Tag: ಹಲ್ಲೆ

  • ಅನ್ಯಕೋಮಿನ ಯುವತಿಯನ್ನ ಬೈಕ್‌ನಲ್ಲಿ ಕೂರಿಸಿಕೊಂಡು ಹೋಗಿದ್ದಕ್ಕೆ ಯುವಕನಿಗೆ ಹಲ್ಲೆ

    ಅನ್ಯಕೋಮಿನ ಯುವತಿಯನ್ನ ಬೈಕ್‌ನಲ್ಲಿ ಕೂರಿಸಿಕೊಂಡು ಹೋಗಿದ್ದಕ್ಕೆ ಯುವಕನಿಗೆ ಹಲ್ಲೆ

    ಶಿವಮೊಗ್ಗ: ಅನ್ಯಕೋಮಿನ ಯುವತಿಯನ್ನು ಬೈಕಿನಲ್ಲಿ ಕೂರಿಸಿಕೊಂಡು ಹೋಗಿದ್ದಕ್ಕೆ ಯುವಕನಿಗೆ ಹಲ್ಲೆ ನಡೆಸಿದ ಘಟನೆ ಶಿವಮೊಗ್ಗದ (Shivamogga) ಸೀಗೆಟಹಳ್ಳಿ ಬಳಿ ನಡೆದಿದೆ.

    ಜೂನ್ 1 ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನಂದನ್ ಹಲ್ಲೆಗೊಳಗಾದ ಯುವಕ. ನಂದನ್ ಹಾಗೂ ಅನ್ಯಕೋಮಿನ ಯುವತಿ ಒಂದೇ ಖಾಸಗಿ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಕೆಲಸದ ನಿಮಿತ್ತ ನಂದನ್ ಹಾಗೂ ಯುವತಿ ಬೈಕ್‌ನಲ್ಲಿ ಹೋಗುತ್ತಿದ್ದರು. ಬೈಕ್‌ನಲ್ಲಿ ಹೋಗುವುದನ್ನು ಗಮನಿಸಿದ ಅನ್ಯಕೋಮಿನ ಯುವಕರು ಬೈಕ್ ಅಡ್ಡಗಟ್ಟಿದ್ದಾರೆ. ಬಳಿಕ ನಂದನ್ ಅನ್ನು ಸ್ಥಳೀಯ ಟಿಂಬರ್ ಯಾರ್ಡ್ವೊಂದಕ್ಕೆ ಎಳೆದೊಯ್ದು ಹಲ್ಲೆ (Assault) ನಡೆಸಿದ್ದಾರೆ. ಸ್ಥಳದಿಂದ ತಪ್ಪಿಸಿಕೊಂಡು ಯುವಕ ಓಡಿ ಬಂದಿದ್ದಾನೆ. ಇದನ್ನೂ ಓದಿ: ಮಗಳ ಪ್ರೇಮ ವಿವಾಹಕ್ಕೆ ನೊಂದು ಮಹಿಳೆ ಆತ್ಮಹತ್ಯೆ

    ಹಲ್ಲೆಗೊಳಗಾದ ಯುವಕನಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶಾಸಕ ಚನ್ನಬಸಪ್ಪ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ ಯುವಕನ ಆರೋಗ್ಯ ವಿಚಾರಿಸಿದ್ದಾರೆ. ಘಟನೆ ಕುರಿತು ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಯಾದಗಿರಿಯಲ್ಲಿ ಖಾಸಗಿ ಬಸ್ ಪಲ್ಟಿ – ಇಬ್ಬರು ಪ್ರಯಾಣಿಕರ ಸಾವು, 7 ಮಂದಿ ಗಂಭೀರ

  • ಮುಂಬೈ ಸರಣಿ ಬಾಂಬ್‌ ಸ್ಫೋಟ ಕೇಸ್‌ – ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿ ಜೈಲಿನಲ್ಲೇ ಹತ್ಯೆ!

    ಮುಂಬೈ ಸರಣಿ ಬಾಂಬ್‌ ಸ್ಫೋಟ ಕೇಸ್‌ – ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿ ಜೈಲಿನಲ್ಲೇ ಹತ್ಯೆ!

    ಮುಂಬೈ: 1993ರ ಮುಂಬೈ ಸರಣಿ ಬಾಂಬ್‌ ಸ್ಫೋಟ ಪ್ರಕರಣದಲ್ಲಿ (Mumbai Serial Bomb Blasts Case) ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿಯನ್ನು ಹೊಡೆದು ಕೊಂದಿರುವ ಘಟನೆ ಭಾನುವಾರ ಜೊಲ್ಲಾಪುರದ ಕಲಾಂಬಾ ಕೇಂದ್ರ ಕಾರಾಗೃಹದಲ್ಲಿ (Kalamba Central Jail) ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಜೈಲಿನ ಬಾತ್‌ರೂಮ್‌ನಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ವಾಗ್ವಾದ ನಡೆದು ಇತರ ಕೈದಿಗಳು 59 ವರ್ಷದ ಮನ್ನಾ ಅಲಿಯಾಸ್ ಮೊಹಮ್ಮದ್ ಅಲಿ ಖಾನ್ ಅಲಿಯಾಸ್ ಮನೋಜ್ ಕುಮಾರ್ ಭವರ್ಲಾಲ್ ಗುಪ್ತಾ ಮೇಲೆ ಹಲ್ಲೆಗೈದಿದ್ದಾರೆ. ಮೊಹಮ್ಮದ್‌ ಅಲಿ ಖಾನ್‌ ಸರಣಿ ಸ್ಫೋಟ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಯಾಗಿದ್ದಾನೆ. ಇದನ್ನೂ ಓದಿ: ವಿಧಾನಸಭಾ ಚುನಾವಣೆ 2024- ಅರುಣಾಚಲ ಪ್ರದೇಶದಲ್ಲಿ ಬಿಜೆಪಿಗೆ ಭರ್ಜರಿ ಜಯ

    ಮೊಹಮ್ಮದ್‌ ಅಲಿ ಖಾನ್‌ ಹಾಗೂ ಕೆಲ ವಿಚಾರಣಾಧೀನ ಕೈದಿಗಳ ನಡುವೆ ಇದ್ದಕ್ಕಿದ್ದಂತೆ ವಾಗ್ವಾದ ನಡೆದಿದೆ. ಈ ವೇಳೆ ಒಳಚರಂಡಿಯಲ್ಲಿಟ್ಟಿದ್ದ ಕಬ್ಬಿಣದ ರಾಡ್‌ನಿಂದ ಖಾನ್‌ ತಲೆಗೆ ಬಲವಾಗಿ ಹೊಡೆದಿದ್ದಾರೆ. ಈ ವೇಳೆ ತೀವ್ರ ರಕ್ತಸ್ತ್ರಾವದಿಂದ ನೆಲದ ಮೇಲೆ ಕುಸಿದು ಬಿದ್ದಿದ್ದಾನೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾದರೂ ಚಿಕಿತ್ಸೆ ಫಲಕಾರಿಯಾಗದೇ ಖಾನ್‌ ಮೃತಪಟ್ಟಿದ್ದಾನೆ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ವೈದ್ಯಕೀಯ, ಎಂಜಿನಿಯರಿಂಗ್ – ಒಟ್ಟಿಗೇ ಕೌನ್ಸೆಲಿಂಗ್; ನೀಟ್ ಫಲಿತಾಂಶದ ನಂತರ ದಿನಾಂಕ ನಿಗದಿ – ಕೆಇಎ

    ದಾಳಿಕೋರರನ್ನು ಪ್ರತೀಕ್ ಅಲಿಯಾಸ್ ಪಿಲ್ಯ ಸುರೇಶ್ ಪಾಟೀಲ್, ದೀಪಕ್ ನೇತಾಜಿ ಖೋಟ್, ಸಂದೀಪ್ ಶಂಕರ್ ಚವಾಣ್, ಋತುರಾಜ್ ವಿನಾಯಕ್ ಇನಾಮದಾರ್ ಮತ್ತು ಸೌರಭ್ ವಿಕಾಸ್ ಎಂದು ಗುರುತಿಸಲಾಗಿದೆ. ಕೊಲ್ಲಾಪುರ ಪೊಲೀಸರು ಐವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶೀಘ್ರದಲ್ಲೇ ಅವರನ್ನು ಬಂಧಿಸಲಾಗುವುದು ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

    1993ರ ಮಾರ್ಚ್ 12 ರಂದು ಮುಂಬೈನಲ್ಲಿ ಒಂದೇ ದಿನ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ 257 ಸಾವುಗಳು ಸಂಭವಿಸಿತ್ತು. 1,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಇದನ್ನೂ ಓದಿ: ಕಾಂಗ್ರೆಸ್‌ಗೆ ವಿರುದ್ಧವಾದ ಆದೇಶ ಬಂದ್ರೆ ಎಕ್ಸಿಟ್ ಪೋಲ್, ಇವಿಎಂ ಮೇಲೆ ನಂಬಿಕೆ ಇರಲ್ಲ: ತೇಜಸ್ವಿ ಸೂರ್ಯ

  • ಪತ್ನಿಯನ್ನು ಕಾಡಿಗೆ ಕರೆದೊಯ್ದು ಮೊಣಕಾಲುಗಳಿಗೆ ಸುತ್ತಿಗೆಯಿಂದ ಹಲ್ಲೆಗೈದು, ಮಚ್ಚು ಬೀಸಿದ ಪತಿ!

    ಪತ್ನಿಯನ್ನು ಕಾಡಿಗೆ ಕರೆದೊಯ್ದು ಮೊಣಕಾಲುಗಳಿಗೆ ಸುತ್ತಿಗೆಯಿಂದ ಹಲ್ಲೆಗೈದು, ಮಚ್ಚು ಬೀಸಿದ ಪತಿ!

    ತಿರುವನಂತಪುರಂ: ಪತಿ ಮಹಾಶಯನೊಬ್ಬ ತನ್ನ ಪತ್ನಿಯನ್ನು ಕಾಡಿಗೆ ಕರೆದುಕೊಂಡು ಹೋಗಿ ಗಂಭೀರವಾಗಿ ಗಾಯಗೊಳಿಸಿ ಬಳಿಕ ಆಕೆಯನ್ನು ಅಲ್ಲಿಯೇ ಬಿಟ್ಟು ಎಸ್ಕೇಪ್‌ ಆಗಿರುವ ಅಮಾನುಷ ಘಟನೆಯೊಂದು ಕೆರಳದಲ್ಲಿ (Kerala) ನಡೆದಿದೆ.

    ತಿರುವನಂತಪುರಂನ ಪಲೋಡ್ ಬಳಿ ಪತಿ ತನ್ನ ಪತ್ನಿಯ ಮೇಲೆ ಈ ದುಷ್ಕೃತ್ಯ ಎಸಗಿದ್ದಾನೆ. ಸದ್ಯ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮೈಲಮೂಡಿನ ಗಿರಿಜಾ ಶಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ಪತಿ ಪಾಳೋಡ್ ಪಾಚ ಮೂಲದ ಸೋಜಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಪ್ರಕರಣದ ವಿವರ: ಕಳೆದ ಒಂದೂವರೆ ವರ್ಷದಿಂದ ಗಿರಿಜಾ ಹಾಗೂ ಸೋಜಿ ಪ್ರತ್ಯೇಕವಾಗಿದ್ದರು. ಇದೀಗ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಆರೋಪಿ ಸೋಜಿ ತನ್ನ ಪತ್ನಿಯನ್ನು ಸಂಪರ್ಕಿಸಿದ್ದಾನೆ. ಅಲ್ಲದೇ ಈ ಬಗ್ಗೆ ಇಬ್ಬರು ಕುಳಿತು ಮಾತಾಡೋಣ ಎಂದು ಪತ್ನಿಯನ್ನು ಕರೆದಿದ್ದಾನೆ. ಪತಿಯ ಮಾತು ನಂಬಿದ್ದ ಗಿರಿಜಾ ಪತಿ ಹೇಳಿದ ಸ್ಥಳಕ್ಕೆ ಬಂದಿದ್ದಾಳೆ. ಇದನ್ನೂ ಓದಿ: ಆಟೋದಲ್ಲಿ ಬಂದು ಅಂಜಲಿ ಕೊಲೆಗೈದು ಹಂತಕ ಎಸ್ಕೇಪ್- ಸಿಸಿಟಿವಿಯಲ್ಲಿ ದೃಶ್ಯ ಸೆರೆ

    ಈ ವೇಳೆ ಸೋಜಿ ನಿನ್ನ ಜೊತೆ ಮಾತಾಡೋಕೆ ತುಂಬಾ ಇದೆ ಎಂದು ಆಕೆಯನ್ನು ಪಕ್ಕದ ಕಾಡಿಗೆ ಕರೆದುಕೊಂಡು ಹೋಗಿದ್ದಾನೆ. ಹೀಗೆ ಕರೆದೊಯ್ದವನೇ ಬಚ್ಚಿಟ್ಟಿದ್ದ ಸುತ್ತಿಗೆಯನ್ನು ತೆಗೆದುಕೊಂಡು ಬಂದು ಮೊದಲು ಪತ್ನಿಯ ಎರಡೂ ಮೊಣಕಾಲುಗಳಿಗೆ ಹಲ್ಲೆ ಮಾಡಿದ್ದಾನೆ. ಬಳಿಕ ಹರಿತವಾದ ಮಚ್ಚಿನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿ, ಆಕೆಯನ್ನು ಕಾಡಿನಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ.

    ಇತ್ತ ಕಾಡಿಗೆ ಕಟ್ಟಿಗೆ ಸಂಗ್ರಹಿಸಲು ಬಂದ ಸ್ಥಳಿಯರಿಗೆ ಗಿರಿಜಾ ಚೀರಾಟ- ಕಿರುಚಾಟ ಕೇಳಿದೆ. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಗಿರಿಜಾಳನ್ನು ತಿರುವನಂತಪುರಂ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಿರಿಜಾ ಕಾಲುಗಳು ಮತ್ತು ತಲೆಗೆ ಗಂಭೀರ ಗಾಯಗಳಾಗಿವೆ.

    ಪ್ರಕರಣ ಸಂಬಂಧ ತಲೆಮರೆಸಿಕೊಂಡಿರುವ ಆರೋಪಿ ಸೋಜಿಯನ್ನು ಪಾಂಗೋಡು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸಿದ್ದಾರೆ. ಪತ್ನಿಯ ಮೇಲಿನ ಈ ಕ್ರೂರ ದಾಳಿಗೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ. ವಿಚಾರಣೆ ಬಳಿಕವಷ್ಟೇ ಸ್ಪಷ್ಟನೆ ಸಿಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಮೋದಿ ಪರ ಹಾಡು ರಚಿಸಿದ್ದಕ್ಕೆ ಹಲ್ಲೆ – ಐವರ ಮೇಲೆ ಎಫ್‌ಐಆರ್‌ ದಾಖಲು

    ಮೋದಿ ಪರ ಹಾಡು ರಚಿಸಿದ್ದಕ್ಕೆ ಹಲ್ಲೆ – ಐವರ ಮೇಲೆ ಎಫ್‌ಐಆರ್‌ ದಾಖಲು

    ಮೈಸೂರು: ಪ್ರಧಾನಿ ನರೇಂದ್ರ ಮೋದಿ (PM Narendra Modi) ಪರ ಹಾಡು ರಚಿಸಿ ಹಾಡಿದ್ದಕ್ಕೆ ಯುವಕನ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರ ಮೇಲೆ ಎಫ್‌ಐಆರ್‌ (FIR) ದಾಖಲಾಗಿದೆ.

    ಹಳ್ಳಿಕೆರೆಹುಂಡಿ ಗ್ರಾಮದ ಲಕ್ಷ್ಮೀನಾರಾಯಣ್ (Lakshmi Narayan) ನೀಡಿದ ದೂರಿನ ಆಧಾರದಲ್ಲಿ ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ಸಲೀಂ, ಜಾವೀದ್, ಪಾಷಾ ಸೇರಿದಂತೆ ಇತರ ಇಬ್ಬರು ವ್ಯಕ್ತಿಗಳ ಮೇಲೆ ಎಫ್ಐಆರ್ ದಾಖಲಾಗಿದೆ. ಇದನ್ನೂ ಓದಿ: ಮಗನಿಗೆ ಯಾವ ಶಿಕ್ಷೆ ಕೊಟ್ರೂ ಸ್ವಾಗತಿಸ್ತೀನಿ- ನೇಹಾ ಹಂತಕ ಫಯಾಜ್‌ ತಂದೆ ಕಣ್ಣೀರು

    ದೂರಿನಲ್ಲಿ ಏನಿದೆ?
    ನಾನು ಕಳೆದ ವಾರ ಮೋದಿ ಕುರಿತಾಗಿ ಹಾಡು ರಚಿಸಿದ್ದೆ. ನಾನು ಜನರ ಜೊತೆ ಈ ಹಾಡನ್ನು ತೋರಿಸಿ ಯೂಟ್ಯೂಬ್‌ ಚಾನೆಲ್‌ ಸಬ್‌ಸ್ಕ್ರೈಬ್‌ ಮಾಡುವಂತೆ ಕೇಳಿಕೊಳ್ಳುತ್ತಿದ್ದೆ.

    ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಸರ್ಕಾರಿ ಗೆಸ್ಟ್‌ ಹೌಸ್‌ನ ಪಾರ್ಕ್‌ನಲ್ಲಿ ಕುಳಿತಿದ್ದೆ. ಈ ವೇಳೆ ನಾನು ಓರ್ವ ಹುಡುಗನನ್ನು ಕರೆದು ಮೋದಿ ಅವರ ಬಗ್ಗೆ ಹಾಡು ಮಾಡಿದ್ದೇನೆ. ಸಬ್‌ಸ್ಕ್ರೈಬ್‌ ಮಾಡಿ ಎಂದು ಎಂದು ಆತನಿಗೆ ತೋರಿಸಿದಾಗ ಆತ ಹಾಡು ಚೆನ್ನಾಗಿದೆ ಎಂದು ಹೇಳಿ ಬನ್ನಿ ನಾನು ನನ್ನ ಸ್ನೇಹಿತರಿಗೂ ತೋರಿಸುತ್ತೇನೆ ಎಂದು ನನ್ನನ್ನು ಆತನ ಸ್ನೇಹಿತರ ಬಳಿ ಕರೆದುಕೊಂಡು ಹೋದ.

    ಆ ಸ್ಥಳದಲ್ಲಿ ನಾಲ್ಕು ಮಂದಿ ಹುಡುಗರು ನಿಂತಿದ್ದರು. ಅವರು ನನ್ನ ಬಾಯಿ ಮುಚ್ಚಿ, ಕೈಗಳನ್ನು ಹಿಂದಿನಿಂದ ಹಿಡಿದು, ಕೈಗಳಿಗೆ ಹಲ್ಲೆ ಮಾಡಿ, ತಲೆ ಮೇಲೆ ಬೀಯರ್‌ ಸುರಿದು ಸಿಗರೇಟ್‌ನಲ್ಲಿ ಸುಟ್ಟು ಉರ್ದು ಭಾಷೆಯಲ್ಲಿ ಬೈಯ್ಯುತ್ತಿದ್ದಾಗ ನಾನು ತಪ್ಪಿಸಿಕೊಂಡು ಬಂದೆ. ನನಗೆ ಅವರು ಯಾರು ಎಂದು ಗೊತ್ತಿಲ್ಲ. ನೋಡಿದರೆ ಗುರುತಿಸುತ್ತೇನೆ. ನನ್ನ ಮೇಲೆ ಹಲ್ಲೆ ಮಾಡಿದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡುತ್ತಿದ್ದೇನೆ. ಇದನ್ನೂ ಓದಿ: ಲವ್‌ ಜಿಹಾದ್‌ ಹೆಚ್ಚಾಗುತ್ತಿದೆ, ನಿಮ್ಮ ಮಕ್ಕಳನ್ನು ರಕ್ಷಿಸಿಕೊಳ್ಳಿ: ಪೋಷಕರಲ್ಲಿ ನೇಹಾ ತಂದೆ ನಿರಂಜನ್‌ ಮನವಿ

     
    ವಿಡಿಯೋದಲ್ಲಿ ಹೇಳಿದ್ದೇನು?
    ನಾನು ಸರ್ಕಾರಿ ಗೆಸ್ಟ್‌ ಹೌಸ್‌ ಪಾರ್ಕ್‌ನಲ್ಲಿ ಕುಳಿತುಕೊಂಡಿದ್ದಾಗ ಒಬ್ಬ ಹುಡುಗ ಬಂದಿದ್ದ. ಆತನಿಗೆ ತೋರಿಸಿದಾಗ ಆತ ಹಾಡು ಚೆನ್ನಾಗಿದೆ ಎಂದು ಹೇಳಿ ಬನ್ನಿ ನಾನು ನನ್ನ ಸ್ನೇಹಿತರಿಗೂ ತೋರಿಸುತ್ತೇನೆ ಎಂದು ನನ್ನನ್ನು ಆತನ ಸ್ನೇಹಿತರ ಬಳಿ ಕರೆದುಕೊಂಡು ಹೋದ. ಈ ವೇಳೆ ಅವರು ಮೋದಿ ಬಗ್ಗೆ ಹಾಡು ಮಾಡ್ತೀಯಾ ಎಂದು ಪ್ರಶ್ನಿಸಿ ಪಾಕಿಸ್ತಾನದ ಪರ ಅಲ್ಲಾಹ್‌ ಪರ ಘೋಷಣೆ ಕೂಗುವಂತೆ ಒತ್ತಾಯ ಮಾಡಿದರು. ಅಷ್ಟೇ ಅಲ್ಲದೇ ನನ್ನ ಬಟ್ಟೆ ಹರಿದು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ನನಗೆ ಅವರು ಮುಸ್ಲಿಮ್‌ ಹುಡುಗರು ಅಂತ ಗೊತ್ತಿರಲಿಲ್ಲ ಎಂದು ವಿಡಿಯೋದಲ್ಲಿ ಲಕ್ಷ್ಮೀನಾರಾಯಣ್‌ ಹೇಳಿದ್ದಾರೆ.

  • ಹರ್ಷಿಕಾ-ಭುವನ್ ಮೇಲೆ ಹಲ್ಲೆ: ದೂರು ಕೊಡಲಿಲ್ಲ ಯಾಕೆ?

    ಹರ್ಷಿಕಾ-ಭುವನ್ ಮೇಲೆ ಹಲ್ಲೆ: ದೂರು ಕೊಡಲಿಲ್ಲ ಯಾಕೆ?

    ದೇ ಏಪ್ರಿಲ್ 2 ರಂದು ರಾತ್ರಿ ಊಟ ಮುಗಿಸ್ಕೊಂಡು ಕಾರಿನತ್ತ ಬಂದಿದ್ದ ನಟಿ ಹರ್ಷಿಕಾ ಪೂಣಚ್ಚ (Harshika Poonacha) ಹಾಗೂ ನಟ ಭುವನ್ (Bhuvan) ಮೇಲೆ ಅಪರಿಚಿತರು ಹಲ್ಲೆಗೆ ಯತ್ನಿಸಿ, ಚಿನ್ನಾಭರಣವನ್ನು ದೋಚುವ ಪ್ರಯತ್ನ ಮಾಡಿದ್ದರು ಎಂದು ಆರೋಪ ಮಾಡಲಾಗುತ್ತಿದೆ. ಈ ಕುರಿತಂತೆ ಪೊಲೀಸರಿಗೆ ಮಾಹಿತಿ ನೀಡಿದ್ದರೂ, ಹರ್ಷಿಕಾ ದೂರನ್ನು (Complaint) ಯಾಕೆ ನೀಡಲಿಲ್ಲ ಎನ್ನುವ ಪ್ರಶ್ನೆ ಕೂಡ ಎದ್ದಿದೆ. ಈ ಕುರಿತಂತೆ ಹರ್ಷಿಕಾ ಮಾತನಾಡಿದ್ದಾರೆ.

    ಕರಾಮಾ ರೆಸ್ಟೋರೆಂಟ್ ಗೆ ರೆಗ್ಯೂಲರ್ ಆಗಿ ಊಟಕ್ಕೆ ಹೋಗ್ತಿದ್ವಿ. ಎಪ್ರಿಲ್ 2 ರ ರಾತ್ರಿ ಊಟ ಮುಗಿಸ್ಕೊಂಡು ವಾಪಾಸ್ಸಾಗುವಾಗ ಘಟನೆ ನಡೆಯಿತು. ದೇಖೆ ಜಾವ್ ಅಂತಾ ಪಾರ್ಕಿಂಗ್ ಸ್ಲಾಟ್ ನಲ್ಲಿ ಕಿರಿಕ್ ಶುರುವಾಯಿತು. ಮೂವರು ಅಪರಿಚಿತ ವ್ಯಕ್ತಿಗಳಿಂದ ಹಲ್ಲೆಗೆ ಯತ್ನ ನಡೆಯಿತು. ಭುವನ್ ಕತ್ತಿಗೆ ಕೈ ಹಾಕಿ ಚೈನ್ ಎಳೆಯುವಂತ ಪ್ರಯತ್ನ ಮಾಡಿದರು ಅಲ್ಲಿದ್ದವರು. ಕಿರಿಕ್ ನೆಪದಲ್ಲಿ ದರೋಡೆಗೆ ಕೂಡ ಯತ್ನ ಮಾಡಲಾಗಿದೆ ಎಂದಿದ್ದಾರೆ.

    ಮುಂದುವರೆದು ಮಾತನಾಡಿದ ಹರ್ಷಿಕಾ, ರಾತ್ರಿ ಆದ್ದರಿಂದ ಹೆಣ್ಮಕ್ಕಳು ಗಾಡಿಲಿ ಇದ್ದ ಕಾರಣ ಕಂಪ್ಲೇಂಟ್ ಕೊಡೋಕೆ ಮುಂದಾಗ್ಲಿಲ್ಲ. ನಮ್ ಮೇಲೆನೇ ಈ ತರ ಆದ್ರೆ ಸಾಮಾನ್ಯರ ಪರಿಸ್ಥಿತಿ ಹೇಗೆ ಅನ್ನೋ ಪ್ರಶ್ನೆ ಹುಟ್ಕೊಳ್ಳುತ್ತೆ. ಭುವನ್ ಕೈಗೆ ಗಾಯ ಆಗಿದೆ. ಚಿಕಿತ್ಸೆ ತಗೊಂಡಿದ್ದಾರೆ. ಎಲ್ಲರಿಗೂ ಈ ಬಗ್ಗೆ ಮಾಹಿತಿ ಇರಲಿ. ದರೋಡೆಗೆ ಹೀಗೂ ಪ್ಲಾನ್ ಮಾಡ್ತಾರೆ ಅಂತ ತಿಳಿಸೋಕೆ ಪೋಸ್ಟ್ ಹಾಕಿದೆ. ಉರ್ದುದಲ್ಲಿ ಎಲ್ಲಿಂದ ಬಂದಿದ್ದೀರಾ ಅಂತಾ ಹೇಳ್ತಾರೆ. ನಾವು ಯಾರಿಗೂ ಬೈದಿಲ್ಲ. ಕೆಟ್ಟದಾಗಿ ಮಾತಾಡಿಲ್ಲ. ನಮ್ ಕರ್ನಾಟಕದಲ್ಲಿ ನಾವು ಕನ್ನಡ ಮಾತಾಡೋದೇ ತಪ್ಪಾ? ಎನ್ನುವ ಪ್ರಶ್ನೆ ಅವರದ್ದು.

     

    ಕಾರಿನಲ್ಲಿ ಹೆಣ್ಣು ಮಕ್ಕಳು ಇದ್ದ ಕಾರಣದಿಂದಾಗಿ ಮತ್ತು ಪೊಲೀಸರು ಸರಿಯಾಗಿ ಸ್ಪಂದಿಸಲಿಲ್ಲ ಎನ್ನುವ ಕಾರಣದಿಂದಾಗಿ ದೂರನ್ನು ನೀಡಲಿಲ್ಲ ಎಂದು ಇನ್ಸ್ಟಾದಲ್ಲಿ ಬರೆದುಕೊಂಡು ಪೋಸ್ಟ್ ನಲ್ಲಿ ಉಲ್ಲೇಖಿಸಿದ್ದಾರೆ ಹರ್ಷಿಕಾ.

  • ಹರ್ಷಿಕಾ-ಭುವನ್ ಮೇಲೆ ಹಲ್ಲೆ: ಪಾಕಿಸ್ತಾನದಲ್ಲಿ ಇದ್ದೀವಾ ಎಂದು ಪ್ರಶ್ನೆ ಮಾಡಿದ ನಟಿ

    ಹರ್ಷಿಕಾ-ಭುವನ್ ಮೇಲೆ ಹಲ್ಲೆ: ಪಾಕಿಸ್ತಾನದಲ್ಲಿ ಇದ್ದೀವಾ ಎಂದು ಪ್ರಶ್ನೆ ಮಾಡಿದ ನಟಿ

    ಬೆಂಗಳೂರಿನ ಫ್ರೇಜರ್ ಟೌನ್ ಪ್ರದೇಶದ ಸಮೀಪವಿರುವ ಪುಲಿಕೇಶಿ ನಗರದ ಮಸೀದಿ ರಸ್ತೆಯಲ್ಲಿರುವ ಕರಾಮಾ ಎಂಬ ರೆಸ್ಟೊರೆಂಟ್‌ ಬಳಿ ತಮಗಾದ ಕೆಟ್ಟ ಅನುಭವವನ್ನು ನಟಿ ಹರ್ಷಿಕಾ ಪೂಣಚ್ಚ (Harshika Poonacha) ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅವರು ಬರೆದ ಸುದೀರ್ಘ ಪತ್ರವಿದು.

    ಗೆಳೆಯರೇ ,ನಮ್ಮ ಬೆಂಗಳೂರಿನಲ್ಲಿ ನಾವು ಸ್ಥಳೀಯರು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ನನಗೆ ಮೂಡಿದೆ. ನಮಸ್ಕಾರ, ಒಂದಷ್ಟು ಯೋಚಿಸಿ ಕೆಲವು ದಿನಗಳ ಹಿಂದೆ ನಮ್ಮ ಬೆಂಗಳೂರಿನಲ್ಲಿ ನನಗಾದ ಭಯಾನಕ ಅನುಭವವನ್ನು ಹಂಚಿಕೊಳ್ಳಲು ನಿರ್ಧರಿಸಿದ್ದೇನೆ.  ನನ್ನ ಸ್ನೇಹಿತರು, ಕುಟುಂಬ ಮತ್ತು ಪೊಲೀಸ್ ಇಲಾಖೆಯಲ್ಲಿನ ಕೆಲವು ಪರಿಚಯಸ್ಥರೊಂದಿಗೆ ಮಾತನಾಡಿದ ನಂತರ ನಾನು ಈ ವಿಷಯವನ್ನು ಅಲ್ಲಿಗೇ  ಬಿಟ್ಟು ಬಿಡುತ್ತೇನೆ ಎಂದು ಯೋಚಿಸಿದೆ  ಆದರೆ ನನ್ನ ಅನುಭವದಿಂದ ಮತ್ತಿರರಿಗೆ ಸಹಾಯ ವಾಗ ಬಹುದು ಎಂದು ಯೋಚಿಸಿ ನಾನು ಅದರ ಬಗ್ಗೆ ಪೋಸ್ಟ್ ಮಾಡಲು ನಿರ್ಧರಿಸಿದೆ.

    ಒಂದೆರಡು ದಿನಗಳ ಹಿಂದೆ ಫ್ರೇಜರ್ ಟೌನ್ ಪ್ರದೇಶದ ಸಮೀಪವಿರುವ ಪುಲಿಕೇಶಿ ನಗರದ (Pulakeshi Nagara) ಮಸೀದಿ ರಸ್ತೆಯಲ್ಲಿರುವ ಕರಾಮಾ ಎಂಬ ರೆಸ್ಟೊರೆಂಟ್‌ನಲ್ಲಿ ಸಂಜೆ ಕುಟುಂಬದೊಂದಿಗೆ ಊಟ ಮಾಡಲು ತೆರಳಿದ್ದೆ.  ಭೋಜನವನ್ನು ಮುಗಿಸಿದ ನಂತರ ನಾವು ವಾಲೆಟ್ ಪಾರ್ಕಿಂಗ್‌ನಿಂದ ನಮ್ಮ ವಾಹನವನ್ನು ಸ್ವೀಕರಿಸಿ ಹೊರಡುತ್ತಿದ್ದಾಗ ಇಬ್ಬರು ವ್ಯಕ್ತಿಗಳು ಡ್ರೈವರ್ ಸೀಟ್ ಕಿಟಕಿಯ ಬಳಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡು , ನಿಮ್ಮ ವಾಹನವು ತುಂಬಾ ದೊಡ್ಡದಾಗಿದೆ, ಇದ್ದಕ್ಕಿದ್ದಂತೆ ಚಲಿಸಿದಲ್ಲಿ ಅದು ನಮ್ಮನ್ನು ಮುಟ್ಟಬಹುದು ಎಂದು ವಾದಿಸಲು ಪ್ರಾರಂಭಿಸಿದರು.  ನನ್ನ ಪತಿ “ಇನ್ನು ವಾಹನ ಮೂವ್ ಮಾಡಿಲ್ವಲ್ಲ ಸೈಡು ಬಿಡಿ”  ಎಂದು ಹೇಳಿದರು ಏಕೆಂದರೆ ಅವರು ಸಂಭವನೀಯ ಘಟನೆ ಬಗ್ಗೆ ಮಾತನಾಡುತ್ತಿದ್ದರು ಮತ್ತು ಅದರಲ್ಲಿ ಅರ್ಥವಿರಲಿಲ್ಲ.  ನಾವು ವಾಹನವನ್ನು ಸ್ವಲ್ಪ ಮುಂದಕ್ಕೆ ಸರಿಸಿದೆವು, ಅಷ್ಟರೊಳಗೆ ಈ ಇಬ್ಬರು ವ್ಯಕ್ತಿಗಳು ನಮ್ಮನ್ನು ಅವರ ಭಾಷೆಯಲ್ಲಿ ನಿಂದಿಸಲು ಪ್ರಾರಂಭಿಸಿದರು, ಈ ಲೋಕಲ್ ಕನ್ನಡಿಗರಿಗೆ ಪಾಠ ಕಲಿಸಬೇಕು ಎಂದು ಹೇಳಿ ನನ್ನ ಪತಿಯ ಮುಖದ ಮೇಲೆ ಹೊಡೆಯಲು ಸಹ ಪ್ರಯತ್ನಿಸಿದರು.  ನನ್ನ ಪತಿ ತುಂಬಾ ತಾಳ್ಮೆಯಿಂದಿದ್ದರು ಮತ್ತು ಹೆಚ್ಚು ಪ್ರತಿಕ್ರಿಯಿಸಲಿಲ್ಲ. ನನಗೆ ಆಶ್ಚರ್ಯವಾಯಿತು ಏಕೆಂದರೆ ಅವರು ಸಾಮಾನ್ಯವಾಗಿ ತುಂಬಾ ಸಿಟ್ಟು ಸ್ವಭಾವದವರು.  2 – 3 ನಿಮಿಷಗಳಲ್ಲಿ ಅದೇ ಗ್ಯಾಂಗ್‌ನ 20 – 30 ಸದಸ್ಯರ ಗುಂಪು ಜಮಾಯಿಸಿತು ಮತ್ತು ಅವರಲ್ಲಿ 2 ಜನರು ನನ್ನ ಗಂಡನ ಚಿನ್ನದ ಸರವನ್ನು ಕಿತ್ತುಕೊಂಡು, ನಂತರ ಅವರು ಅದನ್ನು ಬಹಳ ಕೌಶಲ್ಯದಿಂದ ತಮ್ಮ ಕಡೆಗೆ ಎಳೆಯಲು ಪ್ರಯತ್ನಿಸಿದರು.  ನನ್ನ ಪತಿ ಇದನ್ನು ಸಮಯಕ್ಕೆ ಸರಿಯಾಗಿ ಅರಿತುಕೊಂಡರು ಮತ್ತು ಅದನ್ನು  ಹಿಡಿದಿಟ್ಟುಕೊಂಡು ನನಗೆ ಕೊಟ್ಟರು.  ಅಷ್ಟೊತ್ತಿಗಾಗಲೇ ಇಡೀ ತಂಡವು ಚಿನ್ನದ ಸರ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕೈಗೆ ಸಿಗದಂತೆ ರೊಚ್ಚಿಗೆದ್ದು ವಾಹನಕ್ಕೆ ಹಾನಿ ಮಾಡಿ ನಮಗೆ ಅಥವಾ ಯಾರಿಗೂ ಅರ್ಥವಾಗದ ವಿಷಯಗಳನ್ನು ಹೇಳಿ ನಮ್ಮನ್ನು ದೈಹಿಕವಾಗಿ ನಿಂದಿಸಲು ಪ್ರಯತ್ನಿಸಿದರು.   ನಮ್ಮ ವಾಹನದಲ್ಲಿ ಮಹಿಳೆಯರು ಮತ್ತು ಕುಟುಂಬದವರು ಇದ್ದ ಕಾರಣ ನನ್ನ ಪತಿ ಹೆಚ್ಚು ಪ್ರತಿಕ್ರಿಯಿಸಲಿಲ್ಲ. ಅಲ್ಲದೆ ನಾನು ಗಮನಿಸಿದ್ದು ಏನೆಂದರೆ ಇವರಿಗೆ ನಾವು ಕನ್ನಡದಲ್ಲಿ ಮಾತನಾಡುತ್ತಿದ್ದೇವೆ ಎಂಬುದು ಸಮಸ್ಯೆ ಆಗಿತ್ತು.  ಅವರು ನೀವು ನಮ್ಮ ಪ್ರದೇಶಕ್ಕೆ ಬಂದಂತೆ ಮತ್ತು ನಿಮಗೆ ಬೇಕಾದ ಭಾಷೆಗಳಲ್ಲಿ ಮಾತನಾಡುವುದನ್ನು ನಿಲ್ಲಿಸಿ.  “ಯೇ ಲೋಕಲ್ ಕನ್ನಡ್ ವಾಲಾ ಹೇ” (ಈ ವ್ಯಕ್ತಿಗಳು ಸ್ಥಳೀಯ ಕನ್ನಡ ಜನರು) ನನ್ನ ಗಂಡ ಮತ್ತು ನಾನು ಕನ್ನಡದಲ್ಲಿ ಮಾತ್ರ ಮಾತನಾಡಿದಾಗ ಅದು ಅವರನ್ನು ಹೆಚ್ಚು ಕೆರಳಿಸಿತು.  ನಿಮ್ಮ “ಕನ್ನಡ ಸ್ಟೈಲ್”ಯನ್ನು ನೀವೇ ಇಟ್ಟುಕೊಳ್ಳಿ ಎಂದರು.  ಅವರಲ್ಲಿ ಹೆಚ್ಚಿನವರು ಹಿಂದಿ, ಉರ್ದು ಅಥವಾ ಇಂಗ್ಲಿಷ್ ಮತ್ತು ಕೆಲವರು ಮುರಿದ ಕನ್ನಡದಲ್ಲಿ ಮಾತನಾಡುತ್ತಿದ್ದರು.  ನಾನು ಇನ್ಸ್‌ಪೆಕ್ಟರ್‌ಗೆ ತುರ್ತು ಕರೆ ಮಾಡಿದಾಗ ಅವರೆಲ್ಲರೂ ಏನೂ ಆಗಿಲ್ಲ ಎಂಬಂತೆ ಕೆಲವೇ ಸೆಕೆಂಡುಗಳಲ್ಲಿ ಚದುರಿಹೋದರು.  ನಾವು ಅವರನ್ನು ಹುಡುಕಲು ಪ್ರಯತ್ನಿಸಿದೆವು ಆದರೆ ಅವರು ಕೆಲವೇ ಸೆಕೆಂಡುಗಳಲ್ಲಿ ಗಾಳಿಯಲ್ಲಿ ಕಣ್ಮರೆಯಾದರು.  ನಾವು ಸಮೀಪದಲ್ಲಿ ಗಸ್ತು ಪೊಲೀಸ್ ವಾಹನವನ್ನು ಕಂಡು ಘಟನೆಯನ್ನು ಹತ್ತಿರದ ಪೊಲೀಸ್ ಠಾಣೆಯ ASI ಶ್ರೀ ಉಮೇಶ್ ಅವರಿಗೆ ವಿವರಿಸಿದೆವು, ಅವರು ನಮಗೆ ಸಹಾಯ ಮಾಡಲು ಆಸಕ್ತಿ ತೋರಲಿಲ್ಲ.  ಇಲಾಖೆಯ ಮೇಲಧಿಕಾರಿಗಳ ಜತೆ ಮಾತನಾಡಬೇಕು ಎಂದ ಅವರು, ಬಂದು ಏನಾಯಿತು ಎಂದು ತಿಳಿದುಕೊಳ್ಳುವ ಸೌಜನ್ಯವೂ ಇಲ್ಲ.  ಕೇವಲ 2 ಕಟ್ಟಡಗಳ ಮುಂದಿರುವ ರೆಸ್ಟೊರೆಂಟ್‌ನ ಮುಂದೆ ಮೂಸಂಬಿ ಜ್ಯೂಸ್ ಕುಡಿಯುತ್ತ ಕಾರ್ ನಲ್ಲಿ ಕುಳಿತಿದ್ದರು.

    ಈ ಘಟನೆಯ ನಂತರ ನಾನು ಮಾನಸಿಕವಾಗಿ ಸಂಪೂರ್ಣ ಆಘಾತಕ್ಕೊಳಗಾಗಿದ್ದೇನೆ. ನಾನು ಹುಟ್ಟಿ ಬೆಳೆದ ನಗರದಲ್ಲಿ ಹೊರಗೆ ಹೋಗಲು ನನಗೆ ಇನ್ನೂ ಭಯವಾಗುತ್ತಿದೆ.  ನನಗೆ ಜೀವನದಲ್ಲಿ ಎಲ್ಲವನ್ನು ಕೊಟ್ಟ ನಗರದಲ್ಲಿ ಇಂತಹ ಅನುಭವ ಆಗಿದ್ದು ಇದೇ ಮೊದಲು.  ಇದನ್ನು ಪೊಲೀಸ್ ಇಲಾಖೆ ಮತ್ತು ಕರ್ನಾಟಕ ಸರ್ಕಾರದ ಗಮನಕ್ಕೆ ತರಲು ಮತ್ತು ಭವಿಷ್ಯದಲ್ಲಿ ಯಾವುದೇ ಮಹಿಳೆ ಅಥವಾ ಕುಟುಂಬವು ಬೆಂಗಳೂರಿನಲ್ಲಿ ಇಂತಹ ಅಗ್ನಿಪರೀಕ್ಷೆಗಳಿಗೆ ಒಳಗಾಗಬಾರದು ಎಂದು ನಾನು ಇದನ್ನು ಪೋಸ್ಟ್ ಮಾಡುತ್ತಿದ್ದೇನೆ.  ಬೆಂಗಳೂರಿನಲ್ಲಿ ಶಾಂತಿಯುತವಾಗಿ ಜೀವನ ನಡೆಸುತ್ತಿರುವ ಜನರೊಂದಿಗೆ ಇಂತಹ ಗಲಾಟೆ ಸೃಷ್ಟಿಸುವ ಹಕ್ಕು ಯಾರಿಗೂ ಇಲ್ಲ!  ಇದನ್ನು ಕಣ್ಣೆದುರು ನೋಡುತ್ತಿರುವಾಗ ನನ್ನ ಮನಸ್ಸಿನಲ್ಲಿ ಒಂದೆರಡು ಪ್ರಶ್ನೆಗಳು ಮೂಡಿದವು.

     

    1. ನಾವು ಪಾಕಿಸ್ತಾನದಲ್ಲಿ ಅಥವಾ ಅಫ್ಗಾನಿಸ್ತಾನದಲ್ಲಿ ವಾಸಿಸುತ್ತಿದ್ದೇವೆಯೇ ??
    2. ನಮ್ಮ ಊರು ಬೆಂಗಳೂರಿನಲ್ಲಿ ನನ್ನ ಭಾಷೆ ಕನ್ನಡವನ್ನು ಬಳಸುವುದು ತಪ್ಪಾ???
    3. ನಮ್ಮ ಸ್ವಂತ ನಗರದಲ್ಲಿ ನಾವು ಎಷ್ಟು ಸುರಕ್ಷಿತವಾಗಿರುತ್ತೇವೆ?
    4. ಇಲ್ಲಿಯೇ ನಮ್ಮ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದು, ಇಂತಹ ದೀರ್ಘಾವಧಿಯ ಮಾನಸಿಕ ಆಘಾತಕ್ಕೆ ಕಾರಣವಾಗುವ ಇಂತಹ ಘಟನೆಗಳನ್ನು ಮುಚ್ಚಿ ಹಾಕಬೇಕೆ ?

     ಈ ಇಡೀ ಘಟನೆಯ ನಡುವೆ ನನ್ನ ಕುಟುಂಬದ ಸದಸ್ಯರು ಚಿತ್ರೀಕರಿಸಿದ ವೀಡಿಯೊವನ್ನು ಪೋಸ್ಟ್ ಮಾಡುತ್ತಿದ್ದೇನೆ. ಅಷ್ಟು ಸ್ಪಷ್ಟವಾಗಿಲ್ಲ ಹಾಗು ಘಟನೆಯ ಮದ್ಯದಿಂದ ಅವರಿಗೆ ತಿಳಿದಷ್ಟು ಚಿತ್ರೀಕರಿಸಿದ್ದಾರೆ.

     ಈ ಇಡೀ ಘಟನೆಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

    ಧನ್ಯವಾದಗಳು

  • ನನ್ನ ತಂಗಿಗೆ ನಕಲು ಮಾಡಲು ಬಿಡಲ್ವಾ?- ಪೇದೆ ಮೇಲೆ ವ್ಯಕ್ತಿ ಹಲ್ಲೆ

    ನನ್ನ ತಂಗಿಗೆ ನಕಲು ಮಾಡಲು ಬಿಡಲ್ವಾ?- ಪೇದೆ ಮೇಲೆ ವ್ಯಕ್ತಿ ಹಲ್ಲೆ

    ಕಲಬುರಗಿ: ರಾಜ್ಯಾದ್ಯಂತ ಪಿಯುಸಿ ಪರೀಕ್ಷೆ (PUC Exam) ನಡೆಯುತ್ತಿದ್ದು, ಈ ವೇಳೆ ಕಲಬುರಗಿಯಲ್ಲಿ ಅಚಾತುರ್ಯವೊಂದು ನಡೆದಿದೆ.

    ಹೌದು. ವ್ಯಕ್ತಿಯೊಬ್ಬ ತನ್ನ ತಂಗಿಗೆ ಪಿಯು ಪರೀಕ್ಷೆಯಲ್ಲಿ ನಕಲು ಮಾಡಲು ಸಹಕಾರ ಮಾಡಿಲ್ಲ ಅಂತಾ ಪೇದೆ ಮೇಲೆ ಹಲ್ಲೆ ಮಾಡಿದ್ದಾನೆ. ಈ ಘಟನೆ ಕಲಬುರಗಿ ಜಿಲ್ಲೆ ಅಫಜಲಪುರ್ ತಾಲೂಕಿನ ಕರಜಗಿ ಪರೀಕ್ಷಾ ಕೇಂದ್ರದಲ್ಲಿ ನಡೆದಿದೆ.

    ಪಿಯುಸಿ ಪರೀಕ್ಷೆ ನಡೆಯುತ್ತಿದ್ದ ವೇಳೆ ಕೈಲಾಸ್ ಎಂಬಾತ ಪೊಲೀಸ್ ಪೇದೆ ಪಂಡಿತ್ ಪಾಂಡ್ರೆ ನಡುವೆ ಮಾತಿನ ಚಕಮಕಿ ನಡೆದಿದೆ. ಮಾತಿಗೆ ಮಾತು ಬೆಳೆದು ನನ್ನ ತಂಗಿಗೆ ನಕಲು ಮಾಡಲು ಬಿಡಲ್ವಾ ಎಂದು ರೊಚ್ಚಿಗೆದ್ದ ಕೈಲಾಸ್, ಪಂಡಿತ್ ಪಾಂಡ್ರೆ ಮೇಲೆ ಹಲ್ಲೆ ಮಾಡಿದ್ದಾನೆ.

    ಪ್ರಕರಣ ಸಂಬಂಧ ಆರೋಪಿ ಕೈಲಾಸ್ ಹಾಗೂ ಆತನ ಸ್ನೇಹಿತ ಸಮೀರ್ ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಅಫಜಲಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸಾಲು ಸಾಲು ಆತ್ಮಹತ್ಯೆ- ಪ್ರತಿ ಮೆಟ್ರೋ ನಿಲ್ದಾಣದಲ್ಲೂ ಸ್ಕ್ರೀನ್ ಡೋರ್ ಅಳವಡಿಕೆಗೆ ಪ್ಲಾನ್

  • ಪ್ರಭಾಸ್ ಅಭಿಮಾನಿ ಮೇಲೆ ಅಲ್ಲು ಅರ್ಜುನ್ ಫ್ಯಾನ್ಸ್ ಹಲ್ಲೆ: ಬೆಂಗಳೂರಿನಲ್ಲಿ ನಡೆದ ಘಟನೆ

    ಪ್ರಭಾಸ್ ಅಭಿಮಾನಿ ಮೇಲೆ ಅಲ್ಲು ಅರ್ಜುನ್ ಫ್ಯಾನ್ಸ್ ಹಲ್ಲೆ: ಬೆಂಗಳೂರಿನಲ್ಲಿ ನಡೆದ ಘಟನೆ

    ಕ್ರಿಕೆಟ್ ಆಡುವಾಗ ತೆಲುಗು ನಟರಾದ ಪ್ರಭಾಸ್ (Prabhas) ಮತ್ತು ಅಲ್ಲು ಅರ್ಜುನ್ (Allu Arjun) ಅಭಿಮಾನಿಗಳು ಗಲಾಟೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪ್ರಭಾಸ್ ಅಭಿಮಾನಿಯೊಬ್ಬನ ಮೇಲೆ ಅಲ್ಲು ಅರ್ಜುನ್ ಫ್ಯಾನ್ಸ್ ಹಿಗ್ಗಾಮುಗ್ಗ ತಳಿಸಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ, ಸೂಕ್ತ ಕ್ರಮ ತೆಗೆದುಕೊಳ್ಳಲು ಆಗ್ರಹಿಸಲಾಗಿದೆ.

    ವೈರಲ್ ಆಗಿರುವ ವಿಡಿಯೋದಲ್ಲಿ ಜೈ ಅಲ್ಲು ಅರ್ಜುನ್ ಅಂತ ಹೇಳು ಎನ್ನುವ ಮಾತುಗಳು ಪದೇ ಪದೇ ಕೇಳಿ ಬರುತ್ತಿವೆ. ಪ್ರಭಾಸ್ ಅಭಿಮಾನಿ ಹೇಳದೇ ಇದ್ದಾಗ ರಕ್ತ ಬರುವಂತೆ ಹೊಡೆಯಲಾಗಿದೆ. ಆ ಹುಡುಗನ ಬಟ್ಟೆ ಹರಿದಿದೆ. ನಾಲ್ಕೈದು ಹುಡುಗರು ಒಂದೇ ಸಮನೆ ಬಡಿದಿದ್ದಾರೆ. ಇಂತಹ ಘಟನೆ ಮರುಕಳಿಸದಂತೆ ಕ್ರಮ ತೆಗೆದುಕೊಳ್ಳಲು ಸೋಷಿಯಲ್ ಮೀಡಿಯಾದಲ್ಲಿ ವಿನಂತಿಸಿದ್ದಾರೆ.

    ಫ್ಯಾನ್ಸ್ ವಾರ್ ಇದೇ ಮೊದಲೇನೂ ಅಲ್ಲ. ಅದರಲ್ಲೂ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಇದೆ. ಕನ್ನಡದಲ್ಲಿ ಕೇವಲ ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಅಭಿಮಾನಿಗಳು ಕೆರಚಾಟ ಮಾಡುತ್ತಾರೆ. ಆದರೆ, ತೆಲುಗು ಮತ್ತು ತಮಿಳು ಚಿತ್ರೊದ್ಯಮದಲ್ಲಿ ಸಾಕಷ್ಟು ಗಲಾಟೆಗಳೇ ನಡೆದಿವೆ.

     

    ಆ ಮನಸ್ಥಿತಿ ಬೆಂಗಳೂರಿನಲ್ಲಿರೋ ಪರಭಾಷೆ ತಾರೆಯರ ಅಭಿಮಾನಿಗಳಿಗೂ ಹರಿದು ಬಂದಿದ್ದಾರೆ. ಹಾಗಾಗಿ ಮೈದಾನದಲ್ಲಿ ಆ ರೀತಿಯಲ್ಲಿ ಅವರು ಕಿತ್ತಾಡಿದ್ದಾರೆ. ಮುಂದಲ್ಲಿ ರಕ್ತ ಬರುವಂತೆ ಹೊಡೆದಿದ್ದಾರೆ.

  • ನಟಿ ಲಕ್ಷ್ಮಿ ಮೇಲೆ ಆಕ್ಸಿಡೆಂಟ್ ಮಾಡಿ ಯುವತಿ ಜೊತೆ ರಂಪಾಟ ಮಾಡಿದ ಆರೋಪ

    ನಟಿ ಲಕ್ಷ್ಮಿ ಮೇಲೆ ಆಕ್ಸಿಡೆಂಟ್ ಮಾಡಿ ಯುವತಿ ಜೊತೆ ರಂಪಾಟ ಮಾಡಿದ ಆರೋಪ

    ನ್ನಡದ ಕಿರುತೆರೆ ಮತ್ತು ಹಿರಿತೆರೆ ನಟಿ ಲಕ್ಷ್ಮಿ ಸಿದ್ದಯ್ಯ ಮೇಲೆ ಗುರುತರ ಆರೋಪ ಬಂದಿದೆ. ಆಕ್ಸಿಡೆಂಟ್ (Accident) ಮಾಡಿದ್ದಲ್ಲದೇ, ಯುವತಿಯರ ಜೊತೆ ನಡುರಸ್ತೆಯಲ್ಲೇ ಲಕ್ಷ್ಮಿ (Lakshmi Siddaiah) ರಂಪಾಟ ಮಾಡಿದ್ದಾರೆ ಎಂದು ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆಕ್ಸಿಡೆಂಟ್ ಮಾಡಿದ್ದಲ್ಲದೇ ಯುವತಿಗೆ ಹಲ್ಲೆ ಕೂಡ ನಟಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

    ಈ ಘಟನೆ ಕಳೆದ ಡಿಸೆಂಬರ್ 6 ರಂದು ಜ್ಞಾನ ಭಾರತಿ ಮೆಟ್ರೋ ನಿಲ್ದಾಣದಲ್ಲಿ ನಡೆದಿದ್ದು, ಸ್ಕೂಟಿಯಲ್ಲಿ ಹೋಗುತ್ತಿದ್ದ ಮಾಧುರಿ ಮತ್ತು ಅವರ ಸೋದರಿ ಐಶ್ವರ್ಯಗೆ ನಟಿ ಲಕ್ಷ್ಮಿ ಅವರ ಕಾರು ಡಿಕ್ಕಿ ಹೊಡೆದಿದೆ. ಲಕ್ಷ್ಮಿ ಆಕ್ಸಿಡೆಂಟ್ ಮಾಡಿದ್ದಲ್ಲದೇ, ಮಾಧುರಿ ಮತ್ತು ಐಶ್ವರ್ಯ ಅವರ ಮೇಲೆ ಹಲ್ಲೆ ಕೂಡ ಮಾಡಿದ್ದಾರಂತೆ. ಜೊತೆಗೆ ಇವರ ಮೊಬೈಲ್ ಕೂಡ ಕಿತ್ತುಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ನಟಿ ಲಕ್ಷ್ಮಿ ಚಲಾಯಿಸುತ್ತಿದ್ದ ಕಾರು ಮಾಧುರಿ ಮತ್ತು ಐಶ್ವರ್ಯ ಗಾಡಿಗೆ ಡಿಕ್ಕಿ ಹೊಡೆದಿದೆ. ಅಲ್ಲಿಂದ ಮಾತಿಗೆ ಮಾತು ಶುರುವಾಗಿದೆ. ಲಕ್ಷ್ಮಿ ಮತ್ತು ಅವರ ಜೊತೆಗಿದ್ದ ಆನಂದ್ ಕುಮಾರ್ ಎನ್ನುವವರು ಹಲ್ಲೆ ಮಾಡಿದ್ದಾರೆ ಎಂದು ಈ ಸೋದರಿಯರು ಆರೋಪ ಮಾಡಿದ್ದಾರೆ. ಜೊತೆಗೆ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲೂ ದೂರು ನೀಡಿದ್ದಾರೆ.

     

    ಗಲಾಟೆ ನಡೆದು 3 ತಿಂಗಳಾದರೂ ಪೊಲೀಸರು ಕ್ರಮ ತಗೆದುಕೊಂಡಿಲ್ಲ ಎನ್ನುವುದು ಸೋದರಿಯರ ಆರೋಪ. ಮೊಬೈಲ್ ಸಹ ವಾಪಾಸ್ಸು ಕೊಡಿಸಿಲ್ಲ ಎನ್ನುತ್ತಾರೆ ಹಲ್ಲೆಗೊಳಗಾದವರು.

  • ಸಿಲಿಕಾನ್ ಸಿಟಿಯಲ್ಲಿ ಅಮಾನವೀಯ ಕೃತ್ಯ – ತಾಯಿಯಿಂದಲೇ ಮಗುವಿನ ಮೇಲೆ ಮಾರಣಾಂತಿಕ ಹಲ್ಲೆ

    ಸಿಲಿಕಾನ್ ಸಿಟಿಯಲ್ಲಿ ಅಮಾನವೀಯ ಕೃತ್ಯ – ತಾಯಿಯಿಂದಲೇ ಮಗುವಿನ ಮೇಲೆ ಮಾರಣಾಂತಿಕ ಹಲ್ಲೆ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಅಮಾನವೀಯ ಕೃತ್ಯವೊಂದು ನಡೆದಿದ್ದು, ತಾಯಿಯೊಬ್ಬಳು (Mother) ತನ್ನ 3 ವರ್ಷದ ಮಗುವಿನ (Child) ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಎರಡು ವಾರಗಳ ಬಳಿಕ ಬೆಳಕಿಗೆ ಬಂದಿದೆ.

    ಬೆಂಗಳೂರಿನ ಗಿರಿನಗರದ (Girinagar) ವೀರಭದ್ರೇಶ್ವರ ನಗರದಲ್ಲಿ ನಡೆದಿದೆ ಎನ್ನಲಾದ ವೀಡಿಯೋವೊಂದು ವೈರಲ್ ಆಗಿದ್ದು, ಪುಟ್ಟ ಕಂದಮ್ಮನ ಮೇಲೆ ಪಾಪಿ ತಾಯಿ ಹಲ್ಲೆ ನಡೆಸಿದ್ದಾಳೆ. ಹಲ್ಲೆ ನಡೆಸಿದ ಪರಿಣಾಮ ಮಗುವಿನ ದೇಹದ ತುಂಬೆಲ್ಲಾ ಗಾಯದ ಗುರುತುಗಳಾಗಿದೆ. ತಾಯಿ ಕೆಲಸಕ್ಕೆ ಹೋಗುತ್ತಿದ್ದು, ಬೆಳಗ್ಗೆ ಕೆಲಸಕ್ಕೆ ಹೋಗುವಾಗ ಬೀಗ ಹಾಕಿ ಹೋದರೆ ರಾತ್ರಿ ಬರೋವರೆಗೂ ಮಗುವನ್ನು ಕೂಡಿ ಹಾಕಿರುತ್ತಿದ್ದಳು. ಅಲ್ಲದೇ ಮಗುವಿನ ಮೇಲೆ ಹಲ್ಲೆ ನಡೆಸಿ ವಿಕೃತಿ ಮೆರೆದಿದ್ದಾಳೆ. ಇದನ್ನೂ ಓದಿ: ಪಾತಾಳಕ್ಕೆ ಕುಸಿದ ಟೊಮೆಟೊ ಬೆಲೆ – ಬೇಸತ್ತು ಜಮೀನಿಗೆ ಕುರಿ ಬಿಟ್ಟು ಮೇಯಿಸಿದ ರೈತರು

    ಈ ಘಟನೆ ಎರಡು ವಾರಗಳ ಹಿಂದೆ ನಡೆದಿದೆ ಎನ್ನಲಾಗುತ್ತಿದೆ. ಕೆಲಸ ಹುಡುಕುವಾಗ ತಾಯಿ ತನ್ನ ಮಗುವನ್ನು ಮನೆಯಲ್ಲೇ ಕೂಡಿಹಾಕಿದ್ದಾಳೆ. ಈ ಕುರಿತು ಮಗುವಿನ ತಾಯಿಯನ್ನು ಪ್ರಶ್ನಿಸಿದಾಗ, ತಾನು ಗಂಡನ ಜೊತೆ ವಾಸ ಮಾಡುತ್ತಿಲ್ಲ. ಹಣಕಾಸಿನ ತೊಂದರೆಯಿಂದ ಮಗುವನ್ನು ಕೂಡಿಹಾಕಿ ಕೆಲಸ ಹುಡುಕುತ್ತಿರುವುದಾಗಿ ಹೇಳಿದ್ದಾಳೆ. ಇದನ್ನೂ ಓದಿ: ಟ್ರಾನ್ಸ್‌ಫಾರ್ಮರ್‌ಗೆ ಕಾರು ಡಿಕ್ಕಿ – ತಪ್ಪಿದ ಅನಾಹುತ

    ಮಧ್ಯಾಹ್ನ ಮಗುವಿಗೆ ಊಟ ಕೊಡಲು ಮಹಿಳೆಯ ಫ್ರೆಂಡ್ ಮನೆಗೆ ಬರುತ್ತಿದ್ದು, ಸದ್ಯ ಈ ಬಗ್ಗೆ ಮಗುವಿನ ತಾಯಿಯನ್ನು ಕರೆಸಿ ಪೊಲೀಸರು ಬುದ್ದಿವಾದ ಹೇಳಿದ್ದಾರೆ. ಅಲ್ಲದೇ ಮಗುವನ್ನು ಮಕ್ಕಳ ಆಯೋಗದ ಸುಪರ್ದಿಗೆ ಒಪ್ಪಿಸಿದ್ದಾರೆ. ಗಂಡ, ಹೆಂಡತಿ ಇಬ್ಬರೂ ಬಂದು ಕೌನ್ಸಿಲಿಂಗ್‌ಗೆ ಒಳಗಾಗುವಂತೆ ಸೂಚನೆ ನೀಡಲಾಗಿದೆ. ಗಂಡ-ಹೆಂಡತಿ ಇಬ್ಬರೂ ಬಂದು ಚೆನ್ನಾಗಿ ನೋಡಿಕೊಳ್ಳುವುದಾಗಿ ಹೇಳಿದರಷ್ಟೇ ಮಗು ನೀಡುವುದಾಗಿ ಮಕ್ಕಳ ಆಯೋಗ ಹೇಳಿದೆ. ಸದ್ಯ ಹಲ್ಲೆಗೊಳಗಾಗಿರುವ ಮಗು ಮಕ್ಕಳ ಆಯೋಗದ ರಕ್ಷಣೆಯಲ್ಲಿದೆ. ಈ ಕುರಿತು ಗಿರಿನಗರ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ದಾಖಲಾಗಿದೆ. ಇದನ್ನೂ ಓದಿ: ಶಂಕಿತ ಉಗ್ರನ ಜಾಡು ಪತ್ತೆ ಹಚ್ಚಲು BMRCL ಮೊರೆ ಹೋದ ಪೊಲೀಸರು

    ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ನಾಗವೇಣಿ ಮಗುವಿನ ರಕ್ಷಣೆ ಮಾಡಿದ್ದು, ಸದ್ಯ ಶಿಶು ಮಂದಿರದಲ್ಲಿ ಮಗುವಿನ ಪಾಲನೆ ಮಾಡಲಾಗುತ್ತಿದೆ. ಕೌನ್ಸಿಲಿಂಗ್ ವೇಳೆ ತಾಯಿ ಜೊತೆ ಹೋಗಲು ಮಗು ನಿರಾಕರಿಸಿದ್ದು, ನಾಳೆ ಮತ್ತೊಂದು ಸುತ್ತಿನ ಕೌನ್ಸಿಲಿಂಗ್‌ಗಾಗಿ ಮಕ್ಕಳ ಕಲ್ಯಾಣ ಸಮಿತಿ ತಾಯಿಗೆ ನೋಟಿಸ್ ನೀಡಿದೆ. ಇದನ್ನೂ ಓದಿ: ಬೆಲ್ಟ್ ತಯಾರಿಕಾ ಕಾರ್ಖಾನೆಯಲ್ಲಿ ಬೆಂಕಿ ಅವಘಡ

    ಈ ಅಮಾನವೀಯ ಕೃತ್ಯದಿಂದ ಆಕ್ರೋಶಗೊಂಡ ಸ್ಥಳೀಯರು ಮಗುವಿದ್ದ ಮನೆಯ ಮುಂದೆ ಜಮಾಯಿಸಿದ್ದು, ತಾಯಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತಾಯಿಯ ವರ್ತನೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸ್ಥಳೀಯರು ಮಾಹಿತಿ ನೀಡಿದ್ದು, ಮಗು ಕಿಟಕಿಯೊಳಗೆ ಊಟ ಕೇಳುತ್ತಿತ್ತು. ಮೈಮೇಲೆ ಗಾಯಗಳಾಗಿತ್ತು. ಕುಕ್ಕರ್‌ನಿಂದ ಹೊಡೆದಿದ್ದಾರೆ ಎಂದು ಮಗು ಹೇಳಿದೆ. ಈ ಬಗ್ಗೆ ಪೊಲೀಸ್ ಠಾಣೆಗೆ ಮಾಹಿತಿ ಕೊಟ್ಟೆವು ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಂಸದ ರಮೇಶ್ ಜಿಗಜಿಣಗಿ ಆಸ್ಪತ್ರೆಗೆ ದಾಖಲು – ಐಸಿಯುನಲ್ಲಿ ಚಿಕಿತ್ಸೆ

    ಮಗುವಿನ ಜೊತೆ ತಾಯಿ ಮತ್ತು ವ್ಯಕ್ತಿಯೊಬ್ಬ ಇದ್ದ. ಸಮೀಪದ ನಿವಾಸಿಗಳಿಗೆ ಮಗುವಿನ ತಾಯಿ ಇವನು ನನ್ನ ಸಹೋದರ ಎಂದು ಹೇಳಿದ್ದ. ಆದರೆ ಈ ಘಟನೆಯ ನಂತರ ಆ ವ್ಯಕ್ತಿ ಸಹೋದರನಲ್ಲ. ಆತ ಈಕೆಯ ಸ್ನೇಹಿತ ಎಂಬ ವಿಚಾರ ತಿಳಿಯಿತು ಎಂದು ತಿಳಿಸಿದ್ದಾರೆ. ಇನ್ನ ಈ ಕುರಿತು ತಾಯಿ ಶಾರೀನ್ ಪ್ರತಿಕ್ರಿಯಿಸಿದ್ದು, ಮಗುವಿಗೆ ಸಾಯೋ ಪರಿಸ್ಥಿತಿ ತಂದಿಲ್ಲ. ಮಗುವಿನ ಮೇಲೆ ಕುಕ್ಕರ್‌ನಿಂದ ಹಲ್ಲೆ ಮಾಡಿಲ್ಲ. ಬುದ್ಧಿ ಕಲಿಲಿ ಅಂತ ಆಗಾಗ ಹೊಡೆದಿದ್ದೇನೆ. ಮಗು ಬೆಳೆದಿದ್ದು ಬೇರೆ ಕಡೆ. ಬುದ್ಧಿವಾದ ಹೇಳಿದಾಗ ನೀನು ಬೇಡ ಅಂತಿದ್ದ. ಊಟ ಕೊಡುತ್ತಿರಲಿಲ್ಲ ಅನ್ನೊದು ಬಹಳ ತಪ್ಪು ಎಂದಿದ್ದಾಳೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ ಸಿಲ್ಲಿ ಪ್ರಕರಣ: ಶರಣ ಪ್ರಕಾಶ್‌ ಪಾಟೀಲ್

    ಬಾಡಿಗೆ ಮನೆಗೆ ಬಂದು 15 ದಿನ ಆಯಿತು. ಮಗ 4-5 ತಿಂಗಳು ನನ್ನ ಜೊತೆ ಇದ್ದ. ಬರ್ತಾ ಬರ್ತಾ ಅಮ್ಮನೇ ಬೇಡ ಅಂತಿದ್ದ. ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಮಗು ಇದೆ. ಮಗು ನನಗೆ ಸದ್ಯಕ್ಕೆ ಬೇಡ. ನನ್ನ ಪತಿಯೇ ಇಟ್ಟುಕೊಂಡಿರಲಿ. ನನ್ನ ಪತಿಗೆ ಮಾಹಿತಿ ಕೊಟ್ಟಿದ್ದೇನೆ. ಸದ್ಯ ಮಗುವನ್ನು ನೋಡಿಕೊಳ್ಳಲು ಆಗಲ್ಲ, ನೀನು ನೋಡಿಕೊಳ್ಳುತ್ತೀಯಾ ಎಂದು ಕೇಳಿದ್ದೇನೆ. ಇದಕ್ಕೆ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾಳೆ. ಇದನ್ನೂ ಓದಿ: ಪೊಲೀಸರಿಗೆ ಯಾಮಾರಿಸಲು ಶರ್ಟ್, ಪ್ಯಾಂಟ್ ಬದಲಿಸಿ ಹೋದ ಶಂಕಿತ