ ಥಳಿತ

    ಮಹಿಳೆಯರ ಮುಂದೆ ಬಟ್ಟೆ ಬದಲಿಸಿದ ಕಂಡಕ್ಟರ್ – ವಿರೋಧಿಸಿದವನಿಗೆ ಥಳಿತ

    ಚೆನ್ನೈ: ಬಸ್ಸಿನಲ್ಲಿ ಮಹಿಳೆಯರ ಮುಂದೆಯೇ ನಿರ್ವಾಹನೊಬ್ಬ ಬಟ್ಟೆ ಬದಲಿಸಿದ್ದು, ಇದನ್ನು ಪ್ರಶ್ನೆ ಮಾಡಿದ ಪ್ರಯಾಣಿಕನಿಗೆ ಕೆಲ ಬಸ್ ಚಾಲಕರು ಮತ್ತು ನಿರ್ವಾಹಕರು ಸೇರಿ ಥಳಿಸಿರುವ ಘಟನೆ ತಮಿಳುನಾಡಿನ ದಿಂಡಿಗುಲ್ ಜಿಲ್ಲೆಯಲ್ಲಿ ನಡೆದಿದೆ.

    ಬಸ್‍ನಲ್ಲಿ ಮಹಿಳಾ ಪ್ರಯಾಣಿಕರ ಮುಂದೆಯೇ ಕಂಡಕ್ಟರ್ ಬಟ್ಟೆ ಬದಲಿಸಿದ್ದಾನೆ. ಇದನ್ನು ಥೇನಿ ಜಿಲ್ಲೆಯ ನಿವಾಸಿ ವಿಜಯ್ ವಿರೋಧ ಮಾಡಿದ್ದಕ್ಕೆ ಸಾರಿಗೆ ನೌಕರರು ಮನಬಂದಂತೆ ಹಲ್ಲೆ ಮಾಡಿದ್ದಾರೆ. ಇದನ್ನು ಸ್ಥಳೀಯರು ವಿಡಿಯೋ ಮಾಡಿದ್ದಾರೆ.

    ಈ ವಿಡಿಯೋದಲ್ಲಿ ವಿಜಯ್ ಮತ್ತು ಕಂಡಕ್ಟರ್ ನಡುವೆ ಮಾತಿನ ಚಕಮಕಿ ನಡೆಯುತ್ತಿರುತ್ತದೆ. ಈ ಸಮಯದಲ್ಲಿ ಕೋಪಗೊಂಡ ಕಂಡಕ್ಟರ್ ಮೊದಲು ವಿಜಯ್‍ನ ಕಪಾಳಕ್ಕೆ ಹೊಡೆಯುತ್ತಾನೆ. ನಂತರ ಕೋಪಗೊಂಡ ವಿಜಯ್ ಕಂಡಕ್ಟರ್‍ ಗೆ ಹೊಡೆಯುತ್ತಾರೆ. ಈ ವೇಳೆ ಕಂಡಕ್ಟರ್ ಜೊತೆ ಇದ್ದ ಕೆಲ ಸರ್ಕಾರಿ ನೌಕರರು ವಿಜಯ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಪ್ರಯಾಣಿಕ ವಿಜಯ್, ಕಂಡಕ್ಟರ್ ಇದ್ದಕ್ಕಿದಂತೆ ಮಹಿಳೆಯರು ಸೇರಿದಂತೆ ಪ್ರಯಾಣಿಕರ ಮುಂದೆಯೇ ಬಟ್ಟೆ ಬದಲಾಯಿಸುತ್ತಿದ್ದರು. ಇದರಿಂದ ನಾನು ಬೇರೆ ಕಡೆ ಹೋಗಿ ಬಟ್ಟೆ ಬದಲಾಯಿಸಿ ಎಂದು ಹೇಳಿದೆ. ಇದರಿಂದ ಕೋಪಗೊಂಡ ಕಂಡಕ್ಟರ್ ಬಸ್ ದಿಂಡಿಗಲ್ ಬಸ್ ನಿಲ್ದಾಣಕ್ಕೆ ಬರುತ್ತಿದ್ದ ಹಾಗೇ ನನ್ನ ಮೇಲೆ ಜಗಳಕ್ಕೆ ಬಂದು ಅವರ ಸಿಬ್ಬಂದಿ ಕರೆಸಿ ನನ್ನ ಮೇಲೆ ಹಲ್ಲೆ ಮಾಡಿಸಿದರು ಎಂದು ಹೇಳಿದ್ದಾರೆ.

    ಈಗ ಪ್ರಯಾಣಿಕ ಕುಡಿದು ನಮ್ಮ ಬಳಿ ಕೆಟ್ಟದಾಗಿ ವರ್ತಿಸಿದ ಎಂದು ಬಸ್ ಕಂಡಕ್ಟರ್ ವಿಜಯ್ ವಿರುದ್ಧ ದೂರು ನೀಡಿದ್ದಾರೆ. ಆದರೆ ಕೆಲ ಸ್ಥಳೀಯರು ಈ ಘಟನೆಯಲ್ಲಿ ಇಬ್ಬರ ಕಡೆಯಿಂದಲು ತಪ್ಪಾಗಿದೆ ಪೊಲೀಸರು ಈ ಬಗ್ಗೆ ತನಿಖೆ ಮಾಡಬೇಕು ಎಂದು ಹೇಳಿದ್ದಾರೆ. ಹಲ್ಲೆ ಮಾಡಿದ ವಿಡಿಯೋ ಕೂಡ ಪೊಲೀಸರಿಗೆ ಸಿಕ್ಕಿದ್ದು, ಇದರ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ.

  • ಮನೆ ಖಾಲಿ ಮಾಡು ಎಂದಿದ್ದಕ್ಕೆ ಕಿರುತೆರೆ ನಟಿ ಮೇಲೆ ಹಲ್ಲೆ

    ಮನೆ ಖಾಲಿ ಮಾಡು ಎಂದಿದ್ದಕ್ಕೆ ಕಿರುತೆರೆ ನಟಿ ಮೇಲೆ ಹಲ್ಲೆ

    ನವದೆಹಲಿ: ಮನೆ ಖಾಲಿ ಮಾಡು ಎಂದಿದ್ದಕ್ಕೆ ಕಿರುತೆರೆ ನಟಿ ಮೇಲೆ ರೂಮ್‍ಮೇಟ್ ಹಲ್ಲೆ ಮಾಡಿದ ಘಟನೆ ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ನಡೆದಿದೆ.

    ನಳಿನಿ ನೇಗಿ ಹಲ್ಲೆಗೊಳಗಾದ ನಟಿ. ನಳಿನಿ ಮನೆ ಖಾಲಿ ಮಾಡಿ ಎಂದಿದ್ದಕ್ಕೆ ತನ್ನ ರೂಮ್‍ಮೇಟ್ ಪ್ರೀತಿ ರಾಣಾ ಹಾಗೂ ಆಕೆಯ ತಾಯಿ ಇಬ್ಬರು ಸೇರಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ನಳಿನಿ ನೇಗಿ ಆರೋಪಿಸಿದ್ದಾರೆ.

    ಈ ಬಗ್ಗೆ ಮಾತನಾಡಿದ ನಟಿ ನಳಿನಿ, ನಾನು ಹಾಗೂ ಪ್ರೀತಿ ಮೊದಲಿನಿಂದಲೂ ಒಂದೇ ರೂಮಿನಲ್ಲಿ ವಾಸಿಸುತ್ತಿದ್ದೇವೆ. ಬಳಿಕ ನಾನು ಒಶಿವಾರಾಗೆ ಶಿಫ್ಟ್ ಆಗಲು ನಿರ್ಧರಿಸಿದೆ. ಪ್ರೀತಿ ಮತ್ತೆ ನನ್ನನ್ನು ಸಂಪರ್ಕಿಸಿ ನನಗೆ ವಾಸಿಸಲು ಮನೆ ಇಲ್ಲ ಎಂದು ಹೇಳಿದ್ದಳು. ಅಲ್ಲದೆ ಕೆಲವು ದಿನಗಳವರೆಗೆ ನನ್ನ ಮನೆಯಲ್ಲಿ ವಾಸಿಸಲು ಜಾಗ ನೀಡುವಂತೆ ಕೇಳಿಕೊಂಡಿದ್ದಳು. ಪ್ರೀತಿ ಕೆಲವು ದಿನ ನನ್ನ ಮನೆಯಲ್ಲೇ ವಾಸಿಸುತ್ತಿದ್ದಳು ಎಂದು ಹೇಳಿದ್ದಾರೆ.

    ನನ್ನ ಪೋಷಕರು ಕೆಲವು ದಿನಗಳ ಕಾಲ ನನ್ನ ಜೊತೆಯಿರಲು ಬಯಸಿದ್ದರು. ಹಾಗಾಗಿ ನಾನು ಪ್ರೀತಿಗೆ ಮನೆ ಖಾಲಿ ಮಾಡುವಂತೆ ಹೇಳಿದೆ. ಇದಕ್ಕೆ ಪ್ರೀತಿ ಒಪ್ಪಿಕೊಂಡಳು. ಆದರೆ ಕೆಲವು ದಿನಗಳ ನಂತರ ಆಕೆಯ ತಾಯಿ ಕೂಡ ನಮ್ಮ ಜೊತೆಯಲ್ಲಿಯೇ ಇದ್ದರು. ಅವರು ಬಂದಾಗ ನಾನು ಮನೆ ಶಿಫ್ಟ್ ಮಾಡಲು ಪ್ರೀತಿಯ ಸಹಾಯಕ್ಕೆ ಬಂದಿದ್ದಾರೆ ಎಂದುಕೊಂಡಿದೆ. ಕಳೆದ ವಾರ ನಾನು ಜಿಮ್‍ಗೆ ಹೋಗುತ್ತಿದ್ದಾಗ ಪ್ರೀತಿಯ ತಾಯಿ ನನ್ನ ಜೊತೆ ಜಗಳವಾಡಲು ಶುರು ಮಾಡಿದ್ದರು ಎಂದರು.

    ಬಳಿಕ ಪ್ರೀತಿ ತಾಯಿ ನಾನು ಜಗಳವಾಡುತ್ತಿದ್ದೇನೆ ಎಂದು ಅವರ ಮಗಳ ಬಳಿ ನನ್ನ ಮೇಲೆ ದೂರು ನೀಡಿದ್ದರು. ಆಗ ಪ್ರೀತಿ ಕೂಡ ನನ್ನ ಜೊತೆ ಜಗಳವಾಡಲು ಶುರು ಮಾಡಿದ್ದಳು. ನಾನು ಪ್ರೀತಿಗೆ ಎಲ್ಲವನ್ನು ಹೇಳಲು ಪ್ರಯತ್ನಿಸುತ್ತಿದೆ. ಆದರೆ ಅಷ್ಟರಲ್ಲಿ ಇಬ್ಬರು ಗ್ಲಾಸ್‍ನಿಂದ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಅವರಿಬ್ಬರು ನನ್ನನ್ನು ಕೊಲಲ್ಲು ಪ್ರಯತ್ನಿಸುತ್ತಿದ್ದರು. ಅಷ್ಟೇ ಅಲ್ಲದೆ ನಾನು ನಟಿಯಾಗಿದ್ದರಿಂದ ನನ್ನ ಮುಖವನ್ನು ಗಾಯಗೊಳಿಸಲು ಇಬ್ಬರು ಪ್ಲ್ಯಾನ್ ಮಾಡಿದ್ದರು ಎಂದು ನಳಿನಿ ಹೇಳಿದ್ದಾರೆ.

    ನಟಿ ನಳಿನಿ ಈಗ ತಮ್ಮ ತಂದೆ-ತಾಯಿಯ ಜೊತೆ ವಾಸಿಸುತ್ತಿದ್ದಾರೆ. ನಳಿನಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ನಾಮಕರಣ’ ಧಾರಾವಾಹಿಯಲ್ಲಿ ನಟಿಸಿದ್ದರು.

  • ಶಿಕ್ಷಕಿ ಕ್ರೌರ್ಯಕ್ಕೆ ಕಣ್ಣು ಕಳೆದುಕೊಂಡ ಎಲ್‍ಕೆಜಿ ವಿದ್ಯಾರ್ಥಿ

    ಶಿಕ್ಷಕಿ ಕ್ರೌರ್ಯಕ್ಕೆ ಕಣ್ಣು ಕಳೆದುಕೊಂಡ ಎಲ್‍ಕೆಜಿ ವಿದ್ಯಾರ್ಥಿ

    ಹಾಸನ: ಶಿಕ್ಷಕಿಯೊಬ್ಬರ ಕ್ರೌರ್ಯಕ್ಕೆ ವಿದ್ಯಾರ್ಥಿಯೋರ್ವ ಕಣ್ಣು ಕಳೆದುಕೊಂಡ ಘಟನೆ ಜಿಲ್ಲೆಯ ಹೊರವಲಯದ ಎಲ್‍ವಿಜಿಎಸ್ ಶಾಲೆಯಲ್ಲಿ ನಡೆದಿದೆ.

    ವಿದ್ಯಾರ್ಥಿ ಮನಿಷ್ ದೃಷ್ಟಿ ಕಳೆದುಕೊಂಡಿದ್ದಾನೆ. ಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿ ಗಿರಿಜಾ ಅವರ ವಿರುದ್ಧ ಈ ಆರೋಪ ಕೇಳಿಬಂದಿದೆ. ಮನಿಷ್ ಎಲ್‍ಕೆಜಿಯಲ್ಲಿ ವ್ಯಾಸಂಗ ವಾಡುತ್ತಿದ್ದಾನೆ. ಅಗಸ್ಟ್ 13ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಶಾಲೆಯಲ್ಲಿ ಶಿಕ್ಷಕಿ ಮನಿಷ್ ಕಣ್ಣಿಗೆ ಕಬ್ಬಿಣದ ಸ್ಕೇಲ್‍ನಿಂದ ಹಲ್ಲೆ ಮಾಡಿದ್ದಾರೆ. ಹೀಗಾಗಿ ನಮ್ಮ ಮಗನಿಗೆ ಕಣ್ಣು ಕಳೆದುಕೊಳ್ಳುವ ಸ್ಥಿತಿ ಬಂದಿದೆ ಎಂದು ಪೋಷಕರು ಶಿಕ್ಷಕಿ ವಿರುದ್ಧ ಆರೋಪಿಸಿದ್ದಾರೆ.

    ಶಿಕ್ಷಕಿ ಹಲ್ಲೆ ನಡೆಸಿದ ದಿನದಿಂದ ವಿದ್ಯಾರ್ಥಿ ಕಣ್ಣು ನೋವು ಎಂದು ಹೇಳುತ್ತಿದ್ದನು. ಹೀಗಾಗಿ ವೈದ್ಯರ ಬಳಿ ಚಿಕಿತ್ಸೆಗೆ ಪೋಷಕರು ವಿದ್ಯಾರ್ಥಿಯನ್ನು ಕರೆದುಕೊಂಡ ಹೋದಾಗ ಆತನ ಕಣ್ಣಿಗೆ ಬಲವಾಗಿ ಹಾನಿಯಾಗಿದೆ ಎಂಬ ಸತ್ಯಾಂಶ ಹೊರಬಿದ್ದಿದೆ. ಹೀಗಾಗಿ ಶಿಕ್ಷಕಿಯ ಕ್ರೌರ್ಯಕ್ಕೆ ವಿದ್ಯಾರ್ಥಿ ಕಣ್ಣು ಕಳೆದುಕೊಂಡಿದ್ದಾನೆ. ಇದರಿಂದ ಪೋಷಕರು ಶಿಕ್ಷಕಿ ಹಾಗೂ ಶಾಲಾ ಆಡಳಿತ ಮಂಡಳಿ ವಿರುದ್ಧ ಸಿಡಿದೆದ್ದಿದ್ದಾರೆ.

    ಹಾಗೆಯೇ ಈ ಬಗ್ಗೆ ಪೊಲೀಸರಿಗೆ ಶಿಕ್ಷಕಿ ಹಾಗೂ ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಷಕರು ದೂರು ನೀಡಿದ್ದಾರೆ. ಸದ್ಯ ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಕ್ಕೆ ಪತ್ನಿಯ ಮೇಲೆ ಹಲ್ಲೆ

    ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಕ್ಕೆ ಪತ್ನಿಯ ಮೇಲೆ ಹಲ್ಲೆ

    ಹುಬ್ಬಳ್ಳಿ: ಅವಳಿ ಜವಳಿ ಹೆಣ್ಣು ಮಕ್ಕಳು ಹುಟ್ಟಿವೆ ಎಂಬ ಕಾರಣಕ್ಕೆ ಪತಿಯೊಬ್ಬ ತನ್ನ ಪತ್ನಿಗೆ ಮನಬಂದಂತೆ ಥಳಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ ಘಟನೆ ಹಳೇ ಹುಬ್ಬಳ್ಳಿಯ ಇಸ್ಲಾಂಪುರದಲ್ಲಿ ನಡೆದಿದೆ.

    ಪತ್ನಿ ಬೇಬಿ ಆಯಿಶಾ ದೌರ್ಜನ್ಯಕ್ಕೆ ಒಳಗಾದ ಪತ್ನಿ. ಆರೋಪಿ ಸಲ್ಮಾನ್ ಅಹ್ಮದ್ ಕಲಬುರ್ಗಿ ಪತ್ನಿ ಅವಳಿ ಜವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾಳೆ ಎಂದು ಹಲ್ಲೆ ಮಾಡಿದ್ದಾನೆ. ಸದ್ಯಕ್ಕೆ ಪತ್ನಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

    ಏಳು ವರ್ಷಗಳ ಹಿಂದೆ ಸಲ್ಮಾನ್ ಅಹ್ಮದ್ ಕಲಬುರ್ಗಿ ಮತ್ತು ಬೇಬಿ ಆಯಿಶಾ ಇಬ್ಬರ ವಿವಾಹವಾಗಿತ್ತು. ಪತ್ನಿ ಬೇಬಿ ಆಯಿಶಾಗೆ ಮೊದಲ ಹೆರಿಗೆಯಲ್ಲಿ ಒಂದು ಗಂಡು ಹಾಗೂ ಒಂದು ಹೆಣ್ಣು ಮಗು ಹುಟ್ಟಿದೆ. 17 ದಿನಗಳ ಹಿಂದೆ ಎರಡನೇ ಹೆರಿಗೆಯಲ್ಲಿ ಅವಳಿ ಜವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಹೀಗಾಗಿ ತನಗೆ ಮೂರು ಹೆಣ್ಣು ಮಕ್ಕಳಾಗಿವೆ ಎಂದು ಪ್ರತಿನಿತ್ಯ ಕುಡಿದು ಬಂದು ಜಗಳ ಮಾಡುತ್ತಿದ್ದನು.

    ಇವರಿಬ್ಬರ ಜಗಳದ ಮಧ್ಯೆ ಸಮುದಾಯದ ಹಿರಿಯರು ಬಂದು ರಾಜಿಸಂಧಾನ ಮಾಡಿದರು. ಆದರೂ ಇಂದು ಪತ್ನಿ ಬೇಬಿ ಆಯಿಶಾ ಮೇಲೆ ಹಲ್ಲೆ ಮಾಡಿದಲ್ಲದೇ ಪೆಟ್ರೊಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದಾನೆ. ಆಗ ಆಯಿಶಾ ಮನೆಯಿಂದ ಹೊರಗಡೆ ಓಡಿ ಬಂದು ಜೀವ ಉಳಿಸಿಕೊಂಡಿದ್ದಾಳೆ. ಬಳಿಕ ಸ್ಥಳೀಯರು ಆಕೆಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಈಗ ಆಯಿಶಾ ಚಿಕಿತ್ಸೆ ಪಡೆಯುತ್ತಿದ್ದಾಳೆ.

    ಈ ಸಂಬಂಧ ಹುಬ್ಬಳ್ಳಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

  • ತವರು ಮನೆಗೆ ಹಣ ಕಳಿಸಿದ್ದಕ್ಕೆ ಪತ್ನಿ ಮೇಲೆ ನಟ ಹಲ್ಲೆ

    ತವರು ಮನೆಗೆ ಹಣ ಕಳಿಸಿದ್ದಕ್ಕೆ ಪತ್ನಿ ಮೇಲೆ ನಟ ಹಲ್ಲೆ

    ಬೆಂಗಳೂರು: ತವರು ಮನೆಗೆ ಹಣ ಕಳಿಸಿದ್ದಕ್ಕೆ ಸ್ಯಾಂಡಲ್‍ವುಡ್ ನಟ ಬಾಲು ನಾಗೇಂದ್ರ ತಮ್ಮ ಧರ್ಮಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾನೆ.

    ಹುಲಿರಾಯ, ಕಪಟನಾಟಕ ಪಾತ್ರಧಾರಿ, ಕಡ್ಡಿಪುಡಿ ಹೀಗೆ ಹಲವಾರು ಚಿತ್ರಗಳಲ್ಲಿ ನಟಿಸಿರುವ ಬಾಲು ನಾಗೇಂದ್ರ, ಪತ್ನಿ ತವರು ಮನೆಗೆ ಹಣ ಕಳಿಸುತ್ತಿರುವುದಕ್ಕೆ ಹಲ್ಲೆ ಮಾಡಿದ್ದಾರೆ ಎಂದು ಅವರ ಪತ್ನಿ ದೂರು ನೀಡಿದ್ದಾರೆ.

    ದೂರಿನಲ್ಲೇನಿದೆ?:
    ರೇಡಿಯೋ ಜಾಕಿಯಾಗಿ ಕೆಲಸ ಮಾಡುತ್ತಿದ್ದ ನಾಗೇಂದ್ರ ಅವರ ಪತ್ನಿ, ಪ್ರತೀ ತಿಂಗಳು 8000 ಹಣವನ್ನು ತವರು ಮನೆಗೆ ಕಳುಹಿಸುತ್ತಿದ್ದರು. ಇದರಿಂದ ಕೋಪಗೊಂಡ ನಟ, ನನಗೆ ದಿನ ಹೊಡೆಯುತ್ತಿದ್ದರು. ಅಲ್ಲದೆ ಪ್ರತೀ ದಿನ ಕೆಲಸಕ್ಕೆ ಬಿಡುವಾಗ ರಸ್ತೆಯುದ್ದಕ್ಕೂ ಥಳಿಸುತ್ತಿದ್ದರು ಎಂದು ಬಾಲು ಪತ್ನಿ ಆರೋಪ ಮಾಡಿದ್ದಾರೆ.

    ನಟ ನಾಗೇಂದ್ರ ಹೆಂಡತಿ ಮಗುವನ್ನು ಹೊಡೆದು ತವರು ಮನೆಗೆ ಕಳುಹಿಸಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ಕೆಲಸಕ್ಕೆ ಹೋಗಲ್ಲ ಓದ್ಕೋಬೇಕು ಎಂದು ಪತ್ನಿ ಹೇಳಿದ್ದಕ್ಕೆ ಕೋಪಗೊಂಡ ನಾಗೇಂದ್ರ ಕೆಲಸಕ್ಕೆ ಹೋಗುವಂತೆ ದಿನ ಹಿಂಸೆ ನೀಡುತ್ತಿದ್ದರು. ನನ್ನ ಬಳಿಯಿಂದ ಪಡೆದ 1.5 ಲಕ್ಷ ಹಣವನ್ನು ವಾಪಸ್ ಮಾಡಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.

    ಇವೆಲ್ಲಾ ವಿಚಾರಗಳಿಂದ ಬೇಸತ್ತು ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪತ್ನಿ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನಟನ ವಿರುದ್ಧ ಐಪಿಸಿ ಸೆಕ್ಷನ್ 498ಎ (ಪತ್ನಿಗೆ ಹಿಂಸೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

  • ಬಿಸಿಯೂಟ ತಡವಾಗಿ ಮಾಡಿದಕ್ಕೆ ಮಾರಣಾಂತಿಕ ಹಲ್ಲೆಗೈದ ಅಧ್ಯಕ್ಷ

    ಬಿಸಿಯೂಟ ತಡವಾಗಿ ಮಾಡಿದಕ್ಕೆ ಮಾರಣಾಂತಿಕ ಹಲ್ಲೆಗೈದ ಅಧ್ಯಕ್ಷ

    ಯಾದಗಿರಿ: ಮಧ್ಯಾಹ್ನದ ಬಿಸಿಯೂಟದ ತಡವಾಗಿ ಮಾಡಿದಕ್ಕೆ ಸಿಬ್ಬಂದಿ ಮೇಲೆ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಪುರ ತಾಲೂಕಿನ ಗುಂಡಾಪುರ ದಲ್ಲಿ ನಡೆದಿದೆ.

    ಈ ಘಟನೆ ಶನಿವಾರ ಗುಂಡಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದ್ದು, ಎಸ್‍ಡಿಎಂಸಿ ಅಧ್ಯಕ್ಷ ಭೀಮಣ್ಣ ಈ ಕೃತ್ಯ ಎಸೆಗಿದ್ದಾನೆ. ಶನಿವಾರ ಮಧ್ಯಾಹ್ನ ಅಡುಗೆ ಮಾಡುವುದು ತಡವಾಗಿತ್ತು. ಈ ಕಾರಣದಿಂದ ಬಿಸಿಯೂಟ ಮಾಡುವ ಸಿಬ್ಬಂದಿ ಮತ್ತು ಎಸ್‍ಡಿಎಂಸಿ ಸದಸ್ಯರ ಮಧ್ಯೆ ಗಲಾಟೆಯಾಗಿತ್ತು.

    ಈ ವಿಚಾರವನ್ನೇ ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ಭೀಮಣ್ಣ ತಡರಾತ್ರಿ ಗುಂಪು ಕಟ್ಟಿಕೊಂಡು ಅಡುಗೆ ಮಾಡುವ ಕಮಲಬಾಯಿ ಮನೆಗೆ ತೆರಳಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಕಮಲಬಾಯಿ ಕುಟುಂಬಸ್ಥರ ಮೇಲೆ ಭೀಮಣ್ಣ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಈ ಘಟನೆಯಲ್ಲಿ ಕಮಲಬಾಯಿ ಪತಿಗೆ ಗಂಭೀರ ಗಾಯವಾಗಿದ್ದು, ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಕಮಲಬಾಯಿ ಕುಟುಂಬಸ್ಥರು ಚಿಕಿತ್ಸೆ ಪಡೆಯುತ್ತಿದ್ದಾರೆ.

    ಈ ಸಂಬಂಧ ಗೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.